ಪ್ರಾಥಮಿಕ ಶಾಲೆಗೆ ಬರಿಗಾಲಿನಲ್ಲಿ ಹೋಗುತ್ತಿದ್ದ ಹುಡುಗನೊಬ್ಬ ಮುಂದೆ ನೊಬೆಲ್ ಬಹುಮಾನಕ್ಕೆ ಪಾತ್ರನಾದದ್ದು ವಿಜ್ಞಾನದ ಇತಿಹಾಸದಲ್ಲಿದೆ. ಅಲ್ಲದೆ, ಮುಂಜಾನೆ ಕತ್ತಲಿರುವಾಗಲೇ ಎದ್ದು, ಮನೆ ಮನೆಗೆ ಹಾಲು ಹಂಚಿ ಗಳಿಸುತ್ತಿದ್ದ ಹುಡುಗ ಕೂಡ ! ಹೈಸ್ಕೂಲಿಗೆ ಬಂದ ಮೇಲೆ ತನ್ನ ಬೈಸಿಕಲ್ಲಿನಲ್ಲಿ ಮುಂಜಾನೆಗೆ ಹಾಲು ಹಂಚಲಾಗದ್ದಕ್ಕೆ ಸಂಜೆಯ ಹೊತ್ತು “ಸಂಜೆಯ ಪತ್ರಿಕೆ”ಯನ್ನು ಹಂಚಿ ಸಣ್ಣ ಗಳಿಕೆಯಿಂದ ಮನೆಗೆ ನೆರವಾಗುತ್ತಿದ್ದ. ಹೈಸ್ಕೂಲು, ಕಾಲೇಜಿನ ಪದವಿ, ಸ್ನಾತಕೋತ್ತರ ಪದವಿ ಎಲ್ಲವನ್ನೂ ಕೇವಲ “ಪಾರ್ಟ್ ಟೈಮ್” ವಿದ್ಯಾರ್ಥಿಯಾಗಿಯೇ ಅಧ್ಯಯನ ನಡೆಸಿ, ಜೀವನದುದ್ದಕ್ಕೂ ಗಳಿಸುತ್ತಲೇ ಓದಿದ ರಸಾಯನಿಕ ವಿಜ್ಞಾನಿ, ಅಲನ್ ಮ್ಯಾಕ್ ಡಿಅರ್ಮಿಡ್. ಪದವಿ ಓದುವಾಗಲೇ ಕಾಲೇಜಿನ ಲ್ಯಾಬ್ ಬಾಯ್ ಆಗಿ ಸೇರಿಕೊಂಡು, ಜೊತೆಯಲ್ಲೇ ಪದವಿಗೂ ಓದಿಕೊಂಡು ಬೆಳೆದ ವ್ಯಕ್ತಿ.
ಅಲನ್ ಅವರ ಅಪ್ಪ ಇಂಜನಿಯರ್. 1930 ದಶಕದಲ್ಲಿ ನ್ಯೂಜಿಲೆಂಡ್ನ ತೀವ್ರ ಆರ್ಥಿಕ ದುರ್ಬಲತೆಯಿಂದಾಗಿ ನಾಲ್ಕು ವರ್ಷಗಳ ಕಾಲ ಏನೂ ಕೆಲಸವಿಲ್ಲದೇ ಇದ್ದವರು. ಅವರ ಅಮ್ಮ ತುಂಬಾ ಧಾರಾಳಿ ಹೆಣ್ಣುಮಗಳು, ಮನೆಯಲ್ಲಿ ಊಟಕ್ಕೂ ಕೊರತೆ ಇದ್ದರೂ ಹಸಿವಿದ್ದರೊಂದಿಗೆ ಹಂಚಿಕೊಂಡು ತಿನ್ನುವುದನ್ನು ಕಲಿಸಿದವರು. ಆಗ ಕಡಿಮೆ ಊಟ ಮಾಡುವಂತೆ ಮನೆಯ ಅಲಿಖಿತ ಶಿಸ್ತಾಗಿತ್ತು. ಅಲನ್ ಅವರ ವೈಜ್ಞಾನಿಕ ಸಾಧನೆ ನಮ್ಮಲ್ಲಿ ಬಹುಪಾಲು ಮಕ್ಕಳಿಗೆ ಅಷ್ಟೆನೂ ಆಸಕ್ತಿದಾಯಕವಲ್ಲದ ರಸಾಯನವಿಜ್ಞಾನದಲ್ಲಿ!
