You are currently viewing ನ್ಯಾನೊ ತಂತ್ರಜ್ಞಾನದ ಮೂಲಭೂತ ಸಂಶೋಧನೆಗಳಾದ ಕ್ವಾಂಟಂ ಡಾಟ್‌ಗಳ ಅನ್ವೇಷಣೆ ಮತ್ತು ಅವುಗಳ ಅಭಿವೃದ್ಧಿಗೆ 2023ರ ರಸಾಯನ ವಿಜ್ಞಾನದ ನೊಬೆಲ್‌ ಪುರಸ್ಕಾರ

ನ್ಯಾನೊ ತಂತ್ರಜ್ಞಾನದ ಮೂಲಭೂತ ಸಂಶೋಧನೆಗಳಾದ ಕ್ವಾಂಟಂ ಡಾಟ್‌ಗಳ ಅನ್ವೇಷಣೆ ಮತ್ತು ಅವುಗಳ ಅಭಿವೃದ್ಧಿಗೆ 2023ರ ರಸಾಯನ ವಿಜ್ಞಾನದ ನೊಬೆಲ್‌ ಪುರಸ್ಕಾರ

ಈ ವರ್ಷದ ರಸಾಯನ ವಿಜ್ಞಾನದ ನೊಬೆಲ್‌ ಪುರಸ್ಕಾರವು ನ್ಯಾನೊ ತಂತ್ರಜ್ಞಾನದ ಮೂಲಭೂತ ಸಂಶೋಧನೆಗಳಾದ ಕ್ವಾಂಟಂ ಡಾಟ್‌ಗಳ ಅನ್ವೇಷಣೆ ಮತ್ತು ಅವುಗಳ ಅಭಿವೃದ್ಧಿಗೆ ನೀಡಲಾಗಿದೆ. ನೊಬೆಲ್‌ ಸಮಿತಿಯು ನ್ಯಾನೊತಂತ್ರಜ್ಞಾನಕ್ಕೆ ರಂಗು ತುಂಬಿದ ಅನ್ವೇಷಣೆ ಎಂದು ವ್ಯಾಖ್ಯಾನಿಸಿದೆ. ಈ ಕ್ವಾಂಟಂಡಾಟ್‌ಗಳನ್ನು ಅನ್ವೇಷಿಸಿದ  ಅಲೆಕ್ಸಿ ಎಕಿಮೊವ್‌ ಮತ್ತು ಲೂಯಿ ಬ್ರೂಸ್‌ ಅವರಿಗೆ ಹಾಗೂ ಅವುಗಳನ್ನು ಬೇಕಾದ ಗಾತ್ರದಲ್ಲಿ ಪಡೆಯುವಂತೆ ಅಭಿವೃದ್ಧಿ ಪಡಿಸಿದ ವಿಧಾನಕ್ಕಾಗಿ ಮೌಂಗೈ ಬೆವಾಂಡಿ ಅವರಿಗೆ ಬಹುಮಾನ ಲಭಿಸಿದೆ.  ಅದೇನೋ ಸರಿ! ಈ ಕ್ವಾಂಟಂ ಡಾಟ್‌ಗಳು ಎಂದರೇನು? ಈ ಅನ್ವೇಷಣೆಯಿಂದ ವಿಜ್ಞಾನಿಗಳು ನ್ಯಾನೊ ತಂತ್ರಜ್ಞಾನಕ್ಕೆ ರಂಗುತುಂಬುವುದು ಎಂದರೇನು? ಒಂದು ಒಳ್ಳೆಯ ಒಗಟಿನ ತರಹ ಎನ್ನಿಸಿದೆಯೇ? ಅಡ್ಡಿಯಿಲ್ಲ! ಒಗಟನ್ನು ಬಿಡಿಸೋಣವಂತೆ, ಮುಂದೆ ಓದಿ.

