You are currently viewing ಫುಕುವೊಕಾ ಅವರನ್ನು ಭೇಟಿ ಮಾಡಲು ಹೋಗಿದ್ದು…!

ಫುಕುವೊಕಾ ಅವರನ್ನು ಭೇಟಿ ಮಾಡಲು ಹೋಗಿದ್ದು…!

“The ultimate goal of farming is not the growing of crops, but the      cultivation and perfection of human beings. – Fukuoka

ಕೃಷಿಯು ಕೇವಲ ಬೆಳೆಗಳ ಉತ್ಪಾದನೆಯಷ್ಟೇ ಅಲ್ಲ! ಅದೊಂದು ಬಗೆಯಲ್ಲಿ ಮಾನವರನ್ನೇ ಪರಿಪೂರ್ಣತೆಯತ್ತ ಕೃಷಿ ಮಾಡುವ ಬಗೆ ಎಂದು ಫುಕುವೊಕಾ ವ್ಯಾಖ್ಯಾನಿಸಿದ್ದಾರೆ. ಕೃಷಿಯ ದಾರ್ಶನಿಕ ಹಿನ್ನೆಲೆಯು ಇರುವುದೇ ಹಾಗೇ! ಇಡೀ ಮಾನವಕುಲದ ಮೂಲಭೂತ ಅವಶ್ಯಕತೆಯಾದ ಆಹಾರದ ಜವಾಬ್ದಾರಿಯನ್ನು ಹೊರಲು, ಅಪಾರ ಕುತೂಹಲ, ಬೆರಗುಗಳ ಜೈವಿಕ ಸಂಗತಿಗಳ ಸಾಗರವನ್ನೇ ತನ್ನೊಡಲಲ್ಲಿ ಇಟ್ಟುಕೊಂಡು, ಕೃಷಿಕ/ರೈತ ಎಂಬ ಒಂದೇ ವೃತ್ತಿಯಲ್ಲಿ ನಿಭಾಯಿಸುತ್ತಿದೆ. ಹಾಗಾಗಿಯೇ ರೈತನನ್ನು “ನೇಗಿಲ ಯೋಗಿ” ಎಂದು ಸುಮಾರು 1930ರ ದಶಕದಲ್ಲೇ ಕುವೆಂಪು ಅವರು ಕರೆದಿದ್ದರು. ಅಷ್ಟೂ ಸಾಲದಂತೆ ಕೃಷಿಕರ ಇತ್ತೀಚೆಗಿನ ವ್ಯಾಪಾರ/ಮಾರಾಟ/ವಹಿವಾಟುಗಳ ಹಿನ್ನೆಲೆಯನ್ನು ಬಿಟ್ಟು ಹಿಂದಿನ ಪರಂಪರೆಯಲ್ಲಿ ನೋಡಿದಾಗ ಈ ಮಾನವ ಪರಿಪೂರ್ಣತೆಯ ಕೃಷಿಯು ನೂರಾರು ರೂಪಕಗಳಾಗಿ ಕಾಣುವುದು ಸಹಜ. ಇಂತಹದನ್ನೇ ಜಾಗತಿಕವಾಗಿ ಅದರ ದಾರ್ಶನಿಕ ಸೊಗಸನ್ನು ಪ್ರಾಯೋಗಿಕವಾಗಿ ಹೆಕ್ಕಿ ಅನಾವರಣಗೊಳಿಸಿದವರು ಜಪಾನಿನ ಕೃಷಿ ದಾರ್ಶನಿಕ ಮಸನೊಬಾ ಫುಕುವೊಕಾ.  

