ಮಾನವ ವಸತಿ ಎಲ್ಲೆಲ್ಲಿ ಇದೆಯೋ ಅಲ್ಲೆಲ್ಲಾ ತೆಂಗು ಇದೆ, ಅನ್ನುವ ಮಾತಿದೆ. ಅದರಲ್ಲೂ ಭೂಮಧ್ಯೆರೇಖೆಯ ಎರಡೂ ಬದಿಗಳಲ್ಲಿ ನಾಗರಿಕ ಬೆಳವಣಿಗಾಗಿ ಜನರು ಅಡ್ಡಾಡಿದಲ್ಲೆಲ್ಲಾ, ಹಾಗೂ ಅದರ ಮೊದಲೂ “ನೀರಿನಗುಂಟ(?)” ನಿರಾಯಾಸವಾಗಿ ಸಾಗಿದ ತೆಂಗು ಅಷ್ಟೂ ಹರಹನ್ನು ತನ್ನೊಂದಿಗೆ ಜೋಡಿಸಿಕೊಂಡಿದೆ, ಎಲ್ಲವನ್ನೂ ನಿಭಾಯಿಸುತ್ತಲೇ ಮುಂದುವರೆದಿದೆ. ತೆಂಗು ಮಾತ್ರ ಹೀಚಾಗಿರಲಿ, ಎಳೆಯದಾಗಿರಲಿ, ಬಲಿತಿರಲಿ, ಒಣಗಿರಲಿ, ಏನೇ ಆಗಿದ್ದರೂ ಅದು ಕಾಯಿ ಮಾತ್ರವೇ! ಮಾಗಿ ಹಣ್ಣಾಗಿ ಮೊಳಕೆಯೊಡೆಯುತ್ತಿದ್ದರೂ ಸರಿಯೇ ತೆಂಗು-ಕಾಯಿಯೇ..! ನಾವೆಲ್ಲರೂ ಸಾಮಾನ್ಯವಾಗಿ ಕಾಯಿ ಅಂತಲೇ ಎನ್ನುವುದೂ ತೆಂಗಿನಕಾಯಿಯನ್ನೇ… ಅದಕ್ಕೆ ಕಾಯಿ ಚಟ್ನಿ, ಕಾಯಿ ತುರಿ, ಕಾಯಿ ಹಾಲು, ಕಾಯೊಬ್ಬಟ್ಟು, ದೇವಾಲಯಗಳಲ್ಲಿ ನೈವೇದ್ಯಕ್ಕೆ “ಹಣ್ಣು-ಕಾಯಿ”ಯಲ್ಲೂ ಕೂಡ. ಎಲ್ಲದರಲ್ಲೂ ಕಾಯಿ ಅಂದರೆ ತೆಂಗೇ! ತೆಂಗು ಕಾಸ್ಮೋಪಾಲಿಟಿನ್. ಮಾನವರ ಜೊತೆಗೆ ಓಡಾಡಿದ್ದರಿಂದ ಅದರ ಹಂಚಿಕೆ ಹಾಗೂ ಹಬ್ಬಿರುವ ಬಗ್ಗೆಯೂ ಮಹತ್ತರವಾದ ಕಥಾನಕವನ್ನೇ ಸೃಸ್ಟಿಸಿದೆ. ಅಷ್ಟೆಲ್ಲಾ ಓಡಾಡಿಯೂ ತನ್ನತನವನ್ನು ಅದ್ಭುತವಾಗಿ ಉಳಿಸಿಕೊಂಡಿದೆ. ಇದನ್ನೆಲ್ಲಾ ಹೆಕ್ಕಿ ಹುಡುಕಾಡಿದ ಸಂಗತಿಗಳು ತೆಂಗನ್ನು ಬರಿಗೈಯಲ್ಲಿ ಕೊಬ್ಬರಿಯನ್ನು ಬಿಡಿಸುವಷ್ಟು ಜಟಿಲವೂ, ಹಾಗೂ ನಂತರ ತಿನ್ನುವಷ್ಟೇ ಆನಂದದಾಯಕವೂ ಆಗಿವೆ. ಕಾಯಿಗಳೂ ಅಷ್ಟೇ ಅಷ್ಟೊಂದು ಎತ್ತರದಲ್ಲಿದ್ದು ನೀರು ತುಂಬಿಕೊಂಡು, ಮಾನವಕುಲದ “ದಣಿವಾರಿಸಲೆಂದೇ” ಹುಟ್ಟಿದೆಯೇನೋ ಎನ್ನುವ ಕೌತುಕವೂ ಇವುಗಳ ಜೊತೆಗಿದೆ.
