You are currently viewing ಜಾರ್ಜ್ ಪೊಲ್ಯಾ ಮತ್ತು “HOW TO SOLVE IT?”

ಜಾರ್ಜ್ ಪೊಲ್ಯಾ ಮತ್ತು “HOW TO SOLVE IT?”

ಡಿಸೆಂಬರ್ 22 ರಂದು ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲು 2012 ರಿಂದ ಭಾರತ ಸರ್ಕಾರ ಘೋಷಿಸಿದೆ. ಅಂದು ಭಾರತದ ಶ್ರೇಷ್ಠ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಹುಟ್ಟಿದ ದಿನ. ಪ್ರತೀ ಬಾರಿ ರಾಮಾನುಜನ್ ಚಿತ್ರವನ್ನು ಹಂಚಿಕೊಂಡು ಹೌದು ಗಣಿತದ ದಿನ ಅನ್ನುವುದಕ್ಕೆ ಬದಲಾಗಿ, ಅದೇ ಸಂಖ್ಯಾ ಸಿದ್ಧಾಂತದಲ್ಲೂ ಕಾರ್ಯ ನಿರ್ವಹಿಸಿದ ಹಾಗೂ ಸಮಸ್ಯೆಗಳ ಪರಿಹಾರವನ್ನು ಗಣಿತೀಯವಾಗಿ ಕಟ್ಟಿಕೊಟ್ಟ ಹಂಗೇರಿಯ ಜಾರ್ಜ್ ಪೊಲ್ಯಾ ಅವರನ್ನು ಶ್ರೀನಿವಾಸ ರಾಮಾನುಜನ್ ಸ್ಮರಣೆಯಲ್ಲಿ ಪರಿಚಯಿಸಲು ಈ ಪುಟ್ಟ ಟಿಪ್ಪಣಿ. 
ಪೊಲ್ಯಾ ಹಂಗೇರಿಯ ಬುಡಾಪೆಸ್ಟ್ ನಲ್ಲಿ ಇದೇ ಡಿಸೆಂಬರ್ ತಿಂಗಳಲ್ಲೇ ಜನಿಸಿದವರು. 1887 ರ ಡಿಸೆಂಬರ್ ತಾರೀಖು 13 ರ ಇವರು ಹುಟ್ಟಿದ್ದು. ಅದೇ ವರ್ಷವೇ ಅಂದರೆ 1887ರಲ್ಲೇ ಇದೇ ಡಿಸೆಂಬರ್ ತಿಂಗಳಲ್ಲಿ 9 ದಿನಗಳ ತರುವಾಯು ನಮ್ಮ ಶ್ರೀನಿವಾಸ ರಾಮಾನುಜನ್ ಹುಟ್ಟಿದ್ದರು. ರಾಮಾನುಜನ್ ಅಲ್ಪಾಯು, ಆದರೆ ಪೊಲ್ಯಾ ದೀರ್ಘಾಯು, ಬರೋಬ್ಬರಿ 97 ವರ್ಷ 9 ತಿಂಗಳು ಬದುಕಿದ್ದರು. 1985ರ ಸೆಪ್ಟೆಂಬರ್ 7 ರಂದು ಪೊಲ್ಯಾ ಅವರು ತೀರಿಕೊಂಡರು. ಹಂಗೇರಿಯಲ್ಲಿ ಹುಟ್ಟಿ ಸ್ವಿಜರ್ಲ್ಯಾಂಡ್ ನಂತರ ಅಮೆರಿಕಾ ಪ್ರಜೆಯಾಗಿದ್ದವರು. ಕೊನೆಯ ದಿನಗಳನ್ನು ಅಮೆರಿಕಾದಲ್ಲಿ ಕಳೆದರು. ಸ್ಟ್ಯಾನ್ ಫೊರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದರು. ಪೊಲ್ಯಾ ಅವರ ಕೊಡುಗೆಗಳು ಅಪಾರ, ಗೂಗಲ್ ನಿಮ್ಮ ಬೆರಳಲ್ಲಿ ಇರುವುವಾಗ ಹುಡುಕುವುದೇನೂ ಕಷ್ಟವಲ್ಲ. ಹುಡುಕಾಟದ ಪ್ರೀತಿಯಷ್ಟೇ ಸಾಕು.
