You are currently viewing ನಮ್ಮ ಬೆರಳ ಗುರುತು -ಬೆರಳಚ್ಚು_ ನಮ್ಮದಷ್ಟೇ ಹೇಗೆ?

ನಮ್ಮ ಬೆರಳ ಗುರುತು -ಬೆರಳಚ್ಚು_ ನಮ್ಮದಷ್ಟೇ ಹೇಗೆ?

ಪ್ರತಿಯೊಬ್ಬರ ಬೆರಳ ತುದಿಯ ಗುರುತು ಅಥವಾ ಬೆರಳಚ್ಚು ಒಂದು ಅನನ್ಯವಾದ ಮಾದರಿಯದು. ಒಬ್ಬರ ಹಾಗೆ ಮತ್ತೊಬ್ಬರದು ಇರುವುದಿಲ್ಲ. ಹಾಗೆಂದೇ ಇದನ್ನು ನಮ್ಮ ಅನನ್ಯ ಗುರುತಾಗಿ ಸಹಿಯ ಜೊತೆಗೆ/ಬದಲಾಗಿ ಬಳಸಲಾಗುತ್ತದೆ. ಇದರ ವಿಕಾಸ ಹೇಗೆಂದರೆ ಪಟ್ಟೆ ಕುದುರೆಗಳಲ್ಲಿ ಪಟ್ಟೆಗಳು ಹುಟ್ಟುವಂತೆ ಹಾಗೂ ಚಿರತೆಗಳಲ್ಲಿ ಮೈಮೇಲಿನ ಮಚ್ಚೆಯ ಬಟ್ಟಿನ ಗುರುತುಗಳ ಹಾಗೆ ತಾಯಿಯ ಗರ್ಭದಲ್ಲಿರುವಾಗಲೇ ರೂಪುಗೊಳ್ಳುತ್ತದೆ. ಈ ಗುರುತುಗಳು ಬಾಗಿದಂತೆ ಕಮಾನು(Arches)ಗಳಾಗಿ, ಕುಣಿಕೆಗಳಾಗಿ  (Loops) ಅಥವಾ ಸುರುಳಿ ಸುರುಳಿಯಾಗಿ (Whorls) ಇರುವುದು ಸೂಕ್ಷ್ಮವಾಗಿ ಗಮನಿಸಿದಾಗ ತಿಳಿಯುತ್ತದೆ. ಈ ಕಮಾನುಗಳಾಗಲಿ, ಕುಣಿಕೆಗಳಾಗಲಿ ಸುರುಳಿಗಳಾಗಲಿ ಅಥವಾ ಇವೆಲ್ಲವೂ ಒಬ್ಬರ ಬೆರಳ ಗುರುತಿನಂತೆ ಮತೊಬ್ಬರದು ಇಲ್ಲವೆನ್ನುವುದು ಅತ್ಯದ್ಭುತವಾದ ಅಚ್ಚರಿ. ಇದರ ಬಗೆಗಿನ ವಿಚಾರಗಳು ಕ್ರಿಸ್ತ ಪೂರ್ವ 220 ರಿಂದ ಕ್ರಿಸ್ತ ಶಕ 2023ರ ವರೆಗೂ ಅಂದರೆ ಅಕ್ಷರಶಃ ಈ ಕ್ಷಣದವರೆಗೂ ಬೌದ್ಧಿಕ ಚರ್ಚೆಗಳಲ್ಲಿ ತಿಳಿವಿನ ಹುಡುಕಾಟದಲ್ಲಿ ಉಳಿದಿರುವುದು ಮತ್ತಷ್ಟು ಅಚ್ಚರಿಯೇ ಸರಿ. ಹಾಗಾದರೆ ಇದೊಂದು ಅನನ್ಯವಾದ ಮಾದರಿಯಾಗಿರುವುದು ಹೇಗೆ? ಅವಳಿಗಳಲ್ಲೂ ಒಂದೇ ರೀತಿಯಿರದ ಬಗೆಗೆ ಸಂಶೋಧನೆಗಳು ನಡೆದಿವೆ. ಅದರ ಬಳಕೆಯಿಂದ ಆರಂಭಗೊಂಡು ಅದರ ಅನನ್ಯತೆಯ ವೈಜ್ಞಾನಿಕ ಸಂಶೋಧನಾತ್ಮಕ ಅಧ್ಯಯನಗಳ ಪರಿಚಯ ಇಲ್ಲಿದೆ.

