ಶತಾಯುಷಿ ಜಾನ್ ಗುಡ್‌ಎನಫ್ ಅವರಿಗೆ 100ನೆಯ ಜನ್ಮ ದಿನದ ಶುಭಾಶಯಗಳು
ಈಗ ನಿಮ್ಮಲ್ಲಿ ಅನೇಕರು, ಈ ಪ್ರಬಂಧವನ್ನು ನಿಮ್ಮ ಮೊಬೈಲಿನಲ್ಲೋ, ಕಂಪ್ಯೂಟರಿನಲ್ಲೋ ಓದುತ್ತಿರುತ್ತೀರಿ! ಯಾವುದೇ ಆದರೂ ಅದಕ್ಕೆ ಶಕ್ತಿ ಒದಗಿಸುತ್ತಿರುವ ಬ್ಯಾಟರಿಯ ಹಿಂದೆ ಇವತ್ತಿಗೆ ನೂರು ತುಂಬಿದ ತಾತ ಒಬ್ಬರಿದ್ದಾರೆ, ಅವರು ಇಂದಿಗೂ ಕ್ರಿಯಾಶೀಲರಾಗಿ ಪ್ರಯೋಗಾಲಯದಲ್ಲಿ ಸಂಶೋಧನೆಯಲ್ಲಿ ತೊಡಗಿರುತ್ತಾರೆ ಎಂದರೆ ಅಚ್ಚರಿ ಆಗದೆ ಇರದು! ತಮ್ಮ ವಿಶಿಷ್ಟ ಆಲೋಚನೆಗಳ ಮೂಲಕ ಎಲ್ಲರ ಕೈಯಲ್ಲಿರನ ಮೊಬೈಲು ಮಾತ್ರವಲ್ಲ, ಕಂಪ್ಯೂಟರ್, ಅಷ್ಟೇಕೆ ಬ್ಯಾಟರಿಯಿಂದ ನಡೆಯುವ ಕಾರುಗಳು, ಅದು ಬಿಡಿ ಸ್ಯಾಟಿಲೈಟುಗಳಲ್ಲಿನ ಬ್ಯಾಟರಿಗಳೂ ಸಹಾ ಅವರ ಅನ್ವೇಷಣೆಯಿಂದಲೇ ಕಾರ್ಯ ನಿರ್ವಹಿಸುತ್ತಿವೆ. ಇವತ್ತಿನ ಮಟ್ಟಿಗೆ ಹೆಚ್ಚೂ ಕಡಿಮೆ ಇಡೀ ಜಗತ್ತನ್ನು ನಿರ್ವಹಿಸುವ ಮೊಬೈಲಿನ ಅಂತಃಶಕ್ತಿ ಕೊಟ್ಟ ಆ ವಿಜ್ಞಾನಿ ಜಾನ್ ಗುಡ್‌ಎನಫ್ ಅವರಿಗೆ ಇಂದು ಶತಕಗಳು ತುಂಬಿವೆ.
ಜಾನ್ ಗುಡ್‌ಎನಫ್ ಅವರು ಜುಲೈ 25, 1922ರಂದು ಜನಿಸಿದವರು. ಒಂದು ನೂರು ವರ್ಷಗಳ ಕ್ರಿಯಾಶೀಲ ಜೀವನದ ಹಿಂದಿರುವ ವಿಶಿಷ್ಟತೆಯನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬ ವ್ಯಕ್ತಿಯ ಅವರಿಗೆ ಕೊಡುವ ಗೌರವವಾಗಿದೆ. ಅಷ್ಟರ ಮಟ್ಟಿಗೆ ಅವರ ಶೋಧವು ಪ್ರತೀ ನಾಗರಿಕನನ್ನೂ ಪ್ರಭಾವಿಸಿದೆ. ಫ್ರಾನ್ಸ್ ದೇಶದ ಬೊರ್ಡೊ (Bordeaux) ನಗರದಲ್ಲಿ ಸೆಪ್ಟೆಂಬರ್, 1964ರಲ್ಲಿ ವಿಜ್ಞಾನಿಗಳ ಸಮಾವೇಶಯೊಂದರಲ್ಲಿ ಮೊಟ್ಟ ಮೊದಲ ಬಾರಿಗೆ ಜಾನ್ ಅವರು ವೆನಡಿಯಮ್ ಆಕ್ಸೈಡ್ (VO2) ನಲ್ಲಿ ಲೋಹದಿಂದ ಅಲೋಹದ ಕಡೆಯ ಪರಿವರ್ತನೆ (Metal-to-nonmetal transition of Vanadium Oxide VO2) ಯ ಕುರಿತು ಪ್ರಸ್ತಾಪಿಸುತ್ತಾ ಮೊಟ್ಟ ಮೊದಲ ಬಾರಿಗೆ ಅಂತರ್ ಶಿಸ್ತೀಯ ಅಧ್ಯಯನಗಳ ಕಡೆಗೆ ವಿಜ್ಞಾನಿಗಳ ಗಮನ ಸೆಳೆದಿದ್ದರು.
ಮುಂದೆ ಅದುವೇ ಆಧುನಿಕ ಶಕ್ತಿ ಬಳಕೆಯಲ್ಲಿ ಕಂಡರಿಯದ ಕಾಣ್ಕೆಯಂತೆ ಲಿಥಿಯಂ ಬ್ಯಾಟರಿಗಳಲ್ಲಿ ಸೃಷ್ಟಿಯಾಗಿ ಮಾನವರನ್ನು ವಿಶಿಷ್ಟ ನಾಗರಿಕ ಸಮಾಜಕ್ಕೆ ಕೊಂಡ್ಯೊಯ್ದ ಈ ಅನ್ವೇಷಣೆಯು 2019ರಲ್ಲಿ ಪ್ರೊ. ಜಾನ್ ಗುಡ್‌ಎನಫ್ ಅವರಿಗೆ, ಬ್ರಿಟನ್ನಿನ ಪ್ರೊ. ಸ್ಟ್ಯಾನ್ಲಿ ವಿಟ್ಟಿಂಗ್‍ಹ್ಯಾಂ ಮತ್ತು ಜಪಾನಿನ ಪ್ರೊ. ಅಕಿರಾ ಯೊಶಿನೊ ಅವರ ಜೊತೆಯೊಡಗೂಡಿ ರಸಾಯನ ವಿಜ್ಞಾನದ ನೊಬೆಲ್ ಪುರಸ್ಕಾರಕ್ಕೆ ಪಾತ್ರರನ್ನಾಗಿಸಿತು. ಅವರ ಈ ವಿಶಿಷ್ಟ ಅನ್ವೇಷಣೆ ಮತ್ತು ಅವರ ಬಗೆಗೆ ವಿವರಿಸಲು ಅವರ ಬಗ್ಗೆ ಅವರೇ ಹೇಳಿಕೊಂಡಿರುವ ಆಕರ್ಷಕ ಮಾತುಗಳಿಂದ ಆರಂಭಿಸುವುದು ಯುಕ್ತವಾದುದು.
