ಸಸ್ಯಯಾನ ಆರಂಭಿಸಿದ ಸುಮಾರು ಎರಡು ತಿಂಗಳೊಳಗೆ ಅಂದರೆ ಕಳೆದ ಫೆಬ್ರವರಿಯಲ್ಲಿ ನೀಲಗಿರಿ ಸಸ್ಯವನ್ನು ಕುರಿತು ಕರ್ನಾಟಕ ಹೈಕೋರ್ಟು ಒಂದು ಮಹತ್ತರವಾದ ಆದೇಶವನ್ನು ನೀಡಿತು. ಈ ಹಿಂದೆ 2017ರಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ನೀಲಗಿರಿ ಸಸ್ಯಗಳ ಯಾವುದೇ ಹೊಸ ನಾಟಿಯನ್ನು ನಿಷೇಧಿಸಿತ್ತು. ಅದರ ವಿರುದ್ಧ ನ್ಯಾಯಾಲಯದ ಮೊರೆ ಹೊಕ್ಕ ದಾವೆಯಿಂದ ಇದೇ 2019ರ ಫೆಬ್ರವರಿಯಲ್ಲಿ ನಿಷೇಧದ ವಿರುದ್ಧವಾಗಿ ನೀಲಗಿರಿಯ ಪರವಾದ ಆದೇಶ ಬಂದಿತ್ತು. ಇಂತಹದ್ದೇ ಪರ-ವಿರೋಧದ ಕಾರಣಗಳಿಂದಾಗಿ ಕಳೆದ 40 ವರ್ಷಗಳಿಂದಲೂ ನೀಲಗಿರಿಯು ಸುದ್ದಿಯಲ್ಲಿದೆ. 80ರ ದಶಕದ ಉತ್ತರಾರ್ಧದಲ್ಲಿ ಸಾಮಾಜಿಕ ಅರಣ್ಯೀಕರಣದ ನಡುತೋಪುಗಳಲ್ಲಿ ಯೂಕಲಿಪ್ಟಸ್ ಹೆಚ್ಚಿನ ಪಾಲು ತೆಗೆದುಕೊಂಡ ಚರ್ಚೆಗಳು ಆರಂಭವಾಗಿದ್ದವು. ಅಲ್ಲಿಂದಾಚೆಗೆ ಯಾರೋಬ್ಬರೂ ನೀಲಗಿರಿಯ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಿರಲಿಲ್ಲ. ಹಾಗಂತ ಬೆಳೆಯುವುದನ್ನೇನೂ ನಿಲ್ಲಿಸಿರಲಿಲ್ಲ. ಆದಾಗ್ಯೂ 2017ರಲ್ಲಿ ಮೊಟ್ಟ ಮೊದಲ ಬಾರಿಗೆ ಹೊಸತಾಗಿ ನೀಲಗಿರಿ ನೆಡುವುದರ ವಿರುದ್ಧವಾಗಿ ಸರ್ಕಾರವು ಆದೇಶಿಸಿತ್ತು. ಹಾಗಾಗಿ ಕಳೆದ 35 ವರ್ಷಗಳಿಗೂ ಹೆಚ್ಚು ಕಾಲ ನಿರಂತರವಾಗಿ ಒಂದಲ್ಲೊಂದು ಬಗೆಯ ಚರ್ಚೆಗೆ ನೀಲಗಿರಿಯು ಕಾರಣವಾಗಿತ್ತು.
ನೀಲಗಿರಿ ಮರವನ್ನು ಕುರಿತ ಅದರ ಚರ್ಚೆಯನ್ನೂ ಒಳಗೊಂಡು, ಆಚೆಗಿನ ಸಂಗತಿಗಳನ್ನು ಹಾಗೂ ನೀಲಗಿರಿಯು ಮನುಕುಲದ ಸಂಗಾತಿಯಾದ ವಿವರಗಳನ್ನು ಹಂಚಿಕೊಳ್ಳುವುದು ಇಲ್ಲಿನ ಟಿಪ್ಪಣಿಗಳ ಉದ್ದೇಶ. ಆದಾಗ್ಯೂ ಇಂತಹದೊಂದು ಮಹತ್ತರವಾದ ವಿಚಾರಕ್ಕೆ ಒಂದು ಪರದೇಶಿ ಸಸ್ಯ ಕಾರಣವಾಗಿದ್ದು ವಿಶೇಷವೇ ನಿಜ! ಯಾರನ್ನೇ ನೀಲಗಿರಿ ಸಸ್ಯದ ಕುರಿತು ಅವರ ಅಭಿಪ್ರಾಯವನ್ನು ಕೇಳಿ ಎಲ್ಲರದ್ದೂ ಒಂದೇ ತರ್ಕ, ನೀಲಗಿರಿ ಹೆಚ್ಚು ನೀರು ಕುಡಿದು ನೆಲವನ್ನು ಬರಿದು ಮಾಡುತ್ತದೆ! ಇವರುಗಳು ಯಾರೂ ನೀಲಗಿರಿಯ ನೀರಿನ ಅವಶ್ಯಕತೆ ಹಾಗೂ ಬಳಕೆಯ ವಿವರಗಳನ್ನು ತಿಳಿದೇ ಮಾತಾಡುತ್ತಿದ್ದರೆಂದೇನಲ್ಲ. ಎಂಭತ್ತರ ದಶಕದಲ್ಲಿ ಜಾಗತಿಕ ಬ್ಯಾಂಕ್ ನೀಲಗಿರಿಯನ್ನು ಒಣ ಪ್ರದೇಶದ ಸಾಮಾಜಿಕ ಅರಣ್ಯೀಕರಣಕ್ಕೆ ಶಿಫಾರಸ್ಸು ಮಾಡಿ ಸಹಾಯ ಮಾಡಿತ್ತು. ಅದು ಕೆಲವು ಸ್ಥಳೀಯ ಪರಿಸರದ ಸಸ್ಯರಾಶಿಯನ್ನೂ ಮೀರಿ ಆವರಿಸಿದ್ದಲ್ಲದೆ, ವಿಭಿನ್ನ ವಾತಾವರಣವನ್ನು ಸೃಷ್ಠಿಸಿತ್ತು. ಇದರ ಬೆಂಬಲದಲ್ಲಿಯೇ ರಾಜ್ಯ ಸರ್ಕಾರವು 2017ರಲ್ಲಿ ನೀಲಗಿರಿಯ ಯಾವುದೇ ಹೊಸ ನಾಟಿಯನ್ನು ನಿಷೇಧಿಸಿತ್ತು. ಹಾಗೆ ನೋಡಿದರೆ 90ರ ದಶಕದಲ್ಲಿಯೇ ಚರ್ಚೆಗಳು ಜೋರಾಗಿದ್ದವು. ಆದರೆ ಅದರ ಪರಿಣಾಮ ತಣ್ಣಗಾದಾಗಿ ನೀಲಗಿರಿಯ ಕುರಿತ ತಿಳಿವಳಿಕೆಯು ಹೆಚ್ಚಿದ ಮೇಲೆ ಸರ್ಕಾರ ನಿಷೇಧವನ್ನು ಹೇರಿತ್ತು. ಕಳೆದ ಇಡೀ 30 ವರ್ಷಗಳಿಗೂ ಹೆಚ್ಚು ಕಾಲ ಮಾಂತ್ರಿಕವಾಗಿ ಅಪಾರ ಮರವನ್ನು ಉತ್ಪಾದಿಸಿದ ಇದು, ಅದರ ನಡುವಿನ ವೈಜ್ಞಾನಿಕತೆಯನ್ನು ಅರಿಯಲು ಪ್ರಯತ್ನಿಸಿದ ಸಂಶೋಧನೆಗಳ ವಿವರಗಳೇನಾದರೂ ಚರ್ಚೆಯನ್ನಾಗಲಿ, ನೀಲಗಿರಿಯ ಸಸ್ಯವೈಜ್ಞಾನಿಕ ಸಂಗತಿಗಳ ತಿಳಿವಳಿಕೆಯಾಗಲಿ ಸರ್ಕಾರದ ನಿಷೇಧವನ್ನು ಒಳಗೊಂಡಿದ್ದವಾ ಎಂಬ ವಿವರಗಳ ಹುಡುಕಾಟದ ಕುತೂಹಲಗಳಿಗೂ ತೆರೆದುಕೊಳ್ಳುವುದು ಇಲ್ಲಿನ ಆಸಕ್ತಿಯಲ್ಲಿ ಸೇರಿದೆ.
