You are currently viewing ಲಿಥಿಯಮ್ ಬ್ಯಾಟರಿಯ ಅನುಶೋಧಕ್ಕೆ ರಸಾಯನಿಕ ವಿಜ್ಞಾನದ ನೊಬೆಲ್

ಲಿಥಿಯಮ್ ಬ್ಯಾಟರಿಯ ಅನುಶೋಧಕ್ಕೆ ರಸಾಯನಿಕ ವಿಜ್ಞಾನದ ನೊಬೆಲ್

ಈ ವರ್ಷದ ರಸಾಯನಿಕ ಪ್ರಶಸ್ತಿಗೆ ಭಾಜನರಾಗಿರುವ ಮೂವರಲ್ಲಿ ಒಬ್ಬರಾದ ಜಾನ್‍ ಗುಡ್‍ಎನಫ್‍ ಕಳೆದ ಜುಲೈ 25ಕ್ಕೆ 97 ವರ್ಷತುಂಬಿದವರು. ಈವರೆಗೆ ನೊಬೆಲ್‍ ಪುರಸ್ಕೃತರಲ್ಲಿ ಅತ್ಯಂತ ಹಿರಿಯರು. ಅಷ್ಟು ಮಾತ್ರ ಅಲ್ಲ ಈಗಲೂ ದಿನವೂ ಆಸ್ಟಿನ್‍ ನಲ್ಲಿರುವ ಟೆಕ್ಸಾಸ್‍ ವಿಶ್ವವಿದ್ಯಾಲದಲ್ಲಿರುವ ತಮ್ಮ  ಪ್ರಯೋಗಾಲಯಕ್ಕೆ  ಹೋಗಿ ಸಂಶೋಧನೆ, ಮಾರ್ಗದರ್ಶನದಲ್ಲಿ ತೊಡಗುತ್ತಾರೆ. ಈ ಹಿರಿಯಜ್ಜನ ವಿಜ್ಞಾನ ಪ್ರೀತಿ ಇದೀಗ ಎಲ್ಲರ ಕೈಯನ್ನೂ  ತಲುಪಿ, ಆಧುನಿಕತೆಯ ಕುರುಹಾಗಿಸಿದೆ. ಈ ಸಾಧನೆಯ ಶಿಖರವಾಗಿ ಈ ವರ್ಷದ ನೊಬೆಲ್‍ ಬಹುಮಾನವು ಅರ್ಥಪೂರ್ಣವಾಗಿ ಅವರನ್ನು ತಲುಪಿದೆ. Happy news is ಅಮೆರಿಕದಲ್ಲಿರುವ ನನ್ನ ಕನ್ನಡಿಗ ಗೆಳೆಯರೊಬ್ಬರ ಸಹೋದರ ಅವರ ವಿದ್ಯಾರ್ಥಿ.

          ಲಿಥಿಯಮ್‍ ಬ್ಯಾಟರಿ ಎಷ್ಟು ಚಿಕ್ಕ ಉಪಕರಣ ಎಂದರೆ ನಿಮ್ಮೆಲ್ಲರ ಕೈಯಲ್ಲಿ ಅಥವಾ ಜೇಬಿನಲ್ಲಿ ಇರುವ ಮೊಬೈಲುಗಳ ಒಳಗೂ ಇದೆ. ಮೂವರು ವಿಜ್ಞಾನಿಗಳ ಒಟ್ಟಾರೆ ಸಂಶೋಧನೆಗಳೂ ಸೇರಿ ಇಂದು ನಮ್ಮ ನಿಮ್ಮೆಲರ ಬಳಿಯೂ ಇದೆ. ಅಷ್ಟೇ ಅಲ್ಲ  ಇಂದು ಬ್ಯಾಟರಿ ಚಾಲಿತ ವಾಹನಗಳಲ್ಲೂ, ಜೊತೆಗೆ ಸೌರಶಕ್ತಿ ಅಥವಾ ಪವನಶಕ್ತಿಯನ್ನು ಸಂಗ್ರಹಿಸುವ ಬ್ಯಾಟರಿಗಳಲ್ಲೂ ಲಿಥಿಯಮ್‍ ಬಳಕೆಯಾಗಿದೆ.  ಬ್ಯಾಟರಿಗಳ  ಶೋಧ, ವಿಕಾಸ ಮತ್ತು ಅಭಿವೃದ್ಧಿಯು ನೂರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ವಿದ್ಯುತ್ ಕಂಡುಹಿಡಿದಾಗಿನಿಂದಲೂ ಬ್ಯಾಟರಿಗಳ ಶೋಧವೂ ಆರಂಭವಾಗಿದೆ. ಹಳೆಯ ದೊಡ್ಡ ದೊಡ್ಡ ಬ್ಯಾಟರಿಗಳು ಇಂದೂ ಬಳಕೆಯಾಗುತ್ತಿವೆ. ಒಟ್ಟಾರೆ ಬ್ಯಾಟರಿ ಎನ್ನುವುದು ಆನೋಡ್‍ ಮತ್ತು ಕ್ಯಾಥೋಡ್‍ ಗಳನ್ನು ಒಂದು ಎಲೆಕ್ಟ್ರೊಲೈಟ್‍ ಮೂಲಕ ಸಂಪರ್ಕ ಕಲ್ಪಸಿ ಎಲೆಕ್ಟ್ರಾನ್‍ ಅನ್ನು ಪ್ರವಹಿಸುವ ಸಾಧನ. ಹಾಗಾಗಿ ಇಂದೊಂದು ವಿದ್ಯುತ್‍  ರಸಾಯನಿಕ- “ಎಲೆಕ್ಟ್ರೋ ಕೆಮಿಕಲ್‍” ಸಾಧನ.

