ಒಂದು ಸ್ಮಾರಕದ ಗುಣ- ಸ್ಮಾರಕತೆ (Monumentality) ಅಂದರೆ ಒಂದು ರಚನೆಯಲ್ಲಿ ಅಂತರ್ಗತವಾಗಿರುವ ಆಧ್ಯಾತ್ಮಿಕ ಗುಣಕ್ಕೆ ಮತ್ತೇನನ್ನೂ ಸೇರಿಸಲಾಗದ ಅಥವಾ ಬದಲಾಯಿಸಲಾಗದ ಅದರ ಶಾಶ್ವತತೆಯ ಭಾವನೆ. (A spiritual quality inherent in a structure which conveys the feeling of its eternity, that it cannot be added to or changed). – Louis Kahn
ಆಧುನಿಕ ಜಗತ್ತಿನಲ್ಲೂ ಸ್ಮಾರಕದ ಗುಣವನ್ನು ತುಂಬಿ, ಕಟ್ಟಡಗಳನ್ನು ನಿರ್ಮಿಸಿದ ಲೂಯಿಸ್ ಕಾನ್ (Louis Kahn) ಅಥವಾ ಲೂಯಿ ಕಾನ್ ಅವರ ಗೆಳೆಯರ/ಒಡನಾಡಿಗಳಿಗೆ “ಲೂ” 20ನೆಯ ಶತಮಾನ ಕಂಡ ಮಹಾನ್ ವಾಸ್ತು ಶಿಲ್ಪಿ. ಎರಡನೆಯ ಜಾಗತಿಕ ಮಹಾ ಯುದ್ದದ ನಂತರ ಹೆಚ್ಚು ಚರ್ಚೆಯಲ್ಲಿ ಇದ್ದ ಆರ್ಕಿಟೆಕ್ಟ್. ಜಗತ್ತಿನ ಅತ್ಯಂತ ಬಡ ದೇಶಗಳಲ್ಲೊಂದಾದ “ಬಾಂಗ್ಲಾ”ದಲ್ಲಿ ಅತ್ಯಂತ ಶ್ರೀಮಂತವಾದ ಸಂಸತ್ ಭವನಕ್ಕೆ ಕಾರಣರಾದ ವಿಶಿಷ್ಟ ವಾಸ್ತು ತಜ್ಞ. ಒಂದು ಸಾಧಾರಣ ಇಟ್ಟಿಗೆ ಕೂಡ ಉಸಿರಾಡುತ್ತದೆ, ತಾನೂ ಏನೋ ಆಗಬೇಕೆಂದು ಬಯಸುತ್ತದೆ, ಎಂದು ಇಟ್ಟಿಗೆಗಳನ್ನು ಕುರಿತ ಮಾತುಗಳಲ್ಲಿ ಹೇಳಿದ್ದುಂಟು. ಎಸ್ತೊನಿಯದ ಸಂಜಾತ ಅಮೆರಿಕದ ವಾಸ್ತು ಶಿಲ್ಪಿ ಭಾರತವೂ ಸೇರಿದಂತೆ ಹಲವಾರು ದೇಶಗಳಲ್ಲಿ ಭವ್ಯವಾದ ಕಟ್ಟಡಗಳನ್ನು ನಿರ್ಮಿಸುತ್ತ ಅಲೆಮಾರಿಯಾಗಿದ್ದ ದಾರ್ಶನಿಕ.

