You are currently viewing ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವೇ?

ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವೇ?

ವಿಖ್ಯಾತ ಪಕ್ಷಿ ತಜ್ಞ ಡಾ.ಸಲೀಂ ಅಲಿಯವರು ತಮ್ಮ ಆತ್ಮ ಚರಿತ್ರೆಯನ್ನು “ಒಂದು ಗುಬ್ಬಚ್ಚಿಯ ಪತನ-(The Fall of a Sparrow)” ಎಂದೇ ಕರೆದಿದ್ದಾರೆ. ತೊಂಬತ್ತೊಂದು ವರ್ಷಗಳ ಸುದೀರ್ಘ ಅವಧಿಯ ತಮ್ಮ ಜೀವಿತಕಾಲದ ಕಡೆಯಲ್ಲಿ ತಮ್ಮ ಹಾಗೂ ಪಕ್ಷಿ ಸಂಕುಲಗಳ ನಡುವಣ ಬೆಸುಗೆಯನ್ನು, ಅರಿವಿನ ಹುಡುಕಾಟವನ್ನೂ ಬಾಲ್ಯದಲ್ಲಿನ “ಒಂದು ಗುಬ್ಬಚ್ಚಿಯ ಪತನ”ದ ನೆನಪಿನ ಹಿನ್ನೆಲೆಯಲ್ಲಿ ತಂದು ದಾಖಲಿಸಿದ್ದಾರೆ. ಅವರಿನ್ನೂ ಬಾಲಕರಾಗಿದ್ದಾಗ ಆಟಿಕೆಯ ನೆಪದಲ್ಲಿ ಹೊಡೆದುರುಳಿಸಿದ್ದ ಗುಬ್ಬಚ್ಚಿಯೊಂದು ಅವರನ್ನು, ಆಗಿನ್ನೂ ಅಷ್ಟೇನೂ ಬೆಳೆಯದಿದ್ದ ಪಕ್ಷಿ ವಿಜ್ಞಾನದತ್ತ ಒಲಿದು ಬೆಳೆಯುವುದಕ್ಕೆ ಸಾಧ್ಯವಾದ ನಿರೂಪ ಅದು. ಒಂದು ಪುಟ್ಟ ಗುಬ್ಬಚ್ಚಿಯ ಸಾವು, ಜಗತ್ತು ಕಂಡ ಆತ್ಯಂತಿಕ ಮಹಾನ್‌ ಪಕ್ಷಿ ಪ್ರೇಮಿಯೊಬ್ಬರನ್ನು ರೂಪಿಸಿದೆ.

ಇದೀಗ ಗುಬ್ಬಚ್ಚಿಗಳು ಅಪರೂಪವಾಗುತ್ತಿರುವ ಸಂದರ್ಭದಲ್ಲಿ, ವಿಶ್ವ ಗುಬ್ಬಚ್ಚಿಯ ದಿನದಂದು ಸಲೀಂ ಅಲಿಯವರ ಆತ್ಮಕಥನದ ಶೀರ್ಷಿಕೆಯ ಹಿನ್ನೆಲೆಯನ್ನು ನೆನಪಿಗೆ ತರಬೇಕಿದೆ. ಗುಬ್ಬಚ್ಚಿಗಳ ಮಹತ್ವ ಸಾರಲು ಹಾಗೂ ಅವುಗಳ ರಕ್ಷಣೆ ಕಾಳಜಿ ಬಗ್ಗೆ ಅರಿವು ಮೂಡಿಸಲು 2010 ರಿಂದ ಪ್ರತಿ ವರ್ಷವೂ ಮಾರ್ಚ್ 20ರಂದು ವಿಶ್ವ ಗುಬ್ಬಚ್ಚಿ ದಿನವನ್ನಾಗಿ ಆಚರಿಸಲಾಗುತ್ತಿದೆ.  ವಿಶ್ವ ಗುಬ್ಬಚ್ಚಿಗಳ ದಿನವನ್ನು ಆರಂಭಿಸಿದ ಕೀರ್ತಿ ನಮ್ಮ ದೇಶದ ಮಹಾರಾಷ್ಟ್ರ ರಾಜ್ಯದ ನಾಸಿಕ್‌ ಮೂಲದ ಮೊಹಮದ್‌ ದಿಲವಾರ್ ಅವರಿಗೆ ಸಲ್ಲುತ್ತದೆ. ಕಳೆದ 2006 ರಲ್ಲಿ ಅವರು ಸ್ಥಾಪಿಸಿ ಮುನ್ನಡೆಯಿಸುತ್ತಿರುವ ನೇಚರ್‌ ಫಾರ್‌ ಎವರ್‌ ಸೊಸೈಟಿ ಆಫ್‌ ಇಂಡಿಯಾ (Nature Forever Society of India) ಸಂಸ್ಥೆಯು ಪ್ರಮುಖವಾಗಿ ಫ್ರಾನ್ಸ್‌ ನ ಎಕೊ-ಸಿಸ್‌ ಆಕ್ಷನ್‌ ಫೌಂಡೇಶನ್‌ (Eco-Sys Action Foundation of France) ಹಾಗೂ ಮತ್ತಿತರ ಹಲವಾರು ಅಂತರರಾಷ್ಟ್ರೀಯ ಸಂಸ್ಥೆಗಳ ಸಹಯೋಗದೊಡನೆ ವಿಶ್ವ ಗುಬ್ಬಚ್ಚಿಯ ದಿನವನ್ನು ಆರಂಭಿಸಿದೆ.

