ಈರುಳ್ಳಿಯು ಕೃಷಿಗೆ ಒಳಗಾಗುವ ಮೊದಲೇ ಮಾನವಕುಲದ ಆಹಾರದಲ್ಲಿ ಒಂದಾಗಿತ್ತು. ಆಗ ಅದನ್ನು ವನ್ಯ ಮೂಲದಿಂದ ಆಯ್ದು ತಂದು ತಿನ್ನುತ್ತಿದ್ದರು. ಒಂದು ಗಿಡವಾಗಿ ಈರುಳ್ಳಿಯು ತುಂಬಾ ಚಿಕ್ಕದು. ಒಟ್ಟಾರೆಯ ಸಸ್ಯಭಾಗವೂ ತೀರಾ ಕಡಿಮೆ. ಅದರ ಬೇರಿನ ಭಾಗವನ್ನು ಹೊರತುಪಡಿಸಿ ಉಳಿದದ್ದೆಲ್ಲವನ್ನೂ ಹಸಿಯಾಗಿ, ಹುರಿದು ಅಥವಾ ಬೇಯಿಸಿ ತಿನ್ನಬಹುದು. ಗಿಡ ಚಿಕ್ಕದಾಗಿದ್ದರೂ ಮಾನವ ಜೀವಿಕೋಶದ ಹನ್ನೆರಡು ಪಟ್ಟು ಡಿ.ಎನ್.ಎ.ಯನ್ನು ತನ್ನೊಳಗೆ ಹೊತ್ತಿದೆ. ಗಾತ್ರದಲ್ಲಿ ಚಿಕ್ಕದಾಗಿದ್ದರೂ ಅಷ್ಟೊಂದು ಪಟ್ಟು ಹೆಚ್ಚಾಗಿ ಯಾವ ಕಾರಣದಿಂದ ಆನುವಂಶಿಕ ಮೂಲವನ್ನು ಹೊತ್ತಿದೆ ಎಂಬ ಕೌತುಕವು ಡಿ.ಎನ್.ಎ.ಯ ಕುರಿತ ಅರಿವಿನ ಆದಿಯಿಂದಲೂ ಸುಮಾರು ಐದು ದಶಕಗಳ ಕಾಲ ವಿಜ್ಞಾನವನ್ನು ಕಾಡಿತ್ತು.
ನೀವು ಸಂಪೂರ್ಣ ಒಣಗಿದ ಈರುಳ್ಳಿಯ ಗಡ್ಡೆಯನ್ನೇನಾದರೂ ನೋಡಿದ್ದೀರಾ? ಅಂದರೆ ಮೇಲು ಸಿಪ್ಪೆಯಂತೆಯೇ ಒಳಭಾಗವೂ ಒಣಗಿದ್ದು ಬಳಸಲು ಯೋಗ್ಯವಲ್ಲದ ಈರುಳ್ಳಿ! ನೋಡಿರಲಾರಿರಿ, ಒಳಗಿನ ಭಾಗವನ್ನು ಸ್ವಲ್ಪವಾದರೂ ಬಳಸುವಂತೆಯೇ ಇರುತ್ತದೆ. ಇಡೀ ಗಡ್ಡೆಯೇ ಒಂದರ ಮೇಲೊಂದು ಪದರಗಳನ್ನು ಹೊದ್ದುಕೊಂಡಂತೆ ಇರುವುದಲ್ಲವೇ? ಒಣಗಿದ ಸಿಪ್ಪೆಯನ್ನು ಬಿಡಿಸುತ್ತಾ ಹೋದ ಹಾಗೆ ಒಳಗೆ ಸ್ವಲ್ಪವಾದರೂ ಹಸಿಯಿಟ್ಟುಕೊಂಡೇ ಇರುತ್ತದೆ. ಸುಲಭವಾಗಿ ಹಸಿಯನ್ನು ಬಿಟ್ಟುಕೊಡದ ಹಾಗೆ ಸಿಪ್ಪೆಗಳನ್ನು ಒಂದರ ಮೇಲೆ ಒಂದರಂತೆ ಹೊದ್ದಿರುತ್ತದೆ. ಅದು ಹುಟ್ಟಿದ ವಾತಾವರಣವೇ ಒಣನೆಲ, ಸುಲಭವಾಗಿ ಏನನ್ನೂ ಬಿಟ್ಟುಕೊಡದಂತೆ ವಿಕಾಸಗೊಂಡಿದೆ. ಮಾನವರನ್ನೂ ಸೇರಿಕೊಂಡು ಬಹುಪಾಲು ಜೀವಿಗಳ ಜೀನೊಮಿನಲ್ಲಿ ಒಂದಷ್ಟು ದೊಡ್ಡ ಪಾಲು ಡಿ.ಎನ್.ಎ.ಯಾವ ಕೆಲಸಕ್ಕಾಗಿ ಇದೆ ಎಂಬುದೇ ತಿಳಿದಿಲ್ಲ ಅಥವಾ ಅದರ ಬಗೆಗೆ ಹಲವು ವ್ಯಾಖ್ಯಾನಗಳಿವೆ. ಇದನ್ನು ಜಂಕ್ ಡಿ.ಎನ್.ಎ. ಎಂದೇ ಕರೆಯಲಾಗುತ್ತದೆ. ಹಲವಾರು ಜೀವಿಗಳಲ್ಲಿ ಈ ಜಂಕ್ ಡಿ.ಎನ್.ಎ.ಯನ್ನು ಜೀವಿಗಳು ಕಡಿಮೆ ಮಾಡಿಕೊಳ್ಳುತ್ತವಂತೆ, ಆದರೆ ಈರುಳ್ಳಿ ಮಾತ್ರ ಸ್ವಲ್ಪವೂ ಕಳೆದುಕೊಳ್ಳದೆ ಕಾಯ್ದಿಟ್ಟು ಕೊಂಡೇ ಇರುತ್ತದೆ. ಇದೇ ಕಾರಣದಿಂದ ಈರುಳ್ಳಿಯು ನಮಗಿಂತಲೂ ಹನ್ನೆರಡು ಪಟ್ಟು ದೊಡ್ಡ ಜೀನೋಮನ್ನು ಹೊಂದಿದೆ ಎಂದು ವ್ಯಾಖ್ಯಾನಿಸಲಾಗಿದೆ.
