ಇದೇ ವರ್ಷದ ಕಳೆದ ತಿಂಗಳು ಜುಲೈ, ನಮ್ಮ ಭೂಮಿಯು ಹಿಂದೆಂದೂ ಕಂಡಿರದ ಉಷ್ಣತೆಯನ್ನು ಅನುಭವಿಸಿದೆ. ಈವರೆಗಿನ ದಾಖಲೆಗಳಲ್ಲೇ ಅತ್ಯಂತ ಹೆಚ್ಚು ಶಾಖವನ್ನು ದಾಖಲಿಸಿದ ತಿಂಗಳು ಜುಲೈ. ಭೂಮಿಯು ಒಟ್ಟಾರೆ ಸರಾಸರಿ ಉಷ್ಣತೆಗಿಂತಾ 1.2 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚು ಶಾಖವು ಅನೇಕ ಕಂಡರಿಯದ ಬದಲಾವಣೆಗೆ ಖಂಡಿತಾ ಮುನ್ನುಡಿ ಬರೆಯುತ್ತಿರುವ ಹಾಗಿದೆ. ಭೂಮಿಯ ಉತ್ತರಾರ್ಧ ಗೋಳವಂತೂ ತೀವ್ರವಾದ ಅಘಾತಕ್ಕೆ ಒಳಗಾಗಿದೆ. ಜುಲೈ ಸಾಮಾನ್ಯವಾಗಿ ಅತ್ಯಂತ ಉಷ್ಣತೆಯ ತಿಂಗಳು ಎಂಬುದೇನೋ ನಿಜ ಆದರೆ ಈ ವರ್ಷದ ದಾಖಲೆಯು ಹಿಂದಿನ ಎಲ್ಲಾ ದಾಖಲೆಗಳನ್ನೂ ದಾಟಿದೆ.
ಹಿಂದೆ 1850ರಲ್ಲಿ ಹೆಚ್ಚಿನ ಉಷ್ಣವನ್ನು ಅನುಭವಿಸಿತ್ತು. ಆದರೆ ಈ ವರ್ಷದ ತಾಪಮಾನವು ಹೊಸತೊಂದು ಅನುಭವಕ್ಕೆ ನಾಂದಿ ಹಾಡಿದೆ. ಏನೆಂದರೆ ಇದೀಗ ಅತ್ಯಂತ ದೀರ್ಘವಾದ ಹೆಚ್ಚಿನ ತಾಪಮಾನದ ದಿನಗಳನ್ನು ಕಾಣುತ್ತಿರುವುದು ಕೂಡ ಅನುಭವಕ್ಕೆ ಬಂದಿದೆ. ಇದು ಆತಂಕಕಾರಿಯಾದ ಸಂಗತಿ ಎಂಬುದು ಹವಾಮಾನ ತಜ್ಞರ ಅಭಿಪ್ರಾಯ. ಬರ್ಕ್ಲೀ ಅರ್ಥ್ (Berkeley Earth) ಎಂಬ ಕ್ಯಾಲಿಫೋರ್ನಿಯಾದ ಒಂದು ಸಂಸ್ಥೆಯ ಪ್ರಕಾರ ಈ ವರ್ಷದ ಜುಲೈ ಹಿಂದಿನ ಎಲ್ಲಾ ಜುಲೈ ತಿಂಗಳುಗಳ ಶಾಖದ ಸರಾಸರಿಗಿಂತಾ ಸುಮಾರು 1.54 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿ ದಾಖಲಿಸಿದೆ. ಅನೇಕ ಕಡೆಗಳಲ್ಲಿ ತೀವ್ರವಾದ ಬಿಸಿಗಾಳಿಯ ಅಲೆಗಳು ಅಪ್ಪಳಿಸಿವೆ. ಸಾವಿರಾರು ಸಾವುಗಳಿಗೆ ಕಾರಣವಾಗಿದೆ.