ನನ್ನ ಬಾಲ್ಯದಲ್ಲಿ ಒಂದು ಒಗಟನ್ನು ಕೇಳುತ್ತಿದ್ದರು. “ಊರೆಲ್ಲಾ ಸುತ್ತಾಡಿಕೊಂಡು ಬಂದು, ದೇವರ ಮುಂದೆ ಉಚ್ಚೆ ಹೊಯ್ಯುತ್ತೆ” ಏನು-ಹೇಳು, ಎನ್ನುತ್ತಿದ್ದರು. ದೇವರ ಮುಂದೆ ಉಚ್ಚೆ ಹೊಯ್ಯುವ ಧೈರ್ಯದ ಬಗ್ಗೆ ಆ ಕ್ಷಣ ಬೆರಗಾಗುತ್ತಿತ್ತು. “ತೆಂಗಿನಕಾಯಿ” ಎಂದು ಗೊತ್ತಾದ ಮೇಲಂತೂ, ಒಡೆಯುವಾಗೆಲ್ಲಾ “ಆ ಉಚ್ಚೆ”ಯನ್ನು ಜೋಪಾನವಾಗಿ ಕಪ್ಪು-ಲೋಟಾಗಳಲ್ಲಿ ಹಿಡಿದಿಡುವ ಜಾಣತನದ ಕಲಿಕೆಯು ಇನ್ನೂ ಮುಂದುವರೆದಿದೆ. ಒಂದು ಹನಿಯೂ ನೆಲದ ಪಾಲಾಗದಂತೆ ಕಾಯಿ ನೀರನ್ನು ಹಿಡಿಯುವುದು ಸಾಧ್ಯವಾಗಿಯೇ ಇಲ್ಲ. ಈ ಪ್ರಯತ್ನಗಳು ನಿಮ್ಮಲ್ಲೂ ಆಗಿರಬಹುದು, ಗೆದ್ದ ಜಾಣರೂ ಇರಬಹುದು. ಎಷ್ಟೋ ಬಾರಿ ಒಂದು ಹನಿಯೂ ಸಿಗದಂತೆ ನೆಲದ ಪಾಲಾಗುವುದೂ ನಿಜ. ಅಷ್ಟರ ಮಟ್ಟಿಗೆ ನಾವು ಅರಸುವುದನ್ನು ಸುತ್ತಲೂ ಕೋಟೆ ಕಟ್ಟಿ ನಮಗಾಗಿ ಕಾಯ್ದಿಟ್ಟು ಕೊಟ್ಟಿರುವ ಸಸ್ಯ ತೆಂಗು. ನೆಲದೊಳಗಡಗಿದ ಬೇರುಗಳಿಂದ ಮೊದಲಾಗಿ ತುದಿಯಲ್ಲಿನ ಗರಿಯವರೆಗೂ ನೂರಾರು ಬಳಕೆಗಳನ್ನು ಸಾಧ್ಯವಾಗಿಸಿರುವ ತೆಂಗು ತನಗೆಂದೇ ಏನನ್ನೂ ಮಾಡಿಕೊಂಡಿಲ್ಲ, ಎನ್ನುವುದುಂಟು. ತೆಂಗು ಮೂಲತಃ ಮಲಯಾಳಿ ಪದ ತೆಂಗೈ ಅಥವಾ ತೆಂಗಾ ದಿಂದ ಬಂದಿದೆ. ಇದರ “ತೆಂ” ಅರ್ಥವೇ ದಕ್ಷಿಣ ಎಂಬುದಾಗಿದೆ. ಹಾಗಾಗಿ ನಮ್ಮಲ್ಲ, ದಕ್ಷಿಣ ಭಾರತದಲ್ಲಿರುವ ಎಂದರ್ಥ. ಇಲ್ಲಿನ ಕೇರಳ, ತಮಿಳುನಾಡು, ಕರ್ನಾಟಕ ಮತ್ತು ಹಳೆಯ ಆಂಧ್ರಪ್ರದೇಶ ರಾಜ್ಯಗಳು ಒಟ್ಟಾಗಿ ನಮ್ಮ ದೇಶದ ಪ್ರತಿಶತ 90ರಷ್ಟು ಉತ್ಪಾದನೆ ಮಾಡುತ್ತವೆ. 11-12 ಕೋಟಿ ಟನ್ನುಗಳಷ್ಟು ಒಟ್ಟಾರೆಯ ಉತ್ಪಾದನೆಯಲ್ಲಿ ಪ್ರತಿಶತ 22-23ರಷ್ಟು ಉತ್ಪಾದಿಸುವ ನಮ್ಮ ರಾಜ್ಯ ಮೂರನೆಯ ಸ್ಥಾನದಲ್ಲಿದೆ. ಮೊದಲ ಎರಡು ಸ್ಥಾನಗಳು ಕೇರಳ ಹಾಗೂ ತಮಿಳುನಾಡಿನ ನಡುವೆ ಬದಲಾಗುತ್ತಾ ಇರುವುದುಂಟು.
ತೆಂಗು ನಮ್ಮಲ್ಲಿ ಬಹಳ ಹಿಂದಿನಿಂದಲೂ ಇರುವಂತಹದ್ದು. ವೇದಗಳು, ರಾಮಾಯಣ, ಮಹಾಭಾರತ ಅಲ್ಲದೆ ಶ್ರೀಲಂಕದ ಪಾಚೀನ ಆಕರಗಳ ದಾಖಲೆಗಳು ಭಾರತೀಯ ಉಪಖಂಡದಲ್ಲಿ ತೆಂಗು ಕ್ರಿಸ್ತ ಪೂರ್ವ ಒಂದನೆಯ ಶತಮಾನಕ್ಕೂ ಮೊದಲೇ ಕೃಷಿಗೆ ಒಳಗಾಗಿರುವ ಮಾಹಿತಿಗಳನನು ಒದಗಿಸುತ್ತವೆ. ಅದಲ್ಲದೆ ನಂತರದಲ್ಲಿನ ವಿವಿಧ ಸಾಗರಯಾನಗಳ ದಾಖಲೆಗಳೂ, ಪ್ರವಾಸಿಗರ ಟಿಪ್ಪಣಿಗಳೂ ಭಾರತದ ನೆಲದ ಹಾಗೂ ಪೆಸಿಫಿಕ್ ದ್ವೀಪಗಳ ತೆಂಗಿನ ಬಗೆಗೆ ತಿಳಿಸುತ್ತವೆ. ಸಿಂದಬಾದ್ ನ ಸಾಗರಯಾನಗಳಲ್ಲಿ, ಅರಬ್ಬಿಯನ್ ನೈಟ್ಸ್, ಕೆಲವು ಇಟಾಲಿಯನ್ ಪ್ರಯಾಣದ ದಾಖಲೆಗಳಲ್ಲಿ ತೆಂಗಿನ ವಿವರಗಳು ಬರುತ್ತವೆ.
