ಬಾಲ್ಯದಲ್ಲಿ ನನ್ನ ಮನೆಯ ಎದುರಿನ ಮನೆಯಲ್ಲಿ ಒಬ್ಬ ಅಜ್ಜಿ ಇದ್ದರು. ಮಾವಿನ ಹಣ್ಣಿನ ಕಾಲದಲ್ಲಿ ಅಜ್ಜಿ ತುಂಬಾ ಚಟುವಟಿಕೆಯಿಂದ ಮಾವನ್ನು ಖರೀದಿಸುತ್ತಿದ್ದರು. ನನ್ನ ವಯಸ್ಸಿನ್ನೂ ಒಂದಂಕಿ ದಾಟದಿದ್ದಾಗಲೇ ಆಕೆ ಆರೇಳು ದಶಕಗಳನ್ನು ಸವೆಸಿದಾಕೆ. ಮುಂಬಾಗಿಲ ಕಟ್ಟೆಯಲ್ಲಿ ಕುಳಿತಿರುತ್ತಿದ್ದ ಆಕೆಯು, ರಸ್ತೆಯಲ್ಲಿ ಹಣ್ಣು ಮಾರುತ್ತಾ ಬರುವವರಿಗೆಲ್ಲಾ ಪರಿಚಿತಳು. ಆಕೆಯನ್ನು ಮಾತನಾಡಿಸದೇ ಅವರು ಯಾರೂ ಹೋದುದಿಲ್ಲ. ತಳಿ ವಿಷಯದಲ್ಲಿ ತುಂಬಾ ಅರಿವಿದ್ದ ಅಜ್ಜಿಯನ್ನು ಯಾರೂ ಮೋಸಗೊಳಿಸಲಾಗುತ್ತಿರಲಿಲ್ಲ. “ನನ್ನ ಜೀವನದಲ್ಲಿ ಅದೆಷ್ಟು ಮಾವು ನೋಡಿದ್ದೇನೆ, ಇದೇನು ಹಿಂಗಂತಿ” ಎನ್ನುತ್ತಾ ದಬಾಯಿಸುವ ಅಜ್ಜಿಗೆ ಮಲಗೊವಾ ಕುರಿತು ಅಚಲ ವಿಶ್ವಾಸ. ಅಷ್ಟೇ ಅಲ್ಲ ಅದರೊಳಗಿನ ವಿವಿಧತೆಯನ್ನು ತುಸು ಮೂಸಿ ನೋಡಿ, ಸಿಪ್ಪೆಯ ಸವರಿ ಹೇಳುತ್ತಿದ್ದರು. ಸಿಪ್ಪೆಯು ಸುಕ್ಕುಗಟ್ಟಿದರೆ, ಹಸಿರಿನ ನಡುವೆಯೆ ಹಳದಿಯ ಛಾಯೆ ಇದ್ದರೆ, ಹೀಗೆಲ್ಲಾ ಕಾರಣಗಳಿರುವ ಮಲಗೊವಾ ಹಣ್ಣಿನೊಳಗಿನ ವೈವಿಧ್ಯವನ್ನು ಆಗಲೇ ತಿಳಿದದ್ದು. ಇದೀಗ ತಳಿಗಳ ಹುಡುಕಾಟದಲ್ಲಿ ಮಲಗೊವಾ ಮಾಡಿದ ಮಾಂತ್ರಿಕತೆ ಅರಿಯುತ್ತಿದ್ದಂತೆ ಆ ಅಜ್ಜಿ ನೆನಪಾಗುತ್ತಾರೆ. ಅಗಲ ಬಾಯಿಯ ಅಜ್ಜಿ, ಇಡೀ ಹಣ್ಣನ್ನು ನುಂಗುವಂತೆ ಬಾಯಿಗಿರಿಸುತ್ತಿದ್ದುದು ಕಂಡು, ನಮ್ಮ ಬಾಯಿಯೊಳಗೆ ಕಾಲು ಭಾಗ ಹಣ್ಣೂ ದಾಟದಕ್ಕೆ ಅಸೂಯೆ ಪಡುತ್ತಿದ್ದದೂ ನೆನಪಾಗುತ್ತದೆ. ಇಡೀ ಅಮೆರಿಕಾದಲ್ಲಿನ ಮಾವಿನ ವೈವಿಧ್ಯತೆಗೆ ಕಾರಣವಾದ ಮಲಗೊವಾ ಅಜ್ಜಿಯ ಹಣ್ಣಿನ ವಾಸನೆಯ ವಿವರಗಳಲ್ಲಿ ಮೊದಲ ಪಾಠವಾಗಿದ್ದವು. ಆ ವಿವರಗಳನ್ನು ಮುಂದೆ ನೋಡೋಣ.
ನಮ್ಮ ಮನೆಯ ಬೀದಿಯ ಕೊನೆಯಲ್ಲಿದ್ದ ಬಷೀರ್ ಸಾಹೇಬರು, ಮಾವಿನ ವಹಿವಾಟುದಾರರು. ಮಾವಿನ ಸುಗ್ಗಿಯಲ್ಲಿ ಮನೆಯ ಮುಂದೆ ಹಾಯುವಾಗ ಅಪ್ಪನನ್ನು ಕಂಡು, ಈ ವರ್ಷ ನಿಮಗೆ “ರಸಪುರಿ” “ಮಲಗೊವಾ”, “ಬಾದಾಮಿ” ಅಂತಾ ಯಾವುದಾದರೂ ಒಂದು ತಳಿ ಹೆಸರು ಹೇಳುತ್ತಾ -“ಕೊಡುತ್ತೇನೆ, ಮನೆಯಲ್ಲೇ ಒತ್ತೆಹಾಕಿ ತಿನ್ನಿರಿ” ಎನ್ನುತ್ತಿದ್ದರು. ಇಲ್ಲದಿದ್ದರೆ “ಗಿಣಿಮೂತಿದು ಅದೇನು ಹೂವು ಅಂತಿರಾ, ಈ ವರ್ಷ ಕಾಯಿ ಬಿಡೋದೆ ಕಾಯ್ತಿದೀನಿ”. ಅಂತೆಲ್ಲಾ ಬಗೆ ಬಗೆಯ ತಳಿಗಳ ವೈಭವೀಕರಿಸುವ ಮಾತುಗಳೇ ನನಗೆ ತಳಿ ವಿವಿಧತೆಯೆ ಪರಿಚಯಕ್ಕೆ ಕಾರಣವಾದವು.
