You are currently viewing ತಾಜಾ ಬಳಕೆ ಹಾಗೂ ಸಂಸ್ಕರಣೆ ಎಲ್ಲಕ್ಕೂ ಒಗ್ಗುವ ಸೊಪ್ಪು ಪಾಲಕ್ : Spinacia oleracea

ತಾಜಾ ಬಳಕೆ ಹಾಗೂ ಸಂಸ್ಕರಣೆ ಎಲ್ಲಕ್ಕೂ ಒಗ್ಗುವ ಸೊಪ್ಪು ಪಾಲಕ್ : Spinacia oleracea

ನಾನು ಆಗಷ್ಟೇ ಸ್ನಾತಕೋತ್ತರ ಪದವಿ ಮುಗಿಸಿ, ಪಿಎಚ್.‌ಡಿ.ಗೆ ತಯಾರಿ ನಡೆಸುತ್ತಿದ್ದ ದಿನಗಳು. ಸೆಮಿನಾರು ಒಂದರಲ್ಲಿ ಹಿರಿಯರಾದ ಪ್ರೊ. ಜೆ. ಆರ್. ಲಕ್ಷಣರಾವ್‌ ಅವರನ್ನು ಮೊಟ್ಟ ಮೊದಲು ಭೇಟಿಯಾಗಿದ್ದೆ. ಲಕ್ಷಣರಾಯರು ಕೃಷಿವಿದ್ಯಾರ್ಥಿಯಾಗಿದ್ದ ನನಗೆ ಸ್ಪಿನಾಚ್‌ ಗೆ ಪಾಲಕ್‌ ಹೆಸರು ಹೇಗೆ ಬಂತು? ಎಂಬ ಪ್ರಶ್ನೆಯನ್ನೆತ್ತಿ ಮಾತಿಗೆ ತೊಡಗಿದ್ದರು. ಆಗ ನನಗೂ ಉತ್ತರ ಗೊತ್ತಿರಲಿಲ್ಲ, ಅವರೂ ಆ ಚರ್ಚೆಯನ್ನು ಅಲ್ಲಿಗೆ ನಿಲ್ಲಿಸಿದ್ದರು. ಮುಂದಿನ ದಿನಗಳಲ್ಲಿ ಸಿಕ್ಕರೂ ಅದೇ ಚರ್ಚೆಯನ್ನು ಮುಂದುವರೆಸಿರಲಿಲ್ಲ. ಹಾಗಾಗಿ ಪಾಲಕ್‌ ಹೆಸರಿನ ಅದರ ಹಿನ್ನೆಲೆಯಲ್ಲಿ ಪ್ರಶ್ನೆ ಬಹು ಕಾಲ ಮನಸ್ಸಿನೊಳಗೆ ಶಾಶ್ವತ ಸ್ಥಾನವನ್ನು ಪಡೆದುಕೊಂಡು ಮರೆತೇ ಹೋಗಿದಂತಾಗಿತ್ತು. ಇದೀಗ ಸಸ್ಯಯಾನದಲ್ಲಿ ಪಾಲಕ್‌ನ ಪೂರ್ವಾಪರಗಳ ಬೇಡಿಕೆಯನ್ನು ಲಕ್ಷಣರಾಯರ ನೆಲೆಯಾಗಿದ್ದ ಮೈಸೂರಿನವರೇ ಆದ ಗೆಳೆಯ ಆಕಾಶ್‌ ಒತ್ತಾಯಿಸಿದ್ದಾರೆ.

