You are currently viewing ವಿಜ್ಞಾನದಲ್ಲಿ ಸತ್ಯ ಮತ್ತು ಪರಿಹಾರಗಳ ಜಿಜ್ಞಾಸೆ :                           ಕೊರೊನಾ ತೆರೆದಿಟ್ಟ ಆಲೋಚನೆಗಳು…

ವಿಜ್ಞಾನದಲ್ಲಿ ಸತ್ಯ ಮತ್ತು ಪರಿಹಾರಗಳ ಜಿಜ್ಞಾಸೆ : ಕೊರೊನಾ ತೆರೆದಿಟ್ಟ ಆಲೋಚನೆಗಳು…

ವೈರಸ್ಸುಗಳ ಕುರಿತು ಹಿಂದೆಂದೂ ಹೆದರಿರದ ಮನವಕುಲವು, ತೀರಾ ಆಧುನಿಕ ಶತಮಾನದಲ್ಲಿ ತತ್ತರಿಸಿಹೋಯಿತು. ಜೀವಿ..! ಎಂದೂ ಸಹಾ ಪರಿಗಣಿಸಿರದ ಕೇವಲ, ಪ್ರೊಟೀನು ಹೊದಿಕೆಯುಳ್ಳ ನ್ಯುಕ್ಲೆಯಿಕ್‌ ಆಮ್ಲದ ವಸ್ತುವೊಂದು, ಜೀವಿಕೋಶದೊಳಗೆ ವರ್ತಿಸುವ ಪ್ರಕ್ರಿಯೆಗಳು ಎಂದಿಗಿಂತಲೂ ಸಂಕೀರ್ಣದ ಸನ್ನಿವೇಶವನ್ನು ತೆರೆದಿಡುವ ಮೂಲಕ ಹೊಸ ಆಲೋಚನೆಗಳಿಗೂ ಅವಕಾಶವನ್ನು ಇತ್ತಿವೆ. ವಿಜ್ಞಾನದ ಸಹಜ ಕುತೂಹಲ ಹಾಗೂ ಪರಿಕಲ್ಪನೆಯಾದ ಕಾರಣಗಳ ಅರ್ಥೈಸುವಿಕೆ, ಈ ಎರಡರ ವಿವರಗಳೇನೂ ತಿಳಿವಾಗದೆಯೂ ಕೇವಲ ಪರಿಹಾರಗಳ ಹಿಂದೋಡುವ ದೌಡೂ ವಿಜ್ಞಾನದ ಅನಿವಾರ್ಯತೆಯ ಭಾಗವಾಗಿದ್ದು, ಅದು ಹಿಂದೆಂದಿಗಿಂತಲೂ ಈಗ ಹೆಚ್ಚಾಗಿಯೇ ತೆರೆದುಕೊಂಡಿದೆ.

ಹೀಗೆ ಕೇವಲ ಪರಿಹಾರದ ಹುಡುಕಾಟವು, ನಿಜಕ್ಕೂ ವಿಜ್ಞಾನದ ಭಾಗವಾಗಿ ವಿಕಾಸಗೊಂಡದ್ದಾಲ್ಲ. ಒಂದು ರೀತಿಯಲ್ಲಿ ಸಮಾಜವು ಅದರ ಕುತೂಹಲದ ವ್ಯಾಪ್ತಿ ಹಾಗೂ ಪರಿಕಲ್ಪನೆಗಳ ಹರಹುಗಳನ್ನು ಗಮನಿಸಿ, ಆಧುನಿಕ ವಹಿವಾಟಿನ ಸಾಮರ್ಥ್ಯದೊಂದಿಗೆ ಸಮೀಕರಿಸಿಕೊಂಡು ಹುಟ್ಟು ಪಡೆದ ಅನಿವಾರ್ಯ! ಜೊತೆಗೆ ವಿಜ್ಞಾನವನ್ನು ಪರಿಹಾರದ ಮಾರ್ಗೋಪಾಯವಾಗಿ ಬಳಸಲು ಆರಂಭಿಸಿದ, ಮತ್ತು ಹಾಗೇಯೇ ಅದರಿಂದ ಲಾಭದ ಹುಡುಕಾಟಗಳನ್ನೂ ಹುಟ್ಟು ಹಾಕಿದ್ದರ ಫಲ. ಆರಂಭದಲ್ಲಿ ವಿಜ್ಞಾನದ ಬೆಳವಣಿಗೆಗೆ ಅದರಿಂದ ಒಂದಷ್ಟು ಬೆಂಬಲವು ಸಿಕ್ಕಿದ್ದರೂ, ಬೆಳೆದಂತೆ ಆರ್ಥಿಕ ಸಮೀಕರಣಗಳು, ವ್ಯಾವಹಾರಿಕ ಸಂಸ್ಥೆಗಳು ತಮ್ಮ ಲಾಭ ಮತ್ತು ಯಜಮಾನಿಕೆಯ ಹೇರಿಕೆಯಲ್ಲಿ ಅದನ್ನೇ ಮುಂಚೂಣೀಯಲ್ಲಿಟ್ಟೂ ಬೆಳೆಸಿವೆ. ಇದೇ ಕಾರಣದಿಂದಲೇ ಕಳೆದ ಕೊರೊನಾ ಹದ್ದುಬಸ್ತಿನ ವಿಚಾರದಲ್ಲೂ ಹೆಚ್ಚೂ ಕಡಿಮೆ ಎಲ್ಲಾ ಬಗೆಯ ವೈದ್ಯಕೀಯ ಪ್ರಕಾರಗಳೂ ತಮ್ಮಲ್ಲೊಂದು ಪರಿಹಾರ ಔಷಧಿ ಇದೆಯೆಂದೇ ಹಳಹಳಿಸಿದವು. ಆದರೆ ವಾಸ್ತವವಾಗಿ ಯಾವುದೊಂದೂ ಔಷಧಿಯೂ ಪರಿಹಾರವನ್ನು ಕೊಟ್ಟಿರಲಿಲ್ಲ ಎಂಬುದು ಇದೀಗ ತಿಳಿದ ಸಂಗತಿಯೇ. ಪರಿಹಾರ ಎಂದರೆ ರೋಗವು ಸಂಪೂರ್ಣ ವಾಸಿಯಾಗಿದ್ದು ಇದೇ ಔಷಧದಿಂದಲೇ ಎಂದು ನಿಖರವಾಗಿ ಹೇಳಲಾಗಿಲ್ಲ. ತಡೆ ಹಿಡಿಯುವ ವ್ಯಾಕ್ಸೀನು ಒಂದು ಔಷಧಿಯಂತಲ್ಲ. ಔಷಧಿಯೆಂಬುದು ರೋಗವಂತರನ್ನು ರೋಗರಹಿತಮಾಡುವ ರಸಾಯನಿಕ ಅಥವಾ ಹೊಗಿನಿಂದ ಬಳಸಲಾದ ಮದ್ದು. ಕೊರೊನಾದಲ್ಲಂತೂ ಅವರೊಳಗಿನ ಪ್ರತಿರೋಧವೇ ಹೆಚ್ಚು ಕೆಲಸ ಮಾಡಿರುವ ಎಲ್ಲಾ ಸಾಧ್ಯತೆಗಳಿವೆ. ಅದಕ್ಕಾಗಿಯೇ ಸೋಂಕೇ ಆಗದರವರ ಹುಡುಕಾಟವೂ ನಡೆಯುತ್ತಿದೆ.    

