You are currently viewing ಬಡವರ ಬೇಳೆ-ಕಾಳು ಹುರುಳಿ : Macrotyloma uniflorum

ಬಡವರ ಬೇಳೆ-ಕಾಳು ಹುರುಳಿ : Macrotyloma uniflorum

ದಕ್ಷಿಣ ಏಷಿಯಾದಲ್ಲಿ ಕೃಷಿಯು ಆರಂಭವಾದ ಸಮಯದಿಂದಲೂ ಹುರುಳಿಯು ಸುಪರಿಚಿತ ಬೆಳೆಯಾಗಿದೆ. ಆದಾಗ್ಯೂ ಈಗಲೂ ಸಹಾ ಈ ಬೆಳೆಯ ಬಗೆಗೆ ಅಷ್ಟೆನೂ ಆಸಕ್ತಿ ಇಲ್ಲದಿರುವುದು ಅಚ್ಚರಿಯೇ ಸರಿ. ಅದರಲ್ಲೂ ದಕ್ಷಿಣ ಭಾರತೀಯ ನೆಲದಲ್ಲಿ ವಿಕಾಸಗೊಂಡಿರಬಹುದಾದ ಬೆಳೆಗಳಲ್ಲಿ ಒಂದಾದ ಹುರುಳಿಯು ಇಲ್ಲಿಯೂ ಕೂಡ ಅಷ್ಟೆನೂ ಸುದ್ದಿಯನ್ನು ಮಾಡುತ್ತಿಲ್ಲ. ಕಡಲೆ, ತೊಗರಿ, ಬಟಾಣಿಗೆ ಹೋಲಿಸಿದರೆ ಹುರುಳಿಯು ಸುದ್ದಿಯಲ್ಲಿರುವುದು ಅಪರೂಪ. ಎಷ್ಟಾದರೂ ಇದೊಂದು ಬಡವರ ಬೇಳೆ-ಕಾಳು ಎಂದೇ ಪರಿಚಿತ! ಬೆಳೆಯುವ ಬಗೆಯಲ್ಲೂ ಅಷ್ಟೇ! ಮಳೆ, ಹೋಗಿ ಏನೂ ಬೆಳೆಯದಿದ್ದರೆ ಅಥವಾ ಯಾವುದೋ ಕಾರಣಕ್ಕೆ ನೆಲವನ್ನು ಕೃಷಿ ಮಾಡದೆ ಬೀಳು ಬಿಟ್ಟಿದ್ದರೆ, ಆಗಲೂ ಹುರುಳಿಯನ್ನಾದರೂ ಬಿತ್ತಿ ಬೆಳೆಯುವ (ಚೆಲ್ಲುವ) ಸಂಪ್ರದಾಯ ನಮ್ಮಲ್ಲಿದೆ. ಹೀಗೆ ಆಸಕ್ತಿಯೇ ಇಲ್ಲದಿದ್ದರೂ ಕೃಷಿಗೆ ಒಳಗಾಗಿ ಒಂದಷ್ಟು ಕಾಳು ಒದಗಿಸುವ ಜವಾಬ್ದಾರಿಯನ್ನೂ ಹುರುಳಿಯು ನಿಭಾಯಿಸಿದೆ. ಅಷ್ಟೆಲ್ಲಾ ಸಂಕಟಗಳ ನಡುವೆಯೂ ಆಧುನಿಕ ಜಗತ್ತಿನಲ್ಲೂ ತನ್ನಿರುವನ್ನು ಉಳಿಸಿಕೊಂಡಿದೆ. ಇದಕ್ಕಿರುವ ಅತ್ಯಂತ ವಿಶೇಷವೆಂದರೆ ಇದನ್ನು ಯಾರೂ ಸಾಮಾನ್ಯವಾಗಿ ಬೇಳೆಯನ್ನು ಮಾಡಿ ಬಳಸುವುದಿಲ್ಲ! ಏನಿದ್ದರೂ ಇಡೀ ಕಾಳಿನ ಬಳಕೆಯೆ ಸೈ! ಹಾಗಾಗಿ ಹುರುಳಿಯನ್ನು ತಿನ್ನುವುದೆಂದರೆ ಅದರ ಮೇಲಿನ ಹೊಟ್ಟಿನ ಸಮೇತವಷ್ಟೇ! ಇದರಿಂದಾಗಿ ಇದಕ್ಕೆ ಒಂದು ಬಗೆಯ ಆರೋಗ್ಯದ ಜವಾಬ್ದಾರಿಯ ಹಿತವಿದ್ದರೂ, ಹೊಟ್ಟಿನ ಸಮೇತ ತಿನ್ನುಬೇಕಾದ್ದರಿಂದ ನಾಜೂಕಿನ ತಯಾರಿಗಳು ಇದಕ್ಕಿಲ್ಲ. ಇದರಿಂದಾಗಿ ಇತರೇ ಬೇಳೆ-ಕಾಳಿನ ಮರ್ಯಾದೆಯು ಇದಕ್ಕಿಲ್ಲ. ಇಂಗ್ಲೀಶಿನಲ್ಲಿ ಇದನ್ನು ಹಾರ್ಸ್‌ ಗ್ರಾಮ್‌ (Horse Gram) ಎಂದು ಕರೆಯಲು ಮುಖ್ಯ ಕಾರಣ ಬ್ರಿಟಿಷರು ಮತ್ತಿತರ ಮೇಲು ವರ್ಗದವರು ಇದನ್ನು ಕೇವಲ ಕುದುರೆಗೆ ಹಾಗೂ ದನಕರುಗಳಿಗೆ ಆಹಾರವಾಗಿ ಮಾತ್ರವೇ ಬಳಸುತ್ತಿದ್ದುದೇ ಆಗಿದೆ. ಮಲೆಯಾಳಂ ಭಾಷೆಯಲ್ಲೂ ಸಹಾ ಕುದುರೆ ಎಂಬರ್ಥದ “ಕುತಿರಾ” ಪದಕ್ಕೆ ಸಮೀಪವಾದ “ಮತಿರಾ (Muthira) ಎಂಬುದರಿಂದಲೇ ಹುರುಳಿಯನ್ನು ಕರೆಯಲಾಗುತ್ತದೆ.