ಈಗಲೂ ನಮ್ಮಲ್ಲಿ “ಅಯ್ಯೋ ಕೆಮಿಸ್ಟ್ರಿನಾ….?” ಎಂದು ಹೇಳುವುದುಂಟು. ಪೋಷಕರೂ ಸಹಾ ಇಂಜನಿಯರ್, ಡಾಕ್ಟರ್ ಎಂಬ ಆಶಯದಲ್ಲೇ ಭೌತವಿಜ್ಞಾನ ಹಾಗೂ ಜೀವಿವಿಜ್ಞಾನಕ್ಕೆ ಕೊಟ್ಟ ಪ್ರೀತಿಯನ್ನು ರಸಾಯನಿಕ ವಿಜ್ಞಾನಕ್ಕೆ ಕೊಡುತ್ತಿಲ್ಲ. ಆದರೇನಂತೆ ಇಡೀ ವಿಜ್ಞಾನದಲ್ಲಿ ವಸ್ತುಗಳ ವರ್ತನೆಯನ್ನು ಅರಿಯಲು -ಅದು ಜೀವಿಯಾಗಿರಲಿ, ನಿರ್ಜೀವಿಯಾಗಿರಲಿ- ರಸಾಯನ ವಿಜ್ಞಾನದ ಅಗತ್ಯವಿರುವ ಪರಿಸ್ಥಿತಿಯನ್ನೇ ನಾವು ಯೋಚಿಸುವುದಿಲ್ಲ. ಹೀಗೆ ನೇರವಾಗಿ ಬಹುಪಾಲು ವಿದ್ಯಾರ್ಥಿಗಳನ್ನು ಆಕರ್ಷಿಸದ ವಿಷಯ ರಸಾಯನಿಕ ವಿಜ್ಞಾನ! ಇಂತಹದರಲ್ಲಿ ಊಟವನ್ನೂ ಹಂಚಿಕೊಂಡು, ಮನೆ ಮನೆಗೆ ಹಾಲು, ಪತ್ರಿಕೆ ಹಂಚುತ್ತಾ, ಪ್ರಯೋಗಾಲಯದಲ್ಲಿ ನೆಲ ಒರೆಸುವ ಸಹಾಯಕನಾಗಿ ಸೇರಿಕೊಂಡು ರಸಾಯನಿಕ ವಿಜ್ಞಾನದ ಪದವಿ ಸಂಪಾದಿಸಿ, ಮುಂದೆ ರಸಾಯನಿಕ ವಿಜ್ಞಾನದಲ್ಲಿಯೇ ನೊಬೆಲ್ ಬಹುಮಾನವನ್ನು ಗಳಿಸಿದ್ದು ಸಾಮಾನ್ಯ ಸಾಧನೆಯಲ್ಲ. ತನ್ನ 16ನೇ ವಯಸ್ಸಿನಿಂದ ಎಲ್ಲಾ ಓದನ್ನೂ ತನ್ನ ಸ್ವಂತ ಗಳಿಕೆಯಿಂದಲೇ ಸಾಧಿಸಿದ್ದಲ್ಲದೆ ಮುಂದೆ ನೊಬೆಲ್ ಪ್ರಶಸ್ತಿಯನ್ನೂ ಪಡೆದರು.
ಅಲನ್ ನ್ಯೂಜಿಲೆಂಡ್ ದೇಶದಲ್ಲಿ 14ನೆಯ ಏಪ್ರಿಲ್ 1927ರಂದು ಹುಟ್ಟಿದರು. ಅಲ್ಲಿಯೇ ಕೆಲಸ ಮಾಡುತ್ತಲೇ ಓದನ್ನು ನಡೆಸಿದರು. ಪದವಿ ಅಧ್ಯಯನದಲ್ಲಿ ಲ್ಯಾಬ್ ಬಾಯ್ ಆಗಿ ಸೇರಿಕೊಂಡು, ಪಸವಿ ಪಡೆದು, ರಸಾಯನ ವಿಜ್ಞಾನದ ಸ್ನಾತಕೋತ್ತರ ಪದವಿಯನ್ನು ಸಂಪಾದಿಸಿದರು. ಎಳೆವೆಯಿಂದಲೂ ಗಳಿಸುತ್ತಲೇ, ಮನೆಗೂ ಸಹಾಯ ಮಾಡುತ್ತಾ ಓದನ್ನು ಸ್ನಾತಕೋತ್ತರ ಪದವಿಯವರೆಗೂ ಮನ್ನಡೆಯಿಸಿದವರು. ಮುಂದೆ ಅಮೆರಿಕಾದ ವಿಸ್ಕಾನ್ಸಿನ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಮಾಡಿ ನಂತರ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ನೆಲೆಯಾದರು. ಅಲ್ಲಿಯೇ ತಮ್ಮ ಜೀವಿತದ ಕಡೆಯವರೆವಿಗೂ (ಫೆಬ್ರವರಿ 7, 2007) ಕಳೆದರು.