          ಲಿಥಿಯಮ್‍ ಅತ್ಯಂತ ಹಗುರವಾದ ಲೋಹ. ಜೊತೆಗೆ ಸುಲಭವಾಗಿ ಎಲೆಕ್ಟ್ರಾನ್‍ ಅನ್ನು ಬಿಟ್ಟು ಕೊಡುವ ಮೂಲವಸ್ತು ಕೂಡ.  ನಿಸರ್ಗದ ಇತಿಹಾಸದಲ್ಲಿ ಲಿಥಿಯಮ್‍ ಗೆ ಅತ್ಯಂತ ಪುರಾತನವಾದ ಸ್ಥಾನವೇ ಇದೆ. ಏಕೆಂದರೆ ಕೊಟ್ಯಾಂತರ ವರ್ಷಗಳ ಹಿಂದೆ ಸಂಭವಿಸಿದ “ಬಿಗ್‍ ಬ್ಯಾಂಗ್‍” ಅಥವಾ ಮಹಾಸ್ಪೋಟದಲ್ಲಿ ಹುಟ್ಟಿ ಬಂದ ಮೂಲ ಧಾತುಗಳಲ್ಲಿ ಇದೂ ಒಂದು. ಆದರೆ ಮಾನವ ಕುಲದ ತಿಳಿವಳಿಕೆಗೆ ಬಂದದ್ದು 1817ರಲ್ಲಿ. ಮೊಟ್ಟ ಮೊದಲ ಬಾರಿಗೆ ಸ್ವೀಡಿಶ್‍ ರಸಾಯನವಿಜ್ಞಾನಿಗಳಾದ ಅಗಸ್ಟ್ ಆರ್ಫ್‍ ವೆಡ್ಸನ್‍ ಮತ್ತು ಜೆಕೊಬ್‍ ಬರ್ಜೆಲಿಯಸ್‍ ಅವರು ಖನಿಜದಿಂದ ಬೇರ್ಪಡಿಸಿ ಪಡೆದಿದ್ದರು. ಆಗ ಬರ್ಜೆಲಿಯಸ್‍ ಅವರು ಖನಿಜದಿಂದ ಪಡೆದ ಕಾರಣಕ್ಕೋ ಏನೋ “ಕಲ್ಲು” ಎಂಬ ಭಾರವಾದ ಅರ್ಥದ “ಲಿಥೊಸ್‍” ಎಂಬ ಗ್ರೀಕ್‍ ಪದದಿಂದ ಹೆಸರಿಸಿದ್ದರು. ಆದರೆ ನಿಜಕ್ಕೂ ಹಗುರವಾದ ವಸ್ತು. ಲಿಥಿಯಮ್‍ ನಲ್ಲಿ ಕೇವಲ ಮೂರು ಎಲೆಕ್ಟ್ರಾನುಗಳಿದ್ದು, ಅದರ ಪರಮಾಣು ಸಂಖ್ಯೆ 3. ಅದರ ಪರಮಾಣುವಿನಲ್ಲಿ ಒಂದು ಎಲೆಕ್ಟ್ರಾನ್‍ ಹೊರ ಕವಚದಲ್ಲಿದ್ದು ಸುಲಭವಾಗಿ ಅದರಿಂದ ಹೊರಬರುವಂತೆ ಇರುತ್ತದೆ. ಇದು ಅನುಕೂಲವೂ ಹೌದು ಹಾಗೇಯೆ ಅಪಾಯಕಾರಿಯೂ ಕೂಡ.

          ಅದೆಷ್ಟು ಹಗುರ ಎಂದರೆ ಕಳೆದ ಎರಡು ಮೂರು ದಶಕಗಳಿಂದ ಬ್ಯಾಟರಿಗಳ ಗಾತ್ರ ಚಿಕ್ಕದಾಗುತ್ತಾ ಬರುತ್ತಿರುವುದು ಇದರಿಂದಾಗಿಯೇ! ಹಾಗಾಗಿ ಜೇಬಿನಲ್ಲಿ ಇರುವ ಮೊಬೈಲಿನ ಭಾರವೇ ತಿಳಿಯುವುದಿಲ್ಲ. ಸಾಂಪ್ರದಾಯಿಕ ಹಳೆಯ ಬ್ಯಾಟರಿಗಳನ್ನು ಇದಕ್ಕೆ ಸಮೀಕರಿಸಿಕೊಂಡರೆ ಹೀಗೆಲ್ಲಾ ಎಲ್ಲೆಂದರಲ್ಲಿ ಜೇಬಲ್ಲಿ, ಕೈಚೀಲದಲ್ಲಿ ಇಟ್ಟು ಕೊಂಡೊಯ್ಯಲು ಸಾಧ್ಯವೇ ಇರಲಿಲ್ಲ. ಅದಕ್ಕಿಂತಲೂ ಮತ್ತೆ, ಮತ್ತೆ ಚಾರ್ಜ್‍ ಮಾಡಿ ಬಳಸಬಲ್ಲ ಸುಲಭವಾದ ಸಾಧನ ಕೂಡ.