ಇದನ್ನು ಇಡಿಯ ಕಾಳಾಗಿ ಬಳಸುವುದರಿಂದ ಇದರ ಆರೋಗ್ಯಕಾರಿ ಉಪಯೋಗಗಳ ಧಾರಾಳವಾದ ಅನೇಕ ಸಾಕ್ಷ್ಯಗಳು ದೊರಕುತ್ತವೆ. ಅದರ ಜೊತೆಗೆ ಇದನ್ನು ಇತರೇ ಮತ್ತಾವುದೇ ಬೇಳೆ-ಕಾಳಿಗೂ ಹೋಲಿಸುವಷ್ಟು ಪ್ರೊಟೀನು ಇದರಿಂದ ಲಭ್ಯವಿದ್ದು, ಜೊತೆಗೆ ರುಚಿಯಲ್ಲಿ ಮಾತ್ರ ತನ್ನ ಗುರುತನ್ನು ವಿಶೇಷವಾಗಿಸಿಕೊಂಡಿದೆ. ಮುಖ್ಯವಾಗಿ ಇದನ್ನು ಬೇಯಿಸಲು ಹೆಚ್ಚು ಸಮಯ ಬೇಕಾಗುವುದು. ಹಾಗಾಗಿ ಬೇರಾವುದೇ ಬೇಳೆ-ಕಾಳಿಗಿಲ್ಲದ ವಿಶೇಷ ಬಳಕೆಯೊಂದು ಈ ಕಾಳಿಗಿದೆ. ಅಂದರೆ ಇದನ್ನು ಬೇಯಿಸಲು ಬಳಸಿದ ಹೆಚ್ಚುವರಿ ನೀರನ್ನು (ಹುರುಳಿ ಕಟ್ಟು) ತಿಳಿಸಾರು ಹಾಗೂ ವಿಶೇಷ ಪೇಯವನ್ನು ಮಾಡಲು ಬಳಸಲಾಗುತ್ತದೆ. ಈಗಾಗಲೇ ಪ್ರಸ್ತಾಪಿಸಿದಂತೆ ದನಕರುಗಳ ಆರೋಗ್ಯವನ್ನು ವೃದ್ಧಿಸಲು ಈ ಕಾಳನ್ನು ಬಳಸುತ್ತಾರೆ. ವಿಶೇಷವಾಗಿ ರಾಸುಗಳನ್ನು ಮಾರಾಟ ಮಾಡಲು ಮೇಯಿಸಿ ತಯಾರು ಮಾಡವಾಗ ಹುರುಳಿಯನ್ನು ಧಾರಾಳವಾಗಿ ಬಳಸುತ್ತಾರೆ. ಅಂತಹಾ ಕೃಷಿಕರ ಮನೆಗಳಲ್ಲಿ ಇಂತಹ ಹುರುಳಿ ಬೇಯಿಸಿದ ಡಿಕಾಕ್ಷನ್‌ (ಹುರುಳಿ ಕಟ್ಟು) ಹೆಚ್ಚಾಗಿಯೇ ಲಭ್ಯವಿದ್ದು, ಅವರು ನೆರೆ ಹೊರೆಯರಿಗೂ ಅದನ್ನು ಕೊಡುವುದುಂಟು. ಅಂತೂ ಹುರುಳಿ ಡಿಕಾಕ್ಷನ್‌ ಒಂದು ವಿಶೇಷವೇ ಸರಿ. ಹುರುಳಿಯನ್ನು ಹುರಿದು, ಇಲ್ಲವೇ ನೀರಲ್ಲಿ ನೆನೆಸಿ ಮೊಳಕೆಬರಿಸಿ ಅದನ್ನು ಬಳಸುವ ವಿಶೇಷ ಮಾರ್ಗವನ್ನು ನಮ್ಮ ಸಂಸ್ಕೃತಿಯು ರೂಢಿಸಿಕೊಂಡಿದೆ. ಇವೆರಡಾಕ್ಕೂ ರುಚಿಯಲ್ಲಿ ಅವುಗಳದ್ದೇ ಆದ ವಿಶೇಷತೆಯಿದ್ದು ಅದರ ವಿಶೇಷವನ್ನು ಅಕ್ಷರಗಳಲ್ಲಿ ಬರೆದು ಹೇಳಲಾಗದು. ಉಂಡೇ ಅನುಭವಿಸಬೇಕು!

