You are currently viewing ನಿರಂತರವಾಗಿ 358ನೆಯ ವರ್ಷದ ಪ್ರಕಟಣೆಯ ವೈಜ್ಞಾನಿಕ ಪತ್ರಿಕೆ : “ಫಿಲಸಾಫಿಕಲ್‌ ಟ್ರಾನ್ಸಾಕ್ಷನ್ಸ್‌ (Philosophical Transactions)”

ನಿರಂತರವಾಗಿ 358ನೆಯ ವರ್ಷದ ಪ್ರಕಟಣೆಯ ವೈಜ್ಞಾನಿಕ ಪತ್ರಿಕೆ : “ಫಿಲಸಾಫಿಕಲ್‌ ಟ್ರಾನ್ಸಾಕ್ಷನ್ಸ್‌ (Philosophical Transactions)”

 ಕಳೆದ ವಾರ ಒಂದೂವರೆ ಶತಮಾನಗಳ ಕಾಲ ಶ್ರೇಷ್ಠತೆಯನ್ನು ಉಳಿಸಿಕೊಂಡು ನಿರಂತರವಾಗಿ ಪ್ರಕಟವಾಗುತ್ತಿರುವ “ನೇಚರ್”‌ ( ) ಪತ್ರಿಕೆ ಬಗ್ಗೆ ಓದಿರುತ್ತೀರಿ. ಆಗ ಹಲವರು ಓಹ್‌ ಅದೇ ಅತ್ಯಂತ ಹಳೆಯ ವೈಜ್ಞಾನಿಕ ಪತ್ರಿಕೆಯೇ, ಎಂಬಂತೆ ಪ್ರಶ್ನಿಸಿದ್ದರು. ಈಗ್ಗೆ ಮೂನ್ನೂರೈವತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ನಿರಂತರವಾಗಿ ಪ್ರಕಟವಾಗುತ್ತಿರುವ “ಫಿಲಸಾಫಿಕಲ್‌ ಟ್ರಾನ್ಸಾಕ್ಷನ್ಸ್‌ (Philosophical Transactions)” ಇದೆ ಎಂದಾಗ ಹುಬ್ಬೇರಿಸಿದ್ದರು. ಕಳೆದ 2015ರಲ್ಲೇ ತನ್ನ 350ನೆಯ ವರ್ಷದ ಸಂಭ್ರಮವನ್ನು ಆಚರಿಸಿಕೊಂಡ ಈ ವಿಶಿಷ್ಟ ಪತ್ರಿಕೆಯು ಈಗ 357 ದಾಟಿ 358ಕ್ಕೆ ಕಾಲಿಟ್ಟಿದೆ. ಅಷ್ಟೇ ಅಲ್ಲ, ಸರ್‌ ಐಸ್ಯಾಕ್‌ ನ್ಯೂಟನ್‌ ರಂತಹಾ ಘಟಾನುಘಟಿಗಳಿಂದ ಆರಂಭಗೊಂಡು, ಸ್ಟೀಫನ್‌ ಹಾಕಿಂಗ್‌ ವರೆಗೂ ಸಾವಿರಾರು ವಿಜ್ಞಾನಿಗಳು ವೈಜ್ಞಾನಿಕ ಪ್ರಬಂಧಗಳನ್ನು ಈ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಇವರಲ್ಲದೆ ರಾಬರ್ಟ್‌ ಬಾಯ್ಲ್‌, ಆಂಟನ್‌ ವಾನ್‌ ಲೀವೆನ್‌ಹುಕ್‌, ಬೆಂಜಮಿನ್‌ ಫ್ರಾಂಕ್ಲಿನ್‌, ಚಾರ್ಲ್ಸ್‌ ಡಾರ್ವಿನ್‌, ಮೈಕೆಲ್‌ ಫಾರಡೆ, ಜೇಮ್ಸ್‌ ಕ್ಲಾರ್ಕ್‌ ಮಾಕ್ಸ್‌ವೆಲ್‌, ಆರ್ಥರ್‌ ಎಡಿಂಗ್‌ಟನ್‌, ಡೊರತಿ ಹಡ್ಕಿನ್ಸ್‌, ಅಲನ್‌ ಟ್ಯುರಿಂಗ್‌ ಕೂಡ ಪ್ರಕಟಿಸಿದವರಲ್ಲಿ ಪ್ರಮುಖರು. ಅಷ್ಟೇ ಏಕೆ, 1787ರಷ್ಟು ಹಿಂದೆ ಮಹಿಳಾ ವಿಜ್ಞಾನಿ ಕರೊಲಿನ್‌ ಹರ್ಷಲ್‌ ಅವರ ಪ್ರಬಂಧವನ್ನೂ ಪ್ರಕಟಿಸಿದ್ದಲ್ಲದೆ, ಮುಂದೆ ಅನೇಕ ಮಹಿಳಾ ವಿಜ್ಞಾನಿಗಳಿಗೆ ಅವಕಾಶವಿತ್ತ  ಕೀರ್ತಿ ಕೂಡ ಈ ಪತ್ರಿಕೆಗಿದೆ. ಅವೆಲ್ಲವುಗಳ ಒಂದಷ್ಟು ವಿವರಗಳು ಇಲ್ಲಿವೆ.

