You are currently viewing ವಿಜ್ಞಾನ, ತಂತ್ರಜ್ಞಾನಗಳ ಅಧ್ಯಯನಗಳ ಹರಿಕಾರ ಪ್ರೆಂಚ್‌ ದಾರ್ಶನಿಕ -ಬ್ರುನೊ ಲಾಟುವ್‌ (Bruno Latour)

ವಿಜ್ಞಾನ, ತಂತ್ರಜ್ಞಾನಗಳ ಅಧ್ಯಯನಗಳ ಹರಿಕಾರ ಪ್ರೆಂಚ್‌ ದಾರ್ಶನಿಕ -ಬ್ರುನೊ ಲಾಟುವ್‌ (Bruno Latour)

ವಿಜ್ಞಾನ, ತಂತ್ರಜ್ಞಾನಗಳ ಅಧ್ಯಯನ (Science and technology studies) ಗಳ ಪ್ರಮುಖ ಹರಿಕಾರರಲ್ಲಿ ಒಬ್ಬರಾದ ಬ್ರುನೊ ಲಾಟುವ್‌, ವಿಜ್ಞಾನ ಹಾಗೂ ಸಮಾಜವನ್ನು ಸಮೀಕರಿಸುವ ದಾರ್ಶನಿಕರು. CPUS ನ ಮೂಲ ಆಶಯಗಳನ್ನು ಪ್ರಭಾವಿಸಿದವರು ಬ್ರುನೊ. ಅವರ ಮರಣದ ಸಂದರ್ಭದಲ್ಲಿ ಸ್ಮರಣೆಗೆಂದು ಈ ಲೇಖನ.

ನೊಬೆಲ್‌ ಪ್ರಶಸ್ತಿಗಳ ಪ್ರಕಟಣೆಯ ಸಮಯದಲ್ಲಿ, ವಿಜ್ಞಾನ ಮತ್ತು ಸಮಾಜವನ್ನು ಸಮೀಕರಿಸುವ ಅಧ್ಯಯನಕಾರರಲ್ಲಿ ವಿಖ್ಯಾತರಾದ ಫ್ರೆಂಚ್‌ ದಾರ್ಶನಿಕ ಬ್ರುನೊ ಲಾಟುವ್‌ (Bruno Latour) ಅವರ ಮರಣದ ಸುದ್ದಿ ಪ್ಯಾರಿಸ್‌ನಿಂದ ಹೊರ ಬಿದ್ದಿದೆ. ವಿಜ್ಞಾನ ಮತ್ತು ತಂತ್ರಜ್ಞಾನಗಳ ಅಧ್ಯಯನಗಳಲ್ಲಿ ಹೆಸರಾಗಿದ್ದ ಮೊನ್ನೆ ಅಕ್ಟೋಬರ್‌ 9 ರಂದು ಬ್ರುನೊ ಲಾಟುವ್‌ ತೀರಿಕೊಂಡರು. ವಿಜ್ಞಾನವನ್ನು ಸಮಾಜೀಕರಿಸುವ ಹಿನ್ನೆಲೆಯಲ್ಲಿ CPUS ಸಂಸ್ಥೆಯನ್ನು ರೂಪಿಸುವ ಆರಂಭದಲ್ಲಿ ವೈಯಕ್ತಿಕವಾಗಿ ನನಗೆ ಅವರ “ಲ್ಯಾಬೊರೇಟರಿ ಲೈಫ್‌ (Laboratory Life)”  ಪುಸ್ತಕದ ಮೂಲಕ ಪ್ರಭಾವಿಸಿದವರು.  ವಿಜ್ಞಾನದ ರಚನೆಯಲ್ಲಿನ ಸಮಾಜಿಕ ಸಂಗತಿಗಳನ್ನು ಅರ್ಥವತ್ತಾಗಿ ನಿರೂಪಿಸುವ ಪುಸ್ತಕವದು. ಇಂದು ವಿಜ್ಞಾನವನ್ನು ದಾರ್ಶನಿಕ ಹಿನ್ನೆಲೆಯಲ್ಲಿ ಓದುವ ಮನಸ್ಸುಗಳನ್ನೂ ಜೊತೆಗೆ ಅದರ ಚಲನಶೀಲತೆಯ ಅಧ್ಯಯನ ಮಾಡುವ ಇತಿಹಾಸಕಾರರನ್ನೂ ಪ್ರಭಾವಿಸುವ ಪುಸ್ತಕ.