ಕಳೆದವಾರ ಮಾವಿನ ಹೂವುಗಳು ಕಾಯಿ ಕಟ್ಟುವ ಅನುಮಾನಗಳ ತಿಳಿವನ್ನು ವಿವರಿಸುತ್ತಾ ಹಾಗಿದ್ದೂ ವಿಕಾಸಗೊಂಡ ತಳಿಗಳ ಸಂಭ್ರಮವನ್ನು ಆರಂಭಿಸಿದ್ದೆ. ಬಾಲ್ಯದ ಶಾಲಾ ದಿನಗಳಲ್ಲೇ ಮರದಿಂದ ಮರಕ್ಕೆ ಬದಲಾಗುವ ಕಾಯಿಗಳ-ಹಣ್ಣುಗಳ ರುಚಿಗೆ ಹುಡುಕಾಡಿ ಆಡುತ್ತಾ ಕಲ್ಲು ಹೊಡೆದ ನೆನಪುಗಳಿದ್ದ ಯಾರಿಗಾದರೂ ಅದರ ಚಿತ್ರಣ ಮಾಸಿರಲಾರದು. ನಮ್ಮ ಶಾಲೆಯ ಆವರಣದಲ್ಲೇ ಇದ್ದ ನಾಲ್ಕಾರು ಮರಗಳು ರುಚಿಗಳಲ್ಲೂ ಬಗೆ ಬಗೆಯವೇ! ಒಂದಂತೂ ಹುಳಿಯೂ ಇಲ್ಲದ, ಸಿಹಿಯೂ ಇಲ್ಲದ ಸಪ್ಪೆಯಾದ ಕೊಬ್ಬರಿಯಂತೆ, ಮತ್ತೊಂದು ಒಳಗೆ ತಿರುಳೇ ಇಲ್ಲದೆ ಬರೀ ನಾರು ತುಂಬಿದ ಹಣ್ಣು, ತಿನ್ನಲು ಮುಗಿಸುವಂತೆಯೇ ಇರದ ಸಂಭ್ರಮ. ಅಲ್ಪ ಸ್ವಲ್ಪ ಹುಳಿ ಇದ್ದರೂ ನಾರಿನ ಮಧ್ಯೆ ಅಂಟಿಕೊಂಡ ರಸವನ್ನು ಹೀರುತ್ತಲೇ ಇರಬಹುದಾದ ಅದನ್ನು ಹಿಡಿದು ಕೈಯೆಲ್ಲಾ ಇಳಿದ ರಸವನ್ನು ನೆಕ್ಕುವುದೇ ಖುಷಿ. ಕೆಲವಂತೂ ಹಣ್ಣಿನ ತುಂಬೆಲ್ಲಾ ತಿರುಳೇ ತುಂಬಿರುತ್ತದೆ. ಮಾರಾಟದ ಹಿತದಲ್ಲಿ ತರಹೆವಾರಿ ಹಣ್ಣುಗಳ ಬೆಳೆಯುವಲ್ಲಿ ಕೋಲಾರ ಶ್ರೀಮಂತವಾಗಿರಬಹುದು. ಆದರೆ ಅವೆಲ್ಲಕ್ಕಿಂತಾ ಮಲೆನಾಡಿನ ನೆಲದಲ್ಲಿ ರಸ್ತೆಗಳ ಆಸು-ಪಾಸಿನಿಂದಲೂ ಹಿಡಿದು ಕಾಡುಮೇಡಿನೊಳಗೆ ಅಲೆದಾಡಿ ಮಾವು ಅರಸಿದವರ ನೆನಪಿಗೆ, ಬೆಳೆಯಾಗಿ ನಿರ್ವಹಿಸಿದ ತೋಟಗಳ ಅನುಭವ ಏನಕ್ಕೂ ಸಾಟಿ ಅಲ್ಲ.
ಇಂದು ಜಗತ್ತಿನಾದ್ಯಂತ ಹೆಸರು ಮಾಡಿದ ಸುಮಾರು 500 ಮಾವಿನ ತಳಿಗಳಿವೆ. ಅದರಲ್ಲಿ ಭಾರತದಲ್ಲಿಯೇ 300ಕ್ಕೂ ಹೆಚ್ಚು ತಳಿಗಳು ದೇಶಾದ್ಯಂತ ಹರಡಿಕೊಂಡಿವೆ. ಅವುಗಳಲ್ಲಿ 30 ತುಂಬಾ ಜನಪ್ರಿಯವಾಗಿವೆ. ಅಮೆರಿಕಾದ ಫ್ಲಾರಿಡಾದ ಕೊರಲ್ ಗ್ಯಾಬಲ್ಸ್ ಎಂಬಲ್ಲಿ ಒಂದೇ ಕಡೆಯಲ್ಲಿ ಸುಮಾರು 400ಕ್ಕೂ ಹೆಚ್ಚು ತಳಿಗಳ ಸಂಗ್ರಹವಿದ್ದು, ಜಗತ್ತಿನ ಅತಿ ಹೆಚ್ಚು ಸಂಖ್ಯೆಯ ಮಾವಿನ ತಳಿಗಳ ಸಂಗ್ರಹವಾಗಿದೆ. ಫ್ಲಾರಿಡಾ ರಾಜ್ಯವು ವರ್ಷಪೂರ್ತಿ ಮಾವಿನ ಬೆಳೆಗೆ ಒಳ್ಳೆಯ ವಾತಾವರಣವನ್ನು ಹೊಂದಿದೆ. ತಳಿಗಳ ವಿವಿಧತೆಯ ಮಾವಿನ ಸಂಭ್ರಮವನ್ನು ಅನುಭವಿಸಲು ಇದು ಸಕಾಲ. ಇನ್ನೇನು ಒಂದೊಂದೇ ಬಗೆಯ ಮಾವು ಮಾರುಕಟ್ಟೆಯಲ್ಲಿ ಕಾಣತೊಡಗುತ್ತದೆ.
