You are currently viewing ನಮ್ಮ ವಂಶವಾಹಿ(ಜೀನ್)ಗಳನ್ನೂ ಮೀರಿ ಇಮ್ಯುನಿಟಿ ಇದೆಯಾ?

ನಮ್ಮ ವಂಶವಾಹಿ(ಜೀನ್)ಗಳನ್ನೂ ಮೀರಿ ಇಮ್ಯುನಿಟಿ ಇದೆಯಾ?

ಹೌದು ಇದೆ. ಹಾಗೆನ್ನುವುದೇನು ಕೇವಲ ಸಮಾಧಾನಕ್ಕೆ ಹೇಳುವ ಮಾತಲ್ಲ. ಅಂತಹದ್ದೊಂದು ಪ್ರಶ್ನೆಯ ಉತ್ತರವನ್ನು ವಿಜ್ಞಾನಿಗಳು ದೀರ್ಘಕಾಲದ ಅನುಮಾನ, ಕುತೂಹಲಗಳು ಮುಂತಾದ ಹಿನ್ನೆಲೆಯ ಒಳನೋಟಗಳಿಂದ ಒಂದಷ್ಟು ಕಂಡುಕೊಂಡಿದ್ದಾರೆ. ಹಾಗಾಗಿ ಅಯ್ಯೋ ನಮ್ಮ ಜೀನ್‌ಗೆ ಇಷ್ಟೇನೆ! ನಮ್ಮ ಮನೆಯವರೆಲ್ಲಾ ಹಾಗೆ, ನಮ್ಮ ಅಣ್ಣನೋ, ಅಕ್ಕನೋ ಹೀಗಿದ್ದರು, ಥೇಟ್‌ ನಮ್ಮ ಚಿಕ್ಕಮ್ಮನ ಹಾಗೇ ಆಗಿದ್ದು, ಎಂದು ಕಡ್ಡಿ ಮುರಿದಂತೆ ಹೇಳೋದಕ್ಕೆ ಆಗದು. ಅಷ್ಟಲ್ಲದೆ ಇದು ರೋಗವನ್ನು ತಾಳಿಕೊಂಡು, ಪ್ರತಿರಕ್ಷಣೆಯನ್ನು ಕೊಡುವ ಸನ್ನಿವೇಶಕ್ಕೂ ಕೂಡ ಆದೀತು.

       ಏನು ಹಾಗಾದರೆ, ಒಂದೇ ರಕ್ತ ಹಂಚಿಕೊಂಡು, ಅದು ಬಿಡಿ ತಾಯಿಯ ಗರ್ಭದಲ್ಲೂ ಜೊತೆಯಾಗಿಯೇ ಇದ್ದು ಒಟ್ಟಾಗಿಯೇ ಹುಟ್ಟಿದವರ ನಡುವೆಯೂ ಜೆನೆಟಿಕ್‌ ಸಂಬಂಧಗಳು ದಿನ ಕಳೆದು ಬೆಳೆಯುತ್ತಾ ದೊಡ್ಡವರಾದಂತೆ ಭಿನ್ನವಾಗಿಯೇ ವರ್ತಿಸುತ್ತವಂತೆ. ಹಾಗಾಗಿ ನಮ್ಮದೇ ಜೀನುಗಳ ಬಗೆಗೂ ಒಂದು ತೀರ್ಮಾನವನ್ನು ಕೊಟ್ಟು ನಾವಿಷ್ಟೇ ಎಂದಾಗಲಿ, ಅವರಿಷ್ಟೇ ಎಂದಾಗಲಿ ಅಂತಿಮ ನಿರ್ಧಾರಕ್ಕೆ ಬರುವಂತೆಯೇ ಇಲ್ಲ. ನಮ್ಮ ಜೀನೊಮಿನ ಡಿ.ಎನ್‌.ಎ.ಗಳ ಒಟ್ಟು ಸ್ಕೋರು ಸರಿಯಾಗಿ ಲೆಕ್ಕಚಾರದಂತೆ ಇರಬೇಕೆಂದರೆ ಬರಿ ಅದರ ವರ್ತನೆಯಷ್ಟೇ ನಿರ್ಧರಿಸುವುದಿಲ್ಲ. ಸಾಲದಕ್ಕೆ ಡಿ.ಎನ್‌.ಎ.ಗಳ ಮೇಲೂ ಮತ್ತೊಂದು ಲೆಕ್ಕಾಚಾರದ ಗುರುತುಗಳು ಇರುತ್ತವೆಯಂತೆ. ಅವು ಭೌತಿಕ ಹಾಗೂ ರಸಾಯನಿಕಗಳೆರಡರ ಸ್ವರಮೇಳದಂತೆ!  ಅವೂ ಕೂಡ ಜೀನೊಮಿನ ವ್ಯವಹಾರದಲ್ಲಿ ಪಾತ್ರವಹಿಸುವ ಬಗೆಯನ್ನು “ಎಪಿಜೆನೆಟಿಕ್ಸ್‌” ಎಂದಿದ್ದಾರೆ. ಎಪಿಜೆನೆಟಿಕ್ಸ್‌ ಎಂದರೆ -ಜೆನೆಟಿಕ್ಸ್‌ಗಿಂತಲೂ ಮೇಲಿನದು ಎಂತಲೋ, ಜೆನಿಟಿಕ್ಸ್‌ನ ಹೊರತಾಗಿಯೂ ಎಂತಲೋ ಕರೆಯಬಹುದೇನೋ! ಇದನ್ನು ಜೀನುಗಳಾಚೆಯ ಆನುವಂಶಿಕತೆ ಎಂತಲೂ ಅರ್ಥೈಸಿದ್ದಾರೆ. ಹಾಗೆಂದೇ ಜೀನುಗಳ ಹೊರತಾಗಿಯೂ ಇಮ್ಯುನಿಟಿಯ ಆನುವಂಶಿಕ ಗುಣಗಳು ಇರಬಹುದಾಗಿದೆ.

