You are currently viewing ಪಾಲ್ ಡಿರ‍್ಯಾಕ್ : ಭೌತವಿಜ್ಞಾನದ ಪರಿಶುದ್ಧ ಆತ್ಮ

ಪಾಲ್ ಡಿರ‍್ಯಾಕ್ : ಭೌತವಿಜ್ಞಾನದ ಪರಿಶುದ್ಧ ಆತ್ಮ

ಪಾಲ್‌ ಡಿರ‍್ಯಾಕ್, ಎಂಬ ಸೈದ್ಧಾಂತಿಕ ಭೌತವಿಜ್ಞಾನಿಯ ಪರಿಚಯವಿರುವುದು ಸಾಮಾನ್ಯವಾಗಿ ಅಪರೂಪ. ಅವರ ಜನ್ಮದಿನದ(ಆಗಸ್ಟ್‌, 8) ನೆನಪಿನಲ್ಲಿ ಅವರನ್ನು ಪರಿಚಯಿಸುವ ಈ ಪ್ರಬಂಧ ಪುಟ್ಟ ಪ್ರಯತ್ನ ಮಾತ್ರ!. ಪ್ರಯತ್ನ ಏಕೆಂದರೆ ಅವರನ್ನು ಅವರ ವೈಜ್ಞಾನಿಕ ಕೊಡುಗೆಯಿಂದ ಪರಿಚಯಿಸುವುದು ಅಸಾಧ್ಯದ ಸಂಗತಿ. ಆಧುನಿಕ ಭೌತವಿಜ್ಞಾನದ ಎರಡು ಪ್ರಮುಖ ಮೂಲೆಗಲ್ಲುಗಳಾದ “ಸಾಪೇಕ್ಷತೆ-(Relativity)” ಮತ್ತು “ಕ್ವಾಂಟಂ ಮೆಕಾನಿಕ್ಸ್‌-(Quantum Mechanics) ಎರಡನ್ನೂ ಒಂದೇ ಸಮೀಕರಣದಲ್ಲಿ ಕೊಟ್ಟ ಅದ್ವಿತೀಯ ಭೌತವಿಜ್ಞಾನಿ. ಮದುವೆಗೂ ಮುನ್ನ ಕೇವಲ 31ರ ಹರೆಯದಲ್ಲಿ ಭೌತವಿಜ್ಞಾನದಲ್ಲಿ ನೊಬೆಲ್‌ ಪುರಸ್ಕಾರ ಪಡೆದವರು. ಗಣಿತವನ್ನು ಕೇವಲ ಆಲೋಚನೆಗಳಿಂದಲೇ ಭೌತವಿಜ್ಞಾನದಲ್ಲಿ ಸಮೀಕರಣಗಳಾಗಿಸಿದ ವಿಶಿಷ್ಟವಾದ ವ್ಯಕ್ತಿ. ಜನಪ್ರಿಯತೆಯಲ್ಲಿ ಓರ್ವ ವಿಜ್ಞಾನಿಯಾಗಿ ಆಲ್ಬರ್ಟ್‌ ಐನ್‌ಸ್ಟೈನ್‌ರದ್ದು ಸಿನಿಮಾ ನಟರಂತಹದ್ದು! ಆದರೆ ಗಣಿತದ ಅನ್ವಯದಲ್ಲಿ ಅವರನ್ನೂ ಮೀರಿಸಿದ್ದ ಮಹಾನ್‌ ಮೇಧಾವಿ ಪಾಲ್‌ ಡಿರ‍್ಯಾಕ್‌ ಬಗ್ಗೆ ತಿಳಿದವರೇ ಅಪರೂಪ!

