You are currently viewing ಮನೆಯಂಗಳದಿ ಎದಿರುಗೊಳ್ಳುವ ಲಕ್ಷ್ಮಿ – ಔಷಧಗಳ ಮೈದುಂಬಿಕೊಂಡ ತುಳಸಿ :  Ocimum tenuiflorum

ಮನೆಯಂಗಳದಿ ಎದಿರುಗೊಳ್ಳುವ ಲಕ್ಷ್ಮಿ – ಔಷಧಗಳ ಮೈದುಂಬಿಕೊಂಡ ತುಳಸಿ : Ocimum tenuiflorum

ಭಾರತೀಯರ ಹಲವು ಮನೆಗಳಲ್ಲಿ ಅದರಲ್ಲೂ ಧಾರಾಳವಾದ ಮನೆಯಂಗಳ ಇರುವ ಮನೆಗಳಲ್ಲಿ ಎದಿರುಗೊಳ್ಳುವ ಕಟ್ಟೆಯ-ಗಿಡ ತುಳಸಿ. ನಗರ-ಪಟ್ಟಣಗಳಲ್ಲಿ ಜಾಗವಿರದಿದ್ದರೂ ಕಾಂಪೌಂಡಿನ ಗೋಡೆಯಲ್ಲಿ ಸಣ್ಣ ಕುಂಡದಲ್ಲೂ ಕಾಣಿಸಿಕೊಂಡು, ಕನಿಷ್ಟ ಮುಂಜಾನೆಯಲ್ಲೊಂದು ಪೂಜೆಯ ನೆಪಕ್ಕಾದರೂ ಕಾಣಬರುವ ಗಿಡ. ಸಾಮಾನ್ಯವಾಗಿ ಅನೇಕರ ಮನೆಗಳಲ್ಲಿ ಹಾಗೂ ಹಿಂದೂ ದೇವಾಲಯಗಳಲ್ಲಿ ಪೂಜೆಗೆಂದು ಬೆಳೆಸುವ ಸಸ್ಯ. ಹಿಂದುಗಳಿಗೆ ತುಳಸಿ ಗಿಡ ಪವಿತ್ರವಾದ ಜೊತೆಗೆ ಹಲವಾರು ಔಷಧಗುಣಗಳನ್ನು ಒಳಗೊಂಡ ಗಿಡ. ಔಷಧಕ್ಕಾಗಿ, ಧಾರ್ಮಿಕ ಕಾರಣಕ್ಕಾಗಿ ಜೊತೆಗೆ ಅದರಿಂದ ತೈಲವನ್ನು ಸಂಶ್ಲೇಷಿಸಲು ತುಳಸಿಯನ್ನು ಬೆಳೆಯಲಾಗುತ್ತದೆ. ಶೈವರ ಮನೆಯಲ್ಲಿ ಅಥವಾ ದೇವಾಲಯಗಳಲ್ಲಿ ಬಿಲ್ವ ಹೇಗೋ ವೈಷ್ಣವರ ಮನೆ ಅಥವಾ ದೇವಾಲಯಗಳಲ್ಲಿ ತುಳಸಿ!

ತುಳಸಿಯು, ಮಿಂಟ್‌ -ಪುದಿನ ಕುಟುಂಬದ ಗಿಡ. ಲ್ಯಾಮಿಯೇಸಿಯೇ ಸಸ್ಯಕುಟುಂಬದ ಅನೇಕ ಸಸ್ಯಗಳು ತಮ್ಮೊಳಗೆ ಪರಿಮಳಯುಕ್ತವಾದ ರಾಸಾಯನಿಕಗಳನ್ನು ಹೊಂದಿದ್ದು, ಆ ಕಾರಣದಿಂದಲೇ ಮಾನವ ಕುಲಕ್ಕೆ ಹತ್ತಿರವಾಗಿವೆ. ತುಳಸಿಯು ಆಸಿಮಮ್‌ ಸಂಕುಲಕ್ಕೆ ಸೇರಿದ್ದು ಇದನ್ನು ಆಸಿಮಮ್‌ ಟೆನುಯಿಫ್ಲೊರಂ (Ocimum tenuiflorum) ಎಂದು ವೈಜ್ಞಾನಿಕವಾಗಿ ಹೆಸರಿಸಲಾಗಿದೆ. ಹಿಂದೊಮ್ಮೆ ಇದನ್ನು ಆಸಿಮಮ್‌ ಸಾಂಕ್ಟಮ್‌ (Ocimum sanctum)ಎಂದೂ ಕರೆಯಲಾಗುತ್ತಿತ್ತು. ಆಸಿಮಮ್‌ (Ocimum) ಪದದ ಅರ್ಥವೇ ಗ್ರೀಕ್‌ ಮೂಲದಲ್ಲಿ ಸುವಾಸನೆಭರಿತ ಎಂಬುದಾಗಿದೆ. ಸಾಂಕ್ಟಮ್‌ (sanctum) ಅಥವಾ ಟೆನುಯಿಫ್ಲೊರಂ ಎಂಬ ಎರಡೂ ಪದಗಳೂ ಪವಿತ್ರ ಎಂಬರ್ಥದವೇ ಆಗಿವೆ. ಹೀಗಾಗಿ ವೈಜ್ಞಾನಿಕ ನಾಮದೇಯವೂ ಸಹಾ ಪರಿಮಳಯುಕ್ತವಾದ ಪವಿತ್ರ ಗಿಡ ಎಂದೇ ಆಗಿದೆ. ಭಾರತವೇ ಇದರ ಮೂಲ ತವರು. ಪಂಜಾಬಿನ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನೆಯಂತೆ ತುಳಸಿಯು ಮಧ್ಯ ಭಾರತದ ಉತ್ತರ ಭಾಗದ ನೆಲಮೂಲದ್ದು. ಆದರೆ ಉಷ್ಣವಲಯದ ಬಹುತೇಕ ಭಾಗಗಳನ್ನು ಆವರಿಸಿದ ಸಸ್ಯವಾಗಿದೆ.