       ಮಾಂತ್ರಿಕರ ಕಥೆಗಳಲ್ಲಿ ಒಂದು ಮನೆ ಹೊಕ್ಕು ಇನ್ನೊಂದು ಮನೆಯಿಂದ ಹೊರ ಬರುವಷ್ಟರಲ್ಲಿ ಬಣ್ಣ ಬದಾಲಾಯಿಸಿದ ಗಿಳಿಯೋ, ಗಿಡುಗವೋ ಅಥವಾ ಮತ್ತಾವುದೋ ಪಾತ್ರವನ್ನು ಚಂದಮಾಮಗಳಲ್ಲಿ ಓದಿರುತ್ತೀರಿ! ಇತ್ತೀಚೆಗಿನ ಮಕ್ಕಳಾದರೆ ಹ್ಯಾರಿ ಪಾಟರ್‌ನಂತಹಾ ಮಾಂತ್ರಿಕ ಕಥೆಗಳಲ್ಲೂ ಹೀಗೆ ಬಣ್ಣ ಬದಲಾಯಿಸುವ ಪಾತ್ರಗಳೂ ಬಂದಿರಲು ಸಾಧ್ಯವಿದೆ. ಅದಿರಲಿ!  ಒಂದು ರೀತಿಯಲ್ಲಿ ವಿಜ್ಞಾನಿಗಳನ್ನು ಮಾಂತ್ರಿಕರೆಂದು ನಂಬುವ ಹಾಗೆ! ಏನಾದರೂ ಅಪಾಯಕಾರಿ ಅಥವಾ ದುಗುಡ ತುಂಬಿದ ಸಂದರ್ಭಗಳಲ್ಲಿ ಅಥವಾ ಈಗಲೇ ಬೇಕಾದ ತುರ್ತು ಎನ್ನುವಾಗ, ಅಯ್ಯೋ ವಿಜ್ಞಾನಿಗಳು ಏನು ಮಾಡುತ್ತಿದ್ದಾರೆ, ಎಂದು ಜನ ಸಾಮಾನ್ಯರು ನೆನಸಿಕೊಳ್ಳುವುದು ಸಾಮಾನ್ಯವಾದ ಸಂಗತಿ. ಅಂದರೆ? ಹಾಂ.. ಹೌದು ಇಂತಹಾ ಮಾಂತ್ರಿಕತೆಯ ಆವಿಷ್ಕಾರವನ್ನೇ ಕ್ವಾಂಟಂ ಡಾಟ್‌ಗಳ ಅನ್ವೇಷಣೆ ಮತ್ತು ಅವುಗಳ ತಯಾರಿಸುವ ವಿಧಾನಗಳಲ್ಲಿ ವಿಜ್ಞಾನಿಗಳು ತೆರೆದಿಟ್ಟಿದ್ದಾರೆ. ಅದೇ ವಸ್ತು ಮತ್ತೊಂದು ಗಾತ್ರದಲ್ಲಿ ಬೇರೊಂದು ಬಣ್ಣವನ್ನು ಹೊರಸೂಸುವ ವಿಶೇಷತೆಯ ಮಾಯಾಶೋಧವೇ ಕ್ವಾಂಟಂ ಡಾಟ್‌ಗಳ ಮೂಲಕ ಸಾಭೀತಾಗಿದ್ದು. ನ್ಯಾನೊ ಗಾತ್ರದಲ್ಲಿ ವಸ್ತುಗಳು ಸಹಜವಾದ ವರ್ತನೆಗಿಂತಾ ಭಿನ್ನವಾಗಿ ವರ್ತಿಸುವ ಅನ್ವೇಷಣೆಯೇ ಕ್ವಾಂಟಂ ಡಾಟ್‌ಗಳಿಗೆ ಸಂಬಂಧಿಸಿದ್ದು.