       ಹೌದು, ಮೊಟ್ಟ ಮೊದಲ ಬಾರಿಗೆ ಕ್ರಿ.ಪೂ 220ರ ಸುಮಾರಿಗೆ ಚೀನಿಯರು ಸರ್ಕಾರಿ ದಾಖಲೆಗಳನ್ನು ಧೃಢೀಕರಿಸಲು ಅಥವಾ ಪ್ರಮಾಣೀಕರಿಸಲು ಮೊದಲಬಾರಿಗೆ ಬೆರಳಚ್ಚನ್ನು ಬಳಸಿದ್ದರು. ಹಾಗೆಯೇ ಗ್ರೀಕರು, ಈಜಿಪ್ಟರು ಹಾಗೂ ಬ್ಯಾಬಿಲೋನಿಯನ್ನರು ಹಲವು ಒಪ್ಪಂದಗಳಲ್ಲಿ ಬೆರಳಚ್ಚನ್ನು ಬಳಸಿದ್ದ ದಾಖಲೆಗಳು ಸಿಗುತ್ತವೆ. ಅಷ್ಟಾದರೂ ಅವರ ಈ ತಿಳಿವಳಿಕೆಯಲ್ಲಿ ಬೆರಳಚ್ಚು ಅನನ್ಯವಾದ ಮಾದರಿಯೆಂದು ಒಪ್ಪಿತವಾಗಿದ್ದ ಕುರುಹುಗಳೇನೂ ಇಲ್ಲ. ಆದರೂ ಅವರನ್ನು ಗುರುತಿಸಲು ಬಳಸಬಹುದಾದ ತಿಳಿವಳಿಕೆಯು ಇದ್ದಿರಬಹುದೆಂದು ಅರ್ಥವಾಗುತ್ತದೆ. ಬೆರಳಚ್ಚಿನ ಅನನ್ಯತೆಯನ್ನು ಮೊದಲ ಬಾರಿಗೆ ಗುರುತಿಸಿದ್ದು 1788ರ ಸುಮಾರಿಗೆ! ಜರ್ಮನಿಯ ಅಂಗರಚನಾತಜ್ಞ ಯೊಹಾನ್‌ ಅಂಡ್ರಿಯಸ್‌ ಮೆಯರ್‌ (Johann Christophe Andreas Mayer – J.C.A. Mayer) ಎಂಬಾತ. ಪ್ರತಿಯೊಬ್ಬರದೂ ಭಿನ್ನವಾಗಿದ್ದು ಅವರವರ ಗುರುತು ಅವರವರದೇ ಎಂದು ಅರ್ಥೈಸಿದರು. ಮುಂದುವರೆದು 1880 ರಲ್ಲಿ ಹೆನ್ರಿ ಫಾಲ್ಡ್ಸ್‌ (Henry Faulds) ಎಂಬ ಸ್ಕಾಟ್ಲೆಂಡಿನ ವೈದ್ಯ ಹಾಗೂ ವಿಜ್ಞಾನಿಯು ಸಂಶೋಧನಾತ್ಮಕ ಅಧ್ಯಯನಗಳಿಂದ ಪ್ರತಿಯೊಬ್ಬರ ಬೆರಳ ಗುರುತುಗಳೂ ವಿಭಿನ್ನವಾಗಿದ್ದು ಅನನ್ಯವಾಗಿರುತ್ತವೆ, ಎಂದು ಪ್ರಕಟಿಸಿದರು. ಅವರೇ ಡಾಕ್ಟಿಲೊಗ್ರಫಿ (Doctylography) ಅಂದರೆ ಬೆರಳಚ್ಚು ಅಥವಾ ಬೆರಳ ಗುರುತಿನ ಅಧ್ಯಯನ ಎಂಬ ಪುಸ್ತಕವನ್ನೂ ಅವರ ಜೀವಿತ ಕಾಲದಲ್ಲಿ ಪ್ರಕಟಿಸಿದ್ದರು.

       ಶತಮಾನಗಳ ಕಾಲ ಬೆರಳ ಗುರುತಿನ ಬಗೆಗೆ ಅವುಗಳ ವಿನ್ಯಾಸಗಳ ಕುರಿತು ಜಗತ್ತು ಕುತೂಹಲವನ್ನು ಹೊಂದಿದ್ದರೂ, ಯೊಹಾನ್‌ ಮೆಯರ್‌ (J.C. A. Mayer ) ಮೊಟ್ಟ ಮೊದಲ ಬಾರಿಗೆ ವಿನ್ಯಾಸದ ನಮೂನೆಯು ಅನನ್ಯವಾದದ್ದು ಎಂದು ತೆರೆದಿಟ್ಟರು. ಜೊತೆಗೆ ಯಾರೊಬ್ಬರಲ್ಲೂ ಅದು ಪುನರಾವರ್ತಿಸದ ಬಗೆಗೆ ಕೂಡ ವಿವರಿಸಿದರು. ಆದರೆ ಮುಂದೆ 19ನೆಯ ಶತಮಾನದವರೆಗೂ ವಿಷಯವೇನೋ ಹಾಗೇ ಮುಂದುವರೆದಿದ್ದರೂ ಯಾರನ್ನಾದರೂ ಅವರೇ ಎಂದು ಗುರುತಿಸವ ವಿಧಾನದ ಪತ್ತೆಯ ಸಮಸ್ಯೆಯು ಉದ್ಭವಿಸುವತನಕ ಇದು ಜನಪ್ರಿಯತೆಯನ್ನೇನೂ ಪಡೆಯಲಿಲ್ಲ.

