You are currently viewing ವಸ್ತುವಿನಲ್ಲಿರುವ ಎಲೆಕ್ಟ್ರಾನ್ ಗಳ ಚಲನಶೀಲತೆಯ (ಡೈನಾಮಿಕ್ಸ್) ಅಧ್ಯಯನಕ್ಕಾಗಿ ಬೆಳಕಿನ ಆತ್ಯಂತಿಕ ಕಡಿಮೆ ಕಾಲದ (Attosecond-ಅಟೊಸೆಕೆಂಡ್) ಪಲ್ಸ್ ಉತ್ಪಾದಿಸುವ ಪ್ರಾಯೋಗಿಕ ವಿಧಾನಗಳಿಗಾಗಿ 2023 ರ ಭೌತವಿಜ್ಞಾನದ ನೊಬೆಲ್‌ ಪುರಸ್ಕಾರ.

ವಸ್ತುವಿನಲ್ಲಿರುವ ಎಲೆಕ್ಟ್ರಾನ್ ಗಳ ಚಲನಶೀಲತೆಯ (ಡೈನಾಮಿಕ್ಸ್) ಅಧ್ಯಯನಕ್ಕಾಗಿ ಬೆಳಕಿನ ಆತ್ಯಂತಿಕ ಕಡಿಮೆ ಕಾಲದ (Attosecond-ಅಟೊಸೆಕೆಂಡ್) ಪಲ್ಸ್ ಉತ್ಪಾದಿಸುವ ಪ್ರಾಯೋಗಿಕ ವಿಧಾನಗಳಿಗಾಗಿ 2023 ರ ಭೌತವಿಜ್ಞಾನದ ನೊಬೆಲ್‌ ಪುರಸ್ಕಾರ.

ಜಗತ್ತನ್ನು ಅರ್ಥ ಮಾಡಿಕೊಳ್ಳುವ ವಿಜ್ಞಾನದ ಹಾದಿಯಲ್ಲಿ ಬೆಳಕು ಮತ್ತು ಇಲೆಕ್ಟ್ರಾನ್‌ಗಳ ಸಂಬಂಧವನ್ನೂ ಅರಿಯುವ ಸಾಹಸ ನಿಜಕ್ಕೂ ದೊಡ್ಡ ಮಾತೇ ಸರಿ. ಈ ವರ್ಷದ ನೊಬೆಲ್‌ ಪುರಸ್ಕಾರದ ಸಂಶೋಧನೆಯ ವಿವರಗಳನ್ನು ಈ ಬಗೆಯ ಆತ್ಯಂತಿಕ ಸ್ಪರ್ಶದಿಂದ ಅರಿಯಬೇಕಾಗುತ್ತದೆ. ನಮಗೆಲ್ಲಾ ವಸ್ತುಗಳ ಚಲನೆಯ ವೇಗವನ್ನೂ ಮತ್ತು ಆ ವೇಗದಲ್ಲಿಯೇ ಅವುಗಳ ಗುರುತಿಸುವ ಬಗೆಯಲ್ಲಿ ತೀರಾ ಪರಿಚಿತವಾದ ಹಾಗೂ ಗಂಭೀರವೂ ಆದ ಸವಾಲೆಂದರೆ ಹಮ್ಮಿಂಗ್‌ ಹಕ್ಕಿಯ ರೆಕ್ಕೆಯ ಬಡಿತ! ಪ್ರತೀ ಸೆಕೆಂಡಿಗೆ 80 ಬಾರಿ ಬಡಿಯುವ ಅದರ ರೆಕ್ಕೆಯ ಮಿಡಿತವನ್ನು ಕಾಣುವಂತೆ ಫೋಟೊತೆಗೆಯಲು ಅತ್ಯಂತ ವೇಗವಾದ ಶಟರ್‌ ಬಳಸಬೇಕಾಗುತ್ತದೆ ಅಲ್ಲವೇ? ಹೀಗೆಯೇ ಸಾಮಾನ್ಯ ಕ್ಯಾಮರಾದಲ್ಲಿ ಅದನ್ನು ಸೆರೆಹಿಡಿದರೆ ಒಂದು ರೀತಿಯ ಒಟ್ಟಾದ – ಬ್ಲರ್‌ ಆದ- ಚಿತ್ರ ಕಾಣುತ್ತದೆ ತಾನೇ? ಹಾಗಾದರೆ ಪ್ರತೀ ಮಿಡಿತ ಅಥವಾ ರೆಕ್ಕೆಯ ಚಲನೆಯನ್ನೂ ಸೆರೆಹಿಡಿಯಲು ತುಂಬಾ ವಿಶೇಷವಾದ ತಾಂತ್ರಿಕತೆಯ ಫೋಟೊ ತೆಗೆಯಬೇಕಾಗುತ್ತದೆ ಅಲ್ಲವೇ?.

