You are currently viewing ನಮ್ಮ ನಾಲಗೆಯ ರುಚಿಯನ್ನಾಳುವ ಹುಣಸೆ – Tamarindus indica

ನಮ್ಮ ನಾಲಗೆಯ ರುಚಿಯನ್ನಾಳುವ ಹುಣಸೆ – Tamarindus indica

ಭಾರತೀಯ ಆಹಾರ ಪರಂಪರೆಯನ್ನು ವಿಶಿಷ್ಟವಾಗಿಸಿರುವುದರಲ್ಲಿ ಹುಳಿಯ ಪಾಲು ಅಗಾಧವಾಗಿದೆ. ಅದರಲ್ಲೂ ಹುಳಿಯನ್ನು ರುಚಿಗಳಲ್ಲಿ ಪ್ರಮುಖವಾಗಿಸಿರುವ ಹುಣಸೆಯ ಪಾಲು ನಿಜಕ್ಕೂ ದೊಡ್ಡದು. ಹಾಗೆ ನೋಡಿದರೆ ಹುಣಸೆಯು ನಮ್ಮದಲ್ಲದ ಸಸ್ಯ. ಆದರೆ ನಮ್ಮದೇ ಎಂದು ಜಗತ್ತೆಲ್ಲಾ ಕರೆಯುವಂತೆ ಆಗಿದೆ. ಅದರ ಸಸ್ಯವೈಜ್ಞಾನಿಕ ಹೆಸರಾದ “ಟ್ಯಾಮರಿಂಡಸ್ ಇಂಡಿಕಾ”(Tamarindus indica)ದಲ್ಲಿ ಅದರ ಸಂಕುಲ ಮತ್ತು ಪ್ರಭೇದ ಎರಡರಲ್ಲೂ “ಇಂಡಿಯಾ” ಇದೆ. ಟ್ಯಾಮ”ರಿಂಡಸ್” ನಲ್ಲೂ ಜೊತೆಗೆ “ಇಂಡಿ”ಕಾದಲ್ಲೂ ಇಂಡಿಯಾವೇ ಪ್ರಧಾನವಾಗಿದೆ. ಮೂಲತಃ ಆಫ್ರಿಕಾದ ತವರಿನದಾದ ಹುಣಸೆಯು ಭಾರತಕ್ಕೆ ಪ್ರವೇಶ ಪಡೆದುದರಲ್ಲಿ ನಿಖರವಾದ ಮಾಹಿತಿಗಳು ಇಲ್ಲದಿದ್ದರೂ ಇಲ್ಲಿಂದ ಹೊರ ಜಗತ್ತಿಗೆ ಹೋಗಿದ್ದು ಮಾತ್ರ ದೊಡ್ಡ ಸಂಗತಿಯಾಗಿದೆ. ಹಾಗಾಗಿಯೇ ಅದನ್ನು ಅರಬ್ಬರು “ಟಮರ್ ಹಿಂದ್” ಅಂದರೆ “ಇಂಡಿಯಾದ ಉತ್ತುತ್ತಿ” ಎಂದು ಕರೆದರು. ಅದೇ ಮುಂದೆ ಟ್ಯಾಮರಿಂಡ್ ಆಗಿದೆ. ಅದರಿಂದಲೇ ‘ಟ್ಯಾಮರಿಂಡಸ್ ಇಂಡಿಕಾ’ ಎಂದೇ ಕರೆಯಲಾಗಿದೆ.

          ಹುಣಸೆಯಲ್ಲಿ ಸರಿ ಸುಮಾರು 80 ರಿಂದ 100 ಅಡಿ ಎತ್ತರದ ಹಾಗೂ ಸುಮಾರು 50 ಅಡಿ ಅಗಲವಾದ ಮರಗಳೂ ಇವೆ. ಸಾಮಾನ್ಯವಾಗಿ ನಿತ್ಯ ಹಸಿರಾದ ಮರ. ಒಣ ಪ್ರದೇಶದಲ್ಲಿ ಸಾಕಷ್ಟು ಎಲೆ ಉದುರಿಸುತ್ತದೆ. ನೆರಳು ದಟ್ಟವಾಗಿರುವ ಮರ. ಹುಣಸೆ ಮರದ ಕೆಳಗೆ ಅದಕ್ಕೆ ಏನೂ ಬೆಳೆಯದಂತೆ ನೆರಳು ದಟ್ಟವಾಗಿರುತ್ತದೆ. ಈ ನೆರಳಿನ ಕಾರಣದಿಂದಲೇ ಅದರ ಕೆಳಗಿನ ವಾತಾವರಣಕ್ಕೆ ಭಯದ, ಕುತೂಹಲದ ಕಥನಗಳು ಹುಟ್ಟಿಕೊಂಡಿವೆ. ಈ ನೆರಳಿನ ವೈಭವಕ್ಕೇನೆ ಇದನ್ನು ರಸ್ತೆಯ ಸಾಲುಮರಗಳಾಗಿ ಬೆಳೆಸಲು ನೂರಾರು ವರ್ಷಗಳ ಹಿಂದಿನಿಂದಲೂ ಆರಂಭಿಸಲಾಗಿದೆ. ಸಾಮಾನ್ಯವಾಗಿ ಈ ಮರ ಬೀಳುವುದಿಲ್ಲ. ಅದಕ್ಕೆಂದೇ ಸಾಲುಮರಗಳಾಗಿ ಬೆಳಸಲು ಅನುಕೂಲಕರವಾಗಿದೆ. ಹುಣಸೆಯು ನಮ್ಮ ಬೇಳೆಕಾಳುಗಳೆಲ್ಲಾ ಸೇರಿರುವ ಫ್ಯಾಬೇಸಿಯೇ ಎಂಬ ಸಸ್ಯ ಕುಟುಂಬದ ಸದಸ್ಯ. ಆದ್ದರಿಂದ ಇದರಲ್ಲೂ ಸ್ವಾಭಾವಿಕವಾಗಿ ನಿಸರ್ಗದ ಸಾರಜನಕವನ್ನು ಹೀರಿಕೊಂಡು ಬಳಕೆಯಾಗುವಂತೆ ಬೇರುಗಳು ಸಹಕರಿಸುತ್ತವೆ. ಇದರ ಪ್ರಭೇದದ ಹೆಸರೂ ‘ಇಂಡಿಕಾ’ ಎಂದೇ ಇರುವುದರಿಂದ, ಹೆಚ್ಚೂ ಕಡಿಮೆ ನಮ್ಮದೆ ಎನ್ನುವಂತೆ, ಭಾರತವೇ ಇದರ ತವರೇನೋ ಎನ್ನುವಂತೆ ಅನ್ನಿಸುವುದು ಸಹಜ. ಹುಣಸೆಗೆ ಭಾರತದ ನೆಲ ಒಗ್ಗಿ, ಅದು ನಮ್ಮದೇ ಆಗಿದೆ. ಸಾಲದಕ್ಕೆ ಅತೀ ಹೆಚ್ಚು ಹುಣಸೆಯ ಉತ್ಪಾದನಾ ದೇಶವೂ ಭಾರತವೇ! ಅತಿ ಹೆಚ್ಚು ರಫ್ತು ಮಾಡುವುದೂ ಭಾರತವೇ.