       ನ್ಯಾನೊ ಎಂಬುದು ಗಾತ್ರಕ್ಕೆ ಸಂಬಂಧಿಸಿದ್ದು ಎಂದು ಈಗಾಗಲೆ ವಿಜ್ಞಾನದ ಓದುಗರಿಗೆ ತಿಳಿದ ಸಂಗತಿಯೇ! ನ್ಯಾನೊ ಮೀಟರ್‌ ಎಂದರೆ ನೂರು ಕೋಟಿಯಲ್ಲಿ ಒಂದು ಭಾಗ (1nm is equal to 0.000000001 m or 10−9m). ಒಂದು ಮೀಟರ್‌ ಅನ್ನು ನೂರು ಕೋಟಿ ಭಾಗಗಳಾಗಿ ವಿಂಗಡಿಸಿದರೆ ಅದರಲ್ಲಿ ಒಂದು ಭಾಗದ ಅಳತೆಯೇ ನ್ಯಾನೊ. ಯಾವುದೇ ವಸ್ತುವು ಅದು ಮೂಲ ವಸ್ತುವಾಗಿರಲಿ ಅಥವಾ ಸಂಯುಕ್ತ ವಸ್ತುವೇ ಆಗಿರಲಿ, ಅದರ ಕಣಗಳ ಗಾತ್ರವು ಈ ನ್ಯಾನೊ ಗಾತ್ರಕ್ಕೆ ಇಳಿಸಿದಾಗ, ನ್ಯಾನೊ ವಸ್ತುವಾದ ಆಯಾ ವಸ್ತುವಿನ ವರ್ತನೆಗಳು ಅಚ್ಚರಿಯ ರೀತಿಯದ್ದಾಗಿರುತ್ತವೆ. ಈ ಕಣಗಳೇ ಕ್ವಾಂಟಂ ಡಾಟ್‌ಗಳು! ಕ್ವಾಟಂ ಡಾಟ್‌ಗಳು ಯಾವುದೇ ವಸ್ತುವನ್ನು ರೂಪುಗೊಳಿಸಿದ ಕಣಗಳನ್ನು ಕುಗ್ಗಿಸಿದ್ದ ವಸ್ತುವಿನ ನಿರ್ಮಿತಿ. ಇಡಿಯಾದ ವಸ್ತುಗಳ ರಾಚನಿಕ ಬದಾವಣೆಗಳೇನೂ ಇಲ್ಲದೆ ಕೇವಲ ನಿರ್ಮಿತಿಗೊಂಡ ಕಣಗಳ ಗಾತ್ರದಲ್ಲಿ ಚಿಕ್ಕದಾದವು.  ವಸ್ತುಗಳ ರಚನೆಯು ಹಾಗೇ ಇದ್ದು ವರ್ತನೆ ಮಾತ್ರ ಬೇರೆಯದೇ ಆಗಿರುತ್ತದೆ. ಅದ್ದರಿಂದಲೇ ರಂಗು ತುಂಬಿದ್ದು ಎಂದು ನೊಬೆಲ್‌ ಸಮಿತಿ ಹೇಳಿದ್ದು. ರಂಗು ತುಂಬುವುದು ಅಥವಾ ಬಣ್ಣ ಕಟ್ಟುವುದು ಎಂದರೇ, ಒಂದೇ ಬೆಳಕು ಭಿನ್ನ ಭಿನ್ನವಾದ ಬಣ್ಣಗಳಾಗಿ ಹೊರಸೂಸುವುದು. ಇದನ್ನೇ ಮಾಂತ್ರಿಕತೆ ಹಿನ್ನೆಲೆಯಲ್ಲಿ ಈ ಹಿಂದೆ ಹೇಳಿದ್ದು. ಅದೇ ಬೆಳಕು, ಹೊರಸೂಸುವಲ್ಲಿ ಬೇರೆಯದೇ ಬಣ್ಣ! ಅಯ್ಯೋ ಮತ್ತದೇ ಒಗಟೇ ಇಲ್ಲ ತಡೆಯಿರಿ ಮತ್ತಷ್ಟು ವಿವರಗಳಾಗಿ ತೆರೆಯೋಣ.

