aಮಾನವರನ್ನೂ ಸೇರಿಸಿಕೊಂಡು ಈ ಜೀವಿಜಗತ್ತಿನ ಎಲ್ಲಾ ಬಹುಕೋಶಿಯ ಜೀವಿಗಳೂ ಏಕಕೋಶಿಯ ಪೂರ್ವಜರಿಂದಲೇ ವಿಕಾಸಗೊಂಡಿವೆ. ಅಂದ ಹಾಗೆ ಪ್ರತೀ ಜೀವಿಕೋಶವೂ ಸಂಕೀರ್ಣವಾಗುವಲ್ಲಿ ವಿವಿಧ ಹಾಗೂ ಸಾಕಷ್ಟೂ ಅತ್ಯಾಧುನಿಕ ಕಾರ್ಯವಿಧಾನಗಳನ್ನು ವಿಕಾಸಗೊಳಿಸಿಕೊಂಡೇ ಮುಂದುವರೆದಿವೆ. ಪ್ರತೀ ಹಂತದಲ್ಲೂ ಜೀವಿಕೋಶಗಳಲ್ಲಿನ ವರ್ತನೆಗಳ ಮಾಹಿತಿಯು ಆಯಾ ಕೋಶಗಳು ನಿರ್ಮಿಸಿರುವ ಅಂಗಾಂಶಗಳ ಕಾರ್ಯವನ್ನು ನಿರ್ವಹಿಸುವಂತೆ ನಿರ್ದೇಶಿಸುತ್ತವೆ. ಆದರೆ ಪ್ರತೀ ಜೀವಿಕೋಶದಲ್ಲೂ ಇರುವ ಕ್ರೋಮೊಸೋಮುಗಳ ಸಂಖ್ಯೆಯು ಒಂದೇ ಬಗೆಯಲ್ಲಿಯೇ ಇದ್ದು, ಎಲ್ಲವೂ ಒಂದೇ ಬಗೆಯ ಜೀನುಗಳನ್ನೂ ಹೊಂದಿದ್ದಲ್ಲದೆ, ಅಷ್ಟೇ ಬಗೆಯ ನಿರ್ದೇಶನಗಳನ್ನೂ ಹೊಂದಿರಲು ಸಾಧ್ಯವಿದೆ. ಆದಾಗ್ಯೂ ಜೀವಿಗಳ ಬೆಳವಣಿಗೆಯಲ್ಲಿ ವಿವಿಧ ಜೈವಿಕ ಚಟುವಟಿಕೆಗಳನ್ನು ನಡೆಸುವ ಅಂಗಾಂಶಗಳೂ, ಅಂಗಗಳೂ ವಿಕಾಸಗೊಂಡು ಕಾರ್ಯನಿರ್ವಹಿಸುವಂತೆ ಮಾಡುವ ನಿರ್ದೇಶನಗಳು ಹೇಗೆ ಉಂಟಾಗುತ್ತವೆ ಎಂಬುದು ಬಹು ದೊಡ್ಡ ಕುತೂಹಲವೇ ಸರಿ.
