You are currently viewing ಪೋಲಿಯೋ ವ್ಯಾಕ್ಸೀನ್‌ ಅಭಿವೃದ್ಧಿ ಪಡಿಸಿದ ಮಾನವತಾವಾದಿ ವೈದ್ಯವಿಜ್ಞಾನಿ ಜೊನಸ್ ಸಾಕ್

ಪೋಲಿಯೋ ವ್ಯಾಕ್ಸೀನ್‌ ಅಭಿವೃದ್ಧಿ ಪಡಿಸಿದ ಮಾನವತಾವಾದಿ ವೈದ್ಯವಿಜ್ಞಾನಿ ಜೊನಸ್ ಸಾಕ್

ಇಂದು ಜೊನಾಸ್‌ ಸಾಕ್‌ ಅವರ ಜನ್ಮ ದಿನ. ಪೇಟೆಂಟು ಮಾಡದ ಪೋಲಿಯೋ ವ್ಯಾಕ್ಸೀನು ಮತ್ತು ವಿಜ್ಞಾನವನ್ನು ಮಾನವತೆಯ ಜತೆ ಸಮೀಕರಿಸಿದ “ಸಾಕ್‌ ಜೈವಿಕ ಅಧ್ಯಯನಗಳ ಸಂಸ್ಥೆ” ಎರಡೂ ಅವರ ಮಹತ್ವದ ಕೊಡುಗೆಗಳು.

ಕಳೆದ 2014ರ ಅಕ್ಟೋಬರ್ 28ರಂದು ಪೋಲಿಯೋ ವ್ಯಾಕ್ಸೀನ್ ಅನ್ನು ಅಭಿವೃದ್ಧಿ ಪಡಿಸಿದ ವೈದ್ಯ ವಿಜ್ಞಾನಿ ಜೊನಸ್ ಸಾಕ್‌ರ ನೂರನೇ ಹುಟ್ಟು ಹಬ್ಬದ ದಿನದ ನೆನಪಿಗಾಗಿ ಗೂಗಲ್, ತನ್ನ ವೆಬ್‌ ತಾಣದಲ್ಲಿ “Thank you Dr. Salk” ಎಂಬ ಶೀರ್ಷಿಕೆಯಲ್ಲಿ ಒಂದು ಡೂಡಲ್ ಪ್ರದರ್ಶಿಸಿತ್ತು. ಮಹಾನ್ ಮಾನವತಾವಾದಿಯೆಂದೇ ಪರಿಚಿತರಾದ ಜೊನಾಸ್‌ ಸಾಕ್, ಒಬ್ಬ ಅಪರೂಪದ ವೈದ್ಯ ವಿಜ್ಞಾನಿ. ಕಳೆದ ಶತಮಾನದ ಅತ್ಯಂತ ಭೀಕರ ರೋಗವೆಂದು ಹೆಸರಾಗಿದ್ದು, ಮಕ್ಕಳನ್ನು ಬಲಿ ತೆಗೆದುಕೊಂಡು, ಅನೇಕರನ್ನು ಜೀವನ ಪರ್ಯಂತ ಅಂಗವಿಕಲರನ್ನಾಗಿಸುತ್ತಿದ್ದ ಪೋಲಿಯೋಗೆ ಒಂದು ಶಾಶ್ವತ ಕೊನೆಯನ್ನು ಮುಟ್ಟಿಸಿದ ವಿಜ್ಞಾನಿ ಅವರು. ಮಾತ್ರವಲ್ಲ, ಆ ಕಾಲಕ್ಕೆ ಕನಿಷ್ಠ 7000 ದಶಲಕ್ಷ ಡಾಲರ್ ಗಳಿಸಬಹುದಾಗಿದ್ದ ಅನ್ವೇಷಣೆಗೆ ಪೇಟೆಂಟ್ ಮಾಡಿಸದೆ ಉಚಿತವಾಗಿ ಮಾನವತೆಗಾಗಿ ದೇಣಿಗೆ ನೀಡಿದ ಅಪರೂಪದ ವಿಜ್ಞಾನಿ.

ಇವತ್ತಿನ ದಿನಗಳಲ್ಲಿ ಹೋಲಿಸಿದರೆ ಜೊನಾಸ್‌ ತುಂಬಾ ಅಪರೂಪದ ವೈದ್ಯರೇ ಸರಿ. ಅಷ್ಟು ಮಾತ್ರವೇ ಅಲ್ಲದೇ, ವಿಜ್ಞಾನವನ್ನು ಮಾನವತೆಯ ಜತೆ ಸಮೀಕರಿಸಿ, ಸಂಶೋಧನೆಯನ್ನು ಅರ್ಥಪೂರ್ಣವಾಗಿ ಸ್ವತಂತ್ರವಾಗಿ, ಸಾರ್ಜಜನಿಕ ಹಿತಕ್ಕೆಂದೇ ನಡೆಸುವ ಹಿನ್ನೆಲೆಯ ಒಂದು ಸಂಸ್ಥೆ (Salk Institute of Biological Studies) ಯನ್ನು ಸ್ಥಾಪಿಸುವ ಮೂಲಕ ಜಗತ್ತಿಗೇ ನೀಡಿದವರು. ವೈದ್ಯಕೀಯ ವೃತ್ತಿಗೂ ಒಂದು ವಿಜ್ಞಾನಿಕ ದರ್ಶನವನ್ನು ಮಾನವತೆಯ ಸಂಕಟಗಳ ಪರಿಹಾರದ ಹಿನ್ನೆಲೆಯಲ್ಲಿ ಪರಿಕಲ್ಪಿಸಿದವರು. ಇಂದಿನ ವೈದ್ಯಕೀಯ ವ್ಯವಸ್ಥೆಯಲ್ಲಿ ಕಾಣದ, ಅವರ ಇಂತಹ ವಿಶೇಷ ಗುಣದಿಂದಲೇ ಅವರನ್ನು “ಜೈವಿಕ-ದರ್ಶನ ವಿಜ್ಞಾನದ ಪಿತಾಮಹ”ನೆಂದು ಕರೆಯಲು ಸಾಧ್ಯವಾಯಿತು. ಅಷ್ಟಕ್ಕೂ ಪೋಲಿಯೋ ವ್ಯಾಕ್ಸೀನನ್ನು ಏಕೆ ಪೇಟೆಂಟ್ ಮಾಡಿಸಲಿಲ್ಲ? ಎಂಬ ಪ್ರಶ್ನೆಗೆ ಅವರ ಉತ್ತರ ಕೂಡ ತೀರಾ ವಿಶಿಷ್ಟವಾಗಿದೆ. ಅವರು ಹೇಳಿದ್ದು ಹೀಗೆ, “ಏಕೆ… ಪೇಟೆಂಟ್? ಇಲ್ಲ! ಯಾರಾದರೂ ಸೂರ್ಯನಿಗೆ ಪೇಟೆಂಟ್ ಮಾಡಿಸುವರೇ?” ಹೀಗೆ ತಮ್ಮ ಅನ್ವೇಷಣೆಯನ್ನೂ ಸೂರ್ಯನಷ್ಟೇ ಅಥವಾ ಅವನ ಬೆಳಕಿನಷ್ಟೇ ಸುಲಭವಾಗಿಸುವ ಆಶಯದಲ್ಲಿ ಉತ್ತರಿಸಿದ್ದರು. 