       ಸುಮಾರು 1930ರ ದಶಕದಲ್ಲಿಯೇ ಹೀಗೆ ಕ್ವಾಂಟಂ ಗಾತ್ರದ ಕಣಗಳಿಂದಾದ ನ್ಯಾನೊ ವಸ್ತುಗಳ ಬಗೆಗೆ ಊಹಿಸಲಾಗಿತ್ತು. ಆದರೆ ಅಂತಹದ್ದೊಂದು ವಾಸ್ತವವಾಗಿ ಅಸಾಧ್ಯವೆಂದೇ ನಂಬಲಾಗಿತ್ತು. ನ್ಯಾನೊ ಜಗತ್ತಿನಲ್ಲಿ ವಸ್ತುಗಳ ಕಣಗಳು ಮುಖ್ಯ! ವಸ್ತುವೇನೋ ಅದೇ, ಕ್ವಾಂಟಂ ವರ್ತನೆಯೆಂದೇ (Quantum Effect) ವಿವರಿಸಲಾಗುವ ಮಾಂತ್ರಿಕ ವರ್ತನೆಯ ಬಗ್ಗೆ ಹಿಂದೆಯೇ ಊಹಿಸಿದ್ದರೂ ಅಂತಹಾ ವಸ್ತುಗಳ ಪಡೆಯುವ ಬಗ್ಗೆ ಖಾತ್ರಿ ಇರಲಿಲ್ಲ. ಮುಂದೆ ಅರ್ಧ ಶತಕದ ನಂತರ 1980ರ ದಶಕದಲ್ಲಿ ರಶಿಯನ್‌ ಮೂಲದ ಅಲೆಕ್ಸಿ ಎಕಿಮೊವ್‌ (Alexey Ekimov) ಮತ್ತು ಅಮೆರಿಕದ ಲೂಯಿಸ್‌ ಬ್ರೂಸ್‌ (Louis Brus) ಸ್ವತಂತ್ರವಾಗಿ ಅಂತಹಾ ಕ್ವಾಂಟಂ ಕಣಗಳನ್ನು ಕಂಡುಹಿಡಿದರು. ಒಂದು ದಶಕದ ನಂತರ 1993ರಲ್ಲಿ ಮಸಾಚುಸೇಟ್ಸ್‌ ತಾಂತ್ರಿಕ ಸಂಸ್ಥೆಯ ಮೌಂಗೈ ಬೆವಾಂಡಿ (Moungi Bawendi) ಅವರು ಅಂತಹಾ ಕ್ವಾಂಟಂ ಡಾಟ್‌ಗಳನ್ನು ಬೇಕಾದ ಗಾತ್ರದಲ್ಲಿ ತಯಾರಿಸುವ ಕ್ರಾಂತಿಕಾರಿಯಾದ ವಿಧಾನವನ್ನು ಅಭಿವೃದ್ಧಿ ಪಡಿಸಿದರು. ಇದು ಇಂದು ನ್ಯಾನೊ ತಂತ್ರಜ್ಞಾನದಲ್ಲಿ ಮಹತ್ತರವಾದ ಬದಲಾವಣೆಗಳಿಗೆ ಕಾರಣವಾಗುತ್ತಿರುವ ಮೂಲ ಶೋಧವಾಗಿದೆ.

       ಕ್ವಾಂಟಂ ಡಾಟ್‌ಗಳು ನ್ಯಾನೊ ಗಾತ್ರದವು. ಅಂದರೆ ಭೂಮಿಗೆ ಒಂದು ಸಾಧಾರಣ ಫುಟ್‌ ಬಾಲ್‌ ಗಾತ್ರವು ನ್ಯಾನೊ, ಅದೇ ಫುಟ್‌ ಬಾಲ್‌ಗೆ ಚಿಕ್ಕದಾದ್ದು ನ್ಯಾನೊ ಅಥವಾ ಕ್ವಾಟಂ ಡಾಟ್‌. ಇದರ ಗಾತ್ರದ ಬಗ್ಗೆಯಾಗಲಿ ಅಥವಾ ಅದರ ವರ್ತನೆಯ ಬಗೆಗಾಗಲಿ ಸಂಶೋಧಕ ಜಗತ್ತು 30ರ ದಶಕದಿಂದಲೇ ಬೆರಗುಗಣ್ಣಿನಿಂದ ಕಾಯುತ್ತಿತ್ತು. ಏಕೆಂದರೆ ಸೈದ್ಧಾಂತಿಕವಾಗಿ ಗಣಿತೀಯ ವಿವರಗಳಿಂದ ಭಿನವಾದ ವರ್ತನೆಯ ಅರಿವು ಸಂಶೋಧಕರಿಗೆ ಇತ್ತು. ಸರಳವಾಗಿ ವಸ್ತುವೊಂದು ಅದರ ರಚನೆಯ ಕಣಗಳಲ್ಲಿ ಕುಬ್ಜವಾದಾಗ ಅದರ ಅಣುಗಳಲ್ಲಿನ ಇಲೆಕ್ಟ್ರಾನುಗಳು ಸುತ್ತುವ ಜಾಗವೂ ಕುಬ್ಜವಾಗುತ್ತದೆ. ಆಗ ಇಲೆಕ್ಟ್ರಾನುಗಳ ತರಂಗದೂರ (Wave Length) ವೂ ವ್ಯತ್ಯಾಸವಾಗುತ್ತದೆ. ಇದೇ ಕ್ವಾಂಟಂ ವರ್ತನೆಗೆ ಕಾರಣವಾಗುತ್ತದೆ. ದೊಡ್ಡ ನ್ಯಾನೊ ಕಣಗಳು ಒಂದು ಬಗೆಯ ಅಲೆಗಳನ್ನು ಹೊಂದಿದ್ದರೆ, ಚಿಕ್ಕವು ಮತ್ತೊಂದು ಬಗೆಯ ಅಲೆಗೆ ಕಾರಣವಾಗುತ್ತವೆ.