ಹುರುಳಿಯನ್ನು ಸಸ್ಯವೈಜ್ಞಾನಿಕವಾಗಿ ಮ್ಯಾಕ್ರೊಟೈಲೊಮಾ ಯುನಿಫ್ಲೊರಂ (Macrotyloma uniflorum) ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಯಾವುದೇ ಬೇಳೆ-ಕಾಳುಗಳ ಸಸ್ಯಕುಟುಂಬವಾದ ಲೆಗ್ಯುಮಿನೇಸಿಯೆಗೆ ಇದೂ ಸಹಾ ಸೇರಿದೆ. ವಾಸ್ತವವಾಗಿ ಇದನ್ನು ವರ್ಗೀಕರಿಸಿ ಹೆಸರಿಸುವ ಕುರಿತು ಹಲವಾರು ಅನುಮಾನಕರವಾದ ಸಂಗತಿಗಳು ಇದರ ನಾಮಕರಣದ ಇತಿಹಾಸವನ್ನು ವಿಶೇಷವಾಗಿಸಿವೆ. ಸಸ್ಯ ವರ್ಗೀಕರಣ ಪಿತಾಮಹರಾದ ಕಾರ್ಲ್‌ ಲನೆಯಾಸ್‌ ಮೊದಲು ಇದನ್ನು ಹೆಸರಿಸುವಾಗ ಡಾಲಿಕಾಸ್‌ ಬೈಫ್ಲೊರಸ್‌ ಎಂದು ಕರೆದಿದ್ದರು. ಇದೇ ಹೆಸರು 18 ಮತ್ತು 19ನೆಯ ಶತಮಾನದ ಸಸ್ಯವೈಜ್ಞಾನಿಕ ದಾಖಲೆಗಳಲ್ಲೆಲ್ಲಾ ಬಳಕೆಯಾಗಿತ್ತು. ಇದೇ ಹೆಸರೇ ಸರಿಸುಮಾರು 20ನೆಯ ಶತಮಾನದ ನಾಮಕರಣಗಳಲ್ಲೂ ಮುಂದುವರೆಯಿತು. ಆದರೆ ಲಿನೆಯಾಸ್‌ ಅವರು ಇದನ್ನು 1753ರಲ್ಲಿ ವರ್ಗೀಕರಿಸುವಾಗ ಹುರುಳಿಯೆಂದು ಬಳಸಿದ ಸಸ್ಯದ ಬಗೆಗೆ ಅನುಮಾನಗಳು ಆರಂಭವಾದವು. ವಾಸ್ತವವಾಗಿ ಆ ಸಸ್ಯವು ಅಲಸಂದಿ ಗಿಡದ ಸಮೀಪ ಪ್ರಭೇದವಾಗಿದ್ದು, ನಿಜಕ್ಕೂ ಈಗ ನಾವೆಲಾ ಕಾಣುವ ಹುರುಳಿಯಲ್ಲ ಎಂಬ ತೀರ್ಮಾನವು ತೀರಾ ಇತ್ತೀಚೆಗಿನ ತಿಳಿವಳಿಕೆಯಲ್ಲಿ ಬಂತು. ಹಾಗಾಗಿ ಲಿನೆಯಾಸ್‌ ಕರೆದ ಹೆಸರು ಅಲಸಂದಿ ಗಿಡದ್ದೇ ಆಗಿರುವ ಬಗೆಗೆ ಈಗ ಆದನ್ನು ಅರಿಯಲಾಗಿದೆ. ಈ ತಪ್ಪಾದ ವ್ಯಾಖ್ಯಾನವು ಬಳಕೆಯಲ್ಲಿ ಹಲವಾರು ಗೊಂದಲಗಳನ್ನು ಇನ್ನೂ ಮುಂದುವರೆಸಿ ಅನೇಕ ಕಡೆಗಳಲ್ಲಿ ತಪ್ಪಾದ ದಾಖಲೆಗಳೂ ಇವೆ. ಮುಂದುವರಿದಂತೆ ಡಾಲಿಕಾಸ್‌ ಬೈಫ್ಲೊರಸ್‌ ಅನ್ನು ಡಾಲಿಕಾಸ್‌ ಯುನಿಫ್ಲೊರಂ ಎಂಬುದಾಗಿ ಬದಲಿಸಿ ಸಲಹೆ ನೀಡಲಾಯಿತು. ಆದರೆ ಮುಂದೆ ಇದಕ್ಕೆ ಪರ್ಯಾಯವಾದ ಮ್ಯಾಕ್ರೊಟೈಲೊಮಾ ಯುನಿಫ್ಲೊರಂ ಎಂಬುದರಲ್ಲಿ ನೆಲೆಯಾಯಿತು. ಈ ಬೈಫ್ಲೊರಸ್‌ ಅಥವಾ ಯುನಿಫ್ಲೊರಂಗಳು, ಫ್ಲೋರಾ ಫ್ಲವರ್‌ ಎಂಬುದರ ವ್ಯುತ್ಪನ್ನಗಳಾಗಿದ್ದು, ಜೋಡಿ ಹೂಗಳ ದ್ವಿಫ್ಲೋರಸ್‌, ಒಂದೇ ಹೂವಿನ ಯುನಿಫ್ಲೊರಂ ಮುಂತಾಗಿ ವಿವರಣೆಗಳು ಸಿಗುತ್ತವೆ. ಇವೆಲ್ಲಾ ಬೆಳವಣಿಗೆಗಳೂ 1970-80 ಸುಮಾರಿಗೆ ನಡೆದವು. ಇದೀಗ ಹುರುಳಿ ಸಂಕುಲದಲ್ಲಿ ಸುಮಾರು ಮೂರು ಪ್ರಭೇದಗಳು ಮಾತ್ರ ಇವೆ. ಕೆಲವು ಕಡೆ ಈ ಗೊಂದಲಗಳನ್ನೆಲ್ಲಾ ಬಗೆಹರಿಸಲೆಂದೇ ಡಾಲಿಕಾಸ್‌ ಬೈಫ್ಲೊರಸ್‌ ಮತ್ತು ಅದರ ಜೊತೆಯಲ್ಲೇ ಮ್ಯಾಕ್ರೊಟೈಲೊಮಾ ಯುನಿಫ್ಲೊರಂ ಅನ್ನೂ ಬಳಸುವುದನ್ನು ಕಾಣಬಹುದಾಗಿದೆ. ಈ ಬೈಫ್ಲೊರಸ್‌ -ಎರಡು ಹೂಗಳಿರುವ ಎಂಬರ್ಥದ ಅಥವಾ ಯುನಿಫ್ಲೊರಸ್‌ -ಒಂದೇ ಹೂವಿರುವ ಎಂಬರ್ಥದ ಗೊಂದಲಗಳು ಅಲಸಂದೆ ಬೆಳೆಯ ಮೂಲದಿಂದ ಆರಂಭದಲ್ಲಿ ಕಂಡಬಂದವುಗಳಾಗಿವೆ. ಈಗ ಅವುಗಳನ್ನೆಲ್ಲಾ ನಿವಾರಿಸಿ ಹುರುಳಿಯನ್ನು ಮ್ಯಾಕ್ರೊಟೈಲೊಮಾ ಯುನಿಫ್ಲೊರಂ ಎಂದೇ ಕರೆಯಲಾಗುತ್ತಿದೆ. ತೀರಾ ಅಚ್ಚರಿಯಾದ ಸಂಗತಿ ಏನೆಂದರೆ ಇದೊಂದು ಅಪ್ಪಟ ಭಾರತೀಯ ಅದರಲ್ಲೂ ದಕ್ಷಿಣ ಭಾರತೀಯ, ಜೊತೆಗೆ ಕನ್ನಡ ನೆಲದಲ್ಲೂ ನಂಟನಿಟ್ಟುಕೊಂಡ ಸಸ್ಯ. ಈ ಎಲ್ಲಾ ಗೊಂದಲಗಳಲ್ಲೂ ದಕ್ಷಿಣದವರಿರಲಿ, ಭಾರತೀಯರೂ ಯಾರೂ ಇಲ್ಲದಿರುವುದು ನಾಚಿಗೆ ಗೇಡಿನ ಸಂಗತಿ. ಕಾರಣ ಹುರುಳಿಯನ್ನು ಸಾವಯವದ ತುತ್ತೂರಿಯಲ್ಲಿ ಮೊಳಗಿಸಿ ನಮ್ಮದೇ ಶ್ರೇಷ್ಠ ಎನ್ನುವ ಮಂತ್ರದ ನಮ್ಮ ನಾಲಿಗೆ ಇದನ್ನೆಲ್ಲಾ ಮಾತಾಡಲು ಆಗಿಲ್ಲ!. ಇನ್ಸ್‌ಸ್ಟಿಟ್ಯೂಟ್‌ ಆಫ್‌ ಆರ್ಕಿಯಾಲಜಿ, ಲಂಡನ್‌ ವಿಶ್ವವಿದ್ಯಾಲಯದ ಡಾ. ಡಿ. ಕ್ಯು. ಫುಲ್ಲರ್‌ ಮತ್ತು ಡಾ. ಸಿ. ಮರ್ಫಿ ಎಂಬಿಬ್ಬರು ತೀರಾ ಇತ್ತೀಚೆಗೆ ಅಂದರೆ ಕೇವಲ ಕಳೆದ ೨೦೧೮ರಲ್ಲಿ ಇವನ್ನೆಲ್ಲಾ ಹೆಕ್ಕಿ ಪರಿಶೋಧಿಸಿದ್ದಾರೆ. ಹುರುಳಿಯ ಕಥನವನ್ನು ಬೆಳೆಸಿದ ಈ ಆಂಗ್ಲರು ಮತ್ತಷ್ಟು ವಿವರಗಳನ್ನು ಈ ಕೆಳಗಿನಂತೆ ಸೇರಿಸಿದ್ದಾರೆ.

