ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವೃತ್ತಿ ಜೀವನವನ್ನು ಆರಂಭಿಸಿದ ತೊಂಬತ್ತರ ದಶಕದ ದಿನಗಳ ಘಟನೆ. ನಮ್ಮ ವಿಭಾಗದ ಮುಖ್ಯಸ್ಥರು ಮೂಲತಃ ತಮಿಳುನಾಡಿನವರು, ಉತ್ತರ ಭಾರತದ ಐಐಟಿಗಳಲ್ಲಿ ವ್ಯಾಸಂಗ ಮುಗಿಸಿ, ಬೆಂಗಳೂರಿನಲ್ಲಿ ನೆಲೆಯಾದಾಗ ಅಲ್ಲಿ ಕಂಡ “ಸೀಮೆ ಬದನೆ” ಚೌ-ಚೌ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಂಡಿದ್ದರು. ತಮ್ಮೂರಿನಲ್ಲಿ ಅದನ್ನು ಕೊಂಡೊಯ್ದು ಬೆಳೆಯುವ ಆಸಕ್ತಿಯಲ್ಲಿ, ಕೃಷಿ ವಿದ್ಯಾರ್ಥಿಯಾಗಿದ್ದ ನನ್ನನ್ನು ಅದರ ಬೀಜ ತಂದು ಕೊಡುತ್ತೀರಾ? ಎಂದು ಕೇಳಿದ್ದರು. ಆಗ ನಾನು “ಅದರ ಕಾಯಿಯೇ ಬೀಜ ಸರ್, ಬಲಿತ ಕಾಯಿಯ ಬುಡದಲ್ಲಿ ನಾಲಿಗೆಯನ್ನು ಚಾಚಿದಂತೆ ಕಂಡು ಬರುತ್ತದೆ, ಮುಂದೆ ಅದೇ ಮೊಳೆಯುತ್ತದೆ. ಅಂತಹದನ್ನು ನೋಡಿ ನಾಟಿ ಮಾಡಿದರೆ, ಬಳ್ಳಿಯಾಗಿ ಬೆಳೆಯುತ್ತದೆ” ಎಂದಿದ್ದೆ. ತಮ್ಮ ಮನೆಯಲ್ಲಿ ಅದಕ್ಕೆ ಬೆಂಗಳೂರು ಬದನೆಯೆಂದು ಕರೆಯುವ ಬಗ್ಗೆ ಹೇಳಿ ನನಗೆ ಮತ್ತಷ್ಟು ಕುತೂಹಲ ಹೆಚ್ಚಿಸಿದ್ದರು. ಮುಂದುವರೆದು, ಸರಿ ಹಾಗಾದರೆ ನಾಟಿ ಮಾಡಲು ಬರುವ ಕಾಯಿಗಳನ್ನು ತಂದು ಕೊಡಿ ಎಂದು ಹೇಳಿ ಅದರ ಬಗೆಗಿನ ತಮ್ಮ ಪ್ರೀತಿಯನ್ನು ಖಾತ್ರಿ ಪಡಿಸಿದರು. ನಾನು ಯಶವಂತಪುರದ ಮಾರುಕಟ್ಟೆಗೆ ಹೋಗಿ ಆಯ್ದು ಬಲಿತ ಮೂರು ಕಾಯಿಗಳನ್ನು ತಂದು ಕೊಟ್ಟಿದ್ದೆ. ಸೀಮೆ ಬದನೆಯು ಈ ಘಟನೆಗಿಂತಲೂ ಸುಮಾರು ಮೂರೂಕಾಲು ಶತಮಾನಗಳ ಮೊದಲೇ ಕೇವಲ “ಮೂರು-ಕಾಯಿ”ಗಳಿಂದಲೇ ಭಾರತಕ್ಕೆ ಬಂದು ನೆಲೆಯಾದದ್ದು ಎಂಬ ಸಂಗತಿ ಆಗ ನನಗೇನೂ ತಿಳಿಯದು. ನಾನೂ ತಮಿಳುನಾಡಿನ ಪ್ರೊ. ರಾಜಗೋಪಾಲನ್ ಅವರ ಊರಿಗೆ ಮೂರು ಕಾಯಿ ಸೀಮೆ ಬದನೆ- ಅವರ ಮಾತಿನಂತೆ “ಬೆಂಗಳೂರು ಬದನೆ”-ಯನ್ನು ಕಳಿಸಿದ್ದು ಕಾಕತಾಳೀಯವಾಗಿತ್ತು.