ಅಂದರೆ ಜೀವಿಗಳ ಬೆಳವಣಿಗೆಯಲ್ಲಿ ಜೀವಿಕೋಶಗಳು ವೃದ್ಧಿಯಾಗುತ್ತಲೇ, ವಿವಿಧ ಕಾರ್ಯಕ್ಷಮತೆಯ ಅಂಗಗಳ ರೂಪಿಸುವಂತೆ ಮತ್ತು ಆ ಅಂಗಗಳು ಆಯಾ ಜೀವಿಯ ಅಗತ್ಯಗಳಿಗೆ ತಕ್ಕಂತೆ ಕೆಲಸವನ್ನು ನಿರ್ವಹಿಸುತ್ತವೆ. ಉದಾಹರಣೆಗೆ ನಮ್ಮ ಸ್ನಾಯುಗಳ ಕೆಲಸವೇ ಬೇರೆ, ನರಕೋಶಗಳ ಕಾರ್ಯವಿಧಾನವೇ ಬೇರೆ, ಕಣ್ಣಿನ ಅಂಗಾಶವೇ ಮತ್ತೊಂದು ರೀತಿಯದು, ರಕ್ತಕಣಗಳ, ಮೆದುಳಿನ ಜಠರದ ಅಂಗಾಂಶಗಳ ವರ್ತನೆಗಳೇ ಭಿನ್ನವಾದವು. ಹೀಗೆ ಬೆಳೆಯುತ್ತಲೇ ನಿರ್ವಹಣಾ ನಿಯಮವನ್ನು ನಿರ್ದೇಶಿಸುವ ಬಗೆ ಹೇಗೆ? ಏಕೆಂದರೆ ಎಲ್ಲವುದರ ಕೆಲಸಗಳೂ ಬೇರೆ ಬೇರೆ, ಆದರೆ ಎಲ್ಲವೂ ಹೆಚ್ಚೂ ಕಡಿಮೆ ತಮ್ಮ ಪೂರ್ವದ ಕೋಶಗಳಲ್ಲಿ ಒಂದೇ ಬಗೆಯವು. ಈ ಬಗೆಯ ಅಭಿವೃದ್ಧಿ ಜೀವಿವಿಜ್ಞಾನದ ಕುತೂಹಲವನ್ನು ತಣಿಸಿದ್ದು, ಜೀನುಗಳ ರೆಗ್ಯೂಲೇಶನ್‌ಗಳು. ಅಂದರೆ ಜೀನುಗಳಲ್ಲಿ ನಿರ್ದೇಶನವನ್ನು ನಿರ್ವಹಿಸುವ ಮೈಕ್ರೊRNA ಎಂಬ ಸಂಯುಕ್ತಗಳ ಅನುಶೋಧಗಳ ಮೂಲಕ. ಈ ಮೈಕ್ರೊRNAಗಳನ್ನು ಮತ್ತು ಅವುಗಳಿಂದ ಜೀವಿಗಳ ಕಾರ್ಯವಿಧಾನಗಳ ವಿಧತೆಯನ್ನು ಕಂಡುಹಿಡಿದ ಅನುಶೋಧಕ್ಕೆ 2024ರ ಶರೀರಕ್ರಿಯಾ ವಿಜ್ಞಾನ ಅಥವಾ ವೈದ್ಯಕೀಯ ನೊಬೆಲ್ ಬಹುಮಾನವನ್ನು ನೀಡಲಾಗಿದೆ. ಪ್ರೊ. ವಿಕ್ಟರ್ ಅಂಬ್ರೊಸ್ ಮತ್ತು ಪ್ರೊ ಗ್ಯಾರಿ ರೆವ್ಕಿನ್ ಎಂಬ ಇಬ್ಬರು ವಿಜ್ಞಾನಿಗಳು ತಮ್ಮ ಪೊಸ್ಟ್‌ಡಾಕ್ಟೊರಲ್ ಅಧ್ಯಯನದಲ್ಲಿ ಸಹಪಾಠಿ ಸಂಶೋಧಕರು. ತುಂಬಾ ಸಂಕೀರ್ಣವಾದ ಈ ಸಂಶೋಧನೆಗಳ ಒಂದಷ್ಟು ವಿವರಗಳು ಈ ಮುಂದಿವೆ.
