You are currently viewing ತಿನ್ನಲೇ ಬೇಕಾದ ತರಕಾರಿ ಎಲೆಕೋಸು Cabbage, Brassica oleracea subsp. capitata.

ತಿನ್ನಲೇ ಬೇಕಾದ ತರಕಾರಿ ಎಲೆಕೋಸು Cabbage, Brassica oleracea subsp. capitata.

ಎಲೆಕೋಸು ಅಥವಾ ಕ್ಯಾಬೇಜ್‌ (Cabbage) ಬಹುಶಃ ಸಸ್ಯಹಾರಿಗಳು -ತಿನ್ನಲೇ ಬೇಕಾದ ತರಕಾರಿ. ಏಕೆಂದರೆ ವಿಟಮಿನ್‌ ಬಿ-12 ಅನ್ನು ಹೊಂದಿರುವ ಏಕೈಕ ತರಕಾರಿಎಲೆಕೋಸು. ಇದೇ ವಿಟಮಿನ್‌ ಅನ್ನು ಪ್ರಾಣಿ ಮೂಲದಿಂದ ಪಡೆಯಬಹುದು ಆದರೆ ಸಸ್ಯ ಮೂಲದಿಂದ ಸಿಗಬೇಕಾದರೆ ಕೋಸುಗಳಲ್ಲಿ ಮಾತ್ರ. ಜಗತ್ತಿನ ನೂರಾರು ದೇಶಗಳಲ್ಲಿ ಸಹಸ್ರಾರು ವರ್ಷಗಳಿಂದ ಬೆಳೆಯುತ್ತಿರುವ, ಬಹು ಮುಖ್ಯವಾದ ತರಕಾರಿ. ಆದರೆ ಆಸ್ಟ್ರೇಲಿಯವನ್ನು ಮಾತ್ರ ತೀರಾ ಇತ್ತೀಚೆಗೆ 18ನೆಯ ಶತಮಾನದಿಂದೀಚೆ ತಲುಪಿದೆ.  ಸುಮಾರು 3000 ವರ್ಷಗಳಷ್ಟು ಹಿಂದಿನಿಂದಲೇ ಇದರ ಔಷಧೀಯ ಉಪಯೋಗಗಳನ್ನೂ ಕಂಡುಕೊಂಡಿದ್ದವರು ಗ್ರೀಕರು. ಒಂದು ಕಾಲದಲ್ಲಿ ಯೂರೋಪಿಯನ್ನರಲ್ಲಿ “ವಿಟಮಿನ್‌-ಸಿ”  ಕೊರತೆಯ ಸ್ಕರ್ವಿ ರೋಗಕ್ಕೆ ಮದ್ದಾಗಿಯೂ ಬಳಕೆಯಾಗಿದ್ದು ಎಲೆಕೋಸು. ಇದರ ತಾಜಾ ಜ್ಯೂಸ್‌ “ಸಿ-ವಿಟಮಿನ್‌” ಅನ್ನು ಪಡೆಯುವ ಅತ್ಯುತ್ತಮ ಪರಿಹಾರ. ಅಷ್ಟೇಕೆ ಹೊಟ್ಟೆಯ ಅಲ್ಸರ್‌ಗೂ ಕೂಡ ಇದರಿಂದ ಪರಿಹಾರವನ್ನು ಕಂಡುಕೊಂಡ ಸಂಸ್ಕೃತಿಗಳಿವೆ.  