       ಹೀಗೆ ಪತ್ತೆ ಹಚ್ಚುವ ಸಮಸ್ಯೆಗೆ ಉತ್ತರವಾಗಿ ಬೆರಳ ಗುರುತನ್ನು ಬಳಸುವ ಬಗೆಗೆ ಆರಂಭವಾದಾಗ ಅವುಗಳ ವಿನ್ಯಾಸ ಮತ್ತಿತರ ವಿಚಾರಗಳು ಬೆಳಕಿಗೆ ಬಂದವು. ಆರಂಭದಲ್ಲಿಯೇ ತಿಳಿಸಿದಂತೆ ಈ ಗುರುತುಗಳು ಬಾಗಿದಂತಹ ಕಮಾನು(Arches) ಕುಣಿಕೆಗಳ (Loops) ಅಥವಾ ಸುರುಳಿ ಸುರುಳಿಯಾದ (Whorls)ಮೂಲಭೂತ ವಿನ್ಯಾಸಗಳನ್ನು ಒಳಗೊಂಡಿದ್ದು, ಅವುಗಳ ಬಗೆ ಬಗೆಯ ಸಂಯೋಜನೆಗಳಾಗಿ ಇರುತ್ತದೆ. ಇವೆಲ್ಲವೂ ಒಬ್ಬರ ಹಾಗೆ ಮತ್ತೊಬ್ಬರದು ಇರುವುದೇ ಇಲ್ಲ. ಇದೇ ಕುತೂಹಲವು ಕ್ರಿಸ್ತ ಪೂರ್ವದಿಂದ ಇಂದಿನವರೆಗೂ ಹಲವಾರು ಅಧ್ಯಯನಗಳನ್ನು ಹುಟ್ಟು ಹಾಕಿದೆ. ಈ ವಿನ್ಯಾಸಗಳ ವಿವರಗಳಿಂದ ಆರಂಭಿಸಿ ಅವುಗಳ ಅನನ್ಯತೆಯ ಬಗೆಗಿನ ಅಧ್ಯಯನಗಳ ವಿವರಗಳನ್ನೀಗ ನೋಡೋಣ.

ಬೆರಳ ಗುರುತಿನ ವಿನ್ಯಾಸಗಳು (Patterns)

ಮೂಲಭೂತವಾಗಿ ಮೂರು ಬಗೆಯ ವಿನ್ಯಾಸಗಳಾದ ಗುರುತುಗಳ ವಿವರಗಳು ಹೀಗಿವೆ.

ಕಮಾನುಗಳು (Arches)– ಬೆರಳ ತುದಿಯಿಂದ ಸೂಕ್ಷ್ಮವಾದ ಉಬ್ಬು ರೇಖೆಗಳಂತೆ ಆರಂಭವಾಗಿ, ಮುಂದುವರೆದು ಮಧ್ಯದಲ್ಲಿ ಒಂದು ಕಮಾನಿನಂತೆ ಬಾಗಿ ಮತ್ತೊಂದು ತುದಿಯ ಕಡೆಗೆ ವಿಸ್ತರಿಸಿರುತ್ತದೆ. 

ಕುಣಿಕೆಗಳು (Loops) – ಒಂದು ಬೆರಳ ತುದಿಯಿಂದ ಸೂಕ್ಷ್ಮವಾದ ಉಬ್ಬು ರೇಖೆಗಳಂತೆ ಪ್ರವೇಶಿಸಿ ಒಂದು ತಿರುವು ತೆಗೆದುಕೊಂಡು ಮತ್ತದೇ ತುದಿಯ ಕಡೆಗೆ ಮುಂದುವರೆಯುತ್ತದೆ.

ಸುರುಳಿಯಾಕಾರ (Whorls) – ಬೆರಳ ತುದಿಯಿಂದ ಹೊರಟ ಸೂಕ್ಷ್ಮವಾದ ಉಬ್ಬು ರೇಖೆಗಳು ಬೆರಳ ತುದಿಯ ಮಧ್ಯದ ಸುತ್ತಾ ಚಕ್ರಾಕಾರವಾಗಿ ಸುತ್ತುತ್ತಾ ಸುರುಳಿಯಾಕಾರ ಪಡೆಯುತ್ತವೆ.

