You are currently viewing ಬೆಳೆವ ನೆಲವನ್ನೂ, ಬೆಳೆದ ಜನರನ್ನೂ ಶ್ರೀಮಂತವಾಗಿಸುವ ನೆಲಗಡಲೆ

ಬೆಳೆವ ನೆಲವನ್ನೂ, ಬೆಳೆದ ಜನರನ್ನೂ ಶ್ರೀಮಂತವಾಗಿಸುವ ನೆಲಗಡಲೆ

 ಇದೇ ತಿಂಗಳ ಮೇ 1 ರಂದು ನೆಲಗಡಲೆ ಸಸ್ಯದ ಕುರಿತು ವಿಶೇಷ ಸುದ್ದಿಯೊಂದು ಪ್ರಕಟವಾಯಿತು. ಮೊಟ್ಟ ಮೊದಲ ಬಾರಿಗೆ ಅತ್ಯಂತ ಹೆಚ್ಚಿನ ನಿಖರತೆಗಳೊಂದಿಗೆ ಆಹಾರದ ಸಸ್ಯವೊಂದರ ತಳಿವಿಶೇಷದ ಆನುವಂಶಿಕತೆಯ ಸಂಶೋಧನಾ ಲೇಖನವನ್ನು ವಿಖ್ಯಾತ ವಿಜ್ಞಾನ ಪತ್ರಿಕೆ “ನೇಚರ್” ಪ್ರಕಟಿಸಿತ್ತು. ಸಾಕಷ್ಟು ಸಂಕೀರ್ಣವಾದ  ಆನುವಂಶಿಕ ವಿವರಗಳ ಒಳಗೊಂಡ ಅಪರೂಪದ ಲೇಖನವನ್ನು ಸಿದ್ಧಪಡಿಸಲು ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳ ವಿಜ್ಞಾನಿಗಳು ಸಂಶೋಧನೆಯನ್ನು ನಡೆಸಿದ್ದರು. ಈ ಹಿಂದೆಯೂ ಆನುವಂಶಿಕ ವಿವರಗಳು ಅನೇಕ ಸಸ್ಯಗಳ ಕುರಿತಂತೆ ಪ್ರಕಟಗೊಂಡಿದ್ದರೂ ಈ ಲೇಖನಕ್ಕೆ ಒಂದು ವಿಶೇಷತೆಯಿತ್ತು. ನೆಲಗಡಲೆ ಅಥವಾ ಶೇಂಗಾ ಬೆಳೆಯ ಸಸ್ಯಬೆಳವಣಿಗೆ, ಇಳುವರಿ ಮುಂತಾದವನ್ನು ನಿರ್ವಹಿಸುವ ಸಸ್ಯಜೀವಿಕೋಶದ ಸೂಕ್ಷ್ಮ ವಿವರಗಳ ತಿಳಿವಳಿಕೆಯನ್ನು ಜೀನುಗಳು ನಿರ್ವಹಿಸುವ ವಿವರಗಳ ಜಿನೋಮಿಕ್ ಇತಿಹಾಸವು ಸಾಕಷ್ಟು ಸಂಕೀರ್ಣವಾದ ವಿವರಗಳನ್ನು ಬೇಡುತ್ತದೆ. ಆದರೂ ಪ್ರಸ್ತುತ ತಿಳಿವಳಿಕೆಯಿಂದ ಬೆಳೆಯ ನಿರ್ವಹಣೆಯಲ್ಲಿ ಕಾಡುವ ಕೀಟಗಳ ಪ್ರತಿರೋಧಿಸುವ ಗುಣ, ಜೊತೆಗೆ ಪ್ರಮುಖ ರೋಗಾಣುಗಳ ತಡೆಯುವಿಕೆ ಮುಂತಾದ ಮಾಲೆಕ್ಯುಲಾರ್ ಸಂಗತಿಗಳು ನೆಲಗಡಲೆಯ ಕುರಿತಂತೆ ಲಭ್ಯವಾದ ಸಂತೋಷವನ್ನು ವಿಜ್ಞಾನಿಗಳು ಹಂಚಿಕೊಂಡಿದ್ದರು. ಇದರ ಮತ್ತಷ್ಟು ವಿವರಗಳನ್ನು ಮುಂದೆ ನೋಡೋಣ.

            ಈ ಸುದ್ದಿಯು ನೆಲಗಡಲೆಯಿಂದ ಮನುಕುಲ ಮತ್ತು ಬೆಳೆದ ನೆಲ ಎರಡೂ ಶ್ರೀಮಂತವಾದ ಕಥನಗಳನ್ನು ಹಂಚಿಕೊಳ್ಳುವ ಕಾರಣವನ್ನು ಸಸ್ಯಯಾನಕ್ಕೆ ಪ್ರೇರೇಪಿಸಿದೆ. ನೆಲಗಡಲೆಯನ್ನು ಶೇಂಗಾ, ಪೀ-ನಟ್, ಹಾಗೂ ಗ್ರೌಂಡ್-ನಟ್ ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ. ಇದರಲ್ಲಿ ನಟ್ ಎನ್ನಲು ಯಾವುದೇ ಕಾರಣಗಳಿಲ್ಲ! ಏಕೆಂದರೆ ಕೊಕೊನಟ್, ಅರೆಕಾನಟ್ ಗಳಂತೆ ಇದೇನೂ ನಟ್ ಅಲ್ಲ.  ಕೆಲವೊಮ್ಮೆ ಕಡಲೆಕಾಯಿ ಎಂದರೂ ಸಹಾ, ಹುರಿಗಡಲೆಯನ್ನು ತಯಾರಿಸುವ ಕಡಲೆ ಎಂಬ ಬೇರೆಯದೇ ಆದ ಬೆಳೆಯೂ ಇದೆ. ಸಣ್ಣ-ಪುಟ್ಟ ಗಳಿಕೆ ಅಥವಾ ಖರ್ಚಿಗೆ “ಅದೆಲ್ಲಾ ಪೀ-ನಟ್ಸ್” ಎಂಬ ನುಡಿಗಟ್ಟೂ ಇರುವಾಗ ಶ್ರೀಮಂತಿಕೆ ಪ್ರಶ್ನೆ ಎಲ್ಲಿ ಎಂದು ನಿಮಗೆ ಅನ್ನಿಸಿರಬಹುದು. ನಿಜವಾದ ಸಂಗತಿಯೆಂದರೆ ಪೀ-ನಟ್ ಅಥವಾ ನೆಲಗಡಲೆಯ ಕಥಾನಕವನ್ನು ಹೇಳುವುದೆಂದರೆ ಶ್ರೀಮಂತ ರಾಷ್ಟ್ರವಾದ ಅಮೆರಿಕಾದ ಕಥೆಯನ್ನೂ ಹೇಳಬೇಕಾಗುತ್ತದೆ. ಅಮೆರಿಕಾದ ಸಂಸ್ಕೃತಿಯನ್ನು ಜೊತೆಗೆ ಆರ್ಥಿಕತೆಯನ್ನೂ ಶ್ರೀಮಂತವಾಗಿಸಿದ ಕೀರ್ತಿ ಪುಟ್ಟ ನೆಲಗಡಲೆ ಸಸ್ಯಕ್ಕಿದೆ. ಎಳೆಯ ವಯಸ್ಸಿನಲ್ಲಿ ಬೇಯಿಸಿದ ಶೇಂಗಾ ಮಾರುವ ಹುಡುಗನೊಬ್ಬ ಅದೇ ನೆಲಗಡಲೆಯನ್ನೇ ತನ್ನ ಚುನಾವಣಾ ಪ್ರಚಾರದಲ್ಲಿ ಸೂತ್ರಧಾರನನ್ನಾಗಿಸಿಕೊಂಡು ಅಮೆರಿಕಾ ಸಂಸ್ಥಾನದ ಅಧ್ಯಕ್ಷನಾಗುವರೆಗೂ ಬೆಳೆದ ಕಥೆ ಕೂಡ ಇದೆ.

