“ಏನು ಮಹಾ ಮೂಲಂಗಿ ಕೀಳೋ ಕೆಲಸ ಇತ್ತೇನು?” ಎನ್ನುವ ಮಾತನ್ನು ಕೇಳಿಯೇ ಇರುತ್ತೀರಿ. ಅಂದರೆ ಅಂತಹಾ ದೊಡ್ಡ ಕೆಲಸವೇನೂ ಇಲ್ಲದಿರುವುದನ್ನು ಮೂಲಂಗಿ ಕೀಳುವ ಹಾಗೂ ಅಷ್ಟೇ ಅಲ್ಲ ಅದನ್ನು ಬೆಳೆಯುವ ಸಾಹಸಕ್ಕೂ ಹೋಲಿಸುವುದುಂಟು. ಮೂಲಂಗಿ ಕೀಳುವುದು ಎಷ್ಟು ಸುಲಭವೋ, ಬೆಳೆಯುವುದೂ ಅಷ್ಟೆ ಸುಲಭ. ಬೀಜವನ್ನು ಬಿತ್ತಿ ಒಂದು ತಿಂಗಳಲ್ಲೇ ಬೆಳೆ ಕೊಯಿಲಿಗೆ ರೆಡಿ. ಹೆಚ್ಚೆಂದರೆ ಇನ್ನೂ ಒಂದೆರಡು ವಾರ. ಉಷ್ಣವಲಯದ ನಮ್ಮ ದೇಶದಲ್ಲಂತೂ 25-35 ದಿನಗಳಲ್ಲಿ ಕೊಯಿಲಿಗೆ ಬರುತ್ತದೆ. ಕೀಳುವುದಂತೂ ಕೆಲಸವೇ ಅಲ್ಲ. ಆಮೇಲೆ ಮೂಲಂಗಿಯನ್ನು ಸಾಮಾನ್ಯ ವಾತಾವರಣದಲ್ಲಿ ಮೂರು-ನಾಲ್ಕು ದಿನಗಳವರೆಗೂ ಕಾಯ್ದಿಡುವುದೂ ಸುಲಭವೇ ಬೇಗ ಹಾಳಾಗದು. ರಿಫ್ರಿಜಿರೇಟರಿನಲ್ಲಿ ಎರಡು ತಿಂಗಳತನಕ ಕಾಯ್ದಿಡಬಹುದು. ಸುಲಭವಾಗಿ ಕಿತ್ತು ಕೂಡಲೆ ಮಾರುಕಟ್ಟೆಗೆ ಕಳಿಸುವುದು ಸುಲಭವೇ ಆದ್ದರಿಂದ ಇದೊಂದು ದೊಡ್ಡ ಸಮಸ್ಯೆಯೇ ಅಲ್ಲ. ಹಾಗಾಗಿ ಸುಲಭವಾದದ್ದಕ್ಕೆ ಮೂಲಂಗಿಯನ್ನು ಸಮೀಕರಿಸುವುದುಂಟು. ಅದಕ್ಕಾಗಿ ಯಾರಾದರೂ “ತಾಳ್ಮೆಗೆಟ್ಟವರಾಗಿಯೂ ಹಾಗೂ ಹಟಮಾರಿಗಳೂ ಆಗಿದ್ದರೆ, ಅವರಿಗೆ ಮೂಲಂಗಿಯನ್ನು ಬೆಳೆಯಿರಿ” ಎನ್ನುವ ಮಾತೊಂದು ಐರೋಪ್ಯರಲ್ಲಿ ಜನಪ್ರಿಯ. ಬೇಗನೆ ಬೆಳೆಯುವುದರಿಂದ ಮತ್ತು ಹಾಗೂ ಕೀಳದೆ ಹಾಗೆ ಬಿಟ್ಟರೆ ಹಾಳಾಗದೆ, ಗಿಡವಾಗಿ ಮತ್ತೆ ಕಾಯಿ ಬಿಡುವುದರಿಂದ ಹಟಮಾಡಿ ಅದರೊಟ್ಟಿಗೆ ಜಿದ್ದಿಗಿಳಿಯಲು ಆಗದೆ ಇರುವುದರಿಂದ ಈ ಮಾತು ಹುಟ್ಟಿರಬೇಕು.
