You are currently viewing ಭೂಗೋಳದ ಉತ್ತರಾರ್ಧದಲ್ಲೆಲ್ಲಾ ಹರಡಿ ಅಧಿಪತ್ಯ ಸ್ಥಾಪಿಸಿಕೊಂಡ ಸಾಸಿವೆ : Brassica Spp

ಭೂಗೋಳದ ಉತ್ತರಾರ್ಧದಲ್ಲೆಲ್ಲಾ ಹರಡಿ ಅಧಿಪತ್ಯ ಸ್ಥಾಪಿಸಿಕೊಂಡ ಸಾಸಿವೆ : Brassica Spp

ನನ್ನ ಗೆಳತಿಯೊಬ್ಬಳು ಮದುವೆಯಾದ ಹೊಸತರಲ್ಲಿ ತನ್ನ ಸಂಸಾರವನ್ನು ಆರಂಭಿಸಲೆಂದು ಆಕೆಯ ತಾಯಿಯು ಪ್ರೀತಿಯಿಂದ ಮನೆಯನ್ನು ಅಣಿಗೊಳಿಸುವಾಗ ಸಾಸಿವೆಯಿಂದ ಜೋಡಿಸಿ, ಎಲ್ಲವನ್ನೂ ಇರುವಂತೆ ಹೊಂದಿಸಿಕೊಟ್ಟ ಬಗ್ಗೆ ಹೇಳಿದ್ದಳು. ಮನೆಯ ಅಣಿಗೊಳಿಸಲು ಒಟ್ಟೂ ಸಾಮಗ್ರಿಗಳ ಗಾತ್ರಕ್ಕೆ ಹೋಲಿಸಿದರೆ “ಸಾಸಿವೆ”ಯದು ತೀರಾ ಚಿಕ್ಕದು. ಆ ಸಾಸಿವೆಯ ಕಾಳನ್ನೂ…ಎನ್ನುವಾಗ ಮಾತ್ರ ಆಕೆಯ ಕಣ್ಣುಗಳು ಹನಿಗೂಡಿದ ಚಿತ್ರ ಮಾತ್ರ ನನ್ನ ಅಕ್ಷಿಪಟಲದಲ್ಲಿ ಶಾಶ್ವತವಾಗಿ ಉಳಿದಿದೆ. ಗಾತ್ರದಲ್ಲಿ ಒಂದು ಮಿ.ಮೀ, ಹೆಚ್ಚೆಂದರೆ ಎರಡು ಮಿ.ಮೀ ಗಾತ್ರದ ಕಾಳಿನ ಸಾಂಸ್ಕೃತಿಕ ಜಗತ್ತು ಮಾತ್ರ ಅಗಾಧವಾದುದು. ಕ್ರಿ.ಪೂ 3000 ವರ್ಷಗಳಷ್ಟು ಹಿಂದಿನಿಂದಲೂ ಸಂಸ್ಕೃತ ಹಾಗೂ ಸುಮೇರಿಯನ್ ಪಠ್ಯಗಳಿಂದ ಆರಂಭವಾಗಿ ತೀರಾ ಇತ್ತೀಚೆಗೆ 20ನೆಯ ಶತಮಾನದ ಐದಾರು ಸಾವಿರ ಸಾಸಿವೆಯ ಉತ್ಪನ್ನಗಳಿರುವ ಮ್ಯೂಸಿಯಮ್ಮಿನವರೆಗೂ ಬೆಳೆದಿದೆ. ಗೆಳತಿಯ ಮಾತಿನ ಸಾಸಿವೆಯನ್ನೂ..ಎನ್ನುವುದರಲ್ಲಿಯೂ ಹಾಗೂ ನಮ್ಮೆಲ್ಲಾ ದಕ್ಷಿಣ ಭಾರತದವರಿಗೆ ಸಾಸಿವೆಯು ದಿನದಲ್ಲಿ ಒಗ್ಗರಣೆಯ ನಾಲ್ಕಾರು ಕಾಳುಗಳ ಬಳಕೆಯಲ್ಲೂ ಗಣನೆಗೆ ಬಾರದಷ್ಟು ಎಂಬರ್ಥದಲ್ಲಿಯೂ ರೂಪಕವಾಗಿವೆ. ಆದರೆ ದಕ್ಷಿಣದಿಂದ ಉತ್ತರಕ್ಕೆ ಹೋದಂತೆ ಭಾರತದ ನೆಲವೂ ಹರಡಿ ಅಗಲವಾದಂತೆ ಸಾಸಿವೆಯ ಹರಹೂ ವಿಶಾಲವಾಗುತ್ತದೆ. ಉತ್ತರದವರ ಸಾಸಿವೆಯ ಎಣ್ಣೆಯ ಹರಹು ಹಿಮಾಲಯದಂತೆ. ಹಿಮಾಲಯದ ತಪ್ಪಲೇ ಭಾರತದ ಸಾಸಿವೆಯ ತವರೂರು ಕೂಡ. ನೇಪಾಳದ ಬಹು ಮುಖ್ಯ ಬೆಳೆ. ಹಾಗೇನೆ ಅದರ ಜೊತೆಗೆ ಇಡೀ ಭೂಮಂಡಲದ ಉತ್ತರಾರ್ಧದ ನೆಲವೆಲ್ಲಾ ಸಾಸಿವೆಯ ಘಮವನ್ನು ಆವರಿಸಿದೆ.

