You are currently viewing ಬಿ.ಜಿ.ಎಲ್.ಸ್ವಾಮಿ

ಬಿ.ಜಿ.ಎಲ್.ಸ್ವಾಮಿ

ಆತ್ಮೀಯರೆ,

ಈ ದಿನ ಕನ್ನಡದ ಪ್ರಖ್ಯಾತ ವಿಜ್ಞಾನ ಬರಹಗಾರರಾದ ಸಸ್ಯವಿಜ್ಞಾನಿ ದಿ. ಡಾ. ಬಿ.ಜಿ.ಎಲ್.ಸ್ವಾಮಿಯವರ ಜೀವನಚರಿತ್ರೆ ಯನ್ನು ಪರಿಚಯಿಸುತ್ತಿದ್ದೇನೆ. ಈ ಪುಸ್ತಕವನ್ನು ಬರೆದವರು ಅವರಷ್ಡೇ ಪ್ರಖ್ಯಾತ ಭೂ-ವಿಜ್ಞಾನಿ, ವಿಜ್ಞಾನ ಸಂವಹನಕಾರ ಹಾಗೂ ಸಹೃದಯಿ ಆಡಳಿತಗಾರರಾಗಿದ್ದ ದಿ. ಡಾ.ಬಿ.ಪಿ.ರಾಧಾಕೃಷ್ಣ. 1985 ರಲ್ಲಿ ಕನ್ನಡ ವಿಜ್ಞಾನ ಪರಿಷತ್ತಿನಿಂದ ಪ್ರಕಟಣೆಗೊಂಡ ಈ ಕೃತಿ ಸ್ವಾಮಿಯವರ ಬದುಕಿನ ಬಗ್ಗೆ ಅತ್ಯಂತ ಆಪ್ತತೆ ಹಾಗೂ ವಿಚಾರಪೂಣ೯ವಾಗಿ ಬರೆಯಲ್ಪಟ್ಟಿರುವ ಕೃತಿ.

ಕನ್ನಡದ ಓದುಗರಿಗೆ ಸ್ವಾಮಿಯವರ ಕೃತಿಗಳು ಹೊಸತೇನಲ್ಲ. ಅವರ ಜ್ಞಾನದ ವಿಸ್ತಾರ ಹರವು, ಹಾಸ್ಯ ಪ್ರಜ್ಞೆ ಹಾಗೂ ಚಿಕಿತ್ಸಕ ವ್ಯಂಗ್ಯಭರಿತ ಬರವಣಿಗೆ ಚಿರಪರಿಚಿತ. ಆದರೆ ಅದರಾಚೆಗಿನ ಅವರ ಖಾಸಗಿ ಬದುಕು ಅಂದರೆ ಅವರ ಬಾಲ್ಯ, ಕುಟುಂಬ, ವಿದ್ಯಾಭ್ಯಾಸ, ಸಂಶೋಧನೆ, ವೃತ್ತಿ ಬದುಕಿನ ಏಳು ಬೀಳುಗಳು ಹಾಗೂ ಅವರ ಅಂತಿಮ ದಿನಗಳ ಬಗ್ಗೆ ಬೆಳಕು ಚೆಲ್ಲುತ್ತದೆ ಈ ಕೃತಿ. ಈ ಕೃತಿಗೆ ಮುನ್ನುಡಿ ಬರೆದಿರುವವರು ಶ್ರೀ ಶಿವರಾಮಕಾರಂತ. ತಮ್ಮ ಕಿರಿಯ ಮಿತ್ರ ಹಾಗೂ ಕುಟುಂಬದ ಒಡನಾಡಿಯಾಗಿದ್ದ ಸ್ವಾಮಿಯವರ ಬಗ್ಗೆ, ಅವರಲ್ಲಿದ್ದ ಮಕ್ಕಳ ಪ್ರೀತಿಯ ಬಗ್ಗೆ ಮತ್ತು ಚಿತ್ರಕಲೆಗೆ ಸಂಬಂಧಿಸಿದ ತಮ್ಮೊಡನೆ ನಡೆಸುತ್ತಿದ್ದ ಚಚೆ೯ಗಳ ಬಗ್ಗೆ ಮುನ್ನುಡಿಯಲ್ಲಿ ಕಾರಂತ ಅವರು ನೆನೆದಿದ್ದಾರೆ. ಅಲ್ಲದೇ “ಮದ್ರಾಸಿನಲ್ಲಿ ಅವರ ಕಾಲೇಜಿನ ಅನುಭವಗಳನ್ನು ನಾನು ಓದಿದಾಗ ನನಗಾದ ನೋವು ಅಷ್ಟಿಷ್ಟಲ್ಲ. ವ್ಯಂಗ್ಯ ಬರಹದಲ್ಲಿ……ಎಂಥವರ ನಡುವೆ ಅವರು ದಿಟ್ಟತನದಿಂದ ಕೆಲಸ ಮಾಡಿದರು..ಎಂಬುದು ಗೊತ್ತಾಗುತ್ತದೆ” ಎಂದು ಮರುಕಪಟ್ಟಿದ್ದಾರೆ ಅವರು