ಮೂಲಂಗಿ ಮತ್ತು ಕ್ಯಾರೆಟ್ ನೋಡುವುದಕ್ಕೆ ಒಂದೇ ಬಗೆಯವಾದರೂ ಮೂಲಂಗಿಗೂ ಕ್ಯಾರೆಟ್‌ಗೂ ಯಾವುದೇ ಸಂಬಂಧವಿಲ್ಲ. ಮೂಲಂಗಿಯ ಸಂಬಂಧಿಕರು, ಕೋಸು ಮತ್ತು ಸಾಸಿವೆ. ಇವೆಲ್ಲವೂ ಕ್ರುಸಿಫೆರೆ (Cruciferae) ಅಥವಾ ಬ್ರಾಸಿಕೇಸಿಯೆ(Brassicaceae) ಕುಟುಂಬದ ಸದಸ್ಯರು. ಇವೆಲ್ಲವನ್ನೂ ಒಟ್ಟಾಗಿ ಕ್ರುಸಿಫೆರಸ್ ಎಂಬ ಲ್ಯಾಟಿನ್ ಪದದಿಂದ ಕರೆಯಲಾಗುತ್ತದೆ. ಕ್ರುಸಿಫೆರಸ್ ಅಂದರೆ ಕ್ರಾಸ್ (Cross)ಅಡ್ಡವಾದ ನೋಟದ, ಎಂದರ್ಥ. ಈ ಕುಟುಂಬದ ಹೂವುಗಳು ಕ್ರಾಸ್ (+, X) ಆಕಾರದಲ್ಲಿ ದಳಗಳ ಜೋಡಣೆಯನ್ನು ಹೊಂದಿರುವುದರಿಂದ ಹೀಗೆ ಹೆಸರು. ಮೂಲಂಗಿಗೂ ಸಾಸಿವೆಗೂ ಸಂಬಂಧವನ್ನು ಮೇಲು ನೋಟದಿಂದ ಗುರುತಿಸಲು ಸಾಧ್ಯವೇ ಇಲ್ಲ. ನಾವೆಲ್ಲ ನೋಡಿರುವ ತಿನ್ನುವ ಮೂಲಂಗಿಯು ಆ ಸಸ್ಯದ ಎಳೆಯ ಬೇರಿನ ಭಾಗವಷ್ಟೇ, ಅದನ್ನು ಕೀಳದೆಯೆ ಹಾಗೇಯೆ ಬಿಟ್ಟರೆ ಮೇಲಿನ ಸೊಪ್ಪು ಇನ್ನೂ ಬೆಳೆದು ಗಿಡವಾಗಿ ಸ್ವಲ್ಪ ಸಾಸಿವೆಯನ್ನೇ ಹೋಲುವ ಗಿಡವಾಗುತ್ತದೆ. ಆಗ ಅದರಲ್ಲಿ ಹೂಗಳೂ ಬಿಡುತ್ತವೆ. ಕಾಯಿಗಳೂ ಸಹಾ. ಇದರ ವಿವರಗಳನ್ನು ಮುಂದೆ ತಿಳಿಯೋಣ.
ಮೂಲಂಗಿಯು ಕ್ರುಸಿಫೆರೆ (ಬ್ರಾಸಿಕೇಸಿಯೆ) ಕುಟುಂಬದ, ರಫಾನಸ್ ಸಟೈವಸ್(Raphanus sativus) ಎಂಬ ವೈಜ್ಞಾನಿಕ ಹೆಸರುಳ್ಳ ಸಸ್ಯ. ರಫಾನಸ್(Raphanus) ಪದವು ಗ್ರೀಕ್ ಮೂಲದ್ದು, “ಸುಲಭವಾಗಿ ಬೆಳೆಯಬಲ್ಲ” ಎಂಬ ಅರ್ಥದ ಲ್ಯಾಟಿನೀಕರಿಸಿದ ಪದ. ಅದು ಇಂಗ್ಲೀಶಿನಲ್ಲಿ Radish ಆಗಿದೆ. ಇಲ್ಲಿ ಅದು ಬೇರು ಎನ್ನುವುದರ ಸಮನಾದುದು. ಮೂಲಂಗಿಯನ್ನು ಹಾಗೇ ಹಸಿಯಾಗಿಯೇ ತಿನ್ನುವುದರಿಂದ ಹಿಡಿದು ಬಗೆ ಬಗೆಯ ಖಾದ್ಯಗಳಾಗಿಸಿ ನಾಲಿಗೆಗೆ ಹದವಾಗಿಸಿ ರೂಪಿಸಿರುವುದನ್ನು ಜಗತ್ತಿನಾದ್ಯಂತ ಅನೇಕ ಸಮುದಾಯಗಳು ಕಂಡು ಕೊಂಡಿವೆ. ಹಾಗೆಂದೇ ಜಗತ್ತಿನ ಎಲ್ಲಾ ನೆಲೆಗಳ ಊಟದ ತಾಟನ್ನೂ ತಲುಪಿರುವ ಹೆಮ್ಮೆ ಮೂಲಂಗಿಯದು. ಮೂಲಂಗಿಯ ಮೂಲ ತವರೂರಿನ ಬಗ್ಗೆ ಅನುಮಾನಗಳಿವೆ. ಯಾವುದೇ ಪ್ರಾಚ್ಯ ಉತ್ಖನನಗಳ ಕುರುಹುಗಳನ್ನು ಪಡೆಯಲಾಗಿಲ್ಲ. ಕೇವಲ ಅದರ ವನ್ಯ ಸಂಬಂಧಿಗಳ ಹಂಚಿಕೆಯ ಆಧಾರದ ಮೇಲೆ ಆಗ್ನೇಯ (ದಕ್ಷಿಣ-ಪೂರ್ವ) ಏಶಿಯಾ ಎಂದು ಅಂದಾಜಿಸಲಾಗಿದೆ. ಹಾಗೆಯೇ ಮಧ್ಯ ಚೀನಾ, ಭಾರತ ಹಾಗೂ ಮಧ್ಯ ಏಶಿಯಾವನ್ನೂ ಸಹಾ ಅದರ ಎರಡನೆಯ ನೆಲೆಯೆಂದೂ ಅಂದಾಜಿಸಲಾಗಿದೆ. ಸುಮಾರು ಒಂದು-ಒಂದೂವರೆತಿಂಗಳ ಬೆಳೆಯಾದ್ದರಿಂದ ಹಾಗೂ ಸುಲಭವಾಗಿ ಬೆಳೆಯಬಹುದಾದ ಬೆಳೆಯಾದ್ದರಿಂದ ಪ್ರತೀ ವರ್ಷದ ಉತ್ಪಾದನೆ ಏಳು ದಶಲಕ್ಷ ಟನ್ನುಗಳಿಗಿಂತಲೂ ಹೆಚ್ಚಾಗಿದ್ದು, ಪ್ರಪಂಚದ ಒಟ್ಟು ತರಕಾರಿ ಉತ್ಪಾದನೆಯಲ್ಲಿ ಮೂಲಂಗಿಯೊಂದೇ ಪ್ರತಿಶತ 2 ರಷ್ಟನ್ನು ಒದಗಿಸುತ್ತದೆ.