ಅವರ ಅಪ್ಪ-ಅಮ್ಮ ಹೇಳುತ್ತಿದ್ದ ಮಾತು ಹೀಗಿದೆ “ಶಾಲೆಯಲ್ಲಿ ಬರೀ ‘ಎ’ ಗ್ರೇಡ್ ಗಳಿಕೆಯೊಂದೇ ಯಶಸ್ಸಲ್ಲ. ಯಶಸ್ಸು ಎಂದರೆ ಮುಂದಿನ ಬದುಕಿನ ಬೆಳಕಿಗೆ ಸ್ವಂತ ಸಾಮರ್ಥ್ಯವನ್ನು ಬಳಸುವುದು”. ಅಲನ್ ಇದನ್ನು ಅಕ್ಷರಶಃ ಪಾಲಿಸಿದ್ದರು.
ರಸಾಯನಿಕ ವಿಜ್ಞಾನದಲ್ಲಿ ಮಹತ್ತರವಾದದನ್ನು ಸಾಧಿಸಿದ ಅಲನ್ ಅವರ ರಸಾಯನ ವಿಜ್ಞಾನದ ಪ್ರೀತಿಗೆ ಕೆಲವು ವಿಶೇಷ ಕಾರಣಗಳಿವೆ. ಅಲನ್ ಹತ್ತು ವರ್ಷದ ಹುಡುಗನಾಗಿದ್ದಾಗಲೇ ಅಪ್ಪನ ಬಳಿ ಇದ್ದಂತಹಾ, 1800 ರ ಸುಮಾರಿಗೆ ಪ್ರಕಟಿತವಾಗಿದ್ದ ರಸಾಯನ ವಿಜ್ಞಾನದ ಪುಸ್ತಕವೊಂದು ಅವರ ಮೇಲೆ ಪ್ರಭಾವ ಬೀರಿತ್ತು. ನಂತರ ಮುಂದೆ ಪದವಿ ವಿದ್ಯಾರ್ಥಿಯಾಗಿದ್ದಾಗ ವಿಕ್ಟೋರಿಯಾ ಯೂನಿವರ್ಸಿಟಿ ಕಾಲೇಜಿನ ಗ್ರಂಥಾಲಯದಲ್ಲಿ ಸಿಕ್ಕ “ದ ಬಾಯ್ ಕೆಮಿಸ್ಟ್” ಎಂಬ ಪುಸ್ತಕ ಅವರ ಓದಿನ, ಕಲಿಕೆಯ ದಿಕ್ಕನ್ನೇ ಬದಲಿಸಿತ್ತು. ವರ್ಷಗಟ್ಟಲೆ ಅದನ್ನು ಪುನಃ ಪುನಃ ಪಡೆದು ಓದಿದ್ದರಂತೆ. ನೂರಾರು ಚಿತ್ರಗಳ ಮೂಲಕ ವಿವಿಧ ರಸಾಯನವಿಜ್ಞಾನದ ವಿವರಗಳನ್ನು ಹೊಂದಿರುವ ಈ ಕೃತಿಯ ಲೇಖಕರು ಫ್ರೆಡ್ರಿಕ್ ಕಾಲಿನ್ಸ್. ಸರಳವಾಗಿ ವೈವಿಧ್ಯಮಯ ರಸಾಯನ ವಿಜ್ಞಾನದ ವಿವರಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುವ ಈ ಪುಸ್ತಕ ಅವರನ್ನು ಶ್ರೇಷ್ಠ ರಸಾಯನಿಕ ವಿಜ್ಞಾನಿಯನ್ನಾಗಿ ರೂಪಿಸಿತೆಂದು ಅವರೇ ಹೇಳಿಕೊಂಡಿದ್ದಾರೆ.
