You are currently viewing ನಾವು ಎಷ್ಟು ವರ್ಷ ಬದುಕಬಹುದು?

ನಾವು ಎಷ್ಟು ವರ್ಷ ಬದುಕಬಹುದು?

ಬಹುಶಃ ಈ ಪ್ರಶ್ನೆ ಎಲ್ಲರಲ್ಲೂ ಇದ್ದಿರಬಹುದು. ಅದರಲ್ಲೂ ಮಧ್ಯ ವಯಸ್ಕರಲ್ಲಿ ಇಂತಹದ್ದೊಂದು ಪ್ರಶ್ನೆ ಖಂಡಿತವಾಗಿಯೂ ಸಹಜವಾಗಿರುತ್ತದೆ. ಕೊರೊನಾ ದಾಟಿದ ಕಾಲದಲ್ಲಿ ಈ ಪ್ರಶ್ನೆಗೆ ಅಷ್ಟೆನೂ ಮಹತ್ವ ಇಲ್ಲ ಎನ್ನಿಸೀತು. ಆದರೆ ಕೊರೊನಾ – ಮುಂತಾದ ಯಾವುದೇ ಸೋಂಕಾಗಲಿ, ಕ್ಯಾನ್ಸರ್‌, ಹೃದ್ರೋಗ ಅಥವಾ ಆಕಸ್ಮಿಕ ಅಪಘಾತಗಳಿಂದ ಸಾವನ್ನಪ್ಪದಿದ್ದರೆ ಕೇವಲ ನಮ್ಮ ಆನುವಂಶೀಯತೆ ಹಾಗೂ ಜೀವನ ಕ್ರಮದ ಆಧಾರದಲ್ಲಿ ಅದೆಷ್ಟು ದಿನ ಬದುಕಬಲ್ಲವು ಎಂಬುದು ವಿಜ್ಞಾನಕ್ಕೂ ತುಂಬಾ ಕುತೂಹಲಕರವಾದ ಪ್ರಶ್ನೆಯೇ!

ಸಾಮಾನ್ಯವಾಗಿ ನಮ್ಮನ್ನು ಕೊಲ್ಲುವ ಕಾಯಿಲೆ ಮುಂತಾದ ವಿಷಯಗಳನ್ನು ಬಿಟ್ಟು ಸಹಾ ನಮ್ಮ ದೇಹದ ವಿವಿಧ ಚಟುವಟಿಕೆಗಳಾದ ಸಹಜವಾದ ಸಂರಚನೆಗಳ ಪುನಃ ಸ್ಥಾಪಿಸುವಿಕೆ -ಅಂದರೆ ಜೀವಿಕೋಶಗಳ ನಿರಂತರವಾದ ಉತ್ಪಾದನೆ, ರಿಪೇರಿ ಮುಂತಾದವುಗಳು ಅಲ್ಲದೆ ಚಯಾಪಚಯ ಕ್ರಿಯೆಗಳೂ ಸಹಾ ವಯಸ್ಸಾದಂತೆ ಕ್ಷೀಣಿಸುತ್ತವೆ. ಇವೆಲ್ಲವನ್ನೂ ನಿಭಾಯಿಸಿ ನಮ್ಮ ಬದುಕಿನ ಸಾಧ್ಯತೆಗಳ ನಿರ್ಮಿತಿಯು ನಿಸರ್ಗ ಸಮ್ಮತವಾದ ವಿಕಾಸವಾಗಿದೆ. ಹೀಗೆ ಎಲ್ಲವನ್ನೂ ಸಮದೂಗಿಸಿ ಹೆಚ್ಚೆಂದರೆ 125 ರಿಂದ 150 ವರ್ಷಗಳ ವರೆಗೆ ಮಾತ್ರವೇ ಬದುಕಲು ಸಾಧ್ಯ ಎಂಬುದನ್ನು ಗಣಿತ ಹಾಗೂ ಸಂಖ್ಯಾವಿಜ್ಞಾನದ ನಿಯಮಗಳ ಸಂಶೋಧನೆಗಳ ವಿವರಣೆಗಳು ದಾಖಲಿಸಿವೆ. ಈ ಸಾವು ಬದುಕಿನ ಸಂಘರ್ಷದೊಳಗಣ ಜೀವನವನ್ನು ಆರೋಗ್ಯ-ನೆಮ್ಮದಿ-ಚೇತನ ಗಳಿಂದ ಅಳೆದು ವಿವಿಧ ಮಾಪನಗಳಲ್ಲಿ ಸಂಶೋಧಿಸಿ ಈ ಒಂದು ನಿರ್ಧಾರವನ್ನು ತಳೆಯಲಾಗಿದೆ. ಹಾಗಾದರೆ ಕೆಲವು ವಿವರಗಳಿಂದ ಅವೆಲ್ಲವನ್ನೂ ತುಸು ನೋಡೋಣ.