ಡಾ. ಬಿ.ಪಿ.ರಾಧಾಕೃಷ್ಣ

.

“ಸ್ವಾಮಿಯ ಜೀವನ ಚಿತ್ರವನ್ನು ನಮ್ಮ ಜನ ಆದರದಿಂದ ಸ್ವೀಕರಿಸುತ್ತಾರೆ, ವಿಜ್ಞಾನದ ಅಭ್ಯಾಸಿಗಳಾದ ತರುಣರು ಈ ಬರಹದಿಂದ ಪ್ರಭಾವಿತರಾಗುತ್ತಾರೆ, ಎನ್ನುವ ಹಂಬಲವನ್ನು ನಾನು ಇಟ್ಟುಕೊಂಡಿದ್ದೇನೆ. “ಮಾಲೆಗಾರನು ಕಟ್ಟಿದ ಪೊಸ ಬಾಸಿಗಂ ಮುಡಿವ ಭೋಗಿಗಳಿಲ್ಲದೆ ಬಾಡಿಪೋಗದೇ?” ಹಾಗಾಗದಂತೆ ನೋಡಿಕೊಳ್ಳುವುದು ಗುಣಗ್ರಾಹಿಗಳಾದ ಓದುಗರಿಗೆ ಬಿಟ್ಟದ್ದು ”” ಎಂದು ಪುಸ್ತಕದ ಲೇಖಕರಾದ ಶ್ರೀ ಬಿ.ಪಿ.ರಾಧಾಕೃಷ್ಣ ಅವರು ತಮ್ಮ ಮೊದಲ ಮಾತಿನಲ್ಲಿ ಹೇಳಿಕೊಂಡಿದ್ದಾರೆ. ಜೊತೆಗೆ “ವ್ಯವಸಾಯಾತ್ಮಿಕವಾದ ಬುದ್ಧಿ ಏಕಮುಖವಾಗಿರಬೇಕು. ಬಹು ವಿಷಯಗಳಲ್ಲಿ ಹಂಚಿಹೋಗಬಾರದು” ಎಂಬ ಎಚ್ಚರದ ಗೀತೆಯ ನುಡಿಗಳನ್ನು ಉಲ್ಲೇಖಿಸುತ್ತಾ ಸ್ವಾಮಿಯವರ ಸಸ್ಯವಿಜ್ಞಾನ ಸಂಶೋಧನೆಯ ಭವಿಷ್ಯ, ಕವಲು ದಾರಿ ಹಿಡಿದು ಹಿಂದೆ ಬಿದ್ದಿತು ಎಂದು ಉದಾಹರಿಸುತ್ತಾ ಅದು ನಮ್ಮ ಕಲಿಕೆಗೆ ಪಾಠವಾಗಬೇಕೆಂದು ಎಚ್ಚರಿಸಿದ್ದಾರೆ. ಪ್ರೊ.ಬಿ.ಜಿ.ಎಲ್.ಸ್ವಾಮಿಯವರ ಬಗ್ಗೆ ಇತ್ತೀಚಿನವರೆಗೂ ಹಲವು ಪುಸ್ತಕಗಳು ಬಂದಿದ್ದರೂ, ರಾಧಾಕೃಷ್ಣ ಅವರ ವಿಮರ್ಶಕ ಪ್ರಜ್ಞೆಯ ಈ ಜೀವನಚಿತ್ರದ ಸೊಗಸೇ ಬೇರೆಯ ತೂಕದ್ದು.