ಹುರುಳಿಯು ಅತ್ಯಂತ ಹಳೆಯ ಬೆಳೆಯಾದ್ದರಿಂದ ಈ ಗೊಂದಲಗಳನ್ನು ನಿವಾರಿಸಲೆಂದೇ ಹಳೆಯ ಬಳಕೆಯಲ್ಲಿನ ಭಾಷೆಯ ಮೂಲವನ್ನು ಹೊಕ್ಕು ತಿಳಿಯುವ ಪ್ರಯತ್ನವನ್ನು ಮಾಡಲಾಯಿತು. ಜಗತ್ತಿನಲ್ಲೇ ಹುರುಳಿಯ ಹೆಚ್ಚು ಬಳಕೆಯು ದಕ್ಷಿಣ ಭಾರತದಲ್ಲಿ ಇರುವುದರಿಂದ ಇಡೀ ಭಾರತೀಯ ಭಾಷೆಯ ಮೂಲಗಳಿಂದ ನಾಮಕರಣದ ಕಥನವನ್ನು ಹೊಸೆಯಲು ಇಂಗ್ಲೀಶರು ಆರಂಭಿಸಿದರು. ಭಾರತೀಯ ಭಾಷೆಗಳ ಮೂರು ಮುಖ್ಯ ಗುಂಪುಗಳನ್ನು ಸಮೀಕರಿಸಿ ಅರಿಯುವ ಪ್ರಯತ್ನವನ್ನೂ ಮಾಡಲಾಗಿದೆ. ಅದರಲ್ಲೂ ಮೂಲತಃ ದಕ್ಷಿಣದ ಮೂಲವಾದ್ದರಿಂದ ದ್ರಾವಿಡ ಮೂಲದ ತಿಳಿವಳಿಕೆಯನ್ನೇ ದೃಢವಾಗಿ ನಂಬಕೊಂಡು ಹುರುಳಿಯ ಜನ್ಮನಾಮವನ್ನು ತಡಕಾಡಿ ಅದರ ದ್ವಿನಾಮದ ಪರಿಗಣನೆಯನ್ನು ಮಾಡಲಾಯಿತು. ಈ ಹುಡುಕಾಟದಲ್ಲಿ ನೆರವಾದ ನೆಲದಲ್ಲಿ ಕರ್ನಾಟಕದ ತುಂಗಭದ್ರಾ ದಡದ ಹಳ್ಳೂರು ಮತ್ತು ಬಳ್ಳಾರಿ ಜಿಲ್ಲೆಯ ಸಂಗನಕಲ್ಲಿನ ಪ್ರಾಚ್ಯ ಸಂಶೋಧನೆಯ ವಿವರಗಳು ಹುರುಳಿಗೆ ಬಲವನ್ನು ಒದಗಿಸಿದವು. ಇದಲ್ಲದೆ ಗೋದಾವರಿಯ ಆಸುಪಾಸು, ರಾಜಸ್ಥಾನ ಮತ್ತು ಗುಜರಾತಿನ ನೆಲದ ಕುರುಹುಗಳೂ ಒಂದಷ್ಟು ಬಲವನ್ನು ಕೊಟ್ಟವು. ಇಲ್ಲಿನ ಪ್ರಾಚ್ಯಶೋಧನೆಯ ಹಿನ್ನೆಲೆಯಿಂದ ಹುರುಳಿಯ ಬೆಳೆಯು ಕ್ರಿ.ಪೂ 3000ದಷ್ಟು ಹಿಂದಿನಿಂದಲೇ ದಕ್ಷಿಣ ಭಾರತದಲ್ಲಿ ಇರುವ ಬಗ್ಗೆಯೂ ತೀರ್ಮಾನಿಸಲಾಗಿದೆ. ಲಂಡನ್‌ ವಿಶ್ವವಿದ್ಯಾಲಯದ ವರದಿಯು ನಾವೆಲ್ಲರೂ ಗಮನಿಸದಿದ್ದ ಹುರುಳಿಯನ್ನು ಅಮೂಲಾಗ್ರವಾಗಿ ಪರಿಶೋಧಿಸಿ ಅದರ ಹೆಸರಿನ ಮತ್ತು ಅದರ ವಂಶಜರ ಪೂರ್ವಾಪರಗಳನ್ನು ದಾಖಲಿಸಿದ್ದಾರೆ. “ನಮ್ಮವರೆಲ್ಲಾ ಮಾಡಿಟ್ಟಿದ್ದಾರೆ” ಎಂದುಕೊಳ್ಳುವ ನಮಗೆ ಒಂದಷ್ಟು ಚಾಟಿ ಏಟನ್ನೂ ನಮ್ಮದೇ ಗಿಡವೊಂದು ಬೀಸಿರುವುದು ಗಮನಿಸಿಬೇಕಾದ ಸಂಗತಿ. ಕಡೆಗೂ ಹುರುಳಿಯು ನಮ್ಮದೇ ಎಂದು ತೋರಿಸಿದವರು ಪಾಶ್ಚಿಮಾತ್ಯರು!