ಜೀನುಗಳ ರೆಗ್ಯೂಲೇಶನ್
ನಮ್ಮನ್ನೂ ಸೇರಿದಂತೆ ಎಲ್ಲಾ ಸಂಕೀರ್ಣ ಜೀವಿಗಳ ವಿವಿಧ ಅಂಗಗಳು ಬಗೆ ಬಗೆಯ ಜೀವಿಕೋಶಗಳಿಂದ ಮಾಡಲ್ಪಟ್ಟಿವೆ. ಆದರೆ ಅವುಗಳೆಲ್ಲವೂ ಒಂದೇ ಬಗೆಯ/ಹೋಲಿಕೆಯಾಗುವಂತಹಾ ಆನುವಂಶೀಯ ವಿವರಗಳನ್ನು ಹೊಂದಿವೆ. ಆದಾಗ್ಯೂ ವಿವಿಧ ಕೆಲಸಗಳ ನಿರ್ವಹಣೆಯ ಜವಬ್ದಾರಿಯನ್ನು ಹೊಂದಿದ್ದು ಅದಕ್ಕೆ ಬೇಕಾದ ನಿರ್ದೇಶನಗಳ ಪ್ರೊಟೀನುಗಳನ್ನು ನಿರ್ಮಿಸಿಕೊಳ್ಳುತ್ತವೆ. ಈ ಪ್ರೊಟೀನುಗಳು ಡಿ.ಎನ್.ಎ. ಯಿಂದ ಆರ್.ಎನ್.ಎ.ಗೆ ಬಂದ ಮಾಹಿತಿಗೆ ಅನುಗುಣವಾಗಿ ನಿರ್ಮಾಣಗೊಳ್ಳುತ್ತವೆ. ಅವುಗಳ ಅಂತಿಮ ಗುರಿಗಳು ಮಾತ್ರ ತೀರಾ ಭಿನ್ನವಾಗಿ ಕೊನೆಗೊಳ್ಳುತ್ತವೆ. ಅಂದರೆ ಎಲ್ಲವೂ ವಿಶೇಷ ಕಾರ್ಯಕ್ಷಮತೆಯನ್ನು ವಿಕಾಸಗೊಳಿಸಿಕೊಂಡಂತೆ ಕಾಣುತ್ತವೆ. ಹೀಗೆ ಜೀವಿ ಅಭಿವೃದ್ಧಿ ವಿಕಾಸದಲ್ಲಿ ಆನುವಂಶಿಕ ಸಮಾಗಮ ಸಂಕೀರ್ಣವಾಗಿಯೂ ಸುಲಲಿತವಾಗಿ ನಡೆದುಕೊಂಡು ಬರುತ್ತಿದೆ. ಮಾನವರ ಜೀನೋಮು ಸರಿ ಸುಮಾರು 20,000 ಜೀನುಗಳನ್ನು ಹೊಂದಿದ್ದು, ಅವುಗಳು ಒಟ್ಟಾರೆಯಾಗಿ ನಿರ್ವಹಣೆಯನ್ನು ಮಾಡುತ್ತಿವೆ ಆದರೆ ಪ್ರತೀ ಜೀನೂ ವರ್ತನೆಯನ್ನು ನಿರ್ವಹಿಸುವಾಗ ಮೈಕ್ರೊRNAಯ ನಿರ್ದೇಶನದಲ್ಲಿ ಭಿನ್ನತೆಯನ್ನು ಸಾಧಿಸಿದೆ ಎಂಬುದು ಈ ಸಂಶೋಧನೆಯ ಸಾರ. ಸಾವಿರಾರು ಮೈಕ್ರೊRNAಗಳು ಇಂತಹಾ ಕೆಲಸವನ್ನು ತುಂಬಾ ಶಿಸ್ತು ಬದ್ಧವಾಗಿ ನಡೆಸಿಕೊಂಡು ಸಂಕೀರ್ಣ ಜೀವಿಗಳ ಜೀವನನ್ನು ಸಾಧ್ಯಮಾಡಿವೆ.
ಅಯ್ಯೋ ಕೇಳಲು ಕಥೆಯೇನೋ ಸರಿಯೇ! ಇದನ್ನು ನಂಬಲು ಸಾಧ್ಯವಾಗಿದ್ದು ಹೇಗೆ? ಅದಕ್ಕೊಂದು ಸಂಶೋಧನಾ ಪುರಾವೆ ಬೇಡವೇ? ನಿಜ! ಪ್ರತಿ ಜೀನ್ ಯಾವಾಗ ಮತ್ತು ಎಲ್ಲಿ ಇರಬೇಕು ಎಂಬುದರ ನಿಯಂತ್ರಣವು ಆರ್‌ಎನ್‌ಎಗೆ ತಿಳಿಸಲ್ಪಟ್ಟು (Transcribtion) ಮತ್ತು ಅದರಿಂದ ಪ್ರೊಟೀನ್ ಆಗಿ ನಿರ್ಮಿತಿಯಾಗಲು ತಿಳಿಸುವ (Translation) ಜೈವಿಕ ಮಾಹಿತಿಯ ನಿರ್ವಹಣೆಯು ಜೀವ ಜಗತ್ತಿನ ನಿರ್ವಹಣೆಯ ಮೂಲಭೂತ ಅಂಶವಾಗಿದೆ. ಇದರ ಆರಂಭಿಕ ಅನುಶೋಧವು 1960ರ ದಶಕದ ಪ್ರಶ್ನೆಗಳಲ್ಲಿ ಉದ್ಬವವಾಗಿತ್ತು. ಜೀನುಗಳ ರೆಗ್ಯೂಲೇಶನ್ ಹೇಗಾಗುತ್ತವೆ ಎಂಬುದರ ಅಧ್ಯಯನಕ್ಕೆ ೧೯೬೫ರಲ್ಲಿ ನೊಬೆಲ್ ಪ್ರಶಸ್ತಿಯನ್ನೂ ಕೊಡಿಸಿತ್ತು. ಆದರೆ ಮುಂದೆ ಅದನ್ನು ಬಹುಕೋಶಿಯ ಜೀವಿಗಳಿಗೆ ಆನ್ವಯಿಸಲು ಏಕಕೋಶಿಯ ಅಧ್ಯಯನಗಳ ಆನುವಂಶೀಯ ವಿವರಗಳಿಂದ ಸಾಧ್ಯವಾಗಿರಲಿಲ್ಲ. ಆಗ ನೆರವಾಗಿದ್ದೇ Caenorhabditis elegans (C. elegans) ಎಂಬ ದುಂಡಾಣು (Nematode) ಈ ನೆಮಟೋಡನ್ನು ಮೊಟ್ಟ ಮೊದಲು ಬಳಸಿದ್ದು ಸಿಡ್ನಿ ಬ್ರೆನರ್ (Sydney Brenner) ಎಂಬ ಜೀವಿವಿಜ್ಞಾನಿ. ಈ ಜೀವಿಯ ಜೀವನ ಚಕ್ರವು ಚಿಕ್ಕದಾಗಿದ್ದು, ಅಧ್ಯಯನಕ್ಕೆ ಯೋಗ್ಯವಾದ ಹಾಗೂ ಆನುವಂಶೀಯ ಸಾಧ್ಯತೆಗಳನ್ನು ಹೊಂದಿದೆ. ಸಿಡ್ನಿ ಬ್ರೆನರ್ (Sydney Brenner) ಅವರ ತಂಡಕ್ಕೂ 2002ರಲ್ಲಿ ಈ ಜೀವಿಕೋಶಿಯ ಅಭಿವೃದ್ಧಿಯ ಅನುಶೋಧಕ್ಕೆ ನೊಬೆಲ್ ಬಹುಮಾನ ಬಂದಿತ್ತು.
ಇವರಿಂದ ಅಧ್ಯಯನ ವಿಧಾನಗಳ ವಿಕಾಸಗೊಳಿಸಿ ದುಂಡಾಣುವಿನ ಭಿನ್ನ ಭಿನ್ನ ತಳಿಗಳನ್ನು ಪಡೆದುಕೊಂಡು ಮುಂದುವರೆಸಿದವರು ಪ್ರೊ. ವಿಕ್ಟರ್ ಅಂಬ್ರೊಸ್ ಮತ್ತು ಪ್ರೊ ಗ್ಯಾರಿ ರೆವ್ಕಿನ್. ಈ ಇಬ್ಬರೂ 1980ರ ದಶಕದಲ್ಲಿ ರಾಬರ್ಟ್ ಹೊರ್ವಿಜ್ (Robert Horvitz) ಅವರ ಪ್ರಯೋಗಾಲಯದಲ್ಲಿ (ಇವರಿಗೆ 2002ರಲ್ಲಿ ಸಿಡ್ನಿ ಬ್ರೆನ್ನರ್ ಜೊತೆಗೆ ನೊಬೆಲ್ ಬಂದಿತ್ತು) ಪೋಸ್ಟ್‌ಡಾಕ್ಟೊರಲ್ ಸಂಶೋಧನೆಗೆ ಜೊತೆಯಾಗಿದ್ದರು. ಸುಮಾರು ಕೇವಲ 1 ಮಿ.ಮೀ. ಅಷ್ಟೇ ಉದ್ದವಿರುವ C. elegans ಎಂಬ ದುಂಡಾಣು (Nematode) ಅನ್ನು ಬಳಸಿ ಅವುಗಳಿಗೆ ಇರುವ ಜೀವಿಕೋಶ ವಿವಿಧತೆಯ ಸಾಧಿಸುವ ಗುಣವನ್ನು ಇತರೇ ಜೀವಿಗಳಿಗೆ ಹೋಲಿಕೆಯಾಗುವ ಸಮೀಕರಣದಲ್ಲಿ ಯಶಸ್ವಿಯಾದರು. ಈ ಇಬ್ಬರೂ ಸಂಶೋಧಕರೂ ಹೇಗೆ ಜೀನುಗಳು ಕಾರ್ಯೋನ್ಮುಖವಾಗುತ್ತವೆ, ಅವು ಹೇಗೆ ಕಾಲಕ್ಕೆ ತಕ್ಕದಾಗಿ ಸ್ಪಂದಿಸುತ್ತವೆ, ಅದನ್ನು ಸಮೀಕರಿಸಿ ಹೇಗೆ ಆನುವಂಶೀಯ ಕೆಲಸಗಳನ್ನು ನಿರ್ದೇಶಿಸುತ್ತವೆ ಎಂಬ ಪ್ರಶ್ನೆಗೆ ಉತ್ತರ ಹುಡುಕುವಲ್ಲಿ ಯಶಸ್ವಿಯಾದರು.