            ನೆಲಗಡಲೆಯು ಒಂದು ಬೆಳೆಯಾಗಿ ಸಹಸ್ರಾರು ವರ್ಷಗಳಿಂದಲೂ ಬಳಕೆಯಲ್ಲಿದೆ. ಕ್ರಿ.ಪೂ. 1500ರಲ್ಲೇ ಪೆರುವಿನ ಇಂಕಾ ಸಮುದಾಯವು ನೆಲಗಡಲೆಯನ್ನು ತ್ಯಾಗದ ಸಮರ್ಪಣೆಯಾಗಿ ಬಳಸುತ್ತಿದ್ದಿತು. ಜೊತೆಗೆ ತಾವು ರಕ್ಷಿಸಿಟ್ಟ ಶವಗಳ ಜೊತೆಗೆ ಆತ್ಮಜೀವನಕ್ಕೆಂದು ನೆಲಗಡಲೆಯನ್ನು ಇಡುತಿದ್ದುದು ತಿಳಿದುಬಂದಿದೆ. ಐರೋಪ್ಯರಿಗೆ ಮೊಟ್ಟ ಮೊದಲು ಬ್ರೆಜಿಲ್ ನಲ್ಲಿ ಕಂಡು ಬಂದ ನೆಲಗಡಲೆ ಬೆಳೆಯು ಅಲ್ಲಿಂದ ಸ್ಪೆಯಿನ್ ದೇಶಕ್ಕೆ ಪರಿಚಯವಾಯಿತು. ಮುಂದೆ ವಹಿವಾಟಿನ ಮೂಲದಲ್ಲಿ ಏಶಿಯಾ ಹಾಗೂ ಆಫ್ರಿಕಾಗೆ ನೆಲಗಡಲೆಯು ತಲುಪಿತೆಂದು ತಿಳಿಯಲಾಗಿದೆ. ನೆಲಗಡಲೆಯು ಲೆಗ್ಯೂಮ್ ಸಂಕುಲದ ಸಸ್ಯ ಹಾಗಾಗಿ ಇದರಿಂದ ನೆಲಕ್ಕೆ ನಿಸರ್ಗದ ಸಾರಜನಕವು ಸುಲಭವಾಗಿ ದಕ್ಕಿ ನೆಲದ ಆರೋಗ್ಯವು ಸುಧಾರಿಸುತ್ತದೆ. ಅಮೆರಿಕೆಯ ಇತಿಹಾಸದಲ್ಲಿ ಅಂತೂ ನೆಲಗಡಲೆಯ ಉದ್ದಿಮೆಯು ಮಹತ್ತರವಾದ ಪಾತ್ರವನ್ನು ವಹಿಸಿದೆ. ಅಲ್ಲಿನ ಲಾಭಕ್ಕೂ ಕಾರಣವಾಗಿದೆ. ನೆಲ ಹಾಗೂ ಜನರ ಬದುಕನ್ನು ಶ್ರೀಮಂತವಾಗಿಸಿದೆ.

            ನೆಲಗಡಲೆಯನ್ನು ಅರಾಖಿಸ್ ಹೈಪೊಜಿಯಾ (Arachis hypogaea) ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯಲಾಗುತ್ತದೆ. ಇದೊಂದು ನಿಸರ್ಗದಲ್ಲೇ ಎರಡು ಪ್ರಭೇದಗಳ ಸಂಕರದಿಂದಾದ ಹೈಬ್ರಿಡ್ ಪ್ರಭೇದ! Arachis duranensis ಮತ್ತು Arachis ipaensis ಎಂಬ ಎರಡು ವನ್ಯ ಪ್ರಭೇದಗಳು ತುಂಬಾ ಅಪರೂಪವಾದ ರೀತಿಯಲ್ಲಿ ಸಂಕರಗೊಂಡು Arachis hypogaea ಆಗಿ ವಿಕಾಸಗೊಂಡಿದೆ. ನೆಲಗಡಲೆಯನ್ನು ಅಲ್ಲೊಟೆಟ್ರಾಪಾಡ್ (allotetraploid) ಸಸ್ಯವೆಂದು ಗುರುತಿಸಲಾಗಿದೆ. ಹಾಗೆಂದರೆ ಯಾವುದೇ ಸಸ್ಯದಲ್ಲಿ ಅಥವಾ ಜೀವಿಯಲ್ಲಿ ನಾಲ್ಕು ಸಂಪೂರ್ಣ ಸೆಟ್‍ ಗಳ ಜೀನೋಮ್ ಇರುತ್ತದೆ. ಅವುಗಳಲ್ಲಿ ಎರಡು ಜೊತೆಯಾಗಿದ್ದು ಅವುಗಳೆರಡೂ ಬೇರೆ, ಬೇರೆ ಪ್ರಭೇದದಿಂದಲೇ ಬಂದವುಗಳಾಗಿರುತ್ತವೆ. ಇಂತಹಾ ಸಾಧ್ಯತೆಯು ಸಹಜವಾಗಿ ಹೈಬ್ರಿಡ್‍ಗಳಲ್ಲಿ ಮಾತ್ರ ಇರುತ್ತದೆ.  ಸಹಜವಾದ ಪ್ರಭೇದ ಎನ್ನಿಸಿರುವ ನೆಲಗಡಲೆಯೂ ಕೂಡ ವಿಕಾಸದಲ್ಲಿಯೇ ಹೈಬ್ರಿಡ್ ಪ್ರಭೇದವಾಗಿ ಹುಟ್ಟಿದ್ದು ಇಲ್ಲಿಯೂ ಹೀಗೆ ಅಲ್ಲೊಟೆಟ್ರಾಪಾಡ್‍ ಆಗಿದೆ. ಇದರಲ್ಲೂ ಎರಡು ಜೊತೆ ಬೇರೆ ಬೇರೆ ಪ್ರಭೇದದಿಂದಲೇ ಬಂದ ಸೆಟ್‍ ಗಳಾಗಿವೆ. ಸಾಮಾನ್ಯವಾಗಿ ಹೈಬ್ರಿಡ್‍ ಗಳು ಬೀಜಗಳಾಗಿ ಬಳಸಲು ಬರುವುದಿಲ್ಲ. ನಪುಂಸಕವಾದ ಅವುಗಳನ್ನು ಬಿತ್ತಲಾಗದು. ಅಚ್ಚರಿ ಎಂದರೆ ನೆಲಗಡಲೆಯಲ್ಲಿ ಹಾಗಾಗಿಲ್ಲ. ಹೈಬ್ರಿಡ್ ಆದರೂ ಸಹಾ ಮತ್ತೆ ಬಿತ್ತಲೂ ಸಾಧ್ಯವಿದೆ. ಅಂದರೆ ಇದರಲ್ಲಿ ಕ್ರೊಮೋಸೋಮುಗಳು ಇದ್ದಕ್ಕಿಂದಂತೆ ಎರಡು ಪಟ್ಟಾಗುವ ಸಹಜತೆಯನ್ನು ಸಾಧಿಸಿವೆ. ಇದೊಂದು ಅಪರೂಪದ ಸಾಧ್ಯತೆಯಾಗಿದ್ದು  Spontaneous Doubling of Chromosomes  ಎಂದು ಕರೆಯಲಾಗುತ್ತದೆ. ಹಾಗಾದಾಗ ಹೈಬ್ರಿಡ್‍ ಗಳನ್ನೂ ಸಹಜವಾಗಿ ಬಿತ್ತಲು ಸಾಧ್ಯವಾಗುತ್ತದೆ.   ಹಾಗಾಗಿ ಆನುವಂಶಿಕ ವಿವರಗಳ ಪೂರ್ಣ ಕಥನವನ್ನು ಕಟ್ಟಲು ಎರಡೂ ಪ್ರಭೇದಗಳನ್ನು ಬೇರೆ ಬೇರೆಯಾಗಿಯೇ ಜೀನುಗಳ ಅರ್ಥೈಸಿಕೊಂಡು ನಂತರವೇ ಸದ್ಯ ಬೆಳೆಯುತ್ತಿರುವ ಪ್ರಭೇದಕ್ಕೆ ಸಮೀಕರಿಸಿ ಅರಿಯಬೇಕಾಯಿತು. ಈ ದೃಷ್ಟಿಯಲ್ಲಿ ಸುಮಾರು ಮೂರು ಪ್ರಭೇಧಗಳ ವಿವರಗಳ ಪಡೆಯುವಷ್ಟು ಸಮಯವನ್ನು ವ್ಯಯಿಸಿ ಕಡೆಗೆ ಒಂದು ಪ್ರಭೇದದ ಕುರಿತ ಅಂತಿಮ ತೀರ್ಮಾನವನ್ನು ಪಡೆಯಲಾಗಿದೆ. ಹಾಗಾಗಿ ತುಂಬಾ ಸಂಕೀರ್ಣವೂ ಹಾಗೂ ಉದ್ದವಾದ ಜಿನೊಮಿಕ್ ವಿವರಗಳನ್ನು ಶೇಂಗಾ ಬೆಳೆಯಲ್ಲಿ ಪಡೆದು ಅರಿಯಲಾಗಿದೆ. ಹೆಚ್ಚೂ -ಕಡಿಮೆ ಮಾನವ ತಳಿ ವಿವರಗಳಷ್ಟೇ ಉದ್ದವಾದ ಸಂಗತಿಗಳು ನೆಲಗಡಲೆಯ ಆನುವಂಶಿಕ ತಳಿ ವಿವರಗಳನ್ನು ಒಳಗೊಂಡಿವೆ. ಸರಿ ಸುಮಾರು 3 ದಶಲಕ್ಷ ಡಿ.ಎನ್.ಎ. ಬೇಸ್ ಜೋಡಿಗಳಲ್ಲಿ ನೆಲಗಡಲೆಯ ಜಿನೋಮಿಕ್ ವಿವರಗಳಿವೆ. ಇದರಿಂದಾಗಿ ಸಸ್ಯವಿವರಗಳಲ್ಲಿ ಕೀಟ ಹಾಗೂ ರೋಗ ತಡೆಯುವ ಕುರಿತಂತೆ ಜೀವಿಕೋಶಗಳಲ್ಲಿ ಆಗುವ ಸೂಕ್ಷ್ಮಾತಿಸೂಕ್ಷ್ಮ ವಿವರಗಳೊಂದಿಗೆ ಅರಿಯಲಾಗಿದೆ.

