ರಾಷ್ಟ್ರದ ಆಚರಣೆಗಳಿಗೆ ಆಪ್ತ ದೇಶದ ಗಣ್ಯರನ್ನು ಕರೆಸಿ ಆಚರಿಸುವುದು ರೂಢಿಯಲ್ಲಿದೆ. ನಮ್ಮ ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವದ ಆಚರಣೆಗಳ ಸುದ್ದಿಗಳಲ್ಲಿ ಈ ಬಗ್ಗೆ ಓದಿದ್ದೇವೆ, ದೂರದರ್ಶನಗಳಲ್ಲಿ ನೋಡಿದ್ದೇವೆ. ನಮ್ಮ ರಾಜ್ಯೋತ್ಸವದ ತಿಂಗಳಿನ ಸಸ್ಯಯಾನಕ್ಕೆ ಈ ವಾರದ ಸಸ್ಯಗಳನ್ನು ನೆರೆಯ ಮಹಾರಾಷ್ಟ್ರದ ವಿಜ್ಞಾನಿಗಳು ಕೊಡುಗೆಯಂತೆ ಸಂಶೋಧಿಸಿದ್ದಾರೆ. ಬೆಳಗಾವಿಯಲ್ಲಿ ರಾಜ್ಯೋತ್ಸವ ಆಚರಿಸಿದರೇ ಇಲ್ಲವೇ ಎನ್ನುವುದು ದೊಡ್ಡ ಸುದ್ದಿಯಾಗುತ್ತದೆ. ಆದರೆ ಮರಾಠಿ ವಿಜ್ಞಾನಿಗಳು ಕನ್ನಡ ನೆಲದಲ್ಲಿ ಎರಡು ಹೊಸ ಸಸ್ಯಗಳನ್ನು ಗುರುತಿಸಿ. ಹೆಸರಿಸಿ ವಿಜ್ಞಾನಲೋಕಕ್ಕೆ ಪರಿಚಯಿಸಿದ್ದು ಸುದ್ದಿಯಾಗುವುದು ದೂರದ ಮಾತೇ ಸರಿ. ನವೆಂಬರ್ ತಿಂಗಳಿನಲ್ಲಿ ಕೊಡುಗೆಯಾಗಿರುವ ಈ ಸಸ್ಯಗಳ ಕುರಿತು ಈ ವಾರದ ಸಸ್ಯಯಾನ.
ನಮಗೆ ಗಡಿನಾಡಿನ ವಿಚಾರದಲ್ಲಿ ತಮಿಳರಿಂದ ಜಲ ಸಂಪನ್ಮೂಲಕ್ಕೂ, ಮರಾಠರಿಂದ ನೆಲ ಸಂಪನ್ಮೂಲಕ್ಕೂ ನಿರಂತರವಾದ ತಿಕ್ಕಾಟಗಳು ಉಳಿದುಕೊಂಡಿವೆ. ತೆಲುಗರ ಜೊತೆ ಅಂತಹಾ ದೊಡ್ಡ ಸಮಸ್ಯೆಯನ್ನು ಕಾಣುವುದಿಲ್ಲ. ಕಾಸರಗೋಡಿನಲ್ಲಿ ಸಮಸ್ಯೆಯನ್ನು ಕರಾವಳಿಗೆ ಬಿಟ್ಟುಕೊಟ್ಟು ಅದು ನಮ್ಮದೇ ಅಲ್ಲಿದೆ ಅಷ್ಟೇ ಎಂದು ನಿರಾಳವಾಗಿದ್ದೇವೆ. ರಾಜ್ಯೋತ್ಸವ ತಿಂಗಳಲ್ಲಿ ಮರಾಠ ಗಡಿಯಲ್ಲಿ ಒಂದಷ್ಟು ಬಿಸಿ ಇದ್ದೇ ಇರುತ್ತದೆ. ಇಂತಹಾ ಸಮಯದಲ್ಲೇ ಮರಾಠಿ ವಿಜ್ಞಾನಿಗಳು ನಮ್ಮದೇ ನೆಲದ ಸಸ್ಯಗಳನ್ನು ಹೊಸದಾಗಿ ಗುರುತಿಸಿ, ನಮ್ಮೂರಿನ ಹೆಸರನ್ನೇ ಇಟ್ಟು ನಮ್ಮ ರಾಜ್ಯೋತ್ಸವಕ್ಕೆ ಭಿನ್ನವಾದ ಕೊಡುಗೆ ಕೊಟ್ಟಿದ್ದಾರೆ. “ವಿಜ್ಞಾನಕ್ಕೆ ಹೊಸ ಸೇರ್ಪಡೆ” ಎಂದೇ ಆ ವಿಜ್ಞಾನಿಗಳು ತಮ್ಮ ಸಂಶೋಧನಾ ಪ್ರಬಂಧದಲ್ಲಿ ಹೇಳಿಕೊಂಡಿದ್ದಾರೆ. ಅವರು ಗುರುತಿಸಿ ಹೆಸರಿಸಿದ ಹೊಸ ಸಸ್ಯಗಳಾದ್ದರಿಂದ ಅವುಗಳ ಬಳಕೆಯಾಗಲಿ, ಇತರೇ ಸಂಗತಿಗಳಾಗಲಿ ಇನ್ನೂ ತಿಳಿಯಬೇಕಿದೆ. ಆದರೆ ಅವುಗಳ ಸಸ್ಯವೈಜ್ಞಾನಿಕ ವಿವರಗಳಿಂದ ಮತ್ತು ನಮ್ಮದೇ ನೆಲದವಾಗಿ ಅವುಗಳಿಗಿರುವ ವಿಶೇಷತೆಗಳನ್ನು ಅರಿಯೋಣ. ಶಿವಾಜಿ ವಿಶ್ವವಿದ್ಯಾಲಯದ ಮರಾಠ ವಿಜ್ಞಾನಿಗಳನ್ನು ಅಭಿನಂದಿಸೋಣ. We shall congratulate scientists from Shivaji University, Kolhapur, Maharashtra.
ನಮ್ಮ ಗಡಿಭಾಗದ ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದ ಸಸ್ಯವಿಜ್ಞಾನ ವಿಭಾಗದ ಸಂಶೋಧಕರಾದ ಜಗದೀಶ್ ದಳವಿ(Jagadish Dalavi) ಶ್ರೀರಂಗ ಯಾದವ್ (Shrirang Yadav) ಮತ್ತು ವರ್ಷಾ ಜಾಧವ್ (Varsha Jadhav) ಅವರೆಲ್ಲರೂ ಒಂದು ತಂಡವಾಗಿ ನಮ್ಮ ರಾಜ್ಯದ ಬಾಗಲಕೋಟೆ ಜಿಲ್ಲೆಯ ಸಸ್ಯಸಂಪನ್ಮೂಲದ ಸರ್ವೆಯನ್ನು ಕೈಗೊಂಡಿದ್ದರು. ಕಳೆದ ವರ್ಷ ೨೦೧೮ರ ಜೂನ್ ಮತ್ತು ಸೆಪ್ಟೆಂಬರ್ ತಿಂಗಳ ನಡುವೆ ಸಂಶೋಧನೆಗಾಗಿ ಜಿಲ್ಲೆಯಾದ್ಯಂತ ಸುತ್ತಾಡಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಸಸ್ಯಗಳನ್ನು