ಪ್ರೊ. ವಿಕ್ಟರ್ ಅಂಬ್ರೊಸ್ ಜೀನಿನ ಕ್ಲೋನಿಂಗ್ ಅಲ್ಲಿ ಯಶಸ್ವಿಯಾಗಿದ್ದಲ್ಲದೆ, ಆ ಕ್ಲೋನ್ ಅಚ್ಚರಿ ಎನಿಸುವ ಉದ್ದಳತೆಯನ್ನು ಹೊಂದಿತ್ತು ಅಂದ ಹಾಗೆ ಉದ್ದಳತೆ ತೀರಾ ಚಿಕ್ಕದಾಗಿತ್ತು. ಇದು ಮೈಕ್ರೊRNA ಗೆ ಸಿಕ್ಕ ಕುತೂಹಲವಾಗಿತ್ತು. ಮತ್ತೊಂದು ಪೂರಕ ಅಧ್ಯಯನದಲ್ಲಿ ಪ್ರೊ. ಗ್ಯಾರಿ ಮತ್ತೊಂದು ಮ್ಯುಟೇಶನ್‌ಗೊಳಿಸಿದ ತಳಿಯಲ್ಲಿ ಜೀನಗಗ ರೆಗ್ಯುಲೇಶನ್ ಗುರುತಿಸಿದ್ದಲ್ಲದೆ, ಆಂಬ್ರೊಸ್ ಅವರ ತಳಿಯಲ್ಲಿ ಸಾಧ್ಯವಾಗಿದ್ದ ವರ್ತನೆಗೆ ಸಮೀಕರಿಸುವಂತಹಾ ಉತ್ತರಗಳು ಬೇರೆಯದೇ ಮ್ಯುಟೇಶನ್ ಆದ ತಳಿಯಲ್ಲೂ ತೋರಿಸಿಕೊಟ್ಟರು. ಹಾಗಾಗಿ ಪ್ರೊ. ವಿಕ್ಟರ್ ಅಂಬ್ರೊಸ್ ಮತ್ತು ಪ್ರೊ ಗ್ಯಾರಿ ರೆವ್ಕಿನ್ ಜೊತೆಯಾಗಿ ಮುಂದುವರೆಸಿದ ಅಧ್ಯಯನಗಳಲ್ಲಿ ಒಬ್ಬರ ತಳಿಯ ಮೈಕ್ರೊRNA ಮತ್ತೊಬ್ಬರ ತಳಿಯ ಆನುಕ್ರಮಣಿಕೆಯಲ್ಲಿ ಪೂರಕವಾದ ವಿನ್ಯಾಸವನ್ನು ಹೊಂದಿತ್ತು. ಇದರಿಂದ ಮೈಕ್ರೊRNAಯು ಈ ಬಗೆಯಲ್ಲಿ ಉತ್ತರಕೊಡುವ ಹಾಗೂ ಅಭಿವೃದ್ಧಿ ಜೀವಿಜ್ಞಾನದ ಕುತೂಹಲಕರ ಅನುಮಾನಗಳಿಗೆ ಉತ್ತರವನ್ನು ನೀಡಿತ್ತು. ಇಬ್ಬರೂ ಈ ಪೂರಕ ಸಂಶೋಧನಾ ವರದಿಗಳು ಒಂದೇ ಪತ್ರಿಕೆ (Cell)ಯಲ್ಲಿ 1993ರಲ್ಲಿ ಪ್ರಕಟವಾಗಿದ್ದವು.