ಈ ಅತೀವೇಗದ-ಹೈಸ್ಪೀಡ್‌-ಫೋಟೊಗ್ರಫಿಯಿಂದ ಅತ್ಯಂತ ವೇಗವಾಗಿ ಚಲಿಸುವ ವಸ್ತುಗಳನ್ನೂ ಖರಾರುವಕ್ಕಾಗಿ, ನಿಖರವಾದ ತಿಳಿವಿನ ಚಿತ್ರಣವನ್ನು ಪಡೆಯಲು ಸಾಧ್ಯ. ಹಮ್ಮಿಂಗ್‌ ಹಕ್ಕಿಯ ರೆಕ್ಕೆಯ ಬಡಿತವನ್ನು ಈ ಬಗೆಯ ಚಿತ್ರ ತೆಗೆಯಲು ಹೈಸ್ಪೀಡ್‌ ಬಳಸಬೇಕಾಗುತ್ತದೆ, ಅದೆಲ್ಲಾ ವಿವರಿಸಲು -ಎಕ್ಸ್‌ಪೋಜರ್‌ ಟೈಮ್‌- ಅಂದರೆ ಅಪರ್ಚರ್‌-ಅದರ ಮುಚ್ಚಳದ ತೆರೆದು ಮುಚ್ಚುವ ಅಂದರೆ ಬೆಳಕು ಅದರೊಳಗೆ ಹರಿಯುವ ಕಾಲವನ್ನು ನಿರ್ಧರಿಸುವ ಬಗೆ ತಾನೇ? ಇದು ಅತೀ ಕಡಿಮೆಯಾದಷ್ಟೂ ಅತೀ ಹೆಚ್ಚಿನ ವೇಗದಲ್ಲಿ ಚಲಿಸುವ ವಸ್ತುಗಳ ಚಿತ್ರವನ್ನೂ ನಿಖರವಾಗಿ ತೆರೆಯಲು ಸಾಧ್ಯ. ಒಂದು ವೇಳೆ ಇದೇ ಊಹೆಯನ್ನು ಇಲೆಕ್ಟ್ರಾನ್‌ ಚಿತ್ರಿಸುವ ಬಗ್ಗೆ ಒಂದು ಕ್ಷಣ ಊಹಿಸಿ! ಹೇಗಾದೀತು? ಅಲ್ಲವೇ? ನಿಜ ಎಲೆಕ್ಟ್ರಾನುಗಳು ಪರಮಾಣುವಿನಲ್ಲಿ ಸುತ್ತುವ ವೇಗವಾಗಲಿ, ಅವುಗಳ ಗಾತ್ರವಾಗಲಿ ಊಹಿಸಿದರೆ ಇದೊಂದು ದುಸಾಧ್ಯವಾದ ಸಂಗತಿಯೇ ಅನ್ನಿಸೀತು. ಅದರಲ್ಲೂ ಅವುಗಳ ಚಲನೆಯು ಅಲೆಯಂತೆ, ಅಥವಾ ಕಣಗಳಂತೆ ಎಂಬಿತ್ಯಾದಿಗಳ ನಡುವೆಯೂ ಅರಿಯುವ ಸಾಹಸವು ನಿಜಕ್ಕೂ ಸಾಹಸವೇ! ಅದೇ ಸಾಹಸವೇ ಈ ವರ್ಷದ ನೊಬೆಲ್‌ ಪುರಸ್ಕಾರದ ಪ್ರಾಯೋಗಿಕ ವಿವರಗಳನ್ನು ತಿಳಿಸುವ ಕಷ್ಟ. ಪರಮಾಣುಗಳೇ ಕಾಣದ ಚಿಕ್ಕ ಗಾತ್ರದವು! ಅದರಲ್ಲೂ ಹೆಚ್ಚೂ ಕಡಿಮೆ ದ್ರವ್ಯರಾಶಿಯೇ ಇಲ್ಲದ ಇಲೆಕ್ಟ್ರಾನುಗಳು (ಪರಮಾಣುವಿನಲ್ಲಿ ಅತ್ಯಂತ ಕಡಿಮೆ ದ್ರವ್ಯರಾಶಿಯುಳ್ಳ ಇಲೆಕ್ಟ್ರಾನ್‌, 9.1093837015 × 10−31 kg ಭಾರದ್ದು). ಇನ್ನು ಅವುಗಳ ವೇಗವೋ ಪ್ರತಿ ಸೆಕೆಂಡಿಗೆ 2200 ಕಿಮೀ! ಇದನ್ನು ಚಿತ್ರಿಸುವುದಾದರೂ ಹೇಗೆ? ಇದನ್ನೇ ಬೆಂಬತ್ತಿದ್ದು ಕ್ವಾಂಟಂ ಆಪ್ಟಿಕ್ಸ್‌ ಎಂಬ ಭೌತವಿಜ್ಞಾನ!