ಪುಸ್ತಕದ ಮೊದಲ ಅಧ್ಯಾಯ ಸ್ವಾಮಿಯವರ ಪೂವ೯ಜರ ಇತಿಹಾಸ ಬಗ್ಗೆ ಇದೆ. ನಂತರ ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡು ಬೆಳೆದ ಅವರ ಬಾಲ್ಯ ವಿದ್ಯಾಭ್ಯಾಸಗಳ ಬಗ್ಗೆ ಇದೆ. ಜೊತೆಗೆ ಕನ್ನಡದಲ್ಲಿ ಮೊದಮೊದಲು ಬರೆದ ಅವರ ಲೇಖನಗಳ ವಿವರವೂ ಇದೆ. ಪುಸ್ತಕದ ಬಹುದೊಡ್ಡ ಆಕಷ೯ಣೆಯೆಂದರೆ ಸ್ವಾಮಿಯವರ ಅಪರೂಪದ ಪೋಟೋಗಳ ಸಂಗ್ರಹ. ಜೊತೆಗೆ ತಮ್ಮ ತಂದೆಯೊಡನೆ ಹಾಗೂ ತಂಗಿಯರೊಡನೆ ನಡೆಸಿರುವ ಪತ್ರ ಸಂಭಾಷಣೆಗಳ ವಿವರ. ಅಮೆರಿಕೆಯ ತಮ್ಮ ನೆಚ್ಚಿನ ಗುರು “ಇರ್ವಿಂಗ್‌ ಬೈಲಿ” ಅವರ ಬಗ್ಗೆ, ಅಲ್ಲಿನ ಸಂಶೋಧನಾ ಜೀವನದ ಬಗ್ಗೆ, ತಮ್ಮ ಕೆಲಸಗಳು ಹಾವ೯ಡ್ ವಿವಿಯ ಇತರರ ಗಮನ ಸೆಳೆದ ಬಗ್ಗೆ ತಂದೆಯೊಡನೆ ಹಂಚಿಕೊಂಡ ವಿಚಾರಗಳು ಇಲ್ಲಿ ದಾಖಲಾಗಿವೆ. ಅದರ ಒಂದು ಉದಾಹರಣೆ ನೋಡಿ – “ ಸಂಶೋಧನೆಗೆ ನಾನು ಎಷ್ಟೊಂದು ಕಾಲ ವಿನಿಯೋಗಿಸುತ್ತೇನೆಂದು ಯೋಚಿಸಿದರೆ ಯಾವ ದೈವ ಮರೆಯ ಹಿಂದೆ ನಿಂತು ನನ್ನನ್ನು ಈ ಕಾಯ೯ಕ್ಕೆ ಪ್ರೇರೇಪಿಸುತ್ತಿದೆ ಎಂದು ಆಶ್ಚಯ೯ವಾಗುತ್ತಿದೆ. ಸಂಶೋಧನಾಲಯದಲ್ಲಿ ವಿರಾಮವಿಲ್ಲದೇ ಹನ್ನೆರಡು ಘಂಟೆಕಾಲ ಒಂದೇ ಸಮನೆ ಕೆಲಸ ಮಾಡುತ್ತೇನೆ. ಆಮೇಲೆ ಒಂದು ಘಂಟೆ ಕಾಲ ಓದು; ಓದಿದ್ದನ್ನು ಜೀಣಿ೯ಸಿಕೊಳ್ಳುವ ಕೆಲಸ. ಪ್ರತಿದಿನ ಈ ದಿನಚರಿ. ಆದರೂ ದೇಹವಾಗಲಿ ಮನಸ್ಸಾಗಲಿ ಬಳಲಿದಂತೆ ಕಾಣುವುದಿಲ್ಲ. ನನಗಂತೂ ಶಕ್ತಿ ಮೀರಿ ಕೈಲಾದಷ್ಟು ಕೆಲಸ ಮಾಡುತ್ತಿದ್ದೇನೆ ಎನ್ನುವ ನೆಮ್ಮದಿ ಭಾವನೆ ಬಂದಿದೆ. ನೀವು ನನಗೆ ಆಗಿಂದಾಗ್ಗೆ ಉಪದೇಶ ಮಾಡುತ್ತಿದ್ದದ್ದು ನೆನಪಿಗೆ ಬರುತ್ತದೆ..’ವಿದ್ಯಾಥಿ೯ತನವೂ ಒಂದು ಬಗೆಯ ಸನ್ಯಾಸ. ಅದು ತಪಶ್ಚಯೆ೯ಯಂತಿರಬೇಕು’, ಎಂದು”.

