You are currently viewing ನಾವು ಪೂಜ್ಯತೆಯನ್ನೇನೂ ಕೊಡದಿದ್ದರೂ ಅಪ್ಪಟ ಭಾರತೀಯ ಹೆಮ್ಮೆ: ನಮ್ಮಎಮ್ಮೆ

ನಾವು ಪೂಜ್ಯತೆಯನ್ನೇನೂ ಕೊಡದಿದ್ದರೂ ಅಪ್ಪಟ ಭಾರತೀಯ ಹೆಮ್ಮೆ: ನಮ್ಮಎಮ್ಮೆ

ಎಮ್ಮೆಗಳ ಕುರಿತು ಒಂದು ಕಥೆಯಿದೆ. “ದೇವರು ಈ ಜೀವಿಗಳ ಸೃಷ್ಟಿಕರ್ತನಾಗಿದ್ದು ಅವುಗಳೆಲ್ಲವುಗಳ ಪಾಲಕನೇ ಆಗಿದ್ದರೆ, ಶುಕ್ರ, ಚಂದ್ರ ಮತ್ತು ಭೂಮಿತಾಯಿಯರು ತಮ್ಮ ಸಾಮರ್ಥ್ಯವನ್ನೆಲ್ಲಾ ಸೇರಿಸಿ ಭಾರತೀಯರ ಹುಟ್ಟಿಗೆ ಮತ್ತು ನಂಬಿಕೆಗಳಿಗೆ ಕಾರಣರಾಗಿದ್ದರೆ, ಸೂರ್ಯನು ತನ್ನ ಜಾಣತನ ಮತ್ತು ಉತ್ಸಾಹವನ್ನು ಕೊಡುತ್ತಾ ಇದ್ದರೆ, ಎಮ್ಮೆ ಅವಕ್ಕೆಲ್ಲಾ ಸರಿಯಾದ ಸಾಕ್ಷಿ” ಎನ್ನುತ್ತದೆ ಕಥೆಯ ಸಾರ. ಏಕೆಂದರೆ ಭಾರತೀಯತೆಯನ್ನು ಪ್ರತಿನಿಧಿಸುವ ಎಮ್ಮೆಯಂತ ನೆಮ್ಮದಿಯ ಪ್ರಾಣಿ ಮತ್ತೊಂದಿಲ್ಲ. ಎಲ್ಲದಕ್ಕೂ ನಿರ್ಲಿಪ್ತ! ಬಿಸಿಲು, ಮಳೆ, ಚಳಿ, ಗಾಳಿ ಎಲ್ಲದರಲ್ಲೂ ಕೂಡ! ಸದಾ ತನ್ನತನದಲ್ಲೇ ಇರುವ ವಿಶಿಷ್ಟ ಪ್ರಾಣಿ. ಹಾಗಿದ್ದೂ ತನ್ನೆಲ್ಲಾ ಸೂಕ್ಷ್ಮ್ಮತೆಯನ್ನು ಕಾಪಿಟ್ಟುಕೊಂಡು ಬಂದ ಅದ್ಭುತ ಪ್ರಾಣಿಯೂ ಕೂಡ.

        ಹಾಗೇನೇ, ಭಾರತೀಯತೆಯನ್ನು ಎಮ್ಮೆಗಿಂತಾ ಬೇರೆ ಯಾವ ಪ್ರಾಣಿಯಲ್ಲೂ ಕಾಣಲಾಗದು. ಎಮ್ಮೆಗಳು ನಿಜಕ್ಕೂ ಎಲ್ಲಾ ದೃಷ್ಟಿಯಲ್ಲೂ ಅಪ್ಪಟ ಭಾರತೀಯ! ನಮ್ಮಲ್ಲಿ ಸಾಂಪ್ರದಾಯಿಕವಾದ ದೈವತ್ವವನ್ನು ಹಸುಗಳಿಗೆ ಕೊಟ್ಟಿದ್ದರೂ, ಬಹುತೇಕ ಹಸುಗಳು ಜಾತಿಕೆಡಿಸಿಕೊಂಡಿವೆ. ಆದರೆ ಎಮ್ಮೆಗಳು ಹಾಗಲ್ಲ, ಇಂದಿಗೂ ತಮ್ಮ ಜಾತಿಯನ್ನು ಕಾಪಾಡಿಕೊಂಡೇ ಬಂದಿವೆ. ಅಂದರೆ ಹಸುಗಳಲ್ಲಿನ ಕ್ರಾಸ್ ಬ್ರೀಡ್ ಹಾವಳಿಯಂತೆ ಪಾಶ್ಚಾತ್ಯ ತಳಿಗಳ ವೀರ್ಯಾಣು ಸೇರಿಸುವ ಬಗೆಯನ್ನು ಎಮ್ಮೆಯಲ್ಲಿ ಮಾಡಲಾಗಿಲ್ಲ. ಎಮ್ಮೆಗಳು ಅಷ್ಟು ಸುಲಭವಾಗಿ ಕ್ರಾಸ್ ಮಾಡಲು ಒಗ್ಗವು. ಏಕೆಂದರೆ ಇವುಗಳ ಗರ್ಭಧಾರಣಾ ಸಮಯದ ಬೆದೆಯು ಅಷ್ಟು ಸುಲಭವಾಗಿ ತಿಳಿಯುದಿಲ್ಲ. ತಿಳಿದರೂ ಸುಲಭವಾಗಿ ಗರ್ಭ ನಿಲ್ಲವುದಿಲ್ಲ! ಅಷ್ಟರ ಮಟ್ಟಿಗೆ ತನ್ನ ಸ್ವಜಾತೀಯ ಆಶೊತ್ತರಗಳನ್ನು ಉಳಿಸಿಕೊಂಡು ಬಂದಿದೆ. ಅದಕ್ಕೆ ಗೌಳಿಗಳು ಎಮ್ಮೆಗಳ ಮಂದೆಯಲ್ಲಿ ಒಂದು ಕೋಣ ಸಾಕುವುದನ್ನೇ ಹೆಚ್ಚು ಪರಿಣಾಮಕಾರಿ ಎಂದುಕೊಂಡಿದ್ದಾರೆ.