ಬ್ರುನೊ, ಅವರು ಲ್ಯಾಬೊರೇಟರಿ ಲೈಫ್‌ ರಚಿಸಲು ಕಾರಣರಾದವರು, ಪೋಲಿಯೊ ಲಸಿಕೆಯನ್ನು ತಯಾರಿಸಿದ ಡಾ. ಜೊನಾಸ್‌ ಸಾಕ್‌ ಅವರು. ಜೊನಾಸ್‌ ಸಾಕ್‌ ಮೂಲತಃ ಸಮಾಜ ವಿಜ್ಞಾನಿಯಾದ ಬ್ರುನೊ ಲಾಟುವ್‌ ಅವರನ್ನು ತಮ್ಮ ಸಾಕ್‌ ಸಂಸ್ಥೆಗೆ ವಿಜ್ಞಾನದ ರಚನೆಯ ಕುರಿತ ಅಧ್ಯಯನಕ್ಕಾಗಿ ಆಹ್ವಾನಿಸಿದ್ದರು. ಜೀವಿವಿಜ್ಞಾನದ ಅಧ್ಯಯನದ ಪ್ರಯೋಗಾಲಯದಲ್ಲಿ ಸಮಾಜವಿಜ್ಞಾನಿಗೇನು ಕೆಲಸ ಅನ್ನಿಸೀತು! ನಿಜ, ಅಂತಹಾ ಆಲೋಚನೆಯನ್ನು ಸಮಾಜದ ಹಿತವನ್ನು ವೈಜ್ಞಾನಿಕ ಕಲ್ಪಿಸಬಲ್ಲ ಸಾಕ್‌ ಮಾತ್ರವೇ ಮಾಡಬಲ್ಲರು. ಹಾಗಾಗಿ ಸಮಾಜ ವಿಜ್ಞಾನಿಗೆ ಜೀವಿವಿಜ್ಞಾನದ ಪ್ರಯೋಗಾಲಯದೊಳಗಿನ ಸಮಾಜಿಕತೆಯ ಅರಿತು ದಾಖಲಿಸುವ ಆಹ್ವಾನ ನೀಡಿದ್ದರು. ಅದರ ಫಲವಾಗಿ ಪ್ರಕಟವಾದ ದಾಖಲೆಯೇ “ಲ್ಯಾಬೊರೇಟರಿ ಲೈಫ್‌ (Laboratory Life- The Construction of  Scientific Facts)” ಪುಸ್ತಕಯಾನದಲ್ಲಿ ಈ ಪುಸ್ತಕವನ್ನು ಇನ್ನೂ ಪರಿಚಯಿಸಬೇಕಿದೆ. ಸದ್ಯದಲ್ಲಿ ಬಹುಶಃ ಮುಂದಿನ ವಾರದಲ್ಲಿ ಈ ಪುಸ್ತಕ ಹಾಗೂ ಒಟ್ಟಾರೆ ಬ್ರುನೊ ಅವರ ಕೊಡುಗೆಯ ಕುರಿತು ಪರಿಚಯಿಸುತ್ತೇನೆ.

ಸೆಂಟರ್‌ ಫಾರ್‌ ಪಬ್ಲಿಕ್‌ ಅಂಡರ್‌ ಸ್ಟ್ಯಾಂಡಿಂಗ್‌ ಆಫ್‌ ಸೈನ್ಸ್‌ (CPUS) ವೆಬ್‌ ಸೈಟ್‌ ಅನ್ನು ಸಾರ್ವಜನಿಕವಾಗಿ ಮುಕ್ತವಾಗಿಸುವ ದಿನದಂದು “ಲ್ಯಾಬೊರೇಟರಿ ಲೈಫ್‌ (Laboratory Life- The Construction of  Scientific Facts)” ಪುಸ್ತಕದ ಜೊನಾಸ್‌ ಸಾಕ್‌ ಮುನ್ನುಡಿಯಲ್ಲಿ ಆಡಿದ ಮಾತುಗಳನ್ನೇ ಮೂಲ ಮಂತ್ರದಂತೆ ಆರಂಭದಲ್ಲಿ ಓದಿ ವೆಬ್‌ ಸೈಟ್‌ ಅನ್ನು ಅನಾವರಣ ಮಾಡಲಾಗಿತ್ತು. ಅವರು ತೀರಿಕೊಂಡ ಈ ಹೊತ್ತಿನಲ್ಲಿ ಅವರನ್ನು ಸ್ಮರಿಸುತ್ತಾ ಸಂತಾಪವನ್ನು ಸೂಚಿಸುತ್ತದೆ.

