ಮಾಟಿ ಕಹೇ ಕುಂಹಾರ್ ಸೆ, ತು ಕ್ಯಾ ರೋಂದೇ ಓ…ಹ್! ಏಕ್ ದಿನ್ ಐಸಾ ಆಯೇಗಾ ಮೇ ರೋಂದೂಂಗೀ ತೊ…
ಹದಿನೈದನೆಯ ಶತಮಾನದ ಸೂಫಿ ಸಂತ ಕಬೀರ್ದಾಸ್ ಅವರ ಒಂದು ಸುಂದರವಾದ ದೋಹಾದ ಆರಂಭದ ಸಾಲುಗಳಿವು. “ನೀನು ಏನು ನನ್ನನ್ನು ತುಳಿಯುವುದು, ಒಂದು ದಿನ ನಾನೇ ನಿನ್ನನ್ನು ತುಳಿದರೇ? ಹಾಗಂತ ಮಣ್ಣು ಕುಂಬಾರನಿಗೆ ತಿರುಗಿ ಹೇಳಿತಂತೆ!”
ಮಾನವರೆಲ್ಲರೂ ಸದಾ ನಾವು ತುಳಿದುಕೊಂಡೇ ಇರುವ ತಮ್ಮ ಕಾಲ ಕೆಳಗಿನ ಮಣ್ಣು ನಿಸರ್ಗದ ಅದ್ಭುತ! ಕುಂಬಾರನು ಮಣ್ಣನ್ನು ಹದ ಮಾಡಲು ತುಳಿಯುವುದನ್ನು ಕಬೀರರು ಕಂಡಿದ್ದು, ಮಾನವರು ಕಾಲ ಕೆಳಗಿನ ಮಣ್ಣನ್ನು ಹಾಳುಗೆಡಹುತ್ತಿರುವ ಇಂದಿನ ಸನ್ನಿವೇಶದಲ್ಲಿ ಬಹು ದೊಡ್ಡ ರೂಪಕದಂತೆ ಕಾಣುತ್ತಿದೆ. ಹಾಗೆಯೇ ಬೇಕಾಬಿಟ್ಟಿಯಾದ ಬಳಕೆಯಿಂದಾಗಿ ಮಣ್ಣು ಸವಕಳಿಗೊಂಡು ಕುಸಿಯುತ್ತಾ ಜನರೂ ಸಾವನ್ನಪ್ಪುತ್ತಿರುವುದು ಮಣ್ಣಿನ ಆಕ್ರೋಶದಂತೆಯೂ ಕಾಣುತ್ತಿದೆ.
ಕಬೀರರ ಕಡೆಗಾಲದ ಸಮಕಾಲೀನರಾದ ಕನ್ನಡದ ನೆಲದ ಪುರಂದರದಾಸರೂ ಕೂಡ ಮಣ್ಣಿಂದ ಕಾಯ ಮಣ್ಣಿಂದ… ಮಣ್ಣಿಂದಲೇ ಎಲ್ಲವೂ… ಮಣ್ಣಿಂದಲೇ ಅನ್ನ, ಬಣ್ಣ, ಮಣ್ಣಿಂದಲೇ ಬೊಕ್ಕಸ, ಬಂಗಾರ, ಮಣ್ಣಿಂದಲೇ ಪರ್ವತ, .. ಕಡೆಗೆ ವೈಕುಂಠವೂ ಮಣ್ಣೇ ಎಂದು ಹಾಡಿ ನಮ್ಮ ಜೀವನವನ್ನೆಲ್ಲಾ ಮಣ್ಣಿಗೇ ಸಮೀಕರಿಸಿದ್ದಾರೆ.
ದಾರ್ಶನಿಕವಾಗಿ ಮಣ್ಣು ಮತ್ತು ಮಾನವರ ಜೀವಂತಿಕೆಯ ಸಂಬಂಧದ ಬಗೆಗಿನ ತಿಳಿವಳಿಕೆಯು ಸಾಕಷ್ಟೇ ಪುರಾತನವಾದದು. ಸಾಲದಕ್ಕೆ ಮಣ್ಣು ಮತ್ತು ನಾಗರಿಕತೆಗಳ ಸಂಬಂಧದ ಉಗಮ ಹಾಗೂ ಅಳಿವುಗಳ ಚರಿತ್ರೆಯ ಕುರಿತೂ ಮಾನವ ಕುಲಕ್ಕೆ ಪರಿಚಯವಿದೆ. ಹಾಗೆ ನೋಡಿದರೆ ನಮ್ಮ ಸಂಸ್ಕೃತಿಯ ಹುಟ್ಟೂ ಮಣ್ಣಿನಿಂದಲೇ ಸಾಧ್ಯವಾಗಿದೆ, ಜೊತೆಗೆ ಸಂಸ್ಕೃತಿಗಳ ವಿನಾಶವೂ ಮಣ್ಣಿನ ಅವನತಿಯಿಂದಲೇ ಆಗಿರುವುದನ್ನು ವೈಜ್ಞಾನಿಕ ನಿದರ್ಶನಗಳಲ್ಲಿ ಅರಿಯಲಾಗಿದೆ. ಇಷ್ಟಾಗಿಯೂ ಮಣ್ಣಿನ ಬಗೆಗಿರುವ ಕಾಳಜಿಯು ಮಾತ್ರ ಇರಬೇಕಾದಷ್ಟು ಇಲ್ಲದಿರುವುದು ಮಾನವ ಕುಲವು ಅನುಭವಿಸುತ್ತಿರುವ ದೊಡ್ಡ ದುರಂತವಾಗಿದೆ.
ಇಡೀ ಭೂಮಿಯ ಮೇಲ್ಮೈಯನ್ನು ಕೇವಲ ಎರಡೇ ವಸ್ತುಗಳು ಆವರಿಸಿವೆ. ನೀರು ಮತ್ತು ನೆಲ! ಭೂಮಿಯ ಮೇಲಿನ ಯಾವುದೇ ಪ್ರಮುಖ ಆಗುಹೋಗುಗಳಿಗೂ ಇವೆರಡೇ ಮೂಲಭೂತ ಕಾರಣಗಳು. ಈ ನೆಲದ ಮೇಲೆ ಜೀವಿಗಳಿಗೆ ಏನೆಲ್ಲಾ ಸಾಧ್ಯವಾಗಿದ್ದರೂ ಅವೆಲ್ಲವೂ ಈ ಎರಡು ವಸ್ತುಗಳನ್ನೇ ಆಧರಿಸಿವೆ. ನೆಲದ ಮೇಲಿನ ತೆಳು ಪದರವಾದ ಮಣ್ಣನ್ನು “ಎಲ್ಲ ಜೀವಿಗಳ ಹೊಟ್ಟೆ” ಎಂದೇ ಕರೆಯಲಾಗುತ್ತದೆ. ಜೀವಿಗಳ ಬಹುಪಾಲು ಅಗತ್ಯತೆಗಳು ಮಣ್ಣಿಂದಲೇ ದೊರಕುತ್ತವೆ. ಜೀವಿಗಳ ವಿಕಾಸದಲ್ಲಿ ಮಣ್ಣಿನ ಪಾತ್ರ ಹಾಗೂ ಮಣ್ಣಿನ ವಿಕಾಸದಲ್ಲಿ ಜೀವಿಗಳ ಪಾತ್ರ ಎರಡೂ ಪರಸ್ಪರ ಹೊಂದಾಣಿಕೆಯಿಂದಲೇ ನಡೆದಿವೆ. ಇದನ್ನು ತಿಳಿದೂ ನಿಭಾಯಿಸುವ ಗ್ರಹಿಕೆ ಮಾತ್ರ ಬೆಳೆಯುತ್ತಿಲ್ಲ. ಬದಲಾಗಿ ವಿನಾಶವನ್ನು ತರುತ್ತಿರುವುದು ಆತಂಕದ ಸಂಗತಿಯಾಗಿದೆ.
ನಮ್ಮ ಜನಸಂಖ್ಯೆಯು ಬೆಳೆದಂತೆ ಹೊಟ್ಟೆಯನ್ನು ತುಂಬುವ ಆಶಯದಲ್ಲಿ ಮಾತ್ರವೇ ಮಣ್ಣಿನ ಅರಿವನ್ನು ವಿಸ್ತರಿಸುತ್ತಾ ಸಾಗಿದ್ದೇವೆ, ಪ್ರತೀ ಹಂತಗಳಲ್ಲೂ ಎಡವುತ್ತಲೂ ಇದ್ದೇವೆ. ಈ ನಿಟ್ಟಿನಲ್ಲಿ ಕೃಷಿಕರನ್ನು ಮಣ್ಣಿನ ಮಕ್ಕಳು ಎಂದು ವೈಭವೀಕರಿಸಿ ಕೇವಲ ಅವರನ್ನು ಮಾತ್ರವೇ ಮಣ್ಣಿನ ಸಂರಕ್ಷಕರು ಎಂದು ಆರೋಪಿಸಿದ್ದೇವೆ. ಮಣ್ಣನ್ನು ಗ್ರಹಿಸುವಲ್ಲಿ ಮಾನವ ಸಂಕುಲವು ಒಟ್ಟಾರೆಯಾಗಿ ಜಾಗರೂಕವಾಗಿಲ್ಲ ಎಂಬುದು ಆತಂಕದ ವಿಚಾರವಾಗಿದೆ. ಮಣ್ಣು ಎಲ್ಲರನ್ನೂ ಪೋಷಿಸುವ ಮೂಲಕ ಎಲ್ಲರೂ ಸಂರಕ್ಷಿಸಲೂ ಜವಾಬ್ದಾರರಾಗಿದ್ದಾರೆ ಎನ್ನುವುದನ್ನೂ ಮರೆತ ಅಪೂರ್ಣ ಗ್ರಹಿಕೆ ಮತ್ತು ಜಾಗರೂಕತೆಯ ಹಿನ್ನೆಲೆಯಲ್ಲಿ ಕೆಲವು ಅಂಶಗಳನ್ನಿಲ್ಲಿ ಚರ್ಚಿಸಲಾಗಿದೆ. ಏಕೆಂದರೆ ಇಂದಿನ ಸನ್ನಿವೇಶದಲ್ಲಿ ಅದೊಂದು ಬಹು ಮುಖ್ಯವಾದ ತುರ್ತು. ಏಕೆಂದರೆ ಮಣ್ಣು ಎಂಬುದು ತೀರಾ ಸ್ವಾಭಾವಿಕವಾದ ನೆಲದ ಆಸೆಯಲ್ಲಿ ನೆಲದ ಮೇಲಿನ ಪದರವಾದ ಮಣ್ಣನ್ನು ಮರೆತೇ ಹೋಗುತ್ತಿರುವುದು ಸದ್ಯದ ಪರಿಸ್ಥಿತಿ.
ಗಿಡ-ಮರಗಳನ್ನು ಬೆಳೆಸಿ ಪ್ರೋತ್ಸಾಹಿಸಬಲ್ಲ ಮಣ್ಣಿನಲ್ಲಿ ಏನಿದ್ದೀತು? ಏನಿರಬೇಕು ಎಂಬ ಪ್ರಶ್ನೆ 19ನೇ ಶತಮಾನ ಪೂರ್ವಾರ್ಧದ್ದು. ಜಸ್ಟಸ್ ವಾನ್ ಲೀಬಿಗ್ ಎಂಬ ಜರ್ಮನಿಯ ವಿಜ್ಞಾನಿಯು ತನಗೆ ತಾನೇ ಹಾಕಿಕೊಂಡ ಪ್ರಶ್ನೆಗಳಿಂದ ಸಂಶೋಧನೆ ಆರಂಭಿಸಿ ತಿಳಿವಾಗಿಸಿದ ಫಲ, ಫಲವತ್ತತೆಯೆಂಬ ಫಲಿತಾಂಶಗಳಾಗಿವೆ. ಅಂದಿನಿಂದ ಇಂದಿನವರೆಗೂ ಇದರ ಬೆಳವಣಿಗೆಯು ನಿರಂತರವಾಗಿ ಸಾಗಿದೆ. ಈವರೆಗಿನ ಬಹುಪಾಲು ಮಣ್ಣಿನ ವೈಜ್ಞಾನಿಕ ಅರಿವನ್ನು ರೈತರ ಜವಾಬ್ದಾರಿಯಲ್ಲಿ ಇರಿಸಿ, ಮಣ್ಣಿನ ಪರೀಕ್ಷೆಗಳ ಉತ್ತರಗಳಲ್ಲಿ ತಿಳಿಯಬಲ್ಲ ಸಾಧನೆಗಳ ಸಂಶೋಧನೆ ಸಾಕಷ್ಟೇ ಆಗಿದೆ.