ನಂತರ ಸ್ವಾಮಿಯವರು ಭಾರತಕ್ಕೆ ಮರಳಿದ್ದು, ಮದ್ರಾಸ್ ವಿವಿ ಗೆ ತೆರಳಿದ್ದು, ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದು, ಪ್ರಾಂಶುಪಾಲರಾಗಿದ್ದು, ಅವರ ಸಂಶೋಧನೆಗಳ ಬಗ್ಗೆ, ಮದುವೆಯ ಬಗ್ಗೆ, ಭಾರತೀಯ ಸಂಶೋಧನ ವ್ಯವಸ್ಥೆ ಮುಂತಾದ ವಿವರಗಳು ನಂತರದ ಅಧ್ಯಾಯಗಳಲ್ಲಿ ಅನಾವರಣಗೊಳ್ಳುತ್ತವೆ. ಇದೇ ಹಂತದಲ್ಲಿ ತಂದೆ-ಮಗನ ಸಂಭಾಷಣೆಯ ಸರಣಿಯಲ್ಲಿ ಶ್ರೀ ಡಿ.ವಿ.ಗುಂಡಪ್ಪನವರು ಮಗನಿಗೆ ಬರೆದ ಒಂದು ಪತ್ರದ ತುಣುಕು ಹೀಗಿದೆ ನೋಡಿ – “..Have you at any time sat at rest for a few minutes and thought how much happiness and joy a letter from you brings me? It is not merely the affection of a son that is in it. There is something more there to my mind. I think I have accustomed myself to regarding you as I regard any other young man. Whatever the effect upon me of the Gokhale Institute, it has done me one good. It has put me in daily contact with young men, some dozens of them, with varieties of mind and character and in varieties of situations. So I am enabled to cultivate the objective habit of my mind. I look at you that way sometimes in addition to the way natural to the father and the satisfaction which this brings is the special element in my reckoning….”. ತಂದೆ ಮಗನಿಗೆ ಹೇಳಬಹುದಾದ ಎಂತಹ ಅದ್ಭುತ ಮಾತಲ್ಲವೇ ಇವು? ಇಂತಹ ಹಲವಾರು ಸಂಭಾಷಣೆಗಳು ಪುಸ್ತಕದಲ್ಲಿ ನಿರೂಪಿಸಲ್ಪಟ್ಟಿವೆ.