ಸಾಸಿವೆಯ ಹುಟ್ಟು ನಿಜಕ್ಕೂ ಇತಿಹಾಸದಲ್ಲಿ ಕಳೆದೇ ಹೋಗಿದೆ. ವಿವಿಧ ಬಗೆಗಳನ್ನೂ ಹಾಗೂ ನೆಲೆಗಳನ್ನೂ ಹೊಂದಿರುವ ಸಾಸಿವೆಯು ವಿವಿಧ ಪ್ರಭೇದಗಳ ಹುಟ್ಟುಗಳಲ್ಲಿ ಹಾಗಾಗಿದೆ. ಉತ್ತರದ ಭೂಗೋಳವನ್ನೆಲ್ಲಾ ಆವರಿಸಿದ ಈ ಪುಟ್ಟ ಕಾಳುಗಳು ಶಿಲಾಯುಗದ ಪೂರ್ವದ ವಸತಿಗಳಲ್ಲಿ ನೆಲೆಯನ್ನು ಹೊಂದಿದ್ದವು. ಅತ್ಯಂತ ಹಳೆಯ ದಾಖಲೆಗಳು ಸುಮೆರಿಯನ್ನರ ಹಾಗೂ ಸಂಸ್ಕೃತದ ಪಠ್ಯಗಳಲ್ಲಿವೆ. ಈಜಿಪ್ಷಿಯನ್ನರ ಆಹಾರ ಪದ್ದತಿಗಳು ಸಾಸಿವೆಯ ಸವಿಯನ್ನು ಹೊಂದಿದ್ದವು. ಸುಮೆರಿಯನ್ನರು ಸಾಸಿವೆಯನ್ನು ಪುಡಿಮಾಡಿ, ಚಟ್ನಿಯಾಗಿಸಿಯೂ ಚಪ್ಪರಿಸಿರಬೇಕು. ರೋಮನ್ನರಂತೂ ವೈನ್‌ ಜೊತೆಗೆ ಸಾಸಿವೆಯ ಪುಡಿಯನ್ನು ಬೆರೆಸಿ ಹದವಾದ ಪರಿಮಳವನ್ನು ಆಸ್ವಾದಿಸುತ್ತಿದ್ದರು. ಸಾವಿರಾರು ವರ್ಷಗಳ ಕೃಷಿಯ ಇತಿಹಾಸವನ್ನು ಹೊಂದಿರುವ ಸಾಸಿವೆಯು, ಏಶಿಯಾದ ಯಾವುದೇ ಇತರ ಸಾಂಬಾರು ಪದಾರ್ಥಗಳ ರುಚಿ ಹಾಗೂ ಪರಿಮಳವು ತಲುಪುವುದಕ್ಕೂ ಮೊದಲೇ ಯೂರೋಪಿನ ಊಟದ ತಾಟುಗಳಲ್ಲಿ ಘಮಘಮಿಸುತ್ತಿತ್ತು. ಕಾಳು ಮೆಣಸಿನ ಘಾಟು ಇನ್ನೂ ತಿಳಿಯದ ಕಾಲಕ್ಕಾಗಲೇ ಪಶ್ಚಿಮದ ನೆಲದಲ್ಲಿ ಸಾಸಿವೆಯ ಸುವಾಸನೆಯು ಹಬೆಯಾಡುತ್ತಿತ್ತು. ಆದರೂ ಪೂರ್ವಿಕರು ಭಾರತದಿಂದ ಈಜಿಪ್ಟಿಗೂ ಅಲ್ಲಿಂದ ರೋಮ್‌ಗೂ ಕೊಂಡೊಯ್ದುದರ ಪರಿಣಾಮವಾಗಿ ಸಾಸಿವೆಯ ಕಾಳುಗಳನ್ನು ವಿವಿಧ ಭಕ್ಷ್ಯಗಳ ಜೊತೆಗೆ ಮೆಲ್ಲುತ್ತಿದ್ದ ಸಂಗತಿಗಳು ಹಳೆಯವು. ಒಂದು ಬೆಳೆಯಾಗಿ ಪ್ರಮುಖವಾಗಿಸಿದ ಕೀರ್ತಿಯಂತೂ ಭಾರತ ಉಪಖಂಡದ ಕೃಷಿಕರದು. ಇಂಗ್ಲೀಷಿನ ಮಸ್ಟರ್ಡ್‌ ಪದದ ಅರ್ಥವು “ರುಚಿಯನ್ನು ಕೊಡುವ (ಕಾಂಡಿಮಂಟ್-Condiment)‌-” ಎಂಬುದಾಗಿದೆ. ಅದು ಲ್ಯಾಟಿನ್‌ನ ಮಸ್ಟಮ್‌ (Mustum) ಎನ್ನುವ ಪದದಿಂದ ಹುಟ್ಟಿದ ಇನ್ನೂ ಹದುಗಾಗದ ದ್ರಾಕ್ಷಿಯ ವೈನ್‌- ಗ್ರೇಪ್‌ ಮಸ್ಟ್‌ (Grape Must) ವನ್ನು ಕರೆಯುವ ಫ್ರೆಂಚ್‌ ಮೂಲದ ಹೆಸರಿನಿಂದ ವಿಕಾಸವಾಗಿದೆ.

ಸಾಸಿವೆಯನ್ನು ಮಾತ್ರವೇ ಹೊಲವೆಲ್ಲಾ ಆಕ್ರಮಿಸಿ ಬೆಳೆದಿರುವ ದೃಶ್ಯವು ಉತ್ತರ ಭಾರತದ್ದು. ಮಹಾರಾಷ್ಟ್ರವನ್ನು ದಾಟಿ ಮಧ್ಯ ಪ್ರದೇಶದ ಪ್ರವೇಶದಿಂದ ಆರಂಭಗೊಂಡು ಹಿಮಲಯದವರೆಗೂ ಬೆಳೆಯುತ್ತಲೇ ಹರವಾಗುತ್ತಾ ಸಾಗುವ ದಟ್ಟಹಳದಿಯ ನೋಟದ ಸಾಸಿವೆಯ ಹೊಲಗಳು ನಯನ ಮನೋಹರವಾದವು. ಗಿಡವೂ ಅಷ್ಟೇ ಬಿಳಿ ಛಾಯೆಯ ಹಸಿರನ್ನು ಹೊಂದಿ ಹಳದಿಯ ದಳಗಳಲ್ಲಿ ಚಾವಣೆಯನ್ನು ನಿರ್ಮಿಸಿರುತ್ತದೆ. ಸಾಸಿವೆಯ ಗಿಡದ ಹರಹು ಒಂದೇ ಪ್ರಭೇದದಲ್ಲಿ ಹರಡಿಕೊಂಡಿಲ್ಲ. ಸುಮಾರು 40 ಪ್ರಭೇದದ ಕಾಳುಗಳನ್ನು ನಾವು ಬಳಸುವ ಸಾಸಿವೆಯಂತೆ ಉಪಯೋಗಿಸುವ ಬಗ್ಗೆ ದಾಖಲೆಗಳಿವೆ. ಆದರೂ ಪ್ರಮುಖವಾಗಿ ಬಿಳಿ, ಹಳದಿ, ಕಂದು ಹಾಗೂ ಕಪ್ಪು ಸಾಸಿವೆಗಳು ಹೆಚ್ಚು ಜನಜನಿತ. ಎಲ್ಲವೂ ಬ್ರಾಸಿಕೇಸಿಯ(Brassicaceae) ಎಂಬ ಸಸ್ಯ ಕುಟುಂಬದ ಪ್ರಭೇದಗಳು. ಮೂಲಂಗಿ, ಕೋಸುಗಳೂ ಸಹಾ ಇದೇ ಕುಟುಂಬದವೇ. ಹಾಗಾಗಿ ಈ ಕುಟುಂಬವನ್ನು ಕೋಸುಗಳ ಅಥವಾ ಸಾಸಿವೆಗಳ ಕುಟುಂಬವೆಂದೇ ಕರೆಯಲಾಗುತ್ತದೆ. ಇಲ್ಲಾ ಪ್ರಭೇದಗಳೂ ವಿವಿಧ ತವರನ್ನು ಹೊಂದಿವೆ. ಬಿಳಿಯ ಹಾಗೂ ಹಳದಿ ಸಾಸಿವೆಯು(Sinapis alba) ಮೆಡಿಟರೇನಿಯನ್‌ ಮೂಲದ್ದಾದರೆ, ಭಾರತದಲ್ಲಿ ಪ್ರಚಲಿತವಾದ ಕಂದು ಸಾಸಿವೆಯು (Brassica juncea) ಹಿಮಾಲಯದ ತಪ್ಪಲಿನದು. ಕಪ್ಪು ಸಾಸಿವೆಯು(Brassica nigra) ಮಧ್ಯ ಪ್ರಾಚ್ಯದ ಆಸು ಪಾಸಿನ ಏಶಿಯಾ ಮೈನರ್‌ ನೆಲದ ತವರಿನದಾಗಿದೆ.