            ನೆಲಗಡಲೆಯು ಫ್ಯಾಬೇಸಿಯೆ ಸಸ್ಯ ಕುಟುಂಬದ ಅತ್ಯಂತ ಪ್ರಮುಖ ವಾಣಿಜ್ಯ ಬೆಳೆ. ಗ್ರೌಂಡ್‍-ನಟ್, ಪೀ-ನಟ್ ಎನ್ನುವ ನೆಲಗಡಲೆಯು ಬಟಾಣಿ ಅಥವಾ ಅವರೆಯಂತೆ ದ್ವಿದಳ ಸಸ್ಯ. ಸಾಕಷ್ಟು ಪ್ರೊಟೀನ್ ಜೊತೆಗೆ ಎಣ್ಣೆಯನ್ನೂ ಒಳಗೊಂಡಿರುವ ಸಸ್ಯ. ಸುಮಾರು ಮೂರು ಮೂರೂವರೆ ತಿಂಗಳಲ್ಲಿ ತನ್ನ ಜೀವನ ಚಕ್ರವನ್ನು ಮುಗಿಸುವ ಸಸ್ಯವನ್ನು ಬಲ್ಲವರು, ಬುಡದಲ್ಲಿ ಕಾಣುವ ಹಳದಿ ಹೂವುಗಳನ್ನು ಕಂಡಿರುತ್ತೀರಿ. ಹೂವುಗಳು ನೆಲದ ಮೇಲಿನ ಸಸ್ಯ ಭಾಗದಲ್ಲಿ, ಆದರೆ ಕಾಯಿಗಳು ಅದು ಹೇಗೆ ನೆಲದೊಳಗೆ ಬಿಟ್ಟಿವೆ, ಎಂದು ಅಚ್ಚರಿ ಪಟ್ಟಿರಬಹುದು. ನಿಜ, ಇಲ್ಲೊಂದು ಅಚ್ಚರಿಯ ಸಂಗತಿಯು ನಡೆಯುತ್ತದೆ. ಇದನ್ನು ಸಸ್ಯವಿಜ್ಞಾನದಲ್ಲಿ ಜಿಯೊಕಾರ್ಪಿ (Geocarpy)  ಎಂದು ಕರೆಯಲಾಗುತ್ತದೆ. ಅಂದರೆ ತೀರಾ ಅಪರೂಪ ಎನ್ನುವಂತೆ ಕೆಲವು ಸಸ್ಯಗಳಲ್ಲಿ ಹೂವುಗಳು, ನೆಲಮಟ್ಟಕ್ಕೆ ಹತ್ತಿರವಾಗಿ ಅರಳುತ್ತವೆ. ಹೂವಿನ ಹೆಣ್ಣು ಭಾಗವು ಅದರ ತಳದಲ್ಲಿ ಒಂದು ವಿಶೇಷವಾದ ತೊಟ್ಟನ್ನು ಹೊಂದಿದ್ದು,  ಹೂವಾಡಿದ ಮೇಲೆ ತೊಟ್ಟಿನ ಬೆಳವಣಿಗೆಯಾಗಿ ದಾರದಂತೆ ಬೆಳೆದು ಅದು ನೆಲದೊಳಗೆ ಹೋಗುತ್ತದೆ. ಇದನ್ನು ನೆಲಗಡಲೆ ಕಾಯಿಗಳಿಗೆ ಬುಡದಲ್ಲಿ ಬಾಲದಂತೆ ಕಾಣುವ ಭಾಗದಿಂದ ಗುರುತಿಸಬಹುದು. ಪರಾಗಸ್ಪರ್ಶವಾದ ಮೇಲೆ ಕಾಯಾಗುವ ಕ್ಷಣಕ್ಕೆ ನೆಲದೊಳಗೆ ಇಳಿದು, ಅಲ್ಲಿ ಬೆಳೆದು ಕಾಯಾಗುತ್ತವೆ. ಹಾಗಾಗಿ ಹೂಗಳೂ ಸಹಾ ಹೆಚ್ಚೂ ಕಡಿಮೆ ಬುಡದಲ್ಲಿದ್ದು, ನಂತರ ಕಾಣೆಯಾಗುತ್ತವೆ. ಆದ್ದರಿಂದ ಅದನ್ನು ಕಾಯಿಕಟ್ಟುವ ಅಥವಾ ಪೆಗ್ ಫಾಮರ್ಮೇಶನ್ ಸಮಯ ಎನ್ನುತ್ತಾರೆ. ಆಗ ನೆಲದ ತೇವಾಂಶವು ಪ್ರಮುಖವಾಗಿದ್ದು, ಕಾಯಿ ನೆಲದೊಳಕ್ಕಿಳಿಯಲು ಸಹಾಯವಾಗುವಂತೆ ಇರಬೇಕು. ಆದ್ದರಿಂದ ನೆಲಗಡಲೆಯಲ್ಲಿ ಕಾಯಿ ಕಟ್ಟುವ ಸಮಯವನ್ನು ಅದರ ನೀರಿನ ತುರ್ತು ಅಗತ್ಯದ ಸಮಯವೆಂದೂ ಗುರುತಿಸಲಾಗುತ್ತದೆ. ಇದನ್ನೆಲ್ಲವನ್ನೂ ಗಮನಿಸಿಯೇ ಕಾರ್ಲ್‍ ಲಿನೆಯಾಸ್ ಅವರು ಹೈಪೊಜಿಯಾ (hypogae)  ಅಂದರೆ ನೆಲದ ಒಳಗೆ  (Under the Earth) ಎಂದೇ ಕರೆದಿದ್ದಾರೆ.