ಬ್ರುನೊ ಅವರು, ವಿಜ್ಞಾನದಲ್ಲಿ ಸಮಾಜವನ್ನು ಕಟ್ಟುವುದು ಹೇಗೆ? ಅಥವಾ ಸಮಾಜದೊಳಗೆ ವಿಜ್ಞಾನವನ್ನು ಕಟ್ಟುವುದು ಹೇಗೆ? ಇವುಗಳಿಗೆ ಉತ್ತರವಾಗಿ, ಸಾಮಾಜಿಕ ನಿರ್ಮಿತಿಯ ಮಾರ್ಗವನ್ನು ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದೊಳಗೆ ಚಿಂತಿಸಿದ, ಚರ್ಚೆಗೆ ಒಳಪಡಿಸಿದ ವಿಖ್ಯಾತ ದಾರ್ಶನಿಕ. ವಿಜ್ಞಾನ ಮತ್ತು ತಂತ್ರಜ್ಞಾನಗಳ ಹುಟ್ಟು, ಅಭಿವೃದ್ಧಿ ಮತ್ತು ಸಮಾಜದ ಮೇಲೆ ಅವುಗಳು ಬೀರುವ ಪ್ರಭಾವವನ್ನು ಚಾರಿತ್ರಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಧ್ಯಯನಗಳ ಮೂಲಕ ಅಂತರ್‌ ಶಿಸ್ತೀಯ ವಿಧಾನಗಳನ್ನು ಕೊಟ್ಟವರು ಡಾ. ಬ್ರುನೊ.  

        ಡಾ. ಬ್ರುನೊ , 1947ರ ಜೂನ್‌ 27ರಂದು ಫ್ರಾನ್ಸ್‌ ದೇಶದ ಬ್ಯುನಾ (Beaune) ಎಂಬಲ್ಲಿ ಜನಿಸಿದರು. ಅದು ಜಗದ್ವಿಖ್ಯಾತ ಫ್ರೆಂಚ್‌ ವೈನ್‌ ತಯಾರಿಸುವ ಬರ್ಗ್ಯಾಂಡಿ ಪ್ರದೇಶದ ಪುಟ್ಟ ಪಟ್ಟಣ. ಬ್ರುನೊ ಅವರು University of Tours ಅಲ್ಲಿ ಪಿ.ಎಚ್.ಡಿ ಪದವಿಯನ್ನು ಪಡೆದರು. ವಿಜ್ಞಾನದ ದರ್ಶನಗಳ ಬಗೆಗೆ ಅವರ ಅನೇಕ ಅಧ್ಯಯನಗಳು, ಚರ್ಚೆಗಳು ಹೆಸರುವಾಸಿ. ಸಮಕಾಲೀನ ದಾರ್ಶನಿಕರಲ್ಲಿ ವಿಜ್ಞಾನದ ಮಾಹಿತಿ (Facts) ಗಳನ್ನು ಮತ್ತು ಸಂಸ್ಕೃತಿ ಚರ್ಚೆಯ ಮೌಲ್ಯ(Values)ಗಳನ್ನು ಪ್ರತ್ಯೇಕಿಸದ ಜವಾಬ್ದಾರಿಯನ್ನು ತಂದ ಪ್ರಮುಖರು.

