You are currently viewing ತನಗೆ ತಾನೆ ಸಂಜೀವಿನಿಯಾದ ದೊಡ್ಡ ಪತ್ರೆ Plectranthus amboinicus

ತನಗೆ ತಾನೆ ಸಂಜೀವಿನಿಯಾದ ದೊಡ್ಡ ಪತ್ರೆ Plectranthus amboinicus

ಸುಮಾರು ಹದಿನೈದು ವರ್ಷದಿಂದ ಗಮನಿಸುತ್ತಾ ಬಂದಿದ್ದೇನೆ. ನಮ್ಮ ಮನೆಯ ಮುಂಬಾಗಿಲ ಬಳಿಯಲ್ಲಿನ ಕುಂಡದಲ್ಲಿನ ದೊಡ್ಡ ಪತ್ರೆಯು ನಾವು ಮನೆಯಲ್ಲಿರಲಿ, ಬಿಡಲಿ, ತಿಂಗಳುಗಟ್ಟಲೆ ನೀರನ್ನೂ ಬೇಡದೆ ಬದುಕಿ ಉಳಿಯುತ್ತಲೇ ಇದೆ. ಕುಂಡದ ಮಣ್ಣು ನೀರಿಲ್ಲದೆ ಒಣಗಿ ಗಟ್ಟಿಯಾದರೂ ಅದರ ಎಲೆಗಳಲ್ಲು ತುಸು ಮಾಸಿದಂತೆ ಕಂಡರೂ, ನೀರುಣಿಸುತ್ತಲೇ ಮತ್ತೆ ಗೆಲುವಾಗಿ ಹಸಿರು ಸೂಸುತ್ತಾ ನಗೆ ಬೀರುತ್ತದೆ. ನಾವೇನಾದರೂ ಮನೆಯಿಂದ ಹೊರಗೆ, ಕೆಲವೊಮ್ಮೆ ವಾರಗಟ್ಟಲೆ- ಹೋದಾಗಲೂ ಬಂದ ತಕ್ಷಣವೆ ತನ್ನ ಮಾಸಲು ಹಸಿರು ನಗೆಯನ್ನು ನಮ್ಮ ಕಡೆ ಬೀರುವ ವಿಚಿತ್ರ ಸಸ್ಯ. ಇದೊಂದು ಬಹು ವಾರ್ಷಿಕ ಸಸ್ಯವಾಗಿದ್ದು, ಸಂಪೂರ್ಣ ಕುಂಡದ ಮಣ್ಣು ಒಣಗಿದ್ದರೂ ಬದುಕುಳಿಯುವ ವಿಶಿಷ್ಠ ಸಸ್ಯ. ಇದೇ ಕಾರಣದಿಂದಲೇ ಇದನ್ನು ತನಗೆ ತಾನೆ ಸಂಜೀವಿನಿಯಾಗಿರುವ ಸಸ್ಯವೆಂದೇ ಕರೆದಿದ್ದೇನೆ. ಇದೇ ಅನುಭವ ಹಲವರಿಗೆ ಇರಲು ಖಂಡಿತಾ ಸಾದ್ಯವಿದೆ. ಒಮ್ಮೆ ನಾಟಿ ಮಾಡಿದರೆ, ಯಾರೂ ಅಷ್ಟು ಸುಲಭವಾಗಿ ಕಳೆದುಕೊಂಡಿರಲು ಸಾಧ್ಯವಿಲ್ಲ, ನೀರೂ ಕೇಳದು ಮಾತ್ರವಲ್ಲ, ಅಂತಹಾ ಕೀಟ ಅಥವಾ ರೋಗ ಬಾಧೆಗಳೂ ಇರುವುದಿಲ್ಲ. ತುಂಬಾ ಸೊಗಸಾಗಿ ಬೆಳೆದು, ಹತ್ತಾರು ಎಲೆಗಳನ್ನು ಬಳಸಿ ತಕ್ಷಣದ ತಂಬುಳಿಗೆ ಅಣಿಮಾಡಲು ಸುಲಭವಾಗಿಸುವ ಸಸ್ಯ. ದೊಡ್ಡ ಪತ್ರೆಯ ಸಾಂಬಾರಿನಂತಹ ಖಾದ್ಯವನ್ನು ಕೂಡ!

