ಕಳೆದ ವಾರದ ಪುಸ್ತಕಯಾನದಲ್ಲಿ ಪರಿಚಯಗೊಂಡ “ಜೀನ್-ಒಂದು ಆಪ್ತ ಚರಿತ್ರೆ- (The Gene -An Intimate History)ಯ ಮುಂದುವರಿಕೆ ಎಂಬಂತಹಾ ಪುಸ್ತಕ The End of Genetics ಈ ವಾರ ನಿಮ್ಮೆದುರಿಗಿದೆ. ಈ ಪುಸ್ತಕವು ಕಳೆದ ವರ್ಷವಷ್ಟೇ ಪ್ರಕಟವಾಗಿದ್ದು, ಶೀರ್ಷಿಕೆಯ ವಿಶೇಷತೆಯಿಂದ ಗಮನ ಸಳೆದ ಇದನ್ನು ಅಂತರ್ಜಾಲದಲ್ಲಿ ಹುಡುಕಿ ತೆಗೆದೆ. ಇದೇನಿದು, ಜೆನೆಟಿಕ್ಸ್‌ನ ಕೊನೆಯ ಕ್ಷಣದ ವಿವರವೇ? ಎಂಬ ನನ್ನ ಕುತೂಹಲಕ್ಕೆ ಉತ್ತರವಾಗಿ ದೊರೆತದ್ದು ಆನುವಂಶಿಕ ಕ್ರಾಂತಿಕಾರಿ ಸಂಗತಿಯ ವಿಶ್ಲೇಷಣೆ.
ನನ್ನ ಅಮ್ಮ ಬದುಕಿದ್ದಾಗ ಒಂದು ಮಾತನ್ನು ಹೇಳುತ್ತಿದ್ದರು! “ನಾನು ನಿನ್ನ ಹಡೆದಿರಬಹುದು ಹಾಗಂತ ನಿನ್ನ ಹಣೆಬರಹವನ್ನು ಬರೆದಿಲ್ಲ” ಎನ್ನುತ್ತಿದ್ದರು. ಶಾಲಾ ಶಿಕ್ಷಕಿಯಾಗಿ ಮಕ್ಕಳನ್ನು ರೂಪುಗೊಳಿಸುವಲ್ಲಿ ಅಪಾರ ಆಸಕ್ತಿ ಮತ್ತು ಪ್ರೀತಿಯನ್ನು ಹೊಂದಿದ್ದಾಕೆ, ಸಾಮಾನ್ಯವಾದ ತಾಯಿಯಾಗಿ, ಪೋಷಕರ ಪರವಾದ ಈ ಮಾತನ್ನು ಹೇಳುತ್ತಿದ್ದರು. ಮಕ್ಕಳನ್ನು ಹೆತ್ತವರಿಗೆ ಅವರನ್ನು ರೂಪಿಸುವಲ್ಲಿ ಇರುವ ಮಿತಿಗಳ ಕುರಿತಂತೆ ಭವಿಷ್ಯದ (ಹಣೆಯ ಬರಹದ ರೂಪಕದಲ್ಲಿ) ಜಾಗರೂಕತೆಯ ಮಾತು ಅದಾಗಿತ್ತು. ಈಗ 21ನೆಯ ಶತಮಾನದ ಎರಡು ದಶಕಗಳನ್ನು ಸವೆಸಿದ ಮೇಲೆ, ತಂದೆ-ತಾಯಂದರು ಇನ್ನು ಮುಂದೆ ಮಕ್ಕಳ ಭವಿಷ್ಯ _ಅದರಲ್ಲೂ ಆರೋಗ್ಯದ_ ಹಿತ(ಹಣೆಬರಹ?)ವನ್ನೂ ಬರೆಯುವ ಆಸಕ್ತಿಯನ್ನೂ ಹೊಂದುವ ಸಾಧ್ಯತೆಯಿದೆಯೆಂಬ ವಿಶಿಷ್ಟ ವಿಶ್ಲೇಷಣೆಯ ವೈಜ್ಞಾನಿಕ ಜಗತ್ತನ್ನು ತಿಳಿಸುವ ಪುಸ್ತಕವೊಂದನ್ನು ಪರಿಚಯಿಸಲು ಈ ರೂಪಕದಿಂದ ಆರಂಭಿಸಬೇಕಾಯಿತು.