ಮಾನವರ ಜೀವಿಕೋಶದ ಡಿ.ಎನ್‌.ಎ.ಯು ಆಯಾ ಕೋಶದ ಒಟ್ಟಾರೆ ಚಟುವಟಿಕೆಯನ್ನು ನಿರ್ದೇಶಿಸುವ ಮಾಹಿತಿಯ ಪುಸ್ತಕವಿದ್ದಂತೆ. ಡಿ.ಎನ್‌.ಎ.ಯು ನಿರ್ದೇಶನವನ್ನು ಆರ್‌ಎನ್‌.ಎ.ಗೆ ನಕಲು ಮಾಡಿ ತಿಳಿಸಿದರೆ, ಆರ್‌.ಎನ್‌.ಎ.ಯು ಅದನ್ನು ರೈಬೊಸೋಮುಗಳಿಗೆ ಮಾಹಿತಿಯಾಗಿಸುತ್ತದೆ. ರೈಬೊಸೋಮು ಅದನ್ನು ಪ್ರೊಟೀನ್‌ಗಳಂತೆ ಮಾರ್ಪಡಿಸುತ್ತದೆ. ಪ್ರೊಟೀನ್‌ ಕಾರ್ಯನಿರ್ವಹಿಸುವ ಜವಾಬ್ದಾರನಾಗಿ ಅದನ್ನು ಅಕ್ಷರಶಃ ತಿಳಿದು ಕಾರ್ಯನಿರ್ವಹಿಸುತ್ತದೆ. ಇದು ಸಹಜವಾದ ಕ್ರಿಯೆ. ಆದರೆ ಕೆಲವೊಮ್ಮೆ ಇದನ್ನು ಮೀರಿ, ಜೀನುಗಳ ಸಣ್ಣ ವ್ಯತ್ಯಾಸದಿಂದ ಅವುಗಳ ವರ್ತನೆಯನ್ನು -ಆ ಜೀನುಗಳ ಅನುಕ್ರಮಣಿಕೆಯನ್ನು ವ್ಯತ್ಯಯಗೊಳಿಸದಂತೆ – ಬದಲಿಸುವುದನ್ನು ದೇಹವು ನಿರ್ವಹಿಸುತ್ತದೆ. ಈ ಕಾರ್ಯವೈಖರಿಯನ್ನೇ “ಎಪಿಜೆನೆಟಿಕ್ಸ್‌” ಎಂಬುದಾಗಿ ಕರೆಯಲಾಗಿದೆ. ಇದೇನು ತೀರಾ ಹೊಸತಾದ ವಿಚಾರವೇನಲ್ಲ.  “ಎಪಿಜೆನೆಟಿಕ್ಸ್‌” ಎಂಬ ಹೆಸರನ್ನು ಕೊಟ್ಟು ಇಂತಹ ಮಹತ್ವವನ್ನು 1947ರಷ್ಟು ಹಿಂದೆಯೇ ಬ್ರಿಟನ್ನಿನ ಕಾನ್ರಾಡ್‌ ವಡಿಂಗ್ಟನ್‌ (Conrad Waddington, 1905–1975)   ಅವರು ವಿವರಿಸಿದ್ದರು. ಐತಿಹಾಸಿಕವಾಗಿ ಆನುವಂಶಿಕ ಸಂಗತಿಗಳಿಂದ ವಿವರಿಸಲಾಗದ್ದನ್ನು ಎಪಿಗೆನೆಟಿಕ್ಸ್‌ ಎಂಬುದಾಗಿ ಕರೆಯಲಾಗಿತ್ತು. ವಡಿಂಗ್ಟನ್‌ ಅವರು ಜೀನುಗಳು ಮತ್ತದರ ಉತ್ಪನ್ನಗಳ ನಡುವಣ ಸಹಜವಾದ ವರ್ತನೆಗಳ ವಿವರಣಾತ್ಮಕ ಜೈವಿಕ ವಿಜ್ಞಾನದ ಭಾಗವನ್ನು ಹಾಗೆ ಹೆಸರಿಸಿದ್ದರು. ಕಾಲ ಸರಿದಂತೆ ಹೀಗೆ ಕೆಲವು ವಿವರಿಸಲು ತರ್ಕಕ್ಕೆ ಸಿಗದ ವಿಲಕ್ಷಣವಾದ ಸ್ವಭಾವಗಳ ಕುರಿತ ಆನುವಂಶಿಕ ಸಂಗತಿಗಳನ್ನು ಎಪಿಜೆನೆಟಿಕ್ಸ್‌ ಎನ್ನುವ ಹೆಸರಲ್ಲಿ ವಿಭಾಗಿಸಲು ಆರಂಭಿಸಲಾಯಿತು.   