ದೊಡ್ಡ ಪತ್ರೆ, ದಪ್ಪನಾದ ದಟ್ಟ ಮಾಸಲು ಹಸಿರು ಬಣ್ಣದ ಎಲೆಗಳುಳ್ಳ ಒಣಗಿದಂತೆ ಕಾಣುತ್ತಲೂ ಹಸಿರನ್ನೇ ಬಿಟ್ಟು ಕೊಡದ ವಿಶಿಷ್ಠ ಸಸ್ಯ. ಇದನ್ನು ಕರ್ಪೂರವಳ್ಳಿ, ಸಾಂಬ್ರಾಣಿ ಸೊಪ್ಪು/ಎಲೆ ಎಂಬುದಾಗಿಯೂ ಕರೆಯುತ್ತಾರೆ. ಇಂಗ್ಲೀಶಿನಲ್ಲಿ ಇಂಡಿಯನ್‌ ಮಿಂಟ್‌, ಮೆಕ್ಸಿಕನ್‌ ಮಿಂಟ್‌ ಎನ್ನುವ ಇದನ್ನು ಪ್ಲೆಟ್ರಾಂತಸ್‌ ಅಂಬೊಯ್ನಕಸ್‌ (Plectranthus amboinicus) ಎಂಬ ದ್ವಿನಾಮದಿಂದ ಸಸ್ಯ ವೈಜ್ಞಾನಿಕವಾಗಿ ಕರೆಯಲಾಗುತ್ತದೆ.

ದೊಡ್ಡ ಪತ್ರೆ ಸಸ್ಯವನ್ನು ಗುರುತಿಸಿ, ಪ್ಲೆಟ್ರಾಂತಸ್‌ ಅಂಬೊಯ್ನಕಸ್‌ ಎಂದು ಹೆಸರಿಸಿ ಸಸ್ಯ ವಿಜ್ಞಾನದ ಸುಪರ್ದಿಗೆ ತಂದಾತ ಜರ್ಮನಿಯ ಯೊವಾಹಿಮ್ ಸ್ರಿಂಜೆಲ್ (Joachim Sprengel) ಓರ್ವ ವೈದ್ಯ ಹಾಗೂ ಸಸ್ಯ ವಿಜ್ಞಾನಿ. ಜೀವಿವರ್ಗೀಕರಣದ ಪಿತಾಮಹ ಕಾರ್ಲ್‌ ಲಿನೆಯಾಸ್‌ ಅವರ ವರ್ಗೀಕರಣ ಹಾಗೂ ನಾಮಕರಣದ ಕೆಲಸವನ್ನು ಮತ್ತಷ್ಟು ಆಸಕ್ತಿಯಿಂದ ಮಾಡಿ ಅಭಿವೃದ್ಧಿಗೊಳಿಸಿದಾತ. ಈ ಸಂಕುಲಕ್ಕೆ ಸೇರಿಸುವ ಮೊದಲು ಇದು ಕೋಲಿಯಸ್‌ ಸಂಕುಲದಲ್ಲಿತ್ತು. ಆಗ Coleus aromaticus ಅಥವಾ Coleus amboinicus ಎಂದು ಕರೆಯುತ್ತಿದ್ದರು. ಹಾಗಾಗಿ ಇದನ್ನು ಕೆಲವರು ಕೋಲಿಯಸ್‌ ಸಂಕುಲದಲ್ಲಿಯೇ ಹೆಸರಿಸುತ್ತಾರೆ. ಭಾರತದ ಸಸ್ಯವಿಜ್ಞಾನದ ಪಿತಾಮಹ ಎಂದೆ ಹೆಸರಾದ ವಿಲಿಯಂ ರಾಕ್ಸ್‌ಬರ್ಗ್‌ ಅವರು ಇದನ್ನು ಕೋಲಿಯಸ್‌ ಸಂಕುಲದಲ್ಲಿ ಇರಿಸಿ ಹೆಸರಿದ್ದರು. ಮುಂದೆ ಅದು ಯೊವಾಹಿಮ್‌ ಅವರಿಂದ ಮರು ನಾಮಕರಣವಾಗಿ ಪ್ಲೆಟ್ರಾಂತಸ್‌ ಅಂಬೊಯ್ನಕಸ್‌ (Plectranthus amboinicus) ಆಯಿತು.