ಸೀಮೆ ಬದನೆಯು ಬದನೆ ಏನಲ್ಲ, ಸೌತೆ ಜಾತಿಯದು. ಅದನ್ನು 1873ರಿಂದ 1908ರ ನಡುವೆ ಲಾಲ್ ಬಾಗ್‌ನ ಮುಖ್ಯಸ್ಥರಾಗಿದ್ದ “ಜಾನ್ ಕ್ಯಮರೊನ್ ಅವರು ಶ್ರೀಲಂಕಾದಿಂದ ಕೇವಲ ಮೂರು ಕಾಯಿಗಳನ್ನು ತಂದು ಮೊದಲಬಾರಿಗೆ ಲಾಲ್ ಬಾಗ್‌ನಲ್ಲಿ ನೆಟ್ಟಿದ್ದರು. ಅಷ್ಟೇ ಅಲ್ಲ ಬೆಂಗಳೂರಿನ ಹವೆಗೆ ಮತ್ತು ಮಣ್ಣಿಗೆ ಒಗ್ಗಿದ ಚೌ ಚೌ ಅದ್ಭುತವಾಗಿ ಹೊಂದಿಕೊಂಡು ಸಾಕಷ್ಟು ಇಳುವರಿ ಕೊಟ್ಟಿತ್ತು. ಖುಷಿಗೊಂಡ ಕ್ಯಮರೊನ್ ಅದನ್ನು ಕೃಷಿಗೆ ಒಳಪಡಿಸುವ ಪ್ರಚಾರದಲ್ಲಿ ತೊಡಗಿದ್ದರು. ಬೆಂಗಳೂರಿನ ಸುತ್ತ ಮುತ್ತಲಿನ ರೈತರಿಗೆ ಅದನ್ನು ಪರಿಚಯಿಸಲು, ಕಾಯಿ ಕೊಟ್ಟು ನಾಟಿ ಮಾಡಿಸಿದ್ದಲ್ಲದೆ, ಅದನ್ನು ಬೆಳೆದು ಕೊಯಿಲು ಮಾಡುತ್ತಿರುವುದನ್ನೂ ಖಚಿತ ಪಡಿಸಿಕೊಳ್ಳುತ್ತಿದ್ದರು. ಸಾಲದ್ದಕ್ಕೆ ಅವರು, ತಮಿಳುನಾಡಿನ ಗಡಿಯ ಹೊಸೂರು ಭಾಗದ ಟೋಲ್ ಗೇಟ್ ಬಳಿ ನಿಂತು ರೈತರಿಗೆ ಹಂಚುತ್ತಿದ್ದರಂತೆ!. ಹಾಗಾಗಿ ತಮಿಳರಲ್ಲಿ ಅದು “ಬೆಂಗಳೂರು ಬದನೆ” ಎಂದಾಗಿದೆ. ಸೌತೆಯ ಜಾತಿಯದಾಗಿದ್ದರೂ, ಸೌತೆಯ ಗುಣದಿಂದ ಭಿನ್ನವಾಗಿ ಬೇಯಿಸಲು, ಅನುಕೂಲವಾಗುವ ಬದನೆಗೆ ಹೋಲಿಸಿದ್ದ ಕಾರಣಗಳು ನಿಖರವಾಗಿಲ್ಲ. ಅಂತೂ ಬದನೆಯಂತೆ ಪುಟ್ಟ ಪುಟ್ಟವೂ ಇದ್ದುದರಿಂದ, ಅರೆ ಬೆಂದ ಕಾಯಿಗಳನ್ನೂ ತಿನ್ನಬಹುದಾಗಿದ್ದರಿಂದಲೋ ಏನೋ ಬದನೆಯಾಗಿ, ಪರದೇಶದ್ದಾದರಿಂದ ಸೀಮೆಯ ಬದನೆಯಾಗಿದೆ.