ಹಣಗಳಿಕೆ ಮತ್ತು ಜನಪ್ರಿಯತೆಯಲ್ಲಿ ಆಲ್ಫಾನ್ಸೊಗೆ ಜಗತ್ತಿನಲ್ಲಿ ಯಾವುದೂ ಸಾಟಿ ಇಲ್ಲ. ಈ ಆಲ್ಫಾನ್ಸೊವನ್ನು “ಮಾವಿನ ರಾಜ” ಎಂದೇ ಕರೆಯಲಾಗುತ್ತದೆ. ತುಂಬಾ ಸಿಹಿಯಾದ, ಬರೀ ತಿರುಳೇ ಇರುವ ಹಣ್ಣು. ಮಾವಿನಲ್ಲಿ ತಳಿಗಳ ವಿಕಾಸಕ್ಕೆ ಅದರಲ್ಲೂ “ಆಲ್ಫಾನ್ಸೊ” ಅಭಿವೃದ್ಧಿಗೆ ಪೋರ್ಚುಗೀಸರು ಕಲಿಸಿಕೊಟ್ಟ “ಕಸಿ” ಕಟ್ಟುವ ವಿಧಾನ ಕಾರಣ. ಆಲ್ಫ್ಯಾನ್ಸೊ ಕೂಡ ಪೋರ್ಚುಗೀಸರ ತಂತ್ರಗಳಿಂದ ಕಸಿ ಕಟ್ಟುವುದರಿಂದಲೇ ಅಭಿವೃದ್ಧಿಗೊಂಡಿದೆ. ಹಾಗಾಗಿ ಭಾರತದಲ್ಲಿ ಪೋರ್ಚುಗೀಸ್ ಮಿಲಿಟರಿ ಅಧಿಕಾರಿಯಾಗಿದ್ದ ಆಲ್ಫಾನ್ಸೊ ಆಲ್ಬುಕರ್ಕ್ ಎಂಬಾತನ ಗೌರವಾರ್ಥ ತಳಿಗೆ ಆಲ್ಪಾನ್ಸೊ ಎಂದು ಹೆಸರಿಸಲಾಗಿದೆ. ಮೂಲತಃ ಮಹಾರಾಷ್ಟ್ರ ಹಾಗೂ ಕೊಂಕಣ್ ಆಸುಪಾಸಿನ ಮರಗಳಿಂದ ಇದು ಅಭಿವೃದ್ಧಿಯಾಗಿದೆ. ಮುಖ್ಯವಾಗಿ ಇದರ ಬಣ್ಣ -ಆಕರ್ಷಣೀಯವಾದ ಕೇಸರಿ, ಜೊತೆಗೆ ಪರಿಮಳ ಹಾಗೂ ರುಚಿ ಇದನ್ನು ಜನಪ್ರಿಯಗೊಳಿಸಿವೆ. ಅತಿ ಹೆಚ್ಚು ರಫ್ತಾಗುವ ಹಣ್ಣೂ ಕೂಡ ಇದೇ. ಇದಕ್ಕೆ ಮತ್ತೊಂದು ಪ್ರಮುಖ ಕಾರಣ, ಮಾಗಿ-ಕೆಡದಂತೆ ತಡೆದುಕೊಳ್ಳುವ ಇದರ ಗುಣ. ಇದರಿಂದ ಬಗೆ ಬಗೆಯಾಗಿ ಅಭಿವೃದ್ಧಿಗೊಂಡ ವಿವಿಧ ಆಲ್ಫಾನ್ಸೊಗಳೂ ಇವೆ. ರತ್ನಗಿರಿ ಆಲ್ಫಾನ್ಸೊ, ಕೊಂಕಣ್ ಆಲ್ಫಾನ್ಸೊ, ಹಾಗೇಯೇ ನಮ್ಮದೇ ಆದ ಬಾದಾಮಿ ಕೂಡ ಕರ್ನಾಟಕದ ಆಲ್ಫಾನ್ಸೊ!
ಕರ್ನಾಟಕದ ಮತ್ತೊಂದು ಜನಪ್ರಿಯ ಮಾವಿನ ತಳಿ ಎಂದರೆ “ರಸಪುರಿ”. ಹಣ್ಣಿನ ತುಂಬೆಲ್ಲಾ ರಸಭರಿತವಾದ ಇದನ್ನು ರಾಜ್ಯದ ಅತ್ಯಂತ ಜನಪ್ರಿಯ ತಳಿ ಎಂದೇ ಗುರುತಿಸುತ್ತಾರೆ. ಮರದಲ್ಲೇ ಹಣ್ಣಾದ ರಸಪುರಿಯ ರುಚಿಗೆ ಯಾವುದೇ ಮಾವೂ ಸಾಟಿಯಾಗಲಾರದೂ ಎನ್ನುವ ಅಭಿಪ್ರಾಯಗಳೂ ಇವೆ. ರಾಜ್ಯದ ಒಳನಾಡಿನಲ್ಲಿ ಹೋಳಿಗೆಯ ಜೊತೆಗೆ ಮಾವಿನ ಹಣ್ಣಿನ ಸೀಕರಣೆ ಮಾಡಿ ಊಟ ಮಾಡುತ್ತಾರೆ. ಸೀಕರಣೆಗೆ ರಸಪುರಿ ಹೇಳಿ ಮಾಡಿಸಿದ ಹಣ್ಣು. ಹಣ್ಣಿನ ಸುವಾಸನೆಯು, ಸ್ವಲ್ಪವೇ ಏಲಕ್ಕಿ-ಬೆಲ್ಲದ ಜೊತೆ ಬೆರೆತು, ಸೀಕರಣೆಯಾಗಿ ಹೋಳಿಗೆಯ ವೈಭವವನ್ನು ಆಗಸಕ್ಕೇರಿಸುತ್ತದೆ. ನನ್ನನ್ನೂ ಸೇರಿಸಿ ಕೆಲವರಿಗಾದರೂ ಹೋಳಿಗೆ ಸೀಕರಣೆ ಎಂದರೆ ಎರಡು ಹೊಟ್ಟೆ!
