You are currently viewing ಶಿವರಾತ್ರಿಯಂದು ಸಸ್ಯಯಾನದಲ್ಲಿ “ರುದ್ರಾಕ್ಷಿ ಮರ”

ಶಿವರಾತ್ರಿಯಂದು ಸಸ್ಯಯಾನದಲ್ಲಿ “ರುದ್ರಾಕ್ಷಿ ಮರ”

ಶಿವರಾತ್ರಿಯ ಶುಭಾಶಯಗಳು

ಶಿವರಾತ್ರಿಯ ಸಮಯದ ಸಸ್ಯಯಾನದಲ್ಲಿ ಶಿವನಿಗೆ ಪ್ರಿಯವಾದ ಗಿಡ-ಮರ-ಹೂ-ಬಳ್ಳಿಯ ಕುರಿತು ಅರಿಯಬಹುದೆನ್ನುವ ಆತ್ಮೀಯರ ಆಶಯಕ್ಕೆ ನಿರಾಸೆ ಪಡಿಸುವುದಿಲ್ಲ. ಶಿವನಿರುವನೋ ಇಲ್ಲವೋ ಅವನು ಇಷ್ಟಪಡುತ್ತಾನೆ ಎಂದುಕೊಂಡ ಗಿಡ-ಮರಗಳಂತೂ ಸಾಕಷ್ಟು ಇವೆ. ಶಿವನ ಸರಳ ವ್ಯಕ್ತಿತ್ವವನ್ನು ಅರಿತವರು ಅಂತಹ ದೇವನೊಬ್ಬ ಇರಬೇಕಿತ್ತು ಎನ್ನಿಸುವಂತೆ ಭಾರತೀಯತೆಯು ಶಿವನನ್ನು ಸೃಷ್ಟಿಸಿದೆ. ಬ್ರಹ್ಮನನ್ನು ಲೆಕ್ಕಕ್ಕೇ ಇಡದೆ, ರಾಮ-ಕೃಷ್ಣರಿಗೂ ಹುಟ್ಟು ಸಾವುಗಳನ್ನು ಕೊಟ್ಟ ನಾವು ಶಿವನಲ್ಲಿ ಮಾತ್ರ ಹುಟ್ಟೂ ಇರದ ಸಾವೂ ಇರದ ಅನಂತತೆಯಿಂದ ಕಾಣುತ್ತಿದ್ದೇವೆ. ಕೇಳಿದ್ದನ್ನು ಕೊಡುವ ಬೋಳಾಶಂಕರನನ್ನಾಗಿಸಿ, ದೈವತ್ವಕ್ಕೆ ವಿರುದ್ಧವಾಗಿ ಸ್ಮಶಾನವಾಸಿಯಾಗಿಸಿದ್ದೇವೆ. ತನ್ನ ಪತ್ನಿ ದಾಕ್ಷಾಯಣಿಯು ತಂದೆ ದಕ್ಷಬ್ರಹ್ಮನಿಂದ ಅವಮಾನಗೊಂಡು, ಯಜ್ಞಕುಂಡಕ್ಕೆ ಆಹುತಿಯಾದಾಗ ಆಕೆಯ ಅರೆಬೆಂದ ದೇಹವನ್ನು ಹೊತ್ತು ನಡೆದ ಮಾಹಾನ್ ಪ್ರೇಮಿಯು ಮುಂದೆ ಅರ್ಧನಾರೀಶ್ವರನೂ ಆದ ಆತನನ್ನು ನಾಸ್ತಿಕರೂ ಮೆಚ್ಚುವಂತೆ ಮಾಡಿದ್ದೇವೆ. ಅಂತಹಾ ಸರಳ ದೈವವನ್ನು ಪ್ರತಿನಿಧಿಸುವ ಸಸ್ಯಮೂಲದ “ರುದ್ರಾಕ್ಷಿ” ಅಥವಾ “ರುದ್ರಾಕ್ಷ” ಮರದ ವೈಜ್ಞಾನಿಕತೆಯ ಸಂಕೀರ್ಣ ಸಂಗತಿಗಳನ್ನು ಸಸ್ಯಯಾನದಲ್ಲಿ ನೋಡೋಣ.

