ಪಾರ್ಥೇನಿಯಂ, ಎಂಬ ಗಿಡವನ್ನು ವರ್ಣಿಸಿ, ಅದರ ವಿವರಗಳನ್ನು ಕೊಟ್ಟು ಪರಿಚಯಿಸಬೇಕಾದ ತೊಂದರೆ ಇಲ್ಲ. ಅಷ್ಟರ ಮಟ್ಟಿಗೆ ಇದು ಪರಿಚಿತವಾಗಿದೆ. ಅದರ ಹೂವು, ಎಲೆ, ಕಾಂಡ ಹೀಗೆ ಹಾಗೇ ಎಂಬ ಯಾವ ವಿವರಣೆಯ ಶ್ರಮ ಕೊಡುವುದನ್ನು ತಪ್ಪಿಸಿ ಸಸ್ಯಯಾನದಲ್ಲಿ ಹೇಳಬೇಕಿರುವ ಸಸ್ಯ. ಅದೂ ಈ ಕೊರೊನಾ ಕಾಲದಲ್ಲಿ ಒಂದು ಬಗೆಯಲ್ಲಿ ಸಸ್ಯವಾಗಿ ಸಾಂಕ್ರಾಮಿಕತೆಯನ್ನು ತನ್ನೊಳಗೆ ಹೊತ್ತ ವಿಚಿತ್ರ ಹಾಗೂ ಬಲಿಷ್ಠ ಗಿಡ ಪಾರ್ಥೇನಿಯಂ ಹಿಸ್ಟೆರೊಪೊರಸ್ (Parthenium hysterophorus). ಹಾಗೆ ನೋಡಿದರೆ ಇದು ತುಂಬಾ ಮರ್ಯಾದಸ್ಥ ಮನೆತನದ ಗಿಡ. ಸೇವಂತಿಗೆಯ ಕುಟುಂಬದ ಸದಸ್ಯ. ಸೂರ್ಯಕಾಂತಿಯ ಸಂಬಂಧಿ. ಆದರೂ ಖ್ಯಾತಿ ಮಾತ್ರ ಒಂದು ಕೆಟ್ಟ ಕಳೆಯಾಗಿ!

ಹಾಗಾಗಿ ಇಂದು ಮಾಮೂಲಿ ಕಥನಗಳ ಸಂದರ್ಭಗಳನ್ನು ಬಿಟ್ಟು, ಬೇರೊಂದು ಮಾರ್ಗದಿಂದ ಈ ಸಸ್ಯವನ್ನು ಬೆನ್ನು ಹತ್ತಿದ ಬಗೆಯಿಂದ ನೋಡೋಣ. ಇದರ ವ್ಯಾಪ್ತಿ ಎಷ್ಟು ಆಕ್ರಮಣಕಾರಿ ಎಂದರೆ, ಖಾಲಿಯಿದ್ದ ನೆಲವನ್ನೆಲ್ಲಾ ಕಬಳಿಸುವ ಜಾಯಮಾನ. ಅದಕ್ಕಾಗಿ ಒಂದು ಕಾಲದ ಚುನಾವಣೆಯಲ್ಲಿ ಆಕ್ರಮಿಸುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಹೋಲಿಸಿ “ಕಾಂಗ್ರೆಸ್ ಗಿಡ” ಎಂದು ಕರೆದರು. ಕಾಂಗ್ರೆಸಿಗೆ ಬೈದಂತೆಯೂ ಹಾಗೂ ಇದರ ವ್ಯಾಪ್ತಿಯನ್ನು ವಿವರಿಸಿದಂತೆಯೂ ತಮಗಿದ್ದ ಆಕ್ರೋಶವನ್ನು ವ್ಯಕ್ತಪಡಿಸಿದರು. ಇದರ ಎಳೆಯ ಎಲೆಗಳು ತುಸು ಕ್ಯಾರೆಟ್ಟಿಗೆ ಹೋಲುತ್ತಿದ್ದುದರಿಂದ ಇದನ್ನು ಕ್ಯಾರೆಟ್ ಹುಲ್ಲು ಎಂದೂ ಕರೆದಿದ್ದಾರೆ. ಕರೋನಾ ಕಾಲದಲ್ಲಿ ಇದನ್ನು ಉದಾಹರಣೆಯಾಗಿ ಸಸ್ಯಯಾನದಲ್ಲಿ ಪ್ರಸ್ತಾಪಿಸಲು ಕಾರಣ, ಇದು ಹಬ್ಬಿಕೊಂಡ ಬಗೆ, ಹಾಗೆಯೇ ಇದರ ನಿರ್ಮೂಲನೆಯ ಕುರಿತಂತಹಾ ನಿಜವಾದ ಹುಡುಕಾಟದ ಜೊತೆಗೆ ಒಂದಷ್ಟು ನಾಟಕಗಳು. ಇದರ ಇತಿಹಾಸ ಉದ್ದಕ್ಕೂ ಹಬ್ಬಿಕೊಂಡ ವಿಚಿತ್ರ ಸಂಗತಿಗಳು.
ಪಾರ್ಥೇನಿಯಂ ಎಲ್ಲಿಂದ ಮತ್ತು ಹೇಗೆ ಬಂತು ಯಾರಿಗಾದರೂ ಕೇಳಿದರೆ ಸುಲಭವಾಗಿ ಅಮೆರಿಕದಿಂದ! ಅವರು ಕಳಿಸುತಿದ್ದ ಗೋಧಿಯಿಂದ, ಎಂಬ ಉತ್ತರ ಸಹಜ! ಭಾರತ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಉಪಹಾರಕ್ಕೆ 50-60ರ ದಶಕದಲ್ಲಿ ಅಮೆರಿಕವು “ಶಾಂತಿಗಾಗಿ ಆಹಾರ” ಅಥವಾ ಪಿ.ಎಲ್ 480 ಸ್ಕೀಮ್ (US PL 480 scheme- “Food for Peace”) ಮೂಲಕ ಕಳಿಸುತ್ತಿದ್ದ ಗೋಧಿ ಪೂರೈಕೆಯನ್ನು ಮುಂದೆ ೭೦ರ ದಶಕದಲ್ಲಿ ವಿರೋಧಿಸುವ ಸಲುವಾಗಿ ಜೊತೆಗೆ ಕಾಂಗ್ರೆಸ್ಸನ್ನೂ ಸೇರಸಲೆಂದೆ ಹುಟ್ಟಿಕೊಂಡ ಸುಳ್ಳುಗಳಿವು. ಅದನ್ನು ಡಂಗೂರ ಸಾರಿದ್ದು ಆಗಿನ ಮಾಧ್ಯಮಗಳು. ಒಂದು ಅದಕ್ಕೆ ಕಾಂಗ್ರೆಸ್ ಗಿಡ ಎಂದು ಕರೆದು ಅದನ್ನು ಅಮೆರಿಕಾ ಹಬ್ಬಿಸಿದ್ದು ಎಂದು ಸಾರಿದ್ದು! (ವಿಜ್ಞಾನಕ್ಕೆ ಹಾಗೂ ಅದರ ಸಂವಹನಕ್ಕೆ ಮಾಧ್ಯಮಗಳಿಂದಾದ ಅಧ್ವಾನಗಳು ಸಾವಿರಾರು)
ಆದರೆ ವಾಸ್ತವವಾಗಿ ಇದನ್ನು 1814ರಲ್ಲೇ ಭಾರತದ ಸಸ್ಯವಿಜ್ಞಾನ ಪಿತಾಮಹ “ವಿಲಿಯಂ ರಾಕ್ಸ್‌ಬರ್ರಾ” ಅವರು ತಮ್ಮ “ಹಾರ್ಟಸ್ ಬೆಂಗಾಲೆನ್ಸಿಸ್” ಪುಸ್ತಕದಲ್ಲಿ ದಾಖಲಿಸಿದ್ದಾರೆ. ಹಾಗಾಗಿ ಬಹುಪಾಲು ವಿಜ್ಞಾನ ವರದಿಗಳಲ್ಲೂ ದಾಖಲಾಗಿದ್ದ 1951ರಲ್ಲಿ ಭಾರತಕ್ಕೆ ಬಂದಿದೆ ಎಂಬುದು ಇದರ ಬಗೆಗೆ ಹುಟ್ಟಿಕೊಂಡ ಸಂಗತಿಯಷ್ಟೇ. ಅನಂತರ ಇದು ದೇಶವ್ಯಾಪಿ ಕಳೆಯಾದ ಮೇಲೆ ಇದಕ್ಕೆ ಸೇರಿಸಿ ಹಬ್ಬಿಸಿದ ಸಂಗತಿ ಅಮೆರಿಕದ ಗೋಧಿಯ ಜೊತೆಗೆ ಅದನ್ನೆ ಬೆರೆಸಿ ಸೇರಿಸಿದ್ದು. (ಈಗ ಕರೋನ ಕಾಲದಲ್ಲಿ ಹಬ್ಬುತ್ತಿರುವ ಸಂಗತಿಗಳಿಗೆ ಸಮನಾಂತರವಾಗಿ ಆಲೋಚಿಸಬೇಕಾದ್ದು) ಅಲ್ಲದೆ ಒಮ್ಮೆ ಸಾಂಕ್ರಾಮಿಕವಾದ ಮೇಲೆ ಅದರ ನಿರ್ಮೂಲನೆ ಇತ್ಯಾದಿಗಳು ಸಂಶೋಧನೆಗಳು ಆರಂಭವಾದವು. ಇವೆಲ್ಲವೂ 80ರದಶಕದ ಸಂಗತಿಗಳು. ಅದರ ವಿವರಗಳು ಹೀಗಿವೆ.

ಆರಂಭದಲ್ಲಿ ಸಂಶೋಧಕರು ಎತ್ತಿದ ಪ್ರಶ್ನೆಗಳು ಸಾಂದರ್ಭಿಕ ಹಾಗೂ ಸೂಕ್ಷ್ಮವೇ ಆಗಿದ್ದವು. ಹೇಗೆಂದರೆ ಪಾರ್ಥೇನಿಯಂ ನಮ್ಮದಲ್ಲ ಅದರ ತವರೂರು ಮೆಕ್ಸಿಕೊ ಮತ್ತು ಮಧ್ಯ ಅಮೆರಿಕ. ಹಾಗಾದರೆ ಅಲ್ಲಿ ಇದು ಹೇಗೆ ನಿಯಂತ್ರಣದಲ್ಲಿದೆ ಎಂಬ ಪ್ರಶ್ನೆಗೆ ಉತ್ತರವಾಗಿ ಸಿಕ್ಕದ್ದು ಮೆಕ್ಸಿಕನ್ ಜೀರುಂಡೆ (Zygogramma bicolorata). ಸರಿ ಅಲ್ಲಿಂದ ಅದನ್ನು ಅಮದು ಮಾಡಿ 1984ರಲ್ಲಿ ಬೆಂಗಳೂರಿನ ಸುತ್ತಮುತ್ತ ಪರಿಚಯಿಸಲಾಯಿತು. ಈ ಜೀರುಂಡೆಯು ಪಾರ್ಥೇನಿಯಂನ ಎಲೆಗಳನ್ನು ತಿಂದು ನಿಯಂತ್ರಿಸುತ್ತಿತ್ತು. ಅದರ ಬಗೆಗೆನ ಸಂಶೋಧನೆಗಳ ತೀವ್ರತೆ ಎಷ್ಟಿತ್ತು ಎಂದರೆ ಏಪ್ರಿಲ್, 2009ರ ವೇಳೆಗೆ ಈ ಬಗೆಯ ಪಾರ್ಥೇನಿಯಂ ನಿಯಂತ್ರಣದ ಸಂಶೋಧನಾ ಲೇಖನಗಳ ಸಂಖ್ಯೆ 574 (ಬಹುಪಾಲು ಭಾರತದ ವರದಿಗಳು). ಇದರ ಜೊತೆಗೆ ಪಾರ್ಥೇನಿಯಂ ಜೊತೆಗೆ ಕಳೆಯಾಗಿಯೇ ಸ್ಪರ್ಧಿಸಬಲ್ಲ ಇತರೇ ಸಸ್ಯಗಳ ಹುಡುಕಾಟವೂ ನಡೆದಿತ್ತು. ಅಂದರೆ ಪೈಪೋಟಿ ಸಸ್ಯಗಳು. ಅದರಲ್ಲಿ ಸಿಕ್ಕ ಸಸ್ಯ ತಂಗಡಿ ಅಥವಾ ಸೀಮೆ ತಂಗಡಿ (Cassia sericea). ಇದರ ಜೊತೆಗೂ ಸಾಕಷ್ಟು ಪ್ರಬಂಧಗಳು, ಪಿ.ಎಚ್.ಡಿಗಳೂ ಸೃಷ್ಟಿಯಾದವು. ಮೊಟ್ಟ ಮೊದಲ ಪಾರ್ಥೇನಿಯಂ ನಿರ್ವಹಣೆಯ ಅಂತರರಾಷ್ಟ್ರೀಯ ಸಮ್ಮೇಳನವೂ ಧಾರವಾಡದಲ್ಲೇ ನಡೆಯಿತು. ಆದರೆ ಕೊನೆಗೂ ಜಯಿಸಿದ್ದು ಪಾರ್ಥೇನಿಯಂ ಗಿಡವೇ! ಈಗಲೂ ಎಲ್ಲೆಲ್ಲೂ ಇರುವ ಏಕೈಕ ಗಿಡ. ಪಾರ್ಥೇನಿಯಂ.

ಅದರ ಜೊತೆಗೆ ಪೈಪೋಟಿಯ ಗಿಡಗಳ ಹುಡುಕಿದರು, ಅದನ್ನು ಕಾಡಿ ಕೊಲ್ಲುವ ಶಿಲೀಂದ್ರಗಳ ತಡಕಾಡಿದರು. ತಿಂದು ಬದುಕುವ ಜೀರುಂಡೆಯನ್ನು ಹೊರದೇಶದಿಂದ ಬೇಡಿ ತಂದರು. ಅಷ್ಟೇ ಆಗಿದ್ದರೆ ಸುಮ್ಮನಿರಬಹುದಿತ್ತು. ಈಗಲೂ ಪ್ರತೀ ವರ್ಷ ಆಗಸ್ಟ್ ತಿಂಗಳಲ್ಲಿ “ಪಾರ್ಥೇನಿಯಂ ನಿಯಂತ್ರಣ ಸಪ್ತಾಹ ಅಥವಾ ದಿನ” ಹೀಗೆ ಏನಾದರೂ ಒಂದು ರಿಚ್ಯುವಲ್ ವಿಜೃಂಭಣೆಯಿಂದ ದೇಶದ ಎಲ್ಲಾ ಜಿಲ್ಲೆಗಳಲ್ಲೂ ನಡೆಯುತ್ತದೆ. ವಿಪರ್ಯಾಸವೆಂದರೆ ನಾನೂ ಹಲವು ರಿಚ್ಯುವಲ್‌ಗಳಲ್ಲಿ ಪುರೋಹಿತನಾಗಿ ಭಾಗವಹಿಸಿದ್ದೇನೆ. ಗಂಟೆ, ದೀಪ-ಧೂಪದ ಸದ್ದು ಕಡಿಮೆಯಾಗುತ್ತಿದ್ದಂತೆ ಮತ್ತೆ ದುತ್ತನೆ ಎದ್ದು ಬರುವ ಪಾರ್ಥೇನಿಯಂ ಮಾತ್ರ ಹೀರೋ ಸ್ಥಾನವನ್ನು ಬಿಟ್ಟುಕೊಟ್ಟಿಲ್ಲ. ಕಳೆದ 2007-8ರಿಂದ ಫ್ಲೆಕ್ಸ್ (ಪ್ಲಾಸ್ಟಿಕ್) ಬ್ಯಾನರ್ ಗಳು ಜಾರಿ ಇವೆ ಎಂದು ಲೆಕ್ಕ ಹಾಕಿದರೂ ಈ ಹತ್ತು-ಹನ್ನೆರಡು ವರ್ಷಗಳಲ್ಲಿ ಪ್ರತೀ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರ, ಕೃಷಿ/ತೋಟಗಾರಿಕಾ ಇಲಾಖೆಯ ಪ್ರತೀ ಜಿಲ್ಲೆಗೆ, ಪ್ರತೀ ವರ್ಷ ಬಳಸುವ ಕನಿಷ್ಠ 2-4 ಈ ಪ್ಲಾಸ್ಟಿಕ್ ಬ್ಯಾನರ್‌ಗಳಂತೆ ಒಟ್ಟು ಸಾವಿರಾರು ಬ್ಯಾನರ್‌ಗಳು ಮಾತ್ರ ಇನ್ನೂ ಕೊಳೆತಿಲ್ಲ. ಈ ಸಂಸ್ಥೆಗಳಿಗೆ ಬ್ಯಾನರ್ ಕಟ್ಟಿಕೊಂಡು ಒಂದಷ್ಟು ಪಾರ್ಥೇನಿಯಂ ಗುಡ್ಡೆ ಹಾಕಿಕೊಂಡು ಫೋಟೊ ತೆಗೆಸಿಕೊಂಡು ಹಂಚುವುದು ಮಾತ್ರ ನಿಂತಿಲ್ಲ. ಆದರೆ ಪಾರ್ಥೇನಿಯಂ ಮಾತ್ರ ಎಲ್ಲಾ ಕಡೆ ವಿಜೃಂಭಿಸುತ್ತಲೇ ಇದೆ.


ಪಾರ್ಥೇನಿಯಂ ಸೇವಂತಿಗೆ ಕುಟುಂಬವಾದ ಅಸ್ಟೆರೆಸಿಯೆಗೆ ಸೇರಿದ್ದು. ಈಗಾಗಲೆ ನಿಮಗೆ ತಿಳಿದಂತೆ ಇದರ ತವರೂರು ಮಧ್ಯ ಅಮೆರಿಕ. ಭಾರತದಲ್ಲಿ 1814ಕ್ಕೂ ಮೊದಲೇ ಇದು ಇಲ್ಲಿ ನೆಲೆಯಾಗಿದೆ. ಆದರೆ 1950ರವರೆಗೂ ಏಕೆ ಕಳೆಯಾಗಿ ಕಾಡಿಲ್ಲ ಎಂದು ಯಾವ ವೈಜ್ಞಾನಿಕ ವರದಿಗಳಲ್ಲೂ ಕುತೂಹಲವಿರಲಿ, ಪ್ರಶ್ನೆಗಳೂ ಹುಟ್ಟದ್ದಕ್ಕೆ ಚರ್ಚೆಗಳು ಭಾರತೀಯವಾಗಿ ನಡೆದಿಲ್ಲ. ಆದರೆ ಅದು ಹಬ್ಬಿದ ನಂತರ ಸಾಂಕ್ರಾಮಿಕವಾದ ಮೇಲೆ ಆದರ ಆಗಮನದಿಂದ ಹಿಡಿದು, ಬಂದ ಕಾಲ(Time) ಮತು ಊರು(Space) ಎಲ್ಲವೂ ಬೇಕಾ ಬಿಟ್ಟಿಯಾಗಿ ಬಳಕೆಯಾಗಿವೆ. Down To Earth ನಂತಹಾ ಮಾಧ್ಯಮಗಳು ತೀರಾ ಇತ್ತೀಚೆಗೆ ಅಂದರೆ 2015ರಲ್ಲೂ ತಪ್ಪಾಗಿ ಇದರ ವರದಿಯನ್ನು ಪ್ರಕಟಿಸಿದ್ದಾರೆ ಎಂದರೆ ನಮ್ಮ “ಅನಿಸಿಕೆ” ಆಧಾರಿತ “ಹೇಳಿಕೆ-ಕೇಳಿಕೆ”ಗಳ ಬಳಸಿದ ಸಂಶೋಧನಾತ್ಮಕ ವರದಿಗಳನ್ನು ಓದಬೇಕಾಗಿರುವ ಬೇಸರವನ್ನು ಈ ಸಸ್ಯವು ಸಸ್ಯಯಾನದಲ್ಲಿ ದಾಖಲಿಸಿದೆ.

ಈ ಸಸ್ಯವು ಅದೆಂತಹಾ ಪ್ರಭಾವಶಾಲಿ ಎಂದರೆ ಒಂದೇ ಗಿಡವು ಸರಿ ಸುಮಾರು ೧೫,೦೦೦ಕ್ಕೂ ಹೆಚ್ಚು ಬೀಜಗಳನ್ನು ಉತ್ಪಾದಿಸಬಲ್ಲದು. ಗಾಳಿ-ನೀರು, ಪ್ರಾಣಿಗಳ ಮೂಲಕ ಎಲ್ಲೆಂದರಲ್ಲಿ ಹಬ್ಬಿ ಬೀಳು ಭೂಮಿಯನ್ನೆಲ್ಲಾ ಆವರಿಸಿ ಬೇರೇನೂ ಬೆಳೆಯದಂತೆ ನೋಡಿಕೊಳ್ಳಬಲ್ಲದು. ಇದರ ಪರಾಗವು ಸಾಕಷ್ಟು ಉತ್ಪಾದನೆಯಾಗುತ್ತಿದ್ದು ಹಲವು ಬಗೆಯ ಚರ್ಮದ ಕಾಯಿಲೆಯನ್ನೂ, ಅಲರ್ಜಿಯನ್ನೂ, ಜೊತೆಗೆ ದನಕರುಗಳಿಗೂ ಹಾನಿಯನ್ನೂ ತರಬಲ್ಲದು. ಹೀಗಿದ್ದು ಭಾರತದಲ್ಲೇ ಹೇಗೆ ಹಬ್ಬಿದೆ ಎಂದರೆ ಹೆಚ್ಚೂ ಕಡಿಮೆ ಕಾಶ್ಮೀರವನ್ನು ಬಿಟ್ಟು ಎಲ್ಲಾ ರಾಜ್ಯಗಳಲ್ಲೂ ಇದೆ. ಸಾಲದಕ್ಕೆ ಇತ್ತೀಚೆಗಿನ ಹವಾಮಾನ ಬದಲಾವಣೆಯು ಇದರ ಆಕ್ರಮಣಕಾರಿ ಹಬ್ಬುವಿಕೆಗೆ ಹೆಚ್ಚು ಸಹಕಾರಿಯಾಗುವ ಅನುಮಾನಗಳೂ ಇವೆ. ವಿಚಿತ್ರವೆಂದರೆ ಇಂತಹಾ ಅತಿ ಸಾಂಕ್ರಾಮಿಕ ಆಕ್ರಮಣಕಾರಿ ಸಂಗತಿಯನ್ನು ಬಳಸಿಕೊಂಡು ನಾವೇನೋ ಮಾಡುತ್ತಿದ್ದೇವೆ, ಎನ್ನುವ ನಿಯಂತ್ರಣಾ ಸಪ್ತಾಹಗಳು ವರ್ಷದಿಂದ ವರ್ಷಕ್ಕೆ ಹೆಚ್ಚು ತೀಕ್ಷ್ಣವಾಗುತ್ತಿವೆ. ಆದರೆ ಬಡಪಾಯಿ ರೈತ ಮತ್ತು ಜನಸಾಮಾನ್ಯರು ಹೇಗೋ ಅವುಗಳ ಜತೆಗೆ ಬದುಕು ನಡೆಸುವ ಛಲಗಾರಿಕೆಯನ್ನು ತೋರಿಸುತ್ತಾರೆ. ಉಪದ್ರವಿಗಳೂ ಮತ್ತಷ್ಟು ಗಟ್ಟಿಯಾಗಿ ನೆಲೆಯೂರುತ್ತಲೇ ಇರುತ್ತವೆ. ಕರೋನ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಸಸ್ಯದ ಹಿಂದಿರುವ ಈ ಸಂಗತಿಗಳು ನೆನಪಾದವು.

ನಾನಿನ್ನೂ ಪ್ರಾಥಮಿಕ ಶಾಲೆಯಲ್ಲಿರುವಾಗ ಆವರಣದ ಬೀಳು ಭೂಮಿಯಲ್ಲಿ ಕಂಡ ಗಿಡ ಪಾರ್ಥೇನಿಯಂ. ನನ್ನ ಉಪಾದ್ಯಾಯರು ಅದರ ಉಪದ್ರವದ ಬಗ್ಗೆ ಹೇಳಿದ್ದ ನೆನಪಿದೆ. ನಂತರದ ನನ್ನ ಕೃಷಿ ವಿಶ್ವವಿದ್ಯಾಲಯ, ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಮುಂತಾದ ಸಂಸ್ಥೆಗಳ ಸಹವಾಸದಲ್ಲಿ 30 ವರ್ಷಗಳ ಉದ್ದಕ್ಕೂ ಹಲವು ಬಾರಿ ಪಾರ್ಥೇನಿಯಂ ಚರ್ಚೆಗಳು ಮುಖಾಮುಖಿಯಾಗಿವೆ. ಅವುಗಳ ನೆನಪಿನಲ್ಲಿ ಈ ವಾರದ ಸಸ್ಯಯಾನಕ್ಕಾಗಿ ಸಾಂಕ್ರಮಿಕತೆಯ ಹಿನ್ನೆಲೆಯ ಓದಿಗೆ ಪಾರ್ಥೇನಿಯಂ ಕೊಟ್ಟ ಅನುಭವಗಳ ಬೇಸರಗಳು ಅನಿವಾರ್ಯವಾಗಿ ಹಂಚಿಕೆಯಾಗಿವೆ. ಸುಳ್ಳು ವರದಿಗಳು, ಭ್ರಮೆಗಳು, ಯಾವುದೋ ಹಿತಕ್ಕೆ ಒಳಗಾದ ಆಕ್ರೋಶಗಳು ಕಡೆಗೂ ಪರಿಹಾರವೆಂಬ ಮುಕ್ತಿಯನ್ನು ಕೊಡದೆ, ಅದರ ಸುತ್ತ ನಡೆಸುವ “ರಿಚ್ಯುವಲ್”ಗಳಾಗುವ ವೈಜ್ಞಾನಿಕ ಸಂಗತಿಗಳು ಕೊನೆಯ ವ್ಯಕ್ತಿಯನ್ನು ಮುಟ್ಟುವುದಿರಲಿ, ಆಸೆಯನ್ನಾದರೂ ಉಳಿಸಬಲ್ಲವೇ ಎಂಬ ಅನುಮಾನ ಉಳಿದಿದೆ.
ಜಗತ್ತಿನ ಬಹುಪಾಲು ರಾಷ್ಟ್ರಗಳನ್ನು ಆಕ್ರಮಿಸಿರುವುದನ್ನು ಒಪ್ಪಿಕೊಂಡೇ ಬದುಕುತ್ತಿರುವ ಸಾಮಾನ್ಯ ಜನರ ಹಿತವೆಂದೂ ಗಣನೆಗೆ ಬರುವುದಿಲ್ಲ. ಅದೃಷ್ಟಕ್ಕೆ ಕೃಷಿಗೆ ಒಳಗಾಗಿ ಉಳುಮೆ ನಡೆಯುತ್ತಿರುವ ಭೂಮಿಯಲ್ಲಿ ಪಾರ್ಥೇನಿಯಂ ಅಷ್ಟಾಗಿ ಕಾಡದು. ಅಲ್ಲಿಯೂ ಬರದಿರುವ ಯಾವ ಸೂಚನೆಗಳೇನೂ ಇಲ್ಲದಿದ್ದರೂ, ಬಂದರೂ ಮತ್ತದೇ ನಿರ್ವಹಣಾ ನಿರ್ಮೂಲನೆಯ ವೈಜ್ಞಾನಿಕ ಪ್ರಬಂಧಗಳ ಸಂಖ್ಯೆಯು ಬೆಳೆದು ರಾಷ್ಟ್ರದ ವೈಜ್ಞಾನಿಕ ಕೀರ್ತಿ ಹೆಚ್ಚಬಹುದು. ಮಣ್ಣಿನ-ನೆಲದ ಮೂಲಭೂತ ಕಾರ್ಯವಾದ ಉತ್ಪಾದನೆ ಹಾಗೂ ಕೊಳೆಸುವಿಕೆಯ ಪರಸ್ಪರ ಅರ್ಥೈಸಿಕೊಂಡ ಬಳಕೆಯಾಗದ ಹೊರತೂ ಈ ನೆಲದ ಸಮಸ್ಯೆಗಳು ಮುಂದುವರೆಯುತ್ತಲೇ ಇರುತ್ತವೆ. ಅವುಗಳು ಸಾಂಕ್ರಾಮಿಕ ಅಥವಾ ಆಕ್ರಮಣಕಾರಿಯಾದಷ್ಟೂ ಆಡಳಿತಶಾಹಿಗಳು ಮೆರೆಯುತ್ತಲೇ ಇರುತ್ತಾರೆ. ಅವುಗಳ ಜೊತೆಗೆ ಜೀವಿಸಲು ಕಲಿತ ಸಾಮಾನ್ಯರು ಮಾತ್ರವೇ ಬದುಕಿ ಉಳಿಯುತ್ತಾರೆ.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್
ಪಾರ್ಥೇನಿಯಂ ಗಿಡದ ಛಾಯಾ ಚಿತ್ರ ಸುಂದರವಾಗಿದೆ.. ಹೂ ಗುಚ್ಚ ಗಳಿಗೆ ಉತ್ತಮ ಹಿನ್ನೆಲೆ ನೀಡುವ ಹಾಗಿದೆ. ಆದರೆ ಗಿಡ ನೀಡುವ ಅಲರ್ಜಿಯದ್ದೇ ಭಯ.. ನಿಮ್ಮ ಲೇಖನ ಚೆನ್ನಾಗಿ ಮೂಡಿಬಂದಿದೆ..