ಭಾರತದಿಂದ ಅಮೆರಿಕೆಗೆ ಹಿಂದಿರುಗುವಾಗ ನ್ಯೂಯಾರ್ಕ್‌ನ ಪೆನ್ ರೈಲು ನಿಲ್ದಾಣದ ಶೌಚಾಲಯದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದು ಮೂರು ದಿನಗಳ ಕಾಲ ಗುರುತಿಲ್ಲದ ಅನಾಥ ಶವವಾಗಿ ಮಲಗಿದ್ದ ಲೂಯಿ ಕಾನ್, ಹುಟ್ಟಿನಲ್ಲೂ ನಿಖರವಾದ ಗುರುತನ್ನು ಬಿಟ್ಟಿಲ್ಲ. ಅಕ್ಷರಶಃ ಎಲ್ಲ ಮಾನವ ಜನಾಂಗವನ್ನೂ ಪ್ರೀತಿಸಿದ, ಕೌಟುಂಬಿಕವಾಗಿ ತನ್ನದೇನನ್ನೂ ಒಪ್ಪಿಕೊಂಡಿರದ, ಯಾರಿಗೂ ಹೇಳಿಕೊಂಡೂ ಇರದ ಪರಿವ್ರಾಜಕ. ಒಂದು ಕಟ್ಟಡದ ನಿರ್ಮಿತಿಯಲ್ಲಿ ಕಲಾತ್ಮಕವಾದ ಅನಂತತೆಯನ್ನು ತುಂಬಲು ಏನನ್ನಾದರೂ ಕಳೆದುಕೊಂಡರೂ, ಅದು ಸಾರ್ಥಕ ಎಂದೇ ಬದುಕನ್ನು ಸವೆಸಿದವರು. ಅವರಿಗೆ ಒಂದಲ್ಲ, ಮೂರು ಸಂಸಾರಗಳಿದ್ದವು ಎಂಬುದೂ ಅವರನ್ನು ಹೊರತು ಒಡನಾಡಿಗಳಿಗೂ ತಿಳಿದಿರಲಿಲ್ಲ. ಮನೆಗೂ ಅಷ್ಟೇ ಬರುವ ಮುನ್ನ ಕೆಲ ನಿಮಿಷಗಳ ಮೊದಲು ಇನ್ನೇನು ಬರುತ್ತೇನೆ ಎಂದು ತಿಳಿಸಿದಾಗಷ್ಟೇ ಬರುತ್ತಿದ್ದರು. ಸಾಮಾಜಿಕ ಜೀವನದಲ್ಲಿ ಮಗುವೇ ಆಗಿದ್ದ ಲೂಯಿ ಕಾನ್ ಒಪ್ಪಿಕೊಂಡದ್ದಕ್ಕೆ ಹಗಲು-ರಾತ್ರಿಗಳನ್ನು ಒಂದು ಮಾಡಿ ದುಡಿಯುತ್ತಿದ್ದರು. ತಮ್ಮ ಕೆಲಸಗಳಲ್ಲಿ ಸಂಪೂರ್ಣ ತನ್ಮಯರಾಗಿ ಇರುತ್ತಿದ್ದರು. ಅವರು ಬೆರಳನ್ನು ತುಟಿಯ ಮೇಲಿಟ್ಟು ದೃಷ್ಟಿಸುತ್ತಿದ್ದರೆ, ಅವರು ಪ್ರಕೃತಿಯೊಡನೆ/ದೇವರೊಡನೆ ಸಂಭಾಷಿಸುತ್ತಿದ್ದಾರೆ ಎಂದೇ ಅವರ ಸಹಚರರು ಅಂದುಕೊಳ್ಳುತ್ತಿದ್ದರು.

ಈಜಿಪ್ಟ್ ಮತ್ತು ರೋಮ್ ಅನ್ನು ತಮ್ಮ ಕಟ್ಟಡಗಳಲ್ಲಿ ಆವಾಹಿಸಿ, ಅವುಗಳನ್ನು ಈ ತಾಂತ್ರಿಕ ಯುಗದಲ್ಲಿಯೂ ಸ್ಮಾರಕವಾಗುವಂತಾಗಿಸಲು ಧೈರ್ಯ ಮಾಡಿದರು. ತಮ್ಮ ನಿರ್ಮಿತಿಗಳಲ್ಲಿ ಪ್ರಕೃತಿ ಮತ್ತು ಬೆಳಕನ್ನು ಪರಿಕಲ್ಪನೆಯಾಗಿಸಿ ಕಟ್ಟಡಗಳನ್ನು ಸಿಲಿಂಡರ್‌ಗಳು, ಕಮಾನುಗಳು ಮತ್ತು ಕಂಬಗಳಿಂದ ನಿರ್ಮಿಸಿದರು. ಅವರು ಬಳಸುವ ವಸ್ತುಗಳು, ಅವುಗಳ ರಚನೆ ಮತ್ತು ಸ್ವಾಭಾವಿಕ ಬೆಳಕಿನೊಂದಿಗೆ ಅಸಾಧಾರಣ ಕೌಶಲ್ಯ ಮತ್ತು ಸೂಕ್ಷ್ಮತೆಯನ್ನು ಹೊಂದಿದ್ದರು. ಕಾನ್ ಅವರು ಬಳಸಿದ “ಸ್ಪೇಸ್” ಅತ್ಯುತ್ತಮವಾದ ಒಂದು ಆರ್ಕೆಸ್ಟ್ರಾದ ಸಂಗೀತದಂತೆ ಆವರಿಸಿ, ನಮ್ಮ ಭಾವನೆಗಳಲ್ಲಿ ಒಂದಾಗಿ ಸ್ಮರಣೆಯಲ್ಲಿ ಉಳಿಯುತ್ತದೆ.

ವೈಶಿಷ್ಟ್ಯವಾದ ಅವರ ನಿರ್ಮಾಣಗಳು ಗೋಡೆಗಳು, ಛಾವಣಿಗಳು ಮತ್ತು ಇತರ ರಚನಾತ್ಮಕ ಅಂಶಗಳ ನಡುವಿನ ಅಂತರವನ್ನು ಸಂಯೋಜಿಸುತ್ತವೆ ಅವರ ಕಟ್ಟಡಗಳು ಅವುಗಳ ಅಗಾಧ ಗಾತ್ರದ ಹೊರತಾಗಿಯೂ ಸ್ವತಂತ್ರವಾಗಿ ತೇಲುವ ಅಂಶಗಳಿಂದ ಕೂಡಿರುತ್ತವೆ. ಈ ಕಲ್ಪನೆಯ ಒಂದು ಗಮನಾರ್ಹವಾದ ಅಂಶವೆಂದರೆ ಒಂದು ರೀತಿಯಲ್ಲಿ ವಾತಾವರಣದಲ್ಲಿ ಹೊರತೆಗೆಯುವಿಕೆ! ಗೋಡೆಗಳನ್ನು ಬಳಸಿಕೊಂಡು ಮಾದರಿಯ ಸ್ಥಳಗಳನ್ನು ರಚಿಸಲು, ಆಂತರಿಕ ಮತ್ತು ಬಾಹ್ಯ ವಾತಾವರಣವನ್ನು ಸಂಯೋಜಿಸುವುದು ಅವರ ವಾಸ್ತುವಿನ ವಿಶೇಷತೆ. ಎಂತಹಾ ಕಣ್ಣುಗಳಿಗೂ ನೋಟದಲ್ಲಿ ತುಂಬಿಕೊಂಡು, ಅದರೊಳಗಿನ ನಿಶ್ಯಬ್ದತೆ ಬೆಳಕು ಮತ್ತು ರಾಚನಿಕ ಸೌಂದರ್ಯದಲ್ಲಿ ಒಂದಾಗುವಂತೆ ನಿರ್ಮಿಸಿರುವುದು ಅವರ ಹೆಚ್ಚುಗಾರಿಕೆ. ಕಟ್ಟಡದ ಬಳಕೆಯು ಯಾವುದನ್ನೇ ಆಶಿಸಿರಲಿ ಅದರೊಳಗಿನ ಬಳಸುವಿಕೆಯಲ್ಲಿ ಆಧ್ಯಾತ್ಮದ ಆತ್ಯಂತಿಕೆಯನ್ನು ತುಂಬುವುದು ಲೂಯಿಸ್ ಕಾನ್ ಅವರ ದಾರ್ಶನಿಕ ಸ್ವಭಾವ.

ಒಂದು ಕಟ್ಟಡದ ಖಾಲಿ ಜಾಗಗಳೊಂದಿಗಿನ ಸಂಪರ್ಕವನ್ನು ತೆರೆದಿರುವಿಕೆಯ ಗುಣಮಟ್ಟದಿಂದ ರಚಿಸುವ ಅಥವಾ ಹೆಚ್ಚಿಸುವ ಸಾಧನವಾಗಿ ಬೆಳಕು ಕಾಳಜಿಯಾಗಿತ್ತು. ಕಟ್ಟಡದೊಳಗೆ ಧ್ಯಾನಸ್ಥ ದೃಶ್ಯದ ಪರಿಣಾಮವನ್ನು ಉಂಟುಮಾಡಲು ಸೀಲಿಂಗ್ ಅಲ್ಲಿ ಬೆಳಕಿನ ಮೂಲಗಳೊಂದಿಗೆ ನಿರ್ಮಿಸಿದರು.

ಲೂಯಿಸ್ ಕಾನ್ ಅವರು ಆಧುನಿಕತಾವಾದಿ ಯುಗದ ಕನಿಷ್ಠತೆಯನ್ನು (Minimalism of Modern era) ಸ್ಥಾಪಿಸಲು ರಚನೆಗಳ ಆಕಾರಗಳಲ್ಲಿ ಸೃಜನಶೀಲತೆಯನ್ನು ಮೆರೆಸಿದರು. ಅದಕ್ಕೆಂದೇ ಪುರಾತನ ಧಾರ್ಮಿಕ ರಚನೆಗಳ ಅಧ್ಯಯನದ ಫಲವನ್ನು ಬೆರೆಸಿ ತಮ್ಮ ನವೋದಯ ರೂಪಗಳನ್ನು ತುಂಬಿದರು. ಪಟ್ಟಕ -ಪ್ರಿಸ್ಮ್(Prism) ಚೌಕ ಮತ್ತು ವೃತ್ತಗಳು ಅವರ ನಿರ್ಮಿತಿಯಲ್ಲಿ ನಿರ್ದಿಷ್ಟವಾದ ಪ್ರಾಮುಖ್ಯತೆಯನ್ನು ಹೊಂದಿದ್ದವು. ಇದರಿಂದಾಗಿ ಕಾಲಾತೀತ ಮಾನವ ಮೌಲ್ಯಗಳ ಸಾಕಾರಕ್ಕೆ ನಮ್ಮನ್ನು ಹತ್ತಿರಕ್ಕೆ ತರುವಂತೆ ತೋರುತ್ತಿತ್ತು. ಲೂಯಿಸ್ ಕಾನ್ ಅವರು ಮಾನವ ಪ್ರಜ್ಞೆಯ ಪ್ರಾಥಮಿಕ ಅಭಿವ್ಯಕ್ತಿಯಾಗಿ ವಾಸ್ತುಶಿಲ್ಪದ ಬಗ್ಗೆ ಬರೆದರು ಮತ್ತು ಮಾತನಾಡಿದರು. ಅವರು ಆಗಾಗ್ಗೆ ಬಳಸಿದ ಆಕಾರಗಳು ಕ್ರಾಸ್ ಲೇಔಟ್ ಮತ್ತು ವೃತ್ತಾಕಾರದ ತೆರೆಯುವಿಕೆಗಳು ಬಹು-ನಂಬಿಕೆಯ ಅರ್ಥಗಳಂತಹ ಪ್ರತಿಮಾಶಾಸ್ತ್ರ (Iconography) ದ ಗುಣಗಳನ್ನು ಹೊಂದಿದ್ದವು.