ಕಳೆದ ವಾರದಿಂದ ಫೈಜರ್‌ ಔಷಧೀಯ ಕಂಪನಿಯು ವೈರಸ್ಸುಗಳ ಪ್ರತಿರೋಧಿಸುವ ಔಷಧವನ್ನು ಕಂಡುಹಿಡಿದ ಬಗ್ಗೆ ವ್ಯಾಪಕವಾಗಿ ಪ್ರಚಾರವಾಗಿದೆ. ಔಷಧದಿಂದ ಕೊರೊನಾ ಸೋಂಕು ಉಂಟಾದ ರೋಗಿಗಳಲ್ಲಿ ಪ್ರತಿಶತ 89ರಷ್ಟು ಸಾವಿನ ಭಯವನ್ನು ತಪ್ಪಿಸುವ ಬಗ್ಗೆ ಹಾಗೂ ಆಸ್ಪತ್ರೆಗಳಿಗೆ ಸೇರದಂತೆಯೂ ಇರುವ ಬಗ್ಗೆ ಪರಿಹಾರಗಳನ್ನು ಕಂಪನಿಯು ಹೇಳಿಕೊಂಡಿದೆ. ಸುಮಾರು 1200 ಜನ ರೋಗಿಗಳ ಮೇಲೆ ಚಿಕಿತ್ಸಾ ವಿಧಾನದಲ್ಲಿ ಬಳಸಲಾಗಿ ಈ ತೀರ್ಮಾನಕ್ಕೆ ಬರಲಾಗಿದೆಯೆಂದೂ, ತಜ್ಞರ ವಿಮರ್ಶೆಯನ್ನು ಒಳಗೊಳ್ಳದ ಮಾಹಿತಿಯನ್ನೇ ಆಧರಿಸಿ ಪ್ರಕಟಣೆ ತಿಳಿಸುತ್ತದೆ. ಕೊರೊನಾ ಸೋಂಕಿತರಲ್ಲಿ ಪ್ರಮುಖವಾಗಿ ಹೆಚ್ಚಾಗಲು ಕಾರಣವಾಗುವ ಮೈನ್‌ ಪ್ರೊಟಿಯೇಸ್‌ (Mpro) ಎಂಬ ಎಂಜೈಮಿನ ಪ್ರಕ್ರಿಯೆಯನ್ನು ಕುಂಠಿತಗೊಳಿಸಿ ರೋಗವನ್ನು ಪ್ರತಿ ಬಂಧಿಸುವ ಬಗ್ಗೆ ಕಂಪನಿಯ ವಿವರಗಳು ತಿಳಿಸಿವೆ. ಪ್ರಸ್ತುತ ಕೊರೊನಾ ಔಷಧವನ್ನು ಈ ಹಿಂದೆ ಎಚ್‌ಐವಿ(HIV) ನಿಯಂತ್ರಣದಲ್ಲಿ ಬಳಸುತ್ತಿದ್ದ ರಸಾಯನಿಕದೊಂಡನೆ ಸಂಯುಕ್ತವಾಗಿಸಿ ತಯಾರಿಸಲಾಗಿದೆ. ಔಷಧವು ಗುಳಿಗೆಗಳ ರೂಪದಲ್ಲಿದ್ದು ಮಾಲ್ನಪಿರವಿರ್‌ (Molnupiravir) ಎಂಬ ವಾಣಿಜ್ಯ ಹೆಸರಿನಿಂದ ಬಿಡುಗಡೆಯನ್ನು ಮಾಡಲಾಗಿದೆ. ಈಗಾಗಲೆ ಯುನೈಟೆಡ್‌ ಕಿಂಗ್‌ಡಂ ದೇಶವು ಅದನ್ನು ಮಾನ್ಯ ಮಾಡಿರುವುದಾಗಿಯೂ ತಿಳಿದುಬಂದಿದೆ. ಪ್ರಸ್ತುತ ಔಷಧವು ಪ್ರತಿರೋಧ ಸಮಸ್ಯೆಯ ವ್ಯಕ್ತಿಗಳಲ್ಲಿ ಉಂಟುಮಾಡುವ ಧನಾತ್ಮಕ ಪ್ರಭಾವದಿಂದಾಗಿ ಅದನ್ನು ಗೇಮ್‌ ಚೇಂಜರ್‌ (Game Changer) ಎಂದೂ ಕರೆಯಲಾಗಿದೆ. 