ಇತಿಹಾಸ ಪೂರ್ವದಲ್ಲಿ ಗ್ರೀಕರು, ಈಜಿಪ್ಟರು ಮೂಲಂಗಿಯ ಪ್ರಿಯರಾಗಿದ್ದ ಬಗ್ಗೆ ದಾಖಲೆಗಳು ತಿಳಿಸುತ್ತವೆ. ಕ್ರಿಸ್ತ ಪೂರ್ವ ಮೂರನೆಯ ಶತಮಾನದಷ್ಟು ಹಿಂದೆಯೇ ಮೂಲಂಗಿಯನ್ನು ಬೆಳೆಯುತ್ತಿದ್ದ ಬಗ್ಗೆ ಚರಿತ್ರೆಯಲ್ಲಿ ಸಂಗತಿಗಳು ಸಿಗುತ್ತವೆ. ಕ್ರಿಸ್ತಶಕ ಒಂದನೆಯ ಶತಮಾನದಲ್ಲೂ ರೋಮನ್ನರು ಹಾಗೂ ಗ್ರೀಕರೂ ಮೂಲಂಗಿಯ ಬೆಳೆಗೆ ಆಸಕ್ತಿ ವಹಿಸಿರುವ ಬಗೆಗೂ ತಿಳಿದು ಬರುತ್ತದೆ. ಇತಿಹಾಸ ಪೂರ್ವದಲ್ಲಿ ಗ್ರೀಕ್ ಮತ್ತು ರೋಮನ್ನರು ಮೂಲಂಗಿಯ ರೂಪದ ಚಿನ್ನದ ಆಕೃತಿಗಳನ್ನು ಮಾಡಿ ಬಹುಮಾನವಾಗಿ ಕೊಡುತ್ತಿದ್ದ ಬಗ್ಗೆ ವಿವರಗಳಿವೆ.
ಮೂಲಂಗಿ ಒಂದು ಸಸ್ಯವಾಗಿ ಸುಂದರವಾದ ಸಸ್ಯ! ನಮಗೆಲ್ಲಾ ಚಿರಪರಿಚಿತವಾದ ಬಿಳಿಯ ಬೇರಿನ ಗಡ್ಡೆಯ ಮೇಲೆ ಹಸಿರಿನ ಕಿರೀಟದಂತಿರುವ ನೋಟದ ಜೊತೆಗೆ ಅದರ ಇಡಿಯಾಗಿ ಬೆಳೆದ ಸಸ್ಯವೂ ಕೂಡ ಹಸಿರಿನ ನಡುವೆ ಬಿಳಿಯ ಹಾಗೂ ನೇರಳೆ ಬಣ್ಣದ ಅಥವಾ ಅವೆರಡರ ಮಿಶ್ರಣದ ಹೂವುಗಳನ್ನು ಬಿಡುತ್ತದೆ. ಈ ಹೂವುಗಳಿಗೆ ಹಳದಿ ಬಣ್ಣದ ಹೂವಿನ ಗಂಡುಭಾಗವು ಮೆರುಗುಕೊಡುತ್ತದೆ. ನಾವು ತಿನ್ನುವ ಮೂಲಂಗಿಯನ್ನು ಕೀಳದೆ ಹಾಗೆಯೇ ಬಿಟ್ಟರೆ ಮೇಲಿನ ಹಸಿರು ಕೊಡೆಯಂತಹಾ ಭಾಗವು ನೇರವಾಗಿ ಬೆಳೆದು ಎತ್ತರದ ಗಿಡವಾಗುತ್ತದೆ. ಆ ವೇಳೆಗೆ ನಾವು ಕಿತ್ತು ತಿನ್ನುವ ಬೇರಿನ ಭಾಗವು ಕರಗಿ ಪರಿಪೂರ್ಣ ಬೇರಾಗಿ ಪರಿವರ್ತಿತವಾಗುತ್ತದೆ. ಹೂವುಗಳು ಪರಾಗಸ್ಪರ್ಶಗೊಂಡು ಕಾಯಿಗಳಾಗುತ್ತವೆ. ಅವುಗಳನ್ನು ಮೂಲಂಗಿ ಕಾಯಿಗಳೆಂದೇ (Radish Pods) ಕರೆಯುತ್ತಾರೆ. ಇವುಗಳೂ ಸಹಾ ಹೆಚ್ಚೂ ಕಡಿಮೆ ನಾವು ತಿನ್ನುವ ಮೂಲಂಗಿಯ ರೂಪವನ್ನೇ ಹೋಲುತ್ತವೆ. ಈ ಮೂಲಂಗಿ ಕಾಯಿಗಳನ್ನೂ ಸಹಾ ತರಕಾರಿಯಾಗಿ ಬಳಸಬಹುದು. ಈ ಕಾಯಿಗಳು ಬಲಿತ ಮೇಲೆ ಒಳಗೆ ಒಂದು ಅಥವಾ ಎರಡು ಬೀಜಗಳಿರುತ್ತವೆ. ಈ ಬೀಜಗಳನ್ನೇ ಬಿತ್ತಿ ಬೆಳೆದರೆ ಒಂದು-ಒಂದೂವರೆ ತಿಂಗಳಲ್ಲಿ ನಾವು ಸಾಮಾನ್ಯವಾಗಿ ತಿನ್ನುವ ಮೂಲಂಗಿಯು ರೆಡಿಯಾಗುತ್ತವೆ.
ಮೂಲಂಗಿಯ ಕಾಯಿಗಳು ಆಕಾರ ಮತ್ತು ರೂಪದಲ್ಲಿ ನಾವು ತಿನ್ನುವ ಮೂಲಂಗಿಯನ್ನೇ ಹೋಲುತ್ತಿದ್ದರೂ ಗಾತ್ರದಲ್ಲಿ ತುಂಬಾ ಚಿಕ್ಕವು. ಎಳೆಯದಾಗಿದ್ದಾಗ ತಿಳಿ ಹಸಿರಿನ ಬಣ್ಣದ ಕಾಯಿಗಳು, ಬಲಿಯುತ್ತಿದ್ದಂತೆ ಗಾಢವಾದ ಹಸಿರಿನ ಬಣ್ಣದವಾಗುತ್ತವೆ. ಬೀಜಗಳು ಬಲಿಯುವ ಕಾಲಕ್ಕೆ ತಿಳಿ ನೇರಳೆಯತ್ತ ತಿರುಗುತ್ತವೆ. ಎಳೆಯವಾಗಿದ್ದಾಗ ತುದಿಯಲ್ಲಿ ಚೂಪಾಗಿದ್ದು ಆಕರ್ಷಕವಾಗಿರುತ್ತವೆ. ಅವುಗಳನ್ನು ಕಿತ್ತು ಹಾಗೇ ತರಕಾರಿಯಂತೆ ಬಳಸುವುದಲ್ಲದೆ, ಉಪ್ಪಿನಕಾಯಿ ತಯಾರಿಸಲೂ ಬಳಸುತ್ತಾರೆ. ಸಂಪೂರ್ಣ ಬಲಿತ ಕಾಯಿಗಳು ಸ್ವಲ್ಪ ಹೆಚ್ಚು ಖಾರಯುತವಾಗಿದ್ದು, ಸಾಮಾನ್ಯವಾದ ಮೂಲಂಗಿಗಿಂತಲೂ ಇನ್ನೂ ಗಾಢವಾದ ರುಚಿಯನ್ನು ಹೊಂದಿರುತ್ತವೆ.
ನಮ್ಮ ದೇಶದಲ್ಲಿ ಉಷ್ಣವಲಯದ ಏಶಿಯಾದ ತಳಿಗಳು ಮತು ಶೀತವಲಯದ ಯೂರೋಪಿನ ತಳಿಗಳು ಎಂಬ ಎರಡು ಬಗೆಯ ಬೆಳೆಗಳಿವೆ. ಏಶಿಯಾದವು ವಾರ್ಷಿಕ ಬೆಳೆಗಳು, ಯೂರೋಪಿನವು ದ್ವಿವಾರ್ಷಿಕ ಬೆಳೆಗಳು. ಎರಡೂ ಸಾಕಷ್ಟು ನೀರು ಮತ್ತು ನಾರಿನಂಶವನ್ನು ಹೊಂದಿದ್ದು ನಮ್ಮ ಆಹಾರದಲ್ಲಿ ಒಂದಾಗಿವೆ. ಈಜಿಪ್ಟರಿಗೆ ಮೂಲಂಗಿಯು ಈಗಲೂ ಅತ್ಯಂತ ಜನಪ್ರಿಯವಾದ ತರಕಾರಿ. ಯೂರೋಪಿನಿಂದ ಅಮೆರಿಕಾ ತಲುಪಿದ ಮೊದಲ ಬೆಳೆಗಳಲ್ಲಿ ಮೂಲಂಗಿಯೂ ಒಂದು. ಹದಿನೇಳನೆಯ ಶತಮಾನದ ಆರಂಭಕ್ಕಾಗಲೇ ಮೂಲಂಗಿಯು ಅಮೆರಿಕಾದಲ್ಲಿ ನೆಲೆಯನ್ನು ಕಂಡಿತ್ತು.
