ಅರೆ ಇದೇನಿದು, ಸೀತಾ ಫಲ ನಮ್ಮದಲ್ಲವೇ? ರಾಮ ಫಲವೂ ಅಲ್ಲವೇ? ಹೌದು, ಇವೆರಡರ ಸಂಬಂಧಿಗಳಾದ ಲಕ್ಷ್ಮಣ-ಹನುಮಾನ್ ಫಲಗಳೂ ಸೇರಿ ಎಲ್ಲವೂ ಭಾರತೀಯ ನೆಲದವಲ್ಲ. ಪೋರ್ಚುಗೀಸರಿಂದ ಸರಿ ಸುಮಾರು 1590ಕ್ಕೂ ಮುಂಚೆಯೇ ದಕ್ಷಿಣ ಭಾರತದ ತೀರಪ್ರದೇಶವನ್ನು ತಲುಪಿ ಹರಡಿವೆ. ನಮ್ಮ ಜನಪದರ ಜಾಣತನವೆಂದರೆ ಅವೆಲ್ಲವುಗಳನ್ನೂ ಸಂಬಂಧಿಗಳಾಗಿ ಹೆಸರಿಸಿದ್ದು! ಇವುಗಳ ಚಾರಿತ್ರಿಕ ಹಾಗೂ ಸಸ್ಯವೈಜ್ಞಾನಿಕ ಸಂಗತಿಗಳೇನು ಎಂಬುದನ್ನು ನೋಡೋಣ.
ಜುಲೈ-ಆಗಸ್ಟ್ ತಿಂಗಳಾದರೆ ಸಾಕು ಮಾರುಕಟ್ಟೆಯಲ್ಲಿ ಸೀತಾ ಫಲ, ರಾಮ ಫಲಗಳು ಕಾಣತೊಡಗುತ್ತವೆ. ಬೇಸಿಗೆಯು ಮುಗಿಯುತ್ತಿದ್ದಂತೆ ಆರಂಭವಾಗುವ ಈ ಹಣ್ಣುಗಳು ಮುಂದೆ ಚಳಿಗಾಲದಲ್ಲೂ ಸವಿಯಲು ಸಿಗುತ್ತಿರುತ್ತವೆ. ಸೀತಾ ಫಲ ಈ ಸಂಕುಲದಲ್ಲಿ ಹೆಚ್ಚು ಜನಪ್ರಿಯವಾದ ಹಣ್ಣು, ರಾಮ ಫಲ ಸೀತಾ ಫಲಕ್ಕೆ ಹೋಲಿಸಿದರೆ ತುಸು ಕಡಿಮೆ ಜನಪ್ರಿಯತೆ! ಆದರೆ ರಾಮ-ಸೀತೆಯರಲ್ಲದೆ ಲಕ್ಷ್ಮಣ-ಹನುಮಾನ್ಗಳೂ ಇರುವ ಬಗ್ಗೆ ಹೆಚ್ಚಿನವರಿಗೆ ಅಷ್ಟೇನೂ ಗೊತ್ತಿರದ ಸಂಗತಿ. ಈ ನಾಲ್ಕೂ ಹಣ್ಣಿನ ಮರಗಳು ಒಂದೇ ಸಂಕುಲದವು. ರಾಮ-ಸೀತೆ, ಲಕ್ಷ್ಮಣ-ಹನುಮಾನರ ಹೆಸರು ಹೊತ್ತ ಇವುಗಳಾವುವೂ ನಮ್ಮ ದೇಶದ ತವರಿನವಲ್ಲ! ಅಚ್ಚರಿಯಾದರೂ ಇದು ನಿಜವೇ! ಹದಿನಾರನೆಯ ಶತಮಾನದಲ್ಲಿ ಭಾರತಕ್ಕೆ ಬಂದು ಪರಿಚಯಗೊಂಡು ನೆಲೆಯಾಗಿವೆ. ಆದರೆ ಈ ನಾಲ್ಕೂ ಹಣ್ಣುಗಳ ಸಾಮ್ಯತೆಯನ್ನು ಗಮನಿಸಿ ಒಂದೇ ಕುಟುಂಬದವರೆಂದೂ ಸಸ್ಯವೈಜ್ಞಾನಿಕವಾಗಿ ತಿಳಿಯದ ನಮ್ಮ ಜನಪದವು ಒಂದೇ ಮಾಡಿ ಹೆಸರಿಸಿರುವುದಂತೂ ಅಚ್ಚರಿಯ ಸಂಗತಿಯೇ ಸರಿ.