ಕೃಷಿಯ ಜಾಗತಿಕ ಇತಿಹಾಸದಲ್ಲಿ ಒಂದು ವಿಶಿಷ್ಟ ಕ್ರಾಂತಿಯನ್ನು ಹಬ್ಬಿಸಿದವರಲ್ಲಿ ಪ್ರಮುಖವಾದ ಹೆಸರು, ಜಪಾನಿನ ಮಸುನಾಬು ಫುಕುವೊಕಾ ಅವರದ್ದು. ಅದರಲ್ಲೂ ಅವರ “ಒಂದು ಹುಲ್ಲಿನ ಕ್ರಾಂತಿ(One Straw Revolution)” ಪುಸ್ತಕದ ಮೂಲಕ ನಿಜಕ್ಕೂ ಕೃಷಿಯೊಳಗೊಂದು ಕ್ರಾಂತಿಯನ್ನು ಮಾಡಿದರು. ಮೂಲತಃ ಗಿಫು ಪ್ರಾಂತ್ಯದ ಕೃಷಿ ಕಾಲೇಜೊಂದರಲ್ಲಿ ಕೃಷಿವಿಜ್ಞಾನದ ವಿದ್ಯಾರ್ಥಿಯಾಗಿದ್ದು, ಮುಂದೆ ಕೃಷಿಸೂಕ್ಷ್ಮಜೀವಿ ವಿಜ್ಞಾನಿಯಾಗಿ ತರಬೇತಿಯನ್ನು ಪಡೆದವರು. ಜಪಾನಿನ ಸಂಸ್ಥೆಯೊಂದರಲ್ಲಿ ಸಂಶೋಧನಾ ವಿಜ್ಞಾನಿಯಾಗಿದ್ದ, ಮಸನಾಬು ಫುಕುವೊಕಾ ಕೃಷಿಯಲ್ಲಿ ಆಧ್ಯಾತ್ಮಿಕ ಅನುಸಂಧಾನವನ್ನು ಕಂಡವರು. ಅದಕ್ಕಾಗಿ ಕೆಲಸವನ್ನು ತೊರೆದು ಶಿಕೊಕು ದ್ವೀಪದಲ್ಲಿ ನೆಲೆಯಾಗಿ ರೈತರಾದರು. ಆಗ ಕಂಡು ಅನುಸಂಧಾನಿಸಿದ ಶ್ರೀಮಂತವಾದ ತಮ್ಮ ಅಪೂರ್ವ ಅನುಭವಗಳಿಂದ “ಒಂದು ಹುಲ್ಲಿನ ಕ್ರಾಂತಿ(One Straw Revolution)” ಪುಸ್ತಕವಾಗಿ ದಾಖಲಿಸಿ ಹಂಚಿದರು. ಇದು 1975ರಲ್ಲಿ ಮೊದಲು ಜಪಾನಿ ಭಾಷೆಯಲ್ಲಿ ಪ್ರಕಟವಾಯಿತು. ಅದನ್ನು 1978ರಲ್ಲಿ ಇಂಗ್ಲೀಶ್‌ ಭಾಷೆಗೆ ಅನುವಾದಿಸಿ ಸಂಪಾದಿಸಿದವರು ಫುಕೊವೊಕಾರ ವಿದ್ಯಾರ್ಥಿ ಅಮೆರಿಕದ ಲಾರಿ ಕಾರ್ನ್‌ (Larry Korn) ಅವರು.

ಅವರ ಬಗ್ಗೆ ತಿಳಿದಿದ್ದ ಲಾರಿ ಕಾರ್ನ್‌ ಫುಕುವೊಕಾರ ಬಳಿ ಬಂದು ಹಲವಾರು ವರ್ಷಗಳ ಕೃಷಿಯ ಪ್ರಾಯೋಗಿಕ ಅನುಭವವನ್ನು ಪಡೆದರು. ಅವರ ಜೊತೆಗೆ ಅವರ ಜಮೀನಿನಲ್ಲಿ ವರ್ಷಾನುಗಟ್ಟಲೆ ವಾಸವಾಗಿದ್ದು, ಜಮೀನಿನಲ್ಲೇ ವಾಸವಿದ್ದು ಕೃಷಿ ಮಾಡುವ ಬಗೆಯನ್ನು ಅನುಭವಿಸಿದರು. “ಒಂದು ಹುಲ್ಲಿನ ಕ್ರಾಂತಿ(One Straw Revolution)” ಪುಸ್ತಕದ ಅನುವಾದದ ಬಗ್ಗೆ ಅವರು ದಾಖಲಿಸಿದ “ಕೃಷಿಯ ಆಧ್ಯಾತ್ಮಿಕ ಚಿಂತನೆಯನ್ನು ಹಿಡಿದಿಟ್ಟಿರುವ ಜಪಾನಿ ಭಾಷೆಯ ಸತ್ತ್ವ ಇಂಗ್ಲೀಶಿಗೆ ಕಷ್ಟ”  ಎಂಬ ಮಾತು ಮೂಲ ಕೃತಿ ಮತ್ತು ಕೃತಿಕಾರನ ಬಗೆಗೆ ಸದಾ ನೆನಪು ಉಳಿಯುವಂತಹದು.   ಮುಂದೆ ಈ ಪುಸ್ತಕ ಕನ್ನಡಕ್ಕೂ ಗೆಳೆಯ ಸಂತೋಷ್‌ ಕೌಲಗಿ ಅನುವಾದಿಸಿ ಪ್ರಕಟಿಸಿದರು.