ಇದರ ಮಾರ್ಗದಲ್ಲಿ ಜೀವಿಕೋಶಗಳೂ ಹಾಗೆಯೇ ಪರಿಪೂರ್ಣ ದೇಹ ಕೂಡ ವಯಸ್ಸನ್ನು ದಾಟುತ್ತಾ ಸಾಗುವುದೂ ಸೇರಿದೆ. ಇದನ್ನೂ ಗಮನಿನಿಸಿಯೇ ಇಂತಹದೊಂದು ಪ್ರಶ್ನೆಯನ್ನು ವಿಜ್ಞಾನವು ಕೇಳಿದೆ. ಒಂದು ರೀತಿಯಲ್ಲಿ ಎಲ್ಲವೂ ಸಸೂತ್ರವಾಗಿದ್ದರೆ, ಯಾವುದೇ ಒತ್ತಡಗಳೂ ಇಲ್ಲದಿದ್ದರೆ ನಮ್ಮ ದೇಹವು ವಯಸ್ಸನ್ನೂ ನಿಭಾಯಿಸಿ ಜೀವನ ಕ್ರಮವೊಂದು ಅಂತಿಮವಾಗುವ ಕಾಲ ಅದೆಷ್ಟು ಎಂಬುದು ಸಂಶೋಧನೆಗಳ ಕುತೂಹಲ ಎಂದು ಡ್ಯೂಕ್‌ ವಿಶ್ವವಿದ್ಯಾಲಯದ ವಯಸ್ಸಾಗುವಿಕೆ ಹಾಗೂ ಮಾನವ ವಿಕಾಸ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ. ಹೀತರ್‌ ವಿಟ್‌ಸನ್‌ (Prof. Heather Whitson, director of the Duke University Center for the Study of Aging and Human Development) ಅಭಿಪ್ರಾಯ ಪಡುತ್ತಾರೆ. ಇದನ್ನು “ವಯಸ್ಸಾಗುವಿಕೆಯ ಕ್ರಮ –(Pace of Aging)” ಎಂದು ಕರೆದಿದ್ದಾರೆ.