ಮೊಹಮದ್‌ ದಿಲವಾರ್‌ (Mohammed Dilawar) ಅವರು ತಮ್ಮ ಹುಟ್ಟಿದ ದಿನ ಮಾರ್ಚ್‌ 20 ನೇ ದಿನಾಂಕವನ್ನು ಗುಬ್ಬಚ್ಚಿಗಳ ಸಂರಕ್ಷಣೆಯ ದಿನವನ್ನಾಗಿಸಿದ್ದಾರೆ. ತಮ್ಮ ಹುಟ್ಟನ್ನೇ ಗುಬ್ಬಚ್ಚಿಗಳ ಸಂರಕ್ಷಣೆಗೆ ಮೀಸಲಿಟ್ಟು, ತಮ್ಮ ಜನ್ನ ದಿನವನ್ನು ಗುಬ್ಬಚ್ಚಿಗಳ ದಿನವನ್ನಾಗಿ ಆಚರಿಸುತ್ತಲೇ ಬಂದಿದ್ದು, ಅದೇ ವಿಶ್ವ ಗುಬ್ಬಚ್ಚಿಗಳ ದಿನವಾಗಿದೆ. ಮೊಟ್ಟ ಮೊದಲು 2009ರಲ್ಲಿ ವಿಶ್ವ ಗುಬ್ಬಚ್ಚಿ ದಿನವೆಂದು ಆಚರಿಸಿದರೂ ನಂತರದ ವರ್ಷದಿಂದ ಜಾಗತಿಕವಾಗಿ ಮನ್ನಣೆಗೊಂಡು ಇದೀಗ 30ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಆಚರಿಸಲಾಗುತ್ತಿದೆ. ನಾಸಿಕ್‌ನ RVK ವಿಜ್ಞಾನ ಕಾಲೇಜಿನಲ್ಲಿ ಇಕಾಲಜಿಯ ಉಪನ್ಯಾಸಕರಾಗಿದ್ದ ಮೊಹಮದ್‌ 2006ರಲ್ಲಿ ಪಕ್ಷಿಗಳ ಸಂರಕ್ಷಣೆಯ ರಾಯಲ್‌ ಸೊಸೈಟಿ (Royal Society for the Protection of Birds -RSPB )ಗೆ ಪ್ರಾಜೆಕ್ಟ್‌ ಒಂದರಲ್ಲಿ ಸೇರಿ 2010ರವರೆಗೂ ಅದರಲ್ಲೇ ಪಕ್ಷಿ ಸಂರಕ್ಷಣೆಯ ಪಾಠಗಳನ್ನು ಕಲಿತವರು. ಅಂದಿನಿಂದಲೂ ಗುಬ್ಬಚ್ಚಿಗಳ/ಪಕ್ಷಿಗಳ ಸಂರಕ್ಷಣೆಯಲ್ಲಿ ಕೃತಕ ಗೂಡು ನಿರ್ಮಾಣವೇ ಮುಂತಾದ ಯೋಜನೆಗಳ ಮೂಲಕ ಇಂದಿಗೂ ಕ್ರಿಯಾಶೀಲರಾಗಿದ್ದಾರೆ.  ಅವರನ್ನು ಅಮೆರಿಕದ ಟೈಮ್‌ ಪತ್ರಿಕೆಯು ಪರಿಸರದ ಹೀರೋ-2008 (“Heroes of the Environment” for 2008) ಎಂದೂ ಗುರುತಿಸಿತ್ತು.  ತಮ್ಮದೇ ಸಂಸ್ಥೆಯ ಕಚೇರಿಯಲ್ಲಿ ಒಮ್ಮೆ ಅನೌಪಚಾರಿಕ ಚರ್ಚೆಯಲ್ಲಿ “ವಿಶ್ವ ಗುಬ್ಬಚ್ಚಿ ದಿನ” ಆಚರಣೆಯ ಮಾತು ಬಂದಿದ್ದು ಆಚರಣೆಗೆ ಮೊದಲಾಗಿದೆ. ಪ್ರತೀ ವರ್ಷವೂ ಒಂದೊಂದು ಥೀಮ್‌ ಗಳಿಂದ ಆಚರಿಸುತ್ತಾ ಬಂದಿರುವ ಗುಬ್ಬಚ್ಚಿಗಳ ಮೇಲಿನ ಪ್ರೀತಿಯು ಈ ವರ್ಷಕ್ಕೆ ““I Love Sparrows” ಎಂಬ ಶೀರ್ಷಿಕೆಯನ್ನೇ ಆಯ್ಕೆ ಮಾಡಿದೆ.