ನೊಬೆಲ್ ಪುರಸ್ಕಾರದ ಸಂದರ್ಭದಲ್ಲಿ ಅವರು ತಮ್ಮ ಬಗ್ಗೆ ಹೀಗೆ ವಿವರಿಸಿಕೊಂಡಿದ್ದಾರೆ.
“ಯುವಕರ ಆಸೆಯು ಸಾಮಾನ್ಯವಾಗಿ ಪ್ರಸಿದ್ಧಿ ಪಡೆಯುವುದು ಅಥವಾ ಗ್ಲಾಮರಸ್ ಆಗಿರುವುದು ಅಥವಾ ಶಕ್ತಿಶಾಲಿಯಾಗಬೇಕೆಂದೇ ಇರುತ್ತದೆ. ಹಾಗಂತ ಎಲ್ಲರೂ ಸ್ವಲ್ಪ ಸಮಯವಾದರೂ ಸಹಾ “ಪರ್ವತದ ರಾಜ” ಆಗಲು ಸಾಧ್ಯವಿಲ್ಲ ಎಂಬುದನ್ನು ನಾನು ಅರಿತುಕೊಂಡೆ. ಆದ್ದರಿಂದ, ರಾಜನಾದರೇನು., ಜೀವನಕ್ಕೆ ಏನು ಅರ್ಥವಿದೆ? ಜೀವನದ ನಿಜವಾದ ಅರ್ಥವು ಯಾವುದೋ ಕೋಟೆಯ ರಾಜನಾಗುವುದಲ್ಲ, ಬದಲಾಗಿ ನಾವು ಸಲ್ಲಿಸುವ ಸೇವೆಯ ಮಹತ್ವ ಮತ್ತು ಶಾಶ್ವತತೆಯಲ್ಲಿದೆ ಎಂದು ನಾನು ತಿಳಿಯಲು ಪ್ರಾರಂಭಿಸಿದೆ”. (A common temptation of youth is the desire to be famous or glamorous or powerful. I realized that not everyone can be “king of the mountain” even for a short time. Can being king, therefore, be what gives meaning to life? I began to understand that any meaning to a life is not to be king of a castle, but the significance and permanence of what we serve).
ತಮ್ಮ 98ನೆಯ ವಯೋಮಾನದಲ್ಲಿ ನೊಬೆಲ್ ಪುರಸ್ಕಾರಕ್ಕೆ ಒಳಗಾದಾಗ ನೊಬೆಲ್ ಪಡೆದವರಲ್ಲಿ ಅತ್ಯಂತ ಹಿರಿಯ ವಿಜ್ಞಾನಿಯಾಗಿದ್ದರು. ಇಂದಿಗೂ ನೊಬೆಲ್ ಪುರಸ್ಕೃತ ವಿಜ್ಞಾನಿಗಳಲ್ಲೇ ಅತ್ಯಂತ ಹಿರಿಯರು. 1940/50 ದಶಕದಿಂದ ಇಂದಿನವರೆಗೂ ನಿರಂತವಾದ ಅಧ್ಯಯನ, ಅಧ್ಯಾಪನ ಸಂಶೋಧನೆಗಳಲ್ಲಿ ನಿರತರಾಗಿರುವ ಅವರ ಜೀವನಾನುಭವ ಕೇವಲ ಹೆಸರು ಮಾಡುವುದಾಗಿರಲಿಲ್ಲ! ರಾಜನಾಗಿ ಮೆರೆಯುವುದೂ ಅಲ್ಲ, ಬದಲಿಗೆ ಬಹು ಜನರ ಸೇವೆಯ ಶಾಶ್ವತತೆಯಲ್ಲಿದೆ ಎಂಬುದರ ನಿಜವಾದ ಸಾಧ್ಯತೆಯನ್ನು ಬ್ಯಾಟರಿಯ ರೂಪಿಸುವುದರ ಮೂಲಕ ತೋರಿಸಿಕೊಟ್ಟಿದ್ದರು. ಘನ ರೂಪದ ವೈಜ್ಞಾನಿಕ (Solid State Science) ಅಧ್ಯಯನಕ್ಕೆ ಬಹಳ ಭದ್ರವಾದ ಅಡಿಗಲ್ಲನ್ನು ಹಾಕಿದ್ದಲ್ಲದೆ, ಅದರ ಬೆಳವಣಿಗೆಯಲ್ಲೂ ಒಬ್ಬರಾಗಿ ಪಾತ್ರವಹಿಸಿದರು.
ಯೇಲ್ ವಿಶ್ವವಿದ್ಯಾಲಯಕ್ಕೆ ತಮ್ಮ ಪದವಿ ಅಧ್ಯಯನಕ್ಕೆ ಸೇರಿದಾಗಲೇ ತಮ್ಮ ಪೋಷಕರಿಂದ ಏನನ್ನೂ ಪಡೆಯದಂತೆ ನಿರ್ಧರಿಸಿ ಮನೆಯಿಂದ ಹೊರ ಬಂದವರು. ಮುಂದೆ ಮಹಾ ಯುದ್ದದ ಸಮಯದಲ್ಲಿ ಸೈನ್ಯದಲ್ಲೂ ಸೇವೆ ಸಲ್ಲಿಸಿ ನಂತರವೇ ಸ್ನಾತಕೋತ್ತರ ಪದವಿಗೆ ಸೇರಿ, ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಭೌತವಿಜ್ಞಾನದಲ್ಲಿ ಮಾಸ್ಟರ್ ಪದವಿ ಹಾಗೂ ಡಾಕ್ಟೊರೇಟ್ ಪಡೆದರು. ನಂತರ ಮಸಾಚುಸೇಟ್ಸ್ ತಾಂತ್ರಿಕ ವಿದ್ಯಾಲಯದಲ್ಲಿ ಸಂಶೋಧಕರಾಗಿ, ಮುಂದೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಇನಾರ್ಗಾನಿಕ್ ರಸಾಯನ ವಿಭಾಗವನ್ನು ಸೇರಿದ್ದರು. ಕಡೆಗೆ 1986ರಲ್ಲಿ ಮತ್ತೆ ಅಮೆರಿಕೆಗೆ ವಾಪಸಾಗಿ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ನೆಲೆಯಾದರು. ಈಗಲೂ ಅಲ್ಲಿಯೇ ವೃತ್ತಿ ನಿರತರು. ಅವರದು ದಣಿವರಿಯದ ಉತ್ಸಾಹ. 97ರ ವಯೋಮಾನದಲ್ಲೂ ಗಾಲಿ ಕುರ್ಚಿಯಲ್ಲಿ ಕುಳಿತೇ ನೊಬೆಲ್ ಪ್ರಶಸ್ತಿ ಸಮಾರಂಭಕ್ಕೆ ಬಂದು ಸ್ವೀಕರಿಸಿದ್ದರು.
