ನಾನು ಕೃಷಿ ಮಾಡಲು ಹೊರಡುವಷ್ಟರಲ್ಲಿ ನನಗೆ ಕೃಷಿ ವಿಜ್ಞಾನದಲ್ಲಿ ವಿಶ್ವವಿದ್ಯಾಲಯದ ಮೂರೂ ಪದವಿಗಳು ನನ್ನ ಜೊತೆಗಿದ್ದವು. ಕೃಷಿಯಲ್ಲಿ ಸ್ನಾತಕ ಪದವಿ (ಬಿ.ಎಸ್.ಸಿ. (ಅಗ್ರಿ), ಮಣ್ಣು ವಿಜ್ಞಾನದಲ್ಲಿ ಸ್ನಾತಕೋತ್ತರ ಅಲ್ಲದೆ ಪಿ.ಎಚ್.ಡಿ. ಕೂಡ ಇದ್ದವು. ಡಾಕ್ಟೊರೆಟ್ ಮಾಡಿದ್ದಲ್ಲದೆ ಹತ್ತಾರು ವರ್ಷಗಳ ಸಂಶೋಧಕನಾಗಿ ಕೆಲಸ ಮಾಡಿದ ಹಿನ್ನೆಲೆಯು ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್‌ನ ವಾತಾವರಣದ ಅನುಭವವೂ ನನ್ನ ಬತ್ತಳಿಕೆಯಲ್ಲಿತ್ತು. ಇದ್ದಕ್ಕಿದ್ದಂತೆ ತೀರಿಕೊಂಡ ಅಪ್ಪ, ಕೃಷಿ ಪದವಿಗಳನ್ನು ಪಡೆದಿದ್ದ ನನಗೆ, ಸ್ವಂತ ಕೃಷಿಕನಾಗಿ ಮಾಡಬಹುದಾದ ಪ್ರೀತಿಯ ಆಸಕ್ತಿಯ ಜೊತೆಗೆ ಅನಿವಾರ್ಯದ ಜವಾಬ್ದಾರಿಯನ್ನು ಕೊಟ್ಟಿದ್ದರು. ಅಪ್ಪ ತೀರಿಕೊಂಡ ಸುದ್ದಿ ತಿಳಿದಾಗ ನಾನು ರಾಗಿ ಲಕ್ಷ್ಮಣಯ್ಯನವರ ಮನೆಯಲ್ಲಿದ್ದೆ. ಅವರ ಕುರಿತು ಜೀವನಕಥೆಯನ್ನು ಬರೆಯುವ ಸಂಶೋಧನೆಯ ಹಿತದಿಂದ ಹುಡುಕಾಟದಲ್ಲಿ ತೊಡಗಿದ್ದೆ. ಡಾ. ಲಕ್ಷ್ಮಣಯ್ಯನವರು ತೀರಿಕೊಂಡಾಗ ತಮ್ಮ ಎದೆಯ ಮೇಲೆ ಒಂದು ಹಿಡಿ ರಾಗಿಯನ್ನು ಹಾಕಿ, ಬೇರಾವ ಸಂಸ್ಕಾರವೂ ಬೇಡ ಎಂಬ ವಿಚಾರದ ವಿವರಗಳನ್ನು ಅವರ ಮಗ ತಿಳಿಸಿದ ಕೊನೆ ಗಳಿಗೆಯಲ್ಲಿ ಅಪ್ಪನ ಸಾವಿನ ಸುದ್ದಿ ನನ್ನ ಮೊಬೈಲಿನಲ್ಲಿ ಬಂದಿತ್ತು.