ಮಣ್ಣು ನೆಲದ ಮೇಲಿನ ಪದರವಾದರೂ, ಅದೊಂದು ಹೊದಿಕೆಯಾಗಿ ಹೆಚ್ಚೆಂದರೆ ಒಂದೂವರೆ ಮೀಟರ್ ಅಥವಾ ಎರಡು ಮೀಟರ್ ಇದ್ದೀತು. ಅನೇಕ ಕಡೆಗಳಲ್ಲಿ ಒಂದು ಮೀಟರ್ ಕೂಡ ಇದ್ದಿರಲಾರದು. ನಮ್ಮ ರಾಜ್ಯದ ಉದಾಹರಣೆಯನ್ನೇ ನೋಡಬಹುದಾದರೆ ಬಿಜಾಪುರ, ಧಾರವಾಡ, ಹಾವೇರಿ, ಗದಗ, ರಾಯಚೂರು ಜಿಲ್ಲೆಗಳಲ್ಲಿ ಆಳವಾದ ಕಪ್ಪು ಮಣ್ಣಿನ ನೆಲವಿದ್ದರೆ, ಕಡಿಮೆ ಆಳದ ಬೆಂಗಳೂರು, ತುಮಕೂರು ಹಾಗೂ ಕೋಲಾರದ ಮಣ್ಣುಗಳನ್ನು ಗಮನಿಸಬಹುದು. ಈ ಮಣ್ಣಿನ ಹೊದಿಕೆಯೂ ತನ್ನ ಕೆಳಗಿನ ತಾಯಿ ಮಣ್ಣು ಅಥವಾ ತಾಯಿ ಬಂಡೆಯ ಕಲ್ಲು-ಖನಿಜಗಳಿಂದ ವಿಕಾಸವಾದದ್ದೇ ಆಗಿದೆ. ಮಣ್ಣಿನ ವಿಕಾಸವೂ ಸಹಸ್ರಾರು ವರ್ಷಗಳ ಫಲ. ಜತೆಯಲ್ಲಿ ಅದೊಂದು ನಿರಂತರತೆಯ ನಿಸರ್ಗದ ಕಾರ್ಯವೂ ಹೌದು. ಹಾಗಾಗಿ ಯಾವುದೇ ನೆಲದ ಮಣ್ಣೂ ಅಂತಿಮ ಉತ್ಪನ್ನವಾಗಿರುವುದಲ್ಲ. ಕೆಲವೊಂದು ಕಡೆ ಎಳೆಯ ಮಣ್ಣುಗಳಿದ್ದರೆ ಕೆಲವೊಂದು ಕಡೆ ಬಲಿತ ಅಥವಾ ಹಳೆಯ ಮಣ್ಣುಗಳಿವೆ.
ಮಣ್ಣಿನ ಕಾಲದೊಡನೆಯ ಸಾಹಚರ್ಯದ ಫಲ ಇದು. ಆಧುನಿಕ ದೌಡಿನಲ್ಲಿ ಇದನ್ನಂತೂ ಮರೆತು ಎಲ್ಲವೂ ಒಂದೇ ಎಂಬಂತೆ ಮಣ್ಣನ್ನು ಅಳೆಯುವ ವಿವರಿಸುವ ಸಂದರ್ಭದಲ್ಲಿ ನಾವಿದ್ದೇವೆ. ಆಹಾರದ ಹುಡುಕಾಟ, ಕೃಷಿಯ ಉಗಮ, ವಿಸ್ತರಣೆ, ವಿವಿಧತೆಗಳ ಹರಹು, ನಾಗರಿಕ ಬೆಳವಣಿಗೆ, ಮಾನವಕುಲದ ನೆಲೆ, ದೇಶ-ಗಡಿಗಳ ವಿಕಾಸ. ಅಷ್ಟೇಕೆ ಆಧುನಿಕ ಆರೋಗ್ಯದ ಚರ್ಚೆಗಳ ವೈಜ್ಞಾನಿಕತೆ ಹಿನ್ನೆಲೆಯಲ್ಲೂ ಮಣ್ಣಿನಿಂದ ಅರಿತ ಸಾವಿರಾರು ಸಂಗತಿಗಳಿವೆ. ಅವೆಲ್ಲವನ್ನೂ ಮಾನವರ ಸಹಜ ತಿಳಿವಳಿಕೆಯಾಗಿಸದ, ಮಣ್ಣನ್ನು ನೆಲದ ಹೊದಿಕೆಯಷ್ಟೇ ಎಂದು ಕರೆದು, ನೆಲದ ಒಡೆತನವನ್ನು ಕಂದಾಯ ಇಲಾಖೆಯ ಸುಪರ್ಧಿಗೆ ವಹಿಸಿ, ಜನರು ಅಥವಾ ರೈತರನ್ನು ಬಳಕೆದಾರರಾಗಿಸಿ ಸರಕಾರವು ಕೇವಲ ಅವರಿಂದ ಪಡೆವ ತೆರಿಗೆಯ ಹಿತದಲ್ಲಿ ನಿಯುಕ್ತವಾಗಿದೆ. ಮಣ್ಣನ್ನು ಬದುಕಿನ ಭಾಗವಾಗಿಸದ ಸಾಮಾಜಿಕ ಸನ್ನಿವೇಶದಿಂದ ಹವಾಮಾನ ಬದಲಾವಣೆಯಂತಹ ನೈಸರ್ಗಿಕ ವಿಕೋಪಗಳಲ್ಲಿ ಮಾನವ ಕುಲವು ನರಳುವಂತಾಗಿದೆ.
ಮಣ್ಣಿನ ಹುಟ್ಟಿನ ಹಿನ್ನೆಲೆ
ಈಗ ಭೂಮಿಯ ಮೇಲೆ ಕಾಣಬರುವ ಸಮೃದ್ಧವಾದ ಮಣ್ಣು ಈ ಬಗೆಯಲ್ಲಿ ವಿಕಾಸವಾಗಲು ಅನೇಕ ವರ್ಷಗಳೇ ಆಗಿವೆ. ಈ ಹಿಂದೆ, 4500 ಮಿಲಿಯನ್ ವರ್ಷಗಳ ಹಿಂದೆ ಭೂಮಿ ಉಗಮವಾದಾಗ ಇಂದಿನಂತಹ ಮಣ್ಣಿನ ಪದರವನ್ನು ಹೊಂದಿದ್ದ ಭೂಮಿ ಅದಾಗಿರಲಿಲ್ಲ. ಇಂದು ನಮ್ಮ ಕಣ್ಣನ್ನು ತಂಪಾಗಿಸುತ್ತಿರುವ ಅದ್ಭುತ ಶಕ್ತಿಯ ಹಚ್ಚಡವೂ ಅದಕ್ಕಿರಲಿಲ್ಲ. ಬಿಸಿ ಉಂಡೆ ನಿಧಾನವಾಗಿ ತಂಪಾಗಿ ಕೊನೆಗೊಂದು ದಿನ ಮೊದಲ ಜೀವಿಯ ಉಗಮದೊಂದಿಗೆ, ಮಣ್ಣಿನ ಹುಟ್ಟಿಗೂ ನಾಂದಿ ಹಾಡಿತು. ಕಲ್ಲು ಬಂಡೆಗಳ ಮೇಲೆ ಮರದ ಕಾಂಡಗಳ ಮೇಲೆ ಬೆಳೆವ ಹೂ ನೋಡಿಯೇ ಇರುತ್ತೀರಿ. ಅಂತಹದೇ ಸಸ್ಯ ಕಲ್ಲಿನಲ್ಲಿ ಬೇರನ್ನು ಆಳಕ್ಕಿಳಿಸಿ ಕಲ್ಲನ್ನು ಒಡೆದ ಶಕ್ತಿಯುತ ಜೀವಚರದ ಸಂಪರ್ಕ ಮುಂದೊಂದು ದಿನ ಇಂತಹ ಅದ್ಭುತ ಮಣ್ಣಿನ ಜನನಕ್ಕೆ ಕಾರಣವಾಗಿದೆ. ಹಾಗೆಂದು ಮಣ್ಣು ಈಗಾಗಲೇ ಉಗಮವಾಗಿಯೇ ಹೋಯ್ತು, ಇನ್ನೇನಿದ್ದರೂ ಅದನ್ನು ಮಾನವ ಹಿತಕ್ಕೆ ಬಳಸುವುದಷ್ಟೇ ಕೆಲಸ ಎಂದು ಅರ್ಥವಲ್ಲ. ನಿರಂತರವಾದ ಅದರ ವಿಕಾಸದ ಜೊತೆಗೆ ಅರ್ಥೈಸಿಕೊಂಡು ಬದುಕನ್ನೂ ಹೊಂದಿಸಿಕೊಂಡು ಬಾಳಬೇಕೆ ವಿನಃ ಅದನ್ನು ಕೇವಲ ಲಾಭದ ಹಿನ್ನೆಲೆಯಿಂದ ನೋಡುವುದು ಸರಿಯಲ್ಲ.
“Parent material being a blank paper on which climate write as it desires” ಎಂಬುದು ಮಣ್ಣಿನ ಹುಟ್ಟಿನ ಆಯಾಮಗಳನ್ನು ವಿವರಿಸಿದ ರಷ್ಯಾದ ವಿಜ್ಞಾನಿ ಡ್ಯುಕೊಚೇವ್ ಹೇಳಿದ್ದಾರೆ. ಅವರು ತಾಯಿ ಬಂಡೆ (Parent material) ಜೀವಿಗಳು (Organisms) ಹವಾಮಾನ (Climate), ಇಳಿಜಾರು (Slope) ಮತ್ತು ಕಾಲ (Time) ಇವುಗಳನ್ನು ಮಣ್ಣಿನ ಪ್ರಸ್ತುತ ಇರುವಕೆಯ ಹಿನ್ನೆಲೆಯಲ್ಲಿ ಮೊದಲು ವಿವರಿಸಿದವರು. ಮಣ್ಣನ್ನು ಅಗೆಯುತ್ತಾ ಭೂಮಿಯ ಆಳಕ್ಕೆ ಇಳಿದರೆ ಗಟ್ಟಿ ಮಣ್ಣು, ಗೊರಚಲು, ಕಲ್ಲು, ಬಂಡೆ ಹೀಗೆ ದೊರೆಯುತ್ತಾ ಹೋಗುತ್ತದೆ. ಹೀಗೆ ಇವೆಲ್ಲದರಿಂದಾಗಿಯೇ ಮೇಲ್ಪದರದಲ್ಲಿ ಅದ್ಭುತ ಅಂತಸತ್ವವುಳ್ಳ ಈ ಮಣ್ಣುಗಳು, -ನೆಲದ ಮೇಲಿನ ಜೀವಿಗಳು, ಮೇಲ್ಮೆಯ ಹರಹು, ವಾತಾವರಣದ ಹವಾಮಾನ ಕೆಳಗಣ ತಾಯಿ ಬಂಡೆಯೊಂದಿಗೆ ವರ್ತಿಸಿ ಕಾಲದ ಕ್ರಿಯೆಯಲ್ಲಿ ವಿಕಾಸಗೊಂಡಿದೆ. ಹಾಗಾಗಿ, ಈ ತಾಯಿಬಂಡೆ ಮೇಲ್ಮೆಯ, ಹವಾಮಾನ, ಜೀವಿಗಳು ಮತ್ತು ಕಾಲ ಇದನ್ನೇ ಮಣ್ಣಿನ ವಿಕಾಸದ ಮೂಲ ಸಾಮಗ್ರಿಗಳು ಎನ್ನುವರು. ಈ ವಿಕಾಸ ನಿರಂತರವಾದ ಕ್ರಿಯೆಯಾಗಿದ್ದೂ ಮಣ್ಣೂ ವಿಕಾಸವಾಗುತ್ತಲೇ ಇದೆ.
ಮೇಲ್ನೋಟಕ್ಕೆ ಮಣ್ಣು ಘನವಸ್ತುವಿನಂತೆ ಕಂಡರೂ ಸುಮಾರು ಶೇಕಡಾ 50ರಷ್ಟು ರಂಧ್ರಮಯ. ಕಾರಣ ಮಣ್ಣು ವಿವಿಧ ಗಾತ್ರದ ಕಣಗಳಿಂದ ಸಂರಚನೆಗೊಂಡಿದೆ. ಹಾಗಾಗಿ ಕಣಗಳ ನಡುವಿನ ಜಾಗದಲ್ಲಿ ಗಾಳಿ ಮತ್ತು ನೀರು ತುಂಬಿರಬಹುದು. ಹಾಗಾಗಿಯೇ, ಮೊದಲ ಮಳೆಯಲ್ಲಿ ಮಣ್ಣಿನ ಬಾಯಾರಿಕೆ ಹೆಚ್ಚು ಅಂದರೆ ಆ ಸಮಯದಲ್ಲಿ ರಂಧ್ರಮಯ ಭಾಗದಲ್ಲೆಲ್ಲಾ ಗಾಳಿಯೇ ತುಂಬಿದ್ದು, ನೀರನ್ನು ಕುಡಿಯಲು ಹವಣಿಸುತ್ತದೆ. ಧಾರಾಕಾರ ಮಳೆಯ ನಂತರ ಮಣ್ಣಿನ ಒಳಗಿರುವ ಖಾಲಿ ಜಾಗದಲ್ಲಿ ನೀರೇ ತುಂಬಿರುತ್ತದೆ. ಹೀಗೆ ಮಣ್ಣಿನ ಒಳಭಾಗವು ಒಣಗಿದ್ದಾಗ ಬರೀ ಗಾಳಿಯನ್ನೂ ಮತ್ತು ಹಸಿಯಾದಾಗ ನೀರನ್ನು ತುಂಬಿಕೊಂಡಿರುತ್ತದೆ. ಅಲ್ಲದೆ ಸಂಪೂರ್ಣ ಒಣಗಿದೆ ಎಂದು ಕಾಣುವಾಗಲೂ ಸ್ವಲ್ಪಮಟ್ಟಿಗಿನ ನೀರನ್ನು ಹಿಡಿದಿಟ್ಟುಕೊಳ್ಳುವ ಗುಣವನ್ನು ಮಣ್ಣು ಹೊಂದಿದೆ.