ಪ್ಲೆಟ್ರಾ(Plectra) ಅಂದರೆ ಹೊರಚಾಚಿದಂತಹಾ (Spur) ‘anthos’, ಅಂದರೆ ಹೂವು. ಈ ಸಂಕುಲದ ಹೂವುಗಳು ಹೊರಚಾಚಿದಂತೆ ಕಾಣುವುದರಿಂದ ಇದಕ್ಕೆ Plectranthus ಎಂಬ ಹೆಸರು. ಈ ಮೇಲಿನ ಹೂವಿನ ಚಿತ್ರವನ್ನು ಗಮನಿಸಬಹುದು. ಹೂವು ಹೊರಚಾಚಿಕೊಂಡಂತೆ ಕಾಣುತ್ತದೆ. ಹಾಗಾಗಿ ಬದಲಾದದ್ದು. ಇರಲಿ, ಈಗಲೂ ಹಲವು ದಾಖಲೆಗಳಲ್ಲಿ ಕೋಲಿಯಸ್‌ ಎಂದು ಗಮನಿಸುವುದುಂಟು.

ದೊಡ್ಡ ಪತ್ರೆಯ ತವರೂರು, ಕೆಲವು ಕಡೆ ಆಫ್ರಿಕಾ ಅಥವಾ ಭಾರತ ಎಂದು ನಂಬಲಾಗಿದೆ. ಆದರೆ ಇದರ ಹಂಚಿಕೆ ಜಗತ್ತಿನ ಅನೇಕ ಕಡೆಗಳಲ್ಲಿ ಇರುವುದಲ್ಲದೇ ಸುಲಭವಾಗಿಯೂ ಹಬ್ಬಬಲ್ಲದು. ಸುಮ್ಮನೆ ಬಲಿತ ಒಂದು ತುಣುಕು ಕಾಂಡವನ್ನು ನೆಲಕ್ಕೆ ಹಚ್ಚಿದರೂ ಸಾಕು, ಸುಲಭವಾಗಿ ಆತುಕೊಂಡು ಬೆಳೆಯಲಾರಂಭಿಸುತ್ತದೆ. ಆದ್ದರಿಂದ ಅಂತರರಾಷ್ಟ್ರೀಯ ಕೃಷಿ ಮತ್ತು ಜೈವಿಕ ವಿಜ್ಞಾನ ಕೇಂದ್ರವು (Centre for Agriculture and Bioscience International – CABI) ಇದನ್ನು ಆಕ್ರಮಣಕಾರಿ ಗಿಡಗಳ ಪಟ್ಟಿಯಲ್ಲಿ ಗುರುತಿಸಿದ್ದಾರೆ. ಇದು ಗಿಡವೇ ಆಗಿದ್ದರೂ, ಬಳ್ಳಿಯಂತಹ ಬೆಳವಣಿಗೆ. ಹಾಗಾಗಿ ಒಂದು ಬಗೆಯಲ್ಲಿ ಬಳ್ಳಿ-ಗಿಡ ಅತವಾ ಗಿಡ-ಬಳ್ಳಿ. ಒಂದು ಮೀಟರ್‌ ಎತ್ತರಕ್ಕೆ ಬೆಳೆದು ಸುತ್ತಲೂ ಹಬ್ಬುವ ಸ್ವಭಾವದ್ದು. ಇದನ್ನು ಸೆಮಿ ಸಕ್ಯುಲೆಂಟ್‌ ಅಂದರೆ ಅರೆ ಹಸಿಯ ಸ್ವಭಾವದ ಗಿಡ ಎನ್ನುವ ಪರಿಪಾಠವಿದೆ. ಒಂದು ಬಗೆಯಲ್ಲಿ ಒಣಗಿದಂತಿದ್ದೂ ಹಸಿರನ್ನುಳಿಸಿಕೊಂಡ ಮಹಾನ್‌ ಬದುಕಿನ ಆಶಯವುಳ್ಳದ್ದು. ಅದಕ್ಕೆ ಇದು ತನಗೆ ತಾನೆ ಸಂಜೀವಿನಿಯಾಗಿದೆ. ಅದರ ಪರಿಮಳವನ್ನು ಮಾನವ ಕುಲವು ಗೌರವಿಸಿ, ಪ್ರೀತಿಯಿಂದ ಜೀವನಕ್ಕೆ ತಂದುಕೊಂಡು, ಪೋಷಿಸಿಕೊಂಡಿದೆ. ಅದರ ಸಾಂಬಾರು ಗುಣಕ್ಕೆ, ಒಂದಷ್ಟು ಔಷಧಿಯ ಪರಿಹಾರಗಳಾಗಿ, ಜೊತೆಗೆ ಹಲವೆಡೆ ಬಡ ರಾಷ್ಟ್ರಗಳಲ್ಲಿ ಮಾಂಸಾಹಾರದ ಪರ್ಯಾಯವಾಗಿಯೂ ಬಳಸಲಾಗುತ್ತಿದೆ.