                ಲಯ ಕರ್ತನಾದ ಶಿವನನ್ನು “ರುದ್ರ್ರ” ಎನ್ನುತ್ತೇವೆ.  ಸಹಸ್ರಾರು ವರ್ಷಗಳ ಕಾಲ ಧ್ಯಾನಾಸಕ್ತನಾದ ಶಿವನ ಕಣ್ಣಿನ ನೀರ ಹನಿಗಳಿಂದ ಹುಟ್ಟಿದ ಬೀಜಗಳಿಂದ ಬೆಳೆದ ಮರ ಎಂಬುದಾಗಿ ಪುರಾಣಗಳು ಹೇಳುತ್ತವೆ. ಹಾಗಾಗಿ ರುದ್ರಾಕ್ಷ ಅಥವಾ ರುದ್ರಾಕ್ಷಿ ಎಂದೇ ನಾಮಕರಣ. ಭಾರತೀಯರಲ್ಲಿ ಸಾಂಸ್ಕೃತಿಕವಾಗಿ ಮಹತ್ತರವಾದ ದೈವತ್ವದ ಸ್ಥಾನವನ್ನೇ ಪಡೆದ, ರುದ್ರಾಕ್ಷವು ಸಸ್ಯವಿಜ್ಞಾನದಲ್ಲೂ ಮಹತ್ವದ ಸಂಗತಿಗಳನ್ನು  ಹೊಂದಿದೆ. ರುದ್ರಾಕ್ಷಿಯ ಸಂಕುಲದಲ್ಲಿ ಸುಮಾರು 360 ಪ್ರಭೇದಗಳಿದ್ದು, ಅವುಗಳಲ್ಲಿ 120 ಪ್ರಭೇದಗಳು ಏಶಿಯಾದ ವಿವಿಧ ಭಾಗಗಳಲ್ಲಿ ಕಂಡುಬರುತ್ತವೆ. ಅವುಗಳಲ್ಲಿ 25 ಪ್ರಭೇದಗಳು ಭಾರತದಲ್ಲಿವೆ. ಅದರಲ್ಲಿ Elaeocarpus ganitrus ಎಂಬ ಪ್ರಭೇದವು ಅತ್ಯಂತ ಜನಪ್ರಿಯವೂ, ತುಂಬಾ ಸಾಮಾನ್ಯವಾಗಿಯೂ ಇರುವ ಸಸ್ಯವಾಗಿದೆ. ರುದ್ರಾಕ್ಷಿ ಸಸ್ಯವು ಹಿಮಾಲಯದ ಆಸು-ಪಾಸಿನಲ್ಲಿ ಮಾತ್ರವೇ ಹೆಚ್ಚಾಗಿ ಕಾಣಬರುವ ಮರವಾಗಿದ್ದು, ಅಲ್ಲಿಯೇ ಶಿವನ ಆವಾಸ ಸ್ಥಾನವಾಗಿಸಿರುವುದೂ ವಿಶೇಷವಾಗಿದೆ. ಈ ಸಂಕುಲದ ಎಲ್ಲಾ ಹಣ್ಣುಗಳೂ ವಿಶೇಷವಾದ ರಚನೆಯನ್ನು ಹೊಂದಿದ್ದು, ಒಳಗೆ ಗಟ್ಟಿಯಾದ ಮಣಿಯಂತಹ ಸುಂದರವಾದ ಬೀಜಗಳನ್ನು ಹೊಂದಿವೆ. ಇವುಗಳಲ್ಲವೂ ಅಲಂಕಾರಿಕ ಮಣಿಯಾಗಿಸಲು ಯೋಗ್ಯವಾದ ಸಂರಚನೆಯನ್ನು ಹೊಂದಿವೆ. ಹಣ್ಣಿನ ಬಣ್ಣವೂ ಕೂಡ ವಿಶೇಷವೇ! ಸಾಮಾನ್ಯವಾಗಿ ಅನೇಕ ಹಣ್ಣುಗಳು ಹಳದಿಯಿಂದ ಕೆಂಪು ಬಣ್ಣಗಳನ್ನು ಹೊಂದಿದ್ದರೆ, ರುದ್ರಾಕ್ಷ ಮಾತ್ರ ಅಪ್ಪಟ ನೀಲಿ! ಅಂತಹಾ ನೀಲಿಯ ಬಣ್ಣದ ಹಣ್ಣಿನಿಂದ ಮಣಿಗಳೇ ನೀಲಕಂಠನಿಗೆ ಶ್ರೇಷ್ಠ ಎನ್ನಿಸಿರಬಹುದಾದ ಅನುಮಾನಗಳೂ ಆಸಕ್ತ ವಿದ್ವಾಂಸರಲ್ಲಿ ಇವೆ.