ಹಾಗಾದಾಗ ಅವುಗಳ ಮೂಲಕ ಹಾಯುವ ಬೆಳಕೂ ಸಹಾ ಭಿನ್ನವಾದ ಕೋನದಲ್ಲಿ ಬಾಗಿ ಹೊರಸೂಸುತ್ತದೆ. ಸ್ವಾಭಾವಿಕವಾಗಿ ಹೊರಸೂಸಿದ ಬೆಳಕು ಬೇರೆಯದೇ ಬಣ್ಣದ್ದಾಗಿರುತ್ತದೆ. ದೊಡ್ಡ ನ್ಯಾನೊ ಕಣವು ಕೆಂಪು ಬಣ್ಣದ ಬೆಳಕನ್ನು ಹೊರ ಸೂಸಿದರೆ ಚಿಕ್ಕದು ನೀಲಿ ಬಣ್ಣವನ್ನು ಹೊರ ಸೂಸುತ್ತದೆ. ಮಧ್ಯದವು ಹಳದಿಯಿಂದ ಹಸುರಿನ ಕಡೆಗೆ ಬದಲಾಗುತ್ತವೆ. ಇದನ್ನೇ ಒಂದು ಮನೆಯನ್ನು ಹೊಕ್ಕುವಾಗ ಬಿಳಿಯಾದ ಬಣ್ಣ-ಬೆಳಕು-ಬೇರೆ ಬೇರೆ ಮನೆಗಳ ಮೂಲಕ ಹಾಯ್ದು ಹೊರಸೂಸುವಾಗ (ಬರುವಾಗ) ಬೇರೆ ಬೇರೆ ಬಣ್ಣದಾಗುವ ಮಾಂತ್ರಿಕತೆಯ ಹಾಗೆ ಎಂದದ್ದು.  

       ಇದನ್ನೇ ಪ್ರಾಯೋಗಿಕವಾಗಿ ಅಲೆಕ್ಸಿ ಎಕಿಮೊವ್‌ 70ರ ದಶಕದ ಕೊನೆಯಲ್ಲಿಯೇ ಸೋವಿಯತ್‌ ರಷಿಯಾದಲ್ಲಿ ಕಂಡುಕೊಂಡಿದ್ದರು. ಎಕಿಮೊವ್‌ ಗಾಜನ್ನು ಮತ್ತು ಕ್ಯಾಡ್ಮಿಯಂ ಅನ್ನು ಬಳಸಿ ಸೆಮಿಕಂಡೆಕ್ಟರ್‌ -ಅರೆ ವಿದ್ಯುತ್‌ ವಾಹಕಗಾಳಗಿಸುವಾಗ ಈ ವರ್ತನೆಯನ್ನು ಕಂಡುಕೊಂಡಿದ್ದರು. ಮಾಯಾ ರಂಗಿನ ಗಾಜುಗಳೆಂದೇ ಆಗ ವ್ಯಾಖ್ಯಾನಿಸಲಾದ ಸಂಗತಿಯು ಮುಂದೆ ಲೂಯಿಸ್‌ ಬ್ರೂಸ್‌ ದ್ರಾವಕದಲ್ಲಿಯೂ ಸ್ವತಂತ್ರವಾದ ಕ್ವಾಂಟಂ ಕಣಗಳನ್ನು ಕಂಡುಹಿಡಿದು ಪ್ರಸ್ತುತ ಊಹಾತ್ಮಕವಾದ ಕ್ರಾಂತಿಕಾರಿ ಸಂಗತಿಗೆ ಬೆಂಬಲ ಕೊಟ್ಟಿದ್ದರು. ಲೂಯಿಸ್‌ ಆಗ ಅಮೆರಿಕದ ಬೆಲ್‌ ಲ್ಯಾಬೊರೇಟರಿಯಲ್ಲಿ ಸೂರ್ಯನ ಶಕ್ತಿಯನ್ನು ಬಳಸಿ ರಸಾಯನಿಕ ಕ್ರಿಯೆಯನ್ನು ನಡೆಸುವ ಶೋಧದಲ್ಲಿ ತೊಡಗಿದ್ದರು. ಇದನ್ನು ಸಾಧಿಸಲು ಕ್ಯಾಡ್ಮಿಯಂ ಸಲ್ಫೈಡ್‌ ಕಣಗಳನ್ನು ಬಳಸಿದ್ದರು. ಈ ಕಣಗಳು ಸೂರ್ಯನ ಬೆಳಕನ್ನು ಹಿಡಿದು, ರಸಾಯನಿಕ ಪ್ರಕ್ರಿಯೆಗೆ ಶಕ್ತಿಯನ್ನು ಕೊಡುವಲ್ಲಿ ನೆರವಾಗುತ್ತಿದ್ದವು. ಈ ಕಣಗಳು ಒಂದು ದ್ರಾವಕದಲ್ಲಿ ಇದ್ದವು ಎಂಬುದು ಗಮನಾರ್ಹ! ಅವುಗಳನ್ನು ಅಲ್ಲಿ ಚಿಕ್ಕ ಗಾತ್ರದಲ್ಲಿ ನೀಡುವ ಕಾರಣ ಹೆಚ್ಚು ಜಾಗವು ಕಣಗಳ ವರ್ತನೆಗೆ ಸಿಗಲಿ ಎಂಬುದಾಗಿತ್ತು. ಸಹಜವಾಗಿ ಚಿಕ್ಕ ಚಿಕ್ಕ ಕಣಗಳಾದರೆ ಅವುಗಳ ಮೇಲ್ಮೈ ಹೆಚ್ಚಾಗಿ ಪ್ರಕ್ರಿಯೆಗಳು ಹೆಚ್ಚಾಗಬಹುದು ತಾನೇ?