ಮೊದಲ ಮಳೆಯ ಪ್ರಸ್ತಾಪವೆಂದ ಕೂಡಲೇ ಅದರ ಆಹ್ಲಾದಕರ ಸುವಾಸನೆಯನ್ನು ನೆನಪಿಸಿಕೊಳ್ಳದೆ ಇರಲು ಸಾಧ್ಯವಿಲ್ಲ. ಇದು ಒಂದು ಬಗೆಯಲ್ಲಿ ಮಣ್ಣಿನ ಜೀವಂತಿಕೆಯ ಸಾಕ್ಷಿ ಕೂಡಾ. ಮಣ್ಣಿನಲ್ಲಿರುವ ಒಂದು ಬಗೆಯ ಬ್ಯಾಕ್ಟೀರಿಯಗಳಾದ ಅಕ್ಟೀನೋ ಮೈಸಿಟೇಸ್ ಎಂಬ ಒಂದು ಜಾತಿಯ ಜೀವಿಗಳಿಂದ ಸ್ರವಿಸಿದ ರಾಸಾಯನಿಕದಿಂದ ಅಂತಹ ಸುವಾಸನೆ ಬರುತ್ತದೆ. ಇದೊಂದು ಜಿಯೋಸ್ಮಿನ್ ಎಂಬ ರಸಾಯನಿಕ. ಇದನ್ನು ಪೆಟ್ರಿಕಾರ್ ಎಂದು ಕರೆಯುತ್ತಾರೆ. ಪೆಟ್ರಿಕಾರ್ ಅಂದರೆ -ಪೆಟ್ರಾ-ಐಕಾರ್- ಪೆಟ್ರಾ ಅಂದರೆ ಕಲ್ಲು, ಐಕಾರ್ ಅಂದರೆ ಸಾವೇ ಇಲ್ಲದ ದೇವತೆಗಳ ಮೈಯಲ್ಲಿ ಹರಿಯುವ ಬಂಗಾರದ ರಕ್ತ! ಮೊದಲ ಮಳೆಯ ಸುವಾಸನೆಗೆ ವಿಜ್ಞಾನವು ಹೆಸರಿಸಿ ವಿವರಿಸಿದ ಬಗೆ ಅಂತಹದು. ಹಾಗೆಂದೇ ಅದರ ಮಧುರ ಸುವಾಸನೆಗೆ ಖುಷಿಗೊಳ್ಳದವರು ಯಾರೂ ಇಲ್ಲ. ಮಣ್ಣಿನ ಜೀವಂತಿಕೆಯ ಸಹಜವಾದ ಅನುಭವವಿದು.
ಇಂತಹಾ ಮಣ್ಣಿಗೆ ಹೊರ ನೋಟದಲ್ಲಿ ಹಚ್ಚ ಹಸಿರಿನ ಕಣ್ಣಿಗಾನಂದ ಕೊಡುವ ನೋಟದ ಜೊತೆಗೆ ಅದರ ಅಂತರಂಗವೂ ಸುಂದರವಾದುದೇ. ಮಣ್ಣಿನ ಕಣಗಳ ಜೋಡಣೆಯು ವಿಶಿಷ್ಟವಾದ ಸೌಂದರ್ಯವನ್ನು ಹೊಂದಿದೆ. ಕಣ ಜೋಡಣೆಯು ಅವುಗಳು ಒಂದನ್ನೊಂದು ಆತು ಹೊಂದಿಕೊಳ್ಳುವ ಎಲ್ಲಾ ಬಗೆಯ ಆಕಾರಗಳನ್ನೂ ಕೊಡುತ್ತವೆ. ಹಾಗಾಗಿ ಚಪ್ಪಟೆ, ನೀಳ, ತಟ್ಟೆಯಂತೆ, ಮುಂತಾಗಿ ವೈವಿಧ್ಯಮಯ ಆಕಾರಗಳನ್ನು ಹೊಂದಿವೆ. ಅಂತರಂಗವು ರಸಾಯನಿಕ ಚೆಲುವನ್ನು ಸಹಾ ಹೊಂದಿದೆ. ಮಣ್ಣು ರಸಾಯನಿಕವಾಗಿ ಆಕ್ಸಿಜನ್ ಮತ್ತು ಸಿಲಿಕಾನ್ಗಳ ಆಕರ್ಷಕ ಜೋಡಣೆ. ಒಂದು ಸಿಲಿಕಾನ್ ಪರಮಾಣುವನ್ನು ನಾಲ್ಕು ಆಕ್ಸಿಜನ್ ಪರಮಾಣುಗಳು ಸುತ್ತುವರೆದು ಗೊತ್ತಾದ ಸಂರಚನೆಗೆ ಕಾರಣವಾಗುತ್ತವೆ. ಜೊತೆಗೆ ಇವೇ ಆಯಾ ಸಂಯುಕ್ತಗಳಲ್ಲಿ ಬಗೆ ಬಗೆಯ ವಿವಿಧ ಪರಮಾಣುಗಳಿಗೂ ತಮ್ಮ ಚಾರ್ಜುಗಳ ಬೆಂಬಲದಿಂದ ಆಶ್ರಯ ಕೊಡುತ್ತವೆ.
ಇವೆಲ್ಲವೂ ಅಯಾನು ವರ್ಗೀಕರಣದ ಗೊತ್ತಾದ ಶ್ರದ್ಧಾ ಪೂರ್ವಕ ರೀತಿ-ನೀತಿಯೊಂದಿಗೆ ನಡೆಯುತ್ತದೆ. ಇದನ್ನು ಅಯಾನುಗಳ ಎಕ್ಸ್ಚೇಂಜ್ ಸಾಮರ್ಥ್ಯ (Ion Exchange Capacity) ಎಂದೇ ಕರೆಯಲಾಗುತ್ತದೆ. ಇದೇ ಆಹಾರ ತಯಾರಿಯಲ್ಲಿ ಸಸ್ಯಗಳಿಗೆ ಬೇಕಾದ ವಿವಿಧ ರಸಾಯನಿಕ ಅಯಾನುಗಳನ್ನು ಒದಗಿಸುವ ಚಟುವಟಿಕೆ. ದ್ಯುತಿ ಸಂಶ್ಲೇಷಣೆ (Photosynthesis) ನಂತರ ಜಗತ್ತಿನ ಅತ್ಯಂತ ಪ್ರಮುಖವಾದ ನೈಸರ್ಗಿಕ ಚಟುವಟಿಕೆಯೆಂದೇ ಇದನ್ನು ಗುರುತಿಸಲಾಗುತ್ತದೆ. ದ್ಯುತಿ ಸಂಶ್ಲೇಷಣೆಯಲ್ಲಿ ಗ್ಲೂಕೋಸ್ ಉತ್ಪನ್ನವಾದರೆ, ಈ ಅಯಾನು ಎಕ್ಸ್ಚೇಂಜ್ ನಿಂದಾಗಿ ಮಣ್ಣಿನ ಕಣಗಳಲ್ಲಿ ಚಾರ್ಜ್ನಿಂದಾಗಿ ಹಿಡಿದಿಡಲ್ಪಟ್ಟ ಸಾರಜನಕ, ರಂಜಕ, ಪೊಟ್ಯಾಸಿಯಂ, ಕ್ಯಾಲ್ಸಿಯಂ, ಮುಂತಾದ ಆಹಾರಾಂಶಗಳು ಸಸ್ಯಗಳಿಗೆ ಸರಬರಾಜಾಗುತ್ತವೆ. ಈ ಆಹಾರಾಂಶಗಳಿಂದ ಸಸ್ಯದ ಉತ್ಪನ್ನಗಳಲ್ಲಿ ಪ್ರೊಟೀನು, ಕೊಬ್ಬು, ವಿಟಮಿನ್ನುಗಳೇ ಮುಂತಾದವು ಉತ್ಪತ್ತಿಯಾಗುತ್ತವೆ. ಹಾಗಾಗಿ ಇಡೀ ಜೀವ ಜಗತ್ತಿನ ಹೊಟ್ಟೆ ಎಂದು ಮಣ್ಣನ್ನು ಕರೆಯಲಾಗುತ್ತದೆ.
ಹಾಗಿದ್ದ ಮೇಲೆ ಈ ಎಲ್ಲಾ ಪ್ರಕ್ರಿಯೆಗಳೂ ಮಣ್ಣಿನಿಂದ ನಡೆಯುವಲ್ಲಿ ಒಂದು ಸಾಮರಸ್ಯ ಇರಬೇಕಲ್ಲವೇ? ಇವುಗಳೆಲ್ಲಾ ಮಣ್ಣಿನಿಂದ ದೊರಕುವ ಪುನಃ ಮಣ್ಣಿಗೆ ಹಿಂದಿರುಗುವ ವಿಚಾರಗಳನ್ನು ಅರ್ಥೈಸಲು ವೈಜ್ಞಾನಿಕವಾಗಿ ಪ್ರಶ್ನಿಸಿದವರು 1840ರಷ್ಟು ಹಿಂದೆ, ಜರ್ಮನಿಯ “ಜಸ್ಟಸ್ ವಾನ್ ಲೀಬಿಗ್” ಎಂಬ ಪ್ರತಿಭಾವಂತ ರಸಾಯನ ವಿಜ್ಞಾನಿಯನ್ನು ಆಧುನಿಕ ಗೊಬ್ಬರಗಳ ಪಿತಾಮಹ ಎನ್ನುತ್ತಾರೆ. 1842 ರಲ್ಲೇ ಮೊಟ್ಟ ಮೊದಲ ಗೊಬ್ಬರವನ್ನು ಸೃಷ್ಟಿಸಿದ, ಅವರೇ 1865 ವರ್ಷಗಳಷ್ಟು ಹಿಂದೆಯೇ ಲಂಡನ್ನಿನ ಮೇಯರ್ಗೆ ಪತ್ರ ಬರೆದು “ನಿಮ್ಮ ಲಂಡನ್ನಿನ ಸುತ್ತ ಮುತ್ತಲ ಹೊಲ-ತೋಟಗಳ ಮಣ್ಣಿನ ಸಾರವೆಲ್ಲಾ ನಗರದಲ್ಲಿ, ಥೇಮ್ಸ್ ನದಿಯಲ್ಲಿ ಉಳಿಕೆಯಾಗಿ, ಕೊಳೆತು ಮಲಿನತೆಯ ತರುತ್ತಿದೆ. ಇದನ್ನು ನಿಭಾಯಿಸದಿದ್ದರೆ, ಅತಿ ದೊಡ್ಡ ಬೆಲೆ ತರಬೇಕಾದೀತು” ಎಂದೂ ಎಚ್ಚರಿಸಿದ್ದರು.
ಅದೇ ಕಾಲದ ಖ್ಯಾತ ಆರ್ಥಿಕ ತಜ್ಞ ಕಾರ್ಲ್ ಮಾರ್ಕ್ಸ್ ಸಹಾ ಲೀಬಿಗ್ ಸಂಶೋಧನೆಗಳಿಂದ ಪ್ರಭಾವಿತರಾಗಿ ಹಳ್ಳಿಗಳ ಹೊಲ-ಗದ್ದೆಗಳಿಗೆ ಗೊಬ್ಬರಗಳ ಸಾರವನ್ನು ಹಿಂತಿರುಗಿಸಿ, ಜಮೀನಿನ ಉತ್ಪತ್ತಿಯನ್ನು ಕಾಪಾಡುವ ಕಾಳಜಿ ಹೊಂದಿದ್ದರು. ನಗರದ ಕೈಗಾರಿಕೆಗಳಿಗೆ ಕಚ್ಚಾ ಮಾಲನ್ನು ಒದಗಿಸಿದ ಹಳ್ಳಿಗಳಿಗೆ ಗೊಬ್ಬರಗಳ ರೂಪದಲ್ಲಿ ಅವರ ಜಮೀನಿನ ಮಣ್ಣಿನ ಸಾರವನ್ನು ಹಿಂದಿರುಗಿಸುವ ಋಣ ಆಧುನಿಕ ನಗರಗಳದ್ದು ಎನ್ನುವ ಅಭಿಪ್ರಾಯವುಳ್ಳವರಾಗಿದ್ದರು. ಹಳ್ಳಿ ಮತ್ತು ನಗರಗಳ ಸಹಕಾರವನ್ನು ಮಣ್ಣಿನ ಸಾರದ ಕೊಡು-ಕೊಳ್ಳುವಿಕೆಯ ಸಮೀಕರಣದಿಂದ ಸಮಾನತೆಯ ಸಾಧ್ಯತೆಯ ಬಗೆಗೆ ತಿಳಿವಳಿಕೆಯನ್ನು ಶತಮಾನಗಳ ಹಿಂದೆಯೇ ಕಂಡವರು. ಓರ್ವ ಆರ್ಥಿಕ ತಜ್ಞರಾಗಿ ಕಾರ್ಲ್ ಮಾರ್ಕ್ಸ್ ಹಳ್ಳಿ-ನಗರಗಳ ಸಮಾನತೆಯ ಆದರ್ಶವನ್ನು ಮಣ್ಣಿನ ಸಾರವು ನಗರಗಳ ತ್ಯಾಜ್ಯದಿಂದ ಹಳ್ಳಿಗಳಿಗೆ ಹಿಂದಿರುಗಿ, ಫಲವತ್ತತೆಯ ಸಮೀಕರಣವಾಗುವಲ್ಲಿ ಕಾಳಜಿಯನ್ನು ಹೊಂದಿದ್ದರು.