                ಸಂಕುಲದ ಬಹುಪಾಲು ಪ್ರಭೇದಗಳ ಹಣ್ಣು ನೀಲಿ ಬಣ್ಣದ ದಪ್ಪ ಸಿಪ್ಪೆಯನ್ನು ಹೊಂದಿವೆ. ವಿಶೇಷವೆಂದರೆ ಸಾಮಾನ್ಯವಾಗಿ ಎಲ್ಲಾ ಹಣ್ಣು-ಹೂಗಳ ಬಣ್ಣಗಳಂತಲ್ಲ! ರುದ್ರಾಕ್ಷದ ಹಣ್ಣಿನ ನೀಲ ವರ್ಣವು ರಾಸಾಯಕನಿಕವಾದದ್ದಲ್ಲ! ಅಂದರೆ ಯಾವುದೇ ಬಣ್ಣಗಳ ಕೊಡುವ ರಾಸಾಯನಿಕ ಸಂಯುಕ್ತಗಳೂ ಇಲ್ಲಿಲ್ಲ. ಇದರ ನೀಲಿ ಬಣ್ಣವು ಅದರ ರಾಚನಿಕ ವಿನ್ಯಾಸದಿಂದ ಪ್ರತಿಫಲಿತವಾದ ಬಣ್ಣವಾಗಿದೆ. ನಮ್ಮ ನೋಟಕ್ಕೆ ದಕ್ಕುವ ಸಹಜವಾದ ಬಿಳಿಯ ಬೆಳಕು ಕೆಲವೊಂದು ವಸ್ತುಗಳ ಮೇಲೆ ಹಾಯ್ದು ಹೋದಾಗ ಪ್ರತಿಫಲನಕ್ಕೆ ಒಳಗಾಗಿ ವಿವಿಧ ಕೋನಗಳಲ್ಲಿ ವಕ್ರೀಭವನಗೊಂಡು ಪ್ರತಿಫಲಿಸುತ್ತದೆ. ಆಗ ಆಯಾ ಕೋನಗಳ ಅನುಸರಿಸಿ ವಿವಿಧ ಬಣ್ಣಗಳಾಗಿ ಪ್ರತಿಫಲಿಸುತ್ತದೆ. ಉದಾಹರಣೆಗೆ ನಮ್ಮ ಆಕಾಶದ ಬಣ್ಣವೂ ಹಾಗೆಯೇ! ಅಲ್ಲೂ ಸಹಾ ಸೂರ್ಯನ ಸಹಜವಾದ ಬೆಳಕು ವಾತಾವರಣದ ಚಿಕ್ಕ ಚಿಕ್ಕ ಕಣಗಳಿಂದಾಗಿ ವಕ್ರೀಭವನದಿಂದಾಗಿ ಚದುರಿದ ಪ್ರತಿಫಲನವು ಆಗಸವನ್ನು ನೀಲಿಯಾಗಿಸಿದೆ. ಈ ವಕ್ರೀಭವನವು ಆಯಾ ವಸ್ತುಗಳ ರಚನೆ ಹಾಗೂ ಅದರಿಂದಾಗುವ ವಕ್ರೀಭವನದ ಕೋನಗಳನ್ನು ಅನುಸರಿಸಿ ಬಣ್ಣಗಳು ಕಾಣುತ್ತವೆ. ಇದು ಭೌತವಿಜ್ಞಾನದ ಅತ್ಯದ್ಭುತ ಕಥಾನಕ. ನವಿಲಿನ ರೆಕ್ಕೆಯ ವಿವಿಧ ಆಕರ್ಷಕ ಬಣ್ಣಗಳೂ ಕೂಡ ಅಷ್ಟೇ! ಮೂಲತಃ ಕಂದು ಬಣ್ಣವಿರುವ ರೆಕ್ಕೆಗಳಲ್ಲಿನ ರಾಚನಿಕ ವಿನ್ಯಾಸದಿಂದಾಗಿ ಅತ್ಯಂತ ಸುಂದರವಾದ ಆಕರ್ಷಕ ರೂಪವನ್ನು ತೋರುತ್ತದೆ. ಹೀಗೆ ರುದ್ರಾಕ್ಷದ ಹಣ್ಣುಗಳ ಮೇಲ್ಮೈಯ ರಚನೆಯು ಬಣ್ಣವನ್ನು ಪ್ರತಿಫಲಿಸುತ್ತಾ ದಟ್ಟ ನೀಲಿ ಬಣ್ಣದ ಅಪರೂಪದ ಹಣ್ಣುಗಳಾಗಿಸಿದೆ.  

                ತೀರಾ ಅಪರೂಪದ ನೀಲಿ ಬಣ್ಣದ ರುದ್ರಾಕ್ಷವನ್ನು ದೈವತ್ವಕ್ಕೇರಿಸಿದ ಸಂಗತಿಗಳಲ್ಲಿ, ಮಣಿಗಳ ಆಯುಷ್ಯವೂ ಸಹಾ ಸೇರಿದೆ. ನಾವು ಮನೆಗಳಲ್ಲಿ, ತಾತ ಮುತ್ತಾತಂದಿರ ಕಾಲದಿಂದಲೂ ಇರುವ ರುದ್ರಾಕ್ಷಿಯ ಜಪಮಾಲೆಯನ್ನು ಅಥವಾ  ರುದ್ರಾಕ್ಷಗಳನ್ನು ನೋಡಿರಬಹುದು. ನೂರಾರು ಅಡಿ ಎತ್ತರದ ಮರಗಳಿಂದ ಬಿದ್ದ ಹಣ್ಣು ಒಣಗಿ ಮೇಲಿನ ಸಿಪ್ಪೆಯು ಕರಗಿ ಹೋದಂತೆ, ಹೊರಗಿನ ಜಗತ್ತಿಗೆ ತೆರದುಕೊಳ್ಳುವ ಮಣಿಗಳು ಕಾಯ್ದಿಟ್ಟರೆ ನೂರಾರು ವರ್ಷಗಳು ಹಾಗೇ ಕೆಡದಂತೆ ಇರಬಲ್ಲವು. ಕೇವಲ ಸ್ವಲ್ಪವೇ ಕಾಯಿಸಿದ ಬಿಸಿನೀರಿನಿಂದ ತೊಳೆಯುತ್ತಾ ಸಹಜವಾಗಿ ಒಣಗಿಸುತ್ತಾ  ಇಟ್ಟರೆ ಆರೆಂಟು ಸಂತತಿಗಳ ಕಾಲ ಇಡಬಹುದೆಂದು ಅಂದಾಜಿಸಲಾಗಿದೆ. ಹೀಗೆ ರುದ್ರಾಕ್ಷವು ಅನಂತತೆಯ ವಿಸ್ಮಯವನ್ನೂ ಕೊಟ್ಟಿದೆ. ಕೈಯಲ್ಲಿ ಹಿಡಿದಾಗ ಸಹಜವಾಗಿ ಹುರುಪುಗಳಿಂದಾದ ಹೊರ ಮೈ ಒಂದಷ್ಟು ಏರು, ಒಂದಷ್ಟು ಇಳಿತದ ಕೊರಕಲನ್ನೂ ಹೊಂದಿದ್ದು, ಸಾಮಾನ್ಯವಾಗಿ ವಾಸನಾರಹಿತವಾಗಿರುತ್ತದೆ. ನಮ್ಮ ಬದುಕನ್ನೂ ಮೀರಿದ ಜೀವನವನ್ನು ಹೊಂದಿರುವ ಮಣಿಗಳನ್ನು ದೈವತ್ವಕ್ಕೇರಿಸಿರುವ  ಸಹಜತೆಯನ್ನು ಕಾಣಬಹುದು.   