ನಾವು ಸಾಮಾನ್ಯವಾಗಿ ತಿನ್ನುವ ಮೂಲಂಗಿಯು ವಿವಿಧ ಬಣ್ಣಗಳ ಬೇರುಗಡ್ಡೆಗಳಾಗಿ ಸಿಗುತ್ತವೆ. ಮೇಲಿನ ಹೊದಿಕೆಯ ಬಣ್ಣವು ಕೆಂದು, ಕೆಂಪು, ನೇರಳೆ, ನಸುಗಪ್ಪು ಹಳದಿ, ಹಸಿರು ಹಾಗೂ ಬಿಳಿಯದಾಗಿರುತ್ತದೆ. ಆದರೂ ಒಳಗಿನ ಭಾಗವು ಹೆಚ್ಚಾಗಿ ಬಿಳಿಯ ಬಣ್ಣವನ್ನೇ ಅಥವಾ ಅದರ ಹೊದಿಕೆಯ ಬಣ್ಣದ ತುಸು ಮಿಶ್ರಣವನ್ನೂ ಹೊಂದಿರುತ್ತದೆ.
ಜಪಾನಿನಲ್ಲಿ ಸುಕರಾಜಿಮಾ ಮೂಲಂಗಿ (Sakurajima Radish) ಎಂಬ ಹೆಸರಿನಿಂದ ಕರೆಯುವ ದೈತ್ಯ ಮೂಲಂಗಿಗಳಿವೆ. ಇವುಗಳು ಸಹಜವಾಗಿ 6 ಕಿಲೋಗ್ರಾಂ ನಷ್ಟು ಭಾರದವಾಗಿರುತ್ತವೆ. ಈ ಮೂಲಂಗಿಗಳು ಒಂದೊಂದೆ 40-45 ಕಿಲೋ ತೂಕದಷ್ಟು ಬೆಳೆಯುತ್ತವೆ. ಅಂತಹವುಗಳು ಸುಮಾರು 50 ಸೆಂ.ಮೀ ವ್ಯಾಸ ಅಥವಾ ದಪ್ಪನಾಗಿರುತ್ತವೆ. ಇದು ಮೂಲತಃ ಜಪಾನಿನ ಜೀವಂತ ಜ್ವಾಲಾಮುಖಿಯ ದ್ವೀಪವಾದ “ಸುಕರಾಜಿಮ”ದಲ್ಲಿ ಬೆಳೆಯುತ್ತಿತ್ತಂತೆ. ಹಾಗಾಗಿ ಇವುಗಳ ಪೂರ್ಣ ರೂಪವನ್ನು ಪಡೆಯಲು ಜ್ವಾಲಾಮುಖಿಯ ಬೂದಿಯನ್ನೇ ಗೊಬ್ಬರವಾಗಿ ಬಳಸಬೇಕಾದ ಅನಿವಾರ್ಯತೆಯೂ ಇದೆ. ಹಾಗಾಗಿ ಮೂಲದಲ್ಲಿ ನೂರಾರು ಎಕರೆಗಳಿದ್ದ ಇದರ ಬೆಳೆ ಇದೀಗ ಕಡಿಮೆಯಾಗುತ್ತಾ ಕೆಲವೇ ಎಕರೆಗಳಿಗೆ ಇಳಿದಿದೆ. ಆದರೂ ಇತ್ತೀಚೆಗಿನ ಸಣ್ಣ-ಪುಟ್ಟ ಲಾವಾರಸದ ಹೊರಸೂಸುವಿನಿಂದಾಗಿ ಕೆಲವು ಎಕರೆಗಳಷ್ಟು ಹೆಚ್ಚಿದ ಬಗ್ಗೆ ತಿಳಿಯಲಾಗಿದೆ. ಆದರೂ ಹತ್ತಾರು ಎಕರೆಗಳ ಬೆಳೆ ಇರಬಹುದೆಂಬ ಅಂದಾಜಿದೆ. ಜಪಾನಿನ ದಕ್ಷಿಣ ತುದಿಯ ಕಗೊಷಿಮಾ(Kagoshima)ಖಾರಿಯ ಬಳಿಯ ದ್ವೀಪದ ರಾಜಧಾನಿ ಆಸುಪಾಸಿನಲ್ಲಿ ಮಾತ್ರವೇ ಈ ದೈತ್ಯ ಮೂಲಂಗಿಯನ್ನು ಬೆಳೆಯಲಾಗುತ್ತಿದೆ. ಈ ಕಗೊಷಿಮಾವನ್ನು ಪೂರ್ವದ ನೇಪಲ್ಸ್ ಎಂದೂ ಕರೆಯಲಾಗುತ್ತದೆ. (ನೇಪಲ್ಸ್ ಇಟಲಿಯಲ್ಲಿರುವ ಜ್ವಾಲಾಮುಖಿ ಪರ್ವತವನ್ನು ಒಳಗೊಂಡ ಪ್ರದೇಶದ ಪಟ್ಟಣ)
ಮೂಲಂಗಿಯು ತನ್ನೊಳಗಿನ ನೀರು ಮತ್ತು ನಾರಿನಿಂದ ಆಹಾರವಾಗಿ ಬಳಕೆಯಾದಾಗ, ಲಿವರ್, ಪಿತ್ತಕೋಶ ಹಾಗೂ ಜಠರವನ್ನು ಸ್ವಚ್ಛವಾಗಿರಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವ ತರಕಾರಿ. ಇದನ್ನೇ ಪ್ರಮುಖವಾಗಿರಿಸಿಕೊಂಡು ಮೂಲಂಗಿಯನ್ನು ಜೀರ್ಣಶಕ್ತಿಯ ವೃದ್ಧಿಗಾಗಿ ಬಳಸಲು ಪ್ರೇರೇಪಿಸುತ್ತಾರೆ. ಹಸಿ ಮೂಲಂಗಿಯೂ ಸಹಾ ಗ್ಯಾಸ್ಟ್ರಿಕ್ ಅಥವಾ ವಾಯುವನ್ನು ನಿಯಂತ್ರಿಸಲು ಉತ್ತೇಜಕವಾದ ಆಹಾರವಾಗಿದೆ. ಮೂಲಂಗಿಯ ಒಟ್ಟಾರೆಯ ಆಹಾರ ಮತ್ತು ಔಷಧೀಯ ಲಾಭಗಳನ್ನು ಈ ಕೆಳಗಿನಂತೆ ಗಮನಿಸಬಹುದಾಗಿದೆ.