ಪ್ರಮುಖವಾಗಿ ಜೀನುಗಳಲ್ಲದೆ ಅವುಗಳ ವಾತಾವರಣದ ಫಲವೂ ಜೀವಿಗಳ ಸ್ವಭಾವಗಳ ಮೇಲೆ ತೋರುವಂತಹಾ ವಿಷಯಗಳನ್ನು ಎಪಿಜೆನೆಟಿಕ್ಸ್‌ ಒಳಗೊಂಡಿದೆ. ಉದಾಹರಣೆಗೆ ಹಣ್ಣು ನೊಣ -ಡ್ರಾಸೊಫಿಲಾ-ದ ರೂಪ ವೈವಿಧ್ಯವು ಬದಲಾಗುವಿಕೆಯನ್ನೂ ಅಂತಹದ್ದರಿಂದಲೇ ಗುರುತಿಸಲಾಗಿದೆ. ಅದೇ ರೀತಿಯಲ್ಲೇ ಒಂದೇ ರಕ್ತ ಹಂಚಿಕೊಂಡವರಲ್ಲೂ ಅಷ್ಟೇಕೆ ಭ್ರೂಣದಿಂದಲೂ ಜೊತೆಯಲ್ಲೇ ಜೀವನ ಆರಂಭಿಸಿ, ಜೊತೆಯಲ್ಲೇ ಹುಟ್ಟು ಪಡೆದವರಲ್ಲೂ ವ್ಯತ್ಯಯದ ಸಂಗತಿಗಳನ್ನು ಕಂಡುಕೊಳ್ಳಲಾಗಿದೆ. ಅಂದರೆ ಅವಳಿಗಳಲ್ಲೂ ಜೀನೊಮಿನ ಅನುಕ್ರಮಣಿಕೆಯ ಹೊಂದಾಣಿಕೆಯ ನಡುವೆಯೂ ಭಿನ್ನತೆಯ ಅಂಶಗಳನ್ನು ದಾಖಲಿಸಲಾಗಿದೆ. ಹಾಗಾಗಿ ಇದನ್ನು ಒಂದು ಬಗೆಯಲ್ಲಿ ಜೀನುಗಳ ಸಮುಚ್ಛಯ (ಜೀನೊಟೈಪ್‌) ಮತ್ತು ಹೊರನೋಟದ ತೋರಿಕೆ (ಫಿನೊಟೈಪ್‌)ಗಳ ನಡುವಿನ ಸೇತುವೆಯಂತೆ ಎಂದೇ ವ್ಯಾಖ್ಯಾನಿಸಲಾಗಿದೆ.  