ನಮ್ಮ ದೇಹದಲ್ಲೂ ಈ ಜಂಕ್ ಜೀನೋಮ್ ಸಣ್ಣ ಮೊತ್ತದ್ದೇನಲ್ಲ. ಹೆಚ್ಚೂ-ಕಡಿಮೆ ಪ್ರತಿಶತ 70ರಷ್ಟಾದರೂ ಇದೆ. ಅಷ್ಟೊಂದನ್ನು ಹೊತ್ತು ಅದ್ಯಾವ ಮುಂದಾಲೋಚನೆಯು ಜೀವಿಕೋಶಕ್ಕೆ ಇದೆಯೋ ತಿಳಿದಿಲ್ಲ. ಅಂತಹದರಲ್ಲಿ ಈರುಳ್ಳಿಯು ಮಾತ್ರ ಸ್ವಲ್ಪವೂ ಕಳೆದುಕೊಳ್ಳದೆ ತನ್ನ ತಾನು ಕಾಪಾಡಿಕೊಂಡು ವಿಕಾಸಗೊಂಡಿದೆ. ಸುಲಭವಾಗಿ ಏನನ್ನೂ ಬಿಟ್ಟುಕೊಡದೆ ಮುಂದಿನ ಸಂತತಿಗೆ ರವಾನಿಸಿಕೊಂಡೇ ಬಂದಿದೆ. ಅದಕ್ಕೆ ಅದನ್ನೇನಾದರೂ ಒಳಹೊಕ್ಕು ನೋಡುವ ಮೊದಲ ಪ್ರಯತ್ನಕ್ಕೇ, ಅಂದರೆ ಅದನ್ನು ಕತ್ತರಿಸುವುದರ ಪ್ರತಿರೋಧಕ್ಕೆಂದೇ ರಾಸಾಯನಿಕವನ್ನು ತುಂಬಿಕೊಂಡಿದೆ. ಈರುಳ್ಳಿಯು ಗಂಧಕದ ರಾಸಾಯನಿಕವನ್ನು ಒಳಗೊಂಡಿದ್ದು, ಅದು ಕತ್ತರಿಸುವಾಗ ಗಾಳಿಯಲ್ಲಿ ಸಣ್ಣ ಸಣ್ಣ ಕಣಗಳಂತೆ (ಏರೋಸಾಲ್) ಹರಡಿ ಕಣ್ಣನ್ನು ತಲುಪುವುದರಿಂದ ಕಣ್ಣೀರು ತರಿಸುತ್ತದೆ. ಈರುಳ್ಳಿಯನ್ನು ತಣ್ಣಗೆ ಮಾಡಿ ಹೆಚ್ಚುವುದರಿಂದ ಘಾಟು ಕಡಿಮೆ ಮಾಡಬಹುದು. ಆದರೂ ಇದೇನು ಕೆಲವು ಕ್ಷಣ ಮಾತ್ರ ತಾನೇ? ತಡೆದುಕೊಳ್ಳಲೇನೂ ಕಷ್ಟವಿಲ್ಲ!
ಈರುಳ್ಳಿಯನ್ನು ಆಲಿಯಮ್ ಸೆಪಾ (Allium cepa) ಎಂಬು ವೈಜ್ಞಾನಿಕ ಹೆಸರಿನಿಂದ ಕರೆಯಲಾಗುತ್ತದೆ. ಈರುಳ್ಳಿ, ಬೆಳ್ಳುಳ್ಳಿ ಎರಡೂ ಅಮರಿಲಿಡೇಸಿಯೇ(Amaryllidaceae)) ಎಂಬ ಒಂದೇ ಕುಟುಂಬದ ಸಸ್ಯಗಳು. ಈ ಮೊದಲು ಈ ಕುಟುಂಬದವನ್ನು ಲಿಲಿಯೇಸಿಯೆ(Liliaceae) ಎಂದು ಕರೆಯಲಾಗುತ್ತಿತ್ತು. ಸಂಕುಲದ ಹೆಸರಾದ ಆಲಿಯಮ್ ಪದವು ಲ್ಯಾಟಿನ್ ಭಾಷೆಯಲ್ಲಿ ಬೆಳ್ಳುಳ್ಳಿಗೆ ಸಮಾನಾರ್ಥ ಹೊಂದಿದೆ. ಆದರೂ ಕೆಲವು ವ್ಯಾಖ್ಯಾನಕಾರರು ಆಲಿಯಮ್ ಪದವು ದೂರವಿರು, ಬಿಟ್ಟು ಬಿಡು ಎಂಬರ್ಥದ ಗ್ರೀಕ್ ಮೂಲದ ಆಲಿಯೊ (aleo, -to avoid) ನಿಂದ ಬಂದದ್ದು ಎನ್ನುತ್ತಾರೆ. ಏನೇ ಇದ್ದರೂ ಅವೆರಡೂ ಬೆಳ್ಳುಳ್ಳಿಯನ್ನು ಕುರಿತಂತಹಾ ಸಂಗತಿಗಳೆನ್ನುವುದಂತೂ ನಿಜವಾದುದು. ಸೆಪಾ ಪದವು ಲ್ಯಾಟಿನ್ ಭಾಷೆಯ ಈರುಳ್ಳಿಗೆ ಸಮನಾದುದು. ಒಂದು ರೀತಿಯಲ್ಲಿ ಈರುಳ್ಳಿ – ಬೆಳ್ಳುಳ್ಳಿ ಒಟ್ಟಾಗಿ ವೈಜ್ಞಾನಿಕ ಹೆಸರು ನಿರೂಪಗೊಂಡಿದೆ.