          ಅರಬ್ಬರಿಗೆ ನಮ್ಮ ಹುಣಸೆ ಹುಳಿ ಬೆರೆಸಿದ ಅನ್ನ ಪುಳಿಯೋಗರೆ ಅಚ್ಚು ಮೆಚ್ಚು. ಹಾಗಾಗಿಯೇ ಅವರ ಪ್ರಮುಖವಾದ ಉತ್ಪನ್ನವಾದ “ಉತ್ತುತ್ತಿ”ಗೆ ಹೋಲಿಸಿ ನಮ್ಮ ಹುಣಸೆಯನ್ನು ಕರೆದಿದ್ದಾರೆ. ಇಂದಿಗೂ ಭಾರತದಿಂದ ಹುಣಸೆಯನ್ನು ಆಮದು ಮಾಡಿಕೊಂಡು ಸವಿಯುವಲ್ಲಿ ಅರಬ್ಬರು ಮುಂದಿದ್ದಾರೆ. ಕ್ರಿಸ್ತಪೂರ್ವ 1500 ವರ್ಷಗಳ ಹಿಂದೆಯೇ ಇದನ್ನು ಬೆಳೆಸಿದ ಉದಾಹರಣೆಗಳು ದಾಖಲೆಗಳಲ್ಲಿ ಸಿಗುತ್ತವೆ. ಬ್ರಹ್ಮಸೂತ್ರದಂತಹ ಪ್ರಾಚೀನ ಗ್ರಂಥಗಳು ಇದನ್ನು ದಾಖಲು ಮಾಡಿವೆ.  ಮೂಲತಃ ಆಫ್ರಿಕಾದ ತವರನ್ನು ಹೊಂದಿರುವ ಹುಣಸೆಯು ಭಾರತಕ್ಕೆ ಬಂದ ಬಗ್ಗೆ ಎರಡು ಪ್ರಮುಖ ವಾದಗಳಿವೆ. ಮೊದಲನೆಯದು ಅರಬ್ಬರಿಗಿಂತಾ ಮೊದಲು ಇಥಿಯೋಪಿಯನ್ನರು ಭಾರತಕ್ಕೆ ತಂದರೆಂದು ಹೇಳುತ್ತದೆ. ಮತ್ತೊಂದು ಮಾಹಿತಿಗಳ ಪ್ರಕಾರ ಅರಬ್ಬರು ತಮ್ಮ ಸ್ವಂತ ಹಿತಾಸಕ್ತಿಯಿಂದ ಆಫ್ರಿಕಾದಿಂದ ತಂದು ಭಾರತದಲ್ಲಿ ನೆಟ್ಟರೆಂದೂ ಹೇಳಲಾಗುತ್ತದೆ. ಆದರೂ ಹೇಗೆ ಎಂದು ಖಚಿತವಾಗಿ ಹೇಳುವ ಪುರಾವೆಗಳಿಲ್ಲ. ಅದೇನೇ ಇದ್ದರೂ ಅದು ಹೊಂದಿಕೊಂಡ ಬಗೆಯಲ್ಲಂತೂ ಅದು ಭಾರತೀಯ ಮರವೇ ಆಗಿದೆ.

            ಹುಣಸೆಯನ್ನು ಸಾಲುಮರಗಳಾಗಿ ನೆಡುವಲ್ಲಿ ಬಹಳ ಹಿಂದಿನ ಇತಿಹಾಸವಿದೆ. ಕ್ರಿ.ಶ.1540-45ರ ನಡುವಿನ ಅವಧಿಯಲ್ಲಿ ಪೆಶಾವರ್-ನಿಂದ ಕೊಲ್ಕಾತ್ತಾವರೆಗಿನ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಕಾರ್ಯವು ನಡೆಯಿತು. ಅದನ್ನು ಬಿಹಾರದ ಪ್ರಾಂತ್ಯದಲ್ಲಿ ಆಳುತ್ತಿದ್ದ ಸೂರಿ ಮನೆತನದ ಶೇರ್ ಷಹಾ ಸೂರಿ ಎಂಬ ದೊರೆಯು, ಆಸಕ್ತಿಯಿಂದ ಆ ದಾರಿಯ ರಸ್ತೆಯ ಆಸುಪಾಸುಗಳಲ್ಲಿ ಹುಣಸೆಯ ಮರಗಳನ್ನು ನಡೆಸಿದನು. ಸಡಕ್-ಎ-ಅಜಾಮ್ (‘Sadak-e-Azam’)  ಅಥವಾ ಗ್ರೇಟ್ ರೋಡ್ (‘Great Road’) ಎಂಬ ಹೆಸರಿನಿಂದ ಅದಕ್ಕೆ ಆಗ ಕರೆಯುತ್ತಿದ್ದರು. ಮುಂದೆ ಬ್ರಿಟಿಷರ ಕಾಲದಲ್ಲಿ ಅದು ಗ್ರಾಂಡ್ ಟ್ರಂಕ್ ರಸ್ತೆ (Grand Trunk Road or GT Road) ಆಯಿತು. ಈಗಲೂ ಗ್ರಾಂಡ್ ಟ್ರಂಕ್ ರಸ್ತೆ ಎಂದೇ ಪ್ರಸಿದ್ಧವಾಗಿದೆ.  ಅಫ್ಗಾನಿಸ್ತಾನಿನ ಕಾಬೂಲ್ ನಿಂದ ಬಾಂಗ್ಲಾದ ಚಿತ್ತಗಾಂಗ್ ವರೆಗೆ, ಪೆಶಾವರ್, ಲಾಹೋರ್, ಅಮೃತಸರ್, ನವದೆಹಲಿ, ಪಟ್ನಾ, ಹೌರಾಗಳನ್ನು ಸಂಪರ್ಕಿಸುವ ಇದು ಏಶಿಯಾದ ಅತ್ಯಂತ ಹಳೆಯ ರಸ್ತೆಯೂ ಆಗಿದೆ. ಶೇರ್ ಷಹಾನಿಗೆ ಇದ್ದ ಕಾಳಜಿ ಏನೆಂದರೆ, ಅಷ್ಟು ದೂರದ ರಸ್ತೆಯಲ್ಲಿ ಕುಡಿಯುವ ನೀರಿನ ತೊಂದರೆಗೆ ಬಾಯರಿಸಿಕೊಂಡು ದಣಿವಾರಿಸಲು ಹುಣಸೆಯ ಹಣ್ಣುಗಳು ನೆರವಾಗಲಿ ಎಂದಿತ್ತಂತೆ! ನಂತರದ ದಿನಗಳಲ್ಲಿ ಅನೇಕ ಕಡೆ ಸಾಲು ಹುಣಸೆಯ ಮರಗಳು ತುಂಬಾ ಯಶಸ್ಸಿಯಾಗಿವೆ.