ಭಾರತ ದೇಶವೂ ಸೇರಿದಂತೆ ಉತ್ತರಾರ್ಧ ಗೋಳದ ಅನೇಕ ರಾಷ್ಟ್ರಗಳ ತಾಪಮಾನವು ಆತಂಕಕಾರಿಯಾದ ಮಟ್ಟವನ್ನು ದಾಖಲಿಸಿದ್ದು ಸಾವಿರಾರು ಸಾವುಗಳಿಗೆ ಕಾರಣವಾಗಿದೆ. ದಕ್ಷಿಣ ಯೂರೋಪು, ಚೀನಾಗಳಲ್ಲಿ ಉಷ್ಣತೆಯ ಮಟ್ಟವು 50 ಡಿಗ್ರಿ ಸೆಲ್ಸಿಯನ್ನು ಮುಟ್ಟಿದ್ದು, ದೀರ್ಘಕಾಲದ ಅನುಭವಕ್ಕೂ ಕಾರಣವಾಗಿವೆ. ಕೆಲವೆಡೆಗಳಲ್ಲಿ, ಮುಖ್ಯವಾಗಿ ಉತ್ತರ ಮೆಕ್ಸಿಕೊ, ಅಮೆರಿಕದ ಕೊಲರಾಡೊ, ಅರಿಜೊನಾ ಮುಂತಾದೆಡೆ, 32.2೦C ಗಿಂತಾ ಕಡಿಮೆಯಾಗದೆ ದೀರ್ಘಕಾದ ತಾಪಮಾನ ಅನುಭವಕ್ಕೆ ತಟ್ಟಿದೆ. ತೀವ್ರ ಶೀತವನ್ನೇ ಅನುಭವಿಸುವ ಯೂರೊಪು. ಅಮೆರಿಕಾಗಳಲ್ಲೇ ಸುಮಾರು 10ಕೋಟಿ ಜನರು ತಾಪಮಾನದ ಎಚ್ಚರಿಕೆಯಲ್ಲಿ ಜೀವನವನ್ನು ಅನುಭವಿಸಬೇಕಾಯಿತು. ಚೀನಾದಲ್ಲಿ ಹತ್ತಿಯ ಬೆಳೆಯು ಸಂಪೂರ್ಣ ಉಷ್ಣತೆಗೆ ಒಳಗಾಗಿ ನಷ್ಟಕ್ಕೆ ಕಾರಣವಾಯಿತು. ಇದರಿಂದಾಗಿ ಮುಖ್ಯವಾಗಿ ಈ ಮೂರೂ ನೆಲದ ಮೇಲಿನ ಶಾಖದ ಪರಿಣಾಗಳನ್ನು ಮುಂದಾಗುವ ಪ್ರಭಾವಗಳನ್ನು ಅರಿಯಲು ಜಾಗತಿನ ಹವಾಮಾನ ಗುಣಲಕ್ಷಣಗಳ ಉಪಕ್ರಮವೊಂದು World Weather Attribution initiative) ವಿವಿಧ ಅಂಶಗಳನ್ನು ಕ್ರೋಢೀಕರಿಸಿ ನೋಡಿ ಇಂತಹದ್ದು ಚೀನಾದಲ್ಲಿ ಮಾತ್ರವೇ ಸುಮಾರು 250 ವರ್ಷಕ್ಕೊಮ್ಮೆ ಮಾತ್ರವೇ ಆಗಬಹುದಾಗಿದ್ದು, ಈ ವರ್ಷ ಯೂರೋಪ್, ಅಮೆರಿಕಾ ಕೂಡ ಆವರಿಸಿದ್ದು ದೊಡ್ಡ ಆತಂಕ ಎಂದೇ ಹೇಳಿದೆ.