“ವಿಶ್ವ ಗುಬ್ಬಚ್ಚಿಗಳ ದಿನ” ದಂದು

 ಗುಬ್ಬಿ ಗುಬ್ಬಿ ಚಿಂವ್ ಚಿಂವ್ ಎಂದು ಕರೆಯುವೆ ಯಾರನ್ನು?   …. ಆಚೆ ಈಚೆ ಹೊರಳಿಸಿ ಕಣ್ಣು ನೋಡುವೆ ಏನನ್ನು? … ಮೇಲೆ ಕೆಳಗೆ ಕೊಂಕಿಸಿ ಕೊರಳನು ಹುಡುಕುವೆ ಏನಲ್ಲಿ?  …. ಕಾಳನು ಹುಡುಕುತ ನೀರನು ನೋಡುತ ಅಲೆಯುವೆ ಏಕಿಲ್ಲಿ? …. ..  ಎಂದು ಗುಬ್ಬಚ್ಚಿಗೆ ಮಕ್ಕಳು ಕೇಳುವ ಪ್ರಶ್ನೆಗಳ ಒಂದು ಸರಮಾಲೆಯಾಗಿಸಿದ, ಶ್ರೀಯುತ ಎ. ಕೆ. ರಾಮೇಶ್ವರ ಅವರ ಶಿಶುಗೀತೆಯ ಸಾಲುಗಳು, ಗುಬ್ಬಿಗಳತ್ತ ಮಕ್ಕಳನ್ನಷ್ಟೇ ಏಕೆ?…  ಎಲ್ಲರನ್ನೂ ಆಕರ್ಷಿಸುತ್ತಿವೆ. ಅವುಗಳ ಅಲೆದಾಟ ಹುಡುಕಾಟಗಳು, ಮೇಲೆ-ಕೆಳಗೆ ಕೊರಳನು ಕೊಂಕಿಸಿ, ಕಾಳು-ನೀರನ್ನು ಹುಡುಕುತ್ತಾ ಅಲೆದಾಡುವ ಸ್ಥಿತಿಯಲ್ಲಿ ಅವುಗಳ ಇಕಾಲಜಿಯ ಗಂಭೀರ ಪರಿಸ್ಥಿತಿಯ ಹಿನ್ನೆಲೆಯನ್ನೂ ಕೊಟ್ಟಿದೆ.                                                 