ಪುಸ್ತಕದ ನಂತರದ ಅಧ್ಯಾಯಗಳು ಸ್ವಾಮಿಯವರ ಇನ್ನಿತರ ಆಸಕ್ತಿಗಳಾದ ಸಂಗೀತ, ಚಿತ್ರಕಲೆ, ಸಾಹಿತ್ಯ, ಶಾಸನಗಳು ಬಗ್ಗೆ ತಿಳಿಸಿಕೊಡುತ್ತವೆ ಹಾಗೂ ಅವರ ಪುಸ್ತಕಗಳ ಬಗ್ಗೆ ಪ್ರತ್ಯೇಕ ಅಧ್ಯಾಯಗಳೊಂದಿಗೆ ಪರಿಚಯಿಸುತ್ತವೆ. ನಿವೃತ್ತಿಯ ನಂತರ ಮದ್ರಾಸಿನಿಂದ ಹಿಂತಿರುಗಿದ ಸ್ವಾಮಿಯವರಲ್ಲಿದ್ದ ಹಲವಾರು ಯೋಜನೆಗಳ ಬಗ್ಗೆಯೂ ರಾಧಾಕೃಷ್ಣ ಬರೆಯುತ್ತಾರೆ. ನಂತರ ಮೈಸೂರಿಗೆ ತೆರಳಿದ ಅವರ ಮೈಸೂರಿನ ದಿನಗಳ ಬಗ್ಗೆ ಬರೆಯುತ್ತಾ, ಅವರ ಸಾವಿನ ಕೊನೆಯ ದಿನದ ಭಾರವಾದ ನೆನಪನ್ನೂ ದಾಖಲಿಸಿದ್ದಾರೆ. ಹೀಗೆ ಮುಗಿಯುವ ಪುಸ್ತಕ ಕನ್ನಡದ ಸೃಜನಶೀಲ ಮನಸ್ಸೊಂದನ್ನು ಅತ್ಯಂತ ಸೊಗಸಾದ ಶೈಲಿಯಲ್ಲಿ , ಆಪ್ತತೆಯ ಅನುಭವ ಸಮೇತ ವಿವರಗಳೊಂದಿಗೆ ಕಟ್ಟಿಕೊಟ್ಟಿದ್ದಾರೆ. ಆ ಕ್ರಿಯಾಶೀಲ ವ್ಯಕ್ತಿ ಏರಿದ್ದ ಹಾಗೂ ಏರಬೇಕಿದ್ದ ಎತ್ತರವನ್ನೂ ನೆನೆದು ಎಚ್ಚರಿಸಿದ್ದಾರೆ.