        ಜತೆಗೆ ಎಮ್ಮೆಯ ಹಾಲು ಹಸುವಿನ ಹಾಲಿಗಿಂತಲೂ ಹೆಚ್ಚು ಪೌಷ್ಟಿಕವಾದದು. ಇಷ್ಟೆಲ್ಲಾ ಇದ್ದೂ ನಾವು ಅದಕ್ಕೆ ಹಸುವಿನಂತೆ ದೈವತ್ವ ಕೊಡಲಾಗಿಲ್ಲ, ಹೆಚ್ಚುಗಾರಿಕೆಯನ್ನು ಕೊಟ್ಟಿಲ್ಲ, ಗೌರವದ ಮಾತೂ ಇಲ್ಲ. ಕಪ್ಪಾಗಿರುವ ಅದರ ಬಣ್ಣದ ಕಾರಣಕ್ಕೇನೋ ಹಸುವಿನ ಹಾಗೆ ಅದಕ್ಕೆ ಆದರಾತಿಥ್ಯಗಳಿಲ್ಲ. ಈ ದೃಷ್ಟಿಯಲ್ಲಿ ಎಮ್ಮೆ ಒಂದು ರೀತಿಯ ಶೂದ್ರ. ಆದರೆ ಹಾಲು ಮಾತ್ರ ಹಸುವಿನ ಹಾಲಿಗಿಂತಲೂ ಹೆಚ್ಚು ಬಿಳಿ! ಮಾತ್ರವಲ್ಲ ಅದರ ಮಹತ್ವ ಹಸುವನ್ನೂ ಮೀರಿಸುವಂತಹದ್ದು. ಧರಣಿಮಂಡಲ ಮಧ್ಯೆದೊಳಗೆ ಇರುವ ಕರ್ನಾಟದೇಶದೊಳಿರುವ ಗೊಲ್ಲ ಕಾಳಿಂಗನ ಕರೆಯಲ್ಲಿನ ಗಂಗೆ, ತುಂಗೆ ಮತ್ತು ಪುಣ್ಯಕೋಟಿಯರೆಲ್ಲರೂ ಹಸುಗಳೆ! ಅದಲ್ಲದೆ ‘ಇಟ್ಟರೆ ಸಗಣಿಯಾದೆ ತಟ್ಟದರೆ ಕುರುಳಾಗುವ’ ಗೀತೆಯೂ ಹಸುವಿನದೇ. ಇವುಗಾಳವುದಕ್ಕೂ ಸಾಟಿಯಲ್ಲದ, ಇನ್ನೂ ಹೆಚ್ಚಿನ ಗುಣಗಳುಳ್ಳ ಎಮ್ಮೆಯನ್ನು ಮಾತ್ರ ದೈವತ್ವಕ್ಕೇರಿಸಿ ವೈಭವೀಕರಿಸಿಲ್ಲ. ಅದಕ್ಕೆ ಎಮ್ಮೆಯನ್ನು ವಿಶ್ವಾಮಿತ್ರ ಸೃಷ್ಟಿ ಎಂತಲೂ ಕರೆದು, ಸಂಪ್ರಾದಾಯಿಕತೆಯಿಂದ ದೂರವೇ ಇಟ್ಟಿದ್ದಾರೆ.

ಎಮ್ಮೆಗಳ ಸುಮಾರು ಐದು ಪ್ರಭೇದಗಳ 72 ತಳಿಗಳು ಜಗತ್ತಿನಾದ್ಯಂತ ಹಬ್ಬಿವೆ. ಅವೆಲ್ಲಾ ಭಾರತೀಯತೆಯನ್ನೇ ಹಂಚಿಕೊಂಡು ಹರಡಿವೆ. ಭಾರತದಲ್ಲಿ 12ತಳಿಗಳು ಇದ್ದು ಸುಮಾರು ಐದಾರು ಹೆಚ್ಚು ಜನಪ್ರಿಯವಾಗಿವೆ. ಅಷ್ಟೇ ಅಲ್ಲ ಜಗತ್ತಿನ ಅರ್ಧಕ್ಕಿಂತ ಹೆಚ್ಚಿನ ಎಮ್ಮೆಗಳು ಭಾರತದಲ್ಲೇ ಇವೆ. ನಂತರದಲ್ಲಿ ಪಾಕಿಸ್ಥಾನವಿದ್ದು, ಈ ಎರಡೂ ದೇಶಗಳೇ ಹೆಚ್ಚೂ ಕಡಿಮೆ ಜಗತ್ತಿನ ಮುಕ್ಕಾಲು ಪಾಲು ಎಮ್ಮೆಗಳನ್ನು ಹೊಂದಿವೆ. ಪಾಶ್ಚಾತ್ಯರಿಗೆ ಎಮ್ಮೆಯ ಹಾಲೂ ಪ್ರಿಯವಲ್ಲ. ಆದರೆ ಅಪವಾದ ಎಂಬಂತೆ ಇಟಲಿಯಲ್ಲಿ ಮಾತ್ರ ಎಮ್ಮೆಯ ಹಾಲಿನ ಬಳಕೆಯಿದೆ.  

ಎಮ್ಮೆಯ ಹಾಲಿನಲ್ಲಿ ಹೆಚ್ಚು ಕೊಬ್ಬು ಇದ್ದರೂ, ಹಸುವಿನ ಹಾಲಿಗಿಂತಾ ಕಡಿಮೆ ಕೊಲೆಸ್ಟರಾಲ್ ಇದೆ. ಹಸುವಿನ ಹಾಲಿನಲ್ಲಿ ನಾಲ್ಕೂವರೆಪಟ್ಟು ಹೆಚ್ಚು ಕೊಲೆಸ್ಟರಾಲ್ ಇದೆ. ಎಮ್ಮೆಯ ಹಾಲು ಬೇಗ ಕೆಡುವುದಿಲ್ಲ. ಜತೆಗೆ ಹೆಚ್ಚಿನ ಆಹಾರಾಂಶಗಳನ್ನೂ ಹೊಂದಿದೆ. ಕ್ಯಾಲ್ಸಿಯಂ, ಕಬ್ಬಿಣ ಮತ್ತು ರಂಜಕವನ್ನು ಹಸುವಿನ ಹಾಲಿಗಿಂತಾ ಹೆಚ್ಚೇ ಹೊಂದಿದೆ. ಕೇವಲ ಕೊಬ್ಬು ಹೆಚ್ಚಿರುವ ಕಾರಣದಿಂದ ಮಕ್ಕಳಲ್ಲಿ ಬೇಗ ಜೀರ್ಣವಾಗುವುದಿಲ್ಲ ಎಂಬುದನ್ನು ಬಿಟ್ಟರೆ ಎಲ್ಲದರಲ್ಲೂ ಎಮ್ಮೆಯ ಹಾಲೇ ಶ್ರೇಷ್ಠವಾಗಿದೆ. ಹಸುವಿನ ಹಾಲಿಗಿಂತಾ 11.42% ಅಧಿಕ ಪ್ರೊಟೀನ್, ಜತೆಗೆ ಹೆಚ್ಚಿನ ‘ಎ’ ವಿಟಮಿನ್ ಅನ್ನೂ ಹೊಂದಿದೆ.