ತೊತಾಪುರಿ ಅಥವಾ ಗಿಣಿಮೂತಿ ಮಾವಿನಹಣ್ಣು ಒಂದು ರೀತಿಯಲ್ಲಿ ಹೆಚ್ಚು ಫಲ ಕೊಡುವ ಮಾವು. ಇದನ್ನು ಸಂಸ್ಕರಿಸಿ ಜ್ಯೂಸ್ ಮಾಡುವ, ರಸಾಯನ ಮಾಡುವ, ಜಾಮ್ ಮಾಡುವ ಉದ್ಯಮಗಳಲ್ಲಿ ಹೆಚ್ಚು ಬಳಸುತ್ತಾರೆ. ಗಿಡದ ತುಂಬಾ ಕಾಯಿ ಬಿಟ್ಟು ಜೋತು ಬೀಳುವಂತೆ ಕಾಣುವ ಇದರ ಕಾಯಿಗಳು ಮರದ ತುಂಬಾ ಕುಳಿತ ಹಸಿರು ಗಿಳಿಗಳಂತೆ ಕಾಣುತ್ತವೆ. ಕಾಯಿಯಾಗಿದ್ದಾಗಲೂ ತಿನ್ನಲು ಬಯಸುವ ಮಾವು ಇದು.
“ಅಮ್ರಪಾಲಿ” ಎಂಬವಳು ಬುದ್ಧನ ಅನುಯಾಯಿ. ಬುದ್ಧ ಆಕೆಯ ಮಾವಿನ ತೋಟದಲ್ಲಿ ಕೆಲಕಾಲ ವಾಸವಿದ್ದನು ಎಂದು ಜಾತಕ ಕಥೆಗಳು ಹೇಳುತ್ತವೆ. “ಅಮ್ರ” ಎಂದರೆ ಮಾವು ಎಂದರ್ಥ. ಪಾಲಿ ಪದವು ಎಲೆ ಅಥವಾ ಮೊಳೆಕೆ ಎನ್ನುವ ಅರ್ಥವನ್ನು ಹೊಂದಿದೆ. ಬುದ್ಧನಿಗೆ ಕೊನೆಯ ದಿನಗಳಲ್ಲಿ ಮಾವನ್ನು ಕೊಟ್ಟು ಸೇವೆ ಮಾಡಿದ್ದಳು ಎಂಬ ಸಂಗತಿಗಳೂ ಇವೆ. “ಅಮ್ರಪಾಲಿ” ಮತ್ತವಳ ಮಾವಿನ ತೋಟದ ಸ್ಮರಣೆಗಾಗಿ ನವದೆಹಲಿಯ ಕೃಷಿ ಸಂಶೋಧನಾ ಸಂಸ್ಥೆಯಿಂದ 1971ರಲ್ಲಿ ಡಾ ಪಿಜಶ್ ಮೊಜುಂದಾರ್ ಎಂಬ ವಿಜ್ಞಾನಿಯಿಂದ ಬಿಡುಗಡೆಗೊಂಡ ಹೈಬ್ರಿಡ್ ತಳಿ “ಅಮ್ರಪಾಲಿ”. ಈ ಮಾವಿನ ತಳಿಯು “ದಶೆರಿ” ಮತ್ತು “ನೀಲಂ” ತಳಿಗಳಿಂದ ಸಂಕರಗೊಂಡಿದೆ. ಇದರ ವಿಶೇಷತೆಯೆಂದರೆ ಮರ ಗಿಡ್ಡವಾಗಿದ್ದು, ಹಣ್ಣುಗಳೂ ಚಿಕ್ಕದಾಗಿದ್ದು, ಗೊಂಚಲು-ಗೊಂಚಲಾಗಿ ಬಿಡುತ್ತವೆ. ಹಣ್ಣುಗಳಲ್ಲಿ ಇತರೇ ತಳಿಗಳಿಗಿಂತಾ ಹೆಚ್ಚು ಬೀಟಾ ಕೆರೊಟಿನ್ ಇದ್ದು, ಹಣ್ಣು ಹೆಚ್ಚು ಕಾಲ ತಾಳುವುದಿಲ್ಲ, ಬೇಗನೆ ಹಾಳಾಗುತ್ತದೆ. ಸಾಕಷ್ಟು ಸಿಹಿಯೂ ಇದ್ದು, ದಟ್ಟ ಕಿತ್ತಳೆ ಕೆಂಪು ಬಣ್ಣವನ್ನು ಹೊಂದಿರುತ್ತದೆ.