         ಆಲ್ಬರ್ಟ್‌ ಐನ್‌ಸ್ಟೈನ್‌ ಒಮ್ಮೆ ಸಾರ್ವಕಾಲಿಕ ಜಗದ್ವಿಖ್ಯಾತ ನಟ ಚಾರ್ಲಿ ಚಾಪ್ಲಿನ್‌ ಭೇಟಿಯಾಗಿದ್ದಾಗ ಚಾಪ್ಲಿನ್‌ ಕುರಿತು ಹೀಗಂದಿದ್ದರು. “ಚಾಪ್ಲಿನ್‌, ನಿಮ್ಮ ನಟನೆಯಲ್ಲಿ ನಾನು ಮೆಚ್ಚುವುದೆಂದರೆ, ನಿಮ್ಮ ಸಾರ್ವತ್ರಿಕತೆ. ನೀವು ಒಂದೂ ಪದವನ್ನಾಡದೆ, ಜಗತ್ತಿಗೆ ಅರ್ಥವಾಗಬಲ್ಲಿರಿ”  ಆಗ ಚಾಪ್ಲಿನ್‌ ಮಾರುತ್ತರವಾಗಿ, “ಅದೇನೋ ನಿಜವೇ! ಆದರೆ ನಿಮ್ಮ ಯಾವ ಮಾತನ್ನೂ ಅರ್ಥಮಾಡಿಕೊಳ್ಳದೆಯೂ, ಜಗತ್ತು ನಿಮ್ಮನ್ನು ಮೆಚ್ಚಿರುವ ಜನಪ್ರಿಯತೆ ಇನ್ನೂ ದೊಡ್ಡದು!” ಎಂದಿದ್ದರು. ಇಂತಹಾ ಖ್ಯಾತಿವೆತ್ತ ವಿಜ್ಞಾನಿ ಐನ್‌ಸ್ಟೈನ್‌ ಡಿರ‍್ಯಾಕ್‌ ಕುರಿತು ಹೇಳಿದ್ದು ಇನ್ನೂ ಬಹಳ ದೊಡ್ಡ ಮಾತು. “ಪ್ರತಿಭೆ ಮತ್ತು ಹುಚ್ಚುತನದ ನಡುವಿನ ತಲೆತಿರುಗುವಂತಹ ಹಾದಿಯಲ್ಲಿ ಪಾಲ್‌ ಡಿರ‍್ಯಾಕ್‌ ಸಾಧಿಸಿರುವ ಸಮತೋಲನವು ಅತ್ಯಂತ ಭಯಂಕರವಾದದು” ಎಂದಿದ್ದರು ಐನ್‌ಸ್ಟೈನ್‌. ನಿಜಕ್ಕೂ ಡಿರ‍್ಯಾಕ್‌ ಓರ್ವ ವ್ಯಕ್ತಿಯಲ್ಲ. ಅವರೊಬ್ಬ ಸಮೀಕರಣ, ಸಿದ್ಧಾಂತ. ಭೌತವಿಜ್ಞಾನದಲ್ಲಿ ನ್ಯೂಟನ್‌ ಅಲಂಕರಿಸಿದ್ದ ಲ್ಯುಕಾಸಿಯನ್‌ ಪೀಠವನ್ನು ಡಿರ‍್ಯಾಕ್‌ ಕೂಡ ಅಲಂಕರಿಸಿದ್ದವರು. ಇವರ ನಂತರ ಸ್ಟೀಫನ್‌ ಹಾಕಿಂಗ್‌ ಅಲಂಕರಿಸಿದ್ದರು. ಪಾಲ್‌ ಡಿರ‍್ಯಾಕ್‌ ಐನ್‌ಸ್ಟೈನ್‌ ಅವರ ಸಾಮಾನ್ಯ ಸಾಪೇಕ್ಷ ಸಿದ್ಧಾಂತದಿಂದ ಮುಂದುವರೆದು, ವಿಶ್ವದ ಸಂರಚನೆಯನ್ನು ಗಣಿತೀಯ ಸೌಂದರ್ಯದಲ್ಲಿ ಊಹಿಸಿ, ವಸ್ತುಗಳ ಸೂಕ್ಷಾತಿಸೂಕ್ಷ್ಮ ಕಣವಿನ್ಯಾಸದ ವಿವರಣೆಗೆ ತಳಹದಿಯನ್ನು ಕೊಟ್ಟ ಮಹಾನ್‌ ವಿಜ್ಞಾನಿ.  ಒಬ್ಬ ಸೈದ್ಧಾಂತಿಕ ವಿಜ್ಞಾನಿಯಾಗಿ ತೀರಾ ಅಪರೂಪಕ್ಕೆ ಮಾತಾಡುತ್ತಿದ್ದ ವಿಲಕ್ಷಣ ಸ್ವಭಾವದವರು. ಕೇಂಬ್ರಿಜ್‌ ವಿಶ್ವವಿದ್ಯಾಲಯದಲ್ಲಿ “ಡಿರ‍್ಯಾಕ್‌” ಎಂದರೆ ಅದೊಂದು ಮೂಲಮಾನ! ಅದರಂತೆ ಪ್ರತಿ ಗಂಟೆಗೊಂದು ಪದ ಬಳಕೆಗೆ “ಡಿರ‍್ಯಾಕ್‌” ಎನ್ನುತ್ತಾರೆ. A unit called a “Dirac”, which was one word per hour ಎಂಬ ತಮಾಷೆಯು ಜನಪ್ರಿಯವಾಗಿತ್ತು. ವಾರಗಟ್ಟಲೇ ಯಾರೊಡನೆಯೂ ಮಾತಾಡದೆ ಇರುತ್ತಿದ್ದ ಅದೆಷ್ಟೋ ಉದಾಹರಣೆಗಳೂ ಇದ್ದವು. ಅತ್ಯಂತ ಶಾಂತ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದ ಡಿರ‍್ಯಾಕ್‌, ಯಾರನ್ನಾದರೂ ಬಹಿರಂಗವಾಗಿ ಟೀಕಿಸಲೂ ಹಿಂದೆ-ಮುಂದೆ ನೋಡುತ್ತಿರಲಿಲ್ಲ. ನೊಬೆಲ್‌ ಅಲ್ಲದೆ, ಕೋಪ್ಲೆ ಮೆಡಲ್‌ ರಾಯಲ್‌ ಮೆಡಲ್‌, ಪ್ಲಾಂಕ್‌ ಮೆಡಲ್‌ ಕೂಡ ಪಡೆದೂ ಜನಪ್ರಿಯತೆಯನ್ನು ಬಯಸಲಿಲ್ಲ. ಬ್ರಿಟನ್ನಿನ ನೈಟ್‌ ಹುಡ್‌ ಪದವಿಯನ್ನು ಹೆಸರು ಮಾಡದಿರುವ ಆಸಕ್ತಿಯ ಕಾರಣದಿಂದಲೇ ತಿರಸ್ಕರಿಸಿದವರು.

       ಪಾಲ್‌ ಆಡ್ರಿಎನ್‌ ಮೌರಿಸ್‌ ಡಿರ‍್ಯಾಕ್‌ (Paul Adrien Maurice Dirac) ಇಂಗ್ಲಂಡ್‌ನ ಬ್ರಿಸ್ಟಲ್‌ ನಲ್ಲಿ 1902ರ ಆಗಸ್ಟ್‌ 8ರಂದು ಚಾರ್ಲ್ಸ್‌ ಡಿರ‍್ಯಾಕ್‌ ಮತ್ತು ಫ್ಲಾರೆನ್ಸ್‌ ಡಿರ‍್ಯಾಕ್‌ ದಂಪತಿಗಳಿಗೆ ಜನಿಸಿದರು. ತಂದೆ ಓರ್ವ ಫ್ರೆಂಚ್‌ ಬೋಧಿಸುವ ಶಾಲಾ ಶಿಕ್ಷಕ. ಅಮ್ಮ ಗೃಹಣಿ. ಅಪ್ಪ ಮಹಾನ್‌ ಶಿಸ್ತಿನ ಮನುಷ್ಯ. ಸದಾ ಮಕ್ಕಳ ಜೊತೆ ಫ್ರೆಂಚ್‌ ಭಾಷೆಯಲ್ಲಿ ಮಾತ್ರವೇ ಮಾತಾಡುತ್ತಿದ್ದರು. ಅಮ್ಮ ಮಾತ್ರ ಇಂಗ್ಲೀಷಿನಲ್ಲಿ ಮಾತಾಡುತ್ತಿದ್ದರು. ಅಪ್ಪನೋ ತುಂಬಾ ಕೋಪಿಷ್ಠ, ಮಕ್ಕಳು ಫ್ರೆಂಚ್‌ ವ್ಯಾಕರಣ ಶುದ್ಧವಾಗಿ ಮಾತಾಡಬೇಕಿತ್ತು. ತಪ್ಪಿದರೆ ಶಿಕ್ಷೆ. ಇಂತಹಾ ದ್ವಿಭಾಷೆಗಳ ಹಾಗೂ ಶಿಸ್ತಿನ ನಡುವೆ ಮಾತೇ ಬೇಡ ಎನ್ನುವಂತೆ ಡಿರ‍್ಯಾಕ್‌ ಬಾಲ್ಯವನ್ನು ಓರ್ವ ಅಣ್ಣ-ಫಿಲಿಕ್ಸ್‌ ಹಾಗೂ ತಂಗಿ ಬೆಟ್ಟಿಯೊಂದಿಗೆ ಕಳೆದರು.

       ಪಾಲ್‌ ಡಿರ‍್ಯಾಕ್‌ ಸೈದ್ಧಾಂತಿಕ ಭೌತವಿಜ್ಞಾನಿಯಾಗಿದ್ದು ವಿಶೇಷವೇ! ಏಕೆಂದರೆ, ಅಣ್ಣನಂತೆ ತಾನೂ ಇಂಜನಿಯರಿಂಗ್‌ ಪದವಿಯನ್ನೇ ಪಡೆದವರು. ನಂತರ ಗಣಿತದಲ್ಲಿಯೂ ಪದವಿಯನ್ನು ಪಡೆದು ಕೇಂಬ್ರಿಜ್‌ನ ಸೆಂಟ್‌ ಜಾನ್‌ ಕಾಲೇಜನ್ನು ಸೇರಿದರು. ಗಣಿತದ ಮೇಧಾವಿತನದಿಂದಾಗಿ ಕೇಂಬ್ರಿಜ್‌ ವಾತಾವರಣದಲ್ಲಿ ಸೈದ್ಧಾಂತಿಕ ಭೌತವಿಜ್ಞಾನಕ್ಕೆ ಹೊರಳಿದ್ದೇ ವಿಜ್ಞಾನಕ್ಕೆ ದೊಡ್ಡ ಕೊಡುಗೆಯಾಯಿತು. ಅಲ್ಲಿ ರಾಲ್ಫ್‌ ಫೌಲ್‌ ಅವರ ಮಾರ್ಗದರ್ಶನದಲ್ಲಿ 1926ರಲ್ಲಿ ಪಿಎಚ್‌.ಡಿ. ಪದವಿಯನ್ನು ಗಳಿಸಿದರು. ಅದೂ ಕ್ವಾಂಟಂ ಭೌತವಿಜ್ಞಾನದ ಸಂಶೋಧನೆಯಲ್ಲಿ. ಆವರೆಗೆ ಆ ವಿಷಯದಲ್ಲಿ ಗಳಿಸಿದ ಮೊದಲ ಡಾಕ್ಟೊರೇಟ್‌ ಅದು. ಸಾಲದಕ್ಕೆ ಸರ್‌ ಎಡಿಂಗ್‌ಟನ್‌ ಅವರ ಪ್ರಕಾರ ಅದೊಂದು ಅತ್ಯಂತ ಶ್ರೇಷ್ಟವಾದ ಥೀಸೀಸ್‌.  ಅಲ್ಲಿಯೇ ಬೋಧನೆಗೆ ಸೇರಿದ್ದ ಡಿರ‍್ಯಾಕ್‌ ಅವರ ವಿಶಿಷ್ಟ ವಿಜ್ಞಾನ ಪ್ರಕಟಣೆಯು 1929ರ ಫೆಬ್ರವರಿಯಲ್ಲಿ ಹೊರಬಂದಿತು. ನಿಸರ್ಗದ ಮೂಲಭೂತ ನಿಯಮಗಳನ್ನು ಗಣಿತ ಮತ್ತು ಪ್ರಾಯೋಗಿಕ ಫಲಿತಗಳನ್ನು ಸಂಯೋಜಿಸಿ ಊಹಿಸಬಲ್ಲ ವಿಶಿಷ್ಟ ವಿಜ್ಞಾನಿಯಾಗಿ ಜಗತ್ತಿಗೆ ಪರಿಚಯಗೊಂಡರು ಪಾಲ್‌ ಡಿರ‍್ಯಾಕ್‌. ಅವರ ಪ್ರಕಾರ ವಿಶ್ವದ ರಚನೆಯ ನಿಯಮಗಳು ಅಪ್ರತಿಮವಾದ ಗಣಿತೀಯ ರಚನೆಗಳಾಗಿದ್ದು ಅತ್ಯಂತ ಸುಂದರವಾಗಿವೆ. ಅವರ ಕೊಡುಗೆಗಳು ಪರಮಾಣುಗಳ ಒಳಗಣ ಸೂಕ್ಷ್ಮಾತಿ ಸೂಕ್ಷ್ಮ ಕಣಗಳ ವಿವರಗಳ ಸೌಂದರ್ಯವನ್ನು ವರ್ಣಿಸಿದ್ದವು. ಪರಮಾಣುವಿನೊಳಗಿನ “ಇಲೆಕ್ಟ್ರಾನು” ಸುತ್ತುವುದಾದರೂ ಏಕೆ? ಹಾಗೆ ಪರಿಭ್ರಮಿಸಲು ಅದೇ ತೂಕದ ಆದರೆ ವಿರುದ್ಧವಾದ ವಿದ್ಯುತ್‌ ಗುಣದ ಪ್ರತಿ-ಇಲೆಕ್ಟ್ರಾನ್‌ ಇರುವುದನ್ನೂ ಊಹಿಸಿ ಪ್ರಕಟಿಸಿದ್ದರು. ಆ ಮೂಲಕ ಮಹಾ ಸ್ಪೋಟದಲ್ಲೇ ಅಂದರೆ ವಿಶ್ವದ ಉಗಮದಲ್ಲೇ ವಸ್ತು ವಿಕಾಸದಲ್ಲಿಯೇ ಪ್ರತಿವಸ್ತುವೂ ವಿಕಾಸವಾದುದರ ವಿವರವನ್ನು ಸರಳ ಸೂತ್ರದಲ್ಲಿ ವಿವರಿಸಿದ್ದರು. ಇದೇ ಪ್ರತಿ ವಸ್ತು – (Antimatter) ಸಿದ್ಧಾಂತಕ್ಕೆ ವಿವರಣೆಯಾಯಿತು. (ಇದನ್ನು Dark Matter ಜತೆಗೆ ಸಮೀಕರಿಸಿ ಗೊಂದಲ ಮಾಡಿಕೊಳ್ಳಬಾರದು. ಇದು ಡಾರ್ಕ್‌ ಮ್ಯಾಟರ್‌ ಅಲ್ಲ!) ಮುಂದೆ ಪಾಸಿಟ್ರಾನ್‌ ಕಣವನ್ನು ಕಂಡುಹಿಡಿಯುವ ಮೂಲಕ ಇದು ಪ್ರಾಯೋಗಿಕವಾಗಿಯೂ ಸಾಬೀತಾಯಿತು.

