ವ್ಯಾಯಾಮವು ಮಾನವ ಕುಲಕ್ಕೆ ಅಗತ್ಯ ಎನ್ನುವುದರ ಬಗ್ಗೆ ಯಾವುದೇ ಗುಟ್ಟುಗಳೇನೂ ಇಲ್ಲ. ಅದರ ಆರೋಗ್ಯದ ಒಳಿತುಗಳ ಬಗ್ಗೆ ಸಾಕಷ್ಟೇ ಅನುಭವದ ಸಂಗತಿಗಳನ್ನು ತನ್ನೊಳಗೆ ಇಟ್ಟುಕೊಂಡಿದೆ. ಕನಿಷ್ಠ ದಿನನಿತ್ಯದ ನಡಿಗೆಯು ನಮ್ಮ ಆರೋಗ್ಯ ಸಮೀಕರಣದ ಬಹು ಮುಖ್ಯ ಪಾಲುದಾರ. ಆರೋಗ್ಯವು ನಮ್ಮ ದೇಹದ ಅಸಂಖ್ಯ ಜೀವಿಕೋಶಗಳ ಬೃಹತ್ ಸಂಕೀರ್ಣ ವ್ಯವಸ್ಥೆಯ ನೆಮ್ಮದಿಯ ನಿರ್ವಹಣೆ. ಒಂದೊಂದು ಅಂಗಾಂಶಗಳೂ ಬಗೆ ಬಗೆಯ ಜೀವಿಕೋಶಗಳ ವಿವಿಧತೆಯ ಕಾರ್ಯಗಳ ಜಾಲ. ಆದ್ದರಿಂದ ಇಂತಹಾ ವಿಶಿಷ್ಟ ಜೈವಿಕ ವ್ಯವಸ್ಥೆಯ ಇಡಿಯಾದ ಆರೋಗ್ಯವು ಈ ಸಂಕೀರ್ಣ ಜೀವಿ-ಕೋಶ ಜಾಲವನ್ನೂ ಪೋಷಿಸುವ ನಿರ್ವಹಣೆಯನ್ನು ಒಳಗೊಂಡಿದೆ. ಆದ್ದರಿಂದ ಆರೋಗ್ಯವು ಈ ಪ್ರತೀ ಜೀವಿಕೋಶಗಳ ಒಳಗಿನ ರಸಾಯನಿಕ ಪ್ರಕ್ರಿಯೆಗಳ ಸಮೀಕರಣ! ಇದರ ಸಾಧ್ಯತೆಗೆ ವ್ಯಾಯಾಮವು ಜೀವಿಕೋಶಗಳ ಒಳಗೆ ಏನನ್ನು ನಿಭಾಯಿಸಿ ಆರೋಗ್ಯವನ್ನು ತರುತ್ತವೆ ಎನ್ನುವ ಬಗೆಗಿನ್ನೂ ಸಂಪೂರ್ಣ ತಿಳಿವು ಅಸಾಧ್ಯವಾಗಿದ್ದರೂ, ವೈಜ್ಞಾನಿಕ ಪ್ರಯತ್ನಗಳು ಸಾಕಷ್ಟು ನಡೆದಿವೆ. ವಿಜ್ಞಾನಿಗಳು ನಮ್ಮೊಳಗಿನ ಜೀವಿಕೋಶಗಳ ಒಳಗೆ ಈ ತಿಳಿವಿನ ಪ್ರಶ್ನೆಗಳಿಗೆ ಉತ್ತರಗಳ ಹುಡುಕಾಟ ನಡೆಸಿದ್ದರ ಒಂದಷ್ಟು ಒಳನೋಟಗಳು ಇಲ್ಲಿವೆ.
ವ್ಯಾಯಾಮದ ಅವಶ್ಯಕತೆ ಹಾಗೂ ಅವುಗಳ ಬಗೆಗಳೂ ಕೂಡ ಮಾನವ ಪ್ರಭೇದದ ವಿಕಾಸದ ಹಾದಿಯ ಚಲನಶೀಲ ಅಭಿವೃದ್ಧಿಗಳನ್ನು ಅವಲಂಬಿಸಿದೆ. ಈಗೇನೋ ಒಂದೆಡೆ ನೆಲೆಯಾಗಿರುವ ಮಾನವ ಹುಟ್ಟಿನಿಂದ ಅಲೆಮಾರಿ! ಕಳೆದ ಎರಡು-ಮೂರು ಲಕ್ಷ ವರ್ಷಗಳ ಸುದೀರ್ಘವಾದ ಇತಿಹಾಸದ ಉದ್ದಕ್ಕೂ ಅಲೆದಾಡಿಯೇ ಜೀವಿಸಿದ್ದಾನೆ. ಆಹಾರವನ್ನು ಬೆಳೆದೇ ತಿನ್ನುವ ಪರಂಪರೆ ಏನಿದ್ದರೂ ಎಂಟು-ಹತ್ತು ಸಾವಿರ ವರ್ಷಗಳದ್ದಷ್ಟೇ! ಅದರ ಪೂರ್ವದ ನೂರಾರು ಸಾವಿರ ವರ್ಷಗಳೂ ನಡೆದಾಡಿ, ಅಲೆದಾಟದಿಂದ ಆಹಾರವನ್ನು ಹೊಂಚಿಕೊಂಡು ತಿಂದಿದ್ದಾನೆ. ಅದಕ್ಕೆಂದೇ ಓಡಿ-ಹೋಗಿ ಭೇಟೆಯಾಡಿದ್ದಾನೆ. ಯಾವುದೋ ಪ್ರಾಣಿಯಿಂದ ತಪ್ಪಿಸಿಕೊಳ್ಳಲಾದರೂ ಓಡುತ್ತಾ ಬಚಾವಾಗಿದ್ದಾನೆ. ಈ ನಿರಂತರವಾದ ನಡಿಗೆ, ಓಡಾಟ ಮತ್ತು ಅಲೆದಾಟದ ಮೂಲಕವೇ ವಿಕಾಸಗೊಂಡ ಪ್ರಭೇದದ ಹೋಮೊ ಸೇಪಿಯನ್ನರು (Homo sapiens) ನಾವು! ಹಾಗಾಗಿಯೇ ಕನಿಷ್ಠ ಈ ಓಡಾಟ, ಅಲೆದಾಟ ನಡಿಗೆಯೇ ಪ್ರಮುಖವಾದ ಹಾಗೂ ಅವಶ್ಯಕವಾದ ವ್ಯಾಯಾಮವೂ ಆಗಿದೆ.