ಈರುಳ್ಳಿಯ ಸಸ್ಯದ ಕಾಂಡವು ನೆಲದೊಳಗೆ ಹೂತು ಗಡ್ಡೆಯಾಗಿ ಮಾರ್ಪಾಡಾಗಿರುತ್ತದೆ. ಅದರ ಸುತ್ತಲೂ ಎಲೆಗಳು ಪದರಗಳಾಗಿ ಸುತ್ತಿಕೊಂಡಿರುತ್ತವೆ. ಅದನ್ನೇ ನಾವು ತರಕಾರಿಯಾಗಿ ಬಳಸುವುದು. ಎಲೆಗಳೂ ಇತರೇ ಸಸ್ಯಗಳಂತಲ್ಲ. ನೀಲಿ ಮಿಶ್ರಿತ ಹಸಿರಾದ ಅವುಗಳು ಕೊಳವೆಯಂತೆ ನೆಲದಿಂದ ಹೊರಚಾಚಿ ತುದಿಯಲ್ಲಿ ಹೂಬಿಟ್ಟು ನಿಂತಿರುತ್ತದೆ. ಒಂದು ಬೆಳೆಯಾಗಿ ಈರುಳ್ಳಿಗೆ ಇತರ ಸಸ್ಯಗಳ ಜೊತೆಗೆ ಸ್ಪರ್ಧಿಸಿ ಛಲದಿಂದ ಬೆಳೆಯುವ ತಾಕತ್ತಿಲ್ಲ. ಹಾಗಾಗಿ ಬಹಳ ಸುಲಭವಾಗಿ ಕಳೆಗಳಿಂದ ತುಂಬಾ ನೋವು ಅನುಭವಿಸುವ ಒಂದು ಸಾತ್ವಿಕ ಬೆಳೆ. ಆದರೂ ಈರುಳ್ಳಿಯು ನೆಲದಲ್ಲಿ ಎರಡು ವರ್ಷಕಾಲ ಬದುಕುಳಿಯುವ ಬಗೆಯನ್ನು ವಿಕಾಸಗೊಳಿಸಿಕೊಂಡಿದೆ. ನೀರಿನ ದಾಹವನ್ನು ಸಹಿಸಿಕೊಂಡು ಬೆಳೆಯುವ ಅಪ್ಪಟ ಬಿಸಿಲ ಪ್ರೇಮಿ. ಅದಕ್ಕೆಂದೇ ಎಲೆಗಳನ್ನು ಜೋಡಿಸಿದಂತೆ ವಿಕಾಸಗೊಳಿಸಿ ಖಾಲಿ ಕೊಳವೆಯಾಗಿಸಿ ಒಳಗೆ ತಂಪಾಗಿರಿಸಿಕೊಂಡಿದೆ. ಒಣ ವಾತಾವರಣದಲ್ಲೂ ಜೀವಂತವಾಗಿದ್ದು ಮುಂದೊಮ್ಮೆ ಬದುಕನ್ನು ಬೆಳೆಸಿಕೊಳ್ಳುವ ಛಲಕ್ಕೆ ಏರ್ ಕಂಡಿಷನ್ ಮಾಡಿಕೊಳ್ಳಲು, ಅದರ ಎಲೆಗಳೂ ಸುರುಳಿಯಂತೆ ಕೊಳವೆಗಳಾಗಿ ಉಷ್ಣತೆಯನ್ನು ತಡೆವ ಉಪಾಯ ಮಾಡಿಕೊಂಡಿವೆ. ಈ ಸಸ್ಯವು ನೀರಿನ ದಾಹ ತಡೆಯಲು ಅದರ ಕವಾಟ (ಎಲೆಗಳಲ್ಲಿನ ರಂಧ್ರ)ಗಳನ್ನು ಮುಚ್ಚಿಕೊಂಡಿರಲೂ ಕಲಿತಿದೆ. ಇದರಿಂದ ನೀರು ಹೆಚ್ಚು ಬಾಷ್ಪವಿಸರ್ಜನೆಯಿಂದ ಹೊರಹೋಗದು. ಗಡ್ಡೆಯಾಗಿರುವುದರ ಜೊತೆಗೆ ಕೆಲವು ಶಾರೀರಕ ಹೊಂದಾಣಿಕೆಗಳನ್ನು ಒಣ ವಾತಾವರಣಕ್ಕೆ ಹೊಂದಿಕೊಳ್ಳಲೆಂದೇ ವಿಕಾಸಗೊಳಿಸಿಕೊಂಡಿದೆ. ಅಲ್ಲದೆ ಈರುಳ್ಳಿ ವಿಕಾಸವಾಗಿದ್ದೇ ಕಲ್ಲು ಗೊರಜುಗಳುಳ್ಳ ತೆಳುವಾದ ಮಣ್ಣಿನ ಪ್ರದೇಶದಲ್ಲಿ. ಆದ್ದರಿಂದ ಬೇರುಗಳು ಆಳವಾಗಿ ಬೆಳೆಯಲಾರವು. ಹೀಗಾಗಿ ಬುಡವೂ ಭದ್ರವಿಲ್ಲ, ಕಾಂಡವನ್ನು ಹೊಂದಿಲ್ಲ, ಬಹುಕಾಲ ತಾಳಿಕೊಳ್ಳಲೆಂದೇ ಎರಡು ವರ್ಷಕಾಲ ಬದುಕುವ ಕಲೆಯನ್ನು ಮಾತ್ರ ಕಲಿತಿದೆ.