ಮಾನವ ಜೀನೋಮಿನ ಸಂಗತಿಗಳು ದಾಖಲಾಗಿ ಮತ್ತೊಮ್ಮೆ ಪುನರ್ ವಿಮರ್ಶೆಗೊಂಡು ಪ್ರಕಟವಾಗಿರುವ ಈ ಹೊತ್ತಿನಲ್ಲಿ ಪ್ರಸ್ತುತ ಪುಸ್ತಕವು ಕ್ರಾಂತಿಕಾರಿ ಹಾಗೂ ಮಹತ್ವದ ವಿಷಯಗಳನ್ನು ತೆರೆದಿಡುತ್ತದೆ. ಪುಸ್ತಕದ ಉದ್ದೇಶವನ್ನು ಕುರಿತು ಲೇಖಕರಾದ ಡೇವಿಡ್ ಗೋಲ್ಡ್‌ಸ್ಟೈನ್ ರ ಮಾತು ಹೀಗಿದೆ. My aim in this book is to provide a sufficient grounding for you to understand what can and will be done in reproductive genome design. ನಮ್ಮ ಭವಿಷ್ಯದ ಸಂತಾನೊತ್ಪತ್ತಿಯಲ್ಲಿ ಜೀನೋಮಿನ ವಿನ್ಯಾಸವನ್ನೇ ಅರಿತು, ಬದಲಾಯಿಸಿ ಅಥವಾ ನ್ಯೂನ್ಯತೆಗಳ ನಿವಾರಿಸಿ ಮಕ್ಕಳನ್ನು ಪಡೆಯುವ ಬಯಕೆಯನ್ನು ವೈಜ್ಞಾನಿಕ ಹಾಗೂ ಸಾಂಸ್ಕೃತಿಕ-ನೈತಿಕ ಹಿನ್ನೆಲೆಯಲ್ಲಿ ಬೌದ್ಧಿಕ ಚತುರತೆಯಿಂದ ವಿಶ್ಲೇಷಿಸಿ ನೀಡಿದ್ದಾರೆ.
ನೀವು ಒಪ್ಪಲಿ ಅಥವಾ ಒಪ್ಪದಿರಲಿ, ಡೇವಿಡ್ ಗೋಲ್ಡ್‌ಸ್ಟೈನ್ ಅವರಂತೂ ಹುಟ್ಟಿನಿಂದ ಬರುವಂತಹಾ ಆರೋಗ್ಯ ಸಂಬಂಧೀ ದುಃಖವನ್ನು ತಗ್ಗಿಸಲು ನೈತಿಕ ಕಡ್ಡಾಯವನ್ನು ಕುರಿತು ಅಭಿಪ್ರಾಯಗಳನ್ನು ಒಳಗೊಂಡ, ಸ್ಪಷ್ಟ-ದೃಷ್ಟಿಕೋನದ ಮತ್ತು ಅಂತಿಮವಾದ ಉತ್ತಮ ಗ್ರಂಥವನ್ನೇ ಒದಗಿಸಿದ್ದಾರೆ. ಜೆನೆಟಿಕ್ಸ್ ಅಂತ್ಯವು ಓದುಗರನ್ನು ನೇರವಾಗಿ ಆಧುನಿಕ ಜೆನೆಟಿಕ್ಸ್‌ನ ಮುಂಚೂಣಿಗೆ ತರುತ್ತದೆ. ಭವಿಷ್ಯವು ಏನಾಗುತ್ತದೆ ಎಂಬುದರ ಬಗ್ಗೆ ಧೈರ್ಯದಿಂದ ಮತ್ತು ಬಲವಾದ ದೃಷ್ಟಿಕೋನವನ್ನು ಪ್ರಸ್ತುತಪಡಿಸುತ್ತದೆ. ಮಾನವರ ಆನುವಂಶಿಕ ವಿಜ್ಞಾನದ ಇತಿಹಾಸದ ಅಧ್ಯಯನಗಳಲ್ಲೂ ಈಗಾಗಲೇ ಪ್ರವರ್ತಕರಾಗಿರುವ, ಡೇವಿಡ್ ಗೋಲ್ಡ್‌ಸ್ಟೈನ್ ಅವರು ಅದರ ಭವಿಷ್ಯವನ್ನು ಕೂಡ ಸ್ಪಷ್ಟವಾಗಿ ರೂಪಿಸಿದ್ದಾರೆ, ಅದಕ್ಕಾಗಿ ಆನುವಂಶಿಕ ತಂತ್ರಜ್ಞಾನದ ವಿಕಸನವನ್ನು ಕ್ರಮಬದ್ಧವಾಗಿ ವಿವರಿಸುತ್ತಾರೆ. ಅದರ ಜೊತೆಯಲ್ಲಿಯೇ ಒಂದು ವೇಳೆ ವೈಜ್ಞಾನಿಕ ಮಿತಿಗಳು ಮತ್ತು ನೈತಿಕ ಸಮಸ್ಯೆಗಳ ಚಿಂತನಶೀಲ ಪರಿಗಣನೆಯ ಮೊದಲೇ ಸಂತಾನೋತ್ಪತ್ತಿಯ ಜೀನೋಮಿಕ್ ವಿನ್ಯಾಸವು ಸಂಭವಿಸಿದಲ್ಲಿ ಸಂಭಸಬಹುದಾದ ಸಂಕಟಗಳನ್ನೂ ಸಹಾ ಎತ್ತಿ ತೋರಿಸುತ್ತಾರೆ.