          ನಮ್ಮ ದೇಶವು ಅತಿ ಹೆಚ್ಚು ಹುಣಸೆಮರಗಳ ವೈವಿಧ್ಯತೆಯನ್ನು ಹೊಂದಿರುವ ದೇಶ. ನಮ್ಮ ರಾಜ್ಯದ ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಮುಂತಾದ ಜಿಲ್ಲೆಗಳಲ್ಲಿ ಈ ವೈವಿಧ್ಯತೆಯ ಜಾಲವನ್ನು ಕಾಣಬಹುದು. ಸಾಲು ಸಾಲಾಗಿ ಊರಿಂದ ಊರಿಗೆ ಹೋಗುವ ರಸ್ತೆಗಳ ಎರಡೂ ಕಡೆಗಳಲ್ಲಿ ಬಗೆ ಬಗೆಯ ಅಷ್ಟೆ ಏಕೇ, ಅನೇಕರ ಮನೆಯ ಹಿತ್ತಿಲು, ಕಣಗಳ ಆಸುಪಾಸು ಮುಂತಾದೆಡೆಗಳಲ್ಲಿ ಮರಗಳನ್ನು ಕಾಣುತ್ತೇವೆ. ಅದರ ಎಲೆ ಉದುರಿ ಫಲವತ್ತಾದ ಬೇಲಿ ಸಾಲಿನ ದಟ್ಟ ಹಸಿರೂ ಇದರ ಪ್ರಭಾವಕ್ಕೆ ಒಳಗಾಗಿದ್ದನ್ನೂ ಕಾಣಬಹುದು. ಇಲ್ಲೆಲ್ಲಾ ಇರುವ ವೈವಿಧ್ಯತೆ ಎಂದರೆ ಅದರ ಹುಳಿಯ ದಟ್ಟ ರುಚಿ, ಬಳಸಲು, ಹಿಂಡಲು ಆಗುವ ಅನುಕೂಲತೆಯ ಕುರಿತು, ಮತ್ತೆ ಕೆಲವಂತೂ ಸಿಹಿಯ ಅನುಭವಕ್ಕೂ ಕಾರಣವಾಗಿವೆ. ಇದು ಪರಕೀಯ ಪರಾಗಸ್ಪರ್ಶದಿಂದ ಬೀಜ ಕಟ್ಟುವುದರಿಂದ ವೈವಿಧ್ಯತೆಯು ಅತೀ ಹೆಚ್ಚು. ಬೇರೆ ಬೇರೆ ಮರದ ಗುಣಗಳು ಬೆರೆತು ಬೀಜಗಳಲ್ಲಿ ಸಾಗಿ ಬಂದಿರುತ್ತವೆ. ಆದ್ದರಿಂದ ಬೀಜಗಳಿಂದ ಪಡೆದ ಸಸಿಗಳಲ್ಲಿ ತಾಯಿಗುಣದ ಮರವನ್ನು ಪಡೆಯಲಾಗದು. ನಮ್ಮಲ್ಲಿ ಅನೇಕ ಮರಗಳು ಪ್ರತೀ ವರ್ಷ ಫಲಕೊಟ್ಟರೆ. ಕೆಲವು ವರ್ಷ ಬಿಟ್ಟು ವರ್ಷ ಕಾಯಿ ಕಟ್ಟುತ್ತವೆ. ಕೆಲವು ವಿಚಿತ್ರವಾದ ಮರಗಳಿವೆ. ಅವುಗಳಲ್ಲಿ ಒಂದು ಪಾರ್ಶ್ವ ಒಂದು ವರ್ಷ ಮತ್ತೊಂದು ಪಾರ್ಶ್ವ ಮತ್ತೊಂದು ವರ್ಷ ಫಲ ಬಿಡುತ್ತವೆ. ಇದೆಲ್ಲಾ ಆಯಾ ಮರದ  ಆನುವಂಶಿಕ ಗುಣಗಳಾಗಿವೆ. 

          ಹುಣಸೆಯ ಅತಿ ಮುಖ್ಯವಾದ ಗುಣವೆಂದರೆ ಇದು ಆಮ್ಲತೆ ಮತ್ತು ಸಕ್ಕರೆ ಎರಡನ್ನೂ  ಒಳಗೊಂಡಿರುವುದು. ಹುಳಿಯ ಆಮ್ಲಿಯ ಗುಣ ಅದರಿಂದ ತಯಾರಿಸಿದ ಪದಾರ್ಥಗಳಿಗೆ, ಬಾಯಿ ಚಪ್ಪರಿಸುವ ರುಚಿಯ ಜೊತೆಗೆ ತಡೆದುಕೊಳ್ಳುವ ಗುಣವನ್ನು ಕೊಡುತ್ತದೆ. ಹಾಗಾಗಿ ಬಹಳ ಹಿಂದೆ ಪ್ರವಾಸಿಗರಿಗೆ ಇದರ ಆಹಾರ ಪದಾರ್ಥಗಳು ಹೆಚ್ಚು ಅನುಕೂಲಕರವಾಗಿದ್ದವು. ಈಗಲೂ ನಮ್ಮಲ್ಲಿ ಮಾಡುವ ಹುಳಿಬುತ್ತಿಯಾಗಲಿ, ಪುಳಿಯೋಗರೆಯಾಗಲಿ ಹೆಚ್ಚು ಕಾಲ- ದಿನವಿಡೀ ಇಡಬಲ್ಲವೇ ಆಗಿವೆ.  ಹುಣಸೆಯು ಚೆನ್ನಾಗಿ ಹಣ್ಣಾದ ಮೇಲೆ ತನ್ನ ಸಿಹಿಯನ್ನು ಬಿಟ್ಟುಕೊಡುವುದು. ಇಲ್ಲವಾದರೆ ಹುಳಿಯೇ ಅದರ ಸ್ವಾದ.  ಇದಲ್ಲದೆ ಹುಳಿಯನ್ನು ಆಹಾರದಲ್ಲಿ ನಿರಂತವಾಗಿ ಬಳಸುವುದರಿಂದ ಕೆಲವು ಲಾಭಗಳೂ ಇವೆ. ಮುಖ್ಯವಾಗಿ ಹುಳಿಯ ಆಮ್ಲತೆಯು ಕೆಲವೊಂದು ಖನಿಜಾಂಶಗಳನ್ನು  ಜೀರ್ಣಗೊಳಿಸಿ, ದೇಹಕ್ಕೆ ಹೀರುಕೊಳ್ಳಲು ಅನುಕೂಲವಾಗುತ್ತದೆ. ಇಂತಹದರಲ್ಲಿ ಕಬ್ಬಿಣ, ಮ್ಯಾಂಗನೀಸ್‍ ಗಳು ಪ್ರಮುಖವಾದವು. ಈ ಖನಿಜಾಂಶಗಳು ಆಹಾರದಿಂದ ನಮ್ಮ ದೇಹಕ್ಕೆ ಒಂದಾಗುವಿಕೆಗೆ ಹುಣಸೆಯ ಬಳಕೆಯು ಸಹಾಯ ಮಾಡಿದೆ. ನೀರಿನಲ್ಲಿ ಫ್ಲೋರೈಡ್‍ ಹೆಚ್ಚು ಇರುವ ಸ್ಥಳಗಳಲ್ಲಿ ಹುಣಸೆಯನ್ನು  ಆಹಾರದಲ್ಲಿ ಬಳಸುವುದರಿಂದ ಫ್ಲೋರೈಡ್‍ ದೇಹಕ್ಕೆ ಸೇರದಂತೆ ಅದನ್ನು ಸಂಯುಕ್ತ ವಸ್ತುಗಳಿಂದ ಬಿಡುಗಡೆಯಾಗಿಸುವಲ್ಲಿಯೂ ಹುಣಸೆಯು ಲಾಭತಂದಿದೆ.