       ಲೂಯಿಸ್‌ ಆಗ ಆ ದ್ರಾವಕದಲ್ಲಿನ ಕಣಗಳ ವರ್ತನೆಯಲ್ಲಿ ಒಂದು ವಿಚಿತ್ರವನ್ನು ಗಮನಿಸಿದರು. ಅವುಗಳ ಬೆಳಕನ್ನು ಪ್ರತಿಫಲಿಸುವ (ಆಪ್ಟಿಕಲ್‌) ಗುಣಗಳು ಭಿನ್ನವಾಗಿ ತೋರಿದ್ದವು. ಕಣಗಳ ಗಾತ್ರಗಳಿಗೆ ಅನುಗುಣವಾಗಿ ಅವುಗಳ ಆಪ್ಟಿಕಲ್‌ ಗುಣಗಳು ಬದಲಾಗುವಿಕೆಯನ್ನು ಸಹಜವಾಗಿ ಊಹಿಸಿದ್ದರು ಲೂಯಿಸ್‌. ಸುಮಾರು 12.5 ನ್ಯಾನೊ ಮೀಟರ್‌ ಗಾತ್ರದ ಕಣಗಳಲ್ಲಿ ಒಂದು ಬಗೆಯ ವರ್ತನೆ ಚಿಕ್ಕದಾದ 4.5 ನ್ಯಾನೊ ಮೀಟರಿನಲ್ಲಿ ಮತ್ತೊಂದು ಬಗೆಯ ವರ್ತನೆಯು ತಾಳೆಯಾಗುವಷ್ಟು ನಿಖರವಾಗಿತ್ತು. ಎಕಿಮೊವ್‌ ಅರ್ಥೈಸಿದಂತೆ ಲೂಯಿಸ್‌ ಬ್ರೂಸ್‌  ಕೂಡ ಅದನ್ನು ಕಣಗಳ ಗಾತ್ರಗಳಿಗೆ ಒಪ್ಪಿಸಿ ವಿವರಿಸಿದ್ದರು.

       ಈಗ ಇಲೆಕ್ಟ್ರಾನುಗಳು ಒತ್ತಾದ ಜಾಗದಲ್ಲಿ ಸುತ್ತುವಾಗ ಅಲೆಗಳಾದ ಅವುಗಳ ತರಂಗದೂರವು ವ್ಯತ್ಯಯವಾಗುವುದರಿಂದ ಮಾತ್ರಿಕ ರೂಪು ಕಾಣುವುದು ಸ್ಪಷ್ಟವಾಗಿತ್ತು. ಇದೆಲ್ಲವೂ ಸರಿ ಆದರೆ ಆಕಸ್ಮಿಕವಾದ ಈ ಕಣಗಳನ್ನು ಬೇಕಾದಾಗ ಪಡೆಯುವುದಾದರೂ ಹೇಗೆ? ಅದಕ್ಕೆಲ್ಲಾ ವಿಜ್ಞಾನ ಜಗತ್ತು ಮತ್ತೂ ಒಂದು ದಶಕ ಕಾಯಬೇಕಾಯಿತು. ಮೌಂಗೈ ಬೆವಾಂಡಿ (Moungi Bawendi) ಅವರ ಕ್ರಾಂತಿಕಾರಿ ವಿಧಾನವು ಅದನ್ನು ಸೂಕ್ಷ್ಮವಾದ ಜಾಣತನದಿಂದ ಸಾಧಿಸಿತ್ತು.