        ಹೀಗೀರುವಾಗ ಅತ್ಯಂತ ವೇಗವುಳ್ಳ ವಸ್ತುವನ್ನು ಎಷ್ಟು ಬೇಗ ನೋಡಲು ಸಾಧ್ಯವೋ ಅಷ್ಟು ನಿಖರವಾಗಿ ಅವುಗಳು ಕಾಣುತ್ತವೇ ತಾನೇ! ನಮ್ಮ ಕಣ್ಣಿಗೆ ಜೋರಾಗಿ ಹಾಯ್ದು ಹೋದ ಬಸ್ಸು ಅಥವಾ ಕಾರಿನ ನಂಬರ್‌ ಪ್ಲೇಟನ್ನು ಓದಲು ಆಗುತ್ತದೆಯೇ? ಕೆಲವೊಮ್ಮೆ ಅವುಗಳ ಬಣ್ಣವೂ ಮನಸ್ಸಿಗೆ ತಲುಪುವ ಮುಂಚೆಯೇ ಅವು ಹಾರಿದಂತೆ ಕಾಣುತ್ತವೆ. ಹಾಗಾಗಿ ನಮ್ಮ ನೋಡುವ ನೋಟವೂ ಅಷ್ಟೇ ವೇಗವಾಗಿ ನಮ್ಮ ಮನಃಪಟಲವನ್ನು ತಲುಪಬೇಕು ಆಗ ಏನಾದರೂ ಒಂದಷ್ಟು ತಿಳಿದೀತು.

ಅದೇ ತತ್ವವು ಕ್ಷಿಪ್ರ ಪ್ರಕ್ರಿಯೆಗಳನ್ನು ಅಳೆಯಲು ಅಥವಾ ಚಿತ್ರಿಸಲು ಬಳಸುವ ಎಲ್ಲಾ ವಿಧಾನಗಳಿಗೆ ಅನ್ವಯಿಸುತ್ತದೆ; ಯಾವುದೇ ಮಾಪನವನ್ನು ಅಧ್ಯಯನ ಮಾಡಲಾಗುತ್ತಿರುವ ವ್ಯವಸ್ಥೆಯು/ವಸ್ತುವು ಗಮನಾರ್ಹ ಬದಲಾವಣೆಗೆ ಒಳಗಾಗಲು ತೆಗೆದುಕೊಳ್ಳುವ ಸಮಯಕ್ಕಿಂತ ಹೆಚ್ಚು ವೇಗವಾಗಿ ಮಾಡಬೇಕು, ಇಲ್ಲದಿದ್ದರೆ ಫಲಿತಾಂಶವು ಅಸ್ಪಷ್ಟವಾಗಿರುತ್ತದೆ. ಪರಮಾಣುಗಳು ಮತ್ತು ಅಣುಗಳೊಳಗಿನ ಪ್ರಕ್ರಿಯೆಗಳ ಚಿತ್ರಗಳನ್ನು ಸೆರೆಹಿಡಿಯಲು ಸಾಕಷ್ಟು ಸಂಕ್ಷಿಪ್ತವಾಗಿರುವ ಬೆಳಕಿನ ಮಿಡಿತ (Pulses) ವನ್ನು ಉತ್ಪಾದಿಸುವ ವಿಧಾನವನ್ನು ಪ್ರದರ್ಶಿಸುವ ಪ್ರಯೋಗಗಳನ್ನು ಈ ವರ್ಷದ ನೊಬೆಲ್‌ ಪ್ರಶಸ್ತಿ ವಿಜೇತರು ನಡೆಸಿದ್ದಾರೆ.