ಇದರ ಎಲೆಗಳು ದಟ್ಟ ಸುವಾಸನೆಯನ್ನು ಹೊಂದಿರುವುದನ್ನು ಆಹಾರಗಳಲ್ಲಿ ಧಾರಾಳವಾಗಿ ಬಳಸಿಕೊಳ್ಳಲಾಗಿದೆ. ಮಾಂಸಾಹಾರಿ ಬಳಕೆಗಳಲ್ಲಿ, ಬಹು ಮುಖ್ಯವಾಗಿ ಆಡು ಮತ್ತು ಮೀನಿನ ಆಹಾರದ ತಯಾರಿಗಳಲ್ಲಿ ಆಹಾರವನ್ನು ಪರಿಮಳಭರಿತವನ್ನಾಗಿಸಲು ಬಳಸಲಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಎಲೆಗಳನ್ನು ಬಳಸಿ ಕಷಾಯದ ತರಹ ಅಥವಾ ಚಹಾದ ಮಾದರಿಯಲ್ಲಿ ತಯಾರಿಸಿಯೂ ಬಳಸಲಾಗುತ್ತದೆ. ಕೆಲವೆಡೆ ಕೊತ್ತುಂಬರಿ ಸೊಪ್ಪನ್ನು ಸಣ್ಣಗೆ ಕತ್ತರಿಸಿ, ಮೇಲುದುರಿಸುವಂತೆಯೂ ಎಲೆಗಳನ್ನು ಸಣ್ಣಗೆ ಹೆಚ್ಚಿ ಬಳಸಲಾಗುವುದು. ಇತರೇ ಮಾಮೂಲಿಯಾದ ತಂಬುಳಿ ಅಥವಾ ಸಾಂಬಾರಿನ ಸಂಗಾತಿಯಾಗಿಯೂ ತಿಳಿದೇ ಇದೆ. ಇದನ್ನು ಬಳಸುವುದರಿಂದ ತಿನಿಸುಗಳಿಗೆ ಪರಿಮಳವು ಜೊತೆಯಾಗುವುದಲ್ಲದೆ, ತಯಾರಿಸಿದ ಖಾದ್ಯವು ಕೆಡದಂತೆ ಒಂದಷ್ಟು ಕಾಲ ಇಡಲೂ ಇದು ಸಹಕಾರಿಯಾಗುತ್ತದೆ. ಎಲೆಗಳಲ್ಲಿನ ವೈವಿಧ್ಯಮಯ ರಾಸಾಯನಿಕಗಳು ಆಹಾರ ಕೆಡದಂತಿಡಲು ಸಹಾಯಮಾಡುತ್ತವೆ.

ಜಗತ್ತಿನ ಅನೇಕ ಸಂಸ್ಕೃತಿಗಳ ಜನಪದ ಔಷಧಗಳಲ್ಲಿ ದೊಡ್ಡ ಪತ್ರೆಗೆ ದೊಡ್ಡದೇ ಆದ ಸ್ಥಾನವಿದೆ. ಅಮೆರಿಕಾ ಹೊರತು ಪಡಿಸಿ ಬಹುತೇಕ ಇತರೇ ದೇಶಗಳಲ್ಲಿ ಇದರ ಜನಪದೀಯ ಬಳಕೆಗಳು ಸರ್ವೇ ಸಾಮಾನ್ಯವಾಗಿವೆ. ಈ ಜನಪದ ಬಳಕೆಗಳನ್ನು ಆಧುನಿಕ ತರ್ಕಕ್ಕೆ ಅಥವಾ ಪ್ರಯೋಗಕ್ಕೆ ಬಳಸಿದ ಅಧ್ಯಯನಗಳ ಕೊರತೆ ಇದ್ದರೂ, ಸಹಜವಾಗಿ ಆಹಾರದ ಭಾಗವಾಗಿರುವ ಬಹುತೇಕ ನೆಲವನ್ನು ದೊಡ್ಡ ಪತ್ರೆಯು ತನ್ನದನ್ನಾಗಿಸಿಕೊಂಡಿದೆ.