ಈಗಾಗಲೇ CPUS ಈ ಮಹಾ ಚೇತನದ ಬಗ್ಗೆ ಅವರಿಗೆ ನೊಬೆಲ್ ಬಂದಾಗಲೂ ಲೇಖನವನ್ನು ( ) ಪ್ರಕಟಿಸಿತ್ತು. ಜೊತೆಗೆ ಈ ನೊಬೆಲ್ ಪುರಸ್ಕೃತ ಲಿಥಿಯಂ ಬ್ಯಾಟರಿಯ ಬೆಳವಣಿಗೆ ಕುರಿತು ಒಂದು ಯೂಟ್ಯೂಬ್ ಡಾಕ್ಯುಮೆಂಟರಿಯನ್ನೂ (https://www.youtube.com/watch?v=n8dOGb0W04I ) ತನ್ನ ಚಾನೆಲ್ ಅಲ್ಲಿ ಹಂಚಿತ್ತು. ಇದರ ಒಟ್ಟಾರೆಯ ವಿವರಗಳ ಜೊತೆಗೆ ಒಂದಷ್ಟು ಹೊಸ ವಿಚಾರಗಳು ಅವರಿಗೆ ನೂರು ವಸಂತಗಳು ತುಂಬಿದ ನೆಪದಲ್ಲಿ ನಿಮ್ಮ ಓದಿಗೆ ಮತ್ತೀಗ..
ಲಿಥಿಯಮ್ ಬ್ಯಾಟರಿ ನಿಮ್ಮೆಲ್ಲರ ಕೈಯಲ್ಲಿ ಅಥವಾ ಜೇಬಿನಲ್ಲಿ ಇರುವ ಮೊಬೈಲುಗಳ ಒಳಗೂ ಇದೆ. ಅಷ್ಟೇ ಅಲ್ಲ ಇಂದು ಬ್ಯಾಟರಿ ಚಾಲಿತ ವಾಹನಗಳಲ್ಲೂ, ಜೊತೆಗೆ ಸೌರಶಕ್ತಿ ಅಥವಾ ಪವನಶಕ್ತಿಯನ್ನು ಸಂಗ್ರಹಿಸುವ ಬ್ಯಾಟರಿಯೂ ಸಹಾ! ಬ್ಯಾಟರಿಗಳ ಶೋಧ, ವಿಕಾಸ ಮತ್ತು ಅಭಿವೃದ್ಧಿಯು ನೂರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ವಿದ್ಯುತ್ ಕಂಡುಹಿಡಿದಾಗಿನಿಂದಲೂ ಬ್ಯಾಟರಿಗಳ ಶೋಧವೂ ಆರಂಭವಾಗಿದೆ. ಹಳೆಯ ದೊಡ್ಡ ದೊಡ್ಡ ಬ್ಯಾಟರಿಗಳು ಇಂದೂ ಬಳಕೆಯಾಗುತ್ತಿವೆ. ಒಟ್ಟಾರೆ ಬ್ಯಾಟರಿ ಎನ್ನುವುದು ಆನೋಡ್ ಮತ್ತು ಕ್ಯಾಥೋಡ್ ಗಳನ್ನು ಒಂದು ಎಲೆಕ್ಟ್ರೊಲೈಟ್ ಮೂಲಕ ಸಂಪರ್ಕ ಕಲ್ಪಸಿ ಎಲೆಕ್ಟ್ರಾನ್ ಅನ್ನು ಪ್ರವಹಿಸುವ ಸಾಧನ. ಹಾಗಾಗಿ ಇಂದೊಂದು ವಿದ್ಯುತ್ ರಸಾಯನಿಕ- “ಎಲೆಕ್ಟ್ರೋ ಕೆಮಿಕಲ್” ಸಾಧನ.
ಲಿಥಿಯಮ್ ಅತ್ಯಂತ ಹಗುರವಾದ ಲೋಹ. ಜೊತೆಗೆ ಸುಲಭವಾಗಿ ಎಲೆಕ್ಟ್ರಾನ್ ಅನ್ನು ಬಿಟ್ಟು ಕೊಡುವ ಮೂಲವಸ್ತು ಕೂಡ. ನಿಸರ್ಗದ ಇತಿಹಾಸದಲ್ಲಿ ಲಿಥಿಯಮ್ ಗೆ ಅತ್ಯಂತ ಪುರಾತನವಾದ ಸ್ಥಾನವೇ ಇದೆ. ಏಕೆಂದರೆ ಕೊಟ್ಯಾಂತರ ವರ್ಷಗಳ ಹಿಂದೆ ಸಂಭವಿಸಿದ “ಬಿಗ್ ಬ್ಯಾಂಗ್” ಅಥವಾ ಮಹಾಸ್ಪೋಟದಲ್ಲಿ ಹುಟ್ಟಿ ಬಂದ ಮೂಲ ಧಾತುಗಳಲ್ಲಿ ಇದೂ ಒಂದು. ಆದರೆ ಮಾನವ ಕುಲದ ತಿಳಿವಳಿಕೆಗೆ ಬಂದದ್ದು 1817ರಲ್ಲಿ. ಮೊಟ್ಟ ಮೊದಲ ಬಾರಿಗೆ ಸ್ವೀಡಿಶ್ ರಸಾಯನವಿಜ್ಞಾನಿಗಳಾದ ಅಗಸ್ಟ್ ಆರ್ಫ್ ವೆಡ್ಸನ್ ಮತ್ತು ಜೆಕೊಬ್ ಬರ್ಜೆಲಿಯಸ್ ಅವರು ಖನಿಜದಿಂದ ಬೇರ್ಪಡಿಸಿ ಪಡೆದಿದ್ದರು. ಆಗ ಬರ್ಜೆಲಿಯಸ್ ಅವರು ಖನಿಜದಿಂದ ಪಡೆದ ಕಾರಣಕ್ಕೋ ಏನೋ “ಕಲ್ಲು” ಎಂಬ ಭಾರವಾದ ಅರ್ಥದ “ಲಿಥೊಸ್” ಎಂಬ ಗ್ರೀಕ್ ಪದದಿಂದ ಹೆಸರಿಸಿದ್ದರು. ಆದರೆ ನಿಜಕ್ಕೂ ಹಗುರವಾದ ವಸ್ತು.