          ಹಳೆಯ ಆಸಿಡ್‍ ಗಳನ್ನು ಹೊಂದಿರುವ ಆಸಿಡ್‍ ಬ್ಯಾಟರಿಗಳು ಮತ್ತು ಅಲ್ಕಲಾಯ್ಡ್ ಬ್ಯಾಟರಿಗಳು  ಗಾತ್ರದಲ್ಲಿ ದೊಡ್ಡವು ಮಾತ್ರವಲ್ಲ, ಹೆಚ್ಚು ಸಮರ್ಥವಲ್ಲದವು. ಜೊತೆಗೆ ಎಲ್ಲೆಂದರಲ್ಲಿಗೆ ತೆಗೆದುಕೊಂಡು ಹೋಗಲು ಕಷ್ಟ. ಅದೂ ಸಾಲದೆಂಬಂತೆ 1960ರ ದಶಕದಲ್ಲಿ ಉಂಟಾದ ಪೆಟ್ರೋಲಿಯಂ ತೈಲದ ಕೊರತೆಯಿಂದಾಗಿ  ಜೊತೆಗೆ ಪುನರುತ್ಪಾದಿಸುವ ಶಕ್ತಿ ಮೂಲಗಳ ಹುಡುಕಿ  ಶಕ್ತಿಯನ್ನು ಸಂಗ್ರಹಿಸಲು, ಹೊಸ ಮಾದರಿಯ ಉಪಕರಣಗಳು ಬೇಕಾಗಿತ್ತು. ಅದರ ಮೂಲ ಶೋಧವನ್ನು ಸ್ವತಂತ್ರವಾದ ಹಾಗೂ ಮುಕ್ತವಾದ ವಾತಾವರಣದಲ್ಲಿ ಮಾಡುವಂತೆ ಸಹಕರಿಸಿ ಅನೂಕಲಗಳನ್ನು ನೀಡುವುದಾಗಿ Exxon ಎನ್ನುವ ಎನರ್ಜಿ ಕಂಪನಿಯ  ಕರೆಯಿತ್ತಿತು. ಅದರಂತೆ  ಸ್ಟ್ಯಾನ್‍ ಫೊರ್ಡ್‍ ವಿಶ್ವವಿದ್ಯಾಲಯವನ್ನು ತೊರೆದು ಪ್ರೊ. ಸ್ಟ್ಯಾನ್ಲಿ ವಿಟ್ಟಿಂಗ್‍ಹ್ಯಾಂ ಅವರು ಆ ಕಂಪನಿಯನ್ನು ಸೇರಿ ಸಂಶೋಧನೆಯನ್ನು ಆರಂಭಿಸಿದರು. ಆಗ ಅವರು ಅನುಶೋಧಿಸಿದ ಬ್ಯಾಟರಿಯು ನವೀನ ಬಗೆಯದಾಗಿತ್ತು. ಜೊತೆಗೆ ತುಂಬಾ ಶಕ್ತಿಯ ಸಾಮರ್ಥ್ಯವನ್ನೂ ಹೊಂದಿತ್ತು. ಸ್ಟ್ಯಾನ್ಲಿಯವರು ವಿವಿಧ ಧಾತುಗಳ ಶಕ್ತಿ ಸಾಮರ್ಥ್ಯವನ್ನು ಪರೀಕ್ಷಿಸುವಾಗ ಅನಿರೀಕ್ಷಿತವಾಗಿ ಪೊಟ್ಯಾಸಿಯಂ ಮತ್ತು ಟೆಂಟಾಲಮ್‍ ಡೈಸಲ್ಫೆಟ್‍ ನಡುವಣ ವಿಶೇಷತೆಯೊಂದು ತಿಳಿದಿತ್ತು.   ಆಗ ಅವರ ವಿಶೇಷ ಶೋಧವೆಂದರೆ ಪರಮಾಣುಗಳ ನಡುವೆ ಇರುವ ಸ್ಥಳದಲ್ಲಿ ಅಯಾನುಗಳನ್ನು ಹರಿದಾಡಿಸಿ ಶಕ್ತಿಯನ್ನು ವರ್ಗಾಯಿಸಲು ಸಾಧ್ಯವಾಗುವುದಾದರೆ ಶಕ್ತಿಯ ವಿಶೇಷ ಪ್ರವಹಿಸುವಿಕೆ ಸಾಧ್ಯ  ಎಂಬ ತಿಳಿವಳಿಕೆಯಾಗಿತ್ತು. ಇದನ್ನು “ಇಂಟರ್ ಕ್ಯಾಲೇಶನ್‍” (Intercalation) -ಅಂದರೆ ಒಂದರೊಳಗೊಂದರಂತೆ ಅಧಿಕಗೊಳಿಸುವಿಕೆ- ಎಂದು ಕರೆಯುತ್ತಾರೆ. ಇದೇ ಬ್ಯಾಟರಿಗಳ ಆವಿಷ್ಕಾರದಲ್ಲಿ ಬಹಳ ದೊಡ್ಡ ಬದಲಾವಣೆಯನ್ನೇ ಮುಂದಿನ ಒಂದೂವರೆ ದಶಕದಲ್ಲಿ ಸಾಧ್ಯವಾಗಿಸಿತು.

          ಸ್ಟ್ಯಾನ್ಲಿಯು ತಮ್ಮ ಬ್ಯಾಟರಿಯಲ್ಲಿ ಟೈಟಾನಿಯಂ ಸಲ್ಫೈಡ್‍ ಜೊತೆಗೆ ಲಿಥಿಯಂ ಅಯಾನುಗಳ ಕ್ಯಾಥೊಡ್‍ ನಲ್ಲಿ ಬಳಸಿ ಇದನ್ನು ಅಭಿವೃದ್ಧಿ ಪಡಿಸಿ 2 ವೊಲ್ಟ್ ಬ್ಯಾಟರಿಯನ್ನು 1970ರಲ್ಲಿ ತಯಾರಿಸಿದರು.

ಪ್ರೊ. ಸ್ಟ್ಯಾನ್ಲಿ ವಿಟ್ಟಿಂಗ್‍ಹ್ಯಾಂ, ಅವರು ಮೂಲತಃ ಬ್ರಿಟನ್ನಿನ ರಸಾಯನ ವಿಜ್ಞಾನಿ. ಸದ್ಯಕ್ಕೆ ಅವರು ಬಿಂಗ್‍ಹಾಂಟನ್‍ ವಿಶ್ವ ವಿದ್ಯಾಲಯದಲ್ಲಿ ರಸಾಯನ ವಿಜ್ಞಾನದ ಪ್ರಾಧ್ಯಾಪಕರಾಗಿದ್ದಾರೆ.  