       ಮೌಂಗೈ ಬೆವಾಂಡಿ ಅವರು 1988ರಲ್ಲಿ ಲೂಯಿಸ್‌ ಬ್ರೂಸ್‌ ಅವರ ಬಳಿ ತಮ್ಮ  ಪೋಸ್ಟ್‌ ಡಾಕ್ಟೊರಲ್‌ ತರಬೇತಿಯನ್ನು ಪಡೆದು ಮರಳಿ ತಮ್ಮ ಮಸಾಚುಸೇಟ್ಸ್‌ ತಾಂತ್ರಿಕ ಸಂಸ್ಥೆಗೆ ಹಿಂದಿರುಗಿ ನ್ಯಾನೊ ಕಣಗಳ ಅಧ್ಯಯನವನ್ನು ಮುಂದುವರೆಸಿದರು. ಸುಮಾರು 1993ರ ವೇಳೆಗೆ ಅವರಿಂದ ಕ್ರಾಂತಿಕಾರಿ ವಿಧಾನವು ಸಾಧ್ಯವಾಯಿತು. ಅವರು ವಿವಿಧ ಉಷ್ಣತೆಯಲ್ಲಿ ದ್ರಾವಕಕ್ಕೆ ಸೂಕ್ಷ್ಮವಾಗಿ ಹರಳು ಗಟ್ಟಿಸುವಿಕೆಯ ಮೂಲಕ ಚಿಕ್ಕ ಕಣಗಳನ್ನು ಪಡೆದು ಅವುಗಳನ್ನು ಹಾಗೆಯೇ ಬಳಸಿದ್ದು ಮುಖ್ಯವಾದುದು. ಹೀಗೆ ದೊರೆತ ನ್ಯಾನೊ ಹರಳುಗಳು ಖರಾರುವಕ್ಕಾಗಿಯೂ ಮತ್ತು ಬಳಸಲು ಸುಲಭವಾಗಿಯೂ ಇದ್ದವು. ಜೊತೆಗೆ ವಿವಿಧ ಗಾತ್ರದಲ್ಲಿಯೂ ಪಡೆಯಲು ಅನುಕೂಲಕರವೂ ಆಗಿದ್ದವು. ಈ ಕೆಳಗಿನ ಚಿತ್ರವು ಈ ಸೂಕ್ಷ್ಮಗಳ ವಿವರಣೆಯನ್ನು ಕೊಡುತ್ತದೆ.

       ಮುಂದೆ ಮತ್ತೊಂದು ಮೂರು ದಶಕಗಳೇ ಕಳೆದ ಮೇಲೆ ಈ ಕಣಗಳು ವಾಣಿಜ್ಯ ಬಳಕೆಯಲ್ಲಿ ಸ್ಥಾನ ಪಡೆದವು. LED ಗಳಲ್ಲಿ ಡಯೋಡುಗಳಲ್ಲಿ ಈ ಕ್ವಾಂಟಂ ಕಣಗಳು ಬಗೆ ಬಗೆಯ ಬಣ್ಣದ ಬೆಳಕನ್ನು ಹೊರಸೂಸಲು ಬಳಕೆಯಾಗುತ್ತಿವೆ. ಒಂದೇ ಬೆಳಕು ಅಥವಾ ವಸ್ತು ಅದೇ ಭಿನ್ನ ರೂಪವಾಗಿ ಮಾಂತ್ರಿಕ ರೂಪ ತಳೆಯುವ ಸನ್ನಿವೇಶ ಸುಲಭದಲ್ಲಿ ಟಿವಿ ಸ್ಕ್ರೀನಿನ ಮೇಲೂ ಕಾಣುತ್ತಿದೆ. LED ಗಳೀಗ QLED ಗಳಾಗಿವೆ. Q ಕ್ವಾಂಟಂ ಡಾಟ್‌ಗಳನ್ನು ಪ್ರತಿನಿಧಿಸುತ್ತಿದೆ.  ಕ್ವಾಂಟಂ ಡಾಟ್‌ಗಳಿಗ ಸ್ಕ್ರೀನಿನ ಮೇಲೆ ಬಣ್ಣದ ಬದಲಾವಣೆಗೆ ಒಂದರ್ಥದಲ್ಲಿ ರಂಗಾಗಿಸಲು ಕಾರಣವಾಗಿವೆ. ಇದನ್ನೇ ನೊಬೆಲ್‌ ಸಮಿತಿಯು ಹೇಳಿದ್ದು.. ನ್ಯಾನೊತಂತ್ರಜ್ಞಾನಕ್ಕೆ ರಂಗು ತುಂಬಿದ ಅನ್ವೇಷಣೆ ಎಂದು!