ಸಂಬಂಧಗಳನ್ನು ಕಲ್ಪಸುವುದರಲ್ಲಿ ಸಾಸಿವೆಯದು ವಿಶಿಷ್ಟವಾದ ಬಗೆ! ಬಳಕೆಯಲ್ಲೇ ನೋಡಿ, ಸಾದಾ ಒಗ್ಗರಣೆಯಲ್ಲೂ ಕರಿಬೇವಿನ ಜೊತೆಯಾಗಿಯೇ ಎಣ್ಣೆಯಲಿ ಬೆರೆಯುತ್ತದೆ. ವಿವಿಧ ನೆಲೆಗಳ ವಿವಿಧ ಪ್ರಭೇದಗಳ ಮೂಲಕ ಹಲವು ನಾಗರಿಕ ಸಂಸ್ಕೃತಿಯನ್ನು ಸಂಬಂಧಗಳಿಂದ ಕಲ್ಪಿಸಿರುವುದು ಸಾಸಿವೆಯ ವಿಶೇಷತೆ. ಹಾಗಾಗಿ ಗ್ರೀಕ್‌, ರೋಮನ್‌, ಇಂಡಸ್‌, ಮುಂತಾದ ನಾಗರಿಕ ಸಂಬಂಧಗಳನ್ನೂ ಸಾಸಿವೆಯ ಬಳಕೆ ಹಾಗೂ ಕೃಷಿಯಿಂದ ಅವಲೋಕಿಸಲು ಸಾಧ್ಯವಿದೆ. ಇದು ಬ್ರಾಸಿಕಾ ಸಂಕುಲದಲ್ಲೂ ಇರುವ ಮಹತ್ವದ ಸಂಗತಿಯಾಗಿದ್ದು ವಿಜ್ಞಾನ ಲೋಕವನ್ನು ಬೆರಗಾಗಿಸಿದೆ. ಇದನ್ನು “ಟ್ರಯಾಂಗಲ್‌ ಆಫ್‌ ಯು- Triangle of U” ಎನ್ನುವ ವಿವರಣೆಯಿಂದ ಆರು ಮಹತ್ವದ ಪ್ರಭೇದಗಳ ವಿಕಾಸವನ್ನು ವಿವರಿಸಲಾಗುತ್ತದೆ. ಈ ಆರೂ ಪ್ರಭೇದಗಳು ಮೂರು ಪ್ರಭೇದಗಳನ್ನು ಪೂರ್ವಜರನ್ನಾಗಿ ಹೊಂದಿ ವಿಕಾಸಗೊಳಿಸಿದ್ದನ್ನು ವಿವರಿಸುತ್ತದೆ. ಪೂರ್ವಜರಾದ ಮೂರು ಪ್ರಭೇದಗಳು ಮೂರು ಮೂಲೆಗಳಲ್ಲಿ ಮೂರು ರೀತಿಯ(AA, BB, and CC) ಕ್ರೊಮೋಸೋಮುಗಳಿಂದ ಪ್ರತಿನಿಧಿಸಿವೆ. ಉಳಿದ ಮೂರು ಅವುಗಳ ಸಂಕರ(AABBCC) ಗಳ ವಿಕಾಸಗಳಾಗಿವೆ. Triangle of U ಪ್ರತಿಪಾದಕರು ಕೊರಿಯನ್‌-ಜಪಾನಿಯರಾದ Woo Jang Choon ಎಂಬ ವಿಜ್ಞಾನಿ. ಕೋಸುಗಳು, ಸಾಸಿವೆಗಳು ಹತ್ತಿರದ ಸಂಬಂಧಿಗಳೆಂದರೆ ಅಚ್ಚರಿಯಾಗುವುದಲ್ಲವೇ? ಜೊತೆಗೆ ಮೂಲಂಗಿಯನ್ನು ಟರ್ನಿಪ್ಪನ್ನೂ ಸೇರಿಸಿದರೆ ಸಂಕೀರ್ಣತೆಯ ಬೆರಗು ಇನ್ನೂ ಹೆಚ್ಚೀತು. ಹೀಗೆ ಸಾಸಿವೆಯು ಸಂಕೀರ್ಣ ಸಂಬಂಧಗಳನ್ನೂ ಸರಳವಾಗಿಸಿ ಜೊತೆಯಾಗಿಸಿದೆ.

