You are currently viewing ಪೂರ್ವದ ಸೊಬಗು ಹಾಗೂ ಪಶ್ಚಿಮದ ಬೆರಗು ಬೆರೆತ ವಿಜ್ಞಾನಿ ಪ್ರೊ.ಸತೀಶ್ ಧವನ್

ಪೂರ್ವದ ಸೊಬಗು ಹಾಗೂ ಪಶ್ಚಿಮದ ಬೆರಗು ಬೆರೆತ ವಿಜ್ಞಾನಿ ಪ್ರೊ.ಸತೀಶ್ ಧವನ್

(ಐದನೆಯ ಕಂತು)

ಸಿ.ಪಿ.ಯು.ಎಸ್.‌ ಓದುಗರೆಲ್ಲರಿಗೂ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನದ ಶುಭಾಶಯಗಳು. ದೇಶ ಕಟ್ಟಿದ ವಿಜ್ಞಾನಿ ಎಂತಲೇ ಪ್ರಾರಂಭವಾದ ಪ್ರೊ. ಸತೀಶ್‌ ಧವನ್‌ ಜನ್ಮಶತಮಾನೋತ್ಸವ ಸರಣಿಯ ಐದನೆಯ ಹಾಗೂ ಕಡೆಯ ಕಂತು ನಿಮ್ಮ ಓದಿನ ಪ್ರೀತಿಗೆ.

೧೯೭೦ ರ ದಶಕದ ಮಾತು. ಶ್ರೀಹರಿಕೋಟಾದಲ್ಲಿ ಇಸ್ರೊ ತನ್ನ ಉಡಾವಣಾ ಕೇಂದ್ರವನ್ನು ಸುಸಜ್ಜಿತವಾಗಿ ನಿರ್ಮಿಸುತ್ತಿದ್ದ ಕಾಲ. ಬಂಗಾಳಕೊಲ್ಲಿಯ ತೀರ ಪ್ರದೇಶವಾದ ಅಲ್ಲಿ “ಯಾನಾಡಿ” ಎಂಬ ಮೂಲನಿವಾಸಿಗಳು ಇದ್ದರು. ಇಸ್ರೊ ಕೇಂದ್ರ ರೂಪುಗೊಳ್ಳುತ್ತಿರುವುದು ಸಹಜವಾಗಿ ಅವರ ಆತಂಕಕ್ಕೆ ಕಾರಣವಾಗಿತ್ತು. ಆದರೆ ಆ ಆತಂಕ ಹೆಚ್ಚು ದಿನವೇನು ಇರಲಿಲ್ಲ. ಅಂತಃಕರಣದ ಅಧ್ಯಕ್ಷ ಪ್ರೊ.ಸತೀಶ್‌ ಧವನ್‌ ಇಸ್ರೊ ಸಂಸ್ಥೆಯನ್ನು ಮುನ್ನಡೆಸುತ್ತಿದ್ದರಿಂದ, ಅವರ ಪುನರ್ವಸತಿ ಬಹಳ ಜಾಗರೂಕತೆಯಿಂದ, ಅತ್ಯಂತ ಮಾನವೀಯ ಕಾಳಜಿಯಿಂದ ನಡೆಯಿತು. ಅದಕ್ಕೂ ಮೊದಲು, ಇಸ್ರೊ ದ “ಸೈಟ್(SITE-Satellite Instructional Television Experiment)”‌ ಯೋಜನೆಯ ಬಗ್ಗೆ ಸಾಮಾಜಿಕ ಅಧ್ಯಯನ ಮಾಡಿದ್ದ ಮಾನವವಿಜ್ಞಾನ ತಜ್ಞ ಡಾ.ಬಿನೋದ್‌ ಅಗರ್‌ವಾಲ್ ಅವರಿಂದ ಶ್ರೀಹರಿಕೋಟಾದ ಯಾನಾಡಿ ಸಮುದಾಯ ಅಧ್ಯಯನ ಮಾಡಿಸಿದ್ದರು ಪ್ರೊ. ಸತೀಶ್‌.‌ ಅದರಂತೆ ಅವರ ಸಂಸ್ಕೃತಿ ಮತ್ತು ವಾಸದ ನೆಲೆಗಳಿಗೆ ಹಾನಿಯಾಗದಂತೆ ಇಡೀ ಕೇಂದ್ರ ನಿರ್ಮಾಣ ಆಗುವ ಹಾಗೆ ನೋಡಿಕೊಂಡದ್ದಲ್ಲದೇ ತಮ್ಮ ವೈಯಕ್ತಿಕ ನೆಲೆಯಲ್ಲೂ ಕೂಡ ಸಹಾಯ ಮಾಡಿದ್ದರು. ಅಷ್ಟೇ ಅಲ್ಲ, ಮುಂದೊಂದು ದಿನ ಈ ಯಾನಾಡಿ ಸಮುದಾಯದ ಸದಸ್ಯರೊಬ್ಬರು ಈ ಕೇಂದ್ರದ ನಿರ್ದೇಶಕರಾದರೆ ನನಗೆ ತುಂಬಾ ಸಂತೋಷವಾಗುತ್ತದೆ ಎಂದು ಬಯಸಿದ್ದರು ಪ್ರೊ.ಸತೀಶ್!!‌

ಅವರ ಆ ಬಯಕೆ ಸದ್ಯ ಇನ್ನೂ ಈಡೇರಿಲ್ಲ. ಆದರೆ ಇಂದು ಅಂಡಮಾನ್‌ ದ್ವೀಪದಲ್ಲಿರುವ ಇಸ್ರೊ ಭೂಕೇಂದ್ರವನ್ನು, ನಿಕೋಬಾರ್‌ ದ್ವೀಪದ ಮೂಲನಿವಾಸಿಯೊಬ್ಬರು ಮುನ್ನಡೆಸುತ್ತಿದ್ದಾರೆ. ಅವರ ಏರೋಸ್ಪೇಸ್‌ ವಿಬಾಗದ ಮೆಕ್ಯಾನಿಕ್‌ ಒಬ್ಬರ ಮಗ ಪ್ರತಿಷ್ಠಿತ “ಸ್ಪೇಸ್-ಎಕ್ಸ್”‌ ಸಂಸ್ಥೆಯಲ್ಲಿ ಏರೋಸ್ಪೇಸ್‌ ತಂತ್ರಜ್ಞರಾಗಿದ್ದಾರೆ. ಪ್ರೊ. ಸತೀಶ್‌ ಇಂದು ನಮ್ಮೊಡನೆ ಇದ್ದಿದ್ದರೆ, ಇದೆಲ್ಲವನ್ನು ಕಂಡು ಖಂಡಿತಾ ಬಹಳ ಸಂತೋಷ ಪಡುತ್ತಿದ್ದರು.