ಭಾರತೀಯ ದಾಖಲೆಗಳನ್ನು ತಿಳಿದು ನಂತರ ಒಟ್ಟಾರೆಯ ಈ ಹವಾಮಾನ ಕೇಂದ್ರಿತ ಅಂಶಗಳತ್ತ ಕಡೆಯಲ್ಲಿ ಗಮನ ಹರಿಸೋಣ. ಭಾರತವು ಕೇವಲ 2023ರ ಜುಲೈ 23ರವರೆಗೆ 264 ಸಾವುಗಳನ್ನು ಹೆಚ್ಚಿನ ತಾಪಮಾನದಿಂದ ಅನುಭವಿಸಿತ್ತು. ಕಳೆದ ವರ್ಷ 2022ರಲ್ಲಿ ಕೇವಲ 33 ಸಾವುಗಳು ಸಂಭವಿಸಿದ್ದರೆ, 2021ರಲ್ಲಿ ಯಾವುದೇ ಸಾವು ಸಂಭವಿಸಿರಲಿಲ್ಲ. ಆದರೆ 2015ರಲ್ಲಿ ಸುಮಾರು 2000ಕ್ಕೂ ಹೆಚ್ಚು ಸಾವುಗಳು ಹೆಚ್ಚಿನ ತಾಪಮಾನದಿಂದ ಸಂಭವಿಸಿದ್ದವು. ಕಳೆದ ಒಂದು ದಶಕದಲ್ಲಿ (2012- ಜುಲೈ, 2023) ಭಾರತವು 11,2000ಕ್ಕೂ ಹೆಚ್ಚು ಸಾವುಗಳನ್ನು ಕೇವಲ ತಾಪಮಾನದ ಕಾರಣದಿಂದ ಕಂಡಿದೆ. ನಮ್ಮ ದೇಶದ ಉತ್ತರ ಪ್ರದೇಶ, ಬಿಹಾರ ರಾಜ್ಯಗಳು ಅತೀ ಹೆಚ್ಚಿನ ಉಷ್ಣತೆಯ ತೊಂದರೆಯನ್ನು ಅನುಭವಿಸುತ್ತಿವೆ. ಭಾರತದ ಹವಮಾನ ಇಲಾಖೆಯು ನಿರಂತರವಾಗಿ ಈ ರಾಜ್ಯಗಳಲ್ಲಿ ಎಚ್ಚರಿಕೆಯನ್ನು ನೀಡುತ್ತಲೇ ಇತ್ತು. ಉತ್ತರ ಪ್ರದೇಶ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳ ಕೆಲವು ಜಿಲ್ಲೆಗಳ ವ್ಯಾಪ್ತಿಯಲ್ಲಿ ತೀವ್ರವಾದ ಅನುಭವವಾಗಿದೆ. ದಕ್ಷಿಣದ ರಾಜ್ಯಗಳೂ ಸಹಾ ವಿಪರೀತ ಸೆಕೆ ಹಾಗೂ ಬಿಸಿಲನ್ನು ಅನುಭವಿಸಿವೆ.
