You are currently viewing ಜಮೀನು ನಮ್ಮದೆನ್ನುವುದು ಹೇಗೆ?

ಜಮೀನು ನಮ್ಮದೆನ್ನುವುದು ಹೇಗೆ?

ಜಮೀನು ನಮ್ಮದು ಎನ್ನುವುದಕ್ಕೆ ಬಾಲ್ಯದ ಕುತೂಹಲವೊಂದು ಕಾಡುತ್ತಿತ್ತು. ನನಗೆ ನಮ್ಮ ಜಮೀನಿಗೆ ಹೋದ ಮೊದಲ ಅನುಭವ ಮನಸ್ಸಿನಲ್ಲಿ ಮಾಸದೆ ಕುಳಿತಿದೆ. ಆಗಿನ್ನೂ ನಾನು ಮೂರು-ನಾಲ್ಕು ವರ್ಷದವನಿರಬೇಕು, ಶಾಲೆಗಿನ್ನೂ ಸೇರಿರಲಿಲ್ಲ. ಅಮ್ಮ ಶಾಲೆಯಲ್ಲಿ ಶಿಕ್ಷಕಿಯಾಗಿ ಕಲಿಸುತ್ತಿದ್ದರು. ಅವರ ಜೊತೆ ಆಗಾಗ್ಗೆ ಶಾಲೆಗೆ ಹೋಗುತ್ತಿದ್ದದೇ ಹೊರತು, ಅದು ಬಿಟ್ಟರೆ ಇಲ್ಲ. ಒಂದು ದಿನ ಮುಂಜಾನೆಯೇ ಅಮ್ಮ –ಅಪ್ಪ ಮಾತಾಡಿಕೊಳ್ಳುತ್ತಿದ್ದರು. ಇವತ್ತೇ ಗದ್ದೆಗೆ ಹೋಗಿ ಬರೋಣ, ಮತ್ತೆ ಮಳೆ ಬಿದ್ದರೆ ಆಗುವುದಿಲ್ಲ, ಇತ್ಯಾದಿ. ಸರಿ ನನ್ನನ್ನೂ ಕರೆದುಕೊಂಡೇ ಹೋಗುವರೆಂಬ ನಂಬಿಕೆ ನನ್ನದು. ಅಂತೂ ಹೇಗೆ ಹೋದೆವು ಎಂಬುದರ ನೆನಪಂತೂ ಇಲ್ಲ.  ಸುಮಾರು ದೂರ ನಡೆಯಬೇಕಿದ್ದ ಜಮೀನು, ಈಗ ನೆನೆದರೆ ನಾನೂ ಆ ದಿನಗಳಲ್ಲಿ ಅಷ್ಟು ದೂರ ನಡೆದಿದದ್ದನೇ, ಅನ್ನಿಸುವುದುಂಟು. ಆದರೂ ಹೋದದ್ದು ಮಾತ್ರ ನಿಜ. ಮಂಡಕ್ಕಿ ಖಾರದ ಜೊತೆಗೆ ಬರ್ಫೀಯಂತಹ ಒಂದು ಸಿಹಿ ತಿಂಡಿ ನೆನಪಿಗೆ ಸಾಕ್ಷಿಯಾಗಿವೆ. ಗದ್ದೆಯು ಊರಿಂದ ಆಚೆಗೆ ಸುಮಾರು ಎರಡೂವರೆ ಕಿಮೀ ದೂರದಲ್ಲಿನ ನೆಲ. ಅದೊಂದು ಬೇಚಾರ ಗ್ರಾಮದ ಗಡಿಯಲ್ಲಿನ ಜಮೀನು. ಊರಿನ ಕುರುಹಿಗೆ ಇರುವ ಒಂದು ಪಾಳು ಬಿದ್ದ ಗುಡಿ. ಅಚ್ಚರಿ ಎನ್ನುವಂತೆ ವೈಷ್ಣವರಿಲ್ಲದ ಮಲೆನಾಡಿನ ಅಂಚಿನ ಊರಿನಲ್ಲಿ ತಿಮ್ಮಪ್ಪನ ಗುಡಿ!! ಸಾಲದಕ್ಕೆ ಅವನ ಬಂಟನಾಗಿ ಹನುಮಪ್ಪ ಬೇರೆ ಪಕ್ಕದಲ್ಲೇ. ಲಿಂಗಾಯಿತರೇ ಹೆಚ್ಚಿರುವ ಆಸು ಪಾಸಿನ ಜಮೀನಿನವರಿಂದ ವಿಭೂತಿಯ ಪೂಜೆ ಸಿಕ್ಕರೆ ತಿಮ್ಮಪ್ಪನದು ಪುಣ್ಯ. ನಾಮಕ್ಕೇನೂ ಇಲ್ಲವೇ ಇಲ್ಲ.

