You are currently viewing ಮೊನಚಾದ ಹೊರ ಮೈಯ ಸೌತೆಯ ಸಂಬಂಧಿ ಹೀರೆ  Ridge Gourd (Luffa acutangula)

ಮೊನಚಾದ ಹೊರ ಮೈಯ ಸೌತೆಯ ಸಂಬಂಧಿ ಹೀರೆ Ridge Gourd (Luffa acutangula)

ಬಹುಪಾಲು ಸೌತೆಯ ಸಂಬಂಧಿಗಳ ಕಾಯಿಗಳ ಹೊರಮೈಯು ನುಣುಪಾಗಿರುತ್ತವೆ. ಕೆಲವು ಒರಟಾಗಿದ್ದರೂ, ಹೀರೆಯಂತಲ್ಲ. ಹೀರೆಯಾದರೋ ಕಾಯಿಯ ಮೇಲೆ ಮೊನಚಾದ ಉಬ್ಬಗಳು. ಅದೂ ಉದ್ದನೆಯ ಕಾಯಿ ಉದ್ದಕ್ಕೂ, ತೊಟ್ಟಿನಿಂದ ತುದಿಯ ತನಕ. ಅಡ್ಡ ಕೊಯ್ದ ಕಾಯಿಗಳ ನೋಟವಂತೂ ನಕ್ಷತ್ರದ ಹಾಗೆ. ಸೌತೆಗಳ ಸಂಬಂಧಿಕರು ಒಂದೆರಡಲ್ಲಾ.. ಸುಮಾರು 950ಕ್ಕೂ ಹೆಚ್ಚು ಪ್ರಭೇದಗಳಿವೆ. ಅನೇಕ ಪ್ರಭೇದಗಳ ಕಾಯಿಗಳು ನುಣುಪು, ಇಲ್ಲವೆ, ಕಾಯಿಯ ಉದ್ದಕ್ಕೂ ಗೆರೆ ಹಾಕಿದ ಹಾಗೆ ಗುರುತು. ಹೀರೆಯ ಹತ್ತಿರ ಸಂಬಂಧಿಯಾದ “ತುಪ್ಪದ ಹೀರೆ”ಯಲ್ಲಿ ಈ ಗುರುತುಗಳನ್ನು ತುಂಬಾ ಚೆನ್ನಾಗಿಯೇ ನೋಡಬಹುದು. ಕೆಲವು ಬಗೆಯ ಹಣ್ಣುಗಳಲ್ಲೂ ಸಿಪ್ಪೆಯ ಮೇಲೆ ಗುರುತುಗಳನ್ನು ನೋಡಬಹುದು, ಉದಾಹರಣೆಗೆ ಕರಬೂಜ.. ಮುಂತಾದವುಗಳಲ್ಲಿ!. ಸಾಮಾನ್ಯ ಸೌತೆಗಳಲ್ಲಿ ಯಾವ ಗುರುತೂ ಕಾಣದು. ಕೆಲವಂತೂ ಅಪ್ಪಟವಾದ ಒಂದೇ ಬಣ್ಣದ ಹೊರ ಮೈ, ಜೊತೆಗೆ ನುಣುಪಾಗಿಯೂ ಇರುತ್ತವೆ. ಹೀರೆ ಮಾತ್ರ ಒರಟು ಮತ್ತಷ್ಟು ಉಬ್ಬುಗಳು ಮೊನಚಾಗಿದ್ದು ಕೋನವನ್ನುಂಟು ಮಾಡಿದಂತಹಾ ಹೊರಮೈ ಆದ್ದರಿಂದ ಹೀರೆ ಪ್ರಭೇದದ ಹೆಸರೇ ಅಕ್ಯುಟಾಂಗುಲಾ (Acutangula). ಹೀರೆಯ ಸಸ್ಯ ವೈಜ್ಞಾನಿಕ ಹೆಸರು ಲಫಾ ಅಕ್ಯುಟಾಂಗುಲಾ (Luffa acutangula). ಹೀರೆಯ ಕುಟುಂಬವಾದ ಕುಕುರ್ಬಿಟೆಸಿಯೆ (Cucurbitaceae) ದಲ್ಲಿ ಹೀರೆಯ ಹತ್ತಿರ ಸಸ್ಯಗಳನ್ನು “ಲಫಾ” ಸಂಕುಲದಲ್ಲಿ ಗುರುತಿಸುತ್ತಾರೆ. ಲಫಾ (Luffa) ತಿನ್ನುವ  ಪದಾರ್ಥ ಎಂಬ ಅರ್ಥದ ಪರ್ಷಿಯನ್‌/ಅರಬ್ಬಿಯನ್‌ ಮೂಲದ ಪದ.