*      *     

ದಡ್ಡರನ್ನು ಎಮ್ಮೆಗಳಿಗೆ ಹೋಲಿಸುವುದುಂಟು. ಎಮ್ಮೆಗಳು, ದಡ್ಡ, ಮಂದ ಅಂದುಕೊಂಡವರರು ಈ ಮುಂದಿನದನ್ನು ಓದಿಯಾದರೂ ತಮ್ಮ ಅಭಿಪ್ರಾಯ ಬದಲಿಸಬೇಕು. ಈ ಕೆಳಗಿನ ಸನ್ನಿವೇಶಗಳು ಅವುಗಳ ಸೂಕ್ಷ್ಮಮತಿಯನ್ನು, ಜಾಣತನವನ್ನೂ ವಿವರಿಸುತ್ತವೆ. ನಾನು ನಾಲ್ಕೈದು ವರ್ಷದವನಾಗಿದ್ದಾಗ ಮಲೆನಾಡಿನ ಅಂಚಿನ ನಮ್ಮೂರಿನಲ್ಲಿ ನನ್ನ ತಂದೆ ಎಮ್ಮೆಗಳದ್ದೇ ಒಂದು ಡೈರಿಯನ್ನು ಮಾಡಿದ್ದರು. ನಮ್ಮ ಮನೆಯಲ್ಲಿ ಸುಮಾರು 14 ಎಮ್ಮೆಗಳಿದ್ದವು. ಅವನ್ನೆಲ್ಲಾ ವಿವಿಧ ಊರುಗಳಿಂದ ಕೊಂಡು ತಂದಿದ್ದರು. ಕೆಲವನ್ನು ಧಾರವಾಡ ಜಿಲ್ಲೆಯಿಂದ ನೂರಾರು ಮೈಲು ದೂರದಿಂದ, ತಂದಿದ್ದರೆ, ಮತ್ತೆ ಕೆಲವನ್ನು ಅಲ್ಲೇ ಹತ್ತಿರದ ಹತ್ತಾರು ಮೈಲಿ ಹಳ್ಳಿಗಳಿಂದ ಕೊಂಡಿದ್ದರು. ಅವುಗಳಲ್ಲಿ ಒಂದು ಕೇವಲ ಮೂರು-ನಾಲ್ಕು ಕಿ,ಮೀ ದೂರದ ಹಳ್ಳಿಯದು. ಅದು ಮೊದಲು ಬಂದ ಎಮ್ಮೆ, ನಂತರ ಉಳಿದವನ್ನು ತಂದಿದ್ದರು. ಅದರಲ್ಲೂ ಧಾರವಾಡದಿಂದ ಹರಿಹರಕ್ಕೆ ರೈಲಿನಿಂದ ಪ್ರಯಾಣ ಮಾಡಿ, ಮುಂದೆ ಒಂದೆರಡು ದಿನ ನಡೆದು ಮಲೆನಾಡಿನ ಅಂಚಿನ ಶಿವಮೊಗ್ಗೆಯ ಸಮೀಪದ ನನ್ನೂರಿಗೆ ಬಂದಿದ್ದವು.  ಈ ಎಮ್ಮೆಗಳು ತುಸು ತಡವಾಗಿ ಮಂದೆಯನ್ನು ಸೇರಿದ್ದವು. ಹೀಗೆ ಒಟ್ಟು ಹದಿನಾಲ್ಕು ಎಮ್ಮೆಗಳು ಒಂದು ಗುಂಪಾಗಿ ನಮ್ಮಲ್ಲಿದ್ದವು.

ಒಂದು ದಿನ ಎಂದಿನಂತೆ ಅವುಗಳನ್ನು ಮೇಯಲು ಹೊರಗೆ ಕಳಿಸಲಾಗಿತ್ತು. ಇದ್ದಕ್ಕಿದ್ದಂತೆ ಅವುಗಳಾವುವೂ ಮನೆಗೆ ಹಿಂದಿರುಗಿ ಬಾರದೆ, ಎಲ್ಲವೂ ಇದ್ದಕ್ಕಿದ್ದಂತೆ ಮಾಯವಾಗಿದ್ದವು. ಅಪ್ಪನಿಗೋ ಕಳವಳ, ಆತಂಕ ಎಲ್ಲಿ ಹುಡುಕುವುದೆಂಬ ಚಿಂತೆ! ಮರುದಿನ ಎಲ್ಲವನ್ನೂ ಹತ್ತಿರದಿಂದ ತಂದ ಎಮ್ಮೆಯ ಹಿಂದಿನ ಮಾಲೀಕರು ತಮ್ಮೂರಿಗೆ ಬಂದ ಅವುಗಳನ್ನು ವಾಪಾಸ್ಸು ಹೊಡೆದುಕೊಂಡು ಬಂದು ಒಪ್ಪಿಸಿದ್ದರು. ಒಂದು ಎಮ್ಮೆಯ ಮಾರಿದಕ್ಕೆ ಹತ್ತನ್ನು ಕರೆತಂದಿದ್ದ ತಮ್ಮ ಎಮ್ಮೆಯ ಬಗ್ಗೆ ಹೆಮ್ಮೆಯ ಮಾತಾಡಿದ್ದರು. ಆಗಿನ ಈ ನೆನಪುಗಳಿಗೆ ವಿವರಗಳನ್ನು ಈಗ ಹುಡುಕಿ ವಿಶ್ಲೇಷಿಸಿದರೆ ಹೀಗಾಗುವುದ ಖಂಡಿತ! ಮಂದೆಯಲ್ಲಿ ಇದ್ದ ಹತ್ತಿರದ ಊರಿನ ಎಮ್ಮೆಗೆ ರೈಲಿನಿಂದ, ಎರಡು ಮೂರು ದಿನ ನಡೆದ ಬಂದ ಎಮ್ಮೆಗಳು ತಮ್ಮ ಪ್ರಯಾಣದ ಕುರಿತು ವಿವರ ಹೇಳಿರಬೇಕು. ಇದು ತನ್ನೂರು ಹತ್ತಿರದ ಹಾದಿ ಎಂದೂ ಹೇಳಿರಲಿಕ್ಕೆ ಸಾಕು. ಜೊತೆಗೆ ಅದನ್ನು ತನ್ನೂರಿಗೆ ಆಹ್ವಾನಿಸಿದ್ದರೂ ಆದೀತು. ಸರಿ ಒಮ್ಮೆ ನೋಡಿಯೇ ಬರುವ ಎಂದು ಅವುಗಳು ಮಾತಾಡಿಕೊಂಡಿರಬೇಕು, ಹಾಗಾಗಿ ಅವುಗಳನ್ನು ಕರೆದುಕೊಂಡೇ ತನ್ನ ಊರಿಗೆ ಹೋಗಿತ್ತು.