ಅದೆಷ್ಟು ಹಗುರ ಎಂದರೆ ಕಳೆದ ಎರಡು ಮೂರು ದಶಕಗಳಿಂದ ಬ್ಯಾಟರಿಗಳ ಗಾತ್ರ ಚಿಕ್ಕದಾಗುತ್ತಾ ಬರುತ್ತಿರುವುದು ಇದರಿಂದಾಗಿಯೇ! ಹಾಗಾಗಿ ಜೇಬಿನಲ್ಲಿ ಇರುವ ಮೊಬೈಲಿನ ಭಾರವೇ ತಿಳಿಯುವುದಿಲ್ಲ. ಸಾಂಪ್ರದಾಯಿಕ ಹಳೆಯ ಬ್ಯಾಟರಿಗಳನ್ನು ಇದಕ್ಕೆ ಸಮೀಕರಿಸಿಕೊಂಡರೆ ಹೀಗೆಲ್ಲಾ ಎಲ್ಲೆಂದರಲ್ಲಿ ಜೇಬಲ್ಲಿ, ಕೈಚೀಲದಲ್ಲಿ ಇಟ್ಟು ಕೊಂಡೊಯ್ಯಲು ಸಾಧ್ಯವೇ ಇರಲಿಲ್ಲ. ಅದಕ್ಕಿಂತಲೂ ಮತ್ತೆ, ಮತ್ತೆ ಚಾರ್ಜ್ ಮಾಡಿ ಬಳಸಬಲ್ಲ ಸುಲಭವಾದ ಸಾಧನ ಕೂಡ.
ಆಸಿಡ್ ಗಳನ್ನು ಹೊಂದಿರುವ ಹಳೆಯ ಆಸಿಡ್ ಬ್ಯಾಟರಿಗಳು ಮತ್ತು ಅಲ್ಕಲಾಯ್ಡ್ ಬ್ಯಾಟರಿಗಳು ಗಾತ್ರದಲ್ಲಿ ದೊಡ್ಡವು ಮಾತ್ರವಲ್ಲ, ಹೆಚ್ಚು ಸಮರ್ಥವಲ್ಲದವು. ಜೊತೆಗೆ ಎಲ್ಲೆಂದರಲ್ಲಿಗೆ ತೆಗೆದುಕೊಂಡು ಹೋಗಲು ಕಷ್ಟ. ಅದೂ ಸಾಲದೆಂಬಂತೆ 1960ರ ದಶಕದಲ್ಲಿ ಉಂಟಾದ ಪೆಟ್ರೋಲಿಯಂ ತೈಲದ ಕೊರತೆಯಿಂದಾಗಿ ಜೊತೆಗೆ ಪುನರುತ್ಪಾದಿಸುವ ಶಕ್ತಿ ಮೂಲಗಳ ಹುಡುಕಿ ಶಕ್ತಿಯನ್ನು ಸಂಗ್ರಹಿಸಲು, ಹೊಸ ಮಾದರಿಯ ಉಪಕರಣಗಳು ಬೇಕಾಗಿತ್ತು. ಅದರ ಮೂಲ ಶೋಧವನ್ನು ಸ್ವತಂತ್ರವಾದ ಹಾಗೂ ಮುಕ್ತವಾದ ವಾತಾವರಣದಲ್ಲಿ ಮಾಡುವಂತೆ ಸಹಕರಿಸಿ ಅನೂಕೂಲಗಳನ್ನು ನೀಡುವುದಾಗಿ Exxon ಎನ್ನುವ ಎನರ್ಜಿ ಕಂಪನಿಯ ವಿಜ್ಞಾನಿಗಳಿಗೆ ಕರೆಯಿತ್ತಿತು. ಅದರಂತೆ ಸ್ಟ್ಯಾನ್ ಫೊರ್ಡ್ ವಿಶ್ವವಿದ್ಯಾಲಯದಲ್ಲಿದ್ದ ಪ್ರೊ. ಸ್ಟ್ಯಾನ್ಲಿ ವಿಟ್ಟಿಂಗ್‍ಹ್ಯಾಂ ಅವರು ವಿಶ್ವವಿದ್ಯಾಲಯವನ್ನು ತೊರೆದು ಆ ಕಂಪನಿಯನ್ನು ಸೇರಿ ಸಂಶೋಧನೆಯನ್ನು ಆರಂಭಿಸಿದರು. ಆಗ ಅವರು ಅನುಶೋಧಿಸಿದ ಬ್ಯಾಟರಿಯು ನವೀನ ಬಗೆಯದಾಗಿತ್ತು. ಜೊತೆಗೆ ತುಂಬಾ ಶಕ್ತಿಯ ಸಾಮರ್ಥ್ಯವನ್ನೂ ಹೊಂದಿತ್ತು. ಸ್ಟ್ಯಾನ್ಲಿಯವರು ವಿವಿಧ ಧಾತುಗಳ ಶಕ್ತಿ ಸಾಮರ್ಥ್ಯವನ್ನು ಪರೀಕ್ಷಿಸುವಾಗ ಅನಿರೀಕ್ಷಿತವಾಗಿ ಪೊಟ್ಯಾಸಿಯಂ ಮತ್ತು ಟೆಂಟಾಲಮ್ ಡೈಸಲ್ಫೆಟ್ ನಡುವಣ ವಿಶೇಷತೆಯೊಂದು ತಿಳಿದಿತ್ತು. ಅದರ ವಿಶೇಷ ಶೋಧವೆಂದರೆ ಪರಮಾಣುಗಳ ನಡುವೆ ಇರುವ ಸ್ಥಳದಲ್ಲಿ ಅಯಾನುಗಳನ್ನು ಹರಿದಾಡಿಸಿ ಶಕ್ತಿಯನ್ನು ವರ್ಗಾಯಿಸಲು ಸಾಧ್ಯವಾಗುವುದಾದರೆ ಶಕ್ತಿಯ ವಿಶೇಷ ಪ್ರವಹಿಸುವಿಕೆ ಸಾಧ್ಯ ಎಂಬ ತಿಳಿವಳಿಕೆಯಾಗಿತ್ತು. ಇದನ್ನು “ಇಂಟರ್ ಕ್ಯಾಲೇಶನ್” (Intercalation) -ಅಂದರೆ ಒಂದರೊಳಗೊಂದರಂತೆ ಅಧಿಕಗೊಳಿಸುವಿಕೆ- ಎಂದು ಕರೆಯುತ್ತಾರೆ. ಇದೇ ಬ್ಯಾಟರಿಗಳ ಆವಿಷ್ಕಾರದಲ್ಲಿ ಬಹಳ ದೊಡ್ಡ ಬದಲಾವಣೆಯನ್ನೇ ಮುಂದಿನ ಒಂದೂವರೆ ದಶಕದಲ್ಲಿ ಸಾಧ್ಯವಾಗಿಸಿತು.