ಜಾನ್ ಕ್ಯಮರೋನ್ ಬ್ರಿಟನ್ನಿನ ರಾಯಲ್ ಕ್ಯೂ ಗಾರ್ಡನ್ ನಿಂದ ಲಾಲ್‌ಬಾಗ್‌ಗೆ ಸೂಪರಿಂಟೆಂಡೆಂಟ್ ಆಗಿ ಪೂರ್ಣ ಪ್ರಮಾಣದ ಜವಾಬ್ದಾರರಾಗಿ ನೇಮಕಗೊಂಡವರು. ಅವರ ಕಾರಣದಿಂದ ಚೌ ಚೌ ಅಲ್ಲದೆ ಟರ್ನಿಪ್, ಕೋಸು ಮುಂತಾದ ತರಕಾರಿ ಬೆಳೆಗಳು ನಮ್ಮ ನೆಲಕ್ಕೆ ಪರಿಚಯಗೊಂಡವು. ಇವರ ಕೆಲಸವನ್ನು ಅಷ್ಟೇ ಪ್ರೀತಿಯಿಂದ ಮುಂದುವರೆಸಿದವರು ಗುಸ್ಟವ್ ಹರ್ಮನ್ ಕ್ರೆಂಬಿಗಲ್. ಲಾಲ್ ಬಾಗ್ ಸಮೀಪದ ರಸ್ತೆಯೊಂದಕ್ಕೆ “ಕ್ರೆಂಬಿಗಲ್ ರಸ್ತೆ” ಎಂದಿರುವುದು ಇವರ ನೆನಪಿಗಾಗಿಯೇ! ಕ್ರೆಂಬಿಗಲ್ ಕೂಡ ಚೌ ಚೌ ಅನ್ನು ಬೆಂಗಳೂರಿನ ಸುತ್ತ ಮುತ್ತಲಿನ ರೈತರಲ್ಲಿ ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಇಬ್ಬರೂ ಕ್ಯೂ ಗಾರ್ಡನ್ (Royal Kew Garden)ನ ತರಬೇತಿ ಪಡೆದ ಸಸ್ಯವಿಜ್ಞಾನಿಗಳು. ಈ ಗಾರ್ಡನ್ ಬಗ್ಗೆಯೇ ವಿವರವಾಗಿ ಸಸ್ಯಯಾನದಲ್ಲಿ ಬರೆಯಬೇಕೆಂಬ ಒತ್ತಾಸೆ ಇದೆ. ಜಗತ್ತಿನ ಬಹುತೇಕ ಸಸ್ಯಗಳ ಮಾಹಿತಿ ಮತ್ತು ಸಾಕಣೆ ಈ ತೋಟದಲ್ಲಿದೆ.
ಸೀಮೆ ಬದನೆಯನ್ನು ಇಂಗ್ಲೀಶಿನಲ್ಲಿ, ಚೊ ಚೊ(Cho Cho) ಎನ್ನುತ್ತಾರೆ. ಫ್ರೆಂಚ್ ನಲ್ಲಿ ಚೌ ಚೌ(Chou Chou) ಎಂದಿರುವುದು ಹೇಗೋ ಭಾರತೀಯ ಇಂಗ್ಲೀಶ್ ಬಳಕೆಯಲ್ಲಿ Chow Chow ಆಗಿದೆ. ನಿಜಕ್ಕೂ ಅದನ್ನು ಇಂಗ್ಲೀಶಿನಲ್ಲಿ ಬರೆಯಬೇಕಿರುವುದು Cho Cho ಎಂದೇ! Cho Cho ಅನ್ನು ಮೂಲ ತವರಿನ ನೆಲವಾದ ಮೆಕ್ಸಿಮೊ ಮತ್ತಿತರ ಕೇಂದ್ರ ಅಮೆರಿಕದ ಸ್ಥಳೀಯ ಭಾಷೆಗಳಿಂದ ಪ್ರಭಾವಿಸಿದ ಹೆಸರನ್ನು ಪಡೆದ ಅದು ಸ್ಪಾನಿಶ್ ಭಾಷೆಯಲ್ಲಿ ಚಯೊತೆ (Chayote) ಎಂದೂ ಮತ್ತು ಸಸ್ಯವೈಜ್ಞಾನಿಕವಾಗಿ ಸಚೆಯಮ್ ಎಜುಲೆ (Sechium edule) ಎಂದು ಕರೆಯಲಾಗುತ್ತದೆ. ಚಯೊತೆಯು ಬಳಕೆಯಲ್ಲಿರುವ ಸೌತೆಯ ಜಾತಿಯ ಸಸ್ಯಗಳಲ್ಲೇ ಭಿನ್ನವಾದುದು ಹಾಗೂ ತರಕಾರಿಯಾಗಿ ಹೆಚ್ಚು ಬೆಲೆಯುಳ್ಳದ್ದು. ಏಕೆಂದರೆ ಸೌತೆಯ ತರಕಾರಿಗಳಲ್ಲೇ ಇದರಲ್ಲಿ ಹೆಚ್ಚಿನ ಆಹಾರಾಂಶಗಳಿವೆ. ಆದರೆ ಜನಪ್ರಿಯ ಸೌತೆಯ ರಸಭರಿತ ಗುಣ ಚೌ ಚೌನಲ್ಲಿ ಕಡಿಮೆ. ಇದರ ತಿರುಳಿನಲ್ಲಿರುವ ಒಂದು ಬಗೆಯ ಅಂಟಿನ ಗುಣ ಇದನ್ನು ವಿಭಿನ್ನ ಬಳಕೆಯಲ್ಲಿ ಪ್ರೋತ್ಸಾಹಿಸಿದೆ. ಹಾಗಾಗಿ ಇದರ ತಿರುಳನ್ನು ರುಬ್ಬಿ ದೋಸೆಯ ಹಿಟ್ಟಿನ ಜೊತೆಗೆ ಮಿಶ್ರಣ ಮಾಡಿ ಬಳಸುತ್ತಾರೆ. ಕೆಲವೊಬ್ಬರ ಅನುಭವದಂತೆ ಹಾಗೆ ಮಿಶ್ರ ಮಾಡಿದ ದೋಸೆಯ ಹಿಟ್ಟು ಬೇಗ ಹುದುಗು ಬಂದು ಬೇಗನೇ ದೋಸೆ ಮಾಡಲು ಬರುತ್ತಂತೆ!
ಸೌತೆಯ ಕುಟುಂಬವಾದ ಕುಕುರ್ಬಿಟೆಸಿಯೆ (Cucurbitaceae)ಸಸ್ಯಗಳಲ್ಲಿ ಇದರ ವರ್ತನೆ ಹಾಗೂ ಬಳಸಬಹುದಾದ ಸಸ್ಯಭಾಗಗಳಿಂದ ಇದು ಭಿನ್ನವಾಗಿದೆ. ಇದೊಂದು ಬಹುವಾರ್ಷಿಕ ಬಳ್ಳಿ. ಒಗ್ಗಿಕೊಂಡ ನೆಲದಲ್ಲಿ ಅತ್ಯಂತ ರಭಸವಾಗಿ ಬೆಳೆಯುವ, ಆಕ್ರಮಣಕಾರಿ ಸಸ್ಯವಾಗಿದ್ದು ಸೊಗಸಾಗಿ ಬೆಳೆಯುತ್ತದೆ. ಈ ಸಸ್ಯವು ಗಂಡು ಮತ್ತು ಹೆಣ್ಣು ಹೂವುಗಳನ್ನು ಬೇರೆ-ಬೇರೆಯಾಗಿ ಹೊಂದಿ ಎರಡೂ ಒಂದೇ ಸಸ್ಯದಲ್ಲಿರಿಸಿಕೊಂಡ ಮನೊಸಿಯಸ್(Monoecious) ಸಸ್ಯ. ಗಂಡು ಹೂವುಗಳು ಗುಂಪಾಗಿ ಗೊಂಚಲಾಗಿದ್ದರೆ, ಹೆಣ್ಣು