You are currently viewing ನೆಲದೊಳಗೆ ಕಾಯಿ ಬಿಡುವ ಅಡಕೆ ಜಾತಿಯ Pinanga subterranea

ನೆಲದೊಳಗೆ ಕಾಯಿ ಬಿಡುವ ಅಡಕೆ ಜಾತಿಯ Pinanga subterranea

ಇದೇ 2023 ರ ಜೂನ್‌ 27 ರಂದು ಇಂಗ್ಲಂಡಿನ ಕ್ಯೂ (Kew Garden) ಗಾರ್ಡನ್‌ ನಿಂದ ಸಸ್ಯಲೋಕದ ಬೆರಗೊಂದನ್ನು ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಬಿತ್ತು. ಅದು ಜಗತ್ತಿನ ಸಸ್ಯವಿಜ್ಞಾನಿಗಳನ್ನು, ಗಿಡ-ಮರಗಳ ಆಸಕ್ತರನ್ನು ನಂಬಲು ಅಸಾಧ್ಯವಾದ ನೋಟಕ್ಕೆ ಸಾಕ್ಷಿಯಾಗಿಸಿತ್ತು. ಅಡಕೆ, ತಾಳೆ ಅಥವಾ ತೆಂಗಿನ ಜಾತಿಯ ಮರಗಿಡಗಳು ಎಲ್ಲರಿಗೂ ಕಾಣುವಂತೆ ಎತ್ತರದಲ್ಲಿ ಹೂವು, ಹಣ್ಣುಗಳನ್ನು ಬಿಟ್ಟರೆ, ಅದೇ ಕುಟುಂಬದ ಗಿಡವೊಂದು ಹೂವು ಹಣ್ಣುಗಳನ್ನು ನೆಲದ ಒಳಗೆ -ನೆಲಗಡಲೆಯಂತೆ- ಬಿಟ್ಟು ಮರೆಯಾಗಿಟ್ಟಿರುವ ವಿವರಗಳನ್ನು ಆ ಪ್ರಕಟಣೆ ಒಳಗೊಂಡಿತ್ತು.     

ಅಂತರರಾಷ್ಟ್ರೀಯ ಪಾಮ್‌ ಸೊಸೈಟಿಯ ಪತ್ರಿಕೆ –PALMನಲ್ಲೂ ಮತ್ತು Plants, People and Planet  ವಿಜ್ಞಾನ ಪತ್ರಿಕೆಯಲ್ಲೂ ನೆಲದೊಳಗೆ ಭೂಗತವಾಗಿ ಹೂವು ಹಣ್ಣುಗಳ ಮರೆಮಾಡಿಟ್ಟ ವಿವರವಾದ ವೈಜ್ಞಾನಿಕ ಸಂಗತಿಗಳನ್ನು ಒಳಗೊಂಡ ಪ್ರಬಂಧಗಳೂ ಸಹಾ ಇದೇ ವರ್ಷದ ಜೂನ್‌ ತಿಂಗಳಲ್ಲೇ ಪ್ರಕಟವಾಗಿವೆ. ಹಾಗಾಗಿ ಸಸ್ಯಯಾನದ 120ನೆಯ ಲೇಖನಕ್ಕೊಂದು ವಿಶೇಷ ಮೆರುಗು ಸಿಕ್ಕಿದೆ. ಏಕೆಂದರೆ ತೆಂಗು-ಅಡಕೆಗಳು ತಲೆಯ ಮೇಲೆ ಮುಡಿದ ಹೊಂಬಾಳೆಯಂತಹ ಹೂವುಗಳನ್ನೂ, ಕುತ್ತಿಗೆಯ ಮೇಲೆ ಭಾರವೆನಿಸುವಷ್ಟು ಹೊತ್ತು ನಿಂತ ಕಾಯಿಗಳ ದೃಶ್ಯವನ್ನು ನಾವೆಲ್ಲಾ ತಲೆ ಎತ್ತಿ ನೋಡಿ ಆನಂದಿಸಿದ್ದೇವೆ. ಆದರೆ ಇಂಡೊನೇಶಿಯಾ, ಮಲೇಶಿಯಾ ಮತ್ತು ಬ್ರುನೈಗೆ ಸೇರಿದ ದ್ವೀಪವಾದ ಬೊರ್ನಿಯೊನಲ್ಲಿನ ಕಾಡುಗಳಲ್ಲಿ ಅಡಕೆ ಜಾತಿಯ ಗಿಡವೊಂದು ಪತ್ತೆಯಾಗಿದ್ದು, ಅದು ಇಡೀ ವಿಜ್ಞಾನದ ಜಗತ್ತಿಗೇ ಬೆರಗುಗೊಳಿಸುವ ಹಾಗೆ ನೆಲಗಡಲೆಯಂತೆ ಕಾಯಿಗಳನ್ನು ಭೂಮಿಯ ಒಳಗೆ ಬಿಡುತ್ತದೆ.