ಹಲವಾರು ಮನೆಗಳ ಅಂಗಳದಲ್ಲಿ ಸಹಜವಾಗಿ ಎದಿರುಗೊಳ್ಳುವ ವೃಂದಾವನಕಟ್ಟೆ ಅಥವಾ ತುಳಸಿ ಕಟ್ಟೆಯಲ್ಲಿ ಇದು ಇರುವುದುಂಟು. ʼವೃಂದಾʼವನ ಅಥವಾ ʼಬೃಂದಾʼವನ ಎಂದೂ ಕರೆಯಲಾಗುವ ಆ ಹೆಸರು ತುಳಸಿಗೆ ಪರ್ಯಾಯವಾದದ್ದು. ತುಳಸಿ(ವೃಂದಾ)ಯು ವಿಷ್ಟುವಿನ ಪತ್ನಿಯಾದ ಲಕ್ಷ್ಮಿಯ ಅವತಾರವೆಂದು ನಂಬಲಾಗುತ್ತದೆ. ವಿಷ್ಣುವನ್ನು ಅವನ ಅವತಾರವಾದ ಕೃಷ್ಣನನ್ನು ವರಿಸಲು ಲಕ್ಷ್ಮಿಯು ವೃಂದಳಾಗಿ ಹುಟ್ಟಿ ಅಸುರನ್ನು ವರಿಸಿ ವಿಧವೆಯಾಗಿ ಮುಂದೆ ದೇಹತ್ಯಾಗ ಮಾಡಿ ಸಮುದ್ರ ಮಥನಕಾಲದಲ್ಲಿ ಮತ್ತೆ ತುಳಸಿಯಾಗಿ ಹುಟ್ಟಿದವಳು. ಲಕ್ಷ್ಮಿಯ ಅವತಾರವಾಗಿದ್ದರಿಂದಲೇ ಕೃಷ್ಣನನ್ನು ವರಿಸುವ ತುಳಸಿ ಲಗ್ನವು ಪದ್ಮಪುರಾಣದಲ್ಲಿ, ವಿಷ್ಣುಪುರಾಣದಲ್ಲಿ ಹಾಗೂ ಭಾಗವತದಲ್ಲಿ ಬರುವ ಬಹು ದೊಡ್ಡ ಕಥನ. ತುಳಸಿ ಎಂದರೇ ಯಾರಿಗೂ ಸಾಟಿ ಇಲ್ಲದವಳು ಎಂದೇ ಅರ್ಥ.

ಸಾಮಾನ್ಯವಾಗಿ ಕಾರ್ತೀಕ ಮಾಸದ ಶುಕ್ಲ ಪಕ್ಷದ ಏಕಾದಶಿಯಿಂದ ಪೂರ್ಣಮಿಯ ನಡುವಿನ ಒಂದು ದಿನ ತುಳಸಿ ವಿವಾಹ ಎಂದು ಅನೇಕ ಹಿಂದುಗಳು ಆಚರಿಸುತ್ತಾರೆ. ತುಳಸಿಯ ವಿವಾಹದಿಂದ ಹಿಂದುಗಳಲ್ಲಿ ಮಹೂರ್ತಗಳು ಮದುವೆಗೆ ತೆರೆದುಕೊಳ್ಳುತ್ತವೆ. ಕಾರ್ತೀಕ ಮಾಸದವರೆವಿಗೂ ಮುಂಗಾರು ಮಾರುತದ ಒತ್ತಡದಿಂದಾಗಿ ಮಳೆಯ ವಾತಾವರಣದಿಂದ ಮದುವೆಯ ಆಚರಣೆಗೆ ಅಡ್ಡಿಗಳಿದ್ದು ಕಾರ್ತೀಕದ ಆರಂಭಕ್ಕೆ ಮದುವೆಯ ವಾತಾವರಣದ ಅನುಕೂಲಗಳು ಸಿಗಲಾರಂಭಿಸುತ್ತವೆ. ಹಾಗಾಗಿ ಕಾರ್ತೀಕ ಮಾಸದಲ್ಲಿ ತುಳಸಿ ಲಗ್ನದೊಂದಿಗೆ ಹಿಂದೂ ಮದುವೆಗಳು ಆರಂಭವಾಗಿ ಮುಂದಿನ ಮಳೆಗಾಲದ ಆರಂಭದವರೆಗೂ ನಡೆಯುತ್ತವೆ.