          ಅರ್ಧಂಬರ್ಧ ಮಾಗಿದ ದ್ವಾರಗಾಯಿಗಳೂ ಸಹಾ ವೈವಿಧ್ಯತೆಯಲ್ಲಿ ಸೇರಿಕೊಂಡಿವೆ. ಹಾಗಾಗಿ ಬಗೆ ಬಗೆಯ ದ್ವಾರಗಾಯಿಯ ರುಚಿಯೂ ನಮ್ಮ ಆಹಾರದಲ್ಲಿ ಬೆರೆತಿದೆ. ಅದರಲ್ಲಿ ಇಡೀ ಕಾಯಿಯ ಬಳಕೆಯಿಂದಾಗಿ ಅದರಲ್ಲಿ ಹೆಚ್ಚುವರಿ ಲಾಭವನ್ನು ರೈತರಿಗೆ ತಂದುಕೊಡುವಲ್ಲಿ ಸಹಕಾರಿ. ಹುಣಸೆಯ ಚಿಗುರೆಲೆಯನ್ನೂ ಸಹಾ ಆಹಾರವಾಗಿ ಬಳಸಬಹುದು. ಹುಣಸೆಯು ಬೇಳೆ-ಕಾಳುಗಳ ಜಾತಿಯದ್ದಾದರಿಂದ ಇದರಲ್ಲೂ ಪ್ರೊಟೀನ್ ಸಾಕಷ್ಟಿದೆ. ಒಣಗಿನ ಹಣ್ಣಿನಲ್ಲಿ ಪ್ರತಿಶತ 2ರಿಂದ9 ರಷ್ಟು ಪ್ರೊಟೀನ್, 5 -15 ರಷ್ಟು ಟಾರ್-ಟಾರಿಕ್ ಆಮ್ಲ, 56-70ರಷ್ಟು ಪಿಷ್ಠ, ಮತ್ತು ನಾರು 2-20ರಷ್ಟಿದೆ. ಸಕ್ಕರೆ ಹಾಗೂ ಪೆಕ್ಟಿನ್ ಕೂಡ ಇರುತ್ತವೆ. ಸ್ವಲ್ಪಭಾಗ ಖನಿಜಾಂಶಗಳೂ ಇರುತ್ತವೆ.

            ಹುಣಸೆಯ ಬೀಜಗಳು ಸಾಕಷ್ಟು ಪ್ರೊಟೀನ್ ಅನ್ನು ಹೊಂದಿವೆ. ಇವು ಸಹಜವಾಗಿ ತುಂಬಾ ಗಟ್ಟಿಯಾದ್ದರಿಂದ ಇತರೆಯ ಬೇಳೆಗಳಂತೆ ಬಳಸಲಾಗದು. ವಿವಿಧ ಔಷಧಿಯ ತಯಾರಿಯಲ್ಲಿ ತಿರುಳು ಹಾಗೂ ಬೀಜಗಳನ್ನು ಧಾರಾಳವಾಗಿ ಬಳಸಲಾಗುತ್ತದೆ.  ಗ್ರಾಮೀಣ ಭಾಗಗಳ  ಅನುಭವ ಇದ್ದವರಿಗೆ ಹುಣಸೆಯ ಬೀಜಗಳಿಂದ ಆಟವಾಡಿದ್ದು ಮಾಸಿರಲು ಸಾಧ್ಯವೇ ಇಲ್ಲ. ಚೌಕಾಬಾರ, ಚಿಣೆ-ಮಣೆ ಆಟಗಳಲ್ಲಿ ಬೀಜಗಳ ಬಳಕೆಯು ಪಾರಂಪರಿಕ ಗಣಿತದ ಕಲಿಕೆಯನ್ನು ಉಳಿಸಿರುವುದು, ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ, ಆಫ್ರಿಕಾದಲ್ಲೂ ಕೂಡ ಜಾರಿಯಲ್ಲಿದೆ.