ಈ ನಾಲ್ಕೂ ಅಲ್ಲದೆ ಈ ಸಂಕುಲದ ಅನೇಕ ಗಿಡ-ಮರಗಳ ಹಣ್ಣುಗಳು ತಿನ್ನಬಹುದಾಗಿದ್ದು, ಅವುಗಳಲ್ಲಿ ಸೀತಾಫಲ ಹೆಚ್ಚು ಜನಪ್ರಿಯತೆ ಪಡೆದಿದೆಯಲ್ಲದೆ, ಉತ್ಪಾದನೆಯಿಂದಲೂ ಮುಂದಿದೆ. ಇದಕ್ಕೆ ಬಹು ಮುಖ್ಯ ಕಾರಣ ಅದರ ಸ್ವಾದ. ಮತ್ತು ಒಂದು ಹಣ್ಣು ತಿಂದಾಗ ಆಗುವ ಸಿಹಿಯಾದ ಸವಿಯ ಜೊತೆಗೆ, ತಂಪಾದ ಅನುಭವ. ಇದರ ನಂತರದಲ್ಲಿ ರಾಮ ಫಲವೂ ಸವಿಯಲ್ಲೆನೋ ಹೆಚ್ಚು ಸಿಹಿಯಾಗಿದ್ದರೂ ಹೆಚು ಮಾಗಿದರೆ ಕೈಯಲ್ಲಿ ಹಿಡಿಯಲೂ ಆಗದಷ್ಟು ತೆಳುವಾದ ಸಿಪ್ಪೆಯದು. ಸಿಪ್ಪೆಯು ದಪ್ಪವಾಗಿದ್ದೂ ಗಾತ್ರದಲ್ಲೂ ಹೆಚ್ಚಾಗಿದ್ದರೂ ಅಷ್ಟೇನೂ ಸಿಹಿಯಲ್ಲದ ತುಸು ಹುಳಿಯನ್ನೂ ಹೊಂದಿರುವ ಲಕ್ಷ್ಮಣ-ಹನುಮಾನ್ ಫಲಗಳು ನಮ್ಮ ನಾಲಿಗೆಗೆ ಹೆಚ್ಚು ಒಗ್ಗಿಲ್ಲ. ಆದರೆ ಇವೆಲ್ಲವೂ ತಮ್ಮ ತವರಿನ ಉಷ್ಣವಲಯದ ಅಮೆರಿಕೆಯಲ್ಲಿ ಅದರಲ್ಲೂ ಅಲ್ಲಿನ ಸ್ಥಳಿಯ ಬುಡಕಟ್ಟುಗಳಲ್ಲಿ ಅಪಾರ ಜನಪ್ರಿಯವೂ ಹೆಚ್ಚಿನ ಬಳಕೆಯವೂ ಆಗಿವೆ.
ಈ ನಾಲ್ಕೂ ಅಮೆರಿಕದ ಉಷ್ಣವಲಯದ ಸಸ್ಯಗಳು. ಈ ನಾಲ್ಕೂ ಅನೊನೇಸಿಯೇ (Annonaceae) ಎಂಬ ಒಂದೇ ಕುಟುಂಬಕ್ಕೆ ಸೇರಿವೆ, ಸಾಲದಕ್ಕೆ ಅನೊನಾ (Annona ) ಎಂಬ ಒಂದೇ ಸಂಕುಲದವೂ ಕೂಡ. ನಾಲ್ಕೂ ಅಮೆರಿಕ ಖಂಡದ ಬೇರೆ, ಬೇರೆ ಪ್ರದೇಶಗಳ ಮೂಲದವಾಗಿದ್ದು ತಮ್ಮದೇ ಆದ ಇತಿಹಾಸವನ್ನು ಕಟ್ಟಿಕೊಂಡಿವೆ. ಅಟ್ಲಾಂಟಿಕ್ ದಾಟಿ ಯೂರೋಪಿನ ಮೂಲಕ ಇಂಡಿಯಾಗೆ ಬಂದ ಇವುಗಳ ಒಳಗಿನ ಸಂಗತಿಗಳಿಂದ ಅವು ಬೇರೆ-ಬೇರೆಯವೇ ಆಗಿರುವ ವಿವರಗಳು ಇಲ್ಲಿವೆ.
ಅನೊನೇಸಿಯೇ ತುಂಬಾ ಹೇರಳವಾದ ಔಷಧೀಯ ಮತ್ತು ಕೈಗಾರಿಕಾ ಅನ್ವಯಗಳನ್ನು ಹೊಂದಿರುವ ತಿನ್ನಬಹುದಾದ ಹಣ್ಣುಗಳನ್ನು ಹೊಂದಿರುವ ಬಹುಮುಖವಾದ ಸಸ್ಯ ಕುಟುಂಬ. ಇದರಲ್ಲಿ ಸುಮಾರು 108 ಒಪ್ಪಿತವಾದ ಸಂಕುಲಗಳಿವೆ ಹಾಗೂ ಒಟ್ಟು 2400 ಗುರುತಿಸಲಾದ ಪ್ರಭೇದಗಳನ್ನು ಹೊಂದಿದೆ. ಇವುಗಳಲ್ಲಿ ಸುಮಾರು 900 ಕ್ಕೂ ಹೆಚ್ಚಿನ ಪ್ರಭೇದಗಳು ಅಮೆರಿಕಾ ಖಂಡಕ್ಕೆ ಸೇರಿವೆ. ಸುಮಾರು 450ರಷ್ಟು ಆಫ್ರಿಕಾದವಾದರೆ ಉಳಿದವು ಇಂಡೋಮಲಯನ್ ನೆಲೆಯವು. ಹೆಚ್ಚಿನವು ನಿತ್ಯ ಹಸಿರಾಗಿದ್ದು ಕೆಲವು ಎಲೆಯುದುರಿಸುವ ಸಸ್ಯಗಳಾಗಿವೆ.