ಈಗಷ್ಟೇ ಪ್ರಸ್ತಾಪಿಸಿದ ಅವಳಿಗಳನ್ನು ಕುರಿತಂತಹಾ ಎಪಿಜೆನೆಟಿಕ್ಸ್‌ ಅಧ್ಯಯನವನ್ನು ನಡೆಸಿದ ಡಾ. ಮನೆಲ್‌ ಎಸ್ಟೆಲರ್‌ ಅವರ ನೇತೃತ್ವದ ತಂಡವು ಅಂತಹಾ ಇಮ್ಯೂನ್‌ ಪ್ರತಿಕ್ರಿಯೆಗಳ ವಿವಿಧತೆಯ ಬಗೆಗೆ ಬೆಳಕು ಚೆಲ್ಲಿದೆ. ಡಾ. ಮನೆಲ್‌ ಎಸ್ಟೆಲರ್‌ ಕ್ಯಾನ್ಸರ್‌ ಕೋಶಗಳ ಪ್ರತಿರೋಧಿಸುವ ಮಾನವ ದೈಹಿಕ ಸಂಗತಿಗಳನ್ನು ಅಧ್ಯಯನ ಮಾಡುವ ವೈದ್ಯ ವಿಜ್ಞಾನಿಗಳಲ್ಲಿ ಪ್ರಮುಖರು. ಸ್ಪೈಯಿನ್‌ ದೇಶದ ರಾಷ್ಟ್ರೀಯ ಕ್ಯಾನ್ಸರ್‌ ಸೆಂಟರಿನಲ್ಲಿ ಎಪಿಜೆನೆಟಿಕ್ಸ್‌ ಅಧ್ಯಯನದ ರೂವಾರಿ ವಿಜ್ಞಾನಿಯಾಗಿದ್ದಾರೆ. ಅವಳಿಗಳಲ್ಲಿ ಇಬ್ಬರೂ ಒಂದೇ ಜೀನೋಮನ್ನೂ ಹೊಂದಿದ್ದೂ ಅವರಲ್ಲಿ ಒಬ್ಬರು ಮಾತ್ರವೇ ಮಧುಮೇಹ ಅಥವಾ ಕ್ಯಾನ್ಸರ್‌ ಅಂತಹಾ ರೋಗಗಳಿಗೆ ತುತ್ತಾಗಿದ್ದು, ಅಂತಹದರಿಂದಾಗಿ ಮೊದಲೇ ಅದನ್ನು ಗುರುತಿಸಲು ಯಾವುದಾದರೂ ತರ್ಕಬದ್ಧ ವಿಚಾರಗಳು ಸಾಧ್ಯವೇ ಎಂಬುದನ್ನು ಡಾ. ಮನೆಲ್‌ ಸಂಶೋಧನೆಗಳಿಂದ ಒಂದಷ್ಟು ತಿಳಿವನ್ನು ಹೊರಹಾಕಿದ್ದಾರೆ. ಮಹತ್ವದ ವಿಚಾರವೆಂದರೆ ಅವಳಿಗಳಾಗಿದ್ದೂ ಒಬ್ಬರು ರೋಗಕ್ಕೆ ತುತ್ತಾಗಿ ಮತ್ತೋರ್ವರು ಸುಖವಾಗಿರುವ ವಿಚಾರ. ಒಂದೇ ಬಗೆಯ ಜೀನೋಮ್‌ ಇದ್ದೂ ಭಿನ್ನವಾದ ವಿಶೇಷವನ್ನು ಪ್ರತಿರೋಧದ ಅಥವಾ ಇಮ್ಯುನಿಟಿಯ ಅರ್ಥೈಸುವಿಕೆಯಲ್ಲಿ ನೋಡಬಹುದಾಗಿದೆ. ಹಾಗಾಗಿ ಒಂದೇ ಮನೆಯಲ್ಲೂ ಅಥವಾ ಒಂದೇ ಕುಟುಂಬದಲ್ಲಿ ಭಿನ್ನತೆಯು ಇನ್ನೂ ವಿಶಿಷ್ಟವಾದೀತು. ಮೊದಲು ಅಧ್ಯಯನದ ವಿವರಗಳನ್ನು ತಿಳಿದು, ಅದು ಹೇಗೆ ಎಂಬುದನ್ನು ನಂತರದಲ್ಲಿ ನೋಡೋಣ.