ಎಲ್ಲಾ ನಿಸರ್ಗದತ್ತವಾದ ವಸ್ತುಗಳಿಗೂ ನೈಸರ್ಗಿಕ ಕೆಲಸಗಳಿಗೆ. ಆಯಾ ನೈಸರ್ಗಿಕ ಕಾರ್ಯವನ್ನು ನಡೆಸಿಕೊಂಡು ಹೋಗುವಂತೆ ನಿಸರ್ಗದ ಜತೆಗೇ ಸಹಕರಿಸುವುದು ನಿಸರ್ಗದ ಎಲ್ಲಾ ಪಾಲುದಾರರ ಕರ್ತವ್ಯ. ಮಣ್ಣಿಗೆ ಎರಡು ಬಹು ಮುಖ್ಯವಾದ ಕೆಲಸಗಳಿವೆ. ಉತ್ಪಾದನೆ ಮತ್ತು ಉತ್ಪಾದಿತವಸ್ತುಗಳನ್ನು ತನ್ನೊಳಗೇ ಕೊಳೆಯಿಸುವ ಗುಣ. Soil is the only natural medium that can produce, as well decompose! ಇದನ್ನು ಸೃಜನಶೀಲವಾಗಿ ನಿಸರ್ಗ ವಿಕಾಸಗೊಳಿಸಿ ನಿರಂತರವಾಗಿಸಿದೆ. ಮಣ್ಣು ಕಲಿಸಿಕೊಟ್ಟ ಈ ತಿಳಿವಳಿಕೆಯನ್ನು ಮಾನವ ಇನ್ನೂ ಆಧುನಿಕಗೊಳ್ಳುವ ಮೊದಲು ಪಾಲಿಸುತ್ತಾ ಇದ್ದನಾದರೂ, ಆಧುನಿಕತೆಯ ದೌಡಿನಲ್ಲಿ ಮರೆತು, ಅದರಲ್ಲೂ ನಗರೀಕರಣದ ಆಸೆಯಲ್ಲಿ ಇದನ್ನು ಸಂಪೂರ್ಣ ಮರೆತು ಎಲ್ಲವನ್ನೂ ಕಂಗೆಡಿಸಿ ಹವಾಮಾನ ಬದಲಾವಣೆ ಎಂದು ನಿಸರ್ಗಕ್ಕೇ ಆರೋಪಿಸಿ ತಾನು ಕೈತೊಳೆದುಕೊಳ್ಳುವ ಜಾಯಮಾನ ಇರಿಸಿಕೊಂಡಿದ್ದಾನೆ. ಇದಕ್ಕೆಲ್ಲಾ ತಾನೇ ಕಾರಣ ಎನ್ನುವುದನ್ನೂ ಒಪ್ಪಿಕೊಳ್ಳದ ರಾಜಕೀಯವೇ ಅಧಿಕಾರದಲ್ಲಿರುವುದು. ಮಣ್ಣಿನ ಹುಟ್ಟನ್ನು ಅರ್ಥೈಸುವಲ್ಲಿಯೇ ಹವಾಮಾನ ತನ್ನಿಚ್ಛೆಯಂತೆ ಬರೆಯಬಲ್ಲುದು ಎಂಬ ಸೂಕ್ಷ್ಮವನ್ನು ಮಣ್ಣು ವಿಜ್ಞಾನಿ ಡ್ಯುಕೊಚೇವ್ ಹೇಳಿದ್ದರೂ ಜೊತೆಗೆ ಮುಂದೆ ಬಂದ ಅನೇಕರೂ ಪ್ರತಿಪಾದಿಸುತ್ತಲೇ ಇದ್ದರೂ ಎಲ್ಲಾ ಮರೆತ ಸಂಸ್ಕೃತಿ ನಮ್ಮದಾಗಿದೆ.
ನಗರೀಕರಣದ ಪ್ರಭಾವದಿಂದ ಮಣ್ಣಿನಲ್ಲಿ ಫಲವತ್ತತೆಯನ್ನು ಕಳೆದುಕೊಳ್ಳುವ ಗ್ರಾಮಗಳು, ಆಹಾರದ ತ್ಯಾಜ್ಯದಿಂದ ಕೊಳೆಸಿಕೊಳ್ಳುವ ನಗರಗಳು ಸೃಷ್ಟಿಯಾಗುತ್ತಿವೆ/ಸೃಷ್ಟಿಯಾಗಿವೆ. ಹಲವಾರು ಕಾರಣಗಳಿಂದ ಅನೇಕರು ಕೃಷಿಯಿಂದ ವಿಮುಖಗೊಂಡು ನಗರಗಳತ್ತ ಹೊರಟರು. ಇದೀಗ ನಮ್ಮ ರಾಜ್ಯದಲ್ಲಿಯೇ ಪ್ರತಿಶತ 40-45ರಷ್ಟು ಅಂದರೆ ಸುಮಾರು 2.5 ಕೋಟಿಗಳಷ್ಟು ಜನರು ನಗರವಾಸಿಗಳಾಗಿದ್ದಾರೆ. ಪರಿಸ್ಥಿತಿ ಇನ್ನೂ ಹೆಚ್ಚುತ್ತಲೇ ಇದೆ. ಇವರುಗಳಿಗೆ ಸರಬರಾಜಾದ ಆಹಾರ ನಗರಗಳಲ್ಲೇ ಕೊಳೆಯುತ್ತಾ ಗೊಬ್ಬರವಾಗಿ ವಾಪಸ್ಸು ಹಳ್ಳಿಗಳ ಜಮೀನಿಗೆ ತಲುಪುತ್ತಿಲ್ಲ. ಹಳ್ಳಿಯ ತೋಟಗಳ ಹೂ-ಹಣ್ಣುಗಳು ತಾಜಾ ಆಗಿ ಬಂದು ನಗರದ ಮಾರುಕಟ್ಟೆಯಲ್ಲಿ ಕಳೆಕಟ್ಟಿ, ಮಾರಾಟಗೊಂಡು, ಊರಲ್ಲೇ ಉಳಿದು, ಕೊಳೆತು ನಾರುತ್ತವೆ. ಜೊತೆಗೆ ಉಳಿದ ಆಹಾರ ಪದಾರ್ಥವೂ ನಗರಗಳನ್ನು ಸೇರಿ ಅಲ್ಲೇ ಚರಂಡಿ ನೀರಿಗೆ ಸೇರುತ್ತಾ ಅಲ್ಲಲ್ಲೇ ಕೊಳೆಯುತ್ತಾ ತಾಜಾಗಳಿಂದ ತ್ಯಾಜ್ಯಗಳಾಗುತ್ತಿವೆ.
ಹಬ್ಬಗಳಂತೂ ಒಂದರ ಹಿಂದೆಯೇ ಮತ್ತೊಂದು ಬರುತ್ತವೆ. ಹಳ್ಳಿಯ ಹೊಲ-ತೋಟಗಳಿಂದ ಸಾಕಷ್ಟು ಹೂವು ಹಣ್ಣು, ಹಸಿರೆಲೆಗಳು ನಗರಕ್ಕೆ ಸೇರುತ್ತವೆ. ತೋಟಗಳಿಂದ ಸೇವಂತಿಗೆ, ಚೆಂಡು ಹೂ, ಜೊತೆಗೆ ಬಾಳೆಯ ಕಂಬಗಳು, ಮಾವಿನ ಎಲೆ ಸಾಲದ್ದಕ್ಕೆ ಬೂದುಗುಂಬಳಕಾಯಿ ಟನ್ನುಗಟ್ಟಲೆ ನಗರಗಳನ್ನು, ಊರುಗಳನ್ನು ಸೇರುತ್ತದೆ. ಹಬ್ಬ ಹಬ್ಬಕ್ಕೂ ನಮ್ಮ ಈ ಬಗೆಯ ಹೂ-ಹಣ್ಣುಗಳ ವೈಭವ ಹೆಚ್ಚುತ್ತಲೇ ಸಾಗಿದೆ. ಹಬ್ಬದ ಕೊಯಿಲಿಗೆಂದೇ ರೈತರು ಸಾಕಷ್ಟು ಸಾರಜನಕ, ರಂಜಕ ಮುಂತಾದ ಗೊಬ್ಬರಗಳನ್ನು ಹಾಕಿ ಬೆಳೆದಿರುತ್ತಾರೆ. ಎಲ್ಲವೂ ನಗರಗಳ ಆಸುಪಾಸಿನ ಜಮೀನಿಂದ, ಅಲ್ಲಿನ ಮಣ್ಣಿನ ಸಾರದಿಂದಲೇ ಸೃಷ್ಟಿಯಾಗಿ ಹಬ್ಬದ ರಂಗನ್ನು ಬಣ್ಣಬಣ್ಣದ ಹೂ ಹಣ್ಣುಗಳಲ್ಲಿ ತುಂಬಿಕೊಂಡು ಮೆರುಗನ್ನು ಹೆಚ್ಚಿಸುತ್ತದೆ. ಇಂತಹ ಆಚರಣೆಗಳು ನಗರಗಳಲ್ಲಿ ಬಹು ದೊಡ್ಡ ಫ್ಯಾಷನ್ಗಳೆಂಬಂತೆ ಜರುಗುತ್ತವೆ. ಜತೆಗೆ ಮುಗಿದ ಮರುದಿನವೇ ರಸ್ತೆ ಸೇರುವ ತ್ಯಾಜ್ಯಗಳಾಗುತ್ತವೆ. ನಮ್ಮ ಹಳ್ಳಿಗಳ ಜಮೀನಿನ ಸಾರ ಕಳೆದು ಗ್ರಾಮೀಣ ಪರಿಸರಕ್ಕೆ ಬಹು ದೊಡ್ಡ ನಷ್ಟವಾದರೆ, ಅದೇ ತ್ಯಾಜ್ಯವು ನಗರಗಳಲ್ಲಿ ಮಲಿನತೆಗೆ ಕಾರಣವಾಗುತ್ತದೆ. ವೈಜ್ಞಾನಿಕವಾಗಿ ಆರಂಭದಿಂದಲೂ ಅರಿತುಕೊಂಡ ಈ ರಸಾಯನಿಕ ಸಾಮರಸ್ಯವನ್ನು ಆಧುನಿಕ ನಾಗರಿಕ ಸಮಾಜವಂತೂ ಸಂಪೂರ್ಣ ಮರೆತು, ವರ್ತಿಸುತ್ತಿದೆ.
ಬ್ರಿಟಿಷ್ ಬರಹಗಾರ ಎಡ್ವರ್ಡ್ ಹೈಮ್ ತಮ್ಮ “Soil and Civilization” ಎಂಬ ಕೃತಿಯಲ್ಲಿ ಮಣ್ಣಿನೊಡನೆಯ ನಾಗರಿಕ ಸಂಬಂಧಗಳನ್ನು ವಿಮರ್ಶಿಸುತ್ತಾ ಕೆಲವೊಂದು ಹೊಳಹುಗಳನ್ನು ನೀಡಿದ್ದಾರೆ. ಅದರಲ್ಲೂ ಭಾರತೀಯ ಸಂದರ್ಭದಲ್ಲಿ ಬುದ್ಧನ ಕಾಲದಿಂದಲೂ ನೆಲದ ಗ್ರಹಿಕೆಯು ಕೇವಲ ಕಂದಾಯ ನೀತಿಯ ಆಯಾಮಗಳಲ್ಲಿ ಕಳೆದುಹೋಗುತ್ತಿರುವ ಬಗ್ಗೆ ಎಚ್ಚರಿಸುತ್ತಾರೆ. ನೆಲದ ಗ್ರಹಿಕೆಯು ಸಮುದಾಯಗಳಲ್ಲಿ ಬದಲಾಗುತ್ತಾ ದುರಂತದೆಡೆಗೆ ಸಾಗುತ್ತಿರುವ ಬಗೆಗೆ ಅನೇಕ ವಿಜ್ಞಾನಿಗಳೂ, ಸಮಾಜವಿಜ್ಞಾನಿಗಳೂ ಎಚ್ಚರಿಸುತ್ತಲೇ ಬಂದಿದ್ದಾರೆ. ನಾಗರಿಕ ಆಸಕ್ತಿಯ ವಿಜ್ಞಾನಿ ಮಿತ್ರರು ಚರ್ಚಿಸುವಾಗ – “ಎಲ್ಲಿದೆ ರೀ… ಡೆವಲೆಪ್ಮೆಂಟ್…..? ಎಲ್ಲಾ ಎಸ್ಟೇಟ್ ಏಜೆನ್ಸಿ ಅಷ್ಟೇ!” ಎಂದು ಉದ್ಘರಿಸುವುದುಂಟು. ಅಪ್ಪಟ ನಗರವಾಸಿಗಳಾಗಿ ಜೀವನದ ಪ್ರಮುಖ ಭಾಗವನ್ನು ಕಳೆಯುತ್ತಿರುವ ಅನೇಕರಿಗೆ ನಗರ ಪಟ್ಟಣಗಳ ಬೆಳವಣಿಗೆಗಳನ್ನು ನೋಡಿ ಇದು ಅನುಭವಕ್ಕೆ ಬಂದಿರುತ್ತದೆ. ಎಸ್ಟೇಟ್ ಏಜೆನ್ಸಿಯ ಅಭಿವೃದ್ಧಿಯು ಇದೀಗ ಎಲ್ಲ ಕಡೆಗೂ ವ್ಯಾಪಿಸಿರುವುದು ಮತ್ತು ಅಂತಹ ಸಂದರ್ಭವು ವಿಜ್ಞಾನದಲ್ಲೂ ಚರ್ಚೆಯ ವಸ್ತುವಾಗುತ್ತಿದೆ. ವಾಸ್ತವವಾಗಿ ಇದೊಂದು ನೆಲದ ಆಸೆ! ಅದಕ್ಕೆ ಕೊಟ್ಟಿರುವ, ಕೊಡುತ್ತಿರುವ ಹೆಸರುಗಳು ಹೊಸ ಬಗೆಯವು ಅಷ್ಟೇ! ಸ್ಮಾರ್ಟ್ ಸಿಟಿ, ಮಾಡರ್ನ್ ಟೌನ್, ಕ್ಲೀನ್ ವಿಲೇಜ್ ಎಲ್ಲದರಲ್ಲೂ ಇರುವ ಒಂದೇ ಬಹು ದೊಡ್ಡ ಆಸೆ, ಆಯಾ ನೆಲದ ಮೇಲಿನ ಮೋಹ ಮಾತ್ರ! ಇದು ಊರುಗಳನ್ನು ಮೀರಿ, ಊರಾಚೆಯ ಗುಡ್ಡ-ಬೆಟ್ಟಗಳ ಮೇಲೇರಿ ಇರಬಾರದ ಜಾಗದಲ್ಲಿ ಇರಲೇಬೇಕೆಂಬ ತೆವಲನ್ನು ಹಚ್ಚಿದೆ.