       ಹೆಚ್ಚೂ ಕಡಿಮೆ ಪೋಲಿಯೊ ನಿರ್ಮೂಲನೆಯಾಗಿರುವ ಇಂದಿನ ಸಂದರ್ಭದಲ್ಲಿ ಅದರ ಭೀಕರತೆಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇ. 1930ರಿಂದ 1950ರ ನಡುವೆ ಪೋಲಿಯೊ ವೈರಸ್ ತುಂಬಾನೇ ಕಾಡಿತ್ತು. ಅಮೆರಿಕಾವಂತೂ ಅದರ ಭಯಾನಕತೆಗೆ ನಲುಗಿಹೋಗಿತ್ತು. ಇಡೀ ಪಾಶ್ಚಾತ್ಯ ಪ್ರಪಂಚದ ದೇಶಗಳು ಪೋಲಿಯೊಗೆ ಹೆದರಿ ಕಂಗಾಲಾಗಿದ್ದವು. ಪೋಲಿಯೊ ಪೀಡಿತರ ಮಲದಿಂದಲೂ ಸೋಂಕು ಹರಡುತ್ತಿದ್ದು, ಮಲ ಮೂತ್ರಗಳ ತಾಣಗಳೇ ಇರುವಂತಹ ಭಾರತೀಯ ಸಂದರ್ಭದಲ್ಲಿ ಅದನ್ನು ಊಹಿಸಿಕೊಳ್ಳುವುದೇ ಕಷ್ಟ. ಆದರೆ ಇಲ್ಲಿನ ಬಿಸಿಲು ವರವಾಗಿ ಅದರ ಹರಡುವಿಕೆಯನ್ನು ತಡೆಗಟ್ಟಿತ್ತು. ತಂಪು ವಾತಾವರಣವುಳ್ಳ ದೇಶಗಳಿರುವ ಪಶ್ಚಿಮವು ನೆಲವು ಹಾಗಲ್ಲ. ಪೋಲಿಯೊ ವೈರಸ್ಸಿನ ಸಾಂಕ್ರಾಮಿಕತೆಯು ಸುಲಭವಾಗಿ ಹರಡುತ್ತಿದ್ದು, ತುಂಬಾ ತೀವ್ರತೆಯಿಂದ ಕಾಡುತಿತ್ತು.

ಅವರ ಮಗ ಡೆರಿಲ್‌ ಸಾಕ್‌ (Darrell Salk) receives a polio vaccination from his father

ಪೋಲಿಯೋ ಹಿಂದಿನ ಸಂಕಟಗಳು 

ಹಿಂದೆಲ್ಲಾ ಪೋಲಿಯೋ ಸೋಂಕು ತಗುಲಿತೆಂದರೆ ಲಕ್ಷಾಂತರ ಮಕ್ಕಳು ಅಂಗವಿಕಲತೆಗೆ ಒಳಗಾಗುತ್ತಿದ್ದರು. ಕೆಲವರು ಸೋಂಕು ತಗುಲಿದರೂ ಅದರ ಯಾವುದೇ ಚಿಹ್ನೆಗಳನ್ನೂ ತೋರಿಸದೆ ಕೇವಲ ಸಾಮಾನ್ಯ ಶೀತ ಬಂದವರಂತೆ ನರಳುತ್ತಿದ್ದರು. ಕೆಲವೊಮ್ಮೆ ಕುತ್ತಿಗೆ ಬಿಗಿತದ ಜತೆಗೆ ಒಂದಷ್ಟು ನೋವು ಇರುತ್ತಿತ್ತು. ಕೆಲವು ಮಕ್ಕಳಿಗೆ ವಿಪರೀತವಾದ ನೋವಿನಿಂದ ನರಳಾಟದ ಪರಿಸ್ಥಿತಿ. ಅನೇಕರು ಕಾಲುಗಳ ಸ್ವಾಧೀನ ಕಳೆದುಕೊಂಡು ಶಾಶ್ವತವಾಗಿ ಕುಂಟರಾಗುವ ಸಂಭವವೇ ಹೆಚ್ಚಾಗಿರುತ್ತಿತ್ತು. ಕೆಲವೊಮ್ಮೆ ಉಸಿರಾಟದ ತೊಂದರೆಯೂ ಸೇರಿಕೊಂಡು ಸೋಂಕು ಉಂಟಾದ ದೇಹದ ಭಾಗ ಲಕ್ವ ಹೊಡೆದಂತೆ ಆಗುತ್ತಿತ್ತು. ಯಾವುದೇ ಭಾಗವು ಸೋಂಕು ತಗುಲಿದ್ದರೆ ಆ ಭಾಗಕ್ಕೆ ಹೆಚ್ಚು ತೊಂದರೆಗಳನ್ನು ಅನುಭವಿಸಬೇಕಾಗುತ್ತಿತ್ತು. ಆಯಾ ಭಾಗದ ನರಗಳು ಸ್ವಾಧೀನ ಕಳೆದುಕೊಂಡು ಶಕ್ತಿಹೀನವಾಗಿ ನಿಷ್ಕ್ರೀಯವಾಗುತ್ತಿದ್ದವು. ಕೆಲವೊಮ್ಮೆ ಲಕ್ವದ ತೀವ್ರತೆಯು ಹೆಚ್ಚಾಗಿಯೂ 2ರಿಂದ 4 ದಿನಗಳೊಳಗೆ ವಿಪರೀತ ಜ್ವರದಿಂದ ನರಳುವಂತಾಗಿ, ಜ್ವರ ಇಳಿದ ನಂತರ ಮಾಮೂಲಿನಂತೆ ಕಾಣುತ್ತಿದ್ದರು. ಆದರೂ ಸಾಮಾನ್ಯವಾಗಿ 2ರಿಂದ 10ರಷ್ಟು ಪ್ರತಿಶತ ಮಂದಿ ಮಾತ್ರ ಸಾವಿಗೆ ಒಳಗಾಗಿ, ಇತರೆ ಅನೇಕರು ಶಾಶ್ವತ ಅಂಗವಿಕಲತೆಯನ್ನು ಅನುಭವಿಸಬೇಕಾಗುತ್ತಿತ್ತು. ಸಾಮಾನ್ಯವಾಗಿ ಸೋಂಕು ತಗುಲಿದ 6ರಿಂದ 20 ದಿನಗಳೊಳಗೆ ತೊಂದರೆಗಳು ಆರಂಭವಾಗುತ್ತಿದ್ದವು. ಕಡೆಗೂ 1954ರ ವೇಳೆಗೆ ವ್ಯಾಕ್ಸೀನ್‌ ಸಾಮೂಹಿಕ ಬಳಕೆಗೆ ಬಂದು 1955ರ ಏಪ್ರಿಲ್‌ಗೆ ಉತ್ತಮ ಫಲಿತಾಂಶವೂ ಸಿಕ್ಕಿತ್ತು.

ಭಾರತವನ್ನು ಇಂದು ಪೋಲಿಯೊ ಮುಕ್ತವೆಂದು ಘೋಷಿಸಲಾಗಿದೆ. ಭಾರತದಲ್ಲಿ 1985ರಲ್ಲಿ ಬಾಯಿಯ ಮೂಲಕ (ಓರಲ್) ವ್ಯಾಕ್ಸೀನಿನ ಹನಿಯನ್ನು ಹಾಕಲು ಆರಂಭಿಸಲಾಯಿತು. 5 ವರ್ಷದೊಳಗನ ಎಲ್ಲಾ  ಮಕ್ಕಳಿಗೆ ಬಾಯಲ್ಲಿ ಹನಿಗಳನ್ನು ಹಾಕುವ ಮೂಲಕ ಪೋಲಿಯೊ ಹೋರಾಟವನ್ನು ನಡೆಸಲಾಗುತ್ತಿದೆ. ಸಾಮಾನ್ಯವಾಗಿ ಪ್ರತೀ ವರ್ಷವೂ ಡಿಸೆಂಬರ್‌ನಲ್ಲಿ ಇದರ ಕ್ಯಾಂಪೇನ್ ನಡೆಸಲಾಗುತ್ತದೆ.  ಪ್ರತೀ ಸಂದರ್ಭದಲ್ಲಿಯೂ ಲಕ್ಷಾಂತರ ಮಂದಿಯ ಸಹಕಾರದಿಂದ ಪೋಲಿಯೊ ಕ್ಯಾಂಪೇನ್ ನಡೆಸಲಾಗುತ್ತದೆ.