ಹಾಗಾದರೆ ಜೆನೆಟಿಕ್ಸ್ -ಆನುವಂಶೀಯತೆಯ- ಕೊನೆಯಲ್ಲಿ ಏನಿದ್ದೀತು? ಇದರ ವಿವರಗಳನ್ನು ಡೇವಿಡ್ ಗೋಲ್ಡ್‌ಸ್ಟೈನ್ ಅವರು 5 ಅಧ್ಯಾಯಗಳ ಕೇವಲ 162 ಪುಟಗಳ ಈ ಪುಸ್ತಕದಲ್ಲಿ ವಿವರಿಸಿದ್ದಾರೆ. ಕಳೆದ ಶತಮಾನದಲ್ಲೇ ಜೀನುಗಳ ತಿದ್ದುಪಡಿಯಿಂದ ಮೂಲ ಆರಂಭದಲ್ಲೇ ಕೆಲವು ಆನುವಂಶಿಕ ನ್ಯೂನ್ಯತೆಗಳ ಸರಿಪಡಿಸಬಹುದೆಂದೂ, ಹಾಗೆಯೇ ನಿರ್ವಹಿಸುವಾಗ ಬಳಸುವ ವಾಹಕಗಳಿಂದ ದೇಹದ ಇಮ್ಯೂನ್ ಸಿಸ್ಟಮ್-ಪ್ರತಿರೋಧದ ವ್ಯವಸ್ಥೆ- ಗೆ ತೊಂದರೆಯಾಗದಂತೆ ನಿರ್ವಹಿಸುವ ಬಗ್ಗೆಯೂ ತಿಳಿಯಲಾಗಿತ್ತು. ಮಾನವ ತಳಿ ನಕ್ಷೆಯು ಇಡೀ ಜೀನೋಮಿನ ವಿವರಗಳನ್ನು ನೀಡಿದ್ದರೂ ಸಹಾ ಪ್ರತಿರೋಧವನ್ನು ನಿರ್ವಹಿಸುವಲ್ಲಿ ಕೇವಲ ನಿಖರತೆಯು ಎಷ್ಟೆಷ್ಟೂ ಸಾಲದು ಎಂಬ ಆತಂಕದಿಂದಲೇ ಪುಸ್ತಕವು ಓದಿಗೆ ತೆರೆದುಕೊಳ್ಳುತ್ತದೆ.
ಹಾಗಾಗಿ ನಿಖರತೆಯ ಚಿಕಿತ್ಸೆಯೆಂದೇ (Precision Medicine) ಇತ್ತೀಚೆಗೆ ಕರೆಯಲಾಗುವ ಜೀನೋಮಿನ ಚಿಕಿತ್ಸೆಯಲ್ಲಿಯೂ ಆರಂಭದಲ್ಲಿ ಮಕ್ಕಳ ಜೀನೋಮನ್ನು ಎಚ್ಚರದಿಂದ ರೂಪಿಸುವುದೇ ಮೇಲುಗೈ ಆಗಬಲ್ಲದೆಂಬ ವಿಶ್ವಾಸವನ್ನು ಮುಂದಿಟ್ಟು ಪ್ರಸ್ತಾಪಿಸುತ್ತಾರೆ. ಮುಂದುವರೆದು ಇದೇ ಕಾರಣದಿಂದ ಭವಿಷ್ಯದಲ್ಲಿ ಪೋಷಕರು ತಮ್ಮ ಮಕ್ಕಳ ಜೀನೋಮನ್ನು ಹೇಗೆ ಹೊಂದಿಸಬೇಕು ಎಂಬುದರ ಬಗ್ಗೆ ತುಂಬಾ ಸಂಕೀರ್ಣವಾದ ಹಾಗೂ ಪರಿಣಾಮಕಾರಿಯಾದ ಆಯ್ಕೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಎಚ್ಚರದ ವಿವರಣೆಯನ್ನು ನೀಡುತ್ತಾರೆ. ಹಾಗಾಗಿ ಇಂತಹಾ ಬಯಕೆಯ ಭಾವಿ ಪೋಷಕರಿಗೆ ಈ ಬಗೆಯ ಸಂಕೀರ್ಣ ಆನುವಂಶಿಕ ವೈಜ್ಞಾನಿಕ ವಿಚಾರಗಳ ತಿಳಿವು ಅನಿವಾರ್ಯವಾಗಿ ಇರಬೇಕು ಎಂಬ ಬೌದ್ಧಿಕ ಜವಾಬ್ದಾರಿಯನ್ನೂ ಸಮಾಜದ ಮೇಲೆ ಹೇರಿದ್ದಾರೆ.