(ಒಂದು ನಿವೇದನೆ: ಖಂಡಿತಾ ಪಾಲ್‌ ಡಿರ‍್ಯಾಕ್‌ ಅವರ ಈ ಕ್ವಾಂಟಂ-ಭೌತವೈಜ್ಞಾನಿಕ ವಿವರಗಳನ್ನು ಕೊಡುವ ಯೋಗ್ಯತೆಯಾಗಲಿ, ಶೈಕ್ಷಣಿಕ ಕಲಿಕೆಯಾಗಲಿ ನನಗಿಲ್ಲ. ಕೇವಲ ಪ್ರೀತಿಯಿಂದ ಕಲಿಯುವ ಆಸಕ್ತಿಯ ಆನಂದವನ್ನು ಮಾತ್ರವೇ ಹೇಳುತ್ತಿದ್ದೇನೆ. ಅದರ ಕೆಲವು ಸಣ್ಣ-ಪುಟ್ಟ ಸಂಗತಿಗಳನ್ನು ಮುಂದೆ ಕೊಡುವ ಪ್ರಯತ್ನ ಮಾಡುವೆ. ಅದಕ್ಕೂ ಮೊದಲು ಡಿರ‍್ಯಾಕ್‌ ಅವರ ಧ್ವನಿಯಲ್ಲಿಯೇ https://www.youtube.com/watch?v=-o8mUyq_Wwg ಲಿಂಕ್‌ನಲ್ಲಿ ನಿಸರ್ಗ ಕೊಟ್ಟ ಮೂಲಮಾನವಿಲ್ಲದ ಅತಿದೊಡ್ಡ ಸಂಖ್ಯೆಯ ಪ್ರಮೇಯವನ್ನು ( “Large Number Hypothesis”) ವಿವರಿಸುವ 9 ನಿಮಿಷ-15 ಸೆಕೆಂಡುಗಳ ಮಾತುಗಳನ್ನು ಕೇಳಿ. ಇಯರ್‌ ಫೋನ್‌ ಬಳಸಿ ಕಣ್ಣು ಮುಚ್ಚಿ ಎಲ್ಲೋ ಅವರ ಮಾತುಗಳನ್ನು ಕೇಳಿದಂತಾಗುವ ಆನಂದವನ್ನು ಅನುಭವಿಸಿ. ಅವರ ಮಾತುಗಳಲ್ಲಿ ಇಡೀ ವಿಶ್ವದ ಒಟ್ಟೂ ಕಣಗಳಂತಹಾ ಅತಿದೊಡ್ಡ ಸಂಖ್ಯೆಯು, ವಿಶ್ವವು ಹಿರಿಯದಾದಂತೆ ಹಿಗ್ಗುತ್ತಾ ಹೆಚ್ಚು ವಸ್ತುವೂ ವಿಕಾಸವಾಗುವ ವಿವರಗಳ ಸಣ್ಣ ಪರಿಚಯವಾದರೂ ದೊರಕುತ್ತದೆ)