ಇನ್ನು ಪುಸ್ತಕದ ಲೇಖಕರಾದ ಡಾ.ಬಿ.ಪಿ.ರಾಧಾಕೃಷ್ಣ ಅವರ ಬಗ್ಗೆಯೂ ನಾವಿಲ್ಲಿ ನೆನೆಯಬೇಕು. ಕನ್ನಡ ವಿಜ್ಞಾನ ಬರವಣಿಗೆಯನ್ನು ಶ್ರೀಮಂತಗೊಳಿಸಿದವರಲ್ಲಿ ಅವರೂ ಒಬ್ಬರು. ರಾಜ್ಯ ಸಕಾ೯ರದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿದೇ೯ಶಕರಾಗಿ ದುಡಿದವರು. ಅಂತಜ೯ಲ ಹಾಗೂ ಅದರ ಯುಕ್ತ ಉಪಯೋಗಗಳ ಬಗ್ಗೆ ಪ್ರತಿಪಾದಿಸಿದವರು. “ಜಿಯಾಲಜಿಕಲ್ ಸೊಸೈಟಿ ಆಫ್ ಇಂಡಿಯಾದ” ಸಂಸ್ಥಾಪಕ ಮಹನೀಯರಲ್ಲಿ ಒಬ್ಬರು. ಬಾಲ್ಯದಿಂದಲೂ ಸಾಂಸ್ಕೃತಿಕ ವಾತಾವರಣದಲ್ಲಿ ಬೆಳೆದು ಸಾಹಿತ್ಯ ಮತ್ತು ವಿಜ್ಞಾನ ಪ್ರೀತಿಯನ್ನು ಗಳಿಸಿಕೊಂಡಿದ್ದ ಅವರು ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಅತ್ಯಂತ ಉಪಯುಕ್ತ ಮತ್ತು ವಿದ್ವತ್‌ಪೂರ್ಣ ಪುಸ್ತಕಗಳನ್ನು ಬರೆದಿದ್ದಾರೆ. ತಮ್ಮ ತಂದೆಯವರನ್ನು ಕುರಿತು ೧೯೪೯ ರಲ್ಲಿ “ನನ್ನ ತಂದೆ” ಎಂಬ ಕೃತಿಯನ್ನು ಶ್ರೀ.ಡಿ.ವಿ.ಜಿ ಅವರ ಮುನ್ನುಡಿಯೊಂದಿಗೆ ಪ್ರಕಟಿಸಿದ್ದಾರೆ. “ಸರ್‌ ಸಿ.ವಿ.ರಾಮನ್”‌, “ರಾಮಾನುಜನ್”‌, “ಡಾರ್ವಿನ್”‌, “ಮೇಡಂ ಕ್ಯೂರಿ” ಶ್ರೀ ವಿ.ಸೀ ಅವರ ಜೀವನ-ಸಾಧನೆಗಳ ಬಗ್ಗೆ “ಸಾರ್ಥಕ-ಬದುಕು”, “ಕರ್ನಾಟಕದಲ್ಲಿ ಅಂತರ್ಜಲ”, “ಕರ್ನಾಟಕದ ಖನಿಜ ಸಂಪತ್ತು”, ಇವುಗಳೆಲ್ಲಾ ಅವರು ಬರೆದಿರುವ ಹಾಗೂ ಸಂಪಾದಿಸಿರುವ ಇತರೆ ಪುಸ್ತಕಗಳು. ಡಾ. ಬಿ.ಪಿ.ರಾಧಾಕೃಷ್ಣ  ಅವರ ಸಂಶೋಧನಾ ಲೇಖಗಳು ಕೆಲವು ಅಂತರ್ಜಾಲದಲ್ಲಿ ಲಭ್ಯವಿದೆ. ಆಸಕ್ತರು ಅವನ್ನು ಓದಬಹುದು.

ಡಾ. ಬಿ.ಪಿ.ರಾಧಾಕೃಷ್ಣ ಅವರ ಕೆಲವು ಕೃತಿಗಳು ಮತ್ತು ಅವರ ಕುರಿತಾದ ಜೀವನಚರಿತ್ರೆ

 ಇವರ ಬಗ್ಗೆ ಹಾಗೂ ಇವರ ಸಾಧನೆಗಳ ಬಗ್ಗೆ ಶ್ರೀ ಟಿ.ಆರ್.ಅನಂತರಾಮು ಅವರು ತಮ್ಮ ಪತ್ರಿಕಾ ಲೇಖನಗಳು ಮತ್ತು “ತ್ರಿವಿಕ್ರಮ ಹೆಜ್ಜೆಗಳು” ಎಂಬ ಪುಸ್ತಕದ ಮೂಲಕ ನಾಡಿಗೆ ಅವರನ್ನು ಪರಿಚಯಿಸುವ ಕೆಲಸ ಮಾಡಿದ್ದಾರೆ. ಡಾ.ಬಿ.ಪಿ.ರಾಧಾಕೃಷ್ಣ ಅವರ ಹೆಸರಿನಲ್ಲಿರುವ ರಸ್ತೆಗೆ ಅಂಟಿಕೊಂಡಿರುವ ಬಡಾವಣೆಯಲ್ಲಿ ವಾಸಿಸುವ ನನಗೆ ಅವರ ಮೊದಲು ಪರಿಚಯವಾದದ್ದು ಹಾಗೆಯೇ. ಜೊತೆಗೆ ಉದಯಭಾನು ಕಲಾ ಸಂಘ ಕೂಡ ಟಿ.ಎಂ.ಶಿವಶಂಕರ್‌ ಅವರು ಬರೆದಿರುವ ಕೃತಿಯೊಂದನ್ನು ಪ್ರಕಟಿಸಿದೆ.  ಡಾ.ಚನ್ನೇಶ್, ಅವರ ವಿಜ್ಞಾನ ಬರಹಗಳು ಹಾಗೂ ಕಾವೇರಿ ನದಿ ಬಗೆಗಿನ ಅವರ ಸಂಶೋಧನಾತ್ಮಕ ಲೇಖನಗಳನ್ನು ಕುರಿತು ಬರೆದಿದ್ದಾರೆ ಹಾಗೂ ಮಾತನಾಡಿದ್ದಾರೆ.