ಔಷಧದ ಪ್ರಚಾರದ ಬೆನ್ನಲ್ಲೇ ಕೆಲವು ವೈರಸ್‌ ತಜ್ಞರು ಔಷಧದ ಬಳಕೆಯು ಹೊಸತೊಂದು ಇನ್ನೂ ಹೆಚ್ಚು ತೊಂದರೆಯನ್ನು ಕೊಡಬಹುದಾದ ವೈರಸ್ಸಿನ ವಿಕಾಸಕ್ಕೆ ಕಾರಣವಾಗಬಹುದೆಂಬ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಅದರ ಜೊತೆಗೆ ಆಕ್ಸ್‌ಪರ್ಡ್‌ ವಿಶ್ವವಿದ್ಯಾಲಯದ ವೈರಸ್ಸು ವಿಕಾಸ ವಿಜ್ಞಾನದ ತಜ್ಞರಾದ ಏರಿಸ್‌ ಕಟ್ಜೌರಕಿನ್ಸ್‌ (Aris Katzourakins) ಸಂಭವನೀಯತೆಯ ಅಪಾಯದ ಬಗೆಗೆ ಯಾವ ತಿಳಿವನ್ನೂ ನೀಡದ ಜೀವರಕ್ಷಕ ಔಷದವನ್ನು ಹಾಗೆಂದು ತಡೆಹಿಡಿಯಲೂ ಸಾಧ್ಯವಿಲ್ಲ ಎಂಬ ಸಮಾಧಾನದ ಮಾತುಗಳನ್ನೂ ಆಡಿದ್ದಾರೆ. ಹಾಗಾಗಿ ಪ್ರಸ್ತುತ ಸಂದರ್ಭದಲ್ಲಿ ಪರಿಹಾರದ ಸಣ್ಣ ಲಕ್ಷಣವೂ ಮುಖ್ಯ ಎಂಬುದು ಒಂದು ಕಡೆಯ ಮಾತು ಆದರ ಜೊತೆಗೆ ನಿಜಕ್ಕೂ ಪರಿಹಾರದ ಸತ್ಯವೇನು ಎಂಬುದರ ಅನುಮಾನದ ವಿಚಾರವೂ ಮತೊಂದು ಕಡೆ. ನಿಜ ಈಗಿರುವ ಭಯ ಮತ್ತು ಬದುಕಿನ ನಡುವಣ ಸಂಕಷ್ಟದಲ್ಲಿ ಬದುಕಿದರೆ ಸಾಕು ಎಂಬುದರ ಜೀವಿ ಸಹಜವಾದ ಆಸೆಯೂ ಜೊತೆಗೆ ಅದಕ್ಕಾಗಿ ಏನೇ ಹೆಚ್ಚು ಕಡಿಮೆಯಾದಲ್ಲಿ ಒಂದಷ್ಟು ಜೀವಗಳನ್ನು ಕಳೆದುಕೊಳ್ಳುವ ಭಯವೂ ಒಟ್ಟೊಟ್ಟಿಗೆ ಹೊಮ್ಮಿರುವುದು ಗೋಚರಿಸುತ್ತದೆ.