 ಅದನ್ನು ಇಂಡೊನೇಶಿಯಾ, ಮಲೇಶಿಯಾ ಮತ್ತು ಬ್ರಿಟನ್‌ ದೇಶದ ಸಸ್ಯವಿಜ್ಞಾನಿಗಳ ತಂಡವು ವಿವರವಾಗಿ ಅಧ್ಯಯನ ಮಾಡಿ ಅದನ್ನು ಪಿನಂಗ ಸಬ್‌ಟೆರೆನಿಯ (Pinanga subterranea) ಎಂದು ಹೆಸರಿಸಿದ್ದಾರೆ.  ಸಸ್ಯವು ನೆಲಗಡಲೆಯಂತೆ ಕಾಯಿಗಳನ್ನು ಭೂಮಿಯ ಒಳಗೆ ಬಿಡುತ್ತದೆ ಎಂಬುದು ಈ ಹಿಂದೆಯೇ ಸ್ಥಳೀಯ ಜನಗಳಿಗೆ ತಿಳಿದಿತ್ತಾದರೂ ವಿಜ್ಞಾನಕ್ಕೆ ಪರಿಚಯವಿರಲಿಲ್ಲ. ನೆಲಗಡಲೆಯಾದರೂ ಹೂವುಗಳನ್ನು ಬುಡದಲ್ಲಿ ಬಿಟ್ಟು, ಪರಾಗಸ್ಪರ್ಶಗೊಂಡು ಫಲವಂತವಾದ ಮೇಲೆ ನೆಲದೊಳಗೆ ಇಳಿಸಿ ಕಾಯಾಗುತ್ತದೆ. ಆದರೆ ಪಿನಂಗ ಸಬ್‌ಟೆರೆನಿಯ ಮಾತ್ರ ಹೂವುಗಳನ್ನೂ ಸಹಾ ನೆಲದೊಳಗೇ ಬಿಟ್ಟು ಮತ್ತಷ್ಟು ಆಶ್ಚರ್ಯಕ್ಕೆ ಅವಕಾಶವಿತ್ತಿದೆ. ವಿಚಿತ್ರ ಎಂದರೆ, ಇದರ ಹೂವುಗಳಾದರೂ ಅದು ಹೇಗೆ ಪರಾಗಸ್ಪರ್ಶವನ್ನು ಹೊಂದುತ್ತವೆ, ಬೀಜಗಳು ಪ್ರಸಾರವಾಗುವುದಾದರೂ ಹೇಗೆ ಮುಂತಾದ ಪ್ರಶ್ನೆಗಳೀಗ ಸಸ್ಯವಿಜ್ಞಾನಿಗಳು ಎದುರಿಗೆ ಇವೆ. ಈ ಕುತೂಹಲದ ಪ್ರಶ್ನೆಗಳಿಗೆ ವಿಕಾಸದ ಹಾದಿಯನ್ನು ಅರಸಿ ವಿವರಿಸಿ PALM ಮತ್ತು Plants, People and Planet  ವಿಜ್ಞಾನ ಪತ್ರಿಕೆಗಳ ಪ್ರಬಂಧಗಳನ್ನು ತಂಡವು ಪ್ರಕಟಿಸಿದೆ. ಇದರ ಕುತೂಹಲಕರ ಸಂಗತಿಗಳನ್ನು ಸ್ವಲ್ಪ ವಿವರವಾಗಿ ನೋಡೋಣ.

ಈ ಸಸ್ಯದ ವಿವರಗಳನ್ನು ಸಂಶೋಧಿಸಿದ ವಿಜ್ಞಾನಿಗಳ ತಂಡದಲ್ಲಿ ಒಟ್ಟು ಆರು ಮಂದಿ ವಿವಿಧ ದೇಶಗಳ ಸಸ್ಯ ವಿಜ್ಞಾನಿಗಳು ಇದ್ದರು. ಸಿಂಗಪುರ್‌ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿರುವ ಇಂಡೊನೇಶಿಯಾದ ಅಗಸ್ಟೀ ರಾಂಡಿ (Agusti Randi),  ಕ್ಯೂ ಗಾರ್ಡನ್‌ನ ಹರೆಯ ವಿಜ್ಞಾನಿಗಳಾದ ಬೆನೆಡಿಕ್ಟ್‌ ಕನ್ಹೂಸರ್‌ (Benedikt  G. Kuhnhäuser) ಮತ್ತು ಪೀಟರ್‌ (Peter Petoe)  ಹಿರಿಯರಾದ ಮಲೇಶಿಯಾದ ಪಾಲ್‌ ಚಯ್‌  (Paul P.K. Chai) ಇಂಗ್ಲಂಡಿನ ಸಿಡೊನ್‌ ಬೆಲಟ್‌ (Sidone Bellot) ಮತ್ತು ವಿಲಿಯಂ ಬೇಕರ್‌ (William j. Baker). ಇಡೀ ತಂಡವನ್ನು ಮುನ್ನಡೆಯಿಸಿ ಪ್ರಬಂಧದ ಮುಖ್ಯ ಲೇಖಕರಾಗಿದ್ದವರು ಅಗಸ್ಟೀ ರಾಂಡಿ (Agusti Randi).  