ಈ “ವಯಸ್ಸಾಗುವಿಕೆಯ ಕ್ರಮ –(Pace of Aging) ವನ್ನು ಅಮೆರಿಕ, ರಷಿಯಾ ಹಾಗೂ ಯುನೈಟೆಡ್‌ ಕಿಂಗ್‌ಡಂ ನ ನೂರಾರು ಜನರ ವಿವಿಧ ವಯೋಮಾನದವರನ್ನು ಒಳಗೊಂಡ ಅಧ್ಯಯನವನ್ನು ಕೈಗೊಂಡವರು, ಟಿಮೊತಿ ಪೆರಕೆವ್‌ (Timothy Pyrkov, a researcher at a Singapore-based company called Gero) ಎಂಬ ಸಂಶೋಧಕರು, ಅವರು ಸಿಂಗಪೂರ್‌ ನೆಲೆಯಾದ ಜೆರೊ (Gero) ಎಂಬ ಕಂಪನಿಯವರು. ಅವರು ದೈಹಿಕ ಚಟುವಟಿಕೆಗಳು, ಅವುಗಳಲ್ಲಿನ ಬದಲಾವಣೆಗಳು, ರಕ್ತದ ವಿವಿಧ ಮಾಪನಗಳು ಮತ್ತು ದಿನ ದಿನದ ಒಟ್ಟಾರೆಯ ದೈಹಿಕ ವ್ಯಾಯಾಮ ಇತ್ಯಾದಿಗಳನ್ನು ಪರಿಗಣಿಸಿದ್ದಾರೆ. ವಿವಿಧ ಮಾಪನಗಳನ್ನು ಮತ್ತು ದೈಹಿಕ ಚಟುವಟಿಕೆಗಳ ವಿನ್ಯಾಸಗಳನ್ನು ಸಮೀಕರಿಸಿ ಒಟ್ಟಾರೆ ಕ್ಷೀಣಿಸುವ ಮಾರ್ಗಗಳನ್ನು ಅಂದಾಜಿಸಿದ್ದಾರೆ. ಎಲ್ಲವನ್ನೂ ಗಮನಿಸಿ ಒಂದು ಅಂದಾಜಿನಂತೆ 125 – 150 ವರ್ಷಗಳ ಮಾನವ ಸಹಜವಾದ ಜೀವನ ಇದ್ದಿರಬಹುದೆಂಬ ತೀರ್ಮಾನ ಅವರ ತಂಡದ್ದು.   

ಈ ಪರಿಗಣನೆಯಲ್ಲಿ ಬಳಸಿರುವ ವಯಸ್ಸಾದಂತೆ ದೇಹವು ವಿವಿಧ ಶರೀರಕ್ರಿಯೆ ಮುಂತಾದವುಗಳಲ್ಲಿ ಪ್ರತಿಕ್ರಿಯಿಸುವಿಕೆಯು ಬದಲಾಗುವ ಅಥವಾ ಕ್ಷೀಣಿಸುವ ಬಗೆಯು ಉತ್ತಮವಾದ ಮಾದರಿಯದು ಎಂದು ಸಂಶೋಧನೆಯನ್ನು ವಿಮರ್ಶಿಸುವವರ ಅಭಿಪ್ರಾಯ. ಹಾಗೆಂದು ಸಮ್ಮತಿಸುವಂತೆ ಮಂಡಿಸಲಾದ ಅಭಿಪ್ರಾಯಕ್ಕೆ ಸಂಶೋಧಕರು ಯಾವುದೇ ವ್ಯಕ್ತಿಯ 35-40 ವರ್ಷಗಳ ನಡುವಿನ ದೈಹಿಕ ಚಟುವಟಿಕೆಗಳು ಮುಖ್ಯವಾದ ಬದಲಾವಣೆಗಳನ್ನು ತರುವ ವಯೋಮಾನ ಎಂದು ಹೇಳಿದ್ದಾರೆ. ಆಗ ಹೆಚ್ಚೂ-ಕಡಿಮೆ ಆಟೋಟಗಳಂತಹ ಚಟುವಟಿಕೆಗಳಿಂದ ದೇಹವು ಬಯಸುವ ವಿರಾಮ ಅಥವಾ ವಿಶ್ರಾಂತಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇಂತಹ ಸಂಶೋಧನೆಗೆ ಪ್ರತಿಕ್ರಿಯಿಸಿರುವ ಮತ್ತೋರ್ವ ವಿಜ್ಞಾನಿ ಇಲಿನಾಯ್‌ ವಿಶ್ವವಿದ್ಯಾಲಯ ಚಿಕಾಗೊದ ಪ್ರೊ. ಜಯ್‌ ಒಲ್‌ಶಾನ್‌ಸ್ಕಿ ನಿರಂತರವಾದ ಜೀವನವು ಸಾವನ್ನು ಅದೆಷ್ಟು ಅರ್ಥಮಾಡಿಕೊಂಡಿದ್ದೇವೆ ಎಂಬುದಕ್ಕೆ ಹತ್ತಿರವಾಗಿದೆ. ಹಾಗಾಗಿ ಬರಿ ಬದುಕಲ್ಲ ಅದೊಂದು ಆರೋಗ್ಯಕರವಾದ ಬದುಕೂ ಆಗಿರಬೇಕು ಎಂದಿದ್ದಾರೆ.