ವ್ಯಾಕ್ಸೀನ್ ಎಂದರೆ ರೋಗಕಾರಕಗಳಿಂದಲೇ ದೇಹಕ್ಕೆ ಪ್ರತಿರೋಧವನ್ನು ರೋಗ ತರಿಸುವುದಕ್ಕೆ ಮೊದಲೇ ಒಡ್ಡುವುದಾಗಿದೆ. ಅಂದರೆ ರೋಗದ ಜೀವಿಗಳಿಂದಲೇ ಸಿದ್ಧಪಡಿಸಿದ ಒಂದಷ್ಟು ವಸ್ತುವನ್ನು ರೋಗ ಬರುವುದಕ್ಕೂ ಮೊದಲೇ ದೇಹಕ್ಕೆ ಸೋಂಕು ತಗುಲಿಸಿದರೆ, ಮುಂದೊಮ್ಮೆ ರೋಗ ತರುವ ರೋಗಾಣು ತಗುಲಿದರೂ ದೇಹ ಅಂತಹ ಪರಿಸ್ಥತಿಯನ್ನು ಎದುರಿಸಲು ಮೊದಲೇ ಅಣಿಯಾಗಿರುತ್ತದೆ.  ಆದರೆ ಇದೆಲ್ಲಾ ಹೀಗೆ ಹೇಳಿದಷ್ಟು ಸುಲಭದ ಕೆಲಸವಲ್ಲ. ಬಳಸುವ ರೋಗಕಾರಕ ಜೀವಿಗಳ ಪ್ರಮಾಣ, ಅದರ ರೀತಿ ರಿವಾಜುಗಳನ್ನೆಲ್ಲಾ ಬಹಳ ನಿಖರವಾಗಿ, ಕರಾರುವಾಕ್ಕಾಗಿ ಮಾಡಬೇಕಿರುತ್ತದೆ. ಇವನ್ನೆಲ್ಲಾ ಅರ್ಥಪೂರ್ಣವಾಗಿ ಅಳೆದು, ಅಧ್ಯಯನ ಮಾಡಿ, ಸಂಶೋಧಿಸಿ ಒಂದು ಗೊತ್ತಾದ ಪ್ರಮಾಣಕ್ಕೆ ನಿರ್ಧರಿಸಿರುತ್ತಾರೆ. ಇವೆಲ್ಲಾ ಅತ್ಯಂತ ನಿರ್ಜೀವಿ ವಾತಾವರಣದಲ್ಲಿ ಅನುಶೋಧನೆಗೊಂಡಿರುತ್ತವೆ. ಇಂದು ನಮ್ಮ ದೇಶದಲ್ಲಿ ಬಳಸುತ್ತಿರುವ ಹನಿ ಪೋಲಿಯೊ ವ್ಯಾಕ್ಸೀನ್ ಜೊನಸ್ ಸಾಕ್ ಅವರದ್ದಲ್ಲ. ಅದೊಂದು ಭಿನ್ನ ಕಥೆ. ಜೊನಸ್ ಸಾಕ್ ಅವರು ಕಂಡು ಹಿಡಿದ ಜಾಡಿನಲ್ಲೇ ಮತ್ತಷ್ಟು ಸಂಶೋಧಿಸಿ ಆಲ್ಬರ್ಟ್ ಸಾಬಿನ್ ಎಂಬ ಮತ್ತೋರ್ವರೂ ಇನ್ನೊಂದು ಬಗೆಯ ವ್ಯಾಕ್ಸೀನನ್ನೂ ಕಂಡುಹಿಡಿದಿದ್ದರು. ಅದೇನು ಮತ್ತೊಂದು ಬಗೆಯೆಂದರೆ? ಏನು ವ್ಯತ್ಯಾಸ?

       ಜೊನಸ್ ಸಾಕ್ ಶೋಧಿತ ವ್ಯಾಕ್ಸೀನ್ ಸಂಪೂರ್ಣ ನಿರ್ಜೀವಿ ವ್ಯಾಕ್ಸೀನು. ಆದರೆ ಸಾಬಿನ್ ಶೋಧಿಸಿದ್ದು ಅಟೆನುಯೇಟೆಡ್ ಅಂದರೆ ಸ್ವಲ್ಪವೇ ಪ್ರಮಾಣದ ಜೀವಿಗಳು ಇರುವಂತಹ ಅರೆಜೀವಿ-ವ್ಯಾಕ್ಸೀನು. ವ್ಯತ್ಯಾಸವೆಂದರೆ ಸಾಕ್ ಅವರ ವ್ಯಾಕ್ಸೀನ್ ಅನ್ನು ಇಂಜಕ್ಷನ್ ಮುಖಾಂತರವೇ ರಕ್ತನಾಳಗಳಿಗೆ ಚುಚ್ಚಬೇಕಿತ್ತು. ಜತೆಗೆ ಇದು ಸ್ವಲ್ಪ ದುಬಾರಿ ಕೂಡ. ಅಲ್ಲದೆ ಚುಚ್ಚುವ ಸೂಜಿ ಮುಂತಾದ ಸಲಕರಣೆಗಳ ಆರೋಗ್ಯಕರ ನಿರ್ವಹಣೆಯೂ ಸೇರಿತ್ತು. ಇಂತಹ ಸಂದರ್ಭದಲ್ಲಿ ಕೇವಲ ಬಾಯಲ್ಲಿ ಎರಡು ಹನಿ ಹಾಕುವ ಮೂಲಕ ಪ್ರತಿರೋಧವನ್ನು ತರಬಲ್ಲ, ಸೋವಿಯಾದ ವ್ಯಾಕ್ಸೀನ್‌ಗೆ ಬಡರಾಷ್ಟ್ರಗಳು ಮುಂದಾದವು. ಆದರೆ ಇದರಲ್ಲೊಂದು ಸಣ್ಣ ತೊಂದರೆಯಿತ್ತು. ಸಾಬಿನ್ ವ್ಯಾಕ್ಸೀನ್‌ನಲ್ಲಿ ಜೀವಿಗಳಿನ್ನೂ ಕ್ರಿಯಾಶೀಲವಾಗಿದ್ದರಿಂದ ಅವು ಅಚಾನಕ್ಕಾಗಿ ರೋಗವನ್ನೂ ತರಬಹುದಿತ್ತು. ಆದರೆ ಅದರ ಸಾಧ್ಯತೆಗಳು ಕಡಿಮೆಯಾಗಿದ್ದು, ಸುಲಭವಾಗಿ ಹನಿಗಳ ರೂಪದಲ್ಲಿ ಬಾಯಲ್ಲಿ ಹಾಕಬಹುದಾದ, ಹೆಚ್ಚು ಶ್ರಮವಿಲ್ಲದ ಸಾಬಿನ್‌ರ ವ್ಯಾಕ್ಸೀನ್ ಪ್ರಚಲಿತಕ್ಕೆ ಬಂತು. ಜೊನಸ್ ಸಾಕ್ ಅವರ ರಕ್ತನಾಳಗಳ ಮೂಲಕ ಕೊಡುವ ವ್ಯಾಕ್ಸೀನ್ 1955ರಿಂದ 1964ರವರೆಗೂ ಜಗತ್ತಿನಾದ್ಯಂತ ಚಾಲ್ತಿಯಲ್ಲಿದ್ದುದಲ್ಲದೆ, ಇಂದಿಗೂ ಅಮೆರಿಕೆಯಲ್ಲಿ ಹಾಗೂ ಪಶ್ಚಿಮ ರಾಷ್ಟ್ರಗಳಲ್ಲಿ ಚಾಲ್ತಿಯಲ್ಲಿದೆ. ಇತರೆ ದೇಶಗಳಲ್ಲಿ, ಅದರಲ್ಲೂ ಭಾರತದಂತಹ ದೇಶಗಳಲ್ಲಿ ಸಾಬಿನ್‌ರ ಬಾಯಿಯ ಮೂಲಕ ಹನಿಗಳಾಗಿ ಹಾಕುವ ವ್ಯಾಕ್ಸೀನ್ ರೂಡಿಯಲ್ಲಿದೆ.  ಅಮೆರಿಕೆಯಲ್ಲಿ 1990ರಿಂದಲೇ ಕಡ್ಡಾಯವಾಗಿ ಬಾಯಿಯ ಮೂಲಕ ಹಾಕುವ ವ್ಯಾಕ್ಸೀನ್ ನಿಷೇಧಿಸಲಾಗಿದೆ. ಬಹುಪಾಲು ಯೂರೋಪ್ ರಾಷ್ರ್ರಗಳೂ ಸಾಕ್ ಅವರ, ಚುಚ್ಚುಮದ್ದಿನ ಮೂಲಕ ಕೊಡುವ ವ್ಯಾಕ್ಸೀನ್ ಅನ್ನೇ ಬಳಸುತ್ತವೆ. ಸಾಬಿನ್ ಅವರೂ ಕೂಡ ಸಾಕ್‌ ಅವರಂತೆಯೇ  ತಮ್ಮ ಶೋಧನೆಗೆ ಪೇಟೆಂಟ್ ಮಾಡಿಸದೆ ಜೊನಸ್ ಸಾಕ್ ಹಾದಿಯಲ್ಲೇ ನಡೆದಿದ್ದರೆಂಬುದು ವಿಜ್ಞಾನದ ಇತಿಹಾಸದಲ್ಲಿ ಅತ್ಯಂತ ಸಂತಸದ ಸಂಗತಿ.  