ವಿವಿಧ ತವರಿನ ನೆಲೆಗಳನ್ನು ಹೊಂದಿರುವ ಸಾಸಿವೆಯು, ವಿವಿಧ ಸಾಂಸ್ಕೃತಿಕ ಆಹಾರದ ಬಳಕೆಯ ಹಿನ್ನೆಲೆಯನ್ನೂ ಹೊಂದಿದೆ. ಹಾಗೆಯೇ ಬ್ರಾಸಿಕಾ ಸಂಕುಲದ ವಿವಿಧ ಪ್ರಭೇದಗಳೂ ಕೆಲವೊಂದು ರಸಾಯನಿಕ ಗುಣಗಳಲ್ಲಿ ಹೆಚ್ಚೋ ಅಥವಾ ಕಡಿಮೆಯೋ ಗುಣಗಳನ್ನು ಹೊಂದಿರುವುದು ಸಾಮಾನ್ಯವಾದುದು. ಸರಳ ನೋಟದಲ್ಲಿ ಪರಿಮಳ ಅಥವಾ ಬಳಸಿದಾಗ ಬರುವ ಘಾಟು, ಬಳಸಿದ ಆಹಾರವು ತಾಳಿಕೊಳ್ಳುವ ಗುಣ, ಒಟ್ಟಾರೆಯ ರುಚಿಗಳಲ್ಲಿ ಇವುಗಳನ್ನು ಗುರುತಿಸಬಹುದು. ಭಾರತದಲ್ಲಿ ಕಂದು ಸಾಸಿವೆಯು ಹೆಚ್ಚಿದ್ದರೂ ಅಲ್ಲಲ್ಲಿ ಹಳದಿ ಅಥವಾ ಬಿಳಿ ಅಥವಾ ಕಪ್ಪು ಸಾಸಿವೆಯನ್ನೂ ಬೆಳೆಯಲಾಗುತ್ತಿದೆ. ಒಟ್ಟಾರೆ ಸಾಸಿವೆಯನ್ನು ಬೆಳೆದು ಬಳಸಿದ ಕೀರ್ತಿ ನಮ್ಮದು. ಅನೇಕ ಇತಿಹಾಸಕಾರರ ಅಂದಾಜಿನಂತೆ ಭಾರತದ ಬಳಕೆಯೇ ಅತ್ಯಂತ ಹಳೆಯದು. ನಮ್ಮ ಬಳಕೆಗೆ ಸುಮಾರು 5000ಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವಿವೆ. ಹಾಗೆಯೇ ಸುಮೇರಿಯನ್ನರೂ, ಗ್ರೀಕರೂ, ರೊಮನ್ನರು, ಈಜಿಪ್ಷಿಯನ್ನರು ಆಹಾರದಲ್ಲಿ ರುಚಿಗಾಗಿ ಹಾಗೂ ವೈವಿಧ್ಯಮಯವಾದ ಔಷಧಗಳಲ್ಲೂ ಬಳಸಿದ್ದಾರೆ. ಗಣಿತಜ್ಞ ಹಾಗೂ ದಾರ್ಶನಿಕ ಪೈಥಾಗೊರಸ್ ಚೇಳಿನ ಕಡಿತಕ್ಕೆ ಸಾಸಿವೆಯನ್ನು ಔಷಧವಾಗಿ ಬಳಸಿದ ಬಗ್ಗೆ ಹೇಳಿದ್ದಾರೆ. ಮೂಲ ವೈದ್ಯ ದಾರ್ಶನಿಕ ಹಿಪ್ಪೊಕ್ರೆಟ್ಸ್‌ ಸಹಾ ಇದರ ಬಳಕೆಯ ಬಗ್ಗೆ ವಿವರಿಸಿದ್ದಾರೆ. ಅಲೆಕ್ಸಾಂಡರ್‌ ತನ್ನ ಆಡಳಿತ ಸಮಯದಲ್ಲಿ ಗುಟ್ಟಾದ ಯುದ್ಧ ಮಾಹಿತಿಯಲ್ಲಿ ಸೈನ್ಯದ ಸಂಖ್ಯೆಯ ತಿಳಿಸಲು ಸಾಸಿವೆ ಕಾಳನ್ನು ಬಳಸಿದ ಬಗ್ಗೆ ದಾಖಲೆಗಳು ತಿಳಿಸುತ್ತವೆ.

ಭಾರತ ಉಪಖಂಡದ ಜನಪ್ರಿಯ ಸಾಸಿವೆಯನ್ನು ವೈಜ್ಞಾನಿಕವಾಗಿ ಬ್ರಾಸಿಕಾ ಜಂಸಿಯಾ (Brassica juncea) ಎಂದು ಹೆಸರಿಸಲಾಗಿದೆ. ಇದರ ಜನಪ್ರಿಯ ಸಾಮಾನ್ಯ ಹೆಸರುಗಳು ಇಂಡಿಯನ್‌ ಮಸ್ಟರ್ಡ್‌, ಚೈನೀಸ್‌ ಮಸ್ಟರ್ಡ್‌, ಓರಿಎಂಟಲ್‌ ಮಸ್ಟರ್ಡ್‌, ಲೀಫೀ ಅಥವಾ ವೆಜಿಟಬಲ್‌ ಮಸ್ಟರ್ಡ್‌ ಎಂಬುವಾಗಿವೆ. ಈ ಜಂಸಿಯಾ ಪ್ರಭೇದದೊಳಗೇ ಹಲವಾರು ಉಪಗುಂಪುಗಳಿದ್ದು, ಅವೆಲ್ಲವೂ ಇಡೀ ಉಪಖಂಡದ ಸ್ಥಳೀಯತೆಯನ್ನು ತಮ್ಮೊಳಗಿಟ್ಟು ಪೋಷಿಸಿವೆ. ಇಂಟೆಗ್ರಿಫೊಲಿಯಾ ಎಂದು ಗುರುತಿಸಲಾಗಿರುವ ಉಪಗುಂಪಿನ ತಳಿಗಳು ಹೆಚ್ಚಾಗಿ ಹಸಿರೆಲೆಯ ಬಳಕೆಯನ್ನು ಉತ್ತೇಜಿಸಿವೆ. ಅವುಗಳೊಳಗೂ ವಿವಿಧ ಬಗೆಗಳಿದ್ದು, ಎಲೆಗಳ ಆಕಾರಗಳಲ್ಲಿ ತುಸು ವ್ಯತ್ಯಾಸಗಳಿವೆ. ನಮ್ಮ ಒಗ್ಗರಣೆಯ ಕಂದು ಸಾಸಿವೆಯು ಎಣ್ಣೆಯ ಉತ್ಪಾದನೆಗೂ ಪ್ರಮುಖವಾಗಿದೆ. ಸಾಮಾನ್ಯವಾಗಿ ಸಾಸಿವೆಯ ಕಾಳುಗಳು 35-45% ಎಣ್ಣೆಯನ್ನು ಹೊಂದಿದ್ದು, ವಿವಿಧ ಎಣ್ಣೆಯ ಅಂಶದ ತಳಿ ಅಥವಾ ಬಗೆಗಳು ಜನಪ್ರಿಯ. ಅಲ್ಲದೆ ಎಣ್ಣೆಯನ್ನು ತೆಗೆಯುವ ವಿಧಾನದಲ್ಲೂ ಎಣ್ಣೆಯು ದೊರೆಯುವ ಪ್ರಮಾಣವು ಏರು-ಪೇರಾಗುವುದು. ಉತ್ತರ ಭಾರತದಲ್ಲಿ ಸಾಸಿವೆಯ ಎಣ್ಣೆಯು ಅತ್ಯಂತ ಹೆಚ್ಚು ಬಳಕೆಯಲ್ಲಿದ್ದು, ದಕ್ಷಿಣ ಭಾರತದವರ ನೆಲಗಡಲೆ ಅಥವಾ ಸೂರ್ಯಕಾಂತಿ ಅಥವಾ ಕರಾವಳಿಯವರ ಕೊಬ್ಬರಿ ಎಣ್ಣೆಯಂತೆ ದಿನನಿತ್ಯದ ತಿನಿಸುಗಳಲ್ಲಿ ಬಳಕೆಯಾಗುತ್ತದೆ.