ತಂಡದಲ್ಲಿರುವ ಮಲೇಶಿಯಾದ ಸಸ್ಯ ವಿಜ್ಞಾನಿ ಪಾಲ್‌ ಚಯ್‌ (Paul Chai) 1997ರಷ್ಟು ಹಿಂದಯೇ ಈ ಸಸ್ಯವನ್ನು ಮೊಟ್ಟ ಮೊದಲು ಮಲೇಶಿಯಾದ ಸರವಾಕ್‌ ವನ್ಯ ಜೀವಿ ಅಭಯಾರಣ್ಯದಲ್ಲಿ ಕಂಡಿದ್ದರು (Lanjak Entimau Wildlife Sanctuary in Sarawak). ಈ ವಿಶಿಷ್ಟ ಸಸ್ಯದ ಬಗ್ಗೆ ಅಚ್ಚರಿಗೊಂಡಿದ್ದರು. ಬೊರ್ನಿಯೊದ ಭಾಷೆಗಳಲ್ಲೇ ಈ ಸಸ್ಯಕ್ಕೆ ಒಂದಲ್ಲಾ ನಾಲ್ಕು ಹೆಸರುಗಳನ್ನು ಸ್ಥಳೀಯವಾಗಿ ಕರೆಯಲಾಗುತ್ತದೆ. ಮಲೇಶಿಯಾದಲ್ಲಿ ಒಂದು, ಇಂಡೊನೇಶಿಯಾದಲ್ಲೇ ಒಂದೆರಡು ಹೀಗೆ! ಸ್ಥಳಿಯ ಜನಾಂಗದವರು ಅನೇಕ ಸಂತತಿಗಳ ಕಾಲ ಇದನ್ನು ತಿನ್ನಲೂ ಬಳಕೆಯಾಗುತ್ತಿದ್ದ ಬಗ್ಗೆಯೂ ಪಾಲ್‌ ಚಯ್‌ ಅರಿತಿದ್ದರು.    

ಮುಂದೊಮ್ಮೆ ಇಂಡಿನೇಶಿಯಾದ ಸಂಶೋಧಕ ಅಗಸ್ಟೀ ರಾಂಡಿಯೂ ಕೂಡ ಸ್ವತಂತ್ರವಾಗಿ ಇಂಡೊನೇಶಿಯಾದ ಬೊರ್ನಿಯೊ ಭಾಗವಾದ ಕಲಿಮಂಟನ್‌ ಅರಣ್ಯದಲ್ಲೂ ಕಾಡು ಹಂದಿಗಳ ಅಗೆತದ ಮೂಲಕ ಈ ಸಸ್ಯವನ್ನು ಬುಡದಲ್ಲಿ ದಟ್ಟ ಕೆಂಪು ಕಾಯಿಗಳನ್ನು ಹೊಂದಿರುವುದನ್ನು ಕಂಡಿದ್ದರು. ಸೂಕ್ಷ್ಮವಾಗಿ ಗಮನಿಸಿದರೆ ಕೆಂಪುಕಾಯಿಗಳು ಕಾಣುವುದಲ್ಲದೆ, ಮೇಲು ನೋಟಕ್ಕೆ ಯಾವುದೋ ಪಾಮ್‌ ಮರದದ ಎಳೆಯ ಗಿಡ ಎನ್ನುವಂತೆ ಕಾಣುವುದನ್ನೂ ಅಗಸ್ಟೀ ರಾಂಡಿ ಗಮನಿಸಿದ್ದರು. ಇವರೇ ಮುಂದೆಯೂ ಕ್ಯೂ ಗಾರ್ಡನ್‌ ವಿಜ್ಞಾನಿಗಳ ಜೊತೆಗೂಡಿ ಇಡೀ ಸಸ್ಯದ ಕುತೂಹಲದ ವಿವರಣೆಯನ್ನು ನೀಡಲು ಮುಂದಾಳತ್ವ ವಹಿಸಿದ್ದರು.  