ಲೂಯಿಸ್ ಕಾನ್ ಅವರು 1935 ಮತ್ತು 1974 ರ ನಡುವೆ ಸುಮಾರು 30ಕ್ಕೂ ಹೆಚ್ಚು ಕಟ್ಟಡಗಳ ಮುಖ್ಯ ವಾಸ್ತು ಶಿಲ್ಪಿಯಾಗಿ, ಅಮೆರಿಕ, ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸಂಸತ್ ಭವನ, ಸಂಶೋಧನಾಲಯಗಳು, ವಿದ್ಯಾ ಸಂಸ್ಥೆಗಳು, ಚರ್ಚುಗಳು, ಕಲಾ ಗ್ಯಾಲರಿಗಳು, ಮ್ಯೂಸಿಯಂ, ಲೈಬ್ರರಿಗಳು, ವಸತಿ ಗೃಹಗಳು, ಹೀಗೆ ಹಲವು ಬಗೆಯ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಅವುಗಳಲ್ಲಿ ಮೂರು ಮುಖ್ಯವಾದ ನಿಜಕ್ಕೂ ಸ್ಮಾರಕಗಳೇ ಆಗಿರುವ ಭವ್ಯ ಕಟ್ಟಡಗಳನ್ನು ತುಸು ವಿವರಗಳಿಂದ ನೋಡೋಣ.

ಜತಿಯಾ ಸಂಸತ್ ಭವನ್ ರಾಷ್ಟ್ರೀಯ ಸಂಸತ್ ಭವನ (Jatiya Sangsad Bhaban or National Parliament House) ಢಾಕಾ ಬಾಂಗ್ಲಾ ದೇಶ

ಸುಮಾರು 200 ಎಕರೆಯ ವಿಶಾಲವಾದ ಪ್ರದೇಶದಲ್ಲಿ (ಅಕ್ಷರಶಃ ಮೇಲೆದ್ದು ಬಂದಂತಿರುವ) ತಲೆಯೆತ್ತಿ ನಿಂತಿ ಭವ್ಯವಾದ ಕಟ್ಟಡ. ಅನೇಕ ವಾಸ್ತು ವಿಮರ್ಶಕರ ಪ್ರಕಾರ 20ನೆಯ ಶತಮಾನದ ಅತ್ಯಂತ ಭವ್ಯವಾದ ಕಟ್ಟಡ. ಲೂಯಿಸ್ ಕಾನ್ ಅವರು ಇದರ ಡಿಸೈನ್ ಅನ್ನು ನಿರ್ಮಿಸಿ 1961ರಲ್ಲಿ ಆರಂಭಿಸಿದ್ದರು. ಮುಂದೆ 1982ರಲ್ಲಿ ಇದು ಮುಗಿಯುವ ಹೊತ್ತಿಗೆ ಅವರಿರಲಿಲ್ಲ. ಜಗತಿನ ಬಡ ರಾಷ್ಟ್ರವೊಂದರಲ್ಲಿ ಅತ್ಯಂತ ಶ್ರೀಮಂತ ಸಂಸತ್ ಭವನವನ್ನು ಕಟ್ಟಿದ ಹೆಗ್ಗಳಿಕೆ ಶ್ರೀ ಲೂಯಿಸ್ ಕಾನ್ ಅವರದ್ದು.

ಜಾಗವನ್ನು ಗುರುತಿಸಿ ಕೊಟ್ಟಾಗ ಅದೊಂದು ಭತ್ತದ ಗದ್ದೆಯ ಜೌಗು ಪ್ರದೇಶ. ಅಂತಹದರಲ್ಲೂ ಭತ್ತದ ಗದ್ದೆಯ ನೀರಿನಿಂದಲೇ ಎದ್ದು ಬಂದಂತೆ ಕಟ್ಟಲು ರೂಪಿಸಿದ್ದು ಲೂಯಿಸ್ ಕಾನ್ ಅವರ ದಾರ್ಶನಿಕ ನಿಲುವು. ಭವ್ಯತೆಯ ಜೊತೆಗೆ ಅತ್ಯದ್ಭುತ ಕಲಾತ್ಮಕತೆಯನ್ನೂ ಅಪೂರ್ವ ಶಕ್ತಿ ಮತ್ತು ಬೆಳಕಿನ ಮಿಶ್ರಣವಾಗಿ ಮೇಳೈಸುವಂತೆ ನಿರ್ಮಿಸಿದ್ದು ಲೂಯಿಸ್ ಅವರ ವಿಶೇಷತೆ.