ಇದು ಭಾರತ ಉಪಖಂಡದ ವಾಯುವ್ಯ ಭಾಗದ ಈಗಿರುವ ಆಫ್ ಘಾನಿಸ್ತಾನದ ಆಸುಪಾಸು ಅಥವಾ ಮಧ್ಯ ಏಶಿಯಾದಲ್ಲಿ ವಿಕಾಸಗೊಂಡಿರುವ ಬಗ್ಗೆ ನಂಬಲಾಗಿದೆ. ಆದರೂ ಈರುಳ್ಳಿಯ ಮೂಲ ಸಸ್ಯವು ಸಂಪೂರ್ಣ ನಶಿಸಿಹೋಗಿ ಈ ಸಸ್ಯದ ಬಗೆಗಿನ ತವರಿನ ಕುರಿತಾದ ಸಂಗತಿಗಳಲ್ಲಿ ಹಲವು ಅನುಮಾನಗಳನ್ನೂ ಸಹಾ ವ್ಯಕ್ತಪಡಿಸಲಾಗುತ್ತದೆ. ಈಜಿಪ್ಟರು, ಸುಮೆರಿಯನ್ನರು ಮುಂತಾದವರ ಕುರಿತು ದೊರಕಿದ ಸಂಗತಿಗಳಿಂದ ತವರಿನ ಸ್ಥಾನವನ್ನು ಮಧ್ಯ ಏಶಿಯಾದ ಸತ್ತಮುತ್ತಲಿನ ಭಾಗವೆಂದು ಕಂಡುಕೊಳ್ಳಲಾಗಿದೆ. ಈಜಿಪ್ಟ್ ನವರು ಸಾಂಸ್ಕೃತಿಕವಾಗಿ ಈರುಳ್ಳಿಗೆ ತುಂಬಾ ಗೌರವ ಕೊಟ್ಟಿದ್ದಾರೆ. ಇಷ್ಟೊಂದು ಘಾಟು ಘಾಟಾದ ಪರಿಮಳವು ಮತ್ತೆ ಉಸಿರಾಟ ತರಿಸುವುದೆಂಬ ನಂಬಿಕೆಯಿಂದಲೇ ಈಜಿಪ್ಟರು “ಮಮ್ಮಿ”ಗಳ ಜೊತೆ ಈರುಳ್ಳಿಯನ್ನು ಇರಿಸುತ್ತಿದ್ದರು. ಅವರ ಸಂಸ್ಕೃತಿಯಲ್ಲಿ ಈರುಳ್ಳಿಯು ದೀರ್ಘಾಯುಷ್ಯದ ಸಂಕೇತವಾಗಿದ್ದು, ಪೂಜಾರ್ಹವಾದ ಪದಾರ್ಥವಾಗಿತ್ತು. ಅಲ್ಲಿನ ಪಿರಮಿಡ್ಡುಗಳ ಒಳಗೋಡೆಗಳಲ್ಲಿ ಈರುಳ್ಳಿಯ ಚಿತ್ರಗಳು ಇವೆ. ನಮ್ಮ ಬಳಕೆಯಲ್ಲೂ ಈರುಳ್ಳಿಯು ಒಂದು ರೀತಿಯ ಬಹು ದಿನಗಳವರೆಗೂ ಇಡಬಹುದಾದ ತರಕಾರಿ ತಾನೇ?
ಇತಿಹಾಸ ಪೂರ್ವದಿಂದಲೂ ಈರುಳ್ಳಿಯು ಮಾನವಕುಲದ ಬಳಕೆಯಲ್ಲಿ ಒಂದಾಗಿದೆ. ಕ್ರಿಸ್ತಪೂರ್ವ 3200ರ ಮೊದಲನೆಯ ಈಜಿಪ್ಟ್ ಚಕ್ರಾಧಿಪತ್ಯದ ಕುರುಹುಗಳಲ್ಲಿ ಮತ್ತು ಇಸ್ರೇಲಿನ ದಾಖಲೆಗಳಲ್ಲಿ ಆಹಾರ, ಔಷಧ ಮತ್ತು ಧಾರ್ಮಿಕ ಬಳಕೆಗಳ ಕುರಿತು ವಿವರಗಳು ದೊರಕಿವೆ. ಭಾರತೀಯರ ದಾಖಲೆಗಳಲ್ಲಿ ಕ್ರಿ.ಪೂ. ಆರನೆಯ ಶತಮಾನದಲ್ಲೇ ಬಳಕೆಯ ವಿವರಗಳು ಇವೆ. ಚರಕ ಸಂಹಿತೆಯು ಈರುಳ್ಳಿಯ ಔಷಧೀಯ ಗುಣಗಳ ಬಗ್ಗೆ ಅದರಲ್ಲೂ ಪಚನಕ್ರಿಯೆ, ಹೃದಯ ಸಂಬಂಧದ ಒಳಿತುಗಳ ಕುರಿತು ವಿವರಗಳನ್ನು ನೀಡುತ್ತದೆ. ಗ್ರೀಕ್ ಮತ್ತು ರೋಮನ್ ಬರಹಗಾರರು ಮತ್ತು ದಾರ್ಶನಿಕರೂ ಆದ ಹಿಪೊಕ್ರಾಟಸ್ (ಕ್ರಿ.ಪೂ.430) ಮತ್ತು ಥಿಯೊಫ್ರಾಸ್ಟಸ್ (ಕ್ರಿ.ಪೂ.322) ಅವರ ಕಾಲಕ್ಕಾಗಲೇ ಹಲವು ಈರುಳ್ಳಿಗಳ ತಳಿಗಳನ್ನು ಹೆಸರಿಸಲಾಗಿತ್ತು. ಆಗಿನ ಹೆಸರುಗಳಲ್ಲಿ ಊದ್ದವಾದ, ದುಂಡನೆಯ, ಹಳದಿ ಅಥವಾ ಕಂದು ಬಣ್ಣದವೆಂದೂ, ತೀರಾ ಉರಿಯನ್ನು ತರಿಸುವ ಗುಣದವೆಂಬ ವಿವರಗಳಿದ್ದವು. ಮಧ್ಯ ಏಶಿಯಾದಿಂದ ಪೂರ್ವಕ್ಕೆ ಮೊದಲೇ ಹರಡಿ ಪರಿಚಯಗೊಂಡಿದ್ದರೂ, ಅಮೆರಿಕ ಖಂಡಗಳಿಗೆ ಈರುಳ್ಳಿಯು ಕೊಲಂಬಸ್ (ಕ್ರಿ.ಶ. 1494) ನಂತರದಲ್ಲಿ ಪರಿಚಯಗೊಂಡಿದೆ.