ಈ ವಿನ್ಯಾಸಗಳು ಒಂದೊಂದು ಕುಟುಂಬದಲ್ಲಿ ಮೂಲಭೂತವಾಗಿ ಒಂದೇ ಬಗೆಯ ರಚನೆಗಳನ್ನು ಹೊಂದಿರುತ್ತವೆ. ಹಾಗಂತ ಅವುಗಳು ಒಂದಕ್ಕೊಂದು ಸಮೀಕರಿಸುವಂತೆ ಅಲ್ಲ. ಭಿನ್ನವಾಗಿದ್ದೂ ಮೂಲಭೂತ ಸಂರಚನೆಯನ್ನು ಒಂದೇ ಬಗೆಯಲ್ಲಿ ಹೊಂದಿರುವುದನ್ನು ಅಧ್ಯಯನಗಳು ಸಾಬೀತು ಪಡಿಸಿವೆ. ಹಾಗಾಗಿ ಇವುಗಳ ವಿನ್ಯಾಸಗಳು ಆನುವಂಶಿಕವೇನೋ ಎನ್ನುವಷ್ಟು ಅನುಮಾನಗಳನ್ನೂ ಹುಟ್ಟು ಹಾಕಿದ್ದು ನಿಜ. ಆದರೆ ಮೂಲಭೂತವಾಗಿ ಒಂದೇ ಇದ್ದರೂ ಭಿನ್ನವಾದ ರಚನೆಯನ್ನು ಪ್ರತಿಯೊಬ್ಬರಲ್ಲೂ ಸೃಜಿಸಿ ಅನನ್ಯವಾಗಿರುತ್ತವೆ.

ಅದೇನೋ ಸರಿಯೇ ಇವುಗಳು ಪ್ರತಿಯೊಬ್ಬರಲ್ಲೂ ವಿಭಿನ್ನ ರಚನೆಯ ವಿನ್ಯಾಸವನ್ನು ರೂಪಿಸುವುದು ಹೇಗೆ? ತಾಯಿಯ ಗರ್ಭದಲ್ಲಿ ಇರುವಾಗಲೇ ಮಗುವಿನ ಭ್ರೂಣದಲ್ಲಿಯೇ ಬೆರಳುಗಳಲ್ಲಿ ವಿನ್ಯಾಸದ ವಿಕಾಸ ಆರಂಭವಾಗುತ್ತದೆ. ಭ್ರೂಣಾವಸ್ಥೆಯ ಮೊದಲ 12 ರಿಂದ 23 ವಾರಗಳ ನಡುವೆ ಬೆರಳ ತುದಿಯ ವಿನ್ಯಾಸವು ನಡೆಯುತ್ತದೆ. ಈ ವಿನ್ಯಾಸದ ಅನನ್ಯತೆಯ ಬಗೆಗೆ ಗಣಿತೀಯ ರಚನೆಗಳಿಂದ ಕುತೂಹಲಕರವಾದ ವಿವರಣೆಗಳಿಂದ ಸಂಶೋಧನಾ ವಿವರಗಳು ದೊರಕುತ್ತವೆ.

ಬೆರಳ ಗುರುತಿನ ವಿನ್ಯಾಸದ ಗಣಿತ (The Maths of Patterns) – ವಿಖ್ಯಾತ ಗಣಿತಜ್ಞ ಅಲನ್‌ ಟ್ಯೂರಿಂಗ್‌ 1952ರಲ್ಲಿ ನಿಸರ್ಗದಲ್ಲಿನ ವಿವಿಧ ಜೈವಿಕ ವಿನ್ಯಾಸಗಳ ಗಣಿತೀಯ ವಿವರಣೆಗಳನ್ನು ಮೊದಲ ಬಾರಿಗೆ ಪ್ರಸ್ತಾಪಿಸಿದರು. ಟ್ಯೂರಿಂಗ್‌ ರಿಯಾಕ್ಷನ್‌-ಡಿಫ್ಯೂಜನ್‌ ವಿಧಾನ (Turing reaction–diffusion system) ಎಂದು ಕರೆಯುವ ಈ ವಿವರಣೆಯು ಹೀಗಿದೆ. ಗಿಡ-ಮರಗಳ ಎಲೆಗಳ ಹೊಂದಿಕೆಯಾದ ರಚನೆಗಳು ಆಯಾ ಸಸ್ಯದ ರಸಾಯನಿಕ ವಿವರಣೆಗಳಿಗೆ ಸಮೀಕರಿಸುತ್ತವೆ ಹಾಗಾಗಿ ಅವುಗಳು ಆಯಾ ಪ್ರಭೇದ ಅಥವಾ ಸಂಕುಲಗಳ ಅನನ್ಯ ಮಾದರಿಯನ್ನು ಹೊಂದಿರುತ್ತವೆ. ಹೊರ ರಚನೆಯ ರಸಾಯನಿಕ ಆಧಾರ (The Chemical Basis of Morphogenesis)  ಎನ್ನುವ ಶೀರ್ಷಿಕೆಯ ಸಂಶೋಧನಾ ಪ್ರಬಂಧವನ್ನು ರಾಯಲ್‌ ಸೊಸೈಟಿಯ ವಿಜ್ಞಾನ ಪತ್ರಿಕೆ “ಫಿಲಾಸಾಫಿಕಲ್‌ ಟ್ರಾನ್ಸಾಕ್ಷನ್ಸ್‌ ಆಫ್‌ ರಾಯಲ್‌ ಸೊಸೈಟಿ”ಯು ಪ್ರಕಟಿಸಿತ್ತು. ಈ ಪ್ರಬಂಧವು ಜೈವಿಕ ವಿನ್ಯಾಸಗಳ ಹೊರ ನೋಟಗಳ ವಿಕಾಸದ ವರ್ಣನೆಯನ್ನು ಗಣೀತೀಯ ಮಾದರಿಗಳಿಂದ ವಿವರಿಸುತ್ತದೆ.