ಡಾ. ಲಕ್ಷ್ಮಣಯ್ಯನವರು ಬದುಕಿದ್ದಾಗ ಎರಡು ಬಾರಿ ನೋಡಿ, ಮಾತಾಡಿದ್ದರೂ ಅವೆಲ್ಲವೂ ವಿದ್ಯಾರ್ಥಿಯಾಗಿ ಅವರನ್ನು ಭೇಟಿಯಾಗಿದ್ದಂತಹಾ ರಿಚುವಲಿಸ್ಟಿಕ್ ಆದಂತಹವು, ಆದರೆ ಜೀವನ ಕಥೆಯನ್ನು ಬರೆಯುವ ಉತ್ಸಾಹದಿಂದ ಅವರಿರದ ಮನೆಗೆ ಹೋದಾಗ ಆದ ಅನುಭವವೇ ಭಿನ್ನವಾದದ್ದು, ಅವರ ಮಕ್ಕಳಿಂದ ವಿವರಗಳನ್ನು ಕೇಳುತ್ತಾ ಇನ್ನೇನು ಕೊನೆಯ ಕ್ಷಣದಲ್ಲಿದ್ದಾಗ ನನ್ನ ಅಪ್ಪನ ಸಾವಿನ ಸುದ್ದಿಯಲ್ಲಿ ಕೊನೆಗೊಂಡು, ನನಗೊಂದು ಕೃಷಿಮಾಡುವ ಅದರಲ್ಲೂ ರಾಗಿಯನ್ನೇ ಬೆಳೆಯದ ಮಲೆನಾಡಿನ ಅಂಚಿನ ನೆಲದಲ್ಲಿ ರಾಗಿಯ ಬಿತ್ತನೆಗೆ ಅನುವು ಮಾಡಿತ್ತು. ಊರಿಗೆ ನೇರವಾಗಿ ಬಂದು ಅಪ್ಪನ ಸಂಸ್ಕಾರವನ್ನು ನಮ್ಮದೇ ಜಮೀನಿನಲ್ಲಿ ಮುಗಿಸಿ, ಮುಂದೇನು ಎನ್ನುವಾಗ, ಅಪ್ಪ ನಿರ್ವಹಿಸುತ್ತಿದ್ದ ಜಮೀನಿಗೆ ಒಂದಷ್ಟು ಏನಾದರೂ ಮಾಡುವ ಹುಮ್ಮಸ್ಸು ಅನಿವಾರ್ಯವಾಗಿ ಬಂದಿತ್ತು. ಮನಸ್ಸಿನಲ್ಲಿ ಬರೆಯಬೇಕಾಗಿದ್ದ ರಾಗಿ ಲಕ್ಷ್ಮಣಯ್ಯನವರ ಸಂಗತಿಗಳು ಧಾರಾಳವಾಗಿ ತುಂಬಿಕೊಂಡಿದ್ದವು. ಅಪ್ಪನನ್ನು ಮಣ್ಣಾಗಿಸಿದ ನೆಲದಲ್ಲಿ ಲಕ್ಷ್ಮಣಯ್ಯನವರ ಮಾತಿನಂತೆ ರಾಗಿ ಬೆಳೆಯುವ ಮೂಲಕ ಮೂರೂ ಕೃಷಿ ಪದವಿಗಳ ನಂತರದಲ್ಲಿ ಕೃಷಿಗೆ ಇಳಿಯುವ ಸರದಿ ನನ್ನದಾಯ್ತು. ಇದು ಅನಿವಾರ್ಯದ ಜೊತೆಗೆ, ಪ್ರೀತಿಯಿಂದ ಮಾಡಿದ್ದು! ಇದೇ ಇಂದು ನಿಮ್ಮೊಡನೆ ಹೇಳಿಕೊಳ್ಳುತ್ತಿರುವ ನಾನೂ ಕೃಷಿ ಮಾಡಿದೆ… ಎಂದಾಗಿದೆ.