  

          ಇದರಲ್ಲಿ ಒಂದು ತೊಂದರೆಯಿತ್ತು. ಅದೆಂದರೆ ಲಿಥಿಯಮ್‍ ಎಲೆಕ್ಟ್ರಾನ್‍ ಅನ್ನು ಸುಲಭವಾಗಿ ಬಿಟ್ಟುಕೊಡುವುದು ಆದ್ದರಿಂದ ಬೆಂಕಿ ಹತ್ತಿಕೊಳ್ಳುವುದು.  ಆಗ ಅದನ್ನು ನಿವಾರಿಸುವಂತೆ ಸಾಧ್ಯವಾಗಿದ್ದು. ಆಕಸ್ಮಿಕವಾಗಿ ವಿಜ್ಞಾನದ ಸಂಶೋಧನೆಗೆ ಬಂದಿದ್ದ ಪ್ರೊ. ಜಾನ್‍ ಗುಡ್‍ಎನಫ್‍ ಅವರಿಂದ. ಮೂಲತಃ ಜರ್ಮನಿಯವರಾದ, ಅಮೆರಿಕದಲ್ಲಿ ನೆಲೆಯಾಗಿದ್ದು ಯೋಧರಾಗಿ, ತೀರಾ ತಡವಾಗಿ ಓದಿಗೆ ಬಂದು ಸಂಶೋಧಕರಾದವರು. (ಈ ಟಿಪ್ಪಣಿಯ ಕೊನೆಯಲ್ಲಿ ಅವರ ಕೆಲವು ಉತ್ಸಾಹ ತುಂಬಬಲ್ಲ ವಿವರಗಳನ್ನು, ನಾನು ಹಿಂದೊಮ್ಮೆ ಪ್ರಕಟಿಸಿದ್ದ ಲೇಖನದಿಂದ ಆಯ್ದು ಕೊಟ್ಟಿದೆ). ಇವರ ಸಾಧನೆಯೆಂದರೆ ಟೈಟಾನಿಯಂ ಸಲ್ಫೈಡ್‍ ಜಾಗದಲ್ಲಿ ಕೊಬಾಲ್ಟ್‍ ಆಕ್ಸೈಡನ್ನು ತಂದಿದ್ದು ಮಾತ್ರವಲ್ಲದೆ, ಆಕ್ಸೈಡ್‍ ಆದ್ದರಿಂದ ಇನ್ನೂ ಶಕ್ತಿಯು ಹೆಚ್ಚಾಗಿ ಎರಡು ಪಟ್ಟು ಉತ್ಪಾದನೆಗೆ ಸಾಧ್ಯವಾಯಿತು. ಇದರ ವಿವರಗಳು ತುಂಬಾ ಸ್ಥಳವನ್ನು ಬಯಸುತ್ತವೆ. ಕಾರಣ ಗುಡ್‍ ಎನಫ್‍ ಪಾತ್ರವೇ ಅಷ್ಟು ಅಮೂಲ್ಯವಾಗಿತ್ತು ಮತ್ತು ವಿಶೇಷವಾಗಿತ್ತು.  ಹಾಗಾಗಿ ಈ ಕೆಳಗಿನ 4 ವೊಲ್ಟ್‍ ಬ್ಯಾಟರಿಯನ್ನು 1980ರ ವೇಳೆಗೆ ಗುಡ್‍ ಎನಫ್‍ ಅಭಿವೃದ್ಧಿ ಪಡಿಸಿದರು.

          ಇದರಲ್ಲೂ ಕೆಲವೊಂದು ನ್ಯೂನ್ಯತೆಗಳು ಇದ್ದವು. ಆದರೆ ಅಮೆರಿಕದ ಪರಿಸ್ಥಿತಿಯು ತೈಲ ಮೂಲದಲ್ಲಿ ಸುಧಾರಿಸಿ ಸಂಶೋಧನೆಗೆ ನರವು ಸಿಗುವಂತಿರಲಿಲ್ಲ. ಅದೇ ವೇಳೆಗೆ ಗುಡ್‍ ಎನಫ್‍ ಮಾದರಿಯನ್ನು ಮುಂದುವರೆಸಿದ್ದು ಜಪಾನಿನ ಅಕಿರಾ ಯೊಶಿನೊ ಅವರು. ಅವರು ಕೊಬಾಲ್ಟ್‍ ಜೊತೆಗೆ ಪೆಟ್ರೊಲಿಯಂ ಕೋಕ್‍ ನಿಂದ ಪಡೆದ ಇಂಗಾಲದ ವಸ್ತುವನ್ನು ಆನೊಡ್‍ ಅಲ್ಲಿ ಬಳಸಿ ಅದೇ ಸಾಮರ್ಥ್ಯವನ್ನೂ ಉಳಿಸಿಕೊಂಡು ಲಿಥಿಯಮ್‍ ನಿಂದಾಗುವ  ಎಲ್ಲಾ ತೊಂದರೆಗಳನ್ನೂ ಸುಧಾರಿಸಿ ಈಗ ಮಾರುಕಟ್ಟೆಯಲ್ಲಿ ಇರುವ ಮಾದರಿಗಳನ್ನು 1985ರ ವೇಳೆಗೆ ಅಭಿವೃದ್ಧಿ ಪಡಿಸಿದರು. ಪ್ರೊ. ಅಕಿರಾ ಯೊಶಿನೊ ಜಪಾನಿನ ರಸಾಯನ ವಿಜ್ಞಾನಿ. ಮೆಯಿಜೊ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿಯೂ ಮತ್ತು ಅಸಾಹಿ ಕಸೆಯಿ ಕಾರ್ಪರೇಶನ್‍ ಸಂಸ್ಥೆಯಲ್ಲಿ ವಿಜ್ಞಾನಿಯಾಗಿಯೂ ಪ್ರಸ್ತುತ ಸೇವೆಯಲ್ಲಿದ್ದಾರೆ.  