ಮನುಕುಲದ ಒಳಿತಿನ ಬೆನ್ನುಹತ್ತಿದ್ದ ಜೊನಸ್ ಸಾಕ್ 

“ಎಲ್ಲಾದರೂ ಸೂರ್ಯನಿಗೆ ಪೇಟೆಂಟ್ ಮಾಡಲಾದೀತೇ?” ಎಂಬ ಜೊನಸ್ ಸಾಕ್ ಅವರ ಮಾತನ್ನು ನೆನೆಸಿಕೊಂಡರೇನೇ ಒಂದು ಕ್ಷಣ ಹೀಗೂ ಉಂಟಾ ಎನ್ನಿಸದಿರದು. ವೈದ್ಯರಲ್ಲಿ ಹೋಗಿ ಒಂದು ಪುಟ್ಟ ಇಂಜಕ್ಷನ್‌ಗೆ ನೂರಾರು ತೆತ್ತು ಬರುವಾಗ ಕೋಟ್ಯಂತರ ಇಂಜಕ್ಷನ್‌ಗಳ ಹಿಂದಿನ ಮಿಲಿಯನ್‌ಗಟ್ಟಲೆ ಹಣದ ವ್ಯಾಮೋಹ ಸ್ವಲ್ಪವೂ ಕಾಡದ ಆತನ ಬಗೆಗೆ ಯಾರಿಗೂ ಗೌರವ ಮೂಡದೆ ಇರದು. ಮಾತ್ರವಲ್ಲ, ಕೋಟ್ಯಂತರ ಜನರು ಇಂದು ಸುಖವಾಗಿ ಜೀವನ ನಡೆಸಲು ಸಾಧ್ಯವಾಗಿರುವುದೂ ಅಂತಹ ಮನಸ್ಸನಿಂದಲೇ. ಜೊನಸ್ ಸಾಕ್ ಅವರು 1954ರಲ್ಲಿ ಮೊಟ್ಟಮೊದಲು ವ್ಯಾಕ್ಸೀನು ಕಂಡುಹಿಡಿದಾಗ ಇಡೀ ಯೂರೋಪಿನ ದೇಶಗಳೆಲ್ಲ ನಾ ಮುಂದು, ತಾ ಮುಂದು ಎಂದು ವ್ಯಾಕ್ಸೀನಿನ ಹಿಂದೆ ಬಿದ್ದಿದ್ದವು. ಮನುಕುಲವನ್ನು ಅಪಾರವಾಗಿ ಕಾಡಿದ್ದ ಭಯಾನಕ ರೋಗವೊಂದಕ್ಕೆ ಮುಕ್ತಿ ಕೊಡುವುದೆಂಬ ಬಲುಮುಖ್ಯ ಕಾರಣಕ್ಕೆ ಈ ವ್ಯಾಕ್ಸೀನನ್ನು ಅವು ಕೊಂಡಾಡಿದ್ದವು. ಬೆಳಗಾಗುವುದರಲ್ಲಿ ಸಾಕ್ ಸ್ಟಾರ್ ಆಗಿ ಹೊರಹೊಮ್ಮಿದ್ದರು. ವಿಖ್ಯಾತ “ಟೈಮ್‌” ಮ್ಯಾಗಜೀನ್‌ ಮುಖ ಪುಟದಲ್ಲಿ ಸಾಕ್‌ ಅವರ ಚಿತ್ರವನ್ನು ಮುದ್ರಿಸಿತ್ತು.

ಜೊನಸ್ ಸಾಕ್ ಅವರಿಗೆ ವಿಜ್ಞಾನಕ್ಕಿಂತಲೂ ಮಾನವತೆಯೇ ಒಂದು ಕೈ ಮಿಗಿಲು ಎಂಬ ಭಾವನೆ. ಇದು ಅವರನ್ನು ಚಿಕ್ಕವರಾಗಿದ್ದಾಗಿನಿಂದಲೂ ಕಾಡಿತ್ತು. ಮನುಕುಲದ ಒಳಿತನ್ನು ಬೆನ್ನು ಹತ್ತುವಂತಹ ಆಸಕ್ತಿಯ ಆಯಾಮವು ಸದಾ ಅವರನ್ನು ಕ್ರಿಯಾಶೀಲರನ್ನಾಗಿಟ್ಟಿತ್ತು. ಸದಾ ಕುತೂಹಲಿಯಾಗಿದ್ದು ಕಾರಣರಹಿತವೆಂದರೂ ಪ್ರಶ್ನೆಗಳ ಕೇಳುವ ಮನಸ್ಸು ಅವರಲ್ಲಿ ವಿಕಾಸಗೊಂಡಿತ್ತು. ಮಗುವಾಗಿದ್ದಾಗಿನ ಇಂತಹ ಕುತೂಹಲಕರವಾದ ಮನಸ್ಸನ್ನು ಬೆಳೆದ ಮೇಲೂ ಕಾಪಾಡಿಕೊಂಡಿರುವುದೇ ವಿಜ್ಞಾನಿಯ ಲಕ್ಷಣ ಎಂಬುದು ಅವರ ಖಚಿತ ಅಭಿಪ್ರಾಯವಾಗಿತ್ತು. ಜತೆಗೆ ಮಾನವತೆಯ ಒತ್ತಾಸೆಯಿಂದ ವಿಜ್ಞಾನವು ಸಾಮಾಜೀಕರಣಗೊಳ್ಳಬೇಕಾದ ಹಂಬಲ ಅವರಲ್ಲಿತ್ತು.