       ಈ ಜಮೀನು ನಮ್ಮದೆನ್ನುವುದು ಎಂದರೆ ಹೇಗೆ? ಆ ಎಳೆಯ ವಯಸ್ಸಿನಲ್ಲಿ ಭಾರೀ ಕುತೂಹಲದ ವಿಷಯ. ಮೊದಲ ಜಮೀನಿನ ಭೇಟಿಗೂ ಮತ್ತೆ ನಂತರದಲ್ಲಿ ಮತ್ತೊಮ್ಮೆ ಹೋದದ್ದಕ್ಕೂ ತುಂಬಾ ಅಂತರ. ಗದ್ದೆ ನಮ್ಮದೆನ್ನಲು, ಹಾಗಂತ ಅನಿಸುವುದಕ್ಕೆ ಸಾಕಷ್ಟು ಗಲಿಬಿಲಿಯಾಗುತ್ತಿತ್ತು. ನನ್ನ ಹತ್ತಿರವಿದ್ದ ಪುಸ್ತಕಗಳು, ಸ್ಲೇಟು, ಚೀಲ ಕೊಡೆ ನನ್ನದೆನ್ನಲು, ಕಾರಣ ಬೇಕಾಗುತ್ತಿರಲಿಲ್ಲ. ಅವು ನನ್ನ ಹತ್ತಿರವೇ ಇದ್ದವು, ಮನೆಯೂ ನಮ್ಮದೆನ್ನಲು ದಿನವೂ ನಾವೂ ಅಲ್ಲೇ ಇರುತಿದ್ದೆವು. ಗದ್ದೆ ನಮ್ಮದೆನ್ನಲು, ವರ್ಷಕ್ಕೊಮ್ಮೆ ಬತ್ತದ ರಾಶಿ ಪೂಜೆಗೆ ಹೋಗಿ ಇಡೀ ರಾಶಿಯನ್ನು ಅಳೆಯುವಾಗ ಒಂದು ಸೇರು ಈ ಕಡೆಗೆ ಮತ್ತೊಂದು ಆಕಡೆಗೆ ಅಳೆದು ಅದರಲ್ಲಿ ಒಂದು ನಮ್ಮದೆನ್ನುತ್ತಿದ್ದುದು ಬಿಟ್ಟರೆ ಬೇರೇನೂ ಮತ್ತೇನೂ ಗೊತ್ತಾಗುತ್ತಿರಲಿಲ್ಲ. ಅದೇಕೇ ನಮ್ಮದಾದರೆ ಒಂದು ರಾಶಿ ಮಾತ್ರ ನಮ್ಮದು. ಗೊಂದಲಗಳು ಮತ್ತೇ ಏಳುತ್ತಿದ್ದವು. ಮನೆಯಲ್ಲಿನ ಮಾತುಗಳಿಂದ ಅರಿತದ್ದು. ಸಿದ್ದಪ್ಪ ನಮ್ಮ ಜಮೀನು ಮಾಡುವ ರೈತ, ಒಂದು ರಾಶಿ ಅವನದ್ದು. ಒಂದು ನಮ್ಮದು. ಆಗಲೂ ತಿಳಿಯುತ್ತಿರಲಿಲ್ಲ. ಜಮೀನು ನಮ್ಮದೆ? ಮತ್ತದೆ ಪ್ರಶ್ನೆ ಮೂಡುತ್ತಿತ್ತು. ಗದ್ದೆಯನ್ನು ನನ್ನದೆನ್ನುವ ಗ್ರಹಿಕೆಯ ಒಳಗೆ ತರಲು, ಕಷ್ಟವಾಗುತ್ತಿತ್ತು. ಮನೆಯು ನಮ್ಮದೆನ್ನುವ ಹಾಗೆ, ಶಾಲೆ ನಮ್ಮದೆನ್ನುವ ಹಾಗೆ, ಮನೆಯೊಳಗಿನ ಸಾಮಾನು ಸರಂಜಾಮುಗಳು ನಮ್ಮದೆನ್ನುವ ಹಾಗೆ ಜಮೀನು, ನಮ್ಮದೆನ್ನುವುದು ನನ್ನೊಳಗಣ ಗ್ರಹಿಕೆಗೆ ಸಿಗುತ್ತಲೇ ಇರಲಿಲ್ಲ.

       ಮನೆಯಲ್ಲಿ ಒಂದು ಹಳೆಯ ಟ್ರಂಕು, ಇರುವುದರಲ್ಲೇ ಅದೇ ಹೊಸತು. ಅದಕ್ಕೊಂದು ಹಿತ್ತಾಳೆಯ ಬೀಗ. ಅದರ ಕೀಲಿ ಸದಾ ನನ್ನ ಅಮ್ಮನ ಕೊರಳಲ್ಲಿನ ದಾರಕ್ಕೆ ಬಗಿದಿದೆ. ಕಷ್ಟ ಪಟ್ಟು ಬಗ್ಗಿ ನೆಲಕ್ಕೆ ತಾಗುವಂತೆ ಕುಳಿತು ನೆಲದ ಮೇಲೆ ಹಾಯಾಗಿದ್ದ ಟ್ರಂಕಿನ ಮುಚ್ಚಳ ತೆರೆಯುವುತ್ತಿದ್ದುದೇ ನನ್ನ ಅಮ್ಮ.  ಹಾಗೆ ತೆರೆಯುತ್ತಿದ್ದುದೇ ಅಪರೂಪ. ನಮ್ಮ ಇದುರು ಮನೆಯಲ್ಲಾದರೆ ಒಂದು ಟ್ರಜರಿಯೇ ಇತ್ತು. ಅದರ ಬಾಗಿಲು ತೆಗೆದೊಡನೆ ಒಳಮುಖದಲ್ಲಿ ಲಕ್ಷ್ಮಿಯ ಮುಖವಿರುವ ಚಿತ್ರ ಪಟ. ಅದಕ್ಕೆ ಅವರ ಮನೆಯಲ್ಲಿ ದಿನವೂ ಪೂಜೆ!! ಅದೊಂದು ಮಾಯಾ ಪೆಟ್ಟಿಗೆ. ಅದರೊಳಗಿಂದ ದುಡ್ಡು ಸುರಿವ ನಂಬಿಕೆ ಮನಸ್ಸನ್ನು ಆವರಿಸಿತ್ತು. ನನ್ನ ಮನೆಯ ಟ್ರಂಕೂ ಅವರ ಮನೆಯ ತಿಜೋರಿ ಒಂದಕ್ಕೊಂದು ಪರ್ಯಾಯವಾಗಿದ್ದಂತೆ ನನಗೆ ಅನಿಸುತ್ತಿತ್ತು.  ಏನೋ ಅದರೊಳಗಿನ ಅದ್ಭುತಗಳಿಗೆ, ಎಂತದೋ ಭಾರಿ ಬೆಲೆ ಎನ್ನುವ ಅಚಲ ವಿಶ್ವಾಸ. ಅದಕ್ಕೆ ಕಾರಣವಿತ್ತು. ನಮ್ಮ ಮನೆಯ ಮಾಯಾ ಪೆಟ್ಟಿಗೆಯಲ್ಲಿ ವಿಚಿತ್ರವಾದ ಪರಿಮಳ. (ಅದು ನ್ಯಾಫ್ತಲೀನ್ ಗುಳಿಗೆಯದ್ದು-ತಿಳಿದದ್ದು, ದೊಡ್ಡವನಾದ ಬಳಿಕವಷ್ಟೆ) ಕರಗುತ್ತಿರುವ ಫೈಲು. ಮಾಸಲು ಬಣ್ಣದ ವಿಚಿತ್ರ ಆಕಾರದ ಅಕ್ಷರಗಳಲ್ಲಿ ಬರೆದ ಒಂದು ಅಂಚಿಗೆ ರೂಪಾಯಿಯನ್ನೇ ಮುದ್ರಿಸಿದಂತಹ ಕಾಗದ. ಅದೊಂದು ಮಹತ್ವದ ದಾಖಲೆಯೆಂದೂ ನಿಧಾನವಾಗಿ ತಿಳಿಯತೊಡಗಿತು. ಜಮೀನು ನಮ್ಮದೆನ್ನುವ ಕಾರಣಕ್ಕೆ ಉತ್ತರವಾಗಿ ಟ್ರಂಕನ್ನು ಸೇರಿದ ಮಾಸಲು ಬಣ್ಣದ ರೂಪಾಯಿಯ ಹೊತ್ತ ಹಳೆಯ ಪೇರ‍್ರು. ಅದನ್ನು ಹಿಡಿದರೆ ಅದೇನೋ ಒಳಗಿನ ಅರಿವಿಗಿಂತಲೂ ಅದನ್ನು ಹಿಡಿದಾಗ ಅದೆಂತದೋ ವಿಚಿತ್ರ ಅನುಭವಕ್ಕೆ ಅಮ್ಮ ಅಪ್ಪನ ಮಾತುಗಳು ಕಾರಣವಾಗಿದ್ದಿರಬೇಕು. ಜಮೀನು ನಮ್ಮದೇ ಎನ್ನಲು ಈ ಪೇಪರ್ ಒಂದು ದಾಖಲೆಯೆಂದೂ ನಂತರದ ದಿನಗಳಲ್ಲಿ ತಿಳಿದದ್ದು. ಆದರೂ ನಮ್ಮ ಕೈಯಲ್ಲಿರುವ, ನಮ್ಮ ಮನೆಯಲ್ಲಿರುವ ವಸ್ತುಗಳ ಹಾಗೆ, ನಮ್ಮದೆನ್ನುವ ಕಾರಣಗಳು ಈ ಜಮೀನಿಗೆ ಸರಿಹೊಂದಲಾರವು ಅನ್ನಿಸುತ್ತಿತ್ತು. ಈಗ ಅನ್ನಿಸುತ್ತಿದೆ. ಜಮೀನನ್ನು ನಾವು ಬಳಸದೇ ಮತ್ತೊಬ್ಬರ ಕೈಗಿಟ್ಟು ಒಡೆತನವನ್ನು ಪತ್ರದ ಮೂಲಕ ದಾಖಲೆಯ ಮೂಲಕ ನೋಡುತ್ತಾ ನಮ್ಮದೆನ್ನುವಾಗ ಅದರ ಅರಿವು ಎಳೆವೆಯಲ್ಲಿ ಗ್ರಹಿಕೆಗೆ ಬರುವುದು ಕಷ್ಟ. ಒಂದು ವಸ್ತುವನ್ನು ನಾವು ಹೊಂದಿದ್ದು ಅದನ್ನು ಬಳಸಲು ಬಾರದೆ ಅದನ್ನು ಒಡೆತನ ಹೊಂದುವುದು, ಎಲ್ಲವೂ ಈ ಕ್ಯಾಪಿಟಲಿಸ್ಸಮ್ಮಿನಲ್ಲಿ ಸಮುದಾಯಗಳು ಕಟ್ಟಿಕೊಂಡ ಹೊಸ ಹೊಳಹುಗಳೇ ಎಂಬುದೇನೂ ಆಗ ತಿಳಿಯುತ್ತಿರಲಿಲ್ಲ.  