ಡಾ. ಮನೆಲ್‌ ಅವರ ತಂಡವು ಸುಮಾರು ೮೦ ಜೊತೆ ೩ ರಿಂದ ೭೪ ವರ್ಷಗಳ ವಯೋಮಾನದ ಒಂದೇ ಬಗೆಯ ರೂಪು ಹೊಂದಿರುವ ಅವಳಿಗಳನ್ನು ಅಧ್ಯಯನದಲ್ಲಿ ಬಳಸಿಕೊಂಡಿತ್ತು. ಅವರ ಅತ್ಯಂತ ಪ್ರಮುಖ ಶೋಧವೆಂದರೆ ಎಳೆಯ ವಯಸ್ಸಿನಲ್ಲಿ ಎಪಿಜೆನೆಟಿಕ್ಸ್‌ ವ್ಯತ್ಯಯಗಳನ್ನು ತಿಳಿಯುವುದು ಕಷ್ಟವಾಗುವುದಂತೆ. ಆದರೆ ವಯಸ್ಸಾದಂತೆ ಜೀನುಗಳೇನು ನಿರ್ವಹಿಸದಿರುವ ಆನುವಂಶಿಕ ವಿಚಾರಗಳು ಬೆಳಕಿಗೆ ಬರುತ್ತವಂತೆ. ಏಕೆಂದರೆ ಸುಮಾರು ೫೦ರ ಹರೆಯದವರಲ್ಲಿನ ಅವಳಿಗಳ ನಡುವಿನ ಜೀನುಗಳ ಕ್ರೀಯಾಶೀಲತೆ ವ್ಯತ್ಯಾಸವು ೩ ವರ್ಷದವರಿಗೆ ಹೋಲಿಸಿದಲ್ಲಿ ಸುಮಾರು ಮೂರು ಪಟ್ಟು ಹೆಚ್ಚಿರುವುದಂತೆ. ಹಾಗಾಗಿ ನಾವೆಲ್ಲರೂ ಬೆಳೆದಂತೆ ಜೀನುಗಳಿಗಿಂತಲೂ ಇನ್ನೂ ಒಂದು ರೀತಿಯಲ್ಲಿ ಮೇಲೆಯೇ(We are above than Genes) ಎಂದು ಡಾ. ಮನೆಲ್‌ ಅಭಿಪ್ರಾಯ ಪಡುತ್ತಾರೆ. ಅಂದರೆ ಕೇವಲ ನಮ್ಮ ಜೀನೋಮಿನ ಅನುಕ್ರಮಣಿಕೆ (Sequence) ಮುಖ್ಯವಲ್ಲ, ಅವುಗಳ ವರ್ತನೆಯನ್ನು ನಿರ್ದೇಶಿಸುವ ಅದರ ಸುತ್ತಲ ಪರಿಸರವೂ ಮುಖ್ಯ. ಜೀನಿನ ಪರಿಸರ ಎಂದರೆ ಒಂದು ಬಗೆಯಲ್ಲಿ ಅದನ್ನು ಸುತ್ತುವರೆದ ಭಾಗ ಎಂದುಕೊಳ್ಳೋಣ. ಜೀನುಗಳು ಒಂದೇ ಇದ್ದರೂ ಅದರ ಸುತ್ತಲಿನ ಸ್ಥಳಿಯತೆಯು ಭಿನ್ನವಾಗಿರುವ ಸಾಧ್ಯತೆಯಿಂದ ನಾವು..ನಾವೇ! ಯಾರೊಬ್ಬರಂತಲ್ಲ..!

ಈಗ ನಮಗೆ ಜೆನೆಟಿಕ್‌ ಕೋಡ್‌ ಇದ್ದ ಹಾಗೆ ಎಪಿಜೆನೆಟಿಕ್‌ ಕೋಡ್‌ ಕೂಡ ಇದೆ ಎಂಬುದು ಅರ್ಥವಾಗಬಹುದು. ಈ ಎಪಿಜೆನೆಟಿಕ್‌ ಕೋಡ್‌ ನಮ್ಮ ರೋಗ ಪ್ರತಿಕ್ರಿಯೆಯಲ್ಲಿ ಭಾಗವಹಿಸುವ ಮಹತ್ವದ ಸಂಗತಿಗಳು ಡಾ. ಮನೆಲ್‌ ಅವರ ಜೊತೆಗೆ ಹಲವರ ಒಟ್ಟಾರೆಯ ಅಧ್ಯಯನಗಳ ಫಲ. ಈ ಎಪಿಜೆನೆಟಿಕ್‌ ಕೋಡ್‌ಗಳು ಹೇಗೆ ವ್ಯತ್ಯಾಸವಾಗಬಲ್ಲವು, ಆ ಸ್ಥಳೀಯತೆಯ ನಿರ್ವಾಹಕ ವಿಚಾರಗಳಾವುವು ಎಂಬುದನ್ನು ಸಂಕೀರ್ಣವಾದರೂ ಸಾಧ್ಯವಾದಷ್ಟು ಸರಳ ರಸಾಯನಿಕತೆಯಿಂದ ನೋಡೋಣ. ಏಕೆಂದರೆ ಈ ರಸಾಯನಿಕ ವಿಚಾರಗಳು ಜೈವಿಕ ವಿಜ್ಞಾನದ ಇಮ್ಯುನಿಟಿಯ ಕುರಿತ ಮಹತ್ವದ ಬೆಳಕನ್ನು ಪ್ರತಿಫಲಿಸಲಿವೆ ಎಂದು ಮಾನವ ಜೀನೊಮಿನ ತಂಡದ ವಿಜ್ಞಾನಿಗಳಲ್ಲೊಬ್ಬರಾದ ಆಕ್ಸ್‌ಫರ್ಡ್‌ನ ಇಮ್ಯುನಾಲಜಿ ತಜ್ಞ ಪ್ರೊ. ಸ್ಟೀಫನ್‌ ಬೆಕ್‌ ಅವರ ಅಭಿಪ್ರಾಯ. ಅವರ ಮಾತಿನಂತೆ ಪ್ರತೀ ಜೀವಿ ಕೋಶವೂ ತನ್ನದೇ ದೇಶ-ಕಾಲದ (Time and Space) ಪರಿಸ್ಥಿತಿಯನ್ನು ಹೊಂದಿದ್ದು ಸಹಜವಾಗಿ ಅದು ಆರೋಗ್ಯದ ಬದುಕಿನ ಸಮೀಕರಣವನ್ನೂ ಹೊಂದಿರುತ್ತದೆ, ಎಂಬುದಾಗಿದೆ. 

