ಪಿರಿಯಾಡಿಕ್ ಟೇಬಲ್ ರಸಾಯನವಿಜ್ಞಾನದಲ್ಲಿ ಬಹು ದೊಡ್ಡ ಪರಿಕಲ್ಪನೆ! ಅಂತಹದ್ದೊಂದರ ಸಾಧ್ಯತೆಯ ಊಹೆಯನ್ನು ಮಾಡಿ ಇಡೀ ವಿಶ್ವದ ರಸಾಯನಿಕ ಮೂಲವಸ್ತುಗಳನ್ನು ಊಹಿಸಿ ಜೋಡಿಸಿ ವಸ್ತುಗಳ ಸೌಂದರ್ಯವನ್ನು ಅನಾವರಣ ಮಾಡಿದ ಕೀರ್ತಿ ಮೆಂಡೆಲೀಫ್ ಅವರಿಗೆ ಸಲ್ಲುತ್ತದೆ. ಸುಮಾರು 1869ರಲ್ಲೇ ಪಿರಿಯಾಡಿಕ್ ಟೇಬಲ್ (ಆವರ್ತ ಕೋಷ್ಟಕ) ಅನ್ನು ಪ್ರಸ್ತಾಪಿಸಿದಾಗಿನಿಂದ ಇಲ್ಲಿಯವರೆಗೂ ವಿಸ್ತೃತವಾಗಿ ವಿಕಾಸಗೊಂಡ ಅದು ರಸಾಯನವಿಜ್ಞಾನದ ಕೇಂದ್ರವಾಗಿದೆ. ಅದು ಕೇವಲ ಮೂಲವಸ್ತುಗಳನ್ನು ಅನುಕ್ರಮವಾಗಿ ಜೋಡಿಸಲಿಲ್ಲ, ಇನ್ನೂ ಗೊತ್ತಿರದ, ಕಂಡಿರದ ಮೂಲವಸ್ತುಗಳನ್ನು ಅವುಗಳ ಭೌತಿಕ ಹಾಗೂ ರಸಾಯನಿಕ ಲಕ್ಷಣಗಳೊಂದಿಗೆ ಊಹಿಸಲೂ ಕೂಡ ಸಾಧ್ಯವಾಗಿಸಿತು. ರಸಾಯನವಿಜ್ಞಾನದ ಒಟ್ಟಾರೆಯ ಬೆಳವಣಿಗೆಗೆ ಅದು ಕೊಟ್ಟಿರುವ ಪಾತ್ರ ನಿಜಕ್ಕೂ ಹಿರಿದು.

ಇಂತಹಾ ಸಾಧ್ಯತೆಯನ್ನು ತೆರೆದಿಟ್ಟ ಡಿಮಿಟ್ರಿ ಮೆಂಡಲೀಫ್ ಅವರನ್ನು 1905, 1906 ಮತ್ತು 1907 ರಲ್ಲಿ ಮೂರು ವರ್ಷಗಳು ನಿರಂತರವಾಗಿ ನೊಬೆಲ್ ಪುರಸ್ಕಾರಕ್ಕೆ ಶಿಫಾರಸ್ಸು ಮಾಡಿ ನಾಮಿನೇಟ್ ಮಾಡಲಾಗಿತ್ತು. ಆದಾಗ್ಯೂ ಅವರನ್ನು ನೊಬೆಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲೇ ಇಲ್ಲ! ವಿಜ್ಞಾನದ ಚರಿತ್ರೆಯಲ್ಲಿ ಇದನ್ನು ದೊಡ್ಡ ವಿಚಿತ್ರವೆಂದೇ ಭಾವಿಸಲಾಗಿದೆ. ದಾಖಲೆಗಳಿಲ್ಲದ ಚರ್ಚೆಗಳಲ್ಲಿ ಅವರು ರಶಿಯನ್ನರಾಗಿದ್ದೂ ಕಾರಣ ಎಂದೂ ಹೇಳಲಾಗಿದ್ದರೂ, ನಿರ್ದಿಷ್ಟ ವಿವರಣೆಗಳು ದೊರಕುವುದಿಲ್ಲ. ಆದರೆ ಮುಂದೆ ಮೂಲವಸ್ತುಗಳ ಹುಡುಕಾಟ ಮತ್ತು ನಿಖರತೆಗೆ ಮೆಂಡಲೀಫ್ರ ಆವರ್ತ ಪಟ್ಟಿಯು ಬಹು ದೊಡ್ಡ ಉಪಕಾರವನ್ನೇ ಮಾಡಿತು. ಕಾಲ ಕಳೆದಂತೆ ಹಲವಾರು ಮೂಲವಸ್ತುಗಳ ಗುರುತಿಸುವಿಕೆಯಿಂದಾಗಿ ಅವುಗಳ ನಿಖರವಾದ ಗುಣಲಕ್ಷಣಗಳನ್ನೂ ಧೃಡಪಡಿಸಿಕೊಂಡು ನಿರ್ಧರಿಸಲು ಸಹಾಯವಾಯಿತು. ಇಡೀ ವಿಶ್ವದ ಒಟ್ಟೂ ಮೂಲವಸ್ತುಗಳನ್ನು ಅನುಕ್ರಮವಾಗಿಸಿ, ಆ ಮೂಲಕ ಗುಣಲಕ್ಷಣಗಳ ಅರಿವಿಗೆ ಗೊತ್ತಾದ ಸ್ಥಿರತೆಯನ್ನು ತಂದುಕೊಟ್ಟು ವಸ್ತು ಜಗತ್ತಿನ ಸೌಂದರ್ಯವನ್ನು ಅನಾವರಣ ಮಾಡಿಕ ಕೀರ್ತಿ ಡಿಮಿಟ್ರಿ ಮೆಂಡಲೀಫ್ ಅವರದು. ಇಡೀ ಜಗತ್ತನ್ನು ಕೇವಲ ಒಂದು ನೂರು ಕಿಟಕಿಗಳು ಮೂಲಕ ನೋಡಲು ಸಾಧ್ಯವಾಗಿಸಿ, ಅವುಗಳ ಮೂಲಕವೇ ಸಂಕೀರ್ಣ ಜಗತ್ತಿನ ಸೌಂದರ್ಯವನ್ನೂ ಅರಿಯಲು ಕಲ್ಪಿಸಿದ್ದು ಮೆಂಡಲೀಫ್! ಅವುಗಳ ನಡುವಣ ಸಂಬಂಧಗಳ ಮೂಲಕವೇ ಇಡೀ ಜಗತ್ತನ್ನು ವೈಜ್ಞಾನಿಕತೆಯನ್ನು ವಿವರಿಸಲು ಸಾಧ್ಯವಾಗಿಸಿದ್ದು ತಮಾಷೆಯ ಮಾತಲ್ಲ!ಮೆಂಡಲೀಫ್ 1834ರ ಫೆಬ್ರವರಿ 3ರಂದು ರಷಿಯಾದ ಸೈಬಿರಿಯಾದಲ್ಲಿ ಜನಿಸಿದರು. ಆತನ ಪೋಷಕರಿಗೆ ಮೆಂಡಲೀಫ್ 17ನೆಯ ಮಗು. ಮೆಂಡಲೀವ್ ಅವರ ಬುದ್ದಿಮತ್ತೆಯಲ್ಲಿ ಅಪಾರ ನಂಬಿಕೆಯಿಟ್ಟ ಅವರ ತಾಯಿ ವಿದ್ಯಾವಂತನನ್ನಾಗಿ ಮಾಡಲೆಂದೇ ನೂರಾರು ಕಿಮೀ ದೂರದ ಸೇಂಟ್ ಪೀಟರ್ಸ್ಬರ್ಗ್ ಕರೆತಂದು ಓದಿಸಿದ್ದರು. ಮುಂದೆ ಅಲ್ಲಿನ ವಿಶ್ವವಿದ್ಯಾಲಯದಲ್ಲಿಯೇ ಓದಿ ಅಲ್ಲಿಯೇ ಮೆಂಡಲೀಫ್ ಪಿಎಚ್.ಡಿ ಗಳಿಸಿ ಪ್ರೊಫೆಸರ್ ಆಗಿದ್ದರು. ಇಡೀ ರಸಾಯನವಿಜ್ಞಾನದ ಅತ್ಯಂತ ಮಹತ್ವದ ಕೊಡುಗೆಯನ್ನು ನೀಡಿದ ಮೆಂಡಲೀಫ್ 1907ರ ಫೆಬ್ರವರಿ 2 ರಂದು ಕಾಲವಾದರು. ಮೆಂಡಲೀಫ್ ಅವರ ಜೀವನ ವೃತ್ತಾಂತಕ್ಕಿಂತ ಜಗತ್ತಿನ ವಸ್ತು ನಿರ್ಮಿತಿಯ ಚೌಕಟ್ಟನ್ನು ಒದಗಿಸಿದ ಪರಿಕಲ್ಪನೆಯು ರಸಾಯನವಿಜ್ಞಾನದಲ್ಲಿ ಶಾಶ್ವತವಾದುದು.