ಬೊರ್ನಿಯೊ ದ್ವೀಪವು ಜಗತ್ತಿನ ಅತ್ಯಂತ ಪ್ರಮುಖವಾದ ಸಸ್ಯ ಸಂಪತ್ತನ್ನು ಹೊಂದಿದ ಜೀವವೈವಿಧ್ಯದ ತಾಣ. ಅಡಕೆ ತೆಂಗು ತಾಳೆಗಳ ಅರೆಕೇಸಿಯೇ ಕುಟುಂಬದ ಸುಮಾರು 300 ಪ್ರಭೇದಗಳನ್ನು ಈ ದ್ವೀಪ ಒಂದೇ ಹೊಂದಿದ್ದು, ಪಾಮ್‌ (Palm)ಗಳ ವಿವಿಧತೆಯ ಸ್ಥಳವೂ ಹೌದು.  ತಂಡದ ಅಗಸ್ಟೀ ರಾಂಡಿ (Agusti Randi) ಮೊಟ್ಟ ಮೊದಲು ಹೊಸ ಸಸ್ಯವನ್ನು ಪಿನಂಗ ಸಂಕುಲದ ಎಲ್ಲಾ ಪ್ರಭೇದಗಳ ಜೊತೆ ಸಮೀಕರಿಸಿ ನೋಡಿ ವಿವರಿಸುವಂತಹಾ ಅಗಾಧವಾದ ಕೆಲಸಕ್ಕೆ ಮುಂದಾದರು. ಅದರಲ್ಲಿ ಸಫಲರಾಗಲು ಇಂಡೊನೇಶಿಯಾ ಅಲ್ಲದೆ, ಮಲೇಶಿಯಾ ಹಾಗೂ ಇಂಗ್ಲಂಡಿನ ಕ್ಯೂ ಗಾರ್ಡನ್‌ ಮುಂತಾದ ಸಂಸ್ಥೆಯ ಸಹಕಾರವನ್ನು ಪಡೆದರು. ಆದರೆ ಅವರಿಗೆ ಇದ್ದ ಅತೀ ದೊಡ್ಡ ಸವಾಲೆಂದರೆ ನೆತ್ತಿಯ ಮೇಲೆ ಹೊತ್ತಿರುವ ತೆಂಗು ತಾಳೆಗಳ ಜೊತೆ ಭೂಗತವಾಗಿ ಹೂವು ಹಣ್ಣುಗಳನ್ನು ಮರೆಮಾಡಿದ ವಿಚಿತ್ರವನ್ನು ವಿವರಿಸಿ ಅದೇ ಸಂಕುಲಕ್ಕೆ ಸೇರಿಸುವ ಹೊಣೆಗಾರಿಕೆ. ವರ್ಷಾನುಗಟ್ಟಲೆ ನಿರಂತರವಾದ ಸಂಶೋಧನೆಯು ಕಡೆಗೂ ಕುತೂಹಲದ ಹಾಗೂ ಮಹತ್ವದ ಸಂಗತಿಗಳನ್ನು ತೆರೆದಿಟ್ಟವು.

ಏನಿದು ಈ ಬಗೆಯ ವಿಕಾಸ ಹಿನ್ನೆಲೆ?

ಪಾಮ್‌ ಜಾತಿಯಲ್ಲಿ ಇದೊಂದು ವಿಚಿತ್ರವಾದ ಸಸ್ಯ. ಇಡೀ ಸಸ್ಯ ಸಂಕುಲಗಳಲ್ಲಿ ಕೇವಲ ಸಣ್ಣ ಸಂಖ್ಯೆಯ ಪ್ರಭೇದಗಳು ಮಾತ್ರವೇ ನೆಲದೊಳಗೆ ಹೂವು ಅಥವಾ ಹಣ್ಣುಗಳನ್ನು ಬಿಡುತ್ತವೆ. ಅವೆಲ್ಲವೂ ಹೂವನ್ನೋ ಅಥವಾ ಹಣ್ಣನ್ನೋ ಮಾತ್ರವೇ ಹಾಗೆ ಭೂಗತವಾಗಿ ಬಿಡುತ್ತವೆ. ಆದರೆ ಈ ಪಿನಂಗ ಸಬ್‌ಟೆರೆನಿಯಾ (Pinanga subterranea) ಮಾತ್ರ ನಿಜಕ್ಕೂ ವಿಚಿತ್ರ! ಹೂವೂ ಹಾಗೂ ಹಣ್ಣು ಎರಡನ್ನೂ ಭೂಗತವಾಗಿಸಿದೆ. ಎಲ್ಲೋ ಒಂದೆರಡು ಭೂಗತ ಆರ್ಕಿಡ್‌ಗಳು (Orchid Genus Rhizanthella) ಹಾಗೇ ಬಿಡುವುದುಂಟು. ಅವು ಇಡೀ ಗಿಡಗಳೇ ಭೂಗತ ಎನ್ನುವುದೂ ಹೌದು. ಆದರೆ ಇದರಲ್ಲಿ ಅದ್ಭುತವಾದ ಕೌತುಕವು ಇಡೀ ತಂಡವನ್ನು ವರ್ಷಗಟ್ಟಲೇ ಕಾಡಿತ್ತು.