ಯೂಕಲಿಪ್ಟಸ್ ಅಥವಾ ನೀಲಗಿರಿ ಒಂದು ಪರದೇಶಿ ಸಸ್ಯ. ಆಸ್ಟ್ರೇಲಿಯಾ ಅದರ ತವರೂರು. ಅದರ ಬದುಕಿನ ಪರವಾಗಿ ನ್ಯಾಯಾಲಯವು ಈಗ ನೆರವಿಗೆ ಬಂದಿದ್ದರೂ, ಅದರ ಮೊಟ್ಟ ಮೊದಲ ವೈಜ್ಞಾನಿಕ ವಿವರಣೆಯನ್ನು ಸ್ವಂತ ಆಸಕ್ತಿಯಿಂದ ಸಸ್ಯವಿಜ್ಞಾನವನ್ನು ಕಲಿತ ಓರ್ವ ಫ್ರೆಂಚ್ ನ್ಯಾಯಾದೀಶರಿಂದಲೇ ಪಡೆದುಕೊಂಡ ಹೆಮ್ಮೆಯ ಸಸ್ಯ ಇದು. ಪ್ಯಾರಿಸ್ಸಿನ ತುಂಬು ಶ್ರೀಮಂತ ಮನೆತನದಲ್ಲಿ ಹುಟ್ಟಿದ್ದ ಚಾರ್ಲ್ಸ್ ಲೂಯಿಸ್ ಎಂಬುವರು ನೀಲಗಿರಿ ಸಸ್ಯವನ್ನು ಮೊಟ್ಟ ಮೊದಲಬಾರಿಗೆ 1789ರಲ್ಲಿ ವಿವರಿಸಿದ್ದರು. ಕಾನೂನು ಅಧ್ಯಯನವನ್ನು ಮಾಡಿದ್ದರೂ ಹವ್ಯಾಸ ಮತ್ತು ಪ್ರೀತಿಗೆ ಸಸ್ಯ ಜಗತ್ತನ್ನು ಆರಿಸಿಕೊಂಡ ಚಾರ್ಲ್ಸ್ ಅವರು ತಮ್ಮ ಅಧ್ಯಯನಕ್ಕೆ ಕಾರ್ಲ್ ಲಿನೆಯಸ್ ಅವರ ವರ್ಗೀಕರಣ ವಿಧಾನವನ್ನು ಅನುಸರಿಸಿ ಸಸ್ಯಗಳ ವಿವರಗಳನ್ನು ದಾಖಲಿಸಿದ್ದರು. ತೆರಿಗೆಯ ಕಾನೂನುಗಳ ನ್ಯಾಯಾದೀಶರಾಗಿದ್ದ ಚಾರ್ಲ್ಸ್ ಅಪ್ರತಿಮ ಸಸ್ಯ ಪ್ರೇಮಿ, ಆತನ ಹವ್ಯಾಸದಿಂದ ಹಲವಾರು ಸಸ್ಯವೈಜ್ಞಾನಿಕ ಸಂಗತಿಗಳು ಬೆಳಕಿಗೆ ಬಂದವು. ನೀಲಗಿರಿಯ ಸಂಕುಲದ ಆಮೂಲಾಗ್ರ ವಿವರಗಳು ದೊರಕಿದ್ದೂ ಚಾರ್ಲ್ಸ್ ಅವರ ಬರಹಗಳಿಂದ! ಯೂಕಲಿಪ್ಟಸ್ ಸೇರಿದಂತೆ ಸುಮಾರು 8000 ಸಸ್ಯ ಪ್ರಭೇದಗಳ ಹರ್ಬೇರಿಯಂ(ಎಲೆ,ಹೂ-ಇತ್ಯಾದಿಗಳ ಒಣ ಮಾದರಿ) ಅವರ ವೈಯಕ್ತಿಕ ಸಂಗ್ರಹವಾಗಿತ್ತು.
ಯೂಕಲಿಪ್ಟಸ್ ಎಂಬುದು ನೂರಾರು ನೀಲಗಿರಿಗಳನ್ನು ಒಳಗೊಂಡ ಒಂದು ಸಂಕುಲದ ಹೆಸರು. ಸಾಮಾನ್ಯ ತಿಳಿವಳಿಕೆಯಲ್ಲಿ ನೀಲಗಿರಿಯು ಒಂದೇ ಎಂಬ ಭಾವನೆಗಳಿವೆ. ಭಾರತದಲ್ಲಿಯೇ ನೂರಾರು ಪ್ರಭೇದಗಳಿವೆ. ಅದರ ವಿವರಗಳನ್ನು ಮುಂದೆ ನೋಡೋಣ. Eucalyptus ಪದವು ಪ್ರಾಚೀನ ಗ್ರೀಕ್ನ ಮೂಲದ್ದು, ಅದರ ವಿವರಣೆಯು ಹೀಗಿದೆ. Eu ಎಂದರೆ ಸುಂದರವಾದ, ಅಥವಾ ಒಳ್ಳೆಯ ಎಂದೂ ಹಾಗೆಯೇ Kalyptusಎಂದರೆ ಮುಚ್ಚಿಕೊಂಡ, ಕನ್ಸೀಲ್ ಆದ ಎಂದು ಅರ್ಥ. ನೀಲಗಿರಿಯಲ್ಲಿ ಹೂವಿನ ಮೊಗ್ಗುಗಳನ್ನು ಮುಚ್ಚಿಕೊಂಡ ವಿಶೇಷ ಭಾಗವಿರುವುದರಿಂದ ಹಾಗೆ Eucalyptus ಎಂದು ಕರೆಯಲಾಗಿದೆ. ಚಿತ್ರ ನೋಡಿ, ಮೊಗ್ಗನ್ನು ಮುಚ್ಚಿಕೊಂಡ ಪುಟ್ಟ ಕೋನ್ ಕಾಣುತ್ತದೆ. ಹೂವರಳಿದ ಮೇಲೆ ಮರದ ಕೆಳಗೆ ಬಿದ್ದ ನೂರಾರು ಕೋನ್ ಗಳನ್ನು ತೆಗೆದುಕೊಂಡು ಆಟವಾಡಿದ್ದು ಯಾಗಾದರೂ ನೆನಪಿದ್ದೀತು.