ಆರನೆಯ ಶತಮಾನದ ಕಾಸ್ಮಾಸ್ ಮಾಂಕ್ ಎಂಬ ಗ್ರೀಕ್ ವ್ಯಾಪಾರಿ ಹಾಗೂ ಮುಂದೆ ಏಕಾಂತವಾಗಿ ಜೀವನ ಕಳೆದಾತ ಅನೇಕ ಬಾರಿ ಭಾರತವನ್ನು ಸಂದರ್ಶಿಸಿದ್ದಾನೆ. ಆತನ ಬರಹಗಳು ನಿಖರವಾದ ಅತ್ಯಂತ ಹಳೆಯ ದಾಖಲೆಗಳಾಗಿವೆ. ಸಚಿತ್ರವಾದ ವಿವರಗಳೊಂದಿಗೆ ಮೊಟ್ಟ ಮೊದಲು ತೆಂಗನ್ನು ವರ್ಣಿಸಿದ್ದು ಹೆಂಡ್ರಿಕ್ ವಾನ್ ರೀಡ್. ಆತನ ಪ್ರಕಟಣೆಯಾದ “ಹಾರ್ಟಸ್ ಮಲಬಾರಿಕಸ್”ನ ಮೊದಲ ಸಂಪುಟದಲ್ಲಿ(1678)ಯೇ ತೆಂಗಿನ ಚಿತ್ರಸಹಿತವಾದ ವಿವರಗಳಿವೆ. ಆಸ್ಟ್ರೇಲಿಯಾದ ರಾಷ್ಟ್ರೀಯ ಗ್ರಂಥಾಲಯದ ಆರ್ಕೈವ್ಸ್‌ನಲ್ಲಿ 1822ರಲ್ಲಿ ಲೂಯಿಸ್ ಕೊರಸ್ ಎಂಬಾತ ರಚಿಸಿದ ಚಿತ್ರವೂ ಇದೆ. (ಎರಡೂ ಚಿತ್ರಗಳನ್ನು ಇಲ್ಲಿ ಕೊಟ್ಟಿದೆ)
ಕೋಕಸ್ ನ್ಯುಸಿಫೆರಾ(Cocos nucifera) ಎಂಬ ಸಸ್ಯವೈಜ್ಞಾನಿಕ ಹೆಸರು. ಕೋಕಸ್(Cocos) ಪದದ ಹುಟ್ಟು ಹಳೆಯ ಸ್ಪ್ಯಾನಿಶ್‌ನಿಂದ ಬಂದದ್ದು. ತೆಂಗಿನಲ್ಲಿರುವ ಮೂರು ಕಣ್ಣುಗಳಿಂದ ಅದು ಕೋತಿಯ ಮುಖವನ್ನು ಹೋಲುತ್ತದೆಯಂತೆ. ಕೋಕಸ್ ಅಂದರೆ ಕೋತಿಯ ಮುಖ ಎಂದರ್ಥ. ಇನ್ನು ನ್ಯುಸಿಫೆರಾ (Nucifera) ಎಂದರೆ Nut bearing. ಕಾಯನ್ನು ಹೊಂದಿದ ಎಂದರ್ಥ. ನಿಜಕ್ಕೂ ತೆಂಗು ಸಸ್ಯವೈಜ್ಞಾನಿಕವಾಗಿ ನಟ್(Nut)ಅಲ್ಲ. ಅಂದರೆ ಗೋಡಂಬಿ, ಬಾದಾಮಿ ತರಹದ ಹಣ್ಣಲ್ಲ. ಇದನ್ನು ಡ್ರುಪ್ (Drupe)- ಎಂದು ಹೆಸರಿಸುತ್ತಾರೆ. ಇದರಲ್ಲಿ ಹಣ್ಣು ಮೂರು ಪದರಗಳಲ್ಲಿ ಇರುತ್ತದೆ. ಹೊರ ಪದರ, ಮಧ್ಯದ ಪದರ ಹಾಗೂ ಒಳಗಿನ ಪದರ. ತೆಂಗಿನ ಸಸ್ಯ ಮೂಲನೆಲದ ತವರಿನ ಬಗ್ಗೆ ಸಾಕಷ್ಟು ಚರ್ಚೆಗಳಿವೆ. ಕೆಲವು ವಾದಗಳು ಆಗ್ನೇಯ ಏಶಿಯಾ ಎಂದೂ ಕೆಲವು ಪಶ್ಚಿಮ ಏಶಿಯಾದ ನೆಲವೆಂದೂ, ಮತ್ತೋರ್ವರು ಇವೆರಡನ್ನೂ ತೆಗೆದು ಹಾಕಿ ಅಮೆರಿಕಾವೆ ಅದರ ತವರೆಂದೂ ಅಂದ್ದಿದ್ದರು. ಏಕೆಂದರೆ ನೂರಾರು ದಿನ ನೀರಿನಲ್ಲಿ ತೇಲಿ ಹೋಗುತ್ತಾ ಸಹಸ್ರಾರು ಮೈಲುಗಳಾಚೆ ಸಾಗಿ ನೆಲಸಿಕ್ಕ ಕಡೆದ ತಳವೂರಿ ಮರವಾಗುವ ಗುಣವನ್ನು ಬಳಸಿ ಹೀಗೆ ಹೇಳುವುದುಂಟು. ಏಕೆಂದರೆ ಕೊಲಂಬಸ್ಸನಿಗಿಂತಲೂ ಮೊದಲೇ ಅಮೆರಿಕಾ ಖಂಡಗಳನ್ನು ತಲುಪಿರುವ ಬಗೆಗೆ ನಂಬಲಾರ್ಹ ದಾಖಲೆಗಳು ಇವೆ. ಸಾಗರದ ನೀರಿನಲ್ಲಿ ತೇಲುವಾಗ, ನೀರಿನಲ್ಲಿರುವಷ್ಟು ಕಾಲ ಉಪ್ಪಿನ ಕಾರಣದಿಂದ ಅದು ಮೊಳೆಯುವುದಿಲ್ಲ. ತೇಲುತ್ತಾ ಮುಂದೊಮ್ಮೆ ದಡಕ್ಕೆ ಸೇರಿದಾಗ, ನೆಲದಲ್ಲಿ ಆತುಕೊಂಡು ಸಿಹಿನೀರಿನ ಸ್ಪರ್ಶದಿಂದಲೇ ಅದು ಮೊಳೆಯುವುದು. ಹೀಗೆ ಸಾಗುವುದಾದದರೂ ಜನರು ಕಷ್ಟ ಪಟ್ಟು ಹೊತ್ತುಕೊಂಡು ಹೋಗಿ ವಿವಿಧ ನೆಲವನ್ನು ಅದರ ನೆಲೆಯಾಗಿ ಮಾಡಿರುವುದನ್ನು ಪ್ರಮುಖವಾದ ಅಧ್ಯಯನಗಳು ತಿಳಿಸುತ್ತವೆ.