ಈ ಜಿಜ್ಞಾಸೆಯು ಇಡೀ ವಿಜ್ಞಾನದ ಹುಟ್ಟು ಮತ್ತು ವಿಕಾಸದ ಉದ್ದಕ್ಕೂ ಬೆಳೆದು ಬಂದಿದೆ. ಆರಂಭದಲ್ಲಿನ್ನೂ ವಿಜ್ಞಾನವೆಂದೂ ಕರೆಯದ ಈ ಜ್ಞಾನ ಶಾಖೆಯ “ತತ್ವಜ್ಞಾನ” ಅಥವಾ “ದರ್ಶನವಿಜ್ಞಾನ”ದ ಹಿನ್ನೆಲೆಯಲ್ಲಿಯೇ ವಿವರಿಸಲಾಗುತ್ತಿತ್ತು. ಆಗ ವಿಜ್ಞಾನದ ಹುಟ್ಟಿಗೆ ಕಾರಣವೆಂದು ನಂಬಲಾಗಿರುವ ಪ್ರಪ್ರಥಮ ಭಿನ್ನತೆಯ ವಿವರಗಳು ಪ್ಲೇಟೊ ಮತ್ತು ಅವರ ಶಿಷ್ಯ ಅರಿಸ್ಟಾಟಲ್‌ ಅವರ ನಡುವೆಯೇ ಹುಟ್ಟಿದ್ದನ್ನು ಇಟಲಿಯ ಕಲಾವಿದ ರಾಫೆಲ್‌ ಅವರ “ಅಥೆನ್ಸ್‌ ನ ಶಾಲೆ” – (Raphael’s – School of Athens) ಚಿತ್ರಕೃತಿಯು ದಾಖಲಿಸುತ್ತದೆ. ಪ್ಲೇಟೊ ಅವರಿಗೆ ಐಡಿಯಾಗಳೇ ಪ್ರಮುಖ ಎಂದು ಕೈಬೆರಳನ್ನು ಮೇಲೆತ್ತಿ ಹೇಳುತ್ತಿರುವ, ಜೊತೆಗ ಹಾಗಲ್ಲ ನಿಸರ್ಗವು ಮುಖ್ಯ ಎನ್ನುವ ಅಂಗೈಯನ್ನು ನೆಲಕ್ಕೆ ತೋರಿಸುವ ಅರಿಸ್ಟಾಟಲ್‌ನ ಪ್ರತಿಕೃತಿಯನ್ನು ಚಿತ್ರದಲ್ಲಿ ನೋಡಬಹುದು. ಇದೇ ಕಾರಣದಿಂದಲೇ ಅರಿಸ್ಟಾಟಲ್‌ ಪ್ಲೇಟೊನ ಅಥೆನ್ಸ್‌ ತೊರೆದು ತನ್ನ ಶಿಷ್ಯ “ಥಿಯೊಪ್ರಾಸ್ಟಸ್‌” ಇದ್ದಂತಹಾ ಲೆಸ್ವಾಸ್‌ (Lesvos) ದ್ವೀಪಕ್ಕೆ ಬಂದ ಕಾರಣವನ್ನು ಸಮಕಾಲೀನ ದರ್ಶನವಿಜ್ಞಾನಿಗಳೂ ನಂಬುತ್ತಾರೆ. ಈ ದ್ವೀಪವನ್ನು ಅರಿಸ್ಟಾಟಲ್‌ ಲಗೂನ್‌ ಎಂದೂ ಕರೆಯಲಾಗುತ್ತದೆ. ಗ್ರೀಕ್‌ ದ್ವೀಪವಾದ ಲೆಸ್ವಾಸ್‌ (Lesvos) ನ ಹೆಸರೇ “ಕಾಡಿನಿಂದಾವೃತ”ವಾದ ಎಂಬರ್ಥವುಳ್ಳದ್ದು ಹಾಗೆಂದೇ “ಅದು ಸಸ್ಯವಿಜ್ಞಾನದ ಪಿತಾಮಹಾ” ಎನಿಸಿಕೊಂಡ ಅರಿಸ್ಟಾಟಲ್‌ನ ಶಿಷ್ಯ “ಥಿಯೊಪ್ರಾಸ್ಟಸ್‌” ನ ನೆಲೆಯಾಗಿತ್ತು. ಅರಿಸ್ಟಾಟಲ್‌ ತನ್ನ ಗುರು ಪ್ಲೇಟೊ ನೊಡನೆಯ ಸತ್ಯದ ಹುಡುಕಾಟದ ಭಿನ್ನ ಮಾರ್ಗದ ಆಲೋಚನೆಯಿಂದ ಬಂದದ್ದೇ ಜೀವಿವಿಜ್ಞಾನದ ಉಗಮಕ್ಕೆ ಕಾರಣವಾಗಿದ್ದನ್ನು ಅಧ್ಯಯನಕಾರರು ಗುರುತಿಸುತ್ತಾರೆ. ಈ ಭಿನ್ನಮಾರ್ಗದ ಅನ್ವೇಷಣೆಯು ಮುಂದೆ ತರ್ಕಾಧಾರಿತ ಹಾಗೂ ಪ್ರಾಯೋಗಿಕ ಸತ್ಯ ಗಳೆಂಬ ವಿವರಗಳಲ್ಲಿ ಅನಾವರಣಗೊಂಡದನ್ನು ತಾತ್ವಿಕ ವಿಮರ್ಶೆಯಲ್ಲಿ ಬಳಸಲಾಗುತ್ತದೆ.