                ರುದ್ರಾಕ್ಷ ಮರವು ಇಲಿಯೋಕಾರ್ಪೇಸಿಯೇ (Elaeocarpaceae) ಎಂಬ ಸಸ್ಯ ಕುಟುಂಬವನ್ನು ಸೇರಿದೆ. ಈ ಹಿಂದೆಯೇ ತಿಳಿಸಿದಂತೆ ಸುಮಾರು 360 ಪ್ರಭೇದಗಳಿದ್ದು ಅದರಲ್ಲಿ ಇಲಿಯೋಕಾರ್ಪಸ್ ಗ್ಯಾನಿಟ್ರಸ್ (Elaeocarpus ganitrus)  ಪ್ರಭೇದವು ಭಾರತದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಪ್ರಭೇದದ ಮಣಿಗಳು ಹೆಚ್ಚು ಪ್ರಚಲಿತವಾದವೂ ಹೌದು. ಶ್ರೇಷ್ಠತೆ ದೈವತ್ವದ ವಿವರಗಳಲ್ಲಿ ರುದ್ರಾಕ್ಷದ ಮಣಿಗಳ ರೂಪ-ಆಕೃತಿಗಳು ವಿಶೇಷವಾದ ಮಹತ್ವವನ್ನು ಪಡೆದಿವೆ. ನಾವು ಅತೀ ಹೆಚ್ಚು ಕಾಣುವ ರುದ್ರಾಕ್ಷಿಗಳು ಐದು ಮುಖದ ಪಂಚಮುಖಿಗಳು. ಪ್ರತೀ ಮಣಿಯೂ 5 ಸೀಳುಗಳಾಗಿ ಒಡೆದಂತೆ ಕಾಣುತ್ತವೆ. ಇವುಗಳಿಗೆ ಸಹಜವಾದ ಮಾಮೂಲಿ ಬೇಡಿಕೆ. ಆದರೆ ಏಕಮುಖಿ, ಎರಡು ಸೀಳಿಕೆಯ ದ್ವಿಮುಖಿ, ಮೂರು ಮುಖದ ಹಾಗೂ ನಾಲ್ಕು ಮುಖದ ಮಣಿಗಳೂ ಸಿಗುತ್ತವೆ. ಆದರೆ ಇವುಗಳು ನಿಸರ್ಗದಲ್ಲಿ ದೊರಕುವ ಸಂದರ್ಭಗಳು ವಿರಳ. ಅಚ್ಚರಿ ಎಂದರೆ ಜೈವಿಕವಾಗಿ ಅಬಾರ್ಶನ್ ಆದ ಹಣ್ಣುಗಳಲ್ಲಿ ಹೀಗೆ ಒಂದು, ಎರಡು ಬೀಜಗಳು ಹುಟ್ಟಿರುತ್ತವೆ. ನೈಸರ್ಗಿಕವಾಗಿ ಕಡಿಮೆ ಸಾಮರ್ಥ್ಯದ ಬೀಜವಾಗಿರುವ, ಆದರೆ ವಿರಳವಾದ ಏಕಮುಖಿಗೆ ಹೆಚ್ಚು ಬೇಡಿಕೆ. ವಾಸ್ತವವಾಗಿ ಏಕಮುಖಿಯು ಜೈವಿಕ ಸಾಮರ್ಥ್ಯ ಕಡಿಮೆ ಇರುವ ಬೀಜ. ಆದರೆ ದೈವತ್ವದಲ್ಲಿ ಹೆಚ್ಚು ಬಲದ ನಂಬಿಕೆಯನ್ನು ಹುಟ್ಟಿಹಾಕಿರುವ ಬೀಜ. ಹೀಗೆ ಬೇಡಿಕೆಯ ಹಿನ್ನೆಲೆಯಲ್ಲಿ ನೈಸರ್ಗಿಕವಲ್ಲದ ಬೀಜಗಳನ್ನು ತಿದ್ದಿ ತೀಡಿ ಮಾಡಿದ ವಿಚಿತ್ರಾಕಾರದ ಮಣಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ವಾಸ್ತವವಾಗಿ ಇವೆಲ್ಲವೂ ಜನರ ನಂಬಿಕೆಯನ್ನು ಬಳಸಿಕೊಂಡು ದುಡ್ಡು ಮಾಡುವ ವಹಿವಾಟುಗಳಷ್ಟೇ! ದೈವಗಳನ್ನೇ ಸೃಷ್ಟಿಸಿದ ಮನುಕುಲಕ್ಕೆ ದೈವದ ಪ್ರತಿರೂಪಗಳನ್ನು ಕಟ್ಟುವುದೇನೂ ಕಷ್ಟವಲ್ಲ ತಾನೇ? ರುದ್ರಾಕ್ಷದ ವಹಿವಾಟೂ ಅಷ್ಟೇ. ಅದೊಂದು ಅಪರಿಮಿತವಾದ ವ್ಯವಹಾರವನ್ನು ಸೃಷ್ಟಿಸಿರುವ ಮಾರುಕಟ್ಟೆಯನ್ನು ಹೊಂದಿದೆ. ಕೆಲವು ಜಾಹೀರಾತುದಾರರು ವೈಜ್ಞಾನಿಕ ಪ್ರಬಂಧಗಳನ್ನೂ ಆಕರಗಳಾಗಿಸಿ ರುದ್ರಾಕ್ಷದ ಭೌತಿಕ ರಚನೆಗಳನ್ನು ವಿವರಿಸಿ ಮಾರುವ ವೆಬ್ ಪುಟಗಳನ್ನು ಹೊಂದಿದ್ದಾರೆ.  ಮುಖಗಳ ಸಂಖ್ಯೆಯನ್ನು ಹೆಚ್ಚಿಸುತ್ತಾ 14ರ ವರೆಗೂ ಬರಲಾಗಿದೆ. ಇವುಗಳಲ್ಲಿ 5ಮುಖಗಳವರೆಗೂ ಹೊರತಾಗಿ ಉಳಿದವನ್ನು ನಂಬುವುದೇ ಕಷ್ಟ. ಅದರಲ್ಲೂ ಏಕಮುಖಿಯು ಬೇಡಿಕೆಯ ಹಿನ್ನೆಲೆಯಿಂದಾಗಿ ನೈಸರ್ಗಿಕವೋ ಅಲ್ಲವೋ ಎಂಬುದನ್ನು ತಿಳಿಯಲು ಸ್ವಲ್ಪ ಜಾಣತನವೂ ಬೇಕಾದೀತು. ಅಷ್ಟಕ್ಕೂ ನೈಸರ್ಗಿಕವಾದರೂ ಅಬಾರ್ಶನ್‍ ಆದ ಬೀಜಗಳು ಬಿಡಿ.