       ಬಹುಶಃ  ಜಮೀನು ನಮ್ಮದೆನ್ನಲು ಅದನ್ನು ನಾವೇ ಉಳಿಮೆ ಮಾಡಿದ್ದರೆ ಹಾಗಾಗುತ್ತಿರಲಿಲ್ಲವೇನೋ, ಕಾರಣ ನಿತ್ಯವೂ ಅದನ್ನು ಒಂದಲ್ಲೊಂದು ರೀತಿಯಿಂದ ಹತ್ತಿರದಲ್ಲೇ ಇರುತ್ತಿದ್ದೆವಲ್ಲ. ನಾನೀಗ ನನ್ನ ಕಾಲೇಜಿನಲ್ಲಿ ಕೃಷಿಯನ್ನೇ ಕಲಿತೂ ಕೃಷಿ ಮಾಡದೆ ಹೊಲದ ಅನುಭವಕ್ಕೆ ಸ್ವಲ್ಪವೇ ಒಡ್ಡಿಕೊಂಡ ನಂತರವೂ ಅನ್ನಿಸಿದ್ದೆಂದರೆ. ಜಮೀನು ನಮ್ಮದೆನ್ನಿಸಲು ಅದನ್ನು ನಾವೇ ಉಳಿಮೆ ಮಾಡಿದರೆ, ಕಡೆ ಪಕ್ಷ ಅದರ ಜೊತೆಗೇ ಸಹಚರಿಗಳಾಗಿ ಬದುಕಿದಾಗ. ಇರಬೇಕು ಇಂತಹವೇ ಯೋಚನೆಗಳಿಗೆ ಸ್ಪಂದಿಸಿದ ಸಂಗತಿಗಳೇ 1970ರ ದಶಕದಲ್ಲಿ ಕರ್ನಾಟಕದಲ್ಲಿ ಕೃಷಿ ಲೋಕದಲ್ಲಿ ಬಿರುಗಾಳಿಯನ್ನು ಎಬ್ಬಿಸಿದ್ದವು. ದೇವರಾಜ ಅರಸು ಮುಖ್ಯಮಂತ್ರಿಯಾಗಿ ಉಳುವವನೇ ಒಡೆಯ ಎಂಬ ಕಾನೂನಿನ ಪರವಾಗಿ ನಿಂತರು. ಇದರ ಜೊತೆಗಿನ ಕೆಲವು ಸ್ವಾರಸ್ಯಕರ ಘಟನೆಗಳು ಮುಂದೆ ಹೇಳುವೆ. ಅಂತೂ ಜಮೀನಿನ ಒಡೆತನಕ್ಕೂ ಅದರ ಗ್ರಹಿಕೆಗೂ, ಉಳುಮೆಗೂ ಹೊಲದೊಡನಾಟಕ್ಕೂ ನಂಟಿರುವುದು ಸತ್ಯ. ಕೃಷಿ ಪರ ಪಾಲಿಸಿಗಳನ್ನೂ, ಮಣ್ಣಿನ ಅಧ್ಯಯನವನ್ನೂ ಮಾಡಿಯೂ ಹೊಳೆಯದೆ, ಕೇವಲ ಮುಗ್ಧವಾದ ಮಗವಿನಂತಹ ಸನ್ನಿವೇಷದ ಗ್ರಹಿಕೆಯಲ್ಲಿ  -ಆಟಿಕೆಗಳನ್ನು ನನ್ನದಾಗಿಸಿಕೊಳ್ಳುವ ಗ್ರಹಿಕೆಯಂತೆ- ಹಿಡಿದಿಟ್ಟ ಬಗೆಗೆ ಈಗಲೂ ಅಚ್ಚರಿಯಾಗುತ್ತದೆ. ಮುಂದೇ ಇವೇ ನಾನೇ ಜಮೀನಿನಲ್ಲಿ ನಿಂತು ಕೃಷಿ ಮಾಡಿದಾಗ ಈ ಗ್ರಹಿಕೆಗಳಲ್ಲಿನ ಸತ್ಯತೆಯು ಮತ್ತೂ ಪಕ್ವವಾದವು. ಇವೂ ನೆನಪಿನಲ್ಲಿ ಉಳಿದಿವೆ.

       ಈ ಮಣ್ಣಿನ ಗ್ರಹಿಕೆಗಳೇ ವಿಚಿತ್ರವಾದವು. ಅದನ್ನು ಕೇವಲ ಒಡೆತನದಲ್ಲಿ ನೋಡುವುದನ್ನು ಆಧುನಿಕ ಸಮಾಜ ರೂಪಿಸುತ್ತಾ ಬೆಳೆದಿದೆ. ಹಾಗೆ ನೋಡಿದರೆ ದೇಹಕ್ಕೂ ಮಣ್ಣಿಗೂ ಇರುವ ಸಂಬಂಧವನ್ನು ಬೈಬಲ್ ಕೂಡ, ದೃಢವಾಗಿ ನಂಬುತ್ತದೆ. ಅಷ್ಟೇಕೆ ರಸಾಯನಿಕ ವಿಜ್ಞಾನದ ಸೂತ್ರಗಳನ್ನು ಹಿಡಿದು ಬಿಡಿಸುತ್ತಾ ದೇಹ ಮತ್ತು ಮಣ್ಣಿನ ಸಂಬಂಧವನ್ನು ಅದರ ಜಟಿಲತೆಯನ್ನೂ ಬಿಡಸಿಬಹುದು.  ನಮ್ಮೆಲ್ಲಾ ಹಸಿವಿಗೆ ನಿರುಮ್ಮಳತೆ ಬರುವುದೇ ಮಣ್ಣಿನಿಂದ. ಅದಕ್ಕೆಂದೇ ಮಣ್ಣನ್ನು ಎಲ್ಲಾ ಜೀವಿಗಳ ಹೊಟ್ಟೆ ಎನ್ನುವರು. ನಮ್ಮದೇ ಜಮೀನಿಗೆ ಹೋದಾಗಲೆಲ್ಲಾ ಮುಂದೆ ಇಂತಹ ಗ್ರಹಿಕೆಗಳು ಬದಲಾಗುತ್ತಾ, ಬೆಳೆದವು ನಾನು ಕೃಷಿ ಕಾಲೇಜು ಸೇರಿ ಕೃಷಿ ವಿಜ್ಞಾನದ ವಿದ್ಯಾರ್ಥಿಯಾದ ಮೇಲೆ ಮತ್ತಷ್ಟು ಬದಲಾದವು. ಇಡಿಯಾಗಿ ನೋಡಿದರೆ ಜಮೀನು ನಮ್ಮದೆನ್ನುವ ನಮ್ಮ ನಿಮ್ಮೆಲ್ಲರ ಸಾಮಾನ್ಯ ಅನಿಸಿಕೆಗಳಲ್ಲಿ ಗೊಂದಲಗಳು ಇರದಿರಬಹುದು. ನಮ್ಮದೇ ಜಮೀನೆಂದು ಕೊಂಡು ಉಳುಮೆಮಾಡ ಹೊರಟ ಇತ್ತೀಚೆಗಿನ ಹಲವು ಹೊಸ ರೈತ ಬದುಕನ್ನು ಕಟ್ಟುವವರ ಬಳಿಯೂ ಅಂತಹದ್ದೇ ಅನಿಸಿಕೆಗಳಿಲ್ಲದಿರಬಹುದು. ಲಾಗಾಯ್ತಿನಿಂದ ಕೃಷಿ ಮಾಡಿಕೊಂಡೇ ಹೊಟ್ಟೆ ಹೊರೆವರ ಬದುಕಲ್ಲಿ ಇಂತಹದ್ದೇ ಕನಸುಗಳು ಎಂದೇನೂ ಇಲ್ಲ. ಕಾರಣ ಅವರ ಜೀವನ ಆಯ್ಕೆಯು ಒಂದು ಅನಿವಾರ್ಯವಾದದ್ದು.