     ಕ್ಯಾಬೇಜ್‌ (Cabbage) ಪದವು ಮಧ್ಯ ಕಾಲೀನ ಇಂಗ್ಲೀಶ್‌ ಪದ Caboche ಎಂಬುದರಿಂದ ಹುಟ್ಟಿದೆ. ಇದರ ಅರ್ಥ Head ಎಂಬುದಾಗಿದ್ದು ಕೋಸು ಒಂದು ತಲೆಯಂತೆ ಇರುವುದರಿಂದ ಹಾಗೆ ರೂಢಿಗೆ ಬಂದಿದೆ. ಒಂದು ತರಕಾರಿಯಾಗಿ ಸರಿ ಸುಮಾರು ಕ್ರಿ.ಪೂ. 2000 – 2500 ಗಳಷ್ಟು ಹಿಂದಿನಿಂದಲೂ ಬಳಕೆಯಲ್ಲಿದೆ ಎಂದು ಅಂದಾಜಿದೆ. ಮೆಡಿಟರೇನಿಯನ್‌ ನೆಲದ ಮೂಲದ ಕ್ಯಾಬೇಜು, ಯೂರೋಪಿನಾದ್ಯಂತ ಬಹು ಹಿಂದಿನಿಂದಲೂ ಹರಡಿಕೊಂಡಿದೆ. ಸಾಸಿವೆಯ ಹತ್ತಿರದ ಸಂಬಂಧಿಯಾದ ಎಲೆಕೋಸು ಬ್ರಾಸಿಕೇಸಿಯೇ ಸಸ್ಯಕುಟುಂಬಕ್ಕೇ ಸೇರಿದೆ. ಬಹುಪಾಲು ಕೋಸುಗಳನ್ನು ಕರೆಯುವಂತೆ ಇದನ್ನೂ ಬ್ರಾಸಿಕಾ ಒಲರೇಸಿಯೇ (Brassica oleracea) ಎಂದೇ ಕರೆದಿದ್ದು ಅದರಲ್ಲಿ ತಳಿ ಅಥವಾ ಉಪ ಪ್ರಭೇದವೆಂದು ಕ್ಯಾಪಿಟಟ್‌ (Capitat) ಎನ್ನಲಾಗುತ್ತದೆ. ಜಾಗತಿಕ ಉತ್ಪಾದನೆಯಲ್ಲಿ ಚೀನಾ ಮೊದಲ ಸ್ಥಾನದಲ್ಲಿ ಸುಮಾರು 48% ಉತ್ಪಾದನೆಯನ್ನು ಮಾಡುತ್ತದೆ. ಇಲ್ಲಿ 34 ಮಿಲಿಯನ್‌ ಟನ್ನುಗಳಷ್ಟು ಉತ್ಪಾದನೆಯಿದೆ. ನಂತರದ ಸ್ಥಾನವನ್ನು ಭಾರತವು 10ಮಿಲಿಯನ್‌ ಉತ್ಪಾದನೆಯಿಂದ ಪಡೆದಿದೆ. ಜಾಗತಿಕವಾಗಿ ಸುಮಾರು 70-72 ದಶಲಕ್ಷ ಟನ್ನುಗಳಷ್ಟು ಎಲೆಕೋಸು ಉತ್ಪಾದನೆಯಾಗುತ್ತದೆ.

       ನಾವು ತರಕಾರಿಯಾಗಿ ಬಳಸುವ ಎಲೆಕೋಸು, ನಿಜಕ್ಕೂ ಸಸ್ಯದ ಎಲೆಗಳು ದುಂಡಗೆ ಸುತ್ತಿಕೊಂಡು “ಹೆಡ್‌ ಅಥವಾ ತಲೆ”ಯನ್ನು ಹೋಲುವ ಸಸ್ಯದ ಭಾಗವು ಗಿಡವಿನ್ನೂ ಬಲಿಯದ್ದು. ಏಕೆಂದರೆ ಇದೊಂದು ಸಹಜವಾಗಿ ದ್ವೈವಾರ್ಷಿಕ ಸಸ್ಯವಾಗಿದ್ದು, ಮೊದ 120-180 ದಿನಗಳ ಕೊಯಿಲು, ಎಲೆಕೋಸು! ಆಗ ಅದಿನ್ನೂ ತನ್ನ ಬಾಲ್ಯವಾಸ್ಥೆಯ ಗಿಡ. ಮರು ವರ್ಷ ಅದು ತನ್ನ ಯೌವನಕ್ಕೆ ತಲುಪಿ ವಂಶಾಭಿವೃದ್ಧಿಗೆ ಹೂ ಬಿಡಲು ಅಣಿಯಾಗುತ್ತದೆ. ನಾವು ಬಳಸುವ ಕೋಸನ್ನು ಹಾಗೇ ಬೆಳೆಯಲು ಬಿಟ್ಟರೆ ಮುಂದಿನ ವರ್ಷದಲ್ಲಿ ಅದು ಸಾಸುವೆಯ ಗಿಡದಂತೆ ಎತ್ತರವಾಗಿ ಬೆಳೆದು ಹಳದಿ ಬಣ್ಣದ ಗೊಂಚಲು ಗೊಂಚಲಾದ ಹೂಗಳನ್ನು ಬಿಡುತ್ತದೆ. ಅದರಲ್ಲಿ ಸಾಸಿವೆಯ ಕಾಯಿಯಂತವೇ ಕಾಯಿಗಳೂ ಕೂಡ ಬಿಡುತ್ತವೆ. ಇದೇ ರೀತಿ ಮೂಲಂಗಿಯೂ ಸಹಾ. ಹಾಗಾಗಿ ಬಳಸುವ ಕೋಸುಗಳು ನಿಜಕ್ಕೂ ಎಳೆಯವೇ!