ತುಳಸಿ ಗಿಡವು ಬಗೆ ಬಗೆಯ ವಿವಿಧತೆಯನ್ನು ಹೊಂದಿದ್ದು ಸುಲಭವಾಗಿ ಎಲೆಗಳ ನೋಟಕ್ಕಾಗಲಿ, ಗಿಡದ ಬಾಹ್ಯ ನೋಟಕ್ಕಾಗಲಿ ಸುಲಭವಾಗಿ ಗುರುತಿಸಲು ಆಗದು. ಆಸಿಮಮ್‌ ಸಂಕುಲದಲ್ಲಿಯೇ ಸುಮಾರು ಒಂಭತ್ತು ಪ್ರಭೇದಗಳಿವೆ. ಅದರಲ್ಲೂ ನಾವುಗಳೆಲ್ಲಾ ಮನೆಗಳಲ್ಲಿ ದೇವಸ್ಥಾನಗಳಲ್ಲಿ ಬೆಳೆಸುವ ತುಳಸಿಯಲ್ಲೂ ಎರಡು ಬಗೆಗಳಿವೆ. ಈ ಎರಡೂ ಆಸಿಮಮ್‌ ಟೆನುಯಿಫ್ಲೊರಂ (Ocimum tenuiflorum) ಎನ್ನುವ ಒಂದೇ ಪ್ರಭೇದದ ಎರಡು ವಿಭಿನ್ನ ಉಪ ಪ್ರಭೇದಗಳು. ಹಸಿರು ಎಲೆಗಳ ತುಳಸಿಯು ರಾಮ ತುಳಸಿಯಾದರೆ, ಕೆಂಪು ಮಿಶ್ರಿತ (ಕೆನ್ನೀಲಿ) ಎಲೆಗಳ ಗಿಡ ಕೃಷ್ಣ ತುಳಸಿ. ಉಳಿದ ಎಂಟು ಪ್ರಭೇದಗಳನ್ನು ಸಾಮಾನ್ಯರ ವರ್ಗೀಕರಣದ ನಾಮಕರಣದಲ್ಲಿ ವನ್ಯ ತುಳಸಿಗಳಾಗಿಸಿದ್ದೇವೆ. ಆದ್ದರಿಂದ ಸಾಮಾನ್ಯರ ತಿಳಿವಳಿಕೆಯಲ್ಲಿ ಕೃಷ್ಣ ತುಳಸಿ, ರಾಮ ತುಳಸಿ ಹಾಗೂ ವನ್ಯ ತುಳಸಿ ಎಂಬ ಹೆಸರುಗಳಿಂದ ವಿಭಜಿಸುವುದುಂಟು. ಕೇವಲ ಎಲೆಗಳನ್ನು ನೋಟದಿಂದಾಗಲಿ ಸ್ವಲ್ಪವೇ ವಿಭಿನ್ನವಾದ ಪರಿಮಳದಿಂದಾಗಲಿ ಇವುಗಳನ್ನು ವನ್ಯ ಪ್ರಭೇದಗಳಿಂದ ಬಿಡಿಸಿ ಹೇಳುವುದು ಕಷ್ಟ. ಹೆಚ್ಚೂ ಕಡಿಮೆ ಒಂದೇ ನೋಟದವು. ಎಲೆಗಳೂ ಅಷ್ಟೆ ಈ ಮುಂದಿರುವ ಚಿತ್ರ ನೋಡಿ. ತುಳಸಿಯ ಈ ಬಗೆಯ ವಿವಿಧತೆಯನ್ನು ತೀರಾ ವೈಜ್ಞಾನಿಕ ಒಳನೋಟಗಳಿಂದ ರಾಷ್ಟ್ರೀಯ ಪ್ರಯೋಗಾಲಯಗಳು ಮಾಡಿದ ಪ್ರಯತ್ನಗಳ ಮೂಲಕ ತಿಳಿದ ಸಂಗತಿಗಳಿವು. ವಿವಿಧತೆಗಳಿಂದ ಪ್ರಭಾವಿಸಬಲ್ಲ ಔಷಧೀಯ ಸಂಗತಿಗಳನ್ನು ಒರೆಹಚ್ಚಿ ನೋಡಿದ ಪ್ರಯತ್ನವನ್ನು ನಂತರದಲ್ಲಿ ಸ್ವಲ್ಪ ವಿವರವಾಗಿ ನೋಡೋಣ.

ತುಳಸಿ ಗಿಡದ ಸಾಂಪ್ರದಾಯಿಕ ಕಥನವು ಉದ್ದವಾಗಿರುವಂತೆಯೇ ಅದರ ಔಷಧಿಯ ವಿಜ್ಞಾನದ ಕಥನವೂ ಸಾಕಷ್ಟು ಹಿರಿದಾಗಿದೆ. ತುಳಸಿಯ ಸಂಕುಲವೇ ಪರಿಮಳಭರಿತವಾದದ್ದು. ಅದರ ಕುಟುಂಬವೇ ಆಹ್ಲಾದತೆಯ ಸುವಾಸನೆಯನ್ನು ಹೊಂದಿರುವಂತಹದ್ದು. ಹಾಗಂತ ವಾಸನೆಯನ್ನು ನೋಡಿ ಗುಂಪು ಮಾಡಿದ್ದಷ್ಟೇ ಅಲ್ಲ! ಗುಂಪುಗಳಲ್ಲೂ ಸಂಬಂಧಗಳಿರುವ ಬಗ್ಗೆ ಸಾಕ್ಷ್ಯಗಳಿವೆ. ಹಾಗಾಗಿ ಅವುಗಳೊಳಗೇ ತುಳಸಿಯನ್ನು ಆಯ್ದು ಅದಕ್ಕೊಂದು ಪಾವಿತ್ರತೆಯನ್ನು ಆವಾಹಿಸಿ, ಲಕ್ಷ್ಮಿಯನ್ನಾಗಿ ಮಾಡಿ, ಮನೆಯ ಅಂಗಳಕ್ಕೆ ತಂದು ಕಟ್ಟೆ ಕಟ್ಟಿ ಕುಳ್ಳಿರಿಸಿ, ಬರುವಾಗ ಹೋಗುವಾಗ ಕೈಮುಗಿದು ಓಡಾಡುವಂತೆ ಅನಾದಿ ಕಾಲದಿಂದಲೂ ನಮ್ಮ ಸಂಸ್ಕೃತಿಯು ವಿಕಸಿಸಿಕೊಂಡಿದೆ. ಆದ್ದರಿಂದಲೇ ಕುಡಿಯುವ ನೀರಿನೊಳಗೆ ಒಂದೆರಡು ತುಳಸಿ ಎಲೆಗಳನ್ನು ಹಾಕಿಟ್ಟು ಆನಂದವನ್ನು ಸವಿಯುವ ಮನೆಗಳು, ಅದನ್ನೇ ಪವಿತ್ರ ತೀರ್ಥವೆಂದು ಕೊಡುವ ದೇವಾಲಯಗಳೂ ಹುಟ್ಟಿದ್ದಿರಬೇಕು. ಹಾಗಾಗಿ ಈ ಗುಂಪಿನ ಗಿಡಗಳಾದ ತುಂಬೆ, ಪುದಿನ, ಮುಂತಾದವುಗಳಲ್ಲಿ ತುಳಸಿಯನ್ನು ವಿಶೇಷವಾಗಿಸಿ ಗಿಡಗಳ ರಾಣಿ” (“Queen of Herbs”) ಎಂಬುದಾಗಿ ಕರೆದಿದ್ದಾರೆ. ಗ್ರೀಕ್‌ನ ಚರ್ಚುಗಳಲ್ಲಿಯೂ ತುಳಸಿಯು ಸ್ಥಾನವನ್ನು ಪಡೆದ ಬಗ್ಗೆ ಮಾಹಿತಿಗಳು ಸಿಗುತ್ತವೆ. ಪಶ್ಚಿಮ ದೇಶಗಳಲ್ಲಿ ಆಹಾರದ ಪರಿಮಳವಾಗಿ ಬಳಸುವ ತುಳಸಿಯ ಸಂಕುಲದ ಭಿನ್ನ ಪ್ರಭೇದವೂ ಇದೆ.