          ಹುಣಸೆಮರ ಗಟ್ಟಿ ಮತ್ತು ಅದರ ಉರುವಲೂ ಕೂಡ ಹೆಚ್ಚು ಶಾಖಯುಕ್ತ ಎಂಬುದು ಬಹಳ ಜನರ ಅನುಭವದ ಮಾತು. ಗಟ್ಟಿ ಎನ್ನುವುದಕ್ಕೆ ಸಾಕ್ಷಿಯಾಗಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ದೇವನಹಳ್ಳಿಯ ಹತ್ತಿರದಲ್ಲಿರುವ ನಲ್ಲೂರಿನಲ್ಲಿ ಹುಣಸೆತೋಪು ನಿಂತಿದೆ. ಅಲ್ಲಿ ಸಾವಿರ ವರ್ಷದ ಮರಗಳಿವೆ. ಸುಮಾರು ನೂರಾರು ವರ್ಷದ ಮರಗಳಿಂದ ಮೊದಲ್ಗೊಂಡು ಸಾವಿರಾರು ವರ್ಷದ ಮರಗಳು ಅಲ್ಲಿವೆ. ನೂರಾರು ಮರಗಳಿರುವ ಈ ತೋಪಿನಲ್ಲಿ ಸಾವಿರಾರು ವರ್ಷದ ಮರಗಳು ಹಿರಿಯಜ್ಜನಂತೆ ಬಿಸಿಲಿ ಗಾಳಿ ಮಳೆಗೆ ಮೈಯೊಡ್ಡಿ ನಿಂತಿವೆ. ಮರಗಳು ಬೀಳುವ ಮಾತೇ ಇಲ್ಲ ಎನ್ನುವಂತೆ! ಅವುಗಳ ನೋಟವೂ ಅಷ್ಟೇ ಮೈಯೆಲ್ಲಾ ಮಾಗಿ ಹಣ್ಣು ಹಣ್ಣು ಮುದುಕರಂತೆ ಗೋಚರಿಸುತ್ತವೆ. ನೂರಾರು ವರ್ಷಗಳ ಕಾಲ ನಿರಂತರವಾಗಿ ಫಲ ಕೊಟ್ಟ ಹಿರಿಮೆಯನ್ನು ಹೊತ್ತ ಅನೇಕ ಮರಗಳು ಇಂದಿಗೂ ಫಲಕೊಡುತ್ತಿವೆ. ಇಷ್ಟು ವರ್ಷಗಳ ಕಾಲ ಯಾವುದೇ ಹೊರ ಪರಿಕರಗಳಾದ ಗೊಬ್ಬರ ಮುಂತಾದ ಬಳಕೆಗಳಿಲ್ಲದೆ ಹುಣಸೆ ಮರಗಳು ಅದ್ಭುತ ಜೈವಿಕ ತಾಣವಾಗಿವೆ. ಇದನ್ನು ನಮ್ಮ ದೇಶದ ಪ್ರಥಮ ಜೈವಿಕತಾಣವೆಂದೇ ಕರೆದು ರಾಜ್ಯದ ಜೀವಿವೈವಿಧ್ಯ ಮಂಡಳಿಯು ಅದರ ರಕ್ಷಣೆಯಲ್ಲಿ ತೊಡಗಿದೆ.    

          ನಮ್ಮ ದೇಶಲ್ಲಿರುವ ಹುಣಸೆಯ ವೈವಿಧ್ಯತೆಯೂ ಬಹಳ ವರ್ಷಗಳ ಹಿಂದೆಯೇ ದೇಶದ ಗಡಿಯಾಚೆ ಸಾಗಿದೆ. ಅರಬ್ಬರ ಆಸಕ್ತಿಯಿಂದಾಗಿ ನಮ್ಮ ದೇಶದಿಂದ ಪಾಶ್ಚಾತ್ಯ ಪ್ರದೇಶಕ್ಕೆ ಅರಬ್ ಮೂಲಕ ಸಾಗಿದೆ. ಈಜಿಪ್ಟಿನಲ್ಲಿ ನೆಲೆಕಂಡು ಅಲ್ಲಿಂದ ಸಾಗಿ ಪಶ್ಚಿಮ ತಲುಪಿವೆ. ಗ್ರೀಕರ ಇತಿಹಾಸದಲ್ಲಿ ಎಲ್ಲೂ ಹುಣಸೆಯ ದಾಖಲೆಗಳಿಲ್ಲ. ಬಹುಶಃ ಹವಾಯಿ ಮೂಲಕ ಅಮೇರಿಕಾವನ್ನೂ, ಮೆಕ್ಸಿಕೋವನ್ನೂ ನಮ್ಮ ಹುಣಸೆಯು ಸುಮಾರು 1615ರ ನಂತರವಷ್ಟೇ ತಲುಪಿದೆ. ಆದರೆ ಹುಣಸೆಯ ಚರಿತ್ರೆಗೆ ಭಾರತವೇ ಅತಿ ಹೆಚ್ಚು ಕೊಡುಗೆಯನ್ನು ಕೊಟ್ಟಿದೆ. ಉತ್ಪಾದನೆಯಲ್ಲೂ ಭಾರತವೇ ಮುಂದು. ಸುಮಾರು 4 ಲಕ್ಷ ಟನ್ ಗಳಷ್ಟು ಹಣ್ಣನ್ನು ಪ್ರತೀ ವರ್ಷ ಉತ್ಪಾದಿಸುತ್ತದೆ. ದೇಶದ ಒಟ್ಟು ಉತ್ಪಾದನೆಯ ಪ್ರತಿಶತ 25ರಿಂದ 30ರವೆರಗೂ ಕೊಯ್ಲು ನೀಡುವ  ಕರ್ನಾಟಕದ ಕೊಡುಗೆಯೂ ಗಮನಾರ್ಹವಾಗಿದೆ. ಎರಡನೆಯ ಸ್ಥಾನದ ತಮಿಳುನಾಡೂ ಕೂಡ ಹುಣಸೆಯ ಉತ್ಪಾದನೆಯಲ್ಲಿ ಜನಪ್ರಿಯವೇ. ನಂತರದ ಸ್ಥಾನ ಆಂಧ್ರಾ ಹಾಗೂ ತೆಲಂಗಾಣದ್ದು.

            ಭಾರತದ ನಂತರ ಉತ್ಪಾದನೆಯಲ್ಲಿ ಎರಡನೆಯ ಸ್ಥಾನವನ್ನು ಥೈಲ್ಯಾಂಡ್ ಪಡೆದಿದೆ. ಥೈಲಾಂಡಿನ ತಳಿಗಳು ಸಿಹಿಯಾದ ರುಚಿಗೆ ಹೆಸರುವಾಸಿ. ಬಣ್ಣವೂ ಅಷ್ಟೆ ದಟ್ಟವಾದ ಕೆಂಪು ಬಣ್ಣದ ತಿರುಳನ್ನು ಹೊಂದಿದ್ದು, ಹಾಗೆ ತಿನ್ನಲು ರುಚಿಯಾಗಿರುತ್ತವೆ. ಈಗಾಗಲೆ ಹಣ್ಣು ಮಾರುವ ಅಂಗಡಿಗಳಲ್ಲಿ ಪ್ಯಾಕ್ ಮಾಡಿದ ಥೈಲ್ಯಾಂಡ್ ತಳಿಯ ಹಣ್ಣು ದುಬಾರಿಯಾಗಿ ಮಾರುವುದನ್ನು ನೋಡಿರುತ್ತೀರಿ. ಸಿಹಿ ಹಣ್ಣು ಎಂದರೆ ಕಿತ್ತಳೆ ತಿಂದಂತೆ ತಿನ್ನಲಾಗುವುದಿಲ್ಲ. ಒಂದಷ್ಟು ಸ್ವಾದವನ್ನು ನಾಲಿಗೆಯ ಮೇಲೆ ಹಾಕಿಕೊಂಡು ಬಾಯಿ ಚಪ್ಪರಿಸಲು ಅಡ್ಡಿಯಿಲ್ಲ. ನಮ್ಮ ಮಾಮೂಲಿ ಹುಣಸೆಯ ಹಣ್ಣಿಗಿಂತಾ ಆರೆಂಟು ಪಟ್ಟು ಹೆಚ್ಚು ಬೆಲೆಯನ್ನು ಕೊಟ್ಟು ಸವಿಯ ಬೇಕು. 