                ಒಂದು ಸಸ್ಯವಾಗಿ ರುದ್ರಾಕ್ಷವು ತುಂಬಾ ಸುಂದರವಾದ ನೀಳವಾದ ರಚನೆಯ ವಿನ್ಯಾಸವನ್ನು ಹೊಂದಿರುವ ಮರ. ಹೆಚ್ಚೂ-ಕಡಿಮೆ ಪಿರಮಿಡ್ಡಿನ ಆಕಾರವನ್ನು ಹೋಲುವ ಮರದ ಕಾಂಡವು ಮಾಸಲು ಬೂದ ಹಾಗೂ ಬಿಳಿಯ ಮಿಶ್ರಣದ ಬಣ್ಣವನ್ನು ಹೊಂದಿದೆ. ಹೂವುಗಳು ಬಿಳಿಯ ಬಣ್ಣದವು. ಅವುಗಳ ದಳಗಳು ತುದಿಯಂಚಿನಲ್ಲಿ ಸೀಳಿಕೊಂಡು ಆಕರ್ಷಕ ವಿನ್ಯಾಸವನ್ನು ಹೊಂದಿರುತ್ತವೆ. ಮರಗಳು ಎತ್ತರಕ್ಕೆ ಬೆಳೆದು ನೂರಾರು ಅಡಿಗಳನ್ನು ತಲುಪುತ್ತವೆ. ಕೆಲವು ಪ್ರಭೇದಗಳ ಮರಗಳು 200 ಅಡಿಗಳ ಎತ್ತರವನ್ನೂ ತಲುಪಬಲ್ಲುವು. ಹಿಮಾಲಯದ ವಾತಾವರಣದ ಕಾಡುಗಳ ನಿವಾಸಿಗಳಾಗಿರುವ ಮರಗಳು ಸಹಜವಾಗಿ ಒತ್ತಾದ ಹಾಗೂ ನೀಳವಾಗಿ ಬೆಳೆಯುವ ಸ್ಥಿತಿಯನ್ನು ಹೊಂದಿಕೊಂಡಿರುತ್ತವೆ. ಆದ್ದರಿಂದ ಬಯಲು ಪ್ರದೇಶದಲ್ಲಿ ಬೆಳವಣಿಗೆಗೆ ಅಷ್ಟು ಪ್ರೋತ್ಸಾಹಕವಾಗಿರದು. ಹೆಚ್ಚು ಚಳಿ ಇರುವ ಪ್ರದೇಶವನ್ನು ಬಯಸುವ ರುದ್ರಾಕ್ಷವು ಅಗಲವಾದ ಎಲೆಗಳನ್ನು ಹೊಂದಿರುವ ನಿತ್ಯ ಹರಿದ್ವರ್ಣದ ಮರ.  ರುದ್ರಾಕ್ಷ ಮರಗಳು ಭಾರತದ ನೆಲವನ್ನೇ ಅಲ್ಲದೆ ದಕ್ಷಿಣ ಚೀನಾ, ಜಪಾನ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಫಿಜಿ ಹಾಗೂ ಹವಾಯ್ ಗಳಲ್ಲೂ ಸ್ವಾಭಾವಿಕವಾಗಿ ಆವರಿಸಿಕೊಂಡಿವೆ. ಒಮ್ಮೆ ಮೊಳೆತು ಹುಟ್ಟಿದ ಸಸ್ಯವು ಸಾಮಾನ್ಯವಾಗಿ ಏಳೆಂಟು ವರ್ಷಗಳ ನಂತರ ಫಲಕ್ಕೆ ಬರುತ್ತವೆ. ಹಣ್ಣುಗಳು ಮಾವಿನಂತೆ ಒಳಗೆ ಓಟೆ ಇರುವ ಹಾಗೆ, ಇಲ್ಲೂ ಸುತ್ತಲೂ ತಿರುಳನ್ನು ಹೊಂದಿ ಮಧ್ಯೆ ಗಟ್ಟಿಯಾದ ಬೀಜ (ರುದ್ರಾಕ್ಷದ ಮಣಿಗಳು)ವನ್ನು ಹೊಂದಿರುತ್ತದೆ.    