ಆಧುನಿಕ ಇತಿಹಾಸದಲ್ಲಿ 13ನೆಯ ಶತಮಾನದ ಹರಿಹರನ ರಗಳೆಗಳಲ್ಲಿ ಉಳ್ಳಿಗಳ ಪ್ರಸ್ತಾಪ ಬರುತ್ತದೆ. ಹಾಗೆಯೇ 14ನೆಯ ಶತಮಾನದ ಲೇಖಕ ಚಾಸರ್ ಕೂಡ ಬರಹಗಳಲ್ಲಿ ಈರುಳ್ಳಿಯನ್ನು ಬಳಸಿದ್ದಾನೆ. ಮುಂದೆ 16ನೆಯ ಶತಮಾನದ ನಂತರ ಧಾರಾಳವಾದ ವಿವರಗಳು ಜಗತ್ತಿನ ಬಹುಭಾಗಗಳಿಂದ ದೊರಕಲಾರಂಭಿಸಿವೆ. ಆಧುನಿಕ ತಳಿ ಅಭಿವೃದ್ಧಿಯ ಸಂಶೋಧನೆಗಳಲ್ಲಿ ಈರುಳ್ಳಿಯ ಗಂಡು ಭಾಗದ ಸಂತಾನಹರಣದ ತೊಡಕುಗಳ ಬಗೆಗೆ ಅರಿಯಲಾಗಿದ್ದು ಹಾಗಾಗಿಯೇ ಈರುಳ್ಳಿಯಲ್ಲಿ ಸಂಕರಗೊಳಸಿ ಅಭಿವೃದ್ಧಿ ಪಡಿಸಿದ ತಳಿಗಳು ವಿರಳ. ಮುಂದೆ ಇದನ್ನು ಸೈಟೊಪ್ಲಾಸಮ್ ಅಥವಾ ಜೀವಿದ್ರವ್ಯದ ಮೂಲಕ ಸಾಧ್ಯಗೊಳಿಸಿ ಪಡೆವ ಪ್ರಯತ್ನಗಳು ನಡೆದಿವೆ. ಸೈಟೊಪ್ಲಾಸಮ್ ಎನ್ನವುದು ಜೀವಿಕೋಶದ ಒಳಭಾಗದ ದ್ರವ್ಯ. ಕೋಶದೊಳಗಿರುವ ಎಲ್ಲಾ ಕೋಶದ ವಿವಿಧ ಭಾಗಗಳೂ ಈ ಸೈಟೊಪ್ಲಾಸಮ್ಮಿನಲ್ಲಿ ಹರಡಿರುತ್ತವೆ. ಜೀವಿಕೋಶದ ಮಧ್ಯದಲ್ಲಿ ನ್ಯೂಕ್ಲಿಯಸ್ ಅಥವಾ ಕೋಶ ಕೇಂದ್ರ ಇರುತ್ತದೆ. ಇದರಲ್ಲಿರುವ ಜೀನುಗಳನ್ನು ಬಳಸಿ ಸಂತತಿಗಳನ್ನು ತಳಿ ಮಾರ್ಪಾಡು ಮಾಡುವುದು ಸಹಜ ವಿಧಾನ. ತಳಿ ಅಭಿವೃದ್ಧಿಯಲ್ಲಿ ಗಂಡು ಭಾಗವನ್ನು ನಿಷ್ಕ್ರಿಯಗೊಳಿಸಿ ಬೇಕಾದ ಗುಣದ ತಳಿಯ ಗಂಡು ಭಾಗದಿಂದ ಪರಾಗವನ್ನು ಬಳಸಲಾಗುತ್ತದೆ. ಆದರೆ ಈರುಳ್ಳಿಯಲ್ಲಿದ್ದಂತೆ ಇಂತಹ ಕ್ರಿಯೆಯು ಕಷ್ಟವಾಗುವಾಗ ಅಂದರೆ ಒಂದು ಸಸ್ಯದ ಗಂಡುಭಾಗವನ್ನು ನಿಷ್ಕ್ರೀಯಗೊಳಿಸುವುದು ಕಷ್ಟವಾದಾಗ, ನ್ಯೂಕ್ಲಿಯಸ್ಸಿನ ಹೊರಗಿನ ಭಾಗದ ಜೀನುಗಳನ್ನು ಬಳಸಿ ತಳಿ ಆಭಿವೃದ್ಧಿ ಕ್ರಿಯೆಯನ್ನು ಕೈಗೊಳ್ಳಲಾಗುತ್ತದೆ. ಇದನ್ನೇ ಸರಳವಾಗಿ ಸೈಟೊಪ್ಲಾಸಮ್ಮಿನ ನೆರವಿನಿಂದ ತಳಿ ಅಭಿವೃದ್ಧಿ ನಡೆಸುವ ಬಗೆ ಎನ್ನಲಾಗುವುದು. ಇದನ್ನೇ ಈರುಳ್ಳಿಯ ತಳಿ ಅಭಿವೃದ್ಧಿಯಲ್ಲೂ ಬಳಸಲಾಗುತ್ತದೆ. ಗಂಡು ಸಂತಾನಹರಣ ಸಾಧ್ಯತೆಯನ್ನು ಕ್ಲಿಷ್ಟವಾಗಿಟ್ಟುರುವ ಈರುಳ್ಳಿಯ ಗುಟ್ಟೂ ಕೂಡ ತನ್ನನ್ನು ತಾನು ಕಾಪಾಡುವ ಪರಿಸ್ಥಿತಿ ಇರಬಹುದೇನೋ? ಒಟ್ಟಾರೆ ತಳಿ ಮತ್ತು ಆನುವಂಶಿಕ ಸಂಶೋಧಕರಿಗೆ ಈರುಳ್ಳಿಯು ತುಂಬಾ ಕುತೂಹಲ ಹಾಗೂ ಸಾಹಸಮಯ ಸವಾಲುಗಳನ್ನು ಒಡ್ಡಿದೆ. ಹಾಗಾಗಿ ಸಂಕರ ತಳಿಗಳ ವಿರಳತೆಯನ್ನು ಈರುಳ್ಳಿಯಲ್ಲಿ ಕಾಣಬಹುದು.