ಒಂದು ಪ್ರಮುಖ ಮೂಲಮಾನವಾದ VO2 max  ಅನ್ನು ಪ್ರಮುಖ ಕಾರಣದಿಂದ ತುಸು ವಿವರವಾಗಿ ಗಮನಿಸೋಣ. VO2 max   ಇದರಲ್ಲಿ V ಅಂದರೆ Volume,  O2 –ಆಮ್ಲಜನಕ (ಆಕ್ಸಿಜನ್‌) max  ಅಂದರೆ Maximum ಎಂದರ್ಥ. ಹೆಚ್ಚಿನ ದೈಹಿಕ ಚಟುವಟಿಕೆಯಲ್ಲಿ ಅತಿ ಹೆಚ್ಚು ಆಮ್ಲಜನಕವನ್ನು ಬಳಸುವ ಸಾಮರ್ಥ್ಯ ಎಂದು ಇದರ ಅರ್ಥ (VO2 max  is the maximum rate of oxygen consumption attainable during physical exertion). VO2 max ಇದು ವಯಸ್ಸಾದಂತೆ ಕ್ಷೀಣಿಸುತ್ತಾ ಬರುವುದನ್ನು ವಯಸ್ಸಾಗುವಿಕೆಯ ಪ್ರಮುಖ ಲಕ್ಷಣವಾಗಿ ಅನೇಕ ಕಾಯಿಲೆಗಳ ಸಂದರ್ಭಗಳಲ್ಲಿ ಅಳೆದು ಕಾಯಿಲೆಗೆ ಸಮೀಕರಿಸಲಾಗುತ್ತದೆ. ಸಹಜವಾಗಿ ನಮ್ಮ ಶರೀರ ಒಂದು ಹಂತದಿಂದ ಮುಂದೆ ವಯಸ್ಸಾದಂತೆ ಇದು ಕಡಿಮೆಯಾಗುತ್ತಾ ಹೋಗುತ್ತದೆ.

ಇಷ್ಟೆಲ್ಲದರ ನಡುವೆಯೂ ನಮ್ಮ ದೇಹವು ವಿಕಾಸ ಗೊಂಡಿರುವ ರೀತಿಯಲ್ಲಿ 125-150 ವರ್ಷಗಳು ಬದುಕುವಂತೆ ವಿಕಾಸಗೊಂಡಿದೆಯಂತೆ. ಅಷ್ಟೂ ಸಾಲದಕ್ಕೆ ಬಹುಶಃ ಇದೇ ಹೆಚ್ಚಿನ ಸಾಧ್ಯತೆಯೆಂದು ಮುಂದೆ ಇನ್ನೆಂದೂ ಇದಕ್ಕಿಂತಾ ಹೆಚ್ಚಾಗುವ ಸಂಭವವೂ ಇಲ್ಲವೆಂದು ಹಲವು ಸಂಶೋಧಕರ ಅಭಿಪ್ರಾಯ ಕೂಡ. ಅಂದರೆ ವಿಕಾಸದ ಹಾದಿಯಲ್ಲಿ ನಮ್ಮ ಆಯುಸ್ಸಿನ ವಿಕಾಸವನ್ನು ಈಗಾಗಲೇ ಸಾಧಿಸಿದ್ದೇವೆ ಎಂದೂ ಅಭಿಪ್ರಾಯ ಪಡುತ್ತಿದ್ದಾರೆ. ಆದಾಗ್ಯೂ ನಮ್ಮ ಸಾವಿನ ರಹಸ್ಯವನ್ನು ಮತ್ತಷ್ಟು ಭೇಧಿಸಿದರೆ ಇನ್ನೂ ದೀರ್ಘಕಾಲದ ಬದುಕೂ ಸಾಧ್ಯ ಎಂಬುದಾಗಿಯೂ ಹಲವರು ನಂಬಿದ್ದಾರೆ. ಹಾಗೆಂದೇ ಹಲವು ಜಾಗತಿಕ ಶ್ರೀಮಂತರು ಅಂತಹಾ ಸಂಶೋಧನೆಗೆ ಹಣವ್ಯಯಿಸುತ್ತಿದ್ದಾರೆ.    