ಈ ಸಸ್ಯದ ಜೀವಿರಾಸಾಯನಿಕ ಅಧ್ಯಯನಗಳು, ಅದರೊಳಗಿನ ರಾಸಾಯನಿಕಗಳನ್ನು ಗುರುತಿಸುವ ಹಲವಾರು ಪ್ರಯೋಗಗಳನ್ನು ನಡೆಸಿವೆ. ಮಾನವ ಆಶಯದ ಸಸ್ಯಗಳಲ್ಲಿನ ರಾಸಾಯನಿಕ ಸಂಯುಕ್ತಗಳನ್ನು ಹುಡುಕುವ ಆಸಕ್ತಿಯಲ್ಲಿ ದೊಡ್ಡ ಪತ್ರೆಯು ಮಹತ್ತರವಾದ ಸ್ಥಾನವನ್ನೇ ಗಳಿಸಿದೆ. ಇದರ ಎಲೆ ಹಾಗೂ ಕಾಂಡಗಳಲ್ಲಿ ಸರಿ ಸುಮಾರು 70 ಕ್ಕೂ ಹೆಚ್ಚು ಆವಿಯಾಗಬಲ್ಲ ಇಂಗಾಲದ ರಾಸಾಯನಿಕ ಸಂಯುಕ್ತಗಳನ್ನು ಗುರುತಿಸಲಾಗಿದೆ. ಇವೆಲ್ಲವು ಬಗೆ ಬಗೆಯ ಟರ್ಪೀನುಗಳು, ತೈಮಾಲ್‌ಗಳೇ ಮುಂತಾದ ಸಂಯುಕ್ತಗಳಾಗಿವೆ. ಇವಲ್ಲದೆ ಆವಿಯಾಗದಿರುವ ಇತರೇ ಸುಮಾರು 30ಕ್ಕೂ ಹೆಚ್ಚು ಸಂಯುಕ್ತಗಳನ್ನು ರಾಸಾಯನಿಕ ಅಧ್ಯಯನಗಳು ಗುರುತಿಸಿ ಹೆಸರಿಸಿವೆ. ಅವುಗಳೆಲ್ಲವೂ ಹೆಚ್ಚಾಗಿ ಫ್ಲೇವಿನಾಯ್ಡ್‌ಗಳಂತಹಾ ಸಂಯುಕ್ತಗಳು. ಕೆಲವೊಂದು ಸುಗಂಧಗಳೂ, ಹಣ್ಣಾಗಿಸುವ ರಾಸಾಯನಿಕಗಳೂ ಇವುಗಳಲ್ಲಿ ಸೇರಿವೆ.