ವಾತಾವರಣದ ಗಾಳಿಯ ಉಷ್ಣಾಂಶವು 34 ಡಿಗ್ರಿ ಇದ್ದು ಹೆಚ್ಚಿನ ತೇವಾಂಶವು ಇದ್ದಲ್ಲಿ ಮಾನವರ ಹೃದಯದ ಬಡಿತದ ಮೇಲೆ ಅಡ್ಡ ಪರಿಣಾಮವನ್ನು ಉಂಟುಮಾಡುವುದು. ಹೃದಯದ ನಾಳಗಳು ತೀವ್ರ ಒತ್ತಡಕ್ಕೆ ಒಳಗಾಗಿ ಒಟ್ಟಾರೆಯ ಹೃದಯದ ಆರೋಗ್ಯಕ್ಕೆ ಮಾರಕವಾಗುವುದು. ಅದರಲ್ಲೂ ಕೆಲವೊಂದು ಅಧ್ಯಯನಗಳ ವರದಿಯಂತೆ ದೇಹದ ಉಷ್ಣಾಂಶವು ಏರುವುದಕ್ಕೆ ಮುನ್ನವೇ ವಾತಾವರಣದ ಉಷ್ಣತೆಯು ಕಾರ್ಡಿಯೋವ್ಯಾಸಿಕ್ಯೂಲಾರ್ ಒತ್ತಡವನ್ನು ಹೆಚ್ಚಿಸಬಲ್ಲದೆಂದು ಅರಿಯಲಾಗಿದೆ. ಹಾಗಾಗಿ ದೇಹವು ಹೆಚ್ಚಿನ ಉಷ್ಣವನ್ನು ತಡೆದುಕೊಳ್ಳಲಾರದೆ ಒತ್ತಡವನ್ನು ಅನುಭವಿಸುತ್ತದೆ. ಕೆಲವೊಮ್ಮೆ ಉಸಿರಾಟದ ತೊಂದರೆಯನ್ನೂ, ದೇಹದ ನಿಶಕ್ತಿಯನ್ನೂ ತರುವಲ್ಲಿ ವಾತಾವರಣದ ತಾಪಮಾನ ಪರಿಣಾಮವನ್ನು ಬೀರುತ್ತದೆ.
ವಾತಾವರಣದ ಉಷ್ಣತೆಯ ಹೆಚ್ಚಳಕ್ಕೆ ಮೂಲತಃ ಹಸಿರು ಮನೆಯನ್ನು ಉಂಟುಮಾಡುವ ಅನಿಲಗಳ ಸೋರಿಕೆಯಾಗಿದ್ದು, ಮತ್ತು ಅವುಗಳಲ್ಲಿ ಹೆಚ್ಚಿನ ಶಾಖವು ಸಾಗರಗಳಿಗೆ ಹೋಗಿದ್ದರೂ, ಭೂಮಿಯ ಮೇಲಿನ ತಾಪಮಾನವು ಸಮುದ್ರದ ಮೇಲ್ಮೈಗಿಂತ ಬಿಸಿಯಾಗಿರುತ್ತದೆ ಮತ್ತು ವೇಗವಾಗಿ ಏರುತ್ತದೆ. ಭೂಮಿಯ ಭೂ ಮೇಲ್ಮೈನ ಹಲವು ಭಾಗಗಳು ಈಗಾಗಲೇ ಕನಿಷ್ಠ ಒಂದು ಋತುವಿನಲ್ಲಿ 1.5 °C ಗಿಂತ ಹೆಚ್ಚು ಬೆಚ್ಚಗಾಗಿವೆ ಮತ್ತು ಕಳೆದ ತಿಂಗಳು ಹಲವಾರು ಸ್ಥಳಗಳಲ್ಲಿ ತಾಪಮಾನವು ಜುಲೈನಲ್ಲಿ ಸರಾಸರಿಗಿಂತ 8°C ಗಿಂತ ಹೆಚ್ಚಾಗಿರುವುದು ಹಲವು ಭಾಗಗಳಲ್ಲಿ “ಹಾಟ್ ಸ್ಪಾಟ್”ಗಳನ್ನು ಗುರುತಿಸಬಹುದಾಗಿದೆ.
ಮತ್ತೂ ಹೆಚ್ಚಿನ ಕಡೆಗಳಲ್ಲಿ ಹೆಚ್ಚಿನ ಉಷ್ಣತೆಯ ದಿನಗಳನ್ನು ಕಾಣಲಾಗಿದ್ದು ಸುಮಾರು ಒಂದು-ಒಂದೂವರೆ ತಿಂಗಳಿಗಿಂತಾ ಹೆಚ್ಚು ಕಾಲ ತಾಪಮಾನದ ಹೆಚ್ಚಿನ ದಿನಗಳನ್ನು ಅನೇಕ ಭಾಗಗಳು ಅನುಭವಿಸಿವೆ. ಈ ಹಿನ್ನೆಲೆಯಲ್ಲಿ ಇಂಪೀರಿಯಲ್ ಕಾಲೇಜಿನ ಹವಮಾನ ತಜ್ಞರ ತಂಡವು ಅಧ್ಯಯನವನ್ನು ನಡೆಸಿದ್ದು ಅದರ ಕೆಲವು ಪ್ರಮುಖ ಅಂಶಗಳು ಹೀಗಿವೆ.