ಅಲನ್ ಎಂ.ಎಸ್ಸಿ., ಅಧ್ಯಯನಕ್ಕಾಗಿ ಕೈಗೊಂಡ ಸಂಶೋಧನೆಯು ಅವರ ಜೀವನದ ಮಹತ್ತರ ತಿರುವನ್ನು ನೀಡಿತು. ಕಿತ್ತಳೆ ಬಣ್ಣದ ಪಾಲಿಮರ್ ಹರಳುಗಳ ಅಧ್ಯಯನದಲ್ಲಿ ತೊಡಗಿದ್ದ ಅವರಿಗೆ ಬಣ್ಣಗಳ ಕುರಿತು ವಿಶೇಷ ಪ್ರೀತಿ ಬೆಳೆಯಿತು. ಮುಂದೆ ಅವುಗಳ ರಸಾಯನಿಕ ವಿವರಗಳ ಸಂಶೋಧನೆಯನ್ನು ಮುಂದುವರೆಸಿದ್ದರು. ಹಾಗೆಯೆ ವಿಶೇಷ ಬಣ್ಣದ ಪ್ಲಾಸ್ಟಿಕ್ ಹರಳುಗಳಿನ ರಚನೆಯನ್ನು ವೈವಿಧ್ಯಮಯವಾಗಿ ಸಾಧಿಸಿ ಅದರಲ್ಲಿ ವಿದ್ಯುತ್ ಹರಿಸಿ ಮತ್ತೋರ್ವ ಅಲನ್ ಹಾಗೂ ಶಿರಕಾವ ಅವರ ಜೊತೆಯಾಗಿ 2000 ವರ್ಷದ ನೊಬೆಲ್ ಗಳಿಸಿದರು. ಪ್ಲಾಸ್ಟಿಕ್ ಮೂಲತಃ ಅವಾಹಕ. ಅದರಲ್ಲಿ ವಿದ್ಯುತ್ ಪ್ರವಹಿಸುವುದಿಲ್ಲ. ‘ಪ್ಲಾಸ್ಟಿಕ್ನಲ್ಲಿ ವಿದ್ಯುತ್ ಹರಿಸಿದ ಮಾಂತ್ರಿಕತೆ’ಯನ್ನು ಮುಂದೆ ನೋಡೋಣ.
ಪ್ಲಾಸ್ಟಿಕ್ನಲ್ಲಿ ವಿದ್ಯುತ್ ಹರಿಸಿದ ಮಾಂತ್ರಿಕತೆ
ಅಲನ್ ಮ್ಯಾಕ್ ಡಿಅರ್ಮಿಡ್ ಪ್ಲಾಸ್ಟಿಕ್ ನಲ್ಲಿ ವಿದ್ಯುತ್ ಹರಿಸಿ ಮತ್ತಿಬ್ಬರು ವಿಜ್ಞಾನಿಗಳ ಜೊತೆ ನೊಬೆಲ್ ಬಹುಮಾನ ಗಳಿಸಿದವರು. ಪ್ಲಾಸ್ಟಿಕ್ ಸಾಮಾನ್ಯ ತಿಳಿವಿನಲ್ಲಿ ಅದೊಂದು ಅವಾಹಕ. ಸಹಜವಾಗಿ ಇನ್ಸುಲೇಟರ್ ಅಂದರೆ ಶಾಖ ಅಥವಾ ವಿದ್ಯುತ್ ಪ್ರವಹಿಸದಂತೆ ಬಳಸುವ ವಸ್ತು. ಅಂತಹದ್ದರಲ್ಲಿ ಅದರಲ್ಲೇ ವಿದ್ಯುತ್ ಹರಿಯುವುದೆಂದರೆ ಅಚ್ಚರಿಯೇ ಸರಿ. ಹಾಂ, ಅದನ್ನೇ ಮ್ಯಾಕ್ ಡಿಅರ್ಮಿಡ್ ತಂಡವು ಸಾಧಿಸಿದ್ದು.