ಇಂತಹ ಮಹತ್ವದ ಸಾಧನೆಯಾದ ಈ ಮೆಂಡಲೀಫ್ರ ಪಿರಿಯಾಡಿಕ್ ಪಟ್ಟಿಯಲ್ಲಿ ಒಟ್ಟು 8 ಮೂಲವಸ್ತುಗಳ ಹೆಸರುಗಳನ್ನು ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿಗಳ ನೆನಪಿನಲ್ಲಿ ಇಡಲಾಗಿದೆ. ಹಾಗಾಗಿ ಮೆಂಡಲೀಫ್ರಿಗೆ ಇಲ್ಲದ ನೊಬೆಲ್ ಪ್ರಶಸ್ತಿಯು, ನೊಬೆಲ್ ಪಡೆದವರಿಂದ ಹೆಸರು ಪಡೆದ ಮೂಲ ವಸ್ತುಗಳಿಗೆ ಒಂದೆರಡಲ್ಲ ಒಟ್ಟು 8 ಮನೆಗಳನ್ನು ಮೆಂಡಲೀಫ್ರ ಪಿರಿಯಾಡಿಕ್ ಪಟ್ಟಿಯು ಒದಗಿಸಿದೆ. ಆ ಮೂಲವಸ್ತುಗಳು 1) ರಾಂಟೆಜೆನಿಯಂ (Roentgenium) 2) ಕ್ಯೂರಿಯಂ (Curium) 3) ರದರ್ಫೊಡಿಯಂ (Rutherfordium) 4) ಐನ್ಸ್ಟೈನಿಯಂ (Einsteinium) 5)ಬೊರಿಯಂ (Bohrium) 6)ಫರ್ಮಿಯಂ (Fermium) 7)ಲಾರೆನ್ಸಿಯಂ (Lawrencium) 8)ಸೀಬೊರ್ಗಿಯಂ (Seaborgium)

1. ರಾಂಟ್ ಜೆನಿಯಂ (Roentgenium)
ವಿಲ್ಹೆಲ್ಮ್ ರಾಂಟ್ಜೆನ್ (Wilhelm Röntgen) ಅವರ ನೆನಪಿಗಾಗಿ ರಾಂಟ್ ಜೆನಿಯಂ (Roentgenium) ಹೆಸರಿನ ಮೂಲವಸ್ತುವನ್ನು ಪರಮಾಣು ಸಂಖ್ಯೆ 111ರ ವಸ್ತುವೆಂದು ಪರಿಗಣಿಸಲಾಗಿದೆ. ವಿಲ್ಹೆಲ್ಮ್ ರಾಂಟ್ಜೆನ್ ಅವರಿಗೆ ಎಕ್ಸ್ ರೇ ಕಿರಣಗಳ ಅನುಶೋಧಕ್ಕಾಗಿ 1901ರಲ್ಲಿ ಮೊಟ್ಟ ಮೊದಲ ಭೌತವಿಜ್ಞಾನದ ನೊಬೆಲ್ ಪುರಸ್ಕಾರವನ್ನು ನೀಡಲಾಗಿತ್ತು.