            ನಮ್ಮ ಸಂಸ್ಕೃತಿಯಲ್ಲಿ ಹುಣಸೆಯು ಸಾಕಷ್ಟು ಪ್ರಭಾವವನ್ನು ಬೀರಿದೆ. ಅದರ ದಟ್ಟ ನೆರಳಿನ ಕಾರಣದಿಂದಾಗಿ ಕತ್ತಲಿನ ರಾತ್ರಿಯಲ್ಲಿ ಹುಣಸೆಯ ಛಾವಣೆಯ ಕೆಳಗೆ ಭಯಾನಕ ಸಂಗತಿಗಳ ಬಗೆಗೆ ಹೇಳುವುದುಂಟು. ಅದರ ನೆರಳಲ್ಲಿ ಮಲಗಿ ನಿದ್ರಿಸಿದರೆ ಕೆಟ್ಟ ಕನಸುಗಳ ಅನುಭವಕ್ಕೆ ಬರುತ್ತವೆಂಬುದೂ ಉಂಟು. ದೆವ್ವಗಳಿರುವ ಬಗೆಗೆ, ಆಮ್ಲಜನಕದ ಕೊರತೆಯೆಂದೂ ಹೀಗೆ ನಾನಾ ಸಂಕಟಗಳನ್ನು ಅದರ ಕತ್ತಲ ನೆರಳಿಗೆ ಕಟ್ಟಿದ್ದಾರೆ. ಅವೆಲ್ಲವೂ ಅಂತೆ-ಕಂತೆಗಳಷ್ಟೇ. ಆಮ್ಲಜನಕವೂ ಅಷ್ಟೇ! ಕನಸುಗಳ ಮಾತಂತೂ ಕನಸಿನದು ತಾನೇ!

            ವೈಯಕ್ತಿವಾಗಿ ಬಾಲ್ಯದಿಂದಲೂ ನನ್ನನ್ನು ತುಂಬಾ ಆಕಷರ್ಷಿಸಿದ ಸಸ್ಯ ಹುಣಸೆ. ಶಿವಮೊಗ್ಗಾದ ಹತ್ತಿರ ನನ್ನೂರು ನ್ಯಾಮತಿಯ ಮನೆಯ ಹತ್ತಿರದ ಗೆಳೆಯನೊಬ್ಬನ ಹಿತ್ತಿಲಲ್ಲಿ ಒಂದು ಹುಣಸೆಯ ಮರವಿತ್ತು. ಬಾಲ್ಯದ ಆಟೋಟಗಳಲ್ಲಿ ಅದು ನಮ್ಮೊಂದಿಗೆ ಸಹಕರಿಸಿದಷ್ಟು ಮತ್ತಾವುದೂ ಇರಲಿಕ್ಕಿಲ್ಲ. ಹೆಚ್ಚೂ ಕಡಿಮೆ ನೂರು ವರ್ಷದ ಆಚೀಚೆಗಿನ ಮರದ ಪ್ರಭಾವದಿಂದಾಗಿಯೇ ನನ್ನ ಪಿಎಚ್.ಡಿ ಸಂಶೋಧನೆಯ ಭಾಗವಾಗಿ ಹುಣಸೆಯು ಒಂದಾಯಿತು. ನನ್ನ ಸಂಶೋಧನೆಯಲ್ಲಿ ಐದು ಮರಗಳ ಮಣ್ಣಿನ ಸಹಯೋಗದ ಕುರಿತಾದ ಅಧ್ಯಯನದಲ್ಲಿ ಹುಣಸೆಯು ಒಂದು. ಅದರ ಆಸಕ್ತಿಯಿಂದ ರಾಜ್ಯದ ನೂರಾರು ಹುಣಸೆಯ ಮರಗಳನ್ನು ಸಂದರ್ಶಿಸಿ,  ಹತ್ತಾರು ವಿಚಿತ್ರವಾದ ಮರಗಳನ್ನು ನೋಡಿದ್ದೇನೆ. ಅವುಗಳಲ್ಲಿ ಕೆಲವು ಮರಗಳ ಸಂಗತಿಗಳಿಂದ ಇಂದಿನ ಸಸ್ಯಯಾನವನ್ನು ಮುಗಿಸುತ್ತೇನೆ. 

            ನನ್ನ ಬಾಲ್ಯವನ್ನು ಜತೆಗೆ ಈಗಲೂ ಊರಿಗೆ ಹೋದಾಗಲೆಲ್ಲಾ ಕಾಡುತ್ತಿರುವ ಮರ, ಮೂರು ತಲೆಮಾರನ್ನು ಕಂಡಿದೆ. ನನ್ನ ಗೆಳೆಯನ ಮನೆಯ ಹಿತ್ತಿಲಿನ ಆ ಮರದ ಬಗೆಗೆ ಆತನ ಅಜ್ಜ ಹೇಳುತ್ತಿದ್ದರು. ಅವರೂ ಸಹಾ ನೆಟ್ಟ ಬಗ್ಗೆ ಹೇಳಿದ್ದಿಲ್ಲ. ಅವರು ಈಗಿಲ್ಲ, ಅವರಿಗಿಂತಲೂ ಹಿರಿದಾದ ಮರ ಇನ್ನೂ ಹೂ-ಹಣ್ಣು, ಬಿಟ್ಟು ನಳನಳಿಸುತ್ತಿದೆ. ಹೆಚ್ಚು ಎತ್ತರವಲ್ಲದ, ಸುಮಾರು 60-70 ಅಡಿ ಇದ್ದಿರಬಹುದಾದ ಮರದ ಹಣ್ಣುಗಳು ಹಾಗೆಯೇ ತಿನ್ನಲೂ ಖುಷಿಕೊಡುತ್ತವೆ. ಅದರ ಹಣ್ಣಿನ ಜೊತೆ ಬೆಲ್ಲವನ್ನೂ ಸ್ವಲ್ಪ ಮೆಣಸನ್ನೂ ಸೇರಿಸಿ ಮಾಡುತ್ತಿದ್ದ ಚಾಕೊಲೇಟ್ ಬಗೆಯ ಕ್ಯಾಂಡಿ ನಮ್ಮ ಬಾಲ್ಯವನ್ನು ಅದರ ನೆರಳಲ್ಲಿ ಶಾಶ್ವತವಾಗಿಸಿದೆ. ಮರದ ಕೆಳಗೆ ಅದರಿಂದ ಉದುರಿದ ಎಲೆಗಳನ್ನೆಲ್ಲಾ ಒಟ್ಟು ಮಾಡಿ ತುಂಬಲು ಮಾಡಿದ್ದ ಗುಂಡಿಯಲ್ಲಿ, ಎಲೆಗಳ ದಟ್ಟ ಹಾಸು ಇದ್ದಾಗ ಜಿಗಿದಾಡಿದ ನೆನಪುಗಳೂ ಮರೆಯಲಾಗದವು.