ಮೂಲಂಗಿಯ ಸೇವನೆಯು ಕೆಂಪು ರಕ್ತ ಕಣಗಳನ್ನು ಪೋಷಿಸಿ ದೇಹದಲ್ಲಿ ಆಮ್ಲಜನಕದ ದೊರಕುವಿಕೆಯನ್ನು ಹೆಚ್ಚಿಸುತ್ತದೆ. ಹೆಚ್ಚು ನಾರಿನಂಶದ ಕಾರಣ ದೇಹದ ಜೀರ್ಣಶಕ್ತಿಯನ್ನು ಹೆಚ್ಚಿಸಿ, ಲಿವರ್ (ಯಕೃತ್ತು) ಅನ್ನು, ಪಿತ್ತಕೋಶ(Gall Bladder)ವನ್ನೂ ರಕ್ಷಿಸುವ ಕೆಲಸವನ್ನು ನಿರ್ವಹಿಸುತ್ತದೆ. ಮೂಲಂಗಿಯಲ್ಲಿ ಹೆಚ್ಚಿನ ನೀರಿನಂಶವಿರುವುದು ತಂಪನ್ನು ಕೊಡುತ್ತದೆ.
ಮೂಲಂಗಿಯಲ್ಲಿರುವ ಆಂತೊಸಯನಿನ್‌ಗಳು (Anthocyanins) ಜೊತೆಗೆ ವಿಟಮಿನ್ನುಗಳಾದ “ಸಿ” “ಫೊಲಿಕ್ ಆಮ್ಲ” ಮತ್ತು “ಫ್ಲೆವಿನಾಯ್ಡ್”ಗಳು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಮೂಲಂಗಿಯಲ್ಲಿ ಸಾಕಷ್ಟು ಪೊಟ್ಯಾಸಿಯಂ ಖನಿಜವಿದ್ದು ಅದು ರಕ್ತದ ಚಲನೆಗೆ ಸಹಾಯಮಾಡಿ ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ. ಮೂಲಂಗಿಯಲ್ಲಿ ವಿಟಮಿನ್ “ಸಿ” ಇರುವುದರಿಂದ ಅದು ರೋಗ ನಿರೋಧಕ ಶಕ್ತಿಯನ್ನು ಕೊಡುತ್ತದೆ. ಶೀತ, ನೆಗಡಿ ಹಾಗೂ ಕೆಮ್ಮಿನಿಂದ ಬಳಲಿರುವಾಗ ಮೂಲಂಗಿಯ ಸೇವನೆಯು ಹಿತವನ್ನು ಕೊಡುತ್ತದೆ. ಇದನ್ನು ಆಗಾಗ್ಗೆ ತಿನ್ನವುದರಿಂದ ಲಾಭಗಳಿವೆ! ಕಾರಣ ಇದರಲ್ಲಿರುವ ವಿವಿಧ ರಸಾಯನಿಕಗಳು ಉತ್ಕರ್ಷಣ ಗುಣವನ್ನು ಹೊಂದಿದ್ದು ಹಾನಿಕಾರಕ ರಸಾಯನಿಕ ಧಾತುಗಳನ್ನು ನಿಯಂತ್ರಿಸುತ್ತವೆ. ಹಾಗಾಗಿ ದೀರ್ಘಾಯುಷ್ಯಕ್ಕೂ ಮೂಲಂಗಿಯು ಸಹಕಾರಿ. ಮೂಲಂಗಿಯು ಕೊಲಾಜಿನ್ (Collagen) ಎನ್ನುವ ರಸಾಯನಿಕವನ್ನು ಉತ್ಪಾದಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ರಕ್ತ ನಾಳಗಳನ್ನು ಸ್ವಚ್ಚಗೊಳಿಸುವ ಕಾರ್ಯದಲ್ಲಿ ಸಹಾಯ ಮಾಡುವುದರಿಂದ ರಕ್ತನಾಳಗಳ ಆರೋಗ್ಯವನ್ನು ವೃದ್ಧಿಸುತ್ತದೆ. ಸಾಮಾನ್ಯವಾಗಿ ಬೇರಿನ ಆಹಾರದ ಉತ್ಪನ್ನಗಳು ಆಮ್ಲತೆ, ಬೊಜ್ಜು, ಗ್ಯಾಸ್ಟ್ರಿಕ್ ಮತ್ತು ವಾಂತಿಯ ನಿವಾರಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವುದರಿಂದ ಒಟ್ಟಾರೆ ಪಚನಕ್ಕೆ ಅನುಕೂಲಕರ.