ಕಟ್ಟಡವನ್ನು ಸರಿ ಸುಮಾರು 23 ವರ್ಷಗಳ ಕಾಲ (ತಾಜ್ ಮಹಲ್ ನಿರ್ಮಿಸಿದಂತೆಯೇ) ಯಾವುದೇ ಕ್ರೇನ್‌ಗಳ ಸಹಾಯವಿಲ್ಲದ ಪ್ರತೀ ಒಂದನ್ನೂ (ಕಲ್ಲು, ಇಟ್ಟಿಗೆಯನ್ನೂ) ತಲೆಯ ಮೇಲೆ ಕೊಂಡೊಯ್ದೇ ನಿರ್ಮಿಸಲಾಗಿದ್ದು ಈ ಕಟ್ಟಡದ ವಿಶೇಷತೆ. 1974ರಲ್ಲಿ ಲೂಯಿಸ್ ಅವರ ಆಕಸ್ಮಿಕ ಮರಣದಿಂದಾಗಿ ಮುಂದೆ ಕಟ್ಟಡವನ್ನು ಅವರ ವಿದ್ಯಾರ್ಥಿಗಳಾಗಿದ್ದ ಮುಝಾರುಲ್ ಇಸ್ಲಾಂ (Muzharul Islam) ಮತ್ತು ಶಂಸುಲ್ ವೇರ್ಸ್ (Shamsul Wares) ಅವರು ಪೂರೈಸಿಕೊಟ್ಟರು. ಇದರ ವಿಶೇಷತೆ ಮತ್ತು ಅಂತಹದ್ದೊಂದು ಮಹತ್ವದ ಕಟ್ಟಡವನ್ನು ಯಾವ ಮಾಯೆಯಲ್ಲಿ ಹಣಕಾಸಿನ ಕೊರತೆಯಲ್ಲೂ ನಿರ್ಮಿಸುವಂತೆ ರೂಪಿಸಿದ್ದು ಲೂಯಿಸ್ ಹೆಗ್ಗಳಿಕೆ ಅಕ್ಷರಶಃ ತಮ್ಮನ್ನು ಸಮರ್ಪಿಸಿಕೊಂಡು ನಿರ್ಮಿಸಿದ ಭವ್ಯ ಕಟ್ಟಡ ಅದು.
(ಆದಷ್ಟೂ ಬೇಗ ಢಾಕಾಗೆ ಹೋಗಿ ಈ ಸಂಸತ್ ಭವನವನ್ನು ನೋಡುವ ಹಂಬಲ ನನ್ನದು)
ಸಾಕ್ ಇನ್ಸ್‌ಟಿಟ್ಯೂಟ್ ಆಫ್ ಬಯೊಲಾಜಿಕಲ್ ಸೈನ್ಸಸ್ (Salk Institute of Biological Sciences) ಲಾ ಹೊಯಾ, ಕ್ಯಾಲಿಫೊರ್ನಿಯ.

ಮಾನವ ಕುಲದ ಆರೋಗ್ಯದ ಸಂಶೋಧನೆಗೆ ಅತ್ಯದ್ಭುತವಾದ ಸಂಸ್ಥೆಯೊಂದು ಅಂದರೆ ಅದು ಸಾಕ್ ಇನ್ಸ್‌ಸ್ಟಿಟ್ಯೂಟ್ ಆಫ್ ಬಯೊಲಾಜಿಕಲ್ ಸೈನ್ಸಸ್. ಪೋಲಿಯೋ ವ್ಯಾಕ್ಸೀನ್ ಅನ್ನು ಅಭಿವೃದ್ಧಿ ಪಡಿಸಿದ ವೈದ್ಯ ವಿಜ್ಞಾನಿ ಜೊನಾಸ್ ಸಾಕ್ ಅವರು ಅಕ್ಷರಶಃ ಪ್ರತೀ ಹಂತವನ್ನೂ ಲೂಯಿಸ್ ಕಾನ್ ಅವರೊಂದಿಗೆ ಆಲೋಚಿಸಿ ನಿರ್ಮಿಸಿದ ಸಂಸ್ಥೆ. ಮನುಕುಲದ ವಿಶೇಷ ಅಧ್ಯಯನಕ್ಕೆಂದೇ ಒಂದು ಪೂರ್ಣ ಪ್ರಮಾಣದ ಜೈವಿಕ ವಿಜ್ಞಾನದ ಸಂಸ್ಥೆ ಅದು. ಕ್ಯಾಲಿಪೋರ್ನಿಯಾದ ಲಾ-ಹೊಯಾ ಎಂಬಲ್ಲಿರುವ ಸಾಕ್ ಜೀವ ವಿಜ್ಞಾನದ ಸಂಸ್ಥೆಯು, “ಜೀವಿಕೋಶದಿಂದ ಸಮಾಜದೆಡೆಗೆ” ಎಂಬ ಧ್ಯೇಯ-ಘೋಷವನ್ನು ಟ್ಯಾಗ್ ಲೈನ್ ಆಗಿ ಹೊಂದಿದೆ.