“ದಶೆರಿ” ಮಾವು ಉತ್ತರಪ್ರದೇಶದ್ದು. ಲಕ್ನೊವಿನ ನವಾಬರ ತೋಟದಲ್ಲಿ 18ನೆಯ ಶತಮಾನದಲ್ಲಿ ಇತ್ತೆಂದು ನಂಬಲಾಗುತ್ತದೆ. ಉತ್ತರ ಪ್ರದೇಶದ ದಶೆರಿ ಎಂಬ ಹಳ್ಳಿಯಲ್ಲಿದ್ದ ತೋಟದಿಂದ ಬಂದ ಇದು ಇಂದು ದೇಶವ್ಯಾಪಿಯಾಗಿದೆ. ಹಲವು ತಳಿಗಳ ಅಭಿವೃದ್ಧಿಯಲ್ಲಿ ದಶೆರಿ ಪೋಷಕನಾಗಿ ಸಹಾಯವಾಗಿದೆ. ಮಹಮ್ಮದ ಅನ್ಸಾರಿ ಜೈದಿ ಎನ್ನುವವರಿಗೆ ಸೇರಿದ್ದ ಒಂದು “ತಾಯಿ ಮರ” ಸುಮಾರು 200 ವರ್ಷಗಳಿಂದ ಇನ್ನೂ ಇದೆ. ಇದರಿಂದಲೇ ದಶೆರಿ ಅಭಿವೃದ್ಧಿಯಾಗಿವೆ ಎಂದಿದ್ದು, ಅದನ್ನು “ದಶೆರಿ ತಾಯಿ” ಎಂದೇ ಕರೆಯಲಾಗುತ್ತಿದೆ. ಆ ತಾಯಿಯನ್ನು ಅನ್ಸಾರಿಯವರ ಕುಟುಂಬ ದೈವದಂತೆ ಪೋಷಿಸಿಕೊಂಡು ಬಂದದ್ದು ಅದರ ಮಹತ್ವಕ್ಕೆ ಸಾಕ್ಷಿಯಾಗಿದೆ. ಮಲೇಷಿಯಾ, ಸಿಂಗಪುರ್ ಮುಂತಾದ ದಕ್ಷಿಣ ಏಶಿಯಾದ ದೇಶಗಳಿಗೆ ಹೆಚ್ಚು ರಫ್ತಾಗುವ ಹಣ್ಣು ದಶೆರಿ. ಈ ತಳಿಯು ರುಚಿ ಮತ್ತು ಪರಿಮಳಕ್ಕೆ ಹೆಸರು ಮಾಡಿದ್ದು ಉತ್ತರ ಭಾರತದ ಪ್ರಬುದ್ಧ ಮಾರುಕಟ್ಟೆಯನ್ನು ಹೊಂದಿದೆ.
ಮಲಗೊವ ಅಥವಾ ಮಲಗೊಬಾ ಮೂಲತಃ ತಮಿಳುನಾಡಿನ ಹಣ್ಣು. ಬಹುಶಃ ಇತರೇ ಎಲ್ಲಾ ತಳಿಗಳಿಗಿಂತಾ ದೊಡ್ಡ ಹಣ್ಣು ಮಲಗೊವಾ. ಪರಿಮಳ ಮತ್ತು ಸ್ವಾದಕ್ಕೆ ಹೆಸರು ಮಾಡಿದೆ. ಇದರ ತಿರುಳು ವಿಶೇಷವಾಗಿದ್ದು, ಸ್ವಲ್ಪ ದಪ್ಪ ಸಿಪ್ಪೆಯನ್ನು ಹೊಂದಿದೆ. ಎಲ್ಲದಕ್ಕಿಂತಲೂ ಇದು ಉಂಟುಮಾಡಿರುವ ಮಾಂತ್ರಿಕತೆ ಎಂದರೆ ಅಮೆರಿಕಾ ನೆಲದಲ್ಲಿ ಮಾವಿನ ತಳಿಯ ಪರಂಪರೆಯನ್ನೇ ಆಳುತ್ತಿದೆ. ಮೊದಲು 1885ರಲ್ಲಿ ಅಮೆರಿಕಾವನ್ನು ಮಲಗೊವಾ ತಲುಪಿತು. ನಂತರದಲ್ಲಿ ಮೂಲ ಮಲಗೊವಾ ತಳಿಯು 1902ರಲ್ಲಿ ಜಾನ್ ಹೆಡನ್ ಎಂಬಾತನ ತೋಟವನ್ನು ಹೊಕ್ಕು, ಅಲ್ಲಿಗೆ ಹೊಂದಿಕೊಂಡು ಅದ್ಭುತ ಇಳುವರಿ ನೀಡಿದ ಮರವಾಗಿದೆ. ಹೆಡನ್ ಅವರ ಹೆಂಡತಿ ಫ್ಲಾರೆನ್ಸ್ ಹೆಡನ್ ಅದನ್ನು ನಂತರ ಕಾಪಾಡಿಕೊಂಡು ಬಂದದ್ದಲ್ಲದೆ ಅಮೆರಿಕಾ ತೋಟಗಾರಿಕಾ ಇಲಾಖೆಗೆ ತಿಳಿಸಿದರು. ಅದರ ಫಲವಾಗಿ ಇಂದು ಮೂಲ ಮಲಗೊವಾ ಮರವಾಗಿದ್ದ ಅದು ಅಲ್ಲಿ ಹೆಡನ್ ತಳಿಯಾಗಿ ಪ್ರಸಿದ್ಧವಾಗಿದೆ. 1910ರಲ್ಲಿ ಮೊದಲ ಫಲವನ್ನು ಕೊಟ್ಟ ಅದೇ ಮರ ಇನ್ನೂ ಇದೆ. ಇದೀಗ ಅಮೆರಿಕಾದ ಬಹುಪಾಲು ತಳಿಗಳು ಹೆಡನ್ನಿಂದ ಅಭಿವೃದ್ಧಿ ಹೊಂದಿದ ತಳಿಗಳೇ ಆಗಿವೆ. ಮೊದ ಮೊದಲು ಹೆಡೆನ್ ತಳಿಯು ಸುಮಾರು ಎರಡೂವರೆ ದಶಕಗಳ ಕಾಲ ಅಮೆರಿಕಾದ ಮಾವಿನ ಸಾಮ್ರಾಜ್ಯವನ್ನು ಆಕ್ರಮಿಸಿಕೊಂಡಿತ್ತು. ಅಷ್ಟೇ ಅಲ್ಲಾ ಅಲ್ಲಿಂದ ಇತರೆ ದೇಶಗಳಿಗೂ ಅದು ಹಬ್ಬಲು ಕಾರಣವಾಗಿತ್ತು. ಹಾಗಾಗಿ ನಮ್ಮ ಮಲಗೊವಾ ತಳಿವೈವಿಧ್ಯಕ್ಕೆ ಮೂಲ ಕಾರಣವಾಗಿ ಜಗತ್ತಿನ ಅತಿ ಹೆಚ್ಚು ವಿವಿಧತೆಯನ್ನು ಹೊಂದಿರುವ ದಕ್ಷಿಣ ಫ್ಲಾರಿಡಾ ಮಾವುಗಳಿಗೂ ಕಾರಣವಾಗಿದೆ. ಇಂದು ದಕ್ಷಿಣ ಫ್ಲಾರಿಡಾ ರಾಜ್ಯವು ಮಾವಿನ ಮೆಕ್ಕಾಗಳಲ್ಲಿ ಒಂದು. ಹೆಡೆನ್ನಿಂದಾಗಿ ಇಂದು ಅಮೆರಿಕಾದಲ್ಲಿ ಸುಮಾರು 30ಕ್ಕೂ ಹೆಚ್ಚು ತಳಿಗಳು ಅಭಿವೃದ್ಧಿಯಾಗಿವೆ. ಅವೆಲ್ಲವೂ ನಮ್ಮ ತಮಿಳುನಾಡಿನ ಮಲಗೊವಾದ ಮೂಲವನ್ನೇ ಹೊಂದಿವೆ ಎಂಬುದು ಖುಷಿಯ ಸಂಗತಿಯಲ್ಲವೇ?