ಇಂತಹ ಜೊನಸ್ ಸಾಕ್ ಅಚಾನಕ್ ಆಗಿ ವೈದ್ಯಕೀಯ ಅಧ್ಯಯನಕ್ಕೆ ಬಂದವರು. ಅವರಿಗೆ ಕಾನೂನನ್ನು ಓದುವ ಹಂಬಲವಿತ್ತಂತೆ. ಆದರೆ ಅವರ ತಾಯಿ “ಇಲ್ಲ ನೀನು ವಾದ ಮಾಡಿ ಗೆಲ್ಲಲಾರೆ. ಅದು ನಿನಗಾಗದು” ಎನ್ನುತ್ತಿದ್ದರಂತೆ, ನಿಜಕ್ಕೂ ಕಾನೂನು ಓದಬೇಕೆಂಬ ಹಂಬಲವನ್ನು ಅವರ ತಾಯಿಯ ಜತೆಗೇ ವಾದ ಮಾಡಲಾಗದ ಅವರು ಅದರ ಆಸೆಯನ್ನೇ ತೊರೆದರಂತೆ. ಮುಂದೆ ಆ ನಿರಾಸೆಯೇ ಅವರನ್ನು ವೈದ್ಯಕೀಯಕ್ಕೆ ಕರೆದೊಯ್ಯಿತು, ಮನುಕುಲಕ್ಕೆ ವರವೇ ಆಯಿತು. ಸಾಕ್ ಅವರ ತಾಯಿ ಅನಕ್ಷರಸ್ಥೆ, ರಷಿಯಾದಿಂದ 1901ರಲ್ಲಿ ವಲಸೆ ಬಂದ ಕುಟುಂಬಕ್ಕೆ ಸೇರಿದ ಹೆಣ್ಣು ಮಗಳು, ಅಮೆರಿಕಾಗೆ ವಲಸೆ ಬಂದಾಗಿನಿಂದಲೂ ಓದುವುದಿರಲಿ, ಏನಾದರೂ ಕೆಲಸ ಮಾಡಿಯೇ ಉಣ್ಣಬೇಕಿತ್ತು. ಅಂತಹ ಅನುಭವದ ಹಿನ್ನೆಲೆಯಿಂದ ಬಂದು ಮಗನನ್ನು ವಿದ್ಯಾಭ್ಯಾಸದ ಆಸಕ್ತಿಗೆ ಒಗ್ಗಿಸಿದ್ದು ಅಮ್ಮನ ಹೆಚ್ಚುಗಾರಿಕೆಯೇ! ಅಪ್ಪನೂ ಅಷ್ಟೇ, ಹೆಚ್ಚೇನೂ ಓದಿದವರಲ್ಲ. ಹೆಣ್ಣುಮಕ್ಕಳ ಕುತ್ತಿಗೆ ಪಟ್ಟಿಗಳ ವಿನ್ಯಾಸಕ. ಇದು ಒಂದು ಬಗೆಯ ದರ್ಜಿ ಕೆಲಸ. ಒಂದು ಗಾರ್ಮೆಂಟ್ ಕಂಪನಿಯಲ್ಲಿ ವಿನ್ಯಾಸಕರಾಗಿ ದುಡಿಯುತ್ತಿದ್ದರು. ಪ್ರಾಥಮಿಕ ಶಿಕ್ಷಣವನ್ನಷ್ಟೇ ಮುಗಿಸಿದ್ದರು. ಅಮ್ಮನ ಮನೆಯಲ್ಲಾಗಲಿ, ಅಪ್ಪನ ಮನೆಯಲ್ಲಾಗಲೀ ಯಾರೂ ಕಾಲೇಜು ಮೆಟ್ಟಿಲ್ಲನ್ನು ಹತ್ತಿದವರೇ ಅಲ್ಲ. ಅಂತಹ ಯಾವುದೇ ವಿಶೇಷ ಸಂಸ್ಕೃತಿಯನ್ನೂ ಹೊಂದಿರದ ಮನೆಗಳಿಗೆ ಸೇರಿದ ಅಪ್ಪ, ಅಮ್ಮ ಮಾತ್ರ ಶಿಕ್ಷಣಕ್ಕೆ ಆದ್ಯತೆಯನ್ನು ಕೊಡುವ ಮನಸ್ಸುಳ್ಳವರಾಗಿದ್ದರು.

ಜೊನಸ್ ಸಾಕ್ ವೈದ್ಯಕೀಯ ಅಧ್ಯಯನದಲ್ಲೂ ಜತೆಗೆ ವಿಜ್ಞಾನದಲ್ಲೂ ವಿಶೇಷವಾದ ಆಸಕ್ತಿಯನ್ನು ಹೊಂದಿದ್ದವರು. ಅದಕ್ಕೇ ಅವರು ವೈದ್ಯಕೀಯವನ್ನು ವಿಜ್ಞಾನದ ಹಿನ್ನೆಲೆಯಲ್ಲಿಯೇ ಅಧ್ಯಯನ ಮಾಡಿದರೇ ಹೊರತು ಪ್ರಾಕ್ಟೀಸ್ ಮಾಡುವ ಆಸೆಯಿಂದಲ್ಲ. ವೈದ್ಯಕೀಯ ಕಾಲೇಜಿಗೆ ಸೇರಿದಾಗಿನಿಂದಲೂ ರೋಗ ಲಕ್ಷಣಗಳ ವೈಜ್ಞಾನಿಕ ಸಂಗತಿಗಳೇ ಅವರ ಆಸಕ್ತಿ. ಅದಕ್ಕೆಂದೇ ನ್ಯೂಯಾರ್ಕ್ನ ವೈದ್ಯಕೀಯ ಕಾಲೇಜಿನಲ್ಲಿ ಅಭ್ಯಾಸ ಮಾಡಿ ಮುಂದೆ ಪಿಟ್ಸ್‌ಬರ್ಗ್‌ ವಿಶ್ವವಿದ್ಯಾಲಯದ ವೈದ್ಯಕೀಯ ಸಂಸ್ಥೆಗೆ ಸೇರಿದ್ದರು. ಆಗಲೇ ವೈರಸ್ಸುಗಳ ಕುರಿತ ವಿಶೇಷ ಒಲವು ವೈದ್ಯಕೀಯ ವಿಜ್ಞಾನದಲ್ಲಿ ದಟ್ಟವಾಗಿತ್ತು. ಹಾಗಾಗಿ ನೆಗಡಿಯ ಕುರಿತ ವೈರಸ್ಸುಗಳ ವಿಶೇಷ ಅಧ್ಯಯನದಲ್ಲಿ ಮೊದಲು ನಿರತರಾಗಿದ್ದರು. ತಮ್ಮ ಈ ವೈರಸ್ಸುಗಳ ಅಧ್ಯಯನದ ಆಸಕ್ತಿಯಿಂದಲೇ ಆಗ ಹೆಚ್ಚೇನೂ ಸಾವನ್ನು ತರದಂತಹ ಒಂದು ಬಗೆಯ ಲಕ್ವ ಹೊಡೆದಂತೆ ಕಾಡುವ ಸಮಸ್ಯೆಯ ಕುರಿತು ವಿಶೇಷ ನೆರವನ್ನು ನೀಡಲು ಪೋಲಿಯೊ ವೈರಸ್ಸಿನ ಕುರಿತು ಸಂಶೋಧನೆಯತ್ತ ಹೊರಳಿದರು.