ಅಲೆಕ್ಸಿ ಎಕಿಮೊವ್‌ (Alexey Ekimov), ಅವರು 1945ರಲ್ಲಿ ರಶಿಯಾದಲ್ಲಿ ಜನಿಸಿದರು. ಲೆನಿನ್‌ ಗ್ರಾಡ್‌ ವಿಶ್ವವಿದ್ಯಾಲಯದಲ್ಲಿ ಭೌತವಿಜ್ಞಾನದಲ್ಲಿ ಪಿ.ಎಚ್.ಡಿ. ಪಡೆದರು. 1999ರಿಂದ ಎಕಿಮೊವ್‌ ಅಮೆರಿಕ ನಿವಾಸಿಯಾಗಿದ್ದಾರೆ. ನ್ಯಾನೊ ಕ್ರಿಸ್ಟಲ್ಸ್‌ ಟೆಕ್ನಾಲಜಿ ಸಂಸ್ಥೆಯ ಮುಖ್ಯ ವಿಜ್ಞಾನಿಯಾಗಿ ನ್ಯೂಯಾರ್ಕ್‌ ಅಲ್ಲಿ ನೆಲೆಸಿದ್ದಾರೆ.

ಅಮೆರಿಕದ ಲೂಯಿಸ್‌ ಬ್ರೂಸ್‌ (Louis Brus) 1943ರಲ್ಲಿ ಅಮೆರಿಕದ ಒಹಿಯೊದ ಕೀವ್‌ಲ್ಯಾಂಡ್‌ನಲ್ಲಿ ಜನಿಸಿದರು. ಕೊಲಂಬಿಯಾ ವಿಶ್ವ ವಿದ್ಯಾಲಯದಲ್ಲಿ ಪಿಎಚ್‌.ಡಿ ಪದವಿಯನ್ನು ಪಡೆದು ಅಲ್ಲಿಯೇ ಪ್ರಾಧ್ಯಾಪಕರಾಗಿದ್ದಾರೆ.

ಮೌಂಗೈ ಬೆವಾಂಡಿ (Moungi Bawendi) ಅವರು ಮೂಲತಃ ಫ್ರೆಂಚ್‌ ರಸಾಯನ ವಿಜ್ಞಾನಿ. 1961ರ ಮಾರ್ಚ್‌ 15ರಂದು ಫ್ರಾನ್ಸ್‌ನ ಪ್ಯಾರಿಸ್‌ ನಲ್ಲಿ ಜನಿಸಿದರು. ಗಣಿತಜ್ಞರಾದ ಅವರ ತಂದೆ ಇವರಿನ್ನೂ ಚಿಕ್ಕವರಿದಾಗಲೇ ಅಮೆರಿಕಕ್ಕೆ ವಲಸೆ ಬಂದರು. ಮೌಂಗೈ ಬೆವಾಂಡಿ ಹಾರ್ವರ್ಡ್‌ ವಿಶ್ವವಿದ್ಯಾಲಯ ಮತ್ತು ಚಿಕಾಗೊ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ನಡೆಸಿದರು. 1991ರಲ್ಲಿ ಮೆಸಾಚುಸೇಟ್ಸ್‌ ತಾಂತ್ರಿಕ ಸಂಸ್ಥೆಯನ್ನು ಸೇರಿದ ಬೆವಾಂಡಿ ಈಗ ಅಲ್ಲಿ ಪ್ರಾಧ್ಯಾಪಕರಾಗಿದ್ದಾರೆ.   

ಈ ಮೂವರಿಗೂ CPUS ತನ್ನ ಎಲ್ಲಾ ಹಿತೈಷಿಗಳ ಪರವಾಗಿ ಅಭಿನಂದಿಸುತ್ತದೆ.

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್.

Leave a Reply