      ಡಿರ‍್ಯಾಕ್‌ ಅವರ ವೈಜ್ಞಾನಿಕ ಕೊಡುಗೆ, ಕ್ವಾಂಟಂ ಭೌತವಿಜ್ಞಾನ ಚಿಂತನೆಗಳನ್ನು ತುಸು ವೈಯಕ್ತಿಕ ವಿವರಗಳ ನಂತರ ನೋಡೋಣ. ಆರಂಭದಲ್ಲಿ ಪಾಲ್‌ ಡಿರ‍್ಯಾಕ್‌ ಮದುವೆಗೂ ಮೊದಲು ನೊಬೆಲ್‌ ಪುರಸ್ಕಾರ ಪಡೆದದನ್ನು ಪ್ರಸ್ತಾಪಿಸಿದ್ದೆ. ಹೌದು 1933ರಲ್ಲಿ ನೊಬೆಲ್‌ ಪುರಸ್ಕಾರವನ್ನು ಎರ್ವಿನ್ ಶ್ರೊಡಿಂಗರ್ ಅವರ ಜೊತೆ ಹಂಚಿಕೊಂಡು ಪಡೆದರು. ಆಗ ಅವರಿಗೆ ಎಲ್ಲವೂ ಇತ್ತು. ಕೇಂಬ್ರಿಜ್‌ ನಲ್ಲಿ ಪ್ರೊಫೆಸರ್‌, ನೊಬೆಲ್‌ ಬಹುಮಾನ ಹೀಗೆ…! ಆದರೆ ಸಂಗಾತಿ ಇರಲಿಲ್ಲ. ತೀರಾ ಮಿತಭಾಷಿಯಾದ, ಕೆಲವೊಮ್ಮೆ ಮಾತೇ ಆಡದ ವಿಜ್ಞಾನಿಗೆ ಜೊತೆಯಾಗುವುದಾದರೂ ಹೇಗೆ! ಡಿರ‍್ಯಾಕ್‌ ಅಂತೂ ತಾನಾಗಿಯೇ ಪ್ರಸ್ತಾಪಿಸುವ (Propose)ಗೋಜಿಗೆ ಹೋಗಲು ಸಾಧ್ಯವಿರಲಿಲ್ಲ. ಅದಕ್ಕೆ ಚಾಟರ್‌ ಬಾಕ್ಸ್‌ ಹೆಣ್ಣೊಬ್ಬಳಾದ ಮಾರ್ಗಿತ್‌ ವಿಂಗರ್‌ (Margit Wigner) ಎಂಬಾಕೆ ಡಿರ‍್ಯಾಕ್‌ ಅವರನ್ನು ಪ್ರಿನ್ಸ್‌ ಟನ್‌ ವಿಶ್ವವಿದ್ಯಾಲಯದಲ್ಲಿ ಸಂಧಿಸಿ ಆಕೆಯೇ ಪ್ರಸ್ತಾಪಿಸಿ ಮದುವೆಯಾದರು. ಹಾಂ.. ಆಕೆಯ ಅಣ್ಣ ಕೂಡ ಯೂಗಿನ್‌ ವಿಂಗರ್‌ (Eugene Winger)1963ರ ಭೌತವಿಜ್ಞಾನದ ನೊಬೆಲ್‌ ಪುರಸ್ಕೃತರು.  ವಿಪರೀತ ಮಾತುಗಂಟಿಯಾದ ಮಾರ್ಗಿತ್‌ ದಾಂಪತ್ಯದಲ್ಲಿ ಡಿರ‍್ಯಾಕ್‌ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಮಾರ್ಗಿತ್‌ ಅನುಪಮ ಸತಿ ಮಾತ್ರವಲ್ಲ, ಕೇಂಬ್ರಿಜ್‌ನಲ್ಲಿ ನಿವೃತ್ತಿಯ ನಂತರ ಪಾಲ್‌ ಅಮೆರಿಕಕ್ಕೆ ತೆರಳಿ ಅಲ್ಲಿನ ಫ್ಲಾರಿಡಾ ವಿಶ್ವವಿದ್ಯಾಲಯದಲ್ಲಿ ಜೀವನ ಕೊನೆಯವರೆಗೂ ನೆಲೆಯಾಗುವಲ್ಲಿ ಕಾರಣರಾಗುತ್ತಾರೆ.

       ಡಿರ‍್ಯಾಕ್‌ ಅಮೆರಿಕದಲ್ಲಿ ನೆಲೆಯಾಗಿದ್ದೊಂದು ವಿಶೇಷ! ನಿವೃತ್ತಿಗೂ ಮುನ್ನ ಒಂದು ವರ್ಷದ ವಿಸಿಟಿಂಗ್‌ ಪ್ರೊಫೆಸರ್‌ ಆಗಿದ್ದರು. ಫ್ಲಾರಿಡಾದ ನಿಸರ್ಗಕ್ಕೆ ಮನಸೋತ ಡಿರ‍್ಯಾಕ್‌ ಅಲ್ಲಿಯೇ ಉಳಿಯಲು ಇಚ್ಚಿಸಿದ್ದರೂ ಕೂಡ. ಆದರೆ ಅದನ್ನು ಅಲ್ಲಿನ ವಿಶ್ವವಿದ್ಯಾಲಯದ ಭೌತವಿಜ್ಞಾನ ಮುಖ್ಯಸ್ಥರಿಗೆ ತಿಳಿಸಿದ್ದು ಹೆಂಡತಿ. ಅವರೇನೋ ಇಷ್ಟ ಪಟ್ಟಿದ್ದರೂ ಡೀನ್‌ ಒಪ್ಪಬೇಕಲ್ಲ. ಡೀನ್‌ ಶೇಕ್ಸ್‌ ಪಿಯರ್‌ ಫೆಲೊ. ಮುಖ್ಯಸ್ಥರು ಡಿರ‍್ಯಾಕ್‌ರನ್ನು ಭೌತವಿಜ್ಞಾನ ಶೇಕ್ಸ್‌ ಪಿಯರ್‌ ಎಂಬಂತೆ ಪರಿಚಯಿಸಿದ ಮೂರೇ ದಿನದಲ್ಲಿ ಡಿರ‍್ಯಾಕ್‌ ಅಲ್ಲಿ ನೆಲೆಯಾದರು. ಮಾತ್ರವಲ್ಲ ಅಲ್ಲಿ 18ವರ್ಷಗಳನ್ನು ಕಳೆದು ಅಲ್ಲಿಯೆ ಮೃತರಾದರು (1984). ಅವರ ಸಮಾಧಿ ಕೂಡ ಫ್ಲಾರಿಡಾದಲ್ಲಿದೆ. ಜೊತೆಗೆ ಇತ್ತ ತವರಿನ ಬ್ರಿಟನ್‌ ನಲ್ಲೂ ನ್ಯೂಟನ್‌ ಸಮಾಧಿಯ ಎದುರೇ ಇವರ ಸ್ಮಾರಕವೂ ಕೂಡ. ಫ್ಲಾರಿಡಾದಲ್ಲಿ ಸುಮಾರು 632 ಉಪನ್ಯಾಸ‌ಗಳನ್ನು ಡಿರ‍್ಯಾಕ್‌ ಭೌತವಿಜ್ಞಾನವು ಮುಂದೆ ನಿಭಾಯಿಸಬೇಕಾದ ವಿವರಗಳು ಎಂಬಂತೆ ಕೊಟ್ಟರಂತೆ. ಅವೆಲ್ಲವೂ ವಿಜ್ಞಾನದ ಇತಿಹಾಸದ ಭಾಗವಾಗಿವೆ. ಮತ್ತೀಗ ಕೆಲವು ವೈಜ್ಞಾನಿಕ ವಿವರಗಳನ್ನು ನೋಡೋಣ.