ವಿಜ್ಞಾನ ಮತ್ತು ತಂತ್ರಜ್ಞಾನದ ಅಧ್ಯಯನಗಳ ಆದ್ಯ ಪ್ರವರ್ತಕರಾದ, ಬ್ರುನೊ ಅವರು ಸಾಮಾನ್ಯವಾಗಿ ವಿಜ್ಞಾನಿಗಳ ಅಥವಾ ತಜ್ಞರ ನಡುವಿನ ಪರಸ್ಪರ ಕ್ರಿಯೆಯ ಮೂಲಕ ಸತ್ಯಗಳು ಉದ್ಭವಿಸುತ್ತವೆ ಮತ್ತು ಆದ್ದರಿಂದ ಅವುಗಳೂ ಸಹಾ ಸಾಮಾಜಿಕವಾಗಿ ಮತ್ತು ತಾಂತ್ರಿಕವಾಗಿ ನಿರ್ಮಿಸಲ್ಪಟ್ಟಿವೆ ಎಂದು ವಾದಿಸಿದ್ದಾರೆ. ದಾರ್ಶನಿಕರು ಐತಿಹಾಸಿಕವಾಗಿ ಸತ್ಯ ಮತ್ತು ಮೌಲ್ಯಗಳನ್ನು ಪ್ರತ್ಯೇಕತೆಯ ಮೂಲಕ ಗುರುತಿಸುತ್ತಾರೆ, ಆದರೆ ಇಂತಹಾ ಪ್ರತ್ಯೇಕತೆಯು ತಪ್ಪು ಎಂದು ಬ್ರುನೊ ಲಾಟುವ್ ಅವರು ನಂಬಿದ್ದರು. ಅಷ್ಟೇ ಅಲ್ಲ ಅದನ್ನು ಸಮೀಕರಿಸುತ್ತಲೇ ವಿಜ್ಞಾನದ ಸಮಾಜೀಕರಣವನ್ನು ಪ್ರತಿಪಾದಿಸಿದವರು. ಇಂದು ವಿಜ್ಞಾನದ ಸಮಾಜೀಕರಣವನ್ನು ಶೈಕ್ಷಣಿಕ ಹಿನ್ನೆಲೆಯಲ್ಲಿ ನೋಡಲು ಸಾಧ್ಯವಾಗಿರುವುದೂ ಸಹಾ ಬ್ರುನೊ ಅವರ ಚಿಂತನೆಗಳಿಂದಲೇ!

ಅವರ ಹೆಚ್ಚಿನ ಅಧ್ಯಯನ ಸಂಶೋಧನೆಗಳೆಲ್ಲವೂ ವಿಜ್ಞಾನ, ತತ್ವಶಾಸ್ತ್ರ, ಸಮಾಜ ವಿಜ್ಞಾನ ಹಾಗೂ ಮಾನವಿಕ ವಿಜ್ಞಾನಗಳನ್ನು ಕುರಿತಾಗಿದ್ದವು. ಅವರ ಕೃತಿಗಳಲ್ಲಿ ಪ್ರಮುಖವಾದ ಹಾಗೂ CPUS ಗೆ ಒಂದು ಪ್ರಮುಖ ಪ್ರಭಾವವನ್ನೇ ಬೀರಿರುವ “ಲ್ಯಾಬೊರೇಟರಿ ಲೈಫ್‌” ಅನ್ನು ಸದ್ಯದಲ್ಲೇ ಪುಸ್ತಕಯಾನದಲ್ಲಿ ಪರಿಚಯಿಸಲಿದ್ದೇನೆ. ಅವರ ವಿಖ್ಯಾತ ಕೃತಿ We Have Never Been Modern  ಇದೊಂದು ಬಗೆಯಲ್ಲಿ ವಿಜ್ಞಾನದ ಮಾನವಿಕ ಅಧ್ಯಯನ (Anthropology of Science). ಇದರಲ್ಲಿ ಆಧುನಿಕತೆಯು ಪ್ರಕೃತಿ ಮತ್ತು ಸಮಾಜದ ನಡುವೆ ದ್ವಂದ್ವವಾದ ವ್ಯತ್ಯಾಸವನ್ನು ಮಾಡುತ್ತದೆ. ಆಧುನಿಕತೆಯ ಪೂರ್ವದಲ್ಲಿ ಜನರು, ಅಂತಹ ಯಾವುದೇ ವಿಭಜನೆಯನ್ನು ಮಾಡಲಿಲ್ಲ. ಎಂದೇ ವಾದಿಸುತ್ತಾರೆ.