ಒಟ್ಟಾರೆಯಾಗಿ ಈಗ ಎರಡು ಪ್ರಮುಖವಾದ ಪ್ರದೇಶಗಳನ್ನು ತೆಂಗು ಕೃಷಿಯ ನೆಲೆಗಳೆಂದು ಗುರುತಿಸಲಾಗಿದೆ. ಅವುಗಳೆಂದರೆ “ಇಂಡಿಯನ್ ತೆಂಗು ನೆಲೆ“ ಹಾಗೂ ಇಂಡೋನೇಶಿಯಾ, ಮಲೇಶಿಯಾ ಸುತ್ತಮುತ್ತಲಿನ “ಪೆಸಿಫಿಕ್ ತೆಂಗು ನೆಲೆ“. ಹಲವು ಪುರಾತತ್ವ ಉತ್ಖನನಗಳಿಂದ ಪ್ರಮುಖವಾಗಿ ಭಾರತೀಯ ಪಶ್ಚಿಮದ ಪ್ರದೇಶದಲ್ಲಿ ಹೆಚ್ಚಿನ ತೆಂಗಿನ ಕೃಷಿಯ ಹಿನ್ನೆಲೆಗಳು ದೊರಕಿವೆ. ಈ ಎರಡೂ ನೆಲೆಗಳಿಂದ ತೆಂಗು ವಿವಿಧ ಮಾರ್ಗಗಳಿಂದ ಆಫ್ರಿಕಾ, ಹಾಗೂ ಅಮೆರಿಕಾವನ್ನು ತಲುಪಿದೆ. ಭಾರತದಿಂದ ಅರಬ್ಬರ ಮೂಲಕ ಪೂರ್ವ ಆಫ್ರಿಕಾವನ್ನೂ ಐರೋಪ್ಯರ ಮೂಲಕ ಪಶ್ಚಿಮ ಆಫ್ರಿಕಾವನ್ನು ತಲುಪಿದೆ. ಪೆಸಿಫಿಕ್ ನೆಲೆಯಿಂದ ಐರೋಪ್ಯರ ಹಾಗೂ ಆಸ್ಟ್ರೋನೆಶಿಯನ್ನರ ಮೂಲಕ ಅಮೆರಿಕಾ ಖಂಡಗಳನ್ನು ತಲುಪಿದೆ. ಪ್ರಮುಖವಾಗಿ ಎರಡು ಕೃಷಿ ನೆಲೆಗಳಂತೆ ಎರಡು ತಳಿಯ ಬಗೆಗಳನ್ನೂ ಗುರುತಿಸಿರುವ ಅಚ್ಚರಿಯ ಹಾಗೂ ವಿಸ್ತೃತವಾದ ಅಧ್ಯಯನವೊಂದು ನಡೆದಿದೆ.