ಹೀಗೆ ರಾಸಾಯನಿಕವಾಗಿ ಗುರುತಿಸಬಹುದಾಗಿರುವುದರ ಜೊತೆಗೆ ಇದರ ಔಷಧೀಯ ಪರಂಪರೆಯನ್ನು ವೈವಿಧಯಮಯವಾಗಿ ಗುರುತಿಸಲಾಗಿದೆ. ಮುಖ್ಯವಾಗಿ ಸೂಕ್ಷ್ಮಜೀವಿಗಳ ನಿಯಂತ್ರಣದಲ್ಲಿ ಬ್ಯಾಕ್ಟಿರಿಯಾ, ಶಿಲೀಂಧ್ರಗಳು ಹಾಗೂ ಹಲವು ವೈರಸ್ಸುಗಳ ನಿಯಂತ್ರಣದಲ್ಲೂ ಇದರೊಳಗಿನ ರಾಸಾಯನಿಕಗಳು ಉಪಯುಕ್ತವಾಗಿವೆ. ಮಾನವ ದೇಹದ ಚರ್ಮದ ಮೇಲಿರುವ ಮತ್ತು ದೇಹದೊಳಗಿನ ಸೂಕ್ಷ್ಮಾಣುಗಳ ನಿಯಂತ್ರಣದಲ್ಲಿ ಇದರ ಉಪಯೋಗವನ್ನು ಅರಿಯಲಾಗಿದೆ. ಇದರಲ್ಲಿ ಬಹು ಚರ್ಚಿತ ಕ್ಯೂಬಾ ಉದಾಹರಣೆಯನ್ನು ಗಮನಿಸುವುದು, ಪ್ರಸ್ತುತ ಸಂದರ್ಭದಲ್ಲಿ ಆಸಕ್ತಿದಾಯಕವಾಗಿದೆ. ಕ್ಯೂಬಾವು ಜನಪದೀಯ ಔಷಧಗಳ ಪರಂಪರೆಯಲ್ಲಿ ಇತ್ತೀಚೆಗೆ ಜಾಗತಿಕ ಆಸಕ್ತಿಯನ್ನು ಅದರಲ್ಲೂ ಅಮೆರಿಕಾದಂತಹಾ ಉನ್ನತ ದೇಶಗಳನ್ನೂ ಗಮನಕ್ಕೆ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಇದು ಪ್ರಮುಖವಾಗಿದೆ. ದೊಡ್ಡ ಪತ್ರೆಯ ಎಲೆಗಳ ಕಷಾಯವನ್ನು ಕ್ಯೂಬಾದಲ್ಲಿ ದೀರ್ಘಕಾಳಿಕ ಕೆಮ್ಮಿನಿಂದ ನರಳುವವರಿಗೆ, ಹಾಗೂ ಕ್ಷಯ ರೋಗದ ನಿಯಂತ್ರಣಕ್ಕೂ, ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. ಹೀಗೆ ಕ್ಷಯದ ವಿರುದ್ಧ ಪ್ರತಿರೋಧ ತರಬಲ್ಲ ದೊಡ್ಡ ಪತ್ರೆಯ ಗುಣವನ್ನು ವೈಜ್ಞಾನಿಕ ಅಧ್ಯಯನಗಳಿಗೆ ಒಳಪಡಿಸಲಾಗಿದ್ದು, ಕ್ಷಯ ರೋಗ ತರುವ ಮೈಕೋಬ್ಯಾಕ್ಟಿರಿಯಗಳ ನಿಯಂತ್ರಣದಲ್ಲಿ ಸಹಕಾರಿಯಾಗುವುದನ್ನು ಸಾಬೀತು ಪಡಿಸಿವೆ. ಜೊತೆಗ ಈ ಕಷಾಯಗಳು ಹೇಗೆ ಬ್ಯಾಕ್ಟಿರಿಯಾಗಳ ಶಾರೀರಕ ನಾಶದಲ್ಲಿ ಸಹಾಯ ಮಾಡಬಲ್ಲವು ಎಂಬುದನ್ನೂ ಒರೆಹಚ್ಚಿ ನೋಡಲಾಗಿದ್ದು ಆಸಕ್ತಿದಾಯಕವಾದ ಫಲಿತಗಳು ದೊರಕಿವೆ.