ನಮ್ಮನ್ನು ಎರಡು ಶತಮಾನಕ್ಕೂ ಹೆಚ್ಚು ಸಮಯ ಆಳಿದ ಬ್ರಿಟೀಷರು ಕೂಡ ಇಲ್ಲಿನ ನೆಲದ ಆಸೆಯಿಂದಲೇ ಬಂದವರು. ಅದಕ್ಕೂ ಬಹಳ ಮುಂಚೆಯೇ ಕೊಲಂಬಸ್ ಭಾರತದ ನೆಲ ತಲುಪುವ ದಾರಿ ಹುಡುಕುತ್ತಾ ಅಲ್ಲಿಯವರೆಗೂ ಹಳೆಯ ಪ್ರಪಂಚಕ್ಕೆ ಗೊತ್ತಿರದೇ ಇದ್ದ ಅಮೆರಿಕಾ ತಲುಪಿದ್ದ. ಆತ ಒಟ್ಟು ನಡೆಸಿದ ಸುಮಾರು ನಾಲ್ಕು ನೌಕಾಯಾನಗಳಲ್ಲಿ ಮೊದಲ ಮೂರನ್ನು ರಾಜನಂತೆ ಮಾಡಿದ್ದರೂ ನಾಲ್ಕನೆಯದನ್ನು ಕೈದಿಯಾಗಿ ಮಾಡಬೇಕಾಯಿತು. ಕಾಲಿಗೆ ಸರಪಳಿ ಹಾಕಿ ಸ್ಪೇನಿನ ರಾಣಿ ಇಸೆಬೆಲ್ಲಳು ಕಳಿಸಿದ್ದಳು. ನಾಲ್ಕನೆಯ ಯಾನದಂತೂ ರಾಜಪ್ರಭುತ್ವಕ್ಕೆ ಬೇಕಾದ್ದನ್ನು ಕೊಳ್ಳೆ ಹೊಡೆಯುವ ಉದ್ದೇಶವನ್ನೇ ಕೊಲಂಬಸ್ಸನಿಗೆ ತಾಕೀತು ಮಾಡಿದ್ದಳು!
ನೆಲದ ಆಸೆಯು ಸ್ಥಳೀಯತೆಯನ್ನೇ ನುಂಗಿ ಹಾಕಿ ವಸಾಹತೀಕರಣದ ಮಜಲನ್ನು ಸೇರಿಸುತ್ತಲೇ ಬದಲಾವಣೆಗಳನ್ನು ಹೇರುತ್ತಿರುವುದು, ಸಾಮಾನ್ಯವಾಗಿದೆ. ವಸಾಹತು ಕಾಲದಲ್ಲಿ ಬ್ರಿಟೀಶರು, ಸ್ಪಾನಿಷ್ರು, ಫ್ರೆಂಚರು ಸಾಕಷ್ಟೇ ವಿಸ್ತರಿಸಿ ನೆಲವನ್ನು ತಮ್ಮದಾಗಿಸಿ ಮೆರೆದರು. ಇದೀಗ ವಸಾಹತೋತ್ತರ ಸಂದರ್ಭದಲ್ಲಿ ಹೊಸ ಅಭಿವೃದ್ಧಿ ಆಯಾಮವಾಗಿ ಅಕ್ರಮ-ಸಕ್ರಮ, ಭೂ ನೀಡಿಕೆ, ಎಸ್.ಇ.ಜಡ್, ಕೈಗಾರಿಕಾ ಎಸ್ಟೇಟ್ಗಳು ಮುಂತಾದ ಹೆಸರಲ್ಲಿ ವಿಜೃಂಭಿಸುತ್ತಿವೆ. ಇವುಗಳಾವುವೂ ನೆಲದ ಆತ್ಯಂತಿಕ ನೈಸರ್ಗಿಕ ಕಾರ್ಯಗಳನ್ನು ಬೆಂಬಲಿಸಿ ತೆಗೆದುಕೊಂಡ ನಿರ್ಧಾರಗಳಲ್ಲ! ಕೇವಲ ಯಜಮಾನಿಕೆಯ ದರ್ಪದಲ್ಲಿ ಘೋಷಣೆಗೊಂಡ ರಾಜಕೀಯ ಫಲಿತಗಳು. ಇವುಗಳಿಗೆ ಆಧುನಿಕತೆಯ, ನಾಗರಿಕ ಹಿತವೆಂದು ಬಿಂಬಿಸಿದ ವಿವರಗಳೇ ಮುಖ್ಯ.
ಸುಮಾರು ೧೭೦೦ಕ್ಕೂ ಮುಂಚಿನ ದಿನಗಳಿಂದಲೂ ಐರೋಪ್ಯರು ಜಗತ್ತಿನ ಇತರೇ ದೇಶಗಳಲ್ಲಿ ಕಾಡಿನ ನೆಲವನ್ನು ಕೃಷಿಗೆಂದು ಬಯಲುಗೊಳಿಸತೊಡಗಿದರು. ತಮ್ಮ ವಸಾಹತುಗಳು ಇರುವ ಎಲ್ಲಾ ಸ್ಥಳಗಳಲ್ಲೂ ಇದೇ ಮಾದರಿಯ ಅಭಿವೃದ್ಧಿಯನ್ನು ದೃಢೀಕರಿಸುತ್ತಾ ಜನರಲ್ಲಿ ನೆಲದ ಮೇಲಿನ ಗ್ರಹಿಕೆಯನ್ನೇ ಬದಲಿಸಿದರು. ಇಲ್ಲದಿದ್ದರೆ ಈಗೂ ಕೂಡ ಅರಣ್ಯವಾಸಿಗಳಲ್ಲಿ ಕಾಣದ ಕಾಡು ಕಡಿದು ನೆಲ ಅಗೆಯುವ ಮಾತಿರಲಿ, ಅಚ್ಚುಕಟ್ಟಾದ ಕೃಷಿ ನೆಲವನ್ನೇ ಅಪಾರ್ಟಮೆಂಟ್ಗಳಾಗಿ, ಕೆರೆಗಳನ್ನು ಮೈದಾನ, ಬಸ್ಸು ನಿಲ್ದಾಣ ಮುಂತಾದ ಸ್ಥಳಗಳಾಗಿ ಬದಲಿಸುತ್ತಿರಲಿಲ್ಲ. ಹಲವಾರು ವರ್ಷಗಳ ಹಿಂದೆಯಷ್ಟೇ ನಮ್ಮ ಕಾವೇರಿ, ಗೋದಾವರಿ, ಗಂಗಾ, ಯಮುನೆಯರ ತೀರದಲ್ಲಿ ಇಂದಿನ ವಾತಾವರಣ ಕಾಣುತ್ತಿರಲಿಲ್ಲ. ಇಂದು ಹಲವಾರು ಬಗೆಗಳಲ್ಲಿ ನಮ್ಮ ನದಿಗಳ ಮೂಲಕ ಹರಿದು ಹಂಚಿಕೆಯಾಗಿ ಸರೋವರ, ಸಮುದ್ರಗಳ ಸೇರುತ್ತಿರುವ ಮಣ್ಣು ದಿನವೂ ಹೆಚ್ಚುತ್ತಿದೆ. ಇದು ಆಹಾರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿರುವ ಈ ಹೊತ್ತಿನಲ್ಲಿ, ಜತೆಗೆ ನಮ್ಮ ಜನಸಂಖ್ಯೆಯೂ ಹೆಚ್ಚುತ್ತಿರುವ ಸಂದರ್ಭದಲ್ಲಿದು ದೊಡ್ಡ ಆಘಾತ ಎಂದು ವಿವಿಧ ಸಂಶೋಧಕರ ಅಭಿಪ್ರಾಯ.
ಯೂರೋಪ್ ದೇಶಗಳ ಆಡಳಿತಕ್ಕೆ ಸಿಕ್ಕಿದ್ದ ಭಾರತವೂ ಸೇರಿದಂತೆ ವಿವಿಧ ದೇಶಗಳ ವಸಾಹತೀಕರಣದ ಹಿನ್ನೆಲೆಯಲ್ಲಿ ನೆಲದ ಮೇಲಾದ ಮಣ್ಣಿನ ನಷ್ಟ ಮತ್ತಿತರ ಜೀವವಿರೋಧಿ ಸಂಕೇತಗಳನ್ನು ಹಲವಾರು ನದೀ ತೀರಗಳ ಮತ್ತು ಕಾಡಿನ ಅಂಚಿನ ವೈವಿಧ್ಯತೆಗಳನ್ನು ಅರಿಯುವ ಮೂಲಕ ಅಧ್ಯಯನ ನಡೆಸಲಾಗಿದೆ. ಅಂತರರಾಷ್ಟ್ರೀಯ ವಿಜ್ಞಾನಿಗಳ ತಂಡವು ನಡೆಸಿದ ಈ ಅಧ್ಯಯನವು ಬಹಳ ಮುಖ್ಯ ಸಂಗತಿಯನ್ನು ಅಂದಾಜಿಸಿದೆ. ಏನೆಂದರೆ ಮಳೆ, ಗಾಳಿಯ ಹೊಡೆತಕ್ಕೆ ಮಣ್ಣಿನ ನಷ್ಟವೇನೋ ಸಹಜವೇ! ಆದರೆ ಅದು ನೈಸರ್ಗಿಕವಾಗಿ ಆಗುತ್ತಿರುವುದಕ್ಕೂ ಸುಮಾರು ಒಂದು ನೂರು ಪಟ್ಟು ಹೆಚ್ಚಾಗಿ ಕೇವಲ ವಸಾಹತೀಕರಣದ ನೆಲದ ಗ್ರಹಿಕೆಯಿಂದಾಗಿದೆ ಎನ್ನುವುದಾಗಿದೆ. ಇತ್ತೀಚೆಗೆ ನಮ್ಮ ನಗರ ಪ್ರದೇಶಗಳ ಅನಿಯಮಿತ ಬೆಳವಣಿಗೆಗಳನ್ನು ಜಗತ್ತಿನಾದ್ಯಂತ ಅರಿತಿರುವ ವಿಜ್ಞಾನಿಗಳ ತಂಡವು ಇದರಲ್ಲಿ ನೇರವಾಗಿ ವಸಾಹತೀಕರಣದ ಧೋರಣೆಗಳನ್ನು ಒಳಗೊಂಡಿರುವ ಮಹತ್ವದ ಅಂಶವನ್ನು ಮನಗಾಣಿಸಿದೆ. ಅದೂ ಸಾಲದೆಂಬಂತೆ ವಸಾಹತುಗೊಳ್ಳುವುದಕ್ಕೆ ಮುಂಚೆ ಕಳೆದ ಒಟ್ಟು ೨೫೦೦ ವರ್ಷಗಳಲ್ಲಿ ಜಗತ್ತಿನ ಗುಡ್ಡಗಾಡು ನೆಲದಲ್ಲಿನ ಸುಮಾರು ಕನಿಷ್ಠ ಒಂದು ಅಂಗುಲದಷ್ಟು ಮಣ್ಣು ಸಂಪೂರ್ಣ ಕೊಚ್ಚಿಹೋಗಿರಬಹುದು ಎನ್ನುತ್ತದೆ ಸಂಶೋಧನೆ. ಆದರೆ ಅದರಲ್ಲೂ 1800 ಮತ್ತು 1900ರ ಮಧ್ಯೆ ಅತಿಹೆಚ್ಚಿನ ಪರಿಣಾಮವನ್ನು ಎದುರಿಸಿದ್ದಲ್ಲದೆ ಕಳೆದುಕೊಳ್ಳುವ ನಷ್ಟದ ಪರಿಣಾಮ ಪ್ರತೀ 25 ವರ್ಷಕ್ಕೆ ಒಂದು ಅಂಗುಲದಷ್ಟು ಎಂದೂ ದಾಖಲಿಸುತ್ತದೆ. ಇಂತಹ ಸಂಗತಿಗಳು ಬಹು ಮುಖ್ಯ ಸಂಗತಿಯನ್ನು ಈ ವೈಜ್ಞಾನಿಕ ಅಧ್ಯಯನಗಳು ಯೂರೋಪ್ ರಾಷ್ಟ್ರಗಳ ಆಳ್ವಿಕೆಯಲ್ಲಿ ನಲುಗಿದ ದೇಶಗಳಿಗೆ ಎಚ್ಚರಿಕೆ ನೀಡುತ್ತಿವೆ. ಏನೆಂದರೆ ನಿಸರ್ಗವೇ ಮಾಡುವ ಹಾನಿಯ ಹತ್ತು ಪಟ್ಟು ಕೇವಲ ಮಾನವ ನಿರ್ಮಿತ ಅಭಿವೃದ್ಧಿಗಳು ಮಾಡಿದ್ದಾದರೆ ನಮ್ಮೆಲ್ಲಾ ಚಟುವಟಿಕೆಗಳನ್ನೂ ಸ್ಥಳೀಯ ವಿದ್ಯಮಾನಗಳಲ್ಲಿ ಜತೆಗೆ ಜಾಗತಿಕ ಗ್ರಹಿಕೆಗಳಲ್ಲಿ ಪರಿಭಾವಿಸಿ ಕಾಪಾಡುವ ಹೊಣೆಯನ್ನು ನಾವೇ ಭರಿಸಬೇಕಾಗುತ್ತದೆ ಎನ್ನುತ್ತದೆ.