ಹೆನ್ರಿ ಓಲ್ಟನ್‌ ಬರ್ಗ್‌

       ರಾಯಲ್‌ ವಿಜ್ಞಾನ ಸೊಸೈಟಿಯು ಆರಂಭಗೊಂಡು ನಾಲ್ಕೂವರೆ ವರ್ಷಗಳ ನಂತರ, 1665ರ ಮಾರ್ಚ್‌ 6ರಂದು (6 March 1665) “ಫಿಲಸಾಫಿಕಲ್‌ ಟ್ರಾನ್ಸಾಕ್ಷನ್ಸ್‌” ಮೊಟ್ಟ ಮೊದಲು ಪ್ರಕಟವಾಯಿತು. ಆಗಿನ ರಾಯಲ್‌ ಸೊಸೈಟಿಯ ಸೆಕ್ರೆಟರಿ “ಹೆನ್ರಿ ಓಲ್ಟನ್‌ ಬರ್ಗ್‌” ಸ್ಥಾಪಕ ಸಂಪಾದಕರಾಗಿದ್ದರು. ಓಲ್ಟನ್‌ ಬರ್ಗ್‌ ಮೂಲತಃ ಜರ್ಮನಿಯ ದಾರ್ಶನಿಕ. ಧರ್ಮಶಾಸ್ತ್ರವನ್ನೂ ಓದಿಯೂ, ವೈಜ್ಞಾನಿಕ ಮನೋಭಾವ ಹಾಗೂ ಪ್ರಗತಿಶೀಲ ಚಿಂತನೆಗಳ ಹರಿಕಾರರಾಗಿದ್ದವರು. ಬಹು ಭಾಷಾತಜ್ಞರಾಗಿದ್ದು, ಜರ್ಮನಿಯಲ್ಲದೆ, ಗ್ರೀಕ್‌, ಲ್ಯಾಟಿನ್‌, ಡಚ್‌, ಇಂಗ್ಲೀಷ್‌ ಗಳ ಮೇಲೆ ಪ್ರಭುತ್ವ ಸಾಧಿಸಿದ್ದವರು. ಮೊಟ್ಟ ಮೊದಲ ಆಧುನಿಕ ರಸಾಯನ ವಿಜ್ಞಾನಿ ಎಂದೇ ಖ್ಯಾತರಾದ “ರಾಬರ್ಟ್‌ ಬಾಯ್ಲ್‌” ಜೊತೆಗೆ ಜೀವನ ಪೂರ್ತಿ ಆಪ್ತರಾಗಿದ್ದರು. ಹಾಗೆಯೇ ಆಂಗ್ಲ ಸಾಹಿತ್ಯದ ಮೇರು ಕವಿ ಜಾನ್‌ ಮಿಲ್ಟನ್‌ ಜೊತೆಗೂ ಅಷ್ಟೇ ಸಖ್ಯವನ್ನು ಹೊಂದಿದ್ದವರು. ಓಲ್ಡನ್‌ ಬರ್ಗ್‌ ಅವರು ರಾಯಲ್‌ ಸೊಸೈಟಿಯ ಆರಂಭದಲ್ಲೂ ಪ್ರಭಾವಿಸಿದ್ದ ವ್ಯಕ್ತಿ, ಮೊದಲ ಸೆಕ್ರೆಟರಿ ಕೂಡ ಆಗಿದ್ದರು. ಇವರು ತಮ್ಮ ಸ್ವಂತ ಹಣದಿಂದ ಈ ಪ್ರತಿಕೆಯನ್ನು ರಾಯಲ್‌ ಸೊಸೈಟಿಗಾಗಿ ಆರಂಭಿಸಿದ್ದರು. ಇಂದಿಗೂ ವೈಜ್ಞಾನ ಪತ್ರಿಕೆಗಳ ಮೂಲ ಜಾಯಮಾನವಾದ ಪ್ರಕಟಣಾ ಪೂರ್ವ ಕಡ್ಡಾಯ “ಪರಾಮರ್ಶನ” (Peer Review) ಅನ್ನು ಆರಂಭಿಸಿದ ದಾರ್ಶನಿಕ ಓಲ್ಡನ್‌ ಬರ್ಗ್‌. ಈ ಕಾಲದಲ್ಲೂ ನಾನು ಹೇಳಿದ್ದೇ ಅಂತಿಮ ಎನ್ನುವ “ಧರ್ಮಗುರುಗಳ” ಕಾಲದಲ್ಲೂ ಧರ್ಮಶಾಸ್ತ್ರವನ್ನು ಓದಿಯೂ ಬೌದ್ಧಿಕ ಪರಾಮರ್ಶನವನ್ನು ಆರಂಭಿಸಿದ್ದು ಇವರ ಹೆಗ್ಗಳಿಕೆ. ಇಂದಿಗೂ ಪ್ರಸ್ತುತವಾದ “ಪೀರ್‌ ರಿವ್ಯೂ Peer Review” ಪತ್ರಿಕೆ ಎನ್ನುವ ವಿಷಯವನ್ನು ಕೊಟ್ಟವರೇ ಓಲ್ಡನ್‌ ಬರ್ಗ್‌ ಅದೂ ಮೊಟ್ಟಮೊದಲ ವೈಜ್ಞಾನಿಕ ಪ್ರತಿಕೆಯಿಂದಲೇ ಆರಂಭಿಸಿದವರು.

ಮೊದಲ ಸಂಚಿಕೆಯ ವಿಶೇಷತೆ:

ಮೊಟ್ಟ ಮೊದಲ ಸಂಚಿಕೆಯಲ್ಲಿಯೇ ಗುರು ಗ್ರಹವು ಹೊಂದಿರುವ ರೆಡ್‌ ಸ್ಪಾಟ್‌ (The Great Red Spot) ಬಗ್ಗೆ ಪ್ರಕಟವಾಗಿತ್ತು. ಗುರು ಗ್ರಹವು ಹೊಂದಿರುವ ಈ ಕೆಂಪು ಚುಕ್ಕೆಯು ಅಲ್ಲಿರುವ ಸುಮಾರು 430 ಕಿಮೀ ಗೂ ಹೆಚ್ಚಿನ ವೇಗದ  ಬೃಹತ್‌ ಬಿರುಗಾಳಿಯ ಕುರಿತದ್ದೆಂದು ನಂತರವೇ ತಿಳಿದರೂ ಮೊದರು ರಾಬರ್ಟ್‌ ಹುಕ್‌ ಅವರಿಂದ ಗುರುತಿಸಲ್ಪಟ್ಟ ವಿಚಾರವು 1665ರ ಫಿಲಸಾಫಿಕಲ್‌ ಟ್ರಾನ್ಸಾಕ್ಷನ್ಸ್‌ ಅಲ್ಲಿ ವರದಿಯಾಗಿತ್ತು. ಹಾಗಾಗಿ ಕಳೆದ ಕೆಲವರ್ಷಗಳ ಹಿಂದೆಯೂ ವಾಯೇಜರ್‌ ಕೂಡ ಅದನ್ನು ವೀಕ್ಷಿಸಿ ವರದಿ ಮಾಡಿದ್ದರಿಂದ ಈ ಬಿರುಗಾಳಿಯು ಕನಿಷ್ಠ 357 ವರ್ಷಗಳಿಂದಲೂ ಇದೆ ಎಂಬ ವೈಜ್ಞಾನಿಕ ಇತಿಹಾಸಕ್ಕೆ ಮೊದಲ ಸಂಚಿಕೆಯು ದಾಖಲೆ ಕೊಟ್ಟಿದೆ. ಅದಲ್ಲದೆ ರಾಬರ್ಟ್‌ ಬಾಯ್ಲ್‌ ಅವರ “ಶೈತ್ಯದ ಪ್ರಾಯೋಗಿಕ ಇತಿಹಾಸ (Experimental History of Cold)” ಕೂಡ ಅದೇ ಸಂಚಿಕೆಯಲ್ಲೇ ಪ್ರಕಟಣೆಯಾಗಿತ್ತು. ಜೊತೆಗೆ ಮಸೂರಗಳ ಅಭಿವೃದ್ಧಿ ಅಲ್ಲದೆ ತಿಮಿಂಗಲಗಳ ಬಗ್ಗೆಯೂ ಮೊದಲ ಸಂಚಿಕೆಯು ಒಳಗೊಂಡಿತ್ತು. ಎಲ್ಲಕ್ಕಿಂತಾ ಪ್ರಮುಖವಾಗಿ ಫ್ರೆಂಚ್‌ ಗಣಿತಜ್ಞ ಪೀರೆ ಫರ್ಮಾ  (Pierre de Fermat) ಅವರ ಕುರಿತ ಚಿರಸ್ಮರಣೆಯ ಲೇಖನ ಪ್ರಕಟವಾಗಿತ್ತು. ದುರಾದೃಷ್ಟವಶಾತ್‌ ಅವರ ಕೊನೆಯ ಪ್ರಮೇಯ “ಫರ್ಮಾ ಲಾಸ್ಟ್‌ ಥಿಯರಿ” -ಆತನ ಕೊನೆಯ ಪ್ರಮೇಯ ಎಂಬ ವಿಷಯವನ್ನು ಆ ಸಂಚಿಕೆಯು ಒಳಗೊಂಡಿರಲಿಲ್ಲ. ಈ ಪ್ರಮೇಯವನ್ನು ಕಳೆದ 2016ರಲ್ಲಿ ಸರ್‌ ಆಂಡ್ರ್ಯೂ ವೈಲ್ಸ್‌ (Sir Andrew Wiles ) ಸಾಧಿಸಿ ಅದಕ್ಕೆ ಪುರಾವೆ ಅಥವಾ ಸಾಕ್ಷಾಧಾರದ (Proof) ವಿವರಗಳನ್ನು ಕೊಟ್ಟರು. ಅದೇ ವರ್ಷ ಅವರಿಗೆ ಜಾಗತಿಕ ಶ್ರೇಷ್ಠ ಗಣಿತ ಪ್ರಶಸ್ತಿ “ಅಬೆಲ್‌ ಪುರಸ್ಕಾರ” ಕೂಡ ಸಿಕ್ಕಿತ್ತು.