ಆದರೂ ಈ ಮಾದರಿಯನ್ನು ಪ್ರತಿನಿಧಿಸುವಂತಹಾ ಜೈವಿಕ ರಸಾಯನಿಕ ವಿವರಗಳ ಅಗತ್ಯವಿತ್ತು. ಅದನ್ನು ಕಳೆದ ವರ್ಷ 2022ರ ಹಾಗೂ ಈ ವರ್ಷ 2023ರ ಎರಡು ಸಂಶೋಧನಾ ಪ್ರಬಂಧಗಳು ಆನುವಂಶಿಕ ವಿವರಗಳಿಂದ ಹಾಗೂ ರಸಾಯನಿಕ ಸಂಯುಕ್ತಗಳ ಆಧಾರಗಳಿಂದ ವಿನ್ಯಾಸದ ರಚನೆಯ ವಿಕಾಸವನ್ನು ಟ್ಯೂರಿಂಗ್‌ ಮಾದರಿಯ ಹೋಲಿಕೆಗೆ ಅನುಗುಣವಾಗಿ ವಿವರಗಳನ್ನು ಪ್ರಕಟಿಸಿವೆ. ಅವುಗಳ ಪ್ರಕಾರ ಬೆರಳ ತುದಿಯ ಗುರುತುಗಳು ವಿನ್ಯಾಸಗಳಾಗಿ ರೂಪುಗೊಳ್ಳುವ ವಿವರಣೆಯ ಚಿತ್ರ ಈ ಕೆಳಗಿದೆ.

ಅದರಂತೆ ಸೂಕ್ಷ್ಮವಾದ ಉಬ್ಬುಗಳು (Ridges) ಸುತ್ತುವರಿದ ತುದಿಯಿಂದ,  ಮಧ್ಯದಿಂದ ಹಾಗೂ ಬೆರಳ ತುದಿಯನ್ನು ಬೆರಳ ಮಧ್ಯದಿಂದ ಬೇರ್ಪಡಿಸುವ ಭಾಗದಿಂದ ರೂಪುಗೊಳ್ಳುವುದನ್ನು ಮುಂದುವರೆದು ಅವು ಬಗೆ ಬಗೆಯಾಗಿ ವಿನ್ಯಾಸ ಗೊಳ್ಳುವಿಕೆಯನ್ನು ಮುಖ್ಯವಾಗಿ ಎರಡು ಬಗೆಯ ಪ್ರೊಟೀನುಗಳು ನಿರ್ವಹಿಸುತ್ತವೆ. ಈ ಪ್ರೊಟೀನುಗಳು ಬೆರಳಗುರುತಿಗೆ ಪ್ರಮುಖ ಕಾರಣವಾದ ಉಬ್ಬುಗಳು (Ridges) ಉಗಮ ಹಾಗೂ ಅದರ ನಿಯಂತ್ರಣ ಎರಡನ್ನೂ ನಿಭಾಯಿಸುತ್ತವೆ. ನಮ್ಮ ಶರೀರದ ರೋಮಗಳ ವಿಕಾಸ ಮತ್ತು ಅಭಿವೃದ್ಧಿಗೆ ಕಾರಣವಾದ WNT ಎಂಬ ಹೆಸರಿನ ಒಂದು ಪ್ರೊಟೀನು ಉಬ್ಬುಗಳ ಹುಟ್ಟಿಗೆ ಕಾರಣವಾದರೆ ಅದು ಅಭಿವೃದ್ಧಿಯಾದಂತೆ ಅದರ ನಿಯಂತ್ರಣವನ್ನು BMP ಹೆಸರಿನ ಮತ್ತೊಂದು ರಸಾಯನಿಕ ಸಂಯುಕ್ತ ನಿರ್ವಹಿಸುತ್ತದೆ. ಆರಂಭದಲ್ಲಿ ಉಬ್ಬುಗಳ (Ridges) ಜೀವಿಕೋಶಗಳು ರೋಮಗಳು ವಿಕಾಸದಂತೆ ಹುಟ್ಟಿದರೂ, ತತ್‌ಕ್ಷಣವೇ ರೋಮಗಳಲ್ಲಿ ಇರುವಂತೆ ಚರ್ಮಕ್ಕೆ ನಾಟಿ ಮಾಡುವ ಗುಣವನ್ನು ಕಳೆದುಕೊಳ್ಳುವುದರಿಂದ ಸುಮ್ಮನೆ ಉಬ್ಬುಗಳಂತೆ ಬೆಳೆಯುತ್ತವೆ.  ಈ ಎರಡೂ ಪ್ರೊಟೀನುಗಳ ಕಾರ್ಯವೈಖರಿಯು ವಿನ್ಯಾಸಗೊಳಿಸುವ ಬಗೆಯು ಟ್ಯೂರಿಂಗ್‌ ಅವರ ರಿಯಾಕ್ಷನ್‌-ಡಿಫ್ಯೂಜನ್‌ ವಿಧಾನ (Turing reaction–diffusion system) ವನ್ನು ಅನುಸರಿಸುತ್ತದೆ.