ಅಮೆರಿಕಾದ ಸೆಂಟ್ ಲೂಯಿಸ್‌ನಲ್ಲಿರುವ ವಾಷಿಂಗ್‌ಟನ್ ವಿಶ್ವವಿದ್ಯಾಲಯದ ಸಸ್ಯವಿಕಾಸ ವಿಜ್ಞಾನಿ ಕೆಲೆತ್ ಓಲ್ಸೆನ್ ಅವರ ಮುಂದಾಳತ್ವದಲ್ಲಿ ತೆಂಗು ಮಾನವರ ಜೀವನದೊಳಗೆ ಬೆಸೆದ ಸಂಗತಿಗಳ ವಿವರವಾದ ಅಧ್ಯಯನವೊಂದು ಇತ್ತೀಚೆಗೆ ನಡೆದಿದೆ. ಅದು ಆಸ್ಟ್ರೇಲಿಯಾ, ಫ್ರಾನ್ಸ್ ದೇಶಗಳ ವಿವಿಧ ವಿಶ್ವವಿದ್ಯಾಲಯಗಳ ತಜ್ಞರನ್ನೂ ಒಳಗೊಂಡಿದೆ. ಜಗತ್ತಿನ ಸುಮಾರು 1300 ತೆಂಗಿನ ಡಿ.ಎನ್.ಎ.(DNA)ಗಳನ್ನು ಹೆಕ್ಕಿ ವಿವಿಧತೆಗಳನ್ನು ಹಾಗೂ ಅವುಗಳೊಳಗಿನ ಸಾಮ್ಯತೆಯನ್ನೂ ಅರಿಯುವ ಪ್ರಯತ್ನವನ್ನು ಮಾಡಿದ್ದಾರೆ. ಅಧ್ಯಯನಕ್ಕೆ ಮೊದಲು ಅವರ ವಿಶ್ವಾಸ ಇದ್ದದ್ದು ಇಷ್ಟೊಂದು ನೆಲೆಯನ್ನು ಅರಸಿ ತನ್ನ ಇರುವನ್ನು ಕಂಡುಕೊಂಡಿರುವ ತೆಂಗು ಒಂದು ಕಲಸ-ಮೇಲೋಗರದ ಆಗರವಾಗಿರಬೇಕು ಎಂದು ಕೊಂಡಿದ್ದರು. ಆದರೆ ಅರಬ್ಬರು, ಐರೋಪ್ಯರು ಕಷ್ಟ ಪಟ್ಟು ಹೊತ್ತೊಯ್ದು ಖಂಡಾಂತರ ಮಾಡಿಯೂ ತನ್ನ ಮೂಲ ನೆಲೆಗಳಾದ “ಭಾರತೀಯತೆ” ಹಾಗೂ “ಪೆಸಿಫಿಕ್” ಮೂಲದ ಗುಣಗಳನ್ನು ಉಳಿಸಿಕೊಂಡಿದೆಯಂತೆ! ಹಾಗಾಗಿ ಜಗತ್ತಿನಾದ್ಯಂತ ಹಬ್ಬಿದ್ದರೂ ಪ್ರಮುಖವಾಗಿ ನಾವೆಲ್ಲರೂ ಗುರುತಿಸುವ ಪರಿಯಂತೆಯೇ ಒಂದು ಉದ್ದ ತಳಿಯ ತೆಂಗು ಮತ್ತೊಂದು ಗಿಡ್ಡ ತಳಿಯ ತೆಂಗು ಎಂಬುದಾಗಿ ಹೆಚ್ಚೂ ಕಡಿಮೆ ಏಕರೂಪತೆಯನ್ನು ಉಳಿಸಿಕೊಂಡಿರುವ ತೆಂಗು ಮಾನವಕುಲವನ್ನು ಆಪ್ತವಾಗಿ ನೋಡಿಕೊಂಡಿದೆ. ನಾವಂತೂ ಕೇಳಿದ್ದೆಲ್ಲವನ್ನೂ ಕೊಡುವ ದೇವ ಲೋಕದ ಮರವೆಂದು ಕರೆದು “ಕಲ್ಪವೃಕ್ಷ”ವಾಗಿಸಿದ್ದೇವೆ. ಮಲಯದವರು “ಪೊಕಾಕ್ ಸೆರಿಬು ಗನ- (“Pokok seribu guna”) ಅಂದರೆ “ಸಾವಿರ ಬಳಕೆಗಳ ಮರ” (The tree of a thousand uses) ಎಂದು ಕರೆದಿದ್ದಾರೆ. ಫಿಲಿಫಿನೊಗಳಿಗೆ ಅವರ ಬದುಕಿನ ಮರ (Tree of Life)ವಾಗಿದೆ. ಇಂಡೊನೇಶಿಯಾದವರಿಗೆ “ಸಮೃದ್ಧಿಯ ಮರ” ಅಥವಾ “ಮೂರು ತಲೆಮಾರುಗಳ ಮರ(Tree of abundance” or “Three generations tree”) ವಾಗಿದೆ.
ಉದ್ದ ಮತು ಗಿಡ್ಡ ಎಂಬ ಎರಡು ಪ್ರಮುಖವಾದ ಬಗೆಯ ತೆಂಗುಗಳು ಜಗತ್ತಿನಾದ್ಯಂತ ಇವೆಯಷ್ಟೇ. ಇವುಗಳನ್ನು ಹಿಂದೂ ಮಹಾ ಸಾಗರ ಮತ್ತು ಪೆಸಿಫಿಕ್ ಮಹಾ ಸಾಗರಗಳು ಸಂಧಿಸುವ ವಲಯದ ಸಾಂಪ್ರದಾಯಿಕ ಸಾಮೊಯನ್ ಭಾಷೆಯಲ್ಲಿ “ನಿಯು ಕಾಫಾ (Niu kafa)” ಮತ್ತು“ನಿಯು ವಾಯ್ (Niu vai)” ಎಂದು ಅನುಕ್ರಮವಾಗಿ ಕರೆಯುತ್ತಾರೆ. ಉದ್ದನೆಯ ತೆಂಗಿನ ಮರಗಳು 