“97 ದಾಟಿದರೂ It is Not ENOUGH for Goodenough”

ನನಗೆ ವೈಯಕ್ತಿವಾಗಿ ಜಾನ್‍ ಗುಡ್‍ ಎನಫ್‍ ತಿಳಿವಳಿಕೆಗೆ ಬಂದದ್ದು ನನ್ನ ಸ್ವತಂತ್ರ ಸಂಶೋಧನೆಯ ಹುಡುಕಾಟದಲ್ಲಿ. ಅವರ ಹಿಂದಿನ ಸಂಗತಿಗಳ ಅರಿವಾಗಿ ಜಾಲಾಡಿದಾಗ ವಯಸ್ಸು 90 ವರ್ಷಗಳ ದಾಟಿದ್ದರೂ ಸಂಶೋಧನೆಯಲ್ಲಿ ತೊಡಗಿದ್ದು ತಿಳಿದು 2016ರಲ್ಲಿ ಅವರ ಕುರಿತು ಬರೆದ ಲೇಖನ “ತೊಂಭತ್ತು ದಾಟಿದರೂ ದಣಿಯದ ಗುಡ್‍ ಎನಫ್‍” ಕನ್ನಡ ಪ್ರಭದಲ್ಲಿ ಪ್ರಕಟವಾಗಿತ್ತು.  ಉತ್ಸಾಹದ ಚಿಲುಮೆಯಾಗಿರುವ ಅವರ ಬಗ್ಗೆ ತಿಳಿಯಲೆಂದೆ ಅದರಿಂದ ಆಯ್ದ ಭಾಗವು ಕೆಳಗೆ ಮುಂದುವರೆದಿದೆ.

ಈ ವರ್ಷದ ಜುಲೈ 25ಕ್ಕೆ 97ವರ್ಷ ತುಂಬಿರುವ ಈ ಹಿರಿಯಜ್ಜ  ಪ್ರತಿದಿನವೂ ಪ್ರಯೋಗಾಲಕ್ಕೆ ಹೋಗಿ ಬರುತ್ತಾರೆಂದರೆ ಅಚ್ಚರಿ ಆಗುವು ದು. ಜಾನ್ ಗುಡ್ಎನಫ್ ತಮ್ಮ ತೊಂಭತ್ತರ ಹರೆಯದಲ್ಲಿ ದಿನವೂ ಆಸ್ಟಿನ್ನ ಟೆಕ್ಸಾಸ್ ವಿಶ್ವವಿದ್ಯಾಲಯದ ಮೆಕಾನಿಕಲ್ ಇಂಜನಿಯರಿಂಗ್ ಮತ್ತು ಮಟೆರಿಯಲ್ ವಿಜ್ಞಾನ ಪ್ರಯೋಗಾಲಕ್ಕೆ ಹೋಗಿ ಸಂಶೋಧನೆಯಲ್ಲಿ ತೊಡಗಿರುತ್ತಾರೆ. ನಾಗರಿಕ ಜಗತ್ತಿಗೆ ಮಹತ್ವವಾದ ಅನ್ವೇಷಣೆಯನ್ನು ತಮ್ಮ 50ರ ಹರೆಯದಲ್ಲಿಯೇ ಕೊಡುಗೆಯಾಗಿ ಕೊಟ್ಟ ಈ ವಿಜ್ಞಾನಿಗೆ ಇನ್ನೂ ಮತ್ತೂ ಮಹತ್ತರವಾದ ತಮ್ಮ ಕನಸೊಂದನ್ನು ನನಸು ಮಾಡುವ ಬಯಕೆಯಂತೆ.

            ಇಪ್ಪತ್ತನೆಯ ಶತಮಾನದ ಎರಡು ಮಹತ್ವದ ಶೋಧಗಳೆಂದರೆ ಇಲೆಕ್ಟ್ರಾನಿಕ್ ಲೋಕವನ್ನು ಸಾಧ್ಯಮಾಡಿದ ಟ್ರಾನ್ಸ್ಸಿಸ್ಟರ್ ಮತ್ತು ಇಡೀ ಎಲೆಕ್ಟ್ರಾನಿಕ್ ಲೋಕವನ್ನು ಮೊಬೈಲ್ ಆಗಿಸಿದ ಹಗುರವಾದ ಲಿಥಿಯಮ್‍ ಅಯಾನಿನ ಬ್ಯಾಟರಿ. ಗಾತ್ರದಲ್ಲಿ ಎರಡೂ ಒಂದನ್ನೊಂದು ಪೈಪೋಟಿ ಮಾಡುತ್ತಾ ಚಿಕ್ಕದಾಗುತ್ತಾ ಬೆಳೆದವು. ಟ್ರಾನ್ಸಿಸ್ಟರ್ ಅನ್ವೇಷಣೆಯನ್ನು ಬೆಲ್ ಪ್ರಯೋಗಾಲಯದ ವಿಜ್ಞಾನಿಗಳು 1947ರಲ್ಲಿಯೇ ಮಾಡಿ ಇಂದಿನ ಇಲೆಕ್ಟ್ರಾನಿಕ್ ಜಗತ್ತನ್ನು ಇಷ್ಟು ಅಗಲವಾಗಿ ಬೆಳೆಸಿದ್ದಾರೆ. ಅದರ ಈ ಬೆಳವಣಿಗೆಯನ್ನು ಚಲನೆಗೆ ಒಗ್ಗುವಂತೆ ಮಾಡಿದ್ದು ಚಿಕ್ಕದಾಗುತ್ತಾ-ಹಗುರವಾಗುತ್ತಾ ಬೆಳೆಯುತ್ತಿರುವ ಲಿಥಿಯಮ್‍ ಬ್ಯಾಟರಿ. ಸಮಕಾಲೀನ ನಾಗರಿಕತೆಯಲ್ಲಿ ಒಟ್ಟಾರೆ ಆರ್ಥಿಕ ವಹಿವಾಟಿನಲ್ಲಿ ಇಲೆಕ್ಟ್ರಾನಿಕ್ ಉದ್ಯಮದ ಪಾತ್ರ ಹಿರಿದು. ಎಷ್ಟೆಂದರೆ ಎಲ್ಲರ ಕೈಯಲ್ಲೂ ಮೊಬೈಲ್ ಫೋನು! ಆಲೋಚನೆಗಳಿಗೆ ದ್ವನಿಯನ್ನು ಅಷ್ಟೇ ವೇಗವಾಗಿ ಹರಿಬಿಡಲು ಸಾಧ್ಯವಾಗುತ್ತಿದೆ ಎಂದರೆ, ಅದಕ್ಕೆ ಸಾಧನವಾಗಿ ಶಕ್ತಿ ಒದಗಿಸುವ ಲಿಥಿಯಂ ಬ್ಯಾಟರಿಯ ಚಮತ್ಕಾರ ಅದರಲ್ಲಿ ಬೆರೆತಿದೆ. ಇದರ ಹಿಂದಿರುವ ವಿಜ್ಞಾನಿ ಈ ಹಿರಿಯಜ್ಜ, ಇನ್ನೂ ಕನಸುಗಳನ್ನು ಹೊತ್ತು ದಿನವೂ ಪ್ರಯೋಗಾಲಯಕ್ಕೆ ಅಲೆಯುತ್ತಿದ್ದಾರೆ. 