ನಮ್ಮ ಪ್ರಸ್ತುತ ಇರುವ ರೀತಿಯಲ್ಲಿ ನಮ್ಮ ಸಮೀಪದ ಸಂಬಂಧಿಗಳಾದ ಇತರೇ ಚಿಂಪಾಂಜಿ ಮತ್ತಿತರ ವಾನರಗಳಿಂದ ಭಿನ್ನವಾಗಿರುವುದೇ ಈ ಓಡು ಮತ್ತು ನಡಿಗೆಗಳಿಂದ! ಇತರೇ ಎಲ್ಲಾ ವಾನರ ಪ್ರಭೇದಗಳೂ ನಿರಂತರವಾದ ನಡಿಗೆಯ ವಿಕಾಸದವಲ್ಲ. ಲಕ್ಷಾಂತರ ವರ್ಷಗಳ ಒಟ್ಟಾರೆಯ ವಿಕಾಸದ ಇತಿಹಾಸದಲ್ಲಿ ನಡಿಗೆಯ ಪ್ರವೃತ್ತಿಯು ದೈಹಿಕ ವ್ಯಾಯಾಮದ ದುಡಿಮೆಯನ್ನು ಅವಿಭಾಜ್ಯವಾಗಿಸಿದೆ. ಕಳೆದ ಕೆಲವು ದಶಕಗಳಿಂದ ವೈಜ್ಞಾನಿಕ ತಿಳಿವಿನ ಅನಿವಾರ್ಯತೆಯ ಹುಡುಕಾಟದಲ್ಲಿ ಈ ವ್ಯಾಯಾಮದಿಂದ ಜೀವಿಕೋಶಗಳ ಒಳಗಿನ ಪ್ರಮುಖ ಬದಲಾವಣೆಗಳನ್ನು ಅನುಶೋಧಿಸಿದೆ. ಅವುಗಳೇನೂ ಸಂಪೂರ್ಣ ತಿಳಿವಲ್ಲದಿದ್ದರೂ, ಬಹು ಮುಖ್ಯವಾದ ಕೆಲವು ಒಳನೋಟಗಳು ಇಲ್ಲಿವೆ.
ವ್ಯಾಯಾಮದ ಸಮಯದಲ್ಲಿ ಚಯಾಪಚಯ ಸಂವಹನ (Metabolic Communication)
ನಮ್ಮಲ್ಲಿ ಸಹಜವಾದ ಮಾತೊಂದು ಇದೆ. “ಉಂಡದ್ದು ಮೈಗೆ ಹತ್ತಬೇಕಾದರೆ ಒಂದಷ್ಟು ಓಡಾಡಬೇಕು” ಉಂಡದ್ದು ಎಂದರೆ ನಾವು ಸೇವಿಸಿದ ಆಹಾರ! ಮೈಗೆ ಹತ್ತುವುದು ಎಂದರೆ, ಸೇವಿಸಿದ ಆಹಾರ ಜೀರ್ಣವಾಗಿ-ರಕ್ತಕ್ಕೆ, ದೇಹಕ್ಕೆ ಸೇರಬೇಕು, ಅನಗತ್ಯವಾದದ್ದನ್ನು ತ್ಯಾಜ್ಯವಾಗಿ ಹೊರಹಾಕಬೇಕು. ಇದನ್ನೇ ಚಯಾಪಚಯ (Metabolic Activity) ಕ್ರಿಯೆ ಎನ್ನುವುದು. ಈ ಚಯಾಪಚಯದ ವ್ಯವಸ್ಥೆಯು ಇಡೀ ದೇಹದಲ್ಲಿ ಜೀವಿಕೋಶಗಳ ನಡುವಿನ ಸಂವಹನದ ಮೂಲಕ ಬಗೆ ಬಗೆಯ ಜೀವಿರಸಾಯನಿಕ ವಸ್ತುಗಳ ನಿರ್ವಹಣೆಯಲ್ಲಿ ನಡೆಯುತ್ತದೆ. ವ್ಯಾಯಾಮದ ಸಮಯದಲ್ಲಿ ಚಯಾಪಚಯ ಸಂವಹನ (Metabolic Communication) ಅತ್ಯದ್ಭುತವಾಗಿ ಹೆಚ್ಚುವರಿಯಾಗಿ ನಡೆಯುತ್ತದೆ. ಅದರ ಸರಳ ತಿಳಿವಳಿಕೆಯನ್ನು ಈ ಕೆಳಗಿನಂತೆ ವಿವರಿಸಬಹುದು.