ಹೂವುಗಳು ಒಂಟಿಯಾಗಿ ಹೆಚ್ಚೆಂದರೆ ಜೋಡಿಯಾಗಿ ಇರುತ್ತವೆ. ಸಾಮಾನ್ಯವಾಗಿ ಪರಕೀಯ ಪರಾಗಸ್ಪರ್ಶದಿಂದ ಕಾಯಾಗುತ್ತದೆ. ಆದರೂ ಸ್ವಕೀಯ ಪರಾಗಸ್ಪರ್ಶವೂ ಇದರಲ್ಲಿ ಸಾಧ್ಯವಿದೆ. ವಿಚಿತ್ರವೆಂದರೆ ಸ್ವಕೀಯ ಪರಾಗಸ್ಪರ್ಶವಾದರೂ ಒಳ-ಸಂತಾನ (In Breeding) ದ ಸಮಸ್ಯೆಯನ್ನು ಎದುರಿಸುವುದಿಲ್ಲ. (ಅಂದರೆ ರಕ್ತ ಸಂಬಂಧದ ಮದುವೆಗಳ ಸಮಸ್ಯೆಗಳು ಅನ್ನುತ್ತೇವಲ್ಲ ಹಾಗೆ!). ಹಾಗಾಗಿಯೇ ಅಂತಹಾ ಸಮಸ್ಯೆಯನ್ನೆಲ್ಲಾ ಪರಿಹರಿಸಿಕೊಂಡು ಆಕ್ರಮಣಕಾರಿ ಸಸ್ಯವಾಗಿ ವಿಕಾಸಗೊಂಡಿರುವ ಸಾಧ್ಯತೆಯಿದೆ. ಅಂದರೆ ಹೇಗಿದ್ದರೂ ಪರಾಗಸ್ಪರ್ಶಗೊಂಡು ಕಾಯಿ ಬಿಡುತ್ತದೆ. ಇದೇ ಕಾರಣದಿಂದ ಇದರಲ್ಲಿ ಇಳುವರಿಯು ಹೆಚ್ಚು. ಒಂದೊಂದು ಬಳ್ಳಿಯೂ 500ರಿಂದ 600 ಕಾಯಿಗಳನ್ನು ಬಿಡುತ್ತದೆ. ಹಾಗೂ ಒಂದು ವೇಳೆ ಪರಾಗಸ್ಪರ್ಶವಾಗದಿದ್ದರೂ ಬೀಜವಿಲ್ಲದ ಕಾಯಿ ಬಿಡುವ ಬಾಳೆಯ ಹಣ್ಣಿನಂತೆ ನಿರ್ಲಿಂಗ ರೀತಿಯಲ್ಲೂ (Parthenocarpy) ಕಾಯಿ ಬಿಡುವ ವಿಶಿಷ್ಠವಾದ ಸಸ್ಯ! ಅಂತಹ ಪಾರ್ತೆನೊಕಾರ್ಪಿ ಕಾಯಿಯಲ್ಲಿ ಬೀಜವಿರುವುದಿಲ್ಲ! ಆದರೆ ಇದು ಅಪರೂಪ. ಸಾಮಾನ್ಯವಾಗಿ ಸೌತೆ ಜಾತಿಯ ಕಾಯಿಗಳು ಬೀಜಗಳಿಂದ ತುಂಬಿಕೊಂಡಿರುತ್ತವೆ. ಆದರೆ ಸೀಮೆಬದನೆಯು ಒಂದೇ ಬೀಜವುಳ್ಳದ್ದು. ಅಂತೂ ಅದರ ಕಾಯಿ ಬಿಡುವ ಹಾಗೂ ಬಿಟ್ಟು ಮಾನವ ಕುಲವು ತಿನ್ನುವಂತೆ ಮಾಡುವ ಈ ವರ್ತನೆ ಆಪ್ಯಾಯಮಾನವೇ. ಕಾಯಿಗಳು ವಿವಿಧ ಆಕಾರ ಮತ್ತು ಗಾತ್ರಗಳ ಹಲವಾರು ಬಗೆಗಳು ಜಗತ್ತಿನಾದ್ಯಂತ ಹಬ್ಬಿಕೊಂಡಿವೆ.