ಇಂತಹದನ್ನು ಸ್ವೀಕರಿಸುವ ಸಮಾಜಕ್ಕೆ ಜವಾಬ್ದಾರಿಯುತ ತೀರ್ಮಾನದ ಅನಿಸಿಕೆಯನ್ನು ಅವರ ಮಾತಿನಲ್ಲಿ “One conclusion I have drawn from these considerations is that, although human genetics has already advanced far enough to provide parents with information on which they may choose to act, key gaps in our knowledge make it very difficult to anticipate the consequences of the actions likely to become possible. ಎಂಬಂತೆ ಮಿತಿಯಾಗಿಸಿಯೇ ಹೇಳಿದ್ದಾರೆ. ಪ್ರಸ್ತುತ ವೈಜ್ಞಾನಿಕ ತಂತ್ರಗಳು ಜೀನೋಮನ್ನು ಅರ್ಥೈಸುವಲ್ಲಿ, ಹಾಗೂ ರೂಪಾಂತರಗೊಂಡು ಮುಂದೊಂದು ದಿನ ತೊಂದರೆಯೊಡ್ಡುವ ಜೀನುಗಳನ್ನು ಮಕ್ಕಳಲ್ಲಿ ತಿದ್ದುವುದನ್ನು ಸಾಧ್ಯಗೊಳಿಸಲಿವೆ. ಆದ್ದರಿಂದ ಭವಿಷ್ಯದ ಸಂತಾನೋತ್ಪತ್ತಿಯಲ್ಲಿ ಪೋಷಕರಿಗೆ ಅಂತಹಾ ಬಯಕೆಯನ್ನು ತಂದೊಡ್ಡಲಿವೆ. ಇದನ್ನೇ ಆರಂಭದ ನನ್ನ ತಾಯಿಯ ಮಾತಿನ ರೂಪಕದಲ್ಲಿ ಬದಲಾಯಿಸಿದರೆ. “ಇನ್ನು ಮುಂದೆ ಹಡೆದವರು ಮಕ್ಕಳ ಹಣೆ ಬರಹ (ಆರೋಗ್ಯದ ಭವಿಷ್ಯದ ಕುರಿತಂತೆ) ಬರೆಯುವ ಆಸಕ್ತಿ ಹೊಂದಬಹುದು. ಎಂದಾದೀತು.
The Future of Reproduction ಎಂದೇ ಕರೆದಿರುವ ಒಂದು ಇಡೀ ಅಧ್ಯಾಯದಲ್ಲಿ ಇದನ್ನು ಚರ್ಚಿಸಿದ್ದಾರೆ. ಈ 21ನೆಯ ಶತಮಾನದ ಮೊದಲ ದಶಕವೇ ಮಾನವ ಜೀನೋಮು ಮತ್ತು ಸಮಾಜದ ನಡುವಿನ ಸಂಬಂಧವನ್ನು ಪುನರ್ ವಿಮರ್ಶಿಸಲು ಅವಕಾಶವಿತ್ತಿದೆ. ಈ ಹಿಂದೆ ಇದೆಲ್ಲ ಆನುವಂಶಿಕ ಸಮಸ್ಯೆ ಹಾಗಾಗಿ ಚಿಕಿತ್ಸೆಯು ಸಾಧ್ಯವಿಲ್ಲ ಎಂಬ ವೈದ್ಯಕೀಯ ಮಾತುಗಳು ಈ ಎರಡೂ ದಶಕಗಳಲ್ಲಿ ಬದಲಾಗಿವೆ. ಅಥವಾ ಬದಲಾಗುವ ಸೂಚನೆಯನ್ನು ಕೊಡುವಂತಹಾ ನೂರಾರು ಸಂಶೋಧನೆಗಳು ನಡೆದಿವೆ. ಪ್ರಸ್ತುತ ಲೇಖಕರೇ ಸ್ವಂತ ಆಸಕ್ತಿಯಿಂದ ಅನೇಕ ಸಂಶೋಧನೆಗಳನ್ನು ಪೋಷಕರನ್ನೂ ಒಳಗೊಂಡಂತೆ ನಡೆಸಿರುವುದನ್ನೂ ದಾಖಲಿಸಿದ್ದಾರೆ. ಹಾಗಾಗಿ ವಹಿಸಬೇಕಾದ ಎಚ್ಚರವನ್ನೂ ವಿವರವಾಗಿಯೇ ನೀಡಿದ್ದಾರೆ. ಹಾಗಾಗಿ ಅವರೆನ್ನುತ್ತಾರೆ, Amid our own astonishment and joy, we could not help wondering how many other patients there are like this who could be helped so very much by this new science. As you will see in the chapters of this book, the answer to this question is both encouraging and discouraging.