ಈ ಮೊದಲೇ ಹೇಳಿದಂತೆ ಸಾಕ್ ವೈದ್ಯಕೀಯ ಅಧ್ಯಯನಕ್ಕೆ ಬಂದದ್ದೂ ಮನುಕುಲವ ಕಾಡುವ ರೋಗಗಳ ಅಧ್ಯಯನಕ್ಕಾಗಿ ಮತ್ತು ಆ ಕುರಿತ ಸಂಶೋಧನೆಗಾಗಿ. ಹಾಗಾಗಿ ಪಿಟ್ಸ್‌ ಬರ್ಗ್‌ ಅಲ್ಲಿ ಇದ್ದಾಗಲೇ ಸುಮಾರು 1952ರಲ್ಲಿ ಅಮೆರಿಕವು ಇತಿಹಾಸದಲ್ಲೇ ಕಂಡರಿಯದಂತಹ ಪೋಲಿಯೊವನ್ನು ಅನುಭವಿಸಿ ಅದಕ್ಕೆಂದೇ ವಿಶೇಷ ಅಧ್ಯಯನದ ಒಲವು ತೋರಿಸುತ್ತದೆ. ಇನ್ನೂ ವಿಶೇಷ ಕಾರಣವೆಂದರೆ ಅಧ್ಯಕ್ಷ ರೂಸ್‌ವೆಲ್ಟ್ ಕೂಡ ಪೋಲಿಯೋದಿಂದ ತೊಂದರೆಯನ್ನು ಅನುಭವಿಸಿದ್ದವರು. ಮುಂದೆ ಯುವ ಜೊನಸ್ ಸಾಕ್ ಅವರ ದಣಿವರಿಯದ ಶ್ರಮದ ಅಧ್ಯಯನದಿಂದ ಪೋಲಿಯೋಗೆ ವ್ಯಾಕ್ಸೀನ್ ಸಿದ್ಧವಾಯಿತು.

ಅದೊಂದು ವೈದ್ಯಕೀಯ ವಿಜ್ಞಾನದ ಅಧ್ಯಯನದ ಇತಿಹಾಸ ಸೃಷ್ಟಿಸಿದ ಅಧ್ಯಯನ. ಏಕೆಂದರೆ ಆ ಕಾಲಕ್ಕೆ ಜಗತ್ತಿನಲ್ಲೇ ಅತ್ಯಂತ ಮುಂದುವರಿದ ರಾಷ್ಟ್ರವನ್ನೇ ಕಾಡುತ್ತಿದ್ದು, ಅಲ್ಲಿಯೇ ಅತೀ ದೊಡ್ಡ ಪ್ರಮಾಣದಲ್ಲಿ ಮೊಟ್ಟಮೊದಲ ಮಾನವರನ್ನು ಒಳಗೊಂಡ ಪ್ರಯೋಗವನ್ನು ಜೊನಸ್ ಸಾಕ್ ಸಂಶೋಧನೆಯಿಂದ ನಡೆಸಲಾಯಿತು. ಮೊದಲ ಪೋಲಿಯೋ ವ್ಯಾಕ್ಸೀನಿನ ಸಾರ್ವಜನಿಕ ಪ್ರಯೋಗವು ಸುಮಾರು 20,000 ವೈದ್ಯರು ಮತ್ತು ಆರೋಗ್ಯ ಅಧಿಕಾರಿಗಳನ್ನು ಒಳಗೊಂಡಿತ್ತು. ಪೋಲಿಯೋ ಹೆಚ್ಚಾಗಿ ಮಕ್ಕಳನ್ನೇ ಬಲಿ ತೆಗೆದುಕೊಳ್ಳುತ್ತಿತ್ತಲ್ಲವೇ? ಹಾಗಾಗಿ ಅದರಲ್ಲಿ ಭಾಗವಹಿಸಿದ್ದ ಮಕ್ಕಳ ಸಂಖ್ಯೆಯೂ ದೊಡ್ಡದೇ! ಸುಮಾರು 18 ಲಕ್ಷ ಶಾಲಾ ಮಕ್ಕಳು ಇದರಲ್ಲಿ ಪಾಲ್ಗೊಂಡಿದ್ದರು. ಅದಕ್ಕೆ 64,000 ಶಾಲಾ ಸಿಬ್ಬಂದಿ ನೆರವನ್ನು ಕೊಟ್ಟಿದ್ದರು. ಇದಕ್ಕೆಂದು ಸರ್ಕಾರ ನಿಯಮಿಸಿದ್ದ ಒಟ್ಟೂ ಸ್ವಯಂ ಸೇವಕರ ಸಂಖ್ಯೆಯು ಸುಮಾರು 2,20,000.  1955 ರ ಏಪ್ರಿಲ್ 12 ರಂದು ಮೊದಲ ಬಾರಿಗೆ ಸಾರ್ವಜನಿಕವಾಗಿ ಪೋಲಿಯೋ ವ್ಯಾಕ್ಸೀನಿನ ಕುರಿತು ಜಗತ್ತಿಗೇ ಸಾರಲಾಯಿತು. ತಕ್ಷಣವೇ ಜರ್ಮನಿ, ಕೆನಡಾ, ನ್ಯೂಜಿಲೆಂಡ್, ಸ್ವಿಜರ್ಲೆಂಡ್, ನೆದರ್‌ಲ್ಯಾಂಡ್ ಬೆಲ್ಜಿಯಂ ಮುಂತಾದ ದೇಶಗಳು ಜೊನಸ್ ಸಾಕ್ ಪೋಲಿಯೋ ಲಸಿಕೆಯನ್ನು ಬಳಸಿ ಸಮರೋಪಾದಿಯಲ್ಲಿ ಪೋಲಿಯೋ ವಿರುದ್ದ ಹೋರಾಡಲು ಅನುವಾದವು. ಜೊನಸ್ ಸಾಕ್ ಅದೆಲ್ಲವನ್ನೂ ಉಚಿತವಾಗಿ ನೀಡಿದ ಮಾಂತ್ರಿಕ ವೈದ್ಯರೆಂದೇ ಜಗತ್ತು ಭಾವಿಸುತ್ತದೆ. ಮುಂದಿನದೆಲ್ಲವೂ ಇತಿಹಾಸ.