ಆ ವೇಳೆಗಾಗಲೇ ಸುಮಾರು ಹದಿನೈದು ವರ್ಷಗಳ ಕಾಲ ಭಾರತೀಯ ವಿಜ್ಞಾನ ಸಂಸ್ಥೆಯ (ಐ.ಐ.ಎಸ್.ಸಿ IISc), ಕರ್ನಾಟಕ ರಾಜ್ಯ ವಿಜ್ಞಾನ ತಂತ್ರಜ್ಞಾನ ಮಂಡಳಿ (KSCST)ಯಲ್ಲಿ ಕೆಲಸ ಮಾಡಿ, ಅಲ್ಲಿಂದ ಸ್ವತಂತ್ರವಾಗಿ ಏನಾದರೂ ಮಾಡುವ ಆಲೋಚನೆಯಿಂದ ಕನ್ನಡ ವಿಶ್ವವಿದ್ಯಾಲಯದ ಜೊತೆಗೆ ವಿಜ್ಞಾನ ಮತ್ತು ಸಮಾಜದ ಅನುಸಂಧಾನಗಳ ಕುರಿತ ಶೋಧದಲ್ಲಿ ತೊಡಗಿದ್ದು, ಅದರ ಭಾಗವಾಗಿಯೇ ರಾಗಿ ಲಕ್ಷ್ಮಣಯ್ಯನವರ ಜೀವನ ಕಥಾನಕದ ಹುಡುಕಾಟ ನಡೆಸಿದ್ದೆ. ಅಷ್ಟೊತ್ತಿಗಾಗಲೇ ಐ.ಐ.ಎಸ್.ಸಿ (IISc) ಯಲ್ಲಿದ್ದಾಗ ಸಣ್ಣ ರೈತರೊಂದಿಗೆ ಸಂಶೋಧನೆ ಮಾಡಬೇಕೆಂಬ ಯೋಜನೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡು ಕೃಷಿ ಸಂಶೋಧನೆಯನ್ನು ಪ್ರೀತಿಯಿಂದಲೇ ಆರಿಸಿಕೊಂಡಿದ್ದೆ. ಅಲ್ಲಿ ಕೆಲವು ಕಾರಣಗಳಿಂದ ಮುಂದುವರೆಯದೆ ಸಂಶೋಧಕನಾಗಿದ್ದ ಕೆಲಸ ತೊರೆದು ಊರಿಗೆ ಹೋದೆ. ಕೃಷಿ ಮಾಡುತ್ತಾ ವಿಜ್ಞಾನ ಮತ್ತು ಸಮಾಜದ ಮುಖಾಮುಖಿಯಾಗುವ ವಿಚಾರಗಳ ಕುರಿತ ಆಲೋಚನೆಯಲ್ಲಿ ತೊಡಗಿದ್ದೆ.
ರಾಗಿ ಲಕ್ಷ್ಮಣಯ್ಯನವರ ಜೀವನ ಚಿತ್ರಣವು ಮನಸ್ಸನ್ನು ತುಂಬಿ ಕೊಂಡ ನನಗೆ, ವಿಶೇಷವಾಗಿ ನನ್ನ ಅಪ್ಪನ ಸಂಸ್ಕಾರವನ್ನು ನಮ್ಮದೇ ಜಮೀನಿನಲ್ಲಿ ಮಾಡಿ, ಅದೇ ನೆಲಕ್ಕೆ ರಾಗಿ ಬಿತ್ತನೆ ಮಾಡಿ, ಡಾ. ಲಕ್ಷ್ಮಣಯ್ಯನವರಿಗೆ ಗೌರವಕೊಟ್ಟದ್ದನ್ನೂ ಈಗ ನೆನೆಯಲು ಹೆಮ್ಮೆಯಾಗುತ್ತದೆ. ನಮ್ಮೂರಿನ ನನ್ನ ಜಮೀನು, ಶಿವಮೊಗ್ಗ ಸಮೀಪದ ಅರೆ ಮಲೆನಾಡು. Assured Rainfall Area ಮಳೆಯ ಕೊರತೆ ಬಗ್ಗೆ ಅಷ್ಟೇನೂ ಆತಂಕವಿಲ್ಲದ ನೆಲ. ಮಳೆ ಬೀಳದಿದ್ದರೂ, ಮಲೆನಾಡಿನ ನೀರಿನ ಹರಿವಿಗೆ ನಮ್ಮೂರ ಸುತ್ತ-ಮುತ್ತಲಿನ ನೆಲವೇ ಅನುವಾಗಿದ್ದದು. ಹಾಗಾಗಿ ಮಳೆಯ ಹರಿವ ನೀರಿಗೆ ಕೊರತೆ ಕಾಣದು. ಇದೇ ಕಾರಣಕ್ಕಾಗಿ ನೆಲವೂ ರಾಗಿಯ ಬಿತ್ತನೆಯನ್ನೇ ಕಾಣದ್ದು. ಧಾರಾಳವಾಗಿ ನೀರಿದ್ದಾಗ, ಭತ್ತವನ್ನೋ, ತರಕಾರಿಯನ್ನೋ ಅಡಿಕೆಯನ್ನೋ ಬೆಳೆಯುವ ಉತ್ಸಾಹ ಅಲ್ಲಿನ ರೈತರದ್ದು. ಮಳೆಯ ಅನಿರೀಕ್ಷಿತ ಕೊರತೆಗೆ ನೆಲವನ್ನು ಸುಲಭವಾದ ಮೆಕ್ಕೆಜೋಳದ ಬೆಳೆಗೆ ಒಗ್ಗಿಸಿದ್ದರು. ನನಗೋ ಆಹಾರದ ಬೆಳೆಯನ್ನೇ ಬೆಳೆಯುವ ಆಸೆಯಿಂದ ನನಗೆ ತಿಳಿದ ಮಟ್ಟಿಗೆ ಆ ಹಿಂದಿನ ದಶಕಗಳ ಕಾಲ ರಾಗಿಯನ್ನೇ ಬೆಳೆಯದ ನೆಲಕ್ಕೆ ಸುಮಾರು 5 ಬಗೆಯ ರಾಗಿ ತಳಿಗಳನ್ನು ಬಿತ್ತನೆ ಮಾಡಿಸಿದೆ. ಲಕ್ಷ್ಮಣಯ್ಯನವರ ಹೆಸರನ್ನೇ ಹೊತ್ತ ಎಲ್-5 (L-5) ಜೊತೆಗೆ ಇಂಡಾಫ್‌ನ ನಾಲ್ಕು ಬಗೆಯ ತಳಿಗಳನ್ನು ಐದು ಎಕರೆಗೂ ಬಿತ್ತನೆ ಮಾಡಿ, ಸಂಪೂರ್ಣ ಅನುಭವಕ್ಕೆ ಒಡ್ಡಿಕೊಂಡೆ. ಬಿತ್ತನೆಯಿಂದ ಹಿಡಿದು, ಕಳೆ ನಿರ್ವಹಣೆ, ಗೊಬ್ಬರದ ಬಳಕೆ, ಕೊಯಿಲಿನ ಕೆಲಸ ಎಲ್ಲದಕ್ಕೂ ಹೊಸ ಕೆಲಸ ಎನ್ನಿಸಿತ್ತು. ಸಹಜವಾಗಿ ರಾಗಿಯನ್ನು ಬೆಳೆಯದ ರೈತರಿದ್ದರು. ಹಾಗಾಗಿ ಕೃಷಿ ಕಾರ್ಮಿಕರೂ ರಾಗಿ ಕೆಲಸಗಳಿಗೆ ಒಗ್ಗಿದವರಲ್ಲ.
ಇದರ ಕಷ್ಟ ಗೊತ್ತಾದದ್ದು ಕೊಯಿಲಿನ ಕಾಲದಲ್ಲಿ, ಜೊತೆಗೆ ಕಾಳನ್ನು ಬೇರ್ಪಡಿಸುವ ಕಣದ ಹಂತದಲ್ಲಿ! ನನ್ನ ಗೆಳೆಯರನ್ನು ಕೋಲಾರದಿಂದ ಕರೆದೊಯ್ದು, ತೆನೆಗಳನ್ನು ಕೊಯಿಲು ಮಾಡಿ ರಾಶಿ ಮಾಡಿದೆ. ಕೋಲಾರದ ಕಡೆಯಲ್ಲಾದರೋ ತೆನೆಗಳನ್ನು ಯಂತ್ರದಲ್ಲಿ ಕಾಳು ಮಾಡುವ ಮಿಷೀನುಗಳು ಇದ್ದವು. ನಮ್ಮೂರಿನಲ್ಲಿ ಕಷ್ಟಕ್ಕೆ ಬಿದ್ದೆ. ಅಂತೂ ಪಾರಂಪರಿಕವಾದ ರೋಣಗಲ್ಲಿನ ನೆರವನ್ನು ಪಡೆದು ಒಕ್ಕಣೆ ಮಾಡಿದ್ದಾಯ್ತು. ರಾಗಿಯನ್ನೆಂದೂ ಕಾಣದ ನೆಲ ಬಂಪರ್ ಇಳುವರಿ ಕೊಟ್ಟಿತ್ತು. ಕೃಷಿ ಇಲಾಖೆಯವರೂ ಅದರ ಇಳುವರಿಯಿಂದ ಖುಷಿಗೊಂಡು ಸ್ಚತಃ ಕೊಯಿಲಿನ ಅಳತೆಮಾಡಿ ಸುದ್ದಿಯನ್ನು ಹಂಚಿದರು. ಇಷ್ಟೆಲ್ಲಾ ಮಾಡುವಾಗ ಕಡೆಗೆ ಅದರ ಲಾಭ-ನಷ್ಟದ ಅನುಭವ ಬಂದದ್ದು ಮಾರಾಟದ ಸಂದರ್ಭದಲ್ಲಿ. ನೂರಾರು ಕ್ವಿಂಟಾಲ್ ರಾಶಿಯನ್ನು ಮಾರುವಾಗ ಹೆಚ್ಚೂ -ಕಡಿಮೆ ಕೊಂಡುಕೊಂಡ ಅನುಭವವಾಗಿತ್ತು. ಆದರೂ ಮೂರೂ ಕೃಷಿ ಪದವಿಗಳು ಕೊಡದ ಅನುಭವವನ್ನು ಬೆಳೆಯ ಮೂರೇ ತಿಂಗಳು ಕೊಟ್ಟಿತ್ತು.