                ರುದ್ರಾಕ್ಷಕ್ಕೆ ದೈವತ್ವದ ಜೊತೆಗೆ ಹೆಚ್ಚುಗಾರಿಕೆಯನ್ನು ತಂದಿಟ್ಟುರುವುದು ಅವುಗಳು ಹೊಂದಿರುವ ಔಷಧೀಯ ಗುಣ. ಹಣ್ಣುಗಳಲ್ಲಿ ವಿಶೇಷವಾದ ಔಷಧ ಗುಣಗಳನ್ನು ಗುರುತಿಸಲಾಗಿದ್ದು, ಅವುಗಳ ವೈವಿಧ್ಯಮಯ ಔಷಧೀಯ ರಾಸಾಯನಿಕ ವಿವರಗಳು ಆಸಕ್ತಿಯ ಸಂಗತಿಗಳಾಗಿವೆ. ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಬಳಕೆಯ ಇತಿಹಾಸವನ್ನು ಹೊಂದಿರುವ ರುದ್ರಾಕ್ಷ ಮರವು ಸಾಕಷ್ಟು ಔಷಧ ಗುಣಗಳ ಆಕರವೂ ಆಗಿದೆ. ಹೆಚ್ಚಿನ ಭಾರತೀಯ ಅಧ್ಯಯನಗಳು ಸಾಂಪ್ರದಾಯಕ ಶೈಲಿಯ ವಿಧಾನಗಳನ್ನು ಹಾಗೂ ಭಾವನಾತ್ಮಕ ವಿವರಗಳನ್ನೂ ಹೊಂದಿದ್ದು ಸಾಕಷ್ಟು ಔಷಧ ಗುಣಗಳನ್ನು ಪ್ರಚುರ ಪಡಿಸುತ್ತವೆ. ಉದಾಹರಣೆಗೆ ಮಣಿಗಳ ನೆಕ್ಲೆಸುಗಳು ಕುತ್ತಿಗೆಯಲ್ಲಿ ಧರಿಸಿದಾಗ ವಿದ್ಯುತ್‍ಕಾಂತೀಯ (ಇಲೆಕ್ಟ್ರೊಮಾಗ್ನೆಟ್) ಗುಣಗಳಿಂದ ರಕ್ತದ ಒತ್ತಡ ನಿವಾರಿಸುವ ಮಾಹಿತಿಗಳನ್ನು ಒದಗಿಸುತ್ತವೆ. ಇವುಗಳಿಗೆ ವಿವರಗಳನ್ನು ಒದಗಿಸುವುದು ಕಷ್ಟ ಮಾತ್ರವಲ್ಲ ಸಾಬೀತು ಪಡಿಸಿದ ಉದಾಹರಣೆಗಳೂ ಇಲ್ಲ! ಆದರೆ ಜ್ವರ ಶಮನಮಾಡುವ, ಆಸ್ತಮ ನಿವಾರಣೆಯ ಔಷಧಗಳ ತಯಾರಿಯನ್ನು ಆಯುರ್ವೇದವು ನೂರಾರು ವರ್ಷಗಳ ಹಿಂದಿನಿಂದಲೂ ಮಾಡುತ್ತಿದ್ದು, ವಿವರಗಳು ಲಭ್ಯವಿವೆ. ಅನೇಕ ರಾಸಾಯನಿಕ ಸಂಯುಕ್ತಗಳನ್ನು ಹಣ್ಣಿನಲ್ಲಿ ಗುರುತಿಸಲಾಗಿದ್ದು  ಅವುಗಳನ್ನು ಹೀಗೆ ಪಟ್ಟಿ ಮಾಡಬಹುದಾಗಿದೆ. ಇಲಿಯೋಕಾರ್ಪೆಡಿನ್, ಇಲಿಯೋಕಾರ್ಪಿನ್, ಫ್ಲೇವಿನಾಯ್ಡ್ ಗಳು ಅಲ್ಲದೆ ಕೆಲವೊಂದು ಸ್ಟಿರಾಯ್ಡ್ಗಳನ್ನೂ, ಕೊಬ್ಬು, ಆಲ್ಕಲಾಯ್ಡ್‍ಗಳು, ಎಥೆನಾಲ್ ಟ್ಯಾನಿನ್ ಹಾಗೂ ಗ್ಯಾಲಿಕ್ ಆಮ್ಲಗಳನ್ನೂ ಗುರುತಿಸಲಾಗಿದೆ. ರುದ್ರಾಕ್ಷದ ಕಷಾಯದ ವೈವಿಧ್ಯಮಯ ಉಪಯೋಗಗಳ ಕುರಿತು ವಿಜ್ಞಾನದ ಅಧ್ಯಯನಗಳೂ ಸಾಕಷ್ಟು ಇವೆ.  