ಪರಮಾಣುಗಳಲ್ಲಿ ಸ್ವಾಭಾವಿಕವಾದ ಸಮಯದ ಅಳತೆಗೋಲು ನಂಬಲಾಗದಷ್ಟು ಚಿಕ್ಕದು. ಅಣುವಿನೊಳಗೆ(Molecules), ಪರಮಾಣುಗಳು(Atom) ಚಲಿಸುತ್ತವೆ ಮತ್ತು ತಿರುಗುತ್ತವೆ. ಈ ಚಲನೆಯ ವೇಗವು ಸೆಕೆಂಡಿನ ಶತಕೋಟಿಯ ಮಿಲಿಯನ್ (Millionth of a Billionth of a Second) ಭಾಗದಷ್ಟು ಅದನ್ನು ಫೆಮ್ಟೋಸೆಕೆಂಡ್‌ಗಳು (Femtoseconds) ಎಂದು ಅಳೆಯಲಾಗುತ್ತದೆ. ಈ ಚಲನೆಗಳನ್ನು ಲೇಸರ್‌ನಿಂದ ಉತ್ಪಾದಿಸಬಹುದಾದ ಅತ್ಯಂತ ಚಿಕ್ಕ ಚಿಕ್ಕ ಮಿಡಿತ (Pulses)ಗಳೊಂದಿಗೆ ಅಧ್ಯಯನ ಮಾಡಬಹುದು – ಆದರೆ ಸಂಪೂರ್ಣ ಪರಮಾಣುಗಳು ಚಲಿಸಿದಾಗ ಸಮಯದ ಅಳತೆಗೋಲು ಅವುಗಳ ದೊಡ್ಡದಾದ ಮತ್ತು ಭಾರವಾದ ನ್ಯೂಕ್ಲಿಯಸ್‌ಗಳಿಂದ ನಿರ್ಧರಿಸಲಾಗುತ್ತದೆ, ಇದು ಬೆಳಕು ಮತ್ತು ವೇಗವುಳ್ಳ ಎಲೆಕ್ಟ್ರಾನ್‌ಗಳಿಗೆ ಹೋಲಿಸಿದರೆ ಅತ್ಯಂತ ನಿಧಾನ. ಎಲೆಕ್ಟ್ರಾನ್‌ಗಳು ಪರಮಾಣುಗಳು ಅಥವಾ ಅಣುಗಳ ಒಳಗೆ ಚಲಿಸಿದಾಗ, ಅವರು ಅದನ್ನು ಎಷ್ಟು ಬೇಗನೆ ಮಾಡುತ್ತಾರೆ ಎಂದರೆ ಬದಲಾವಣೆಗಳು ಫೆಮ್ಟೋಸೆಕೆಂಡ್‌ನಲ್ಲಿ ಮಸುಕಾಗುತ್ತವೆ. ಎಲೆಕ್ಟ್ರಾನ್‌ಗಳ ಜಗತ್ತಿನಲ್ಲಿ, ಸ್ಥಾನಗಳು ಮತ್ತು ಶಕ್ತಿಗಳು ಒಂದರಿಂದ ಕೆಲವು ನೂರು ಅಟೊಸೆಕೆಂಡ್‌ (Attoseconds)ಗಳ ನಡುವಿನ ವೇಗದಲ್ಲಿ ಬದಲಾಗುತ್ತವೆ, ಅಲ್ಲಿ ಅಟೊಸೆಕೆಂಡ್ ಎಂದರೆ ಒಂದು ಸೆಕೆಂಡಿನ ಶತಕೋಟಿಯ ಒಂದು ಬಿಲಿಯನ್ (Billionth of a Billionth of a Second.) ಭಾಗವಾಗಿದೆ. ಈ ಆಟೊಸೆಕೆಂಡ್‌ ಅಳತೆಗೋಲಿನ ಬಳಕೆಯ ಭೌತವಿಜ್ಞಾನವೇ ಈ ವರ್ಷದ ಪುರಸ್ಕಾರಕ್ಕೆ ಒಳಗಾದದ್ದು.