ಅದರ ಜೊತೆಗೆ ಈ ವಿನ್ಯಾಸದ ಕಾರ್ಯ ವೈಖರಿಯು ಆನುವಂಶಿಕ ವಿವರಗಳನ್ನೂ ಒಳಗೊಂಡಿದ್ದು ಅವುಗಳನ್ನು ನಿರ್ವಹಿಸುವ ಜೀನುಗಳು, ಭ್ರೂಣದಲ್ಲಿ ಕೈ-ಕಾಲುಗಳ ಅಂಗದ ವಿಕಾಸ ಹಾಗು ಅಭಿವೃದ್ಧಿಯನ್ನು ಮಾಡುತ್ತವೆ. ಹಾಗಾಗಿ ಭ್ರೂಣದ ಅಂಗರಚನೆಯ ಹಂತದಲ್ಲಿ 12 ರಿಂದ 23 ವಾರಗಳಲ್ಲೇ ಆಯಾ ಮಗುವಿನ ಬೆರಳ ಗುರುತೂ ಅನನ್ಯವಾಗಿಯೇ ವಿಕಾಸ ಹೊಂದುತ್ತದೆ. ಈಗ ತಮ್ಮಲ್ಲೊಂದು ಪ್ರಶ್ನೆ ಏಳಬಹುದು? ಏನೆಂದರೆ ಜೀನುಗಳು ಭಾಗವಹಿಸುವಿಕೆ ಹಾಗೂ ವಿನ್ಯಾಸದ ಮೂಲ ಭೂತ ವಿಕಾಸವು ಆನುವಂಶಿಕ ರೂಪಗಳಾಗಿದ್ದರೆ, ಅವಳಿಗಳು ಒಂದೆ ಬಗೆಯ ಬೆರಳ ಗುರುತುಗಳನ್ನು ಹೊಂದಿರಬೇಕಲ್ಲವೇ? ಖಂಡಿತಾ ಇಲ್ಲ. ಉಬ್ಬುಗಳನ್ನು ವಿಕಾಸ ಹಾಗೂ ನಿಯಂತ್ರಣ ಮಾಡುವ ಪ್ರೊಟೀನುಗಳ ಕಾರ್ಯಕ್ಷಮತೆಯು ಆಯಾ ಭ್ರೂಣವು ಪಡೆದುಕೊಂಡ ಸ್ಥಳಾವಕಾಶವನ್ನು ಹಾಗೂ ತಾಯಿಯೊಂದಿಗೆ ಹೊಂದಿರುವ ಹೊಕ್ಕುಳ-ಬಳ್ಳಿಯ ಉದ್ದ ಮತ್ತಿತರ ವಿನ್ಯಾಸವನ್ನೂ ಅವಲಂಬಿಸಿರುತ್ತದೆ. ಇದು ಸಹಜವಾಗಿ ಭಿನ್ನವಾಗಿರುವುದರಿಂದ ಅವಳಿಗಳೂ ಸಹಾ ಭಿನ್ನವಾದ ಬೆರಳು ಗುರುತುಗಳನ್ನು ಹೊಂದಿರುತ್ತವೆ. ಇವೆಲ್ಲವೂ ಮೂಲ ಮಾಲೆಕ್ಯುಲಾರ್‌ ಅಂಶಗಳ ವಿವಿಧತೆಯ ಲಕ್ಷಣಗಳ ಒಟ್ಟಾರೆಯ ಹಾಗೂ ಸಂಕೀರ್ಣವಾದ ಪ್ರತಿಫಲನವಾಗಿರುತ್ತವೆ ಎಂದು ಈ ಸಂಶೋಧಕರಲ್ಲಿ ಒಬ್ಬರಾದ ಹಾಗೂ ಎಡಿನ್‌ ಬರ್ಗ್‌ ವಿಶ್ವವಿದ್ಯಾಲಯದ ಜೀವಿವಿಜ್ಞಾನದ ಪ್ರೊಫೆಸರ್‌ ಡೆನಿಸ್‌ ಹೆಡ್‌ಸನ್‌ ಅಭಿಪ್ರಾಯ ಪಡುತ್ತಾರೆ. 