ಸಾಮಾನ್ಯವಾಗಿ ವಿದ್ಯುತ್ ತಂತಿಗಳು ಲೋಹದವು. ಲೋಹಗಳಲ್ಲಿ ಇಲೆಕ್ಟ್ರಾನುಗಳು ಹರಿಯುವ ಮೂಲಕ ವಿದ್ಯುತ್ ಅಥವಾ ಶಾಖವು ಪ್ರವಹಿಸುತ್ತದೆ. ಆದರೆ ಪ್ಲಾಸ್ಟಿಕ್ ಹಾಗಲ್ಲ. ಅದರ ರಚನೆಯು ಲೋಹಗಳಂತೆ ಅಲ್ಲ. ಪಾಲಿಮರ್ಗಳೆಂದು ಕರೆಯುವ ಪ್ಲಾಸ್ಟಿಕ್ನಲ್ಲಿ ಅದರ ಅಸಂಖ್ಯ ಅಣುಗಳು, ಮುತ್ತಿನ ಹಾರದಲ್ಲಿ ಮುತ್ತುಗಳು ಜೋಡಿಸಿದಂತೆ ಜೊಡಿಸಲ್ಪಟ್ಟಿರುತ್ತವೆ. ಸುಮ್ಮನೆ ಒಂದರ ಪಕ್ಕಕ್ಕೆ ಒಂದರಂತೆ ಜೋಡಣೆಯಾಗಿರುತ್ತವೆ. ಅವುಗಳ ನಡುವೆ ಇಲೆಕ್ಟ್ರಾನುಗಳ ಹರಿದಾಡುವ ಪ್ರಮೆಯವೇ ಬರುವುದಿಲ್ಲ, ಹಾಗಾಗ ಬೇಕಾದಲ್ಲಿ ಪ್ಲಾಸ್ಟಿಕ್ಕೂ ಸಹಾ ಲೋಹಗಳಂತೆ ವರ್ತಿಸಬೇಕು. ಅಂದರೆ ಅದರಲ್ಲೂ ಇಲೆಕ್ಟ್ರಾನುಗಳು ಬಿಡಿ ಬಿಡಿಯಾಗಿದ್ದು ಹರಿದಾಟಕ್ಕೆ ಬರುವಂತಿರಬೇಕು. ಆದರೆ ಹಾಗಿರುವುದಿಲ್ಲ. ಹಾಗಾದರೆ ಈ ವಿಜ್ಞಾನಿಗಳು ಮಾಡಿದ್ದೇನು?
ಮುಖ್ಯವಾಗಿ ಪ್ಲಾಸ್ಟಿಕ್ಕಿನ ರಚನೆಯನ್ನು ಲೋಹಗಳಂತೆ ರೂಪಾಂತರಗೊಳಿಸುವುದು. ಇದು ಸಾಧ್ಯವಾಗಲು ಅದರ ಮೂಲ ರಚನೆಯನ್ನು ಬದಲಿಸಬೇಕು. ಪಾಲಿಮರ್ಗಳಲ್ಲಿ ಎರಡು ಬಗೆಯ ರಚನೆಗಳನ್ನು ಮೊದಲು ಸಾಧ್ಯಮಾಡಿ ಅಂತಹ ವಸ್ತುವಿಗೆ ಏನಾದರೂ ಮಿಶ್ರಣ ಮಾಡಿದಾಗ ಕೆಲವೊಮ್ಮೆ ಅರೆವಾಹಕಗಳಾಗುವ ಸಾಧ್ಯತೆ ಇರುತ್ತದೆ. ಹೀಗೆ ವಸ್ತುಗಳ ಮೂಲ ದ್ರವ್ಯಕ್ಕೆ ಮಿಶ್ರ ಮಾಡುವ ಪ್ರಕ್ರಿಯೆಯನ್ನು ಡಾಪಿಂಗ್ ಎನ್ನಲಾಗುತ್ತದೆ. ಪ್ಲಾಸ್ಟಿಕ್ ಪಾಲಿಮರ್ನಲ್ಲೂ ಹೀಗೆಯೆ ಅಯೋಡಿನ್ಅನ್ನು ಮಿಶ್ರಮಾಡಿದಾಗ ವಾಹಕವಾಗುವಿಕೆಯು ಲಕ್ಷಾಂತರ ಪಟ್ಟು ಹೆಚ್ಚಾಗುವುದನ್ನು ಕಂಡು ಸಾಧಿಸಿದ ವಿಜ್ಞಾನಿಗಳೇ ಅಚ್ಚರಿ ಪಟ್ಟಿದ್ದರು. ಹೀಗೆ ಸಂಪೂರ್ಣ ಅವಾಹಕವೊಂದು ಇನ್ಸುಲೇಟರ್ ಆಗಿರುವುದರಲ್ಲಿ ವಿದ್ಯುತ್ ಹರಿಸಲು ಮಾಡುವಲ್ಲಿ ಅದರಿಂದ ವಿಶೇಷ ಸಾಧನೆ ಮತ್ತು ಅದರ ವೈವಿಧ್ಯಮಯ ಬಳಕೆಯನ್ನು ಸಾಧಿಸಿದಂತಾಗಿತ್ತು. ನಿಜಕ್ಕೂ ಆದ ವೈಜ್ಞಾನಿಕ ಸಾಧನೆಯನ್ನು ಮುಂದೆ ನೋಡೋಣ.