ಇವರೊಬ್ಬ ಅಪ್ರತಿಮ ಗಣಿತಜ್ಞ, ಇವರನ್ನು “ಸಮಸ್ಯೆಗಳ ಪರಿಹಾರಗಳ” ಪಿತಾಮಹಾ ಎಂದೇ ಕರೆಯಲಾಗುತ್ತದೆ. ಇವರ ಸರ್ವ ಶ್ರೇಷ್ಠ ಕೃತಿ “HOW TO SOLVE IT?” ಪರಿಹರಿಸುವುದು ಹೇಗೇ? ಎಂಬ ಈ ಗಣಿತದ ವ್ಯಾಖ್ಯಾನಗಳ ಪುಸ್ತಕ ಗಣಿತದಲ್ಲಿ ಮಾತ್ರವಲ್ಲ ಗಣಿತದನ್ನು ಬಳಸುವ ಎಲ್ಲಾ ಪ್ರಕಾರಗಳಲ್ಲೂ ಇದರ ಪ್ರಭಾವವು ತುಂಬಿದೆ. ನಮ್ಮ ಯಾವುದೇ ಸಮಸ್ಯೆಯನ್ನೂ ನಾವು ಮೊದಲು ಪರಿಹಾರಕ್ಕೆಂದು ನಮ್ಮ ಮನಸ್ಸನ್ನು ಮೊರೆ ಹೋಗುತ್ತೇವೆ. ಮನಸ್ಸಿನ ಆಳದ ಚಿಂತನೆಗಳು ಗಣೀತೀಯವಾಗಿ ಲೆಕ್ಕಾಚಾರ ಹಾಕಿಕೊಂಡು ಪರಿಹಾರದತ್ತ ಮುನ್ನುಗ್ಗುತ್ತೇವೆ. ಯಾವುದೇ ಸಮಸ್ಯೆಗಳಗೂ ಪರಿಹಾರದ ಮಾರ್ಗ ಮಾತ್ರ ಮನಸ್ಸು ಹಾಗೂ ಆಲೋಚನೆಗಳ ಮೂಲಕ ಹುಡುಕಾಟದ ವ್ಯಾಖ್ಯಾನ ತುಂಬಾ ದೀರ್ಘವಾದದ್ದು. ಪುಟ್ಟ ಟಿಪ್ಪಣಿಯಲ್ಲಿ ಅದು ಹೀಗೆದೆ. ಅದರ ಹೆಸರು ಹೀಗೆ ಎಂದು ಹೇಳ ಬಹುದೇ ವಿನಾಃ ಅದನ್ನು ಪುಟ್ಟ ಪುಟ್ಟ ವಾಕ್ಯಗಳಲ್ಲಿ ಕೊಡಲು ನನ್ನಿಂದ ಸಾಧ್ಯವೂ ಇಲ್ಲ, ನನಗಷ್ಟು ಯೋಗ್ಯತೆಯೂ ಇಲ್ಲ. ಖಂಡಿತಾ ಅದರಲ್ಲಿ ವಿವರಗಳನ್ನು ಓದಿ ಆನಂದಿಸುವ ಅವಕಾಶವನ್ನು ಮಾತ್ರ ಜಾಣರನದ ಆಸಕ್ತ ಮನಸ್ಸು ತಪ್ಪಿಸಿಕೊಳ್ಳಲು ಇಚ್ಚೆ ಪಡಲಾರದು. 
ಅವರ ಮಾತಿನಲ್ಲೇ ಸಮಸ್ಯೆಗಳ ಪರಿಹಾರವನ್ನು ಒಂದು ಗಂಟೆ ಧ್ಯಾನಸ್ಥರಾಗಿ ಕೇಳುವ ಮನಸ್ಸಿದ್ದರೆ, ಇಂದೇ ಈ ಮುಂದಿನ ಲಿಂಕ್ ಅನ್ನು ಬಳಸಿ. ಶ್ರೀನಿವಾಸ ರಾಮಾನುಜನ್ ಕೇವಲ 32 ವರ್ಷ ಬದುಕಿದ್ದರೆ ಪೊಲ್ಯಾ 97ರ ವರೆಗೂ ಚಿಂತನಶೀಲರಾಗಿದ್ದರು. ನಮ್ಮ ರಾಮಾನುಜನ್ ಅವರ ಹುಟ್ಟಿದ ದಿನದ ನೆನಪನಲ್ಲಿ ಅವರನ್ನು ಗೌರವಿಸಲು, ಪೊಲ್ಯಾ ಅವರ ಮಾತು ಕೇಳಿ ನಮ್ಮ ಶ್ರದ್ಧಾಂಜಲಿ ಸಲ್ಲಿಸೋಣ. ನಮ್ಮ ನಿಮ್ಮೆಲ್ಲರ ಗಣಿತದ ಪ್ರೀತಿಯನ್ನು ಉಳಿಸಿಕೊಳ್ಳೋಣ. 
ಲಿಂಕ್ ಇಲ್ಲಿದೆ https://www.youtube.com/watch?v=h0gbw-Ur_do&app=desktop 90ರ ಹರೆಯದ ಗಣಿತಜ್ಞರ ಮಾತು ಕೇಳಿ ಇಂದು ತೀರಾ ಎಳೆಯ ದಿನಗಳಲ್ಲೇ ಜೀವನ ಮುಗಿಸಿದ ನಮ್ಮ ರಾಮಾನುಜನ್ ನೆನಪಿಸಿಕೊಳ್ಳೋಣ.

— ಡಾ.ಟಿ.ಎಸ್.ಚನ್ನೇಶ್

Leave a Reply