ಸಂಶೋಧನಾ ತಂಡವು ಇಡೀ ದ್ವೀಪದ ಎಲ್ಲಾ ಪಾಮ್‌ಗಳ ಜೊತೆಯೂ ಸಮೀಕರಿಸಿ ಒಂದು ಮಹತ್ವದ ನಿರ್ಧಾರಕ್ಕೆ ಬರುವಲ್ಲಿ ಸಫಲರಾದರು.  ಅಗಸ್ಟೀ ರಾಂಡಿ ಪಿನಂಗ ಸಂಕುಲದ ಎಕ್ಸ್‌ಪರ್ಟ್‌! ಅವರೇ ಇದನ್ನು ಕ್ಯೂ ಗಾರ್ಡನ್ನಿಗೂ ಕೊಂಡೊಯ್ದು ಅಲ್ಲಿನ ಸಂಶೋಧಕರ ಜೊತೆ ಕೈಜೋಡಿಸಲು ಸಹಕಾರಿಯಾದರು. ಜಗತ್ತಿನ ಬಹು ಪಾಲು ಸಸ್ಯ ವಿಜ್ಞಾನಿಗಳು ನೆಲದ ಮೇಲಿನ ಹೂವು-ಹಣ್ಣುಗಳ ಕುರಿತು ಕುತೂಹಲ ಹಾಗೂ ಆಸಕ್ತಿಯನ್ನು ಹೊಂದಿರುವುದೂ ಸಹಜವೇ ಹೌದು. ಸಿಹಿಯಾದ, ಜ್ಯೂಸಿಯಾದ ತುಸು ದಪ್ಪನಾದ ತಿರುಳನ್ನು ಹೊಂದಿರುವ  ದೊಡ್ಡ ಅಡಿಕೆ ಗಾತ್ರದ ಭೂಗತವಾದ ಹಣ್ಣುಗಳು ಕಾಡುಹಂದಿಗಳು ಹಾಗೂ ದಟ್ಟ ಕಾಡಿನ ಸ್ಥಳೀಯರನ್ನು ಬಿಟ್ಟರೆ ಹೊರ ಜಗತ್ತಿಗೆ ತಿಳಿಯುದಾರೂ ಹೇಗೇ?

ಪಿನಂಗ (Pinanga) ಸಂಕುಲವು ಹಿಮಾಲಯದಿಂದ ನ್ಯೂ ಗಿನಿಯಾದವರೆಗೂ ಹರಹನ್ನು ಹೊಂದಿದ್ದು ಸುಮಾರು 140 ಪ್ರಭೇದಗಳನ್ನು ಹೊಂದಿದೆ. ಅವುಗಳಲ್ಲಿ ಸುಮಾರು 100 ಪ್ರಭೇದಗಳು ಆಗ್ನೇಯ ಏಶಿಯಾ (Southeast Asia) ದಲ್ಲಿದ್ದು, ಸುಮಾರು 40 ಪ್ರಭೇದಗಳು ಕೇವಲ ಬೊರ್ನಿಯೊ ದ್ವೀಪ ಒಂದರಲ್ಲೇ ಇವೆ. ಹಾಗಾಗಿ ಬೊರ್ನೊಯೊ ಈ ಸಂಕುಲದ ಮಹತ್ವದ ವಿವಿಧತೆಗಳ ಕೇಂದ್ರವೂ ಹೌದು. ಪಿನಂಗ ಸಂಕುಲದಲ್ಲಿ ಸುಮಾರು ಕೆಲವು ಪ್ರಭೇದಗಳು ಕಾಂಡವೇ ಇಲ್ಲವೆನ್ನುವಷ್ಟು ಆಕಾರವನ್ನು ಹೊಂದಿವೆ. ಹೆಚ್ಚೂ ಕಡಿಮೆ ನೆಲದಿಂದಲೇ ಎಲೆಗಳು ಎದ್ದು ಬಂದ ಹಾಗೆ! ಅಂತಹವನ್ನು ಅಕ್ಯುಲೆಸೆಂಟ್‌ (Acaulescent) ಅಂದರೆ ಕಾಂಡರಹಿತವಾದ ಸಸ್ಯಗಳೆಂದು ಕರೆಯುತ್ತಾರೆ.  ಪಿನಂಗ ಸಬ್‌ಟೆರೆನಿಯ ಅಲ್ಲದೆ ಕನಿಷ್ಠ ನಾಲ್ಕು ಪ್ರಭೇದಗಳು ಈ ಬಗೆಯ ಕಾಂಡವಿಲ್ಲದ ಅಕ್ಯುಲೆಸೆಂಟ್‌ (Acaulescent) ಸಸ್ಯಗಳು. ಆದರೆ ಇವುಗಳಲ್ಲಿ ಹೂವು ಹಣ್ಣುಗಳು ನೆಲದ ಸಮೀಪದಲ್ಲಿ ಆದರೆ ನೆಲದ ಮೇಲೆಯೇ ಬಿಡುತ್ತವೆ.