ಮ್ಯಾಕ್ ಡಿಅರ್ಮಿಡ್ ಅವರು ಸ್ನಾತಕೋತ್ತರ ಪದವಿಯಲ್ಲಿ ಸಂಶೋಧನೆಯನ್ನು ಆರಂಭಿಸಿದ್ದ ಸಲ್ಫರ್ ನೈಟ್ರೇಟ್ ಪಾಲಿಮರ್ಗಳ ಅಧ್ಯಯನವನ್ನು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲೂ ಮುಂದುವರೆಸಿದ್ದರು. ಅವರಿಗೆ ದೊರೆತಿದ್ದ ಗಂಧಕದ ಪಾಲಿಮರ್ ಲೋಹದ ಹೊಳಪನ್ನು ಗಳಿಸುವ ಬಗ್ಗೆ ತಿಳಿದುಕೊಂಡಿದ್ದರು. ಅವರೊಮ್ಮೆ ಜಪಾನಿಗೆ ಹೋಗಿ ವೈಜ್ಞಾನಿಕ ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಶೋಧವನ್ನು ಹಂಚಿಕೊಂಡಿದ್ದರು. ಇದರಲ್ಲಿ ಪಾಲಿಮರ್ಗಳ ಕುರಿತ ಚರ್ಚೆಯನ್ನು ಮಾಡಿದ್ದರು. ವೈಜ್ಞಾನಿಕ ಭಾಷಣವು ಮುಗಿದ ಮೇಲೆ ಬಿಡುವಿನ ವೇಳೆಯಲ್ಲಿ ಅಲ್ಲಿನ ವಿಜ್ಞಾನಿ ಹಿಡೆಕಿ ಶಿರಕಾವ ಅವರೊಡನೆ ಕಾಫಿ ಕುಡಿಯುತ್ತಿದ್ದರು. ಆಗ ಶಿರಕಾವ ತಾವೂ ಸಹಾ ಸಾವಯವ ಪಾಲಿಮರ್ನಲ್ಲಿ ಲೋಹದ ಮೆರುಗನ್ನು ಕಂಡ ಬಗ್ಗೆ ಹೇಳಿದರು. ಇದರಿಂದ ಉತ್ತೇಜನೆಗೊಂಡ ಮ್ಯಾಕ್ ಅವರನ್ನು ಪೆನ್ಸಿಲ್ವೇನಿಯಾಕ್ಕೆ ಆಹ್ವಾನಿಸಿ ಸಂಶೋಧನೆಯನ್ನು ಕೈಗೊಂಡರು.