ಹುರುಳಿಗೆ ಹೀಗೆ ತುಂಬಾ ಪುರಾತನವಾದ ಕಥೆಯೊಂದಿದೆ ಎಂದು ಅರಿವಿಗೆ ಕೊಟ್ಟದ್ದಲ್ಲದೆ, ಅದರ ಇತರೇ ವನ್ಯ ಸಂಬಂಧಿಗಳೂ ಸಹಾ ದಕ್ಷಿಣ ಭಾರತದ ಹಾಗೂ ವಾಯುವ್ಯ ಭಾರತದ ನೆಲಗಳ ಸಾಭೀತನ್ನೂ ಕೂಡ ಕಂಡುಕೊಳ್ಳಲಾಗಿದೆ. ಆದರೀಗ ಹುರುಳಿಯು ಇಡೀ ಆಫ್ರಿಕಾವನ್ನೂ, ದಕ್ಷಿಣ ಚೀನಾವನ್ನೂ, ಅಮೆರಿಕಾ ಆಸ್ಟ್ರೇಲಿಯಾವನ್ನೂ ಆವರಿಸಿದೆ. ಅಲ್ಲೆಲ್ಲಾ ಎಲ್ಲೆಲ್ಲಿ ಒಣ ನೆಲದ ಕೃಷಿಯಿದೆಯೋ ಅಲ್ಲೆಲ್ಲಾ ಹುರುಳಿಯು ಪರಿಚಿತ ಬೆಳೆಯಾಗಿದೆ. ಎಲ್ಲಕ್ಕಿಂತಾ ಹೆಚ್ಚಾಗಿ ಅತ್ಯಂತ ಹಳೆಯ ಬೇಳೆ-ಕಾಳು ಹಾಗೂ ತುಂಬಾ ಕೃಷಿಯ ಸಂಕಷ್ಟವನ್ನೂ ಸಹಿಸಿಕೊಳ್ಳುವ ಬೆಳೆ. ಜೊತೆಗೆ ಬಡವರ ಬೇಳೆ-ಕಾಳು. ಭಾರತೀಯ ಕೃಷಿ ಸಂಶೋಧನಾ ಪರಿಷತ್‌ ಮತ್ತು ರಾಷ್ಟ್ರೀಯ ಸಸ್ಯಗಳ ಆನುವಂಶಿಕ ಸಂಶೋಧನಾ ಬ್ಯೂರೋ ಇದೀಗ ಭಾರತೀಯ ಮೂಲದ ಸ್ಥಳಿಯ ತಳಿಗಳನ್ನೆಲ್ಲಾ ಸಂಗ್ರಹಿಸಿಟ್ಟಿದೆ. ಹೀಗೆ ಸಂಗ್ರಹಾರದಲ್ಲಿರುವ ಸ್ಥಳೀಯ ತಳಿಗಳು ೧೭೦೦ರಷ್ಟಿವೆ. ಜೊತೆಗೆ ಕೇರಳದ ತ್ರಿಶೂರ್‌ನಲ್ಲಿ ಇರುವ ಕೃಷಿ ಸಂಶೋಧನಾ ಸಂಸ್ಥೆಯನ್ನು ಹುರುಳಿಯ ವಿವಿಧ ತಳಿಗಳ ಸಂರಕ್ಷಣೆ ಮತ್ತು ಇತರೇ ಸಂಶೋಧನೆಯ ಮುಂದಾಳತ್ವದ ಜವಾಬ್ದಾರಿ ವಹಿಸಿಕೊಳ್ಳವಂತೆ ನಿರ್ವಹಿಸಲಾಗಿದೆ. ಇಷ್ಟಾದರೂ ಇಡಿಯಾಗಿ ಹುರುಳಿಯ ಒಟ್ಟಾರೆ ಆನುವಂಶೀಯ ತಳಿಗಳ ವಿವಿಧತೆ ಮುಂತಾದ ವಿವರಗಳ ಬಗೆಗೆ ಅಷ್ಟೆನೂ ಮಹತ್ವವಾದ ಸಂಗತಿಗಳು ಸಂಗ್ರಹವಾಗಿಲ್ಲ. ಸಂಗ್ರಹಗಳೆಲ್ಲವೂ ವಿವಿಧ ಪ್ರದೇಶಗಳಿಂದ ತಂದವುಗಳಾಗಿವೆ.