ಈಗಾಗಲೇ 357 ವರ್ಷಗಳ ಇತಿಹಾಸ ಇರುವ ಪತ್ರಿಕೆ ಅಂದರೆ ಒಂದು ಬಗೆಯಲ್ಲಿ ಹೆಚ್ಚೂ ಕಡಿಮೆ ಇಡೀ ವಿಜ್ಞಾನದ ಬಹು ಭಾಗದ ಇತಿಹಾಸವನ್ನು ಒಳಗೊಂಡ ಹಾಗೆ. ಹಾಗಾಗಿ ಕೆಲವೇ ನೂರಾರು ಪದಗಳಲ್ಲಿ ಎಲ್ಲವನ್ನೂ ಹೇಳುವುದಾದರೂ ಹೇಗೆ? ಕೆಲವು ಪ್ರಮುಖ ಘಟನೆಗಳ ಪ್ರಕಟಣೆಯನ್ನು ಮತ್ತು ಅವುಗಳು ಇಡೀ ವಿಜ್ಞಾನದ ಇತಿಹಾಸದ ಭಾಗವಾಗಿರುವ ಕುರುಹನ್ನೂ ಇಲ್ಲಿ ದಾಖಲು ಮಾಡುವಷ್ಟು ಅವಕಾಶ ಮಾತ್ರವೇ ಇದೆ. ಇದು ಒಂದು ರೀತಿಯಲ್ಲಿ ವಿಜ್ಞಾನದ ಬಹು ಮುಖ್ಯವಾದ ಪಾತ್ರವನ್ನು ವಹಿಸಿರುವ ಲಂಡನ್‌ನ “ರಾಯಲ್‌ ಸೊಸೈಟಿ”ಯ ಒಟ್ಟಾರೆಯ ಇತಿಹಾಸವನ್ನೂ ಒಳಗೊಂಡಿದೆ. (ಕಳೆದ 2015ರ ಡಿಸೆಂಬರ್‌ ನಿಂದ 2020ರ ನವೆಂಬರ್‌ ವರೆಗೂ ಭಾರತೀಯರಾದ ಸರ್‌ ವೆಂಕಿ ರಾಮಕೃಷ್ಣನ್‌ ಅವರು ಅಧ್ಯಕ್ಷರಾಗಿದ್ದ ರಾಯಲ್‌ ಸೊಸೈಟಿಯದೇ ವಿಶಿಷ್ಟ ಕಥಾನಕ. ಸಾಧ್ಯವಾದಲ್ಲಿ ಅದನ್ನು ಮುಂದೊಮ್ಮೆ ನೋಡೋಣ). ಆದ್ದರಿಂದ ಕೆಲವು ಮುಖ್ಯ ಪ್ರಕಟಣೆಯನ್ನು ಮುಂದೆ ತಿಳಿಯಬಹುದು.