ಸಾಸಿವೆಯ ಗಿಡದ ಹಲವು ಭಾಗಗಳು ಆಹಾರವಾಗಿ ಬಳಕೆಯಾಗುತ್ತವೆ. ದಕ್ಷಿಣದಲ್ಲಿ ನಮಗೆ ಅಷ್ಟಾಗಿ ಅದರ ಎಲೆಗಳ ಬಳಕೆಯ ಪರಿಚಯವಿಲ್ಲ. ಉತ್ತರ ಭಾರತದ ಕೆಲವು ರಾಜ್ಯಗಳನ್ನೂ ಸೇರಿದಂತೆ, ನೇಪಾಳ, ಬಾಂಗ್ಲಾ, ಪಾಕಿಸ್ತಾನ, ಜಪಾನ್‌, ಕೊರಿಯಾ, ಆಫ್ರಿಕಾ ಹಾಗೂ ಚೀನಾಗಳಲ್ಲಿ ಹಸಿರೆಲೆಗಳು ಧಾರಾಳವಾಗಿ ಬಳಕೆಯಾಗುತ್ತವೆ. ಎಳೆಯ ರೆಂಬೆಕೊಂಬೆಗಳೂ ಸಹಾ ತರಕಾರಿಯಂತೆ ಬಳಸಲಾಗುತ್ತದೆ. ಹೂವುಗಳೂ ಸಹಾ ನಾವು ಹಸಿರು ಕೊತ್ತಂಬರಿ ಸೊಪ್ಪನ್ನು ಮೇಲೆ ಉದುರಿಸಿ ಬಳಸುವಂತೆ ಅಲಂಕಾರಕ್ಕಾಗಿ ಉದುರಿಸಿ ತಿನ್ನಬಹುದಾಗಿದೆ. ಈ ಹಸಿರು ಭಾಗಗಳು ಪ್ರತಿಶತ 2ರಿಂದ 3ರಷ್ಟು ಪ್ರೊಟೀನನ್ನೂ 0.5 ರಷ್ಟು ಕೊಬ್ಬನ್ನೂ 3-5 %ನಷ್ಟು ಸಕ್ಕರೆಯ ಅಂಶವನ್ನೂ ಒದಗಿಸುತ್ತವೆ. ಕಾಳುಗಳನ್ನು ಒಗ್ಗರಣೆಯಲ್ಲಿ ದಿನವೂ ಬಳಸುವುದಂತೂ ತಿಳಿದೇ ಇದೆ. ಸಾಸಿವೆಯ ಸಾಕಷ್ಟು ವಿಟಮಿನ್ನುಗಳನ್ನು ಹೊಂದಿದ್ದು ಅವುಗಳಲ್ಲಿ “ʼ” “ಸಿಹಾಗೂ ಕೆಗಮನಾರ್ಹವಾಗಿವೆ.

ಸಾಸಿವೆಯ ಕಾಳುಗಳು ಐಸೊಥಯಸೈನೇಟ್ಸ್‌ (Isothiocyanates) ಎಂಬ ರಾಸಾಯನಿಕವನ್ನು ಹೊಂದಿದ್ದು ಅದು ಹೊಟ್ಟೆ ಹಾಗೂ ಕರುಳಿನ ಕ್ಯಾನ್ಸರಿನ ಉಪಚಾರದಲ್ಲಿ ಬಳಕೆಯಾಗುವ ಬಗ್ಗೆ ತಿಳಿಯಲಾಗಿದೆ. ಕಾಳಿನಲ್ಲಿ ಗಣನೀಯ ಪ್ರಮಾಣದಲ್ಲಿ ಸೆಲೆನಿಯಂ ಮೂಲವಸ್ತುವು ಇದ್ದು, ಅದರಿಂದ ಅಸ್ತಮಾ ಹಾಗೂ ಕೀಲು ನೋವಿನ ಉಪಶಮನವಾಗಲು ಸಹಾಯವಾಗುತ್ತದೆ. ಅದರಲ್ಲಿರುವ ಮ್ಯಾಗ್ನೀಸಿಯಂನಿಂದಾಗಿ ರಕ್ತದ ಒತ್ತಡ ಹಾಗೂ ತೀವ್ರ ಆಗಾಗ್ಗೆ ಕಾಡುವ ತಲೆನೋವು -ಮೈಗ್ರೆನ್‌- ಪರಿಹಾರಕ್ಕೆ ಅನುಕೂಲಗಳಿವೆ.

ಬಹಳ ಹಿಂದಿನಿಂದಲೂ ಬಳಕೆಯಲ್ಲಿರುವ ಸಾಸಿವೆಯ ಜನಪದವೂ ವಿವಿಧತೆಯನ್ನು ಹೊಂದಿದೆ. ನಿತ್ಯದ ಒಗ್ಗರಣೆಯ ಅಥವಾ ಎಣ್ಣೆಯ ಬಳಕೆಯಲ್ಲೇ ಅಲ್ಲದೆ, ಸಾಸಿವೆ ಕಾಳನ್ನು ಭಾರತೀಯ ಪರಂಪರೆಯು ವಿಭಿನ್ನವಾಗಿ ಗುರುತಿಸಿದೆ. ಸಾಸಿವೆಯ ಕಾಳುಗಳನ್ನು ಮಾಂತ್ರಿಕರು, ಮೋಡಿಗಾರರು ವಿಶೇಷವಾಗಿ ಬಳಸಿದ ಉದಾಹರಣೆಗಳು ಅಪ್ಪಟ ಭಾರತೀಯವಾದವು. ಇನ್ನೂ ಕೆಲವು ಸಮುದಾಯಗಳಲ್ಲಿ, ಬುಡಕಟ್ಟುಗಳಲ್ಲಿ ಸಾಸಿವೆಯ ಕಾಳುಗಳಿಗೆ ಮಾಯಾಶಕ್ತಿಯನ್ನು ಆರೋಪಿಸಿ ಕೆಲವೊಂದು ನಿಗದಿತ ಕಾಲ ಅಥವಾ ಕಾರ್ಯಕ್ಕೆ ಮನೆಗಳ ಹೊರ ಬಾಗಿಲು ಅಥವಾ ಹಿತ್ತಿಲಲ್ಲಿ ಸಿಂಪಡಿಸುವುದುಂಟು. ಪ್ರಾಚೀನ ಚೀನಿಯರು ಸಾಸಿವೆಗೆ ಕಾಮೋತ್ತೇಜಕ ಗುಣವಿರುವುದೆಂದು ನಂಬಿದ್ದರು. ಜರ್ಮನಿಯ ಜನಪದವು ಮದುವೆಯ ಹೆಣ್ಣಿನ ಮದುವೆಯ ಧಿರಿಸಿನ ಅಂಚಿಗೆ ಕಾಳುಗಳನ್ನು ಕಟ್ಟುವ ಅಥವಾ ಪೋಣಿಸುವ ಪರಿಪಾಠವನ್ನು ಹೊಂದಿದ್ದರು. ಇದರಿಂದ ಹೆಣ್ಣು ಮಗಳು ತನ್ನ ಮನೆಯ ಅಧಿಕಾರವನ್ನು ಹೆಚ್ಚಾಗಿ ಪಡೆಯುವ ಅಥವಾ ನಿಭಾಯಿಸುವ ಬಗ್ಗೆ ನಂಬಿಕೆಯನ್ನು ಹೊಂದಿದ್ದರು. ಡೆನ್‌ಮಾರ್ಕ್‌ನಲ್ಲಿಯೂ ಭಾರತದಂತೆ ದುಷ್ಟಶಕ್ತಿಗಳ ನಿಗ್ರಹದಲ್ಲಿ ಸಾಸಿವೆ ಕಾಳುಗಳನ್ನು ಬಳಸುತಿದ್ದ ಬಗ್ಗೆ ಆಧಾರಗಳಿವೆ.