ತುಳಸಿಯನ್ನು ಭಾರತೀಯ ವೈದ್ಯ ಪದ್ಧತಿಯಲ್ಲಿ ಹಾಗೂ ಔಷಧೀಯ ವಿಜ್ಞಾನಗಳ ಅಧ್ಯಯಗಳಲ್ಲಿ ತೀರಾ ಆಪ್ತವಾಗಿಯೇ ಒಪ್ಪಿಕೊಳ್ಳಲಾಗಿದೆ. ಸಾಕಷ್ಟು ತೀಕ್ಷ್ಣವಾದ ಸಂಶೋಧನೆಗಳೂ ನಡೆದಿವೆ. ಸುಮಾರು 5000 ವರ್ಷಗಳಿಂದಲೂ ಇದನ್ನು ಬೆಳೆಸಿ ಬಳಸುವ ಬಗೆಗೆ ಸಂಗತಿಗಳಿವೆ. ತುಳಸಿಯ ಸಂಕುಲವನ್ನೇ ಔಷಧಗಳ ಆಗರವೆಂದೂ ಗುರುತಿಸಲಾಗಿದೆ. ಅದು ರಾಮ ತುಳಸಿ ಇರಲಿ, ಕೃಷ್ಣ ತುಳಸಿಯಾಗಲಿ ಅಥವಾ ಕಳೆಗಳಂತೆ ಬೆಳೆವ ವನ್ಯ ತುಳಸಿಯಾಗಲಿ ಹೊಂದಿರುವ ಅವುಗಳೊಳಗಿನ ಪರಿಮಳದ ಹಿಂದೆ ಭವ್ಯವಾದ ಔಷಧಗಳಿವೆ. ಅವುಗಳ ರಾಸಾಯನಿಕ ಹಿನ್ನೆಲೆಯ ವಿವರಗಳೂ ಲಭ್ಯವಿವೆ. ತುಳಸಿಯು ಆಂಟಿ ಆಕ್ಸಿಡೆಂಟ್‌ ಅಂದರೆ ಉತ್ಕರ್ಷಣಕಾರಿ ಪರಿಣಾಮಗಳನ್ನು ತಡೆಗಟ್ಟುವ ಗುಣವನ್ನು ಹೊಂದಿರುವ ಬಗ್ಗೆ ದಾಖಲೆಗಳಿವೆ. ಆಯುರ್ವೇದವು ಉಬ್ಬಸಕ್ಕೆ ಅದರಲ್ಲೂ ಶಿಲೀಂದ್ರಗಳಿಂದ ಬರುವ ತೇವ್ರ ಕೆಮ್ಮಿಗೆ ಉಪಶಮನಕಾರಿ ಎಂದು ಹೇಳುತ್ತದೆ.

ತುಳಸಿ ಸಂಕುಲದ ಗಿಡಗಳು ತಮ್ಮ ದೇಹವನ್ನು ರಕ್ಷಿಸಿಕೊಳ್ಳಲು ಉತ್ಪಾದಿಸುವ ಹಲವು ರಾಸಾಯನಿಕಗಳು ಈ ಬಗೆಯ ಔಷಧಿಯ ಗುಣಗಳನ್ನು ಹೊಂದಿವೆ. ಅವುಗಳು ಹಲವು ಬಗೆಯಲ್ಲಿ ಮಾನವ ಕುಲಕ್ಕೆ ರೋಗ ನಿವಾರಕಗಳಾಗಿ ವರವಾಗಿವೆ. ಈ ರಾಸಾಯನಿಕಗಳನ್ನು ಸಸ್ಯದ ವಿವಿಧ ಭಾಗಗಳಿಂದ ವಿವಿಧ ಗುಣಗಳಿರುವ ಬಗೆಯಲ್ಲಿ ಪಡೆಯಬಹುದಾಗಿದೆ. ಸಸ್ಯದ ಎಲೆಗಳು, ಕಾಂಡ, ಹೂಗೊಂಚಲು, ಬೇರು, ತೊಗಟೆ, ಬೀಜ ಹೀಗೆ ಎಲ್ಲವುಗಳಿಂದಲೂ ಬಗೆ ಬಗೆಯ ರಾಸಾಯನಿಕಗಳನ್ನು ಪಡೆಯಬಹುದಾಗಿದೆ. ಹತ್ತು ಹಲವು ರಾಸಾಯನಿಕಗಳ ಹೆಸರುಗಳಿಂದ ಕರೆಯಲಾಗಿರುವ ಅವುಗಳನ್ನು ಉದ್ದವಾಗಿ ಹೆಸರಿಸಬೇಕಾಗುತ್ತದೆ. ಉದಾಹರಣೆಗೆ ಲಿನೊಲಾಲ್‌, ಲಿನಾಲೈಲ್‌, ಜಿರೆನಾಲ್‌, ಸಿಟ್ರಾಲ್‌, ಕ್ಯಾಂಫರ್‌, ಯುಜಿನಾಲ್‌ ಮೀಥೈಲ್‌ ರಾಸಾಯನಿಕಗಳು, ಥೈಮಾಲ್‌, ಸಾಫ್ರಾಲ್‌, ಹೀಗೆ ಇವುಗಳದ್ದು ಪ್ರತಿಯೊಂದು ಒಂದೊಂದು ಉದ್ದವಾದ ಕಥೆಯಾದೀತು. ಒಟ್ಟಾರೆ ಮೈಯೆಲ್ಲಾ ಔಷಧಗಳನ್ನಿಟ್ಟು ಅಂಗಳದ ಲಕ್ಷ್ಮಿಯಾಗಿ ನಮ್ಮ ಮನೆಗಳನ್ನು ಅಲಂಕರಿಸಿದ್ದಂತೂ ಹೌದು! ಹಾ.. ಅಂದ ಹಾಗೆ ಎಲೆಗಳಲ್ಲಿನ ರಾಸಾಯನಿಕಗಳಿಗೂ ಹೂಗಳಲ್ಲಿರುವುದಕ್ಕೂ ಹಾಗೆಯೇ ಬೀಜಗಳಿಗೂ ಕೆಲವು ವ್ಯತ್ಯಾಸಗಳಿವೆ ಇರಲೇ ಬೇಕಲ್ಲವೇ?