       ಎಳೆಯ, ಮೃದುವಾದ ಸಸ್ಯಭಾಗವನ್ನು ತರಕಾರಿಯಾಗಿ, ಬಳಸಲು ಹಸಿಯಾಗಿಯೇ, ಅರೆಬೆಂದ ಬಗೆಯಲ್ಲೋ (ತಾಳಿಸುವುದು – Sautéing), ಪೂರ್ಣ ಬೇಯಿಸಿಯೋ, ಫರ್ಮೆಂಟ್‌ – ಹುದುಗು ಬರಿಸಿ- ಮಾಡಿ, ಉಪ್ಪಿನ ಕಾಯಿಯಾಗಿ, ತಾಜಾ ಜ್ಯೂಸ್‌ ಮಾಡಿ, ರಸದಲ್ಲಿ ಬಗೆ-ಬಗೆಯ ಪಾನಿಯವಾಗಿಸಿ ಬಳಸಲಾಗುತ್ತದೆ. ಅರಂಭದಲ್ಲೇ ತಿಳಿಸಿದಂತೆ ವಿಟಮಿನ್‌ಗಳ ಚಿಕಿತ್ಸೆಯಲ್ಲಿ ಜೊತೆಗೆ ವಿವಿಧ ಆಹಾರಾಂಶಗಳಿಗಾಗಿ ಯಾವುದೇ ಬಗೆಯ ಬಳಕೆಯು ಪ್ರೋತ್ಸಾಹಿಸುತ್ತದೆ.  

ಎಲೆಕೋಸು ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯವಾದ ತರಕಾರಿ. ಕಾರಣ, ಸುಲಭ ಬೆಲೆ, ಸ್ಥಳಿಯವಾಗಿಯೇ ದೊರಕುವಿಕೆ ಹಾಗೂ ಅದರ ಆಹಾರಾಂಶಗಳು ಜೊತೆಗೆ ಹೊಟ್ಟೆ ತುಂಬಿಸುವ ಗುಣ. ಅನೇಕ ಅಧ್ಯಯನಗಳ ಪ್ರಕಾರ ಎಲೆಕೋಸಿನಲ್ಲಿರುವ ಬಗೆ ಬಗೆಯ ಸಸ್ಯಮೂಲ ರಸಾಯನಿಕಗಳು (Phytochemicals) ಅದರ ಬಳಕೆಯನ್ನು ಉತ್ತೇಜಿಸಿವೆ. ಇವೇ ಅದರ ಬಳಕೆಯಿಂದ ಔಷಧೀಯ ಪರಿಹಾರಗಳನ್ನೂ ಸೂಚಿಸಿವೆ. ಇವುಗಳು ಸಸ್ಯಗಳ ಒಳಗೆ ಬಹುಪಾಲು ಸಸ್ಯವು ಅನುಭವಿಸುವ ಒತ್ತಡಗಳ (Stress) ಪ್ರತಿರೋಧದಿಂದ ಹುಟ್ಟಿದವು. ಇವುಗಳಿಗೆ ಅನೇಕ ಬಗೆಯ ಔಷಧ ಗುಣಗಳಿದ್ದು ವೈವಿಧ್ಯಮಯವಾದ ಬಳಕೆಯಿಂದ ಪಚನಕ್ರಿಯೆಯಲ್ಲಿ ಬಿಡುಗಡೆಗೊಂಡು ಲಾಭವನ್ನು ಕೊಡುತ್ತವೆ.