ನಮ್ಮ ದೇಶದ ನೆಲಕ್ಕೆ ಮೊದಲು ಬಂದದ್ದೇ ನಮ್ಮ ರಾಜ್ಯದ ನಂದಿ ಬೆಟ್ಟಕ್ಕೆ. 1790ರಲ್ಲಿ ಟಿಪ್ಪುಸುಲ್ತಾನ್ ಫ್ರೆಂಚರ ಮೂಲಕ ಆಸ್ಟ್ರೇಲಿಯಾದಿಂದ ತರಿಸಿ, ನಮ್ಮ ರಾಜ್ಯದ ನಂದಿ ಬೆಟ್ಟದಲ್ಲಿ ಮೊದಲು ನಾಟಿ ಮಾಡಿಸಿದ್ದ. ಆಗ ಟಿಪ್ಪು ಸುಲ್ತಾನ್ ಕರ್ನಾಟಕದ ನಂದಿ ಬೆಟ್ಟದ ಮೇಲೆ ಸುಮಾರು 16 ಪ್ರಭೇದಗಳ ಸಸಿಗಳನ್ನು ನಡೆಸಿದ್ದನೆಂದು ಕೆಲವು ದಾಖಲೆಗಳು ತಿಳಿಸುತ್ತವೆ. ತೀರ ಇತ್ತೀಚೆಗಿನವರೆಗೂ ಅಲ್ಲಿ ಹಳೆಯ ಮರಗಳೂ ಇದ್ದವು. ಇನ್ನೂ ಸಹಾ ಸುಮಾರು ನೂರಾರು ವರ್ಷಗಳ ಹಳೆಯ ಮರಗಳು ನಂದಿ ಬೆಟ್ಟದಲ್ಲಿವೆ. ನಂದಿ ಬೆಟ್ಟದಲ್ಲಿರುವ ನೀಲಗಿರಿ ಸಂಕುಲದ ಪ್ರಭೇದಗಳು ಯಾವುವು ಎಂದು ತಿಳಿಯಲು 1954-55ರಲ್ಲಿ ಸಮೀಕ್ಷೆಯೊಂದನ್ನು ಮಾಡಲಾಯಿತು. ಅದಕ್ಕೆಂದೇ ನಂದಿಬೆಟ್ಟದ ಮರಗಳಿಂದ ಹರ್ಬೇರಿಯಂಗಳನ್ನು ತಯಾರಿಸಿ ಆಸ್ಟ್ರೇಲಿಯಾಕ್ಕೆ ಕಳಿಸಿ ತಿಳಿದ ಪ್ರಯತ್ನದಿಂದ ಅಲ್ಲಿ ಸುಮಾರು ಹನ್ನೊಂದು ಪ್ರಭೇದಗಳಿರುವುದು ಕಂಡು ಬಂದಿತು. ಬೆಟ್ಟದಲ್ಲಿಯೇ 1984ರಲ್ಲಿ 195ವರ್ಷಗಳಷ್ಟು ಹಿರಿದಾದ 60 ಮೀಟರ್ ಎತ್ತರದ, ನಾಲ್ಕೂವರೆ ಮೀಟರ್ ದಪ್ಪನಾದ ಮರವೊಂದನ್ನು ದಾಖಲೆಗಳು ತಿಳಿಸುತ್ತವೆ. ಸುಲಭವಾಗಿ ನೂರು ಅಡಿಗಳಷ್ಟು ಎತ್ತರಕ್ಕೆ ಒಂದೇ ಕಾಂಡದಿಂದ ಬೆಳೆದು ಆಗಸಕ್ಕೆ ಎಲೆಗಳ ಹರಹನ್ನು ಚಾಚುವ ನೀಲಗಿರಿಯ ಸೌಂದರ್ಯಕ್ಕಾಗಿ ಟಿಪ್ಪು ಫ್ರೆಂಚರಿಂದ ಭಾರತಕ್ಕೆ ತರಿಸಿದ್ದನು. ಅದು ದೇಶದ ಉದ್ದಗಲಕ್ಕೂ ಹಬ್ಬಿ ಇಡೀ ಅರಣ್ಯೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಲ್ಲದೆ, ಸಾಕಷ್ಟು ಚರ್ಚೆ ಗೊಂದಲ ಹಾಗೂ ಉಪಕಾರಕ್ಕೂ ಕಾರಣವಾಯಿತು.