ಈ ಸ್ಥಳಿಯತೆಯ ವಿಚಾರಗಳನ್ನು ತಿಳಿದರೆ ಅವನ್ನೆಲ್ಲಾ ನಿರ್ವಹಿಸುವ ನಾವೆಲ್ಲರೂ ಅರ್ಥ ಮಾಡಿಕೊಳ್ಳುವ ಸರಳ ವಿಷಯಗಳು ಹೊಳೆಯುತ್ತವೆ. ಹಾಗಾದರೆ ಏನಿದು ಎಪಿಜೆನೆಟಿಕ್‌ ಮತ್ತೆ ಅದು ನಿರ್ವಹಿಸುವ ವಿಚಾರವೇನು, ಎಂಬೆಲ್ಲಾ ವಿವರಗಳಿಗೆ ಮುಂದಿನ ಚಿತ್ರವನ್ನು ನೋಡಿ ಮನಸ್ಸಿಗೆ ತಂದುಕೊಳ್ಳೋಣ. ಒಂದು ಜೀನ್‌ ಎನ್ನುವುದು, ಡಿ.ಎನ್.ಎ.ಗೆ ಸಂಬಂಧಿಸಿದ್ದಲ್ಲವೆ. ಡಿ.ಎನ್‌.ಎ.ಯು ನಮ್ಮ ಊಹೆಗೆ ಬರುವುದೆಂದರೆ ಸುರುಳಿಯಾದ ಏಣಿ ತಾನೆ? ಈ ಏಣಿಯನ್ನೂ ಸುತ್ತುವರಿದ ರಸಾಯನಿಕ ವಿವರಗಳಿದ್ದಾವು ಅಲ್ಲವೆ? ಅದನ್ನೇ ಈ ಚಿತ್ರವು ಹೇಳುತ್ತದೆ.

ಚಿತ್ರದಲ್ಲಿ ಎರಡು ಮುಖ್ಯ ವಿಚಾರಗಳಿವೆ. ಡಿ.ಎನ್‌.ಎ.ಗೆ ಮಿಥೈಲ್‌ (ಮಿಥೇನ್‌ ಒಳಗೊಂಡ ರಸಾಯನಿಕ) ಗುಂಪು ಸೇರಿಕೊಳ್ಳುವುದು ಒಂದು. ಇದರಿಂದಾಗಿ ಡಿ.ಎನ್‌.ಎ.ಯು ತನ್ನ ಒಟ್ಟಾರೆಯ ಯಾವುದೇ ಬದಲಾವಣೆಯನ್ನೂ ಹೊಂದದೆ ಕೇವಲ ತನ್ನ ವರ್ತನೆಯಲ್ಲಿ ಮಹತ್ವದ ಬದಲಾವಣೆಯನ್ನು ಪ್ರದರ್ಶಿಸುವುದು. ಇದನ್ನೇ ಕೆಳಗಿನಂತೆ ಚಿತ್ರಿಸಬಹುದು.

ಮತ್ತೊಂದು ಡಿ.ಎನ್‌.ಎ.ಯನ್ನು ಹಿಸ್ಟೊನ್‌ ಎಂಬ ಪ್ರೊಟೀನ್‌ ಸುತ್ತಿ ಪ್ಯಾಕ್‌ ಮಾಡಿರುವ ಸ್ಥಳಿಯತೆ. ಇದರಲ್ಲಿ ಇಡೀ ಏಣಿಯನ್ನು ಹಿಸ್ಟೊನ್‌ ಪ್ರೊಟೀನಿನಿಂದ ಪ್ಯಾಕ್‌ ಆಗಿದ್ದು ಅದರಲ್ಲೂ ಆ ಡಿ.ಎನ್‌.ಎ ಜೀನುಗಳ ವರ್ತನೆಯು ಭಿನ್ನವಾಗಿರುವುದು. ಹಾಗಾಗಿ ಡಿ.ಎನ್‌.ಎ.ಯ ಸ್ಥಳಿಯತೆಯು ಆಯಾ ಜೀವಿಕೋಶದೊಳಗಿನ ಪರಿಸರ-ಪ್ರಪಂಚವಾಗಿದೆ. ಅದು ಆಯಾ ಜೀವಿಗಳಲ್ಲಿ ವರ್ತನೆಗಳಿಗೂ ಕಾರಣವಾಗುತ್ತವಂತೆ.