“ಉಳುವವನ ಒಡೆತನ” ದ ಪ್ರಸಂಗಗಳು

ನಮ್ಮ ಜಮೀನಿನ ಒಡತಿ ನನ್ನಮ್ಮ. ಅಪ್ಪ ಏನಿದ್ದರೂ ಅದರ ಉಸ್ತುವಾರಿ ವಹಿಸಿಕೊಂಡ ಮ್ಯಾನೇಜರ್ ಅಷ್ಟೆ. ಕೃಷಿಯ ಬಗೆಗೆ ಅಪ್ಪನ ಒಲವೂ ಅಷ್ಟಕಷ್ಟೆ! ಒಂದು ದಿನ ಅವರ ಮಗನಾಗಿ ನಾನು ಕೃಷಿ ವಿಜ್ಞಾನದ ವಿದ್ಯಾರ್ಥಿಯಾಗಿ ನೆಲದ ಬದುಕಿನ ಬಗೆಗೆ ಸಂಶೋಧನೆಗೆ ತೊಡಗಿ ಅದರ ಪರವಾದ ನಿಲವುಳ್ಳವನಾಗುತ್ತಾನೆ ಎಂಬ ಕನಸನ್ನೂ ಕಾಣದವರು. ಎಲ್ಲಾ ಪಾರ್ಟ್ಟೈಮ್ ಕೃಷಿಕರ ಹಾಗೆ ಜಮೀನು ಮಾಡಿಸುವವರ ಗುಂಪು ಅಪ್ಪನದು. ನಿಜವಾಗಿ ಹೊಲದಲ್ಲಿ ಗೇಯುವವರು ಬೇರೆಯವರೇ ಆಗಿರುತ್ತಿದ್ದರು. ಕೆಲವೊಮ್ಮೆ, ಗುತ್ತಿಗೆ ಆಧಾರದಲ್ಲಿಯಾದರೆ, ಮತ್ತೊಮ್ಮೆ ಬೆಳೆಯ ಹಂಚಿಕೆಯಿಂದ ಕೃಷಿ ಉದ್ಯಮದ ವ್ಯವಹಾರ ಸಾಗುತ್ತಿತ್ತು. ಆಗೊಮ್ಮೆ ಈಗೊಮ್ಮೆ, ನಾವೂ ಜಮೀನಿನ ಹತ್ತಿರ ಸುಳಿಯುತ್ತಿದ್ದುದೇ, ಭೂಮಿಹುಣ್ಣಿಮೆಯ ಪೂಜೆಗೋ ಅಥವಾ ಮತ್ತಾವುದಾದರೂ ನೆಪಕ್ಕೆ. ಇದರ ಮಧ್ಯೆಯೇ ಆಗಾಗ್ಗೆ ಜಮೀನುಮಾರಿ ಬಂದ ಹಣದಿಂದಲೇ ಅನ್ಯ ಕಸುಬುಗಳ ಹುಡುಕಾಟದ ಮಾತು, ನಿರಂತವಾಗಿ ನಡೆದಿತ್ತು. ಅಪ್ಪನ ಎಂಟ್ರಪ್ರೆನರ್‌ಶಿಪ್ಪಿನ ಬತ್ತಳಿಕೆಯಲ್ಲಿ ನೂರೆಂಟು ಕನಸುಗಳು ತವಕಗಳೂ ಇದ್ದವು. ನಮ್ಮೂರಿಗೇ ಮೊದಲ ಬೇಕರಿ ಮಾಡಿ, ಬಿಸ್ಕತ್ತು ಮಾಡುವ, ಮುಂತಾದ ಲಾಭದ ಹೆಸರಿನ ವಹಿವಾಟುಗಳೂ ತೊಡಗಿದ್ದರೂ ನಷ್ಟವನ್ನೇ ತಂದ, ವಾಸ್ತವಕ್ಕೆ ಅಮ್ಮ ಸದಾ ಗಾಬರಿಗೊಳ್ಳುತ್ತಿದ್ದರು. ಅಪ್ಪನ ಆಸಕ್ತಿಗಳಿಗೆ ಜಮೀನು ಬಿಕರಿಯಾಗದಂತೆ ನೋಡಿಕೊಂಡದ್ದು ಅಮ್ಮನಿಗೆ ಒಂದು ಕಷ್ಟವೇ. ನನಗಿನ್ನೂ ತಿಳಿವಳಿಕೆಯಲ್ಲದ ವಯಸ್ಸು. ಉಳುವವನೇ ಒಡೆಯ ಕಾಯ್ದೆಯ ಜಾರಿಯ ದಿನಗಳಲ್ಲಿ ಇಂತಹ ಅರೆ ಕೃಷಿಕರ ಮನೆಗಳಲ್ಲಿ ಸುದ್ದಿಯ ಸಂಚಲನ ಪ್ರಾರಂಭವಾದವು. ಉಳುವವನೇ ನಿಜವಾಗಿಯೂ ಒಡೆಯನಾಗಬೇಕಾದ್ದು ಎಂಬುದಂತೂ ಅರ್ಥವಾಗಲು ಕಾರಣಗಳಂತೂ ಬಾಲ್ಯದಲ್ಲೂ ಅರ್ಥವಾಗುತ್ತಿದ್ದವು.