ಯೂಕಲಿಪ್ಟಸ್ ಸಂಕುಲವು ನಾವು ತಿನ್ನುವ ಸೀಬೆ ಅಥವಾ ಪೇರಲ ಹಣ್ಣಿನ ಕುಟುಂಬವಾದ ಮಿರ್ಟೇಸಿಯೆಗೆ (Myrtaceae) ಸೇರಿದ್ದು. ಯೂಕಲಿಪ್ಟಸ್ ಸಂಕುಲದಲ್ಲಿ 800ಕ್ಕೂ ಹೆಚ್ಚು ಪ್ರಭೇದಗಳಿವೆ. ನೀಲಗಿರಿ ಎಂದು ಹೆಸರು ಬರಲು ಅದರ ತವರಿನಲ್ಲಿ ಹಬ್ಬಿರುವ ಯೂಕಲಿಪ್ಟಸ್ ಕಾಡುಗಳೇ ಕಾರಣ. ತನ್ನ ಮೂಲಸ್ಥಳವಾದ ಆಸ್ಟ್ರೇಲಿಯಾದಲ್ಲಿ ಮೂರನೆಯ ಒಂದು ಭಾಗ ಸ್ವಾಭಾವಿಕ ಕಾಡನ್ನು ನೀಲಗಿರಿಯೊಂದೇ ಆಕ್ರಮಿಸಿದೆ. ಅದರ ಒಟ್ಟು ವಿಸ್ತಾರ ಸರಿ ಸುಮಾರು 23 ಕೋಟಿ ಎಕರೆಗಳು. ಇಂತಹಾ ಹರವಾದ ಯೂಕಲಿಪ್ಟಸ್ ಕಾಡುಗಳಲ್ಲಿ ಒಣವಾತಾವರಣದ ಕಾಲದಲ್ಲಿ ಮರಗಳಿಂದ ಟರ್ಪಿನಾಯ್ಡ್ಗಳೆಂಬ ಒಂದು ಬಗೆಯ ರಾಸಾಯನಿಕವು ಆವಿಯಾಗಿ ಕಾಡಿನ ಮೇಲುಭಾಗವನ್ನು ಆವರಿಸಿ “ನೀಲಿ”ಯಾಗಿಸಿರುತ್ತದೆ. ಆದ್ದರಿಂದ ಆ ಜಾಗವನ್ನೆಲ್ಲಾ ಬ್ಲೂಮೌಂಟೆನ್ ಗಳೆಂದು ಕರೆಯುವುದರಿಂದ, ಅವುಗಳಿಂದ ಮರವು “ನೀಲಗಿರಿ”ಯಾಗಿದೆ. ಮತ್ತೊಂದು ವಿವರಣೆಯು ಅದನ್ನು ಹೆಚ್ಚಾಗಿ ನಮ್ಮ ತಮಿಳುನಾಡಿನ ನೀಲಗಿರಿ ಬೆಟ್ಟದಲ್ಲಿ ನೆಟ್ಟ ಕಾರಣವೂ ಆಗಿದ್ದಿರಬಹುದು. ಅಂದಹಾಗೆ ನೀಲಗಿರಿಯು ಭಾರತಕ್ಕೆ ಸುಮಾರು 1790ರಲ್ಲಿಯೇ ಪರಿಚಯವಾಗಿದರೂ, ನಂತರ 1843 ಮತ್ತು 1852ರ ನಡುವೆ ತಮಿಳುನಾಡಿನ ನೀಲಗಿರಿ ಬೆಟ್ಟಕ್ಕೆ, ಉರುವಲು ಸೌದೆಯನ್ನು ಪಡೆಯುವ ಉದ್ದೇಶದಿಂದ ಪರಿಚಯಿಸಲಾಯಿತು. ತಮಿಳುನಾಡಿನ ನೀಲಗಿರಿ ಬೆಟ್ಟಕ್ಕೆ ಆ ಹೆಸರು ಬರಲು ಯೂಕಲಿಪ್ಟಸ್ ಏನೂ ಕಾರಣವಲ್ಲ! ಅಲ್ಲಿನ ಬೆಟ್ಟಗಳಲ್ಲಿ ಸಮೃದ್ಧವಾಗಿರುವ “ಕುರಿಂಜಿ” ಅಥವಾ “ನೀಲ ಕುರಿಂಜಿ” ಎಂಬ ಗಿಡಗಳ ನೀಲಿ ಹೂವುಗಳಿಂದ ಬೆಟ್ಟಕ್ಕೆ ಆ ಹೆಸರು! (Strobilanthes kunthianus ಎಂಬ ವೈಜ್ಞಾನಿಕ ನಾಮಧೇಯದ ಕುರಿಂಜಿಯೊಂದು ಹನ್ನೆರಡು ವರ್ಷಕ್ಕೊಮ್ಮೆ ಮಾತ್ರವೇ ಹೂಬಿಟ್ಟು ಹೆಸರನ್ನು ಮಾಡಿದೆ. ಕೆಲವು ಕುರಿಂಜಿಗಳು 7 ವರ್ಷಕ್ಕೂ ಹೂಬಿಡುವುದುಂಟು). ಹೀಗೆ ಮೊದಲೇ ನೀಲಗಿರಿ ಹೆಸರಿದ್ದ ಬೆಟ್ಟದಿಂದ ದೇಶಾದ್ಯಂತ ಹಬ್ಬಿದ್ದೂ ಯೂಕಲಿಪ್ಟಸ್ಅನ್ನು ನೀಲಗಿರಿಯಾಗಿಸಿರಲೂ ಸಾಧ್ಯವಿದೆ.
ಆಸ್ಟ್ರೇಲಿಯಾದ ಕಾಡುಗಳ ಬಹುಭಾಗವನ್ನು ಆವರಿಸಿರುವ ಯೂಕಲಿಪ್ಟಸ್ ಅಲ್ಲಿಂದ ಹೊರ ಜಗತ್ತಿಗೆ ಬಂದದ್ದು 1777ರಲ್ಲಿ. ಬ್ರಿಟನ್ನಿನ ರಾಯಲ್ ನೌಕಾದಳದಲ್ಲಿ ಕ್ಯಾಪ್ಟನ್ ಆಗಿದ್ದ “ಜೇಮ್ಸ್ ಕುಕ್“ನ ಮಹಾ ಸಮುದ್ರಯಾನದ ಮೂರನೆಯ ಸುತ್ತಿನಲ್ಲಿ ಆತನ ಜೊತೆಗಿದ್ದ ಸಸ್ಯವಿಜ್ಞಾನಿ ಹಾಗೂ ತೋಟಗಾರ “ಡೇವಿಡ್ ನೆಲ್ಸನ್“ ಎಂಬುವರು ಸಂಗ್ರಹಿಸಿದ್ದರು. ಯೂಕಲಿಪ್ಟಸ್ ಅನ್ನು ಆಸ್ಟ್ರೇಲಿಯಾದ ದಕ್ಷಿಣದ ದ್ವೀಪಗಳಲ್ಲೊಂದಾದ ಬುನೈ ದ್ವೀಪದಿಂದ ಆತ ಸಂಗ್ರಹಿಸಿ ಲಂಡನ್ನಿಗೆ ಕೊಂಡೊಯ್ದಿದ್ದರು. ನಂತರದಲ್ಲಿ ಅದು ಯೂರೋಪಿನಿಂದಾಚೆ ಅದರಲ್ಲೂ ಭಾರತಕ್ಕೆ ಫ್ರೆಂಚರ ಮೂಲಕ ಬಂದಿತ್ತು. ಫ್ರೆಂಚ್ ಸಸ್ಯಾಸಕ್ತರಾದ ಚಾರ್ಲ್ಸ್ ಲೂಯಿಸ್ ಯೂಕಲಿಪ್ಟಸ್ ಸಸ್ಯ-ವೈಜ್ಞಾನಿಕ ವಿವರಗಳಿಂದ ವಿವರಿಸಿದ್ದನ್ನು ಹಿಂದೆಯೇ ಹೇಳಿದೆ.