       ಪ್ರೊ. ಲಕ್ಷಣರಾಯರು ಈಗಿಲ್ಲ. ಅವರ ಪ್ರಶ್ನೆಯು ಪಾಲಕ್‌ ನೋಡಿದಾಗಲಲ್ಲಾ ನೆನಪಾಗಿ ನಾಚಿಕೆಯಾಗುತ್ತಿತ್ತು. ಅಂತೂ ಪಾಲಕ್‌ನ ಹೆಸರಿನ ಹಿಂದೆ ಒಂದಷ್ಟು ತಿಳಿದ ಸಮಾಧಾನವಾಗಿ ಆ ಪ್ರಶ್ನೆಗೆ ದಶಕಗಳು ಕಳೆದ ಮೇಲೆ ಉತ್ತರವನ್ನು ಹೇಳುವಂತಾಗಿದೆ. ಪ್ರೊಫೆಸರ್‌ ಜೊತೆಗೆ ಆ ನಡುವೆ ಎಂದೂ ಅದನ್ನು ಚರ್ಚಿಸುವ ಅವಕಾಶವಂತೂ ಬರಲೂ ಇಲ್ಲ, ಹೆಚ್ಚೂ ಕಡಿಮೆ ಮರೆತೇ ಹೋಗಿತ್ತು. ಬಹು ಪಾಲು ದಾಖಲೆಗಳು ಸ್ಪಿನಾಚ್‌ಗೆ “ಪಾಲಕ್‌” ಅನ್ನು ಇಂಡಿಯನ್‌ ಹೆಸರು ಎಂದಷ್ಟೇ ಹೇಳುತ್ತವೆ. Definitions from Oxford Languages ನ Online ವಿವರಣೆಯು ಈ ಮುಂದಿನಂತಿದೆ. ಅದರಂತೆ ಪಾಲಕ್‌ ಪದವು ಹಿಂದಿಗೆ ಸೇರಿದ್ದು. ಅದರ ಸಂಸ್ಕೃತ ಮೂಲದ “ಪಾಲಕ್ಯಾ” ಎಂಬ ಪದದಿಂದ ಹಿಂದಿಯಲ್ಲಿ “ಪಾಲಕ್‌” ಆಗಿದೆ. “ಪಾಲಕ್ಯಾ” ಎಂದರೆ ಹಸಿರು ತರಕಾರಿಗಳು ಎಂದು ಅರ್ಥ. ಸ್ಪಿನಾಚ್‌ನ ಹಸಿರೆಲೆಗಳನ್ನೇ ಆಸ್ವಾದಿಸುವುದರಿಂದ ಹಾಗೂ ಉತ್ತರ ಭಾರತದಲ್ಲೇ ಮೊದಲು ಮತ್ತು ಈಗಲೂ ಹೆಚ್ಚಾಗಿ ನೆಲಕಂಡದ್ದರಿಂದ ಹಿಂದಿಯಲ್ಲಿ ಈ ಸಸ್ಯ “ಪಾಲಕ್‌” ಆಗಿದೆ. ಸ್ಪಿನಾಚ್‌ ಕೂಡ ಫ್ರೆಂಚ್‌ ಮೂಲದ ಎಪಿನಾ(épinard) ದಿಂದ ಎಸ್ಪಿನಾಚ್‌  (Espinache)  ಎಂಬ ಆಂಗ್ಲ ಪದವಾಗಿ 14ನೆಯ ಶತಮಾನದಲ್ಲಿ ಬಳಕೆಗೆ ಬಂತು. ಅದಕ್ಕೂ ಮೊದಲೆಲ್ಲಾ ಭಾರತವೂ ಸೇರಿದಂತೆ ಅನೇಕ ಕಡೆಗಳಲ್ಲಿ ಅದಕ್ಕೆ “ಪರ್ಷಿಯನ್‌ ತರಕಾರಿ” ಎಂದೇ ಕರೆಯಲಾಗುತ್ತಿತ್ತು. ಏಕೆಂದರೆ ಅದರ ಹುಟ್ಟೂರು ಪರ್ಷಿಯಾ ಅಥವಾ ಈಗಿನ ಇರಾನ್‌ – ಇರಾಕ್‌ ನ ಆಸುಪಾಸಿನ ಪ್ರದೇಶ.  ಪರ್ಷಿಯನ್‌ ಹಸಿರೆಲೆಯ ತರಕಾರಿ ಸ್ಪಿನಾಚ್‌ ಆಗಲು ಯಾವುದೇ ಆಧಾರಗಳಂತೂ ಇಲ್ಲ. ಕಾರಣ ಫ್ರೆಂಚ್‌ ಮೂಲದ ಹುಟ್ಟಿನ ಪದದ ಮೂಲಾರ್ಥಗಳ ವಿವರಣೆಯಂತೂ ಅಧಿಕೃತವಾಗಿಲ್ಲ. ಏನಾದರೂ ಆಗಲಿ ನಮಗಂತೂ ಪಾಲಕ್‌ ಎಂಬ ಹೆಸರಲ್ಲಿ ಜನಪ್ರಿಯವಂತೂ ಹೌದು. ಅರಾಬಿಕ್‌ನ ಎಸ್ಫನಾಕ್‌ ಅಥವಾ ಪರ್ಷಿಯನ್‌ ಮೂಲದ ಇಸ್ಪನಾಖ್‌ ನಿಂದ ಹುಟ್ಟಿದ ಮಧ್ಯಕಾಲೀನ ಲ್ಯಾಟಿನ್‌ಗೆ ಬಳುವಳಿಯಾದ ಎಸ್ಪಿನಾಚ್‌ ಇಂಗ್ಲೀಷಿಗೆ ಮೂಲವಾಗಿರಬಹುದು, ಎಂಬ ಅನುಮಾನಗಳೂ ಇವೆ. ಮೂಲ ಪರ್ಷಿಯಾದಲ್ಲೂ ಹಸಿರುತರಕಾರಿ ಎಂಬರ್ಥದಲ್ಲೇ ಬಳಸಿದ್ದ ಉದಾಹರಣೆಗಳಿವೆ. ವಿಶಿಷ್ಟವೆಂದರೆ ಭಾರತೀಯವಾದ ಪಾಲಕ್‌ ಅನ್ನೂ ಹಾಗೆಯೇ ಫ್ರೆಂಚ್‌ ಮೂಲದ ಎಪಿನಾವನ್ನೂ ಮನೆತನದ ಹೆಸರಾಗಿ ಬಳಸಿದ ಉದಾಹರಣೆಗಳೂ ಇವೆ. ದೂರದ ನೆಲೆಯ ಮನೆತನದ ಹೆಸರುಗಳ ಮೂಲದಲ್ಲಿ ಸಾಮರಸ್ಯವಿರುವುದಂತೂ ವಿಚಿತ್ರವೇ ಸರಿ. ಪಾಲಕ್‌ ಹೆಸರಿನ ಮನೆತನಗಳು ಭಾರತದ ಉತ್ತರದಲ್ಲಿದ್ದರೆ, ಎಪಿನಾ ಮನೆತನಗಳು ಅಮೆರಿಕಾ ಪೂರ್ವ ಪ್ರದೇಶದಲ್ಲಿವೆ.