ಮಾನವ ದೇಹದ ಜೀನುಗಳು ನಿರ್ವಹಿಸುವ ಅದರಲ್ಲೂ ನ್ಯೂನ್ಯತೆಯನ್ನು ದಾಟಿಸುವ ರೂಪಾಂತರಿಗಳಿಗೆ ಕಾರಣವಾಗುವ ಸುಮಾರು 437 ಜೀನುಗಳ ಅಧ್ಯಯನಯೊಂದನ್ನು ಪರಾಮರ್ಶಿಸಿದ್ದಾರೆ. ಸುಮಾರು 104 ಜನ ಆರೋಗ್ಯವಂತರಲ್ಲಿ ನಡೆಸಲಾದ ಅಧ್ಯಯನವೊಂದರಲ್ಲಿ ಪ್ರತೀ ವ್ಯಕ್ತಿಯೂ ಸರಾಸರಿ 2 ರಿಂದ 3 ಕಾಯಿಲೆಗಳನ್ನು ತರುವಂತಹಾ ಜೀನುಗಳನ್ನು ಹೊಂದಿರುವ ಆತಂಕಕಾರಿ ಅಂಶವನ್ನು ಹೇಳಿದ್ದಾರೆ. ಇದು ಕೇವಲ ಒಬ್ಬ ವ್ಯಕ್ತಿಯದಾದಲ್ಲಿ ಒಂದು ಮಗುವಿನ ಜನನವು ಇಬ್ಬರ ಲೈಂಗಿಕ ಸಾಮರಸ್ಯದ ಕುಡಿಯಾಗಿದ್ದು ಅದರ ಮೇಲೆ ಪ್ರಭಾವಿಸಬಹುದಾದ ಕಾಯಿಲೆಯ ಸಂಕೀರ್ಣ ಸನ್ನಿವೇಶವನ್ನು ಕೊಡುತ್ತಾರೆ. ಇಂತಹಾ ಅನೇಕ ಕ್ರಾಂತಿಕಾರಕ ಅಧ್ಯಯನಗಳ ವಿವರಗಳ ಸಾಲು ಸಾಲೇ ಈ ಪುಸ್ತಕದಲ್ಲಿದೆ.
ಜೆನೆಟಿಕ್ಸ್ – ಆನುವಂಶಿಕ ವಿಜ್ಞಾನದ ಅಧ್ಯಯನವು ಮಾನವ ಕೇಂದ್ರಿತ ಆಸಕ್ತಿಗಳಲ್ಲಿ ಕೊನೆಯಾಗುವ ಹಿನ್ನೆಲೆಯ ಸಂದೇಶದ ಈ ಪುಸ್ತಕದ ಓದಿನಲ್ಲಿ ಸಿಗುವ ಮತ್ತೊಂದು ಆಸಕ್ತಿಯ ಅಧ್ಯಯನ ಹೀಗಿದೆ. Brown-Vialetto-Van Laere syndrome ಎಂಬ ನರದೌರ್ಬಲ್ಯದ ಕಾಯಿಲೆ. ಇದು ವಿಟಮಿನ್ ಬಿ-2 (B2) ಸರಿಯಾದ ದೇಹಕ್ಕೆ ದೊರಕದ ಸಣ್ಣ ಕಾರಣದ್ದು. ಆದರೆ ಇದನ್ನು ಬಿ-2 ನಿಂದ ಚಿಕಿತ್ಸೆಯ ಮಾಡುವ ಜೊತೆಗೇ ಕಾಯಿಲೆಯ ಮೂಲ ವಿವರವನ್ನು ಅರಿತಾಗ ತಿಳಿದದ್ದು ವಿಟಮಿನ್ ಅನ್ನು ದೇಹಕ್ಕೆ ಸೇರಿಸುವ ಮೂಲ ಗುಣಾಣುವೇ ಕೆಲಸಕ್ಕೆ ಬಾರದ್ದು ಆಗಿದೆ. ಸಾಮಾನ್ಯವಾಗಿ ಹೆಚ್ಚಿನ ವಿಟಮಿನ್ ಚಿಕಿತ್ಸೆಯಿಂದ ನಿವಾರಣೆಯ ಪ್ರಯತ್ನದ ಜೊತೆಗೆ, ಆ ಗುಣಾಣುವಿನ ತಿದ್ದುವ ಯಶಸ್ಸನ್ನೂ ಹಂಚಿಕೊಂಡ ವಿವರಣೆಯೂ ಇಲ್ಲಿದೆ. ಇದಂತೂ ತೀರಾ ವಿಚಿತ್ರವಾದ ನರದೌರ್ಬಲ್ಯವಾಗಿದ್ದು, ಹೆಂಗಸರಿಗೇ ಹೆಚ್ಚು ಕಾಡುವ ಕಾಯಿಲೆಯಾಗಿದೆ. ಆದರೂ ಇನ್ನೂ ಪತ್ತೆಯಾಗದ ಅಪರೂಪದ ಸಂಖ್ಯೆಯ ರೋಗಿಗಳಿದ್ದಾರೆ. ಕಾರಣ ಅದೆಷ್ಟೋ ದೇಶಗಳ ಗ್ರಾಮೀಣ ಭಾಗಗಳ ಈ ಬಗೆಯ ನರದೌರ್ಭಲ್ಯ ಮುಂತಾದ ಜೆನೆಟಿಕ್ ಆಧಾರಿತ ಸಮಸ್ಯೆಗಳಿಗೆ ಯಾವುದೋ ಕಾಣದ ಬಲ ಅಥವಾ ದುರಾದೃಷ್ಟದ ವಿವರಣೆಗಳ ಕಥನಗಳು ಸಹಜ. ಇವು ನಮ್ಮ ದೇಶದಲ್ಲಂತೂ ಸಾಕಷ್ಟು ಅಧಿಕವಾಗಿಯೇ ಇವೆ.