       ಗುಬ್ಬಿಯನ್ನು ಮಕ್ಕಳಿಗೆ ಪರಿಚಯಿಸುವಾಗ ಗುಬ್ಬಚ್ಚಿಯಾಗಿರುವುದು, ಅದನ್ನು ಆಪ್ತವಾಗಿಸಿದೆ.  ಹಿಂದೆಲ್ಲಾ ಮನೆಯ ಅಂಗಳ, ದೇವಸ್ಥಾನ, ಎಲ್ಲೆಲ್ಲೂ ಕಾಣುತ್ತಿದ್ದ ಗುಬ್ಬಿಗಳು ಈಗ ಅಪರೂಪವಾಗಿದೆ. ಬಿಹಾರದ ರಾಜ್ಯ ಪಕ್ಷಿಯೂ ಆದ ಗುಬ್ಬಿಯು ಅಸಾಮಾನ್ಯ ಬುದ್ಧಿಯ, ಸೌಮ್ಯ ಸ್ವಭಾವದ, ಜಾಗರೂಕ ಪಕ್ಷಿ. ಗುಬ್ಬಿ ಎಂದೊಡನೆ ಏನೋ ಮನಸ್ಸಿಗೆ ಒಂಥರಾ ಮುದ. ಬದುಕಿಗೆ ತೀರಾ ಹತ್ತಿರವಾದಂತೆ ಭಾಸವಾಗುತ್ತದೆ . ಗುಬ್ಬಚ್ಚಿಗಳು ಸಾಮಾನ್ಯವಾಗಿ ಜನರ ನಡುವೆಯೇ ಗೂಡು ಕಟ್ಟುವುದರಿಂದಲೇ ಅವನ್ನು ಮನೆ ಗುಬ್ಬಚ್ಚಿ ಎನ್ನುತ್ತಾರೆ. ಗುಬ್ಬಚ್ಚಿಯ ವೈಜ್ಞಾನಿಕ ಹೆಸರು ಪಾಸರ್ ಡೊಮೆಸ್ಟಿಕಸ್(Passer domesticus). ಪ್ಯಾಸೆರಿಡೇ (Passeridae) ಕುಟುಂಬಕ್ಕೆ ಸೇರಿದ ಗುಬ್ಬಚ್ಚಿಗಳು ಹೆಚ್ಚಾಗಿ ಜನವಸತಿ ಇರುವ ಕಡೆ ವಾಸಿಸುತ್ತವೆ.

       ಮನೆಯಂಗಳದಲ್ಲಿ ಸಹಜವಾಗಿ ಕಾಣಬರುತ್ತಿದ್ದ ಗುಬ್ಬಿಗಳೀಗ ಮೊದಲಿನಷ್ಟು ಇಲ್ಲ. ಆದರೂ ಕಳೆದ ಒಂದೆರಡು ದಶಕಗಳಿಂದ ತುಸು ಅಭಿವೃದ್ಧಿಯು ಕಂಡಿದೆ. ನಗರೀಕರಣದಿಂದಾಗಿ ಮನೆಯ ಮಾಡುಗಳಲ್ಲಿ ಸಿಗುತ್ತಿದ್ದ ಜಾಗವೀಗ ಮರೆಯಾಗಿ ಗೂಡು ನಿರ್ಮಿತಿಗೆ ಅಡ್ಡಿಯಾಗಿದೆ. ಸಾಲದಕ್ಕೆ ಕೃಷಿಯಲ್ಲಿ ಬಳಕೆಯಾಗುವ ಕ್ರಿಮಿನಾಶಕ-ರಸಾಯನಿಕಗಳಿಂದಾಗಿ ತೀವ್ರವಾದ ತೊಂದರೆಯನ್ನು ಅನುಭವಿಸಿವೆ.  