ವೈರಾಣುಗಳ ಹಿನ್ನಡೆಯಲ್ಲಿಯೂ ದೊಡ್ಡ ಪತ್ರೆಯು ಮಹತ್ತರವಾದ ಪಾತ್ರವಹಿಸಿ ಉಪಕಾರಿಯಾಗಿದೆ. ಬಹಳ ಮುಖ್ಯವಾಗಿ ಲೈಂಗಿಕವಾಗಿ ಹರಡಬಲ್ಲ ಏಡ್ಸ್‌ ಮುಂತಾದ ವೈರಾಣುಗಳ ಒಟ್ಟಾರೆ ಸಂಖ್ಯೆಯನ್ನು ಕಡಿಮೆಗೊಳಿಸಬಲ್ಲ ಶಕ್ತಿಯನ್ನು ದೊಡ್ಡ ಪತ್ರೆಯ ರಾಸಾಯನಿಕಗಳು ಹೊಂದಿವೆ. ಮಾನವರಲ್ಲಿ ರೋಗ ಪ್ರತಿರೋಧವನ್ನು ಕಡಿಮೆ ಮಾಡುವ ಬಹುಪಾಲು ವೈರಾಣುಗಳ ಮೇಲೆ ದೊಡ್ಡ ಪತ್ರೆಯ ರಾಸಾಯನಿಕಗಳ ಬಗೆಗೆ ಔಷಧೀಯ ಹುಡುಕಾಟದ ಅಧ್ಯಯನಗಳು ಆಸಕ್ತಿ ವಹಿಸಿವೆ. HIV, AIDS ನಂತಹಾ ರೋಗಕಾರಕ ವೈರಸ್ಸುಗಳ ನಿಯಂತ್ರಣಗಳಲ್ಲಿಯೂ ಜೊತೆಗೆ ಉಸಿರಾಟದ ಸಮಸ್ಯೆಗಳನ್ನು ತಂದೊಡ್ಡುವ ವೈರಸ್ಸುಗಳ ನಿಯಂತ್ರಣದಲ್ಲಿ ಇದು ಮಹತ್ತರ ಪಾತ್ರವನ್ನು ವಹಿಸಿದೆ. ನಮ್ಮ ದೇಶದಲ್ಲಂತೂ, ಗಂಟಲಿನ ಶ್ವಾಸ್ಥ, ಶೀತ, ನೆಗಡಿ, ಕೆಮ್ಮು ಹಾಗೂ ಆಸ್ತಮಾದ ನಿಯಂತ್ರಣದಲ್ಲಿ ಇದರ ಬಳಕೆಯು ತುಂಬಾ ಪ್ರಚಲಿತದಲ್ಲಿದೆ. ಕ್ಯೂಬಾ, ಕೆರಾಬಿಯನ್‌ ದ್ವೀಪಗಳೂ ಹಾಗೂ ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಅಸ್ತಮಾದಿಂದಾಗುವ ಉಸಿರಾಟದ ತೊಂದರೆಯಲ್ಲಿ ಇದರ ಉಪಯೋಗವನ್ನು ಕಂಡುಕೊಳ್ಳಲಾಗಿದೆ.

ಅತಿಯಾದ ಭೇದಿ, ಅಜೀರ್ಣತೆಗೆ ದೊಡ್ಡ ಪತ್ರೆಯು ಉಪಕಾರಿ ಎನ್ನುವುದನ್ನು ಭಾರತವೂ ಸೇರಿದಂತೆ ಹಲವಾರು ಸಂಸ್ಕೃತಿಗಳು ಗುರುತಿಸಿಕೊಂಡಿವೆ. ಅದರಿಂದಲೇ ಮಜ್ಜಿಗೆ ಅಥವಾ ಮೊಸರಿನಲ್ಲಿ ಬೆರೆಸಿ ಮಾಡುವ ತಂಬುಳಿಯು ಜನಪ್ರಿಯವೇ ಹೌದು. ಇದನ್ನು ಉರಿಯೂತದಂತಹಾ ಕಾಯಿಲೆಗಳಲ್ಲೂ ಉಪಶಮನಕಾರಿಯಾಗಿ ಗುರುತಿಸಿ ಬಳಸಲಾಗುತ್ತಿದೆ. ಅದಲ್ಲದೆ ಚರ್ಮದ ಸೋಂಕುಗಳಿಗೆ, ಗಾಯಗಳು ಮಾಯಲು, ನೋವು ನಿವಾರಕವಾಗಿಯೂ ಇದು ಬಳಕೆಯಲ್ಲಿದೆ.