ತೀರಾ ವಿಜ್ಞಾನದ ಹೆಸರುಗಳನ್ನು ಹೇಳಿ ಹೆದರಿಸುವುದಿಲ್ಲ, ಸ್ವಲ್ಪ ನಮ್ಮ ಸಾಮಾನ್ಯ ತಿಳುವಳಿಕೆಗೆ ನಾಲ್ಕು ಪ್ರಮುಖ ಗುಂಪುಗಳ ಔಷಧಗಳಾಗಿ ವಿಂಗಡಿಸಿ ತುಳಸಿಯಲ್ಲಿನ ರಾಸಾಯನಿಕಗಳನ್ನು ಅಳೆದಿದ್ದಾರೆ. ಇವುಗಳು ಒಟ್ಟಾರೆ ವಿವಿಧ ಪ್ರಭೇದಗಳನ್ನು ಸಂಶ್ಲೇಷಿಸಿ ಅರ್ಥೈಸಿಕೊಂಡ ಉತ್ತರಗಳು. ಆವುಗಳ ಆಧಾರದ ಮೇಲೆ ಸೆಸ್ಕ್ವಿಟರ್ಪೀನ್‌ಗಳು (Sesquiterpenes), ಫ್ಲೇವಿನಾಯ್ಡಗಳು (Flavonoides), ಫೀನೈಲ್‌ ಪ್ರೊಪನಾಯ್ಡ್‌ಗಳು (Phenylpropanoids) ಮತ್ತು ಟರ್ಪೀನ್‌ಗಳು (Terpenes) ಎಂದು ನಾಲ್ಕು ಬಗೆಯಲ್ಲಿ ಅವುಗಳು ಇರಬಹುದಾದ ಪ್ರತಿಶತ ಪ್ರಮಾಣೀಕರಣವು ಮುಂದಿನ ಚಿತ್ರದಲ್ಲಿ ಕಾಣುತ್ತದೆ. ಒಂದೊಂದಕ್ಕೂ ಒಂದೆರಡು ಸರಳ ವಾಕ್ಯಗಳಲ್ಲಿ ಹಾಗೆಂದರೇನು ನೋಡೋಣ.

ಈ ಹೆಸರುಗಳನ್ನು ನೋಡಿ ಇಷ್ಟೆಲ್ಲಾ ಇರೋದ್ರಿಂದನೇ ಅದನ್ನು ಪೂಜಿಸಿ, ದೈವತ್ವಕ್ಕೆ ಏರಿಸಿರೋದು ಅನ್ನುವುದನ್ನು ನಾನು ಹೇಳಲು ಈ ಉದಾಹರಣೆಯನ್ನೇನೂ ಕೊಡುತ್ತಿಲ್ಲ. ಈ ಹೆಸರುಗಳು ಸಾಕಷ್ಟು ಇವೆ. ಆದರೆ ಆ ಎಲ್ಲಾ ರಾಸಾಯನಿಕಗಳಲ್ಲೂ ಇರುವುದು ಇಂಗಾಲ ಮತ್ತು ಜಲಜನಕ ಮಾತ್ರವೇ! ಆದರೆ ಅವುಗಳು ಒಂದನ್ನೊಂದು ಹಿಡಿದಿಟ್ಟುಕೊಂಡ ಬಂಧಗಳ ರಚನೆಯಲ್ಲಿ ವೈವಿಧ್ಯಮಯವಾಗಿವೆ. ಎಲ್ಲವೂ ಒಂದು ಬಗೆಯಲ್ಲಿ ಟರ್ಪೀನ್‌ಗಳೇ! ಮಧ್ಯೆ ಮಧ್ಯೆ ಕೆಲವೊಂದು ವಿಭಿನ್ನ ಮೂಲವಸ್ತುಗಳನ್ನೂ, ಜೊತೆಗೆ ಫೀನಾಲ್‌ಗಳನ್ನೂ ಹೊಂದಿ ಆವುಗಳು ಉಂಟುಮಾಡುವ ವರ್ತನೆಗಳಲ್ಲಿ ಭಿನ್ನವಾಗಿರುತ್ತವೆ. ಆದರೆ ಅವುಗಳನ್ನು ಇಷ್ಟು ಸರಳವಾಗಿ ಹೇಳಿ ಅವುಗಳ ಸಂಕೀರ್ಣತೆಯನ್ನು ಹಾಳುಮಾಡುತ್ತಿಲ್ಲ. ಬದಲಿಗೆ ಅಂತಹಾ ಮಹತ್ವವನ್ನು ಅರ್ಥಮಾಡಿಸಲು ಪ್ರಯತ್ನಿಸುತ್ತಿದ್ದೇನೆ. ಇದು ಕೇವಲ ತುಳಸಿಯಲ್ಲಿ ಮಾತ್ರವಲ್ಲ. ತುಂಬೆ ಗಿಡದಲ್ಲೂ ಇರುವಂತಹದ್ದೇ! ಹಾಗೆಯೇ ಮತ್ತೆ ಕೆಲವು ವಿವಿಧ ಔಷಧಿಯ ಗಿಡಗಳಲ್ಲೂ ಇರುವಂತಹದ್ದೇ.