ಮೂಲಂಗಿಯು ಪೊಟ್ಯಾಸಿಯಂ ಅಲ್ಲದೆ, ಜಿಂಕ್ (ಸತು), ರಂಜಕ, ಮ್ಯಾಗ್ನಿಸಿಯಂ, ಕ್ಯಾಲ್ಸಿಯಂ, ತಾಮ್ರ, ಮ್ಯಾಂಗನೀಸ್ ಮುಂತಾದ ವಿವಿಧ ಖನಿಜಗಳನ್ನು ಹೊಂದಿದ್ದು ಉತ್ತಮ ಆಹಾರದ ತರಕಾರಿಯಾಗಿದೆ. ಮೂಲಂಗಿ ರಸವನ್ನು ದಿನವೂ ಕುಡಿಯುವುದರಿಂದ ದೇಹದ ಚರ್ಮವು ಕಾಂತಿಯುತವಾಗುತ್ತದೆ. ಜೊತೆಗೆ ಮೂಲಂಗಿಯು ತಂಪಾದ ಹಿತವನ್ನು ಕೊಟ್ಟು ದೇಹವನ್ನು ಪೋಷಿಸುತ್ತದೆ.
ಮೂಲಂಗಿಯ ಬೇರಿನ ಗಡ್ಡೆಯ ಕಿರೀಟದಂತಿರುವ ಹಸಿರಾದ ಎಲೆಗಳೂ ಸಹಾ ಉತ್ತಮವಾದ ಆಹಾರ. ಇದರಲ್ಲಿನ ನಾರಿನಂಶ ಹಾಗೂ ಹಲವು ಆಹಾರಾಂಶಗಳಿದ್ದು ನಮ್ಮ ದೇಹಕ್ಕೆ ಉತ್ತಮ ಆರೋಗ್ಯವನ್ನು ಕೊಡುತ್ತವೆ. ಇದರ ಬಳಕೆಯು ಜಾಂಡೀಸ್ ಸಮಯದಲ್ಲಿ ಹಳದಿ ಬಣ್ಣಕ್ಕೆ ಕಾರಣವಾದ ಬಿಲುರುಬಿನ್ ರಸಾಯನಿಕವನ್ನು ನಿಯಂತ್ರಿಸಲು ಸಹಾಯವಾಗುತ್ತದೆ ಎಂದು ಆಯುರ್ವೇದವು ನಂಬುತ್ತದೆ. ನಮ್ಮ ರಾಜ್ಯದ ಉತ್ತರದ ಜಿಲ್ಲೆಗಳಲ್ಲಿ ಮೂಲಂಗಿ ಸೊಪ್ಪಿನ ಬಳಕೆಯು ತುಂಬಾ ಸಹಜವಾಗಿದ್ದು ದಕ್ಷಿಣದ ಜಿಲ್ಲೆಗಳಲ್ಲಿ ಕಡಿಮೆ. ಹಾಗಾಗಿ ಮಾರುಕಟ್ಟೆಗಳಲ್ಲಿ ಮೂಲಂಗಿಗೆ ಹಸಿರು ಕೀರೀಟಯುಳ್ಳ ನೋಟವು ಹಾಗೆಯೇ ಸೊಪ್ಪನ್ನು ಕಿತ್ತ ಬರಿ ಬಿಳಿಯ ಬೇರುಗಡ್ಡೆಯ ನೋಟವು ಕಾಣಬರುತ್ತದೆ.
ಮೂಲಂಗಿಯ ತಳಿಗಳಲ್ಲಿ ಹಸಿಯಾಗಿ ಬಳಸಬಲ್ಲ ಕಡಿಮೆ ಖಾರದ ಹಾಗೂ ಬೇಯಿಸಿ ಬಳಸುವ ಗಾಢವಾದ ರುಚಿಯ ಬಗೆಗಳು ಸಾಮಾನ್ಯವಾದವು. ಮೂಲಂಗಿಯು ಮೂಲತಃ ಬೇರು ಆಗಿರುವುದರಿಂದ, ಬೆಳೆದ ನೆಲದ ಪ್ರಭಾವವನ್ನು ನೇರವಾಗಿ ಹಿಡಿದಿಟ್ಟು ರುಚಿಯಲ್ಲಿ ಹಾಗೂ ಅದರ ಗಾಢತೆಯಲ್ಲಿ ಪ್ರತಿಫಲಿಸುತ್ತದೆ. ಈ ಗಾಢತೆ ಅಥವಾ ಪಂಜೆನ್ಸಿಯು ಅದರಲ್ಲಿರುವ ಅಲ್ಕಲಾಯ್ಡ್‌ಗಳು ಕಾರಣ. ಇವುಗಳಲ್ಲಿಯೂ ಐಸೊಸಯನೇಡ್, ಮೀಥೈಲ್ ಗುಂಪುಗಳು ಬ್ಯುಟೈಲ್ ಗುಂಪುಗಳು ಮುಂತಾಗಿವೆ. ಇವುಗಳ ಸಾಂದ್ರತೆಯ ಆಧಾರದ ಮೇಲೆ ಮೂಲಂಗಿಯು ಖಾರ ಅಥವಾ ಗಾಢವಾದ ರುಚಿಯನ್ನು ಹೊಂದಿರುತ್ತದೆ. ಬಿಳಿಯ ಮೂಲಂಗಿಯ ಜೊತೆಗೆ ಕೆಂದು, ಅಥವಾ ಪಿಂಕ್ ಕೂಡ ಸಾಮಾನ್ಯವಾಗಿ ಮಾರುಕಟ್ಟೆಗಳಲ್ಲಿ ಕಾಣಬರುತ್ತವೆ. (ಆದರೆ ಇವು ಟರ್ನಿಪ್ಪುಗಳಲ್ಲ) ಇವುಗಳ ಪಿಂಕ್ ಬಣ್ಣಕ್ಕೆ ಕಾರಣ ಹೊದಿಕೆಯಲ್ಲಿ ಸಾಂಧ್ರವಾಗಿರುವ ಆಂತೊಸಯನಿನ್ (Anthocyanin) ರಸಾಯನಿಕ.
ಮೂಲಂಗಿಯು ಅತಿಹೆಚ್ಚು ಬಳಕೆಯಾಗುವ ತರಕಾರಿಗಳಲ್ಲಿ ಜಗತ್ತಿನಾದ್ಯಂತ ಜನಪ್ರಿಯವಾಗಿದೆ. ಹೆಚ್ಚೂ ಕಡಿಮೆ ಎಲ್ಲಾ ಸಂಸ್ಕೃತಿಯ ತಾಟನ್ನೂ ತಲುಪಿದೆ. ಅದರಿಂದ ಒಟ್ಟಾರೆ ದೊರೆಯುವ ಆಹಾರಾಂಶಗಳು ಕಡಿಮೆಯೆ ಆದರೂ ಅದರ ರಸಭರಿತವಾದ ಗುಣ, ಜೊತೆಗೆ ಸಾಕಷ್ಟು ನಾರಿನಂಶದ ಹಿತ ಅದನ್ನು ಜಗತ್ತಿನ ಎಲ್ಲ ನಾಲಿಗೆಯ ರುಚಿಗಳಲ್ಲೂ ಸ್ಥಾನವನ್ನು ಪಡೆದಿದೆ. ಹಸಿಯಾಗಿ, ಮೊಸರಿನ ಜೊತೆಗೆ (ರಾಯಿತದಂತೆ) ಒಗ್ಗರಣೆಕೊಟ್ಟೋ, ಬೇಯಿಸಿಯೋ ಅಂತೂ ವಿವಿಧ ಬಗೆಯಲ್ಲಿ ನಮ್ಮ ಹೊಟ್ಟೆಯ ಹಿತವನ್ನು ಕಾಪಾಡುತ್ತಿದೆ. 25ರಿಂದ 35 ದಿನಗಳೊಳಗೇ ಬೆಳೆಸಬಹುದಾದ್ದರಿಂದ ಮಕ್ಕಳ ತೋಟವನ್ನು ಹೊಕ್ಕ ಕೀರ್ತಿಯು ಮೂಲಂಗಿಗಿದೆ. ಮನೆಯ ಕೈತೋಟಗಳಲ್ಲಂತೂ ಸುಲಭವಾಗಿ ಬೆಳೆಸುವ ತರಕಾರಿ. ಅದರ ಹೆಸರಿನ ಹುಟ್ಟೇ “ಸುಲಭವಾಗಿ ಬೆಳೆಸಬಲ್ಲ” ಪದದಿಂದ ಬಂದದ್ದಲ್ಲವೇ?
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್
Informative
very captivating write up ….