ಭಾರತೀಯ ಪರಂಪರೆಯಲ್ಲಿ ಸಾಸಿವೆಯು ಎಣ್ಣೆಯ ಕಾಳಾಗಿ ಮತ್ತು ಅದೇ ಬಗೆಯ ಬಳಕೆಯಲ್ಲಿ ಜನಪ್ರಿಯ. ದಕ್ಷಿಣ ಭಾರತದಲ್ಲಿ ಉಪ್ಪಿನ ಕಾಯಿಗಳ ತಯಾರಿಕೆಯಲ್ಲಿ ಹೆಚ್ಚು ವಿಶ್ವಾಸನೀಯತೆಯನ್ನು ಸಂಪಾದಿಸಿದೆ. ದಿನ ನಿತ್ಯದ ತಿನಿಸುಗಳೇ ಅಲ್ಲದೆ, ವಿವಿಧ ಬಗೆಯ ಆರೋಗ್ಯವರ್ಧನೆಯ ಕಾರಣಗಳ ಬಳಕೆಯನ್ನು ನಮ್ಮಲ್ಲಿ ಪ್ರೋತ್ಸಾಹಿಸಿದೆ. ಆದಿಯಿಂದಲೂ ಮೆಡಿಟರೇನಿಯನ್‌ ಆಸು-ಪಾಸು ಹಾಗೂ ಪಶ್ಚಿಮದ ವಸತಿಗಳಲ್ಲಿ ಆಲೀವ್‌ ಹೇಗೋ ಭಾರತ ಉಪಖಂಡದಲ್ಲಿ ಸಾಸಿವೆಯು ಹಾಗೆ ಎನ್ನುವಂತೆ ಇದೆ. ದೇಹದ ರಕ್ತ ಪರಿಚಲನೆಗೂ, ಉತ್ತಮ ಚರ್ಮದ ಆರೋಗ್ಯಕ್ಕೂ ಹಾಗೂ ಕೂದಲಿನ ಬೆಳವಣಿಗೆಗೂ ಸಾಸಿವೆಯ ಎಣ್ಣೆಯು ಉಪಯುಕ್ತ. ಸಾಸಿವೆಯ ಎಣ್ಣೆಯ ಮಾನೋಅನ್‌ಸಾಚುರೇಟೆಡ್‌ ಕೊಬ್ಬಿನಾಮ್ಲಗಳಿಂದಾಗಿ ಹೆಚ್ಚು ಬಳಕೆಯನ್ನು ಪ್ರೋತ್ಸಾಹಿಸಿದೆ. ಕಾಲಿನ ಹಿಮ್ಮಡಿಯು ಬಿರಿಯುವುದನ್ನು ತಡೆಗಟ್ಟಲೂ ಸಾಸಿವೆಯ ಎಣ್ಣೆಯನ್ನು ಶಿಫಾರಸ್ಸು ಮಾಡುತ್ತಾರೆ. ಹೀಗಿದ್ದೂ ಅಮೆರಿಕ ದೇಶವು ಇತ್ತೀಚೆಗೆ ಎಣ್ಣೆಯು ಹೆಚ್ಚು ಇರುಸಿಕ್‌ ಆಮ್ಲವನ್ನು(erucic acid) ಹೊಂದಿದೆ ಎಂಬ ಕಾರಣದಿಂದ ಅದರ ಬಳಕೆಯನ್ನು ನಿಷೇಧಿಸಿದೆ. ಆದರೂ ಮಾಲಿಶ್‌ ಮಾಡಿ ಚರ್ಮದ ಆರೋಗ್ಯದ ಉತ್ತೇಜನದಲ್ಲಿ ಬಳಸುವುದನ್ನು ಉಳಿಸಿಕೊಂಡಿದೆ.

ತಿನ್ನುವ ಎಣ್ಣೆಯಲ್ಲದೆ, ಸಾಸಿವೆಯ ಕಾಳಿನಿಂದ ಬಗೆ ಬಗೆಯ ಉತ್ಪನ್ನಗಳನ್ನು ವಿವಿಧ ದೇಶಗಳು ತಯಾರಿಸುತ್ತವೆ. ಸಾಸ್‌, ಸೂಪ್‌, ಚಟ್ನಿಯಲ್ಲದೆ ವಿವಿಧ ರೂಪಗಳಲ್ಲಿ ಬಳಸಲಾಗುತ್ತದೆ. ಪ್ರಮುಖವಾಗಿ ಸಾಸಿವೆಯ ಕಾಳು ವಿಶಿಷ್ಟವಾದ ರುಚಿಯ ಸೇರಿಸುವುದನ್ನು ವಿವಿಧ ಸಮಾಜಗಳು ಒಗ್ಗಿಕೊಂಡಿವೆ. ಆದ್ದರಿಂದ ಸಂಸ್ಕರಿಸಿದ ಸಾಸಿವೆಯು ಪಶ್ಚಿಮದಲ್ಲಿ ಹೆಚ್ಚು ಜನಪ್ರಿಯವಾಗಿದೆ. ವಿನೆಗರ್‌, ಬಗೆ ಬಗೆಯ ವೈನ್‌ ಮುಂತಾದ ಪಾನೀಯಗಳು ಸಾಸಿವೆಯ ರುಚಿಯನ್ನು ಹೊಂದಿಸಿಕೊಂಡು ರೂಪಾಂತರವಾಗಿ ನಾಲಿಗೆಯ ಮೇಲೆ ಆಡಿ ಹೊಟ್ಟೆಯನ್ನು ಸೇರುತ್ತವೆ.