ಶಾಖದ ಅಲೆಗಳು ಮಾರಣಾಂತಿಕವಾದ ನೈಸರ್ಗಿಕ ಅಪಾಯಗಳಲ್ಲಿ ಒಂದು. ಪ್ರತಿ ವರ್ಷವೂ ಶಾಖ-ಸಂಬಂಧಿತ ಕಾರಣಗಳಿಂದ ಸಾವಿರಾರು ಜನರು ಸಾಯುತ್ತಿದ್ದಾರೆ. ಆದಾಗ್ಯೂ, ಶಾಖದ ಅಲೆಯ ಸಂಪೂರ್ಣ ಪರಿಣಾಮವು ಅಪರೂಪವಾಗಿ ತಿಳಿಯುತ್ತದೆ. ಅನೇಕ ಸ್ಥಳಗಳಲ್ಲಿ ಶಾಖ-ಸಂಬಂಧಿತ ಸಾವುಗಳ ಉತ್ತಮ ದಾಖಲೆಯ ಕೊರತೆಯಿದೆ.
ಹಿಂದಿನ ಹವಾಮಾನ ಅಂದಾಜುಳಂತೆ ಮತ್ತು IPCC ವರದಿಗಳಿಂದ ಏನನ್ನು ನಿರೀಕ್ಷಿಸಲಾಗಿದೆಯೋ ಅದಕ್ಕೆ ಅನುಗುಣವಾಗಿ ಈ ಘಟನೆಗಳೇನೂ ಅಪರೂಪವಲ್ಲ. ಹಾಗಾಗಿ ಮಾನವ ಚಟುವಟಿಕೆಗಳಿಂದ ಉಂಟಾದ ತಾಪಮಾನ ಏರಿಕೆಯ ಪರಿಣಾಮವಾಗಿ ಉತ್ತರ ಅಮೆರಿಕಾ, ಯುರೋಪ್ ಮತ್ತು ಚೀನಾ ಕಳೆದ ವರ್ಷಗಳಲ್ಲಿ ಹೆಚ್ಚಾಗಿ ಶಾಖದ ಅಲೆಗಳನ್ನು ಅನುಭವಿಸಿವೆ, ಆದ್ದರಿಂದ ಈ ಹವಾಮಾನದ ಬದಲಾವಣೆಯ ಪರಿಸ್ಥಿತಿಯಲ್ಲಿ ಪ್ರಸ್ತುತ ಶಾಖದ ಅಲೆಗಳು ಅಪರೂಪವಲ್ಲ, (ಇದೊಂದು ಆತಂಕಕಾರಿಯ ಬೆಳವಣಿಗೆಯೇನೋ?)