ಇದೆಲ್ಲವೂ ಕಾಣದ ಕಡಲಿನ ಆಳದ ಮುತ್ತಿನ ಕಥೆಯಂತೆ ಅನ್ನಿಸಬಹುದು. ಆ ಮುತ್ತುಗಳ ನಿಭಾಯಿಸುವ ಕ್ರಿಯೆಗಳನ್ನು ನಾವೆಲ್ಲರೂ ಅನುಭವಿಸುವ ಸಾಮಾನ್ಯ ಸಂಗತಿಗಳಿಂದ ನೋಡೋಣ.

ಜೀನುಗಳ ಅಂದರೆ ಡಿ.ಎನ್‌.ಎ.ಗಳ ಸ್ಥಳಿಯತೆಯ ರಸಾಯನಿಕ ಪರಿಸರವು ಅದಕ್ಕೆ ದೊರಕುವ ಕಚ್ಚಾಸಾಮಗ್ರಿಗಳಿಂದಲೇ ಪ್ರಭಾವಿಸಿರಬೇಕಲ್ಲವೇ? ಇದರ ವೈಜ್ಞಾನಿಕ ವಿವರಗಳ ವ್ಯಾಖ್ಯಾನಕಾರರು, ಇಡೀ ಜೀನೊಮನ್ನು ಒಂದು ಬೃಹತ್‌ ಸಂಗೀತದ ಮುಗಿಯದ ಸ್ವರಮೇಳ ಎಂದಿದ್ದಾರೆ. ಅದರ ಮೇಲಿನ ಎಪಿಜೆನೆಟಿಕ್‌ ಸಂಗತಿಗಳು ಚಲನಶೀಲವಾದ ಸ್ವರಗಳ ಹಾಗಂತೆ! ಆದ್ದರಿಂದ ಹೊರಗಿನ ಒಳಸುರಿಗಳಾದ ಸ್ವರಗಳ ವಿವರಗಳು ಇಡೀ ಸಂಗೀತದ ಮಾಧುರ್ಯವನ್ನು ನಿಭಾಯಿಸುತ್ತವೆ. ಅಲ್ಲದೆ ಈ ಎಪಿಜೆನೆಟಿಕ್‌ ಕೋಡ್‌ಗಳು ಒಟ್ಟಾರೆಯ ಜೀವಿಯ ದೈಹಿಕ ಪರಿಸರವನ್ನು ಒಳಗೊಂಡಿರುತ್ತವೆ, ಎಂಬುದು ಮತ್ತೋರ್ವ ವಿಜ್ಞಾನಿ ವರ್ಧ್‌ಮನ್‌ ರಾಯ್ಕನ್‌ ಅವರ ಅಭಿಪ್ರಾಯ. ಮುಂದುವರೆದು ಅವರೆನ್ನುತ್ತಾರೆ, ಇದೆಲ್ಲವೂ ನಾವು ತಿನ್ನುವ ಆಹಾರ, ಜೀವನ ಕ್ರಮ ಮತ್ತು ಹೊಟ್ಟೆಯ ಸೇರುವ ಯಾವುದೇ ವಿಷಯುಕ್ತ ವಸ್ತು ಹಾಗೂ ಅವನ್ನೆಲ್ಲಾ ಒಳಗೊಂಡ ಜೀವಿ ಪರಿಸರ ಎನ್ನುತ್ತಾರೆ. ನಮ್ಮ ಮಾನಸಿಕ ಒತ್ತಡಗಳೂ ನಮ್ಮೆಳಗಿನ ಭಿನ್ನ ಸಂರಚನೆಯ ಪ್ರೊಟೀನುಗಳ ನಿಭಾಯಿಸುವಿಕೆಯು ಇದರಲ್ಲಿ ಸೇರಿದೆ. ಇದನ್ನು ಬೆಂಬಲಿಸುವಂತಹಾ ಉತ್ತರಗಳು ಗರ್ಭಾಂಕುರವಾದ ಇಲಿಗಳ ಆಹಾರವನ್ನು ವ್ಯತ್ಯಯಗೊಳಿಸಿ ನಡೆಸಿದ ಪ್ರಯೋಗಗಳಿಂದ ಅರಿತ ಉದಾಹರಣೆಗಳಿವೆ. ವ್ಯತ್ಯಯದ ಆಹಾರದ ಪೋಷಣೆಯಲ್ಲಿ ಗರ್ಭಿಣಿ ಇಲಿಗಳ ಮರಿಗಳ ಹೊರ ಚರ್ಮದ ಬಣ್ಣದ ಬದಲಾವಣೆಗಳ ಮೂಲಕ ಪ್ರಯೋಗಗಳು ಸಾಬೀತು ಪಡಿಸಿವೆ. ಜೊತೆಗೆ ಅಂತಹಾ ಮರಿಗಳಲ್ಲಿ ಒತ್ತಡಗಳನ್ನು ನಿಭಾಯಿಸುವಲ್ಲಿಯೂ ವಿವಿಧತೆಯನ್ನು ಗುರುತಿಸಲಾಗಿದೆ.