ಈ ಸಸ್ಯದ ಈ ಆಹಾರ ಸೇವನೆಯು ಕೇವಲ ಕಾಯಿಗಳಿಗೆ ಮಾತ್ರವೇ ಸೀಮಿತಗೊಂಡಿಲ್ಲ. ನಮಗೆಲ್ಲಾ ಅದರ ಕಾಯಿಗಳನ್ನು ತಿಂದು ಅಷ್ಟೇ ಗೊತ್ತು. ಆದರೆ ಅದರ ಎಲೆಗಳು, ಎಳೆಯ ಬಳ್ಳಿಯನ್ನೂ ಕೂಡ ತಿನ್ನಬಹುದು. ಸಾಲದಕ್ಕೆ ಬೇರೂ ಕೂಡ ವಿಶಿಷ್ಠವಾಗಿದೆ. ಇದೊಂದು ಬಹು ವಾರ್ಷಿಕ ಬಳ್ಳಿಯಲ್ಲವೇ? ಹಾಗಾಗಿ ಒಂದು ವರ್ಷದ ನಂತರದಲ್ಲಿ ಇದರ ಬೇರುಗಳು ಉಬ್ಬಿಕೊಂಡು ಗಡ್ಡೆಗಳಂತಾಗುತ್ತವೆ. ಈ ಗಡ್ಡೆಗಳನ್ನೂ ತಿನ್ನಬಹುದು. ಇದರ ತವರು ನೆಲೆಯಾದ ಮೆಕ್ಸಿಕೊ ಮತ್ತು ಕೇಂದ್ರ ಅಮೆರಿಕದಲ್ಲಿ ಪೂರ್ವದಿಂದಲೂ ಈ ಬಗೆ ಬಗೆಯ ಸಸ್ಯ ಭಾಗಗಳನ್ನು ಆಹಾರವಾಗಿ ಬಳಸುತ್ತಾರೆ. ಇದರ ಬೇರು ಗಡ್ಡೆಗಳು (Tubers-ಟ್ಯೂಬರ್ಸ್) ಪ್ರತಿಶತ 65-75ರಷ್ಟು ಕಾರ್ಬೋಹೈಡ್ರೇಟನ್ನು ಹೊಂದಿದ್ದು ಸಾಕಷ್ಟು ಶಕ್ತಿಯನ್ನು ಒದಗಿಸುವ ಮೂಲಗಳಾಗಿವೆ. ಇಡೀ ಸಸ್ಯದ ವಿವಿಧ ಆಹಾರಾಂಶಗಳ ವಿವರಗಳನ್ನು ಮುಂದೆ ನೋಡೋಣ.
ಕಾಯಿಗಳನ್ನು ಹಸಿಯಾಗಿಯೂ, ಉಪ್ಪಿನಕಾಯಿ ಹಾಕಿಕೊಂಡೋ ಅಥವಾ ಬೇಯಿಸಿ, ಹುರಿದು ತಿನ್ನಬಹುದು. ಇದರ ಬಳಕೆಯಿರುವ ಪ್ರದೇಶಗಳಲೆಲ್ಲಾ ಇದರ ಕಾಯಿಯ ಬಳಕೆಯೇ ಹೆಚ್ಚು ಜನಪ್ರಿಯ. ಇದು ಸಾಕಷ್ಟು ನಾರಿನಾಂಶವನ್ನು ಹೊಂದಿದ್ದು, ಕಡಿಮೆ ಶಕ್ತಿಯನ್ನು ಒದಗಿಸಿವ ತರಕಾರಿ. ಪ್ರತಿ 100 ಗ್ರಾಂ ಕಾಯಿಯು ಕೇವಲ 20-30 ಕಿಲೋ ಕ್ಯಾಲರಿ ಶಕ್ತಿಯನ್ನಷ್ಟೇ ಒದಗಿಸುತ್ತದೆ. ಆದರೆ ಅದರ ಎಳೆಯ ರೆಂಬೆ-ಕೊಂಬೆಗಳೂ ಇನ್ನೂ ಹೆಚ್ಚು ಶಕ್ತಿಯನ್ನು ಒದಗಿಸುಬಲ್ಲವಾಗಿವೆ (50-60ಕಿಲೋ ಕ್ಯಾಲರಿ/100ಗ್ರಾ). ಆಲೂವಿನಂತೆಯೇ ರುಚಿ ಇರುವ ಅದರ ಬೇರಿನ ಗಡ್ಡೆಗಳೂ ಇನ್ನೂ ಹೆಚ್ಚು ಶಕ್ತಿಯನ್ನು (65-80 ಕಿಲೋ ಕ್ಯಾಲರಿ/100ಗ್ರಾಂ) ಒದಗಿಸಬಲ್ಲವು. ಕಾಯಿಗಳಲ್ಲಿ 1-2% ನಷ್ಟು ಪ್ರೊಟೀನು ಮತ್ತು ಕೇವಲ 0.25 % ನಷ್ಟು ಕೊಬ್ಬು ದೊರೆಯುತ್ತದೆ. ಸೀಮೆ ಬದನೆಯ ಎಲೆಗಳು ಹೆಚ್ಚು ಪ್ರೊಟೀನುಯುಕ್ತವಾಗಿವೆ. ಪ್ರತಿಶತ 2.5 ರಿಂದ 4.88 ರಷ್ಟು ಪ್ರೊಟೀನನ್ನು ಎಲೆಗಳು ಒದಗಿಸುತ್ತವೆ.
ಅನೇಕ ರೈತರು ಇದನ್ನು ಕೇವಲ ವಾರ್ಷಿಕ ಬೆಳೆಯಾಗಿ ಬೆಳೆದು, ಮರು ವರ್ಷದಲ್ಲಿ ಮತ್ತೆ ನಾಟಿ ಮಾಡುವ ಅಥವಾ ಬೆಳೆಯನ್ನು ಬದಲಿಸುವುದರಿಂದ ಬೇರಿನ ಉಪಯೋಗವನ್ನು ಪಡೆಯುತ್ತಿಲ್ಲ. ಬೇರುಗಳು ಎರಡನೆಯ ವರ್ಷದಿಂದ ಗಡ್ಡೆಗಳಲ್ಲಿ ಆಹಾರ ಸಂಗ್ರಹಿಸಿಕೊಡುವುದನ್ನು ಬಹು ಪಾಲು ರೈತ ಸಮುದಾಯ ಬಳಸುತ್ತಲೇ ಇಲ್ಲ. ಕೇವಲ ಕಾಯಿಯನ್ನು ಅನೇಕ ಬಗೆಗಳಲ್ಲಿ ವಿವಿಧ ತಿನಿಸುಗಳಲ್ಲಿ ಬಳಸಲಾಗುತ್ತದೆ. ಪಲ್ಯಗಳು, ಸಾಂಬಾರು-ಸಾರು, ಅಲ್ಲದೆ ಸಲಾಡ್/ಕೋಸಂಬರಿಗಳಲ್ಲೂ ಸಾಮಾನ್ಯವಾಗಿ ಬಳಸುತ್ತಾರೆ. ಈ ಸಸ್ಯದ ವಿವಿಧ ಸಸ್ಯ ಭಾಗಗಳನ್ನು ಆಹಾರ ಮತ್ತು ಔಷಧಗಳಲ್ಲಿ ಬಳಸುವ ಅನೇಕ ಸಂಶೋಧನೆಗಳು ಹಲವಾರು ದೇಶಗಳಲ್ಲಿ ನಡೆದಿವೆ. ಅವುಗಳ ಹರಹೂ ದೊಡ್ಡದಿದ್ದು, ಮುಖ್ಯವಾಗಿ ಅನೇಕ ದೀರ್ಘಕಾಲಿಕ ಕಾಯಿಲೆಗಳ ನಿವಾರಣೆಯ ಪರಿಹಾರೋಪಾಯಗಳನ್ನು ಕಂಡುಕೊಂಡಿದ್ದಾರೆ. ಒಂದಂತೂ ಜನಪ್ರಿಯ, ಎಂದರೆ ಅದರಲ್ಲಿನ ನಾರಿನಂಶವು ಹೆಚ್ಚಿರುವುದರಿಂದ ಹಾಗೂ ಸಕ್ಕರೆಯ ಅಂಶವು ಕಡಿಮೆ ಇರುವುದರಿಂದ ಮಧುಮೇಹಿಗಳಿಗೆ ಉತ್ತಮ ತರಕಾರಿ.