       ಹತ್ತಾರು ವರ್ಷಗಳ ಹಿಂದಿನ ಮತ್ತೊಂದು ಸಂಗತಿ, ನನ್ನ ಗೆಳೆಯರೊಬ್ಬರ ಮನೆಯಲ್ಲಿ ಒಂದು ಎಮ್ಮೆಯಿತ್ತು.. ತೀರ್ಥಹಳ್ಳಿಯ ದಟ್ಟ ಕಾನನದ ಮಧ್ಯೆ ನಿಶಬ್ದ ವಾತಾವರಣದ ಹಳ್ಳಿಯ ಮನೆಯದು. ಅವರ ಮನೆಗೆ ಯಾರಾದರೂ ಅತಿಥಿಗಳು ಬಂದರೆ ಆಗುವ ಗಲಾಟೆಯಿಂದಾಗಿ ಅಂದು ಅದು ಹಾಲು ಕೊಡುತ್ತಿರಲಿಲ್ಲ! ಮನೆಗೆ ಬಂದವರಿಂದಾದ ಹೆಚ್ಚಿನ ಗದ್ದಲದಿಂದಲೇ ಅದು ಮನೆಯ ವಾತಾವರಣ ಬದಲಾದ್ದನ್ನು ತಿಳಿದುಕೊಳ್ಳುತ್ತಿತ್ತು. ಅಷ್ಟೊಂದು ಸೂಕ್ಷ್ಮವಾದ ಎಮ್ಮೆಯದು. ಹಾಗಾಗಿ ನಾನೇ ಅವರ ಮನೆಗೆ ಹೋಗಬೇಕಾದಗೆಲ್ಲಾ ಮೊದಲೇ ಹೇಳಿ ಹೋಗುತ್ತಿದ್ದು, ಅಷ್ಟರೊಳಗೆ ಹಾಲು ಕರೆದುಕೊಳ್ಳಲೂ ಕೇಳಿಕೋಳ್ಳುತ್ತಿದ್ದೆ!

       ನಮ್ಮಲ್ಲೊಂದು ಎಮ್ಮೆ ಗರ್ಭಧರಿಸಿದ್ದಾಗ ನಾನಿನ್ನೂ ಐದಾರನೇ ತರಗತಿಯ ವಿದ್ಯಾರ್ಥಿ. ಪ್ರಾಣಿಗಳು ಹೇಗೆ ಕರುಗಳನ್ನು ಹಾಕುತ್ತವೆ ಎಂಬ ಕುತೂಹಲ. ತಾಯಿಯ ಹೊಟ್ಟೆಯಿಂದ ಕರು ಹೊರಗೆ ಬರುವುದನ್ನು ನೋಡಲೇಬೇಕೆಂಬ ಆಸೆ. ಕಾಯುತ್ತಾ ಕುಳಿತೆ. ಆ ಎಮ್ಮೆ ಮಾತ್ರ ಯಾರು ಎದುರಿನಲ್ಲಿದ್ದರೂ ಕರು ಹಾಕುತ್ತಿರಲಿಲ್ಲ. ಕಾದು ಬೇಸತ್ತು ಒಳಗೆ ಬಂದಾಗ ಅದ್ಯಾವ ಮಾಯದಲ್ಲೋ ಕರು ಹಾಕಿರುತ್ತಿತ್ತು. ಅಷ್ಟೊಂದು ನಾಚಿಕೆಯ ಸ್ವಭಾವ ಅದರದ್ದು! ಹಾಗೇಯೇ ಯಾರೊಬ್ಬರಿಲ್ಲದ ಸಮಯ ನೋಡಿಯೇ ಮೂರು- ನಾಲ್ಕು ಕರುಗಳನ್ನು ಹಾಕಿತ್ತು. 

ಮತ್ತೊಬ್ಬ ಗೆಳೆಯರ ಮನೆಯಲ್ಲಿ ಒಂದು ತುಂಬಾ ಧಾರಾಳಿ ಎಮ್ಮೆ ಇತ್ತು. ಅದು ಅವರ ಮನೆಯಲ್ಲೇ ಹುಟ್ಟಿದ್ದು. ಮೊದಲನೇ ಕರು ಹಾಕಿದಾಗ ಹಾಲು ಕೊಡತೊಡಗಿದ್ದನ್ನು ಅದು ನಿಲ್ಲಿಸಲೇ ಇಲ್ಲ. ಆರೆಂಟು ಕರು ಹಾಕಿಯೂ ಮೊದಲ ಕರು ಹಾಕಿದಂದಿನಿಂದಲೇ ಕಡೆಯವರಗೂ ಹಾಲು ಕೊಡುತ್ತಲೇ ಇತ್ತು. ಅವರ ಮನೆಯಲ್ಲಿ ಅದನ್ನು ದೇವರೇ ಅಂದುಕೊಂಡಿದ್ದರು. ಅವರ ತಂದೆ ಅದಕ್ಕೆ ಕೈಮುಗಿದು ನಮ್ಮವ್ವ ದಿನಾಲು ಹಾಲು ಕೊಡುತ್ತಾಳೆ ಎನ್ನುತಿದ್ದರು! ಸಾಲದಕ್ಕೆ ಅದರ ಹಾಲನ್ನು ಅವು ಮಾರುತ್ತಲೂ ಇರಲಿಲ್ಲ. ಅದರ ಹಾಲು, ಹಾಲಿನ ಮೊಸರು, ಮಜ್ಜಿಗೆ ಹಾಗೂ ಬೆಣ್ಣೆಯನ್ನೂ ಸಹಾ ಫ್ರೀಯಾಗಿ ಕೊಡುತ್ತಿರೇ ವಿನಾ ಅವನ್ನು ಮಾರಾಟ ಮಾಡುತ್ತಿರಲಿಲ್ಲ. ಅವರ ಮನೆಯ ಕಾಮಧೇನು-ಎಮ್ಮೆಯಾಗಿತ್ತು.