ತೆನೆಗಳನ್ನು ಕೊಯಿಲು ಮಾಡಿ, ಕಾಳನ್ನು ಬೇರ್ಪಡಿಸಿದ್ದು, ನಮ್ಮ ಭಾಗದ ಜನರಿಗೆ ಹೊಸದು. ಜೊತೆಗೆ ಹೆಚ್ಚೇನೂ ರಸಗೊಬ್ಬರ ಬಳಸದೆ ಬೆಳೆದಿದ್ದು, ಕಳೆ ಮುಂತಾದ ಕೃಷಿ ಕೆಲಸಗಳಲ್ಲಿ ಸಂಜೆಗಳನ್ನು ಕಾರ್ಮಿಕರೊಂದಿಗೆ ಕಳೆದು ಅವರಿಗೆ ಚಹಾ ಮಾಡಿಕೊಡುವ ಹುಮ್ಮಸ್ಸು ತೋರಿ ಅವರಲ್ಲಿ ಒಬ್ಬನಾಗುವ ವಿಶಿಷ್ಟ ಅನುಭವ ದಕ್ಕಿತ್ತು. ಆದರೆ ದೂರದೂರಿನಿಂದ ಓಡಾಡಿ ಮಾಡುವ ರಿಮೋಟ್ ಫಾರ್ಮಿಂಗ್ ಸಾಧ್ಯವೇ ಇಲ್ಲ ಎಂಬ ಅನುಭವಕೊಟ್ಟರೂ, ಅಲ್ಲೇ ಇದ್ದು ಮಾಡಲು ಆಗದ ಅನಿವಾರ್ಯತೆಗಳು ಮತ್ತಷ್ಟು ಅನುಭವವನ್ನು ಕೊಟ್ಟವು.