ಪ್ರೊ.ಸತೀಶ್‌, ಯಾನಾಡಿ ಸಮುದಾಯದ ಬಗ್ಗೆ ತೋರಿದ ಪ್ರೀತಿ ಮತ್ತು ಅವರ ಉನ್ನತಿಗೆ ಮಿಡಿಯುತ್ತಿದ್ದ ರೀತಿ, ಮುಂದಿನ ತಲೆಮಾರುಗಳ ನಾಯಕರೆಲ್ಲರೂ ಕೂಡ ಆ ಸಮುದಾಯವನ್ನು ಅಷ್ಟೇ ಕಾಳಜಿಯಿಂದ ನೋಡಿಕೊಳ್ಳುವಂತೆ ಮಾಡಿತು. ಆ ಮಕ್ಕಳಿಗೆ ಶಾಲೆಯನ್ನು ತೆರೆದ ಅವರ ಶಿಷ್ಯ ಡಾ.ವಸಂತ ಅವರು, ಈ ಎಲ್ಲಾ ಬೆಳವಣಿಗೆಗಳ ಮೂಲಕ ಯಾನಾಡಿ ಜನರ ಮೂಲ ಸಂಸ್ಕೃತಿ ನಾಶವಾಗುತ್ತಿದೆಯಲ್ಲ ಎಂದು ಮರುಕ ಪಟ್ಟಾಗ, ಪ್ರೊ.ಸತೀಶ್‌ ಹೇಳಿದರಂತೆ – “ಅವರು ಹೇಗೆ ಬದುಕಬೇಕೆಂದು ನಿರ್ಧರಿಸಲು ನಾವ್ಯಾರು? ನಾಗರಿಕ ಸೌಲಭ್ಯಗಳು ಅವರಿಗೆ ದೊರಕಲಿ. ತಾವು ಹೇಗೆ ಬದುಕಬೇಕೆಂಬ ಆಯ್ಕೆ ಅವರೇ ಮಾಡಬೇಕು. ಆ ಸ್ವಾತಂತ್ರ್ಯ ಅವರಿಗಿದೆ”.

ಹಕ್ಕಿಗಳ ಹಾರಾಟದ ಬಗ್ಗೆ ವಿಸ್ಮಯದ ನೋಟ

ಹಕ್ಕಿಗಳ ಹಾರಾಟ ಕುರಿತ ಪ್ರೊ.ಸತೀಶ್‌ ಧವನ್‌ ಅವರ ಪುಸ್ತಕ (ಕೃಪೆ: ಐ.ಎ.ಎಸ್‌ಸಿ)

ಪ್ರೊ.ಸತೀಶ್‌ ಅವರ ಅಂತಃಕರಣ ಅದೆಷ್ಟು ಜೀವಿಪರವಾಗಿತ್ತು ಎಂದರೆ, ಅವರು ಶ್ರೀಹರಿಕೋಟಾದ ಇಸ್ರೊ ಕೇಂದ್ರ ಅಲ್ಲಿನ ಪ್ರಕೃತಿ ವೈವಿಧ್ಯತೆಯನ್ನು ಉಳಿಸಿಕೊಂಡೇ ಬೆಳೆಯಬೇಕೆಂದು ಬಯಸಿದ್ದರು. ಹಾಗಾಗಿ ಖ್ಯಾತ ಪಕ್ಷಿತಜ್ಞ ಡಾ.ಸಲೀಂ ಅಲಿ ಅವರನ್ನು ಅಲ್ಲಿಗೆ ಕರೆಸಿ, ಅಲ್ಲಿನ ಪಕ್ಷಿಗಳ ಸಮೀಕ್ಷೆ ನಡೆಸಿದ್ದರು. ಅದರಂತೆ ಅವುಗಳ ಆವಾಸ ಸ್ಥಾನ ಮತ್ತು ಆಹಾರ ಪ್ರದೇಶಗಳಿಗೆ ಹಾನಿಯಾಗದಂತೆ ಕೇಂದ್ರದ ಕಟ್ಟಡಗಳು ಮತ್ತು ಸೌಲಭ್ಯಗಳು ನಿರ್ಮಾಣಗೊಳ್ಳುವಂತೆ ನೋಡಿಕೊಂಡಿದ್ದರು!! ಅವರಿಗೆ ಅಲ್ಲಿನ ಸಸ್ಯಸಂಪತ್ತಿನ ಬಗ್ಗೆ ಕೂಡ ಅಷ್ಟೇ ಒಲವು.  ಒಟ್ಟಿನಲ್ಲಿ ಮರಗಿಡ, ಪ್ರಾಣಿ-ಪಕ್ಷಿ ಮತ್ತು ಮನುಷ್ಯರನ್ನು ಒಳಗೊಂಡಂತೆ ಈ ಮೊದಲು ಇದ್ದ ವೈವಿಧ್ಯತೆಯನ್ನು ಕಾಪಾಡಿಕೊಂಡು ಇಸ್ರೊ ಕೇಂದ್ರವನ್ನು ಕಟ್ಟಿದರು ಪ್ರೊ.ಸತೀಶ್.‌ ಹಾಗಾಗಿ ೨೦೦೨ರ ಜನವರಿ ೩ ರಂದು ಅವರು ಕಾಲವಾದ ನಂತರ, ಆ ವರ್ಷದ ಸೆಪ್ಟಂಬರ್‌ ನಲ್ಲಿ ಈ ಕೇಂದ್ರವನ್ನು “ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರ” ಎಂದು ನಾಮಕಣ ಮಾಡಲಾಯಿತು. ಇದು ಅವರ ಕೊಡುಗೆಗಳಿಗೆ ಇಸ್ರೊ ತೋರಿದ ಸೂಕ್ತ ಮತ್ತು ಗೌರವದ ನಡೆ.