ಬಣ್ಣಗಳ ಆಧಾರದಿಂದ ಮೂರು ಮುಖ್ಯವಾದ ಈರುಳ್ಳಿಗಳು ಜನಪ್ರಿಯವಾಗಿವೆ. ಅವೆಂದರೆ ಹಳದಿ ಅಥವಾ ಕಂದು ಬಣ್ಣದ ಈರುಳ್ಳಿ, ಕೆಂಪು, ಹಾಗೂ ಬಿಳಿಯ ಈರುಳ್ಳಿ. ಇವುಗಳ ಬಣ್ಣ ಮಾತ್ರವೇ ಅಲ್ಲದೆ ಅವುಗಳ ರುಚಿ ಮತ್ತು ಹೊರ ಸೂಸುವ ಘಾಟಿನಲ್ಲೂ ಮೂರರಲ್ಲಿ ಒಂದಕ್ಕೊಂದು ಕೆಲವು ವ್ಯತ್ಯಾಸಗಳಿವೆ. ಜಗತ್ತಿನ ಒಟ್ಟು ಈರುಳ್ಳಿಯ ಉತ್ಪಾದನೆಯಲ್ಲಿ ಪ್ರತಿಶತ 80-85ರಷ್ಟನ್ನು ಕಂದು ಅಥವಾ ಹಳದಿ ಈರುಳ್ಳಿಯು ಒಳಗೊಂಡಿದೆ. ಪ್ರತಿಶತ 8 -10 ಕೆಂಪು ಈರುಳ್ಳಿಯದಾಗಿದ್ದರೆ, ಉಳಿದ ಸುಮಾರು 5ರಷ್ಟು ಮಾತ್ರವೇ ಬಿಳಿ ಈರುಳ್ಳಿಯಾಗಿದೆ. ಕಂದು ಅಥವಾ ಹಳದಿ ಈರುಳ್ಳಿಯು ಒಳ್ಳೆಯ ಪರಿಮಳವನ್ನು ಹೊಂದಿದ್ದು ಜಗತ್ತಿನಾದ್ಯಂತ ಹೆಚ್ಚು ಬೇಡಿಕೆಯಲ್ಲಿದೆ. ಅಡುಗೆಗೂ ತುಂಬಾ ಹೊಂದಿಕೊಂಡಿದೆ. ಬೇಯಿಸಿದಾಗ ಅಥವಾ ಕರಿದಾಗ ಉತ್ತಮವಾದ ಬಣ್ಣವನ್ನು ಪಡೆದು ತಿನ್ನಲು ಖುಷಿಕೊಡುವಂತೆ ಇರುತ್ತವೆ. ಸಾಕಷ್ಟು ಘಾಟು ಇರುವ ಕೆಂಪು ಈರುಳ್ಳಿಯು ಆಕರ್ಷಕವಾದ ಬಣ್ಣವನ್ನು ಹೊಂದಿದ್ದು, ಹುರಿದು, ಎಣ್ಣೆಯಲ್ಲಿ ಬತ್ತಿಸಿ ಮಾಡುವಂತಹಾ ತಿನಿಸುಗಳಿಗೆ ಯೋಗ್ಯವಾಗಿದೆ. ಬಿಳಿಯ ಈರುಳ್ಳಿಯು ಹಸಿಯಾದ ಸಾಲಡ್ ಗೆ ಬಿಳಿಯ ಸಾಸ್ ಮಾಡಲು ಹೆಚ್ಚಾಗಿ ಬಳಸುತ್ತಾರೆ. ಬಿಳಿ ಈರುಳ್ಳಿಯ ಘಾಟು ಇತರೆ ಎರಡು ಬಗೆಗಳಿಗಿಂತಾ ಕಡಿಮೆ.
ಸಾಂಬಾರು ಈರುಳ್ಳಿ ಎಂಬ ಬಗೆಯು ನಮ್ಮ ದೇಶದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ತುಂಬಾ ಜನಪ್ರಿಯವಾದುದು. ಇದು ಮಾಮೂಲಿ ಈರುಳ್ಳಿಯಲ್ಲಿಯೇ ವಿಶೇಷವಾದ ತಳಿ. ಇದರಲ್ಲಿ ಬೆಳ್ಳುಳ್ಳಿಯಂತೆ ಗಡ್ಡೆಗಳು ಸಣ್ಣ ಸಣ್ಣ ಮರಿ ಗಡ್ಡೆಗಳ ಗುಂಪುಗಳಾಗಿರುತ್ತವೆ. ಇಡಿಯಾಗಿ ಒಂದೊಂದು ಗಡ್ಡೆಯನ್ನು ಬಳಸಲು ಅನುಕೂಲಕರವಾದ ಗಾತ್ರದಲ್ಲಿರುತ್ತವೆ. ಸುಮ್ಮನೆ ಸಿಪ್ಪೆಯನ್ನು ಸುಲಿದು ಸಾಮಾನ್ಯವಾಗಿ ಹೆಚ್ಚದೆ, ಕತ್ತರಿಸದೆ ಬಳಸುವುದರಿಂದ ಘಾಟು ಹೊರಹೋಗದೆ ಸಾಂಬಾರು ಮಾಡಿದಾಗ ಬೆರೆತು ವಿಶೇಷವಾದ ರುಚಿಯನ್ನು ಕೊಡುತ್ತದೆ. ಹಾಗಾಗಿ ಸಾಂಬಾರಿನಲ್ಲಿ ಇಡಿಯಾದ ಈರುಳ್ಳಿಯು ದ್ರವರೂಪದ ಸಾಂಬಾರಿನಲ್ಲಿ ಮಧ್ಯೆ ತೇಲುತ್ತಾ ವಿಶೇಷ ರುಚಿಯನ್ನು ಕೊಡುತ್ತದೆ.