ಯೂಕಲಿಪ್ಟಸ್ ಇತ್ತೀಚೆಗೆ ಕಳೆದ 30-40 ವರ್ಷಗಳಿಂದ ಅತ್ಯಂತ ಜನಪ್ರಿಯವಾದ ಸಸ್ಯವಾಗಿದ್ದು ಅರಣ್ಯೀಕರಣದಲ್ಲಿ ಹಾಗೂ ನೆಡುತೋಪುಗಳಲ್ಲಿ ತುಂಬಾ ಸಾಮಾನ್ಯವಾದ ಮರವಾಗಿದೆ. ಭಾರತದಲ್ಲಿ ಪ್ರತೀ ವರ್ಷ ನಾಟಿಯಾಗುವ ಅರಣ್ಯ ಪ್ರದೇಶದಲ್ಲಿ ಸರಾಸರಿ ಮೂರು ಮೂರೂವರೆ ಲಕ್ಷ ಎಕರೆಗಳಷ್ಟನ್ನು ನೀಲಗಿರಿಯೊಂದೇ ಪಡೆದುಕೊಳ್ಳುತ್ತಿತ್ತು. ನೀಲಗಿರಿ ನಡುತೋಪಿನಿಂದಾಗಿ ಹುಟ್ಟಿಕೊಳ್ಳುತ್ತಿದ್ದ ಕೂಲಿಯು ಸುಮಾರು 70 ದಶಲಕ್ಷ ಮಾನವ ದಿನಗಳು ಎಂದು ಅಂದಾಜು ಮಾಡಲಾಗಿದೆ. ಇಷ್ಟೊಂದು ಜನಪ್ರಿಯವಾಗಲು ಬಹು ಮುಖ್ಯ ಕಾರಣ, ನೀಲಗಿರಿಯು ಒಣನೆಲಕ್ಕೆ ಒಗ್ಗಿಕೊಳ್ಳುವ ಗುಣದಿಂದ. ತೀರಾ ಇತ್ತೀಚೆಗಿನ ಮರಭೂಮಿಯನ್ನು ಹಸಿರಾಗಿಸುವ ಪ್ರಯೋಗದ ಅಧ್ಯಯನದ ಫಲಿತಾಂಶಗಳ ಪ್ರಕಾರ ಅಂತಹದಕ್ಕೆಲ್ಲಾ ಹೇಳಿಮಾಡಿಸಿದ ಗುಣವುಳ್ಳದ್ದು ಎಂದರೆ ನೀಲಗಿರಿ ಮಾತ್ರವೇ ಎಂಬುದಾಗಿ ತಿಳಿದು ಬಂದಿದೆ. ಇಷ್ಟೆಲ್ಲಾ ಇದ್ದೂ ತನ್ನದಲ್ಲದ ನೆಲದಲ್ಲಿ ಅಂದರೆ ನಮ್ಮ ದೇಶದಲ್ಲಿ ತನ್ನದಲ್ಲದ ತಪ್ಪಿಗೆ ಹೆಸರನ್ನು ಕೆಡಿಸಿಕೊಂಡಿದೆ. ಅದರ ವಿವರಗಳನ್ನೀಗ ನೋಡೋಣ.
ಹಿಂದಿನಿಂದಲೂ ನೀಲಗಿರಿಯು ಭಾರತಕ್ಕೆ ಪರಿಚಯವೇ! ಮೊದಲ 200 ವರ್ಷಗಳ ಕಾಲ ಯಾವುದೇ ಸುದ್ದಿಯಲ್ಲಿರದ ಈ ಸಸ್ಯವು ಎರಡು ಶತಮಾನ ಕಳೆದ ಮೇಲೆ ಸಾಮಾಜಿಕ ಅರಣ್ಯೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಸಸ್ಯವಾಗಿತ್ತು. ಸಸಿ ಮಡಿಗಳನ್ನು ಸಲಹುವಲ್ಲಿ ಹಾಗೂ ನಾಟಿಯಲ್ಲಿ ಸಾಕಷ್ಟು ಬದುಕಿ ಉಳಿವ ಗುಣದಲ್ಲಿ ಅತ್ಯಂತ ಪ್ರಮುಖ ಸಸ್ಯವಾಗಿ ನೀಲಗಿರಿಯು ಬಹು ದೊಡ್ಡ ವರವಾಗಿ ಕಂಡಿತು. ಅದರ ಜೊತೆಗೆ ಒಣನೆಲಕ್ಕೆ ಹೇಳಿ ಮಾಡಿಸಿದ ಮರವಾಗಿದ್ದು, ಈ ಮರದ ನಡುತೋಪುಗಳಿಗೆ ಸುಲಭವಾಯಿತು. ಆದ್ದರಿಂದ ದಿನವೂ ಹೊಲದ ಕೆಲಸಗಳನ್ನು ನಿಭಾಯಿಸಲಾಗದವರಿಂದ, ಹಾಗೂ ತಮ್ಮ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಸುಲಭವಾಗಿ ನೀಲಗಿರಿ ಮರಗಳನ್ನು ಬೆಳೆಯಲು ರೈತರು ಮುಂದಾದರು. ನೀಲಗಿರಿಯ ಎಲೆಗಳು ಮಣ್ಣಿನಲ್ಲಿ ಒಂದಾಗಿ ಬೇಗ ಕೊಳೆಯದೆ ತರಗೆಲೆಗಳಾಗಿ ಹಾರಾಡಿ ಸುತ್ತೆಲ್ಲಾ ಹರಡುತ್ತಿದ್ದ ಪರಿಣಾಮವಾಗಿ ಒಣ ನೆಲವು ಬಿಸಿಲಿಗೆ ತೆರೆದುಕೊಂಡ ಲಕ್ಷಣಗಳು ಪರಿಸರಾಸಕ್ತರನ್ನು ಕಂಗೆಡಿಸಿದವು. ಅವರೂ ಸಹಾ ಎಲ್ಲವನ್ನೂ ಅಧ್ಯಯನಗಳಿಂದಲೇ ಚರ್ಚಿಸದ ಕಾರಣಗಳಿಂದ ನೀಲಗಿರಿಯು ಹೆಚ್ಚು ನೀರು ಕುಡಿಯುವ ಕೆಟ್ಟ ಹೆಸರನ್ನು ಪಡೆದುಕೊಂಡಿತು. ಇದಕ್ಕೆಲ್ಲಾ ಮುಖ್ಯ ಕಾರಣ ಜನರೇ ತಮ್ಮ ಕೆಲಸ ಕಡಿಮೆಮಾಡಿಕೊಳ್ಳುವ ಸಲುವಾಗಿ ಇಷ್ಟ ಪಟ್ಟು ಬೆಳೆಸಿ, ಇಲ್ಲಿನ ಸಂಕುಲವನ್ನು ಕಡೆಗಾಣಿಸಿದಕ್ಕಾಗಿ ಈ ಪರದೇಸೀ ಯೂಕಲಿಪ್ಟಸ್ಸಿಗೆ ಕೆಟ್ಟ ಹೆಸರು ಬರಲು ಕಾರಣರಾದರು.