ಸಂಗ್ರಹಿಸಿದ್ದರು. ಈ ಶೋಧದ ಸಮಯದಲ್ಲಿ ರಾಜ್ಯದ ಬಾದಾಮಿ ಬೆಟ್ಟ-ಗುಡ್ಡಗಳ ಸ್ವಾಭಾವಿಕ ಅರಣ್ಯ ಪ್ರದೇಶಗಳಲ್ಲಿ ಸಂಗ್ರಹಿಸಿದ ಸಸ್ಯಗಳಲ್ಲಿ ಈವರೆಗೂ ಸಸ್ಯವಿಜ್ಞಾನದ ತಿಳಿವಿನಲ್ಲಿರದ ಎರಡು ಸಸ್ಯಗಳು ಪತ್ತೆಯಾಗಿದ್ದವು. ಆ ಸಸ್ಯಗಳೇ ಇಂದಿನ ಸಸ್ಯಯಾನದ ಹೀರೋಗಳು. ಅವುಗಳಿಗೆ ಅವರಿಟ್ಟ ವೈಜ್ಞಾನಿಕ ಹೆಸರುಗಳು ಪೋರ್ಚುಲಾಕಾ ಬಾದಾಮಿಕ(Portulaca badamica) ಮತ್ತು ಪೋರ್ಚುಲಾಕಾ ಲಕ್ಷ್ಮಿನರಸಿಂಹನೈನಾ (Portulaca lakshminarasimhaniana) ಹಾಂ! ಬಾದಾಮಿಕ ಎಂದು ಹೆಸರಿಸಲು ಬಾದಾಮಿಯ ಗುಡ್ಡ-ಬೆಟ್ಟಗಳು ಕಾರಣ ಎಂದು ಹೇಳಲೇಬೇಕಿಲ್ಲ. ನಮ್ಮ ಬಾದಾಮಿಯು ಅದರ ನೆಲೆಯಾಗಿದ್ದು ಆ ಪ್ರಭೇದದ ಹೆಸರಾಗಿದೆ. ಮತ್ತೊಂದು ಸಸ್ಯಕ್ಕೆ ಪುಣೆಯ ಹೆಸರಾಂತ ಸಸ್ಯವಿಜ್ಞಾನಿ ಲಕ್ಷಿನರಸಿಂಹ ಅವರ ಗೌರವಾರ್ಥ ಹೆಸರಿಸಿದ್ದಾರೆ. ಡಾ. ಲಕ್ಷ್ಮಿನರಸಿಂಹ ಅವರು ಭಾರತೀಯ ಸಸ್ಯವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆಯ ಪುಣೆಯ ಪ್ರಾಂತೀಯ ಕಛೇರಿಯಲ್ಲಿ ಮುಖ್ಯವಿಜ್ಞಾನಿಯಾಗಿದ್ದರು.
ಇಲ್ಲಿನ ಎರಡು ಸಸ್ಯಗಳು ನಮ್ಮ ಮನೆಯ ಹಿತ್ತಿಲಿನ ಗೋಣಿಸೊಪ್ಪು ಅಥವಾ ಬಚ್ಚಲಿನ ಸೊಪ್ಪು ಎಂದು ಕರೆಯುವ ಸಸ್ಯದ ಸಂಬಂಧಿಗಳು! ಗೋಣಿಸೊಪ್ಪಿಗೆ ವಿವಿಧ ಪ್ರದೇಶಗಳಲ್ಲಿ ಬೇರೆಯ ಹೆಸರಿನಿಂದ ಕರೆಯುತ್ತಿರಬಹುದು. ಆದರೆ ಗೋಣಿಸೊಪ್ಪು ಮತ್ತು ಬಚ್ಚಲಸೊಪ್ಪು ಎಂಬೆರಡು ಹೆಸರಂತೂ ಅನೇಕರಿಗೆ ತಿಳಿದಿದೆ. (ಚಿತ್ರವನ್ನು ನೋಡಿ). ಈ ಗೋಣಿಸೊಪ್ಪನ್ನು ಆಹಾರವಾಗಿ ಬಳಸಲಾಗುತ್ತದೆ. ಸಾಮಾನ್ಯವಾಗಿ ಸದಾ ಜೌಗು ಇರುವೆಡೆ ಇದನ್ನು ಕಾಣಬಹುದು. ಹಾಗಾಗಿಯೇ ಬಚ್ಚಲು ನೀರು ಹರಿಯುವಲ್ಲಿ ಇದನ್ನು ಕಾಣಬಹುದಾಗಿದ್ದು ಹಾಗೆ ಹೆಸರಿಸಿದ್ದಾರೆ. ನಮಗಾಗಲೇ ತಿಳಿದಿರುವ ಗೋಣಿಸೊಪ್ಪಿನ ಸಂಕುಲಕ್ಕೇ ಹೊಸದಾಗಿ ದೊರಕಿರುವ ಎರಡೂ ಸಸ್ಯಗಳೂ ಸೇರಿವೆ. ಈ ಪೋರ್ಚುಲಾಕಾ ಸಂಕುಲದ ಹತ್ತಾರು ಸಸ್ಯಗಳನ್ನು ವಿಲಿಯಂ ರಾಕ್ಸ್ ಬರ್ಗ್ ಕಾಲದಿಂದಲೂ ಭಾರತದಲ್ಲಿ ಗುರುತಿಸಲಾಗಿದೆ. ಹೊಸದಾಗಿ ಪತ್ತೆ ಹಚ್ಚಿ ಅವುಗಳನ್ನು ಸಸ್ಯ ವೈಜ್ಞಾನಿಕ ನಿಯಮಗಳಿಗೆ ಅನುಗುಣವಾಗಿ ವರ್ಗೀಕರಿಸಿ ಹೆಸರಿಸಲು ಸಾಕಷ್ಟು ಕಸರತ್ತು ಮಾಡಬೇಕಾಗುತ್ತದೆ. ಸಸ್ಯಗಳ ಸಂಗ್ರಹವಾದ ಮೇಲೆ ಅವೆಲ್ಲವನ್ನೂ ಒಪ್ಪವಾಗಿ ಹೋಲುವ ಇತರೇ ಸಸ್ಯಗಳೊಂದಿಗೆ ಸಮೀಕರಿಸಿ ಒಂದು ತೀರ್ಮಾನಕ್ಕೆ ಬರಬೇಕಾಗುತ್ತದೆ. ಆಗ ತೀರಾ ಹತ್ತಿರದ ಸಸ್ಯಗಳಿಗೆ ಹೋಲಿಸಿ ಹೊಸತಾದದ್ದು ಹೇಗೆ ಭಿನ್ನ ಎಂದು ವ್ಯವಸ್ಥಿತವಾಗಿ ವಿವರಿಸಬೇಕಾಗುತ್ತದೆ. ಅದೆಲ್ಲವನ್ನೂ ಮಹಾರಾಷ್ಟ್ರದ ವಿಜ್ಞಾನಿಗಳ ತಂಡ ನಿರ್ವಹಿಸಿದೆ. ಈ ಹಿಂದೆಯೇ ತಿಳಿದಂತೆ ಗೋಣಿಸೊಪ್ಪಿನ ಸಂಬಂಧಿಗಳೊಂದಿಗೆ ಹೋಲಿಸಿ ನೋಡಿ ಇವುಗಳೂ ಸಹಾ ಗೋಣಿಸೊಪ್ಪಿನ ಕುಟುಂಬವಾದ ಪೋರ್ಚುಲೇಸಿಯೆ ಎಂದು ತೀರ್ಮಾನಿಸಿ ವಿವರಿಸಿದ್ದಾರೆ. ಕನ್ನಡದ ನೆಲದ ಮರಾಠ ವಿಜ್ಞಾನಿಗಳ ಪತ್ತೆಯಾದ ಈ ಎರಡೂ ಹೊಸ ಸಸ್ಯಗಳ ಕೆಲವು ವಿವರಗಳನ್ನಿಲ್ಲಿ ನೋಡೋಣ.