       ನಮ್ಮಲ್ಲಿ ಮತ್ತೊಂದು ಜನಪ್ರಿಯ ಹಸಿರುಸೊಪ್ಪಾದ ಹರಿವೆಯ ಕುಟುಂಬವಾದ ಅಮರಾಂತೇಸಿಯೆಗೆ (Amaranthaceae) ಪಾಲಕ್‌ ಅನ್ನೂ ಇತ್ತೀಚೆಗೆ 2003ರಲ್ಲಿ ಸೇರಿಸಲಾಗಿದೆ. ಆದಾಗ್ಯೂ ಪಾಲಕ್‌ ಅನ್ನು ಉಪಕುಟುಂಬವಾಗಿ ಇರಿಸಲಾಗಿದೆ. ಪಾಲಕ್‌- ಸ್ಪಿನಾಚ್‌ (Spinach) ಅನ್ನು ವೈಜ್ಞಾನಿಕವಾಗಿ ಸ್ಪಿನೇಚ ಒಲೆರೆಸಿಯಾ (Spinacia oleracea)   ಕರೆಯಲಾಗುತ್ತದೆ.  ಸ್ಪಿನಾಚ್‌ (Spinach)ನಿಂದ Spenacia ಹುಟ್ಟಿದ್ದರೆ  ಒಲೆರೆಸಿಯಾ (Oleracea –  “olus, oleris”)  ಎಂದರೆ ತರಕಾರಿ ಎಂಬರ್ಥದಿಂದ ಅದರಲ್ಲೂ ಎಲೆಗಳ ತರಕಾರಿಯಾಗಿಸಿದ ಎನ್ನುವಲ್ಲಿ ಬಳಕೆಯಾಗಿದೆ. ಏಕೆಂದರೆ ಇದೇ ಪದವನ್ನೂ ಕೋಸು ಅಥವಾ ಕ್ಯಾಬೇಜ್‌ ನ ಪ್ರಭೇದದ ಹೆಸರಿಗೂ ಅದೇ ಹಿನ್ನೆಲೆಯಲ್ಲಿ ಬಳಸಿ ಹೆಸರಿಸಲಾಗಿದೆ. ವೈಜ್ಞಾನಿಕ ನಾಮಕರಣದಲ್ಲೂ ಹಸಿರು ತರಕಾರಿ ಎಂಬ ಅರ್ಥವನ್ನೇ ಹೊಂದಿದೆ. ಪಾಲಕ್‌ ಒಂದು ವಾರ್ಷಿಕ ಸಸ್ಯ. ದ್ವೈವಾರ್ಷಿಕವಾಗಿಯೂ ಬೆಳೆಸಬಹುದಾಗಿದೆ. ಒಂದಾಂದರೊಂದರಂತೆ ಎಲೆಗಳ ವಿನ್ಯಾಸವನ್ನು ಮೂಲ ದೇಟಿಗೆ ಹೊಂದಿಸಿಕೊಂಡಿರುತ್ತವೆ. ಇದನ್ನು ಪೂರ್ಣವಾಗಿ ಬೆಳದ ಗಿಡದಿಂದ ಕಾಣಬಹುದಷ್ಟೇ. ನಾವು ತರಕಾರಿ ಅಂಗಡಿಯಲ್ಲಿ ಕಾಣುವ ಸೊಪ್ಪಿನ ಕಟ್ಟುಗಳು ಎಳೆಯ ಗಿಡಗಳು ಹಾಗಾಗಿ ಅದರ ಇಡಿಯಾದ ಪರಿಚಯವಾಗಲಾರದು.