ನಾಚಿಕೆ, ಸೂಕ್ಷ್ಮಮತಿ, ನಿರ್ಲಿಪ್ತತೆ, ನೆಮ್ಮದಿ, ಭಾವುಕತೆ, ಧಾರಾಳತನ, ಶಾಂತತೆ ಎಲ್ಲದರಲ್ಲೂ ಎಮ್ಮೆಗಳು ಅಪ್ಪಟ ಭಾರತೀಯ! ಆದರೆ ನಾವು ಭಾರತೀಯರು ಎಮ್ಮೆಗಳಿಗೆ ಹಸುಗಳಿಗೆ ಕೊಟ್ಟಷ್ಟು ಆಧ್ಯತೆ ಕೊಡದಿರಬಹುದು! ಅವುಗಳ ಕುರಿತ ಸಂರಕ್ಷಣೆ, ಅಧ್ಯಯನ, ಸಂಶೋಧನೆ ಏನಿದ್ದರೂ ನಮ್ಮವರೇ ಮಾಡಬೇಕಿದೆ. ಆದರೂ ನಮ್ಮವರಿಂಗಿಂತಾ ಇತರೇ ದೇಶದ ವಿಜ್ಞಾನಿಗಳೇ ಹೆಚ್ಚು ಆಪ್ತವಾಗಿಸಿಕೊಂಡಿದ್ದಾರೆ. ಎಲ್ಲಾ ಮನುಷ್ಯರೂ ಸುಲಭದಲ್ಲಿ ಗಳಿಸಿಕೊಳ್ಳಲಾಗದ ನೆಮ್ಮದಿ ಮತ್ತು ನಿರ್ಲಿಪ್ತತೆಯನ್ನು ಅವರ ಜೊತೆಗಿದ್ದೇ ಗಳಿಸಿಕೊಂಡ ಜೀವಿ ಎಮ್ಮೆ. ಭಾರತೀಯರ ಹೆಮ್ಮೆ.

ನಮ್ಮ ಎಮ್ಮೆಗಳ ವೈಜ್ಞಾನಿಕ ವಿಚಾರಗಳು ಹಾಗೂ ತಳಿನಕ್ಷೆ !

ಎಮ್ಮೆಗಳು ನಮ್ಮ ದೇಶದಲ್ಲಿ ಮಾತ್ರವಲ್ಲ ಜಗತ್ತಿನ ಜೈವಿಕ ಇತಿಹಾಸದಲ್ಲೂ ಹೆಸರು ಮಾಡಿವೆ. ವೈಜ್ಞಾನಿಕ ಜಗತ್ತಿನಲ್ಲೂ ಎಮ್ಮೆಗಳು ಮಹತ್ತರವಾದ ಸುದ್ದಿಯಲ್ಲಿವೆ! ಸುಮಾರು ಇಂದಿಗೆ 6500 ವರ್ಷಗಳ ಹಿಂದೆಯೇ ವನ್ಯ ಎಮ್ಮೆಗಳನ್ನು ಸಾಕುವುದಕ್ಕೆ ಭಾರತದಲ್ಲೇ ಆರಂಭಿಸಲಾಗಿದೆ. ಈಗಿರುವ ಎಮ್ಮೆಗಳು ಬಬಾಲಸ್‌ ಬಬಾಲಿಸ್‌ (Bubalus bubalis) ಪ್ರಭೇದವು ವನ್ಯ ಪ್ರಭೇದವಾದ ಬಬಾಲಸ್‌ ಆರ್ನೀ (Bubalus arnee) ಯಿಂದ ವಿಕಾಸಗೊಂಡು, ವಿವಿಧತೆಯನ್ನು ಪಡೆದು ಹಲವು ತಳಿಗಳಾಗಿವೆ. ಜಗತ್ತಿನಾಧ್ಯಂತ ಸುಮಾರು 208 ರಿಂದ 210 ದಶಲಕ್ಷಕ್ಕೂ ಹೆಚ್ಚು ಎಮ್ಮೆಗಳನ್ನು ಸುಮಾರು 77 ರಾಷ್ಟ್ರಗಳಲ್ಲಿ ಸಾಕಲಾಗುತ್ತಿದೆ. ಮುಖ್ಯವಾಗಿ ಎರಡು ಬಗೆಯ ಎಮ್ಮೆಗಳಿವೆ. ನದಿ ಎಮ್ಮೆಗಳು (River Buffalos) ಮತ್ತು ಜೌಗು ಎಮ್ಮೆಗಳು (Swamp Buffalos). ನದಿ ಅಥವಾ ನೀರೆಮ್ಮೆಗಳು ವಾಯುವ್ಯ ಭಾರತದ ನೆಲದಿಂದ ಹಂಚಿ ಪಾಕಿಸ್ಥಾನ, ಆಫ್‌ಘಾನಿಸ್ಥಾನ ದಾಟಿ ಈಜೀಪ್ಟ್‌ವರೆಗೂ ಹರಡಿ ನೆಲೆಯನ್ನು ಕಂಡಿವೆ. ಜೌಗು ಅಥವಾ ಕೆಸರು ಎಮ್ಮೆಗಳು ಎಂಬ ಬಗೆಯವು ಅಸ್ಸಾಂ, ಬಾಂಗ್ಲಾ, ಸುತ್ತಮುತ್ತ ವಿಕಾಸಗೊಂಡು ಇಂಡೊನೇಶಿಯಾ ಮಲೇಶಿಯಾ ದಾಟಿ ಆಸ್ಟ್ರೇಲಿಯಾವರೆಗೂ ಹರಡಿ ನೆಲೆಯನ್ನು ಕಂಡಿವೆ. ತಳಿಗಳಲ್ಲೂ ವಿವಿಧತೆಯಿದ್ದು ನೋಟದಲ್ಲೂ ಭಿನ್ನತೆಯನ್ನು ಹೊಂದಿವೆ.  (ಆಫ್ರಿಕಾ ಹಾಗೂ ಅಮೆರಿಕಾದಲ್ಲಿ ವನ್ಯ ತಳಿಗಳಿದ್ದು ಅವು ನಮ್ಮ ಸಾಕು ಎಮ್ಮೆಗಳಿಗೆ ದೂರದ ಸಂಬಂಧಿ)

ಎಮ್ಮೆಗಳೂ ಸಹಾ ನಾಯಿಗಳು ತಮ್ಮ ಪೂರ್ವಜರಾದ ತೋಳಗಳನ್ನು ಹೋಲುವಂತೆ ಕಾಡೆಮ್ಮೆಗಳನ್ನು ಹೋಲುತ್ತವೆ. ಈಗಾಗಲೇ ಸಾಕಿರುವ ಎಮ್ಮೆಗಳೂ ಸಹಾ ಮೊದಲು ಭಾರತದಲ್ಲೂ ಪಶ್ಚಿಮ ಭಾಗದಲ್ಲೇ ಸಾಕಲು ಆರಂಭಿಸಿದ್ದು ಹಾಗೇ ಮುಂದುವರೆದು ಪಾಕಿಸ್ಥಾನ, ಆಫ್‌ಘಾನೀಸ್ತಾನ ದಾಟಿ ಈಜಿಪ್ಟ್‌ವರೆಗೂ ನೆಲೆಕಂಡಿವೆ. ಹಾಗಾಗಲು ಸುಮಾರು 3000 ವರ್ಷಗಳು ಬೇಕಾಗಿರಬಹುದೆಂದು ಸಂಶೋಧಕರ ಅಭಿಪ್ರಾಯ. ಹೀಗೆ ಹರಡಿರುವ ಬಹುಪಾಲು ಸಾಕು ಎಮ್ಮೆಗಳನ್ನೇ ರಿವರ್‌ ಬಫೆಲೊ ಎಂದು ಕರೆಯುವುದು. ಮತ್ತೊಂದು ಬಗೆಯವಾದ ಸ್ವಾಂಪ್‌ ಬಫೆಲೊಗಳು ನಮ್ಮಲ್ಲಿ ಇಲ್ಲ. ಇಂಡೊನೇಶಿಯಾದ ಆಚೀಚೆ ಮತ್ತು ಆಸ್ಟ್ರೇಲಿಯಾದವರೆಗೂ ಹರಡಿವೆ. ಇವು ನಮ್ಮ ಎಮ್ಮೆಗಳಿಗಿಂತಾ ಗಾತ್ರದಲ್ಲಿ ತುಸು ಚಿಕ್ಕವು.  