ಪೋರ್ಚುಲಾಕಾ ಬಾದಾಮಿಕ(Portulaca badamica)
ಪೋರ್ಚುಲಾಕಾ ಸಂಕುಲದ ಬಹುಪಾಲು ಸಸ್ಯಗಳ ಕಾಂಡವು ಹಬ್ಬುವಂತಹಾ ನಡೆಯನ್ನು ಹೊಂದಿದ್ದು ಸಹಜವಾಗಿ ಗೋಣಿಸೊಪ್ಪಿನ ಕಾಂಡವನ್ನು ಹೋಲುತ್ತವೆ. ಬಾದಾಮಿಕವೂ ಹಾಗೇಯೇ ಆದರೆ ಎಲೆಗಳು, ಗಿಡದ ವಿನ್ಯಾಸ ಹಾಗೂ ಹೂವುಗಳ ರಚನೆಗಳಲ್ಲಿ ಸಾಕಷ್ಟು ಭಿನ್ನತೆಯಿದೆ. ಜೊತೆಗೆ ಗೋಣಿಸೊಪ್ಪು ಬಹುವಾರ್ಷಿಕ, ತಾವು ಗಮನಿಸಿರಬಹುದು ಸದಾ ನೀರು ಹರಿಯುವಲ್ಲಿ ಒಮ್ಮೆ ಬಂತೆಂದರೆ ಹಾಗೇ ವರ್ಷಾನುಗಟ್ಟಲೇ ಇರುವುದುಂಟು. ಆದರೆ ಬಾದಾಮಿಕ ಹಾಗಲ್ಲ. ಇದು ವಾರ್ಷಿಕ ಜೊತೆಗೆ ಹಬ್ಬುವ ಗುಣವಿಲ್ಲ. ಸಣ್ಣ ಗಿಡದಂತೆ ತುಸುವೇ ಎತ್ತರ. ಕೇವಲ 5ರಿಂದ 15 ಸೆಂ.ಮೀ ನಷ್ಟು ಮಾತ್ರವೇ ಎತ್ತರ. ಕೆಲವೊಮ್ಮೆ ಬಹುವಾರ್ಷಿಕವಾಗಿರುವ ಸಾಧ್ಯತೆಯೂ ಇದ್ದರೂ ಅಪರೂಪ ಎಂದು ಸಂಶೋಧಕರ ವರದಿ ಹೇಳುತ್ತದೆ. ಸಾಮಾನ್ಯವಾಗಿ ಮುಂಗಾರಿನ ಮೂರ್ನಾಲ್ಕು ತಿಂಗಳಲ್ಲೇ ಜೀವನ ಚಕ್ರವನ್ನು ಮುಗಿಸುತ್ತವೆ. ಈ ಬಾದಾಮಿಕ ಪ್ರಭೇದದ ಗಿಡವನ್ನು ಬಾದಾಮಿಯ ಸುತ್ತಲಿನ ಸ್ಥಳಿಯರು “ನಾಲಿಗಡ್ಡೆ” ಎಂದು ಕರೆಯುತ್ತಾರೆ. ಇದನ್ನು ಸ್ವಾಭಾವಿಕವಾಗಿ ಬೆಳೆಯುವ ವನ್ಯ ಪ್ರದೇಶಗಳಿಂದ ಸಂಗ್ರಹಿಸಿ ನಾವು ಗೋಣಿಸೊಪ್ಪನ್ನು ಬಳಸುವಂತೆಯೇ ಸಾರು-ಪಲ್ಯಗಳ ತಯಾರಿಯಲ್ಲಿ ಬಳಸುತ್ತಾರೆ. ಜೊತೆಯಲ್ಲಿ ದನಕರುಗಳ ಮೇವಾಗಿಯೂ ಬಳಕೆಯನ್ನು ಮಾಡುತ್ತಾರೆ.