       ಅವರ ಒಟ್ಟಾರೆ ಕೊಡುಗೆಯನ್ನು ಅರ್ಥಮಾಡಿಕೊಳ್ಳಲು ಇರುವ ಕಷ್ಟವೇನು? ಕ್ವಾಂಟಂ ಸೈದ್ಧಾಂತಿಕ ವಿವರಗಳನ್ನು ಡಿರ‍್ಯಾಕ್‌ ಪೂರ್ವದ ಎರ್ವಿನ್ ಶ್ರೊಡಿಂಗರ್ (Erwin Schrödinger) ಕೊಡುಗೆಯಿಂದ ಆರಂಭಿಸಿ, ಅವರ ಸಮಕಾಲೀನ ರಾಬರ್ಟ್‌ ಒಪನ್‌ಹೈಮರ್‌ (Robert Oppenheimer) ಮತ್ತು ಒಪನ್‌ಹೈಮರ್‌ ಅವರ ಗುರು ಮಾಕ್ಸ್‌ ಬಾರ್ನ್‌ (Max Born) ಅವರ ಕೊಡುಗೆಗಳನ್ನೆಲ್ಲಾ ಸ್ವಲ್ಪವಾದರೂ ತಿಳಿಯುತ್ತಾ ಹೋಗಬೇಕಾಗುತ್ತದೆ. ಅಯ್ಯೋ… ಇದೇನಿದು? ಎನ್ನದೆ ಆಸಕ್ತಿ ಮತ್ತು ಪ್ರೀತಿಯಿದ್ದರೆ ಇಲ್ಲೊಂದು ಸಲಹೆ ಇದೆ. ಖಂಡಿತಾ ಇದನ್ನು ಓದಿದವರೇನೂ ಕ್ವಾಂಟಂ ಮೆಕಾನಿಕ್ಸ್‌ನಲ್ಲಿ ಪದವಿ ಪಡೆಯಲು ಹೋಗುವುದಿಲ್ಲ ತಾನೇ? ಆದರೆ ಕ್ವಾಂಟಂ ಭೌತವಿಜ್ಞಾನವನ್ನು ಒಂದು ಪವಾಡ ಎನ್ನುವಂತೆ ಖ್ಯಾತ ಹಲವರು (ಕ್ವಾಂಟಂ ಹೀಲಿಂಗ್‌ ಎಂದೆಲ್ಲಾ ಮಾತಾಡುವ ವೈದ್ಯರನ್ನೂ, ವಿಜ್ಞಾನಿಗಳನ್ನೂ ಸೇರಿಸಿ) ಹೇಗೆ ಬುರುಡೆ ಬಿಡುತ್ತಾರೆ ಎನ್ನುವದರ ದರ್ಶನಕ್ಕೆ ಒಂದು ಸಣ್ಣ ಪ್ರಯತ್ನ ಮಾಡಿ ಸಾಧ್ಯವಾದರೆ! ಅಥವಾ ಒಂದೆರಡು ತಿಂಗಳ ಸಾಧ್ಯತೆಯನ್ನು ಮಾಡಿಕೊಂಡು! ಕೆಂಬ್ರಿಜ್‌ ಕಿಂಗ್ಸ್‌ ಕಾಲೇಜಿನ ಡಾಕ್ಟೊರೇಟ್‌ ಪಡೆದ ಜನಪರ ವಿಜ್ಞಾನಿಯೊಬ್ಬರು  DrPhysicsA  ಎಂಬ ಯೂಟ್ಯೂಬ್‌ ಚಾನಲ್‌ ನಲ್ಲಿ 28 ಪಾಠಗಳಲ್ಲಿ ನೀಡಿದ್ದಾರೆ. ಕೆಲವು ನಿಮಿಷಗಳಿಂದ ಒಂದು ಗಂಟೆಗೂ ಅಧಿಕ ಸಮಯ ಬೇಡುವ ಅವುಗಳನ್ನು https://www.youtube.com/watch?v=IsX5iUKNT2k&list=PL04722FAFB07E38E1&index=1   ಲಿಂಕ್‌ನಲ್ಲಿ ನೋಡಿ. ಅತ್ಯದ್ಭುತವಾದ ವಿವರಣೆ. ಅಷ್ಟು ಸರಳವಾಗಿ, ನಿಮ್ಮ ಕೈಯನ್ನು ಹಿಡಿದು ಬರೆಸಿ ಅರ್ಥಮಾಡಿಸುವಂತಹಾ ಧ್ವನಿ. ಆ ಲಿಂಕ್‌ನಿಂದ ಆರಂಭವಾಗುವ ಅದು ಒಂದೊಂದಾಗಿ ತೆರೆದುಕೊಂಡು ಮುಂದುವರೆಯುತ್ತದೆ. ಎಲ್ಲವೂ ಒಂದೇ ನೋಟಕ್ಕೆ ತೆರೆದುಕೊಂಡು ಅರ್ಥವಾಗದಿದ್ದರೂ ಇಡೀ ಕ್ವಾಂಟಂ ಭೌತವಿಜ್ಞಾನದ ಸೌಂದರ್ಯವಂತೂ ತೆರೆದುಕೊಂಡು ಆನಂದವನ್ನು ಕೊಡುತ್ತದೆ. ಪ್ರಯತ್ನಿಸಿ ನೋಡಿ!