ಜೆನೆಟಿಕ್ ವಿಕಸನದಲ್ಲಿ ಆಸಕ್ತಿಯ ಬೆರಗನ್ನೂ ಸಂಶೋಧಿಸಿದ ವಿವರಗಳನ್ನೂ ಪುಸ್ತಕವು ನೀಡುತ್ತದೆ. ಉದಾಹರಣೆಗೆ ಪ್ರಸ್ತುತ ಒಟ್ಟು 900 ಕ್ಕೂ ಹೆಚ್ಚು ಜನ ನೊಬೆಲ್ ಪುರಸ್ಕೃತರಲ್ಲಿ ಪ್ರತಿಶತ 20 ರಷ್ಟು ಯಹೂದಿಗಳೇ ಇದ್ದಾರೆ. ಹಾಗೆಂದರೆ ಯಹೂದಿಗಳಲ್ಲಿ ಜೆನೆಟಿಕ್ ವಿಕಾಸವು ಉದ್ದೇಶ ಪೂರ್ವಕವಾಗಿ ಅಥವಾ ಸೆಲೆಕ್ಟೀವ್ ಆಗಿ ಉತ್ತಮತೆಯ ಕಡೆಗೆ ಆಗುತ್ತಿದೆಯಾ ಎಂಬಂತಹಾ ರೋಚಕವಾದ ಅನುಮಾನದ ಹಾಗೂ ಅದಕ್ಕೆಲ್ಲಾ ನಿಖರತೆಗಳೂ ಏನೂ ಇಲ್ಲ ಎನ್ನುವ ಬಗೆಯ ವಿವರಗಳ ಅಧ್ಯಯನವನ್ನೂ ನೋಡಬಹುದು.
ಏನೆಂದರೂ ಈ ಬಗೆಯ ಅದರಲ್ಲೂ ಸಂತಾನೋತ್ಪತ್ತಿಯ ಭವಿಷ್ಯದ ಉನ್ನತಿಯಲ್ಲಿ ಪೋಷಕರು ಪರಿಭಾವಿಸಬೇಕಾದ ಮಾನವ ಜೀನೋಮಿನ ತಿಳಿವಳಿಕೆಯ ವಿವರಗಳಿಗೆ ಜೀನೋಮಿನ ಕಲಿಕೆಯನ್ನೂ ಸಹಾ ಪ್ರೊ. ಡೇವಿಡ್ ಗೋಲ್ಡ್‌ಸ್ಟೈನ್ ಇದರಲ್ಲಿ ವಿವರಿಸುತ್ತಾರೆ. ಗ್ರೆಗೊರ್ ಮೆಂಡಲ ಅವರ ಆನುವಂಶಿಕ ವಿವರಗಳು ಮುಂದೆ ಡಾರ್ವಿನ್‌ರ ವಿಕಾಸದ ಸೈದ್ಧಾಂತಿಕ ಆಯಾಮಗಳನ್ನೂ ಸೇರಿಸಿಕೊಂಡು ಮಾನವ ಸಂಕುಲವು ನಡೆದಿರುವ/ನಡೆಯ ಬೇಕಾದ ವಿವರಗಳ ಕಲಿಕೆಯು ಸಾಧ್ಯತೆಗಳ ಪರಾಮರ್ಶೆ ಇಲ್ಲಿದೆ. ಅಲ್ಲಲ್ಲಿ ಪುಸ್ತಕದ ಓದಿನಿಂದ ಗ್ರಹಿಸಬೇಕಾದ ಅಂಶಗಳನ್ನು ಒತ್ತಿ ಹೇಳುತ್ತಾ ತಮ್ಮ ಉದ್ದೇಶವನ್ನೂ ವಿವರಿಸುವ ಬೌದ್ಧಿಕ ಹಿತಾಸಕ್ತಿಯನ್ನೂ ಒಳಗೊಂಡಿದೆ. ಹಾಗಾಗಿ ಜೀವಿಯ ವಿಕಾಸದ ಗುಟ್ಟಿನ ಸಂಕೇತವನ್ನು ಒಡೆದು ವಿವರಗಳಾಗಿಸಿ ರೋಮಾಂಚನವಾದ ಸಂಶೋಧನೆಗಳ ವಿವರಗಳೊಂದಿಗೆ ಚರ್ಚಿಸುವ ಸೊಗಸು ಈ ಪುಸ್ತಕದ್ದು.