“ಮಲ್ಲಿಕಾ” ನೀಲಂ ಮತ್ತು ದಶೆರಿಗಳಿಂದ ಸಂಕರಗೊಂಡ ಹೈಬ್ರಿಡ್ ತಳಿ. ಆರಂಭದಲ್ಲಿ ತುಂಬಾ ಜನಪ್ರಿಯವಾಗಿ ಹೊರ ಬಂದ ತಳಿ ಅದರ ಮಧುರತೆಯಿಂದ ಹೆಸರುವಾಸಿಯಾಗಿತ್ತು. ಈಗಲೂ ರುಚಿ ಮತ್ತು ಪರಿಮಳವನ್ನು ಹೊಂದಿದ್ದರೂ ಮಾರುಕಟ್ಟೆ ಹಾಗೂ ರೈತರನ್ನು ಹೆಚ್ಚು ಆಕರ್ಷಿಸಿಲ್ಲ. ತೆಳುವಾದ ಸಿಪ್ಪೆಯ ಈ ಹಣ್ಣು ಹೆಚ್ಚಿ ತಿನ್ನಲು ಅದ್ಭುತವಾದ ಹಣ್ಣು. ಅತ್ಯಂತ ಸಿಹಿಯಾದ ಇದನ್ನು ಜೇನುತುಪ್ಪದ ಸಿಹಿಗೆ ಹೋಲಿಸುವುದುಂಟು.
“ಇಮಾಂಪಸಂದ್” ಎಂಬ ಒಂದು ತಳಿಯನ್ನೂ ಮಾವಿನ ರಾಜ ಎಂದೇ ಕರೆಯಲಾಗುತ್ತದೆ. ಆಂಧ್ರ ಪ್ರದೇಶ ಹಾಗೂ ರಾಜ್ಯದ ಆಂಧ್ರಗಡಿಯ ಭಾಗಗಳಲ್ಲಿ ಅತ್ಯಂತ ಪ್ರಸಿದ್ಧವಾದ ಈ ತಳಿಯು ಮೂಲ ಆಲ್ಫನ್ಸೊ ಬಗೆಯದು ಎನ್ನಲಾಗುತ್ತದೆ. ಇದನ್ನು ಮೂಲದಲ್ಲಿ ಕೇರಳ ರಾಜ್ಯದಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು ಮೊಘಲ್ ಚಕ್ರವರ್ತಿ ಹುಮಾಯೂನ್ ಸ್ಮರಣೆಯಲ್ಲಿ ಹೆಸರಿಸಿದ್ದೆಂದು ಹೇಳಲಾಗುತ್ತದೆ. ಹಿಮಾಯತ್ ಪಸಂದ್, ಹುಮಾಯೂನ್ ಪಸಂದ್ ಎಂಬ ಹೆಸರುಗಳಿಂದಲೂ ಇದು ಪ್ರಸಿಧ್ಧವಾಗಿದೆ. ಇದು ರುಚಿಯಲ್ಲಿ ದೊಡ್ಡ ಹೆಸರು ಮಾಡಿದ ತಳಿ.
ಬಂಗಾನ್ ಪಲ್ಲಿ ಹೆಸರಿನ ಒಂದು ತಳಿ ಆಂಧ್ರ ಮೂಲದ್ದು ಎಂದು ಹೇಳಲೇಬೇಕಿಲ್ಲ! ಇದರ ಬಂಗಾರದ ಹಳದಿ ಬಣ್ಣವೇ ದೊಡ್ಡ ಆಕರ್ಷಣೆ. ಐಸ್‍ಕ್ರೀಮ್ ನಂತಹಾ ತಿರುಳು, ವಿಪರೀತ ರಸ ಇದರ ಮುಖ್ಯ ಗುಣಗಳು. ಹಿಂದೊಮ್ಮೆ ಆಂಧ್ರದಲ್ಲಿದ್ದ ಬಂಗಾನ್ ಪಲ್ಲಿ ಎಂಬ ರಾಜ ಸಂಸ್ಥಾನದ ಪ್ರದೇಶದಿಂದ ಇದು ಅಭಿವೃದ್ಧಿಯಾಗಿದೆ. ಅಚ್ಚರಿಯ ಸಂಗತಿ ಎಂದರೆ ನೆರೆಯ ಆಂಧ್ರದ ಬಂಗಾನ್ ಪಲ್ಲಿ ತಳಿಯು ಜಗತ್ತಿನಲ್ಲೇ ಅತಿ ಹೆಚ್ಚು ಬೆಳೆಯಲಾಗುವ ಮಾವು.