ಈ ಬಗೆಯ ಮೊನಚಾದ ಹೊರ ಮೈ ವಿಶೇಷವೂ  ಹೌದು. ಏಕೆಂದರೆ ಸಂಬಂಧಿಗಳೆಲ್ಲಾ ತುಂಬಾ ನುಣುಪಾಗಿಯೂ, ಇಲ್ಲವೇ ಸ್ವಲ್ಪವೇ ಒರಟಾಗಿಯೂ ಅಥವಾ ಕೇವಲ ಗುರುತನ್ನೂ ಹೊಂದಿರುವಂತಿವೆ. ಹಾಗಾಗಿ ಇದು ಆ ಕುಟುಂಬದ ಪ್ರಭೇದಗಳಲ್ಲಿ ಆರಂಭದಲ್ಲಿ ಅಥವಾ ಕೊನೆಯ ಪ್ರಭೇದವಾಗಿ ವಿಕಾಸಗೊಂಡಿರುವ ಸಾಧ್ಯತೆ ಇದೆ. ಸಂತಾನೋತ್ಪನ್ನದ ಭಾಗವಾದ ಕಾಯಿಯ ಮೇಲಿನ ಈ ಹೆಗ್ಗುರುತು “ಹೀರೆ”ಯನ್ನು ಹಿರಿದಾಗಿಸಿದೆ.

ಹೀರೆಯು ಇತರೇ ಸೌತೆಗಳಂತಲ್ಲ. ಇದನ್ನು ಬೇಯಿಸಿದಾಗ, ಹುರಿದಾಗ ಇದರ ರುಚಿ ಹೆಚ್ಚುತ್ತದೆ. ಕರಿದರೂ ಸಹಾ.. ಆದ್ದರಿಂದಲೇ ಹೀರೆಕಾಯಿಯ ಬಜ್ಜಿಗೂ ಕರಿದ ತಿನಿಸುಗಳಲ್ಲಿ ಮಹತ್ವವಿದೆ. ಸೌತೆಗಳು ಜಾಗತಿಕವಾಗಿದ್ದರೂ ಹೀರೆಯಂತೂ ಅಪ್ಪಟ ಭಾರತೀಯ. ಇದರ ವನ್ಯ ಸಂಬಂಧಿಗಳ ಬಹುಪಾಲು ಸದಸ್ಯರು ಭಾರತದಲ್ಲಿವೆ. ವಿಶೇಷವೆಂದರೆ ಅನೇಕ ವನ್ಯ ಹೀರೆ ತುಂಬಾ “ಕಹಿ”ಯಾಗಿರುತ್ತವೆ. ಅದಕ್ಕೆ ಕೆಲವೊಮ್ಮೆ ಮಾರುಕಟ್ಟೆಯಿಂದ ತಂದ ತರಕಾರಿ ಹೀರೆಯಲ್ಲೂ ಕಹಿ ಬರುವುದುಂಟು. ಅದಕ್ಕೆ ಮೊದಲು ಕಾಯಿಯನ್ನು ಕತ್ತರಿಸಿದಾಗ ಸ್ವಲ್ಪ ತಿರುಳನ್ನು ಬಾಯಲ್ಲಿಟ್ಟು ರುಚಿನೋಡುವುದು ರೂಢಿಯಲ್ಲಿದೆ. ತಿರುಳಿನ ರುಚಿ ಹಸಿಯಾಗಿದ್ದಾಗಲೇ ಸಿಹಿಯಾಗಿರುವುದುಂಟು. ಬಲಿಯುತ್ತಾ ಹೋದಂತೆ, ತಿರುಳೆಲ್ಲಾ “ಸ್ಪಂಜಿ”ನಂತಾಗುತ್ತದೆ. ತುಂಬಾ ಒರಟಾಗಿ ರೂಪಾಂತರಗೊಂಡು, ಬ್ರಷ್‌ ನಂತಾಗುತ್ತದೆ. ಒಣಗಿದ ತಿರುಳನ್ನು ಸ್ನಾನಕ್ಕೆ ಮೈಯುಜ್ಜಲು ಅಥವಾ ಹೆಣ್ಣು ಮಕ್ಕಳು ಆಭರಣಗಳ ತೊಳೆಯಲು ಬ್ರಷ್‌ ನಂತೆ ಬಳಸುತ್ತಾರೆ.  ಅದಕ್ಕೆ ಬಲಿಯಲು ಬಿಡದೇ ತಿನ್ನುವ ಕಾಯಿಗಳಲ್ಲಿ ಇದು ಬೆಂಡೆಯಂತೆ. ಚೀನಾ ಮುಂತಾದ ಕೆಲವೊಂದು ದೇಶಗಳಲ್ಲಿ ಇದನ್ನು “ಬಳ್ಳಿಯ ಬೆಂಡೆ” ಎಂದೂ ಕರೆಯುತ್ತಾರೆ. ಚೀನಿಯರಿಂದ ಪರಿಚಯಗೊಂಡ ಕೆಲವೆಡೆ ಇದನ್ನು “ಚೀನಾ ಬೆಂಡೆ” ಎಂದೂ ಕರೆಯುತ್ತಾರೆ.