            ಮನುಕುಲದ ಇತಿಹಾಸದ ನಿರ್ಮಿತಿಯಲ್ಲಿ ನೆಲಗಡಲೆಯು ಮಹತ್ತರವಾದ ಪಾತ್ರವನ್ನು ವಹಿಸಿದೆ. ತನ್ನ ತವರೂರು ದಕ್ಷಿಣ ಅಮೆರಿಕಾದಿಂದ ಯೂರೋಪಿನವರ ಸಮುದ್ರಯಾನಗಳಿಂದಾಗಿ ಹಳೆಯ ಪ್ರಪಂಚಕ್ಕೆ ಪರಿಚಯಗೊಂಡಿದೆ. ಮೆಕ್ಸಿಕೊ ಹಾಗೂ ಅಮೆರಿಕಾದಲ್ಲಿ ಹತ್ತೊಂಭತ್ತನೆಯ ಶತಮಾನದಲ್ಲಿಯೇ ಪರಿಚಯವಾಗಿದ್ದು ಪ್ರಮುಖವಾಗಿ ಅಮೆರಿಕಾದ ಸಾಂಸ್ಕೃತಿಕ ಹಾಗೂ ಆರ್ಥಿಕ ಅಲ್ಲದೆ ರಾಜಕೀಯ ಇತಿಹಾಸದಲ್ಲೂ ತನ್ನ ಛಾಪು ಮೂಡಿಸಿದೆ. ಕೃಷಿಯಲ್ಲಿ ಅಲ್ಲದೆ ಒಟ್ಟಾರೆ ಸಮುದಾಯಗಳಿಗೆ ನೆಲಗಡಲೆಯು ಜನಪ್ರಿಯವಾಗಿದ್ದು ಪ್ರಮುಖವಾದ ಘಟನೆಗಳನ್ನು ಒಳಗೊಂಡಿದೆ.  ಸಮುದಾಯಗಳೊಂದಿಗೆ ಬೆರೆಯಲೆಂದೇ ಜನಪ್ರಿಯಗೊಳಿಸಲು ಬಳಸಿರುವ  ಸಂಗತಿಗಳೂ ಕೂಡ ಭಿನ್ನವಾಗಿಯೇ ಇವೆ.

            1970ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕರುಳಿನ ಕರೆ ಸಿನಿಮಾದಲ್ಲಿ ನಾಯಕಿ ಕಲ್ಪನಾ “ಕಳ್ಳೇ ಕಾಯ್ ಕಳ್ಳೇ ಕಾಯ್..” ಎಂದು ಹಾಡುತ್ತಾ ಕಡಲೆ ಕಾಯಿಯನ್ನು ಮಾರುತ್ತಾ ಬರುವುದನ್ನು ಕೆಲವರು ನೋಡಿರಬಹುದು. ಮಾನವು ಸಮುದಾಯವು ಕೂಡ ನೆಲಗಡಲೆಯನ್ನು ಪರಿಣಾಮಕಾರಿಯಾಗಿ  ಒಪ್ಪಿಕೊಂಡು ತಿನ್ನಲು ಆರಂಭಿಸಿದ್ದೂ ಕೂಡ ಅಂತಹದೇ  ಬಗೆಯ ಮಾರಾಟದಿಂದ. ನೆಲಗಡಲೆಗೆ ಅಂತಹಾ ಜನಪ್ರಿಯತೆಯು ಬಂದಿದ್ದೇ ಹಾಗೆಯೇ! 1800ರ ಕೊನೆಯ ಭಾಗದಲ್ಲಿ ಅಮೆರಿಕಾದಲ್ಲೂ  ಸಹಾ ಒಂದು ಸರ್ಕಸ್ ಕಂಪನಿಯು ದೇಶಾದ್ಯಂತ ಸಂಚರಿಸುತ್ತಾ  ಅಲ್ಲಲ್ಲಿ ಟೆಂಟ್ ಹಾಕಿ ಪ್ರದರ್ಶಿಸುವಾಗ ನೆರೆದ ಜನರಿಗೆ “ಬಿಸಿ ಬಿಸಿ ಹುರಿದ ಪೀ-ನಟ್” ಮಾರುವ ಮೂಲಕವೇ ಜನಪ್ರಿಯಗೊಂಡಿತ್ತು.  ನಟಿ ಕಲ್ಪನಾ ಅವರ ನಟನೆಯ ಹಾಡಿನಲ್ಲೂ ನೆಲಗಡಲೆಯು “ಬೆಂಗಳೂರು ಕರಗದ, ಬಸವನ ಪರಿಷೆಯ… ಬಡವರ ಬಾದಾಮಿ”ಯಾಗಿದೆ. ಈಗಲೂ ರೈಲು, ಹೈವೇಗಳ ಟೋಲ್‍ಗಳಲ್ಲಿ, ಪಾರ್ಕಿನಲ್ಲಿ,  ಶಾಲಾ  ಆವರಣದ ಆಚೆಗೆ  ಶೇಂಗಾ ಮಾರುವುದನ್ನು ಕಾಣಬಹುದು. “ಟೈಂ -ಪಾಸ್ ಟೈಂ-ಪಾಸ್” ಎಂದು ಮಾರುತ್ತಾ ಬರುವುದನ್ನೂ ನೋಡಿರುತ್ತೇವೆ. “ಹೊಟ್ಟೆಗಿಲ್ಲದ ದಾಸರಿಗೆ ಹಸಿವು ನೀಗುವ ಕಳ್ಳೆ ಕಾಯ್…” ಎನ್ನುವ ಚರಣವು ಮುಂದೆ ಗಾಂಧಿ ತಾತ ಮೆಚ್ಚಿದ್ದ ಕಳ್ಳೇಕಾಯ್ ಎನ್ನುವ ಸಾಲೂ ಗಮನಾರ್ಹ..ಗಾಂಧಿ ಬರಿ ಮೆಚ್ಚಿದ್ದಷ್ಟೇ ಅಲ್ಲ, ಗಾಂಧಿ ಅನುಯಾಯಿಗಳು ಅವರ ಉಪವಾಸ-ಸತ್ಯಾಗ್ರಹಗಳ ನಡುವೆ ಸಹಾಯವಾಗಬಹುದಾದ ನೆಲಗಡಲೆಯ ಪೋಷಕಾಂಶಗಳ, ಜೀವಸತ್ವಗಳ ಕುರಿತು ಅಮೆರಿಕಾದ ಪೀ-ನಟ್ ವಿಜ್ಞಾನಿ ಜಾರ್ಜ್‍ ವಾಷಿಂಗ್ಟನ್ ಕಾರ್ವರ್ ಅವರನ್ನು ಸಂಪಕರ್ಕಿಸಿದ್ದರಂತೆ. ಅದಕ್ಕೆ ಕಾರ್ವರ್ ಕಳಿಸಿದ್ದ ಮಾಹಿತಿಗೆ ಗಾಂಧಿಯವರು ಕಾರ್ವರ್ ಅವರಿಗೆ ಪ್ರತಿಯಾಗಿ ವಂದನೆಯ ಪತ್ರಗಳನ್ನೂ ಬರೆದಿದ್ದರು. ಮಹಾತ್ಮರನ್ನು ಬೆಸೆಯುವಲ್ಲಿಯೂ ನೆಲಗಡಲೆಯು ತನ್ನ ಪಾತ್ರವಹಿಸಿತ್ತು.  ಸರಿ ಸುಮಾರು 1964ರಿಂದಲೂ ನಾಸಾದಲ್ಲಿ  ಅಂತರಿಕ್ಷಕ್ಕೆ ಉಡಾವಣೆಯ ಸಮಯದಲ್ಲಿ ಉಂಟುಮಾಡುವ  ಆತಂಕವನ್ನು ತಡೆಯಲೆಂದೇ “ಲಕ್ಕಿ ಪೀ-ನಟ್‍” ಎಂದು ಕರೆಯಲಾಗುವ ನೆಲಗಡಲೆಯನ್ನು ಹಂಚಲಾಗುತ್ತದೆ.  ನಾಸಾದಲ್ಲಿ ಪೀನಟ್ಯಶಸ್ವಿ ಉಡಾವಣೆಯ ಭಾಗವೇ ಆಗಿದೆ.  ಭಾರತದ ಮಂಗಳಯಾನ ಮಂಗಳಕರವಾಗಲೆಂದು ನಾಸಾ ಅಲ್ಲಿಂದ “ಪೀ-ನಟ್‍” ಕಳಿಸಿ ಶುಭ ಕೋರಿತ್ತಂತೆ! ನೆಲಕಡಲೆ ಯು  ನೆಲ ಬಿಟ್ಟು ಆಚೆಗಿನ ಬಾಹ್ಯಾಕಾಶಕ್ಕೂ ಯಶಸ್ಸಿನ ಪರಿಧಿಯನ್ನು ಹಂಚುತ್ತಿರುವುದು ಅಚ್ಚರಿಯೇ ಸರಿ!