ಒಂದು ಅಟೊಸೆಕೆಂಡ್ ಎಷ್ಟು ಚಿಕ್ಕದೆಂದರೆ, ಒಂದು ಸೆಕೆಂಡಿನಲ್ಲಿ ಒಟ್ಟು ಆಟೊಸೆಕೆಂಡುಗಳ ಸಂಖ್ಯೆಯು 13.8 ಶತಕೋಟಿ ವರ್ಷಗಳ ಹಿಂದೆ ಬ್ರಹ್ಮಾಂಡವು ಅಸ್ತಿತ್ವಕ್ಕೆ ಬಂದಾಗಿನಿಂದ ಅದು ಕಳೆದ ಒಟ್ಟು ಸೆಕೆಂಡುಗಳ ಸಂಖ್ಯೆಯಷ್ಟೇ ಇರುತ್ತದೆ. ಅಂದರೆ ಅದು ಈ ಬ್ರಹ್ಮಾಂಡದ ಆಯುಷ್ಯಕ್ಕೆ ಸಮನಾದ ಸೆಕೆಂಡುಗಳ ಸಂಖ್ಯೆಯಷ್ಟು! (ಇದರಲ್ಲಿ ಏನೋ ಒಂದು ಗಣಿತೀಯ ಸಂಬಂಧವಿದ್ದಂತೆ ತೋರುತ್ತಿದೆ! ಅಂದರೆ ಇಲೆಕ್ಟ್ರಾನುಗಳ ಹಿಡಿಯಲು ಬೇಕಾದ ಬೆಳಕಿನ ಫ್ಲಾಷ್‌ ಸ್ಪೀಡ್‌ಗೂ-ಈಗಾಗಲೇ ಇಡೀ ಬ್ರಹ್ಮಾಂಡ ಕಳೆದಿರುವ ಸಮಯದ ಅಳತೆಗೂ ಇರುವ ಸಂಖ್ಯಾ ಸ್ವಾಮ್ಯ! ಇದು ಕೇವಲ ನನ್ನ ಊಹೆಯಷ್ಟೇ)  ತುಂಬಾ ಸರಳವಾದ ಸಾಪೇಕ್ಷತೆಯ ನಿದರ್ಶನ ಕೊಡಬೇಕೆಂದರೆ, ಕೋಣೆಯ ಒಂದು ತುದಿಯಿಂದ ಎದುರು ಗೋಡೆಗೆ ಬೆಳಕಿನ ಫ್ಲ್ಯಾಷ್ ಅನ್ನು ಕಳುಹಿಸುವುದಕ್ಕೆ ಸುಮಾರು ಹತ್ತು ಬಿಲಿಯನ್ ಆಟೊಸೆಕೆಂಡುಗಳು ಬೇಕು ಎಂದರೆ ಅದೆಷ್ಟು ಚಿಕ್ಕ ಅಳತೆಯ ಮೂಲಮಾನ ಎಂದು ಊಹಿಸಬಹುದು.

        ಫೆಮ್ಟೋಸೆಕೆಂಡ್ (femtosecond) ಅನ್ನು ತೀರಾ ಇತ್ತೀಚೆಗಿನವರೆಗೂ ಬೆಳಕಿನ ಹೊಳಪಿನ (ಫ್ಲ್ಯಾಷ್) ಮಿತಿ ಎಂದೇ ಪರಿಗಣಿಸಲಾಗಿತ್ತು. ಈಗಿರುವ ಯಾವುದೇ ತಂತ್ರಗಳೂ ಇಲೆಕ್ಟ್ರಾನ್‌ನ ಕಾಲಮಾನಗಳನ್ನು ಅಳೆಯಲು ಸಾದ್ಯವಾಗಿರಲಿಲ್ಲ. ಅದಕ್ಕಾಗಿ ಹೊಸತೇ ಆದ ಬಗೆಯೊಂದು ಬೇಕಾಗಿತ್ತು ಅದೇ ಈ ವರ್ಷದ ಪ್ರಶಸ್ತಿ ವಿಜೇತರು ಬಳಸಿ ನಿರ್ಮಿಸಿದ ಅಟೊಸೆಕೆಂಡ್ (Attosecond) ಭೌತವಿಜ್ಞಾನದ ಹೊಸ ಸಂಶೋಧನಾ ಕ್ಷೇತ್ರ.