ಕಳೆದ 20ನೆಯ ಶತಮಾನದ ಮಧ್ಯದಲ್ಲಿ ಜೀವಿಕೋಶಗಳು ಪ್ಲೇಟ್ ಲೆಟ್ಸ್ ನಂತಹಾ ಕೆಲವು ಬಾಹ್ಯ ಜೀವಿಕೋಶೀಯ ವಸ್ತುಗಳನ್ನು ಬಿಡುಗಡೆ ಮಾಡುತ್ತದೆ ಎಂದು ವೈದ್ಯಕೀಯ ವಿಜ್ಞಾನ ಕಂಡುಕೊಂಡಿತು. ಇವುಗಳೂ ಜೀವಿಕೋಶಗಳಂತೆಯೇ ಇದ್ದು, ಜೀವಿಕೋಶಗಳಂತೆ ಪ್ರತಿಕೋಶಗಳನ್ನು ಹುಟ್ಟಿಹಾಕುವುದಿಲ್ಲ. 70ರ ದಶಕದಲ್ಲಿ ಅವುಗಳಿಗೆ ಬಾಹ್ಯ ಜೀವಿಕೋಶೀಯ ಕೋಶಕ (Extracellular Vesicles (EVs)ಗಳು ಎಂದು ಹೆಸರಿಸಿ ಮುಂದೆ 80ರ ದಶಕದಲ್ಲಿ ಹೆಚ್ಚಿನ ವಿವರಣೆಗಳನ್ನು ನೀಡಲಾಯಿತು. ಈ ಬಾಹ್ಯ ಜೀವಿಕೋಶೀಯ ಕೋಶಕ (Extracellular Vesicles (EVs) ಗಳ ಬಹು ಮುಖ್ಯ ಕಾರ್ಯವೆಂದರೆ, ಜೀವಿಕೋಶಗಳ ಕಾರ್ಯದಿಂದ ಉತ್ಪನ್ನವಾದ, ದೇಹಕ್ಕೆ ಬೇಡವಾದ ತ್ಯಾಜ್ಯಗಳನ್ನು ಹೊರಹಾಕಲು ಸಹಾಯ ಮಾಡುವುದು ಜೊತೆಗೆ ಜೀವಿಕೋಶಗಳ ವಿವಿಧ ಕೆಲಸಗಳಿಗೆ ಅಗತ್ಯವಾದ ಪ್ರೊಟೀನು ಮುಂತಾದ ರಸಾಯನಿಕ ವಸ್ತುಗಳನ್ನು ಸರಬರಾಜು ಮಾಡುವುದೂ ಆಗಿದೆ. ವ್ಯಾಯಾಮ ಸಮಯದಲ್ಲಿ ಈ ಎಕ್ಸ್ಟ್ರಾ ಸೆಲ್ಯುಲಾರ್ ವೆಸಿಕಲ್ಸ್ (Extracellular Vesicles (EVs) ಗಳ ಉತ್ಪಾದನೆ ಸಹಜವಾದ ಉತ್ಪಾದನೆಗಿಂತಲೂ 2ರಿಂದ 4 ಪಟ್ಟು ಹೆಚ್ಚಿರುವುದನ್ನು ವಿವಿಧ ಸಂಶೋಧನೆಗಳು ಸಾಬೀತು ಪಡಿಸಿವೆ. ಆದ್ದರಿಂದ ಒಟ್ಟಾರೆಯ ವ್ಯಾಯಾಮದ ಮುಖ್ಯ ಲಾಭವನ್ನು ಈ ಕೆಳಗಿನಂತೆ ಅರ್ಥೈಸಬಹುದು.
ಜೀವಿಕೋಶಗಳ, ವಿವಿಧ ಅಂಗಾಂಶಗಳ, ಅಷ್ಟೇಕೆ ಸಂಪೂರ್ಣ-ದೇಹವನ್ನು ನಿರ್ವಹಿಸಲು ಸೇವಿಸಿದ ಪೋಷಕಾಂಶಗಳ ಸಂವೇದನೆ, ವಿತರಣೆ, ಹೀರಿಕೊಳ್ಳುವಿಕೆ ಮತ್ತು ಬಳಕೆಯ ಸಮನ್ವಯವು ಅತ್ಯಗತ್ಯ. ಇಡೀ ಜೀವಿಯ ಜೀವಕೋಶಗಳು ಮತ್ತು ಅಂಗಾಂಶಗಳ ನಡುವೆ ಚಯಾಪಚಯ ಮಾಹಿತಿಯನ್ನು ಸಂವಹನ ಮಾಡಿದರೆ ಮಾತ್ರ ಅಂತಹ ಸಮನ್ವಯತೆಯನ್ನು ಸಾಧಿಸಬಹುದು. ವ್ಯಾಯಾಮದಿಂದಾಗಿ ಶಾರೀರಿಕ ಸ್ಥಿತಿಯ ಜೀವಿಕೋಶಗಳ ಹಾಗೂ ಅಂಗಾಂಶಗಳ ನಡುವಣ ಸಂವಹನವನ್ನು ವಿವಿಧ ರಸಾಯನಿಕಗಳ ಮೂಲಕ ಸಾಧಿಸುವಿಕೆಯು ತುಂಬಾ ಚೆನ್ನಾಗಿದ್ದು ಇಡೀ ದೇಹಕ್ಕೆ ಹೆಚ್ಚಿನ ಲಾಭವನ್ನು ಉಂಟುಮಾಡುತ್ತದೆ.
ಚಯಾಪಚಯ ಕಾಯಿಲೆಗಳನ್ನು ಪ್ರಭಾವಿಸುವ ಸೆರ್ಕಾಡಿಯನ್ ಲಯ ಮತ್ತು ವ್ಯಾಯಾಮ
ಜೀರ್ಣ ಸಮಸ್ಯೆಯ ಕುರಿತ ಚಯಾಪಚಯ (ಮೆಟಬಾಲಿಕ್) ಕಾಯಿಲೆಗಳನ್ನು ಅರಿಯುವ ರೋಗವಿಜ್ಞಾನದಲ್ಲಿ ನಮ್ಮ ಜೀವನದ ದೈನಂದಿನ ಕ್ರಿಯೆ ಲಯಗಳು ಗೊಂದಲಕ್ಕೆ ಒಳಗಾದದ್ದು ಕಂಡುಬರುತ್ತವೆ. (ಅಂದರೆ ನಮ್ಮ ದೈನಂದಿನ ಹಗಲು-ರಾತ್ರಿಗಳಿಗೆ ನಾವು ಪ್ರತಿಕ್ರಿಯಿಸುವ ರೀತಿಯಲ್ಲಿ ವ್ಯತ್ಯಯ ಉಂಟಾಗುವುದು). ಅಂತಹಾ ಚಯಾಪಚಯ ರೋಗಗಳಿರುವ ವ್ಯಕ್ತಿಗಳಲ್ಲಿ ರೋಗವನ್ನು ತಡೆಗಟ್ಟುವಿಕೆಯಲ್ಲಿ ಮತ್ತು ಚಿಕಿತ್ಸೆಯಲ್ಲಿ ವ್ಯಾಯಾಮವು ನಿರ್ಣಾಯಕ ಪಾತ್ರವಹಿಸುವುದು ಸಂಶೋಧನೆಗಳಿಂದ ತಿಳಿಯಲಾಗಿದೆ. ಆದರೆ ಎಷ್ಟು ಸಮಯದ ವ್ಯಾಯಾಮ ಆರೋಗ್ಯಕರ ಎಂಬುದರ ಬಗ್ಗೆ ಏನೂ ನಿಖರವಾಗಿ ಹೇಳಲಾಗದು. ಆದರೆ ವ್ಯಾಯಾಮದ ಲಾಭವನ್ನು ಮಾತ್ರ ಚೆನ್ನಾಗಿ ಅರಿಯಲಾಗಿದೆ. ವ್ಯಾಯಾಮವು ನಮ್ಮ ಆಸ್ಥಿಪಂಜರದ ಸ್ನಾಯುಗಳ ಚಯಾಪಚಯ (Skeletal Muscle Metabolism) ಕ್ರಿಯೆಗಳಲ್ಲಿ ಪ್ರಭಾವ ಬೀರುತ್ತದೆ ಎಂಬುದಂತೂ ಅಧ್ಯಯನಗಳಿಂದ ತಿಳಿದ ನಿಖರವಾದ ಅಂಶ. ಈ ಸ್ನಾಯುಗಳ ಮೇಲೆ ನಮ್ಮ ದೈನಂದಿನ ಹಗಲು-ರಾತ್ರಿಗಳ ನಿರ್ವಹಣೆಯ ಕ್ರಿಯೆಗಳಿಂದ ಪ್ರಭಾವಿಸುವುದಂತೂ ಅಷ್ಟೇ ನಿಜವಾದದ್ದು. ಹಾಗಾಗಿ ಸೆರ್ಕಾಡಿಯನ್ ಗಡಿಯಾರವು ವ್ಯಾಯಾಮದ ಮೂಲಕ ಚಯಾಪಚಯ ರೋಗ ನಿರ್ವಹಣೆಯ ಪ್ರಭಾವಕ್ಕೆ ಒಳಗಾಗಬಹುದು. ಇದನ್ನು ನಿಭಾಯಿಸುವಲ್ಲಿ ವ್ಯಾಯಾಮವು ಖಂಡಿತಾ ಸಹಕಾರಿಯಾಗಬಲ್ಲದು ಎಂದುದು ಅಧ್ಯಯನಗಳ ಸಾರ.
ಪೋಷಕರಲ್ಲಿ ವ್ಯಾಯಾಮದ ಆರೋಗ್ಯ ಲಾಭಗಳು
ಪೋಷಕರು – ತಂದೆ ಹಾಗೂ ತಾಯಿಯರಿಬ್ಬರ ವ್ಯಾಯಾಮದ ಲಾಭಗಳು, ಅವರಿಗೂ ಅಲ್ಲದೆ ಅವರಿಂದ ಹುಟ್ಟಿದ ಅಥವಾ ಹುಟ್ಟುವ ಮಕ್ಕಳ ಮೇಲೂ ಆಪ್ತವಾದ ಪರಿಣಾಮವನ್ನು ಬೀರುತ್ತದೆ. ತಂದೆ-ತಾಯಿಯರ ಅತಿಯಾದ ದೇಹ ತೂಕ ಮತ್ತು ಮಧುಮೇಹ ಇವೆರಡೂ ಚಯಾಪಚಯ ಕ್ರಿಯೆಗಳ ಮೇಲೆ, ಅವರಲ್ಲೂ ಹಾಗೂ ಅವರ ಸಂತತಿಗಳ ಮೇಲೂ ಪ್ರಭಾವಿಸುತ್ತವೆ. ತಾಯಂದಿರಿಗೆ ಗರ್ಭಾವಸ್ಥೆಯಲ್ಲೂ, ಗರ್ಭಧರಿಸುವ ಮೊದಲ ವ್ಯಾಯಾಮವೂ ಮಗುವಿನ ಮೇಲೆ ಪ್ರಭಾವಿಸುತ್ತದೆ. ಬಹಳ ಮುಖ್ಯವಾಗಿ ಹೊಕ್ಕಳು ಬಳ್ಳಿಯ ಮೇಲೆ ನೇರ ಪ್ರಭಾವವು ತಾಯಿಯ ವ್ಯಾಯಾಮದಿಂದ ಉಂಟಾಗುತ್ತದೆ. ಹೊಕ್ಕುಳು ಬಳ್ಳಿಯ ಮೇಲೆ ಎಂದರೆ ಒಂದರ್ಥದಲ್ಲಿ ಮಗುವಿನ ಇಡಿಯಾದ ಜವಾಬ್ದಾರಿ! ಇದರಲ್ಲಿನ ಬದಲಾವಣೆಗಳು ವ್ಯಾಯಾಮದ ಲಾಭಗಳಾಗಿವೆ. ತಂದೆಯ ವ್ಯಾಯಾಮವು ಪ್ರಮುಖವಾಗಿ ಗಂಡಿನ ವೀರ್ಯಾಣುಗಳ ಚಲನೆ ಹಾಗೂ ಅದರೊಳಗಿನ ಡಿ.ಎನ್.ಎ. ಮೇಲೂ ಪ್ರಭಾವಿಸುವುದನ್ನು ಸಂಶೋಧನೆಗಳು ದೃಢಪಡಿಸಿವೆ. ಹಾಗಾಗಿ ತಂದೆ-ತಾಯಿಯರಿಬ್ಬರ ವ್ಯಾಯಾಮವು ಮಗುವಿನ ಆರೋಗ್ಯದ ಮೇಲೆ ಪ್ರತಿಫಲಿಸುತ್ತದೆ.
ವ್ಯಾಯಾಮ ಮತ್ತು ಹೃದಯದ ಆರೋಗ್ಯ
ಯಾವುದೇ ವ್ಯಕ್ತಿಯಲ್ಲೂ ಹೃದಯದ ಆರೋಗ್ಯಕ್ಕೆ ಅವರ ದೈನಂದಿನ ವ್ಯಾಯಾಮದ ಪ್ರಭಾವವು ದಶಕಗಳಿಂದಲೂ ತಿಳಿದ ವಿಚಾರವೇ ಆಗಿದೆ. ಕಳೆದ ಶತಮಾನದ 1996ರಲ್ಲಿ ವೈದ್ಯಲೋಕದಲ್ಲಿ ಅತ್ಯಂತ ಮಹತ್ವದ ಶೋಧವೊಂದು ಸರ್ಕ್ಯೂಲೇಶನ್ (Circulation) ಎಂಬ ವೈಜ್ಞಾನಿಕ ಪತ್ರಿಕೆಯಲ್ಲಿ ನಿರಂತರವಾದ ವಿಶ್ರಾಂತಿ ಹಾಗೂ ಸತತ ಚಟುವಟಿಕೆಗಳ ನಂತರದ ವ್ಯಾಯಾಮದ ಪರಿಣಾಮಗಳ ಕುರಿತು ಅಧ್ಯಯನವು ಪ್ರಕಟವಾಯಿತು. ಅದನ್ನು ಗರಿಷ್ಠ ಆಮ್ಲಜನಕದ ಹೀರುವಿಕೆಯ (VO2 max) ಆಧಾರದಲ್ಲಿ ಆಳೆದು ವ್ಯಾಯಾಮದ ಪರಿಣಾಮವನ್ನು ಅರಿಯಲಾಗಿತ್ತು. ಅದರ ಫಲಿತದಂತೆ ಕೇವಲ 20 ದಿನಗಳ ಸಂಪೂರ್ಣ ಚಟುವಟಿಕೆಯ ರಹಿತವಾದ ಜೀವನವು ಆಮ್ಲಜನಕದ ಹೀರುವಿಕೆಯ ಮೇಲೂ ಹಾಗೂ ಹೃದಯದಿಂದ ರಕ್ತ ಪಂಪಿಸುವ ಕ್ರಿಯೆಯ ಮೇಲೂ ಪ್ರತಿಶತ 25ಕ್ಕಿಂತಾ ಹೆಚ್ಚಿನ ಕುಂಠಿತವಾಗುವಿಕೆಯನ್ನು ಪ್ರತಿಪಾದಿಸಿದ್ದಾರೆ. ನಂತರದ 8 ವಾರಗಳ ಚಟುವಟಿಕೆಯಿಂದ ಸುಮಾರು 18% ಹೆಚ್ಚಿ ಆಮ್ಲಜನಕದ ಹೀರಿಕೆಯನ್ನೂ ಹಾಗೂ 14% ಹೆಚ್ಚುವರಿ ರಕ್ತವು ಪಂಪಿಸುವುದನ್ನೂ ವ್ಯಾಯಾಮದ ಲಾಭವೆಂಬಂತೆ ಫಲಿತಾಂಶವನ್ನು ವೈದ್ಯಲೋಕವು ಅರಿತಿದೆ. ಒಂದು ಅತ್ಯಂತ ಪ್ರಮುಖವಾದ ಲಾಭವನ್ನು ವ್ಯಾಯಾಮ ಮತ್ತು ಹೃದಯದ ಆರೋಗ್ಯದ ಸಂಬಂಧದಲ್ಲಿ ತಿಳಿದ ಸಂಗತಿ ಎಂದರೆ VO2 max ಅಥವಾ ಆಮ್ಲಜನಕದ ಹೀರಿಕೆಯ ಮೇಲಿನ ಪರಿಣಾಮ. ಈಗಲೂ ನಮ್ಮ ದೇಹಕ್ಕೆ ಆಮ್ಲಜನಕವು ಹೀರಿಕೆಯಾಗುವ ಅಥವಾ ದೇಹದ ಯಾವುದೇ ಭಾಗಕ್ಕೂ ದೊರಕುವಂತಾಗುವ ಅವಕಾಶವನ್ನು ಆರೋಗ್ಯದ ಸಮೀಕರಣದಲ್ಲಿ ಬಳಸುವ ನೂರಾರು ಅಧ್ಯಯನಗಳು ನಡೆದಿವೆ.
ಇವುಗಳು ಆರೋಗ್ಯಕರ ಹೃದಯದ ಮೇಲಿನ ಪರಿಣಾಮಗಳಾದರೆ ಕಾಯಿಲೆಯಿಂದ ಅಥವಾ ಯಾವುದೇ ತೊಂದರೆಯನ್ನು ಅನುಭವಿಸುವ ಹೃದಯದ ಆರೋಗ್ಯ ಸುಧಾರಣೆಯ ಮೇಲೂ ವ್ಯಾಯಾಮದ ಪ್ರಭಾವವನ್ನು ವಿಜ್ಞಾನವು ಸಂಶೋಧನೆಗಳ ಮೂಲಕ ಅರಿಯಲು ಪ್ರಯತ್ನಿಸಿದೆ. ಅದನ್ನು (Aerobic Exercise Training -AET) ಹಾಗೂ ದೈಹಿಕ ಚಟುವಟಿಕೆಗಳ ಸಮೀಕರಣದ ಮೂಲಕ ಮೊಟ್ಟ ಮೊದಲು ಅರಿಯಲಾಯಿತು. ಸರಿ ಸುಮಾರು 1949ರಷ್ಟು ಹಿಂದೆಯೇ ಬ್ರಿಟೀಶ್ ವಿಜ್ಞಾನಿ ಜೆರೇಮಿ ಮೋರಿಸ್ ಮತ್ತವರ ಸಹಚರರು ಹೆಚ್ಚು ದೈಹಿಕ ಚಟುವಟಿಕೆಗಳನ್ನು ನಡೆಸದ ಟೆಲಿಪೋನ್ ಕೆಲಸಗಾರರಲ್ಲಿ ಹೃದಯದ ನ್ಯೂನ್ಯತೆಗಳನ್ನು ಕಂಡಿದ್ದರು. ಹಾಗೇನೆ ಹೆಚ್ಚು ತಿರುಗಾಟದ ಪೋಸ್ಟ್ ಮನ್ರಲ್ಲಿ ಕಡಿಮೆ ಹೃದಯದ ಕಾಯಿಲೆಗಳು ಇರುವಿಕೆಯ ಸಂಬಂದವನ್ನೂ ಪ್ರಕಟಿಸಿದ್ದರು. ಅಲ್ಲಿಂದ ಮುಂದೆ ವೈದ್ಯವಿಜ್ಞಾನವು ದೈಹಿಕ ಚಟುವಟಿಕೆಗಳ ಮೇಲೆ ಹೃದಯದ ಆರೋಗ್ಯದ ಸಮೀಕರಣಕ್ಕೆ ಹೆಚ್ಚಿನ ಒತ್ತಾಸೆ ಕೊಟ್ಟು ಬಗೆ-ಬಗೆಯಲ್ಲಿ ಅರಿಯುವ ಅಧ್ಯಯನಗಳು ನಡೆದಿವೆ.
ವ್ಯಾಯಾಮವು ನಮ್ಮ ದೇಹವನ್ನು ಆರೋಗ್ಯದಲ್ಲಿ ಕಾಪಾಡಬೇಕೆಂದರೆ, ನಮ್ಮ ದೇಹದ ಸರಾಸರಿ ಅಂದಾಜು 3000 ಶತಕೋಟಿ ಜೀವಿಕೋಶಗಳ (30 ಟ್ರಿಲಿಯನ್) ಒಟ್ಟೂ ರಸಾಯನಿಕ ಕ್ರಿಯೆಗಳ ನಿರ್ವಹಿಸಿ ಸುಧಾರಿಸಬೇಕು. ಯಾವುದೇ ಒಂದೇ ರಸಾಯನಿಕವೂ ಸ್ವತಂತ್ರವಾಗಿ ದೇಹದ ಮೇಲೆ ನೇರ ಪರಿಣಾಮವನ್ನು ಬೀರುವುದಿಲ್ಲ. ಏನಿದ್ದರೂ ಇಡೀ ಜೀವಿಕೋಶಗಳ ನೆಟ್ವರ್ಕ್ ಸಮೂಹದಲ್ಲಿಯೇ ಪ್ರಭಾವಿಸುವುದು! ಹಾಗಾಗಿ ಇವೆಲ್ಲವೂ ಅರ್ಥವಾಗುವುದೇನೂ ಸುಲಭದ ಮಾತಲ್ಲ. ಆದರೂ ಈಗಿನ ಕಂಪ್ಯೂಟರ್ ಮಾದರಿಯ ಅಧ್ಯಯನಗಳಿಂದ ಲೆಕ್ಕಾಚಾರ ಹಾಕುವುದು ಒಂದಷ್ಟು ಸುಲಭವಾಗಿದೆ. ಆದರೇನಂತೆ ಎಲ್ಲವನ್ನೂ ನಿಭಾಯಿಸುವ ಜಾಣತನ ಮಾತ್ರ ಅರ್ಥವಾಗದ್ದು ಅಲ್ಲವೇ? ವ್ಯಾಯಾಮದ -ಮಾಲೆಕ್ಯೂಲಾರ್-ಆಣ್ವಿಕ ಅಧ್ಯಯನಗಳಿಂದ ಜೀವಿಕೋಶದೊಳಗಿನ ಬದಲಾವಣೆಗಳು ಅಥವಾ ರಿಪೇರಿಯ ಕೆಲಸಗಳು ಅರ್ಥವಾದರೆ, ಆ ರಿಪೇರಿಯ ಕೆಲಸಗಳೂ ಕೂಡ ಜೀವಿರಸಾಯನಿಕ ಸಂವಹನಗಳಿಂದಲೇ ನಡೆಯುವುದರಿಂದ ಅವುಗಳನ್ನು ಅಣಕು ಮಾಡುವ ಔಷಧಿಗಳ ತಯಾರಿ ಅಧ್ಯಯನದ ಉದ್ದೇಶ. ಅದೂ ಅಲ್ಲದೆ, ಇಡಿ ವ್ಯಾಯಾಮವನ್ನೇ ಔಷಧಿಯಾಗಿಯೂ ಅರಿಯುವ ಉದ್ದೇಶ ಕೂಡ ಇಂತಹಾ ಅಧ್ಯಯನಗಳಲ್ಲಿ ಇದೆ. ಔಷಧಗಳ ಅಣಕು ಎಂದರೆ, ತೀರಾ ಇಳಿವಯೋಮಾನದಲ್ಲಿ ವ್ಯಾಯಾಮ ಮಾಡಬಹುದಾದ ಸಾಧ್ಯತೆಗಳು ಕಡಿಮೆಯಾದಾಗ ಔಷಧಿಗಳ ಬಳಕೆಯನ್ನು ಪರ್ಯಾಯವಾಗಿ ನೋಡಬಹುದು.
ವ್ಯಾಯಾಮದ ಆಣ್ವಿಕ (ಮಾಲೆಕ್ಯುಲಾರ್) ಪ್ರಪಂಚದ ತೀಕ್ಷ್ಣವಾದ ನೋಟವನ್ನು ನಿರ್ಮಿಸುವುದರಿಂದ ಅದರ ಪರಿಣಾಮಗಳನ್ನು ಅನುಕರಿಸುವ ಔಷಧಿಗಳ ಚಿಕಿತ್ಸೆಯ ಗುರಿಗಳಲ್ಲಿ ಬಳಸಬಹುದು ಎಂಬುದೇನೋ ನಿಜವೆ! ಎಷ್ಟೊಂದು ಕೋಟ್ಯಾಂತರ ಜೀವಿಕೋಶಗಳ ಸಾಮೂಹಿಕ ವಹಿವಾಟಾದ ಈ ಆಣ್ವಿಕ ರಸಾಯನ ಪ್ರಪಂಚದಲ್ಲಿ ಅಂತಹ ಔಷಧಿಗಳು ನಿಜವಾದ ಪ್ರಯೋಜನಗಳನ್ನು ಪ್ರತಿಯಾಗಿ ನೀಡಬಲ್ಲವೇ? ಎಂಬುದು ವಿವಾದಾಸ್ಪದವಾದ ಹಾಗೂ ಹೆಚ್ಚಿನ ಅಧ್ಯಯನದ ಚರ್ಚೆಗೆ ಮಾಹಿತಿಯ ವಸ್ತುಗಳಾಗಿವೆ. ಅದಕ್ಕಿಂತಾ ಪ್ರಮುಖವಾಗಿ ವ್ಯಾಯಾಮವೇ ಔಷಧಿಯೂ ಆಗಬಲ್ಲುದೇ ಎಂಬುದೂ ಇಂತಹಾ ಶೋಧಗಳ ತಿಳಿವಿನ ಗುರಿಗಳಲ್ಲಿ ಇದೆ.
ವ್ಯಾಯಾಮವೇ ಔಷಧಿ (Exercise as medicine)
ಅಮೆರಿಕದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ (NIH) ಸುಮಾರು 170 ದಶಲಕ್ಷ ಅಮೆರಿಕನ್ ಡಾಲರ್ ಮೊತ್ತವನ್ನು ಅನುದಾನದಿಂದ ಆರು ವರ್ಷಗಳ ಕಾಲ ಒಂದು ಅಧ್ಯಯನವನ್ನು ಕೈಗೊಂಡಿತ್ತು. ಅದಕ್ಕೆಂದೇ ದೈಹಿಕ ಚಟುವಟಿಕೆಗಳ ಒಟ್ಟರೆಯ ಮಾಲೆಕ್ಯುಲಾರ್ ಪರಿವರ್ತಕಗಳ (Molecular Transducers of Physical Activity Consortium (MoTrPAC)) ಅರಿವಿನ ಅಧ್ಯಯನವನ್ನು 6 ರ್ಷಗಳ ಕಾಲ ಕೈಗೊಂಡಿತ್ತು. 2016ರಲ್ಲಿ ಆರಂಭವಾದ ಇದರ ಸುಮಾರು 2,600 ಜನರು ಹಾಗೂ 800 ಪ್ರಯೋಗದ ಇಲಿಗಳನ್ನು ಒಳಗೊಂಡ ಈ ವಿಶೇಷ ಅಧ್ಯಯನವು ವ್ಯಾಯಾಮದ ಬಹು ಮುಖ್ಯಾವಾದ ಮಾಲೆಕ್ಯುಲಾರ್ ಒಳನೋಟಗಳಿಗೆ ಸಾಕ್ಷಿಯಾಗಿದೆ. ಬೇರೆ ಬೇರೆ ವಯೋಮಾನದ ವಿವಿಧ ಜೀವಿಕೋಶಿಯ ಪ್ರಕಾರಗಳನ್ನು ಬಗೆ ಬಗೆಯ ಅಂಗಾಂಶಗಳ ಸಮೀಕರಿಸಿ ಈ ಶೋಧವು ಮಹತ್ವದ ಹೊಳಹನ್ನು ನೀಡಿದೆ. ಕೆಲವೊಂದು ವ್ಯಾಯಾಮದ ಅಣುಕು ಮಾಡಬಲ್ಲ ರಸಾಯನಿಕಗಳ ಆಂಶಗಳೂ ಸೇರಿದಂತೆ ಅವುಗಳ ಅಭಿವೃದ್ಧಿಯ ಕನಸನ್ನೂ ಹೆಣೆದಿದೆ (ಫ್ಲಾರಿಡಾ ವಿಶ್ವವಿದ್ಯಾಲಯದ ಔಷಧ ತಜ್ಞ ಥಾಮಸ್ ಬರ್ರಿಸ್ ಮುಂದಾಳತ್ವದಲ್ಲಿ ಪ್ರಯತ್ನಗಳು ನಡೆದಿವೆ) . ಅಷ್ಟೇ ಅಲ್ಲದೆ ವಿವಿಧ ವಯೋಮಾನದ ವಿವಿಧ ಕಾಲಮಾನದ ವ್ಯಾಯಾಮದ ಮಿತಿಗಳತ್ತವೂ ವಿಶೇಷ ಗಮನವನ್ನು ಹರಿಸಿದೆ. ಸಾಲದೆಂಬಂತೆ ವಿಭಿನ್ನ ಮಾನವ ಜನಾಂಗೀಯ ಪರಿಣಾಮಗಳನ್ನೂ ವ್ಯಾಯಾಮದ ಜತೆ ಸಮೀಕರಿಸಿ ನೋಡಲೂ ಪ್ರಯತ್ನಿಸಿದೆ. ಪೆನ್ಸಿಲ್ವೇನಿಯಾದ ಪಿಟ್ಸ್ಬರ್ಗ್ ವಿಶ್ವವಿದ್ಯಾಲಯದ ವ್ಯಾಯಾಮದ ಶರೀರಕ್ರಿಯಾ ತಜ್ಞ (Bret Goodpaster, Exercise Physiologist) ವ್ಯಾಯಾಮದ ನೇರ ಪ್ರಭಾವವನ್ನು ಅಳೆಯುವ ಆ ಮೂಲಕ ವ್ಯಾಯಾಮದ ಚಿಕಿತ್ಸಕ ಪ್ರಭಾವಗಳ ಸಮೀಕರಣದಲ್ಲಿ ತೊಡಗಿದ್ದಾರೆ.