2. ಕ್ಯೂರಿಯಂ (Curium)
ಮೇಡಂ ಕ್ಯೂರಿ ಮತ್ತು ಪಿಯರಿ ಕ್ಯೂರಿಯರ ನೆನಪಿಗಾಗಿ ಅವರ ಹೆಸರಿನ ಕ್ಯೂರಿಯಂ (Curium) ಪರಮಾಣು ಸಂಖ್ಯೆ 96 ಅನ್ನು ಹೊಂದಿ 96ರ ಮನೆಯಲ್ಲಿ ಸ್ಥಾನವನ್ನು ಪಡೆದಿದೆ. ಪರಮಾಣು ವಿಕಿರಣ ಹಾಗೂ ವಿಕಿರಣ ಸೂಸುವ ಮೂಲಭೂತ ಸಂಶೋಧನೆಗಳಿಗಾಗಿ ಪತಿ-ಪತ್ನಿಯರಿಬ್ಬರಿಗೂ ಭೌತವಿಜ್ಞಾನದಲ್ಲಿ 1903ರಲ್ಲಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿತ್ತು. ಮುಂದೆ 1911ರಲ್ಲಿ ಮೇಡಂ ಮೇರಿ ಕ್ಯೂರಿಗೆ ರಸಾಯನವಿಜ್ಞಾನದಲ್ಲೂ ಎರಡನೆಯ ಬಾರಿಗೆ ನೊಬೆಲ್ ಪುರಸ್ಕಾರವು ದೊರಕಿತ್ತು.
3. ರದರ್ಫೊಡಿಯಂ (Rutherfordium)
ಅರ್ನೆಸ್ಟ್ ರದರ್ಫೊರ್ಡ್ (Ernest Rutherford) ಅವರ ಹೆಸರಿನ ರದರ್ಫೊಡಿಯಂ (Rutherfordium) ಪರಮಾಣು ಸಂಖ್ಯೆ 104 ಅನ್ನು ಹೊಂದಿರುವ ಮೂಲವಸ್ತು. ವಿಕಿರಣತೆಯನ್ನು ಸೃಜಿಸುವ ವಸ್ತುಗಳ ರಸಾಯನ ಕ್ರಿಯೆಯ (Chemistry of Radioactive Substances) ಅನ್ವೇಷಣೆಗೆ 1908ರಲ್ಲಿ ಅರ್ನೆಸ್ಟ್ ರದರ್ಫೊರ್ಡ್ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ.
4. ಐನ್ಸ್ಟೈನಿಯಂ (Einsteinium)
ಆಲ್ಬರ್ಟ್ ಐನ್ಸ್ಟೈನ್ (Albert Einstein) ಅವರ ಹೆಸರಿನ ಐನ್ಸ್ಟೈನಿಯಂ (Einsteinium) ಪರಮಾಣು ಸಂಖ್ಯೆ 99 ಅನ್ನು ಹೊಂದಿರುವ ಮೂಲವಸ್ತು. 1921ರಲ್ಲಿ ಆಲ್ಬರ್ಟ್ ಐನ್ಸ್ಟೈನ್ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ.
5. ಬೊರಿಯಂ (Bohrium)
ನೀಲ್ಸ್ ಬೊರ್ (Niels Bohr) ಅವರ ಹೆಸರಿನ ಬೊರಿಯಂ (Bohrium) ಪರಮಾಣು ಸಂಖ್ಯೆ 107 ಅನ್ನು ಹೊಂದಿ 107ರ ಮನೆಯಲ್ಲಿ ಸ್ಥಾನವನ್ನು ಪಡೆದಿದೆ. ನೀಲ್ಸ್ ಬೊರ್ 1922ರಲ್ಲಿ “ಪರಮಾಣುಗಳ ರಾಚನಿಕ ವಿನ್ಯಾಸ” ದ ಕೊಡುಗೆಗಾಗಿ ನೀಡಲಾಗಿದೆ.
6. ಫರ್ಮಿಯಂ (Fermium)
ಎರ್ನಿಕೊ ಫರ್ಮಿ (Enrico Fermi) ಅವರ ಹೆಸರಿನ ಫರ್ಮಿಯಂ (Fermium) ಪರಮಾಣು ಸಂಖ್ಯೆ 100 ಅನ್ನು ಹೊಂದಿರುವ ಮೂಲವಸ್ತು. ವಿಕಿರಣತೆಯನ್ನು ಸೃಜಿಸುವ ಕ್ರಿಯೆಯ ಅನ್ವೇಷಣೆಗೆ 1938 ರಲ್ಲಿ ಎರ್ನಿಕೊ ಫರ್ಮಿ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ.
7. ಲಾರೆನ್ಸಿಯಂ (Lawrencium)
ಅರ್ನೆಸ್ಟ್ ಲಾರೆನ್ಸ್ (Ernest Lawrence) ಅವರ ಹೆಸರಿನ ಲಾರೆನ್ಸಿಯಂ (Lawrencium) ಪರಮಾಣು ಸಂಖ್ಯೆ 103 ಅನ್ನು ಹೊಂದಿರುವ ಮೂಲವಸ್ತು. ಸೈಕ್ಲೊಟ್ರಾನ್ ಎಂಬ ಚಾರ್ಜ್ ಹೊಂದಿದ ಕಣಗಳನ್ನು ವೇಗೋತ್ಕರ್ಷಗೊಳಿಸುವ (Accelerating Charged Particles ) ಉಪಕರಣದ ಅನ್ವೇಷಣೆಗೆ 1939ರಲ್ಲಿ ಅರ್ನೆಸ್ಟ್ ಲಾರೆನ್ಸ್ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ.
8. ಸೀಬೊರ್ಗಿಯಂ (Seaborgium)
ಗ್ಲೇನ್ ಸೀಬೋರ್ಗ್ (Glenn T. Seaborg) ಅವರ ಹೆಸರಿನ ಸೀಬೊರ್ಗಿಯಂ (Seaborgium) ಪರಮಾಣು ಸಂಖ್ಯೆ 106 ಅನ್ನು ಹೊಂದಿರುವ ಮೂಲವಸ್ತು. ಯೂರೇನಿಯಂಅನ್ನೂ ಮೀರಿ ಪರಮಾಣು ಸಂಖ್ಯೆಯ ಸುಮಾರು 10 ಮೂಲವಸ್ತುಗಳ ಅನ್ವೇಷಣೆಗೆ 1951ರಲ್ಲಿ ಗ್ಲೇನ್ ಸೀಬೋರ್ಗ್ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ. ಇವರ ಅನ್ವೇಷಣೆಯು ಪಿರಿಯಾಡಿಕ್ ಟೇಬಲ್ಲಿನ 89-103 ಪರಮಾಣು ಸಂಖ್ಯೆಯ ಮೂಲವಸ್ತುಗಳ ಜೋಡಣೆಯ ಆಕ್ಟಿನಾಯ್ಡ್ (Actinoids) ಗಳ ಹುಟ್ಟಿಗೆ ಕಾರಣವಾಗಿದೆ.
ಇಷ್ಟಕ್ಕೂ ಸಾಲದೆಂಬಂತೆ ನೊಬೆಲ್ ಅವರ ಹೆಸರಿನ ನೊಬೆಲಿಯಂ ಕೂಡ 102 ಪರಮಾಣು ಸಂಖ್ಯೆಯ ಮೂಲವಸ್ತುವಿಗೂ ಪಿರಿಯಾಡಿಕ್ ಟೇಬಲ್ ನಲ್ಲಿದೆ. ಮೂರು ಬಾರಿ ಶಿಫಾರಸ್ಸು ಇದ್ದರೂ ತಮಗಿಲ್ಲದ ನೊಬೆಲ್ ಪ್ರಶಸ್ತಿಯನ್ನು ಪಡೆದವರ ಹೆಸರಿನ ಮೂಲವಸ್ತುಗಳಿಗೆ ಶಾಶ್ವತ ಸ್ಥಳವನ್ನು ಮೆಂಡಲೀಫ್ರ ಪಿರಿಯಾಡಿಕ್ ಪಟ್ಟಿಯು ಕೊಟ್ಟಿದೆ.
ನಾಳೆ ಮತ್ತಷ್ಟು ಕುತೂಹಲದ ನೊಬೆಲ್ ಸಂಗತಿಯೊಡನೆ ನಿಮ್ಮೊಂದಿಗೆ ಮತ್ತೆ CPUS ಬರಲಿದೆ. ಇವೆಲ್ಲವೂ ಮುಂಬರುವ 2024ರ ನೊಬೆಲ್ ಪ್ರಶಸ್ತಿಯ ವಿವರಣೆಗಳ ಓದಿಗೆ ತಯಾರಿ ಎಂಬ ಆಶಯ ನಮ್ಮದು.
ನಮಸ್ಕಾರ.
ಡಾ. ಟಿ.ಎಸ್. ಚನ್ನೇಶ್.