(ಧೂಮಪಾನ ಪ್ರಚಾರಕ್ಕಲ್ಲ, ಕ್ಷಮಿಸಿ)

ಈ ಅಧ್ಯಯನಗಳು ಈಗಾಗಲೇ ದೀರ್ಘಕಾಲ ಬದುಕು ಸವೆಸಿದವರ ಜೀವನವನ್ನೂ ಗಮನಿಸಿಯೇ ಇಂತಹದೊದ್ದು ನಿರ್ಧಾರಕ್ಕೆ ಬಂದಿದ್ದಾರೆ. ಅದರಲ್ಲಿ ಮುಖ್ಯವಾದದ್ದು, ಈವರೆಗೆ ಅತೀ ದೀರ್ಘಕಾಲ ಬದುಕಿದ್ದ ಹೆಣ್ಣು ಮಗಳು ಫ್ರಾನ್ಸ್‌ ದೇಶದಾಕೆ. ಸುಮಾರು 122 ವರ್ಷಗಳು ಬದುಕಿದ್ದ ಮಹಿಳೆ ಜೀನ್‌ ಕಮೆಂಟ್‌ (Jeanne Calment -21 February 1875 – 4 August 1997). ಅತೀ ಹೆಚ್ಚು ಕಾಲ ಬದುಕಿದ್ದ ಪುರುಷರೆಂದರೆ ಜಪಾನ್‌ ದೇಶದ ಜಿರೊಮೋನ್‌ ಕಿಮುರಾ (Jiroemon Kimura 19 April 1897 – 12 June 2013). ಈ ಇಬ್ಬರನ್ನೂ ಅವರ ದೈಹಿಕ ಚಟುವಟಿಕೆಗಳು, ಅವರ ಉತ್ಸಾಹ, ಅಲ್ಲದೆ ರಕ್ತ, ಹೃದಯ ಹಾಗೂ ನರಸಂಬಂಧಿತ ಶರೀರಕ್ರಿಯೆ ಮುಂತಾದವುಗಳನ್ನು ಪರೀಕ್ಷಿಸಿ ದಾಖಲೆಗಳ ಸಮೇತ ತೀರ್ಮಾನಿಸಲಾಗಿದೆ.   

ನಮ್ಮ ರಾಜ್ಯದ ಸಿದ್ದಗಂಗಾ ಮಠದ ಸ್ವಾಮಿಗಳೂ ಸಹಾ 111 ವರ್ಷಗಳ ಕಾಲ ಬದುಕಿದ್ದ ಬಗ್ಗೆ ಅನೇಕರಿಗೆ ತಿಳಿದೇ ಇದೆ. ಅವರೂ ಸಹಾ ನೂರಾ ಐದು ವರ್ಷಕ್ಕೂ ಮಿಕ್ಕಿ ಚಟುವಟಿಕೆಯಿಂದಲೇ ಇದ್ದರು. ಕಡೆಯ ನಾಲ್ಕೈದು ವರ್ಷಗಳು ಹೆಚ್ಚಿನ ವಿರಾಮದಲ್ಲಿದ್ದವರು. ಹಲವರ ಅಭಿಪ್ರಾಯದಂತೆ ಅವರ ಸರಳವಾದ ಆಹಾರ ಕ್ರಮ, ನಿರಂತರ ಒಳಿತಿನ ಆಲೋಚನೆಗಳು ಅವರ ಶತಾಯುಷ್ಯದ ಫಲ.