ಮಳೆ ಅಪರೂಪವಾದರೂ ಅಪಾರ ಸಸ್ಯರಾಶಿಯನ್ನು ಉಂಟುಮಾಡುವ ನೀಲಗಿರಿಯನ್ನು ಕಂಡು ಜನ ಇದು ಅಂತರ್ಜಲವನ್ನು ಹೀರಿಕೊಂಡು ಬೆಳೆಯುತ್ತಿದೆ ಅಂದು ಅನುಮಾನಿಸಿದರು. ಆದರೆ ವಾಸ್ತವೆಂದರೆ ಅದರ ತುಂಬಾ ಜಾಗರೂಕ ದ್ಯುತಿ ಸಂಶ್ಲೇಷಣೆಯಿಂದ ಆಹಾರ ಉತ್ಪಾದಿಸುತ್ತದೆ ಎನ್ನಬಹುದು. ಕಡಿಮೆ ನೀರನ್ನು ಹೀರಿ ಹೆಚ್ಚು ಮರವನ್ನು ಪಡೆಯುತ್ತದೆ. ಇದೀಗ ಆ ಅಂಶಗಳೆಲ್ಲಾ ಸಂಶೋಧನೆಗೊಂಡು ನಿಜಕ್ಕೂ ನೀಲಗಿರಿಗಿಂತಲೂ ಹೆಚ್ಚು ನೀರನ್ನು ಬಯಸುವ ಬಹುತೇಕ ಸಸ್ಯಗಳಿರುವುದನ್ನು ಖಾತ್ರಿ ಪಡಿಸಿಕೊಳ್ಳಲಾಗಿದೆ. ಹಾಗಾಗಿ ನ್ಯಾಯಾಲಯ ಕೂಡ ನೀಲಗಿರಿಯ ಪರವಾದ ತೀರ್ಪಿತ್ತಿದೆ. ನೀಲಗಿರಿಯು ಪ್ರತೀ ಕಿಲೋ ಮರದ ಉತ್ಪಾದನೆಗೆ 785 ಲೀಟರ್ ನೀರನ್ನು ಬಳಸುತ್ತಿದ್ದರೆ, ಅಕೇಸಿಯಾ ಅಥವಾ ಜಾಲಿ ಮರವು 1323 ಲೀಟರ್ ಅನ್ನೂ ಬೀಟೆ ಮರವು 1484 ಲೀಟರ್ ನೀರನ್ನೂ ಬಳಸುತ್ತದೆ ಎಂಬುದಾಗಿ ಸಂಶೋಧನೆಗಳು ತಿಳಿಸಿವೆ. ಹಾಗಾಗಿ ನೀಲಿಗಿರಿಯು ನಿಜಕ್ಕೂ ಪರದೇಶಿ ನೆಲದಲ್ಲಿ ತನ್ನದಲ್ಲದ ತಪ್ಪಿಗೆ ಕೆಟ್ಟ ಹೆಸರನ್ನು ಪಡೆಯಬೇಕಾಯಿತು. ಸುಮಾರು 800ಕ್ಕೂ ಹೆಚ್ಚು ಪ್ರಭೇದಗಳ ಸಂಬಂಧಿಕರನ್ನೆಲ್ಲಾ ಬಿಟ್ಟು ಬಂದ ಹತ್ತಾರು ಪ್ರಭೇದಗಳಿಲ್ಲಿ ಅನಾಥವಾಗಿ ಕೆಟ್ಟಹೆಸರನ್ನು ಪಡೆದ್ದಂತೂ ಹೌದು.
ಇದೆಲ್ಲಾ ಇರಲಿ ನಿಜಕ್ಕೂ ನೀಲಗಿರಿ ಸಂಕುಲದ ಮಹತ್ವ ಎಂತಹದ್ದು, ಅದರ ಸಸ್ಯವೈಜ್ಞಾನಿಕತೆಯ ಕೆಲವು ಸಂಗತಿಗಳನ್ನು ಮುಂದೆ ನೋಡೋಣ. ನೀಲಗಿರಿ ಒಂದು ಪ್ರಭೇದವಲ್ಲ, ಅದೊಂದು ಸಂಕುಲ! ಮಿರ್ಟೆಸಿಯೆ ಕುಟುಂಬದ ಸಂಕುಲ. ಇದರಲ್ಲಿ 800 ಪ್ರಭೇದಗಳಿಗೂ ಹೆಚ್ಚಿರುವ ತನ್ನೆಲ್ಲಾ ಸಂಬಂಧಿಗಳನ್ನೂ ಬಿಟ್ಟು ಬಂದ ಹತ್ತಾರು ಪ್ರಭೇದಗಳು ಒಂಟಿಯಾಗಿದ್ದಲ್ಲದೆ, ನಮ್ಮ ನೆಲದಲ್ಲಿನ ನೀರು ಕುಡಿದು ನೆಲವನ್ನೆಲ್ಲಾ ಬರಿದು ಮಾಡುತ್ತವೆ ಎನ್ನಿಸಿಕೊಳ್ಳುವಾಗ ಅವುಗಳಿಗೆ ಎಷ್ಟು ಸಂಕಟವಾಗಿರಬೇಡ. ಈ ಸಸ್ಯಯಾನದ ಲೇಖನ ಬರೆಯುವ 2-3 ದಿನಗಳ ಮೊದಲೂ ಒಬ್ಬ ಗೆಳೆಯ ಹಾಗೂ ಒಬ್ಬಳು ಗೆಳತಿಯನ್ನು ನೀಲಗಿರಿ ಬಗ್ಗೆ ಕೇಳಿದ್ದಕ್ಕೇ ಇಬ್ಬರೂ ಅದರ ಬಗ್ಗೆ ಒಳ್ಳೆಯ ಮಾತಾಡಿರಲಿಲ್ಲ! ಸಂಶೋಧನೆ-ಅಧ್ಯಯನಗಳು ತಿಳಿವಳಿಕೆ ಮೂಡಿಸಿ, ಕೋರ್ಟಿನಲ್ಲಿ ಪರವಾದ ತೀರ್ಪು ಪಡೆದೂ ಹೀಗೆ ಜನರಿಂದ ಒಳ್ಳೆಯ ಮಾತು ಸಿಗುತ್ತಿಲ್ಲ ಎಂದು ಮರಗಳಿಗೆ ತಿಳಿದರೆ ಅವುಗಳಿನ್ನಷ್ಟು ಸಂಕಟಪಟ್ಟಾವು! ಆದರೆ ವಾಸ್ತವ ಮಾತ್ರ ಅದೇ ಆಗಿದೆ.