ಕಸ್ಟರ್ಡ್ (Custard) ಆಪಲ್ ಎಂದು ಸಾಮಾನ್ಯವಾಗಿ ಕರೆಯುವ ಹೆಸರು, ಹೇಗೆ ಬಂತು? ಈ ಕುತೂಹಲ ಸಹಜವೇ? ಕಸ್ಟರ್ಡ್ (Custard) ಪದದ ವಿಕಾಸವು ಫ್ರೆಂಚ್ ಮತ್ತು ಇಂಗ್ಲೀಶ್ ಭಾಷೆಗಳ ನಡುವಿನ ಚರ್ಚೆಗಳಲ್ಲಿ ನಡದೇ ಇದೆ. ಆದರೂ “ಕಸ್ಟರ್ಡ್” ಎಂಬ ಪದವು ಫ್ರೆಂಚ್ ಪದ “ಕ್ರೌಸ್ಟೇಡ್ (Croustade)” ನಿಂದ ಬಂದಿದ್ದು, ಅದು ಹೊರಮೈಯ ಕ್ರಸ್ಟ್ ಅಥವಾ ಶೆಲ್ ಅನ್ನು ಸೂಚಿಸುತ್ತದೆ, ಜೊತೆಗೆ ಇದು ಫ್ರೆಂಚ್ ಪಾಕಪದ್ಧತಿಗೆ ಸಂಬಂಧಿಸಿದ್ದಾಗಿದೆ. ಕಸ್ಟರ್ಡ್ ತರಹದ ಭಕ್ಷ್ಯಗಳ ಆರಂಭಿಕ ಪಾಕವಿಧಾನಗಳ ಮಧ್ಯಕಾಲೀನ ಫ್ರೆಂಚ್ ಅಡುಗೆ ಪುಸ್ತಕಗಳಲ್ಲಿ ಇದು ಕಂಡುಬರುತ್ತವೆ. ಜೊತೆಯಲ್ಲಿ, ಇಂಗ್ಲಿಷ್ ಜನರು ಕೂಡ ಕಸ್ಟರ್ಡ್ ಅನ್ನು ಒಪ್ಪಿ ಸ್ವೀಕರಿಸಿದ್ದಾರೆ. ಅಲ್ಲದೆ ಇದು ನವೋದಯದ ಕಾಲದ ಆಂಗ್ಲ ಭಾಷೆಯ ದೇಸಿ ಬೆಳವಣಿಗೆಯಲ್ಲಿ ನಾವು ಇಂದು ತಿಳಿದಿರುವ ಕಸ್ಟರ್ಡ್ಗೆ ಕಾರಣವಾಗಿದೆ. ಹಾಗಾಗಿ ಅಂತಹ ಬಗೆಯ ತಿರುಳು ಅನೊನಾ ಸಂಕುಲದ ಹಣ್ಣುಗಳಲ್ಲಿ ಇರುವುದೇ ಇವೆಲ್ಲವನ್ನೂ ಸಾಮಾನ್ಯವಾಗಿ ಕಸ್ಟರ್ಡ್ ಆಪಲ್ ಎಂದು ಕರೆಯುವಂತಾಗಿದೆ.
ಸೀತಾ ಫಲ ಹಾಗೂ ರಾಮ ಫಲ ಎರಡನ್ನೂ ಸಾಮಾನ್ಯವಾಗಿ ಕಸ್ಟರ್ಡ್ ಆಪಲ್ (Custard Apple) ಎಂದು ಕರೆಯುದುಂಟು. ಏಕೆಂದರೆ ಇವೆರಡರ ತಿರುಳು ಮೃದುವಾಗಿದ್ದು, ರಾಚನಿಕ ವಿನ್ಯಾಸದ ಅನುಭವ ಮತ್ತು ಸುವಾಸನೆಯು ಕಸ್ಟರ್ಡ್ ಅನ್ನು ಹೋಲುವುದರಿಂದ ಹಾಗೆ ಕರೆಯಲಾಗಿದೆ.