ಮಾನವರ ಚಟುವಟಿಕೆಯ ನಿಯಂತ್ರಣವಿದ್ದರೆ ಈ ಉಷ್ಣದ ಅಲೆಗಳು ಕಡಿಮೆ. ಎರಡು-ಎರಡೂವರೆ ಶತಮಾನಗಳಿಗೆ ಒಮ್ಮೆ ಮಾತ್ರವೇ ಕಾಣವು ಈ ಅಲೆಗಳು ಪ್ರಸ್ತುತ ಪರಿಸ್ಥಿತಿಯಲ್ಲಿ 10-15 ವರ್ಷಕ್ಕೆ ಕಾಣಲಿವೆಯೇನೋ ಎಂಬ ಆತಂಕವು ನಮ್ಮ ಮುಂದಿದೆ. ಪ್ರಪಂಚವು ಪೆಟ್ರೋಲ್ ಮುಂತಾದ ಪಳೆಯುಳಿಕೆ ಇಂಧನಗಳನ್ನು ಸುಡುವುದನ್ನು ತ್ವರಿತವಾಗಿ ನಿಲ್ಲಿಸದ ಹೊರತು, ಈ ಘಟನೆಗಳು ಇನ್ನಷ್ಟು ಸಾಮಾನ್ಯವಾಗುತ್ತವೆ ಮತ್ತು ಪ್ರಪಂಚವು ಬಿಸಿಯಾದ ಮತ್ತು ದೀರ್ಘಾವಧಿಯ ಶಾಖದ ಅಲೆಗಳನ್ನು ಅನುಭವಿಸುತ್ತದೆ. ಕೈಗಾರಿಕಾ ಪೂರ್ವದ ಹವಾಮಾನಕ್ಕಿಂತ 2°C ಬೆಚ್ಚಗಿರುವ ಜಗತ್ತಿನಲ್ಲಿ ಪ್ರತಿ 2-5 ವರ್ಷಗಳಿಗೊಮ್ಮೆ ಇತ್ತೀಚಿನ ಶಾಖದ ಅಲೆಗಳು ಸಂಭವಿಸಲಿವೆ..
ಉತ್ತರಾರ್ಧಗೋಳವು ಹೆಚ್ಚಿನ ಶಾಖವನ್ನು ಅನುಭವಿಸುವ ಕ್ರಿಯೆಯಲ್ಲೂ ತೀರಾ ಉತ್ತರದ ಶೀತದ ನೆಲವು ಒಂದಷ್ಟು ಬಿಸಿಯನ್ನೂ ಮತ್ತದರಿಂದ ಒಂದಷ್ಟು ಲಾಭವನ್ನೂ ಅನುಭವಿಸುತ್ತದೆ. ಹಾಗಾಗಿ ತೀರಾ ದಕ್ಷಿಣದ ನಷ್ಟವು ಅಥವಾ ತೀರಾ ಉತ್ತರದ ಲಾಭವೂ ದೇಶ ದೇಶಗಳ ನಡುವಿನ ರಾಜಕೀಯದ ಅನುಗುಣವಾದ ನಿರ್ಣಯ ಹಾಗೂ ಅವಲಂಬನೆಯನ್ನೂ ಒಳಗೊಂಡಿರುತ್ತವೆ. ಇವೆಲ್ಲಕ್ಕೂ “ಕ್ಲೈಮೇಟ್ ಚೇಂಜ್” ಎಂಬುದು ನಮ್ಮ ಕೈಯಲ್ಲಿಲ್ಲ, ಎಲ್ಲವೂ ಕ್ಲೈಮೇಟ್‌ನದು ಎಂದು ತಿಪ್ಪೆ ಸಾರಿಸುವ ರಾಜಕೀಯ ಅನುಸಂಧಾನಗಳು ಹೆಚ್ಚು. ಹಾಗಾಗಿ ಈ ಬಿಸಿಯಲ್ಲಿ ಯಾರು ಕೈ ಸುಟ್ಟುಕೊಳ್ಳುತ್ತಾರೋ, ಯಾರು ಬೇಳೆ ಬೇಯಿಸಿಕೊಳ್ಳುತ್ತಾರೋ ಎನ್ನುವುದು ತೀರ್ಮಾನದ ಮಾತಲ್ಲ. ಬಿಸಿಯಂತೂ ಎಲ್ಲರನ್ನೂ ತಟ್ಟುವ ಸಂಗತಿಯೇ ಸೈ.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್
ಹೆಚ್ಚಿನ ಓದಿಗಾಗಿ
Zachariah, M et. al. 2023. Scientific Report – Northern Hemisphere Heat. Imperial College Report https://doi.org/10.25561/105549