          ಅತ್ಯಂತ ಆಸಕ್ತಿಯ ಜನಪ್ರಿಯವೂ ಹಾಗೂ ವಿದ್ವತ್‍  ಪೂರ್ಣವೂ ಆದ ಅಧ್ಯಯನವು ಅಮೆರಿಕಾದ ಫ್ಲಾರಿಡಾ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಜೀವಿವಿಜ್ಞಾನದ ಎಮರೀಟಸ್ ಪ್ರೊಫೆಸರ್ ಆದ ಡೇವಿಡ್ ಲೀ ಅವರಿಂದ 20 ವರ್ಷಗಳ ಹಿಂದೆಯೇ ಪ್ರಕಟವಾಗಿದೆ.  ರುದ್ರಾಕ್ಷದ ಜೀವಿವೈಜ್ಞಾನಿಕ (Biology of Rudraksha) ಅಧ್ಯಯನವು ತುಂಬಾ ಹೆಸರುವಾಸಿ ಹಾಗೂ ಆಕರ್ಷಕ ವೈಜ್ಞಾನಿಕ ವಿವರಗಳನ್ನು ಒಳಗೊಂಡಿದೆ. ಹಾಗೂ ಅವರೇ ಮೊದಲ ಬಾರಿಗೆ ರುದ್ರಾಕ್ಷದ ಹಣ್ಣುಗಳ ನೀಲಿ ಬಣ್ಣದ ರಾಚನಿಕ ಪ್ರತಿಫಲನದ ಬಗ್ಗೆಯೂ ದಾಖಲಿಸಿದವರು. ಉಷ್ಣವಲಯದ ಸಸ್ಯವರ್ಗಗಳ ವಿಕಾಸ ಹಾಗೂ ಜೈವಿಕ ಹಿನ್ನೆಲೆಯ ಅಧ್ಯಯನದ ಆಸಕ್ತಿಯನ್ನು ಹೊಂದಿದ ಪ್ರೊ. ಡೇವಿಡ್ ರುದ್ರಾಕ್ಷ ಕುರಿತು ಅಪಾರ ಪ್ರೀತಿ ಹೊಂದಿದ ವಿಜ್ಞಾನಿ. ಭಾರತೀಯ ಮೂಲದ ಉತ್ತರ ಪ್ರದೇಶ, ಅಸ್ಸಾಂ, ಹರಿಯಾಣ ಹಾಗೂ ಹಿಮಾಚಲ ಪ್ರದೇಶಗಳ ವಿಶ್ವವಿದ್ಯಾಲಯಗಳೂ ಕೂಡ ಸಾಕಷ್ಟು ಆಸಕ್ತಿಯನ್ನು ತೋರಿಸಿವೆ. ಹಲವು ಅಧ್ಯಯನಗಳು ಶಿಲೀಂಧ್ರಗಳ ಉಪಶಮನಕಾರಕ ಹಾಗೂ ಬ್ಯಾಕ್ಟೀರಿಯ ನಿವಾರಕ ಗುಣಗಳ ಕುರಿತೂ ದಾಖಲಿಸಿವೆ.