ಇಷ್ಟೆಲ್ಲಾ ಸಂಕೀರ್ಣತೆಯ ಪ್ರಶ್ನೋತ್ತರಗಳನ್ನು ಒಳಗೊಂಡ ಎಪಿಜೆನೆಟಿಕ್ಸ್‌ ವಿವರಗಳಿನ್ನೂ ವಿಜ್ಞಾನಕ್ಕೆ ಅಚ್ಚಹೊಸದು ಎಂಬಂತೆ ಇವೆ.  ಜೊತೆಗೆ ಅಪರಿಪೂರ್ಣವಾದ, ಇನ್ನೂ ಮಹತ್ತರವಾದ ವಿಷಯಗಳನ್ನು ಬೇಡುವ ಕಾರಣವನ್ನೂ ಒಳಗೊಂಡಿವೆ. ಆದ್ದರಿಂದ ಎಪಿಜೆನೆಟಿಕ್ಸ್‌ ಎಂಬುದು ಒಂದು ರೀತಿಯಲ್ಲಿ ಇನ್ನೂ ಮುಗಿಯದ ಸಂಗೀತದ ಸ್ವರಮೇಳದಂತೆ. ಸುಂದರವಾದ ನಾದಮಯ ಒಳನೋಟಗಳ ಹುಡುಕಾಟವಿನ್ನೂ ಮುಂದುವರೆದಿದೆ.

ಏನೇ ಇರಲಿ, ನಮ್ಮೊಳಗೇ ಒಂದು ನಮ್ಮದೇ ಆದ ಸಂಗೀತದ ಸ್ವರಮೇಳವಿದ್ದು, ಅದರ ರಾಗ-ತಾಳಗಳ ಲಯವು ನಮ್ಮದೇ ಆಗಿರುವುದನ್ನು ತಿಳಿದು ಆ ಸಂಗೀತದ ಆನಂದವನ್ನೂ ನಾವೇ ಕೇಳಬಹುದು, ಎಂಬ ಆಶಯವಂತೂ ಇದರೊಳಗಿದೆ. ನಮ್ಮ ಊಟ, ವ್ಯಾಯಾಮ, ನಮ್ಮ ಸುತ್ತಲೂ ಇರುವ ಪರಿಸರ, ನಮ್ಮ ನಡೆ-ನುಡಿಗಳ ನಿರ್ದೇಶಿಸುವ ಗೆಳೆಯ-ಗೆಳತಿ ಹಾಗೂ ಮನೆಯವರು. ಇದನ್ನೆಲ್ಲಾ ನಾವೇ ಸೃಷ್ಟಿಸಿಕೊಳ್ಳುವ, ನಿಭಾಯಿಸುವ, ಒಳಿತನ್ನು ಹುಡುಕುವ ಜಾಣ್ಮೆ ನಮ್ಮದಾಗಿದ್ದರೆ ಸಾಕು. ಏಕೆಂದರೆ, ಎಂದಿದ್ದರೂ ನಾವು.., ನಾವೇ! ಹಾಗಾಗಿ ನಮ್ಮ ಆನುವಂಶಿಕ ಬಳಿವಳಿಗಳಿಂದಾಚೆಯೂ ನಮ್ಮ ಒಳಿತು-ಕೆಡುಕುಗಳನ್ನು ನಾವು ನಮಗರಿವಿಲ್ಲದಂತೆ ರೂಪಿಸಿಕೊಳ್ಳು‌ತ್ತಾ ಇದ್ದೇವಾ? ಒಂದಷ್ಟು ಜಾಗ್ರತೆಯು ನಮ್ಮನ್ನು ಸಂಕಟಗಳನ್ನು ಎದಿರುಸುವ ಪ್ರೇರಣೆಯನ್ನು ಖಂಡಿತಾ ಕೊಡಬಲ್ಲದು.

ನಮಸ್ಕಾರ.

ಡಾ. ಟಿ.ಎಸ್.‌ ಚನ್ನೇಶ್

Further reading:

Aaron D. Goldberg, C. David Allis and Emily Bernstein., 2007. Epigenetics: A Landscape Takes Shape. Cell 128, February 23, 2007 p 635-638.    DOI 10.1016/j

Jane Qiu 2006., Epigenetics Unfinished symphony., Nature  May 11;441(7090) pages143–145.   doi: 10.1038/441143a.

This Post Has 2 Comments

  1. Ansar Pasha G

    ಸರ್ ಬಹಳ ಉಪಯುಕ್ತವಾದ ಲೇಖನ.????

  2. Srikantamurthy

    ಅಭಿನಂದನೆಗಳು ಸರ್,
    ತುಂಬಾ ಉಪಯುಕ್ತ ಮಾಹಿತಿ

Leave a Reply