ಈಗ ರಾಜ್ಯಾದ್ಯಂತ ಮಳೆಯ ಸಂಜೆಗಳು. ಹೀರೆಕಾಯಿಯ ಬಜ್ಜಿಯ ನೆನಪಿಸಿ ನಿಮಗೆ ನೀರೂರಿಸಿರಬಹುದು. ನಿಜ ಹೀರೆಯದು ವಿಶೇಷ ರುಚಿ. ಎಳೆದಾಗಿದಷ್ಟು ಹಿತವಾದ ರುಚಿಯನ್ನು, ಬಲಿಯುತ್ತಾ ಹೋದಂತೆ ರುಚಿಯಲ್ಲಿ ಹೊಸತೊಂದು ಪರಿಮಳವನ್ನೂ ಬೆರೆಸುತ್ತಾ ಬೆಳೆಯುತ್ತದೆ. ಇದನ್ನೆಲ್ಲಾ ಭಾರತೀಯ ಅಡುಗೆಯ ಬಹಳ ಚೆಂದಾವಗಿಯೇ ಗುರುತಿಸಿದೆ. ಈಗ ಸಾವಿರಾರು ವರ್ಷಗಳಿಂದ ನಮ್ಮ ನೆಲದಲ್ಲಿ ಹೀರೆಯು ಬೆಳೆಯುತ್ತಲೇ ಇದೆ, ಅಡುಗೆಯ ಮನೆಯನ್ನು ಸೇರುತ್ತಲೇ ಇದೆ, ಹಾಗೆ ಹೊಟ್ಟೆಯನ್ನೂ ಕೂಡ.

ಹೀರೆಯನ್ನು ಒಂದು ಸಸ್ಯವಾಗಿ ಅನೇಕ ಬಗೆಗಳಲ್ಲಿ ಭಾರತೀಯ ಮನಸ್ಸುಗಳು ಬಳಸಿಕೊಂಡಿವೆ. ಅಲಂಕಾರಿಕವಾಗಿ ಬೆಳೆಸುವುದರಿಂದ ಆರಂಭಗೊಂಡು, ಔಷಧೀಯ ಬಳಕೆಗಳವರೆಗೂ ಆಸಕ್ತಿಗಳು ವಿಕಾಸಗೊಂಡಿವೆ. ಹೀರೆಯ ಬಳ್ಳಿಯ ಚೆಲುವನ್ನು ಕಾಣಲು ಒಂದೇ ಬಳ್ಳಿಯಿರುವ ಮನೆಯ ಕಾಂಪೌಂಡನ್ನೋ ಅಥವಾ ಬೇಲಿಯಲ್ಲಿ ಬೆಳದ ಬಳ್ಳಿಯನ್ನೋ ನೋಡಬೇಕು. ಮಲೆನಾಡ ಹಿತ್ತಿಲು ಅಥವಾ ಮುಂದಿನ ಕೈತೋಟದ ಬೇಲಿಗಳಲ್ಲಿ ಹೀರೆಯ ಬಳ್ಳಿಗೆ ಖಾಯಂ ಸ್ಥಾನ. ಅದಕ್ಕೆ ಇರಬೇಕು, ನಮ್ಮ ಮಲೆನಾಡ ಕವಿ ಕುವೆಂಪು ಅವರಿಗೆ ಹೀರೆಯ ಹೂವು ಸ್ಪೂರ್ತಿ ಕೊಟ್ಟು ಕಾವ್ಯವನ್ನೇ ಬರೆಯಿಸಿಕೊಂಡಿದೆ.