 ಸದ್ಯಕ್ಕೆ ಸತ್ಯದ ಹುಡುಕಾಟ ಅಥವಾ ವಿಮರ್ಶೆಯಲ್ಲಿ ಭಿನ್ನ ಮಾರ್ಗಗಳ ಹುಡುಕಾಟವನ್ನು ಆರಂಭದ ಹಿನ್ನೆಲೆಯಲ್ಲಿಯೂ ಮತ್ತೀಗ ಸಮಕಾಲೀನ ಸಂದರ್ಭದಲ್ಲೂ ಎದುರಿಸುತ್ತಿರುವುದನ್ನು ನೋಡಿದರೆ ವಿಜ್ಞಾನವು ದಾರ್ಶನಿಕ ವಿವರಗಳಿಂದ ವಿಶೇಷ ತಜ್ಞತೆಯಡೆಗೆ ಬೆಳೆದ ಹಾಗೂ ಬೆಳೆಯುತ್ತಿರುವ ಹಾದಿಯಲ್ಲಿನ ಕ್ರಿಯಾತ್ಮಕ/ಚಲನಶೀಲ ಆಗುಹೋಗುಗಳನ್ನು ಒರೆಹಚ್ಚದೆ ನೋಡಿದ ಅಥವಾ ಬಳಸಿದ ಪರಿಣಾಮ ಹಾಗೂ ಜೊತೆಗೆ ಅನಿವಾರ್ಯ ಅಗತ್ಯದ ಪರಿಹಾರಗಳ ಉತ್ಪನ್ನಗಳೆಂಬ ಮಾರಾಟದ ಸರಕನ್ನಾಗಿಸುವ ಹಿತಾಶಯವೂ ಇದ್ದೀತು. ಹೀಗೆ ಒಂದೆರಡು ವಾಕ್ಯಗಳನ್ನು ತೀರಾ ತಾತ್ವಿಕ ವಿವರಗಳನ್ನು ಬೇಡುವ ವಿಷಯವನ್ನು ವಿವರಸಲಾಗದು. ಆದರೆ ಅಂತಹಾ ಅನಿವಾರ್ಯಗಳನ್ನು ಕಂಡುಕೊಳ್ಳುವ ಜ್ಞಾನ ಮೀಮಾಂಸೆಯ ಸದಾಶಯಗಳನ್ನು ನೋಡಬಹುದೇನೋ. ಇಂತಹಾ ಅಲೋಚನೆಗೆ ಸಮಕಾಲೀನ ಸನ್ನಿವೇಷದ ಉದಾಹರಣೆಯ ಕಾರಣವಿದೆ.

       ಪ್ರಸ್ತುತ ಕೊರೊನಾ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿಯೂ ವೈರಸ್ಸುಗಳು ಏಕಾಏಕಿ ದಾಳಿಯನ್ನಿಟ್ಟ ಹಾಗೆ ಕಾಣವು. ಏಕೆಂದರೆ ಹೆಚ್ಚೂ ಕಡಿಮೆ ಜೀವಿಗಳ ಮೂಲದ್ರವ್ಯವೇ ಆಗಿರುವ ವೈರಸ್ಸುಗಳು ಮೊದಲಿಂದಲೂ ಇವೆ. ತೀರಾ ಸರಳ ರಾಚನಿಕ ಧಾತುವುಳ್ಳ ವೈರಸ್ಸೂ ಮತ್ತು ಜೀವಿಗಳಲ್ಲೇ ಆತ್ಯಂತಿಕ ಸಂಕೀರ್ಣ ರಚನೆಯ ಮಾನದ ದೇಹವು ಪರಸ್ಪರ ವಿಕಾಸದ ಮತ್ತು ರೋಗ ಸಹಿಷ್ಣತೆಯ ಪೈಪೋಟಿಯಲ್ಲೇ ಬೆಳೆದಿವೆ. ಹಾಗೆಂದು 1940 ರ ದಶಕದಿಂದಲೂ ಅಧ್ಯಯನದ ವಿವರಗಳು ದೊರಕುತ್ತವೆ. ಅವುಗಳು ಆದಿಯಿಂದ ಈವರೆಗೂ ತಂದಿಟ್ಟಿರುವ ವಿಶಿಷ್ಟವಾದ ವಿವರಗಳು ವಿಜ್ಞಾನದ ಸತ್ಯದ ಮತ್ತು ಪರಿಹಾರೋಪಾಯಗಳ ಹುಡುಕಾಟಗಳ ಮಾರ್ಗಗಳನ್ನು ಜೀವಿವಿಜ್ಞಾನದ ಹಾದಿಯನ್ನಂತೂ ಆಳುತ್ತಿವೆ.

ವೈರಸ್ಸುಗಳು ಮಾನವ ಕುಲಕ್ಕೆ ಸೋಂಕನ್ನು ಉಂಟುಮಾಡುತ್ತಲೇ ಕೌತುಕಮಯ ಸಂಗತಿಗಳನ್ನು ವಿಕಾಸದಲ್ಲಿ ಪಾಲಿಸುತ್ತಾ ಸಂಕೀರ್ಣತೆಯನ್ನು ದಾಖಲಿಸಿವೆ. ಸೋಂಕು ಉಂಟುಮಾಡಿದ ಅತಿಥೇಯರಲ್ಲಿ ತಮ್ಮದೇ ಆದ ಒಂದು ಛಾಪನ್ನು ಉಳಿಕೆಯಾಗಿಸುವಿಕೆಯನ್ನು ಜತನದಿಂದ ಲಕ್ಷಾಂತರ ವರ್ಷಗಳಿಂದ ಮಾಡಿಕೊಂಡೇ ಬಂದಿವೆ. ಹಾಗಾಗಿಯೇ ನಮ್ಮ ಜೀನೋಮಿನ ಮಹತ್ತರವಾದ ಭಾಗವಾಗಿ ಇಂದಿಗೂ ವೈರಸ್ಸಿನ ಜೀನೋಮು ತುಂಬಿಕೊಂಡಿದೆ. ಈ ವೈರಸ್ಸುಗಳು ಮಾನವರಿಗೆ ಭಯ ಹಾಗೂ ಕೌತುಕವನ್ನು ಒಟ್ಟೊಟ್ಟಾಗಿ ರೂಪಿಸುತ್ತಾ ಭೂಮಂಡಲವನ್ನು ವ್ಯಾಪಿಸಿವೆ. ವಾಸ್ತವವಾಗಿ ವೈರಸ್ಸಿನ ಉಳಿಕೆಯಾದ ಈ ಜೀನೊಮಿನ ತುಣುಕುಗಳು ಕೆಲವೊಂದು ರೋಗಗಳ ವಿರುದ್ಧ ಪ್ರತಿರೋಧ ಉಂಟುಮಾಡುವ ಜವಾಬ್ದಾರಿಯಲ್ಲೂ ಮತ್ತು ಕೆಲವು ಹೊಸತೊಂದು ಕಾಯಿಲೆಯನ್ನು ಮುಂದೊಂದು ದಿನಕ್ಕೆ ಕಾಯ್ದಿರಿಸುವ ಕೆಲಸವನ್ನೂ ನಿರ್ವಹಿಸಿವೆ. ಇಂತಹಾ ಅಚ್ಚರಿಯ ತಿಳಿವಿನ ಹಾದಿಯಲ್ಲಿ ನಡೆದ ವೈರುಧ್ಯಗಳ ತರ್ಕಗಳೂ ಜೊತೆಯಾಗಿ ಭಯವನ್ನು ತಾರಕಕ್ಕೇರಿಸುವ ಸಾಂಕ್ರಾಮಿಕ ಸನ್ನಿವೇಷವನ್ನು ತಂದಿಟ್ಟಿವೆ.