ಜೊನಸ್ ಸಾಕ್ ಅವರ ವಿಜ್ಞಾನದ ಸೈದ್ಧಾಂತಿಕ ನೆಲೆಗಳೇ ಉಪಶಮನದಿಂದ ಆರಂಭವಾಗುತ್ತಿದ್ದವೆಂದು ಹೇಳಲಾಗುತ್ತಿದೆ. ಪೋಲಿಯೋವನ್ನು ಗೆದ್ದ ಮೇಲಂತೂ ಅವರ ಈ ನಡೆಯು ಮತ್ತಷ್ಟು ಗಟ್ಟಿಯಾಯಿತು. ಅದಕ್ಕೆಂದೆ ಅವರ ಈ ಬಗೆಯ ಸೈದ್ಧಾಂತಿಕ ನಿಲುವು, ಮನುಕುಲದ ವಿಶೇಷ ಅಧ್ಯಯನಕ್ಕೆಂದೇ ಒಂದು ಪೂರ್ಣ ಪ್ರಮಾಣದ ಜೈವಿಕ ವಿಜ್ಞಾನದ ಸಂಸ್ಥೆಯನ್ನು ಆರಂಭಿಸುವ ಯೋಚನೆ ಮಾಡುತ್ತಾರೆ. ಅದರ ಫಲವಾಗಿಯೇ ಕ್ಯಾಲಿಪೋರ್ನಿಯಾದ  ಲಾ-ಹೊಯಾ ಎಂಬಲ್ಲಿ ಸಾಕ್, ಜೀವ ವಿಜ್ಞಾನದ ಸಂಸ್ಥೆಯನ್ನು ಆರಂಭಿಸಿದರು. “ಜೀವಿಕೋಶದಿಂದ ಸಮಾಜದೆಡೆಗೆ” ಎಂಬ ಧ್ಯೇಯ-ಘೋಷವು ಇವರ ಅಧ್ಯಯನದ ಮಹತ್ವಾಕಾಂಕ್ಷೆಯನ್ನು ಹೊಂದಿದ್ದವು ಎಂದು ಹೇಳಲಾಗುತ್ತದೆ. ಸಾಕ್ ಸಂಸ್ಥೆಯು ಒಂದು ಸಂಪೂರ್ಣ ಮಾನವ ಒತ್ತಾಸೆಯ ಜೈವಿಕ ಅಧ್ಯಯನ ಸಂಸ್ಥೆ. ಪೋಲಿಯೋ ವ್ಯಾಕ್ಸೀನಿನ ಗೆಲುವಿನಿಂದ ಪ್ರೇರಿತರಾಗಿ ಈ ಬಗೆಯ ಪ್ರತಿರೋಧದಿಂದ ಉಪಶಮನ ಕುರಿತ ಅಧ್ಯಯನಕ್ಕೆ ವಿಶೇಷ ಕಾಳಜಿ ಉಂಟಾಗಿ ಮುಂದೆ 1980ರ ದಶಕದಲ್ಲಿ ಇಂದೂ ಕಾಡುತ್ತಿರುವ ಎಚ್‌ಐವಿ-ಏಯ್ಡ್ಸ ಕುರಿತ ಪ್ರತಿರೋಧದ ಅಧ್ಯಯನಗಳನ್ನು ಆರಂಭಿಸುತ್ತಾರೆ. ಇದರ ವಿರುದ್ದವೂ ವ್ಯಾಕ್ಸೀನಿನ ಅಥವಾ ಉಪಶಮನದ ಮಹತ್ವಾಕಾಂಕ್ಷೆಯ ಉದ್ದೇಶ ಅವರ ಗಮನದಲ್ಲಿತ್ತು. ಆದರೆ 1995ರ ವೇಳೆಗೆ ಅವರನ್ನೇ ಕಳೆದುಕೊಂಡು ಜೀವಜಗತ್ತು ಬಡವಾಗುತ್ತದೆ. ಅವರು ಸ್ಥಾಪಿಸಿದ ಸಾಕ್ ಸಂಸ್ಥೆಯ ಶೀರ್ಷಿಕೆಯ ಅಡಿ ಬರಹದಲ್ಲಿ “ವೇರ್ ಕ್ಯೂರ್ ಬಿಗಿನ್-  ಉಪಶಮನದ ಆರಂಭ” ಎಂದೇ ಬರೆಯಲಾಗಿದೆ!

ಈ ಸಾಕ್‌ ಸಂಸ್ಥೆಯ ಆರಂಭವೂ ಒಂದು ವಿಶೇಷವೇ! ಏಕೆಂದರೆ ಇದು ಸಂಪೂರ್ಣ ಜೀವಿವೈಜ್ಞಾನಿಕ ಸಂಶೋಧನಾ ಸಂಸ್ಥೆ. ಇದರ ಆರಂಭದಿಂದಲೂ ಸಂಸ್ಥೆಯಲ್ಲೇ ಇದ್ದ ಜೀವಿವಿಜ್ಞಾನಿ ಸೂಸೆನ್‌ ಬೊರ್ಗೀಸ್‌ (Suzanne Bourgeois) ಸಂಸ್ಥೆಯ ಕುರಿತು ಅತ್ಯದ್ಭುತವಾದ ಸಂಸ್ಥೆಯ ಇತಿಹಾಸವನ್ನು ಕುರಿತು “ಜೆನೆಸಿಸ್‌ ಆಫ್‌ ಸಾಕ್‌ ಇನ್ಸ್‌ಸ್ಟಿಟ್ಯೂಟ್‌- ದ ಎಪಿಕ್‌ ಆಫ್‌ ಇಟ್ಸ್‌ ಫೌಂಡರ್ಸ್‌ (Genesis of the Salk Institute_ The Epic of Its Founders) ಎಂಬ ಪುಸ್ತಕವನ್ನು ಬರೆದಿದ್ದಾರೆ. ಅದನ್ನು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಪ್ರಕಟಿಸಿದೆ. (ವೈಯಕ್ತಿಕವಾಗಿ ನನಗೆ ಬ್ರುನೊ ಲಾಟುವ್‌ ಮೂಲಕ ಸಂಸ್ಥೆಯ ಒಳನೋಟ ಸಿಕ್ಕು CPUSನ ಆಶಯಗಳಿಗೆ ಆದರ್ಶದ ಕನಸುಗಳನ್ನು ಕೊಟ್ಟ ಈ ಸಂಸ್ಥೆಯ ಬಗೆಗೆ ಮುಂದೊಮ್ಮೆ ನಿಧಾನವಾಗಿ ವಿವರವಾಗಿ ಬರೆಯುತ್ತೇನೆ. ಕಾರಣ ಅದೊಂದು ವಿಜ್ಞಾನದ ಇತಿಹಾಸದ ಮಹಾಕಾವ್ಯ- (An Epic of Science). ಅದನ್ನು -ಸಾಕ್‌ ತಮ್ಮ ವ್ಯಾಕ್ಸೀನು ಜಗತ್ತಿನ ಮಾನವತೆಗೆ ದೊರಕಿದ ಮರು ವರ್ಷವೇ- ಆರಂಭಿಸಲು ಕನಸು ಕಂಡವರು. ಸಾಲದಕ್ಕೆ ಅದರ ಕಟ್ಟಡದ ವಾಸ್ತು-ರಚನೆಯನ್ನು ಸ್ವತಂತ್ರ ಸಂಶೋಧನೆಗೆ ಅನುವಾಗುವ ಎಲ್ಲಾ ಸಮಾಜಿಕ ಕಲಾತ್ಮಕತೆಯನ್ನೂ ಬೆರೆಸಿ ಕಟ್ಟಿದರು.