“ಹೀರೆಯ ಹೂವು” ಎಂಬ ಶೀರ್ಷಿಕೆಯ ಕುವೆಂಪು ಅವರ ಕವನ ವಿಶಿಷ್ಟವಾದದ್ದು. ಬಹುಶಃ ಅನೇಕರಿಗೆ ಅಚ್ಚರಿಯೂ ಆದೀತು. 1946ರಷ್ಟು ಹಿಂದೆಯೇ ಇದು ಪ್ರಕಟವಾಗಿದೆ. ಕವಿಯ ಮನಸ್ಸು ಏನೂ ಮಾಡಲಾಗದೆ ಬೇಸರಗೊಂಡಿರುವಾಗ ಹುಟ್ಟಿಕೊಂಡ ಕಾವ್ಯ ಅದು.

ಮಾಡಲು ಏನೂ ಕೆಲಸವೆ ಇಲ್ಲ; ಓದಲು ಮನಸಿಲ್ಲ.                                         ಆಡುವೆನೆಂದರೆ ವಾಸುವು ಇಲ್ಲ;/ಹಾಡಲು ರಮೆಯಿಲ್ಲ

ಎಂದೇ ಆರಂಭವಾಗುವ ಸಾಲುಗಳಲ್ಲಿ ಕವಿಯ ಮನಸ್ಸು ಸುಮ್ಮನಿರಲೂ ಆಗದ ಸ್ಥಿತಿಯಲ್ಲಿ ಅಂಗಳದ ಹೀರೆಯ ಹೂವನ್ನು ನೋಡುತ್ತಾ, ಅದರ ಹಳದಿಯ ಬಣ್ಣಕ್ಕೆ ಮನಸೋತು ಅದರ ಕುರಿತೇ ಗೀತೆಯನ್ನು ಹಾಡಲು ಅಣಿಯಾಗುತ್ತದೆ.  “ತಾರೆಗೂ ಹೋಲಿಸಲಾಗದ ಹೂವನ್ನು, ದೇವರ ಪೂಜೆಗೂ ಕೊಯ್ಯಿಸಿಕೊಳ್ಳದ, ಯಾವ ಉಪಮೆಗಳಿಗೂ ಸಿಕ್ಕದ ಹೀರೆಯ ಮಹಿಮೆಯು ಕಾಯಾಗುವ ಧರ್ಮಕ್ಕೆ ಶರಣಾಗಿಸುವ ಕಾವ್ಯದ ರಸದೂಟವನ್ನು ಕವಿ ಕುವೆಂಪು ಕನ್ನಡಿಗರಿಗೆ ಬಡಿಸಿದ್ದಾರೆ. ಬೇಸರದ ಮನಸಿಗೆ ಮಾಡಲು ಏನಾದರೂ ಕೆಲಸವು ಸಿಗುವವರೆಗೂ, ಅದನ್ನೇ ನೋಡುವ, ಆಡುವ, ನಲಿಯುವ ಮುಕ್ತಾಯವನ್ನೂ ಸಹಾ!