       ಗಮನವನ್ನೇ ಕೊಡದಿದ್ದ ವೈರಸ್ಸುಗಳಿಂದಲೇ ಬಂದಂತಹಾ ರೋಗಗಳು ಸಾಧಾರಣವಾದ ಶೀತ, ನೆಗಡಿ, ಕೆಮ್ಮುಗಳಿಂದ ಮುಂದುವರೆದು ಇದೀಗ SARS, MERS, Flue, Ebola, HIV ಎಂಬ ಭಯಂಕರ ಹೆಸರುಗಳಿಂದ ಭಯದ ಶಿಖರವನ್ನು ತಲುಪಿಸಿವೆ. ವೈರಸ್ಸುಗಳು ಆತ್ಯಂತಿಕ ಪರಾವಲಂಬಿಗಳು. ಜೀವಿಯ ಹೊರಗಿದ್ದರೆ ಸಾಧಾರಣ ವಸ್ತುವಾದ ವೈರಸ್ಸು ಜೀವಿಕೋಶದ ಒಳಗೆ ತನ್ನನ್ನು ತಾನೇ ಪ್ರತಿರೂಪಿಸುವ ಜೀವಿಯಂತೆ! ಶೀತ, ನೆಗಡಿಯ ರೋಗಕಾರಕ ವೈರಸ್ಸುಗಳಂತೂ ರೋಗದಿಂದ ವಿಮುಕ್ತಿಪಡೆದರೂ ನಮ್ಮೊಳಗೊಂದಾಗಿ, ಡಿಎನ್‌ಎಯಲ್ಲಿ ಉಳಿಕೆಯಾಗಿ ಕುಳಿತುಕೊಳ್ಳುತ್ತದೆ. ಹೀಗೆ ಎಲ್ಲಾ ಜೀವಿ ಸಂಕುಲವನ್ನೂ ವ್ಯಾಪಿಸಿರುವ ವೈರಸ್ಸಿನ ತಾಣವು ಅಕ್ಷರಶಃ ಭೂಮಂಡಲದಲ್ಲಿ ಏನನ್ನೂ ಬಿಟ್ಟಿಲ್ಲ. ಹಾಗಾಗಿ ಅವುಗಳ ವಿವಿಧತೆಯಂತೂ ಅಪಾರ. ಒಂದು ಅಂದಾಜಿನಂತೆ ವಿಶ್ವದ ಒಟ್ಟೂ ನಕ್ಷತ್ರಗಳ ಸಂಖ್ಯೆಯನ್ನೂ ಮೀರುವಷ್ಟು ವೈರಸ್ಸುಗಳಿವೆಯಂತೆ. ಜೆನೆಟಿಕ್‌ ಮಾಲೆಕ್ಯೂಲ್‌ ಆದ ನ್ಯುಕ್ಲಿಯೆಕ್‌ ಆಮ್ಲದ ಮೂಲ ಸಂರಚನೆಯಲ್ಲಿ ಪ್ರೊಟೀನನ್ನು ಹೊದಿಕೆಯಾಗಿಸಿದ ವೈರಸ್ಸು, ಜೀವಿ ಹಾಗೂ ನಿರ್ಜೀವಿ ಎರಡೂ ಬಗೆಯಲ್ಲೂ ವರ್ತಿಸುತ್ತದೆ. ಹಲವು ವಿಜ್ಞಾನಿಗಳು ಜೀವಿಗಳೆಂದೂ ಒಪ್ಪದಿದ್ದರೂ, ಅನೇಕರು ಜೀವಿಗಳೇ ಎಂಬಂತೆ ವಾದಿಸುತ್ತಾರೆ. ಒಂದಂತೂ ಸ್ಪಷ್ಟವಾಗಿದೆ. ಜೀವಿವಿಕಾಸದ ಮೂಲದ್ರವ್ಯ ನ್ಯುಕ್ಲಿಯೆಕ್‌ ಆಮ್ಲದ ಮೂಲವನ್ನೇ ಹೊಂದಿರುವ ವೈರಸ್ಸುಗಳು ಜೀವಿಗಳ ಮೂಲ ಪರಮಾಣುಗಳೋ ಎಂಬಂತೆ ತರ್ಕಿಸಲೂ ಸಾಧ್ಯವಿದೆ. ಹೀಗಿದ್ದೇ ವೈರಸ್ಸುಗಳು ಇಲ್ಲದಿದ್ದರೆ ಮಾನವ ಜೀವಿಯಂತೂ ಇರುತ್ತಿರಲಿಲ್ಲವೇನೋ ಎಂಬಂತಹಾ ಅಚ್ಚರಿಯ ನೈಸರ್ಗಿಕ ಹಾಗೂ ಅತ್ಯಂತ ಸಂಕೀರ್ಣ ಶರೀರಕ್ರಿಯೆಗಳನ್ನು ನಿರ್ವಹಿಸುವ ನೆನಪುಗಳ ವಾರಸುಧಾರ ಜೀನ್‌ಗಳಾಗಿ ರೂಪಾಂತರಗೊಂಡಿವೆ. ಹೌದು ಹಲವು ಜೀನುಗಳು ರೂಪಾಂತರಗೊಂಡ ವೈರಸ್ಸುಗಳೇ ಆಗಿವೆ.  