ಡಾ. ಬಿ.ಜಿ.ಎಲ್.ಸ್ವಾಮಿ ಹಾಗೂ ಡಾ. ಬಿ.ಪಿ.ರಾಧಾಕೃಷ್ಣ ಇಬ್ಬರೂ ಸಮಕಾಲೀನರು.  ಅವರಿಬ್ಬರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಸಿ.ಪಿ.ಯು.ಎಸ್‌ ಕನ್ನಡನಾಡಿನ ಕೆಲವು ಶಾಲಾ ಕಾಲೇಜುಗಳಲ್ಲಿ ಈ ಇಬ್ಬರು ಸಾಧಕರ ಸಾಧನೆಗಳನ್ನು ಪರಿಚಯಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ವಿಜ್ಞಾನ ರಂಗದಲ್ಲಿ ದುಡಿದು, ಕನ್ನಡ ವಿಜ್ಞಾನ ಬರವಣಿಗೆಯ ಲೋಕಕ್ಕೆ ಅನುಪಮ ಕೊಡುಗೆ ನೀಡಿದ ಈ ಮಹಾನ್ ವ್ಯಕ್ತಿಗಳನ್ನು ಅರಿಯಲು, ಅವರ ಪುಸ್ತಕಗಳನ್ನು ಓದಲು, ಅವರುಗಳನ್ನು ಮತ್ತಷ್ಟು ಮಂದಿಗೆ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ನಿರಂತರ ಸಾಗಬೇಕು. ಆ ಕೆಲಸ ಎಲ್ಲರಿಂದಾಗಲಿ ಎಂದು ಹಾರೈಸುತ್ತಾ ಇಂದಿನ ಪುಸ್ತಕಯಾನವನ್ನು ಇಲ್ಲಿಗೆ ಮುಗಿಸುತ್ತೇನೆ.

ನಮಸ್ಕಾರ,

ಆಕಾಶ್‌ ಬಾಲಕೃಷ್ಣ.

ಹೆಚ್ಚಿನ ಮಾಹಿತಿಗಾಗಿ ನೋಡಿ:

1. https://www.youtube.com/watch?v=DIqQ7Ew5qFM – ಪ್ರೊ.ಬಿ.ಜಿ.ಎಲ್.ಸ್ವಾಮಿ ಅವರನ್ನು ಕುರಿತು ನಿರ್ಮಾಣ ಮಾಡಿರುವ ವಿಡಿಯೋ ಡಾಕುಮೆಂಟರಿ.

2. https://bglswamy.com/

3. https://archive.org/details/in.ernet.dli.2015.364416 – ಡಾ.ಬಿ.ಪಿ.ರಾಧಾಕೃಷ್ಣ ಅವರ “ನನ್ನ ತಂದೆ” ಕೃತಿಯ ಸಾಫ್ಟ್‌ ಪ್ರತಿ.

4. https://www.currentscience.ac.in/show.author.php?id=27049 – ಡಾ.ಬಿ.ಪಿ.ರಾಧಾಕೃಷ್ಣ ಅವರು “ಕರೆಂಟ್‌ ಸೈನ್ಸ್‌” ಸಂಶೋಧನಾ ಪತ್ರಿಕೆಗೆ ಬರೆದ ಲೇಖನಗಳು

Leave a Reply