ಸ್ಟ್ಯಾನ್ಲಿಯವರು ತಮ್ಮ ಬ್ಯಾಟರಿಯಲ್ಲಿ ಟೈಟಾನಿಯಂ ಸಲ್ಫೈಡ್ ಜೊತೆಗೆ ಲಿಥಿಯಂ ಅಯಾನುಗಳ ಕ್ಯಾಥೊಡ್ ನಲ್ಲಿ ಬಳಸಿ ಇದನ್ನು ಅಭಿವೃದ್ಧಿ ಪಡಿಸಿ 2 ವೊಲ್ಟ್ ಬ್ಯಾಟರಿಯನ್ನು 1970ರಲ್ಲಿ ತಯಾರಿಸಿದರು. ಪ್ರೊ. ಸ್ಟ್ಯಾನ್ಲಿ ವಿಟ್ಟಿಂಗ್‍ಹ್ಯಾಂ, ಅವರು ಮೂಲತಃ ಬ್ರಿಟನ್ನಿನ ರಸಾಯನ ವಿಜ್ಞಾನಿ. ಸದ್ಯಕ್ಕೆ ಅವರು ಬಿಂಗ್‍ಹಾಂಟನ್ ವಿಶ್ವ ವಿದ್ಯಾಲಯದಲ್ಲಿ ರಸಾಯನ ವಿಜ್ಞಾನದ ಪ್ರಾಧ್ಯಾಪಕರಾಗಿದ್ದಾರೆ.
ಇದರಲ್ಲಿಯೂ ಒಂದು ತೊಂದರೆಯಿತ್ತು. ಅದೆಂದರೆ ಲಿಥಿಯಮ್ ಎಲೆಕ್ಟ್ರಾನ್ ಅನ್ನು ಸುಲಭವಾಗಿ ಬಿಟ್ಟುಕೊಡುವುದು! ಆದ್ದರಿಂದ ಅಲ್ಲಿ ಬೆಂಕಿ ಹತ್ತಿಕೊಳ್ಳುವುದು. ಆಗ ಅದನ್ನು ನಿವಾರಿಸುವಂತೆ ಸಾಧ್ಯವಾಗಿದ್ದು. ತೀವ್ರ ಸೂಕ್ಷ್ಮ ಮನಸ್ಸಿನಿಂದ ವಿಜ್ಞಾನದ ಸಂಶೋಧನೆಗೆ ಬಂದಿದ್ದ ಪ್ರೊ. ಜಾನ್ ಗುಡ್‍ಎನಫ್ ಇವರ ಸಾಧನೆ. ಅದೇನೆಂದರೆ ಟೈಟಾನಿಯಂ ಸಲ್ಫೈಡ್ ಜಾಗದಲ್ಲಿ ಕೊಬಾಲ್ಟ್ ಆಕ್ಸೈಡನ್ನು ತಂದಿದ್ದು ಮಾತ್ರವಲ್ಲದೆ, ಆಕ್ಸೈಡ್ ಆದ್ದರಿಂದ ಇನ್ನೂ ಶಕ್ತಿಯು ಹೆಚ್ಚಾಗಿ ಎರಡು ಪಟ್ಟು ಉತ್ಪಾದನೆಗೆ ಸಾಧ್ಯವಾಯಿತು. ಇದರ ವಿವರಗಳು ತುಂಬಾ ಸ್ಥಳವನ್ನು ಬಯಸುತ್ತವೆ. ಕಾರಣ ಗುಡ್ ಎನಫ್ ಪಾತ್ರವೇ ಅಷ್ಟು ಅಮೂಲ್ಯವಾಗಿತ್ತು ಮತ್ತು ವಿಶೇಷವಾಗಿತ್ತು. ಹಾಗಾಗಿ 4 ವೊಲ್ಟ್ ಬ್ಯಾಟರಿಯನ್ನು 1980ರ ವೇಳೆಗೆ ಗುಡ್ ಎನಫ್ ಅಭಿವೃದ್ಧಿ ಪಡಿಸಿದರು.
ಇದರಲ್ಲೂ ಕೆಲವೊಂದು ನ್ಯೂನ್ಯತೆಗಳು ಇದ್ದವು. ಆದರೆ ಅಮೆರಿಕದ ಪರಿಸ್ಥಿತಿಯು ತೈಲ ಮೂಲದಲ್ಲಿ ಸುಧಾರಿಸಿ ಸಂಶೋಧನೆಗೆ ನೆರವು ಸಿಗುವಂತಿರಲಿಲ್ಲ. ಅದೇ ವೇಳೆಗೆ ಗುಡ್ ಎನಫ್ ಮಾದರಿಯನ್ನು ಮುಂದುವರೆಸಿದ್ದು ಜಪಾನಿನ ಅಕಿರಾ ಯೊಶಿನೊ ಅವರು. ಅವರು ಕೊಬಾಲ್ಟ್ ಜೊತೆಗೆ ಪೆಟ್ರೊಲಿಯಂ ಕೋಕ್ ನಿಂದ ಪಡೆದ ಇಂಗಾಲದ ವಸ್ತುವನ್ನು ಆನೊಡ್ ಅಲ್ಲಿ ಬಳಸಿ ಅದೇ ಸಾಮರ್ಥ್ಯವನ್ನೂ ಉಳಿಸಿಕೊಂಡು ಲಿಥಿಯಮ್ ನಿಂದಾಗುವ ಎಲ್ಲಾ ತೊಂದರೆಗಳನ್ನೂ ಸುಧಾರಿಸಿ ಈಗ ಮಾರುಕಟ್ಟೆಯಲ್ಲಿ ಇರುವ ಮಾದರಿಗಳನ್ನು 1985ರ ವೇಳೆಗೆ ಅಭಿವೃದ್ಧಿ ಪಡಿಸಿದರು.