       ಈ ಹೊಸ ಸುದ್ದಿ ಅರೆ ಕೃಷಿಕರ ಮನೆಗಳಲ್ಲಿ ಸಾಕಷ್ಟು ಭಯವನ್ನೇ ತಂದವು. ತಾವೆಂದೂ ಕೃಷಿ ಮಾಡದೆ ನೆಲದ ಒಡೆಯರಾಗಿದ್ದು, ಜಮೀನು ಮಾಡುವ ರೈತರಿಂದ ವರ್ಷಕ್ಕೆ ಒಂದಷ್ಟು ಬೆಳೆದ ಕಾಳು ಜೊತೆಗೆ ಸಮೀಪದ ಕಾಡಿನಿಂದ ಉರುವಲಿಗೆ ಕಟ್ಟಿಗೆಯನ್ನು ಗಾಡಿ ತುಂಬಾ ಪಡೆವ ಮಾತಿನಿಂದ ಒಬ್ಬರನ್ನೊಬ್ಬರರ ಜೀವನ ಸಲೀಸಾಗಿ ಸಾಗಿತ್ತು. ರೈತರಲ್ಲಿ ಸಾಕಷ್ಟು ಮಂದಿಗೆ ನೆಲದ ವಹಿವಾಟಿನ ಹೊಸ ಕಾಯಿದೆಯು ಹೊಸ ಆಸೆಗಳನ್ನು ತಂದಿತು. ಆದರೂ ನೆಲವನ್ನೇ ನಂಬಿ ತಾವು ಕೃಷಿ ಮಾಡಲಾಗದ ಸಾಕಷ್ಟು ಕುಟುಂಬಗಳೂ ಇದ್ದವು. ಇರುವುದೇ ಸ್ವಲ್ಪ ಜಮೀನು ಎತ್ತು-ಕತ್ತೆ ಕಟ್ಟಿ ಬೇಸಾಯ ಮಾಡಲೆಂದರೆ ಆದೀತೇ? ಎನ್ನುವ ಭಯ ಬೇರೆ? ಸಣ್ಣ ಪುಟ್ಟ ವ್ಯಾಪಾರದಿಂದ ಒಂದಷ್ಟು ಹೊಟ್ಟೆ ಹೊರೆಯುತ್ತಾ, ಜಮೀನನ್ನು ಮಾಡುವ ರೈತರಿಂದ ವಾರ್ಷಿಕ ದೊರೆತ ಕಾಳಿನ ಸಹಕಾರದಿಂದ ಜೀವನ ಸಾಗಿಸುವ ಕುಟುಂಬಗಳು ಈ ಭಯದ ಅನುಭವಕ್ಕೆ ಸಾಕ್ಷಿಗಳಾಗಿದ್ದವು. ಕೆಲವು ರೈತರು ಊರಿನ ದೇವಸ್ಥಾನಗಳ ಜಮೀನನ್ನು ಉಳುಮೆ ಮಾಡಿಕೊಂಡಿದ್ದು, ಅದನ್ನು ಉಳುವವನೇ ಒಡೆಯ ಎಂಬ ಕಾಯಿದೆಯ ಅಡಿ -ಒಡೆತನಕ್ಕೆ ಕನಸನ್ನೂ ಕಂಡು, ಅಂತೆಯೇ ಅದನ್ನು ಪಡೆದೂ -ಒಡೆಯರಾದರು. ಹೇಗಿದ್ದರೂ ಮುಜರಾಯಿ ಜಮೀನು ವರ್ಷಕ್ಕೆ ದೇವಾಲಯಕ್ಕೆ ಕೊಡಬೇಕಿದ್ದ ಕಾಳು ತಪ್ಪಿದರೆ ಅದೇ ಲಾಭ ಅಂದುಕೊಂಡವರು ಹಾಗೇ ಮಾಡಿ ಒಡೆಯರಾದರು. ಕೆಲವು ಮಠದ ಹೊಲಗಳೂ ಇದ್ದವು. ಮಠದ ವರ್ಷದ ಹಬ್ಬ ಹರಿದಿನಗಳಿಗೆ, ಕಾರ್ತಿಕಕ್ಕೆಂದು ದೀಪದ ಖರ್ಚಿಗೆ, ತೇರು ಎಳೆವ ದಿನಕ್ಕೆ, ಹೀಗೆ ಇದ್ದ ಕಾರಣಗಳಿಗೊಂದರಂತೆ ಇದ್ದ ಜಮೀನುಗಳೂ ಇದ್ದವು. ತಲೆ ತಲಾಂತರದಿಂದ ಜಮೀನು ಮಾಡಿಕೊಂಡು ಉಂಡಿದ್ದೇವೆ, ಈಗೂ ಉಣ್ಣುವ ಕೆಲಸಕ್ಕೆ ಜಮೀನು ನಮ್ಮ ಉಳಿಮೆಯಲ್ಲಿಯೇ ಇದೆ, ಅದನ್ನೇಕೆ ನಮ್ಮದು ಮಾಡಿ ಅನ್ಯಾಯದ ಮಣ್ಣಿನ ಋಣ ಬೇಡ ಎಂದವರು ಕೆಲವರು. ಇಂತಹ ಸಂಧಿಗ್ಧ ಸಂಗತಿಗಳೇ ಅಪ್ಪನಿಗೂ ಜಮೀನು ಮಾರುವ ಕಾರಣ ಹುಡುಕಿಕೊಟ್ಟದ್ದು. ಯಾರಿಗೋ ಕಳೆದು ಕೊಳ್ಳುವುದಕ್ಕಿಂತ ಒಪ್ಪಂದ ಮಾಡಿಕೊಂಡು ಮಾರಿಬಿಟ್ಟು ಹಾಯಾಗಿರುವುದರ ಕನಸು ಕಂಡರು. ಆದರೆ ಜಮೀನು ಮಾರದೆ ಇರಲು ಒಂದು ಸಣ್ಣ ಪ್ರಸಂಗ, ಸಹಾಯವಾಯತು.