ಹುರುಳಿ ಸಸ್ಯವು ತುಂಬಾ ನವಿರಾದ, ತೆಳು-ಹಸಿರಾದ ಬಣ್ಣದ ಬೆಳೆ. ಬಿಸಿಲಿಗೆ ಮೆರುಗಿನ ಹಸಿರನ್ನು ಹಳದಿ ಬೆರೆಕೆಯೊಂದಿಗೆ ಪ್ರತಿಫಲಿಸುವ ಸ್ವಭಾವದ್ದು. ಈ ಗಿಡದ ಕಾಂಡ ಅಷ್ಟೊಂದು ಶಕ್ತಿಯುತವಾದ್ದಲ್ಲ. ಹಾಗಾಗಿ ಯಾವುದಾರೂ ಇತರೇ ಬೆಳೆಯನ್ನು ಆಶ್ರಯಿಸಿ ಬೆಳೆಯಲು ಹೆಚ್ಚು ಅನುಕೂಲಕರವಾಗಿದೆ. ಆದರೂ ಒಂದೇ ಬೆಳೆಯನ್ನೂ ಅನೇಕ ಬಾರಿ ರೈತರು ರೂಢಿಸಿಕೊಂಡಿರುವುದುಂಟು. ಅಪ್ಪಟ ಮಳೆಯಾಶ್ರಯದ ಬೆಳೆಯಾದ್ದರಿಂದ, ಜೊತೆಗೆ ಸಾಕಷ್ಟು ಒನ ವಾತಾವರಣವನ್ನೂ, ಬಿಸಿಲನ್ನೂ ತಡೆದುಕೊಳ್ಳುವುದರಿಂದ ಇದನ್ನು ತೀರಾ ಕಡೆಗಾಣಿಸಿದ ನೆಲಕ್ಕೆ ಬಿತ್ತುವುದು ಸಹಜ ಹಾಗೇಯೇ ಇದಕ್ಕಿರುವ ಗೌರವ ಕೂಡ ಅಷ್ಟಕಷ್ಟೇ! ಆದರೇನಂತೆ ಇದರ ಕಾಳುಗಳಿಗೆ ಬೇರಾವ ಬೇಳೆ-ಕಾಳಿಗಿಂತಲೂ ಹೆಚ್ಚು ಬಾಳಿ-ಬದುಕುವ ಗುಣ ದಕ್ಕಿದೆ. ಹಾಗಾಗಿ ಹುರುಳಿಯನ್ನು ಸುಲಭವಾಗಿ ಇತರೇ ಲೆಗ್ಯೂಮ್‌ ಬೆಳೆಕಾಳಿಗಿಂತ ಸುಲಭವಾಗಿ ಸಂರಕ್ಷಿಸಬಹುದು. ತೊಗರಿಯನ್ನಾಗಲಿ, ಕಡಲೆಯನ್ನಾಗಲಿ ಸಂರಕ್ಷಿಸಲು ಬೇಕಾದ ಕಷ್ಟ ಹುರುಳಿಗೆ ಖಂಡಿತಾ ಇರುವುದಿಲ್ಲ! ಈ ಹೆಮ್ಮೆಯನ್ನು ಹುರುಳಿಯು ಪಡೆದುಕೊಂಡಿದೆ.