“ನೀಲಂ” ನಮ್ಮ ರಾಜ್ಯದಲ್ಲೂ ಸೇರಿ ಇತರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ತಡವಾಗಿ ಬರುವ ಹಣ್ಣಿನ ತಳಿ. ತೆಳುವಾದ ಸಿಪ್ಪೆಯ, ಸ್ವಲ್ಪ ಭಿನ್ನವಾದ ರುಚಿ ಮತ್ತು ಪರಿಮಳವನ್ನು ಹೊಂದಿರುವ ನೀಲಂಅನ್ನು ನೀಲಂ ರುಚಿ ಎಂದೇ ಹೆಸರಾಗಿದೆ. ಇನ್ನೇನು ಮಾವು ಮುಗಿದೇ ಹೋಯಿತು ಎಂದುಕೊಂಡಾಗಲೂ ಮಾರುಕಟ್ಟೆಯಲ್ಲಿ ಮೀಡಿಯಂ ಗಾತ್ರದಿಂದ ಚಿಕ್ಕ ಚಿಕ್ಕ ಹಣ್ಣುಗಳನ್ನು ಹಳದಿ-ಮಿಶ್ರಿತ ಹಸಿರು ಬಣ್ಣದಲ್ಲಿ ಕಾಣುತ್ತಿದ್ದರೆ ಅವು ಖಂಡಿತಾ ನೀಲಂ ಹಣ್ಣುಗಳೇ! ಒಳ್ಳೆಯ ಇಳುವರಿಯನ್ನು ಹೊಂದಿರುವ ಈ ತಳಿಯು ಹಲವು ಅಭಿವೃದ್ಧಿ ಹೊಂದಿರುವ ತಳಿಗಳ ಒಂದು ಪೋಷಕನಾಗಿ ಬೆಂಬಲವನ್ನಿತ್ತಿದೆ. ಹಸಿರಿರುವಾಗಲೇ ಕೊಯಿಲು ಮಾಡಿ ತುಂಬಾ ದಿನಗಳ ಕಾಲ ಇಡಬಲ್ಲ ಗುಣವನ್ನು ನೀಲಂ ಹೊಂದಿದ್ದು, ಇದು ಪಾಕಿಸ್ಥಾನದಲ್ಲೂ ಜನಪ್ರಿಯ ತಳಿಯಾಗಿದೆ.
ಪಾಕಿಸ್ಥಾನದ ಸಿಂಧ್ ಪ್ರಾಂತ್ಯದಿಂದ ಬಳಕೆಗೆ ಬಂದ “ಸಿಂಧ್ರಿ” ಮಾವು ಜಗತ್ತಿನ ಮಾವಿನ ರಾಣಿ ಎನ್ನಿಸಿಕೊಂಡಿದೆ. ಕಾರಣ ಇದರ ವಿಶೇಷವಾದ ಸಿಹಿ ಹಾಗೂ ಪರಿಮಳ. ಮೊಟ್ಟೆಯಾಕಾರದ ಹಣ್ಣುಗಳ ಸಿಂಧ್ರಿ ಅತ್ಯಂತ ಹೆಚ್ಚು ಸಿಹಿಯಾದ ಮಾವು. ಆಲ್ಫಾನ್ಸೊ ಭಾರತದ್ದು ಮಾವಿನ ರಾಜನಾದರೆ ಸಿಂಧ್ರಿ ಪಾಕಿಸ್ಥಾನದ್ದು ಮಾವಿನರಾಣಿ! ವಿದೇಶಗಳಲ್ಲಿ ಮಾವು ಹಲವಾರು ತಳಿಗಳಾಗಿ ಅಭಿವೃದ್ಧಿ ಹೊಂದಿದೆ. ಜಪಾನಿನ “ಇರ್ವಿನ್” ಎಂಬ ತಳಿಯು ಸೇಬಿನಂತೆಯೆ ಇದ್ದು ಅನುಮಾನಕ್ಕೆ ಆಸ್ಪದಕೊಡುವಂತೆ ಇರುತ್ತದೆ. ಹಲವಾರು ತಳಿಗಳಲ್ಲಿ “ಫೋರ್ಡ್” “ಐಸ್‍ಕ್ರೀಮ್” “ಐವರಿ” “ಕೆಂಟ್” “ಹೈಡಿ” ಹೀಗೆ ನೂರಾರು ಹೆಸರಿನಲ್ಲಿ ಮಾವು ಜಗತ್ತನ್ನು ಆವರಿಸಿದೆ. ಇವುಗಳಲ್ಲದೆ ಉಪ್ಪಿನಕಾಯಿಗೆ ಬಳಸುವ ನೂರಾರು ಬಗೆಯ ಹೆಸರಿಲ್ಲದ ಮಾವುಗಳು ಮಲೆನಾಡಿನಲ್ಲಿವೆ. ಮಿಡಿ, ಹೆಚ್ಚಿ ಬಳಸುವ, ತರೆಹೆವಾರಿ ಕಾಯಿಗಳು ಮಾವಿನಲ್ಲಿ ಕಾಣುತ್ತವೆ.
ತಳಿಗಳ ಪ್ರಶ್ನೆ ಬಿಡಿ, ಕೆಲವು ಮರಗಳು, ಕೆಲವು ತೋಟಗಳ ಸಂಗ್ರಹಗಳು ಅತ್ಯಂತ ಪ್ರಸಿದ್ಧಿಯನ್ನು ಪಡೆದ ಮಾವುಗಳಾಗಿವೆ. ರಾಜ್ಯದ ಟಿಪ್ಪು ಸುಲ್ತಾನ್ ಕೂಡ ಮಾವು ಪ್ರೇಮಿಯಾಗಿದ್ದ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಎಂಬ ಹಳ್ಳಿಯಲ್ಲಿ ಆತನಿಂದಾಗಿ ಆ ಕಾಲದಲ್ಲಿ 300ಕ್ಕೂ ಹೆಚ್ಚು ತಳಿಗಳ ಸಂಗ್ರಹವನ್ನು ಅಲ್ಲಿ ಕಾಣಬಹುದಿತ್ತು. ಅಲ್ಲಿ ಈಗಲೂ ಸುಮಾರು 20 ಎಕರೆ ತೋಟವನ್ನು ನಿಭಾಯಿಸುತ್ತಿರುವ ಘನಿಸಾಬ್ ಎಂಬ ಕೃಷಿಕರು 116 ಸ್ಥಳೀಯ ತಳಿಗಳನ್ನು ಹೊಂದಿದ್ದಾರೆ. ಅವುಗಳಲ್ಲಿ ಅನೇಕ ಮರಗಳು 200ವರ್ಷಗಳ ಹಿಂದಿನವೆಂದು ಅಂದಾಜಿಸಲಾಗಿದೆ.