ಪ್ರಸ್ತುತ ಅಚ್ಚರಿ ಮೂಡಿಸಿದ ಪಿನಂಗ ಸಬ್‌ಟೆರೆನಿಯಾ (Pinanga subterranea) ಪ್ರಭೇದವೂ ಕೂಡ ಅಕ್ಯುಲೆಸೆಂಟ್‌ (Acaulescent) ಸಸ್ಯವೇ! ಇದಕ್ಕೂ ಕಾಂಡವಿಲ್ಲ. ಆದರೆ ಅಷ್ಟೇ ಅಲ್ಲದೆ ಹೂವು ಹಣ್ಣುಗಳೆರಡೂ ಭೂಗತವಾದವು. ಹಾಗಾಗಿ ಫಲವಂತವಾದ ಗಿಡಗಳೂ ಸಹಾ ಬಲಿತ ಗಿಡಗಳೆಂದು ಗುರುತಿಸಲು ಆಗುವುದಿಲ್ಲ. ಬದಲಾಗಿ ಇನ್ನೂ ಎತ್ತರವಾಗ ಬೇಕಿರುವ ಯಾವುದೋ ಮರದ ಎಳೆಯ ಸಸ್ಯಗಳೆಂದು ತಪ್ಪಾಗಿ ಭಾವಿಸಲಾಗುತ್ತದೆ. ಅದೂ ಅಲ್ಲದೆ ಇದರಲ್ಲಿ ಕಾಂಡವು ಒಂದು ರೀತಿಯಲ್ಲಿ ಸಕ್ಸಾಪೊನ್‌  ಮಾದರಿಯಲ್ಲಿ ಮೊದಲು ಕೆಳಗಿಳಿದು ನಂತರ ಮೇಲೆ ಬಂದ ಹಾಗೆ ಬೆಳೆಯುತ್ತವೆ. ಇದನ್ನು ಸಕ್ಸಾಪೊನ್‌ ಬೆಳವಣಿಗೆ ಎಂದೇ ಹೆಸರಿಸಲಾಗಿದೆ. ಇವುಗಳ ಕಾಂಡದಲ್ಲಿ “ಗೆಣ್ಣು” ಅಥವಾ ಇಂಟರ್‌ನೋಡ್‌ (Internode)” ಗಳು ಸಂಕುಚಿತಗೊಂಡು ಹೊರಚಾಚುವುದೇ ಇಲ್ಲ. ಎರಡನೆಯದಾಗಿ ಇದರ ಎಲೆಗಳು ಮತ್ತು ಎಲೆತೊಟ್ಟುಗಳು ಒಂದಾಗಿ ಆಲಿಕೆಯಂತೆ ಬುಡದಲ್ಲಿ ಜೋಡಿಸಿಕೊಂಡಿರುವುದರಿಂದ ಬುಡದಲ್ಲಿ ಸಾಕಷ್ಟು ಸಾವಯವ ವಸ್ತುವನ್ನು ತುಂಬಿಕೊಂಡಿರುತ್ತವೆ. ಇದರಿಂದಾಗಿ ಫಲವಂತ ಬಲಿತ ಗಿಡವೂ ಸಹಾ ಕಾಂಡವನ್ನು ನೆಲಕ್ಕೆ -ನೆಲದೊಳಗೇ ಇರಿಸಿಕೊಂಡ ಹಾಗೆಯೇ ಉಳಿಯುತ್ತದೆ. ವಿಕಾಸದ ಈ ವೈಚಿತ್ರ್ಯ ಕೌತುಕವೇ ಸರಿ!

ಅದೇನೋ ಸರಿ, ಮತ್ತಿದರ ಜೈವಿಕ ಚಕ್ರ ಹೇಗೆ? ಹೂವುಗಳು ಫಲವಂತವಾಗಲು ಪರಾಗಸ್ಪರ್ಶವಾಗಬೇಕು. ಗಿಡಗಳು ನಿಸರ್ಗದಲ್ಲಿ ಪಸರಿಸಲು ಬೀಜ ಪ್ರಸಾರವಾಗಬೇಕು. ಇವುಗಳು ಇರುವುದರಿಂದಲೇ ನಿಸರ್ಗದಲ್ಲಿ ಇದು ಈವರೆಗೂ ಬದುಕಿ ಉಳಿದಿದೆ. ಅದಕ್ಕೆ ಬಹುಶಃ ನೆಲದೊಳಗಿನ ಜೀರುಂಡೆಗಳು (Beetles) ಮತ್ತಿತರ ಯಾವುದೇ ಕೀಟಗಳು ಈ ಕೆಲಸವನ್ನು ನಿರ್ವಹಿಸುತ್ತಿರುವ ಬಗ್ಗೆ ಸೂಕ್ಷ್ಮತೆಯಿಂದ ಅರಿಯಲಾಗಿದೆ. ಆದರೆ ಇನ್ನೂ ವ್ಯವಸ್ಥಿತ ಅಧ್ಯಯನಗಳು ನಡೆಯಬೇಕಿದೆ. ಸ್ವಕೀಯ ಪರಾಗಸ್ಪರ್ಶವನ್ನೂ ಅಲ್ಲಗಳೆಯುವಂತಿಲ್ಲ. ಕಾರಣ ಅನೇಕ ಪಾಮ್‌ ಜಾತಿಯ ಗಿಡಗಳಲ್ಲಿ ಸ್ವಕೀಯ ಪರಾಗಸ್ಪರ್ಶವು ನಡೆಯುತ್ತದೆ.  