ಬಾದಾಮಿಕ ಪ್ರಭೇದದ ಸಸ್ಯಗಳ ಹೂವುಗಳು ಮಾತ್ರ ವಿಶೇಷವಾದವು. ಇವುಗಳಲ್ಲಿ ಸಾಮಾನ್ಯವಾಗಿ ಎರಡು ಬಗೆಯವು. ಒಂದು ಬಗೆಯವು ಅರಳುವುದೇ ಇಲ್ಲ. ಅರಳದ ಹೂವುಗಳು (Cleistogamous flowers) ಮೊಗ್ಗಿನಂತೆಯೇ ಇದ್ದು ಒಳಗೆ ಸ್ವಕೀಯ ಪರಾಗಸ್ಪರ್ಶದಿಂದ ಬೀಜಗಟ್ಟುತ್ತವೆ. ಪ್ರತೀ ಕಾಯಿಯಲ್ಲಿ 20 ರಿಂದ 40 ಬೀಜಗಳಿರುವುದುಂಟು. ಒಂದು ವೇಳೆ ಹೂವುಗಳು ಅರಳಿದರೂ ಅರಳುವ ಹೂವಿನಲ್ಲಿ (Chasmogamous flowers) ಮುನ್ನವೇ ಪರಾಗಸ್ಪರ್ಶವಾಗಿರುತ್ತದೆ. ಹಾಗಾಗಿ ಹೂವುಗಳಿಗೆ ದುಂಬಿಗಳ ನೆರವೇನೂ ಬೇಕಿಲ್ಲ. ಅದಕ್ಕಾಗಿಯೇ ದುಂಬಿಗಳನ್ನು ಆಕರ್ಷಿಸುವಂತಹಾ ಸೊಗಸಿನ ಹೂವುಗಳೇನೂ ಅಲ್ಲ. ಆದರೂ ಪುಟ್ಟ, ಪುಟ್ಟ ಹೂವುಗಳಾದ ಇವುಗಳು ಸಾಮಾನ್ಯವಾಗಿ ಇತರೇ ಸಂಬಂಧಿಗಳಂತೆ ಕೆಂಪು ಅಥವಾ ಕೆಂಗುಲಾಬಿ ಬಣ್ಣದವಾಗಿರದೆ ಹಳದಿಯಾಗಿ ಇರುತ್ತವೆ. ಸದ್ಯಕ್ಕೆ ಈ ಬಾದಾಮಿಕ ಸಸ್ಯಗಳು ಬಾದಾಮಿಯ ಬೆಟ್ಟಗುಡ್ಡಗಳಲ್ಲಿ ಮಾತ್ರವೇ ಕಂಡು ಬರುತ್ತದೆ. ಆದರೂ ದಖ್ಖನಿನ ಇತರೆಡೆ ಇರುವ ಬಗೆಗೆ ಸಂಶೋಧಕರಿಗೆ ಸಕಾರಣವಾದ ಅನುಮಾನಗಳಿವೆ.
ಪೋರ್ಚುಲಾಕ ಲಕ್ಷ್ಮಿನರಸಿಂಹನೈನಾ (Portulaca lakshminarasimhaniana)
ನಮ್ಮದೇ ನೆಲದ ಈವರೆವಿಗೂ ಗುರುತಿಸಿ ಹೆಸರಿಸದ ಮತ್ತೊಂದು ಹೊಸ ಸಸ್ಯವಿದು. ಇದೂ ಸಹಾ ಗೋಣಿಸೊಪ್ಪಿನ ಸಂಬಂಧಿಯೇ! ಈ ಸಸ್ಯವು ಇತರೇ ಸಹ ಸಂಬಂಧಿಗಳಿಗಿಂತಾ ತುಸು ಭಿನ್ನವಾದುದು. ಗಿಡವು ಪೊದರಿನಂತೆ ಹಬ್ಬುವ ಗುಣವನ್ನು ಹೊಂದಿದೆ. ಇದರ ಎಲೆಗಳೂ ಮೃದುವಾಗಿದ್ದರೂ ಕಾಂಡವು ಸ್ವಲ್ಪ ಗಡುಸಾಗಿರುತ್ತದೆ. ಗಡುಸಾಗಿರುವುದರಿಂದ ಸ್ವಲ್ಪ ತೊಗಟೆಯನ್ನು ಹೊಂದಿರುವುದು ಈ ಪ್ರಭೇದದ ವಿಶೇಷ. ಇದು ಮುಕ್ಕಾಲು ಅಡಿಯಿಂದ ಎರಡೂವರೆ ಅಡಿಗಳ ಎತ್ತರದವರೆಗೆ ದಟ್ಟವಾಗಿ ಪೊದರಿನಂತೆ ಬೆಳೆಯುತ್ತದೆ. ಹೆಚ್ಚಾಗಿ ಬೆಟ್ಟ-ಗುಡ್ಡಗಳ ಕಲ್ಲು-ಬಂಡೆಗಳ ಬಿರುಕುಗಳಲ್ಲಿ, ಪೊದರುಗಳಲ್ಲಿ ತೀರಾ ಒಣ ವಾತಾವರಣದಲ್ಲಿ ಹಚ್ಚನೆಯ ಹರಹಿನಿಂದ ಕಾಣುತ್ತದೆ.