ಡಿರ‍್ಯಾಕ್‌ ಕ್ವಾಂಟಂ ಭೌತವಿಜ್ಞಾನದ ಭದ್ರವಾದ ತಳಹದಿಯನ್ನು ತಮ್ಮ ಸಮಕಾಲೀನ ವಿಜ್ಞಾನಿಗಳ ಜೊತೆಗೆ ಹಾಕಿದ್ದಲ್ಲದೆ. ಮುಂದೆ ಕಣಭೌತವಿಜ್ಞಾನದ ಮುಂದುವರೆಕೆಗೂ ಕಾರಣರಾದರು. ಅವುಗಳಲ್ಲಿ ಬಹು ಚರ್ಚಿತ ರಿಚರ್ಡ್‌ ಫೈನ್‌ಮನ್‌ ಅವರ ಕೊಡುಗೆಗಳು. ರಿಚರ್ಡ್‌ ಫೈನ್‌ಮನ್‌ ಭೌತವಿಜ್ಞಾನದ ವಿದ್ಯಾರ್ಥಿಗಳಿಗೆ ಪರಿಚಯವಿರಲೇ ಬೇಕಾದವರು. ಡಿರ‍್ಯಾಕ್‌ ಮಾತೇ ಆಡದವರಾದರೇ ಫೈನ್‌ಮನ್‌ ಮಾತಿಗೆ ಹೆಸರಾದವರು. ಅಷ್ಟೇ ಅಲ್ಲ ಫೈನ್‌ ಮನ್‌ರ ಹೀರೋ ಡಿರ‍್ಯಾಕ್‌. ಅವರ ಅಪ್ಪಟ ಮುಂದುವರಿಕೆ. ಫೈನ್‌ ಮನ್‌ ಅವರ ಕ್ವಾಂಟಂ ಇಲೆಕ್ಟ್ರೊ ಡೈನಮಿಕ್‌ ಸಂಶೋಧನೆಯು ಡಿರ‍್ಯಾಕ್‌ ಅವರ ಅಪ್ಪಟ ಮುಂದುವರಿಕೆ. ಫೈನ್‌ ಮನ್‌ ಅವರು ಪಾಲ್‌ ಡಿರ‍್ಯಾಕ್‌  ಅವರನ್ನು ಮೂರು ಬಾರಿ ಭೇಟಿಯಾಗುತ್ತಾರೆ. ಅದಲ್ಲದೆ ಸ್ವತಃ ನೊಬೆಲ್‌ ವಿಜ್ಞಾನಿಯಾದ ಫೈನ್‌ ಮನ್‌ ಅವರು ಪಾಲ್‌ ಡಿರ‍್ಯಾಕ್‌ ಅವರ ಮೂಲ ನೆಲೆಯಾದ ಕೆಂಬ್ರಿಜ್‌ ನಲ್ಲಿ ಇದೀಗ ಪ್ರತೀ ವರ್ಷವೂ ಪ್ರಾಯೋಜಿಸುತ್ತಿರುವ ಡಿರ‍್ಯಾಕ್‌ ಮೆಮೊರಿಯಲ್‌ ಉಪನ್ಯಾಸವನ್ನು ಮೊಟ್ಟ ಮೊದಲು(1986) ಕೊಟ್ಟವರು. ಫೈನ್‌ ಮನ್‌ ಅವರು ಡಿರ‍್ಯಾಕ್‌ ಅವರನ್ನು ಮೂರನೆಯ ಬಾರಿ 1962ರಲ್ಲಿ ಪೊಲೆಂಡಿನಲ್ಲಿ ಭೇಟಿಯಾದಾಗಿನ ಈ ಕೆಳಗಿನ ಚಿತ್ರ ಮತ್ತು ಅವರ ನಡುವಿನ ತೀಕ್ಷ್ಣವೂ ಹಾಗೂ ತೀರಾ ಚಿಕ್ಕವೂ ಆದ ಮಾತುಗಳೂ ಬಹಳ ಜನಪ್ರಿಯ.