ನೀಲಗಿರಿಯ ಕಾಂಡ, ರೆಂಬೆ-ಕೊಂಬೆಗಳನ್ನು ನೋಡಿ ಅದರ ಮೇಲಿನ ತೊಗಟೆಯು ಸೀಬೆಯ ಮರದಂತೆಯೇ ಇರುತ್ತದೆ. ಎರಡರಲ್ಲೂ ತೊಗಟೆಯು ಮೇಲಿನ ಚರ್ಮ ಸುಲಿದ ಹಾಗೆ ಪ್ರತೀ ವರ್ಷ ಸುಲಿದು ಹೊರ ಬರುತ್ತದೆ. ಮತ್ತೊಂದು ಪದರ ಹೊಸದಾಗಿ ಹುಟ್ಟಿಕೊಳ್ಳುತ್ತದೆ. ಅದರಲ್ಲೂ ತಮಿಳುನಾಡಿನ ನೀಲಗಿರಿಗೆ ಆರಂಭದಲ್ಲಿ ಪರಿಚಯಿಸಿದ ಪ್ರಭೇದದ ಒಂದು ಅಚ್ಚರಿಯ ಕತೆಯಿದೆ. ಆ ಪ್ರಭೇದ Eucalyptus globulus ಇದರಲ್ಲಿ ಒಂದು ವೇಳೆ ಎಲೆಗಳು ಉದುರಿ ಮರದ ಆಹಾರದ ಉತ್ಪಾದನೆಗೆ ಅಡಚಣೆಯಾದರೆ ತೊಗಟೆಯು ಆಹಾರ ಉತ್ಪಾದನೆಯಲ್ಲಿ ಸಹಾಯ ಮಾಡುತ್ತದೆ (ಚಿತ್ರ ನೋಡಿ). ಹಾಗಾಗಿ ಹೆಚ್ಚು ಮರದ ಉತ್ಪಾದನೆ ಸಾಧ್ಯವಾಗುತ್ತದೆ. ಒಂದು ರೀತಿಯಲ್ಲಿ ನಮ್ಮ ಕೈಗಳು ಮಾಡುವ ಕೆಲಸವನ್ನು ನಮ್ಮ ದೇಹದ ಚರ್ಮವು ಮಾಡಿದ ಹಾಗೆ! ನೀಲಗಿರಿಯಲ್ಲಿ ಮರದ ತೊಗಟೆಯೇ ವಿಶೇಷವಾದದ್ದು. ದಪ್ಪನಾದ ಗಟ್ಟಿಯಾದ ತೊಗಟೆಯಲ್ಲದೆ, ಉದ್ದವಾದ ನಾರಿನಂತಹಾ ತೊಗಟೆಯೂ ಇದೆ. ಅಲ್ಲದೆ ಮೆದುವಾದ ತೊಗಟೆಯು ಸಹಾ ಕೆಲವು ಪ್ರಭೇದಗಳಿಗಿದೆ. ಕೆಲವು ಪ್ರಭೇದಗಳಲ್ಲಿ ತೀರಾ ಉದ್ದನಾದ ರಿಬ್ಬನ್ ತೆರನಾದ ತೊಗಟೆಯೂ ಇರುವುದುಂಟು.
ನೀಲಗಿರಿ ಸಂಕುಲದ ಮೂರನೆಯ ಒಂದು ಭಾಗ ಪ್ರಭೇದಗಳು ತಮ್ಮೊಳಗೆ ತೈಲವನ್ನು ಇಟ್ಟುಕೊಂಡಿವೆ. ಅವುಗಳಲ್ಲಿ ಸುಮಾರು 20ಕ್ಕೂ ಹೆಚ್ಚು ಪ್ರಭೇದಗಳು ಎಲ್ಲಕ್ಕಿಂತಾ ಹೆಚ್ಚು ತೈಲವನ್ನು ಹೊಂದಿದ್ದು ತುಂಬಾ ಜನಪ್ರಿಯವಾಗಿವೆ. ನೀಲಗಿರಿ ಮರವನ್ನು ಅದೆಷ್ಟೇ ಕೆಟ್ಟದಾಗಿ ಕಂಡರೂ ಅದರ ತೈಲವನ್ನು ಮಾತ್ರ ಯಾರೂ ಹಿಯಾಳಿಸುವವರಿಲ್ಲ. ಅಷ್ಟರ ಮಟ್ಟಿಗೆ ಅದು ಭಾರತೀಯ ಮನೆಗಳನ್ನು ತಲುಪಿದೆ. ಮನೆ ಮದ್ದಿನಲ್ಲಿ ಪರ್ಮನೆಂಟಾದ ಸ್ಥಾನವನ್ನು ಪಡೆದಿರುವ ನೀಲಗಿರಿ ತೈಲವು ಶೀತ-ಹಾಗೂ ಗಂಟಲು ಸರಿಪಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಬಂದಿದೆ. ದಮ್ಮು ಉಬ್ಬಸ, ಕೆಮ್ಮು ಹಾಗೂ ಕಫ ನಿವಾರಣೆಯಲ್ಲೂ ನೀಲಗಿರಿಯು ಪ್ರಮುಖ ಪಾತ್ರವನ್ನು ವಹಿಸುತ್ತಲೇ ಇದೆ. ತೈಲವನ್ನು ಒದಗಿಸುವಲ್ಲಿ ಎಲೆಗಳು ಮುಖ್ಯವಾದ ಪಾತ್ರವನ್ನು ವಹಿಸಿವೆ. ನೀಲಗಿರಿ ಎಲೆಗಳಲ್ಲಿ ಹೆಚ್ಚಾಗಿರುವ ಎಣ್ಣೆಯಿಂದಲೇ ಅವುಗಳ ಕೊಳೆಯುವಿಕೆಯೂ ವಿಭಿನ್ನವಾಗಿದೆ.
ಯೂಕಲಿಪ್ಟಸ್ ಎಂಬ ಹೆಸರು ಬರಲು ಕಾರಣವಾದ ಅದರ ಹೂಗಳ ಮೊಗ್ಗುಗಳಲ್ಲಿ ಕಪ್ಪಿನ ಆಕಾರದ ಪುಷ್ಟಪಾತ್ರೆಯು ಮುಚ್ಚಳಿಕೆಯಾಗಿದ್ದು ಆಕರ್ಷಕವಾಗಿರುತ್ತದೆ. ಹೂಗಳ ಕೇಸರಗಳೂ ಆಕರ್ಷಕವೇ! ಹೂವುಗಳು ಸಾಕಷ್ಟು ಮಕರಂದವನ್ನು ಹೊಂದಿದ್ದು ಜೇನುನೊಣಗಳ ಆಕರ್ಷಣೆಯಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತಿವೆ. ಅದರ ಜೊತೆಗೆ ನೀಲಗಿರಿ ಜೇನುತುಪ್ಪವು ವಿಶೇಷವಾದ ಸುವಾಸನೆಯನ್ನು ಹೊಂದಿದ್ದು ಔಷಧೋಪಚಾರದಲ್ಲಿ ಮಹತ್ವ ಎನಿಸಿದೆ. ಇಷ್ಟೆಲ್ಲದರ ಜೊತೆಗೆ ನೀಲಗಿರಿಯ ಮರದ ಪಲ್ಪ್ ನಿಂದ ಒದಗುವ ಕಾಗದ ಮತ್ತು ನಾರಿನ ಉತ್ಪಾದನೆಗೆ ಹೆಸರುವಾಸಿಯಾಗಿದೆ.