       ಅಪ್ಪನ ಗೆಳೆಯರೊಬ್ಬರು ನಮ್ಮ ಜಮೀನಿನ ಸ್ವಲ್ಪ ಭಾಗವನ್ನು ಉಳುಮೆಗಿಟ್ಟುಕೊಂಡಿದ್ದರು. ಸುಮಾರು ಒಂದೂ ವರೆ ಎಕರೆ ನೆಲವಿದ್ದೀತು. ಗದ್ದೆಯಲ್ಲಿ ಭತ್ತ ನಾಟಿ ಮಾಡಿ 30 ಕ್ವಿಂಟಾಲು ಬೆಳೆದು ಜಮೀನಿನ ಆಸೆಯನ್ನು ಹೆಚ್ಚಿಸಿಕೊಂಡವರು. ಆತನ ಹೆಸರು ಚಂದ್ರಪ್ಪ ಎನ್ನಬಹುದೇನೋ? ಅಪ್ಪನ ಭಯಕ್ಕೆ ನೆಪವಾದಂತೆ, ಅವರ ಕಡೆಗಿದ್ದ ಜಮೀನಿನ ಉಳುಮೆಯ ದಾಖಲೆಯೂ ಅವರ ಹೆಸರಲ್ಲೇ ಇತ್ತು. ಉಳಿದ ಸುಮಾರು ಮೂರುವರೆ ಎಕರೆ ಮತ್ತಿಬ್ಬರು ವಹಿಸಿಕೊಂಡಿದ್ದರು. ಅವರ ಬಗೆಗೆ ಅಪ್ಪನಿಗೆ ನಂಬಿಕೆ ಇದ್ದದೇ ಅಲ್ಲದೆ, ಅವರ ಬಳಿ ಉಳುಮೆಯ ದಾಖಲೆಗಳು ಅವರ ಹೆಸರಲ್ಲಿ ಇರಲಿಲ್ಲವೆಂದು ಕಾಣುತ್ತದೆ. ಅಂತೂ ಅವರ ಬಗೆಗೆ ಭಯ ಖಂಡಿತಾ ಇರಲಿಲ್ಲ. ಈ ಸಿದ್ದಪ್ಪ ಮತ್ತು ಬಸಪ್ಪ ಎಂಬುವರಾದ ಈ ಇಬ್ಬರೂ ಅಪ್ಪನ ಶಿಷ್ಯರ ರೀತಿ ವಿಧೇಯರಾಗಿದ್ದು, ಉರುವಲು ಕಟ್ಟಿಗೆ ತರುವುದೇ ಅಲ್ಲದೇ, ಬೆಳೆ ಬಂದಾಗ ರಾಶಿ ಪೂಜೆಗೆ ತಪ್ಪದೇ ಕರೆಯುತ್ತಿದ್ದರು.  ಚಂದ್ರಪ್ಪ ತುಂಬ ಸ್ಥಿತ ಪ್ರಜ್ಞ ಮನುಷ್ಯ ಅನ್ನಿಸುತ್ತೆ, ಯಾವುದಕ್ಕೂ, ಸೀರಿಯಸ್ಸೇ ಇಲ್ಲದ ವ್ಯಕ್ತಿ. ಒಂದೂವರೆ ಎಕರೆ ಉಳುಮೆ ಪ್ರದೇಶವೂ ಅವರ ಹೆಸರಲ್ಲೇ ಇತ್ತು. ಒಳ್ಳೆಯ ಭತ್ತದ ಇಳುವರಿಯೂ ಬಂದಿತ್ತು. ಅಂತೂ ಅವರಿಂದ ಯಾವ ತೊಂದರೆಯೂ ಆಗಲಿಲ್ಲ. ಆತನೇನು ಯಾರ ಮಾತನ್ನೂ ಕೇಳಿ ಜಮೀನನನ್ನು ಪಡೆದುಕೊಳ್ಳವ ಕೆಲಸಕ್ಕೆ ಕೈ ಹಾಕಲಿಲ್ಲ. ಆಗೊಮ್ಮೆ, ಈಗೊಮ್ಮೆ ಅವರ ಮನೆಗೆ ಓಡಾಡಿ ಬಂದ ಸಣ್ಣ ವಯಸ್ಸಿನ ನನ್ನ ನೆನಪುಗಳಲ್ಲಿ ಅಚ್ಚೊತ್ತಿದ್ದೆಂದರೆ, ಅವರ ಮನೆಗೆ ಒಳಕ್ಕೆ ಕಾಲಿಡುತ್ತಲೇ ಎದುರಾಗುತ್ತಿದ್ದ, ಅವರ ದನದ ಕೊಟ್ಟಿಗೆ. ಅದನ್ನು ಹಾಯ್ದು ನಂತರವೇ ಅವರ ಮನೆಯೊಳಕ್ಕೆ ಹೋಗಬೇಕಾಗುತ್ತಿತ್ತು. ಚಂದ್ರಪ್ಪ ಸ್ಥಿತ ಪ್ರಜ್ಞ ಮಾತ್ರ ಅಲ್ಲ, ಮಹಾ ಸೋಮಾರಿ, ಸರಿಯಾಗಿ, ಕೊಡಬೇಕಾದ ಬೆಳೆದ ಕಾಳು ಕೊಡದೆ ಸತಾಯಿಸುತ್ತಿದ್ದ. ಸದಾ ಸಾಲದಲ್ಲೇ ಮುಳುಗಿದ್ದನೆಂದು ಕೆಲವರ ಮಾತುಗಳಲ್ಲಿ ಕೇಳಿದ್ದಿದೆ. ಅಪ್ಪನ ಜೊತೆಯಲ್ಲಿ ಆತನಿಗೆ ಭಾರಿ ಸ್ನೇಹ ಅದರ ಹಿನ್ನೆಲೆಯಲ್ಲಿಯೇ ಅಪ್ಪನೂ ಆತನಿಗೆ ಸಲಿಗೆ. ಹಾಗಾಗಿ ಆತನೆಂದೂ ಮನೆಯ ಅಗತ್ಯದ ಉರುವಲಿಗೆ ಸಹಾಯ ಮಾಡಿದ್ದು ನೆನಪಿಲ್ಲ. ಆದರೂ ಆತನೊಳಗಿನ ಅಪ್ಪನ ಜೊತೆಯ ಸ್ನೇಹದ ಫಲವಾದ ಒಳ್ಳೆಯ ಮನಸ್ಸು ನಮ್ಮ ಜಮೀನಿಗೇನೂ ಒಡೆತನದ ಸಮಸ್ಯೆ ಕೊಡಲಿಲ್ಲ. ಅಪ್ಪನ ಮಾತಿನಲ್ಲಿ ಆತ ಮತ್ತಷ್ಟು ದೊಡ್ಡ ಮನುಷ್ಯನಾದ. ಅವರಿಗೊಬ್ಬ ಸುಂದರಳಾದ ಮೂಕ ಮಗಳಿದ್ದು ಆತನ ಆಸೆಗಳನ್ನೆಲ್ಲಾ ಕೊಂದು ಹಾಕಿರಬೇಕು. ಆಗಾಗ್ಗೆ ಬಾಯಲ್ಲಿ ಕಚ್ಚುತ್ತಿದ್ದ ಸಿಗರೇಟು ಬಿಟ್ಟರೆ ಅಂತಹ ಆಸೆಗಳ ಹಿಂದೆ ಹೊಗಲಿಲ್ಲ. ನನಗೆ ಈಗ ಅನ್ನಿಸುವುದೆಂದರೆ ಒಂದು ವೇಳೆ ಜಮೀನನ್ನು ಕಳೆದುಕೊಂಡಿದ್ದರೆ ನಮ್ಮ ಮನಸ್ಥಿತಿ ಹೇಗಿರುತ್ತಿತ್ತು? ಅಂತೂ ನಮ್ಮ ಜಮೀನು ಮಾಡುವ, ಅದರಲ್ಲೇ ಕಾಲ ಕಳೆವ ಸಂತತಿಗಳು ಬೇರೆಯವೇ ಆಗುತ್ತಾ ಸಾಗಿದವು. ಸಿದ್ದಪ್ಪ ಹೋದರೆ, ಮಂಜಪ್ಪ, ಆತ ಹೋಗಲು ಮಗದೊಬ್ಬ. ಹೀಗೆಂದು ರೈತರನ್ನು ಬದಲಾಯಿಸುವ ವ್ಯಾವಹಾರಿಕಾ ಸ್ಟ್ರಾಟಜಿಯನ್ನು ಅಪ್ಪ ಬಳಸುತ್ತಿದ್ದರೇ? ಆಗೇನೂ ಹೊಳೆಯುತ್ತಿರಲಿಲ್ಲ. ಮುಂದೆ ಎಲ್ಲವೂ ಸರಿ ಪಡಿಸಲು, ಕಾಯಿದೆಗೆ ಒಪ್ಪುವ ರೈತೋದ್ಯಮ ಮನೆಯಲ್ಲಿ ಶುರುವಾಯಿತು. ಅಪ್ಪನೂ ಕೃಷಿಯಲ್ಲಿ ತೊಡಗಿದರು. ಅಪ್ಪನ ಹೆಸರಿಗೇ ಪಹಣಿ ಬರೆಸಿ ನಾವೇ ಜಮೀನು ಮಾಡಿಸುವ ಕೃಷಿಕರಾದೆವು. ಜಮೀನು ನಮ್ಮದಾಗೇ ಉಳಿಯಿತು. ನಾವೇ ಉಳುವವರೂ ಆದಾಗಲೇ ನೆಮ್ಮದಿಯ ನಿದ್ದೆಯು ಬೇರೆಯದೇ ಇರುವುದೆಂಬ ಸತ್ಯ ಕೃಷಿಕರೊಳಗಿನ ಅಂತರಂಗ. 