ಅದರ ಕಟ್ಟಡದ ವಾಸ್ತು-ರಚನೆಯನ್ನು ಸ್ವತಂತ್ರ ಸಂಶೋಧನೆಗೆ ಅನುವಾಗುವ ಎಲ್ಲಾ ಸಮಾಜಿಕ ಕಲಾತ್ಮಕತೆಯನ್ನೂ ಬೆರೆಸಿ ಕಟ್ಟಿದರು. ಕಟ್ಟಡ ವಿನ್ಯಾಸದ ಸಮಯದಲ್ಲಿ ವಾಸ್ತು ಶಿಲ್ಪಿ ಲೂಯಿಸ್ ಕಾನ್ (Louis Kahn) ಅವರನ್ನು ಕುರಿತು “ಕಲಾವಿದ ಪಿಕಾಸೊಗೂ ಸಹಾ ಬಂದು ನೋಡಬೇಕು (“create a facility worthy of a visit by Picasso)” ಅನ್ನಿಸುವಂತೆ ವಿನ್ಯಾಸ ಮಾಡು ಅಂದಿದ್ದರು ಜೊನಾಸ್ ಸಾಕ್. ಈಗ ಈ ಸಂಸ್ಥೆ, ಇಂದಿಗೂ “ವಿಜ್ಞಾನ ಮತ್ತು ಕಲೆ” ಎರಡಕ್ಕೂ ಭೇಟಿ ನೀಡಬೇಕೆನಿಸುವ ಸಂಸ್ಥೆ “ಸಾಕ್ ಇನ್ಸ್‌ಸ್ಟಿಟ್ಯೂಟ್ ಆಫ್ ಬಯೊಲಾಜಿಕಲ್ ಸ್ಟಡೀಸ್” ಈಕಟ್ಟಡದ ವಿನ್ಯಾಸದ ಸೌಂದರ್ಯವು ವರ್ಷದ ಎರಡೂ ಈಕ್ವಿನಾಕ್ಸ್ – ಹಗಲು-ರಾತ್ರಿಗಳ ಸಮನಾದ ಕಾಲವುಳ್ಳ- ದಿನಗಳಂದು ಸೂರ್ಯ ಹಾದು ಹೋಗುವಂತೆ ನಿರ್ಮಿಸಿದ್ದು, ಅತ್ಯಂತ ಕಲಾತ್ಮಕವಾದ ಕಟ್ಟಡವಾಗಿದೆ.

ಇಡೀ ಕಟ್ಟಡದ ಎಲ್ಲಾ ಪ್ರಯೋಗಾಲಯಗಳೂ ಫೆಸಿಫಿಕ್ ಮಹಾಸಾಗರವನ್ನು ಎದಿರು ನೋಡುವಂತೆ ನಿರ್ಮಿಸಿದ್ದು ವಿಶಿಷ್ಟ ಕಲೆಗಾರಿಕೆ. ವಿಜ್ಞಾನಿಗಳು ಕನಸುಗಳನ್ನು ವಿಸ್ತರಿಸಿಕೊಳ್ಳಲು ಸಾಗರದ ವಿಶಾಲತೆಯು ಸದಾ ಎದುರಾಗಿರುವಂತೆ ವಿನ್ಯಾಸ ಮಾಡಿದ್ದು, ಲೂಯಿಸ್ ಅವರ ಹೆಚ್ಚುಗಾರಿಕೆ. ಪ್ರತೀ ಪ್ರಯೋಗಾಲಯವೂ ತೆರೆದುಕೊಂಡ ಹಾಗೆ ಸದಾ ಆಲೋಚನೆ ಹಾಗೂ ಚಟುವಟಿಕೆಗಳಿಗೆ ಅನುವಾಗುವಂತೆ ನಿರ್ಮಿಸಲಾಗಿದೆ. ಕ್ಯಾಲಿಫೋರ್ನಿಯಾದ ಲಾ ಹೋಯಾದಲ್ಲಿ ಫೆಸಿಫಿಕ್ ಮಹಾಸಾಗರಕ್ಕೆ ಅಂಟಿಕೊಂಡಂತೆ ಇರುವ ಸಂಸ್ಥೆಯು ಇಂದು ಸುಮಾರು 60ಕ್ಕೂ ಹೆಚ್ಚು ಸಂಶೋಧನಾ ಗುಂಪುಗಳ, 850 ಸಂಶೋಧಕರನ್ನು ಒಳಗೊಂಡಿದೆ.
(Salk Institute ವೈಯಕ್ತಿಕವಾಗಿ ಅದೆಷ್ಟು ಪ್ರಭಾವಿಸಿದೆ ಅಂದರೆ CPUS ಅದರ ಮಾದರಿಯನ್ನು ಬಳಸಿ ಬೆಳೆಯಲಿ ಎಂದುಕೊಂಡಿದ್ದೇನೆ, ಸಾಕ್ ಸಂಸ್ಥೆಯ ವೈಜ್ಞಾನಿಕ ಚರ್ಚೆಗಳಲ್ಲಿ ಆನ್ ಲೈನ್ ನಲ್ಲಿ ಭಾಗವಹಿಸುತ್ತಾ ಅದರ ಜೊತೆ ಸಂಪರ್ಕದಲ್ಲಿದ್ದು, ಪ್ರತೀ ತಿಂಗಳೂ ಅದರ updates ಪಡೆಯುವ ಖುಷಿ ನನ್ನದು. ಆ ಕಟ್ಟಡವನ್ನು ಸಂದರ್ಶಿಸಲೇ ಬೇಕೆಂಬ ಮಹತ್ವಾಕಾಂಕ್ಷೆಯಂತೂ ಇದ್ದೇ ಇದೆ )
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (Indian Institute of Management) ಅಹಮದಾಬಾದ್.