ಅನೊನಾ (Annona ) ಎಂಬ ಸಂಕುಲದ ಹೆಸರು ಮೂಲ ಕೆರೆಬಿಯನ್ ಭಾಷೆಯ ಹಣ್ಣು ಎಂಬರ್ಥದ ಟಿನೋ (Taino) ಎಂಬುದರಿಂದ ಹುಟ್ಟಿದೆ. ಅನೊನಾ ಸಂಕುಲದ ಬಹುಪಾಲು ಗಿಡ-ಮರಗಳ ಹಣ್ಣುಗಳು ಹೆಚ್ಚೂ-ಕಡಿಮೆ ಒಂದೇ ಬಗೆಯ ಗುಣಲಕ್ಷಣಗಳನ್ನು ಹೊಂದಿವೆ. ಬಹು ಮುಖ್ಯವಾಗಿ ಎಲ್ಲ ಹಣ್ಣುಗಳೂ ಸಾಮಾನ್ಯವಾಗಿ ಬೆರ್ರಿ-ತರಹದ ಸಿನ್ಕಾರ್ಪ್ಗಳು (Berry like Syncarps) ಅಥವಾ ಅನೇಕ ಸಂಯೋಜಿತ ಅಂಡಾಶಯ (Multiple Fused Ovaries) ಗಳಿಂದ ರೂಪುಗೊಂಡ ಸಮುಚ್ಚಯ ಹಣ್ಣುಗಳು (Aggregate Fruits) ಎಂದು ಸಸ್ಯ ವೈಜ್ಞಾನಿಕ ಪರಿಗಣಿಸಲಾಗುತ್ತದೆ. ಸೀತಾ ಫಲವಂತೂ ಒರಟು ಮೈಯಿಂದ ಮೃದುವಾದ ತಿರುಳಿಂದ ಮಧ್ಯೆ ಮಧ್ಯೆ ತುಂಬಿಕೊಂಡ ಬೀಜಗಳಿಂದ ಕೂಡಿರುತ್ತವೆ. ರಾಮ ಫಲವು ಹೃದಯದ ಆಕಾರದಲ್ಲಿದ್ದು ಬೀಜಗಳು ಸ್ವಲ್ಪ ಕಡಿಮೆ, ಅಲ್ಲದೆ ತಿರುಳು ಬೆಣ್ಣೆಯಂತೆ ಇರುತ್ತದೆ. ತೆಳುವಾದ ಸಿಪ್ಪೆಯು ಹೆಚ್ಚು ಕೆಂಬಣ್ಣವನ್ನು ಹೊಂದಿರುತ್ತದೆ.
ಲಕ್ಷ್ಮಣ-ಹನುಮಾನ್ ಫಲದಲ್ಲಂತೂ ಬೀಜಗಳು ಇನ್ನೂ ಕಡಿಮೆ. ಇವೆರಡೂ ಸೀತಾ ಫಲ ಹಾಗೂ ರಾಮ ಫಲಕ್ಕಿಂತಾ ದೊಡ್ಡವು. ಹೊರಮೈ ಒಂದು ರೀತಿಯಲ್ಲಿ ಚುಚ್ಚುವಂತೆ ಹುರುಪೆ ಅಥವಾ ಹೆಚ್ಚು ಒರಟಾದ ಕವಚದಂತೆ ಇರುತ್ತದೆ. ಲಕ್ಷ್ಮಣ ಫಲವು ಹೆಚ್ಚು ಜ್ಯೂಸಿಯಾಗಿರುತ್ತದೆ, ಸ್ವಲ್ಪ ಹುಳಿಯಾಗಿಯೂ ಇರುತ್ತದೆ. ಜೊತೆಗೆ ತಿರುಳು ಅಚ್ಚ ಬಿಳಿಯದು. ಹನುಮಾನ್ ಫಲವು ಈ ನಾಲ್ಕೂ ಪ್ರಭೇದಗಳಲ್ಲಿ ಅತೀ ದೊಡ್ಡ ಗಾತ್ರದ್ದು ಕಿಲೊಗ್ರಾಂಗಟ್ಟಲೆ ತೂಗುವ ಇದು ಕೆಲವೊಮ್ಮೆ 10 ಕಿಲೋ ತೂಗಿದ್ದೂ ಇದೆ. ಆದರೆ ಇದು ಸಿಹಿ ಕಡಿಮೆ. ಇದರಲ್ಲಿ ತುಸು ಹುಳಿಯೂ ಹೆಚ್ಚು.
ಅನೊನಾ ಸಂಕುಲದಲ್ಲಿ ಸುಮಾರು 8-10 ಪ್ರಭೇದಗಳನ್ನು ಕೃಷಿಗೆ ಒಳಪಡಿಸಿದ್ದು ವಿವಿಧ ದೇಶಗಳಲ್ಲಿ ಬೆಳೆಯುತ್ತಾರೆ. ಭಾರತದಲ್ಲಿ ಸೀತಾಫಲ ಹಾಗೂ ರಾಮಫಲ ಮಾತ್ರವೇ ಹೆಚ್ಚಿನ ಉತ್ಪಾದನೆಯನ್ನು ಹೊಂದಿವೆ. ಈ ಸಂಕುಲದಲ್ಲಿ ಸುಮಾರು 166 ಪ್ರಭೇದಗಳಿದ್ದು ಹೆಚ್ಚಾಗಿ ಅಮೆರಿಕದ ಉಷ್ಣವಲಯ ಹಾಗೂ ಆಫ್ರಿಕಾದ ನೆಲೆಯನ್ನು ಹೊಂದಿವೆ. ಈ ಸಸ್ಯ ಸಂಕುಲದ ಗಿಡ-ಮರಗಳ ಪೌಷ್ಟಿಕಾಂಶದ ಮೌಲ್ಯಗಳು ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್ಗಳು, ಅಮೈನೋ ಆಮ್ಲಗಳು ಮತ್ತು ವಿಟಮಿನ್ಗಳಿಂದ ಸಂಪದ್ಭರಿತವಾಗಿವೆ. ಮೂಲದಲ್ಲಿ ಅನೇಕ ಜನಪದೀಯ ತಿಳಿವಳಿಕೆಯಲ್ಲಿ ವಿವಿಧ ಔಷಧಗಳ ಉಪಯೋಗಗಳಿಂದ ಹೆಸರುವಾಸಿಯಾಗಿವೆ. ಇವುಗಳಲ್ಲಿ ಪ್ರಮುಖವಾಗಿ ಮಧುಮೇಹ ವಿರೋಧಿ, ಮೈಕ್ರೊಬಿಯಲ್ ವಿರೋಧಿ, ಜಂತು ನಿವಾರಕತೆ, ಆಂಟಿ ಆಕ್ಸಿಡೆಂಟ್, ಮಲೇರಿಯಾ ನಿರೋಧಕ, ಅಲ್ಲದೆ ಮತ್ತು ಕೀಟನಾಶಕ ಗುಣಗಳನ್ನೂ ಕಂಡುಕೊಳ್ಳಲಾಗಿದೆ. ಈ ಸಸ್ಯಗಳಲ್ಲಿನ ರಾಸಾಯನಿಕಗಳಾದ ಆಲ್ಕಲಾಯ್ಡ್ಗಳು, ಡೈಟರ್ಪೀನ್ಗಳು, ಅಸಿಟೋಜೆನಿನ್ಗಳು ಮತ್ತು ಸೈಕ್ಲೋಪೆಪ್ಟೈಡ್ಗಳು ಇಂತಹಾ ವೈವಿಧ್ಯತೆಯನ್ನು ತಂದುಕೊಟ್ಟಿವೆ.
ಸೀತಾಫಲವನ್ನು ಅನೇಕರು ತಿಂದೇ ಇರುತ್ತಾರೆ. ರಾಮಫಲವನ್ನೂ ಕೆಲವರು ತಿಂದಿರಬಹುದು. ಆದರೆ ಲಕ್ಷ್ಮಣ ಫಲ ಹಾಗೂ ಹನುಮಾನ್ ಫಲವನ್ನು ತಿಂದವರೂ ಕಡಿಮೆಯೇ, ನೋಡಿದವರೂ ಕಡಿಮೆಯೇ! ಈ ನಾಲ್ಕೂ ಒಂದೇ ಸಂಕುಲದ ಬೇರೆ, ಬೇರೆ ಪ್ರಭೇದಗಳು. ಸೀತಾಫಲ ಹಾಗೂ ರಾಮ ಫಲ ಎರಡೂ ಹೆಚ್ಚಿ ಸಿಹಿಯಾಗಿ ಇರುವುದರಿಂದ ಅವುಗಳನ್ನು ಸಕ್ಕರೆ ಸೇಬು ಅಥವಾ ಸ್ವೀಟ್ಸಾಪ್ (Sugar apples or Sweetsops) ಎಂದೂ ಹೆಚ್ಚು ಹುಳಿಯಿರುವ ಲಕ್ಷ್ಮಣ ಫಲ ಹಾಗೂ ಹನುಮಾನ್ ಫಲ ಎರಡನ್ನೂ ಸವರ್ಸಾಪ್ (Soursop) ಎಂದೂ ಕರೆಯುತ್ತಾರೆ. ಇವುಗಳ ಇತರೆ ವಿವಿಧತೆಯ ಕುರಿತು ಮುಂದೆ ನೋಡೋಣ.

ಸೀತಾ ಫಲ

ಸೀತಾ ಫಲವು ಅನೊನಾ ಸ್ಕ್ಯಾಮೊಸಾ (Annona squamosa ) ಎಂಬ ವೈಜ್ಞಾನಿಕ ಹೆಸರಿನದಾಗಿದ್ದು ಕೆರೆಬಿಯನ್ ದ್ವೀಪಗಳ ತವರಿನದಾಗಿದೆ. ಅನೊನಾ ಸ್ಕ್ವಾಮೋಸಾ (Annona squamosa) ದಲ್ಲಿನ ಸ್ಕ್ವಾಮೋಸಾ ಪದವು ಲ್ಯಾಟಿನ್ ಪದ ಸ್ಕ್ವಾಮೋಸಸ್ ನಿಂದ ಬಂದಿದೆ, ಇದರ ಅರ್ಥ “ಚಿಪ್ಪುಗಳುಳ್ಳ” “ಚಿಪ್ಪುಗಳಿಂದ ಆವೃತವಾಗಿದೆ” ಎಂದಾಗಿದೆ. ಅಂದರೆ ಕಾಯಿಯ ಸಿಪ್ಪೆಯ ಕವಚವು ಚಿಪ್ಪುಗಳಂತೆ ಇರುವುದರಿಂದ ಹಾಗೆ ಹೆಸರು ಬಂದಿದೆ. ಇದು ಕಾಯಿಯಾಗಿದ್ದಾಗ ಅಪ್ಪಟ ಹಸಿರು ಬಣ್ಣದಾಗಿದ್ದು, ಹಣ್ಣಾಗುತ್ತಲೇ ಮಾಸಲು ಹಸಿರು ಹೊದ್ದ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದರ ಸಿಪ್ಪೆಯು ದಪ್ಪವಾಗಿದ್ದು, ಹುರುಪೆಯಾಗಿರುತ್ತದೆ. ಇದೊಂದು ಅಗ್ರಿಗೇಟ್ ಹಣ್ಣು (ಕೂಡಿಕೊಂಡು ಹುಟ್ಟಿದ ಹಣ್ಣು) ಆದ್ದರಿಂದ ಅನೇಕ ಹೂವುಗಳ ಹಣ್ಣುಗಳು ಒಂದಾಗಿ ಕೂಡಿಕೊಂಡಿರುತ್ತವೆ. ಇವುಗಳು ಗಾತ್ರದಲ್ಲಿ ಚಿಕ್ಕವು ಹಾಗೂ 100-200 ಗ್ರಾಂ ತೂಕವನ್ನು ಹೊಂದಿರುತ್ತವೆ.

ಸೀತಾ ಫಲವು ಹೃದಯದ ಆರೋಗ್ಯಕ್ಕೆ ಸಹಾಯವಾಗುವ ಪೊಟ್ಯಾಸಿಯಂ ಮತ್ತು ಮ್ಯಾಗ್ನೀಸಿಯಂಗಳಿಂದ ಸಂಪದ್ಭರಿತವಾಗಿದೆ. ಜೊತೆಗೆ ಕಣ್ಣಿನ ಆರೋಗ್ಯಕ್ಕೂ ಸಹಯಾವಾಗುವ ವಿಟಮಿನ್-ಎ ಮತ್ತು ಸಿ -ಗಳಿಂದ ತುಂಬಿಕೊಂಡಿದೆ.
ರಾಮ ಫಲ

ರಾಮ ಫಲವು ಅನೊನಾ ರೆಟಿಕ್ಯುಲೇಟಾ (Annona reticulata ) ಎಂಬ ಪ್ರಭೇದ. ಇದರ ತವರೂರು ಕೆರೆಬಿಯನ್ ದ್ವೀಪಗಳು ಹಾಗೂ ಮಧ್ಯ ಅಮೆರಿಕ ದೇಶಗಳು. ಅನೊನಾ ರೆಟಿಕ್ಯುಲೇಟಾದ ರೆಟಿಕ್ಯುಲೇಟಾ (Reticulata) ಪದವ ಬಲೆಯಂತಹಾ ಅರ್ಥವು ಮೂಲ ಲ್ಯಾಟಿನಿಂದಲೇ ವಿಕಾಸವಾಗಿದೆ. ಇದರ ಸಿಪ್ಪೆಯು ಒಂದು ರೀತಿಯ ಬಲೆಯಂತೆ ಕಾಣುವುದರಿಂದ ಈ ಪ್ರಭೇದವನ್ನು ಹಾಗೆ ಕರೆಯಲಾಗಿದೆ. ಇದರ ಹಣ್ಣು ಸಾಮಾನ್ಯವಾಗಿ ಹೆಚ್ಚು ಸಿಹಿಯಾಗಿದ್ದರೂ ಸೀತಾ ಫಲದಷ್ಟು ಸ್ವಾದಭರಿತವಲ್ಲ. ಅಲ್ಲದೆ ಇದರ ತಿರುಳು ಹೆಚ್ಚು ಮೃದು, ಕಾಯಿಯ ಸಿಪ್ಪೆ ತುಂಬಾ ತೆಳು. ಹಣ್ಣದಾಗ ಇದರ ಬಣ್ಣವು ಕೆಂದಾಗಿ ಅಥವಾ ಮಾಸಲು ಪಿಂಕ್ ಆಗಿರುತ್ತದೆ. ಇವುಗಳ ಹಣ್ಣಿನ ಹೊರ ಕವಚವು ಸೀತಾಫಲದಂತೆ ಹುರುಪೆಯಾಗಿರದೆ, ಸ್ವಲ್ಪವೇ ಒರಟಾಗಿರುತ್ತದೆ.
ರಾಮ ಫಲವು ಹೃದಯದ ಆರೋಗ್ಯಕ್ಕೆ ಜೊತೆಗೆ ಸಹಿ ಹೆಚ್ಚೇ ಇರುವುದರಿಂದ ಶಕ್ತಿದಾಯಿಕವಾದ ಹಣ್ಣು. ನಮ್ಮ ರಕ್ತದ ಕೊಲೆಸ್ಟೆರಾಲ್ ಅನ್ನು ಮಿತಿಯಾಗಿರಿಸುವ ವಿಟಮಿನ್ ಸಿ, ನಾರಿನಾಂಶ ಜೊತೆಗೆ ಹೆಚ್ಚಿನ ಕಬ್ಬಿಣಾಂಶವನ್ನೂ ಹೊಂದಿದೆ.
ಲಕ್ಷ್ಮಣ ಫಲ

ಲಕ್ಷ್ಮಣ ಫಲವನ್ನು ವೈಜ್ಞಾನಿಕವಾಗಿ ಅನೊನಾ ಚೆರಿಮೊಲಾ (Annona cherimola) ಎಂದು ಕರೆಯುತ್ತಾರೆ. ಇದು ಮೂಲತಃ ಈಕ್ವೆಡಾರ್ ಮತ್ತು ಪೆರು ದೇಶಗಳದ್ದು. ಪ್ರಭೇದದ ಹೆಸರಾದ ಚೆರಿಮೊಲಾ ಪದವು ದಕ್ಷಿಣ ಅಮೆರಿಕದ ಸ್ಥಳೀಯ ಕ್ವೆಂಚಾ ಬುಡಕಟ್ಟು ಜನರ ಭಾಷೆಯ ಚೆರಿಮಯಾ (Chirimuya) ದಿಂದ ವಿಕಾಸವಾಗಿದೆ. ಇದರ ಅರ್ಥ “ತಂಪಾದ ಬೀಜಗಳು” ಎಂದಾಗಿದ್ದು, ತುಂಬಾ ಶೀತ ವಾತಾವರಣದಲ್ಲೂ ಬೀಜಗಳು ಮೊಳೆತು ಗಿಡವಾಗುತ್ತಿದ್ದನ್ನು ಕಂಡು ಹೀಗೆ ಕರೆಯುತ್ತಿದ್ದರು. ಈ ಪ್ರಭೇದದ ಹಣ್ಣುಗಳು ಗಾತ್ರದಲ್ಲಿ ಸೀತಾಫಲ ಹಾಗೂ ರಾಮಫಲಕ್ಕಿಂತಾ ತುಸು ದೊಡ್ಡವು ಹಾಗೂ ಹೊರ ಮೈ ಹೆಚ್ಚು ಒರಟಾಗಿರುತ್ತದೆ. ರುಚಿಯಲ್ಲೂ ಮೇಲಿನ ಎರಡಕ್ಕಿಂತಲೂ ಸಿಹಿ ಕಡಿಮೆ ಸ್ವಲ್ಪ ಹುಳಿಯೂ ಬೆರೆತಿರುತ್ತದೆ.
ಹನುಮಾನ್ ಫಲ

ಹನುಮಾನ್ ಫಲವನ್ನು ಅನೊನಾ ಮುರಿಕೆಟ್ (Annona muricate) ಎಂದು ಸಸ್ಯವೈಜ್ಞಾನಿಕ ಹೆಸರಿಸಿದ್ದಾರೆ. ಇದರ ತವರು ನೆಲ ಮೆಕ್ಸಿಕೊ ದೇಶ. ಮುರಿಕೆಟ್ (Muricate) ಪದವು ಕೂಡ ಲ್ಯಾಟಿನ್ ಮೂಲದ್ದೇ! ಸಣ್ಣ, ಮೊನಚಾದ ತುದಿಯುಳ್ಳ ಎಂಬರ್ಥದಲ್ಲಿ ಇದು ಆಂಗ್ಲ ಭಾಷೆಯನ್ನು ಹೊಕ್ಕಿದೆ. ಹನುಮಾನ್ ಫಲದ ಸಿಪ್ಪೆಯ ಮೊನಚಾದ ಮೇಲ್ಮೈಯನ್ನು ಹೊಂದಿರುವುದರಿಂದ ಈ ಹೆಸರು. ಹಣ್ಣುಗಳು ದಟ್ಟ ಹಸಿರು ಬಣ್ಣವನ್ನು ಹೊಂದಿದ್ದು, ಮಾಗಿದಂತೆ ತಿಳಿ ಹಸಿರನ್ನು ಪಡೆಯುತ್ತವೆ. ಇದರ ರುಚಿಯು ಅನಾನಸ್ ಮತ್ತು ಸ್ಟ್ರಾ ಬೆರ್ರಿ ಹಣ್ಣುಗಳ ಮಿಶ್ರಣದಂತಿದ್ದು ಸಿಹಿ ಹಾಗೂ ಹುಳಿಯ ಬೆರೆಕೆಯಂತೆ ಇರುತ್ತದೆ.ಇದರ ಆಹಾರಂಶದ ಪ್ರಾಮುಖ್ಯತೆಯು ಅಂಟಿಆಕ್ಸಿಡೆಂಟ್ಗಳು, ಸಿ-ವಿಟಮಿನ್ ಮತ್ತು ಕೆಲವು ಅಮೈನೋ ಆಮ್ಲಗಳಿಂದ ಕೂಡಿರುತ್ತದೆ. ಹೆಚ್ಚು ಹುಳಿಯ ರುಚಿಯುಳ್ಳದ್ದು, ಹಾಗಾಗಿ ಜ್ಯೂಸ್, ಸುವಾಸಿತ ಸ್ಮೂತಿ (Smoothies)ಗಳು ಐಸ್ ಕ್ರೀಮ್ ಮುಂತಾದವುಗಳಲ್ಲಿ ಜೊತೆಗೆ ಔಷಧೀಯ ಬಳಕೆಯಲ್ಲಿ ಹೆಚ್ಚು ಜನಪ್ರಿಯವಾದದ್ದು.