ಮಲೇಷಿಯಾದ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡವೊಂದು ದೊಡ್ಡ ಪತ್ರೆ ಸಸ್ಯದ ವೈವಿಧ್ಯಮಯ ಸಸ್ಯ ವೈಜ್ಞಾನಿಕ ಅಧ್ಯಯನಗಳ ಜಾಗತಿಕ ಸಮೀಕ್ಷೆಯನ್ನು ಕೈಗೊಂಡು ಅದರ ವರದಿಯನ್ನು ಪ್ರಕಟಿಸಿದ್ದಾರೆ. ಅಚ್ಚರಿ ಎನಿಸುವಷ್ಟು ಮಹತ್ವದ ಅಧ್ಯಯನಗಳನ್ನು ಜಾಗತಿಕವಾಗಿ ಗುರುತಿಸಿ, ಸರಿ ಸುಮಾರು ಒಂದು ನೂರಕ್ಕೂ ಮಿಕ್ಕಿ ವೈಜ್ಞಾನಿಕ ವರದಿ, ಪ್ರಬಂಧಗಳನ್ನು ಸಮೀಕ್ಷಿಸಿ ತಮ್ಮ ಪರಾಮರ್ಶನ ವರದಿಯನ್ನು ತಯಾರಿಸಿದ್ದಾರೆ. ಭಾರತವೂ ಸೇರಿದಂತೆ, ಜರ್ಮನಿ, ಕೀನ್ಯಾ, ಕ್ಯೂಬಾ, ಬ್ರೆಜಿಲ್‌, ಮಲೆಷಿಯಾ, ಫಿಲಿಪೈನ್ಸ್‌, ಇಂಡೀನೇಶಿಯಾ, ಅಮೆರಿಕಾ, ಶ್ರೀಲಂಕಾ, ಇಂಗೆಂಡ್‌, ದಕ್ಷಿಣ ಆಫ್ರಿಕಾ, ಹವಾಯ್‌ ದ್ವೀಪಗಳು, ವೆಸ್ಟ್‌ ಇಂಡೀಸ್‌ ಮುಂತಾದ ಹತ್ತಿಪ್ಪತ್ತು ದೇಶಗಳ ಅಧ್ಯಯನಗಳು ದೊಡ್ಡ ಪತ್ರೆಗೆ ಅವಕಾಶವನ್ನು ಮಾಡಿಕೊಟ್ಟಿರುವುದು ವಿಶೇಷವಾಗಿದೆ. ಈ ಅಧ್ಯಯನಗಳ ಹರಹನ್ನು ಗಮನಿಸಿದರೆ ದೊಡ್ಡ ಪತ್ರೆಯು ನಿಜಕ್ಕೂ ದೊಡ್ಡ ಪತ್ರೆಯೇ ಆಗಿರುವುದು ತಿಳಿಯುತ್ತದೆ. ನೂರಾರು ರಾಸಾಯನಿಕಗಳ ಮೂಲಕ ಹತ್ತಾರು ಸಮಸ್ಯೆಗಳ ಪರಿಹಾರವಾಗಿ ಈ ಎಲ್ಲಾ ಅಧ್ಯಯನಗಳೂ ನಡೆದಿರುವುದು, ನಮ್ಮ ಮನೆಗಳ ಹಿತ್ತಿಲಲ್ಲಿ, ಮುಂಬಾಗಿಲಿನ ಅಂಗಳದಲ್ಲಿ ಅಥವಾ ಕುಂಡಗಳಲ್ಲಿ ತನ್ನ ಪಾಡಿಗೆ ತಾನಿರುವಂತೆ ತೋರುವ ದೊಡ್ಡ ಪತ್ರೆ ಬಗ್ಗೆ ಎಂದರೆ ಅಚ್ಚರಿಯೇ ಅಲ್ಲವೇ?

ನಮಸ್ಕಾರ

ಡಾ. ಟಿ. ಎಸ್‌ ಚನ್ನೇಶ್.‌

This Post Has One Comment

 1. Kusum Ramesh Salian

  ತುಂಬಾ ಚೆನ್ನಾಗಿ ದೊಡ್ಡ ಪಾತ್ರೆಯಲ್ಲಿ ಬಗ್ಗೆ ತಿಳಿಸಿದ್ದೀರಿ.
  ನಿಜವಾಗಿಯೂ ನಮ್ಮ ದೇಶದಲ್ಲಿ ಈ ಪಾತ್ರೆಗೆ ಬಹಳ
  ಪ್ರಾಮುಖ್ಯತೆಯನ್ನು ನಮ್ಮ ಹಿರಿಯರೂ ನೀಡಿದ್ದಾರೆ.
  ಮಕ್ಕಳಿಗೆ ಶೀತ ಕೆಮ್ಮು ಕಫ ಹಾಗೂ ದಮಾದ ರೋಗಿಗಳಿಗೆ
  ಇದರ ರಸವನ್ನು ಕೊಡುತಿದ್ದರು. ಇದು ನನ್ನ ಅನುಭವ.
  ಗ್ರೇಟ್ ಸರ್ ನಿಮ್ಮ ಸಸ್ಯಯಾನದ ಮೂಲಕ ಹಲವಾರು ವಿಧದ ಸಸ್ಯಗಳು ಬಗ್ಗೆ ತಿಳಿಯುವುದು ಸುಲಭವಾಯಿತು. Thank you sir.

Leave a Reply