ಅದರ ಜೊತೆಯಲ್ಲಿ ಭಾರತದ ಸಂಪುಟವು ಪ್ರಕಟವಾದದ್ದು, ಡಾ. ಪ್ರತಾಪ್‌ ಅಗರವಾಲ್‌ ಎಂಬುವರ ಮೂಲಕ.         ಡಾ. ಪ್ರತಾಪ್‌ ಅಗರವಾಲ್‌ ಓರ್ವ ಅಂತ್ರೊಪಾಲಜಿಸ್ಟ್‌- ಮಾನವ ಶಾಸ್ತ್ರಜ್ಞರು. ಮಧ್ಯ ಪ್ರದೇಶದ ರಸೂಲಿಯಾದ ಫ್ರೆಂಡ್ಸ್‌ ಸೆಂಟರ್‌  (Friends Rural Centre in Rasulia, Madhya Pradesh) ಎಂಬಲ್ಲಿ ನೆಲೆಯಾದವರು. ಇವರು ಮೊಟ್ಟ ಮೊದಲು ಫುಕೊವೊಕಾರ ಪುಸ್ತಕದ ಬಗ್ಗೆ ತಿಳಿದು ಇಂಡಿಯಾದ ಮೊಟ್ಟ ಮೊದಲ ಪ್ರತಿಯನ್ನು ತರಿಸಿದ್ದರು. ಇದನ್ನೆಲ್ಲಾ ಅವರು ಮುನ್ನುಡಿಯಲ್ಲಿ ಪ್ರಸ್ತಾಪಿಸಿರುವಂತೆ, “ಪುಸ್ತಕವನ್ನು ಪೋಸ್ಟ್‌ನಿಂದ ಪಡೆದ ಕ್ಷಣದಿಂದಲೇ ಒಂದು ಮರದ ನೆರಳಲ್ಲಿ ಓದಲು ಆರಂಭಿಸಿದರೆ ಸಂಜೆಯಾಗಿ ಕತ್ತಲಾದದ್ದೇ ತಿಳಿಯಲಿಲ್ಲ” ಎಂದಿದ್ದಾರೆ.  ಲಾರಿ ಕಾರ್ನ್‌ ಮತ್ತು ಪ್ರತಾಪ್‌ ಅಗರವಾಲ್‌ ಅವರ ಈ ಎರಡು ಮಾತುಗಳು ಪುಸ್ತಕವನ್ನು ಮೊದಲ ಬಾರಿಗೆ ಸರಿ ಸುಮಾರು 1985-86ರಲ್ಲಿ ಕಂಡಾಗಲೇ ಆಕರ್ಷಿಸಿದ್ದವು. ಸಂತೋಷ್‌ ಕೌಲಗಿ ಅವರ ಕನ್ನಡದ ಅನುವಾದವನ್ನು ಜನಪದ ಸೇವಾ ಟ್ರಸ್ಟ್‌, ಮೇಲುಕೋಟೆ ಪ್ರಕಟಿಸಿದೆ.

ಅದೇ ಸಮಯದಲ್ಲಿ ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಲೈಬ್ರರಿಯಲ್ಲಿದ್ದ ರೇ ವುಲ್ಫ್‌ ಎಂಬವರ ಆರ್ಗಾನಿಕ್‌ ಫಾರ್ಮಿಂಗ್‌ (Organic Farming, by Ray Wolf) ಪುಸ್ತಕವನ್ನು ಹಿಡಿದುಕೊಂಡು ಓಡಾಡುತ್ತಿದ್ದ ನನಗೆ ನನ್ನ ಗುರುಗಳಾದ ಡಾ. ವಿ.ಎ.ಕೆ. ಸರ್ಮಾ (VAK Sarma) ಅವರು What, Channesh? Organic Farming book with you…? A Soil Science Student… This doesn’t work here.. it is not for you… (ಏನು ಚನ್ನೇಶ್‌, ಸಾಯಿಲ್‌ ಸೈನ್ಸ್‌ ವಿದ್ಯಾರ್ಥಿ ನೀನು, ಇದು ನಿನಗಲ್ಲ…ಇಲ್ಲೆಲ್ಲಾ ಇದು ಆಗದು) ಎಂದಿದ್ದರು. ಡಾ. ಸರ್ಮಾ ಕೇರಳ ಮೂಲದ ವಿಜ್ಞಾನಿ. ಹೆಬ್ಬಾಳದ ಮಣ್ಣು ಸರ್ವೇಕ್ಷಣಾ ಬ್ಯೂರೋ (NBSS & LUP) ಯಲ್ಲಿ Clay Mineralogist ಆಗಿದ್ದರು. ಅವರು ಇಂದಿಗೂ ಜಾಗತಿಕವಾಗಿ ಪ್ರಸಿದ್ಧವಾದ ಮಣ್ಣು ವಿಶ್ಲೇಷಣೆಗೆ ಬೈಬಲ್‌ ಆದಂತಹಾ Soil Chemical Analysis ಪುಸ್ತಕದ ಕೃತಿಕಾರ ವಿಜ್ಞಾನಿ ಎಂ. ಎಲ್‌. ಜಾಕ್‌ಸನ್‌ (M.L. Jackson) ಅವರ ವಿದ್ಯಾರ್ಥಿ. ನಾನು ಡಾ. ವಿ.ಎ.ಕೆ. ಸರ್ಮಾ ಅವರ ವಿದ್ಯಾರ್ಥಿಯಾಗಿ ಸರ್ಮಾ ಬಗ್ಗೆ ಅಪಾರ ಗೌರವ ಪ್ರೀತಿಯುಳ್ಳವನು..! ಇಷ್ಟೆಲ್ಲಾ Legacy-ಪರಂಪರೆಯ ಕುತೂಹಲ ಪ್ರೀತಿಯ ಬೆರಗು ಎಲ್ಲವೂ ಒಟ್ಟಾಗಿ ಫುಕುವೊಕಾರ ಭೇಟಿಯ ಆಸಕ್ತಿಯ ಹಿನ್ನೆಲೆಯನ್ನು ಸೃಷ್ಟಿಸಿದ್ದವು.