      ಬೆಳಕು ವಿದ್ಯುತ್ ಮತ್ತು ಕಾಂತೀಯ ಕ್ಷೇತ್ರಗಳಲ್ಲಿನ ಕಂಪನಗಳಿಂದ ಅಲೆಗಳನ್ನು ಒಳಗೊಂಡಿರುತ್ತದೆ. ಅದು ನಿರ್ವಾತದಲ್ಲಿ ಎಲ್ಲಕ್ಕಿಂತ ವೇಗವಾಗಿ ಚಲಿಸುತ್ತದೆ.  ವಿವಿಧ ಬಣ್ಣಗಳ ಬೆಳಕು ವಿಭಿನ್ನ ತರಂಗಾಂತರಗಳನ್ನು ಹೊಂದಿರುತ್ತದೆ. ಉದಾಹರಣೆಗೆ, ಕೆಂಪು ಬೆಳಕು ಸುಮಾರು 700 ನ್ಯಾನೊಮೀಟರ್‌ಗಳ ತರಂಗಾಂತರವನ್ನು ಹೊಂದಿದೆ, ಇದು ಕೂದಲಿನ ಅಗಲದ ನೂರನೇ ಒಂದು ಭಾಗವಾಗಿದೆ ಮತ್ತು ಇದು ಪ್ರತಿ ಸೆಕೆಂಡಿಗೆ ಸುಮಾರು ನಾಲ್ಕು ನೂರ ಮೂವತ್ತು ಸಾವಿರ ಶತಕೋಟಿ ಬಾರಿ ಸುತ್ತುತ್ತದೆ. ಇನ್ನು ಅತ್ಯಂತ ಕಡಿಮೆ ಅಥವಾ ಚಿಕ್ಕ ಫ್ಲಾಷ್‌ ಅಥವಾ ಮಿಡಿತ (Pulse) ಎಂದರೆ ಒಂದು ಬೆಳಕಿನ ಅಲೆಯಲ್ಲಿ ಒಂದು ಆವರ್ತದ ಉದ್ದ, ಅದರಲ್ಲಿ ಅದು ಸುತ್ತು ತಿರುಗಿ ಮತ್ತದೇ ಸ್ಥಾನಕ್ಕೆ ಬರುವ ಕಾಲ. ಸುಮಾರು 1980ರ ದಶಕದವರೆಗೂ ಸಾಮಾನ್ಯವಾದ ಲೇಸರ್‌ಗಳಲ್ಲಿಯೂ ಇದು ಫೆಮ್ಟೋಸೆಕೆಂಡ್ (Femtosecond) ಮಾತ್ರವೇ ಸಾಧ್ಯ ಎಂದು ಕೊಳ್ಳಲಾಗಿತ್ತು. ಇದನ್ನು ದಾಟಲು ಸಾಧ್ಯವೇ ಇಲ್ಲ ಎಂದೂ ನಂಬಲಾಗಿತ್ತು.  ಆದರೀಗ ಅದನ್ನು ದಾಟಿ ಇನ್ನೂ ಚಿಕ್ಕ ಮಿತಿಯನ್ನು ಸಾಧಿಸಿದಾರೆ ಎಂಬುದೇ ಈ ಮೂವರ ಸಂಶೋಧನೆಯ ಸಾರ. ನಿಜಕ್ಕೂ ಹೇಗೆ ಪ್ರಯೋಗಗಳನ್ನು ಮಾಡಿದ್ದಾರೆ ಎಂಬುದು ಖಂಡಿತಾ ವಿವರಿಸಲು ಬಹು ಕಷ್ಟದ ಮಾತೇ ಸರಿ. ಇದನ್ನು ವಿವರಿಸುವ ಗಣಿತವು ಸರಿಯಾದ ಅಲೆಗಳ ಗಾತ್ರದಿಂದ ರೂಪಿತವಾಗಿದ್ದಲ್ಲಿ ಮತ್ತು ಸಾಕಷ್ಟು ಅಲೆಗಳನ್ನು ಬಳಸಿದರೆ ಮಾತ್ರವೇ ಬೇಕಾದ ತರಂಗಾಂತರವನ್ನು ಪಡೆಯಲು ಸಾಧ್ಯ ಎನ್ನುತ್ತದೆ. ಆಗ ಅತೀ ಕಡಿಮೆಯಾದ ಫ್ಲಾಷ್‌ಗಳಲ್ಲಿ ಹೆಚ್ಚು ಹೆಚ್ಚು ಕಡಿಮೆ ತರಂಗದೂರದ ಬೆಳಕನ್ನು ಒಗ್ಗೂಡಿಸಿ ಮಾಡಬಹುದಾಗಿದೆ.