  ಈ ಲಿಥಿಯಂ ಬ್ಯಾಟರಿಯನ್ನು 1980ರಲ್ಲಿ ಮೊದಲಬಾರಿಗೆ ಜಾನ್ ಗುಡ್ಎನಫ್ ರೂಪುಗೊಳಿಸಿದರು. ನಂತರ 1991ರಲ್ಲಿ ಅದು ಸೋನಿ ಕಂಪನಿಯ ಮೂಲಕ ನಾಗರಿಕ ಬದುಕಿಗೆ ಪರಿಚಯಗೊಂಡಿತು. ಈ ಬ್ಯಾಟರಿಗಳು ಆ ಮೊದಲೂ ಇಲ್ಲವೆಂದಲ್ಲ ಇದ್ದವು ಅವು ಆಮ್ಲದೊಳಗೆ ಮುಳುಗಿದ್ದ ಲೋಹದ ಸರಳುಗಳನ್ನು ಒಳಗೊಂಡು ಗಾತ್ರದಲ್ಲಿ ಅತ್ಯಂತ ದೊಡ್ಡದಾಗಿ ಎಲ್ಲಿಯಾದರೂ ಕೊಂಡೊಯ್ಯಲು ಅಸಾಧ್ಯ ಎನ್ನುವಂತಿದ್ದವು. ಆದರೆ ಲಿಥಿಯಂ ಅತ್ಯಂತ ಹಗುರವಾದ ಲೋಹವಾಗಿದ್ದು ಅದರ ಮೂಲಕ ಇಂದು ಬ್ಯಾಟರಿಗಳು ಚಿಕ್ಕದಾಗುತ್ತಾ ಹಗುರವಾಗುತ್ತಾ ಬಂದಿವೆ.

            ಈ ಲಿಥಿಯಮ್‍ ನ್ನು ಬ್ಯಾಟರಿಯಲ್ಲಿ ಊಹಿಸಿದ್ದೇ ಒಂದು ಅಪ್ಪಟ ಭೌತವಿಜ್ಞಾನದ ಹಾಗೂ ರಸಾಯನವಿಜ್ಞಾನದ ಹದವಾದ ಮಿಶ್ರಣ. ಈ ಎರಡೂ ಜ್ಞಾನಶಾಖೆಗಳ ಮೂಲಭೂತ ಅಧ್ಯಯನವಿಲ್ಲದ ವ್ಯಕ್ತಿಯೊಬ್ಬರು ಸಾಧ್ಯಮಾಡಿದ್ದು ಅಚ್ಚರಿಯೇ ಸರಿ. ಜಾನ್ ಗುಡ್ಎನಫ್ ತಮ್ಮ ಗಣಿತದ ಪದವಿಯನ್ನು ಪಡೆದ ನಂತರ ಸೈನ್ಯದಲ್ಲಿ ಸೇವೆ ಸಲ್ಲಿಸಲು ಆರಂಭಿಸಿದವರು. ಎರಡನೇ ಮಹಾಯುದ್ದದ ಸಂದರ್ಭದಲ್ಲಿ ಸೇನೆಯಲ್ಲಿದ್ದು ಹೊರದೇಶಗಳ ಸುತ್ತಾಟದಲ್ಲಿ ಕಳೆದವರು. ಯುದ್ದ ಮುಗಿದ ನಂತರ ಸೈನಿಕರಿಗೆ ಪುನರ್ವಸಾಹತು ಮಾಡಿಕೊಡುವ ತಯಾರಿಯಲ್ಲಿ ಉಳಿದ ಹಣದಿಂದ ಕೆಲವರನ್ನು ಹೆಚ್ಚಿನ ಓದಿಗೆ ಕಳಿಸಲು ಆಲೋಚಿಸಲಾಯಿತು. ಅಂತಹಾ ಅಚಾನಕ್ ಆದ ನಿರ್ಧಾರದಲ್ಲಿ ಸಿಕ್ಕಿಕೊಂಡವರು ಜಾನ್. ಅವರನ್ನು ಚಿಕಾಗೋ ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಓದಿಗೆ ಶಿಫಾರಸ್ಸು ಮಾಡಿ ಕಳಿಸಲಾಯಿತು. ಅದೂ ಭೌತವಿಜ್ಞಾನ ದ ಅಧ್ಯಯನಕ್ಕೆ. ತಮಾಷೆ ಎಂದರೆ ಆಗಲೇ ಜಾನ್‍ ಅವರಿಗೆ 24 ವರ್ಷ ತುಂಬಿದ ದಿನಗಳು. ಆಗಿನ ಕಾಲದಲ್ಲಿ ಭೌತವಿಜ್ಞಾನ ಏನಿದ್ದರೂ ಮೊದಲ 2-3 ದಶಕದೊಳಗೇ ಓದಿ ಅರ್ಥೈಸಿಕೊಳ್ಳುವುದು ಎನ್ನುವಂತಹ ಪರಿಪಾಠ. ಅಲ್ಲದೆ ತಮ್ಮ ಸಹಪಾಠಿಗಳಿಗೆ ಹೋಲಿಸಿದರೆ ಜಾನ್ ಹಿರಿಯರಾದ ಕಾರಣ  ಭೌತವಿಜ್ಞಾನ ಕಲಿಸುವ ಶಿಕ್ಷಕರು “ಏನ್ರಿ ಈ ವಯಸ್ಸಿನಲ್ಲಿ ಭೌತವಿಜ್ಞಾನ ಕಲಿಯೋದು ಅಂದರೆ ಹೇಗೆ? ನಿಮ್ಮ ವಯಸ್ಸಿನವರು ಈಗಾಗಲೇ ಭೌತವಿಜ್ಞಾನದಲ್ಲಿ ಸಾಧನೆ ಮಾಡಿರುವವರು ಇದ್ದಾರಲ್ಲವೇ?” ಎನ್ನುತ್ತಿದ್ದರಂತೆ. ಇವೆಲ್ಲದರ ನಡುವೆಯೇ ಜಾನ್ ಅವರಿಗೆ ಸಂಶೋಧನೆ ಮುಗಿಸಿ ಪಿಎಚ್.ಡಿ ಪದವಿ ಪಡೆಯಲು ಸಾಧ್ಯವಾಗುತ್ತದೆ. 