ಪ್ರೊ. ಅಕಿರಾ ಯೊಶಿನೊ ಜಪಾನಿನ ರಸಾಯನ ವಿಜ್ಞಾನಿ. ಮೆಯಿಜೊ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿಯೂ ಮತ್ತು ಅಸಾಹಿ ಕಸೆಯಿ ಕಾರ್ಪರೇಶನ್ ಸಂಸ್ಥೆಯಲ್ಲಿ ವಿಜ್ಞಾನಿಯಾಗಿಯೂ ಪ್ರಸ್ತುತ ಸೇವೆಯಲ್ಲಿದ್ದಾರೆ.
“100 ದಾಟಿದರೂ It is Not ENOUGH for Goodenough”
ಈ ವರ್ಷದ ಜುಲೈ 25ಕ್ಕೆ 100ವರ್ಷ ತುಂಬಿರುವ ಈ ಹಿರಿಯಜ್ಜ ಪ್ರತಿದಿನವೂ ಪ್ರಯೋಗಾಲಕ್ಕೆ ಹೋಗಿ ಬರುತ್ತಾರೆಂದರೆ ಅಚ್ಚರಿ ಆಗುವು ದು. ಜಾನ್ ಗುಡ್ಎನಫ್ ತಮ್ಮ ತೊಂಭತ್ತರ ಹರೆಯದಲ್ಲಿ ದಿನವೂ ಆಸ್ಟಿನ್ನ ಟೆಕ್ಸಾಸ್ ವಿಶ್ವವಿದ್ಯಾಲಯದ ಮೆಕಾನಿಕಲ್ ಇಂಜನಿಯರಿಂಗ್ ಮತ್ತು ಮಟೆರಿಯಲ್ ವಿಜ್ಞಾನ ಪ್ರಯೋಗಾಲಕ್ಕೆ ಹೋಗಿ ಸಂಶೋಧನೆಯಲ್ಲಿ ತೊಡಗಿರುತ್ತಾರೆ. ನಾಗರಿಕ ಜಗತ್ತಿಗೆ ಮಹತ್ವವಾದ ಅನ್ವೇಷಣೆಯನ್ನು ತಮ್ಮ 50ರ ಹರೆಯದಲ್ಲಿಯೇ ಕೊಡುಗೆಯಾಗಿ ಕೊಟ್ಟ ಈ ವಿಜ್ಞಾನಿಗೆ ಇನ್ನೂ ಮತ್ತೂ ಮಹತ್ತರವಾದ ತಮ್ಮ ಕನಸೊಂದನ್ನು ನನಸು ಮಾಡುವ ಬಯಕೆಯಂತೆ.
ಇಪ್ಪತ್ತನೆಯ ಶತಮಾನದ ಎರಡು ಮಹತ್ವದ ಶೋಧಗಳೆಂದರೆ ಇಲೆಕ್ಟ್ರಾನಿಕ್ ಲೋಕವನ್ನು ಸಾಧ್ಯಮಾಡಿದ ಟ್ರಾನ್ಸ್ಸಿಸ್ಟರ್ ಮತ್ತು ಇಡೀ ಎಲೆಕ್ಟ್ರಾನಿಕ್ ಲೋಕವನ್ನು ಮೊಬೈಲ್ ಆಗಿಸಿದ ಹಗುರವಾದ ಲಿಥಿಯಮ್ ಅಯಾನಿನ ಬ್ಯಾಟರಿ. ಗಾತ್ರದಲ್ಲಿ ಎರಡೂ ಒಂದನ್ನೊಂದು ಪೈಪೋಟಿ ಮಾಡುತ್ತಾ ಚಿಕ್ಕದಾಗುತ್ತಾ ಬೆಳೆದವು. ಟ್ರಾನ್ಸಿಸ್ಟರ್ ಅನ್ವೇಷಣೆಯನ್ನು ಬೆಲ್ ಪ್ರಯೋಗಾಲಯದ ವಿಜ್ಞಾನಿಗಳು 1947ರಲ್ಲಿಯೇ ಮಾಡಿ ಇಂದಿನ ಇಲೆಕ್ಟ್ರಾನಿಕ್ ಜಗತ್ತನ್ನು ಇಷ್ಟು ಅಗಲವಾಗಿ ಬೆಳೆಸಿದ್ದಾರೆ. ಅದರ ಈ ಬೆಳವಣಿಗೆಯನ್ನು ಚಲನೆಗೆ ಒಗ್ಗುವಂತೆ ಮಾಡಿದ್ದು ಚಿಕ್ಕದಾಗುತ್ತಾ-ಹಗುರವಾಗುತ್ತಾ ಬೆಳೆಯುತ್ತಿರುವ ಲಿಥಿಯಮ್ ಬ್ಯಾಟರಿ. ಸಮಕಾಲೀನ ನಾಗರಿಕತೆಯಲ್ಲಿ ಒಟ್ಟಾರೆ ಆರ್ಥಿಕ ವಹಿವಾಟಿನಲ್ಲಿ ಇಲೆಕ್ಟ್ರಾನಿಕ್ ಉದ್ಯಮದ ಪಾತ್ರ ಹಿರಿದು. ಎಷ್ಟೆಂದರೆ ಎಲ್ಲರ ಕೈಯಲ್ಲೂ ಮೊಬೈಲ್ ಫೋನು! ಆಲೋಚನೆಗಳಿಗೆ ಧ್ವನಿಯನ್ನು ಅಷ್ಟೇ ವೇಗವಾಗಿ ಹರಿಬಿಡಲು ಸಾಧ್ಯವಾಗುತ್ತಿದೆ ಎಂದರೆ, ಅದಕ್ಕೆ ಸಾಧನವಾಗಿ ಶಕ್ತಿ ಒದಗಿಸುವ ಲಿಥಿಯಂ ಬ್ಯಾಟರಿಯ ಚಮತ್ಕಾರ ಅದರಲ್ಲಿ ಬೆರೆತಿದೆ. ಇದರ ಹಿಂದಿರುವ ವಿಜ್ಞಾನಿ ಈ ಹಿರಿಯಜ್ಜ, ಇನ್ನೂ ಕನಸುಗಳನ್ನು ಹೊತ್ತು ಇಂದಿಗೂ ಪ್ರಯೋಗಾಲಯಕ್ಕೆ ಅಲೆಯುತ್ತಿದ್ದಾರೆ.
ಈ ಲಿಥಿಯಂ ಬ್ಯಾಟರಿಯನ್ನು 1980ರಲ್ಲಿ ಮೊದಲಬಾರಿಗೆ ಜಾನ್ ಗುಡ್ಎನಫ್ ರೂಪುಗೊಳಿಸಿದರು. ನಂತರ 1991ರಲ್ಲಿ ಅದು ಸೋನಿ ಕಂಪನಿಯ ಮೂಲಕ ನಾಗರಿಕ ಬದುಕಿಗೆ ಪರಿಚಯಗೊಂಡಿತು. ಈ ಬ್ಯಾಟರಿಗಳು ಆ ಮೊದಲೂ ಇಲ್ಲವೆಂದಲ್ಲ ಇದ್ದವು ಅವು ಆಮ್ಲದೊಳಗೆ ಮುಳುಗಿದ್ದ ಲೋಹದ ಸರಳುಗಳನ್ನು ಒಳಗೊಂಡು ಗಾತ್ರದಲ್ಲಿ ಅತ್ಯಂತ ದೊಡ್ಡದಾಗಿ ಎಲ್ಲಿಯಾದರೂ ಕೊಂಡೊಯ್ಯಲು ಅಸಾಧ್ಯ ಎನ್ನುವಂತಿದ್ದವು. ಆದರೆ ಲಿಥಿಯಂ ಅತ್ಯಂತ ಹಗುರವಾದ ಲೋಹವಾಗಿದ್ದು ಅದರ ಮೂಲಕ ಇಂದು ಬ್ಯಾಟರಿಗಳು ಚಿಕ್ಕದಾಗುತ್ತಾ ಹಗುರವಾಗುತ್ತಾ ಬಂದಿವೆ. ಈ ಲಿಥಿಯಮ್ ನ್ನು ಬ್ಯಾಟರಿಯಲ್ಲಿ ಊಹಿಸಿದ್ದೇ ಒಂದು ಅಪ್ಪಟ ಭೌತವಿಜ್ಞಾನದ ಹಾಗೂ ರಸಾಯನವಿಜ್ಞಾನದ ಹದವಾದ ಮಿಶ್ರಣ. ಈ ಎರಡೂ ಜ್ಞಾನಶಾಖೆಗಳ ಮೂಲಭೂತ ಅಧ್ಯಯನವಿಲ್ಲದ ವ್ಯಕ್ತಿಯೊಬ್ಬರು ಸಾಧ್ಯಮಾಡಿದ್ದು ಅಚ್ಚರಿಯೇ ಸರಿ.
ಕಳೆದ ಹಲವು ದಶಕಗಳಿಂದ ವಿಜ್ಞಾನ ಜಗತ್ತು ಬಗೆ ಬಗೆಯ ಪದಾರ್ಥಗಳ ಬೆನ್ನು ಹತ್ತಿದೆ. ಹೊಸ ಹೊಸ ವಸ್ತುಗಳ ಹುಡುಕಾಟದಲ್ಲಿ ನಿರತವಾಗಿದೆ. ಇದು ಹಿಂದಿನಿಂದಲೂ ನಡೆದು ಬಂದಿದೆ. ಬ್ಯಾಟರಿ ರೂಪಿಸುವ ಪದಾರ್ಥಗಳನ್ನು ಅರ್ಥೈಸಿಕೊಂಡು ನಿರ್ವಹಿಸಲು ಭೌತವಿಜ್ಞಾನದ ಹಾಗೂ ರಸಾಯನವಿಜ್ಞಾನದ ಹದವರಿತ ತಿಳಿವಳಿಕೆಯ ಅವಶ್ಯಕತೆಯಿರುತ್ತದೆ. ಏಕೆಂದರೆ ಬ್ಯಾಟರಿಯಲ್ಲಿ ಇಲೆಕ್ಟ್ರೋಡ್ ಗಳಿರುತ್ತವೆ ಮತ್ತು ಅವುಗಳ ಮಧ್ಯೆ ಪ್ರವಹಿಸಲು ಅಯಾನುಗಳು ಇರಬೇಕಿರುತ್ತದೆ. ವಿದ್ಯುದಂಶದ ಉತ್ಪಾದನೆ ಹಾಗೂ ಪ್ರವಹಿಸುವ ಮಾಧ್ಯಮದಲ್ಲಿ ಅಯಾನುಗಳ ಚಲನೆ. ಇವೆಲ್ಲಾ ಅರ್ಥವಾಗಲು ಪದಾರ್ಥದ ಅಣುಸ್ವರೂಪದ ಲಕ್ಷಣಗಳ ಜತೆಗೆ ಪದಾರ್ಥದ ವರ್ತನೆಗೆ ಅನುಕೂಲಕರವಾಗಿ ಇರಬೇಕಿರುತ್ತದೆ. ವಿವಿಧ ಆಕ್ಸೈಡ್‌ಗಳ ಮಿಶ್ರಣದಿಂದ ಉತ್ಪನ್ನವಾಗಿದ್ದಲ್ಲದೆ ಮತ್ತು ಅದು ಹಗುರವಾಗಿಯೂ ಬಹುಕಾಲ ತಡೆಯ ಬಲ್ಲದ್ದಾಗಿಯೂ ಇರುವ ಹುಡುಕಾಟಕ್ಕೆ ಮೂಲವಸ್ತುಗಳ ರಚನೆ ಮತ್ತು ವರ್ತನೆಗಳ ಪಕ್ವವಾದ ಊಹೆಯು ತಿಳಿವಳಿಕೆಯ ಭಾಗವಾಗಿರಬೇಕು. ವಿದ್ಯುತ್ ಪ್ರವಹಿಸಲು ಲೋಹವೇ ಆಗಬೇಕು. ಲೋಹಗಳು ಹೇಳಿ ಕೇಳಿ ಸಾಂದ್ರವಾದವು, ಹೆಚ್ಚು ಭಾರವಾದವು. ಲಿಥಿಯಂ ಲೋಹಗಳಲ್ಲೆಲ್ಲಾ ಹಗುರವಾದದ್ದು. ಅದಕ್ಕೆ ಸರಿಯಾದ ಮಿಶ್ರಣವನ್ನು ಸಾಧಿಸಿ ಇಲೆಕ್ಟ್ರೋಡ್ ಸಾಧಿಸಿದ್ದು ಜಾನ್ ಅವರ ಜಾಣ್ಮೆ. ಅಷ್ಟೇ ಅಲ್ಲ ಅದನ್ನು ಮತ್ತೆ ಮತ್ತೆ ಚಾರ್ಜ್ ಮಾಡಿ ಬಳಸಲೂ ಆಗುವಂತೆ ಮಾಡಿದ್ದು ಹಿರಿಯ ಸಾಧನೆ.