            ಜಗದ್ವಿಖ್ಯಾತ ನಾಲ್ಕು ಜನ ಪ್ರಮುಖ ವ್ಯಕ್ತಿಗಳನ್ನು ಒಳಗೊಂಡಂತಹಾ ನೆಲಗಡಲೆಯ ಕಥನಗಳು  ಐತಿಹಾಸಿಕವಾದ ಪ್ರಾಮುಖ್ಯತೆಯನ್ನು ಪಡೆದಿವೆ. ಕೃಷಿ ವಿಜ್ಞಾನಿ ಜಾರ್ಜ್‍  ವಾಷಿಂಗ್ಟನ್ ಕಾರ್ವರ್, ರಾಜಕಾರಣಿ ಹಾಗೂ ರೈತ ಜಿಮ್ಮಿ ಕಾರ್ಟರ್, ಉದ್ಯಮಿ  ಹೆನ್ರಿ  ಫೋರ್ಡ್‍  ಹಾಗೂ  ಮಹಾತ್ಮ ಗಾಂಧಿ,  ಇವರೇ ಆ ನಾಲ್ಕೂ ಜನ ಪ್ರಮುಖರಾದ ವ್ಯಕ್ತಿಗಳು.

            ಪೀ-ನಟ್ ಪಿತಾಮಹಾರೆಂದೇ ಖ್ಯಾತರಾದ ಜಾರ್ಜ್‍ ಮೂಲತಃ ಕಾರ್ವರ್ ಮನೆತನದಲ್ಲಿ ಗುಲಾಮರಾಗಿದ್ದ ದಂಪತಿಗಳ ಮಗ. ಹುಟ್ಟುವಾಗಲೇ ಅಪ್ಪನನ್ನು ಕಳೆದುಕೊಂಡಿದ್ದ ಜಾರ್ಜ್ ಅವರ ಅಮ್ಮ ಕೂಡ ಅಮೆರಿಕೆಯ ಅಂತರ್ಯುದ್ಧದ ಸಮಯದಲ್ಲಿ ಕಾಣೆಯಾಗಿದ್ದರು.  ಅನಾಥ ಮಗುವಾದ ಜಾರ್ಜ್‍ ಅವರನ್ನು ಮಾನವ ಪ್ರೀತಿಯ ಕಾರ್ವರ್ ಮನೆತನದ ಒಡತಿಯು ಸ್ವಂತ ಮಗನಂತೆ ಪ್ರೀತಿಯಿಂದ ಕಲಿಸಿ ಬೆಳೆಸುತ್ತಾರೆ.  ಮಗುವಾಗಿದ್ದಾಗಲೆ ಸಸ್ಯಪ್ರೀತಿಯನ್ನು ಬೆಳೆಸಿಕೊಂಡಿದ್ದ ಜಾರ್ಜ್‍ ಗೆ  ಗಿಡ-ಮರಗಳ ಆರೋಗ್ಯದ ಬಗ್ಗೆ ಅಪಾರ ತಿಳಿವು. ಬಾಲಕ ಜಾರ್ಜ್‍ ನನ್ನೇ ಅನೇಕರು ತಮ್ಮ ಕೈತೋಟದ, ಹೊಲ-ಗದ್ದೆಗಳ, ಸಸ್ಯೋದ್ಯಾನಗಳ ಆರೋಗ್ಯದ ಬಗ್ಗೆ ವಿಚಾರಿಸಿ ಸಲಹೆ ಪಡೆಯುತ್ತಿರುತ್ತಾರೆ. ಇಂತಹಾ ಅಪಾರ ಸಸ್ಯ ಪ್ರೇಮದ ಬಾಲಕನಿಗೆ ಕಾರ್ವರ್ ಮನೆತನದವರು ಶಿಕ್ಷಣ ಕೊಡಿಸಲು ಮುಂದಾಗಿ ಐಯಾವಾ ವಿಶ್ವವಿದ್ಯಾಲಯಕ್ಕೆ ಕೃಷಿ ಶಿಕ್ಷಣಕ್ಕೆ ಸೇರಿಸುತ್ತಾರೆ. ಇದು ಅವರ ಜೀವನದಲ್ಲಿ ಮಾತ್ರವಲ್ಲ, ಮನುಕುಲಕ್ಕೇ ದೊಡ್ಡ ವರವಾಯಿತು. ಮುಂದೆ 1896ರ ಸುಮಾರಿಗೆ ಐಯಾವಾ ತೊರೆದು ಅಲಬಾಮಾದ ಟಸ್ಕ್ಗೀ ವಿದ್ಯಾಲಯಕ್ಕೆ ಬಂದು ನೆಲೆಯಾಗುತ್ತಾರೆ. ಅದು ಬೂಕರ್ ವಾಷಿಂಗ್ಟನ್ ಸ್ಥಾಪಿಸಿದ ವಿಶ್ವವಿದ್ಯಾಲಯ. ಬಹುಶಃ ಅವರ ಜಾರ್ಜ್‍  ಹೆಸರಿಗೆ ವಾಷಿಂಗ್ಟನ್ ಸೇರಿಕೊಂಡದ್ದು ಆಗ! ಸಾಕಿದ ಕಾರ್ವರ್ ಹಾಗೂ ನೆಲೆಯೊದಗಿಸಿದ ವಾಷಿಂಗ್ಟನ್, ಅವರಿಂದ ಜಾರ್ಜ್‍ ವಾಷಿಂಗ್ಟನ್ ಕಾರ್ವರ್ ಎಂದು ಹೆಸರಾದದ್ದಲ್ಲದೆ ಜೀವನ ಪೂರ್ತಿ ಅಲ್ಲಿಯೇ ಇದ್ದು, ಬ್ರಹ್ಮಚಾರಿಯಾಗಿದ್ದು ಕೃಷಿ ಸಂಶೋಧನೆಯಲ್ಲಿ ಅದರಲ್ಲೂ ನೆಲಗಡಲೆ, ಹತ್ತಿ ಮುಂತಾದ ಬೆಳೆಗಳ ಕುರಿತು ತೀವ್ರವಾಗಿ ತೊಡಗಿಕೊಂಡಿದ್ದರು.

            ಅಮೆರಿಕೆಯಲ್ಲಿ ಆಗಿನ್ನೂ ನಮ್ಮಲ್ಲೀಗ ಇರುವಂತೆಯೇ  ನೆಲಗಡಲೆಯ ಬಿತ್ತು, ಕೀಳುವ ಕೊಯಿಲು ಮಾಡುವ ಕೆಲಸಗಳೆಲ್ಲವೂ ಕೈಯಿಂದಲೇ ಮಾಡಲಾಗುತ್ತಿದ್ದು, ನೆಲಗಡಲೆಯ ಉತ್ಪನ್ನಗಳಲ್ಲಿ ಅಷ್ಟೇನೂ ಒಳ್ಳೆಯ ಒಂದೇ ಸಮನಾದ ಗಾತ್ರದವುಗಳಿರದೇ ಅಂತಹಾ ಹೇಳಿಕೊಳ್ಳುವ ಬೆಲೆ ಸಿಗುತ್ತಿರಲಿಲ್ಲ. ಆಗ 1900ರ ಸುಮಾರಿಗೆ ಜಾರ್ಜ್‍ ವಾಷಿಂಗ್ಟನ್ ಕಾರ್ವರ್ ಅವರು ನೆಲಗಡಲೆಯ ಪರವಾಗಿ ನಿಂತದ್ದು ದೊಡ್ಡ ಕೊಡುಗೆ.