ಇಸ್ರೊ ರೂಪಿಸಿದ ಡಾ. ವಿಕ್ರಂ ಸಾರಾಭಾಯ್ ಅವರ ಮುಂದಾಳತ್ವದಲ್ಲೇ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕೂಡ ಅಹಮದಾಬಾದ್ ನಲ್ಲಿ 1961ರಲ್ಲಿ ಆರಂಭವಾಯ್ತು. ಇದರ ಕಟ್ಟಡದ ವಾಸ್ತು ಹಾಗೂ ನಿರ್ಮಿತಿಯನ್ನು 1962 ಮತ್ತು 1974 ರ ನಡುವೆ ಲೂಯಿಸ್ ಕಾನ್ ಮತ್ತು ವಿದ್ಯಾರ್ಥಿ ಡಾ. ಬಾಲಕೃಷ್ಣ ದೋಶಿ ಅವರು ಜೊತೆಯಾಗಿ ನಿರ್ವಹಿಸಿದ್ದರು. ತರಗತಿಯ ಕೋಣೆಗಳು, ಕಾರಿಡಾರ್‌ಗಳನ್ನೂ ಚಾಚುವಂತೆ, ವೃತ್ತಾಕಾರದ ಸ್ಪೇಸ್ ಅಲ್ಲಲ್ಲಿ ತೆರೆದಿಟ್ಟ ಭವ್ಯವಾದ ಕಟ್ಟಡ ಇದು.

ಮೈ ಆರ್ಕಿಟೆಕ್ಟ್: ಅ ಸನ್ಸ್ ಸ್ಟೊರಿ by ನತಾನಿಎಲ್ ಕಾನ್(Nathaniel Kahn) (My Architect : A Son’s Story)

ತಮ್ಮ ವೈಯಕ್ತಿಕ ವಿವರಗಳನ್ನು ಅತೀ ಕಡಿಮೆ ಎನ್ನುವಷ್ಟು ಬಿಟ್ಟು ಹೋಗಿರುವ ಲೂಯಿಸ್ ಕಾನ್ ಅವರನ್ನು ಕುರಿತು ಅವರ ಮಗ ನತಾನಿಎಲ್ ಕಾನ್(Nathaniel Kahn) ಅವರು ಸಾಕ್ಷಚಿತ್ರವೊಂದನ್ನು 2003ರಲ್ಲಿ ನಿರ್ಮಿಸಿದ್ದಾರೆ. ಹನ್ನೊಂದು ವರ್ಷದ ಪುಟ್ಟ ಹುಡುಗನಾಗಿದ್ದಾಗ ಕಳೆದುಕೊಂಡ ತಂದೆಯ ಬಗೆಗೆ ಅವರಿಗೂ ತಿಳಿದಿರದ ಅನೇಕ ಸಂಗತಿಗಳನ್ನು ಹುಡುಕಾಡಿ ಚಿತ್ರದ ನಿರ್ಮಾಣವನ್ನು ಮಾಡಿದ್ದಾರೆ. ಪುಟ್ಟ ಹುಡುಗನೊಬ್ಬ ನನ್ನ ಅಪ್ಪನನ್ನು ನೋಡಿದ್ದೀರಾ? ಎಂದು ಲೂಯಿಸ್ ಅವರ ಒಡನಾಡಿಗಳನ್ನು ಭೇಟಿಮಾಡಿ ಸಂದರ್ಶಿಸಿ ಅವರ ಆಪ್ತ ಕಣ್ಣುಗಳಲ್ಲಿ, ಮಾತುಗಳಲ್ಲಿ ಅಪ್ಪನನ್ನು ಕಂಡು ದಾಖಲಿಸಿದ್ದಾರೆ. ತುಂಬಾ ವಿಶೇಷವಾದ ವಿವರಣೆ ಹಾಗೂ ಚಿತ್ರಣವನ್ನು ಉಳ್ಳ ಈ ಸಾಕ್ಷಚಿತ್ರವು ಆಸ್ಕರ್ ಪುರಸ್ಕಾರಕ್ಕೆ ನಾಮಕರಣವಾಗಿತ್ತು. ಇದನ್ನು ಕುರಿತ ಒಂದು ಟೆಡ್ ಟಾಕ್ (TED Talk) ಅನ್ನು ಈ ಲಿಂಕ್ (https://www.ted.com/talks/nathaniel_kahn_scenes_from_my_architect?language=id ) ಬಳಸಿ ನೋಡಬಹುದು.