ಬೀಜ ಪ್ರಸರಣಕ್ಕೆ ಅಗಸ್ಟೀ ರಾಂಡಿಯವರ ಸಂಶೋಧನಾ ವೀಕ್ಷಣೆಯಂತೆ ಕಾಡು ಹಂದಿಗಳು ಮತ್ತವುಗಳಂತಹ ಬಗೆದು ತಿನ್ನುವ ದಂಶಕಗಳು ಬೀಜ ಪ್ರಸಾರದಲ್ಲಿ ಬಾಗಿಯಾಗುರುವ ಸಾಧ್ಯತೆ ಇದೆ. ಅವರ ಅಧ್ಯಯನದಂತೆ ಕಾಡು ಹಂದಿಗಳ ಸಗಣಿಯ ಬೀಜಗಳು ಹೆಚ್ಚಿನ ಮೊಳೆಕೆಯಾಗುವ ದಕ್ಷತೆಯನ್ನು ಹೊಂದಿರುವುದು ಈ ಊಹೆಯನ್ನು ಸಾಬೀತು ಪಡಿಸಿವೆ.

ಸಸ್ಯ ವಿಜ್ಞಾನಿಗಳ ಜೊತೆ ನಿಸರ್ಗದ ಕಣ್ಣಾಮುಚ್ಚಾಲೆ

ಪಿನಂಗ ಸಬ್‌ಟೆರೆನಿಯ (Pinanga subterranea) ಬೊರ್ನಿಯೊದ ದಟ್ಟ ಕಾಡುಗಳಲ್ಲಿ ಸಾಕಷ್ಟು ಸಮೃದ್ಧವಾಗಿಯೇ ಹಬ್ಬಿಕೊಂಡಿದೆ. ಮಲೇಶಿಯಾ ಹಾಗೂ ಇಂಡೊನೇಶಿಯಾ ಭಾಗದ ಬೊರ್ನಿಯಾದಲ್ಲಂತೂ ಇದರ ಹರಹು ಸಾಕಷ್ಟಿದೆ. ಪಾಮ್‌ ಸಸ್ಯಗಳ ಅನೇಕ ಸಮೃದ್ಧವಾದ ಅಧ್ಯಯನಗಳ ವಿಜ್ಞಾನಿಗಳನ್ನೂ ಕಣ್ಣು ಮುಚ್ಚಾಲೆ ಆಡಿಸಿದ ನಿಸರ್ಗ ಇದರಲ್ಲಿ ಜಾಣ್ಮೆಯನ್ನು ಮೆರೆದಿದೆ. ನೆಲದ ಮೇಲಿನ ಎಲೆಗಳ ಛಾವಣೆಯು ಬುಡವನ್ನು ಸಾಕಷ್ಟು ಮರೆ ಮಾಡಿ, ಬಲಿತಾಗ ಅದರಲ್ಲಿ ಕಾಣಬಹುದಾದ ಸಣ್ಣ ಕೆಂಪು ಹಣ್ಣುಗಳನ್ನು ಭೂಗತವಾಗಿಸಿದೆ. ಆದರೆ ಇದೆಲ್ಲವೂ ಅಲ್ಲಿನ ಸ್ಥಳೀಯ ಜನಾಂಗಕ್ಕೆ ತಲೆ ತಲಾಂತರಗಳಿಂದ ತಿಳಿದೇ ಇತ್ತು. ಅವರಿಗೆ ಸಿಹಿಯಾದ ಜ್ಯೂಸಿ ಕೆಂಪು ಹಣ್ಣುಗಳ ಸವಿಯೂ ಗೊತ್ತಿತ್ತು. ಮಲೇಶಿಯ ಹಾಗೂ ಇಂಡೊನೇಶಿಯಾದ ಮಧ್ಯ ದ್ವೀಪದ ಸ್ಥಳೀಯ ಜನಾಂಗವು ಇದನ್ನು ಬಹಳ ಕಾಲದಿಂದಲೂ ತಿನ್ನುತ್ತಲೇ ಬಂದಿದೆ. ಬಾಗಿದಂತಹ ಹೂಗೊಂಚಲ ತುದಿಯು ಒಂದು ವೇಳೆ ಗೋಚರಿಸಿದರೂ ದಟ್ಟ ಕಂಬಣ್ಣದ ಹಣ್ಣುಗಳು ಕಾಣದೆ ಭೂಗತವಾದಂತೆ ಇರುತ್ತವೆ. ತಿನ್ನುವ ಬಗೆಯು ಒಂದು ರೀತಿಯಲ್ಲಿ ನೇರಳೆಯನ್ನು ಸವಿದಂತೆ ಮೇಲಿನ ತಿರುಳನ್ನು ಚೀಪುತ್ತಾ ಸವಿದು, ಒಳಗಿನ ಗಟ್ಟಿಯಾದ ಬೀಜವನ್ನು ಉಗಿದಂತೆ! ಇದೆಲ್ಲವು ಅಲ್ಲಿ ಬುಡಕಟ್ಟುಗಳಿಗೆ ಚೆನ್ನಾಗಿಯೇ ತಿಳಿದಿತ್ತು ಇದೀಗ ಸಸ್ಯ ವಿಜ್ಞಾನದ ಜಗತ್ತೂ ಅದರ ಸವಿಯ ಹಿಂದಿದ್ದು ಸದ್ಯಕ್ಕೆ ಮನಸ್ಸನ್ನಂತೂ ಮುದಗೊಳಿಸಿದೆ.  