A ಮತ್ತು B ಎಂಬ ಎರಡು ಪತ್ರಿಕೆಗಳು

ಇನ್ನೂ ವಿಜ್ಞಾನವೆಂದು ಕರೆಯದ ಕಾಲದಲ್ಲಿ ನಿಸರ್ಗದ ಸತ್ಯ ದರ್ಶನ ಎಂಬುದಾಗಿಯೇ ವಿವರಿಸುತ್ತಿದ್ದ ಸಮಯವದು. ಹಾಗಾಗಿ ಪತ್ರಿಕೆಯನ್ನು “ಫಿಲಸಾಫಿಕಲ್‌ ಟ್ರಾನ್ಸಾಕ್ಷನ್ಸ್‌” ಎಂದೇ ಕರೆದಿದ್ದಾರೆ. ಈಗಲೂ ಇದೇ ಹೆಸರಲ್ಲೇ ಆದರೆ ಎರಡು ಪತ್ರಿಕೆಗಳಾಗಿ ಪ್ರಕಟವಾಗುತ್ತಿದೆ. ಫಿಲಸಾಫಿಕಲ್‌ ಟ್ರಾನ್ಸಾಕ್ಷನ್ಸ್‌ ಆಫ್‌ ದ ರಾಯಲ್‌ ಸೊಸೈಟಿ (Philosophical Transactions of the Royal Society) ಎಂದೇ ಆರಂಭವಾದ ಪತ್ರಿಕೆ ಇಂದಿಗೂ ಪ್ರಕಟವಾಗುತ್ತಿದೆ. ಆರಂಭವಾದ ನಂತರ ಮುಂದೆ ವಿಜ್ಞಾನದ ಬೆಳವಣಿಗೆಗಳಾದಂತೆ 1887ರಲ್ಲಿ “ಫಿಲಸಾಫಿಕಲ್‌ ಟ್ರಾನ್ಸಾಕ್ಷನ್ಸ್‌ (Philosophical Transactions)” A ಮತ್ತು B ಎಂದು ಎರಡು ಭಾಗವಾಗಿ ವಿಭಾಗವಾಯಿತು.  “ಫಿಲಸಾಫಿಕಲ್‌ ಟ್ರಾನ್ಸಾಕ್ಷನ್ಸ್‌ (Philosophical Transactions)” A ಯು ಭೌತವೈಜ್ಞಾನಿಕ ಹಾಗೂ ಗಣಿತ ಮತ್ತು ಇಂಜನಿಯರಿಂಗ್‌ ವಿಜ್ಞಾನವನ್ನು ಮತ್ತು B ಯು ಜೀವಿ ವಿಜ್ಞಾನವನ್ನೂ ಒಳಗೊಂಡು ಪ್ರಕಟವಾಗುತ್ತಿವೆ.

ಆಲ್ಬರ್ಟ್‌ ಐನ್‌ಸ್ಟೈನ್‌ ಅವರ ಮಹತ್ವದ ಸಾಪೇಕ್ಷ ಸಿದ್ಧಾಂತದ ಸಾಕ್ಷಿಗೆ ಎಡಿಂಗ್‌ ಟನ್‌ ಮತ್ತಿತರರು ನಡೆಸಿ ಸೂರ್ಯಗ್ರಹಣದ ಸಮಯದ ಫೋಟೊ ತೆಗೆದದ್ದು 1919ರಲ್ಲಿ!. ಅದರ ವಿವರಗಳ ಅವರ ವಿಜ್ಞಾನ ಪ್ರಬಂಧ A Determination of the Deflection of light by the Sun’s Gravitational Field  1920ರ ಈ ಪತ್ರಿಕೆಯಲ್ಲಿ ಪ್ರಕಟವಾಯಿತು. ಅದು ಬಹು ದೊಡ್ಡ ಸಾಕ್ಷಿಯನ್ನು ಒದಗಿಸಿ ವಿಜ್ಞಾನದ ದಿಕ್ಕನ್ನೇ ಬದಲಿಸಿತು.

ಚಾರ್ಲ್ಸ್‌ ಡಾರ್ವಿನ್‌ ಅವರ ಭೂವೈಜ್ಞಾನಿಕ ವಿವರದ ಪ್ರಬಂಧ 1839ರಲ್ಲಿ (Observations on the Parallel Roads of Glen Roy, and of Other Parts of Lochaber in Scotland, with an Attempt to Prove That They Are of Marine Origin) ಪ್ರಕಟವಾಗಿತ್ತು.  