       ಇಂತಹದುರಲ್ಲಿ ಇವುಗಳೇ ಸಮಸ್ಯೆಗಳೆಂದೂ, ಅವುಗಳಿಂದ ಸಂಪೂರ್ಣ ಪರಿಹಾರದ ಮಾರ್ಗವನ್ನು ಒಂದೆಡೆ ಪೂರ್ಣ ಸತ್ಯವಲ್ಲದ ವಿಚಾರವನ್ನೇ ಮುಂದಿಟ್ಟುಕೊಂಡು ವಿವಿಧ ಮಾರ್ಗಗಳ ಅನ್ವೇಷಣೆಯಲ್ಲಿ ಜೀವಿ ವಿಕಾಸದ ಮತ್ತು ಅವುಗಳ ಬದುಕುಳಿಯುವ ಸಾದೃಶ್ಯದ ವಿವರಗಳೂ ಇವೆ.

       ವೈರಸ್ಸುಗಳು ಮತ್ತು ಅವುಗಳು ವೃದ್ಧಿಯಾಗುವ ಅತಿಥೇಯರ ಜೀವಿಕೋಶಗಳ ನಡುವೆ ನಿರಂತರವಾಗಿ ವಿಕಾಸದ ತಿಕ್ಕಾಟ ನಡೆಯುತ್ತಲೇ ಇದೆ. ನಮ್ಮ ದೇಹವೂ ನಿರಂತರವಾಗಿ ವೈರಸ್ಸುಗಳಿಗೆ ಪ್ರತಿರೋಧವನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದು ವೈರಸ್ಸುಗಳ ಹರಡುವಿಕೆಯನ್ನು ತಡೆಯುವತ್ತ ಪ್ರಯತ್ನದ ವಿಕಾಸದಲ್ಲಿದೆ. ಅದಕ್ಕೆ ಪ್ರತಿಯಾಗಿ ವೈರಸ್ಸುಗಳೂ ಈ ಪ್ರತಿರೋಧವು ಹುಟ್ಟುವ ಮೊದಲೇ ತಾವು ಹೊಕ್ಕ ಅತಿಥೇಯರ ಪ್ರಾಣಕ್ಕೆ ಸಂಚುಕಾರ ಒಡ್ಡುತ್ತವೆ. ಅಚ್ಚರಿಯ ಸಂಗತಿ ಎಂದರೆ ತಮ್ಮ ಉಳಿವಿಗೂ ಬೇಕಾದ ಅತಿಥೇಯ ಜೀವಿಕೋಶವನ್ನೇ ಕೊಲ್ಲುವ ಆಕಾಂಕ್ಷೆ ವೈರಸ್ಸಿಗೇಕೆ ಎನ್ನುವುದು. ಆದರೂ ಉಳಿವ ಅತಿಥೇಯ ಜೀವಿಕೋಶ ಅಥವಾ ಜೀವಿಯೇ ಹೊಸ ಬದುಕಿನ ವಿಕಾಸಕ್ಕೆ ನೆರವಾಗುವುದು. ಈ ಸೋಂಕು ಮತ್ತು ಪ್ರತಿರೋಧ ಈ ಎರಡರ ನಡುವಿನ ವಿಕಾಸದ ಸೃಜನಶೀಲ ಬದುಕೇ ಜೀವಿಗಳನ್ನು ಅಥವಾ ಮಾನವರನ್ನು ಮುನ್ನಡೆಯಿಸಿಕೊಂಡು ಹೋಗುತ್ತಿದೆ. ಆದರೆ ಮಾನವ ಸಾಮುದಾಯಿಕ ದಡ್ಡತನ ಏನೆಂದರೆ ಇಂತಹಾ ತಿಳಿವನ್ನೂ ಒಳಗೊಂಡ ನಮ್ಮ ಜ್ಞಾನ ಸಂಗ್ರಹವನ್ನು ಮರೆತು ನಿಭಾಯಿಸುವ ಜೀವನ ಕ್ರಮ. ಬಹುಶಃ ಇದೇ ಕಾರಣಕ್ಕೆ ಅಯ್ಯೋ ಅದು ವೈರಲ್‌ ಇನ್‌ಫೆಕ್ಷನ್‌ ಏನೂ ಮಾಡೊಲ್ಲ. ವಾರವಿದ್ದು ಸರಿ ಹೋಗುತ್ತೆ ಎನ್ನುವ ಉದಾಸೀನದ ತಿಳಿವು ಇಷ್ಟು ದಿನ ಇದ್ದಿರಬೇಕು. ಈಗಲೂ ಎಲ್ಲವೂ ನಿರ್ನಾಮವಾಗುವ ಹಾಗೇನೂ ಸಾಧ್ಯವಾಗದ ತಿಕ್ಕಾಟ. ಹಾಗಂತ ಸುಮ್ಮನಿದ್ದು ಬಿಡಬೇಕಾ? ಎನ್ನುವುದೂ ಅಲ್ಲ. ಅದಕ್ಕೆ ವೈರಸ್ಸುಗಳ ಬಗೆಗೆ ಸೋಂಕು ಉಂಟು ಮಾಡಿಕೊಳ್ಳದಿರುವುದೇ ಜಾಣತನ.