ಇದೆಲ್ಲವೂ ಬೆರಳ ತುದಿಯ ಗುರುತಿನ ಪ್ರವರವಾದರೆ, ಅದು ಮೂಡಿಸುವ ಬೆರಳಚ್ಚು – ಫಿಂಗರ್‌ ಪ್ರಿಂಟ್‌- ಏನು? ಅದು ಹೇಗಿರುತ್ತದೆ. ಅದನ್ನು ಗುರುತಾಗಿ ಬಳಸಲು  ಅದರ ರಸಾಯನಿಕ ವ್ಯಾಖ್ಯಾನವೇನು ನೋಡೋಣ. ಸರಳವಾಗಿ ನಮ್ಮ ಬೆರಳುಗಳು ಏನನ್ನಾದರೂ ಮುಟ್ಟಿದಾಗ ಉಳಿಸುವ ಗುರುತೇ ಬೆರಳಚ್ಚು. ಈ ಗುರುತು ಹೆಚ್ಚು ಪಾಲು ತೇವಾಂಶವನ್ನು ಹೊಂದಿರುವುದು. ಸುಮಾರು 90-95% ರಷ್ಟು ನೀರೇ ಇದ್ದು ಉಳಿದಂತೆ ವಿವಿಧ ಇಂಗಾಲಯುತ ಹಾಗೂ ಇಂಗಾಲರಹಿತವಾದ ರಸಾಯನಿಕಗಳನ್ನು ಹೊಂದಿರುತ್ತವೆ. ಇಂಗಾಲಯುತ ರಸಾಯನಿಕಗಳಲ್ಲಿ ಅಮೈನೊ ಆಮ್ಲಗಳು, ಕೆಲವು ಪ್ರೊಟೀನುಗಳು, ಗ್ಲೂಕೊಸ್‌, ಲ್ಯಾಕ್ಟೊಸ್‌, ಯುರಿಯಾ, ಪೈರುವೇಟ್‌ ಕೊಬ್ಬಿನಾಮ್ಲ ಮುಂತಾದವುಗಳ ಮಿಶ್ರಣವಾಗಿರುತ್ತವೆ. ಇಂಗಾಲ ರಹಿತ ರಸಾಯನಿಕಗಳು ಸಾರಜನಕ, ಕ್ಲೊರಿನ್‌ ಪೊಟ್ಯಾಸಿಯಮ್‌ ಮತ್ತು ಕಬ್ಬಿಣಾಂಶವನ್ನು ಹೊಂದಿರುತ್ತವೆ. ಇವೆಲ್ಲದರ ಜೊತೆಗೆ ಕೆಲವೊಮ್ಮೆ ಆಹಾರದ ಪಚನಾನಂತರದ ಹಾಗೂ ಪಚನದಲ್ಲಿ ಒಳಗೊಳ್ಳದ ವಿವಿಧ ಆಹಾರದ ಉಳಿಕೆಗಳೂ ಭಾಗವಾಗುತ್ತವೆ. ಇವೆಲ್ಲವೂ ಆಯಾ ವ್ಯಕ್ತಿಯ ವಿನ್ಯಾಸದಲ್ಲಿ ಭಾಗಿಯಾಗಿ ರೂಪುಗೊಳ್ಳುತ್ತವೆ.