ತಿಳಿ ಹಳದಿ ಮಿಶ್ರಿತ ಎಲೆಗಳು ದಟ್ಟ ಹಸಿರು ವರ್ಣದ ತುಸುವೇ ಒರಟಾ ಎಲೆಗಳ ಬಳ್ಳಿ ಹೀರೆಯದು. ಹಳದಿ ಬಣ್ಣದ ಹೂವುಗಳು, ಒಂದಲ್ಲ ಎರಡು ಬಗೆಯವು. ಗಂಡು ಹೂವುಗಳು ಗೊಂಚಲಾಗಿದ್ದರೆ, ಹೆಣ್ಣು ಹೂವುಗಳು ಒಂಟಿಯಾಗಿ ತುಂಟನೋಟದಲ್ಲಿ ತೆರೆದುಕೊಂಡಿರುತ್ತವೆ. ಬಳ್ಳಿಯ ಹಬ್ಬಲು ಸಹಾಯ ಮಾಡುವ ಬಳ್ಳಿಯ ಕುಡಿಯು (ಟೆಂಡ್ರಿಲ್‌- Tendril) ಕವಲೊಡೆದ ಬಗೆಯದು. ಹಾಗಾಗಿ ಬಳ್ಳಿಯೂ ಆಕರ್ಷಕವಾಗಿರುತ್ತದೆ. ಇದರ ಮಕರಂದದ ಗ್ರಂಥಿಗಳು ಸಹಜವಾಗಿ ಹೂವೊಳಗಿರುವ ಬದಲು ಹೂವುಗಳಿಂದ ಹೊರ ಭಾಗದಲ್ಲಿ ಇರುತ್ತವೆ. ಆದ್ದರಿಂದ ಹೂಗಳಿಗೆ ಭೇಟಿಕೊಡುವ ದುಂಬಿಗಳಲ್ಲದೆ, ಹೂವಿನ ಸುತ್ತಲೂ ಇರುವೆಗಳ ಸಾಲೂ ಇರಬಹುದು. ಒಟ್ಟಾರೆ ಹೀರೆಯು ಭಿನ್ನವಾಗಿಯೇ ಇರುವುದುಂಟು.  

ಹೀರೆಯು ತರಕಾರಿಯಾಗಿ ಇಡೀ ಏಶಿಯಾದಲ್ಲೇ ಜನಪ್ರಿಯವಾದುದು. ಭಾರತದ ಉಪಖಂಡದಲ್ಲಂತೂ ತುಂಬಾ ಹಿಂದಿನಿಂದಲೂ ಮನೆಗಳ ಹಿತ್ತಿಲ ಬಳ್ಳಿಗಳಲ್ಲಿ ಒಂದಾಗಿದೆ. ಇತ್ತೀಚೆಗೆಂತೂ ಇದು ತರಕಾರಿ ಬೆಳೆಯಾಗಿ ವಾಣಿಜ್ಯ ಉತ್ಪನ್ನವಾಗಿದೆ. ಹಿಂದಿನಿಂದಲೂ ಇದರ ಬೀಜಗಳನ್ನು ಹಂಚಿಕೊಂಡು ಕೈತೋಟಗಳ ನಿರ್ಮಿತಿಯಲ್ಲಿ ಒಂದಾಗಿತ್ತು. ಇದನ್ನು ಬೆಳೆಯುವುದೂ ಸುಲಭವೇ. ಬೀಜಗಳನ್ನು ಬಿತ್ತಿ ಹುಟ್ಟಿದ ಸಸಿಯು ಬಳ್ಳಿಯಾಗೆ ಬೆಳೆಯತೊಡಗಿದಾಗ ಹಬ್ಬಲು ಅವಕಾಶ ಕಲ್ಪಿಸಿಕೊಟ್ಟರೆ ಸಾಕು.. ಕಾಯಿಗಳು ಇಳಿಬಿದ್ದು ನೀಳವಾಗಿ ಬೆಳೆಯಲು ಅನುಕೂಲವಾಗುವಂತಿದ್ದರೆ ಒಳ್ಳೆಯದು.