ಪಿನಂಗ ಸಬ್‌ಟೆರೆನಿಯ (Pinanga subterranea) ಬೊರ್ನಿಯೊದಲ್ಲೀಗ ಸುಮಾರು 60,000 ಚದರ ಕಿಮೀ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಅಂದಾಜಿದೆ. ಅದರಲ್ಲಿ ರಕ್ಷಿತ ಅರಣ್ಯವೂ ಸೇರಿಕೊಂಡಿದ್ದು ಅದರ ಸಂರಕ್ಷಣೆಗೆ ಅವಕಾಶವನ್ನು ಕೊಟ್ಟಿದೆ. ಇದರ ಜೊತೆಗೇ ಅದರ ಕೃಷಿಯ ಬಗೆಗೂ ಆಲೋಚನೆಗಳು ಸೇರಿದ್ದು, ವನ್ಯದಾಚೆಗೂ ಸಂರಕ್ಷಣೆಯ ಪ್ರಯತ್ನಗಳೂ ನಡೆದಿವೆ. ಅಗಸ್ಟೀ ರಾಂಡಿ ಅವರೇ ಮುಂದಾಳತ್ವವನ್ನೂ ಹೊಂದಿದ್ದಾರೆ.

ಅದೇನಿದು “ತಾಳೆಯ ಮರದಂತೆ ಎತ್ತರವಾದ” ಎನ್ನುವ ಮಾತಿನ ಜೊತೆ ಇನ್ನು ಮುಂದೆ “ತಾಳೆಯ ಜಾತಿಯು ನೆಲದೊಳಗೂ ತಾಳಿ”ಕೊಂಡಿರುವ ಬಗೆಗೂ ಸಸ್ಯವಿಜ್ಞಾನವು ಸೋಜಿಗವನ್ನೂ ಹಂಚಲಿದೆ. ಪಿನಂಗ ಸಬ್‌ಟೆರೆನಿಯ (Pinanga subterranea) ಅದರ ಸಾಬೀತಿಗೆ ಕಾಂಡವನ್ನು ನೆಲದೊಳಕ್ಕೂ ಇಳಿಸಿ ಜೀವಪರವಾಗಿಸಿದೆ.

ನಮಸ್ಕಾರ

ಡಾ. ಟಿ. ಎಸ್.‌ ಚನ್ನೇಶ್.  

ಹೆಚ್ಚಿನ ಓದಿಗೆ:

1. Benedikt G Kuhnhäuser,  Agusti RandiPeter PetoePaul P. K. ChaiSidonie BellotWilliam J. Baker 2023.  Hiding in plain sight: The underground palm Pinanga subterranean    Plants People Planet. 2023;1–6. https://doi.org/10.1002/ppp3.10393

2. Agusti Randi, Peter Petoe, Benedikt  G. Kuhnhäuser, Paul P.K. Chai, Sidone Bellot and William j. Baker  Pinanga subterranea, a New Arecoid Palm from Borneo that Flowers Underground.  Palms, Vol. 67(2) 2023

https://kew.iro.bl.uk/concern/articles/de820e60-4c53-44d8-921e-d95f554181d7

This Post Has One Comment

  1. ಶ್ರೀವತ್ಸ ಚಕ್ಕೋಡಬೈಲು

    ಪ್ರಕೃತಿಯ ವೈಚಿತ್ರ್ಯಗಳು ಅಗೆದಷ್ಟೂ ಆಳ ಮೊಗೆದಷ್ಟೂ ವಿಸ್ತಾರ !!!

Leave a Reply