60-70 ಅಡಿಗಳಿಂದ 100 ಅಡಿಗಳವರೆಗೂ ಬೆಳೆಯುವುದುಂಟು. ಈ ಉದ್ದನೆಯ ತೆಂಗು ಹೆಚ್ಚು ಕೃಷಿಗೆ ಒಳಗಾಗಿದೆ. ಪ್ರತಿಶತ 90-95ರಷ್ಟು ಈ ಬಗೆಯ ತೆಂಗು ಹರಡಿದೆ. ಈ ತೆಂಗಿನ ಹಸಿಕಾಯಿಗಳು ತ್ರಿಕೋನಾಕೃತಿಯಲ್ಲಿದ್ದು ಹೆಚ್ಚು ನಾರನ್ನು ತುಂಬಿಕೊಂಡಿರುತ್ತವೆ. ಈ ತಳಿಗಳೆಲ್ಲಾ ಒಣಕೊಬ್ಬರಿಗೆ ಹಾಗೂ ಎಣ್ಣೆಯನ್ನು ತೆಗೆಯಲು ಹೆಚ್ಚು ಅನುಕೂಲವಾದವು. ಇನ್ನು ಗಿಡ್ಡ ತೆಂಗು ನಿಯು ವಾಯ್ ಬಗೆಯವು. ಇವುಗಳು ತುಂಬಿಕೊಂಡಿರುವ ಸಿಹಿಯಾದ ನೀರಿಗೆ ಜನಪ್ರಿಯವಾದವು. ಇವು ಹೆಚ್ಚು ಪಾಲು ದುಂಡನೆಯ ಕಾಯಿಗಳು. ಇವು ಸಾಮಾನ್ಯವಾಗಿ ಶುಭ್ರ ಬಣ್ಣದವು, ಹಸಿರಾಗಿರಲಿ ಅಥವಾ ಹಳದಿಯಾಗಲಿ ಶುಭ್ರವಾದವು. ಕೆಲವು ಕೆಂಪಾದ ಅಥವಾ ಬಂಗಾರದ ಬಣ್ಣದ ಸೌಂದರ್ಯವನ್ನೂ ಹೊಂದಿರುವುದುಂಟು. ಕೃಷಿಗೆ ಅಳವಡಿಕೆಯಲ್ಲಿ ಇವುಗಳ ಪಾಲು ಪ್ರತಿಶತ 5-10 ಮಾತ್ರ! ಗಿಡ್ಡ ತಳಿಗಳು ತಿನ್ನುವ ಕೊಬ್ಬರಿಗೆ, ಉದ್ದನೆಯವು ಎಣ್ಣೆಯ ಕೊಬ್ಬರಿಗೆ ಹೆಸರಾದವು. ಈ ಗಿಡ್ಡ ಬಗೆಯವು ಹೆಚ್ಚು ಕೃಷಿಗೆ ಒಳಗಾದ ಬಗೆಯಿಂದ ವಿಕಾಸಗೊಂಡಿವೆ. ಉದ್ದನೆಯವು ವನ್ಯ ಮೂಲವನ್ನು ಉಳಿಸಿಕೊಂಡ ತಳಿಗಳು.
ಹಿಂದೂ ಮಹಾ ಸಾಗರ ಮತ್ತು ಪೆಸಿಫಿಕ್ ಮಹಾ ಸಾಗರಗಳು ತೆಂಗಿನ ನೈಸರ್ಗಿಕ ಹಂಚಿಕೆ ಹಾಗೂ ಈಗಾಗಲೇ ವಿವರಿಸಿದ “ಭಾರತೀಯ ನೆಲೆ” ಹಾಗೂ “ಪೆಸಿಫಿಕ್ ನೆಲೆ”ಯ ಬಗೆಗಳ ನಡುವಣ ಸಂಕರಕ್ಕೂ ಕಾರಣವಾಗಿವೆ. ಹಾಗಾಗಿ ಈ ಸಾಗರಗಳು ಸಂಧಿಸುವ ಮಡಗಾಸ್ಕರ್ ಆಸುಪಾಸಿನಲ್ಲಿ ಅಧ್ಯಯನಕ್ಕೆ ಒಳಪಡಿಸಿದ ತೆಂಗಿನಲ್ಲಿ ಈ ಎರಡೂ ನೆಲೆಗಳ ಸಂಕರದ ಗುಣಗಳನ್ನು ತೆಂಗು ಹೊತ್ತಿದೆಯಂತೆ. ಈ ಸಾಗರಗಳನ್ನು ಬಳಸಿ ವ್ಯಾಪಾರ ಅಥವಾ ವಲಸಿಗರ ಕಾರಣದಿಂದ ತೆಂಗು ಈ ನೀರಿನ್ನು ಬಳಸಿ ಹಂಚಿದೆ. ಈ ಸಾಗರಯಾನಗಳ ಮೂಲಕ ಅಡ್ಡಾಡಿದ ಸಮುದಾಯಗಳು ತೆಂಗಿನ ವಲಸೆಗೂ ಕಾರಣವಾಗಿವೆ. ಹೀಗೆ ಮಾನವ ಸಾಹಚರ್ಯವನ್ನು ತೆಂಗು ನಿರಂತರವಾಗಿಸಿ ಈಗಲೂ ಅನೇಕ ಮನೆಗಳ ಮುಂದೆ ಅಥವಾ ಹಿಂದೆ ಜಾಗವಿದ್ದಲ್ಲಿ ಬೆಳೆಸುವ ಪರಿಪಾಠಕ್ಕೆ ಒಳಗಾಗಿದೆ. ಈಗಿನ ನಗರೀಕರಣದಲ್ಲಿ ಕಾಣದಿದ್ದರೂ ಸಣ್ಣ-ಪುಟ್ಟ ಪಟ್ಟಣಗಳಲ್ಲೂ ಮನೆಯ ಮುಂದೋ ಅಥವಾ ಹಿಂದೋ ತೆಂಗಿನ ಮರವೊಂದನ್ನು ಸಾಕುವ ರೂಢಿಯನ್ನು ಕಾಣಬಹುದು. ನಗರಗಳು ಬೆಳೆದಂತೆ ಅಂಗಳವನ್ನು ಚಾಚಿ ಮನೆಗಳು ಬೆಳೆದರೆ, ಮರವನ್ನು ಹಾಗೇ ಉಳಿಸಿಕೊಂಡು ಅದರ ನೆತ್ತಿಯ ಗರಿ ಚಾವಣೆಯನ್ನು ಮೇಲಿರುವ ಮನೆಗಳೂ ಇವೆ.