ಹೀರೆಯ ಬಳ್ಳಿಯ ಎಳೆಯ ಎಲೆಗಳನ್ನೂ ತಿನ್ನಬಹುದಾಗಿದೆ. ಹೆಚ್ಚು ಬಳಕೆಯಲ್ಲಿ ಇರದಿರಬಹುದು. ಆದರೂ ಇಡೀ ಸಸ್ಯವು ತಿನ್ನಬಹುದಾಗಿದೆ. ಕಾಯಿಗಳು ಸಾಕಷ್ಟು ಆಹಾರಾಂಶಗಳನ್ನೂ ಹೊಂದಿದ್ದು, ನಮ್ಮ ಆರೋಗ್ಯದ ಹಿತದಲ್ಲಿ ಅನುಕೂಲಕರವಾಗಿವೆ. ಇಡೀ ಸಸ್ಯದ ಔಷಧೀಯ ಗುಣಗಳ ಬಗೆಗೆ ಹಲವು ಅಧ್ಯಯನಗಳು ನಡೆದಿದ್ದು, ಅನೇಕ ಆರೋಗ್ಯದ ಲಾಭಗಳನ್ನು ಗಮನಿಸಲಾಗಿದೆ. ಬಹು ಮುಖ್ಯವಾಗಿ, ಸಸ್ಯದಿಂದ ತಯಾರು ಮಾಡಿದ ಕಷಾಯವು ಮೆದುಳಿನ ಮೇಲೆ ಅನುಕೂಲಕರವಾದ ಪರಿಣಾಮಗಳನ್ನು ಬೀರುವ ಬಗೆಗೆ ನಿರೀಕ್ಷಿಸಲಾಗಿದೆ. ಆದ್ದರಿಂದ ಬಹಳ ಪ್ರಮುಖವಾಗಿ ಮೆದುಳಿನಲ್ಲಿ ರಕ್ತದ ಸಂಚಾರದ ತಡೆಯಿಂದ ಆಮ್ಲಜನಕವು ತಲುಪಲು ಅಡ್ಡಿಯಾಗಿ ಉಂಟಾಗುವ ಸೆರೆಬ್ರಲ್‌ ಇಷ್ಕಿಮಿಯಾ (Cerebral Ischemia) ದ ನಿವಾರಣೆಯಲ್ಲಿ ಇದರಿಂದ ಹೆಚ್ಚಿನ ಸಹಾಯವನ್ನು ನಿರೀಕ್ಷಿಸಲಾಗಿದೆ. ಹಲವು ಅಧ್ಯಯನಗಳು ಉರಿಯೂತದ (Inflammation) ಸಮಸ್ಯೆಗಳ ಮೇಲೂ ಪರಿಹಾರ ಒದಗುವ ಬಗೆಗೆ ಕಂಡುಕೊಂಡಿವೆ. ಆಯುರ್ವೇದವೂ ಸಹಾ ಹೀರೆಯ ಬಗೆಗಿನ ಔಷಧೀಯ ಲಾಭಗಳನ್ನು ಅನೇಕ ಸೂಕ್ಷ್ಮಾಣುಗಳ ನಿಯಂತ್ರಣದಲ್ಲಿ ಸಲಹೆ ಮಾಡುತ್ತದೆ.

ಒಂದು ತರಕಾರಿಯಾಗಿ ಹೀರೆಯು ಬಹಿಷ್ಕಾರ ಅಥವಾ ನಿರ್ಬಂಧಗಳನ್ನು ಒಳಗೊಂಡಿಲ್ಲ. ಬಗೆ ಬಗೆಯ ಅಡುಗೆಗಳ ಸಂಗಾತಿಯಾಗಿ, ಅನೇಕರ ಮನ ಗೆದ್ದಿದೆ. ಸೌತೆಯ ಸಂಬಂಧಿಗಳ ಕೊಟ್ಯಾಂತರ ರುಪಾಯಿಗಳ ವಹಿವಾಟಿನಲ್ಲಿ ಹೀರೆಯ ಪಾಲು ಹಿರಿದಾಗಿಯೇ ಇದೆ. ಇದರಲ್ಲಿನ ಹೆಚ್ಚು ನಾರಿನಂಶದ ಗುಣದಿಂದಾಗಿ ಹೆಚ್ಚು ಕ್ಯಾಲೊರಿಯನ್ನು ನೀಡದ ತರಕಾರಿಯಾಗಿಯೂ ಜನಪ್ರಿಯ. ಹಸಿಯದಾಗಿ, ಹುರಿದು, ಕರಿದು, ಬೇಯಿಸಿಯೂ ಹಲವು ತಿನಿಸಿಗಳಿಗೆ ಒಗ್ಗಿಕೊಂಡಿದೆ. ಆನೇಕ ಆಕಾರ ರುಚಿಗಳಿಂದಲೂ ಸಾಕಷ್ಟು ವಿವಿಧತೆಯನ್ನೂ ಹೊಂದಿದ್ದು ನಮ್ಮ ಪಾರಂಪರಿಕ ಅಡುಗೆ ಮನೆಯ ಮೆನುವಿನಲ್ಲಿ ಒಂದಾಗಿದೆ.

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್   

Leave a Reply