ಈ ಅಚ್ಚರಿಯ ವಿಭಿನ್ನ ತಿಳಿವಳಿಕೆಯ ಫಲಿತಗಳಿಗೆ ಜೀವಿ ವಿಜ್ಞಾನ ಆ ಕ್ಷಣದಲ್ಲೆನೋ ಮೌನವಾಗಿಯೇ ಉತ್ತರಿಸಿತ್ತು. ಆದರೆ ಮುಂದುವರಿದ ಪ್ರೊ ಗ್ಯಾರಿ ರೆವ್ಕಿನ್ ಅವರ ಅಧ್ಯಯನಗಳಿಂದ 2000ದ ನಂತರ ಜೀವಜಗತ್ತು ಬೆರಗಿನಿಂದ ನೋಡತೊಡಗಿತು. ಇವರ ಅಧ್ಯಯನಗಳು ಮತ್ತೊಂದು ತಳಿಯಲ್ಲೂ ಮೈಕ್ರೊRNAಯು ನೀಡಿದ ಫಲಿತಗಳನ್ನು ಒಳಗೊಂಡಿದ್ದವು. ಇದೀಗ ಈ ತಿಳಿವಳಿಕೆಯು ಜೀವಿಜಗತ್ತಿನ ಅಧ್ಯಯನಗಳಲ್ಲಿ ಅಭಿವೃದ್ಧಿ ವಿಕಾಸ ಆನುವಂಶಿಕ ವಿವರಗಳಲ್ಲಿ ವ್ಯಕ್ತ ಪಡಿಸಲು ಸಾಧ್ಯವಾಗಿದೆ. ಇದರಿಂದಾಗಿ ಮಾನವರಲ್ಲೂ ಸಹಸ್ರಾರು ಮೈಕ್ರೊRNAಯ ವಿಭಿನ್ನ ವರ್ತನಾ ವಿಶೇಷಗಳನ್ನು ಗುರುತಿಸಿದೆ.
ಪ್ರೊ. ವಿಕ್ಟರ್ ಅಂಬ್ರೊಸ್ ಅಮೆರಿಕದ ನ್ಯೂ ಹ್ಯಾಂಪ್‌ಶೈರ್ ನ ಹಾನೋವರ್ ನಲ್ಲಿ 1953 ರಲ್ಲಿ ಜನಿಸಿದರು. ಅವರು ಎಂ.ಐಟಿ. (Massachusetts Institute of Technology (MIT) ಯಲ್ಲಿ ಪಿ.ಎಚ್.ಡಿ ಮಾಡಿ ಅಲ್ಲಿಯೇ ಪೋಸ್ಟ್ ಡಾಕ್ಟೊರಲ್ ಸಂಶೋಧನೆಯನ್ನು ನಡೆಸಿದರು. ಮುಂದೆ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಯನ್ನು ಮುಂದುವರೆಸಿದರು. ಸದ್ಯಕ್ಕೆ ಅವರು ಮಾಸಾಚುಸೇಟ್ಸ್ ವಿಶ್ವವಿದಾಲಯದ ಮೆಡಿಕಲ್ ಸಂಸ್ಥೆಯಲ್ಲಿ ಪ್ರೊಫೆಸರ್ ಆಗಿದ್ದಾರೆ.
ಪ್ರೊ ಗ್ಯಾರಿ ರೆವ್ಕಿನ್ ಅವರು 1952ರಲ್ಲಿ ಕ್ಯಾಲಿಫೋರ್ನಿಯಾದ ಬರ್ಕ್ಲಿಯಲ್ಲಿ ಜನಿಸಿದರು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಮಾಡಿ ಮುಂದೆ (Massachusetts Institute of Technology (MIT) ಪೋಸ್ಟ್ ಡಾಕ್ಟೊರಲ್ ಸಂಶೋಧನೆಯನ್ನು ನಡೆಸಿದರು. ಇದೀಗ ಹಾರ್ವರ್ಡ್ ಮೆಡಿಕಲ್ ಸಂಸ್ಥೆಯಲ್ಲಿ ಜೆನೆಟಿಕ್ಸ್ ಪ್ರೊಫೆಸರ್ ಆಗಿದ್ದಾರೆ.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್