ತೆಂಗು ವಿಚಿತ್ರವಾದ ಮರ. ಅದಕ್ಕೆ ಅದನ್ನು ವಿಶ್ವಾಮಿತ್ರ ಸೃಷ್ಟಿ ಎನ್ನುವುದುಂಟು. ವಿಶ್ವಾಮಿತ್ರನ ಗೆಳೆಯ ರಾಜ ತ್ರಿಶಂಕುವು ಸ್ವರ್ಗದಿಂದ ಇಂದ್ರನಿಂದ ಹೊರಕ್ಕೆ ದಬ್ಬಿಸಿಕೊಂಡು ಬೀಳುತ್ತಿರುವನಿಗೆ, ತಡೆಯಲೆಂದು ಕಿರೀಟದ ಮರವನ್ನು ಸೃಷ್ಟಿಸಿದನೆಂದು ಪುರಾಣಗಳು ಹೇಳುತ್ತವೆ. ಅದೇನೆ ಇರಲಿ, ತೆಂಗು ಮಾತ್ರ ವಿಚಿತ್ರವೇ. ಒಂದೇ ಒಂದು ಕವಲೊಡೆಯದ ಕಾಂಡ! ಅದರ ತುದಿಯಲ್ಲಿ ಎಲೆಗಳೂ ಗರಿಗಳು! ಹರಡಿಕೊಂಡು ಗುಚ್ಚವನ್ನಾಗಿಸಿವೆ. ಎಲೆಗಳ ನಡುವೆಯ ಮೂಲದಲ್ಲಿ ಹೂವು-ಹಣ್ಣುಗಳಿಗೆ ಜಾಗ. ಇಡಿ ಗಿಡ ಏಕದಳ ಸಸ್ಯ. ಹುಲ್ಲಿನಂತೆ ಬೇರು ಹೊಂದಿರುವ ವಿಚಿತ್ರವಾದ ಮರ. ಆದರೂ ಅಲುಗಾಡದೆ ಬೀಳುವ ಜಾಯಮಾನವಿಲ್ಲ. ಅದಕ್ಕೆ ವಿಶ್ವಾಮಿತ್ರ ಸೃಷ್ಟಿ ಎಂಬ “ರೂಪಕ”. ತುಂಬಾ ಲೆಕ್ಕಾಚಾರದ ಮರ ತೆಂಗು. ಸಾಮಾನ್ಯವಾಗಿ 30ರಿಂದ 36 ಗರಿಗಳನ್ನು ಹೊಂದಿರುತ್ತದೆ. ಒಂದು ಇಡಿಯಾದ ಮಟ್ಟೆ, ಆಚೀಚೆಗೆ ಹರಡಿಕೊಂಡ ಗರಿಗಳು. ಪ್ರತೀ ತಿಂಗಳೂ ಒಂದೊಂದನ್ನೇ ಹುಟ್ಟಿಸುತ್ತದೆ. ಅತ್ಯಂತ ಆರೋಗ್ಯದ ಮೂರು ವರ್ಷ ದಾಟಿದ ಮರ ಅಂತಹಾ ಗರಿತುಂಬಿದ 36 ಎಲೆಗಳನ್ನು ಹೊಂದಿರುತ್ತದೆ. 26-30 ಇರುವುದೇ ಹೆಚ್ಚು. ಪ್ರತೀ ತಿಂಗಳು ಒಂದನ್ನು ಉದುರಿಸಿ, ಒಂದನ್ನು ಹುಟ್ಟಿಸುತ್ತದೆ. ಗರಿ ಬಿದ್ದರೂ ಮರದ ಮೇಲಿರುವ ಗರಿ ಅಷ್ಟೇ ಲೆಕ್ಕವನ್ನಿಟ್ಟು ಮಾನವ ಕುಲವನ್ನು ಕಾಪಾಡುತ್ತಿದೆ. ಹೀಗಿರುವ ಮರವು ನಮ್ಮ ಸಂಸ್ಕೃತಿಯಲ್ಲಿ, ಅನೇಕ ಬಗೆಯಲ್ಲಿ ಮುಖಾಮುಖಿಯಾಗಿದೆ. ನೂರರಿಂದ ಇನ್ನೂರು ಕಾಯಿಗಳನ್ನು ಪ್ರತೀ ವರ್ಷ ಬಿಡುವ ಮರಗಳೂ ಇವೆ. ಊರೂರಿಗೆ ಒಡನಾಟದ ವಿವಿಧ ಕಥಾನಕಗಳಿವೆ. ಬಗೆ, ಬಗೆಯ ಬಳಕೆಗಳನ್ನು ಕಟ್ಟಿಕೊಟ್ಟಿದೆ. ತಳಿಗಳೂ, ಮರಗಳೂ ತಮ್ಮದೇ ಸಂಗತಿಗಳಿಂದ ವಿಶೇಷವಾಗಿವೆ. ಎಳೆನೀರಿಗೆ, ಕೊಬ್ಬರಿಗೆ, ಎಣ್ಣೆಗಾಗಿ, ಅಯ್ಯೋ ಮಾದಕ ಪೇಯ ಟ್ಯಾಡಿಯೂ ಸೇರಿಕೊಂಡಿದೆ. ಜೊತೆಗೆ ಇಡೀ ರಾಷ್ಟದ, ರಾಜ್ಯದ, ಸ್ಥಳೀಯ ಪ್ರದೇಶಗಳನ್ನು ವಿಶೇಷವಾಗಿಸಿದೆ. ಅವೆಲ್ಲವುಗಳನ್ನೂ ಮುಂದಿನ ವಾರ ಮತ್ತಿದೇ ಸಸ್ಯಯಾನದಲ್ಲಿ ನೋಡೋಣ.