ಲೇಸರ್‌ ಕೂಡ ಒಗ್ಗೂಡಿದ ಬೆಳಕೇ ಅಲ್ಲವೇ! ಇದನ್ನೆಲ್ಲಾ ಹೇಗೆ ಮಾಡಿದ್ದಾರೆ ಎನ್ನುವುದಕ್ಕಿಂತಾ ಏನು ಮಾಡಿದ್ದಾರೆ ಎನ್ನುವುದೇ ಈ ವಿಷಯದೊಳಗಿರುವ ಸೌಂದರ್ಯ. ಅನ್‌ ಲ್ಹೂಲಿಯೆ (Anne L’Huillier) ಅವರು 1980ರದಶಕದಲ್ಲಿ ಫ್ರಾನ್ಸ್‌ ನಲ್ಲಿದ್ದಾಗಲೇ ಇನ್‌ಫ್ರಾ ರೆಡ್‌ ಲೇಸರ್‌ ಅನ್ನು ಪ್ರತಿಕ್ರಿಯಿಸದ ಅನಿಲದೊಳಗೆ ಹಾಯಿಸಿ ಹೆಚ್ಚಿನ ಸಾಧ್ಯತೆಯನ್ನು ಕಂಡುಕೊಂಡರು. ಮುಂದೆ 1990ರ ದಶಕದಲ್ಲಿ ಸ್ವೀಡನ್‌ನ ಲುಂಡ್‌ ವಿಶ್ವವಿದ್ಯಾಲಯದಲ್ಲಿಯೂ ಇಂತಹದಕ್ಕೇ ಬೇಕಾದ ಸೈದ್ಧಾಂತಿಕ ತಳಹದಿಯನ್ನು ರೂಪಿಸಿದರು. ಪೈರಿ ಅಗಸ್ತಿನಿ (Pierre Agostini) ಅವರೂ ಸಹಾ 250 ಆಟೊಸೆಕೆಂಡುಗಳ ಸಾಧ್ಯತೆಯನ್ನು ಲೇಸರ್‌ ಬೆಳಕನ್ನು ವಿಭಜಿಸಿ ಹಾಯಿಸುವುದರ ಮೂಲಕ ಕಂಡುಕೊಂಡರು. ಜರ್ಮನಿಯ ಫೆರೆನ್‌ ಕ್ರುಜ್‌ (Ferenc Krausz) ಅವರೂ 650 ಆಟೊಸೆಕೆಂಡುಗಳ ಸಾಧಿಸಿ ಅಣುಗಳಲ್ಲಿ ಇಲೆಕ್ಟ್ರಾನುಗಳು ಎಳೆಯುವಿಕೆಯನ್ನು ದಾಖಲಿಸಿದರು.

       ಒಂದು ಮಾತಂತೂ ಸತ್ಯ. ಇದೆಲ್ಲಾ ಹೇಗೆ ಮಾಡಲಾಯಿತು ಎಂಬುದರ ವಿವರಣೆಯು ಸುಲಭದ ಮಾತಲ್ಲ. ಅದನ್ನು ವಿವರವಾಗಿ ಪ್ರೊಫೆಸರ್‌ ಫೆರೆನ್‌ ಕ್ರುಜ್‌ (Ferenc Krausz) ಅವರ ಮಾತುಗಳಲ್ಲೇ ಕೇಳಲು (https://youtu.be/6ZIUJb85BAQ?si=8Jbap-luHQ8X9rw0  ಲಿಂಕ್‌ ಬಳಸಿ) 15 ನಿಮಿಷದ ಈ ವೀಡಿಯೊ ನೋಡಬಹುದು.

ಈ ಹಿಂದೆ ಎಲೆಕ್ಟ್ರಾನ್‌ಗಳ ಅರಿಯುವಾಗ ಮಹತ್ತರವಾದ ಸಾಧನೆಯನ್ನು ವಿಜ್ಞಾನವು ಕಂಡಿತ್ತು. ಇದೀಗ ಅವುಗಳನ್ನು ಹಿಡಿಯಲು, ಅವುಗಳ ಚಲನೆಯನ್ನು ಕಾಣಲು ಸಾಧಿಸಿ ಮತ್ತೊಂದು ಸಾಧನೆಯ ಶಿಖರಕ್ಕೆ ಏರಿದೆ. ಇದು ಮುಂದೊಂದು ದಿನ ಕೇವಲ ನಿರ್ಜೀವಿ ವಸ್ತುಗಳಲ್ಲಿ ಇಲೆಕ್ಟ್ರಾನುಗಳ ಅರಿವನ್ನಷ್ಟೇ ಅಲ್ಲ, ಜೀವಿಗಳ ಕೋಶಗಳೊಳಗೂ ಇಲೆಕ್ಟ್ರಾನುಗಳ ಅರಿವಿನಿಂದ ಕಾಯಿಲೆಗಳ ಪತ್ತೆ ಹಚ್ಚುವ ಅಲ್ಲದೇ ಔಷಧಗಳನ್ನು ಗೊತ್ತಾದ ಕೋಶಕ್ಕೂ ತಲುಪಿಸುವ ಕುರಿತೂ ಆನ್ವಯಗಳು ಬರುವುದು ನಿಶ್ಚಿತ. 