ಮೂಲತಃ ಲೇಖಕರು ಆನುವಂಶಿಕ ಚರಿತ್ರೆಯ ಆಸಕ್ತಿಯನ್ನೂ ಇಟ್ಟುಕೊಂಡವರು ಆದ್ದರಿಂದ ಇಡೀ ಭೂಮಂಡಲದ ಮಾನವ ಸಂಕುಲದ ವೈವಿಧ್ಯದ ನೈಸರ್ಗಿಕತೆಯ ವಿವರಗಳನ್ನೂ ವಿಶೇಷವಾಗಿಸಿ ಕೊಟ್ಟಿದ್ದಾರೆ. ಹಾಗಾಗಿ ಅದರ ಸಂಕೀರ್ಣ ಹಾಗೂ ಸೈದ್ಧಾಂತಿಕ ಮಾಹಿತಿಗಳ ಅರ್ಥಪೂರ್ಣ ಚರ್ಚೆಯ ಪುಟಗಳು ಇಲ್ಲಿವೆ. ಇಡೀ ಮಾನವ ಡಿಎನ್‌ಎ (DNA) ಹಾಗೂ ರೋಗಗಳು, ಅವುಗಳ ವಿಶದವಾದ ಸಂಬಂಧಗಳನ್ನೂ ನಿರ್ದಿಷ್ಟ ಸಂಗತಿಗಳೊಂದಿಗೆ ವಿವರಿಸುತ್ತಾರೆ. ಮಾನವ ಜೀನೊಮ್ ಯೋಜನೆಯಲ್ಲಿ ನೇರ ಸಂಪರ್ಕದಿಂದಾಗಿ ಅವರ ಮಾಹಿತಿಯುತ ರೋಮಾಂಚಕ ಸಂಗತಿಗಳು ಅನಾವರಣಗೊಂಡಿವೆ.
ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿಯೇ ಗುರುತಿಸಲಾದ ದೇಹದಲ್ಲಿ ಎಲ್ಲಾದರೂ ಕಪ್ಪುಛಾಯೆ ಬಿಡುವ (Alkaptonuria) ವಿಚಿತ್ರವನ್ನು ಮಗುವೊಂದರ ಡಯಾಪರ್ ನಿಂದ ತರ್ಕಿಸಿ ಆನುವಂಶಿಕ ಅನುಮಾನಗಳನ್ನು ಅರ್ಥಪೂರ್ಣ ವೈಜ್ಞಾನಿಕ ವಿವರಗಳನ್ನು ಕಟ್ಟುವ ನೈಪುಣ್ಯತೆಯ ವಿವರಗಳನ್ನು ಪುಸ್ತಕವನ್ನು ಓದಿಯೇ ಆನಂದಿಸಬೇಕು. ಹಾಗೆಯೇ ಒಂದೇ ಓದಿಗೆ ದಕ್ಕುವ ಕಷ್ಟವನ್ನೂ ತುಂಬಿಕೊಂಡ ನೂರಾರು ಉದಾಹರಣೆಯ ವಿವರಗಳ ಪುಟ್ಟ ಗ್ರಂಥ ಇದು.
ಮಕ್ಕಳ ಹಣೆಯ ಬರಹವನ್ನು -ಆರೋಗ್ಯ -ಹಾಗೂ ಆನುವಂಶಿಯತೆಯ ಹಿನ್ನೆಲೆಯಲ್ಲಿ ಬರೆಯುವುದು ಸಾಧ್ಯವೇ? ಅದನ್ನೂ ನಮ್ಮ ಮಕ್ಕಳ ಜೀನೋಮಿನ ಸಂರಚನೆಯಾಗಿಸಿ (Writing The Genomes of Our Children) ತುಸು ಕ್ಲಿಷ್ಟವಾದ ಭಾಷೆಯಲ್ಲೇ ವಿವರಿಸಿದ್ದಾರೆ. ಭಯ, ರೋಮಾಂಚನ, ಆತಂಕ, ಬಯಕೆ, ವ್ಯಾಮೋಹ ಎಲ್ಲವನ್ನೂ ಒಂದೇ ಕಥಾನಕದಲ್ಲಿ ಒದಗಿಸಬೇಕಾದರೆ ಅದು ಆನುವಂಶಿಕ ಸಂಬಂಧಗಳಲ್ಲಿ ಮಾತ್ರವೇ ಸುಲಭವೇನೋ. ನಾವು ಏನೆಲ್ಲಾ ಸಾಧಿಸಿದ ದುರಹಂಕಾರ ಅಥವಾ ಮಾನವರ ಮದಕ್ಕೆ ಪ್ರತಿರೋಧದಂತೆ ಕಾಣುವ ಜೀವಿ ವೈಜ್ಞಾನಿಕ ವೈರುಧ್ಯಗಳ ಫಲಿತಗಳನ್ನು ಓದುವ ಕಷ್ಟ-ಸುಖ ಈ ಪುಸ್ತಕದ ಅದ್ಭುತ.