       ಇದೇ ಹಿನ್ನೆಲೆಯ ಸಂಗತಿಗಳಿಂದ ಅದನ್ನು ಕುರಿತ ಮೊಟ್ಟ ಮೊದಲ ದಾಖಲೆಯಾದ 10ನೆಯ ಶತಮಾನದ ಪರ್ಷಿಯನ್‌ ದಾರ್ಶನಿಕ “ಅಲ್‌ ರಾಝಿ” ಅವರ ಬರಹಗಳಿಂದ ಅದು ಮೆಡಿಟರೇನಿಯನ್‌ ಆಚೀಚೆ ಪರಿಚಯವಾಯಿತು. ಅಲ್‌ ರಾಝಿ ಪರ್ಷಿಯಾದ ಬಹುಶೃತ ವಿದ್ವಾಂಸ ಹಾಗೂ ದಾರ್ಶನಿಕ. ಬಾಗ್ದಾದ್‌ ನಗರದಲ್ಲಿ ಔಷದೋಪಚಾರ ನಡೆಸುತ್ತಿದ್ದ ಮಹಾನ್‌ ಮಾನವತಾವಾದಿ. ಇವರೇ ಮೊಟ್ಟಮೊದಲು ಗಂಧಕಾಮ್ಲವನ್ನೂ (Sulphuric Acid) ತಯಾರಿಸಿದ ವಿಜ್ಞಾನಿ ಕೂಡ. ನೂರಾರು ಕೃತಿಗಳ ರಚನಕಾರ ಹಾಗೂ ಮೊಟ್ಟ ಮೊದಲ ಮಕ್ಕಳ ವೈದ್ಯರೂ ಸಹಾ. ಇವರು ಸ್ಪಿನಾಚ್‌-ಪಾಲಕ್‌ ಕುರಿತ ಬರಹಗಳಿಂದಲೇ ಮೆಡಿಟರೇನಿಯನ್‌ ನಿಂದಾಚೆಗೆ ಅದರ ಬಗೆಗಿನ ತಿಳಿವು ಜಗತ್ತಿಗೆ ತಿಳಿದಂತಾಯಿತು.

       ಪಾಲಕ್‌ ಪ್ರಾಚೀನ ಪರ್ಷಿಯಾದಲ್ಲಿ ಸುಮಾರು 2000 ವರ್ಷಗಳಿಗೂ ಹಿಂದೆಯೇ ವಿಕಾಸವಾಗಿದೆ. ಅಲ್ಲಿಂದ ಭಾರತಕ್ಕೆ ಕ್ರಿ.ಶ 647ರಲ್ಲಿಯೇ ನೇಪಾಳದ ಮೂಲಕ ಪರಿಚಯಗೊಂಡಿದೆ. ಹಾಗೆಯೇ ನೇಪಾಳದಿಂದಲೇ ಚೀನಾಕ್ಕೂ ಪರಿಚಯಗೊಂಡಿದೆ. ಇಂದು ಜಾಗತಿಕವಾಗಿ ಸುಮಾರು 26-30 ದಶಲಕ್ಷ ಟನ್ನುಗಳ ಉತ್ಪಾದನೆಯನ್ನು ಹೊಂದಿರುವ ಪಾಲಕ್‌ನಲ್ಲಿ, ಅದರ ಪ್ರತಿಶತ 90ರಷ್ಟನ್ನು ಚೀನಾ ಒಂದೇ ಉತ್ಪಾದಿಸುತ್ತದೆ. ಅಲ್‌ ರಾಝಿಯ ಬರಹಗಳಿಂದ ಯೂರೋಪಿಗೆ 12ನೆಯ ಶತಮಾನಗಳ ನಂತರ ಪಾಲಕ್‌ ಪರಿಚಯಗೊಂಡಿತು. ಇಂಗ್ಲಂಡಿನಲ್ಲಿ ಹಾಗೂ ಫ್ರಾನ್ಸಿನಲ್ಲಿ 14ನೆಯ ಶತಮಾನದಲ್ಲಿ ಮೊದಲು ನೆಲೆಕಂಡು ಅಲ್ಲಿನ ಜನಪ್ರಿಯ ಹಸಿರು ಸೊಪ್ಪಿನ ತರಕಾರಿಯಾಯಿತು.