       ಈ ಎಮ್ಮೆಯ ಜೈವಿಕ ಸಾಮ್ರಾಜ್ಯದ ಸ್ಥಿತಿ-ಗತಿಗಳ ವಿಶೇಷತೆಯಿಂದಾಗಿ ಅವುಗಳ ಆನುವಂಶಿಕ ವಿವರಗಳ ಮತ್ತು ಹರಡಿ ಒಗ್ಗಿರುವ ವಿಚಾರಗಳ ಹಿನ್ನೆಲೆಯಲ್ಲಿ ಅವುಗಳ ವಿಶೇಷ ಅಧ್ಯಯನಗಳು ನಡೆದಿವೆ. ಅದರಲ್ಲಿ ತೀರಾ ಇತ್ತೀಚೆಗಿನ ವಿಶೇಷತೆಯೆಂದರೆ ಅವುಗಳ ತಳಿನಕ್ಷೆಯನ್ನೂ ಸಹಾ ತಯಾರಿಸಿ ವಿಶ್ಲೇಷಿಸಿದ ಸಂಗತಿ. ನಮ್ಮ ಮಾನವ ತಳಿ ನಕ್ಷೆ ಬಂದು ನಾವೆಲ್ಲಾ ನಮ್ಮ ವಂಶವಾಹಿಗಳ ವೈವಿದ್ಯಮಯ ಅರಿವನ್ನೂ ಭೂಪಟದಲ್ಲೊ ವಿನ್ಯಾಸ ಕೊಟ್ಟ ಹಾಗೆ ಇದೀಗ ಎಮ್ಮೆಗಳ ತಳಿ ನಕ್ಷೆಯು ಪ್ರಕಟವಾಗಿದೆ. ಅಂತಹ ಒಂದು ಮಹತ್ರವಾದ ಕೆಲಸ ನಮ್ಮ ಎಮ್ಮೆಗಳ ಕುರಿತೇ ಆಗಿದೆ. ನಮ್ಮವು ಎಂದರೆ ಅಕ್ಷರಶಃ ನಮ್ಮವೇ! ಏಕೆಂದರೆ ಜಗತ್ತಿನ 65% ಎಮ್ಮೆಗಳು ನಮ್ಮ ದೇಶದಲ್ಲೇ ಇವೆ. ನಮ್ಮ ದೇಶದ ಹಾಲುಕೊಡುವ 35% ಪ್ರಾಣಿಗಳಾದ ಎಮ್ಮೆಗಳು ದೇಶದ ಹಾಲಿನ ಒಟ್ಟು ಉತ್ಪನ್ನದಲ್ಲಿ 60% ಕ್ಕೂ ಹೆಚ್ಚು ಪಾಲನ್ನು ಹೊಂದಿವೆ. ಇಷ್ಟೆಲ್ಲಾ ಮುಖ್ಯವಾದ ವಿಚಾರವೇ ಇದ್ದರೂ ಎಮ್ಮೆಗಳ ಇತಿಹಾಸ, ತಳಿ ವಿಕಾಸ, ಹಾಗೂ ಆನುವಂಶಿಕ ವಿವರಗಳ ತಳಿ ನಕೆಯನ್ನೂ ಅನ್ಯರೇ ಮಾಡಿದ್ದಾರೆ. ಉತ್ತರ ಪ್ರದೇಶದ ಬುಲಂದ್‌ಶಾ (Bulandshahr) ನಲ್ಲಿ ಸುಮಾರು 16 ಅಡಿ ಉದ್ದದ “ಬಲವಾನ್‌” ಎಂದು ಹೆಸರಿಸಿರುವ ಎಮ್ಮೆಯು ಎರಡು ಕೋಟಿ ರುಪಾಯಿಗಳ ಬೆಲೆಯದ್ದಾಗಿದೆ. ಸುಮಾರು 25 ಲೀಟರ್‌ ಹಾಲು ಕೊಡುತ್ತಿರುವ ಅದರ ತಾಯಿ ಕೂಡ 23ಲೀ ಗೂ ಹೆಚ್ಚು ಹಾಲನ್ನು ಕೊಡುತ್ತಿತ್ತು.   