ನಾನೂ ಕೃಷಿ ಮಾಡಿದೆ… ಮುಂದೆ ನೋಡೋಣ…

ನಮಸ್ಕಾರ

–  ಡಾ. ಟಿ.ಎಸ್. ಚನ್ನೇಶ್.

This Post Has 3 Comments

 1. ಶಶಿರಾಜ್ ಸರ್

  ಬಹಳ ಚಂದದ ನೆನಪು.‌ ಒಂದು ಜೀವನ ಕಥೆ ಹೀಗೆ ಶುರು ಮಾಡಿ ಆದಷ್ಟೂ ಬೇಗ!

 2. Kusum Salian

  Beautiful memories n article

 3. ಸೋಮಶೇಖರ ಎಚ್ ಸಿ

  ಸಮರ್ಥ ಲೇಖಕನಾಗಬಯಸುವವನಿಗೆ ಗ್ರಹಣಶಕ್ತಿಯೊಂದಿಗೆ ಸ್ಮರಣಶಕ್ತಿ ಅಗತ್ಯ ಎನ್ನುತ್ತಾರೆ. ಈ ಎರಡರೊಂದಿಗೆ ಅನುಭವದ ಸ್ವಾರಸ್ಯವನ್ನು ಹಂಚಿಕೊಳ್ಳುವ ಪ್ರಾಮಾಣಿಕ ಆಸಕ್ತಿ ಹಾಗೂ ಶ್ರದ್ಧೆಯೂ ನಿಮಗೆ ಇದೆ. ಜೊತೆಗೆ ತಾಯ್ನುಡಿಯೂ ಒಲಿದಿದೆ. ಅಭಿನಂದನೆಗಳು.

  ಅತ್ಯಂತ ಆಪ್ತವಾದ ಲೇಖನ ಮುಂದಿನ ಕಂತಿಗಾಗಿ ಕಾಯುವಂತೆ ಮಾಡಿದೆ!

Leave a Reply