ಅವರ ಪಕ್ಷಿ ಪ್ರೀತಿ ಶ್ರೀಹರಿಕೋಟಾದಲ್ಲಿ ಇನ್ನಷ್ಟು ಬೆಳೆದು, ಹಕ್ಕಿಗಳ ಹಾರಾಟದ ಆಧ್ಯಯನದ ಬಗ್ಗೆ ಪುಸ್ತಕ ತರುವ ಹಂತಕ್ಕೂ ಮುಂದುವರೆಯಿತು. ಮೂಲತಃ ಏರೋಸ್ಪೇಸ್‌ ತಜ್ಞರಾದ ಅವರು, ವಿಮಾನ ಹಾರಾಟಕ್ಕೆ ಸ್ಪೂರ್ತಿಯಾದ ಹಕ್ಕಿಗಳ ಹಾರಾಟದ ವಿವಿಧ ಏರೋಡೈನಮಿಕ್‌ ಆಯಾಮಗಳನ್ನು ಅಧ್ಯಯನ ಮಾಡಿ, ೧೯೮೮ರಲ್ಲಿ ಸರ್.ಸಿ.ವಿ.ರಾಮನ್‌ ಅವರ ಜನ್ಮಶತಮಾನೋತ್ಸವದ ಸಲುವಾಗಿ,  ದೇಶದ ವಿವಿಧ ಪ್ರದೇಶಗಳಲ್ಲಿ ಉಪನ್ಯಾಸ ನೀಡಿದ್ದರು. ಮುಂದೆ ಇದೇ ಉಪನ್ಯಾಸ, ಭಾರತೀಯ ವಿಜ್ಞಾನ ಅಕಾಡೆಮಿ ಯ ನಿಯತಕಾಲಿಕೆ “ಪ್ರಮಾಣ” ದಲ್ಲಿ ಪ್ರಕಟವಾಯಿತು. ನಂತರ ಪುಸ್ತಕರೂಪದಲ್ಲಿ ಕೂಡ ಬಂತು. ೨೦೦೨ ರಲ್ಲಿ ಅವರ ಸಾವಿನ ಕೆಲವೇ ನಂತರದ ದಿನಗಳಲ್ಲಿ ನ್ಯಾಷನಲ್‌ ಬುಕ್‌ ಟ್ರಸ್ಟ್‌ ಆಫ್‌ ಇಂಡಿಯಾ ಕೂಡ ಅದನ್ನು ಪ್ರಕಟಿಸಿತು. ಅವರ ಜನ್ಮಶತಮಾನೋತ್ಸವ ವರ್ಷವಾದ ೨೦೨೦-೨೧ ರಲ್ಲಿ ಮತ್ತೆ ಈ ಪುಸ್ತಕ ಅಕಾಡೆಮಿಯ ವತಿಯಿಂದ, ಹಕ್ಕಿಗಳ ಹಾರಾಟ ಕುರಿತ ಇತ್ತೀಚಿನ ಸಂಶೋಧನೆಗಳ ವಿಚಾರಗಳನ್ನೂ ಒಳಗೊಂಡಂತೆ  ಪುನಃ ಮುದ್ರಿತವಾಗಿದೆ. ಅದರ ಸಾಫ್ಟ್‌ ಪ್ರತಿ ಕೂಡ ಉಚಿತವಾಗಿ ಲಭ್ಯವಿದೆ.

ಹಕ್ಕಿಗಳ ವಿಕಾಸದಿಂದ ಮೊದಲ್ಗೊಂಡು, ಅವುಗಳ ದೇಹರಚನೆ ಹೇಗೆ ಹಾರಾಟಕ್ಕೋಸ್ಕರ ಮಾರ್ಪಾಡಾಗಿದೆ? ಅತ್ಯಂತ ಕಡಿಮೆ ತೂಕದ ಮತ್ತು ಹೆಚ್ಚು ಸ್ಥಿರತೆ ಉಳ್ಳ ಅವುಗಳ ಪುಕ್ಕಗಳು ಹಾರಾಟಕ್ಕೆ ಸಹಾಯ ಮಾಡುವ ರೀತಿ, ಹಾರಾಟದ ವಿವಿಧ ಹಂತಗಳು, ವಿವಿಧ ಪಕ್ಷಿಗಳ ಬಗೆಬಗೆಯ ಹಾರಾಟ, ಹಾರಾಟಕ್ಕೆ ಪ್ರಮುಖವಾಗಿ ಬೇಕಾದ ಮೇಲೆತ್ತುವಿಕೆ(Lift) ಮತ್ತು ನೂಕುಬಲ(Thrust) ಈ ಎರಡನ್ನೂ ಹಕ್ಕಿಗಳು ವಿಕಸಿಸಿಗೊಂಡಿರುವ ರೀತಿ(ಮಾನವ ನಿರ್ಮಿತ ವಿಮಾನಗಳಲ್ಲಿ ಇವೆರೆಡೂ ವಿಮಾನದ ರೆಕ್ಕೆ ಮತ್ತು ಪ್ರೊಪೆಲ್ಲರ್‌ ಇಂಜಿನ್‌ ಮೂಲಕ ಸಾಧ್ಯವಾಗುತ್ತದೆ) ಈ ಎಲ್ಲಾ ಆಯಾಮಗಳ ಬಗ್ಗೆ ಅತ್ಯಂತ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ ಪ್ರೊ.ಸತೀಶ್.‌

ಎನ್.ಎ.ಎಲ್‌(NAL) ಮತ್ತು ಎ.ಡಿ.ಇ(ADE) ಕೊಡುಗೆಗಳು

ಪ್ರೊ. ಸತೀಶ್‌ ಬೆಂಗಳೂರಿನ ಎನ್.ಎ.ಎಲ್.‌ ಮತ್ತು ಎ.ಡಿ.ಇ ಸಂಸ್ಥೆಗಳ ಹಲವು ಉನ್ನತ ಮಟ್ಟದ ಸಮಿತಿಗಳಲ್ಲಿ ಕೆಲಸ ಮಾಡಿ ಅವುಗಳ ಬೆಳವಣಿಗೆಯಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಅತ್ಯಂತ ದೀರ್ಘ ಅವಧಿಗೆ ಎನ್.ಎ.ಎಲ್.‌ ನ ನಿರ್ದೇಶಕರಾಗಿದ್ದ ಎಸ್.ಆರ್.ವಲ್ಲೂರಿ ಮತ್ತು ಸತೀಶ್‌ ಇಬ್ಬರೂ ಕ್ಯಾಲ್‌ಟೆಕ್ ನಲ್ಲಿ ಓದಿದವರೇ!! ಎನ್.ಎ,ಎಲ್‌ ಸಿದ್ಧಪಡಿಸಿದ ಮೊದಲ ಗಾಳಿಕೊಳವೆಗಳ ವಿನ್ಯಾಸ ಮತ್ತು ನಿರ್ಮಾಣದಲ್ಲಿ ಐ.ಐ.ಎಸ್‌ಸಿ ಯ ಏರೋಸ್ಪೇಸ್‌ ವಿಭಾಗ ಅತ್ಯಂತ ಸಕ್ರಿಯವಾಗಿ ಭಾಗವಹಿಸಿತ್ತು. ಮುಂದೆ ಸತೀಶ್‌ ಅವರ ಪ್ರಿಯ ಶಿಷ್ಯರಾದ ಪ್ರೊ.ರೊದ್ದಂ ನರಸಿಂಹ ಮತ್ತು ಡಾ. ಟಿ.ಎಸ್.ಪ್ರಹ್ಲಾದ್‌ ಆ ಸಂಸ್ಥೆಯನ್ನು ನಿರ್ದೇಶಕರಾಗಿ ಮುನ್ನಡೆಸಿದ್ದಾರೆ. ಪ್ರೊ. ಸತೀಶ್‌ ಹಲವು ವರ್ಷಗಳ ಕಾಲ ಅಲ್ಲಿನ ಸಂಶೋಧನಾ ಸಲಹಾ ಮಂಡಳಿ(Research Advisory Council)ಯ ಅಧ್ಯಕ್ಷರಾಗಿದ್ದರು. ಎನ್.ಎ.ಎಲ್‌ ದೇಶದ ನಾಗರಿಕ ವಿಮಾನ ಕ್ಷೇತ್ರದ ಅವಶ್ಯಕತೆಗಳನ್ನು ಅಧ್ಯಯನ ಮಾಡಿ, ನಾಗರಿಕ ವಿಮಾನ ಮತ್ತು ಸಂಬಂಧಿ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸಬೇಕೆಂದು ಬಲವಾಗಿ ಪ್ರತಿಪಾದಿಸಿದ್ದರು. ಆ ನಿರ್ದೇಶನದಂತೆ ಹಂಸಾ(HANSA) ಮತ್ತು ಸಾರಸ್(SARAS)‌ ವಿಮಾನಗಳು ರೂಪುಗೊಂಡವು. ಇದು ಕೂಡ ಸತೀಶ್‌ ಅವರ ನಾಗರಿಕ ಕಾಳಜಿಗೆ ಒಂದು ಉದಾಹರಣೆ. ಹಾಗಾಗಿ ಅವರ ಗೌರವಾರ್ಥ ಸಾರಸ್‌ ವಿಮಾನದ ಮಾದರಿಯೊಂದಕ್ಕೆ(VT-XSD) ಅವರ ಹೆಸರನ್ನೇ ಇಡಲಾಗಿದೆ. ಇಲ್ಲಿ SD ಅಂದರೆ ಸತೀಶ್‌ ಧವನ್!!‌

ಎನ್.ಎ.ಎಲ್‌ ಸಭೆಯೊಂದರಲ್ಲಿ ಪ್ರೊ. ಸತೀಶ್ ಧವನ್‌ ಮತ್ತು ಡಾ.ಟಿ.ಎಸ್.ಪ್ರಹ್ಲಾದ್‌ (ಕೃಪೆ: ಕರೆಂಟ್‌ ಸೈನ್ಸ್‌ ಪತ್ರಿಕೆ)

ರಾಮನ್‌ ಸಂಶೋಧನಾ ಸಂಸ್ಥೆ(RRI) ಮತ್ತು ಭಾರತೀಯ ವಿಜ್ಞಾನ ಅಕಾಡೆಮಿ(IASc)

ಪ್ರೊ.ಸತೀಶ್‌ ಅವರ ಕಾಣ್ಕೆ ಪಡೆದು ಬೆಳೆದ ಇನ್ನಿತರ ಸಂಸ್ಥೆಗಳೆಂದರೆ RRI ಮತ್ತು IASc. ಸರ್‌ ಸಿ.ವಿ.ರಾಮನ್‌ ಅವರು ಕಾಲವಾದ ನಂತರ ಅವರೇ ಕಟ್ಟಿ ಬೆಳೆಸಿದ ಈ ಎರಡು ಸಂಸ್ಥೆಗಳು ಹೊರಳುದಾರಿಯಲ್ಲಿ ಇದ್ದವು. ಆಗ ಅವುಗಳ ಭಾಗವಾಗಿದ್ದ ಸತೀಶ್‌ ಮತ್ತು ಇತರೆ ಗೆಳೆಯರು ಅವುಗಳ ಮುಂದಿನ ಬೆಳವಣಿಗೆಗೆ ಮಾರ್ಗದರ್ಶಕರಾದರು. ಸತೀಶ್‌ ಸುಮಾರು ೨೫ ವರ್ಷಗಳ ಕಾಲ(೧೯೭೪-೧೯೯೯) ಕೌನ್ಸಿಲ್‌ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅಲ್ಲೂ ಕೂಡ ಈ ಸಂಸ್ಥೆಗೆ ಒಂದು ರಚನೆಯನ್ನು ಇಸ್ರೊ ಸಂಸ್ಥೆಯ ಮಾದರಿಯಲ್ಲೇ ನೀಡಿದ್ದರು. ಇನ್ನೂ ಅಕಾಡೆಮಿಯಂತೂ ಆಗ ಬರೀ ಜರ್ನಲ್‌ ಪ್ರಕಟಣೆಗೆ ಸೀಮಿತವಾಗಿತ್ತು. ಅದರ ಹೊರತಾಗಿ ತನ್ನ ಕಾರ್ಯಕ್ರಮಗಳ ಬಗ್ಗೆ ಒಂದು ಸ್ಪಷ್ಟ ಪ್ರಣಾಳಿಕೆ ಇರಬೇಕೆಂದು ಪ್ರತಿಪಾದಿಸಿ ಅದನ್ನು ರೂಪುಗೊಳಿಸಿದ್ದರು ಪ್ರೊ.ಸತೀಶ್. ಅಕಾಡೆಮಿ ವಿಜ್ಞಾನದ ಸಾರ್ವಜನಿಕ ತಿಳಿವಿಗಾಗಿ ಕೆಲಸ ಮಾಡಬೇಕೆಂದು ಅವರ ನಿಲುವಾಗಿತ್ತು. ಹಾಗಾಗಿ ನ್ಯೂಕ್ಲಿಯರ್‌ ಶಕ್ತಿ, ನರ್ಮದಾ ಅಣೆಕಟ್ಟು ಯೋಜನೆ ಮುಂತಾದ ವಿವಾದಿತ ವಿಷಯಗಳನ್ನೂ ಒಳಗೊಂಡಂತೆ ಎಲ್ಲ ವಿಜ್ಞಾನ-ತಂತ್ರಜ್ಞಾನ ಸಂಬಂಧಿ ವಿಷಯಗಳ ಬಗ್ಗೆ ಅಕಾಡೆಮಿ ಸಭೆಗಳನ್ನು ಆಯೋಜಿಸಿ ಆ ಬಗ್ಗೆ ಶ್ವೇತಪತ್ರಗಳನ್ನು ಹೊರಡಿಸಬೇಕೆಂದು ಅಭಿಪ್ರಾಯ ಪಟ್ಟಿದ್ದರು. ಅದರಂತೆ ಕೆಲವು ಕಾರ್ಯಕ್ರಮಗಳು ನಡೆದವು ಕೂಡ. ಒಟ್ಟಿನಲ್ಲಿ ವಿಜ್ಞಾನದ ಸಾರ್ವಜನಿಕ ತಿಳಿವಿಗಾಗಿ ಅಕಾಡೆಮಿ ಕೆಲಸ ಮಾಡಬೇಕೆನ್ನುವುದು ಅವರ ಆಶಯ. ವಿಜ್ಞಾನ ವರದಿಗಳನ್ನು ಕ್ಲಾಸಿಫೈಡ್(Classified)‌ ಎಂದು ಹಣೆಪಟ್ಟಿ ಅಂಟಿಸಿ ಸಾರ್ವಜನಿಕರ ಕೈಗೆ ಸಿಗದ ಹಾಗೆ ಮಾಡುವ ವ್ಯವಸ್ಥೆ ಬಗ್ಗೆ ಅವರಿಗೆ ಬೇಸರವಿತ್ತು.

ಸತೀಶ್‌ – The Family Man

ಪ್ರೊ. ಸತೀಶ್‌ ತಮ್ಮ ಎಲ್ಲಾ ಗುರುತರ ವೃತ್ತಿ ಜೀವನದ ಜವಾಬ್ದಾರಿಗಳ ಜೊತೆಗೆ ತಮ್ಮ ಕುಟುಂಬವನ್ನು ಅತ್ಯಂತ ಆಪ್ತವಾಗಿ ಪ್ರೀತಿಸಿದವರು. ಅವರ ಮಡದಿ ಶ್ರೀಮತಿ ನಳಿನಿ ಧವನ್‌ ಅವರ ತ್ಯಾಗ, ಸತೀಶ್‌ ಏರಿದ ಎತ್ತರಕ್ಕೆ ಸಹಕಾರಿಯಾಗಿತ್ತು. ಈ ದಂಪತಿಗಳಿಗೆ ಮೂರು ಜನ ಮಕ್ಕಳು. ಹಿರಿಯ ಮಗ ವಿವೇಕ್‌ ಧವನ್‌ ಖಗೋಳತಜ್ಞರಾದರೆ, ಹೆಣ್ಣುಮಕ್ಕಳಾದ ಶ್ರೀಮತಿ ಅಮೃತಾ ಧವನ್‌ ಕುಂಬಾರಿಕೆಯ(Pottery) ಕಲಾವಿದೆ ಹಾಗೂ ಶ್ರೀಮತಿ ಜ್ಯೋತ್ಸ್ನಾ ಧವನ್‌ ಆಕರಕೋಶಗಳ(Stem Cells) ಬಗ್ಗೆ ಅಧ್ಯಯನ ಮಾಡುತ್ತಿರುವ ಜೀವಿವಿಜ್ಞಾನಿ.

ಸತೀಶ್‌ ತಮ್ಮ ಬಿಡುವಿನ ವೇಳೆಯಲ್ಲಿ ಕುಟುಂಬದವರ ಜೊತೆ ಚಿತ್ರ ಬಿಡಿಸುತ್ತಿದ್ದರಂತೆ. ಮನೆಯ ಪೀಠೋಪಕರಣಗಳನ್ನು ತಾವೇ ಸಿದ್ಧಪಡಿಸುತ್ತಿದ್ದರಂತೆ. ಅವರ ಕೌಶಲ್ಯ ಇಷ್ಟಕ್ಕೆ ಮಾತ್ರ ಸೀಮಿತವಲ್ಲ. ತಮ್ಮ ಮಕ್ಕಳ ಹೇರ್-ಕಟ್‌ ಕೂಡ ಅವರೇ ಮಾಡುತ್ತಿದ್ದರಂತೆ!! ಮಕ್ಕಳಿಗೆ ಕತೆ ಹೇಳುವುದು, ಅವರೊಟ್ಟಿಗೆ ಆಟವಾಡುವುದು, ಮನೆಯಲ್ಲಿ ಒಟ್ಟಿಗೆ ಊಟ ಮಾಡುವುದು, ಪಿಕ್‌ನಿಕ್ ಗೆ ಕರೆದುಕೊಂಡು ಹೋಗುವುದು ಹೀಗೆ ತಮಗೆ ದೊರೆತ ಸಮಯದಲ್ಲೇ ಆದಷ್ಟು ಗುಣಾತ್ಮಕ ರೀತಿಯಲ್ಲಿ ಕಳೆಯುತ್ತಿದ್ದರಂತೆ. ಅವರ ಕುಟುಂಬದ ಸಸ್ಯಪ್ರೀತಿ ಅಪಾರ. ಸತೀಶ್‌ ದೂರದ ಊರಿಗೆ ಹೋದರೆ ಅಲ್ಲಿನ ಪ್ರಸಿದ್ಧ ಗಿಡಗಳನ್ನು ತರಲು ಹೇಳುತ್ತಿದ್ದರಂತೆ ಶ್ರೀಮತಿ ನಳಿನಿ ಧವನ್. ತಾತ, ಅಮ್ಮನಾದಿಯಾಗಿ ಎಲ್ಲರೂ ಸಸ್ಯವಿಜ್ಞಾನದ ಪ್ರಾಥಮಿಕ ಪಾಠವನ್ನು ಮಕ್ಕಳಿಗೆ ಪ್ರಾಯೋಗಿಕವಾಗಿ ಕಲಿಸುತ್ತಿದ್ದರಂತೆ. ಹಾಗಾಗಿ ಐ.ಐ.ಎಸ್.ಸಿ ಮತ್ತು ಇಸ್ರೊ ಸಂಸ್ಥೆಗಳ ಹಸಿರು ಆವರಣಗಳನ್ನು ನೋಡಿದವರಿಗೆಲ್ಲಾ, ಇದು ಧವನ್‌ ಅವರ ಕೊಡುಗೆ ಎಂದು ನೆನಪಾಗಬೇಕು.

ಮಗಳು ಮತ್ತು ಮೊಮ್ಮಗುವಿನೊಂದಿಗೆ ಆಟದಲ್ಲಿ ನಿರತ ಪ್ರೊ. ಸತೀಶ್‌ ಧವನ್‌ (ಕೃಪೆ: ಡಾ.ಜ್ಯೋತ್ಸ್ನಾ ಧವನ್)

ಅಂದ ಹಾಗೆ ಸತೀಶ್‌ ಅವರ ಓದಿನ ಬಗ್ಗೆ ಹೇಳಲೇಬೇಕು. ಜೀವನಚರಿತ್ರೆಗಳು, ತತ್ವಜ್ಞಾನ, ರಾಜಕೀಯ, ವಿಜ್ಞಾನ, ಚರಿತ್ರೆ, ಸಾಹಿತ್ಯ ಹೀಗೆ ಬಹಳವಾಗಿ ಓದಿಕೊಂಡವರು. ಆದರೆ ಬರೆದದ್ದು ಕಡಿಮೆ. ಅವರು ಹೆಚ್ಚು ಬರೆಯಬೇಕಿತ್ತು. ಬೆಂಗಳೂರಿನಲ್ಲಿದ್ದರೂ ಕನ್ನಡ ಭಾಷೆಯನ್ನು ಪೂರ್ಣವಾಗಿ ಕಲಿಯಲಿಲ್ಲ ಎಂಬ ವಿಚಾರವನ್ನು ಮನ್ನಿಸಿ ನೋಡುವುದಾದರೆ, ನನಗೆ ಅವರ ಬಗ್ಗೆ ಕೊರತೆಯನ್ನು ಪಟ್ಟಿ ಮಾಡಬೇಕೆಂದರೆ ಸಿಗುವುದು ಇದೊಂದೇ!!

ಸತೀಶ್‌ ಅವರ ನಾಗರಿಕ ಪ್ರಜ್ಞೆ

ಸತೀಶ್‌ ಅವರ ನಾಗರಿಕ ಪ್ರಜ್ಞೆಗೆ ಗುರುತಾಗಿ ಹಲವು ಪ್ರಸಂಗಗಳಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಪ್ರಸ್ತಾಪಿಸುತ್ತೇನೆ. ದೇಶ ವಿಭಜನೆಯ ದುರಂತವನ್ನು ಕಂಡಿದ್ದ ಸತೀಶ್‌ ಅವರಿಗೆ ನಿರಾಶ್ರಿತರ ಬಗ್ಗೆ ಮೊದಲಿನಿಂದಲೂ ಕಾಳಜಿ. ಹಾಗಾಗಿ ಅವರು ನರ್ಮದಾ ಬಚಾವೋ ಆಂದೋಲನಕ್ಕೆ ತಮ್ಮ ಬೆಂಬಲ ನೀಡಿದ್ದರು. ಈಗ ಇಸ್ರೊ-ಸ್ಪೈ ಕೇಸ್‌ ಎಂದು ಹೆಸರಾಗಿರುವ ನಂಬಿ ನಾರಾಯಣನ್‌ ಅವರ ಕುರಿತ ಸುಳ್ಳು ಆರೋಪಗಳಿಗೆ ಪ್ರತಿಯಾಗಿ ಅವರ ಬೆಂಬಲಕ್ಕೆ ನಿಂತು ಆದಷ್ಟು ಬೇಗ ಅವರಿಗೆ ನ್ಯಾಯ ದೊರೆಯುವಂತೆ ಮನವಿ ಮಾಡಿದ್ದರು ಪ್ರೊ. ಸತೀಶ್.‌ ಇದೇ ರೀತಿ ಏರೋಸ್ಪೇಸ್‌ ವಿಜ್ಞಾನಿ ರಾಜ್‌ ಮಹೀಂದ್ರಾ ಅವರ ಬಗ್ಗೆ ಅರೋಪಗಳು ಬಂದಾಗಲೂ ಬೆಂಬಲಕ್ಕೆ ನಿಂತಿದ್ದರು. ಇನ್ನೊಂದು ಬಹುಮುಖ್ಯ ಅವರ ಕೊಡುಗೆ ಕೇರಳದ ಸೈಲೆಂಟ್‌ ವ್ಯಾಲಿ ಹೋರಾಟಕ್ಕೆ ಸಂಬಂಧಪಟ್ಟಿದ್ದು. ಅವರ ಮಧ್ಯಪ್ರವೇಶದ ಕಾರಣದಿಂದ ಪ್ರೊ.ಎಂ.ಜಿ.ಕೆ.ಮೆನನ್‌ ಅವರ ನೇತೃತ್ವದಲ್ಲಿ, ಆ ಯೋಜನೆಯ ಪರಿಣಾಮಗಳ ಅಧ್ಯಯನ ಸಮಿತಿ ರಚನೆಯಾಯಿತು. ಆ ಸಮಿತಿಯ ವರದಿಯ ಆಧಾರದ ಮೇಲೆ ಸೈಲೆಂಟ್‌ ವ್ಯಾಲಿ ಅಣೆಕಟ್ಟು ಯೋಜನೆ ನಿಂತು ಹೋಗಿದ್ದು ಮತ್ತು ಮುಂದೆ ಅದು ರಾಷ್ಟ್ರೀಯ ಅಭಯಾರಣ್ಯ ಆಗಿದ್ದು ಈಗ ಇತಿಹಾಸ!! ‌

ಆರು ದಶಕಗಳ ಕಾಲ ಬೆಂಗಳೂರಿನ ನಿವಾಸಿಯಾಗಿದ್ದ ಪ್ರೊ. ಸತೀಶ್‌ ಅವರು ಬೆಂಗಳೂರಿಗೂ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ. ಇಂದು ಚಾಲುಕ್ಯ ಸರ್ಕಲ್‌ ಬಳಿ ಇರುವ ನೆಹರು ತಾರಾಲಯ ಮತ್ತು ಸ್ಯಾಂಕಿ ಕೆರೆಯ ಆವರಣ ಈಗಿರುವಂತೆ ಇರುವಲ್ಲಿ ಅವರ ಪಾತ್ರ ತುಂಬಾ ಹಿರಿದು. ೧೯೮೦ ರ ದಶಕದಲ್ಲಿ, ರಕ್ಷಣಾ ಇಲಾಖೆಗೆ ಸೇರಿರುವ ಈಗಿರುವ ತಾರಾಲಯದ ಜಾಗದಲ್ಲಿ ಒಂದು ವಾಣಿಜ್ಯ ಸಂಕೀರ್ಣ ಮತ್ತು ಸ್ಯಾಂಕಿ ಕೆರೆಯ ಪ್ರದೇಶದಲ್ಲಿ ತಾರಾಲಯ ಆರಂಭವಾಗುವುದರಲ್ಲಿತ್ತು. ಆದರೆ ಸ್ಯಾಂಕಿ ಕೆರೆಯ ಇಕಾಲಜಿಗೆ ಕುತ್ತು ತರುವ ಮತ್ತು ಪ್ರಮುಖ ಜಾಗವೊಂದು ವಾಣಿಜ್ಯ ಕಾಳಜಿಗಳಿಗೆ ಪಾಲಾಗುವ ಆತಂಕ ಈ ನಿರ್ಧಾರದ ದೆಸೆಯಿಂದ ಶುರುವಾಯಿತು. ಬೇರೆಲ್ಲಾ ಪ್ರಯತ್ನಗಳು ಇದನ್ನು ತಡೆಗಟ್ಟಲು ವಿಫಲವಾದಾಗ, ನಾಗರಿಕ ಹೋರಾಟಗಾರರು ಸತೀಶ್‌ ಅವರನ್ನು ಸಂಪರ್ಕಿಸಿದರಂತೆ. ಸತೀಶ್‌ ಕೂಡಲೇ ಇಂದಿರಾಗಾಂಧಿ ಮತ್ತು ಡಾ. ರಾಜಾರಾಮಣ್ಣ ಅವರೊಡನೆ ಮಾತನಾಡಿ ತಾರಾಲಯ ಈಗಿರುವ ಜಾಗದಲ್ಲಿ ಆರಂಭವಾಗುವಂತೆ ನೋಡಿಕೊಂಡರು. ಜೊತೆಗೆ ಸ್ಯಾಂಕಿ ಕೆರೆಯ ಪರಿಸರವನ್ನು ಕೂಡ ಕಾಪಾಡಿದರು.

ಪ್ರಶಸ್ತಿ ಮತ್ತು ಗೌರವಗಳು

ಪ್ರೊ. ಸತೀಶ್‌ ಅವರ ಕೊಡುಗೆಗಳನ್ನು ಆಧರಿಸಿ ಹಲವಾರು ಪ್ರಶಸ್ತಿ ಮತ್ತು ಗೌರವಗಳು ಅವರನ್ನು ಅರಸಿಕೊಂಡು ಬಂದಿವೆ. ಅವುಗಳಲ್ಲಿ ಪ್ರಮುಖವಾದದ್ದು ಕೆಲವನ್ನು ಇಲ್ಲಿ ಪಟ್ಟಿ ಮಾಡಿದ್ದೇನೆ.

೧. ೧೯೮೧ ರಲ್ಲಿ ಪದ್ಮವಿಭೂಷಣ ಪ್ರಶಸ್ತಿ. ಇದಕ್ಕೂ ಮೊದಲು ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗಳು.

೨. ೧೯೮೪ ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.

೩. ಯು.ಎಸ್.ನ್ಯಾಷನಲ್‌ ಅಕಾಡೆಮಿ ಆಫ್‌ ಇಂಜಿನಿಯರಿಂಗ್‌ ಫೆಲೋ ಮತ್ತು  ಲೆಜೆಂಡ್ಸ್‌ ಆಫ್‌ ಗ್ಯಾಲ್ಸಿಟ್‌  ಗೌರವ.

೪. ೧೯೯೯ ರಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ಐಕ್ಯತಾ ಪ್ರಶಸ್ತಿ.

೫. ಐ.ಐ.ಎಸ್‌ಸಿ ಯ ಎರೋಸ್ಪೇಸ್ ವಿಭಾಗದಲ್ಲಿ ಗೌರವ ಪೀಠ, ಗೌರವ ಸಂದರ್ಶಕ ಪ್ರೊಫೆಸರ್/ವಿಜ್ಞಾನಿ ಗೌರವ ಮತ್ತು ಅವರು ಓದಿದ ಕ್ಯಾಲ್‌ಟೆಕ್‌ ನಲ್ಲಿ ಭಾರತೀಯ ವಿದ್ಯಾರ್ಥಿಗಳಿಗಾಗಿ ಇಸ್ರೊ ಸ್ಥಾಪಿಸಿರುವ ಫೆಲೋಶಿಪ್‌.

೬. ಕರ್ನಾಟಕ ರಾಜ್ಯ ತಂತ್ರವಿದ್ಯಾ ಮಂಡಳಿ ಸ್ಥಾಪಿಸರುವ ಪ್ರೊ.ಸತೀಶ್‌ ಧವನ್‌ ಪುರಸ್ಕಾರ. ೭. ಅವರ ಹೆಸರಲ್ಲಿ ವಿದ್ಯಾರ್ಥಿಗಳೇ ತಯಾರಿಸಿದ ಉಪಗ್ರಹ “SDSAT” ಕೂಡ ಉಡಾವಣೆಯಾಗಿದೆ.

೧೯೮೧ ರಲ್ಲಿ ರಾಷ್ಟ್ರಪತಿಗಳಾದ ನೀಲಂ ಸಂಜೀವ ರೆಡ್ಡಿಯವರಿಂದ ಪದ್ಮವಿಭೂಷಣ ಪ್ರಶಸ್ತಿ ಸ್ವೀಕರಿಸುತ್ತಿರುವ ಪ್ರೊ.ಧವನ್‌ (ಕೃಪೆ: ಕರೆಂಟ್‌ ಸೈನ್ಸ್‌ ಪತ್ರಿಕೆ)

ಉಪಸಂಹಾರ

ಪ್ರೊ. ಸತೀಶ್‌ ಧವನ್‌ ಕುರಿತ ಸರಣಿ ಈಗ ಕೊನೆಯ ಹಂತ ಮುಟ್ಟಿದೆ. ಅವರ ಕುರಿತ ಸಾಕಷ್ಟು ವಿವರಗಳನ್ನು ಮತ್ತು ಒಳನೋಟಗಳನ್ನು ಈ ಪಯಣ ನನಗೆ ಒದಗಿಸಿದೆ. ಇದೆಲ್ಲವನ್ನು ಈಗ ನೆನದರೆ, ನನಗೆ ಅವರು ಭಾರತೀಯ ಮಟ್ಟದಲ್ಲಿ ಉತ್ತರ-ದಕ್ಷಿಣ ಸಂಸ್ಕೃತಿಗಳು ಬೆರೆತ ಹಾಗೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪೂರ್ವ-ಪಶ್ಚಿಮ ಎರಡೂ ಕೊನೆಗಳು ಜೊತೆಗೂಡಿದ, ಸಂಗಮಬಿಂದುವಿನಂತೆ ಕಾಣುತ್ತಾರೆ. ಅದಕ್ಕೆ ಅವರ ಬದುಕಿನಲ್ಲಿ ಪೂರ್ವದ ಸೊಬಗನ್ನು, ಪಶ್ಚಿಮದ ಬೆರಗನ್ನೂ ಕಾಣಬಹುದು. ಬುದ್ಧನ ಚಿಂತನೆಗಳನ್ನು ಮತ್ತು ಭಾರತೀಯ ಸಂವಿಧಾನದ ಆಶಯಗಳನ್ನು ಧ್ಯಾನಿಸುತ್ತಿದ್ದ ಅವರು ನಿಜಕ್ಕೂ ವಿಶ್ವಮಾನವ. ಅವರು ಜನವರಿ ೩, ೨೦೦೨ರಲ್ಲಿ ತೀರಿಕೊಂಡಾಗ ಅವರ ಶಿಷ್ಯ ರೊದ್ದಂ ನರಸಿಂಹ ಬರೆದ ಮಾತುಗಳಿವು – “He was ,most of all, the undeclared but widely accepted moral and social conscience of the scientific community” . ಹಾಗೇ ಬದುಕಿದ್ದರು ಸತೀಶ್.

ಸತೀಶ್‌ ಅವರ ಗೆಳೆಯರ ಬಳಗವೊಂದು ೧೯೫೦ ರ ದಶಕದಿಂದ ಅಸ್ತಿತ್ವದಲ್ಲಿತ್ತು. ಭಾರತ ಕಂಡ ಮಹಾನ್‌ ಚಿಂತಕ, ಬಹುಶೃತ ವಿದ್ವಾಂಸ ಶ್ರೀ ದಾಮೋದರ ಧರ್ಮಾನಂದ ಕೋಸಾಂಬಿ ಅವರ ಮಾರ್ಗದರ್ಶನದಲ್ಲಿ ಪ್ರತಿ ಭಾನುವಾರ ಸೇರುತ್ತಿದ್ದ ಆ ಗುಂಪು ದೇಶದ ವಿವಿಧ ವಿದ್ಯಮಾನಗಳ ಬಗ್ಗೆ ಚರ್ಚಿಸುತ್ತಿತ್ತು. ಸಮಾಜಮುಖಿ ಚಿಂತನೆಯ ಹಿನ್ನೆಲೆಯುಳ್ಳ ಈ ಗುಂಪಿನ ಸದಸ್ಯರೆಲ್ಲರೂ ತಮ್ಮ ಬದುಕಿನ ಭಾಗವಾಗಿ ಸಮಾಜದ ಉನ್ನತಿಗೆ ದುಡಿದವರು. ೫೦ ವರ್ಷಗಳಿಗೂ ಮೀರಿದ ಆ ಸ್ನೇಹಕೂಟದ ಚಿತ್ರ ಇಲ್ಲಿದೆ ನೋಡಿ.

ಸತೀಶ್‌ ಅವರ ಸಮಾಜವಾದಿ ಗೆಳೆಯರ ಬಳಗ ಪ್ರೊ. ಜೆ.ಆರ್.ಲಕ್ಷ್ಮಣರಾಯರು, ಪ್ರೊ.ಎ.ಸೇತುರಾಂ, ಪ್ರೊ.ಎ.ವಿ.ವಾಸುದೇವಮೂರ್ತಿ, ಡಾ.ಅಮೂಲ್ಯ ರೆಡ್ಡಿ ಹಾಗೂ ಇತರರು (ಕೃಪೆ: ಶ್ರೀಮತಿ ವಿಮಲಾ ರೆಡ್ಡಿ

ಈ ಚಿತ್ರದಲ್ಲಿ ನೀಲಿ ಬಣ್ಣದ ಟೀ-ಶರ್ಟ್‌ ತೊಟ್ಟಿರುವವರೇ ಡಾ. ಅಮೂಲ್ಯ ಕೆ.ಎನ್.ರೆಡ್ಡಿ. ಸತೀಶ್‌ ಅವರ ಬಹುಕಾಲದ ಗೆಳೆಯ, ಒಡನಾಡಿ ಮತ್ತು ನೆರೆಹೊರೆಯಲ್ಲಿದ್ದವರು. ಅವರು ಪ್ರೊ. ಸತೀಶ್‌ ಧವನ್ ಬಗ್ಗೆ ಬರೆದ ಸಾಲುಗಳೊಂದಿಗೆ ಈ ಸರಣಿಯನ್ನು ಮುಕ್ತಾಯ ಮಾಡುತ್ತಿದ್ದೇನೆ. ನಮ್ಮ ಮುಂದಿನ ದಾರಿಯನ್ನು ಈ ಸಾಲುಗಳೇ ಧ್ವನಿಸುತ್ತವೆ!!

“Satish Dhawan was the embodiment of the fusion of science and human values. His humanity is what lifted him above the ordinary, and made him a giant among pygmies and a prince among men. Whereas his talent as an engineer and craftsmen were a gift of nature, his human values are within our reach to emulate. If we do so, that will be a real tribute”- Dr. AKN Reddy.

(ಪ್ರೊ. ಸತೀಶ್‌ ಧವನ್‌ ಅವರ ಕುರಿತಾಗಿ ಒಂದು ಲೇಖನ ಬರೆಯಲು ಹೊರಟ ನಾನು,  ಒಂದು ಲೇಖನದಲ್ಲಿ ಅವರ ಸಾಧನೆ ಮತ್ತು ಬದುಕನ್ನು ಚಿತ್ರಿಸುವುದು ಅಸಾಧ್ಯವೆಂದು ತೋರಿದ್ದರಿಂದ ಈ ಸರಣಿಯ ಪಯಣ ಶುರುವಾಯಿತು. ಓದುಗರಾದ ನೀವು ಜೊತೆಯಾದಿರಿ ಹಾಗೂ ಹಲವು ಹಿರಿಯರು ಪ್ರೋತ್ಸಾಹಿಸಿದರು. ಇದರ ಮುಂದುವರಿಕೆಯಾಗಿ ಮುಂದಿನ ಶನಿವಾರ, ಆಗಸ್ಟ್‌ ೨೧ ರಂದು ವೆಬಿನಾರ್‌ ಕೂಡ ಆಯೋಜಿಸಿಲಾಗಿದೆ. ಅವರ ಮಗಳು ಮತ್ತು ಶಿಷ್ಯ ಸಂತತಿಯ ಸಂಶೋಧಕ ಅಂದು ನಮ್ಮೊಡನೆ ಮಾತನಾಡಲಿದ್ದಾರೆ. ಅಂದು ಅವರ ಜನ್ಮಶತಮಾನೋತ್ಸವದ ಸಂಭ್ರಮದಲ್ಲಿ ಪಾಲ್ಗೊಳ್ಳಿ. ಆ ವಿವರಗಳು ಇಲ್ಲಿವೆ)

ಪುಟ-೧
ಪುಟ-೨

ನಮಸ್ಕಾರಗಳು.

ಆಕಾಶ್‌ ಬಾಲಕೃಷ್ಣ.

ಹೆಚ್ಚಿನ ಓದಿಗೆ:

  1. Remembering Satish Dhawan by Amulya K N Reddy, Current Science, Vol 82, No. 2, 25 JANUARY 2002
  2. Satish Dhawan by R. Narasimha, Current Science, Vol 82, No. 2, 25 JANUARY 2002
  3. Satish Dhawan, Bird Flight, Second edition,  Indian Academy of Sciences, 2020
  4. Satish Dhawan by K R Sreenivasan, Bhavana Magazine, Issue 3, July 2020
  5. Satish by Jyotsna Dhawan, Bhavana Magazine, Issue 3, July 2020
  6. Special Section: Satish Dhawan Birth Centenary, Current Science, Vol 119, No.9, 10 NOVEMBER 2020

This Post Has 4 Comments

  1. Bhuvaneswari Shivashankar

    The centenary rememberance series of Prof.Satish Dhawan was indeed a great opportunity to learn about the great scientific visionary of India.The research institutions ISRO, IISc are indeed India’ s proud and we salute Professor Satish Dhawan for his visionary cobtributions. Thanks to Shri Akash Balakrishna for excellent and enlightening writing.

  2. Kavita Guddad

    Thank you verymuch for such a wonderful series about the legend in such simple and easily understandable way that too in kannada🙏.
    Felt very Happy, reading ಕನ್ನಡ article that toi about a scientist.

  3. Nagaraj ananth

    Nice reading

  4. Rajegowda

    Very good information.. thanks for sharing and effort..

Leave a Reply