ನಮ್ಮಲ್ಲಿ ಗೋರಕ್ಷಣೆಗೆ ಟೊಂಕ ಕಟ್ಟಿದ ಅನೇಕ ಮಠಮಾನ್ಯಗಳು, ಸಂಸ್ಥೆಗಳೂ ಇವೆ. ಅವು ಗೋಶಾಲೆಗಳನ್ನು ನಿರ್ವಹಿಸುತ್ತಿವೆ. ಆದರೆ ಅಪ್ಪಟ ಭಾರತೀಯವಾದ ಎಮ್ಮೆಗೆ ರಕ್ಷಣೆಯ ಅದೃಷ್ಟ ಗೋವಿಗಿದ್ದ ಹಾಗೆ ಇಲ್ಲ! ನಮ್ಮ ಸಂಸ್ಕೃತಿಯ ಸಂಪ್ರದಾಯದಲ್ಲಿ ನಡೆಯುವ ಮಾರಿಹಬ್ಬದಲ್ಲಿ ಎಮ್ಮೆಯು ಬಲಿಯಾಗುವ ಶಾಪ ಮಾತ್ರ ಇದೆ. ಅದರ ರಕ್ಷಣೆಗೆ ನಾವೇನು ಮಾಡಿದ್ದೇವೆ? ವಸ್ತು ಸ್ಥಿತಿ ಹೀಗಿರುವಾಗ ಎಮ್ಮೆಗಳ ಪಾಲಿಗೆ ತಳಿ ನಕ್ಷೆಯ ಈ ಕಾರ್ಯ ಒಂದು ಸುಯೋಗವೇ. ಮಾನರರ ಹೊರತಾಗಿ ಇತರೇ ಪ್ರಾಣಿಗಳ ತಳಿನಕ್ಷೆಯಲ್ಲಿ ಒಂದಾಗಿ ನಮ್ಮ ಎಮ್ಮೆಗಳ ಪಾಲಂತೂ ಇದೆ. ಎಮ್ಮೆಗಳು ಹೇಳಿ ಕೇಳಿ ಅಪ್ಪಟ ಭಾರತೀಯ! ಬಲು ಸಂಕೋಚದ ಪ್ರಾಣಿ, ಜತೆಗೆ ನಾಚಿಕೆ ಕೂಡ! ಇವೆಲ್ಲಾ ಇದ್ದೂ ಅನಾಗರೀಕ ಪದವಿಯನ್ನೆ ಹೊತ್ತು ನಮ್ಮೆಲ್ಲಾ ಸಂಪ್ರದಾಯಗಳಿಂದ ದೂರವಿರುವ ನಮ್ಮ ಒಡನಾಡಿ. ಅದ್ಭುತವಾದ ಹಾಲಿನ ಗುಣದ ಜೊತೆಗೆ ಹೆಚ್ಚು ಹಾಲನ್ನೇ ಕೊಡುವ ತಳಿಗಳು ನಮ್ಮಲ್ಲಿದ್ದರೂ ನಮ್ಮ ಪಾಶ್ಚ್ಯಾತ್ಯ ಮೋಹದಿಂದ ಹಸುಗಳ ಹಿಂದೆ ಬಿದ್ದ ತಳಿ ವಹಿವಾಟು. ಎಮ್ಮೆಗಳ ನಿರ್ಲಕ್ಷ್ಯ ಮಾಡಿರುವುದು ನಿಜ!

ಅಂತಹದ್ದರಲ್ಲಿ ಬಾಂಗ್ಲಾ ದೇಶವು, ಚೀನಾದ ಸಹಯೋಗದೊಂದಿಗೆ ಇದೀಗ ಇವೆಲ್ಲವನ್ನೂ ಹಿಮ್ಮೆಟ್ಟಿ ಎಮ್ಮೆಗಳ ವೈವಿಧ್ಯಮಯ ತಳಿ ನಕ್ಷೆಯನ್ನು ರೂಪುಗೊಳಿಸಿವೆ. ಇದರಿಂದ ಎಮ್ಮೆ ಜೀನುಗಳ ಎಲ್ಲಾ ಕಾರ್ಯವೈಖರಿಯ ವಿವರ ಲಭ್ಯವಾಗಲಿದೆ. ತಳಿ ಅಭಿವೃದ್ಧಿ ಅಲ್ಲದೆ ಅವುಗಳ ಕಾಡುವ ಸಮಸ್ಯೆಗಳಿಗೂ ಉತ್ತರಗಳ ಹುಡುಕಾಟಕ್ಕೆ ಅನುವಾಗಲಿದೆ. ಬಾಂಗ್ಲಾದೇಶದ ಲಾಲ್ ಟೀರ್ ಬೀಜ ಕಂಪನಿಯು ಚೀನಾದ ಬೀಜಿಂಗ್ ಜೀನೋಮಿಕ್ಸ್ ಸಂಸ್ಥೆಯ ಜೊತೆಗೂಡಿ ಎಮ್ಮೆಯ ತಳಿ ನಕ್ಷೆಯನ್ನು ಪೂರ್ಣಗೊಳಿಸಿದೆ. ಚೀನಾದ ಈ ಬೀಜಿಂಗ್ ಸಂಸ್ಥೆಯು ಮಾನವ ತಳಿ ನಕ್ಷೆಯಲ್ಲೂ ಮಹತ್ತರ ಪಾತ್ರ ವಹಿಸಿತ್ತು. ಸುಮಾರು 4000ಕ್ಕೂ ಹೆಚ್ಚು ವಿಜ್ಞಾನಿಗಳಿರುವ ಈ ಸಂಸ್ಥೆಯು ಇಂತಹ ಜೀವಿವೈಜ್ಞಾನಿಕ ಮಾಹಿತಿ ನಿರ್ಮಿತಿಯಲ್ಲಿ  ಅಗ್ರಗಣ್ಯ  ಜಗತ್ತಿನ ಅತೀ ದೊಡ್ಡ ಜೀನೋಮಿಕ್ಸ್ ಸಂಸ್ಥೆಯಾದ ಬೀಜಿಂಗ್ ಸಂಸ್ಥೆಯು ಮನುಕುಲದ ನೆರವಿಗಾಗಿ ವಿವಿಧ ತಳಿ ನಕ್ಷೆಗಳನ್ನು ನಿರ್ಮಿಸಿ ಶ್ರಮಿಸುತ್ತಿರುವ ಸಂಸ್ಥೆಯಾಗಿದೆ. ಈ ತಳಿ ನಕ್ಷೆಯಿಂದ ಎಮ್ಮೆಯ ವಿಕಾಸದ ಬಗೆಗೆ ಹೆಚ್ಚಿನ ತಿಳಿವನ್ನು ಕೊಡಲಿದ್ದು, ಅದರಿಂದ ಮುಂದೆ ಸಂತತಿಗಳ ವಿಕಾಸದಲ್ಲಿಯೂ ಅಲ್ಲದೆ ಅದರ ಸಾಕಣೆಯ ನಿರ್ವಹಣೆ ಕುರಿತಂತೆಯೂ ಅನುಕೂಲಕರವಾಗಲಿದೆ. ಉದಾಹರಣೆಗೆ ಎಮ್ಮೆಗಳಲ್ಲಿ ಗರ್ಭಧಾರಣೆಯ ಸಮಯ ಮತ್ತು ಆ ಕುರಿತ ತಿಳಿವಳಿಕೆ ಬಗೆಗೆ ಸಾಕಷ್ಟೇ ಅನುಮಾನಗಳು ಇವೆ. ಇವನ್ನೆಲ್ಲಾ ಹೆಚ್ಚಿನ ಅಧ್ಯಯನದಿಂದ ನಿಖರವಾಗಿ ತಿಳಿಯಬಹುದಾದ ಸಾಧ್ಯತೆಗಳಿವೆ. ಅದೂ ಅಲ್ಲದೆ ಅವುಗಳ ರೋಗ ರುಜಿನಗಳ ನಿರ್ವಹಣೆಯ ಬಗೆಗೂ ಸಾಕಷ್ಟೇ ತಿಳಿವು ಹೆಚ್ಚಲಿದೆ. 2012ರಿಂದಲೂ ಬಾಂಗ್ಲಾದ ಸಂಸ್ಥೆಯು ಇದಕ್ಕಾಗಿ ಶ್ರಮಿಸುತ್ತಲೇ ಬಂದಿತ್ತು. ಅಭಿವೃದ್ಧಿಶೀಲ ರಾಷ್ಟ್ರಗಳ ಬಹು ಮುಖ್ಯ ಪ್ರಾಣಿಯಾದ ಎಮ್ಮೆಯ ಬಗೆಗಿನ ಹೆಚ್ಚಿನ ತಿಳಿವಿಗಾಗಿ ಭಾರತ ಸೇರಿದಂತೆ ಆಗ್ನೇಯ ಏಶಿಯಾ ರಾಷ್ಟ್ರಗಳಲ್ಲಿ ತುಂಬಾ ಬೇಡಿಕೆಯಿತ್ತು. ಆದರೀಗ ನಮ್ಮ ಎಮ್ಮೆಯೂ ತಳಿನಕ್ಷೆಯನ್ನು ಹೊಂದಿದ ಜೀವಿಗಳ ಸಾಲಿಗೆ ಸೇರಿದೆ. ಬಾಂಗ್ಲಾ ಹಾಗೂ ಚೀನಾ ದೇಗಳು ಅದನ್ನು ಸಾಧಿಸಿವೆ.