ಇದರಲ್ಲಿ ಮುಖ್ಯವಾಗಿ ವಿಟಮಿನ್ನುಗಳೇ ಅಲ್ಲದೇ ಕ್ಯಾಲ್ಸಿಯಂ, ಮ್ಯಾಗ್ನಿಸಿಯಂ, ಅಯೋಡಿನ್‌, ಮ್ಯಾಮಗನೀಸ್‌, ಗಂಧಕ, ರಂಜಕ ಮತ್ತು ತಾಮ್ರವು ಸಾಕಷ್ಟು ಪ್ರಮಾಣದಲ್ಲಿದ್ದು ಆಹಾರವಾಗಿ ದೊರಕುತ್ತವೆ. ಇವೆಲ್ಲವುಗಳಿಂದಾಗಿ ಕ್ಯಾಬೇಜು ಅತ್ಯುತ್ತಮ ಕ್ಯಾನ್ಸರ್‌ ನಿರೋಧಕವಾಗಿ, ರಕ್ತ ಶುದ್ಧೀಕಾರಕವಾಗಿ, ಅಲ್ಸರ್‌ ಪರಿಹಾರಕ್ಕೆಂದು, ಮಲಬದ್ದತೆ ನಿವಾರಣೆಗೆ, ಮಧುಮೇಹಿಗಳಲ್ಲಿ ಗ್ಲೈಸಿಮಿಯಾವನ್ನು ನಿಯಂತ್ರಿಸಲು, ನರ ಮಂಡಲ ಆರೋಗ್ಯದಲ್ಲೂ ಕ್ಯಾಬೇಜು ಗಮನಾರ್ಹವಾದ ಪಾತ್ರವಹಿಸುತ್ತದೆ. ಅದೇ ಕಾರಣದಿಂದ ಎಲೆಕೋಸಿನ ಜ್ಯೂಸನ್ನು ಆಹಾರೌಷಧ (Food Medicine)ವಾಗಿ ಇಡೀ ದೇಹದ ಅಮೂಲಾಗ್ರ ಸುವ್ಯವಸ್ಥೆಗೆ ಬಳಸಲಾಗುತ್ತದೆ.

ಕೋಸುಗಳಲ್ಲಿ ಮುಖ್ಯವಾಗಿ ಎಲ್ಲಾ ಸಾಸಿವೆ ಕುಟುಂಬದ ಸಸ್ಯಗಳಲ್ಲೂ ಸಹಾ ಒಂದು ವಿಶಿಷ್ಠ ವಾಸನೆಯು ಬಳಕೆಗೆ ತುಸು ಪ್ರತಿರೋಧ ಒಡ್ಡುತ್ತದೆ. ಅದನ್ನು ಕೋಸುಗಳ ವಾಸನೆಯೆಂದು ಕೋಸುಗಳಲ್ಲಿ, ಸಾಸಿವೆಯಲ್ಲಿ ಸಾಸಿವೆಯ ವಾಸನೆಯೆಂದೂ ಕರೆಯಲಾಗುತ್ತದೆ. ಇವೆಲ್ಲವೂ ಆಯಾ ಸಸ್ಯಗಳಲ್ಲಿ ಒಂದೊಂದು ಬಗೆಯಿದ್ದು, ಸ್ವಲ್ಪ ಸಂಬಂಧವಿರುವಂತೆಯೂ ಅನುಭವಕ್ಕೆ ಬರುವುದುಂಟು. ಸಾಸಿವೆಯ ಎಣ್ಣೆಯಲ್ಲಿ ಘಾಟು ಹೆಚ್ಚಾಗಿದ್ದು ತೀರಾ ಭಿನ್ನ ಎನಿಸಿದರೂ ಆಶ್ಚರ್ಯವಿಲ್ಲ, ಆದರೆ ಇವೆಲ್ಲವೂ ಗ್ಲೂಕೊಸಿನೊಲೇಟ್‌ (Glucosinolates)ಗಳು ಎಂಬ ಗಂಧಕವನ್ನು ಮುಖ್ಯವಾಗಿ ಹೊಂದಿರುವ ರಸಾಯನಿಕ ಗುಂಪುಗಳವು. ಮೊಟ್ಟ ಮೊದಲ ಬಾರಿಗೆ 1831ರಲ್ಲಿಯೇ ಸಾಸಿವೆಯ ಬೀಜಗಳಿಂದ ಈ ಬಗೆಯ ರಸಾಯನಿಕವನ್ನು ಸಂಶ್ಲೇಷಣೆ ಮಾಡಿದ್ದು ಆನಂತರದಲ್ಲಿ ಕಳೆದ ಶತಮಾನದವರೆಗೂ ಸರಿಸುಮಾರು 90ಕ್ಕೂ ಹೆಚ್ಚು ಬಗೆಯ ಗ್ಲೂಕೊಸಿನೊಲೇಟ್‌ (Glucosinolate) ರಸಾಯನಿಕಗಳನ್ನು ಪತ್ತೆ ಹಚ್ಚಲಾಗಿದೆ. ಕೆಲವೊಂದು ಪ್ರಭೇದಗಳಲ್ಲಿ ಕೆಲವೊಂದು ಬಗೆಯ ಗ್ಲೂಕೊಸಿನೊಲೇಟ್‌ (Glucosinolate) ರಸಾಯನಿಕಗಳು ಇರುವುದಲ್ಲದೆ, ಅವುಗಳ ಒಟ್ಟಾರೆಯ ಪ್ರಮಾಣವೂ ಭಿನ್ನ-ಭಿನ್ನ. ಹಾಗಾಗಿ ಇವು ಬಳಕೆಯಲ್ಲೂ ಹಾಗೆಯೇ ದೇಹದ ಮೇಲೆ ಉಂಟುಮಾಡುವ ಪರಿಣಾಮದಲ್ಲೂ ಬಗೆ ಬಗೆಯ ರೂಪದವೇ!