ವ್ಯಾಯಾಮವೇ ಔಷಧಿಯ ಪ್ರಮುಖವಾದ ತಿಳಿವಳಿಕೆಯಲ್ಲಿ ಒಂದು ವಾರಕ್ಕೆ ಕನಿಷ್ಠ ೪೫೦ ನಿಮಿಷಗಳ ದೌಡಾದ ನಡಿಗೆ (Brisk Walk) ನ ಮಹತ್ವವನ್ನು ಏನೂ ಮಾಡದಿರುವವರಿಗಿಂತಾ ಕನಿಷ್ಠ 4.5 ವರ್ಷಗಳ ಹೆಚ್ಚಿನ ಆಯಸ್ಸನ್ನು ಪಡೆಯುವಂತಹಾ ಸಂಗತಿಯೂ ಸೇರಿದೆ. ಅದರ ಜೊತೆಗೆ ನಿರಂತರವಾದ ನಡಿಗೆಯುಕ್ತವಾದ ವ್ಯಾಯಾಮವು ನಮ್ಮ ದೇಹದ ರೋಗ ನಿರೋದಕ ಶಕ್ತಿಯನ್ನೂ ಬಲಯುತಗೊಳಿಸುವ ಗ್ಯಾರಂಟಿಯನ್ನೂ ಅರ್ಥೈಸಿದೆ. ಅಷ್ಟೇ ವಿಷಾಧದ ಸಂಗತಿಯೂ ಅಂದರೆ ವಿಶ್ವ ಆರೋಗ್ಯ ಸಂಸ್ಥೆ (WHO) ಯು ಶಿಫಾರಸ್ಸು ಮಾಡಿರುವ ಪ್ರತೀ ವಾರಕ್ಕೆ 150 – 300 ನಿಮಿಷಗಳ ನಡೆಗೆಯ ವ್ಯಾಯಾಮವನ್ನೂ ಜಗತ್ತಿನ ಪ್ರತಿಶತ 25ರಷ್ಟು ಜನರು ಮಾಡುತ್ತಿಲ್ಲ! ಇನ್ನು ವಾರಕ್ಕೆ ಕನಿಷ್ಠ 75-150 ನಿಮಿಷಗಳ ಬ್ರಸ್ಕ್ ವಾಕ್ ಅನ್ನೂ ಅಷ್ಟೇ ಜನರು ಮಾಡುತ್ತಿಲ್ಲ. ಒಟ್ಟಿನಲ್ಲಿ ಈ ಅಧ್ಯಯನಗಳ ಮಹತ್ತರವಾಧ ಉದ್ದೇಶವು ಏಕೆ ನಮಗೆಲ್ಲಾ ದೈಹಿಕ ಚಟುವಟಿಕೆಯ ಕಡ್ಡಾಯವಾದ ಅವಶ್ಯಕತೆ ಎಂಬುದನ್ನು ಶಾರೀರಕ ಹಾಗೂ ಆರೋಗ್ಯ ಸಮೀಕರಣದ ಮೂಲಕ ಮಾನವ ಹಿತದಲ್ಲಿ ವಿಸ್ತರಿಸಲು ಮಾಡುತ್ತಿರುವ ಪ್ರಯೋಗವಾಗಿದೆ.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್
ಹೆಚ್ಚಿನ ಓದಿಗೆ:
Frampton, J., Murphy, K.G., Frost, G. et al. Short-chain fatty acids as potential regulators of skeletal muscle metabolism and function. Nat Metab 2, 840–848 (2020). https://doi.org/10.1038/s42255-020-0188-7
Gabriel, B.M., Zierath, J.R. Circadian rhythms and exercise — re-setting the clock in metabolic disease. Nat Rev Endocrinol 15, 197–206 (2019). https://doi.org/10.1038/s41574-018-0150-x
Koelwyn, G.J., Zhuang, X., Tammela, T. et al. Exercise and immunometabolic regulation in cancer. Nat Metab 2, 849–857 (2020). https://doi.org/10.1038/s42255-020-00277-4
Kusuyama, J., Alves-Wagner, A.B., Makarewicz, N.S. et al. Effects of maternal and paternal exercise on offspring metabolism. Nat Metab 2, 858–872 (2020). https://doi.org/10.1038/s42255-020-00274-7
Moreira, J.B.N., Wohlwend, M. & Wisløff, U. Exercise and cardiac health: physiological and molecular insights. Nat Metab 2, 829–839 (2020). https://doi.org/10.1038/s42255-020-0262-1
Murphy, R.M., Watt, M.J. & Febbraio, M.A. Metabolic communication during exercise. Nat Metab 2, 805–816 (2020). https://doi.org/10.1038/s42255-020-0258-x