ಈ ಸೆಸ್ಕ್ವಿಟರ್ಪೀನ್ (Sesquiterpenes) ಗಳು ಮುಖ್ಯವಾಗಿ ಗಿಡಕ್ಕೆ ಘಾಟು ವಾಸನೆಯನ್ನು ಕೊಟ್ಟು, ಹಸಿರು ಮೇಯುವ ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಗಿಡವು ಮಾಡಿಕೊಂಡ ಉಪಾಯ. ಇವುಗಳು ಪೆಟ್ರೊಕೆಮಿಕಲ್‌ಗಳಿಗೆ ಹತ್ತಿರವಾದವು. ಇನ್ನು ಫ್ಲೇವಿನಾಯ್ಡಗಳು (Flavonoides) ಮುಖ್ಯವಾಗಿ ಗಿಡ-ಮರಗಳಿಗೆ ಬಣ್ಣವನ್ನು ಕೊಡುವುದಕ್ಕೆ ಸಹಾಯವಾಗುವಂತಹವು ಉದಾಹರಣೆಗೆ ಹೂವು, ಹಣ್ಣು, ತೊಟ್ಟು ಮುಂತಾದವುಗಳಿಗೆ ವಿಭಿನ್ನ ಬಣ್ಣಗಳಿದ್ದರೆ ಅಲ್ಲೆಲ್ಲಾ ಈ ಫೇವಿನಾಯ್ಡ್‌ಗಳಿರುತ್ತವೆ. ಹಲವಾರು ಸಸ್ಯ ಸಮೂಹದಿಂದ ಸುಮಾರು ೫೦೦೦ಕ್ಕೂ ಹೆಚ್ಚು ಫೇವಿನಾಯ್ಡ್‌ಗಳನ್ನು ಪತ್ತೆ ಹಚ್ಚಲಾಗಿದೆ. ಇವುಗಳು ವಿವಿಧ ಸಸ್ಯಗಳಲ್ಲಿ ಪರಾಗಸ್ಪರ್ಶವನ್ನು ಸಸೂತ್ರವಾಗಿ ನಡೆಯುವಂತೆ ಕೀಟಗಳನ್ನು ಆಕರ್ಷಿಸಲು ಅಥವಾ ದೂರ ಸರಿಸಲೂ ಇವುಗಳು ಸಹಾಯ ಮಾಡುತ್ತವೆ. ಫೀನೈಲ್‌ ಪ್ರೊಪನಾಯ್ಡ್‌ಗಳು (Phenylpropanoids) ಸಹಾ ಇಂಗಾಲಯುತವಾದ ರಾಸಾಯನಿಕಗಳೇ! ಇವುಗಳ ಉತ್ಪಾದನೆಯಲ್ಲಿ ಸಸ್ಯಗಳಲ್ಲಿನ ಅಮೈನೋ ಆಮ್ಲಗಳು ನೆರವಾಗಿ ರಚನೆಯಲ್ಲಿ ಮತ್ತಷ್ಟು ಸಂಕೀರ್ಣತೆಯನ್ನು ತಂದುಕೊಡುತ್ತವೆ. ಇವುಗಳಲ್ಲೂ ಸಾಕಷ್ಟು ವಿವಿಧತೆಯನ್ನು ಗಿಡ-ಮರಗಳು ಸೃಜಿಸಿಕೊಂಡಿವೆ. ಟರ್ಪೀನ್‌ಗಳು (Terpenes) ಇವುಗಳು ಸಹಜವಾಗಿ ಗಿಡ-ಮರಗಳಲ್ಲಿನ ಅಂಟು-ರಾಳ (Gums and Resins) ಇತ್ಯಾದಿಗಳ ರಾಸಯನಿಕತೆಯನ್ನು ನಿರ್ಧರಿಸುತ್ತವೆ. ಇವುಗಳು ಆಹ್ಲಾದಕರ ಸುವಾಸನೆಯನ್ನು ಕೊಡುವಲ್ಲಿ ಬೇಕಾಗುವ ರಾಸಾಯನಿಕಗಳನ್ನು ಒದಗಿಸುತ್ತವೆ. ಒಟ್ಟಾರೆ ಈ ಎಲ್ಲಾ ಬಗೆಯ ರಾಸಾಯನಿಕಗಳೂ ಕಾರ್ಬನಿಕ ಅಥವಾ ಇಂಗಾಲಯುತವಾದ ರಾಸಾಯನಿಕಗಳು ತಮ್ಮ ಸಂಕೀರ್ಣ ರಾಚನಿಕ ವಿನ್ಯಾಸಗಳಿಂದ ಬಗೆ ಬಗೆಯ ವರ್ತನೆಗಳನ್ನು ಉಂಟುಮಾಡಿ ಸಸ್ಯಗಳಿಗೆ ವಿವಿಧ ಗುಣ ವಿಶೇಷತೆಯನ್ನು ನೀಡಿರುತ್ತವೆ. ಇವುಗಳದ್ದೇ ಒಂದು ಬೃಹತ್‌ ಜಗತ್ತು ಇದೆ.