ಮೂಲತಃ ಈ ಗ್ಲೂಕೊಸಿನೊಲೇಟ್‌ (Glucosinolate)ಗಳು ಅಷ್ಟೇನೂ ಹಾನಿಕಾರಕವೇನಲ್ಲ! ಆದರೆ ಅವುಗಳ ಉತ್ಪನ್ನಗಳು ಕೆಲವೊಮ್ಮೆ ಹಾನಿಕಾರಕ. ಹಾಗಾಗಿ ಗಂಧಕವು ಬಿಡುಗಡೆಗೊಂಡು ಉತ್ಪನ್ನಗಳಲ್ಲಿ ಸೇರಿಕೊಂಡ ವಾಸನೆಯು ಕೋಸುಗಳಲ್ಲಿ ಸಹಜವಾಗಿ ಇರುತ್ತದೆ. ಇವುಗಳ ಪರಿಣಾಮಗಳೂ ಬಗೆ ಬಗೆಯಾಗಿಯೇ ಇರುವುದುಂಟು. ಆದರೂ ಆಹಾರಾಂಶವಾಗಿ ಹಾಗೂ ಔಷಧೀಯ ಬಳಕೆಗೆ ಹೆಚ್ಚಿನ ಪಾಲು ತೊಂದರೆಯನ್ನು ಒಡ್ಡಿಲ್ಲ. ಕೆಲವರಲ್ಲಿ ವಿಶೇಷವಾಗಿ ಅಲರ್ಜಿ ಇದ್ದವರಲ್ಲಿ ಪರಿಣಾಮಗಳು ತೋರಬಹುದು.  

ಎಲೆಕೋಸು ಸಾಕಷ್ಟು ನಾರಿನಂಶವನ್ನೂ ಹೊಂದಿದ್ದು ಪ್ರತಿಶತ ಸಕ್ಕರೆಯಲ್ಲಿ ಕಡಿಮೆಯಿದ್ದು ಹೆಚ್ಚುವರಿ ಶಕ್ತಿಯನ್ನೇನೂ ಬಿಡುಗಡೆ ಮಾಡದೆ ಬಳಕೆಯ ಹಿತದಿಂದ ಅತ್ಯುತ್ತಮವಾದ ತರಕಾರಿ. ಆದರೆ ದಕ್ಷಿಣ ಭಾರತೀಯರ ಸಮಸ್ಯೆ ಎಂದರೆ, ಉಷ್ಣವಾತಾವರಣದಲ್ಲಿ ಇದರ ಕೀಟ ಸಂರಕ್ಷಣೆಯಲ್ಲಿ ಬಳಸಬೇಕಿರುವ ಹೆಚ್ಚಿನ ರಸಾಯನಿಕಗಳು. ಆದ್ದರಿಂದ ಕಡಿಮೆ ರಸಾಯನಿಕಗಳನ್ನು ಬಳಸಿದ, ಅದರಲ್ಲೂ ಸಾವಯವ ಉತ್ಪಾದನೆಯ ಕೋಸುಗಳು ನಿಜಕ್ಕೂ ಆರೋಗ್ಯ ಸಂವರ್ಧನೆಯಲ್ಲಿ ಬಳಸಲೇ ಬೇಕಿರುವ ತರಕಾರಿ.

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್.‌

ಹೆಚ್ಚಿನ ಓದಿಗೆ:

Nora Moreb, et al. 2020. Nutritional Composition and Antioxidant Properties of Fruits and Vegetables. DOI: https://doi.org/10.1016/B978-0-12-812780-3.00003-9

Marian Butu and  Steliana Rodino 2019. Fruit and vegetable-based beverages—nutritional

Properties and health benefits In Natural Beverages. https://doi.org/10.1016/B978-0-12-816689-5.00011-0

M. S. Chiang, C. Chong, B.S. Landry and R. Crete., 1993. Cabbage Brassica oleracea subsp. capitata L In Genetic improvement of vegetable crops. https://doi.org/10.1016/B978-0-08-040826-2.50012-6

This Post Has One Comment

  1. ಕವಿತಾ

    ಧನ್ಯವಾದಗಳು ಸರ್. ತುಂಬಾ ಉಪಯುಕ್ತವಾದ ಮಾಹಿತಿ. 🙏

Leave a Reply