ಮಸನೊಬು ಫುಕುವೊಕಾ ಪರಿಚಯವಾದದ್ದು 80ರ ದಶಕದ ಕೊನೆಯರ್ಧದಲ್ಲಿ. ಒಂದು ಹುಲ್ಲಿನ ಕ್ರಾಂತಿ ಕೃಷಿಯ ಇತಿಹಾಸ ಮತ್ತು ಪ್ರಯೋಗಿಕ ಬಳಕೆ ಎರಡರಲ್ಲೂ ಕ್ರಾಂತಿಯನ್ನು ಎಬ್ಬಿಸಿದ ಪುಸ್ತಕವಾದರೂ ಅದೇ ಸರಣಿ ಎಂಬಂತೆ ಇನ್ನೂ ಎರಡು ಪ್ರಮುಖ ಪುಸ್ತಕಗಳನ್ನು ಫುಕೊವೊಕಾ ಪ್ರಕಟಿಸಿದ್ದಾರೆ. ಒಂದು ಹುಲ್ಲಿನ ಕ್ರಾಂತಿಯಲ್ಲಿ ಸ್ವಾಭಾವಿಕ/ನೈಸರ್ಗಿಕ ಕೃಷಿಯ ಮೂಲ ತತ್ವಗಳ ಪೀಠಿಕೆಯಾಗಿದ್ದರೆ, ಅದರ ವಿವರವಾದ ಮುಂದುವರಿಕೆ ಎಂಬಂತೆ ದ. ನ್ಯಾಚುರಲ್‌ ವೇ ಆಫ್‌ ಫಾರ್ಮಿಂಗ್‌ (The Natural Way of Farming) ಪ್ರಕಟಿಸಿದರು. ಇದರಲ್ಲಿ ಹಸಿರು ದಾರ್ಶನಿಕತೆಯ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಸಾಧ್ಯತೆಗಳ ವಿವರವಾದ ಪರಾಮರ್ಶೆ ಮತ್ತು ವಿಧಾನಗಳು ಇವೆ. ಇದರ ನಂತರದಲ್ಲಿ “ದ ರೋಡ್‌ ಬ್ಯಾಕ್‌ ಟು ನೇಚರ್‌ (The Road Back to Nature) ಎಂಬುದಾಗಿ ಕಳೆದು ಹೋದ ಸ್ವರ್ಗವನ್ನು ಮರುಸ್ಥಾಪಿಸುವ ಚಿಂತನೆಯನ್ನು, ಒಂದು ರೀತಿಯಲ್ಲಿ ಆತ್ಯಂತಿಕ ದಾರ್ಶನಿಕ ಚಿಂತನೆಗಳನ್ನು ಪ್ರಕಟಿಸಿದರು. ಕ್ರಾಂತಿಗೆ ಕಿಡಿ ಹತ್ತಿಸಿದ ರುಚಿ ಮೊದಲ ಪುಸ್ತಕದಲ್ಲಿದ್ದರೂ, ಅದರ ವಿವರವಾದ ಮಾರ್ಗಗಳನ್ನು ಮುಂದುವರೆದು ನೀಡಿದ ಮೇಲೆ, ಸಂಪೂರ್ಣ ಪ್ರಾಯೋಗಿಕ ಸಾದ್ಯತೆಗೆ ತುಸು ಕಷ್ಟ ಹಾಗೂ ಸಂಕೀರ್ಣ ಎನ್ನುವಂತಹಾ ನಿಸರ್ಗಕ್ಕೆ ಮರು ಪಯಣವನ್ನು ನೀಡಿದ್ದರು. ಈ ಮೂರು 90ರ ದಶಕದ ಒಳಗೇ ಪ್ರಕಟಿಸಿದ್ದು ಒಟ್ಟಾಗಿಯೇ ಪರಿಚಯವಾಗಿದ್ದವು.