                ಧ್ಯಾನ, ಯೋಗಕ್ಕೂ ಮತ್ತು ಶಿವ ಹಾಗೂ ರುದ್ರಾಕ್ಷಕ್ಕೂ ತುಂಬಾ ನಂಟು. ಶಿವರಾತ್ರಿಯ ಆಚರಣೆಯೂ ಸರಳವಾದ ಆಹಾರ ಸೇವನೆ ಹಾಗೂ ಜಾಗರಣೆ ಹಾಗೂ ಧ್ಯಾನವನ್ನೇ ಪ್ರೋತ್ಸಾಹಿಸುತ್ತದೆ. ರುದ್ರಾಕ್ಷ ಕುರಿತಂತಹ ಸಮರ್ಥನೆಗಳಲ್ಲಿ ಉಪಶಮನಗಳು ಧ್ಯಾನದ ಜೊತೆಗೆ ರುದ್ರಾಕ್ಷದ ಬಳಕೆಯನ್ನು ಹೊಗಳುತ್ತವೆ. ಹಾಗಾಗಿ ಪ್ರತಿಫಲವು ಧ್ಯಾನವು ಉಸಿರಾಟದ ಕ್ರಿಯೆಯ ಮೂಲಕ ಉಂಟುಮಾಡುವ ಪ್ರೇರಕವೋ ಕೇವಲ ಬೀಜಗಳು ಕೊಡುವ ಮಾಂತ್ರಿಕ ಶಕ್ತಿಯೋ ಎಂದು ಬಳಕೆದಾರರು ಕಂಡುಕೊಳ್ಳಬೇಕು.  ಅದೇನೇ ಇರಲಿ ಹಿಮಾಲಯದಿಂದ ಕನ್ಯಾಕುಮಾರಿಯ ತಲುಪುವಲ್ಲಿ ಮಾಹಿತಿಯ ಜೊತೆಗೆ, ವ್ಯಾವಹಾರಿಕ ಸಂಗತಿಗಳೂ ಸಾಕಷ್ಟು ಬದಲಾಗುವುದು ಸಹಜ. ಅದರಲ್ಲೂ ಸಂಪ್ರದಾಯ, ದೈವತ್ವದ ಹಿನ್ನೆಲೆಯನ್ನು ಆರೋಪಿಸುತ್ತಾ ಲಾಭ ಮಾಡುವ ಆಧುನಿಕತೆಯೇನೂ ಹೊಸತಲ್ಲ. ಇಷ್ಟೆಲ್ಲದರ ಮಧ್ಯೆ ಒಂದು ಸಸ್ಯವಾಗಿ ರುದ್ರಾಕ್ಷ ಗಳಿಸಿರುವ ಮಹತ್ವ ಮಾತ್ರ ಹೆಮ್ಮೆ ಪಡುವಂತಹದ್ದು. ಅದರ ಬೀಜಗಳು ಅಥವಾ ಜಪಮಣಿಗಳ ಅನಂತತೆಯ ಬದುಕೂ ವಿಶೇಷವೇ! ಕೇವಲ ಎರಡೇ ಬೆರಳುಗಳ ಹಿಡಿತದಲ್ಲಿ ಇರಿಸಿಕೊಳ್ಳಬಹುದಾದ ಪುಟ್ಟ ಬೀಜವೊಂದು ಇಡೀ ಭರತ ಖಂಡವನ್ನು ಮೋಡಿ ಮಾಡಿದ್ದು ಸಸ್ಯಪ್ರಿಯರೆಲ್ಲರಲ್ಲೂ ಬೆರಗು ಆನಂದವನ್ನು ಉಂಟುಮಾಡುವುದರಲ್ಲಿ ಸಂಶಯವೇ ಇಲ್ಲ. ಶಿವರಾತ್ರಿಯ ನೆಪದಲ್ಲಿ ರುದ್ರಾಕ್ಷ ಸಸ್ಯದ ಕುರಿತ ವಿಶೇಷತೆಗಳ ವಿಜ್ಞಾನದ ಓದು ನೀಡುತ್ತಿರುವ ಖುಷಿಯ ಮಾಂತ್ರಿಕತೆಯಂತೂ ನಿಜ. ನೀಲಹಣ್ಣುಗಳಿಂದ ಹೊರಬಂದ ಮಣಿಗಳು “ನೀಲ-ಕಂಠ”ದ ಸುತ್ತುವರೆದು-ಕಂಠಹಾರವಾದ, ಅವನ ಸ್ತುತಿಸಲು ಜಪಮಾಲೆಯಾದ, ಜೊತೆಗೆ ಅಪರೂಪದ ಬಣ್ಣವಾಗಿಸಿದ ಹಣ್ಣುಗಳ ಮೂಲಕ ಹಾಗೂ ಬಗೆ-ಬಗೆಯ ಔಷಧಗುಣಗಳಿಂದಾಗಿ ರುದ್ರಾಕ್ಷವು  ಭಾರತೀಯ ಸಾಂಸ್ಕೃತಿಕ ಲೋಕದಲ್ಲೂ ಹಾಗೂ ವಿಜ್ಞಾನ ಜಗತ್ತಿನಲ್ಲೂ ವಿಶೇಷ ಸಸ್ಯವಾಗಿರುವುದಂತೂ ಸತ್ಯ. 

ನಮಸ್ಕಾರ  – ಚನ್ನೇಶ್    

This Post Has 6 Comments

 1. Pramod

  Congrats in shivaratri festivals one small story is the rudraksha

 2. S M Shivaprakasha

  This one concise article is worth awarding a PhD or at least an MPhil degree!( so much its history and applications unravelled! Congrats Channesh !!

 3. VIJAYAKUMAR

  Best description..with crystals of nature,science, tradition and your pure kannada words…

 4. ಶ್ರೀಹರಿ,ಕೊಚ್ಚಿನ್

  ನಿಮಗೂ ಶಿವರಾತ್ರಿ ಹಬ್ಬಕ್ಕೆ ಶುಭಾಶಯಗಳು. ಓಂ ನಮಃ ಶಿವಾಯ .ಈ ಸಂದರ್ಭಕ್ಕೆ ಸೂಕ್ತವಾದ ಬರವಣಿಗೆ . ರುದ್ರಾಕ್ಷವನ್ನು ನೋಡಿಬಲ್ಲೆನಾದರೂ ಈ ಬಗೆಯ ವಿವರವನ್ನು ಈ ಸಸ್ಯದ ಬಗ್ಗೆ ತಿಳಿದಿರಲಿಲ್ಲ . ಪ್ರತಿಯೊಂದು ಸಸ್ಯವು ಹಿಂದೂ ಪುರಾಣದಲ್ಲಿ ವೈವಿಧ್ಯಮಯವಾಗಿ ಹೊಂದಿಕೊಳ್ಳುವುದು ಈ ನಾಡಿನ ಸೊಬಗೇ ಸರಿ . ಆಯುರ್ವೇದದಲ್ಲಿರುವ ವಿವರಣೆಗಳು ಮುಂದಿನ ಪೀಳಿಗೆಗಳಿಗೂ ಅರ್ಥವಾದರೆ ಅದು ಎಲ್ಲರ ಸೌಭಾಗ್ಯ . ನಿಮ್ಮ ಬರವಣಿಗೆ ಒಂದು ಯಾನ ..ಅಭಿನಂದನೆಗಳು ..

 5. Dr Raghavendra

  Nice article ,Dear Channesh.
  It has your stamp.

 6. B H VENKATASWAMY BIJAVARA

  Great information by a sober personality…highly appreciable information..Thank you very much Dr. Channesh 💐👍🎈

Leave a Reply