ಫ್ರಾನ್ಸಿನಲ್ಲಿ 9ನೆಯಶತಮಾನದ ನಂತರ ಧಾರ್ಮಿಕ ಮಠಗಳು ಸಾಸಿವೆಯ ತಯಾರಿಯಿಂದ ಪ್ರಚೋದನೆಗೊಂಡವು. ಅದರಿಂದ ಲಾಭವನ್ನೂ ಸಂಪಾದಿಸತೊಡಗಿದವು. ಸಾಸಿವೆಯ ರುಚಿಯಿಂದ ಪ್ರಭಾವಿತರಾದವರಲ್ಲಿ ಫ್ರಾನ್ಸ್‌ ನ ಅವಿನ್ಯುನ್‌ನ ಪೋಪ್‌ ಒಬ್ಬರು ಸಹಾ ಪ್ರಮುಖರು. 13 ಮತ್ತು 14ನೆಯ ಶತಮಾನದಲ್ಲಿದ್ದ ಅವಿನ್ಯುನ್‌ನ 22ನೆಯ ಪೋಪ್‌ ಜಾನ್‌ (Pope John XXII of Avignon) ಅದೆಷ್ಟು ಸಾಸಿವೆಯ ರುಚಿಯ ಮೋಹಕ್ಕೆ ಒಳಗಾಗಿದ್ದರಂತೆ ಎಂದರೆ, ಸಾಸಿವೆಯ ತಯಾರಿಗೆಂದೇ ಒಂದು ಹುದ್ದೆ (Grand Mustard-Maker to the Pope)ಯನ್ನು ಮಂಜೂರು ಮಾಡಿದ್ದರು. ಹೀಗೆ ಸಾಸಿವೆಯು ಪಶ್ಚಿಮದಲ್ಲಿ ನೆಲದಲ್ಲಿ ವಿಶಿಷ್ಟವಾದ ಛಾಪನ್ನು ಮೂಡಿಸಿತ್ತು.

ತೀರಾ ಇತ್ತೀಚೆಗಿನ ಒಂದು ಮಹಾನ್‌ ಸಂಗತಿಯೆಂದರೆ ಸಾಸಿವೆಯು ಅದರ ಉತ್ಪನ್ನದ ತಯಾರಿಯಿಂದ ಅಮೆರಿಕದ ವಿಸ್ಕಾನ್‌ಸಿನ್‌ನಲ್ಲಿ ಓರ್ವ ಲಾಯರ್‌-ನ್ಯಾಯವಾದಿಯೊಬ್ಬರು ಗೀಳಿಗೆ ಹಿಡಿಸಿದ್ದು! ಹಾಂ..1986ರ ಅಕ್ಟೋಬರ್‌ನಲ್ಲಿ. ವಿಸ್ಕಾನ್‌ಸಿನ್‌ನ ಲಾಯರ್‌ ಬ್ಯಾರಿ ಲೆವೆನ್‌ಸನ್‌(Barry Levenson) ತಮ್ಮ ಫೇವರೆಟ್‌ ಆದ ಬೇಸ್‌ ಬಾಲ್‌ ಟೀಮ್‌ “ಬೊಸ್ಟನ್‌ ರೆಡ್‌ ಸಾಕ್ಸ್‌” ಸೋಲುಂಡಾಗ ಹತಾಶರಾಗಿದ್ದರಂತೆ. ಅದರಿಂದ ಹೊರಬರಲು ಒಂದೆಡೆ ಒಂದು ಸಾಸಿವೆಯ ಉತ್ಪನ್ನದ ಡಬ್ಬಿಯೊಂದು ಆತನಿಗೆ ಆಹ್ವಾನಿಸಿದಂತೆ ಭಾಸವಾಯಿತಂತೆ. ಹಾಗೆ ಆರಂಭವಾದ ಸಾಸಿವೆಯ ಉತ್ಪನ್ನಗಳ ಸಂಗ್ರಹ ಬೆಳೆಯುತ್ತಾ ಹೋಯಿತು. ಇದೀಗ ವಿಸ್ಕಾನ್‌ಸನ್‌ನ ಮಿಡ್ಲ್‌ಟನ್‌, ಎಂಬಲ್ಲಿ ವಿಶಾಲವಾದ ಸ್ಥಳವೊಂದರಲ್ಲಿ ಇರುವ ಆ ಮ್ಯೂಸಿಯಮ್ಮಿನಲ್ಲಿ 5500ಕ್ಕೂ ಹೆಚ್ಚು ಬಗೆಯ ಸಾಸಿವೆಯಿಂದ ತಯಾರಾದ ಪದಾರ್ಥಗಳು ಪ್ರದರ್ಶನಕ್ಕೆ ಇವೆ. ಇದೀಗ ಅದು ರಾಷ್ಟ್ರೀಯ ಸಾಸಿವೆಯ ಮ್ಯೂಸಿಯಂ ಆಗಿ ಹೆಸರಾಗಿದೆ. ಅಮೆರಿಕದಲ್ಲಿರುವ ಒಂದು ವಿಶಿಷ್ಟ ಮ್ಯೂಸಿಯಂ ಇದಾಗಿದೆ. ಆ ಮ್ಯೂಸಿಯಮ್ಮನ್ನು ಮುನ್ನಡೆಸುತ್ತಾ ಅದರ ಮುಖ್ಯ ಸಾಸಿವೆ ಅಧಿಕಾರಿಯಾಗಿರುವ ಬ್ಯಾರಿ ಲೆವೆನ್‌ಸನ್‌ ಅವರ 4-5 ನಿಮಿಷದ ಮಾತುಗಳನ್ನು ಕೇಳಲು ಈ ಲಿಂಕ್‌ ಬಳಸಬಹುದು. https://www.youtube.com/watch?v=E0odUAnhgGs