ಪ್ಲಾಸ್ಟಿಕ್ ಲೋಹವನ್ನು ಅಣಕು ಮಾಡಬೇಕೆಂದರೆ ಮೊದಲು ಅದರಲ್ಲೂ ಇಲೆಕ್ಟ್ರಾನುಗಳು ಹರಿದಾಡಲು ಅದರಲ್ಲಿ ಇಲೆಕ್ಟ್ರಾನುಗಳು ಮೊದಲು ಸ್ಥಳಾಂತರವಾಗುವಂತೆ ಮಾಡಬೇಕು. ಹಾಗೆ ಮಾಡಲು ಉತ್ಕರ್ಷಣ ಅಥವಾ ಅಪಕರ್ಷಣವಾಗುವಂತೆ ಮಾಡಬೇಕು. ಹೀಗೆ ಒಗ್ಗಲು ಪ್ಲಾಸ್ಟಿಕ್ನಲ್ಲಿ ಸಹಜವಾಗಿ ದೊರೆಯುವ ಎರಡು ಬಗೆಯ ಸಂರಚನೆಗಳನ್ನು ಸುಲಭವಾಗಿ ಒಂದರ ಪಕ್ಕ ಒಂದರಂತೆ ಬರಲು ಅಥವಾ ಒಂದಾದರ ಮೇಲೊಂದರಂತೆ ಬರಲು ಶಿರಕಾವರ ಶೋಧವು ನೆರವಾಯಿತು. ಮುಂದೆ ಅದಕ್ಕೆ ಡಾಪಿಂಗ್ ಅಥವಾ ಮಿಶ್ರ ಮಾಡಿ ಅವಾಹಕವಾಗಿಸಲು ಅಯೋಡಿನ್ ನೆರವಾಯಿತು. ಅದಕ್ಕೆ ಬೇಕಾದ ಇಲೆಕ್ಟ್ರಾನ್ ಉದ್ದೀಪಿಸುವ ಗುಣದ ಭೌತವಿಜ್ಞಾನದ ಲೆಕ್ಕಾಚಾರವನ್ನು ಮತ್ತೋರ್ವ ವಿಜ್ಞಾನಿ ಅಲನ್ ಹೀಗರ್ ಮಾಡಿದರು. ಅಂತೂ ಪ್ಲಾಸ್ಟಿಕ್ನಲ್ಲಿ ವಿದ್ಯುತ್ಅನ್ನು ಹರಿಸುವಲ್ಲಿ ಮೂವರೂ ಸೇರಿ ವಿಚಿತ್ರ ಸಾಧ್ಯತೆಯನ್ನು ಪಡೆದಿದ್ದರು.
ಈ ಎಲ್ಲಾ ಶೋಧಗಳೂ 70ರ ದಶಕದಲ್ಲೇ ನಡೆದವು. ನಂತರ ಅದರಿಂದಾದ ಲಾಭಗಳನ್ನು ನಾವೀಗ ಅನುಭವಿಸುತ್ತಿದ್ದೇವೆ. ಹೀಗೆ ಪ್ಲಾಸಿಕ್ನ ವಿದ್ಯುತ್ವಾಹಕ ಗುಣವನ್ನು ಇಂದು ವೈವಿಧ್ಯಮಯ ಸ್ಕ್ರೀನುಗಳಲ್ಲಿ ಬಳಸಲಾಗುತ್ತಿದೆ. ಇಂದು ನಮ್ಮ ನಿಮ್ಮೆಲ್ಲರ ಮೊಬೈಲುಗಳ ಸ್ಟ್ರೀನ್ಗಳು ಇಲೆಕ್ಟ್ರಾನ್ ಪ್ರತಿಫಲನದ ಟಿವಿಗಳು ಎಲ್ಲದರಲ್ಲೂ ಈ ಸಂಶೋಧನೆಯು ನೆರವಾಗುತ್ತಿದೆ. ಭೂಮಂಡಲದ ಒಂದು ತುದಿ ಎನಿಸಿರುವ ನ್ಯೂಜಿಲೆಂಡ್ನಲ್ಲಿ ಬಡ ಕುಟುಂಬದಿಂದ ಬಂದ ಅಲನ್ ಮ್ಯಾಕ್ ಡಿಅರ್ಮಿಡ್, ಅಮೆರಿಕಗೆ ಬಂದು ಅಲ್ಲಿ ಮತ್ತೋರ್ವ ಅಲನ್ ಹೀಗರ್ ಅವರ ಜೊತೆಯಾಗಿ, ಜಪಾನಿನ ಶಿರಕಾವರನ್ನು ಸೇರಿಸಿಕೊಂಡು ಮಹತ್ತರ ಬದಲಾವಣೆಯನ್ನು ಮಾಡಿ ಮನುಕುಲಕ್ಕೆ ನೆರವಾಗಿದ್ದಾರೆ. ಈ ಶೋಧದಲ್ಲಿ ಪ್ರತಿಫಲದ ಹೊಸ ಉತ್ಪನ್ನವಾಗಿ ಸೇರಿದ ಮತ್ತೋರ್ವ ಹೀರೊ ಪಾಲಿಅಸಿಟಿಲೀನ್! ಇದೇ ಪ್ಲಾಸ್ಟಿಕ್ಕಿನ ಪಾಲಿಮರ್ ವಿದ್ಯುತ್ ಹರಿಸಲೂ ಬಳಸುವಂತಾದ ಮಾಂತ್ರಿಕ ಉತ್ಪನ್ನ.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್.
ಹೆಚ್ಚಿನ ಓದಿಗೆ: