You are currently viewing ದಣಿವರಿಯದೆ ದೇಶ ಕಟ್ಟಿದ ವಿಜ್ಞಾನಿ ಮತ್ತು ಆಡಳಿತಗಾರ ಪ್ರೊ. ಸತೀಶ್ ಧವನ್

ದಣಿವರಿಯದೆ ದೇಶ ಕಟ್ಟಿದ ವಿಜ್ಞಾನಿ ಮತ್ತು ಆಡಳಿತಗಾರ ಪ್ರೊ. ಸತೀಶ್ ಧವನ್

( ಮೊದಲ ಕಂತು)

ಪುಲಿಕ್ಯಾಟ್‌ ಸರೋವರನ್ನು ಸೀಳಿಕೊಂಡು ಹೋಗುವ ನೀಳದಾರಿಯ ನಂತರ ಸಿಗುವ ದ್ವೀಪ ಪ್ರದೇಶವಾದ ಶ್ರೀಹರಿಕೋಟದಲ್ಲಿ ಇಸ್ರೊ ಸಂಸ್ಥೆಯ ಬಾಹ್ಯಾಕಾಶ ಉಡಾವಣಾ ಕೇಂದ್ರವಿದೆ. ಭಾರತೀಯ ಬಾಹ್ಯಾಕಾಶ ಕೇತ್ರದ ಕನಸುಗಳು ಇಲ್ಲಿ ರಾಕೆಟ್‌ ರೂಪದಲ್ಲಿ ಆಕಾಶಕ್ಕೆ ಹಾರುತ್ತವೆ. ಭಾರತದಲ್ಲಿ ಬಾಹ್ಯಾಕಾಶ ಸಂಶೋಧನೆಯ ಮೂಲಕ ಸಾಮಾನ್ಯ ಜನರ ಒಳಿತಿನ ಕನಸು ಕಂಡಿದ್ದು ವಿಕ್ರಂ ಸಾರಾಬಾಯ್‌ ಅವರಾದರೂ, ಆ ಕನಸ್ಸಿನ ಹಕ್ಕಿಗೆ ಶಕ್ತಿ ತುಂಬಿ ರೆಕ್ಕೆ ಬಲಿಯುವ ಹಾಗೆ ಮಾಡಿ ಹಾರಾಟ ಸಾಧ್ಯ ಮಾಡಿದ ರೂವಾರಿ ಪ್ರೊ. ಸತೀಶ್‌ ಧವನ್.‌ ಹಾಗಾಗಿಯೇ ಅವರ ಗೌರವಾರ್ಥ ಈ ಕೇಂದ್ರಕ್ಕೆ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರ (Satish Dhawan Space Centre-SDSC) ಎಂದು ಹೆಸರಿಸಲಾಗಿದೆ. ನಾನು ಇಸ್ರೊ ಸಂಸ್ಥೆ ಸೇರಿದ್ದು ೨೦೦೮ ರಲ್ಲಾದರೂ ಶ್ರೀಹರಿಕೋಟವನ್ನು ನೋಡಿದ್ದು ೨೦೧೫ ರಲ್ಲಿ. ಅದೇ ವರ್ಷ ಇಸ್ರೊ ಸಂಸ್ಥೆ ಮಂಗಳಯಾನ ಯೋಜನೆಯ ಯಶಸ್ಸಿನ ನಂತರ, ತನ್ನದೇ ಇತಿಹಾಸದ ಪುಟಗಳನ್ನು ಒಂದು ಕಡೆ ಸಂಗ್ರಹಿಸಿ, ನಡೆದು ಬಂದ ದಾರಿಯನ್ನು ದಾಖಲಿಸಿ ” From Fishing Hamlet to Red Planet: India’s Space Journey” ಎಂಬ ಪುಸ್ತಕವನ್ನು ಹೊರತಂದಿತ್ತು. ಆ ಹಿನ್ನೋಟದ ಓದಿನಲ್ಲಿ ಇಸ್ರೊ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಸತೀಶ್‌ ಧವನ್‌ ಅವರ ಕುರಿತ ಸೆಳೆತ ನನ್ನ ವೃತ್ತಿಬದುಕು ಕಟ್ಟಿಕೊಳ್ಳುತ್ತಿರುವ ಪ್ರತಿ ಹಂತದಲ್ಲೂ ಮುಂದುವರೆಯುತ್ತಿದೆ. ಅವರು ಓಡಾಡಿದ ಶ್ರೀಹರಿಕೋಟಾದಲ್ಲಿ ಹಕ್ಕಿಗಳನ್ನು ನೋಡಿದಾಗ ಹಕ್ಕಿಗಳ ಬಗ್ಗೆ ಅವರ ಅಧ್ಯಯನ ನೆನಪಾಗುತ್ತದೆ. “Since time immemorial man has been fascinated and intrigued by the beauty, grace and intricacies of bird flight. There is perfect harmony of form and function” – ಇದು ಹಕ್ಕಿಗಳ ಹಾರಾಟದ ಕುರಿತ ಅವರ ಪುಸ್ತಕದ ಮೊದಲ ಸಾಲುಗಳು. ಭಾಗಶಃ ಅವರ ಈ ಮಾತುಗಳು, ಅವರದೇ ಜೀವನದ ಪಯಣಕ್ಕೂ ಹೆಚ್ಚು ಅರ್ಥ ತರುತ್ತವೆ. There is perfect harmony of form and function in his life journey too..

ಅದು ೧೯೪೦ ರ ದಶಕ…..ಅವಿಭಜಿತ ಭಾರತದ ಉತ್ತರ ದಿಕ್ಕಿನ ಲಾಹೋರಿನಿಂದ ಇಂಜಿನಿಯರಿಂಗ್ ವಿದ್ಯಾಭ್ಯಾಸದ ಅಂಗವಾದ ಇಂಟರ್ನ್‌ಶಿಪ್ ತರಬೇತಿಗೆಂದು ದಕ್ಷಿಣದ ಬೆಂಗಳೂರಿಗೆ ಬಂದಿಳಿದ ಆ ಇಪ್ಪತ್ತರ ಹರೆಯದ ತರುಣ, ದೇಶದ ಎರಡು ಪ್ರತಿಷ್ಠಿತ ವಿಜ್ಞಾನ ಸಂಸ್ಥೆಗಳನ್ನು ಬೆಂಗಳೂರಿನಿಂದ ಮುನ್ನಡೆಸುವೆನೆಂದು ಖಂಡಿತಾ ಭಾವಿಸಿರಲಿಕ್ಕಿಲ್ಲ. ಅದಾಗಲೇ ಬೆಳೆದು ೫೦ ವರ್ಷಗಳನ್ನು ಪೂರೈಸಿದ್ದ ಭಾರತೀಯ ವಿಜ್ಞಾನ ಸಂಸ್ಥೆ(ಐ.ಐ.ಎಸ್‌ಸಿ-I.I.Sc) ಅಥವಾ ಟಾಟಾ ಇನ್ಸಿಟಿಟ್ಯೂಟ್‌, ಬೆಂಗಳೂರು  ಹಾಗೂ ಇನ್ನೂ ಆಗಷ್ಟೇ ಕಣ್ಣುಬಿಡುತ್ತಿದ್ದ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ-ISRO), ಈವೆರಡೂ ಸಂಸ್ಥೆಗಳಿಗೆ ಹೊಸ ಕನಸು, ಕಸುವು ಮತ್ತು ಉತ್ಸಾಹ ತುಂಬಿ, ಭಾರತೀಯ ವಿಜ್ಞಾನ ಇತಿಹಾಸದ ಪ್ರಮುಖ ಪಾಲುದಾರ ಮತ್ತು ಸೂತ್ರದಾರರಾಗಿ ಬೆಳೆದದ್ದು ಭಾರತದ ಪಾಲಿಗೆ ಒಂದು ಅಪರೂಪದ ಘಟನೆ. ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೊ-ISRO) ಮುಖ್ಯ ಕಛೇರಿ (Head Quarters) ಬೆಂಗಳೂರಿನಲ್ಲಿ ನೆಲೆಗೊಳ್ಳಲೂ ಅವರೇ ಕಾರಣ. ಸಮಾಜಮುಖಿ ನಿಲುವುಳ್ಳ ಅಪ್ಪಟ ಅಂತಃಕರಣದ ಆಡಳಿತಗಾರರಾಗಿ, ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯಲ್ಲೂ ಛಾಪು ಮೂಡಿಸಿ, ಸಾಮಾನ್ಯ ಪಕ್ಷಿಗಳಿಂದ ಹಿಡಿದು ಲೋಹದ ಹಕ್ಕಿಗಳು(ವಿಮಾನಗಳು), ರಾಕೆಟ್‌ ಗಳವರೆಗೆ ಫ್ಲೂ-ಇಡ್ ಡೈನಾಮಿಕ್ಸ್(Fluid Dynamics) ಮತ್ತು ಏರೋಸ್ಪೇಸ್‌(Aerospace-ವೈಮಾಂತರಿಕ್ಷ) ಕ್ಷೇತ್ರದಲ್ಲಿ ತಮ್ಮ ಸಂಶೋಧನೆ ಆಸಕ್ತಿಯನ್ನು ವಿಸ್ತರಿಸಿಕೊಂಡ ವಿಜ್ಞಾನಿ. ಜೊತೆಗೆ ತುಂಬು ಸಂಸಾರದಲ್ಲಿ ಬೆಳೆದ ಕುಟುಂಬ ಪ್ರೀತಿಯ ಮನುಷ್ಯ – ಅಪ್ಪಟ The Family Man. ವಿಜ್ಞಾನಿ, ಗುರು ಹಾಗೂ ದಕ್ಷ ಆಡಳಿತಗಾರ ಈ ಎಲ್ಲಾ ನೆಲೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಾನೂ ಬೆಳೆದು ದೇಶವನ್ನು ಬೆಳೆಸಿದ ಅಪ್ರತಿಮ ಜೀವಿ ಪ್ರೊ.ಸತೀಶ್‌ ಧವನ್.‌

ಈ ೨೦೨೧ ಅವರ ಜನ್ಮ ಶತಮಾನೋತ್ಸವದ ವರ್ಷ. ಅವರ ನೆನಪಿನ ಹಲವಾರು ಕಾರ್ಯಕ್ರಮಗಳು ದೇಶದುದ್ದ ನಡೆದರೂ, ಅವರ ಶಿಕ್ಷಣ, ಕೆಲಸ ಮತ್ತು ಸಂಸಾರ ಜೀವನದ ಬಹುಪಾಲು ಸಮಯ ನಮ್ಮ ನೆಲದ ಸಂಪರ್ಕಗಳೊಂದಿಗೆ ಕಳೆದರೂ, ಕನ್ನಡ ಮತ್ತು ಕರ್ನಾಟಕದ ಸಂದರ್ಭದಲ್ಲಿ ಅವರ ಸಾಧನೆಗಳನ್ನು ಪರಿಚಯಿಸುವ ಕೆಲಸ ಆದದ್ದು ಬಹಳ ಕಡಿಮೆ. ಜೊತೆಗೆ ಕೋವಿಡ್-‌೧೯ ಎರಡನ ಅಲೆಯ ದೆಸೆಯಿಂದ ಉಂಟಾದ ಆತಂಕದ ದಿನಗಳು ಅವರ ಜನ್ಮ ಶತಮಾನೋತ್ಸವ ಸಂಭ್ರಮವನ್ನು ಮಸುಕುಗೊಳಿಸಿದೆ. ಆದಾಗ್ಯೂ ಅವರ ಬದುಕು ಮತ್ತು ಸಾಧನೆಗಳು ಈ ಆತಂಕದ ದಿನಗಳಲ್ಲೂ ಆಶಾಕಿರಣವಾಗಬಲ್ಲವು ಎಂಬ ನಂಬಿಕೆಯೊಂದಿಗೆ ಅವರನ್ನು ನಾವು ನೀವೆಲ್ಲರೂ ನೆನಪಿಸಿಕೊಂಡು, ತಿಳಿಯದ ಜನರಿಗೆ ಪರಿಚಯ ಮಾಡಿಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಪ್ರೀತಿಯಿಂದ ನೆನಪಿಸುತ್ತಾ ಈ ವ್ಯಕ್ತಿಚಿತ್ರ ಬಿಡಿಸುತ್ತಿದ್ದೇನೆ. ದೇಶ, ಧರ್ಮ, ಜಾತಿ, ವರ್ಗ, ಪ್ರದೇಶ ಮುಂತಾದ ಸೀಮಿತ ಗೆರೆಗಳನ್ನು ಮೀರಿದ ಅವರ ಬದುಕಿನ ಆಳ-ಅಗಲದ ವಿಸ್ತಾರ ಸಹಜವಾಗಿ ಉನ್ನತವಾದದ್ದು. ಹಾಗಾಗಿ ಐದು ಲೇಖನಗಳ ಸರಣಿಯ ಮೂಲಕ, ಅವರೇ ಬೆಳೆಸಿದ ಸಂಸ್ಥೆಯಲ್ಲಿ ಇದ್ದುಕೊಂಡು ಅದನ್ನಿಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ. ಅದರ ಮೊದಲ ಭಾಗವಾಗಿ ಅವರ ವೃತ್ತಿ ಜೀವನದ ನಾಲ್ಕು ಪ್ರಸಂಗಗಳನ್ನು ನೆನೆಯುತ್ತಾ, ಅವರ ಬಾಲ್ಯ ಮತ್ತು ಅವಿಭಜಿತ ಭಾರತದಲ್ಲಿನ ಅವರ ವಿದ್ಯಾಭ್ಯಾಸದ ಬಗ್ಗೆ ತಿಳಿಯೋಣ.

ಭಾರತದ ಮೊದಲ ಪ್ರಧಾನಿ ನೆಹರು ಅವರ ಜೊತೆ ಸತೀಶ್‌ ಧವನ್‌ (ಚಿತ್ರಕೃಪೆ-ಡಾ,ಜ್ಯೋತ್ಸ್ನಾ ಧವನ್)

ಘಟನೆ-೧

ಒಮ್ಮೆ ಬೆಂಗಳೂರಿನ ಕುಮಾರ ಪಾರ್ಕಿನ ಹತ್ತಿರವಿರುವ ವೈದ್ಯರ ಬಳಿ ಬೆಳ್ಳಂಬೆಳಗ್ಗೆ ಸತೀಶ್‌ ನಾಲ್ಕೈದು ಮಕ್ಕಳ ಜೊತೆ ಹಾಜರಿದ್ದರು. ಗೆಳೆಯರೊಬ್ಬರಿಗೆ ಕುತೂಹಲವಾಗಿ ವಿಚಾರಿಸತೊಡಗಿದಾಗ ಅವರು ಹೇಳಿದ್ದು – ” ಈ ಮಕ್ಕಳು ನನ್ನ ಮನೆ ಹತ್ತಿರದ ಕೊಳೆಗೇರಿಯಲ್ಲಿ ವಾಸಿಸುತ್ತಾರೆ. ಅವರಿಗೆ ಬೀದಿನಾಯಿಯೊಂದು ಕಚ್ಚಿಬಿಟ್ಟಿದೆ. ಅವರ ತಂದೆತಾಯಿಗಳು ಈ ಬಗ್ಗೆ ಅಸಡ್ಡೆ ತೋರಿದ್ದರಿಂದ, ರೇಬೀಸ್-ನಿರೋಧಕ ಲಸಿಕೆಯನ್ನು ಅದರ ಕೋರ್ಸ್ ಮುಗಿಯುವ ತನಕ ನಾನೇ ಕರೆದುಕೊಂಡು ಬಂದು ಇವರಿಗೆ ಹಾಕಿಸುತ್ತಿದ್ದೇನೆ!!”. ಆದರೆ ಆ ಅಷ್ಟೂ ದಿನ ಅವರು ಆ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದುದು ತಮ್ಮ ಸ್ವಂತ ಕಾರಿನಲ್ಲಿ. ಇಸ್ರೊ ಸಂಸ್ಥೆ ನೀಡಿದ್ದ ಕಛೇರಿಯ ಕಾರಿನಲ್ಲಲ್ಲ!!

ಘಟನೆ-೨

ಭಾರತೀಯ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದ ಪಿತಾಮಹ ಡಾ.ವಿಕ್ರಂ ಸಾರಾಬಾಯ್‌ ೧೯೭೧ ರ ಡಿಸೆಂಬರ್‌ ನಲ್ಲಿ ಹಠಾತ್ತನೆ ನಿಧನರಾದರು. ಆಗ ಇಸ್ರೊ ಸಂಸ್ಥೆಯನ್ನು ಮುನ್ನಡೆಸುವ ನಾಯಕನ ಹುಡುಕಾಟ ಶುರುವಾದಾಗ ಸತೀಶ್‌ ಧವನ್‌ ಅವರ ಹೆಸರು ಮುನ್ನೆಲೆಗೆ ಬರುತ್ತದೆ. ಆಗ ಸತೀಶ್‌ ಅವರು ಸಬ್ಬತು ರಜೆ(Sabbatical) ಮೇರೆಗೆ ತಾವು ಓದಿದ ಕ್ಯಾಲ್ಟೆಕ್‌(Caltech) ವಿಶ್ವವಿದ್ಯಾಲಯ, ಅಮೆರಿಕದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿರುತ್ತಾರೆ. ದೇಶದ ಪ್ರಧಾನ ಮಂತ್ರಿ ಸ್ವತಃ ಆಸಕ್ತಿ ವಹಿಸಿ ಅವರಿಗೆ ಕರೆ ಮಾಡಿ, ಈ ಹುದ್ದೆಯನ್ನು ವಹಿಸಿಕೊಳ್ಳಲು ಕೋರುತ್ತಾರೆ. ಅದಾಗಲೇ ಐ.ಐ.ಎಸ್‌ಸಿ ಯ ನಿರ್ದೇಶಕರಾಗಿ ದುಡಿಯುತ್ತಿದ್ದ ಅವರು, ಈ ಬಗ್ಗೆ ನಾನು ಇಲ್ಲಿನ ಬೋಧನಾ ಕಾಲಾವಧಿ ಮುಗಿಸಿ ಭಾರತಕ್ಕೆ ಹಿಂದಿರುಗಿದ ನಂತರ ಚರ್ಚಿಸುವುದಾಗಿ ತಿಳಿಸುತ್ತಾರೆ. ನಂತರ ಐ.ಐ.ಎಸ್‌ಸಿ ನಿರ್ದೇಶಕ ಕೆಲಸದ ಜೊತೆಗೆ, ಇಸ್ರೊ ಅಧ್ಯಕ್ಷ ಸ್ಥಾನ ಮತ್ತು ಅದರ ಮುಖ್ಯ ಕಛೇರಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರೆ ಹೊಸ ಹೊಣೆಯನ್ನು ನಿಭಾಯಿಸಲು ಸಿದ್ಧ ಎಂದು ತಿಳಿಸುತ್ತಾರೆ. ಹೀಗೆ ಪ್ರಧಾನಿಯವರಿಗೇ ಷರತ್ತುಗಳನ್ನು ವಿಧಿಸಿ, ಅವರು ಅದನ್ನು ಒಪ್ಪಿದರೆ ಮಾತ್ರ ತಾನು ಸಿದ್ಧ ಎಂದು ಸ್ಪಷ್ಟಪಡಿಸುತ್ತಾರೆ!!

ಘಟನೆ-೩

ಅದು ೧೯೬೨ ರ ಸಮಯ. ಸತೀಶ್‌ ಧವನ್‌ ಅತ್ಯಂತ ಕಿರಿಯ ವಯಸ್ಸಿಗೇ ಅಂದರೆ ತಮ್ಮ ೪೨ ನೇ ವಯಸ್ಸಿಗೇ ಐ.ಐ.ಎಸ್‌ಸಿ ಸಂಸ್ಥೆಯ ನಿರ್ದೇಶಕರಾಗಿ ನೇಮಕಗೊಂಡಿದ್ದ ಕಾಲ. ೧೯೫೧ ರಲ್ಲಿ ಹಿರಿಯ ವೈಜ್ಞಾನಿಕ ಅಧಿಕಾರಿಯಾಗಿ ಸಂಸ್ಥೆ ಸೇರಿದ ಧವನ್‌, ಬಹು ಬೇಗ ಪ್ರಾಧ್ಯಾಪಕರಾಗಿ ಮತ್ತು ಏರೋಸ್ಪೇಸ್‌ ವಿಭಾಗದ ಮುಖ್ಯಸ್ಥರಾಗಿ ಬೆಳೆದಿದ್ದರು. ಹೀಗೆ ಹತ್ತೇ ವರ್ಷಗಳಲ್ಲಿ ಅವರು ಸಂಸ್ಥೆಯ ನಿರ್ದೇಶಕರಾದಾಗ ಕೆಲವರಿಗೆ ಅದು ಹಿಡಿಸಲಿಲ್ಲ. ಈ ಬಗೆಯ ಆಕ್ಷೇಪಗಳಿಗೆ ನೊಂದು, ತಮ್ಮ ಸಂಶೋಧನಾ ಅಸಕ್ತಿಯನ್ನು ಬಲಿಗೊಡಲು ಒಪ್ಪದ ಸತೀಶ್‌ ರಾಜೀನಾಮೆ ಯೋಚನೆ ಮಾಡಿದ್ದಾಗ ಅವರಿಗೆ ಬೆಂಬಲವಾಗಿ ನಿಂತದ್ದು ಡಾ.ಹೋಮಿ ಜಹಾಂಗೀರ್‌ ಭಾಭಾ. ಅವರ ಸಲಹೆಯಂತೆ ಸಹನೆಯಿಂದ ಉಳಿದುಕೊಂಡು ಕೆಲಸ ಮಾಡಿದ ಸತೀಶ್‌ ಸಂಸ್ಥೆಗೆ ಬದಲಾವಣೆಯ ರೂಪ ಕೊಟ್ಟಿದ್ದು ಈಗ ಇತಿಹಾಸ. ಸಂಶೋಧಕ ಮತ್ತು ಪಾಠ ಹೇಳುವ ಮೇಷ್ಟ್ರಾಗಿ, ಅತ್ಯಂತ ಕಿರಿಯ ವಯಸ್ಸಿಗೆ ನಿರ್ದೇಶಕರಾಗಿ ಸುಮಾರು ಹತ್ತೊಂಭತ್ತು ವರ್ಷಗಳಷ್ಟು ಸುದೀರ್ಘ ಕಾಲ ದುಡಿದು, ಆಪ್ತ ಶಿಷ್ಯರ-ಗೆಳೆಯರ ಬಳಗ ಪಡೆದದ್ದು ಐ.ಐ.ಎಸ್‌ಸಿ ಯಲ್ಲಿಯೇ!!

‌೧೯೫೦ ರ ದಶಕದಲ್ಲಿ ಐ.ಐ.ಎಸ್‌ಸಿ ಯ ವೈಮಾಂತರಿಕ್ಷ ಇಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥರಾಗಿ ಸತೀಶ್‌ ಧವನ್ (ಚಿತ್ರಕೃಪೆ-ಡಾ,ಜ್ಯೋತ್ಸ್ನಾ ಧವನ್)

ಘಟನೆ-೪

ಶ್ರೀ ಎ.ಪಿ.ಜೆ ಅಬ್ದುಲ್‌ ಕಲಾಂ ತಮ್ಮ ಗುರುಗಳಾದ ಸತೀಶ್‌ ಧವನ್‌ ಅವರ ನಾಯಕತ್ವ ಗುಣದ ಬಗ್ಗೆ ಹೇಳುತ್ತಿದ್ದ ಒಂದು ಪ್ರಸಂಗ ಬಹಳ ಪ್ರಸಿದ್ಧ. ಕಲಾಂ ಇಸ್ರೊ ಸಂಸ್ಥೆಯ ಮೊದಲ ಉಪಗ್ರಹ ಉಡಾವಣಾ ರಾಕೆಟ್‌ ಎಸ್.ಎಲ್.ವಿ-೩(SLV-3) ಯ ಯೋಜನಾ ನಿರ್ದೇಶಕರಾಗಿದ್ದವರು. ೧೯೭೨ ರಿಂದ ಸತತವಾಗಿ ಹಲವು ಸವಾಲುಗಳನ್ನು ಮೀರಿ ಬೆಳೆದ ಈ ಯೋಜನೆಯ ಮೊದಲ ಉಡಾವಣೆ ೧೯೭೯ ರ ಆಗಸ್ಟ್‌ ನಲ್ಲಿ ನಡೆಯಿತು. ಆದರೆ ಮೊದಲ ಪ್ರಯತ್ನ ವಿಫಲವಾದಾಗ, ಆ ಹೊಣೆಯನ್ನು ಸತೀಶ್‌ ಹೊತ್ತರು. ಮುಂದೇ ಅದೇ ಯೋಜನೆ, ೧೯೮೦ ರ ಜುಲೈನಲ್ಲಿ ಯಶಸ್ವಿಯಾದಾಗ ಅದರ ಶ್ರೇಯಸ್ಸನ್ನು ಕಲಾಂ ಮತ್ತು ತಂಡಕ್ಕೆ ನೀಡಿ ಅವರನ್ನು ಪ್ರೋತ್ಸಾಹಿಸಿದ್ದರು. ಹೀಗೆ ಸೋಲನ್ನು ಧೈರ್ಯವಾಗಿ ಒಪ್ಪಿಕೊಂಡು ಎದುರಿಸುವ ಮತ್ತು ಯಶಸ್ಸನ್ನು ತನ್ನ ಸಹೋದ್ಯೋಗಿಗಳಿಗೆ ಅರ್ಪಿಸುವ ಮನೋಭಾವ ನಿಜವಾದ ನಾಯಕರ ಬಹುಮುಖ್ಯ ಗುಣವೆಂದು ಕಲಾಂ ಬಣ್ಣಿಸಿದ್ದಾರೆ. ಸತೀಶ್‌ ಆ ಮಾತಿಗೆ ಪ್ರತೀಕವಾಗಿದ್ದರು

ಮೇಲಿನ ನಾಲ್ಕು ಪ್ರಸಂಗಗಳು ಅವರ ಜೀವನದ ಸಂದರ್ಭಗಳಲ್ಲಿ ಅವರು ತೋರಿದ ಮಾನವೀಯತೆ, ಅಂತಃಕರಣ, ಬದ್ಧತೆ, ಸಂಯಮ ಮತ್ತು ಒಳ್ಳೆತನವನ್ನು ಪ್ರೋತ್ಸಾಹಿಸುವ ಅವರ ನಾಯಕ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಹಾಗಾದರೆ ಇಂತಹ ವ್ಯಕ್ತಿತ್ವದ ಬೇರುಗಳು ಎಲ್ಲಿಯವು? ಪೋಷಿಸಿದ ಕುಟುಂಬ-ನೆಲ-ಸಮಾಜ  ಎಂತಹದ್ದು? ಈ ವಿಷಯಗಳ ಬಗ್ಗೆ ತಿಳಿಯೋಣ.

ಬಾಲ್ಯ-ವಿದ್ಯಾಭ್ಯಾಸ

ಪ್ರೊ. ಸತೀಶ್‌ ಧವನ್‌ ಅವರು ಹುಟ್ಟಿದ್ದು ಕಾಶ್ಮೀರದ ಶ್ರೀನಗರದಲ್ಲಿ. ೧೯೨೦ ನೇ ಇಸವಿ ಸೆಪ್ಟಂಬರ್‌ ೨೫ ರಂದು. ಅವರ ತಂದೆ  ದೇವಿದಯಾಳ್‌ ಧವನ್‌ ಮತ್ತು ತಾಯಿ ಲಕ್ಷ್ಮೀ ಕೋಸ್ಲಾ. ದೇವಿದಯಾಳ್‌ ಧವನ್‌ ಅವರು ಸ್ವಾತಂತ್ರ್ಯ ಪೂರ್ವದ ಪಂಜಾಬ್‌ ಪ್ರಾಂತ್ಯದಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿ ನಂತರ ಅಲ್ಲಿನ ಲಾಹೋರಿನ ಉಚ್ಛ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದರು. ಸತೀಶ್‌ ಅವರ ತಾಯಿಯ ತಂದೆ ಅಂದರೆ ತಾತ ಧೂನಿಚಂದ್‌ ಕೋಸ್ಲಾ ಕಾಶ್ಮೀರ ಪ್ರಾಂತ್ಯದ ಮುಖ್ಯ ಆರೋಗ್ಯ ಅಧಿಕಾರಿಯಾಗಿ, ೧೯೦೦ ರ ದಶಕದ ಪ್ಲೇಗ್‌ ಸಂದರ್ಭದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಹೆಸರುವಾಸಿಯಾಗಿದ್ದರು. ಹೀಗೆ ಉತ್ತಮ ಮತ್ತು ಉನ್ನತ ಕುಟುಂಬದ ಹಿನ್ನೆಲೆಯ ಸತೀಶ್‌ ಅವರಿಗೆ ಸಹಜವಾಗಿ ವಿದ್ಯಾಭ್ಯಾಸಕ್ಕೆ ಒಳ್ಳೆಯ ಪ್ರೋತ್ಸಾಹ ದೊರೆಯಿತು. ಅವರ ಬಾಲ್ಯ ಮತ್ತು ವಿದ್ಯಾಭ್ಯಾಸದ ದಿನಗಳು ಕಾಶ್ಮೀರದ ಶ್ರೀನಗರ ಮತ್ತು ಸ್ವಾತಂತ್ರ್ಯ ಪೂರ್ವದ ಪಂಜಾಬ್‌ನ ಪಟ್ಟಣಗಳಾದ ಮುಲ್ತಾನ್‌, ಸಾಗೋಢ, ಲೂಧಿಯಾನ, ಅಮೃತಸರ ಹಾಗೂ ಲಾಹೋರಿನಲ್ಲಿ ರೂಪುಗೊಂಡವು.

ಸತೀಶರ ವಿದ್ಯಾಭ್ಯಾಸದ ದಿನಗಳು (ಚಿತ್ರಕೃಪೆ-ಡಾ,ಜ್ಯೋತ್ಸ್ನಾ ಧವನ್)

ಅವರ ಪ್ರಾಥಮಿಕ ಶಿಕ್ಷಣವು ಮನೆಯಲ್ಲೇ ಖಾಸಗಿ-ಬೋಧಕರ ಮೂಲಕ ನಡೆಯಿತು. ನಂತರ ಲೂಧಿಯಾನದಲ್ಲಿ ಮೆಟ್ರಿಕ್ಯೂಲೇಷನ್‌ ಮತ್ತು ಇಂಟರ್‌ಮೀಡಿಯಟ್‌ ಅಭ್ಯಾಸ ಮುಗಿಸಿದರು. ಆ ದಿನಗಳಲ್ಲಿ ಅವರು ವಿಪರೀತ ಕ್ರಿಕೆಟ್‌ ಆಡುತ್ತಿದ್ದರಂತೆ. ಎಷ್ಟೆಂದರೆ ಪರೀಕ್ಷೆಗೆ ಅವರನ್ನು ಮೈದಾನದಿಂದ ಕೂಗಿ ಕರೆದುಕೊಂಡು ಹೋಗುವಷ್ಟು!! ಮುಂದೆ ತಂದೆಯವರು  ಲಾಹೋರಿಗೆ ವರ್ಗವಾದ ಕಾರಣ ಉನ್ನತ ಶಿಕ್ಷಣ ಅಲ್ಲಿ ದೊರಕಿತು. ಲಾಹೋರ್‌ ಆ ಕಾಲದ ಪಂಜಾಬಿನ ಪ್ರಸಿದ್ಧ ಸಾಂಸ್ಕೃತಿಕ, ವೈಚಾರಿಕ ಮತ್ತು ಶೈಕ್ಷಣಿಕ ಕೇಂದ್ರ. ಹಲವು ಧರ್ಮಗಳು ಒಟ್ಟಿಗೆ ನೆಲೆಸಿದ್ದ ನಾಡು, ಜೊತೆಗೆ ಸ್ವಾತಂತ್ರ್ಯ ಹೋರಾಟದ ಅಗ್ರ ನೆಲೆಯಲ್ಲಿ ಒಂದಾಗಿತ್ತು. ಗಾಂಧಿ, ನೆಹರು ಮುಂತಾದವರ ಹೋರಾಟ ಮತ್ತು ಚಿಂತನೆಗಳು ಪ್ರಭಾವಿಸಿದ್ದ ಸಮಯ. ಕಾಲ ಮತ್ತು ಪ್ರದೇಶದ ಒತ್ತಾಸೆಗಳು ಸಹಜವಾಗಿ ತರುಣ ಸತೀಶರ ಸಂವೇದನೆಯನ್ನು ಸೂಕ್ಷ್ಮವಾಗಿ ರೂಪಿಸಿದವು.

ಅವರ ಶೈಕ್ಷಣಿಕ ವಿದ್ಯಾರ್ಹತೆಯೇ ಒಂದು ಆಸಕ್ತಿಕರ ವಿಷಯ. ಸಾಹಿತ್ಯ-ವಿಜ್ಞಾನ-ತಂತ್ರಜ್ಞಾನ ಮೂರರ ತ್ರಿವೇಣಿ ಸಂಗಮ. ಅವರು ೧೯೩೮ ರಲ್ಲಿ ತಮ್ಮ ಬಿ.ಎ. ಪದವಿಯನ್ನು ಭೌತವಿಜ್ಞಾನ ಮತ್ತು ಗಣಿತದಲ್ಲಿ ಪಡೆದರೆ, ಮುಂದೆ  ೧೯೪೧ ರಲ್ಲಿ ಎಂ.ಎ ಪದವಿಯನ್ನು ಇಂಗ್ಲಿಷ್‌ ಸಾಹಿತ್ಯದಲ್ಲಿ ಪಡೆದರು. ಎಂ.ಎ. ದಿನಗಳು ಅವರಿಗೆ ಸಾಹಿತ್ಯ ಓದುವ ಮತ್ತು ಹೆಚ್ಚು ಟೆನ್ನಿಸ್‌ ಆಡುವ ಅವಕಾಶವನ್ನು ಒದಗಿಸುತ್ತವೆ!!  ಈ ಎರಡೂ ಪದವಿಗಳನ್ನು ದ್ವಿತೀಯ ದರ್ಜೆಯಲ್ಲಿ ಪಡೆದ ಅವರ ಆ ದಿನಗಳು ಇನ್ನೂ ತಮ್ಮ ಅಧ್ಯಯನದ ಗುರಿಯನ್ನು ಗೊತ್ತುಮಾಡಿಕೊಳ್ಳುವ ದಿನಗಳಾಗಿದ್ದಿರಬೇಕು ಎಂದು ಅವರ ಮಗಳು ಡಾ.ಜ್ಯೋತ್ನಾ ಧವನ್‌ ಅಭಿಪ್ರಾಯ ಪಡುತ್ತಾರೆ. ಆದರೆ ಮುಂದೆ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ನಲ್ಲಿ ತಮ್ಮ ಬಿ.ಇ.(ಆನರ್ಸ್)‌ ಪದವಿಯನ್ನು ೧೯೪೫ ರಲ್ಲಿ ಪಡೆದಾಗ, ಆ ಪ್ರಾಂತ್ಯದಲ್ಲೇ ಮೊದಲಿಗರಾಗಿ ಚಿನ್ನದ ಪದಕವನ್ನು ಪಡೆಯುತ್ತಾರೆ. ಹೀಗೆ ಇಂಜಿನಿಯರಿಂಗ್‌ ಕ್ಷೇತ್ರದಲ್ಲಿ ಅವರ ಒಲವನ್ನು ಮತ್ತು ಬಲವನ್ನು ಗಟ್ಟಿಗೊಳಿಸಿಕೊಳ್ಳುತ್ತಾರೆ. ಈ ಎಲ್ಲಾ ಪದವಿಗಳು ಅವರು ಪಡೆದದ್ದು ಅವಿಭಜಿತ ಭಾರತದ ಪಂಜಾಬ್‌ ವಿಶ್ವವಿದ್ಯಾನಿಲಯದಿಂದ. ಇಂದಿನ ಸ್ಪರ್ಧಾತ್ಮಕ ದಿನಗಳ ಜೊತೆ ಆ ದಿನಗಳನ್ನು ಹಿಂದಿರುಗಿ ನೋಡಿದರೆ,  ಬಹುಶಃ ಸತೀಶ್‌ ಅವರಿಗೆ ವಿವಿಧ ಅಸಕ್ತಿಗಳ ಮಧ್ಯೆ ತಮ್ಮ ದಾರಿಯನ್ನು ಆಯ್ಕೆ ಮಾಡಿಕೊಳ್ಳಲು ಮತ್ತು ಮುಂದುವರೆಯಲು ಆಗ ಸಿಕ್ಕ ಅವಕಾಶ ಈಗ ಸಿಗುತ್ತಿತ್ತೇ ಎಂಬುದು ಸಂಶಯದ ವಿಷಯ!!

ತಮ್ಮ ಇಂಜಿನಿಯರಿಂಗ್‌ ವಿದ್ಯಾಭ್ಯಾಸ ಮತ್ತು ಬೆಂಗಳೂರಿನ ಹಿಂದೂಸ್ಥಾನ್‌ ಏರ್‌ಕ್ರಾಫ್ಟ್ ಲಿಮಿಟೆಡ್‌(ಇಂದು ಇದೇ ಸಂಸ್ಥೆ ಹಿಂದೂಸ್ತಾನ್‌ ಏರೋನಾಟಿಕಲ್ಸ್‌ ಲಿಮಿಟೆಡ್-HAL ಎಂದು ಕರೆಯಲ್ಪಡುತ್ತದೆ) ಕಾರ್ಖಾನೆಯ ಇಂಟರ್ನ್‌ಶಿಪ್ ಹೊತ್ತಿಗಾಗಲೇ ಅವರಿಗೆ ವೈಮಾನಿಕ ಕ್ಷೇತ್ರದಲ್ಲಿ ಆಸಕ್ತಿ ಚಿಗುರೊಡೆದಿರುತ್ತದೆ. ಅದು ಎರಡನೆಯ ಮಹಾಯುದ್ಧದ ಕಾಲ, ಹಾಗಾಗಿ ಸಹಜವಾಗಿ ವೈಮಾನಿಕ ಕ್ಷೇತ್ರ ಯುವಕರನ್ನು ಸೆಳೆಯುತ್ತಿದ್ದರಿಂದ ಮುಂದೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಪಡೆಯಲು ಅಣಿಯಾಗುತ್ತಾರೆ. ಅದು ಅವರನ್ನು ಅಮೆರಿಕ ದೇಶಕ್ಕೆ, ಅಲ್ಲಿನ ಎರಡು ವಿಭಿನ್ನ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುವ ಅವಕಾಶ ಒದಗಿಸುತ್ತದೆ. ಜೊತೆಗೆ ಇಲ್ಲಿ ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ಪಂಜಾಬ್‌ ಪ್ರಾಂತ್ಯದಲ್ಲಿ ಸ್ವಾತಂತ್ರ್ಯ ದೊರೆಯುವ ಸಂಭ್ರಮ ಮತ್ತು  ದೇಶ ವಿಭಜನೆಯ ದುರಂತ ಇವೆರೆಡೂ ಒಟ್ಟಿಗೆ ಸತೀಶ್‌ರ ಕುಟುಂಬವನ್ನು ತಟ್ಟುತ್ತದೆ. ಆ ಮಿಶ್ರ-ಭಾವದ ದಿನಗಳ ವಿವರಗಳು, ಅವರ ಕ್ಯಾಲ್ಟೆಕ್‌ ವಿಶ್ವವಿದ್ಯಾಲಯದ ಸಂಶೋಧನಾ ದಿನಗಳು ಹಾಗೂ ಅಲ್ಲಿ ದೊರಕಿದ ಗುರು-ಗೆಳೆತನಗಳ ಬಗ್ಗೆ ಮುಂದಿನ ಕಂತಿನಲ್ಲಿ ತಿಳಿಯೋಣ.

(ಈ ಸರಣಿಯನ್ನು ಸಿದ್ದಪಡಿಸಲು‌ ನೆರವಾದವರನ್ನು ನೆನೆಯಬೇಕು. ಸತೀಶ್‌ ಅವರ ಜೀವನದ ಅಮೂಲ್ಯ ಭಾವಚಿತ್ರಗಳನ್ನು ಬಳಸಲು ಅನುಮತಿ ನೀಡಿದ ಅವರ ಮಗಳು ಡಾ. ಜ್ಯೋತ್ಸ್ನಾ ಧವನ್‌, ಸತೀಶ್‌ ಅವರ ಬಗ್ಗೆ ಮೊದಲು ವಿಶೇಷ ಸಂಚಿಕೆ ಹೊರತಂದ ಗಣಿತ ಕುರಿತಾದ ತ್ರೈಮಾಸಿಕ ಪತ್ರಿಕೆ “ಭಾವನಾ” ಸಂಪಾದಕರಾದ ಗಣಿತಜ್ಞ ಡಾ.ಸಿ.ಎಸ್.ಅರವಿಂದ ಹಾಗೂ ಮೊದಲ ಓದುಗರಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಲೇಖನದ ಸಂವಹನ ಸಾಧ್ಯತೆಯನ್ನು ಹೆಚ್ಚುಗೊಳಿಸಿದ ವಿಜ್ಞಾನ ಬರಹಗಾರ ಡಾ.ಟಿ.ಎಸ್.ಚನ್ನೇಶ್ ಈ ಮೂವರಿಗೂ ತುಂಬು ಹೃದಯದ ಧನ್ಯವಾದಗಳು).

ಸತೀಶ್‌ ಕುರಿತಾದ ಭಾವನಾ ಪತ್ರಿಕೆಯ ವಿಶೇಷ ಸಂಚಿಕೆ, ಚಿತ್ರಕೃಪೆ- ಡಾ.ಸಿ.ಎಸ್.ಅರವಿಂದ

ನಮಸ್ಕಾರಗಳು.

ಆಕಾಶ್‌ ಬಾಲಕೃಷ್ಣ, ಇಸ್ಟ್ರ್ಯಾಕ್/ಇಸ್ರೊ, ಬೆಂಗಳೂರು.

ಹೆಚ್ಚಿನ ಓದಿಗೆ:

  1. APJ Abdul Kalam, India’s First launch Vehicle, From Fishing Hamlet to Red Planet: India’s Space Journey, ISRO & Harper Collins, 1st Edition, 2015
  2. The Architect: Satish Dhawan, From Fishing Hamlet to Red Planet: India’s Space Journey, ISRO & Harper Collins, 1st Edition, 2015
  3. Satish: Chance and friendship in the arc of life by Jyotsna Dhawan, Bhavana Magazine, Issue 3, July 2020

This Post Has 5 Comments

  1. ಚಲಪತಿ. ಆರ್

    ತುಂಬಾ ಸೊಗಸಾಗಿದೆ ಬರೆಹ, ಸತೀಶ್ ದವನ್ ವ್ಯಕ್ತಿತ್ವ ಅಚ್ಚುಕಟ್ಠಾಗಿ ತಿಳಿಯುವಂತಿದೆ.

  2. ಕೃಷ್ಣಮೂರ್ತಿ ಬಿ .ಎಸ್

    ಅಚ್ಚುಕಟ್ಟಾದ ಪ್ರೇರಾಣಾತ್ಮಕ ವ್ಯಕ್ತಿ ಚಿತ್ರಣ ಬರಹ.

  3. KRS

    ಸತೀಶ್ ಧವನ್ ಸರ್ ಬಗ್ಗೆ APJ ಅಬ್ದುಲ್ ಕಲಾಂ ಅವರಿಂದ ಬಹಳಷ್ಟು ಕೇಳಿದ್ದೆ. ಈ ಲೇಖನ ಅವರ ಉದಾತ್ತ ಧ್ಯೇಯ, ಉನ್ನತ ಮಾನವೀಯ ಮೌಲ್ಯಗಳು ಹಾಗೂ ದೇಶದ ಸರ್ವೋಚ್ಚ ನಾಗರೀಕ ಹಾಗೂ ವಿಜ್ನಾನಿ, ಅವರ ಚಿಂತನೆಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವುದು ಶ್ಲಾಘನೀಯ. ಧನ್ಯವಾದ CPUS

  4. ನಿರ್ಮಲ

    ಲೇಖನ ತುಂಬಾ ಚೆನ್ನಾಗಿದೆ. Satish ರವರ ಸರಳ ವ್ಯಕ್ತಿತ್ವ ಮೆಚ್ಚುವಂಥದ್ದು.

  5. ANSAR PASHA G

    ಸತೀಶ್ ಧವನ್ ರವರ ಬಗ್ಗೆ ಲೇಖನ ಬಹಳ ಚೆನ್ನಾಗಿ ಮೂಡಿ ಬಂದಿದೆ.

Leave a Reply