            ಸಂಶೋಧನೆಯ ಆಸಕ್ತಿಯಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಾಡಿನಲ್ಲಿ ಅಲೆದಾಡುತ್ತಿದ್ದಾಗ ಅಲ್ಲಿನ ಬಣಕಲ್ ಎಂಬ ಪುಟ್ಟ ಹಳ್ಳಿಯ ಹತ್ತಿರದಲ್ಲಿ ಒಂದು ಬೃಹತ್ತಾದ ಮರ ಎದುರಾಗಿತ್ತು. ನೂರಾರು ಅಡಿ ಎತ್ತರದ ಮರ, ಅಚ್ಚರಿ ಎಂಬಂತೆ ಅರಳಿ ಮರದ ಜೊತೆಯಾಗಿ ಬೆಳೆದಿತ್ತು. ಸಾಮಾನ್ಯವಾಗಿ ಅರಳಿಯ ಜೊತೆಗಿನ ಮರಗಳ ಶಾಶ್ವತ ಸಾವನ್ನು ಹೊಂದುತ್ತವೆ. ಅರಳಿಯು ಜೊತೆಗಾರ ಸಸ್ಯವನ್ನು ನುಂಗುವ ಅದರ ಧೃತರಾಷ್ಟ್ರಾಲಿಂಗನ ತುಂಬಾ ವಿಖ್ಯಾತ. ಅಂತಹದರಲ್ಲಿ ಹುಣಸೆಯು ಅರಳಿಯ ಜೊತೆ ಪೈಪೋಟಿಗಿಳಿದು ಬದುಕನ್ನು ಕಟ್ಟಿಕೊಂಡಿತ್ತು. ಅರಳಿಯಾದರೂ ನೆಲಕ್ಕೆ ಆತುಕೊಂಡು ಹುಣಸೆಯನ್ನು ನುಂಗುವಂತೆ ತಬ್ಬಿಹಿಡಿದಿದ್ದರೂ ಹುಣಸೆಯ ಕಾಂಡ ಮಾತ್ರ ಸಂಪೂರ್ಣ ಅರಳಿಗೆ ದಕ್ಕಿರಲಿಲ್ಲ, ದಕ್ಕುವ ಸಾಧ್ಯತೆಯೂ ಇರಲಿಲ್ಲ. ಆಗಲೇ 40-50 ವರ್ಷಗಳನ್ನು ಸವೆಸಿದ್ದ ಆ ಮರ ಮಾತ್ರ ಹಾಗೆ ಇರುವ ಬಗ್ಗೆ ಅಲ್ಲಿನ ಗೆಳೆಯರು ಹೇಳುತ್ತಿದ್ದರು. 90ರದಶಕದಲ್ಲಿ ನನ್ನ ಬಳಿಯಿದ್ದ ಪುಟ್ಟ ಕ್ಯಾಮರದ ಒಂದೇ ನೋಟಕ್ಕೆ ದಕ್ಕದಷ್ಟು ಎತ್ತರವಾಗಿದ್ದ ಮರವನ್ನು ಮೂರು ಭಾಗವಾಗಿ ಸೆರೆಹಿಡಿದದ್ದು ನೆನಪಿನಲ್ಲಿದೆ. ಮಲೆನಾಡಿನ ಮರಗಳಂತೆ ಬಿಸಿಲಿಗೆ ಪೈಪೋಟಿಯಿಂದ ಎತ್ತರಕ್ಕೆ ತಾಳೆಯಂತೆ ಬೆಳೆದ ಹುಣಸೆಯ ಮರ ಅದು.

            ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನಲ್ಲಿ ಕುಬ್ಜವಾದ ಮರವೊಂದು ಒಮ್ಮೆ ಕಂಡಿತ್ತು. ಕೇವಲ ಐದಾರು ಅಡಿ ಎತ್ತರದ ಆ ಮರ ನಾಲ್ಕಾರು ದಶಕಗಳನ್ನು ಸವೆಸಿತ್ತು. ಆ ದಿನ ಹುಣಸೆಯನ್ನೇನು ಹುಡುಕಿಕೊಂಡು ಹೋಗಿದ್ದಲ್ಲ. ಚಿತ್ರದುರ್ಗ ಜಿಲ್ಲೆಯ ವಿಶೇಷವಾದ ಕೆರೆಗಳ ಅಧ್ಯಯನದಲ್ಲಿ ಆಕಸ್ಮಿಕವಾಗಿ ಸಿಕ್ಕ ಮರ ಅದು. ಒಂದು ಕೆರೆಗೆ ಆತುಕೊಂಡಂತೆ ಬೆಳೆದ ಅದರ ಬುಡಕ್ಕೆ ಆಗಾಗ್ಗೆ ನೀರು ನಿಲ್ಲುತ್ತಿದ್ದ ಬಗ್ಗೆ ಅಲ್ಲಿನ ನಿವಾಸಿ ಹೇಳಿದರು. ಹಾಗೆ ಬುಡಕ್ಕೆ ನೀರು ನಿಂತರೆ ಮುಗಿಲ ಮೇಲಿನ ಮೋಡಗಳ ಬಯಕೆಯನ್ನೇ ಮರೆತು ಕೇವಲ ಕಾಲ ಕೆಳಗಿನ ಚಿಂತೆಯಿಂದ ಬೆಳೆಯುವುದನ್ನು ಮರೆತಿದ್ದಂತೆ ಕಂಡಿತು.  ಹುಣಸೆಗೆ ಬುಡಕ್ಕೆ ನೀರು ನಿಂತಲ್ಲಿ ಬೆಳೆಯಲಾರದು ಎಂಬುದನ್ನು ಸಾಬೀತು ಪಡಸಲು ತುಂಗಾ-ಭದ್ರಾ ಅಚ್ಚುಕಟ್ಟಿನ ಬಳ್ಳಾರಿ ಬಳಿಯಲ್ಲಿಯೂ ಅಂತಹದ್ದೇ ಮರವೊಂದು ಸಿಕ್ಕಿತ್ತು. ಹೊಸಪೇಟೆಯಿಂದ ಬಳ್ಳಾರಿಗೆ ಹೋಗುವ ಮಾರ್ಗದಲ್ಲಿ ಇದ್ದ ಆ ಮರದ ವಯಸ್ಸು ತಿಳಿಯಲಿಲ್ಲ. ಆದರೂ ಎತ್ತರಕ್ಕೆ ಬೆಳೆಯಲಾರದೇ ಕಷ್ಟ ಪಡುತ್ತಿರುವಂತೆ ಕಂಡಿತ್ತು.