            ನೆಲಗಡಲೆಯಿಂದ ಮನುಕುಲದ ಬದುಕನ್ನು ಶಾಶ್ವತವಾಗಿ ಬದಲಿಸಿದ ಕೀರ್ತಿಯು ಜಾರ್ಜ್‍ ಅವರದ್ದು. ನೆಲಗಡಲೆಯು ಮನುಕುಲವನ್ನಷ್ಟೇ ಅಲ್ಲ ನೆಲದ ಬದುಕನ್ನೂ ಬದಲಿಸುವುದನ್ನು ಅರಿತು ಹತ್ತಿಯ ಅಥವಾ ಯಾವುದೇ ಒಂದೇ ಬೆಳೆಯಿಂದ ನೆಲಕ್ಕೆ ಬೇಕಾದ ಬೆಳೆ ಬದಲಾವಣೆಯ ಅನುಕೂಲಕ್ಕೆ ನೆಲಗಡಲೆಯು ಪರಿಹಾರವಾಗುವ ಸೂತ್ರವನ್ನು 1900 ರಿಂದ 1950 ಮಧ್ಯೆ ರೈತರಲ್ಲಿ ಶಾಶ್ವತವಾದ ತಿಳಿವನ್ನಾಗಿ ಮಾಡಿ, ಜೊತೆಗೆ ನೆಲಗಡಲೆಯಿಂದ ಸರಿ ಸುಮಾರು 300ಕ್ಕೂ ಹೆಚ್ಚು ಉತ್ಪನ್ನಗಳ ತಯಾರಿಯನ್ನು ಅನುಶೋಧಿಸಿ ಪ್ರಚಾರ ಪಡಿಸುತ್ತಾರೆ. ಪೀ-ನಟ್ ಕೇಕ್, ಮಿಲ್ಕ್, ಬಟರ್, ಅಲ್ಲದೆ ಸಿಪ್ಪೆಯಿಂದ ಕಾಗದ ತಯಾರಿಯನ್ನೂ ಉತ್ತೇಜಿಸುತ್ತಾರೆ. ನೆಲಗಡಲೆಯ ಉತ್ಪನ್ನಗಳು ಅಮೆರಿಕಾದ ಇತಿಹಾಸವನ್ನೇ ಬದಲಿಸಿದ್ದು ಈಗ ತಿಳಿದ ಸಂಗತಿಯೇ ಆಗಿದೆ. ಇದೀಗ ನಮ್ಮ ಕೃಷಿ ವಿಶ್ವವಿದ್ಯಾಲಯಗಳು ಮೌಲ್ಯವರ್ಧನೆ ಎಂದು ಈಗ 21ನೆಯ ಶತಮಾನದಲ್ಲಿ ಹೇಳುವ ಕೆಲಸವನ್ನು ಹೆಚ್ಚೂ ಕಡಿಮೆ ಒಂದು ಶತಮಾನದ ಹಿಂದೆಯೇ ಸಾಧಿಸಿದ್ದು ಜಾರ್ಜ್‍ ಅವರ ಕೊಡುಗೆ. ಅದೂ ನೆಲಗಡಲೆಯ ಬಳಕೆಯಿಂದ ಇಡೀ ಸಮುದಾಯವನ್ನು ಸುಧಾರಿಸುವಂತೆ ಮಾಡಿದ್ದು ಅತಿ ದೊಡ್ಡದು. ಏನನ್ನೂ ತಮ್ಮದಾಗಿಸಿಕೊಳ್ಳದೆ, ಜೀವಮಾನವಿಡೀ ನೆಲಗಡಲೆಯ ಕುರಿತು ಸೇವೆಗೈದುದರ ಫಲವಾಗಿ ಅವರನ್ನು ಜಗತ್ತು ಪೀ-ನಟ್ ಪಿತಾಮಹಾ ಎಂದೇ ಗೌರವಿಸಿದೆ. ಇಂದಿಗೂ ಅಮೆರಿಕಾದ ಒಡಲಲ್ಲಿ ನೆಲಗಡಲೆಯ ಕುರುಹುಗಳು ದೊಡ್ಡ ದೊಡ್ಡ ಉದ್ದಿಮೆಗಳಲ್ಲಿ ಬೆಳೆದಿರುವುದೇ ಸಾಕ್ಷಿ. ಅಮೆರಿಕಾದಲ್ಲಿ ಪೀ-ನಟ್ ಕೌನ್ಸಿಲ್ ಇದೆ, ಪೀ-ನಟ್ ಉದ್ದಿಮೆಗಳಿವೆ, ಪೀ-ನಟ್ ಅಧ್ಯಕ್ಷರನ್ನೂ ಆರಿಸಿಕೊಟ್ಟಿವೆ.  

            ಜಿಮ್ಮಿ ಕಾರ್ಟರ್ ಅಮೆರಿಕಾದ 39ನೆಯ ಅಧ್ಯಕ್ಷರಾಗಿ ಆರಸಿ ಬಂದರು. ಅವರೊಬ್ಬ ನೆಲಗಡಲೆಯ ಕೃಷಿಕ. ತಂದೆಯಿಂದ ಬಂದ ಕೃಷಿ ನೆಲವನ್ನು ನೆಲಗಡಲೆಯಿಂದ ಉದ್ದಿಮೆಯಾಗಿಸಿ, ನೆಲಗಡಲೆಯನ್ನೇ ಪ್ರಚಾರಗಳಿಗೂ ಬಳಸಿಕೊಂಡದ್ದು ನೆಲಗಡಲೆಯ ಕಥನವನ್ನು ಹಿರಿದಾಗಿಸಿದೆ. ಜಿಮ್ಮಿ ಕಾರ್ಟರ್ ಐದು ವರ್ಷದವರಿದ್ದಾಗ ಬೇಯಿಸಿದ ನೆಲಗಡಲೆಯನ್ನು ತಾವಿದ್ದ ಜಾರ್ಜಿಯಾ ರಾಜ್ಯದ ಪ್ಲೈನ್ ಪಟ್ಟಣದ ರಸ್ತೆಗಳಲ್ಲಿ ಹೊತ್ತು ಮಾರುತ್ತಿದ್ದರು. ನೆಲಗಡಲೆಯು ಅವರ ವೈಯಕ್ತಿಕ ಬದುಕನ್ನು ಅದೆಷ್ಟು ಆವರಿಸಿತ್ತೆಂದರೆ ಅವರ ವೈಯಕ್ತಿಕ ವೆಬ್ ಪುಟದಲ್ಲೂ ನೆಲಗಡಲೆಯ ರುಚಿ-ಪರಿಮಳ ತುಂಬಿಕೊಂಡಿದೆ. ಜಾರ್ಜಿಯಾ ತಾಂತ್ರಿಕ ಸಂಸ್ಥೆಯಲ್ಲಿ ಅಧ್ಯಯನದ ಬಳಿಕ ನೌಕಾ ಸೇವೆಯಲ್ಲಿದ್ದ ಜಿಮ್ಮಿ ಕಾರ್ಟರ್, 1953ರಲ್ಲಿ ತಂದೆಯ ಸಾವಿನ ನಂತರ ಪೂರ್ಣ ಪ್ರಮಾಣದ ಕೃಷಿಕರಾದರು. ನೆಲಗಡಲೆಯ ವಿವಿಧ ಮಗ್ಗಲನ್ನು ಉದ್ದಿಮೆಯಾಗಿಸುವಲ್ಲಿ ಅಪಾರ ಪ್ರೀತಿ ಪರಿಶ್ರಮದಿಂದ ಸಾಧಿಸಿದರು. ನೆಲಗಡಲೆಯನ್ನೇ ಮುಂದಿಟ್ಟುಕೊಂಡು ಚುನಾವಣೆಯನ್ನೂ ಎದುರಿಸಿ ಜನವರಿ, 1977ರಿಂದ ಜನವರಿ, 1981ರ ವರೆಗೂ ಅಮೆರಿಕಾ ಅಧ್ಯಕ್ಷರಾಗಿದ್ದರು. 1976ರ ಚುನಾವಣೆಯ ಕ್ಯಾಂಪೇನ್‍ಗಳ ಸಂದರ್ಭದಲ್ಲಿ ಬಳಸಲಾದ 13 ಅಡಿಗಳ ಎತ್ತರದ ನೆಲಗಡಲೆಯ ಬೃಹತ್ ಪ್ರತಿಮೆಯೊಂದನ್ನು ಈಗಲೂ ಜಿಮ್ಮಿ ಕಾರ್ಟರ್ ನೆಲೆಯಾಗಿರುವ ಪ್ಲೈನ್ ಪಟ್ಟಣದ ಹೊರವಲಯದ ಹೆದ್ದಾರಿಯ ಬದಿಯಲ್ಲಿ ಕಾಣಬಹುದು (ಚಿತ್ರ ನೋಡಿ). ಮರದಿಂದ ಹಾಗೂ ಅಲ್ಯುಮಿನಿಯಂ ತಂತಿಗಳಿಂದ ಮಾಡಲಾಗಿರುವ ಪ್ರತಿಮೆಯು ಒಳಭಾಗವು ಟೊಳ್ಳಾಗಿದೆ. ಎಲ್ಲಕ್ಕಿಂತಾ ಮುಖ್ಯವಾಗಿ ಸದಾ ಹಸನ್ಮುಖಿಯಾಗಿರುತ್ತಿದ್ದ ಜಿಮ್ಮಿ ಕಾರ್ಟರ್ ಅವರ ನಗೆಯನ್ನೂ ಕೂಡ ನೆಲಗಡಲೆಯ ಪ್ರತಿರೂಪವು ಪ್ರತಿನಿಧಿಸುತ್ತಿದೆ. ರೈತ ಹಿನ್ನೆಲೆಯ ಬದುಕು ಮತ್ತು ಮಾನವತೆಯ ಸಂಸ್ಕಾರವನ್ನು ರೂಢಿಸಿಕೊಂಡಿದ್ದ ಜಿಮ್ಮಿ ಕಾರ್ಟರ್ 2002ರ ನೊಬೆಲ್ ಶಾಂತಿ ಪಾರಿತೋಷಕವನ್ನೂ ಪಡೆದರು. “ಪೀ-ನಟ್‍ ಫಾರ್‍ ಪೀಸ್‍” ಎಂಬ ಸಂಗತಿಯೂ ಸಾಂಸ್ಕೃತಿಕ ವಿಶೇಷವಾಗಿ ಜಗದ್ಮಾನ್ಯವಾಯಿತು. ನೆಲಗಡಲೆಯು ಬದುಕಿನ ಏಳೂ-ಬೀಳುಗಳ ಜೊತೆಗೆ ಸಾಂಸ್ಕೃತಿಕ ಶ್ರೀಮಂತಿಕೆಯನ್ನೂ ಜಿಮ್ಮಿ ಕಾರ್ಟರ್ ಅವರಿಗೆ ನೀಡಿತ್ತು.