ಇತ್ತ ಊರಿನ ಜನ, ನನ್ನ ಹಿಂದೆ ನಗುವುದಕ್ಕೆ ಆರಂಭಿದ್ದರು. ಪಿಎಚ್.ಡಿ. ಮಾಡಿಕೊಂಡು ಬಂದು ಜಮೀನು ಕೆಲಸ ಮಾಡುವುದಕ್ಕೆ ಬಂದಿದ್ದಾನೆ ಎಂದರೆ ಬಹುಶಃ ಕೆಲಸ ಕಳೆದುಕೊಂಡಿದ್ದಾನೆ ಎಂದೇ ಭಾವಿಸಿ, ಮಾತಾಡಿದ್ದನ್ನು ಕೇಳಿದೆ. ಪಡೆದುಕೊಂಡದ್ದನ್ನೂ -ಕಳೆದುಕೊಂಡದ್ದನ್ನೂ ಹತ್ತಾರು ವಾಕ್ಯಗಳಲ್ಲಿ ಹೇಳಲಾಗದು. ರೈತರ ಬಗೆಗಿರುವ ಸಾರ್ವಜನಿಕ ಅನಿಸಿಕೆ ಮಾತ್ರ ಕೇವಲ ಕಥೆ-ಕಾವ್ಯಗಳಲ್ಲಿ ನೇಗಿಲ ಯೋಗಿಯಾಗಿಸಿದ್ದು, ಎಂಬುದು ಗೊತ್ತಿದ್ದರೂ ಸ್ಪಷ್ಟ ಅನುಭವಕ್ಕೆ ಬಂತು. ಅವೆಲ್ಲವನ್ನೂ ಒಪ್ಪಿಕೊಂಡ ನೂರಾರು ರೈತರ ಹೊಲ-ಗದ್ದೆಗಳನ್ನು ಕಳೆದ ಕೆಲವು ದಶಕಗಳ ನನ್ನ ಸಂಶೋಧನೆ-ಅಧ್ಯಯನಗಳ ಓಡಾಟ ಪರಿಚಯ ಮಾಡಿಸಿದೆ. ಹಲವಾರು ಬೆಳೆಗಳ ಆಸಕ್ತಿಯನ್ನು ಅರಿಯುವ ಹುಡುಕಾಟವಂತೂ ನನ್ನ ಸಸ್ಯಯಾನದ ಬರಹಗಳಲ್ಲಿ ನೋಡಿರುತ್ತೀರಿ. ಅವನ್ನೆಲ್ಲಾ ಗಮನಿಸಲು () ಈ ಲಿಂಕ್ ನೋಡಬಹುದು. ಕೆಲವು ಗಿಡ-ಮರಗಳ ಕುರಿತ ವಿಡಿಯೋಗಳನ್ನೂ ಕೂಡ https://www.youtube.com/@centreforpublicunderstandi1720 ಲಿಂಕ್ ನಲ್ಲಿ ನೋಡಬಹುದು.
ಕೃಷಿ ವಿಜ್ಞಾನದ ಸಂಶೋಧನೆಯನ್ನು ದಶಕಗಳ ಮಾಡುತ್ತಲೇ ಕೃಷಿಕರ ಜೀವನವನ್ನು “ಸ್ವರ್ಗ”ವಾಗಿಸದ ಸಮಾಜೀಕರಣವನ್ನು ಒಪ್ಪಿಕೊಂಡ ಪರಿಸ್ಥಿತಿ ನಮ್ಮದು. ಆದರೆ ಕೃಷಿಯಲ್ಲಿ ನೆಲದ ಜೊತೆಯಲ್ಲಿ ಒಂದು ವಿಚಿತ್ರ ಅನುಭಾವ ಇದೆ. ನೆಮ್ಮದಿ ಇದೆ. ಅದನ್ನು ನಗರೀಕರಣದತ್ತ ಸಾಗುತ್ತಿರುವ ನಮ್ಮ ಸಮಾಜಕ್ಕೆ ಕಟ್ಟಿ ಕೊಡುವ ನಿಜ ಮಾರ್ಗಗಳು ಇಲ್ಲ. ಅವೆಲ್ಲವೂ ಸ್ವರ್ಗವನ್ನೂ ಸಾಂಸ್ಥೀಕರಣ ಮಾಡುವತ್ತ ಕಾರ್ಪೊರೆಟ್ ಜಗತ್ತು ನಡೆದಿದೆ. ಆದರೇನಂತೆ ಆ ಸ್ವತಂತ್ರ ಜೀವನದ ನೆಮ್ಮದಿಯನ್ನು, ಹಣದಾಚೆಗಿನ ಬದುಕು ಕಟ್ಟುವ ಧೈರ್ಯವನ್ನೂ ನನ್ನ ಕೃಷಿ ಅಧ್ಯಯನಗಳು ಕಲಿಸಿವೆ. ಪ್ರತಿ ಬೆಳೆಯಲ್ಲೂ ಅಪಾರ ಬೆರಗಿನ ಲೋಕವಿರುವ, ಸಮೃದ್ಧ ಸಂಗತಿಗಳಿರುವ ಹಾಗೂ ಅವನ್ನು ಧ್ಯಾನಿಸುವ ಅವಕಾಶವನ್ನು ಕೃಷಿಯ ಜೊತೆಗಿನ ನಡಿಗೆ ಕಲಿಸಿದೆ. ನನ್ನ ಸ್ವಂತ ಕೃಷಿ ಅನುಭವದ ರಾಗಿಯ ಕುರಿತ ಸಸ್ಯಯಾನದ ಬರಹ “ಬಡವ ಬಲ್ಲಿದರನ್ನು ಒಂದು ಮಾಡಿದ ರಾಗಿ – Eleusine coracan “ಎಂಬ ಶೀರ್ಷಿಕೆಯಲ್ಲಿ ನಮ್ಮ ವೆಬ್ ಪುಟದಲ್ಲಿ ಈ ಲಿಂಕ್‌ನಲ್ಲಿ ನೋಡಬಹುದು.