       ಅಲ್‌ ರಾಝಿಯು ಮೂಲತಃ ವೈದ್ಯರೂ ಆಗಿದ್ದು ಪಾಲಕ್‌ನ ವೈದ್ಯಕೀಯ ಉಪಕಾರಗಳನ್ನು ಪ್ರಮುಖವಾಗಿ ದಾಖಲಿಸಿದ್ದಾರೆ. ಹಾಗಾಗಿ ಮುಂದೆ ಮುಖ್ಯವಾಗಿ ಒಂದನೆಯ ಮಹಾಯುದ್ದದ ಸಂದರ್ಭದಲ್ಲಿ ಪಾಲಕ್‌ ರಸವನ್ನೂ ಗಾಯಗೊಂಡ ಸೈನಿಕರ ಶುಷ್ರೂಶೆಯಲ್ಲಿ ಬಳಸಲಾಗಿದೆ. ಸೈನಿಕರಿಗೆ ಸ್ಪಿನಾಚ್‌ ರಸವನ್ನು ಬೆರೆಸಿದ ವೈನ್‌ ಅನ್ನು ಪೇಯವಾಗಿ ಕೊಡಲೂ ಬಳಸಲಾಗುತ್ತಿತ್ತು. ಇಂಗ್ಲೀಶ್‌ ನ ಮೊಟ್ಟ ಮೊದಲ “ಅಡುಗೆಯ ಪುಸ್ತಕ- ದ ಫಾರ್ಮ್‌ ಆಫ್‌ ಕರ್ರಿ The Forme of Cury (1390)” ಯಲ್ಲಿಯೇ ಸ್ಪಿನಾಚ್‌ನ ಕುರಿತ ಬಳಕೆಯ ವಿವರಗಳಿವೆ. ಪಾಲಕ್‌ ಅಡುಗೆಯ ಬಳಕೆಯಲ್ಲಿ ಅಷ್ಟು ಜನಪ್ರಿಯತೆಯನ್ನು ಗಳಿಸಿತ್ತು. ಸ್ಪಿನಾಚ್‌ ಹೆಚ್ಚು ಜನಪ್ರಿಯವಾಗಿದ್ದು 1533ರಲ್ಲಿ ಕ್ಯಾಥರೀನ್‌ ಮಡೆಸಿಯು ಫ್ರಾನ್ಸ್‌ ರಾಣಿಯಾದ ಮೇಲೆ. ಆಕೆಗೆ ಪಾಲಕ್‌ ಅದೆಷ್ಟು ಪ್ರಿಯವಾಗಿತ್ತೆಂದರೆ ದಿನವೂ ಅದರ ಯಾವುದಾದರೂ ಒಂದು ಖಾದ್ಯವನ್ನು ತಯಾರು ಮಾಡಲೇಬೇಕಿತ್ತಂತೆ. ಆಕೆಯು ಹುಟ್ಟಿದ ಸ್ಥಳ “ಫ್ಲಾರೆನ್ಸ್‌” ಹಾಗಾಗಿ ಕೆಲವು ಸ್ಪಿನಾಚ್‌ ಖಾದ್ಯಗಳಿಗೆ “ಫ್ಲಾರೆಂಟೀನ್‌” ಎಂದೇ ಹೆಸರಿದೆ.  ನಂತರದಲ್ಲಿ ಸ್ಪೇಯಿನ್‌ ಮುಂತಾದ ಯೂರೋಪಿನ ದೇಶಗಳಿಗೆಲ್ಲಾ ಪರಿಚಿತವಾಯಿತು. ಅಷ್ಟೊತ್ತಿಗೆ ಚೀನಾವನ್ನು ಬಹು ಮುಖ್ಯ ನೆಲೆಯಾಗಿಸಿಕೊಂಡಿತ್ತು.