ಕಟ್ಟಡ ವಿನ್ಯಾಸದ ಸಮಯದಲ್ಲಿ ವಾಸ್ತು ಶಿಲ್ಪಿ ಲೂಯಿಸ್‌ ಕಾನ್‌ (Louis Kahn) ಅವರನ್ನು ಕುರಿತು “ಕಲಾವಿದ ಪಿಕಾಸೊಗೂ ಸಹಾ ಬಂದು ನೋಡಬೇಕು (“create a facility worthy of a visit by Picasso)” ಅನ್ನಿಸುವಂತೆ ವಿನ್ಯಾಸ ಮಾಡು ಅಂದಿದ್ದರು ಜೊನಾಸ್‌ ಸಾಕ್‌. ಮುಂದೆ ಪಿಕಾಸೊ ಅವರ ಮಡದಿಯಾಗದೇ ಅವರಿಂದ ಮಕ್ಕಳನ್ನು ಪಡೆದ ಪಿಕಾಸೊ ಪ್ರೇಯಸಿ ಕಲಾವಿದೆ “ಫ್ರಾಂಸ್‌ವಾಯ್ಸ್‌ ಜಿಲೊFrançoise Gilot) ಜೊನಾಸ್‌ ಸಾಕ್‌ ಅವರ ಎರಡನೆಯ ಹೆಂಡತಿಯಾಗಿ ಬಂದು ಸಂಸ್ಥೆಯ ಸಂಬಂಧದಲ್ಲಿ ಬೆರೆತದ್ದು ಪವಾಡದಂತೆ ನಡೆಯಿತು.  ಇಂದಿಗೂ “ವಿಜ್ಞಾನ ಮತ್ತು ಕಲೆ” ಎರಡಕ್ಕೂ ಭೇಟಿ ನೀಡಬೇಕಿನುವ ಸಂಸ್ಥೆ “ಸಾಕ್‌ ಇನ್ಸ್‌ಸ್ಟಿಟ್ಯೂಟ್‌ ಆಫ್‌ ಬಯೊಲಾಜಿಕಲ್‌ ಸ್ಟಡೀಸ್‌” ವ್ಯಾಕ್ಸೀನ್‌ ಅನ್ವೇಷಣೆಯ ಪರಿಕಲ್ಪನೆ ಸಾಕ್‌ಗೂ ಮೊದಲೇ ವೈದ್ಯರಲ್ಲದ ಜೆನ್ನರ್‌ ಹಾಗೂ ಪಾಶ್ಚರ್‌ ಅವರಿಂದ ಪ್ರಭಾವಿಸಿದ್ದ ಸಾಕ್‌ ವೈದ್ಯಕೀಯ ಅರಿವಿಗೆ ವಿಜ್ಞಾನದ ಬೆಳಕನ್ನು ಕೊಟ್ಟು ಸ್ವತಃ ಅದರ ನಿರ್ಮಿತಿಯನ್ನೂ ವಿಶೇಷವಾಗಿ ಕಟ್ಟಿಕೊಟ್ಟಿದ್ದಾರೆ. ನೊಬೆಲ್‌ ಗಳಿಸಿದ ಸಾಕ್‌ ಹಲವಾರು ನೊಬೆಲ್‌ ಗಳಿಸುವ ಸಂಸ್ಥೆಯನ್ನು ಕಟ್ಟಿದರು. ಆರಂಭದಲ್ಲೇ ಜೇಕಬ್‌ ಬ್ರೊನೌಸ್ಕಿ (Jacob Bronowski) ಯಂತಹಾ ಗಣಿತಜ್ಞರನ್ನೂ ಜೈವಿಕ ವಿಜ್ಞಾನದ ಭಾಗವಾಗುವಂತೆ ನೋಡಿಕೊಂಡರು. ಈಗಾಗಲೇ ಹೇಳಿದಂತೆ ಅದೊಂದು ಮಹಾಕಾವ್ಯ ಮುಂದೊಮ್ಮೆ ಅದನ್ನೂ ವಿವರವಾಗಿಯೇ ನೋಡೋಣ.  ಈ ಸಂಸ್ಥೆಯ ಆರಂಭಕ್ಕೆ ಸ್ವತಃ ಪೋಲಿಯೊ ನಿಂದ ಬದುಕಿ ಉಳಿದ ಅಮೆರಿಕಾದ ಅಧ್ಯಕ್ಷ ರೂಸ್‌ವೆಲ್ಟ್‌ ಸ್ಥಾಫಿಸಿದ್ದ ಸಂಸ್ಥೆ “ಮಾರ್ಚ್‌ ಆಫ್‌ ಡೈಮ್ಸ್‌ (“March of Dimes”) ಸಹಾಯ ಮಾಡಿತ್ತು/ಈಗಲೂ ಮಾಡುತ್ತಿದೆ. Dime ಅಂದರೆ ಡಾಲರಿನಲ್ಲಿ ಹತ್ತನೆಯ ಒಂದು ಭಾಗ ಅಂದರೆ 10 ಸೆಂಟುಗಳನ್ನು ಪ್ರತಿಯೊಬ್ಬರೂ ಮಾನವತೆಗಾಗಿ ದೇಣೀಗೆ ನೀಡಿ ಎಂಬ ಅಭಿಯಾನದಿಂದ ಆರಂಭಿಸಿದ ಸಂಸ್ಥೆ ಅದು. ಇದರ ಜೊತೆಗೆ ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನ ಸಹಾ ಸಹಾಯವನ್ನು ನೀಡಿತ್ತು.  ಸಾಕ್‌ ವಿಜ್ಞಾನ ಸಂಸ್ಥೆಯು ಹಲವು ನೊಬೆಲ್‌ ಪುರಸ್ಕೃತರನ್ನೂ ಒಳಗೊಂಡಿತ್ತು.

       ಅವರ ಮೂರೂ ಜನ ಮಕ್ಕಳೂ ವೈದ್ಯರೇ! ಯಾರೂ ಚಿಕಿತ್ಸಾಲಯವಿಟ್ಟು ಪ್ರಾಕ್ಟೀಸು ಮಾಡುತ್ತಿಲ್ಲ. ವೈದ್ಯಕೀಯ ವಿಜ್ಞಾನದಲ್ಲೇ ಸಂಶೋಧನೆಗೆ ತೊಡಗಿಕೊಂಡಿದ್ದಾರೆ. ತಮ್ಮ ಇಡೀ ಜೀವನದ ಸಂಶೋಧನೆಯನ್ನೂ ಮಾತ್ರವಲ್ಲ, ತಮ್ಮ ಸಂತತಿಯನ್ನೂ ಮನುಕುಲದ ವಿಶೇಷ ಸಂಶೋಧನೆಗೆ ಕೊಟ್ಟು ಹೋದ ಮಹಾನ್ ದಾರ್ಶನಿಕ ಜೊನಸ್ ಸಾಕ್. ಜೀವನದ ಉದ್ದಕ್ಕೂ ವಿಜ್ಞಾನ ಹಾಗೂ ಮಾನವೀಯ ಮೌಲ್ಯಗಳನ್ನೇ ಅನುಭವಿಸಿದ ಸಾಕ್‌, ತಮ್ಮ ಸಂಸ್ಥೆಯ ಆರಂಭದಿಂದ ಮುಂದೆ 32-35 ವರ್ಷಗಳ ಕಾಲ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಕಡೆಗೆ ಜೂನ್‌ 23, 1995 ರಲ್ಲಿ ತೀರಿಕೊಂಡರು.

       CPUS ಗೆ ಪ್ರಭಾವಿಸಿದ ಜೊನಾಸ್‌ ಸಾಕ್‌ ಅವರ ಸಂಸ್ಥೆ (Salk Institute of Biological Studies)ಯ ಬಗ್ಗೆ ಮುಂದೆ ಒಮ್ಮೆ ತಿಳಿಯಲು ಲಿಂಕ್‌ https://bit.ly/3NTd5bV  

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್‌

Leave a Reply