ಈ ಎಲ್ಲಾ ವೈವಿಧ್ಯಮಯ ರಾಸಾಯನಿಕಗಳೂ ಬಗೆ ಬಗೆಯ ತುಳಸಿಗಳಲ್ಲಿ ಹಾಗೂ ಇತರೇ ಔಷಧಿಯ ಗಿಡ-ಮರಗಳಲ್ಲೂ ವಿವಿಧ ಪ್ರಮಾಣದಲ್ಲಿ ಇರುವುದುಂಟು. ರಾಮ ತುಳಸಿಗೂ, ಕೃಷ್ಣ ತುಳಸಿಗೂ ವ್ಯತ್ಯಾಸ ಇರುತ್ತದೆ. ಹಾಗೆಯೇ ಕೃಷ್ಣ ತುಳಸಿಯಲ್ಲಿಯೇ ವಿವಿಧ ಸ್ಥಳಿಯ ತಳಿಗಳಾಗಿ ಬಗೆ ಬಗೆಯ ರಾಸಾಯನಿಕ ಸನ್ನಿವೇಶವನ್ನೂ ಹೊಂದಿರುವುದುಂಟು. ಸ್ವಲ್ಪ ಸರಳವಾಗಿ ಇವುಗಳನ್ನೆಲ್ಲಾ ಸ್ಥೂಲವಾಗಿ ನೋಡಿ ಹೇಳುವುದಾದರೆ ಈಗಾಗಲೆ ಸಂಶೋಧನೆಗಳಲ್ಲಿ ಅರ್ಥಮಾಡಿಕೊಂಡ ಹಾಗೆ ಒಟ್ಟಾರೆ ಕೃಷ್ಣ ತುಳಸಿಯಲ್ಲಿ ಹೆಚ್ಚು ಔಷಧಿಯ ಗುಣಗಳು ಇವೆ. ಅಂದರೆ ಕೆಂಪು ಛಾಯೆವುಳ್ಳ ತುಳಸಿಯು ಹೆಚ್ಚು ಔಷಧ ಗುಣದ ಗಿಡ. ಒಂದೇ ವಾಕ್ಯದಲ್ಲಿ ಹೀಗೆ ಹೇಳಲು ಹತ್ತಾರು ವರ್ಷಗಳ ಹತ್ತಾರು ವಿಜ್ಞಾನಿಗಳ ಶ್ರಮ ಇದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ನಮ್ಮದೇ ರಾಜ್ಯದಲ್ಲಿರುವ ಬೆಂಗಳೂರಿನ ರಾಷ್ಟ್ರೀಯ ಜೀವಿವೈಜ್ಞಾನಿಕ ಸಂಸ್ಥೆಯ ನೇತೃತ್ವದಲ್ಲಿ ಈ ಸಂಶೋಧನೆಗಳು ತುಳಸಿ ಸಸ್ಯದ ಮೂಲವಿನ್ಯಾಸದ ಒಳಹೊಕ್ಕು ನೋಡಿದ್ದರ ಫಲ. ಇದನ್ನೂ ಅವರ ಶೋಧನೆಯ ಸಾರವನ್ನು ಮತ್ತೂ ಸರಳವಾಗಿ ಹೀಗೆ ಹೇಳಬಹುದು. ನಾವೆಲ್ಲರೂ ಪ್ರೊಟೀನ್‌ಗಳ ಬಗ್ಗೆ ತಿಳಿದುಕೊಂಡಿದ್ದೇವಲ್ಲವೇ? ಈ ಪ್ರೊಟೀನುಗಳನ್ನು ಅಮೈನೋ-ಆಮ್ಲಗಳು ರಚಿಸಿರುತ್ತವೆ. ಅಮೈನ್‌ (ಸಾರಜನಕN- ಜಲಜನಕHವುಳ್ಳ)ಗುಂಪು ಹಾಗೂ ಆಮ್ಲದ (ಇಂಗಾಲ-ಆಮ್ಲಜನಕ-ಜಲಜನಕCOOH) ಗುಂಪುಗಳೆರಡರ ಮಿಶ್ರಣ ಅಮೈನೋ ಆಮ್ಲಗಳು. ಹಲವು ನೈಸರ್ಗಿಕ ಅಮೈನೋ ಆಮ್ಲಗಳಿದ್ದು ಅವುಗಳಲ್ಲಿ 20 ಮಾತ್ರವೇ ಮಾನವರ ದೇಹಕ್ಕೆ ಸಂಬಂಧಿಸಿವೆ. ಇವುಗಳಲ್ಲಿ ಒಂದೋ ಎರಡೋ ಇಂತಹಾ ಔಷಧಿಯ ಸಸ್ಯಗಳಲ್ಲಿ ಅದರಲ್ಲೂ ತುಳಸಿಯಲ್ಲಿ ಕೆಲವೇ ಬದಲಾವಣೆಗಳ ಸಂರಚನೆಯ ರಾಸಾಯನಿಕಗಳಿಗೆ ಕಾರಣವಾಗಿವೆ ಎಂಬುದು ವರ್ಷಾನುಗಟ್ಟಲೇ ಸಂಶೋಧನೆಗಳಿಂದ ತಿಳಿದು ಬಂದ ಸಂಗತಿ. ವಿಷಯವೇನೆಂದರೆ ಈ ಅಮೈನೋ ಆಮ್ಲಗಳು ನಮ್ಮೊಳಗಿನ ಪ್ರೊಟೀನುಗಳ ಮೂಲಕ ಇಡೀ ಆರೋಗ್ಯದ ಜವಾಬ್ದಾರಿಯನ್ನು ನಿರ್ವಹಿಸುತ್ತವೆ.