       ಕಳೆದ ಕೆಲವು ಶತಮಾನಗಳಿಂದ ಜನಪ್ರಿಯವಾಗಿ ವಿವಿಧ ದೇಶಗಳಲ್ಲಿ ನೆಲೆ ಕಂಡ ಸ್ಪಿನಾಚ್‌-ಪಾಲಕ್‌ ತನ್ನೊಳಗೆ ತುಂಬಿಕೊಂಡ ಆಹಾರಾಂಶಗಳಿಂದ ಹಾಗೂ ರುಚಿಯಾಗಿ ತಯಾರಿಸಬಲ್ಲ ಅಡುಗೆಗಳಿಂದ ಬಳಕೆಯಲ್ಲಿದೆ. ಹಸಿರು ಸೊಪ್ಪಿನ ತರಕಾರಿಯಾಗಿ ಬಗೆ ಬಗೆಯಲ್ಲಿ ಬಳಕೆಯಲ್ಲಿರುವ ಪಾಲಕ್‌ ಅನೇಕ ಆರೋಗ್ಯ ವೃದ್ಧಿಯ ಬೆಂಬಲಿದಿಂದ ನಮ್ಮೆಲ್ಲರ ಹೊಟ್ಟೆಯನ್ನು ಸೇರುತ್ತಿದೆ. ಅನೇಕ ಜೀವಿರಸಾಯನಿಕ ಸಂಯುಕ್ತಗಳಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತಿದೆ. ಅವುಗಳಲ್ಲಿ ವಿಟಮಿನ್ನುಗಳು ಹಾಗೂ ಹಲವು ಖನಿಜಗಳು ಪ್ರಮುಖವಾದವು. ಪಾಲಕ್‌ ವಿಟಮಿನ್‌ “ಎ” “ಸಿ” “ಕೆ” “ಇ” “ರೆಬೊಫ್ಲೊವಿನ್‌” ಹಾಗೂ ಬಿ-6ಗಳನ್ನು ಹೊಂದಿದೆ. ಜೊತೆಗೆ ಖನಿಜಗಳಲ್ಲಿ ಕಬ್ಬಿಣದ ಅಂಶವು ದೇಹಕ್ಕೆ ಒದಗುವಿಕೆಯಿಂದ ಅನುಕೂಲಕರವಾಗಿದೆ. ಅಲ್ಲದೆ ಗುರುತರವಾದ ಪ್ರಮಾಣದಲ್ಲಿ ಕ್ಯಾಲ್ಸಿಯಂ, ಮ್ಯಾಗ್ನಿಸಿಯಂ, ಮ್ಯಾಂಗನೀಸ್‌ಗಳನ್ನೂ ಸಹಾ ಒಳಗೊಂಡಿದೆ.    