90ರ ದಶಕಕ್ಕೂ ಮೊದಲೇ ಭಾರತಕ್ಕೆ ಬಂದಿದ್ದರೂ, 1991ರಲ್ಲಿ ಮತ್ತೊಮ್ಮೆ ಬೆಂಗಳೂರಿನ ಪಕ್ಕದ ತಮಿಳುನಾಡಿನ ಹೊಸೂರು ಹತ್ತಿರದ ತಳಿ ಗ್ರಾಮದ “ಅತಿಥಾಶ್ರಮ”ಕ್ಕೆ ಅವರು ಬರುವವರಿದ್ದರು. ಆ ವೇಳೆಗಿನ ಅವರ ಕುರಿತಂತೆ ಈ ಹಿಂದೆ ಹೇಳಿದ ಅಪೂರ್ವ (ನಿಜಕ್ಕೂ ಭೌಗೋಳಿಕವಾಗಿ- ಪೂರ್ವದ!) ಚಿಂತನೆಗಳು ಅವರನ್ನು ಖುದ್ದಾಗಿ ನೋಡುವ ಆಸೆಯನ್ನು ತುಂಬಿದ್ದವು.

ಸರಿ ನಾನು ನನ್ನ ಗೆಳೆಯ ಅಮರ್‌ ನನ್ನ ಬೈಕನ್ನೇರಿ ಬೆಂಗಳೂರಿನಿಂದ ತಳಿಗೆ ಹೊರಟೆವು. ಅಷ್ಟೊತ್ತಿಗಾಗಲೇ ಫುಕುವೊಕಾ ಪರಿಚಯವಾಗಿ ಸುಮಾರು ನಾಲ್ಕೈದು ವರ್ಷಗಳಾಗಿದ್ದವು. ಭೇಟಿಯ ಆಸೆಗೆ ಮೊದಲಿನಿಂದಲೂ ಕಾಡಿದ ವಿಚಾರಗಳ ಅಮೂರ್ತವಾದ ನೆನಪುಗಳನ್ನು ಈವರೆಗೂ ಹೇಳಿದೆನಷ್ಟೇ! ತಳಿಗೆ ತಲುಪಿದಾಗ ಮಧ್ಯಾಹ್ನ ದಾಟಿ ಸಂಜೆಗೆ ಅಣಿಯಾಗುತ್ತಿತ್ತು. ಮರುದಿನ ಬೆಳಗಾದರೆ ಫುಕೊವೊಕಾ ಕೊಲ್ಕಾತ್ತಾದಿಂದ ಬೆಂಗಳೂರಿಗೆ ಬಂದು ತಳಿ ತಲುಪುವವರಿದ್ದರು. ಆಶ್ರಮದಲ್ಲಿ ಉಳಿಯಲು ತಯಾರಾಗೇ ಬಂದ ನಮ್ಮಿಬ್ಬರಿಗೂ ಆ ದಿನ ಸಂಜೆಯ ಅಪೂರ್ವ (ಭೌಗೋಳಿಕವಾಗಿ ಪೂರ್ವ..!) ದಾರ್ಶನಿಕ ದೃಷ್ಟಾಂತಗಳ ಪ್ರವಚನದಿಂದ ತಯಾರಿ ಆರಂಭವಾಗಿತ್ತು. ಅದೇನದು ಪೂರ್ವದ ಅಪೂರ್ವ(?)..! ಹಾಂ..ಪೂರ್ವದ ಮಿಸ್ಟಿಕಲ್‌ ಸಂಗತಿಗಳಲ್ಲಿ ಪಶ್ಚಿಮದ ವಿಜ್ಞಾನದ ಹುಡುಕಾಟದ ಬಗೆಗಿನ ಹಲವು ಪ್ರಕಟಣೆಗಳಲ್ಲಿ ಫ್ರಿಟ್ಜಾಫ್‌ ಕಾಪ್ರಾ ಅವರ “ದ ತಾವೊ ಆಫ್‌ ಫಿಸಿಕ್ಸ್‌” (The Tao of Physics: An Exploration of the Parallels Between Modern Physics and Eastern Mysticism book by physicist Fritjof Capra) ಒಂದು. ಅದರ ವಿವರವಾದ ಮಾತುಗಳನ್ನು ಆಶ್ರಮದ ಸ್ವಾಮಿಗಳ ಬಾಯಿ ತುಂಬಿದ್ದನ್ನು ಕೇಳುತ್ತಲೇ ನಮ್ಮ ಕಿವಿಗಳು ಇದ್ದಕ್ಕಿದ್ದಂತೆ ಸ್ವಿಚ್‌ ಆಫ್‌ ಮಾಡಿಕೊಂಡಿದ್ದವು. ನಮ್ಮ ಮಂತ್ರ-ತಂತ್ರಗಳಲ್ಲಿ ಎಲ್ಲವೂ ಇರುವ ಇದ್ದಂತಹಾ ಈಗಿನ ಮಾತುಗಳಿಗೆ ಅವು ಪೀಠಿಕೆಯಂತಿದ್ದವು. ಕಾಪ್ರಾ ಅಪ್ರತಿಮ ವಿಶ್ಲೇಷಣೆಕಾರ, ನಿಜ ಅವರ ಗ್ರೀನ್‌ ಪಾಲಿಟಿಕ್ಸ್‌ (Green Politics) ಇಕಾಲಜಿಯ ರಾಜಕೀಯ ಬದ್ಧತೆಯನ್ನು ಹುಟ್ಟು ಹಾಕಿದ್ದರೂ, ಅದೇನೋ ಅಪೂರ್ವ ಫಿಸಿಕ್ಸ್‌ ಅನ್ನು ಅರಗಿಸಿಕೊಳ್ಳುವ ಕಷ್ಟ ಎದುರಾಗಿತ್ತು. ಕಾರಣ ಇಷ್ಟೇ ಇವೆಲ್ಲವೂ ಮಹತ್ವವಾದ್ದೇನನ್ನೂ ಫಿಸಿಕ್ಸ್‌ನಲ್ಲಿ ಸಾಧಿಸಿಲ್ಲದರ ಮರು ನೆನಪು ಅಷ್ಟೇ!