ಅರಣ್ಯ ಇಲಾಖೆಯು ಮೊಟ್ಟ ಮೊದಲ ಬಾರಿಗೆ 1877ರಲ್ಲಿ ಯೂಕಲಿಪ್ಟಸ್ನ ನಡುತೋಪನ್ನು ತುಮಕೂರು ಜಿಲ್ಲೆಯ ದೇವರಾಯನ ದುರ್ಗದಲ್ಲಿ ಸಾಧ್ಯಗೊಳಿಸಲಾಯಿತು. ಅಲ್ಲಿಂದ ಮುಂದುವರೆದು 90ರದಶಕದ ವರೆಗೂ ನಿರಂತರವಾಗಿ ನೆಡುತೋಪುಗಳು ಹುಟ್ಟಿಕೊಂಡವು. ಇದೀಗ ಸುಮಾರು 10 ಲಕ್ಷ ನೀಲಗಿರಿ ನೆಡುತೋಪುಗಳು ಇರಬಹುದೆಂಬ ಒಂದು ಅಂದಾಜು ಇದೆ. ಇದಲ್ಲದೆ ಸಣ್ಣ-ಪುಟ್ಟ ಹಿಡುವಳಿಗಳ ಒಣಪ್ರದೇಶಗಳಲ್ಲಿ ಕೋಟ್ಯಾಂತರ ಸಸಿಗಳನ್ನು ನೆಡಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಪ್ರಯೋಗಿಕವಾಗಿ ನೆಡಲಾದ ಒಟ್ಟೂ ಪ್ರಭೇದಗಳ ಸಂಖ್ಯೆಯು 170 ಇರಬಹುದೆಂಬ ಅಂದಾಜನ್ನೂ ಸಮೀಕ್ಷೆಗಳು ತಿಳಿಸುತ್ತವೆ. ಇವೆಲ್ಲವುಗಳಲ್ಲಿ ಟೆರೆಟಿಕಾರ್ನಿಸ್ (Eucalyptus. tereticornis) ಎಂಬ ಪ್ರಭೇದದಿಂದ ಹುಟ್ಟು ಪಡೆದ ಯೂಕಲಿಪ್ಟಸ್ ಹೈಬ್ರಿಡ್ (Eucalyptus hybrid) ಎಂಬುದನ್ನು ಮೈಸೂರ್ ಗಮ್ ಎಂದೇ ಕರೆಯಲಾಗುತ್ತಿದ್ದು ಅತ್ಯಂತ ಜನಪ್ರಿಯವಾದ ಪ್ರಭೇದವಾಗಿದೆ. ಇದಲ್ಲದೆ ಇನ್ನೂ ನಾಲ್ಕಾರು ಪ್ರಭೇದಗಳೂ ಸಹಾ ಸಾಕಷ್ಟು ನೆಲವನ್ನು ಆಶ್ರಯಿಸಿವೆ.
ಒಳಿತು-ಕೆಡುಕುಗಳ ಸಾಮಾಜಿಕತೆಯ ಜೊತೆಗೆ ಸಸ್ಯವೈಜ್ಞಾನಿಕತೆಯಲ್ಲೂ ನೀಲಗಿರಿಯು ಅಪಾರ ಪ್ರಶ್ನೆಗಳನ್ನು ವಿಜ್ಞಾನಕ್ಕೆ ಉಳಿಸಿದೆ. ಅದರಲ್ಲಿ ಬಹು ಮುಖ್ಯವಾದ ಸಂಗತಿಯೊಂದು ಅದರ ಪಳೆಯುಳಿಕೆಯ ಕುರಿತಾದ ವಿಚಾರವಾಗಿದೆ. ನೀಲಗಿರಿ ಸಂಕುಲವು ಆಸ್ಟ್ರೇಲಿಯಾ ನಿವಾಸಿ ಎಂಬುದು ನಿರ್ವಿವಾದ. ಆದರೂ ನೀಲಗಿಲಿ ಸಂಕುಲದ ಅತ್ಯಂತ ಹಳೆಯ ಪಳೆಯುಳಿಕೆಯೊಂದು ದಕ್ಷಿಣ ಅಮೆರಿಕಾದ ಅರ್ಜೆಂಟೈನಾದಲ್ಲಿ ದೊರಕಿದ್ದು ಸಸ್ಯ ವಿಜ್ಞಾನಿಗಳು ವಿಸ್ಮಯಗೊಂಡಿದ್ದಾರೆ. ಏಕೆಂದರೆ ಅಲ್ಲಿನ ನೆಲದಲ್ಲಿ ನೀಲಗಿರಿಯ ಯಾವುದೇ ಸಂಬಂಧಿಗಳೂ ಈವರೆವಿಗೂ ಪತ್ತೆಯಾಗಿಲ್ಲ ಜೊತೆಗೆ ಆಧುನಿಕ ಜಗತ್ತಿನಲ್ಲಿ ನೀಲಗಿರಿಯನ್ನು ಅಮೆರಿಕಾಗೆ ಪರಿಚಯಿಸಿದ್ದ ಹೊರತಾಗಿ, ನೀಲಗಿರಿಯು ಅಲ್ಲಿರುವ ಬಗ್ಗೆ ಯಾವುದೇ ಕುರುಹುಗಳೂ ಈವೆರಗೂ ಸಿಕ್ಕಿಲ್ಲ. ವಸ್ತುಸ್ಥಿತಿ ಹೀಗಿರುವಾಗ ಅಲ್ಲಿ ಪಳೆಯುಳಿಕೆಯು ಸಿಕ್ಕದ್ದು ಹೇಗೆ? ಆದ್ದರಿಂದ ಬಹುಶಃ ಇದು ಗೊಂಡ್ವಾನಾ ಲ್ಯಾಂಡ್ ಖಂಡಾಂತರವಾಗುವಾಗ ಹೋಗಿದ್ದಿರಬಹುದಾದ ಅನುಮಾನವು ನೀಲಗಿರಿಯ ಹುಟ್ಟು-ವಿಕಾಸದ ಬಗ್ಗೆ ಮತ್ತಷ್ಟು ವಿಸ್ಮಯಗಳನ್ನು ಹೆಚ್ಚಿಸಿದೆ.
ನಮಸ್ಕಾರ – ಚನ್ನೇಶ್.
ಈ ನೀಲಗಿರಿಯ ಬಗ್ಗೆ ಇರುವ ಗೊಂದಲಗಳನ್ನು ಹೋಗಲಾಡಿಸುವುದಕ್ಕೆ ನಿಮ್ಮ ಲೇಖನ ಹೆಚ್ಚು ಹೆಚ್ಚು ಜನರನ್ನು ಅದರಲ್ಲೂ ಮುಖ್ಯವಾಗಿ ರೈತರನ್ನು ತಲುಪಬೇಕು.ಪತ್ರಿಕೆಗಳಲ್ಲಿ ಬಂದರೆ ಚೆನ್ನಾಗಿರುತ್ತದೆ.
ಕುತೂಹಲಕರ ಸರಣಿ. ಸಸ್ಯಗಳ ಸಮಗ್ರ ಪರಿಚಯ ಮಾಡಿಕೊಡುತ್ತದೆ. ಆದರೆ ವಿವರಣೆ ಸರಳವಾಗಿಲ್ಲ. ಗ್ರಾಂಥಿಕ ಭಾಷೆಯ ಬಳಕೆ ಹೆಚ್ಚಾಗಿದೆ. ಉದಾಹರಣೆಗೆ – “ಅರಣ್ಯ ಇಲಾಖೆಯು ಮೊಟ್ಟ ಮೊದಲ ಬಾರಿಗೆ 1877ರಲ್ಲಿ ಯೂಕಲಿಪ್ಟಸ್ನ ನಡುತೋಪನ್ನು ತುಮಕೂರು ಜಿಲ್ಲೆಯ ದೇವರಾಯನ ದುರ್ಗದಲ್ಲಿ ಸಾಧ್ಯಗೊಳಿಸಲಾಯಿತು”. – ಇಂತಹ ವಾಕ್ಯಗಳು ಸಾಕಷ್ಟಿವೆ.