            ತೊಂಭತ್ತರ ದಶಕದ ಉತ್ತರಾರ್ಧದಲ್ಲಿ ಮೈಸೂರಿನಲ್ಲಿ ಒಂದು ಸೆಮಿನಾರು ನಡೆದಿತ್ತು. ಸುಸ್ಥಿರ ಕೃಷಿಯ ಬಗೆಗಿನ ಅದರಲ್ಲಿ ಒಬ್ಬ ರೈತರು ಭೇಟಿಯಾಗಿದ್ದರು. ತಮ್ಮ ಸುಸ್ಥಿರ ಕೃಷಿಯ ಪ್ರಯೋಗಗಳಲ್ಲಿ ಹುಣಸೆಯನ್ನು ಬಳಸಿಕೊಂಡ ಬಗೆಗೆ ಅವರು ಮಾತಾಡಿದ್ದರು. ಅದನ್ನಿಟ್ಟುಕೊಂಡು ತಮ್ಮ ಅನುಭವವನ್ನೇ ಪ್ರಬಂಧವಾಗಿಸಿ ಮಂಡಿಸಿದ್ದರು. ಒಂದೆರಡು ಮರಗಳ ಕಥೆಯಲ್ಲ! ಸುಮಾರು 16 ಎಕರೆಗಳಲ್ಲಿ ನೆಟ್ಟ 600 ಹುಣಸೆ ಸಸ್ಯಗಳ ಕಥನ. ಅವರು ಸಾಲದಿಂದ ಸೋತು ಇನ್ನೇನೂ ಬೆಳೆಯಲಾಗದೆಂದು ಕೈಚೆಲ್ಲಿ ಹುಣಸೆಗೆ ಮಾರು ಹೊಗಿದ್ದರು. ಹುಣಸೆಯ  ಪ್ರತಿಯೊಂದು ಭಾಗವನ್ನೂ ಬಳಸುವ, ಅದರಿಂದ ಏನಾದರೊಂದು ಬೆಲೆ ಬಾಳುವ ವಸ್ತುವಾಗಿಸಿ ಮಾರುಕಟ್ಟೆಯನ್ನು ತಲುಪುವ ಅವರ ಪ್ರಯತ್ನ ತುಂಬಾ ಇಷ್ಟವಾಗಿತ್ತು. ಹೂವು, ಚಿಗುರೆಲೆ, ಇಡೀ ಕಾಯಿಗಳಿಂದ ತೊಕ್ಕು, ಇತ್ಯಾದಿ ತಯಾರಿಸಿ ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ತಲುಪಿಸಲು ಹುಣಸೆಯನ್ನು ಅಣಿಮಾಡಿದ್ದರು. ಅಬ್ದುಲ್ ಖಾದರ್ ನಡಕಟ್ಟಿನ ಎಂಬ ಆ ರೈತರು, ಹುಣಸೆಯನ್ನು ಹಣ್ಣಿನಿಂದ ಬೇರ್ಪಡಿಸುವ ಯಂತ್ರವನ್ನೂ ರೂಪಿಸಿದ್ದಾರೆ. ಈಗ ಅವರ ಹುಣಸೆಯ ತೋಪಿನಲ್ಲಿ ಸುಮಾರು 1800 ಮರಗಳಿದ್ದು ಅತ್ಯಂತ ದೊಡ್ಡ ಹುಣಸೆಯ ತೋಪು ಅದಾಗಿದೆ. ಕೃಷಿಯ ಬಳಕೆಯ ವಿವಿಧ ಯಾಂತ್ರಿಕ ಉಪಕರಣಗಳ ಅನುಶೋಧದಲ್ಲೂ ತೊಡಗಿಕೊಂಡಿರುವ ಅಬ್ದುಲ್ ನಡಕಟ್ಟಿನ ಅವರನ್ನು ರಾಷ್ಟ್ರೀಯ ಅನುಶೋಧಗಳ ಪ್ರತಿಷ್ಠಾನವು (National Innovation Foundation) 2015ನೆಯ ವರ್ಷದಲ್ಲಿ ಜೀವಮಾನದ ಸಾಧನೆಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದೆ. ಖಂಡಿತಾ ಅದರಲ್ಲಿ ಹುಣಸೆಯ ಪಾತ್ರವಿದೆ. ಅಬ್ದುಲ್ ಖಾದರ್ ನಡಕಟ್ಟಿನ ಅವರು ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಅಣ್ಣಿಗೇರಿ ಗ್ರಾಮದವರು.

            “ಅದರಲ್ಲೇನಿದೆ ಹಳೆ ಹುಣಸೆಹಣ್ಣು” ಅನ್ನುವ ಮಾತನ್ನು ಕೇಳಿಯೇ ಇರುತ್ತೀರಿ. ಅಷ್ಟೇನೂ ಮಹತ್ವವಿರದ ಅಥವಾ ಸುಲಭವಾಗಿ ಮಾಡುವ ಕೆಲಸಕ್ಕೂ ಹಾಗೇ ರೂಪಕವಿತ್ತು ಹೇಳುವುದು ಸಾಮಾನ್ಯ ಸಂಗತಿ. ನಿಜ ಹಳೆಯ ಹುಣಸೆ ರುಚಿ ಕಳೆದುಕೊಂಡು ಅದರ ಹುಳಿ ಉಪಯೋಗಕ್ಕೆ ಬರದಂತಾದಾಗ ಅಥವಾ ಅದಕ್ಕೆ ಬಳಸಲಾರದಂತಹ ರುಚಿ ಸೇರಿಕೊಂಡಾಗ ಅದರಲ್ಲೇನು ಎನ್ನುತ್ತಿರಬಹುದು. ಆದರೆ ಈಗಾಗಲೇ ಹೊಸ ಹುಣಸೆಯ ಹಣ್ಣು ಮಾರುಕಟ್ಟೆಗೆ ಬಂದಿದೆ. ಹುಣಸೆಯ ಹಿಂದೆ ಏನೆಲ್ಲಾ ಇದೆ, ಅಂದರೆ ಅಚ್ಚರಿಯಾಗುವಷ್ಟು ಇದೆ, ಅಲ್ಲವೇ?   ಹುಣಸೆಯ ಮರದ ಪ್ರತಿಯೊಂದು ಭಾಗವೂ ಉಪಯೋಗಕ್ಕೆ ಯೋಗ್ಯವಾಗಿದೆ. ಹುಣಸೆಯು ನಿಜಕ್ಕೂ ನಾವು ಉಣ್ಣುವ ತಟ್ಟೆಯ ಸಾಂಸ್ಕೃತಿಕ ರಾಯಭಾರಿಯೇ ಆಗಿದೆ. ನಮ್ಮ ನಿತ್ಯದ  ಉಟದ ತಾಟಿನಲ್ಲಿ ಅನ್ನದ ಸಂಗಾತಿಯನ್ನು “ಹುಳಿ” ಎಂದೆ ಕರೆಯುತ್ತೇವಲ್ಲವೇ?

ನಮಸ್ಕಾರ,

ಚನ್ನೇಶ್

Leave a Reply