       ಅದರ ಜೊತೆಯಲ್ಲಿ ಹಲವಾರು ಸಸ್ಯರಸಾಯನಿಕಗಳನ್ನೂ ಹಾಗೂ ಜೈವಿಕಕ್ರಿಯಾ(Bioactive) ಪ್ರಚೋದಕಗಳನ್ನೂ ಹೊಂದಿರುವುದು ಪಾಲಕ್‌ ಅನ್ನು ಆಹಾರಾಂಶದ ಹೊರತಾಗಿಯೂ ಜನಪ್ರಿಯಗೊಳಿಸಿದೆ. ಈ ಸಸ್ಯ-ರಸಾಯನಿಕಗಳು (Phytochemicals) ದೇಹದ ಶುದ್ಧೀಕರಣಕ್ರಿಯೆಗಳಲ್ಲಿ ಭಾಗವಹಿಸಿ ಆರೋಗ್ಯ ವೃದ್ಧಿಗೆ ಕಾರಣವಾಗುತ್ತವೆ. ಅದೂ ಅಲ್ಲದೆ ಇವುಗಳು ದೇಹದ ಚಯಾಪಚಯ ಕ್ರಿಯೆಗಳನ್ನು ನಿರ್ವಹಿಸುವ ಜೀನುಗಳ ಕಾರ್ಯಗಳ ನಿಯಂತ್ರಣದ ಮೇಲೂ ವ್ಯವಹರಿಸುತ್ತವೆ. ಜೊತೆಗೆ ಪಾಲಕ್‌ ಆಹಾರದಲ್ಲಿ ಇರುವುದರಿಂದ, ಹೆಚ್ಚು ತಿನ್ನದಂತೆ ಪ್ರೋತ್ಸಾಹಿಸುವ ಗುಣವನ್ನೂ ಹೊಂದಿದೆ ಎಂಬುದನ್ನು ತಿಳಿಯಲಾಗಿದೆ. ಒಂದು ರೀತಿಯಲ್ಲಿ ಹೊಟ್ಟೆ ತುಂಬಿದಂತಹಾ ಅನುಭವವನ್ನು ಕೊಟ್ಟು ಆಹಾರ ಸೇವನೆಯ ಮೇಲೂ ನಿಯಂತ್ರಣವನ್ನು ಸಾಧಿಸುತ್ತದೆ. ಇದನ್ನು ಪಾಲಕ್‌ ರೈಸ್‌ ಅಥವಾ ಪಾಲಕ್‌ ಪನ್ನೀರ್‌ ತಿಂದಾಗ ಅನುಭವಕ್ಕೆ ಬಂದಿರುಲು ಸಾಕು. ಏಕೆಂದರೆ ಪಾಲಕ್‌ ತಿನ್ನುವುದರಿಂದ ಸಂತೃಪ್ತ ಅನುಭವಕ್ಕೆ ಒಳಗಾಗುವ ರಸಧೂತಗಳನ್ನು ಪ್ರಚೋದಿಸುತ್ತದೆ. ಇದರಿಂದಾಗಿ ಪಾಲಕ್‌ ಕ್ಯಾನ್ಸರ್‌ ನಿರೋದಕ, ಬೊಜ್ಜು ನಿರೋದಕ ಹಾಗೂ ಮಧುಮೇಹ ನಿರೋದಕವಾಗಿಯೂ ಸಹಾಯ ಮಾಡುತ್ತದೆ.

       ಇತ್ತೀಚೆಗೆ ಅನೇಕ ಕಡೆಗಳಲ್ಲಿ ನೇರವಾಗಿ ತಿನ್ನಲು ಅಣಿ ಮಾಡಿದ-  ರೆಡಿ-ಟು-ಈಟ್‌- (Ready-to-eat) ತಿನಿಸುಗಳು ಜನಪ್ರಿಯವಾಗುತ್ತಿವೆ. ಅದರಲ್ಲೂ ಯೂರೋಪಿನಲ್ಲಿ ಇದರ ಜನಪ್ರಿಯತೆಯು ಹೆಚ್ಚುತ್ತಲೇ ಇದೆ. ಇಂತಹಾ ತಿನಿಸುಗಳಲ್ಲಿಯೂ ಬಳಸಲು ಯೋಗ್ಯವಾಗ ಹಸಿರು ಸೊಪ್ಪುಗಳಲ್ಲಿ ಪಾಲಕ್‌ ಹೆಚ್ಚಿನ ಪ್ರಾಮುಖ್ಯತೆಯು ಸಿಕ್ಕಿದೆ. ಪಾಲಕ್‌ ಸೊಪ್ಪು ಹೆಚ್ಚು ಮೃದುವಾಗಿದ್ದು, ಅದರ ಎಳೆಯ ರಸಭರಿತ ಗುಣ ಇದನ್ನು ಹೀಗೆ ಅನುಕೂಲಕರವಾಗಿಸಿದೆ. ಆದರೂ ತಾಜಾ ಬಳಕೆಯಲ್ಲಿ ಹೆಚ್ಚು ಲಾಭಗಳಿರುವ ಬಗೆಗೂ ಅಧ್ಯಯನಗಳು ನಡೆದಿವೆ.  ಈ ಹಿಂದೆಯೆ ಪ್ರಸ್ತಾಪಪಿಸಿದಂತೆ ತಾಜಾ ಆಗಿ, ಹುರಿದು, ತಾಳಿಸಿ-ಬಾಡಿಸಿ, ಬೇಯಿಸಿ ಬಗೆ ಬಗೆಯಾಗಿ ಬಳಸವ ಮೂಲಕ ಹತ್ತಾರು ರೆಸಿಪಿಗಳಿಗೆ ಕಾರಣವಾಗಿದೆ. ಭಾರತೀಯ ಪದ್ಧತಿಗಳಲ್ಲಿ ಪಾಲಕ್‌-ಪನ್ನೀರ್, ಪಾಲಕ್‌ ಪಲಾವ್‌, ದಾಲ್‌ ಪಾಲಕ್‌‌ ಹಾಗೂ ಪಾಲಕ್‌ ರೈಸ್ ಮುಂತಾದವುಗಳು ‌ ದೇಶಾದ್ಯಂತ ಆಹಾರ ಪಟ್ಟಿಯಲ್ಲಿ ಸ್ಥಾನವನ್ನು ಗಳಿಸಿವೆ.  ‌