ಸೋಂಕುರಹಿತವಾಗಿರಲು ಜೀವನವು ನಿಜಕ್ಕೂ ಸುಖಮಯವಾಗಿರುವ ಸಾದ್ಯತೆಗಳಿವೆ. ಕೆಲವಯ ವೈದ್ಯಕೀಯ ಅಧ್ಯಯನಕಾರರು ಸೋಂಕು ಉಂಟಾಗದ ಬದುಕು, ಪೌಷ್ಟಿಕ ಆಹಾರ, ಸರಳ ವ್ಯಾಯಾಮ, ಸ್ವಚ್ಛ ವಾತಾವರಣ, ಪ್ರೀತಿ ಪೂರ್ಣ ಸಂಬಂಧಗಳು ಯಾವುದೇ ಜೀವಿಯ ಅದರಲ್ಲೂ ಮಾನವರ ಬದುಕನ್ನು ಸಾಕಷ್ಟು ಕಾಲ ಹಿತವಾಗಿ ಇಡಬಲ್ಲವು. ಕೆಲವು ಅಧ್ಯಯನಕಾರರ ಪ್ರಕಾರ ಮಾನವ ದೇಹದ ಜೀವಿಕೋಶಗಳಿಗೆ 150 ವರ್ಷಗಳ ಕಾಲ ದೇಹವನ್ನು ಸುಸ್ಥಿತಿಯಲ್ಲಿಟ್ಟು ಬದುಕನ್ನು ನಿರ್ವಹಿಸಬಲ್ಲ ಶಕ್ತಿಯಿದೆ ಎನ್ನುತ್ತಾರೆ. ಆಧಾರ ಸಹಿತ ದಾಖಲೆಗಳಿರುವ ಅತಿ ಹೆಚ್ಚು ಕಾಲ ಬದುಕಿದ್ದ ವ್ಯಕ್ತಿಗಳಲ್ಲಿ ಮೊದಲ ಎರಡೂ ಸ್ಥಾನದಲ್ಲಿರುವವರು ಮಹಿಳೆಯರೇ ಆಗಿದ್ದಾರೆ. ಅಮೆರಿಕದ ಸಾರ‍್ಹಾ ನಾಸ್‌ 119 ವರ್ಷ 97 ದಿನಗಳು ಬದುಕಿದರೆ, ಫ್ರಾನ್ಸ್‌ ದೇಶದ ಜೀನ್‌ ಕಮೆಂಟ್ಸ್‌ 122 ವರ್ಷಗಳು ಮತ್ತು 164 ದಿನಗಳು ಬದುಕಿದ್ದರು. ಇವರ ಕುರಿತು ಎಲ್ಲಾ ದಾಖಲೆಗಳೂ ಮತ್ತು ಅವರ ವಿವಿಧ ಅಧ್ಯಯನಗಳೂ ನಿಖರವಾದ ಮಾಹಿತಿಯನ್ನು ಒದಗಿಸಿವೆ. ನಮ್ಮಲ್ಲೂ ಶ್ರೀರಾಮಾನುಜಾಚಾರ್ಯರು 120 ವರ್ಷಗಳು ಬದುಕಿದ್ದರು ಎನ್ನುವ ಕೇವಲ ನಂಬಿಕೆಯು ಮಾತ್ರ ಪ್ರಚಲಿತದಲ್ಲಿದೆ. ಅದೇನೇ ಇರಲಿ ಅವರೂ ಸಾಕಷ್ಟೂ ದೀರ್ಘಾಯುಗಳಾಗಿದ್ದಿರಲು ಸಾಧ್ಯವಿದೆ.

ನಮಸ್ಕಾರ

ಡಾ.. ಟಿ.ಎಸ್.‌ ಚನ್ನೇಶ್  

This Post Has One Comment

  1. ಶಂಕರ ಕಂದಗಲ್ಲ ಬಾಗಲಕೋಟೆ

    ತುಂಬಾ ಸೊಗಸಾದ ಬರವಣಿಗೆ .ನವಿರಾದ ನಿರೂಪಣೆ. ವೈರಸ್ ಬಗ್ಗೆ ಕುತೂಹಲ ಮತ್ತು ಆಸಕ್ತಿಯನ್ನು ಕುದುರಿಸುತ್ತದೆ.ಕನ್ನಡ ವಿಜ್ಞಾನ ಸಾಹಿತ್ಯಕ್ಕೆ ಶೋಭೆ ತರುವ ಲೇಖನ.
    ಲೇಖಕರಿಗೆ ಹೃತ್ಪೂರ್ವಕ ಅಭಿನಂದನೆಗಳು

Leave a Reply