ಪ್ರೊ. ಪೈರಿ ಅಗಸ್ತಿನಿ (Pierre Agostini) ಅವರು ಓರ್ವ ಫ್ರೆಂಚ್‌ ಭೌತವಿಜ್ಞಾನಿ. ಸದ್ಯಕ್ಕೆ ಅಮೆರಿಕದ ಒಹಿಯೊ ವಿಶ್ವವಿದ್ಯಾಲಯದಲ್ಲಿ ಎಮರೇಟಸ್‌ ಪ್ರಾಧ್ಯಾಪಕರಾಗಿದ್ದಾರೆ. ಅವರು ಪ್ರಮುಖವಾಗಿ ಎರಡು ಫೋಟಾನುಗಳ ಮುಖಾಮುಖಿಯಲ್ಲಿ ಆಟೊಸೆಕೆಂಡ್‌ ಮಿಡಿತವನ್ನು ಕಂಡುಕೊಂಡವರೆಂದು ಗುರುತಿಸಲಾಗುತ್ತದೆ.

ಪ್ರೊ. ಫೆರೆನ್‌ ಕ್ರುಜ್‌ (Ferenc Krausz) ಅವರು ಮೂಲತಃ ಹಂಗೇರಿಯವರು. ಪ್ರಸ್ತುತ ಜರ್ಮನಿಯ ಕ್ವಾಂಟಂ ಆಪ್ಟಿಕ್ಸ್‌ನ ಮ್ಯಾಕ್ಸ್‌ ಪ್ಲಾಂಕ್‌ ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದಾರೆ.

ಅನ್‌ ಲ್ಹೂಲಿಯೆ (Anne L’Huillier) ಅವರು ಫ್ರೆಂಚ್‌-ಸ್ವೀಡಿಶ್‌ ಹೆಣ್ಣು ಮಗಳು. ಪ್ರಸ್ತುತ ಸ್ವೀಡನ್‌ನ ಲುಂಡ್‌ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿದ್ದಾರೆ. ಇವರ ಆತ್ಯಂತಿಕ ಸಾಧನೆ ಎಂದರೆ ಅತ್ಯಂತ ಕಡಿಮೆ 170 ಆಟೊಸೆಕೆಂಡುಗಳ ಫ್ಲಾಷ್‌ ಅನ್ನು ರೂಪಿಸಿದವರಾಗಿದ್ದಾರೆ.  

ಈ ಮೂವರಿಗೂ CPUS ತನ್ನೆಲ್ಲಾ ಹಿತೈಷಿಗಳ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತದೆ.

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್‌

This Post Has 5 Comments

  1. Nataraj KS

    Very nice.well explained

  2. Sathish Kumar G

    ಅದ್ಭುತ ಬರಹ! ಎಷ್ಟು ಚೆನ್ನಾಗಿ ಕನ್ನಡದಲ್ಲಿ ಗ್ರಹಿಕೆಗೆ ನಿಲುಕುವಂತೆ ಬರೆದಿದ್ದಾರೆ!

  3. Bhuvaneswari

    Exemplary popular article writing skill.. We are indebted to Channesh sir for his dedication in presenting Nobel prize winning discoveries in understable way in our Kannada language…that too immediately (overnight )after announcement of individual Nobel prize announcement ( attosecond..?).. Thank you

  4. Kavita Guddad

    ನಿಮ್ಮ ಈ ಶುದ್ಧವಾದ ಕನ್ನಡಕ್ಕೆ ಮತ್ತು ಅದು ನಮಗೆ ಕೊಡುವ ‘ಇಂಗ್ಲಿಷ್ ನಲ್ಲೆ ಓದುತ್ತಿದ್ದೇವೆ ಎನ್ನುವ ಅನುಭವ ‘ ಕ್ಕೆ 🙏.

  5. Krishna FATTEPUR

    ಕನ್ನಡದಲ್ಲಿ ಅತಿ ಸರಳವಾಗಿ ಹಾಗು ಅರ್ಥ ಗರ್ಭಿತ ವಾಗಿ ನಮ್ಮೆಲ್ಲರಿಗೆ ತಿಳಿಸಿದ್ದಕ್ಕಾಗಿ ಧನ್ಯವಾದಗಳು.

Leave a Reply