            ತಮಗೆಲ್ಲಾ ಫೋರ್ಡ್‍ ಕಾರುಗಳ ಪರಿಚಯವಿದ್ದೇ ಇರುತ್ತದೆ. ಫೋರ್ಡ್‍ ಕಾರುಗಳ ಒಡೆಯರಾದ ಹೆನ್ರಿ ಫೋರ್ಡ್‍ ಅವರು ಜಾರ್ಜ್‍  ವಾಷಿಂಗ್ಟನ್ ಕಾರ್ವರ್ ಅವರ ಆಪ್ತ ಗೆಳೆಯ. ತನ್ನ ಆಟೋಮೊಬೈಲ್ ಉದ್ದಿಮೆಯನ್ನು ಪೆಟ್ರೋಲಿನ ಹಿತದಲ್ಲೇ ಅಲ್ಲದೆ ಭಿನ್ನವಾಗಿಯೂ ನಡೆಸಬೇಕಾಗಬಹುದೆಂಬ ಪರ್ಯಾಯ ಆಲೋಚನೆಯನ್ನು ನೆಲಗಡಲೆ ತೈಲದ ಮೂಲಕ ಗುರುತಿಸಿದ್ದ ಕನಸುಗಾರ.  ಜಾರ್ಜ್‍ ಕಾರ್ವರ್ ಅವರೊಡನೆ ಪೀ-ನಟ್‍ ಗಳ ಬಹುಮುಖ ಉಪಯೋಗಗಳ ಅನ್ವೇಷಣೆಯ ಪ್ರೀತಿಯನ್ನು ಕಂಡುಕೊಂಡಿದ್ದ ಹೆನ್ರಿ, ಹಲವು ಬಾರಿ ಅಲಾಬಾಮಕ್ಕೆ ಜಾರ್ಜ್‍ ಅವರನ್ನು ಕಾಣಲೆಂದೇ ಭೇಟಿಕೊಟ್ಟು ಚರ್ಚಿಸುತ್ತಿದ್ದರು. ಅದರ ಫಲವಾಗಿ ನೆಲಗಡಲೆಯ ಎಣ್ಣೆಯನ್ನು ಮೋಟಾರ್ ವಾಹನಗಳಲ್ಲಿ ಪರ್ಯಾಯ  ಇಂಧನವಾಗಿ ಬಳಸುವ ಆಲೋಚನೆಗಳನ್ನು 1942ರಲ್ಲಿಯೇ ಆರಂಭಿಸಿದ ಜೋಡಿ ಜಾರ್ಜ್‍  ಹಾಗೂ ಹೆನ್ರಿ ಫೋರ್ಡ್‍. ಅದರ ಜೊತೆಗೆ ಫೋರ್ಡ್‍,  ಜಾರ್ಜ್‍  ಅವರ ಲ್ಯಾಬೋರೇಟರಿಗೆ ಕೆಲವು ಅನುಕೂಲಗಳನ್ನು ಕಲ್ಪಿಸುವ ಮೂಲಕ ನೆರವಾಗಿದ್ದರು. ನೆಲಗಡಲೆಯ ಕುರಿತ ಸಂಗತಿಗಳು ಏರು ಗತಿಯಲ್ಲಿ ಬೆಳೆಯುತ್ತಿರುವಾಗ ಜಾರ್ಜ್  ಜೊತೆ ಸಹಕರಿಸಿದ ಉದ್ಯಮಿ ಹೆನ್ರಿ  ಫೋರ್ಡ್‍.  

            ಇನ್ನು ಗಾಂಧಿ ಮತ್ತು ಗ್ರೌಂಡ್ ನಟ್ ಕುರಿತು ನಮಗೆಲ್ಲರಿಗೂ ತಿಳಿದ ಸಂಗತಿಯೇ! ಗಾಂಧಿಯ ಆಡಿನ ಹಾಲು ಹಾಗೂ ನೆಲಗಡಲೆಯ ಪ್ರೀತಿ ಜನಜನಿತ. ಗಾಂಧಿ ಇಂಗ್ಲೆಂಡಿನಲ್ಲಿದ್ದಾಗ ಸಸ್ಯಹಾರಿ ವಿದ್ಯಾರ್ಥಿಗಳು ತಮ್ಮ ಪ್ರೊಟೀನ್ ಅಗತ್ಯವನ್ನು ಪೂರೈಸಿಕೊಳ್ಳಲು ನೆಲಗಡಲೆಯ ಬಳಕೆಯನ್ನು  ರೂಢಿಸಿಕೊಂಡಿದ್ದರು. ಹುರಿದು, ಬೇಯಿಸಿ ಅಗತ್ಯ ಬಿದ್ದರೆ ಹಸಿಯಾಗಿಯೇ ತಿನ್ನುವ ಗಾಂಧಿಯವರ ಅಭ್ಯಾಸವು ಭಾರತದಲ್ಲಿ ಸರಳಜೀವನದ ಭಾಗವೇ ಆಗಿದೆ. ಇಂದಿಗೂ ಗಾಂದಿಯ ಅನುಯಾಯಿಗಳ ಮನೆಗಳಲ್ಲಿ ನೆಲಗಡಲೆಯ ಸೇವೆಯೂ ಮುಂದುವರಿಕೆಯ ನೆಪದಂತೆ ಕಂಡರೆ ಅಚ್ಚರಿಯೇನಲ್ಲ.  ಗಾಂಧಿ ಲಂಡನ್ನಿನಲ್ಲಿದ್ದಾಗ ಪೀ-ನಟ್ ಬಟರ್, ಪೀ-ನಟ್ ಉತ್ಪನ್ನಗಳಿಂದ ಪ್ರಭಾವಿತರಾಗಿ ಮುಂದೆ ದಕ್ಷಿಣ ಆಫ್ರಿಕಾದಲ್ಲೂ ಅದರ ಬಳಕೆಯನ್ನು ಮುಂದುವರೆಸಿದ್ದರು. ನಂತರದ ದಿನಗಳಲ್ಲಿ ಭಾರತಕ್ಕೆ ಬಂದಾಗ ಅದು ಸಹಜವೆಂಬಂತೆ ಸರಳತೆಯ ಭಾಗವಾಗಿ, ಬಡವರ ಬಾದಾಮಿಯಾಗಿಸಿ ಅದಕ್ಕೊಂದು ಶಾಶ್ವತ ಸ್ಥಾನವನ್ನು ಒದಗಿಸಿದರು.