ಅಮೆರಿಕದ ಟೆಕ್ಸಾಸ್ ವಿಶ್ವವಿದ್ಯಾಲಯದ ಮೆಕಾನಿಕಲ್ ಇಂಜನಿಯರಿಂಗ್ ವಿಭಾಗವು ಈಗೆರಡು ದಿನಗಳ ಹಿಂದೆಯಷ್ಟೇ, ಜುಲೈ 22, 2022ರಂದು ಜಾನ್ ಗುಡ್ ಎನಫ್ ಅವರ 100 ತುಂಬುತ್ತಿರುವ ಸಂದರ್ಭಕ್ಕೆ ವಿಶೇಷ ಸೆಮಿನಾರ್ ಅನ್ನು ಆಯೋಜಿಸಿ ಬ್ಯಾಟರಿ ಮತ್ತು ಶಕ್ತಿಯ ಕುರಿತಂತೆ ವಿವಿಧ ವೈಜ್ಞಾನಿಕ ಉಪನ್ಯಾಸಗಳನ್ನು ಏರ್ಪಡಿಸಿತ್ತು. ಅದರಲ್ಲಿ ಜಾನ್ ಅವರ ಜೊತೆಗೆ ನೊಬೆಲ್ ಪಡೆದ ಇಬ್ಬರೂ ವಿಜ್ಞಾನಿಗಳೂ ಭಾಗವಹಿಸಿದ್ದರು. ಆಸಕ್ತರು ಅದರ ಪೂರ್ಣ ವಿಡಿಯೋವನ್ನು https://www.youtube.com/watch?v=GRIcuAcKMy0 ಲಿಂಕ್ ಅಲ್ಲಿ ಗಮನಿಸಬಹುದಾಗಿದೆ.
ವಿಖ್ಯಾತ ರಸಾಯನ ವಿಜ್ಞಾನ ಪತ್ರಿಕೆ “ಮಾಲೆಕ್ಯೂಲ್ಸ್” ಜಾನ್ ಅವರ ಶತಮಾನೋತ್ಸವ ವರ್ಷಕ್ಕೆಂದು 2021ರಲ್ಲಿ ಒಂದು ವಿಶೇಷ ಸಂಚಿಕೆಯನ್ನು ರೂಪಿಸಿತ್ತು. ಸುಮಾರು 16 ಪ್ರಬಂಧಗಳಿರುವ ಈ ಸಂಚಿಕೆಯನ್ನು ಒಂದು ಪುಸ್ತಕವಾಗಿಯೂ ಇದೀಗ ಲಭ್ಯವಿದೆ. ಆಸಕ್ತರು https://www.mdpi.com/books/pdfdownload/book/5102 ಲಿಂಕ್ ಅಲ್ಲಿ ಅದನ್ನೂ ಗಮನಿಸಬಹುದಾಗಿದೆ. ಈ ಪುಸ್ತಕದಲ್ಲಿ ಮೈಕೆಲ್ ಪೊಕಾರ್ಡ್ (Michel Pouchard) ಅವರು ಬರೆದ “John B. Goodenough’s Role in Solid State Chemistry Community: A Thrilling Scientific Tale Told by a French Chemist” ಎಂಬ ಪ್ರಬಂಧವು ಜಾನ್ ಅವರ ಶ್ರೇಷ್ಠತೆಗೆ ಹಿಡಿದ ಕನ್ನಡಿಯಂತಿದೆ.
ಹೊಸತೊಂದನ್ನು ಕೊಡುವ ಉತ್ಸಾಹದ ದಣಿವರಿಯದ ವಿಜ್ಞಾನದ ಅಜ್ಜನಿಗೆ ಹಲವಾರು ಗೌರವಗಳು ಸಂದಿವೆ. ಕಳೆದ 2009ರ ಎನ್ರಿಕೋ ಫರ್ಮಿ ಪರಸ್ಕಾರದ ಜತೆಗೆ 2013ರಲ್ಲಿ ಅಮೇರಿಕಾದ ರಾಷ್ಟ್ರೀಯ ವಿಜ್ಞಾನ ಪುರಸ್ಕಾರ ಲಭಿಸಿದೆ. 2019 ರಲ್ಲಿ ಕೋಪ್ಲೆ ಮೆಡಲ್, ಜೊತೆಗೆ ರಸಾಯನವಿಜ್ಞಾನದ ರಾಯಲ್ ಸೊಸೈಟಿಯು ಜಾನ್ ಗುಡ್ಎನಫ್ ಹೆಸರಲ್ಲಿ ರಸಾಯನವಿಜ್ಞಾನದ ಬಹುಮಾನವನ್ನು ಸ್ಥಾಪಿಸಿದೆ.
ವಿಜ್ಞಾನಕ್ಕೆ ಅವರ ಕೊಡುಗೆಯು ಇಡೀ ಇಲೆಕ್ಟ್ರಾನಿಕ್ ಜಗತ್ತನ್ನು ಕ್ರಾಂತಿಕಾರಿಯಾಗಿಸುವ ಶೋಧ ಎಂದು ಹಲವಾರು ವಿಜ್ಞಾನಿಗಳ ಅನಿಸಿಕೆ. ಅವರ ಆಯುಷ್ಯವು ಇನ್ನೂ ಹೆಚ್ಚಲಿ. ನಮ್ಮೆಲ್ಲರಿಗೂ ಅವರಿಂದ ಸದಾ ಉತ್ಸಾಹ ಸಿಗುವಂತೆ ಇರಲಿ. ಮತ್ತೊಮ್ಮೆ ವಿಜ್ಞಾನದ ಈ ಹಿರಿಯಜ್ಜನಿಗೆ, ಅವರ ಜನ್ಮ ದಿನದಂದು, ನಮ್ಮ ನಿಮ್ಮೆಲ್ಲರ ಹಾಗೂ CPUS ನ ಶುಭಾಶಯಗಳು
ನಮಸ್ಕಾರ
ಡಾ. ಟಿಎಸ್. ಚನ್ನೇಶ್