       ಕನ್ನಡ ನಿಘಂಟು ಖ್ಯಾತಿಯ ಜಿ. ವೆಂಕಟಸುಬ್ಬಯ್ಯನವರು ಸುಮಾರು 107 ಬದುಕಿದ್ದರು. ಕಡೆಗಾಲದಲ್ಲೂ ಚಟುವಟಿಕೆಯಿಂದಲೇ ಜೀವನ ನಿರ್ವಹಿಸಿದರು. ಸುಮಾರು 103 ವರ್ಷಗಳ ಕಾಲ ಹೆಚ್ಚೂ ಕಡಿಮೆ ಕಡೆಯ ವರ್ಷದ ವರೆಗೂ ಚಟುವಟಿಕೆಯಿಂದಲೇ ಇದ್ದವರು ಕನ್ನಡ ಸಾಹಿತಿಗಳಾದ ಡಾ. ಎ.ಎನ್.‌ ಮೂರ್ತಿರಾವ್‌. ಕೆಲವರು ಲೆಕ್ಕಕ್ಕೂ ಸಿಗದೆ ತಿಳಿವಿಗೂ ಬರದೆ ನೂರು ದಾಟಿದ್ದವರೂ ಇದ್ದಿರಬಹುದು.

       ನಮ್ಮ ಬದುಕಿನ ಅಳತೆಗೋಲಿನಲ್ಲಿ 60 ದಾಟಿದರೆ ಸಾಕು, 60ರ ಆಚರಣೆ ನಡೆಯುವಂತೆ, ಸಂವತ್ಸರಗಳನ್ನು 60ಕ್ಕೇ ಸೀಮಿತಗೊಳಿಸಿದ್ದೇವೆ. ಅಷ್ಟಾದ ಮೇಲೆ, ಮತ್ತೆ ಪುನರಾವರ್ತಿತವಾಗುವ ಲೆಕ್ಕ ಸಹಜವಾಗಿತ್ತು. ಇದೀಗ 60 ದಾಟಿ 80 ತಲುಪುವುದು ಸಾಮಾನ್ಯವಾಗಿರುವ ಹಾಗೆ ಕಾಣುತ್ತಿದೆ, ಇದನ್ನೂ ಸಂಶೋಧನಾ ಅಧ್ಯಯನಗಳು ಬೆಂಬಲಿಸಿವೆ. ಇದಕ್ಕೆಲ್ಲಾ ಸೋಂಕು ನಿವಾರಣೆಯ, ಹಾಗೂ ಹಲವು ರೋಗ-ರುಜಿನಗಳ ವೈದ್ಯಕೀಯ ಪರಿಹಾರಗಳು ಎಂಬುದಂತೂ ಸತ್ಯ. ಅಷ್ಟರೊಳಗೂ ವಿಕಾಸದ ಹಾದಿಯು ನಮಗಷ್ಟು ಶಕ್ತ ಜೀವನವನ್ನು ಗಳಿಸಿಕೊಟ್ಟಿದ್ದು ಅದು ಸುಲಭವಾಗಿ ನೂರು ದಾಟಿಸಬಲ್ಲದು ಎಂಬುದು ವಿಶೇಷ. ಆದರೆ ಅದಕ್ಕೆಲ್ಲಾ ನಮ್ಮ ಜೀವನಕ್ರಮ ತಕ್ಕುದಾಗಿರುವುದು ಅವಶ್ಯಕವಾದುದು. ಮುಂದುವರೆದ ಅಮೆರಿಕದಲ್ಲೂ ಒಂದು ಶತಮಾನದ ಹಿಂದೆ ಸರಾಸರಿ 49 ವರ್ಷಗಳಿದ್ದ ಆಯಸ್ಸು, ಇದೀಗ 80 ನ್ನು ದಾಟಿದೆ. ಸರಾಸರಿ ಆಯಸ್ಸು 80 ನ್ನು ದಾಟುವ ಎಲ್ಲಾ ಲಕ್ಷಣಗಳೂ ಕಾಣತೊಡಗಿವೆ.  