ಮೈಕೆಲ್‌ ಫಾರಡೆ ಸುಮಾರು 40 ವೈಜ್ಞಾನಿಕ ಪ್ರಬಂಧಗಳನ್ನು ಈ ಪತ್ರಿಕೆಯಲ್ಲಿ ಪ್ರಕಟಿಸಿದರು. ಅವರ ಕೊನೆಯ ಪ್ರಬಂಧ 1857 ರಲ್ಲಿ (The Bakerian Lecture “Experimental Relations of Gold (and Other Metals) to Light”) ಪ್ರಕಟವಾಗಿತ್ತು.  ಜೇಮ್ಸ್‌ ಮಾಕ್ಸ್‌ವೆಲ್‌ ಅವರು (On the Dynamical Theory of the Electromagnetic Field ) ಪ್ರಬಂಧವನ್ನು 1865 ರಲ್ಲಿ ಇದೇ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಇದೊಂದು ವಿಜ್ಞಾನದಲ್ಲಿ ಅತ್ಯಂತ ಮಹತ್ವದ ಶೋಧ.

ಮಹಿಳಾ ವಿಜ್ಞಾನಿಗಳ ಬಗೆಗೆ ಈ ಪತ್ರಿಕೆಯ ಬೆಂಬಲವನ್ನು ಕುರಿತು ಹೇಳಲೇ ಬೇಕಿದೆ. ಆ ಕಾಲಕ್ಕೇ 1787ರಲ್ಲೇ ಕರೊಲಿನ್‌ ಹರ್ಷಲ್‌ (Caroline Herschel) ಧೂಮಕೇತುವಿನ ಕುರಿತ ತಮ್ಮ ಪ್ರಬಂಧ  (An account of a new comet ) ವನ್ನು ಪ್ರಕಟಿಸಿದ್ದರು. ಅದು ಬಹುಶಃ ಮೊಟ್ಟ ಮೊದಲ ಮಹಿಳಾ ವೈಜ್ಞಾನಿಕ ಪ್ರಬಂಧ. ಅನಂತರ 1900ರ ಒಳಗೇ ಸುಮಾರು ಐದು ಮಹಿಳೆಯರು ಭೌತವಿಜ್ಞಾನ, ಜೀವಿವಿಜ್ಞಾನ, ರಸಾಯನ ವಿಜ್ಞಾನ ಹಾಗೂ ಗಣಿತ ದಲ್ಲಿ ಪ್ರಬಂಧಗಳನ್ನು ಪ್ರಕಟಿಸಿದ್ದರು.  ಅನಂತರದಲ್ಲಿ 1901ರಲ್ಲಿ ಅಲೀಸ್‌ ಲೀ (Alice Lee) ಎಂಬ ಗಣಿತಜ್ಞೆ ಯ ಕಪಾಲ ಸಾಮರ್ಥ್ಯ (ತಲೆಬುರುಡೆಯ ಒಳಗಿನ ಗಾತ್ರ)ಕ್ಕೂ ಬುದ್ಧಿವಂತಿಗೆ ಸಂಬಂಧ ಇದೆ ಎಂಬ ಆವರೆಗಿನ ನಂಬಿಕೆಯು ನಿರಾಧಾರ ಎಂಬುದನ್ನು ಸಾಕ್ಷಿ ಸಮೇತ ತೋರಿದ ಪ್ರಬಂಧವೂ ಪ್ರಕಟವಾಗಿತ್ತು.

ಇಂತಹಾ ಅನೇಕ ವಿಶಿಷ್ಟತೆಗಳನ್ನು ಮೂರುವರೆ ಶತಮಾನದ ವಿಜ್ಞಾನ ಕಟ್ಟುವಲ್ಲಿ ನಿರಂತರವಾಗಿ ನಡೆಸಿಕೊಂಡು ಬಂದ ವೈಜ್ಞಾನಿಕ ಪತ್ರಿಕೆ : “ಫಿಲಸಾಫಿಕಲ್‌ ಟ್ರಾನ್ಸಾಕ್ಷನ್ಸ್‌ (Philosophical Transactions)” ಈ ಪುಟ್ಟ ಟಿಪ್ಪಣಿ ಏನಿದ್ದರೂ ಅದರ ಸಣ್ಣ ಪರಿಚಯದ ಪ್ರಯತ್ನ ಅಷ್ಟೇ!

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್.‌  

Leave a Reply