ಇತರೆ ಪ್ರಮುಖ ಕೃತಿಗಳು ಎಂದರೆ Science in Action: How to Follow Scientists and Engineers Through Society, ಮತ್ತು ಇತ್ತೀಚೆಗಿನ ಕೃತಿ  ಆಫ್ಟರ್‌ ಲಾಕ್‌ ಡೌನ್‌ (After Lockdown).  

            ಬ್ರುನೊ ಅವರೆನ್ನುತ್ತಾರೆ “ಸಾಂಕ್ರಾಮಿಕತೆ ಎನ್ನುವುದು ಯುದ್ದದ ಹಾಗೆ ಹೊರಗಿನಿಂದ ಬಂದದ್ದಲ್ಲ, ಭೂಕಂಪನದ ಹಾಗೆ ಒಳಗಿನಿಂದ  ಬಂದದ್ದು” ಮುಂದುವರೆದು “Let’s celebrate the experience of a pandemic,” writes philosopher Bruno Latour in his brief but dense meditation on COVID-19. The pandemic, he says, has made us realize — through social distancing and mask wearing — “to what extent the distinct individual was an illusion”. He is not just being ironic: he argues that a new “global awareness” triggered by lockdowns might help to unite us in facing the even more demanding threat of climate change. ಹವಾಮಾನ ಬದಲಾವಣೆಯನ್ನು ಇನ್ನೂ ಹೆಚ್ಚು ದಂಡನೆಯನ್ನು ಒಡ್ಡುವ ಆಘಾತಕಾರಿ ಎಂದು ಗುರುತಿಸುತ್ತಾ, ಅದಕ್ಕಾಗಿ ನಾವು ಒಂದಾಗಬೇಕಿರುವ ಜಾಗೃತಿಯನ್ನು ಅವರು ಎಚ್ಚರಿಸಿದ್ದಾರೆ.

       ವಿಜ್ಞಾನವನ್ನು ಸಮಾಜೀಕರಿಸುವ ಬಗೆಗೆ ನಾನು ಹಾಗೂ CPUS ಕೆಲಸಗಳಲ್ಲಿ ಪದೆ ಪದೆ ಹೇಳುತ್ತಿರುವ ವಿಚಾರಗಳನ್ನು ಜೊನಾಸ್‌ ಸಾಕ್‌ ಊಹಿಸಿದ್ದ ಕನಸುಗಳಿಂದ, ಅವುಗಳನ್ನು ವಿಜ್ಞಾನದ ಸಂರಚನೆಗಳಲ್ಲಿ ಪ್ರಯೋಗಿಕ ದರ್ಶನ ಮಾಡಿಸಿದ ಬ್ರುನೊ ಲಾಟುವ್‌ ಮೂಲಕ ಅಪಾರವಾಗಿ ಪಡೆದಿದ್ದೇನೆ. ಅವರನ್ನು ಸ್ವತಃ ನೋಡದಿದ್ದರೂ ಏಕಲವ್ಯನಿಗೆ ದ್ರೋಣರ ಹಾಗೆ ನನಗೆ ಬ್ರುನೊ. ಎಲ್ಲೋ ಇದ್ದು ನನ್ನಂತಹಾ ಅಪಾರ ಮನಸ್ಸುಗಳನ್ನು ವಿಜ್ಞಾನದ ಸಮಾಜೀಕರಣದ ಮೂಲಕ “ಗುರುತ್ವ”ದಂತೆ ಆಕರ್ಷಿಸಿದ ಗುರು ಬ್ರುನೊ ಲಾಟುವ್‌.