ಮುಗಿಸುವ ಮುನ್ನ ಒಂದು ಸಂದೇಶದಂತೆ ಅದೆಂತಹಾ ದೊಡ್ಡ ಮಾತನ್ನು ಪ್ರೊ. ಡೇವಿಡ್ ಹೇಳಿದ್ದಾರೆ ಎಂದರೆ If there is any single message in this book, it is that we must truly understand how the genetic differences among the billions of people on earth influence their lives and health before we select the genomes of our children. That is our challenge, and it is our obligation. And the time to start is now. ನಮ್ಮ ಮಕ್ಕಳ ಭವಿಷ್ಯತ್ತನ್ನು ನಿರ್ದೇಶಿಸುವ ಕನಸಿನಲ್ಲಿ ಭೂ ಮಂಡಲವನ್ನು ಆವರಿಸಿರುವ ಇಡೀ ಮಾನವ ಕುಲವು ತಿಳಿಯುವಂತಹಾ ಮಹತ್ವದ ಎಚ್ಚರವನ್ನೂ ನೀಡಿದ್ದಾರೆ. ಆನುವಂಶಿಕ ನಿರ್ಧಾರಗಳ ಹಿಂದಿರುವ ರೋಚಕ ಆಯ್ಕೆಯಲ್ಲಿ ನಿಸರ್ಗದ ಜಾಣತನವನ್ನು ಅದೆಷ್ಟು ಮೆಚ್ಚಿದರೂ ಸಾಲದು.
(ಪ್ರಸ್ತತ ಪುಸ್ತಕವನ್ನು ಯೇಲ್ ವಿಶ್ವ ವಿದ್ಯಾಲಯ ಪ್ರಕಟಿಸಿದೆ. ಇದರ ಬೆಲೆ 1795 ರುಪಾಯಿಗಳು ತುಂಬಾ ದುಬಾರಿಯೇ ಆದ ಪುಸ್ತಕ (https://www.amazon.in/End-Genetics-Designing-Humanitys-DNA/dp/0300219393 ) ಅಮೆಜಾನ್ ನಲ್ಲಿ ಕೊಳ್ಳಬಹುದು ಅಥವಾ ಅಂತರ್ಜಾಲದಲ್ಲಿ ಹುಡುಕಿಯೂ ಓದಬಹುದು.)
ಡೇವಿಡ್ ಗೋಲ್ಡ್ ಸ್ಟೈನ್ (David B. Goldstein ) ಅವರು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಜೀನೊಮಿಕ್ ವೈದ್ಯಕೀಯ ಕೇಂದ್ರದ ಸ್ಥಾಪಕ ನಿರ್ದೇಶಕರು. ಮಾನವ ಸಮುದಾಯಗಳ ಆನುವಂಶಿಕ ಚರಿತ್ರೆಯಲ್ಲಿಯೂ ಹಾಗೂ ಭವಿಷ್ಯದ ಜೆನೆಟಿಕ್ ವಿಷಯಾಧಾರಿತ ಸಂಶೋಧನೆಗಳಲ್ಲಿಯೂ ಆಸಕ್ತಿ ಹಾಗೂ ಪ್ರಭುತ್ವ ಹೊಂದಿರುವ ಪ್ರೊ. ಡೇವಿಡ್, ತಮ್ಮ ವಿದ್ಯಾರ್ಥಿಯ ಸಂಶೋಧನಾಸಕ್ತಿಯ ಮೂಲಕ ಭಾರತೀಯ ಮಾನವ ಸಂಕುಲದ ಅಧ್ಯಯನವನ್ನೂ ದಾಖಲಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಆಕ್ಸ್ ಪರ್ಡ್ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪಡೆದ ಡಾ. ಡೇವಿಡ್ ರಿಚ್ (David E. Reich) 2009 ರ ಸೆಪ್ಟೆಂಬರ್‌ನಲ್ಲಿ ”ಭಾರತೀಯ ಜನಸಂಖ್ಯಾ ಚರಿತ್ರೆಯ ಪುನಾರಚನೆ” (Reconstructing Indian Population History, Nature. 2009 September 24; 461(7263): 489–494. doi:10.1038/nature08365) ಎಂಬ ಸಂಶೋಧನಾ ಲೇಖನವನ್ನು ಪ್ರಕಟಿದ್ದಾರೆ. ಅದೊಂದು ಅತ್ಯಂತ ಆಸಕ್ತಿಯಾದ ಹಾಗೂ ಹಿರಿದಾದ ಕಥೆಯೇ! ಸಾಧ್ಯವಾದರೆ ಮುಂದೊಮ್ಮೆ ಅದನ್ನೂ ನೋಡೋಣ. ಹೀಗೆ ಜಗತ್ತಿನ ಮಾನವೀಯ ಸಂಬಂಧಗಳನ್ನು ಆನುವಂಶಿಕ ವಿಜ್ಞಾನದ ಅರಿವಿನಿಂದ ಚರಿತ್ರೆಯನ್ನು ಕಟ್ಟುತ್ತಿರುವ ಪ್ರಮುಖರಲ್ಲಿ ಮಹತ್ವದ ಲೇಖಕರು ಡೇವಿಡ್ ಗೋಲ್ಡ್ ಸ್ಟೈನ್.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್
Thank you for introducing another interesting Genetics book and also an interesting research article…