ನಡೆದಾಡುವ ಈರುಳ್ಳಿ ಅಥವಾ ಮರ ಈರುಳ್ಳಿ ಅಥವಾ ಹಬ್ಬುವ ಈರುಳ್ಳಿ ಎಂಬ ಒಂದು ಬಗೆಯು ಪ್ರಚಲಿತವಿದೆ. ಇದು ನಿಜಕ್ಕೂ ಈರುಳ್ಳಿಯ ಸಂಬಂಧಿಯಾಗಿದ್ದು ಬೇರೊಂದು ಪ್ರಭೇದವಾಗಿ ಗುರುತಿಸಲಾಗುತ್ತದೆ. ಏಕೆಂದರೆ ಸಾಮಾನ್ಯ ಈರುಳ್ಳಿಯ ಜೊತೆಗೆ ಮತ್ತೊಂದು ಪ್ರಭೇಧವಾದ ಆಲಿಯಂ ಫಿಸ್ಟುಲೊಸಮ್ (Allium fistulosum) ನಡುವೆ ಸಂಕರಗೊಂಡು ಇದು ವಿಕಾಸವಾಗಿದೆ. ಹಾಗಾಗಿ ಇದನ್ನು ಆಲಿಯಂ ಸೆಪಾ. ವರೈಟಿ ಪ್ರೊಲಿಫೆರಮ್ ಅಥವಾ ಆಲಿಯಮ್ X ಪ್ರೊಲಿಫೆರಮ್ (Allium × proliferum) ಎಂದೇ ಹೆಸರಿಸಲಾಗುತ್ತದೆ. ಈ ನಡೆದಾಡುವ ಈರುಳ್ಳಿಯ ಗಡ್ಡೆಗಳು ಇನ್ನೂ ಗಿಡಕ್ಕೆ ಹತ್ತಿಕೊಂಡಂತೆಯೇ ಮೊಳೆಕೆಯೊಡೆಯುತ್ತವೆ. ಅಲ್ಲಿಯೇ ಮುಂದುವರೆದು ಬೆಳೆದು ಮತ್ತೊಂದು ಗೊಂಚಲಾಗಲು ಅನುವಾಗುತ್ತವೆ. ಹಾಗಾಗಿ ಈರುಳ್ಳಿಯು ನಡೆದಾಡಿದಂತೆ ಕಾಣುತ್ತಿದ್ದು ಹಾಗೇಯೇ ಹೆಸರಿಲಾಗಿದೆ. ಇದು ಯೂರೋಪಿನಲ್ಲಿ ಜನಪ್ರಿಯವಾಗಿದೆ. ಇದು ಈಜಿಪ್ಟ್ ಈರುಳ್ಳಿ ಎಂಬುದಾಗಿ ಹೆಸರುವಾಸಿ. ಭಾರತಕ್ಕೆ ಯೂರೋಪಿನಿಂದ ಪರಿಚಯಗೊಂಡಿದೆ. ಈ ಬಗೆಯ ಈರುಳ್ಳಿಯು ಬಹು ವಾರ್ಷಿಕ ಸಸ್ಯವಾಗಿದೆ.
ಜಗತ್ತಿನ ಒಟ್ಟು 90- 95ದಶಲಕ್ಷ ಟನ್ನುಗಳಷ್ಟು ಈರುಳ್ಳಿಯ ಉತ್ಪಾದನೆಯಲ್ಲಿ ಚೀನಾವು ಕಾಲುಭಾಗವನ್ನು ಉತ್ಪಾದಿಸುತ್ತದೆ. ಪ್ರತಿಶತ 22ರಷ್ಟನ್ನು ಭಾರತವು ಉತ್ಪಾದಿಸಿ ಎರಡನೆಯ ಸ್ಥಾನದಲ್ಲಿದೆ. ಇಡೀ ಜಗತ್ತಿನ ಮಾನವ ಬಳಕೆಯ ಸರಾಸರಿಯಂತೆ ಪ್ರತಿಯೊಬ್ಬರೂ ವರ್ಷಂಪ್ರತಿ 5-6ಕಿಲೋ ಈರುಳ್ಳಿಯನ್ನು ತಿನ್ನುತ್ತಾರೆ. ಲಿಬಿಯಾ ದೇಶದ ಪ್ರಜೆಗಳು ಮಾತ್ರ ಅತಿ ಈರುಳ್ಳಿಯನ್ನು ಬಳಸುವವರಾಗಿದ್ದು ವರ್ಷಂಪ್ರತಿ 30-32 ಕಿಲೋವರೆಗೂ ಸೇವಿಸುತ್ತಾರೆ.
ಏರಿಳಿವ ಈರುಳ್ಳಿ
ಈರುಳ್ಳಿಯು ಕೇವಲ ಕತ್ತರಿಸುವಾಗ ಮಾತ್ರ ಕಣ್ಣೀರು ತರಿಸುವುದಿಲ್ಲ. ಬೆಳೆಗಾರರಿಗೂ, ಬಳಕೆದಾರರಿಗೂ ಕಳೆದ ಕೆಲವು ದಶಕಗಳಿಂದ ಕಣ್ಣಿರು ತರಿಸುತ್ತಲೇ ಇದೆ. ಈಗಲೂ ವಾತಾವರಣದ ಏರು-ಪೇರಿನಿಂದಾಗಿ ಅನೇಕ ಕಡೆಗಳಲ್ಲಿ ಈರುಳ್ಳಿ ಬೆಳೆಯ ನಷ್ಟವಾಯಿತು. ಈರುಳ್ಳಿಯ ಸರಬರಾಜು ಆಯ ತಪ್ಪಿತು. ಹೀಗಾದಾಗ ಮತ್ತು ಬೇರೆ ಬೇರೆ ಹಲವಾರು ಕಾರಣಗಳಿಂದ ಈರುಳ್ಳಿಯ ಬೆಲೆಯಲ್ಲಿ ತೀರಾ ಗಮನಾರ್ಹವಾದ ಏರುಪೇರುಗಳಾಗಿವೆ, ಆಗುತ್ತಲೇ ಇವೆ. ಈರುಳ್ಳಿಯ ಬೆಲೆಯು ರಾಜಕೀಯವಾಗಿ ಹಾಗೂ ಸಾಮಾಜಿವಾಗಿಯೂ ತುಂಬಾ ಚರ್ಚೆಯಲ್ಲಿ ಬರುವ ಸಂಗತಿಗಳು. ಏಕೆಂದರೆ ಈರುಳ್ಳಿ ಸರಬರಾಜು ಸರಪಳಿಯಲ್ಲಿ ಅನೇಕ ಬಾರಿ ಕೊಂಡಿತಪ್ಪಿ ಉತ್ಪಾದಿಸುವ-ರೈತ ಮತ್ತು ತಿನ್ನುವ-ಗ್ರಾಹಕ ಇಬ್ಬರಲ್ಲೂ ಕಣ್ಣೀರು ತರಿಸುತ್ತದೆ . ಈರುಳ್ಳ್ಳಿಯ ವ್ಯಾಪಾರದ ಸರಬರಾಜು ಸರಪಳಿಯಲ್ಲಿ ದಲ್ಲಾಳಿಗಳು, ಸಗಟುವ್ಯಾಪಾರಸ್ಥರು, ಲಾರಿಮಾಲೀಕರು, ದಾಸ್ತಾನುಗಾರರು ಪ್ರಮುಖ ಪಾಲುದಾರರಾಗಿ ಉತ್ಪಾದಕ ಹಾಗೂ ಗ್ರಾಹಕ ಇಬ್ಬರನ್ನೂ ಶೋಷಿಸಿದ ಅನೇಕ ಉದಾಹರಣೆಗಳಿವೆ. ಮಾರುವ ರೈತ ಕೊಳ್ಳುವವರ ಕೈಗೊಂಬೆಯಾಗಿ ಹಣ ಕಳೆದುಕೊಂಡರೆ, ತಿನ್ನುವ ಗ್ರಾಹಕರೂ ಮಾರುಕಟ್ಟೆಯ ಬೆಲೆಗೇ ಕೊಳ್ಳಬೇಕಾಗುತ್ತದೆ. ಈರುಳ್ಳಿಯಲ್ಲಿ ಅನೇಕ ಬಾರಿ ಇದೇ ಆಗುತ್ತಿದೆ.