ಫುಕುವೊಕಾರ ಭೇಟಿಗೆ ಹೋದಾಗ ಆರಂಭದ ಅನುಭವಗಳಾದ ಇವುಗಳಿಗೂ ಭೇಟಿಗೂ ಸಂಬಂಧವನ್ನೀಗ ಅನುರಣಿಸಬೇಕಿದೆ. ಮರುದಿನ ಬೆಳಗಾಯ್ತು.. ಎಂದಿನಂತೆ ಸಹಜವಾಗಿ! ಸಹಜ ಕೃಷಿಯ ಪ್ರವರ್ತಕರನ್ನು ಕಾಣಲು ಬಂದವರಿಗೆ ಆತಂಕದ ಸುದ್ದಿ. ಇದ್ದಕ್ಕಿದ್ದಂತೆ “ಬೆಂಗಳೂರಲ್ಲಿ ಕಾವೇರಿ ಗಲಾಟೆ” ಆರಂಭವಾಗಿತ್ತು. ಅಯ್ಯೋ ಇನ್ನು ಬೆಂಗಳೂರು ಹಾದು ಬರುವವರಾದರೂ ಹೇಗೆ ಬಂದಾರು, ಎಂಬ ಆತಂಕದ ಸುದ್ದಿಯನ್ನೂ ಮುಂಜಾನೆಯ ಕಾಫಿಯ ಜೊತೆಗೆ ಸವಿಯುತ್ತಾ ಹಂಚಿದ್ದೆವು. ಬಹುಶಃ ಫುಕೊವೊಕಾರದ್ದೂ ಅದೇ ಭಾರತದ ಕಡೆಯ ಭೇಟಿ. ಕೊಲ್ಕಾತ್ತಾದಲ್ಲಿ ಬಂದಿಳಿದಿದ್ದ ಅವರು ದಣಿವಿರದ ಓಡಾಟಗಳಿಂದ ಪ್ರಯಾಣವನ್ನು ರದ್ದುಗೊಳಿಸಿದ್ದರು. ಇದಾವುದರ ನಿಖರವಾದ ಸುದ್ದಿಯೂ ತಿಳಿಯದ ಅನೇಕ ಕೃಷಿ -ಪ್ರೀತಿಯ ಮಿತ್ರರು, ಹಲವು ರೈತರು ಬೆಂಗಳೂರಿಂದ ತಮಿಳುನಾಡಿನ ಗಡಿ ದಾಟಲು ಸಾಧ್ಯವಾಗದೆ ಒದ್ದಾಡಿದ್ದರು. ಫುಕೊವೊಕಾರ ಭೇಟಿಯಿಂದ ವಂಚಿತರಾದವೆಂದು ತಮ್ಮೊಳಗೇ ಅಲವತ್ತುಗೊಂಡಿದ್ದರು. ಆದರೆ ವಾಸ್ತವವಾಗಿ ತಮಿಳುಗಡಿ ದಾಟಿ ಒಳಹೊಕ್ಕ ನಾವೂ ಸಹಾ ಫುಕೊವೊಕಾರನ್ನು ಮಿಸ್‌ ಮಾಡಿಕೊಂಡಿದ್ದೆವು.