ಹುರುಳಿಯ ಸಾರು, ಕಾಳು ಬೇಯಿಸಿದ ಡಿಕಾಕ್ಷನ್‌ (ತಿಳಿ)ಯಿಂದ ಮಾಡಲಾದ ಸಾರು, ಹುರಿದು ಮಾಡಿದ ಸಾರು, ಮೊಳಕೆ ಬರಿಸಿ ಮಾಡಿದ ಸಾರು, ಜೊತೆಗೆ ಇವೆಲ್ಲವುಗಳನ್ನೂ ಬಳಸಿದ ಪಲ್ಯ ಇತ್ಯಾದಿ..ಹಾಂ ಇವೆಲ್ಲವೂ ಯಾವುದೇ ಬೇಳೆಗೂ ಇಲ್ಲದ ವಿಶೇಷ ರುಚಿಯನ್ನು ಹೊಂದಿವೆ. ಹಾಗಾಗಿ ಹುರುಳಿಯ ಪಲ್ಯ ಸಾರು ವಿಶೇಷವಾದ ಆಕರ್ಷಣೆ ಮತ್ತು ಗಮನವನ್ನು ಪಡೆದಿದೆ. ಕಾಳಿನಲ್ಲಿ ಮಾಮೂಲಿ ಬೇಳೆ-ಕಾಳಿನ ಪ್ರೊಟೀನಿನ ಜೊತೆಗೆ ಸಾಕಷ್ಟು ಕ್ಯಾಲ್ಸಿಯಂ, ಕಬ್ಬಿಣ ಹಾಗೂ ರಂಜಕವನ್ನು ಹೊಂದಿದೆ. ಇವೆಲ್ಲವೂ ನಮ್ಮ ಆಹಾರಾಂಶದ ಪ್ರಮುಖವಾದ ಖನಿಜಗಳಾದ್ದರಿಂದ ಹುರುಳಿಯು ಇವುಗಳನ್ನು ನಿಭಾಯಿಸುವ ಸುಲಭದ ಕಾಳೂ ಆಗಿದೆ. ಹದವಾಗಿ ನೆನೆಸಿ ಮಾಡಿದ ಕಾಳು-ಒಗ್ಗರಣೆ ಅಥವಾ ಮೊಳಕೆಯ ಒಗ್ಗರಣೆಗಳು ನಿಮಗೀಗ ನೆನಪಾಗಿ ಬಾಯಲ್ಲಿ ನೀರೂರಿರಲು ಸಾಕು. ಹೈದರಾಬಾದಿನಲ್ಲಿರುವ ಭಾರತೀಯ ಕೆಮಿಕಲ್‌ ಟೆಕ್ನಾಲಜಿ ಸಂಸ್ಥೆಯು (Indian Institute of Chemical Technology) ಹುರುಳಿಯ ಬಳಕೆಯ ವಿಶೇಷ ಗುಣವಿಶೇಷಣಗಳ ರಸಾಯನಿಕ ಸಂಗತಿಗಳ ಬಗೆಗೆ ಸಂಶೋಧನೆಗಳನ್ನು ನಡೆಸುತ್ತಿದೆ. ಈಗಾಗಲೇ ತಿಳಿವಿಗೆ ಬಂದಂತೆ ಮಧುಮೇಹದ ಆರೋಗ್ಯಕ್ಕೆ ಉತ್ತಮ ಫಲಿತವನ್ನು ನೀಡಬಲ್ಲ ಆಹಾರದ ಗುಣಗಳನ್ನು ಹುರುಳಿಯು ಹೊಂದಿರುವ ಬಗೆಗೆ ಸಂಸ್ಥೆಯ ವರದಿಗಳು ದಾಖಲಿಸಿವೆ. ಕಾಳಿನಲ್ಲಿ ಇರುವ ರಂಜಕದ ಸಂಯುಕ್ತಗಳು ಮಧುಮೇಹದ ಆಹಾರಾಂಶದ ಗುಣಗಳನ್ನು ನೀಡುವಲ್ಲಿ ಅನುಕೂಲಕರವಾಗಿವೆ ಎಂಬುದಾಗಿ ತಿಳಿಯಲಾಗಿದೆ.