       ಇಷ್ಟೆಲ್ಲದರ ನಡುವೆ ಬದುಕುವ ಆಸೆಯು ಮಾತ್ರ ನಿರಂತರವಾಗಿ, ಎಳೆಯ ಜೀವಿಕೋಶಗಳನ್ನು ಮಾತ್ರವಲ್ಲ, ಮುಪ್ಪಾದ ಜೀವಿಕೋಶಗಳನ್ನೂ ಒಳಗೊಂಡಿದೆ ಎಂಬುದಕ್ಕೆ 2012 ರ ವೈದ್ಯಕೀಯ ನೊಬೆಲ್‌ ಪುರಸ್ಕಾರದ ಸಂಶೋಧನೆಯು ದಾಖಲಿಸಿದೆ. ಇದಕ್ಕೆಲ್ಲಾ 125-150 ಗಡಿಯಾಗಿದೆಯೇ ಎಂಬುದಂತೂ ಪ್ರಶ್ನೆಯೇ ಹೌದು!

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್.‌

ಹೆಚ್ಚಿನ ಓದಿಗೆ ;

Timothy V. Pyrkov et all 2021. Longitudinal analysis of blood markers reveals progressive loss of resilience and predicts human lifespan limit. Nature Communications. https://doi.org/10.1038/s41467-021-23014-1

https://www.scientificamerican.com/article/humans-could-live-up-to-150-years-new-research-suggests/
https://www.scientificamerican.com/article/humans-may-have-already-reached-their-maximum-lifespan/

This Post Has 2 Comments

  1. TMBhat

    ನಾನು ವಿಜ್ನಾನಿ ಅಲ್ಲ, ಅದರಲ್ಲಿ ಆಸಕ್ತಿ ಇರುವವನು. ಓದಿ ಖುಷಿಯಾಯಿತು. ನವಂಬರಿನಲ್ಲಿ 80 ಕ್ಕೆ ಪ್ರವೇಶ. ಯೌವನದಲ್ಲಿ ಸಿಗರೇಟು ಇತ್ತು.90ರಲ್ಲಿ ಬಿಟ್ಟಿರಬೇಕು. ಬೇರೆ ಚಟ ಇಲ್ಲ. ಸರಳ ಸಾತ್ವಿಕ ಆಹಾರ. 1000 ಅಡಿ ನಡುಗೆ. 100 ವರ್ಷ ನೋಡಬೇಕೆಂಬ ನಿರ್ಧಾರ ನನ್ನದು…??

    1. CPUS

      ನಮಸ್ಕಾರ,

      ಸಂತೋಷವಾಯಿತು. ನಿಮ್ಮ ನಿರ್ಧಾರ ನಿಜವಾಗುತ್ತದೆ. ಸಾತ್ವಿಕ ಆಹಾರದ ಜೊತೆ ಸಾತ್ವಿಕ ಆಲೋಚನೆಗಳೂ, ಆನಂದಕ್ಕೆ ಬೇಕಾದ ಹವ್ಯಾಸಗಳು ನಿಮ್ಮನ್ನು ನೂರು ದಾಟಿಸಲಿ. ನಿಮಗಿಂತಾ ಚಿಕ್ಕವನು, ವಿಜ್ಞಾನಿ ಹಾಗೂ ವಿಜ್ಞಾನದ ತಿಳಿವಳಿಕೆಯನ್ನು ಹಂಚುವಲ್ಲಿ ಆನಂದವನ್ನು ಕಾಣುವ ಪ್ರಯತ್ನ ನನ್ನದು. ಒಳ್ಳೆಯದಾಗಲಿ. ಬದುಕಿಗೆ ಬಯಕೆಗಳು ಇರಬೇಕು, ಆ ಬಯಕೆಗಳು ಸಾತ್ವಿಕವೂ, ಆನಂದಮಯವೂ ಆಗಿದ್ದಲ್ಲಿ ಸಾಧ್ಯ ಎಂದು ನನ್ನ ನಂಬಿಕೆ, ತುಸು ತಿಳಿವಳಿಕೆಯೂ ಹೌದು ಅಂದುಕೊಂಡಿದ್ದೇನೆ.
      ವಂದನೆಗಳು

Leave a Reply