ಮಾನವ ಕುಲದ ಅತ್ಯಂತ ಮುಖ್ಯವಾದ ಸಂಗತಿಯೊಂದು ಬುದ್ಧನ ನೀತಿ ಕತೆಗಳಲ್ಲಿ ದಾಖಲಾಗಿದೆ. ಇದು ಸಾಸಿವೆಯ ಮೂಲಕ ಅತ್ಯಂತ ಹಳೆಯ ಹಾಗೂ ಬಹು ಮುಖ್ಯವಾದ ನೀತಿಯನ್ನೂ ರೂಪಕವಾಗಿ ಹೇಳಿದೆ. ಕಿಸಾ-ಗೌತಮಿ ಎಂಬ ಶ್ರೀಮಂತ ಮಹಿಳೆಯ ಮಗುವನ್ನು ಬದುಕಿಸಲು ಬುದ್ಧನನ್ನೊಮ್ಮೆ ಕೇಳಿದಾಗ ಬುದ್ಧನು “ಸಾವಿಲ್ಲದ ಮನೆಯ ಸಾಸಿವೆ”ಯನ್ನು ತರಲು ಹೇಳಿದನಂತೆ. ಎಲ್ಲರ ಮನೆಯಲ್ಲೂ ಸಾವೂ ಹಾಗೂ ಸಾಸಿವೆಯೂ ಅಷ್ಟೇ ಸಹಜ ಎನ್ನುವ ರೂಪಕದಲ್ಲಿ ನಿಶ್ಚಿತವಾದ ಸಾವಿನ ಬಗ್ಗೆ ಸಮಾಧಾನಿಸುವ ನೀತಿಯಿದೆ.

ಆರಂಭದಲ್ಲಿ ನಾನು ಪ್ರಸ್ತಾಪಿಸಿದ್ದ ನನ್ನ ಗೆಳತಿಯ ತಾಯಿಯು ತನ್ನ ಮಗಳ ಮೇಲಿನ ಮಮತೆಯನ್ನು ಬರಿ ಮನೆಯನ್ನು ಅಣಿಗೊಳಿಸಿ ಕೊಡುವುದರಲ್ಲಿ, ತೀರಾ ಕಡಿಮೆ ಅಗತ್ಯವಾದರೂ ಇರಲೇ ಬೇಕಾದ ಸಾಸಿವೆಯನ್ನೂ ಸೇರಿಸಿಕೊಟ್ಟದ್ದು ಗಮನಾರ್ಹವಾದದ್ದಾಗಿದೆ. ಆಕೆಯ ತಾಯಿಯು ಸಾಸಿವೆಯನ್ನು ನಗಣ್ಯವೆನಿಸದೆ ಅಡುಗೆ ಮನೆಯ ಅತ್ಯಂತ ಪ್ರಮುಖವಾದ ವಸ್ತುವಾಗಿಸಿ ಅದರಲ್ಲೂ ಪ್ರೀತಿಯನಿಟ್ಟು ಮಗಳಿಗೆ ಕೊಡುಗೆಯಾಗಿಸಿದ್ದು ದೊಡ್ಡದು. ಸಾಸಿವೆಯು ಸೃಜಿಸಿರುವ ಸಂಬಂಧಗಳು ಹಾಗೆ!

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್

This Post Has 3 Comments

 1. ಶ್ರೀಮತಿ ಭಾಗ್ಯ ತೆಗ್ಗೆಳ್ಳಿ

  ಸಾಸುವೆಯು ಚಿಕ್ಕ ಗಾತ್ರಕ್ಕೆ ಉಪಮೆಯಾದರೂ ಮಾನವನ
  ನಾಗರಿಕತೆಯೊಂದಿಗೆ ಬೆಳೆದು ಬಂದ ಮಹತಿಯನ್ನು ಹೊಂದಿದೆ.ಹೊಸದಾಗಿ ಮನೆಮಾಡಿದ ಭಾರತೀಯ ಗೃಹಿಣಿಯ ಅಡುಗೆ ಮನೆಯಿಂದ ಹಿಡಿದು ಅಮೇರಿಕದಂತಹ ರಾಷ್ಟ್ರದ ಮ್ಯುಸಿಯಂನಲ್ಲೂ ಸ್ಥಾನ ಪಡೆದ ಹೆಗ್ಗಳಿಕೆ ಇದರದ್ದು.ಅದರ ರುಚಿಯಿಂದಾಗಿ ಸಾಂಬಾರ ದಿನಿಸುಗಳಲ್ಲದೆ ವೈನ್ ಗಳಲ್ಲೂ, ಔಷಧಿಯಾಗಿಯೂ, ಅಲ್ಲದೇ ಬಹುತೇಕ ರಾಷ್ಟ್ರಗಳಲ್ಲೂ ಸಾಂಸ್ಕೃತಿಕ ಹಿನ್ನೆಲೆ ಹೊಂದಿದೆ.ಬುದ್ಧನಿಂದಲೂ ಉಲ್ಲೇಖಿಸಲ್ಪಟ್ಟು ಪಾವನವಾದ ವಾಮನಕಾಳು ಎಂದರೆ ಸಾಸುವೆಯೇ..ಸಾಸುವೆಯ ಸಾಗರದಷ್ಟು ವಿಶೇಷಣಗಳನ್ನು ಸಾಸುವೆಯಲ್ಲಿ ಹಿಡಿದಿಟ್ಟು ಓದುಗರಿಗೆ ಅದರ ಒಗ್ಗರಣೆಯ ಪರಿಮಳ ಉಣಬಡಿಸಿದ ಲೇಖಕರಿಗೆ ವಂದನೆಗಳು..ಬುದ್ಧನಂತೆಯೇ ಬಸವಣ್ಣನು ಸಹ ಈ ಕಾಳನ್ನು” ಎನ್ನಲ್ಲಿ ಭಕ್ತಿ ‘ಸಾಸುವೆ’ ಯ ಷಡ್ಭಾಗದಿನಿತಿಲ್ಲ” ಎಂಬಲ್ಲಿ ಹೋಲಿಕೆಯ ಮಾಪನವಾಗಿ ಬಳಸಿದ್ದನ್ನು ಇಲ್ಲಿ ಸ್ಮರಿಸಬಹುದು..ಉತ್ತಮ ಲೇಖನ..

 2. ಶಶಿ ರಾಜ್

  ಬಹಳ ಉತ್ತಮ ಬರಹ

 3. Puttaraju P Prabhuswamy

  ಓದಿ ಸಂತಸವಾಯಿತು.
  ಅದರಲ್ಲೂ triangle of u ವಿಷಯ ಆಸಕ್ತಿದಾಯಕ.
  ನಿಮ್ಮ ಲೇಖನಗಳು ಸಸ್ಯ ಲೋಕದ ಪರಿಚಯದ ಜೊತೆ ಕಿರು ಇತಿಹಾಸ ಮತ್ತು ಭಾವನಾತ್ಮಕ ಸಂಬಂಧ ಸಹ ಹೇಳುತ್ತದೆ.
  ಧನ್ಯವಾದ ಮತ್ತು ವಂದನೆ

Leave a Reply