ಇನ್ನೇನು ಬೇಸಿಗೆಗೆ ವಾತಾವರಣವು ತೆರೆದುಕೊಳ್ಳುವ ಕಾಲ. ದನ-ಕರುಗಳ ಜಾತ್ರೆಗಳು ಆರಂಭವಾಗುವ ದಿನಗಳೂ ಕೂಡ. ಹುರುಳಿಯು ದನಕರುಗಳ ಮಾರಾಟಕ್ಕೆ ಬೇಕಾದ ತಯಾರಿಯನ್ನು ನಡೆಸಲು ಬೆಂಬಲದ ಕಾಳಾಗಿದೆ. ಹಾಗಾಗಿ ಕೃಷಿಕರ ಮನೆಗಳಲ್ಲಿ ಹುರುಳಿಯ ಡಿಕಾಕ್ಷನ್‌ (ಕಟ್ಟು) ಧಾರಾಳವಾಗಿ ಸಿಗಬಹುದು. ಇಲ್ಲದಿದ್ದರೂ ಚಿಂತೆ ಯಾಕೆ? ನಾವೂ ನೆನಸಿ, ಒಂದಷ್ಟು ಮೊಳಕೆ ಬರಿಸಿ ಹದವಾಗಿ ಕೊತ್ತಂಬರಿ, ಸಬ್ಬಸಿಗೆ ಸೊಪ್ಪಗಳನ್ನು ಬೆರೆಸಿ (ಕಳೆದೆರಡು ವಾರದ ನೆನಪಿನಿಂದ) ಅಣಿಮಾಡಿ ನನಗೂ ಆಹ್ವಾನ ಕೊಡಿ. ನಿಮ್ಮೊಡನೆ ಹುರುಳಿಯ ಸವಿಯಲು ನಾನಂತೂ ರೆಡಿ.

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್

This Post Has 3 Comments

 1. Apprameya Yogish

  Good article.

 2. ಶ್ರೀಹರಿ ಕೊಚ್ಚಿನ್

  ಹುರುಳಿಕಾಳಿನ ಬಗ್ಗೆ ಬರೆದು ಕಾಳಿನ ಕಟ್ಟು ಜ್ಞಾಪಿಸಿ ಬಾಯಲ್ಲಿ ನೀರೂರಿಸಿಬಿಟ್ಟಿರಿ ..ಗಾಢವಾದ ಕಪ್ಪು ಬಣ್ಣದ ಕಟ್ಟಿನ ತಯಾರಿಯನ್ನ ನನ್ನು ಸ್ನೇಹಿತರ ಮಗಳ ಮದುವೆಯಲ್ಲಿ ಸವಿದದ್ದು ಜ್ಞಾಪಕವಾಯಿತು . ಹುರುಳಿಕಾಳಿನ ಮೊಳಕೆಯ ಪಲ್ಯವು ಹಾಗೆಯೇ ..ನೀವಂದ ಹಾಗೆ ಉಂಡೇ ಸವಿಯಬೇಕು.

  ಹಿತ್ತಲ ಗಿಡ ಮದ್ದಲ್ಲ ಎಂಬಂತೇ ನಾವು ಪ್ರೊಟೀನ್ ನನ್ನು ಹುರುಳಿಯಲ್ಲಿ ಬಿಟ್ಟು ಇನ್ನೆಲ್ಲೋ ಹುಡುಕುತಿದ್ದೇವೆ . ನಿಮ್ಮ ಲೇಖನ ಅತ್ಯಂತ ಪ್ರೋಟೀನಭರಿತವಾಗಿದೆ ಧನ್ಯವಾದಗಳು …

 3. Srikantha Shenoy TV

  Excellent. Now, the old practice of preserving the Kattu Saru, by making its concentrate is gaining market acceptability. A very convenient food to the urbanites, living in with rural nostalgia

Leave a Reply