ಇಷ್ಟೆಲ್ಲದರ ನಡುವೆ ನಮ್ಮ ನಗರಗಳಲ್ಲಿ ಕಟ್ಟಡಗಳ ನಿರ್ಮಾಣಕ್ಕಾಗಿ ಬರೀ ಹರಿವ ನೀರಿನ ಸೆಲೆಗಳಿಂದ ಮರಳು ಎತ್ತುವ ಮಾತಿರಲಿ, ಕೃಷಿ ನೆಲದ ಮಣ್ಣಿನಲ್ಲೂ ಸೋಸಿ ಮರಳು ಪಡೆಯುತ್ತಿರುವ ಈ ದಿನಗಳಲ್ಲಿ ಇಂತಹ ಅಧ್ಯಯನಗಳು ದೊಡ್ಡ ಎಚ್ಚರಿಕೆಯನ್ನೂ ಕೊಡುತ್ತಿವೆ. ಮರಳು ಮಣ್ಣಿನ ರಚನೆಯಲ್ಲಿ ಮುಖ್ಯಪಾತ್ರ ವಹಿಸುವುದಲ್ಲದೆ ಮಣ್ಣಿನಿಂದ ನೀರು ಇಂಗಿ ಅಂತರ್ಜಲ ಸೇರುವುದಕ್ಕೂ ಸಹಕಾರಿಯಾಗುತ್ತದೆ. ಈಗ್ಗೆ ಕೇವಲ ಕೆಲವೇ ದಶಕಗಳಿಂದಾದ ಚಟುವಟಿಕೆಗಳಲ್ಲಿ ಗೌರಿಬಿದನೂರು ತಾಲ್ಲೂಕಿನ ಸುತ್ತ ಮುತ್ತಲಿನ ಪರಿಸರವು ಈ ಬಗೆಯಲ್ಲಿ ಮರಳು ಕಳೆದುಕೊಂಡದ್ದರಿಂದಲೇ ಅಲ್ಲಿನ ಅಂತರ್ಜಲದ ಇಳಿಕೆಯನ್ನು ದಾಖಲುಮಾಡಿದೆ. ಇದನ್ನು ರಾಜ್ಯದ ಯಾವುದೇ ಊರಿನ ಪರಿಸರವು ಅರಿಯದೆ ಹೋದರೆ ಮುಂದೊಂದು ದಿನ ಈಗಿರುವುದಕ್ಕಿಂತಲೂ ದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಇಂತಹದ್ದಕ್ಕೆಲ್ಲಾ ನಮ್ಮ ತಯಾರಿ ನಿಸರ್ಗದ ಮುಂದೆ ಏನೇನೂ ಸಾಲದು. ಅದಕ್ಕೆ ನಿಸರ್ಗದ ಜತೆಗೆ ಹೊಂದಿಕೊಂಡು ಅಭಿವೃದ್ಧಿಯನ್ನು ಕೈಗೊಳ್ಳಬೇಕು ಎಂಬುದು ಸಂಶೋಧಕರ ಖಚಿತ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ನಿರಂತರವಾಗಿ ಬೆಳೆಯುತ್ತಿರುವ ನಗರಗಳಿಗೆ ಕಡಿವಾಣ ಹಾಕದೆ ಬೇರೆ ವಿಧಿಯಿಲ್ಲ. ಈಗಾಗಲೇ ಕೃಷಿ ನೆಲವನ್ನು ಸಾಕಷ್ಟು ಹೆಚ್ಚಿಸುವ ದಿನಗಳಲ್ಲಿ ಕೃಷಿ ನೆಲವನ್ನು ಮತ್ತೆ ಕಳೆದುಕೊಳ್ಳುವ ಕೆಲಸಗಳಿಂದ ಅಭಿವೃದ್ಧಿ ಸಾಧಿಸುವುದನ್ನು ವಿವೇಚಿಸಬೇಕಿದೆ. ಅನೇಕ ಆಹಾರ ಭದ್ರತೆಯ ಅಧ್ಯಯನಕಾರರು ಕೃಷಿ ಮುಂದಿನ ದಿನಗಳ ಅಭದ್ರತೆಯ ನೆಲೆಗಳನ್ನು ಗುರುತಿಸುವಲ್ಲಿ ವಸಾಹತೀಕರಣದ ವರ್ತನೆಗಳನ್ನೇ ಮುಂದುವರೆಸುವುದರ ಬಗ್ಗೆಯು ಅನುಮಾನವೆತ್ತಿದ್ದಾರೆ.
ಸಡಿಲವಾಗುತ್ತಿರುವ ನೆಲದ ಮೇಲ್ಮೈ
ಭೂಮಿಯ ಮೇಲೆ ನಡೆಸಲಾಗುವ ಮಾನವ ನಿರ್ಮಿತ ಚಟುವಟಿಕೆಗಳು -ಸಣ್ಣ-ಪುಟ್ಟವೇ ಆಗಿರಬಹುದು- ನಿರಂತರವಾಗಿ ತುಸುವಾದರೂ ಪ್ರಭಾವಿಸಬೇಕಲ್ಲವೇ? ಇಡೀ ಭೂಮಿಯ ಕೇವಲ 1% ಮಾತ್ರವೇ ಇರುವ ಮೇಲ್ಪದರದಲ್ಲಿ ಸುಮಾರು 3-5% ಆಳಕ್ಕೆ ಒಂದಲ್ಲಾ ಒಂದು ಬಗೆಯಲ್ಲಿ ಮಾನವ ಚಟುವಟಿಕೆಗಳು ಇಳಿದಿವೆ. ಆಧುನಿಕತೆಯ ದೌಡಿನಲ್ಲಿ ಇವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇದರಿಂದ ಭೂಮಿಯ ಮೇಲಿನ ಸಹಜವಾದ ಮಣ್ಣಿನ ಪದರವಂತೂ ಅತ್ಯಂತ ವೇಗದಲ್ಲಿ ವಿನಾಶದತ್ತ ಹೊರಳಿದ್ದರೆ, ಇದೀಗ ಅಕ್ಕ-ಪಕ್ಕದ ನೆಲದ ಒತ್ತುವರಿಯ ಜೊತೆಗೆ ಆಳದ ಒತ್ತುವರಿಯ ಬಗ್ಗೆ ಹೊಸ ಭಯಗಳು ಆರಂಭವಾಗಲಿವೆ.
ಜಾಗತಿಕವಾಗಿ ಗಣಿಗಾರಿಕೆ ಮತ್ತು ಕಟ್ಟಡಗಳ ನಿರ್ಮಾಣದಿಂದ ಪ್ರತೀ ವರ್ಷ ಭೂಮಿಯ ಮೇಲಿನ ಒಟ್ಟು 35ಶತ ಕೋಟಿ ಟನ್ನುಗಳ ಕಲ್ಲು-ಮಣ್ಣು ಇತ್ಯಾದಿಗಳ ಆಚೀಚೆಯ ಸಾಗಾಟದ ತೊಂದರೆಯನ್ನು ಅನುಭವಿಸುತ್ತದೆ. ಮಾನವ ನಿರ್ಮಾಣದಿಂದಾಗಿ ಭೂಮಿಯ ಮೇಲ್ಪದರದ ಮೂಲವಸ್ತುಗಳಲ್ಲಿ ಗಮನಾರ್ಹವಾದ ಏರು-ಪೇರು ಉಂಟಾಗಿರುವುದನ್ನು ವಿಖ್ಯಾತ ತಾಂತ್ರಿಕ ಸಂಸ್ಥೆಯ ವಿಜ್ಞಾನಿಗಳು ವರದಿ ಮಾಡಿದ್ದಾರೆ. ಇದರ ತೀವ್ರತೆಯು ಅದೆಷ್ಟು ಎಂದರೆ ಮಾನವ ನಿರ್ಮಾಣವು ಇಡೀ ಭೂಮಿಯನ್ನು ಪುನರ್ ರೂಪಿಸುವಂತೆ ಆಗುತ್ತಿದೆಯಂತೆ! 19-20ನೆಯ ಶತಮಾನದ ಬದಲಾವಣೆಗಳು ಭೂಮಿಯನ್ನು ಹೊಸತೊಂದು ಭೂಗೋಳಿಕ ವಯೋಮಾನಕ್ಕೆ ತಳ್ಳಿವೆ. ಭೂಮಿಯ ಮೇಲ್ಪದರದಲ್ಲಿ ತೀರಾ ಅಪರೂಪದ ಮೂಲವಸ್ತುಗಳು ಅತ್ಯಂತ ಹೆಚ್ಚಿನ ಬದಲಾವಣೆಯ ಏರು-ಪೇರನ್ನು ದಾಖಲಿಸಿವೆ. ಸರಿ ಸುಮಾರು 77 ಮೂಲವಸ್ತುಗಳು ಇಂತಹ ಸಾಮೂಹಿಕ ವರ್ಗಾವಣೆಯ ಆತಂಕಕ್ಕೆ ಒಳಗಾಗಲು ಮಾನವರ ಚಟುವಟಿಕೆಗಳಾದ ಗಣಿಗಾರಿಕೆ, ಕಟ್ಟಡಗಳ ನಿರ್ಮಾಣ, ಹೆದ್ದಾರಿ-ರಸ್ತೆಗಳ ನಿರ್ಮಾಣ, ಪೆಟ್ರೋಲಿಯಂ ಇಂಧನಗಳ ಬಳಕೆಯೇ ಮುಂತಾದವುಗಳಿಂದ ಉಂಟಾಗಿದೆ ಎಂದು ಮಸಾಚುಸೇಟ್ಸ್ನ ಉಡ್ಸ್-ಹೋಲ್ ಸಾಗರವಿಜ್ಞಾನ ಸಂಸ್ಥೆಯ ರಸಾಯನ ವಿಜ್ಞಾನಿಗಳು ವರದಿ ಮಾಡಿದ್ದಾರೆ.
ಯುಕ್ರೇನಿನಲ್ಲಿ ನಿರಂತರವಾಗಿ ನೆಲದ ಮೇಲ್ಮೈಯನ್ನು ಸಮತಟ್ಟಾಗಿಸುವ ಸಾಮೂಹಿಕ ಚಟುವಟಿಕೆಗಳಿಂದ ನೆಲದ ಗುರುತ್ವದಲ್ಲಿ ಬದಲಾವಣೆಗಳ ದಾಖಲಾತಿಯನ್ನು ಜಿಯೊ ಫಿಸಿಕಲ್ ವಿಜ್ಞಾನ ಪತ್ರಿಕೆಯು ವರದಿ ಮಾಡಿದೆ. ಇಂತಹದೇ ಗುರುತ್ವದ ಬದಲಾವಣೆಯನ್ನೂ ದಕ್ಷಿಣ ಭಾರತದ ಕಾವೇರಿ-ಪಾಲಾರ್ ನದಿ ಮುಖಜ ಭೂಮಿಯ ನೆಲದಲ್ಲೂ ಪೆಟ್ರೋಲಿಯಂ ವಿಜ್ಞಾನದ ಅಧ್ಯಯನಗಳಲ್ಲಿ ಕಂಡುಕೊಳ್ಳಲಾಗಿದೆ. ಇದು ತೀರ ಪ್ರದೇಶದಲ್ಲೂ ಮತ್ತು ತೀರದಾಚೆಗಿನ ನೆಲದಲ್ಲೂ ಕಂಡು ಬಂದ ಲಕ್ಷಣಗಳಾಗಿವೆ. ರಾಮೇಶ್ವರಂನಿಂದ ಮದ್ರಾಸ್ವರೆಗಿನ ವಿವಿಧ ನೆಲದ ಅಧ್ಯಯನಗಳಲ್ಲಿ ಕಂಡಬಂದ ಗುರುತ್ವದ ಅಳತೆಗಳು, ನೈಸರ್ಗಿಕವಾಗಿ ಇರಬೇಕಾದ ಮಾಪನಗಳಿಗಿಂತ ಭಿನ್ನವಾದ್ದನ್ನು ದಾಖಲಿಸಿವೆ. ಅಕಾಲದ ಮಳೆ, ಅಂದಾಜಿಲ್ಲದ ಮಳೆಯ ಸಾಂದ್ರತೆ, ವಿಪರೀತವಾದ ಉಷ್ಣತೆ ಮುಂತಾದವುಗಳ ಆತಂಕವಂತೂ ಇದರಿಂದಲೇ ಎಂಬುದು ಸತ್ಯ.