       ಇದೇ ಉಪನ್ಯಾಸವನ್ನೂ ಭಾರತೀಯ ಸೈದ್ಧಾಂತಿಕ ಭೌತವಿಜ್ಞಾನಿ ಪ್ರೊ. ಅಶೋಕ್‌ ಸೇನ್‌ ಕೂಡ 2005ರಲ್ಲಿ ಕೊಟ್ಟಿದ್ದಾರೆ. ಅಶೋಕ್‌ ಡಿರ‍್ಯಾಕ್‌ ಮೆಡಲ್‌ ಪಡೆದವರು ಜೊತೆಗೆ ಕ್ವಾಂಟಂ ಭೌತವಿಜ್ಞಾನದಲ್ಲಿ ಡಿರ‍್ಯಾಕ್‌ ಮುಂದುವರಿಕೆಯಲ್ಲಿ ತೀರಾ ಹೊಸತಾದ “ಸ್ಟ್ರಿಂಗ್‌ ಸಿದ್ಧಾಂತ”ದ ಸಂಶೋಧಕರು. ಅವರೀಗ ಅಲಹಬಾದಿನ ಹರಿಶ್ಚಂದ್ರ ಸಂಶೋಧನಾ ಸಂಸ್ಥೆಯಲ್ಲಿದ್ದಾರೆ. ಆ ಸಂಸ್ಥೆಯು ಡಿರ‍್ಯಾಕ್‌ ಅವರ ನೇರ ಶಿಷ್ಯರೂ ಅಪ್ರತಿಮ ಗಣಿತಜ್ಞರೂ ಆದ ಪ್ರೊ, ಹರೀಶ್ಚಂದ್ರ ಹೆಸರಿನಲ್ಲಿದೆ. ಪ್ರೊ. ಹರಿಶ್ಚಂದ್ರ ಮೆಹ್ತಾ ಕಾನ್ಪುರದವರು. ಇವರಲ್ಲದೆ ಡಿರ‍್ಯಾಕ್‌ ಅವರ ಮತ್ತೋರ್ವ ಭಾರತೀಯ ಶಿಷ್ಯರು ಹೊಮಿ ಜಹಂಗಿರ್‌ ಭಾಬಾ. ಹೀಗೆ ಪರಂಪರೆಯ ಕೊಂಡಿಯು ಮುಂದುವರೆದಿದೆ.

       ಪಾಲ್‌ ಡಿರ‍್ಯಾಕ್‌ ಅವರು ನನಗೆ ವಿಜ್ಞಾನದ ಓದಿನ ಪ್ರೀತಿಯಲ್ಲಿ ಪರಿಚಿತರಾದವರು. ಅವರ ಬಗೆಗೆ ಬರೆಯುವುದಿರಲಿ, ಓದುವ ಸ್ವಲ್ಪವಾದರೂ ತಿಳಿಯುವ ಸಾಹಸಕ್ಕೆ ಆಲೋಚಿಸಿರಲೂ ಇಲ್ಲ. ಕೆಲವು ಭೌತವಿಜ್ಞಾನದ ಗೆಳೆಯ-ಗೆಳತಿಯರ ಒಡನಾಟದ ಪ್ರೇರಣೆ ಆವರ ಜನ್ಮ ದಿನದ ಸಮಯದಲ್ಲಿ ನೆನಪು ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿದೆ.  ಏನೋ ಕೆಲವರಿಗಾದರೂ ಅಥವಾ ಭೌತವಿಜ್ಞಾನದ ಮೂಲ ಪಾಠಗಳನ್ನು, ಗಣಿತವನ್ನೂ ಬಲ್ಲವರಿಗೆ ಕ್ವಾಂಟಂ ಭೌತವಿಜ್ಞಾನದ ಮೂಲ ಪರಿಕಲ್ಪನೆಗಳನ್ನು ಹಂಚುವ ಪ್ರೇರಣೆಯ ಮೂಲಕ ಕಲಿಯುವ ಉತ್ಸಹವಷ್ಟೇ ನನ್ನದು. ಕಡೆಯದಾಗಿ ಡಿರ‍್ಯಾಕ್‌ ಅವರ ಜನಪ್ರಿಯ ಮಾತಿನಿಂದ ಅವರ ನೆನಪನ್ನು ಸಧ್ಯಕ್ಕೆ ಕೊನೆಗೊಳಿಸುತ್ತೇನೆ. ಏಕೆಂದರೆ ನನ್ನನ್ನೂ ಸೇರಿಸಿಕೊಂಡು ಜೊತೆಯಲ್ಲಿರುವ  ಗೆಳೆಯ-ಗೆಳತಿಯರಿಗೂ ಒಂದು ಕೆಲಸವನ್ನು ಕೊನೆಮುಟ್ಟಿಸದ ವರ್ತನೆಗೆ ಸೂಚನೆಯ ಪಾಠ ಅದರಲ್ಲಿದೆ.

       “I was taught at school never to start a sentence without knowing the end of it.” – Pal ‌Dirac

                                                                                                      

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್‌

This Post Has 8 Comments

 1. ShashikalaRavishankar

  Amazing.. Gaint Genius… Sir..
  Thank you so much for enlightenment of great scientists sir…

 2. Krupa RamDev

  sir,
  Thank you very much for this wonderful article on Dirac one of the greatest intellects of the 20th century…
  truly amazing

 3. Shashiraj sir

  ಬಹಳ ಚಂದದ ಬರಹ ಸರ್

 4. Laxmidevi patil

  Excellent sir. ಹೀಗೆಯೆ ಬರೆಯುತ್ತಿri. ನಮಗೆ ಗೊತ್ತೇ ಇಲ್ಲದ ಹಲವು ಸಂಗತಿಗಳು ತಿಳಿಯುತ್ತದೆ

 5. ತಿರುಮಲೇಶ. ಭಟ್

  ಸರ್,ವಿಜ್ಞಾನಿಯ ಬಗೆಗೆ,ಇಷ್ಟದ ವಿಜ್ಞಾನಿಯ ಉಪಯುಕ್ತ ಬರಹ.ಲಿಂಕ್ಗಳನ್ನು ತೆರೆದು ಇನ್ನಷ್ಟು ತಿಳಿಯಬೇಕಿದೆ.ಧನ್ಯವಾದಗಳು.

 6. ಶುಭೋದಯೆ

  ವಿಜ್ಞಾನಿಯೊಬ್ಬರ ಬಗ್ಗೆ ಬರೆದ ಆತ್ಮೀಯ ಸಂಕಥನ.

 7. Prof. Nataraj

  Excellent narration Dr. Chennesh. Just yesterday another friend of mine Prof. KV Ghanashyam had sent an audio clip about Dirac

Leave a Reply