ಈ ಸಸ್ಯದ ಹೂವುಗಳು ಕೆಂಪು ಅಥವಾ ಕೆಂಗುಲಾಬಿ ಬಣ್ಣದವಾಗಿರುತ್ತವೆ. ಕೆಲವೊಮ್ಮೆ ಗೊಂಚಲುಗಳಾಗಿದ್ದು 2ರಿಂದ 4 ಹೂವುಗಳು ಒಟ್ಟಿಗಿರುತ್ತವೆ. ಈ ಸಸ್ಯದ ಹೆಚ್ಚಿನ ತಿಳಿವಳಿಕೆಯನ್ನು ಇನ್ನೂ ಸಂಶೋಧಿಸಬೇಕಿದೆ. ಆಡು-ಕುರಿಗಳು, ದನಕರುಗಳು ಮೇವಾಗಿ ಬಯಸುತ್ತವೆ. ಒಣ ನೆಲದ ಕಲ್ಲು ಬಿರುಕುಗಳಲ್ಲಿ ಹಚ್ಚನೆಯ ನೋಟವನ್ನು ಧಾರಾಳವಾಗಿ ಕೊಡುವ ಈ ಸಸ್ಯವು ದನಕರುಗಳಿಗೆ ಆಕರ್ಷಕವಾಗಿ ಕಾಣುವುದರಲ್ಲಿ ಅಚ್ಚರಿಯೇನಿಲ್ಲ.
ನಮ್ಮಲ್ಲಿ ಅನೇಕರಿಗೆ ತಿಳಿದಿರುವ ಗೋಣಿಸೊಪ್ಪು ಸಸ್ಯದ ಹಾಗೆ ಈ ಎರಡೂ ಸಸ್ಯಗಳೂ ಕೇವಲ ಸೀಮಿತ ಪ್ರದೇಶದ ಕೆಲವೇ ಜನ ಸಮುದಾಯಗಳಲ್ಲಿ ತಿಳಿದಿವೆ. ಬಹುಶಃ ಇದೇ ಕಾರಣಕ್ಕೆ ಹೆಚ್ಚು ಸಸ್ಯವಿಜ್ಞಾನದ ಅರಿವಿಗೆ ಈವರೆಗೂ ಬಂದಿಲ್ಲ. ಅದೂ ಅಲ್ಲದೆ ಬಾದಾಮಿಕದಂತೆ ಕೇವಲ 3-4 ತಿಂಗಳ ಜೀವನವನ್ನು ಹೊಂದಿದ್ದು ಬೇಗನೇ ಮರೆಯಾಗಿ ಮುಂದಿನ ವರ್ಷದ ಹೊಸ ಜೀವನಕ್ಕೆ ತಯಾರಾಗುತ್ತವೆ. ಹಾಗಾಗಿ ಕೂಡ ಹೆಚ್ಚು ತಿಳಿವಳಿಕೆಗೆ ಬಂದಿಲ್ಲ. ಇದೇ ಕಾರಣನ್ನು ಶಿವಾಜಿ ವಿಶ್ವವಿದ್ಯಾಲಯದ ವಿಜ್ಞಾನಿಗಳೂ ತಮ್ಮ ವಿವರಗಳಲ್ಲಿ ದಾಖಲಿಸಿದ್ದಾರೆ.