ನೆಲದ ಮೇಲ್ಮೈಯ ಆತಂಕ ಇರುವುದು ಇತ್ತೀಚೆಗಿನ ರಸ್ತೆಗಳ – ಹೆದ್ದಾರಿಗಳ ನಿರ್ಮಾಣದಲ್ಲಿ! ಇದನ್ನು ಆಧುನಿಕ ಅಭಿವೃದ್ಧಿ ಎಂದು ಸರ್ಕಾರಗಳು ದೊಡ್ಡದಾಗಿ ಜಾಹಿರಾತು ಕೊಡುತ್ತವೆ. ಹೆದ್ದಾರಿಗಳು ಲಕ್ಷಾಂತರ ಕಿ.ಮೀ ಹೆಚ್ಚಾಗಿವೆ ನಿಜ. ಬೇರೆಲ್ಲೂ ಬೇಡ ನಮ್ಮ ರಾಜಧಾನಿ ಬೆಂಗಳೂರಿನ ಅನೇಕ ಪ್ರಮುಖ ಬಡಾವಣೆಗಳ ಸಂಪರ್ಕಿಸುವ ರಸ್ತೆಗಳು ಹೇಗಿವೆ? ಇನ್ನು ಉಳಿದ ನಗರ-ಪಟ್ಟಣಗಳ ಮಾತು ಇಲ್ಲಿ ಪ್ರಸ್ತಾಪಿಸುವುದೇ ಬೇಡ. ಭಾರತವು ಜಗತ್ತಿನಲ್ಲೇ ಅತ್ಯಂತ ಹೆಚ್ಚು ರಸ್ತೆಗಳ ಸಾಂದ್ರತೆಯನ್ನು ಹೊಂದಿದ ದೇಶ! ಪ್ರತೀ ಚದರ ಕಿಮೀ ಗೆ 1.66 ಕಿ.ಮೀ ಉದ್ದದ ರಸ್ತೆಗಳನ್ನು ನಮ್ಮ ದೇಶ ಹೊಂದಿದೆ. ಅಭಿವೃದ್ಧಿಗಳೆಲ್ಲಾ ಸಾಮಾನು-ಸರಂಜಾಮು ಸಾಗಿಸುವ ಹೆದ್ದಾರಿಗಳಲ್ಲಿ ಮಾತ್ರವೇ ಆಗಿದ್ದು, ಅವೆಲ್ಲವೂ ವಹಿವಾಟು ಸಂಸ್ಥೆಗಳಿಗೆ ಪ್ರಯೋಜನಕಾರಿ. ಜನವಸತಿಗಳ ನಿರಂತರ ಬಳಕೆಯ ರಸ್ತೆಗಳಲ್ಲಿ ಗಮನಾರ್ಹ ಬದಲಾವಣೆಗಳು ಆಗುತ್ತಿಲ್ಲ. ಸುಮಾರು 14 ಸಾವಿರ ಕಿ.ಮೀ ಉದ್ದದ ರಸ್ತೆಗಳು ಕಳೆದ ದಶಕದಲ್ಲಿ ಹೆದ್ದಾರಿಗಳಲ್ಲಿ ಮಾತ್ರವೇ ನಡೆದಿದ್ದು ಇದಕ್ಕೆಂದೆ ವಶಪಡಿಸಿಕೊಂಡ ಕೃಷಿ ಭೂಮಿಯು ಲಕ್ಷಾಂತರ ಎಕರೆಗಳು! ಇಷ್ಟೂ ನೆಲದ ಹಸಿರು ಚಾವಣಿಯು ಇನ್ನಿಲ್ಲವಾಗಿದೆ. ಪ್ರತೀ ರಸ್ತೆಗಳ ನಿರ್ಮಾಣದಲ್ಲೂ ಕನಿಷ್ಟ 2ರಿಂದ 10 ಮೀಟರ್ಗಳಷ್ಟು ಆಳದ ಮೇಲ್ಮೈ ತೊಂದರೆಗೆ ಒಳಗಾಗಿದೆ. ಒಂದು ಲೆಕ್ಕದಲ್ಲಿ ಜಗತ್ತಿನಲ್ಲಿ ರಸ್ತೆಗಳ ನಿರ್ಮಾಣದಲ್ಲಿ ನಮ್ಮ ದೇಶದ ಮೇಲ್ಪದರದ ನೆಲ ಅಲುಗಾಡಿದ್ದೇ ಹೆಚ್ಚು. ಇದರ ಜೊತೆಗೆ ಅನೇಕ ನಗರಗಳಲ್ಲಿ ಮತ್ತು ನಗರಗಳನ್ನು ಹೊರ ರಸ್ತೆಗಳಲ್ಲಿ ದಾಟಿಸುವ ಬೈ ಪಾಸ್ ಗಳಿಗೆ ಕಂಬಗಳ ಕಟ್ಟಲು ಅಗೆಯುವ ಆಳದ ಸಡಿಲತೆಯು ಸೇರಿಕೊಳ್ಳುತ್ತದೆ. ಇದಕ್ಕೆ ಪರಿಹಾರದ ಮಾರ್ಗಗಳೇ ಇಲ್ಲ. ಎನ್ನುವಷ್ಟು ಒಗ್ಗಿಹೋಗಿದ್ದೇವೆ.
ಇಂತಹಾ ಸಾಮೂಹಿಕ ಭೂ ಮೇಲ್ಮೈಯ ಚಲನೆಗಳ ಕಾರಣದಿಂದ ಉಂಟಾಗುತ್ತಿರುವ ಮೂಲವಸ್ತುಗಳ ರಸಾಯನಿಕತೆಯ ಅಧ್ಯಯನಗಳಲ್ಲಿ ಗಮನಾರ್ಹವಾದ ಹೆಗ್ಗುರುತುಗಳನ್ನು ಕಾಣುತ್ತಿದ್ದೇವೆ. ಜೀವಿಗಳಲ್ಲಿ ಬೇಕಾದ ಮೂಲವಸ್ತುಗಳಲ್ಲಿ ಒಂದಾದ ಮ್ಯಾಂಗನೀಸ್ ಏರು-ಪೇರನ್ನು ಸಂಶೋಧನಾ ಅಧ್ಯಯನಗಳನ್ನು ಅಮೂಲಾಗ್ರವಾಗಿ ಪರಾಮರ್ಶಿಸಿರುವ ವರದಿಯೊಂದು ಜಾಗತಿಕವಾಗಿ ಹೆಚ್ಚಾಗುತ್ತಿರುವ ಕಾಯಿಲೆಯಾಗಿ ಪಾರ್ಕಿನ್ಸನ್ ಎಂದು ಗುರುತಿಸಿದೆ. ಇದು ಒಂದು ಉದಾಹರಣೆಯಷ್ಟೇ!
ಅಲ್ಲಲ್ಲಿ ಕೆಲವು ಸಣ್ಣ-ಪುಟ್ಟ ಅಧ್ಯಯನಗಳನ್ನು ಹೊರತು ಪಡಿಸಿದರೆ, ಅದನ್ನೇ ಗುರಿಯಾಗಿಸಿದ ಅಧ್ಯಯನಗಳು ನಡೆಯುತ್ತಿಲ್ಲ. ಆರಂಭದಲ್ಲಿ 1931ರ ಸೆಪ್ಟೆಂಬರ್ 28ರಂದು ಸರಿ ಸುಮಾರು 93 ವರ್ಷಗಳ ಹಿಂದೆ ಲಂಡನ್ನಿನ ರಾಯಲ್ ವಿಜ್ಞಾನ ಸಂಸ್ಥೆಯು ಭೂಗೋಳದ ಸ್ವತಂತ್ರ ಅಧ್ಯಯನಕ್ಕೆ ಕಾರಣರಾದ ಸರ್ ಹಾಲ್ಫೊರ್ಡ್ ಮೆಕಿಂಡರ್ (Sir Halford Meckinder) ಅವರ ಅಧ್ಯಕ್ಷತೆಯಲ್ಲಿ ಭೂಮಿಯ ಹೊರ ಪದರದ ಸಮಸ್ಯೆಗಳ ಬಗ್ಗೆ ಮೊಟ್ಟ ಮೊದಲ ಚರ್ಚೆಯನ್ನು ಹುಟ್ಟು ಹಾಕಿತ್ತು. ಆಗಿನ್ನೂ ಆರಂಭಿಕ ವೈಜ್ಞಾನಿಕ ದಿನಗಳಾದ್ದರಿಂದ ಹೆಚ್ಚಿನ ಚರ್ಚೆಯು ಕೇವಲ ಅಧ್ಯಯನ ಸಮಸ್ಯೆಗಳ ಬಗೆಗೆ ಬೆಳಕು ಚೆಲ್ಲಿದ್ದವು.
ಭಾರತದಲ್ಲಿ ಈವರೆವಿಗೂ ಭೂಗೋಳ ವಿಜ್ಞಾನ ಮತ್ತು ಭೂ ವಿಜ್ಞಾನ (Geography and Geology) ಎರಡರಲ್ಲೂ ಕೇವಲ ಹುಡುಕಾಟದ- ಪತ್ತೆ ಹಚ್ಚುವ (Prospecting) ವೈಜ್ಞಾನಿಕ ಅಧ್ಯಯನಗಳು ಅಲ್ಲದೆ ಗಣಿಗಾರಿಕೆಯ ಮಾಲಿನ್ಯತೆಯನ್ನು ವೈಜ್ಞಾನಿಕ ವರದಿಗಳಿಂದ ಕೇವಲ ಸಮಾಧಾನ ಪಡಿಸುವ ವಿಷಯಗಳೇ ಹೆಚ್ಚು. ಆದ್ದರಿಂದ ಹೊರ ಪದರವು ಸಡಿಲವಾಗಿ ಅದರಿಂದಾಗಬಹುದಾದ ಅಪಾಯಗಳ ಅಧ್ಯಯನಗಳು ನಡೆಯುತ್ತಿಲ್ಲ. ಇವೆಲ್ಲವನ್ನೂ ಸಾರಾಸಗಟಾಗಿ ಒಂದಾಗಿಸಿ ಅಧ್ಯಯನಿಸುವ ಹವಾಮಾನ ಬದಲಾವಣೆಯ -ಕೈಮೇಟ್ ಚೇಂಜ್ – ಅಧ್ಯಯನಗಳ ಹೆಸರಲ್ಲಿ ಕೈತೊಳೆದುಕೊಳ್ಳುವ ಹುನ್ನಾರವಷ್ಟೇ! ನಮ್ಮದೇನಿಲ್ಲ ಏನಿದ್ದರೂ ಎಲ್ಲವೂ ನಿಸರ್ಗದ ಕೈವಾಡ ಎಂಬಂತೆ ತಿಪ್ಪೆ ಸಾರಿಸುವ ಜಾಣತನ.
ಮಣ್ಣಿನ ಜೈವಿಕ ಸೂಕ್ಷ್ಮತೆಯು ಅರಿತಷ್ಟೂ ನಿಗೂಢ
ಮಣ್ಣು ಜೈವಿಕ ಹಿನ್ನೆಲೆಯಲ್ಲಿ ನಮ್ಮ ತಾಯಿಯ ಗರ್ಭದಷ್ಟೇ ವಿಶೇಷವನ್ನು ತನ್ನೊಡಲಲ್ಲೂ ಇಟ್ಟುಕೊಂಡಿದೆ. ಅದರ ಜೈವಿಕತೆಯು ೨೦೦೬ರವರೆಗೂ ಅರಿತಿದ್ದಕ್ಕಿಂತಾ ಎರಡು ಪಟ್ಟು ಹೆಚ್ಚು ಜೀವ ಪ್ರಭೇದವನ್ನು ಹೊಂದಿದೆ ಎಂಬುದು ಇತ್ತೀಚೆಗಷ್ಟೇ ತಿಳಿದ ಸಂಗತಿ! ಜೀವಿ ಜಗತ್ತಿನ ಒಟ್ಟೂ ಪ್ರಭೇದಗಳ ಪ್ರತಿಶತ 25ರಷ್ಟು ಮಣ್ಣಿನ ಒಳಗಿವೆ ಎಂಬ 2006ರ ತಿಳಿವಳಿಕೆಯು ಇದೀಗ ಹಾಗಲ್ಲ ಅದು ಅದರ ಎರಡರಷ್ಟಕ್ಕಿಂತಲೂ ಹೆಚ್ಚು, ಎಂಬುದಾಗಿ 2022ರ ಆಗಸ್ಟ್ ತಿಂಗಳಲ್ಲಿ ಖ್ಯಾತ ವಿಜ್ಞಾನ ಪತ್ರಿಕೆ PNAS (Proceedings of the National Academy of Sciences) ಜರ್ನಲ್ ಪ್ರಕಟಿಸಿದೆ. ಮಣ್ಣಿನೊಳಗಿರುವ ಜೀವಿಪ್ರಭೇದಗಳು, ನೆಲದ ಮೇಲಿರುವುದಕ್ಕಿಂತಲೂ ಹೆಚ್ಚು ಎಂದೂ ಹೇಳಿದೆ. ಸರಿ ಸುಮಾರು ಪ್ರತಿಶತ 59ರಷ್ಟು ಜೀವಿ ಪ್ರಭೇದಗಳು ಮಣ್ಣಿನಲ್ಲಿರುವ ಅಚ್ಚರಿಯ ಸಂಗತಿಯನ್ನು ಅದು ಪ್ರಕಟಿಸಿದೆ. ಮಣ್ಣಿಗಿರುವ ಜೈವಿಕ ಪರಂಪರೆಯ ನಿಗೂಢತೆ ಹಿಂದಿಗಿಂತಲೂ ಹೆಚ್ಚಾಗುತ್ತಲೇ ಸಾಗಿದೆ. ಆದ್ದರಿಂದಲೇ ಇರಬೇಕು ಇಷ್ಟೆಲ್ಲಾ ಮಾನವ ನಿರ್ಮಿತ ಅದ್ವಾನಗಳನ್ನೂ ಸಹಿಸಿಕೊಂಡು ಮಣ್ಣು ಮಾನವತೆಯನ್ನು ಸಾಕುತ್ತಲೇ ವಿಕಾಸದ ಅಚ್ಚರಿ ಎಂಬಂತೆ ಬೆಳೆಯುತ್ತಿದೆ.