ಕೆಲವು ಕಾರಣಗಳಿಂದ ಯಾವುದಾದರೂ ಒಂದು ಪ್ರಭೇದಕ್ಕೆ ಹೆಚ್ಚಿನ ಜನಪ್ರಿಯತೆಯನ್ನು ಇದ್ದಕ್ಕಿದ್ದಂತೆ ಆರೋಪಿಸಿ ಹಂಚುತ್ತಾ ಅವುಗಳ ಮಾರುಕಟ್ಟೆಯ ಬೆಲೆಯನ್ನು ಹೆಚ್ಚಿಸುವುದು ಸಹಜವಾಗಿ ಕಾಣುತ್ತದೆ. ಇದು ಸೀತಾ ಫಲವನ್ನು ಹೊರತು ಪಡಿಸಿ ಇತರೇ ಮೂರೂ ಹಣ್ಣುಗಳಿಗೆ ಆಗಾಗ್ಗೆ ಹೇಳುವುದುಂಟು. ಒಟ್ಟಾರೆ ಎಲ್ಲವೂ ಹೆಚ್ಚಿನ ಆಂಟಿಆಕ್ಸಿಡೆಂಟ್ಗಳಿಂದಲೂ ವಿಟಮಿನ್-ಸಿ ಯಿಂದಲೂ ಕೆಲವು ಲವಣಾಂಶಗಳಿಂದಲೂ ತುಂಬಿಕೊಂಡಿದ್ದು ಆಯಾ ಸ್ಥಳಗಳಲ್ಲಿ, ಕಾಲದಲ್ಲಿ ಸಿಗುವ ಹಣ್ಣುಗಳ ಸೇವನೆಯು ನಿಜಕ್ಕೂ ಲಾಭಕರವಾದದ್ದು.
(ಕಡೆಯಲ್ಲಿ ತಮಾಷೆಯಾದರೂ ಒಂದು ಮಾತು. ಸೀತಾ ಫಲ ಹೆಚ್ಚು ಜನಪ್ರಿಯ ಮತ್ತು ಉತ್ಪಾದನೆಯೂ ಹೆಚ್ಚು. ನಂತರದ ರಾಮ ಫಲವನ್ನು “ಉರ್ಮಿಳಾ ಫಲ” ಎಂದು ಕರೆಯಬೇಕಿತ್ತು ಎಂದು ನನ್ನ ಬಹು ಕಾಲದ ಕೃಷಿಕಾಲೇಜಿನ ಗೆಳೆಯ ಅಮರ್ ೮೦ರ ದಶಕದಿಂದಲೂ ವಾದಿಸುತ್ತಲೇ ಬಂದಿದ್ದಾರೆ. ಅವರ ಈ ಮಾತಿನಿಂದ ನನಗೆ ಈಗ ಅನ್ನಿಸುತ್ತಿರುವುದು, ಇನ್ನೆರಡಕ್ಕೂ ಒಂದಕ್ಕೆ “ಶಬರಿ ಫಲ” ವೆಂದೂ ಮತ್ತೊಂದಕ್ಕೆ “ಮಂಡೋದರಿ ಫಲ”ವೆಂದೂ ಕರೆದು ರಾಮಾಯಣ ಕಾವ್ಯದ ಬಹು ಪ್ರಮುಖ ಸ್ತ್ರೀಯರನ್ನು ಗೌರವಿಸಬಹುದಾಗಿತ್ತು! ಏನಂತೀರಿ?)
ಹೆಚ್ಚಿನ ಓದಿಗೆ
Jianwei Chen, Yong Chen and Xiang Li. 2011. Beneficial Aspects of Custard Apple (Annona squamosa L.) Seeds. In Nuts & Seeds in Health and Disease Prevention (Eds. Victor R. Preedy, Ronald Ross Watson and Vinood B. Patel) Academic Press. https://doi.org/10.1016/B978-0-12-375688-6.10052-0
Soheil Zorofchian Moghadamtousi, Mehran Fadaeinasab, Sonia Nikzad, Gokula Mohan, Hapipah Mohd Ali and Habsah Abdul Kadir. 2015. Annona muricata (Annonaceae): A Review of Its Traditional Uses, Isolated Acetogenins and Biological Activities. Int. J. Mol. Sci. 2015, 16, 15625-15658; doi:10.3390/ijms160715625

ಎಂದಿನಂತೆ ನಿಮ್ಮದು ಸುಂದರ ನಿರೂಪಣೆ ಹಾಗೂ ವೈಜ್ಞಾನಿಕ ಮಾಹಿತಿಗಳಿಂದ ತುಂಬಿದೆ. ಹಣ್ಣುಗಳ ಬಗ್ಗೆ ಬರೆದಿರುವದರಿಂದ, ಎಲೆಗಳ ಉಪಯೋಗ ಕೊಟ್ಟಿಲ್ಲ ಎಂದು ಕಾಣಿಸುತ್ತದೆ. ಹೀಗೇ ಬೆಳಕು ಚೆಲ್ಲುತ್ತೀರಿ! Thanks 🙏