ಈ ಸೀಮೆಯ ಬದನೆಯು, ಹೊಂದಿಕೊಂಡ ನೆಲದಲ್ಲಿ ಆಕರ್ಷಕ ಕಾಯಿಗಳ ಆಪ್ಯಾಯಮಾನವಾದ ಇಳುವರಿಯಿಂದ ಜನಪ್ರಿಯವಾಗಿದ್ದರೂ ಅನೇಕ ಕಡೆಗಳಲ್ಲಿ ಇದು ಪರಿಚಯವಿಲ್ಲ. ಸಾಲದಕ್ಕೆ ಪರಿಚಯ ಇರುವೆಡೆಗಳಲ್ಲೂ ಇದರ ಬಗೆ ಬಗೆಯ ಸಸ್ಯಭಾಗಗಳ ಬಳಕೆಯೂ ಜನಪ್ರಿಯವಿಲ್ಲ. ಆದರೆ ಬಳಸುತ್ತಿರುವ ಪ್ರದೇಶಗಳಲ್ಲಿ ಉದಾಹರಣೆಗೆ – ಬೆಂಗಳೂರು ಸುತ್ತ-ಮುತ್ತ – ವರ್ಷವಿಡೀ ತರಕಾರಿ ಅಂಗಡಿಗಳಲ್ಲಿ ಕಾಣುತ್ತದೆ. ಅಂತಹ ಕಡೆಗಳಲ್ಲಿ ಅಂತೂ ಹೆಚ್ಚು ಬೇಯಿಸಲು ಶ್ರಮ ಬೇಡದ, ಸುಲಭ ತಯಾರಿಯ ತಿನಿಸುಗಳಿಗೆ ಸೀಮೆ ಬದನೆಯು ಹೆಸರನ್ನು ಉಳಿಸಿಕೊಂಡಿದೆ.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್
ಸೀಮೆಬದನೆ ಅಥವಾ ಸೀಮೆಸೌತೆ ಇತ್ತೀಚಿನ ವರ್ಷಗಳಲ್ಲಿ ತಿಂದೇ ಇಲ್ಲ. ಆದರೂ ಇದರ ವಿವರಗಳನ್ನು ಓದಿ ಮತ್ತೆ ತಿನ್ನುವ ಮನಸಾಗಿದ್ದು ನಿಜ. ತುಂಬಾ ವಿವರಣೆ ನೀಡಿದ್ದೀರಿ. ಈ ತರಕಾರಿಯನ್ನು ಕೇರಳದಲ್ಲಿ ಅಷ್ಟಾಗಿ ಕಂಡಿಲ್ಲ. ಬಹುಶಃ ಇದರ ಬಳಕೆ ಕಡಿಮೆಯೇ ಇಲ್ಲಿ ಬೆಳೆಯುವವರು ಕೂಡ ಕಡಿಮೆಯೇ .. ಸೌತೆ ಪಡುವಲ ಹಾಗಲಕಾಯಿ ಕುಂಬಳಗಳ ಬಳಕೆ ಜಾಸ್ತಿ. ನಿಮ್ಮ ಈ ಲೇಖನ ಸೀಮೆಸೌತೆಯ ವಿವರ ತಿಳಿಯಲು ಅನುಕೂಲವಾಯಿತು…
ನಿಜಕ್ಕೂ ಸೀಮೆ ಬದನೆಕಾಯಿ ಬಗ್ಗೆ ಉತ್ತಮ ಮಾಹಿತಿ ನೀಡಿರುವಿರಿ ಧನ್ಯವಾದಗಳು ಸರ್