            ಕಳೆದ ಹಲವು ದಶಕಗಳಿಂದ ವಿಜ್ಞಾನ ಜಗತ್ತು ಬಗೆ ಬಗೆಯ ಪದಾರ್ಥಗಳ ಬೆನ್ನು ಹತ್ತಿದೆ. ಹೊಸ ಹೊಸ ವಸ್ತುಗಳ ಹುಡುಕಾಟದಲ್ಲಿ ನಿರತವಾಗಿದೆ. ಇದು ಹಿಂದಿನಿಂದಲೂ ನಡೆದು ಬಂದಿದೆ. ಬ್ಯಾಟರಿ ರೂಪಿಸುವ ಪದಾರ್ಥಗಳನ್ನು ಅರ್ಥೈಸಿಕೊಂಡು ನಿರ್ವಹಿಸಲು ಭೌತವಿಜ್ಞಾನದ ಹಾಗೂ ರಸಾಯನವಿಜ್ಞಾನದ ಹದವರಿತ ತಿಳಿವಳಿಕೆಯ ಅವಶ್ಯಕತೆಯಿರುತ್ತದೆ. ಏಕೆಂದರೆ ಬ್ಯಾಟರಿಯಲ್ಲಿ ಇಲೆಕ್ಟ್ರೋಡ್ಗಳಿರುತ್ತವೆ ಮತ್ತು ಅವುಗಳ ಮಧ್ಯೆ ಪ್ರವಹಿಸಲು ಅಯಾನುಗಳಿರಬೇಕಿರುತ್ತದೆ. ವಿದ್ಯುದಂಶದ ಉತ್ಪಾದನೆ ಹಾಗೂ ಪ್ರವಹಿಸುವ ಮಾಧ್ಯಮದಲ್ಲಿ ಅಯಾನುಗಳ ಚಲನೆ. ಇವೆಲ್ಲಾ ಅರ್ಥವಾಗಲು ಪದಾರ್ಥದ ಅಣುಸ್ವರೂಪದ ಲಕ್ಷಣಗಳ ಜತೆಗೆ ಪದಾರ್ಥದ ವರ್ತನೆಗೆ ಅನುಕೂಲಕರವಾಗಿ ಇರಬೇಕಿರುತ್ತದೆ. ವಿವಿಧ ಆಕ್ಸೈಡ್ಗಳ ಮಿಶ್ರಣದದಿಂದ ಉತ್ಪನ್ನವಾಗಿದ್ದಲ್ಲದೆ ಮತ್ತು ಅದು ಹಗುರವಾಗಿಯೂ ಬಹುಕಾಲ ತಡೆಯ ಬಲ್ಲದ್ದಾಗಿಯೂ ಇರುವ ಹುಡುಕಾಟಕ್ಕೆ ಮೂಲವಸ್ತುಗಳ ರಚನೆ ಮತ್ತು ವರ್ತನೆಗಳ ಪಕ್ವವಾದ ಊಹೆಯು ತಿಳಿವಳಿಕೆಯ ಭಾಗವಾಗಿರಬೇಕು. ವಿದ್ಯುತ್ ಪ್ರವಹಿಸಲು ಲೋಹವೇ ಆಗಬೇಕು. ಲೋಹಗಳು ಹೇಳಿ ಕೇಳಿ ಸಾಂದ್ರವಾದವು, ಹೆಚ್ಚು ಭಾರವಾದವು. ಲಿಥಿಯಂ ಲೋಹಗಳಲ್ಲೆಲ್ಲಾ ಹಗುರವಾದದ್ದು. ಅದಕ್ಕೆ ಸರಿಯಾದ ಮಿಶ್ರಣವನ್ನು ಸಾಧಿಸಿ ಇಲೆಕ್ಟ್ರೋಡ್ ಸಾಧಿಸಿದ್ದು ಜಾನ್ ಅವರ ಜಾಣ್ಮೆ. ಅಷ್ಟೇ ಅಲ್ಲ ಅದನ್ನು ಮತ್ತೆ ಮತ್ತೆ ಚಾರ್ಜ್‍ ಮಾಡಿ ಬಳಸಲೂ ಆಗವಂತೆ ಮಾಡಿದ್ದು ಹಿರಿಯ ಸಾಧನೆ.  