ಮುಂದೆಯೂ ಆಗಾಗ್ಗೆ ಕೃಷಿಯ ಒಡನಾಟದ ಸಂಗತಿಗಳನ್ನು ಹೇಳಬೇಕಿದೆ. ಅವುಗಳಲ್ಲಿ, ಅಪರಿಚಿತ ರೈತರ ಮನೆಯನ್ನು ಹೊಕ್ಕಿ ಕಳೆದದ್ದು, ಸದಾ ನೆಲದ ಮೇಲೆಯೇ ಕುಳಿತಿರಲು ಇಷ್ಟ ಪಡುತ್ತಿದ್ದ ರೈತರು ಮುಂತಾದ ಹತ್ತಾರು ವಿಚಾರಗಳು ಸಂಶೋದನೆಯ ಒಡನಾಟದಿಂದ ದಕ್ಕಿದವು. ಕೃಷಿಯ ಭೌಗೋಳಿಕ ವಿಚಾರಗಳು, ಮಣ್ಣಿನ ವಿವಿಧತೆಯ ಕನಸುಗಳು, “ಒತ್ತೂ-ವರಿಯ Worry-ಗಳು” ಹಬ್ಬ-ಹರಿದಿನಗಳ ರೈತರ ಒಗ್ಗಟ್ಟಿನ ವಿಚಾರಗಳು ಹೀಗೆ.. ನೆನಪುಗಳು ಮಾಸದ ಹಾಗೆ ಕಾಯ್ದುಕೊಂಡಷ್ಟನ್ನು ಆಗಾಗ್ಗೆ ನೋಡೋಣ. ನಿಜಕ್ಕೂ ರೈತರ ಬದುಕು ಕೃಷಿವಿಜ್ಞಾನ ಕೇಂದ್ರಗಳು, ಕೃಷಿ ವಿವಿಗಳು, ಸರ್ಕಾರಿ ಇಲಾಖೆ ಹೇಳುವಷ್ಟು ರಮ್ಯವಾಗಿಲ್ಲ. ಅವೆಲ್ಲವೂ ಕೇವಲ ಡೇಟಾಗಳಷ್ಟೇ! ಮಾಹಿತಿಯ ಗುಂಗಿನಲ್ಲಿ ರಂಗು ಪಡೆದುಕೊಂಡಿವೆ
ನಮಸ್ಕಾರ
– ಡಾ. ಟಿ.ಎಸ್. ಚನ್ನೇಶ್.
ತುಂಬಾ ಸಂತಸ ತಂದಿತು. ನೀವು ನೇಗಿಲ ಯೋಗಿ. ನಿಮ್ಮ ಕನಸು ಸಾಕಾರ ಆಗಿದೆ. ಪ್ರತಿ ಒಂದು ಓದುವೆ. ಎಲ್ಲದಕ್ಕೂ ಪ್ರತಿಕ್ರಿಯೆ ನೀಡುವುದಿಲ್ಲ.
ವಂದನೆ
ಪುಟ್ಟರಾಜು ಪಿ ಪ್ರಭುಸ್ವಾಮಿ
ಧನ್ಯವಾದಗಳು. ಖಂಡಿತಾ ಪ್ರತಿಕ್ರಿಯೆಗಿಂತಾ ನಿಮ್ಮ ಓದುವ ಪ್ರೀತಿ ಹೆಚ್ಚಿನದು.
ನಮಸ್ಕಾರ
ಚನ್ನೇಶ್
ರಾಗಿಗೆ ಈಗಲೂ ಕೂಡ ಹೆಚ್ಚಿನ ವೇದಿಕೆ ಇದೆ ಸರ್