ಈ ಹಿನ್ನೆಲೆಯ ನೆನಪುಗಳನ್ನು ಅಮೂರ್ತವೆಂದು ಪ್ರಸ್ತಾಪಿಸಿದ್ದೇನೆ. ತುಸು ಒಳಹೊಕ್ಕು ಈಗ ಅವುಗಳನ್ನು ವಿಸ್ತಿರಿಸಿ, ಹಿಗ್ಗಿಸಿ, ಒಂದಷ್ಟು ಜಾಣತನದಿಂದ ನೋಡಿದರೆ, ಓಹ್‌ ಹೌದಲ್ಲ..ಹೀಗೂನಾ.. ಅನ್ನಿಸೀತು. ಭೌಗೋಳಿಕ ಪೂರ್ವದ ಅಪೂರ್ವ ಫಿಸಿಕ್ಸ್‌ ನಲ್ಲಿ ಇನ್ನೂ ಮಾತುಗಳಲ್ಲೇ ಇದೆ! ಪಾರಂಪರಿಕ ನೆಲೆಯನ್ನು ಕಟ್ಟಲು ಕೃಷಿಗೆ ದಾರ್ಶನಿಕ ಹಿನ್ನೆಲೆಯನ್ನು ಮಂತ್ರ ಘೋಷಗಳಿಂದ- ಅರಿಯದ್ದನ್ನು – ಅರಿವಿಗೆ ಬಾರದ್ದನ್ನು ಮಿಸ್ಟಿಕ್‌ (ಅತೀಂದ್ರಿಯ) ಎಂದೆಲ್ಲಾ ಕಳೆದ ಎರಡು ದಶಕಗಳು ವಾಸ್ತವವಾಗಿಸಿದವು. ಹಾಗೇ ಹಿಂದಿನ ಟಿಪ್ಪಣಿಯ ಸಾಲುಗಳನ್ನು ನೆನಪಿಸಿಕೊಂಡು ನೋಡಿ.. ಕೃಷಿ ಕಾಲೇಜಿನ ಕಾರಿಡಾರ್‌ನಲ್ಲಿ ನನ್ನ ಕೈಯಲ್ಲಿಯ Organic Farming ಪುಸ್ತಕ ಕಂಡು, ಇದೆಲ್ಲಾ ಇಲ್ಲಿಗಲ್ಲ .. This doesn’t work here.. it is not for you ಅಂದಿದ್ದರು. ಇದೀಗ Organic Farming ಕುರಿತ ರೀಸರ್ಚ್‌, ಅಧ್ಯಯನ ಕೃಷಿ ವಿವಿಯ ಭಾಗವಾಗಿದೆ. ಸಾಲದಕ್ಕೆ Organic Farming ಪ್ರಾಡಕ್ಟ್‌ಗಳೂ ಕೂಡ ಮಾರುಕಟ್ಟೆಯಲ್ಲಿ ದುಬಾರಿಯಾದರೂ ನೆಲೆಯನ್ನು ಕಂಡುಕೊಂಡಿವೆ. ಫುಕೊವೊಕ ಅವರ ಮಾನವ ಜೀವನದ ಪರಿಪೂರ್ಣತೆಯನ್ನು ಕೃಷಿ ಮಾಡುವ ಸಹಜತೆಯು ಮಾರುಕಟ್ಟೆಯ ಬೆಸುಗೆಯನ್ನು ಪಡೆದಿದೆ.