          ಕಾಣದಂತೆ ಅಡಗಿ ಕುಳಿತ ಮಾಯಾಪಟ್ಟಿಗೆಯ ಇಲೆಕ್ಟ್ರೋಡ್ ಅನ್ವೇಷಕ ಜಾನ್ ಬದುಕೂ ಸಹಾ ಮಾಯಾಜಾಲವೆ. ತನ್ನ ಹೆತ್ತಮ್ಮನಿಗೆ ಬೇಡವಾದ ಮಗುವಾಗಿ ಹುಟ್ಟಿದ ಜಾನ್, ಅಮ್ಮನ ಪ್ರೀತಿಯನ್ನೇ ಅನುಭವಿಸಲಿಲ್ಲ. ಅಪ್ಪನೂ ಪರಿಚಿತನಲ್ಲದಂತಹಾ ಬದುಕನ್ನೇ ಕೊಟ್ಟವರು. ಅದಕ್ಕೆ ತಮ್ಮ ಪುಟ್ಟ ಆತ್ಮಕತೆಯಲ್ಲಿ ಎಲ್ಲಿಯೂ ಅಮ್ಮ-ಅಪ್ಪನ ಹೆಸರನ್ನೂ ಹೇಳಿಲ್ಲ! ಇದೀಗ ಕಡೆಗಾಲದಲ್ಲಿ ಹೆಂಡತಿಯೂ ಸಂಪೂರ್ಣ ಮರೆವಿನ ಕಾಯಿಲೆಯಲ್ಲಿ ಕಳೆದೇ ಹೋಗಿ ಹಾಸಿಗೆ ಹಿಡಿದಿದ್ದಾರೆ. ಸಹೋದರರೊಬ್ಬರು ತಮ್ಮ 90 ಇಳಿವಯಸ್ಸಿನಲ್ಲಿ ಜೀವನ ಯಾತ್ರೆ ಮುಗಿಸಿದ್ದಾರೆ.  ಸ್ವತಃ ಜಾನ್ 97 ವಸಂತಗಳ ಕಂಡು 98ರಲ್ಲೂ ಲವಲವಿಕೆಯ ಅಧ್ಯಯನ, ಸಂಶೋಧನೆ ನಡೆಸುತ್ತಾ, ಇಡೀ ನಾಗರಿಕ ಬದುಕನ್ನು ಚಲನೆಯಾಗಿಸುವ ಕನಸುಗಳ ನನಸಾಗಿವಲ್ಲಿ ನಿರತರಾಗಿದ್ದಾರೆ. ಅವರ ಹೊಸ ಕನಸು, ನಮ್ಮ ಮಾಮೂಲಿ ಪೆಟ್ರೋಲ್ ಕಾರುಗಳ ಕಂಬಶ್ಚನ್ ಯಂತ್ರದ ಮಾದರಿಯ ವಿದ್ಯುತ್ ಕಾರನ್ನು ರಸ್ತೆಯಲ್ಲಿ ಓಡಿಸುವುದಾಗಿದೆ. 

          ಹೊಸತೊಂದನ್ನು ಕೊಡುವ ಉತ್ಸಾಹದ ದಣಿವರಿಯದ ವಿಜ್ಞಾನದ ಅಜ್ಜನಿಗೆ ಹಲವಾರು ಗೌರವಗಳು. ಕಳೆದ 2009ರ ಎನ್ರಿಕೋ ಫರ್ಮಿ ಪರಸ್ಕಾರದ ಜತೆಗೆ 2013ರಲ್ಲಿ ಅಮೇರಿಕಾದ ರಾಷ್ಟ್ರೀಯ ವಿಜ್ಞಾನ ಪುರಸ್ಕಾರ ಲಭಿಸಿದೆ. ರಸಾಯನವಿಜ್ಞಾನದ ರಾಯಲ್ ಸೊಸೈಟಿಯು ಜಾನ್ ಗುಡ್ಎನಫ್ ಹೆಸರಲ್ಲಿ ರಸಾಯನವಿಜ್ಞಾನದ ಬಹುಮಾನವನ್ನು ಸ್ಥಾಪಿಸಿದೆ. ಭೌತವಿಜ್ಞಾನ ಮತ್ತು ರಸಾಯನವಿಜ್ಞಾನ ಗಳ ಸರಿಯಾದ ಮಿಳಿತವಾದ ಸಂಶೋಧನೆಯನ್ನು ಮಾಡಿದ ಹಿರಿಯಜ್ಜನಿಗೆ 90ರ ನಂತರ ಹೆಚ್ಚೂ ಕಡಿಮೆ ಪ್ರತೀವರ್ಷ ನೊಬೆಲ್ ಪುರಸ್ಕಾರಕ್ಕೆ ಹೆಸರು ಸೂಚಿಸಲಾಗಿತ್ತು. ಇಡೀ ಇಲೆಕ್ಟ್ರಾನಿಕ್ ಜಗತ್ತನ್ನು ಕ್ರಾಂತಿಕಾರಿಯಾಗಿಸುವ ಶೋಧಕ್ಕೆ ನೊಬೆಲ್ ಬಹುಮಾನ ಯೋಗ್ಯವೆಂದು ಹಲವಾರು ವಿಜ್ಞಾನಿಗಳ ಅನಿಸಿಕೆ.  ಅದು ಈ ವರ್ಷ ಸಾಧ್ಯವಾಗಿದೆ. ಅವರ ಆಯುಷ್ಯವು ಇನ್ನೂ ಹೆಚ್ಚಲಿ. ನಮ್ಮೆಲ್ಲರಿಗೂ ಉತ್ಸಾಹ ಕೊಡಲಿ.          

ನಮಸ್ಕಾರ

-ಡಾ.ಟಿ.ಎಸ್.ಚನ್ನೇಶ್

Leave a Reply