ಇಷ್ಟೆಲ್ಲಾ ಸಾಹಸಗಳು ಒಂದು ತಿಳಿವಳಿಕೆಯಲ್ಲಿ ಒಳಗೊಂಡಿವೆ. ಎಲ್ಲಕ್ಕಿಂತಾ ಹೆಚ್ಚಾಗಿ ಬೆರಳ ಗುರುತನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಅದರಲ್ಲೂ ಕ್ರಿಮಿನಲ್‌ ಗಳ ಪತ್ತೆ ಹಚ್ಚುವಾಗ ಈಗಲೂ ಬಳಕೆಯಲ್ಲಿ ಇರುವ ಒಂದು ವಿಧಾನ. ಜತೆಯಲ್ಲಿ ಅನೇಕ ಭೂ ಹಿಡುವಳಿ -ಕಂದಾಯದ ದಾಖಲೆಗಳಲ್ಲಿ ನಿರಂತರವಾಗಿ ಬೆರಳ ಗುರುತುಗಳು ಇಂದಿಗೂ ಬಳಕೆಯಾಗುತ್ತಿದೆ. ಭಾರತದಲ್ಲಿ ಮೊಟ್ಟ ಮೊದಲ ಬಾರಿ 1858ರಲ್ಲಿ ಬ್ರಿಟೀಷ್‌ ಅಧಿಕಾರಿ ಸರ್‌ ವಿಲಿಯಂ ಹರ್ಷಲ್‌ ಎಂಬಾತ ಕೆಲವೊಂದು ಕಾಂಟ್ರ್ಯಾಕ್ಟ್‌ ಪತ್ರಗಳ ದಾಖಲೆಯಲ್ಲಿ ಬಳಸಿದ್ದರು. ಆತ ಬಂಗಾಳದ ಹೂಗ್ಲಿ ಮತ್ತು ಕೊಲ್ಕಾತ್ತಾ ನಗರಗಳ ಕೆಲವೊಂದು ಸರ್ಕಾರಿ ನೌಕರರ ಬೆರಳಚ್ಚನ್ನು ತೆಗೆದುಕೊಂಡು ಒಪ್ಪಂದಕ್ಕೆ ಬಳಸಿದ್ದ ದಾಖಲೆ ಇಂದಿಗೂ ಇದೆ.

ಮೊಟ್ಟ ಮೊದಲ ಭಾರತೀಯ ದಾಖಲೆಯ ಬೆರಳಚ್ಚುಗಳು

ನಮ್ಮ ಗುರುತನ್ನು ಸಾಬೀತು ಮಾಡುವ ಇಲೆಕ್ಟ್ರಾನಿಕ್‌ ಮಾದರಿಗಳ ಬೆರಳಚ್ಚು ಯಂತ್ರಗಳು ಎಲ್ಲೆಡೆ ಜನಪ್ರಿಯವಾಗಿವೆ. ನಮ್ಮ ಗುರುತುಗಳು ಅನನ್ಯವಾಗಿರುವುದರಿಂದಲೇ ಈ ಯಂತ್ರಗಳಲ್ಲಿಯೂ ಅದನ್ನು ಬಳಸುತ್ತಿವೆ.

ಹೌದು, ನಮ್ಮ ಬೆರಳುಗಳು ಅನನ್ಯವಾದವು. ಮಾತ್ರವಲ್ಲ ಅವು ಕಾಲದೊಡನೆ ಬದಲಾಗುವುದಿಲ್ಲ. ನಿರಂತರವಾಗಿ ನಮ್ಮೊಂದಿಗೆ ಜೀವನದುದ್ದಕ್ಕೂ ಇದ್ದು ನಮ್ಮೊಡನೆಯೇ ಕೊನೆಯಾಗುತ್ತವೆ.

ಹೆಚ್ಚಿನ ಓದಿಗೆ : 1. Glover, J. D. et al. The developmental basis of fingerprint pattern formation and variation
Cell https://doi.org/10.1016/j.cell.2023.01.015 (2023).

2. Li, J. et al. Limb development genes underlie variation in human fingerprint patterns, Cell 185, 95–112 (2022).

3. Turing, A. M. The Chemical Basis of Morphogenesis. Philos. Trans. R. Soc. Lond. B 237, 37–72 (1952).

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್

This Post Has 5 Comments

  1. Aswathanarayana

    Very interesting domain.. very well articulated.

  2. Bhuvaneswari

    Basic developmental pattern and it’s usage for individual identity seems to be very fascinating… Thank you

  3. Shashidhar KS

    Wonderful article and nicely explained with scientific enumerations…. Thanks for sharing this article sir..

  4. ಶಿವಶರಣಪ್ಪಬಬಳಿಗಾರ

    ಅನೇಕ ವಿಚಾರಗಳ ವೈಜ್ಞಾನಿಕವಾಗಿ ವಿವರಿಸಲಾಗಿದೆ.
    ಬೆರಳಚ್ಚಿನ ಗುರುತಿನ ಮೂಲಕ ವ್ಯಕ್ತಿಯ ಭವಿಷ್ಯ ಹೇಳಲು ಸಾಧ್ಯವೆ?

    1. CPUS

      ಇಲ್ಲ. ಅವೆಲ್ಲವೂ ಅವೈಜ್ಞಾನಿಕ ಸಂಗತಿಗಳು. ನಮಸ್ಕಾರ

Leave a Reply