ಮಣ್ಣಿನೊಳಗಿರುವ ಜೀವಿ ಪ್ರಭೇದಗಳಲ್ಲಿ 90% ಶಿಲೀಂದ್ರಗಳು, 85% ಸಸ್ಯಗಳು ಮತ್ತು ಪ್ರತಿಶತ 50ಕ್ಕಿಂತಾ ಹೆಚ್ಚು ಬ್ಯಾಕ್ಟಿರಿಯಾಗಳು. ಕೇವಲ 3% ಸಸ್ತನಿಗಳು ಮಾತ್ರವೇ ಮಣ್ಣನ್ನು ಮನೆಯನ್ನಾಗಿಸಿಕೊಂಡಿವೆ. ಸೂಕ್ಷ್ಮಾಣುಜೀವಿಗಳಿಂದ ಸಸ್ತನಿಗಳವರೆಗೂ ಒಟ್ಟು ಭೂಮಂಡಲದ 59% ಜೀವಿಪ್ರಭೇದಗಳ ಮನೆ ಮಣ್ಣು. ವಿವಿಧ ಅಧ್ಯಯನಗಳನ್ನು ಆಧರಿಸಿದ ಈ ಅಂದಾಜು ವಾಸ್ತವಕ್ಕಿಂತಾ ಸಾಕಷ್ಟು ಕಡಿಮೆಯೇ ಎಂದೂ ವಿಜ್ಞಾನಿಗಳ ಅಭಿಪ್ರಾಯ. ನಮ್ಮೆಲ್ಲಾ ಕುತೂಹಲದ ಜಗತ್ತು ಆಗಸದಾಚೆಗಿನದು! ವ್ಯೋಮದ ಹಿಂದಿನ ಅಗಾಧತೆಗೆ ಒತ್ತು ಕೊಟ್ಟದ್ದು. ಇಂದು ಚಂದ್ರಯಾನವೋ. ನಕ್ಷತ್ರಲೋಕದ ಹಿನ್ನೆಲೆಯ ಅಂದಾಜಿಗೋ ಮಹತ್ವವಿದ್ದಷ್ಟು ನಮ್ಮದೇ ಕಾಲ ಕೆಳಗಿನ ವಿಕಾಸದ ವಿಶಿಷ್ಟ ವಸ್ತುವಿನ ಬಗೆಗೆ ಖಂಡಿತಾ ಇಲ್ಲ.
ಮಾನವನ ಅರಿವಿನ ಚರಿತ್ರೆಯಲ್ಲಿ ಜೀವಿಗಳೇ ವಿಕಾಸದ ಆತ್ಯಂತಿಕ ಹೊಸ ಉತ್ಪನ್ನಗಳು! ಇದರ ತಾಯಿಯೂ ಹಾಗೂ ಕೂಸೂ ಎರಡೂ ಮಣ್ಣು! ಇದು ಎಲ್ಲ ಜೀವಿಗಳ ಹೊಟ್ಟೆ! ಈ ನೆಲದ ಪ್ರತಿಶತ 95ರಷ್ಟು ಆಹಾರದ ಚೀಲ. ಇದು ನೆಲದ ಮೇಲಿನ ಹೊದಿಕೆ ಎನ್ನುವುದಕ್ಕಿಂತಾ ಇದೇ ಭೂಮಿಯ ಕಿರೀಟ. ಒಂದು ಟೀ ಚಮಚೆಯಷ್ಟು ಮಣ್ಣಿನಲ್ಲಿರುವ ಬ್ಯಾಕ್ಟಿರಿಯಾಗಳ ಸಂಖ್ಯೆ 100ಕೋಟಿ!
ಜಗತ್ತು ಹಿಂದೆಂದೂ ಅನುಭವಿಸಿರದ ವಾತಾವರಣವನ್ನು ಇಂದು ಕಾಣುತ್ತಿದೆ. ಹಿಂದಿನ ಎಲ್ಲಾ ಲೆಕ್ಕಾಚಾರಗಳೂ ಆಯತಪ್ಪಿರುವಂತೆ ಅರಿವಿಗೆ ಬರುತ್ತಿವೆ. ಇಡೀ ಜಗತ್ತು ಎದುರಿಸುತ್ತಿರುವ ವಾತಾವರಣದ ಉಷ್ಣತೆಯ ಹೆಚ್ಚಳವನ್ನು ಸಂಪೂರ್ಣವಾಗಿ ನಿರ್ವಹಿಸುವ ಇಂಗಾಲ ಮತ್ತು ಅದರ ರೂಪಾಂತರಕ್ಕೆ ಪ್ರಮುಖ ಮಾಧ್ಯಮ ಮಣ್ಣು. ಮಣ್ಣು ಅರಿತಷ್ಟೂ ನಿಗೂಢವಾಗುತ್ತಲೇ ಸಾಗುತ್ತಿದೆ.
ಮಣ್ಣು ಭೂಮಿಯ ಮೇಲಿನ ಎಲ್ಲಾ ಜೀವಿಗಳನ್ನು ಒಟ್ಟು ಹಾಕಿ ಸಾಕುವ ಭೂಮಿಯ ಅತ್ಯಂತ ದುರ್ಬಲವಾದ ಚರ್ಮದ ಹಾಗೆ! ಇದು ಅತ್ಯಂತ ಕ್ರಿಯಾತ್ಮಕವಾದ ಮತ್ತು ಸಂಕೀರ್ಣವಾದ ಪರಿಸರ ವ್ಯವಸ್ಥೆಯನ್ನು ರಚಿಸುವ ಲೆಕ್ಕವಿಲ್ಲದಷ್ಟು ಜಾತಿಗಳನ್ನು ಒಳಗೊಂಡಿದ್ದು ಇಡೀ ಮಾನವ ಜನಾಂಗಕ್ಕೆ ಅತ್ಯಂತ ಅಮೂಲ್ಯವಾದ ಸಂಪನ್ಮೂಲಗಳಲ್ಲಿ ಒಂದಾಗಿದೆ. ತೀರಾ ಹೆಚ್ಚಿನ ಶಕ್ತಿ ಹಾಗು ವಿಕಾಸ ಜಾಣತನವನ್ನು ಬಳಸಿ ಪ್ರಕೃತಿಯು ನಿರ್ಮಿಸಿರಿವ ಮಣ್ಣು ನಿರಂತರವಾಗಿ ನಷ್ಟವಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಈ ನೆಲದ ಮೇಲ್ಮೈಯ ಬಗೆಗೆ ನಮಗಿರುವ ತಾತ್ಸಾರ!
ಮಣ್ಣಿನ ಸವಕಳಿ ದಿನೇ ದಿನೇ ಹೆಚ್ಚುತ್ತಲೇ ಇದ್ದು ಒಂದು ಅಂದಾಜಿನಂತೆ ಒಟ್ಟಾರೆ ಮಣ್ಣಿನ ಅರ್ಧದಷ್ಟು ಕಳೆದ 150-200 ವರ್ಷಗಳಲ್ಲಿ ಕಳೆದುಹೋಗಿದೆ. ಸವೆತದ ಜೊತೆಗೆ, ಮಣ್ಣಿನ ಗುಣಮಟ್ಟವು ಕೃಷಿ ಬಳಕೆಯ ಇತರ ಅಂಶಗಳಿಂದ ಪ್ರಭಾವಿಸಿ ನಷ್ಟವನ್ನು ಹೊಂದುತ್ತಲೇ ಇದೆ. ಈ ಪರಿಣಾಮಗಳು ಮಣ್ಣಿನ ರಚನೆಯ ನಷ್ಟ, ಪೋಷಕಾಂಶಗಳ ಅವನತಿ ಮತ್ತು ಮಣ್ಣಿನ ಲವಣಾಂಶವನ್ನು ಒಳಗೊಂಡಿರುತ್ತದೆ. ಇವುಗಳೆಲ್ಲವೂ ತುಂಬಾ ನೈಜವಾದ ಹಾಗೂ ಕೆಲವೊಮ್ಮೆ ಗಂಭೀರ ಸಮಸ್ಯೆಗಳಾಗಿವೆ. ಮಣ್ಣಿನ ಸವೆತದ ಪರಿಣಾಮಗಳು ಫಲವತ್ತಾದ ಭೂಮಿಯ ನಷ್ಟವನ್ನು ಅನುಭವಿಸುತ್ತಿದೆ. ಇದೆಲ್ಲವೂ ನದಿಗಳಲ್ಲಿ ಮಾಲಿನ್ಯ ಮತ್ತು ಸೆಡಿಮೆಂಟೇಶನ್ ಅನ್ನು ಹೆಚ್ಚಿಸಿದೆ, ಮೀನು ಮತ್ತು ಇತರ ಜಲಚರ ಜೀವಗಳ ಹಿತಕ್ಕೆ ದಕ್ಕೆಯನ್ನು ಉಂಟುಮಾಡುವಲ್ಲಿ ಕಾರಣವಾಗಿದೆ. ಮಣ್ಣಿನ ಅವನತಿ ಮತ್ತು ಸವೆತವನ್ನು ತಡೆಯದಿದ್ದರೆ ಬೆಲೆಬಾಳುವ ಭೂಮಿಯನ್ನು ಕಳೆದುಕೊಳ್ಳುತ್ತಾ ಸಾಗುತ್ತೇವೆ.
ಮಣ್ಣನ್ನು ಅರಿತುಕೊಂಡಷ್ಟೂ ಅದು ಹೊಸ ಹೊಸ ಸಂಗತಿಗಳನ್ನು ನಮ್ಮ ಜಾಗೃತಿಗೆ ತರುತ್ತಲೇ ಇದೆ! ಆದಾಗ್ಯೂ ನಮ್ಮೆಲ್ಲಾ ಚಟುವಟಿಕೆಗಳೂ ನಿರಂತರವಾಗಿ ನೆಲವನ್ನು ಶೋಷಿಸುತ್ತಲೇ ಸಾಗುತ್ತಿವೆ. ನಾವೆಲ್ಲರೂ ಮಣ್ಣಿನಿಂದಲೇ ರೂಪುಗೊಂಡವರು ಎಂಬುದನ್ನು ಎಚ್ಚರಿಸುವಂತೆ ಬೈಬಲ್ಲಿನ ಜೆನೆಸಿಸ್ನಲ್ಲಿಯೂ “ದೇವರು ಮಾನವರನ್ನು ಮಣ್ಣಿನಿಂದಲೇ ಮಾಡಿ ಮೂಗಿನ ಹೊಳ್ಳೆಗಳಲ್ಲಿ ಜೀವದ ಉಸಿರನ್ನು ಊದಿದ್ದಾನೆ ಹಾಗಾಗಿ ಮಾನವರು ಜೀವಂತ ಆತ್ಮವಾಗಿದ್ದಾರೆ” (Formed man of the dust of the ground, and breathed into his nostrils the breath of life; and man became a living soul -Genesis 2:7) ಎಂಬ ಉಲ್ಲೇಖವಿದೆ. ಅಭಿವೃದ್ಧಿಯ ಆಯಾಮಗಳು ಮಣ್ಣನ್ನೂ ರಕ್ಷಿಸುವ ಹೊಣೆಗಳನ್ನೂ ಭಾಗವಾಗಿಸದಿದ್ದರೆ ಅವೆಲ್ಲವೂ ಅವನತಿಯ ಹಾದಿಯಾಗುವುದು ಅತಿವೃಷ್ಟಿ, ಬಿರಿದ ನೆಲ, ಅನಾವೃಷ್ಟಿ, ಬಾಯಾರಿದ ನೆಲದಂತಹಾ ವಾಸ್ತವಗಳಿಂದ ಸಾಮಾನ್ಯ ಅರಿವು ಮತ್ತು ಗ್ರಹಿಕೆಯಾಗಬೇಕಿರುವುದನ್ನು ಎಚ್ಚರಿಸುವ ಮಾತದು.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್
ಮಾನವ ಕುಲದ ಕಣ್ಣು ತೆರೆಸುವ ಹಾಗೂ ಮನುಷ್ಯನ ಸ್ವಾರ್ಥಕ್ಕೆ ಹಿಡಿದ ಕೈಗನ್ನಡಿಯಂತಿದೆ ಲೇಖನ. ಮಣ್ಣಿನಿಂದಲೇ ಜೀವನ ಮರಳಿ ಮಣ್ಣನ್ನೇ ಸೇರಬೇಕು… ಅರ್ಥಪೂರ್ಣವಾದರೂ ಯಾವಾಗ ಮನುಷ್ಯ ಮಣ್ಣಿನ ಸಂರಕ್ಷಣೆ ಬಗ್ಗೆ ಎಚ್ಚೆತ್ತುಕೊಳ್ಳುವನೆಂಬ ಸಂದೇಹ ಹಾಗೂ ಎಚ್ಚೆತ್ತುಕೊಳ್ಳಲೇ ಬೇಕಾದ ಅನಿವಾರ್ಯತೆಯ ಸಂದೇಶವನ್ನೂ ಒಳಗೊಂಡ ಲೇಖನ. ಧನ್ಯವಾದಗಳು 🙏
ಮಣ್ಣಿನ ಪ್ರಾಮುಖ್ಯತೆಯನ್ನು ಮನಮುಟ್ಟುವಂತೆ ವಿವರಿಸಿದ್ದೀರಿ. ವಿಜ್ಞಾನ ಮತ್ತು ಪಾರಂಪರಿಕ ಸಂಸ್ಕೃತಿಗಳು ಇವನ್ನೇ ಸಾರುತ್ತಿವೆ. ನಾವುಗಳು ಎಂದು ಇವನ್ನೆಲ್ಲ ಕಾರ್ಯಗತಗೊಳಿಸುತ್ತೇವೋ….
ಭಾರತವು ಜಗತ್ತಿನಲ್ಲೇ ಅತ್ಯಂತ ಹೆಚ್ಚು ರಸ್ತೆಗಳ ಸಾಂದ್ರತೆಯನ್ನು ಹೊಂದಿದ ದೇಶ!…ಇದು ನಿಜವೇ?