ನವೆಂಬರ್ ರಾಜ್ಯೋತ್ಸವದ ಸಂದರ್ಭಕ್ಕೆಂದು ಕರುನಾಡಿನ ಸಸ್ಯಗಳ ಬಗೆಗೆ ಹುಡುಕಾಟದ ಹಿನ್ನೆಲೆಯಲ್ಲಿ ಪರಿಚಯಗೊಂಡ ಸುದ್ದಿಯಿಂದ ತೀರಾ ಹೊಸ ಶೋಧವು ಬೆಳಕಿಗೆ ಬಂದಿತು. ಪ್ರಕಟವಾಗಿದ್ದ ಪ್ರಬಂಧವೂ ಸಿಕ್ಕದ್ದಲ್ಲದೆ, ಸಂಶೋಧಕರನ್ನೂ ಸಂಪರ್ಕಿಸಲು ಸಾಧ್ಯವಾಯಿತು. ಈ ಎರಡೂ ಸಸ್ಯಗಳ ಶೋಧದಲ್ಲಿ ಮುಖಂಡರಾಗಿದ್ದ ಡಾ. ಜಗದೀಶ್ ದಳವಿ ಅವರನ್ನು ಸಂಪರ್ಕಿಸಿದಾಗ ತಕ್ಷಣವೇ ಸ್ಪಂದಿಸಿದ್ದು ನಿಜಕ್ಕೂ ಸಂತೋಷದ ಸಂಗತಿ. ಡಾ. ದಳವಿ ಸ್ವತಃ ತೆಗೆದ ಚಿತ್ರಗಳನ್ನೂ ತಮ್ಮ ತಂಡದ ಸದಸ್ಯರ ಚಿತ್ರಗಳನ್ನೂ ಕಳಿಸಿ ಕರ್ನಾಟಕ ನೆಲದ ಒಡನಾಟದ ಖುಷಿಯನ್ನು ಹಂಚಿಕೊಂಡಿದ್ದಾರೆ. ಎಲ್ಲವೂ ಒಂದೇ ವಾರದಲ್ಲಿ ಒಂದು ಪವಾಡದಂತೆ ಜರುಗಿದ್ದು ಸಸ್ಯಯಾನದಲ್ಲಿ ಹೊಸ ಅನುಭವವನ್ನು ಕೊಟ್ಟಿತು. ಕರ್ನಾಕಟಕದ ಎಲ್ಲಾ ಸಸ್ಯಯಾನದ ಸಹಪಯಣಿಗರಾದ ಓದುಗರ ಹಾಗೂ ಇತರೇ ಎಲ್ಲಾ ಕನ್ನಡಿಗರ ಪರವಾಗಿ ಡಾ. ದಳವಿ ಮತ್ತವರ ತಂಡಕ್ಕೆ ಅಭಿನಂದನೆಗಳು. ಗಡಿ ನಾಡಿನಲ್ಲಿ ಹಜ ಸೌಹಾರ್ದಕ್ಕೆ ವಿಜ್ಞಾನದ ಕೊಡುಗೆಯಿದು.
On behalf of the people of Karnataka and special readers of “Sasyayana”, Centre for Public Understanding of Science wishes Dr. Jagadish Dalavi and his team all the very best for their scientific endeavours. I personally thank Dr. Dalavi for his speedy reply to make this article possible. We the people of Karnataka join to congratulate for a very great success of Faculty of Botany from Shivaji University. It is a most remarkable GIFT during Rajyotsava month.
(Photo Credits: Dr. Jagadish Dalavi, Shivaji University, Kolhapur, Maharashtra)
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್.
Congratulations for the team who discovered the plant habitats in Badami hills of Karnataka.
It is also we should appreciate the efforts made by Dr. Channesh for translation in Kannada instantly.