       ಸ್ಪಿನಾಚ್‌ಗೆ ಪಾಲಕ್‌ ಹೆಸರು ಏಕೆ ಬಂತು ಎಂಬ ಪ್ರಶ್ನೆಗೆ ಪ್ರೊ. ಜೆ. ಆರ್‌. ಲಕ್ಷಣರಾಯರಿಗೆ ಅವರು ಇದ್ದ ಸಮಯದಲ್ಲಿ ತಿಳಿಸಲಾಗದಿದ್ದರೂ, ಅವರ ನೆನಪಿನಲ್ಲಿ ಅದರ ಬಗೆಗೆ ಬರೆದ ಸಮಾಧಾನವಿದೆ. ಕನ್ನಡದಲ್ಲಿ ವಿಜ್ಞಾನ ಬರವಣಿಗೆಗಳ ಮೂಲ ಹರಿಕಾರರಲ್ಲಿ ಒಬ್ಬರಾದ ಪ್ರೊ. ಜೆ.ಆರ್‌.ಎಲ್‌. ಮೈಸೂರು ವಿಶ್ವವಿದ್ಯಾಲಯದ ಅತ್ಯಂತ ಪ್ರಮುಖ ಪ್ರಕಟಣೆಯಾದ ನಿಘಂಟಿನ ತಾಂತ್ರಿಕ- ಹಾಗೂ ವೈಜ್ಞಾನಿಕ ಪರಿಶೋಧಕರು. ಕನ್ನಡದಲ್ಲಿ ವಿಜ್ಞಾನದ ಬರವಣಿಗಾಗಿ ರಾಷ್ಟ್ರೀಯ ಪುರಸ್ಕಾರವನ್ನು ಪಡೆದವರು. ರಸಾಯನಿಕವಿಜ್ಞಾನದ ಪ್ರೊಫೆಸರ್‌ ಆದ ಜಗಳೂರು ರಾಘವೇಂದ್ರರಾವ್‌ ಲಕ್ಷಣರಾವ್‌ ಅವರು ಕನ್ನಡದಲ್ಲಿ ವಿಜ್ಞಾನವನ್ನು ಬರೆಯುವ ನನ್ನ ಹವ್ಯಾಸವನ್ನು ಪ್ರಚೋದಿಸಿದವರು. ಅವರ ನೆನಪಿಗೆ ನನ್ನ ಈ ಪ್ರಬಂಧವನ್ನು ಅರ್ಪಿಸುತ್ತೇನೆ. ಅವರ ಬಗೆಗಿನ ಹೆಚ್ಚಿನ ವಿವರಗಳಿಗೆ https://jrlrao.blogspot.com/p/biography.html ನೋಡಬಹುದು.

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್‌

This Post Has 4 Comments

 1. ಡಾ ರುದ್ರೇಶ್ ಅದರಂಗಿ

  ಹರಿಹರನ ಪುಷ್ಪ ರಗಳೆ ಯಲ್ಲಿ ಉಲ್ಲೇಖಿತ ಹೂವುಗಳ ಬಗ್ಗೆ ತಿಳಿಸಿ ಸರ್

 2. Satish Kumar B.T

  Sooooooooooooper

 3. ಹಂ.ಗು. ರಾಜೇಶ್

  ಪಾಲಕ್ ಮೂಲದ ಬಗೆಗೆ ವಿವರವಾದ ಮಾಹಿತಿ ನೀಡಿದ್ದೀರಿ. ಉಪಯುಕ್ತ ಮಾಹಿತಿ ಸರ್. ಧನ್ಯವಾದಗಳು

 4. Dr.N.T.Anil

  ಪ್ರೊಫೆಸರ್ ಜಗಳೂರು ರಾಘವೇಂದ್ರರಾವ್ ಲಕ್ಷ್ಮಣರಾವ್ ರವರಿಗೆ ಅರ್ಪಿಸಿದ ಪಾಲಾಕ್ ಬರಹ ಓದಿ ಸಂತೋಷವಾಯಿತು ಸರ್,ಧನ್ಯವಾದಗಳು

Leave a Reply