            ನೆಲಗಡಲೆಯ ಎಣ್ಣೆಯ ಜೊತೆಗೆ, ಹುರಿದ-ಉಪ್ಪು ಹಚ್ಚಿದ ಕಾಳು, ಬೆಣ್ಣೆಯಾಗಿ, ಹಾಲು ಮಾಡಿಕೊಂಡು, ಕೇಕ್‍ ಗಳಾಗಿಸಿ, ಕ್ಯಾಂಡಿಗಳಾಗಿಸಿ ಬಗೆ-ಬಗೆಯ ಉತ್ಪನ್ನಗಳ ಮೂಲಕ ಅದಕ್ಕೊಂದು ನಾವಿನ್ಯ ಮಾರುಕಟ್ಟೆಯನ್ನು ಅಮೆರಿಕಾದ ಜಾರ್ಜ್‍ ಅಣಿಗೊಳಿಸಿ ಕೊಟ್ಟರು. ಈಗಿರುವ ಪ್ರಕಾರದ ನೆಲಗಡಲೆಯ ಬೆಣ್ಣೆಯನ್ನು, ಕೆಲ್ಲಾಗ್ ಸೀರಿಯಲ್ ಖ್ಯಾತಿಯ ಡಾ. ಜಾನ್ ಹಾರ್ವೆ  ಕೆಲ್ಲಾಗ್ 1895ರಲ್ಲಿಯೆ ಅಭಿವೃದ್ಧಿಗೊಳಿಸಿದರು. ಅದಕ್ಕೆ ಮೂಲ ಸರಕು ದೊರಕಿದ್ದು ದಕ್ಷಿಣ ಅಮೆರಿಕಾದ ಇಂಕಾ ಇಂಡಿಯನ್ನರು ನೆಲಗಡಲೆಯನ್ನು ಅರೆದು ಮಾಡುತ್ತಿದ್ದ ಪೇಸ್ಟ್ನ ಕುರುಹುಗಳಲ್ಲಿ. ಇಂದಿಗೂ ನೆಲಗಡಲೆಯ ಹಾಲು, ಅಥವಾ ಪೇಸ್ಟ್ ಅತ್ಯತ್ತಮ ಪ್ರೊಟೀನ್ ಒದಗಿಸುವ ಆಹಾರವಾಗಿದೆ. ನೆಲಗಡಲೆ ಮತ್ತದರ ಬೆಣ್ಣೆಯನ್ನು ಜನಪ್ರಿಯಗೊಳಿಸಿದ್ದು ಅಮೆರಿಕಾದ ಸೈನ್ಯ! ಸೈಂಟ್ ಲೂಯಿಸ್ನ ವಿಶ್ವಮೇಳದಲ್ಲಿ ಮೊದಲ ಬಾರಿಗೆ ನೆಲಗಡಲೆಯ ಬೆಣ್ಣೆಯು ಪ್ರದರ್ಶಿಸಲ್ಪಟ್ಟಿತ್ತು. ಜಾಗತಿಕ ಮಹಾ ಯುದ್ಧಗಳಲ್ಲಿ ಸೈನಿಕರ ಪ್ರಮುಖ ಆಹಾರವಾಗಿ ಹೊರಹೊಮ್ಮಿದ್ದವು. ಇಂದು ಅಮೆರಿಕಾದ ಅತ್ಯಂತ ಜನಪ್ರಿಯ ಬೆಳೆ ಹಾಗೂ ಹನ್ನೆರಡು ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದು. ಪ್ರತೀ ವರ್ಷ ಅಮೆರಿಕಾದ ಪ್ರತಿ ಪ್ರಜೆಯು ಸರಾಸರಿ ಕನಿಷ್ಠ 4 ಕಿಲೋ ನೆಲಗಡಲೆಯ ಉತ್ಪಾದನೆಯನ್ನು ತಿನ್ನುತ್ತಾರಂತೆ. ಇಲ್ಲಿ ನೆಲಗಡಲೆಯ ಒಟ್ಟು ವಾರ್ಷಿಕ ವಹಿವಾಟು 200 ಶತಕೋಟಿ ಡಾಲರ್‍ ಗಳನ್ನೂ ಮೀರುತ್ತದೆ.

            ಇತ್ತೀಚೆಗೆ ಭಾರತದ ನೆಲದಲ್ಲಿ ನೆಲಗಡಲೆಯು ಎಣ್ಣೆ ಕಾಳಾಗಿ ಹೆಚ್ಚು ಪ್ರಚಾರಕ್ಕೆ ಬಂದು, ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಎರಡನೆಯ ರಾಷ್ಟ್ರವಾಗಿದೆ. ಭಾರತೀಯ ನೆಲದಲ್ಲಿ ನೆಲಗಡಲೆಯು ಎಣ್ಣೆ, ಅಲ್ಲದೆ ಕೆಲವು ನೇರ ಬಳಕೆಯ ಉತ್ಪನ್ನಗಳ ಹೊರತಾಗಿ ಅದರಿಂದ ತಯಾರಾದ ಬೆಣ್ಣೆ-ಹಾಲುಗಳು ಅಷ್ಟಾಗಿ ಪ್ರಚಾರದಲ್ಲಿ ಇಲ್ಲ. ರಾಜ್ಯದ ಕೆಲವು ಪ್ರದೇಶದಲ್ಲಿ ಊಟವಾದ ಬಳಿಕ ದಿನವೂ ಕೆಲವು ಶೇಂಗಾ ಕಾಯಿಗಳನ್ನು ತಿನ್ನುವ ರೂಢಿಯಿದೆ. ಹೆಚ್ಚು ಬಿಸಿಲು ಕಾಡುವ ಒಣ ಪ್ರದೇಶಗಳಲ್ಲಿ ಸಾಮಾನ್ಯವಾದ ತೆಂಗಿನಕಾಯಿಯ ಚಟ್ನಿಯು ಬೇಗ ಹಳಸುತ್ತದೆ. ಅಲ್ಲೆಲ್ಲಾ ಹೆಚ್ಚು ಕಾಲ ತಾಳಿಕೆ ಬರುವ ನೆಲಗಡಲೆಯ ಚಟ್ನಿಯು ಜನಪ್ರಿಯವಾಗಿದೆ. ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಶೇಂಗಾ ಹೋಳಿಗೆಯನ್ನು ತಯಾರಿಸುತ್ತಾರೆ. ಪುಳಿಯೋಗರೆಯ ಅಥವಾ ಚಿತ್ರಾನ್ನದ  ಅನ್ನದಗುಳಿನ ಮಧ್ಯೆ ಕಾಣುವ ಅಥವಾ ತಿನ್ನುವಾಗ ವಿಶೇಷ ರುಚಿ ಬೆರೆಸುವ ನೆಲಗಡಲೆಯ ಕಾಳನ್ನು ಭಾರತೀಯರು ಮರೆಯುವುದಾದದರೂ ಹೇಗೆ? ಹಾಗೆಯೇ ಬಾಯಿ ಚಪಲಕ್ಕೆ ಮೆಲುಕಾಡಿಸುವ ತಿನಿಸುಗಳಲ್ಲಿಯೂ ನೆಲಗಡಲೆಯ ಪಾತ್ರವನ್ನೂ ಸಹಾ!

ನಮಸ್ಕಾರ,    – ಚನ್ನೇಶ್

Leave a Reply