ಮಹಾರಾಷ್ಟ್ರದ ಈಗಿನ ಜಲಗಾವ್ ಜಿಲ್ಲೆಯ ಖಂದೇಶ್ ಎಂಬಲ್ಲಿ ಸುಮಾರು 300 ವರ್ಷಕ್ಕೂ ಹಳೆಯ ಮರವಿದೆ, ಅದು ಇನ್ನೂ ಫಲ ಕೊಡುತ್ತಿದೆ. ಸಾಮಾನ್ಯವಾಗಿ ಮಾವಿನ ಮರಗಳು 80-90 ವರ್ಷ ಒಳ್ಳೆಯ ಫಲವನ್ನು ಕೊಡುತ್ತವೆ. ಆದಾಗ್ಯೂ ನೂರಾರು ವರ್ಷಗಳಿಂದಲೂ ಫಲಕೊಡುತ್ತಿರುವ ನೂರಾರು ಮರಗಳು ಜಗತ್ತಿನಾದ್ಯಂತ ಇವೆ.
ಚಂಢೀಘಡದ ಬರೈಲ್ ಎಂಬಲ್ಲಿನ ಒಂದು ಮಾವಿನ ಮರವು ಜಗತ್ತಿನಲ್ಲೇ ಅತ್ಯಂತ ದೊಡ್ಡ ಮಾವಿನ ಮರವೆಂದು ಹೆಸರಾಗಿತ್ತು. ಅದರ ಛಾವಣೆಯು ಅರ್ಧ ಎಕರೆಗಿಂತಾ ಹೆಚ್ಚು ವಿಶಾಲವಾಗಿತ್ತು (2258 ಚ.ಮೀ). ಅದರ ಮೂಲ ಕಾಂಡವು 9.75 ಮೀಟರ್ ನಷ್ಟು ದಪ್ಪನಾಗಿತ್ತು. ಪ್ರತೀ ವರ್ಷ ಸರಾಸರಿ 16ಸಾವಿರ ಟನ್ನುಗಳಷ್ಟು ಹಣ್ಣುಗಳನ್ನು ಒಂದೇ ಮರ ಬಿಡುತ್ತಿತ್ತು. ಒಮ್ಮೆ ಅದರ ಒಟ್ಟೂ ಹಣ್ಣುಗಳನ್ನು 21 ಎತ್ತಿನ ಗಾಡಿಗಳಲ್ಲಿ ಹೇರಿಕೊಂಡು ಹೋದಾಗ ಪಟಿಯಾಲಾ ಮಾರುಕಟ್ಟೆಯಲ್ಲಿ ಜನರು ಇದೇನಿದು ಇಡೀ ತೋಟವನ್ನು ಒಮ್ಮೆಲೆ ತಂದಿದ್ದೀರಿ! ಎಂದರೆ, ಅವರ ಅಚ್ಚರಿಗೆ ಮಹದಚ್ಚರಿಯಾಗಿ ಒಂದೇ ಮರದ್ದು ಎಂದು ತಿಳಿದಾಗ ಜನ ಮೂರ್ಛೆ ಹೊಗಿರಲಿಲ್ಲ. ದುರಾದೃಷ್ಟಕ್ಕೆ 1955ರಲ್ಲಿ ಮರಕ್ಕೆ ಸಿಡಿಲು ಬಡಿದು ಉರುಳಿಹೋಯಿತು.
ಎಳೆಯರಿದ್ದಾಗ ಮಾತಾನಾಡುವ ಮಾವಿನ ಮರಗಳ ಕಥೆಗಳನ್ನು ಕೇಳಿರಬಹುದು. ಕೇಳಿದ್ದನ್ನು ಕೊಡುವ, ದಣಿವಾರಿಸುವ ಹೀಗೆ ತರಹೇವಾರಿ ಮಾವಿನ ಮರಗಳ ಕಥನಗಳಿಗೇನೂ ಕಡಿಮೆಯಿಲ್ಲ. ಹುಡುಕಿಕೊಂಡು ಹೊರಟರೆ ಜೀವಮಾನವಿಡಿ ಬರಿ ಮಾವಿನ ಚರಿತ್ರೆಯನ್ನು ಕಟ್ಟುವ ಕೆಲಸವೇ ಆದರೂ ಇನ್ನೂ ಸಾವಿರಾರು ಉಳಿದಾವು. ಮಾವಿಗೊಂದು ವಿಶೇಷತೆಯಿದೆ. ಹಣ್ಣನ್ನು ತಿನ್ನುತ್ತಾ ಹೋದಂತೆ ಕೊನೆಯಲ್ಲಿ ತಿನ್ನಲಾಗದ ಬೀಜ-ಓಟೆ ಸಿಗುತ್ತದೆ. ಇತರೇ ಹಲವು ಹಣ್ಣುಗಳಂತೆ ತಿನ್ನುವಾಗ ಬೀಜ ಅಡ್ಡ ಬರುವುದಿಲ್ಲ. ಎಷ್ಟು ಮಜಾ ಅಲ್ಲವಾ? ತಿನ್ನುವುದಕ್ಕೆಂದೇ ಹುಟ್ಟಿಕೊಂಡ ಹಣ್ಣಿರಬೇಕು. ನಾಳೆಯಿಂದಲೇ ತಿನ್ನಲು ಅಣಿಯಾಗಿ ಎರಡು-ಮೂರು ತಿಂಗಳ ಕಾಲ ಮಾವಿನ ರುಚಿ-ಪರಿಮಳ ನಿಮ್ಮನ್ನೆಲ್ಲಾ ಆವರಿಸಲಿ.
-ನಮಸ್ಕಾರ ಚನ್ನೇಶ್.
ಮಾವಿನ ವಿವಿಧ ತಳಿಗಳ ಕುರಿತ ಮಾಹಿತಿ ಅದ್ಭುತ ಹಾಗೆಯೇ ಲೇಖನ ಓದುತ್ತಿದ್ದಂತೆ ಬಾಯಲ್ಲಿ ನೀರೂರಿಸುವ ನಿರೂಪಣೆ ಅಮೋಘ ಸಾರ್.