ಅದರ ನಂತರದಲ್ಲಿ ಅದೆಷ್ಟೋ ರೈತರು/ ಸ್ವಘೋಷಿತ ಕೃಷಿ(?)ಸಂತರು, ಸಹಜ ಕೃಷಿಯ ಬಗೆಯು ತಮಗೇ ಸ್ವಂತವಾಗೇ ಹೊಳೆದದ್ದು ಎಂದು ಸಾಧಿಸಲು ತೊಡಗಿದರು. ಕೆಲವರನ್ನು ಫಾದರ್‌ ಆಫ್‌ ಇಂಡಿಯನ್‌ ಆರ್ಗಾನಿಕ್‌ ಫಾರ್ಮಿಂಗ್‌ ಎಂತಲೂ, ಮತ್ತೆ ಕೆಲವರನ್ನು ಇನ್ನೇನೋ ಆಗಿ ಹೊಗಳಿದ್ದೂ ಆಯ್ತು. ಆರ್ಗಾನಿಕ್‌ ಕೃಷಿ ಮಿಷಿನ್‌ ಕೂಡ ಜಾರಿಗೆ ಬಂತು! ಅಲ್ಲಲ್ಲಿ ಕೆಲ ರಾಜ್ಯಗಳು ಸಂಪೂರ್ಣ ಸಹಜ ಕೃಷಿಯ ನೆಲವಾಗಿಸುವ ಘೋಷಣೆಗಳನ್ನು ಜಾರಿಗೆ ತಂದರು.. ಇಷ್ಟೆಲ್ಲದರ ನಡುವೆಯೂ ಕೃಷಿ ಹೆಚ್ಚೂ ಕಡಿಮೆಯಾದಾಗ ಅದಕ್ಕೆ ಕ್ಲೈಮೇಟ್‌ ಚೇಂಜ್‌.. ಬಿಡಿ.. ಎಂದೂ ಸಮಾಧಾನಿಸಿ ರಾಜಕೀಯ ಸಮಿತ್ತುಗಳ ಮೊರೆ ಹೊಕ್ಕರು. ನಿಜಕ್ಕೂ ಕ್ರಾಂತಿಯೊಡ್ಡಿದ ಫುಕುವೊಕರಿಂದ ಕ್ರಾಂತಿಯ ಕಿಡಿ ಹಚ್ಚಿದ್ದು ನಿಜ ಎಂದು ಒಪ್ಪಿಕೊಳ್ಳದೆ ಹೋದರು.  

ಅಂದು ಫುಕೊವೊಕಾ ಅವರನ್ನು ಭೇಟಿ ಆಗಲಿಲ್ಲ, ಕಾಣಲೇ ಇಲ್ಲ.. ಮುಂದೆಂದೂ ಸಹಾ ಕಾಣಲಾಗಲೇ ಇಲ್ಲ. ಜಾಗತಿಕವಾಗಿ ಅಪೂರ್ವ ಸಿದ್ಧಾಂತವೊಂದನ್ನು ಕ್ರಾಂತಿಕಾರಕವಾಗಿಸಿದ, ಅವರು 2008ರ ಆಗಸ್ಟ್‌ ನಲ್ಲಿ ಜಗತ್ತಿನಿಂದಲೇ ದೂರವಾದರು. ಮುಂದಿನ ಎರಡು ದಿನಗಳಲ್ಲಿ ಡಾ. ಪ್ರತಾಪ್‌ ಅಗರವಾಲ್‌ ಅವರ ಜೊತೆ ಒಂದು ದಿನ ಕಳೆದು ಅವರ ಮೊದಲ ಓದಿನ ಆನಂದವನ್ನು ಕೇಳಿದ್ದೆವು. ಮುಂದೆ ಅದುವೇ, ಆ ಆನಂದವೇ ಭಾರತದಲ್ಲಿ ಆರ್ಗಾನಿಕ್‌ ಫಾರ್ಮಿಂಗ್‌ ಕುರಿತಂತೆ ಇಷ್ಟೆಲ್ಲಾ ಆಗಲು ಕಾರಣವಾಗಿದ್ದು ಎಂಬುದು ಮಾತ್ರ ಸ್ಪಷ್ಟವಾಗಿ ಚಿರಂತನ ನೆನಪಾಗಿ ಉಳಿದಿದೆ. ಸ್ವಘೋಷಿತ ಸಂತರ ಪಟ್ಟಿ ಅದೆಷ್ಟೇ ಉದ್ದವಾಗಿದ್ದರೂ ನೆನಪಿನಿಂದ ಮರೆಯಾಗಿದೆ.  

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್      

Leave a Reply