ಹೀಗೆ ಇಂತಹ ಮಹತ್ತರವಾದ ಸಂಕೀರ್ಣ ಸಂಗತಿಗಳನ್ನು ಜೀವಿಗಳು ನಿರ್ವಹಿಸುತ್ತಿದ್ದು, ಔಷಧೀಯ ಸಸ್ಯಗಳು ಅದರಿಂದ ಪ್ರಭಾವಿಸುತ್ತವೆ ಎಂಬುದನ್ನು ಹೇಳಲು ಇದನ್ನೆಲ್ಲಾ ಹೇಳಬೇಕಾಯಿತು. ತಮ್ಮ ಜೀವನದ ಅನಿವಾರ್ಯಗಳಿಗೆ ಸೃಜಿಸಿಕೊಂಡ ರಾಸಾಯನಿಕ ಹಿನ್ನೆಲೆಯಿಂದ ಸಸ್ಯವರ್ಗವು ವಿಭಿನ್ನ ವರ್ತನೆಗಳನ್ನು ವಾತಾವರಣದಲ್ಲಿ ದಾಖಲಿಸಿ, ಅದರ ಮೂಲಕ ಮಾನವ ಕುಲಕ್ಕೆ ಅಥವಾ ಜೀವಿವರ್ಗಕ್ಕೆ ಪರಿಚಯಗೊಂಡು ತಮ್ಮದೇ ಛಾಪನ್ನು ಮೂಡಿಸಿರುವುದಕ್ಕೆ ತುಳಸಿಯು ಒಂದು ಉದಾಹರಣೆ. ಕೃಷ್ಣ ತುಳಸಿಯಲ್ಲಿನ ಕನ್ನೀಲಿ ಬಣ್ಣವು ಮೊಟ್ಟ ಮೊದಲು ತನ್ನ ವಿಶೇಷತೆಯನ್ನಾಗಿ ಪ್ರದರ್ಶಿಸಿದ್ದು, ಜೊತೆಗೆ ವಿಶೇಷ ಪರಿಮಳವೂ ಜೊತೆಗೂಡಿ ಮಾನವ ಕುಲದ ಜೀವನದಲ್ಲೊಂದಾಗಿದೆ. ಅದರ ಉಪಕಾರಿ ಗುಣಗಳನ್ನು ಸಾವಿರಾರು ವರ್ಷಗಳ ಹಿಂದೆಯೇ ಗುರುತಿಸಿ ಇಂದಿಗೂ ಉಳಿಸಿಕೊಂಡು ಬಂದು ಒಂದಲ್ಲೊಂದು ಪರಂಪರೆಯ ಮೂಲಕ ಬೆಳೆಸಲು ಪುಟ್ಟ – ಪುಟ್ಟ ಪ್ರಯತ್ನಗಳನ್ನು ವಿವಿಧ ಸಂಸ್ಕೃತಿಗಳು ವಿಕಾಸಗೊಳಿಸಿಕೊಂಡಿವೆ. ತುಳಸಿಯು ಪ್ರಮುಖವಾಗಿ ಕೆಮ್ಮ ನಿವಾರಣೆಯಲ್ಲಿ ಅತ್ಯಮೂಲ್ಯ ಮಾರ್ಗದರ್ಶಕನಾಗಿ ನಮ್ಮ ಮನೆಯಂಗಳದಲ್ಲಿ ನೆಲೆಯೂರಿದೆ. ಅವುಗಳನ್ನು ಸಂರಕ್ಷಿಸುವ ಜತನಕ್ಕಾಗಿ ದೇವರುಗಳನ್ನೇ ಸೃಷ್ಟಿಸಿದ ನಾವುಗಳು ದೇವರುಗಳನ್ನು ಗಿಡ-ಮರಗಳಲ್ಲಿ ಆವಾಹಿಸಿ ಪೂಜಿಸಿ ಸಂರಕ್ಷಣೆಗೆ ತೊಡಗಿದ್ದೇವೆ. ಜೊತೆಗೆ ಅವುಗಳಿಂದ ಉಪಕಾರಗಳನ್ನೂ ನಿರಂತರವಾಗಿಸಲು ಮಾಡಿರುವ ತಂತ್ರಗಳಲ್ಲಿ ಇಂತಹವುಗಳನ್ನೂ ರೂಪಿಸಿದ್ದೇವೆ. ಅಂತೂ ಮನೆಯಂಗಳದ ಲಕ್ಷ್ಮಿಯು ಬರಿ ಪೂಜೆಗಷ್ಟೇ ಅಲ್ಲದೆ ಬಳಕೆಯಲ್ಲೂ ನಿರಂತರವಾಗಿರುವುದಾದರೆ ಒಳ್ಳೆಯದು. ಲಕ್ಷ್ಮಿಯನ್ನು ಸುಮ್ಮನೆ ಕುಳ್ಳಿರಿಸುವುದಕ್ಕಿಂತಾ ಬಳಸಿದರೆ ಹೆಚ್ಚು ಲಾಭ ಅಲ್ಲವೇ?

(ನಿರಂತರ ಓದುಗರಾಗಿ ಸಸ್ಯಯಾನದ ಸಹಪಯಣಿಗರಲ್ಲಿ ಒಬ್ಬರಾದ ಶ್ರೀಮತಿ ಕಪಿಲಾ ಶ್ರೀಧರ್‌ ಅವರು ಎರಡು ವಾರದ ಹಿಂದಿನ ನನ್ನ ಮನೆಯ ದುಃಖದಲ್ಲಿ ಭಾಗಿಯಾಗಿ ನಾವು ಶಾಶ್ವತವಾಗಿ ಕಳೆದುಕೊಂಡ ನನ್ನ ಸೋದರಳಿಯನ ಆತ್ಮಶಾಂತಿಗೆ ತುಳಸಿ ಗಿಡವನ್ನು ನೆಟ್ಟದ್ದಾಗಿ ತಿಳಿಸಿದ್ದರು. ಆತ ವೈದ್ಯನೂ ಆಗಿದ್ದು, ಔಷಧೀಯ ಗಿಡವಾದ ತುಳಸಿಯನ್ನು ನೆನಪಿಸಿದ ಗೆಳತಿಯ ಸಹೃದಯತೆಗೆ ನೆಪವಾದ ಇಂದಿನ ಸಸ್ಯಯಾನದ ಪ್ರಬಂಧವನ್ನು ಆ ನನ್ನ ಮನೆಯ ಮಗು ಡಾ. ಚಿಂತನ್‌ಗೆ ಅರ್ಪಿಸಿ ಮುಗಿಸುತ್ತೇನೆ. ಶ್ರೀಮತಿ ಕಪಿಲಾ ಶ್ರೀಧರ್‌ ಅವರಿಗೆ ವಿಶೇಷವಾದ ವಂದನೆಗಳು).

ಮತ್ತೆ ಮುಂದಿನವಾರ ಸಿಗೋಣ ನಮಸ್ಕಾರ

ಡಾ. ಟಿ.ಎಸ್‌. ಚನ್ನೇಶ್

This Post Has 4 Comments

  1. Dr Rudresh Adarangi

    It is really very informative and usefull. very much thank to Dr Channesh sir.

  2. Rudresh metri

    Super knowledge sir

  3. Prof. KS NATARAJ

    Very useful and interesting information. Nice write up.

  4. Pradeep CR

    ಚೆನ್ನಾಗಿ ಮೂಡಿ ಬಂದಿದೆ, ಹಾಗೂ ಸಕಾಲಿಕವಾಗಿದೆ.

Leave a Reply