ಈ ತಳಿ ನಕ್ಷೆಯ ಮಾಹಿತಿಯಂತೆ ಎಮ್ಮೆಗಳಲ್ಲಿ  ಸುಮಾರು 21,550 ಪ್ರೊಟೀನ್ ಸಂಕೇತಗಳ ಜೀನುಗಳಿದ್ದು ಇವೆಲ್ಲಾ ಮಾನವರ ಜೀನುಗಳ ಮಾಹಿತಿಗಿಂತಾ ಸ್ವಲ್ಪವೇ ಕಡಿಮೆ ಇವೆ. ಇದರ ಸಂಪೂರ್ಣ ವಿವರಗಳೀಗ ಮನುಕುಲದ ಬಳಕೆಗಾಗಿ ಲಭ್ಯವಿದ್ದು, ವೈಜ್ಞಾನಿಕ ಜಗತ್ತಿನಲ್ಲಿ ಹೊಸ ಮೈಲಿಗಲ್ಲೆಂದು ಬಗೆಯಲಾಗಿದೆ. ನಮ್ಮ ದೇಶದಲ್ಲೇ ಸುಮಾರು 12 ಜನಪ್ರಿಯ ತಳಿಗಳಿವೆ. ಮರ‍್ರಾ, ಜಾಫರ್‌ಬಾದಿ,  ಸುರ್ತಿ ಮುಂತಾದವುಗಳೆಲ್ಲವೂ ಇಲ್ಲಿನ ವೈವಿಧ್ಯಮಯ ವಾತಾವರಣಕ್ಕೆ ಹೊಂದಿಕೊಳ್ಳುವುದಲ್ಲದೆ ಹೆಚ್ಚು ಹಾಲನ್ನೂ ಕೊಡಬಲ್ಲವಾಗಿವೆ. ಆಗ್ನೇಯ ಏಶಿಯಾದ ರಾಷ್ಟ್ರಗಳಲ್ಲಿ ಮಹತ್ತರ ಪಾತ್ರವಹಿಸುತ್ತಿರುವ ಎಮ್ಮೆಗಳ ಬಗ್ಗೆ ಬಾಂಗ್ಲಾದೊಂದಿಗೆ ಕಾರ್ಯ ನಿರ್ವಹಿಸಿದ್ದು ಸಂತಸ ಸಂಗತಿ ಎಂಬುದು ಚೀನಾದ ನುಡಿಯಾದರೆ, ಚೀನಿಯರೆ ಜತೆಗೆ ನಮ್ಮ ಹೆಮ್ಮೆಯ ಎಮ್ಮೆಯ ಕೆಲಸ ಮಾಡಲು ನಾವೇ ಅದೃಷ್ಟಶಾಲಿಗಳು ಎಂದು ಬಾಂಗ್ಲಾ ಪ್ರತಿಕ್ರಿಯಿಸಿದೆ. ಏಶಿಯಾದ ಮನುಕುಲ ಸಂಗಾತಿಯಾದ ಎಮ್ಮೆಗಳು ಸಾಂಸ್ಕೃತಿಕವಾಗಿ ಸುದ್ದಿಗೆ ಮಾತ್ರವಲ್ಲದೇ ವೈಜ್ಞಾನಿಕವಾಗಿಯೂ ಮಹತ್ವವಾಗಿರುವುದು ರೈತರು ಹೆಮ್ಮೆ ಪಡಬೇಕಾದ ಸಂಗತಿಯಾಗಿದೆ.  

ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಅವರ ನಮ್ಮ ಎಮ್ಮೆಗೆ ಮಾತು ತಿಳಿಯುವುದೇ? ಎಂಬ ಹಾಸ್ಯ ಪ್ರಬಂಧ ಹೈಸ್ಕೂಲಿನಲ್ಲಿ ನಮಗೆ ಪಾಠವಾಗಿತ್ತು. ಎಮ್ಮೆಗಳನ್ನು ತೀರಾ ಹತ್ತಿರದಿಂದ ಕಂಡ ನನ್ನ ಬಾಲ್ಯದ ನೆನಪುಗಳ ಜೊತೆ ನಿಜಕ್ಕೂ ಎಮ್ಮೆಗಳಿಗೆ ಮಾತು ತಿಳಿಯುವುದೆಂದು ಅನುಭವಕ್ಕೆ ಬಂದಿತ್ತು. ಸಂಪತ್ತಿಗೆ ಸವಾಲ್‌ ಚಿತ್ರದಲ್ಲಿನ ಡಾ. ರಾಜಕುಮಾರ್‌ ಅಭಿನಯದ “ಎಮ್ಮೆ ನಿನಗೆ ಸಾಟಿಯಿಲ್ಲ.. ಬಿಸಿಲು ಮಳೆ ಚಳಿಗೆ ನೀನು …” ಹಾಡು ಕೇಳಿದಾಗೆಲ್ಲಾ ಹೌದು, ನಿಜ ಅಂತಲೇ ಅನ್ನಿಸುವುದು.

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್‌

ಹೆಚ್ಚಿನ ಓದಿಗೆ

Antonio Humberto Hamad Minervino, et all. 2020. Bubalus bubalis: A Short Story. Frontiers in Veterinary Science. Volume 7. https://doi.org/10.3389/fvets.2020.570413

Y. Zhang,  L. Colli and J. S. F. Barker., 2019.  Asian water buffalo: domestication, history and genetics. Animal Genetics.  doi: 10.1111/age.12911

Leave a Reply