ಮಹಾರಾಷ್ಟ್ರ ರಾಜ್ಯವು ದೇಶದ ಈರುಳ್ಳಿ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದೆ. ಅಲ್ಲಿನ ನಾಸಿಕ್ ಜಿಲ್ಲೆಯು ಮಾರುಕಟ್ಟೆಯಲ್ಲೂ ಮುಂದಿದೆ. ಅದೇ ಜಿಲ್ಲೆಯ ಲಾಸಳಗಾಂವ್ ಒಂದು ಪುಟ್ಟ ಊರು. ಈರುಳ್ಳಿಯ ವಹಿವಾಟಿನಲ್ಲಿ ಜಗದ್ವ್ಯಾಪಿ ಹೆಸರು. ಏಷಿಯಾದಲ್ಲೇ ಅತಿ ದೊಡ್ಡ ಈರುಳ್ಳಿ ಮಾರುಕಟ್ಟೆಯಿದ್ದು, ದೇಶದ ಈರುಳ್ಳಿ ವಹಿವಾಟನ್ನು ನಿರ್ಧರಿಸುವಲ್ಲಿ ಮಹತ್ತರ ಪಾತ್ರವಹಿಸುತ್ತಿದೆ. ಕಳೆದ ಕೆಲವು ದಶಕಗಳಿಂದ ಮಹಾರಾಷ್ಟ್ರದ ವ್ಯಾಪಾರಿಗಳು ಈರುಳ್ಳಿಯ ಏರಿಳಿತವನ್ನು ನಿರ್ಮಿಸುವಲ್ಲಿ ಬಹುಮುಖ್ಯ ಪಾಲುದಾರರಾಗಿದ್ದಾರೆ. ಈರುಳ್ಳಿಯ ಏರಿಳಿತಲ್ಲಂತೂ ಸರ್ಕಾರವು ಮಾರುಕಟ್ಟೆಯ ನಿಯಂತ್ರಣಕ್ಕೆ ಮುಂದಾಗಿ ರೈತರನ್ನೂ ಹಾಗೂ ಬಳಕೆದಾರರನ್ನೂ ಸಂರಕ್ಷಿಸಬೇಕಿರುವುದು ನಮ್ಮ ಆಹಾರ ಭದ್ರತೆಯ ದೃಷ್ಟಿಯಿಂದ ಅತ್ಯಗತ್ಯವಾದುದು. ದೈನಂದಿನ ಪದಾರ್ಥಗಳ ಮಾರುಕಟ್ಟೆಯನ್ನು ವರ್ತಕರ ಹಿಡಿತದಿಂದ ತಪ್ಪಿಸಿ ಹದ್ದುಬಸ್ತಿನಲ್ಲಿಡದ ಹೊರತೂ ಬಳಕೆದಾರರ ಕಣ್ಣಿರು ನಿಲ್ಲದು. ಉತ್ಪಾದಿಸುವ ರೈತರ ಗೋಳೂ ತೀರದು.
ಕಾರ್ಲ್ ಸ್ಯಾಂಡ್ ಬರ್ಗ್ ಎಂಬ ಅಮೆರಿಕದ ಕವಿ “ನಮ್ಮ ಬದುಕು ಈರುಳ್ಳಿಯ ಹಾಗೆ! ಒಂದೊಂದೇ ಪದರವನ್ನು ಸುಲಿದಂತೆ! ಆದರೆ ತುಸು ದುಃಖಿಸಬೇಕಾಗುತ್ತದೆ” ಎನ್ನುತ್ತಾರೆ.
“ದಿನಕ್ಕೊಂದು ಸೇಬು ವೈದ್ಯರನ್ನು ದೂರವಿಟ್ಟರೆ, ಒಂದೇ ಈರುಳ್ಳಿ ಎಲ್ಲರನ್ನೂ ದೂರವಿಡಬಲ್ಲದು” (An apple a day keeps doctor away! An onion keeps everybody away!) ಎನ್ನುವ ಮಾತಿದೆ. ಈರುಳ್ಳಿಯನ್ನು ಹಸಿಯಾಗಿ ತಿಂದವರ ಬಾಯಿಯ ವಾಸನೆಯನ್ನು ತಮಾಷೆ ಮಾಡಲೆಂದೇ ಹುಟ್ಟಿದ ಗಾದೆಯಿದು.
ನಮಸ್ಕಾರ
-ಡಾ. ಟಿ.ಎಸ್. ಚನ್ನೇಶ್
Chennagide sir utthama mahithi
Abhinandanegalu