ನಮಸ್ಕಾರ
ಡಾ.ಟಿ.ಎಸ್. ಚನ್ನೇಶ್
ತೆಂಗಿನ ಬಗ್ಗೆ ಓದುತ್ತಾ ಓದುತ್ತಾ ತೆಂಗಿನೊಂದಿಗೆ ನಾವೂ ಸುದೀರ್ಘ ಸಾಗರ ಪ್ರಯಾಣ ಮಾಡಿದಂತಾಯ್ತು..ಮಾಹಿತಿ ಮಾತ್ರ ಅದ್ಭುತ..ನೆನಪಿಡಲು ಪುನಃ ಪುನಃ ಓದಬೇಕಾಗುವುದು..ವಿವಿಧ ಆಯಾಮಗಳಲ್ಲಿ ತೆಂಗಿನ ಮೂಲ, ವಿವಿಧ ಅನ್ವರ್ಥಕಗಳು, ಅವುಗಳ ಬಳಕೆ ಇತ್ಯಾದಿ ಇತ್ಯಾದಿ ಬಹಳ ಉಪಯುಕ್ತ ಮಾಹಿತಿ ಇದೆ. ಸಸ್ಯಗಳ ಹೆಳವರೇನೋ ಅನ್ನುವಷ್ಟು ಸಸ್ಯಗಳ ಮೂಲ ಕೆದಕಿ ಬರೆಯುವುದು ಅದ್ವತೀಯ..ಕೊನೆಗೆ ನಿಮ್ಮ ಬರೆಹಗಳನ್ನು ಓದಿದವರಿಗೆ ” ಹಾರ್ಟಸ್ ಮಲಬಾರಿಕಸ್” ಪ್ರತಿಗಳ ಸಂಪುಟಗಳನ್ನು ಒಮ್ಮೆಯಾದರೂ ಕಣ್ಣಾಡಿಸಬೇಕೆಂಬ ಕುತೂಹಲ ಉಂಟಾದರೆ ಆಶ್ಚರ್ಯವಿಲ್ಲ…ನಮಸ್ತೆ ..
ತೆಂಗು ಎಂದೊಡನೆ ನನಗೆ ನೆನಪಿಗೆ ಬಂದದ್ದು ನಾವು ಚಿಕ್ಕವರಿದ್ದಾಗ ಬರೆಯುತ್ತಿದ್ದ ಪ್ರಬಂಧ. ಹಸುವಿನ ಬಗ್ಗೆ ಪ್ರಬಂಧ ಬರೆಯಲು ಕೊಟ್ಟರು ಕೂಡ ಆ ಹಸುವನ್ನು ತೆಂಗಿನ ಮರಕ್ಕೆ ಕಟ್ಟಿ ಹಾಕಿ ತೆಂಗಿನ ಬಗ್ಗೆ ಪ್ರಬಂಧ ಬರೆಯುತ್ತಿದ್ದೆವು…
ತೆಂಗಿನ ಉಗಮದ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು..
ಕೆಲವು ವರ್ಷಗಳ ಹಿಂದೆ ದೊಡ್ಡ ಸುದ್ದಿಯಾಗಿದ್ದ ನುಸಿಪೀಡೆ, ಬೆಂಕಿ ರೋಗದ ಬಗ್ಗೆಯೂ ನೀವು ತಿಳಿಸಿ ಕೊಡುತ್ತೀರಾ ಎಂದು ಆಶಿಸಿದ್ದೇನೆ.
ತೆಂಗಿನ ಮರದ ತೆಂಗಿನ ಕಾಯಿ, ತೆಂಗಿನ ಮರದ ಕೈಗಳು(ಮಡಲು ಅಂತಾರೆ ತುಳು ಭಾಷೆಯಲ್ಲಿ) ಇಲ್ಲದೆ ದಿನಚರಿಯೆ ಕಷ್ಷವಾಗಿತ್ತು ಕೆಲ ದಶಕಗಳ ಹಿಂದೆ. ಅಡುಗೆ ಮನೆಯಲ್ಲಿ ಒಲೆ ಉರಿಯಬೇಕಾದರೆ ತೆಂಗಿನ ಎಲೆಗಳನ್ನು ಬಳಸಿ ಉರಿಸುತಿದ್ದರು. ಇಂದಿಗೂ ಹಳ್ಳಿಗಳಲ್ಲಿ ತೆಂಗಿನ ಮರ ವಿಭಿನ್ನ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಬಹುಪಯೋಗಿ ತೆಂಗು ಕಲ್ಪವೃಕ್ಷವೇ ಸರಿ.
ತೆಂಗಿನ ದಿನಕ್ಕಾಗಿ ಎನಾದರೂ ಬರೆಯಬೇಕೆಂದುಕೊಂಡವಳಿಗೆ ನಿಮ್ಮ ಲೇಖನ ಓದಿದ ಮೇಲೆ ಛೇ.. ಇನ್ನೇನು ಉಳಿದಿದೆ ನನಗೆ ಬರೆಯಲು ಅಂತ ಅನ್ನಿಸಿತು. ತುಂಬಾ ಸವಿವರವಾದ ಲೇಖನ. ಧ್ವನ್ಯವಾದಗಳು ಸರ್ ತೆಂಗಿನ ದಿನದ ಹಾರ್ದಿಕ ಶುಭಾಶಯಗಳೊಂದಿಗೆ🙏🙏