ಸಮಾಜವಿಜ್ಞಾನದ ನೊಬೆಲ್‌ ಎಂದೇ ಪ್ರಸಿದ್ಧಿ ಪಡೆದ ಹಾಲ್‌ ಬರ್ಗ್‌ ನೆನಪಿನ ಅಂತರರಾಷ್ಟ್ರೀಯ (Holberg International Memorial prize) ಪ್ರಶ್ತಸ್ತಿಯನ್ನು 2013ರಲ್ಲಿ ಪಡೆದಿದ್ದಾರೆ. ಈ ಪ್ರಶಸ್ತಿಯನ್ನು ಗಣಿತಕ್ಕೆ “ಅಬೆಲ್‌ ಪ್ರಶಸ್ತಿ (Abel Prize)” ಯನ್ನು ಕೊಡುವ ನಾರ್ವೆ ದೇಶವು ಸಮಾಜ ವಿಜ್ಞಾನಕ್ಕೆ ಅವುಗಳಿಗೆ ಸಮಾನಾಂತರವಾಗಿ 2003ರಿಂದ ಸ್ಥಾಪಿಸಿ ಕೊಡುತ್ತಿದೆ.  

ಮೊನ್ನೆ ಅಕ್ಟೋಬರ್‌ 9ರಂದು ವಿಜ್ಞಾನದ ಸಮಾಜೀಕರಣದ ಪ್ರಿಯರಿಂದ ಶಾಶ್ವತವಾಗಿ ದೂರವಾದ ಡಾ. ಬ್ರುನೊ ಲಾಟುವ್‌ ಅವರ ನೆನಪಿನಲ್ಲಿ ಸಂತಾಪ ಸೂಚಿಸುತ್ತಾ ಅವರ “ಲ್ಯಾಬೊರೇಟರಿ ಲೈಫ್‌ʼ ಪರಿಚಯದ ಮೂಲಕ ಮತ್ತೊಮ್ಮೆ ಸದ್ಯದಲ್ಲೇ ತಮ್ಮೊಂದಿಗೆ ನೆನಪಿಸಿಕೊಳ್ಳಲಿದ್ದೇನೆ.

CPUS ವೆಬ್‌ ಸೈಟ್‌ ಅನ್ನು ಸಾರ್ವಜನಿಕವಾಗಿ ಅನಾವರಣ ಸಂದರ್ಭದಲ್ಲಿ ಬಳಸಿದ ಆರಂಭಿಕ ಘೋಷಣೆ

ನಮಸ್ಕಾರ

ಡಾ. ಟಿ.‌ ಎಸ್‌. ಚನ್ನೇಶ್

This Post Has One Comment

  1. ಡಾ.ಶಂಕರ ರಾಮಚಂದ್ರ ಕಂದಗಲ್ಲ

    ವಿಜ್ಞಾನಕ್ಕೆ ಒತ್ತಾಸೆ ನೀಡಿ ಸಮಾಜ, ಸಮಾಜಕ್ಕೆ ಒತ್ತಾಸೆ ನೀಡಿ ವಿಜ್ಞಾನ ಬೆಳೆದರೆ, ಬದುಕು ಲೀಲಾಜಾಲವಾಗಿ ಹಸನಾಗುತ್ತದೆ. ಇಂಥ ಬದುಕಿನ ನೈಜ ಜಗದ್ಗುರು ಡಾ.ಬ್ರುನೊ ಲಾಟುವ್ ಗುರುತ್ವದಲ್ಲಿರುವ ನೀವು ಮಹತ್ವದ್ದನ್ನು ನೀಡಬಲ್ಲಿರಿ.ತಮ್ಮಪ್ರಯತ್ನ ನಿರ್ವಿಘ್ನವಾಗಿ ಅನವರತ ಸಾಗಲಿ.
    ಡಾ.ಬ್ರುನೊ ಲಾಟುವ್ ಅವರಿಗೆ ಗೌರವಪೂರ್ವಕ ಶ್ರದ್ಧಾಂಜಲಿ ಸಲ್ಲಿಸಲು ನಾನು ತಮ್ಮೊಂದಿಗೆ ಇರುವೆ.
    ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ.

    ಡಾ.ಶಂಕರ ರಾಮಚಂದ್ರ ಕಂದಗಲ್ಲ
    ವಿಶ್ರಾಂತ ಪ್ರಾಚಾರ್ಯರು, ಬಾಗಲಕೋಟೆ

Leave a Reply