ಲೂಯಿಸ್ ಕಾನ್, ಎಸ್ತೊನಿಯಾದಲ್ಲಿ 1901ರ ಜನವರಿ – ಫೆಬ್ರವರಿಯ ತಿಂಗಳಲ್ಲಿ (ದಾಖಲೆಯಲ್ಲಿ ಫೆಬ್ರವರಿ 20) ಒಂದು ದಿನ ಜನಿಸಿದವರು. ಕುಟುಂಬದ ಜೊತೆ ಅಮೆರಿಕಕ್ಕೆ ವಲಸೆ ಬಂದು ಒಂದು ಸ್ಕೆಚ್ ಮಾಡಲೂ ಪೆನ್ಸಿಲ್ ಅನ್ನೂ ಕೊಳ್ಳುವಷ್ಟೂ ಹಣವಿಲ್ಲದ ಬಡತನದಲ್ಲಿ ಬಾಲ್ಯವನ್ನು ಕಳೆದರು. ಪುಟ್ಟ ಮರದ ಕಡ್ಡಿಗಳನ್ನು ಸುಟ್ಟು ಕರುಕಲಾಗಿಸಿ ಅದರಲ್ಲಿ ಸ್ಕೆಚ್ ಮಾಡುತ್ತಿದ್ದ ಬಾಲ್ಯವನ್ನು ಕಂಡ ಲೂಯಿಸ್ ತಮ್ಮ 50ರ ವಸಂತದ ವರೆಗೂ ಹೆಚ್ಚೇನೂ ದುಡಿಮೆ ಇಲ್ಲದ, ಬದುಕನ್ನೇ ಸವೆಸಿದವರು. ಮುಂದೊಮ್ಮೆ ರೋಮ್ ಕಟ್ಟಡಗಳ ಅಧ್ಯಯನದಲ್ಲಿ ಪ್ರವಾಸ ಕೈಗೊಂಡು ಆನಂತರ ಅವರ ಬದುಕೇ ಬದಲಾಗಿ ಜಗದ್ವಿಖ್ಯಾತವಾದ ಆಧುನಿಕ ಸ್ಮಾರಕಗಳಿಗೆ ಕಾರಣರಾದರು. ತಮ್ಮ ಎಲ್ಲಾ ವೈಯಕ್ತಿಕ ಬದುಕನ್ನೂ ನಿಗೂಢವಾಗೆ ಇಟ್ಟು ತಾವೂ ಅಷ್ಟಾಗಿ ಅನುಭವಿಸಿದೆ, ಅನಾಥವಾಗಿಯೇ ಅಂತ್ಯವನ್ನು 1974ರ ಮಾರ್ಚ್ 17ರಂದು ನ್ಯೂಯಾರ್ಕ್‌ನ ಪೆನ್ ರೈಲ್ ನಿಲ್ದಾಣದಲ್ಲಿ ಹೊಂದಿದರು. ಸಾವಿನ ಮೂರು ದಿನಗಳ ನಂತರವಷ್ಟೇ ಅವರ ದೇಹವನ್ನು ಪತ್ತೆ ಹಚ್ಚಲಾಗಿತ್ತು. ಸದಾ ನಿಶ್ಯಬ್ದ ಮತ್ತು ಬೆಳಕಿನೊಂದಿದೆ ಆಟವಾಡುತ್ತಾ ಸ್ಮಾರಕಗಳಲ್ಲಿ ದಾರ್ಶನಿಕತೆಯನ್ನು ತುಂಬಿದ ಲೂಯಿಸ್ ಕಾನ್, ಬಾಂಗ್ಲಾದ ಆರ್ಕಿಟೆಕ್ಟ್ ಶಂಸುಲ್ ವೇರ್ಸ್ (Shamsul Wares) ಅವರ ಮಾತಿನಂತೆ ಎಲ್ಲರ ಹೃದಯಗಳಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದಿದ್ದಾರೆ.


ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್.