ಕಾಳುಗಳನ್ನು ಹೆಕ್ಕುತ್ತಾ ಚಿಂವ್, ಚಿವ್ ಎನ್ನುತ್ತ, ಪುರ‍್ರನೆ ಹಾರುವುದನ್ನು ನೋಡುವುದೇ  ಕಣ್ಣಿಗೆ ಹಬ್ಬ.  ನೈಸರ್ಗಿಕ ಸಮತೋಲನ ಕಾಪಾಡುವಲ್ಲಿಯೂ ಯಶಸ್ವಿಯಾದ ಮುದ್ದಾದ ಈ ಗುಬ್ಬಿ ಮರಿಗಳ ಬಣ್ಣ ಕಂದು.ಬೆನ್ನು ಮತ್ತು ಪಕ್ಕಗಳಲ್ಲಿ ಬಿಳಿ ಮತ್ತು ಕಪ್ಪು ಬಣ್ಣಗಳು ಮಿಶ್ರಿತವಾಗಿರುತ್ತದೆ. ಮುಂಭಾಗ ಬೆಳ್ಳಗಿರುತ್ತದೆ. ಗಂಡು ಗುಬ್ಬಿಗೆ ಗಂಟಲ ಮೇಲೆ ಕಪ್ಪು ಕಲೆ ಇರುತ್ತದೆ. ಇದರ ಧ್ವನಿ ಕೇಳುವುದು ವಸಂತಕಾಲದ ಆರಂಭದಲ್ಲಿ. ತಾಯಿ ಗುಬ್ಬಿ ನಸು ಹಸಿರು ಮಿಶ್ರಿತ ಬಿಳಿ ಬಣ್ಣದ ಮೂರು ಅಥವಾ ನಾಲ್ಕು ಮೊಟ್ಟೆಗಳನ್ನು ಇಡುತ್ತದೆ. ಗುಬ್ಬಚ್ಚಿ ಒಂದು ವರುಷದಲ್ಲಿ ಅನೇಕ ಬಾರಿ ಮೊಟ್ಟೆಗಳನ್ನು ಇಟ್ಟು, ತನ್ನ ಸಂತಾನವನ್ನು ಬೆಳೆಸಿಕೊಳ್ಳುತ್ತದೆ.ಈ ಹಕ್ಕಿಯ ಕಾಲುಗಳು ತೀರ ತೆಳ್ಳಗಿರುವುದರಿಂದ ಅದು ತನ್ನ ಮೈಭಾರವನ್ನು ಹೊರಲಾರದು.ಹಾಗಾಗಿ ಗುಬ್ಬಚ್ಚಿ ನಡೆಯುವುದು ವಿರಳ. ಹತ್ತಿರದ ಗಮ್ಯವನ್ನು ಜಿಗಿಯುತ್ತ ಅಥವಾ ಹಾರುತ್ತ ಸೇರಿಕೊಳ್ಳುವುದನ್ನು ಗಮನಿಸಬಹುದಾಗಿದೆ.

ಇದರ ಆಹಾರ ವೈವಿಧ್ಯಮಯವಾಗಿದೆ. ಕೀಟಗಳಿಂದ ಹಿಡಿದು ಮಾನವ ತ್ಯಾಜ್ಯದವರೆಗೆ ಆರಿಸಿ ತಿನ್ನುತ್ತದೆ. ಪರಿಚಯವಿಲ್ಲದ ಆಹಾರವನ್ನು ತಕ್ಷಣ ಸೇವಿಸುವುದಿಲ್ಲ. ಗುಬ್ಬಚ್ಚಿಗಳಲ್ಲಿ ಒಬ್ಬರು ಆಹಾರವನ್ನು ಸವಿಯುವವರೆಗೂ ಇಡೀ ಹಿಂಡು ಅಪರಿಚಿತ ಭಕ್ಷ್ಯವನ್ನು ತಿನ್ನುವುದಿಲ್ಲ. ವಸಂತಕಾಲದಲ್ಲಿ ಗುಬ್ಬಚ್ಚಿಗಳು ಗೂಡುಗಳನ್ನು ನಿರ್ಮಿಸಲು ಪ್ರಾರಂಭಿಸುತ್ತವೆ. ಒಂದಕ್ಕಿಂತ ಹೆಚ್ಚು ಸಂತತಿಯನ್ನು ಹುಟ್ಟು ಹಾಕಲು ಸಮಯ ಬೇಕಾಗುತ್ತದೆ, ಆದ್ದರಿಂದ ಹೆಣ್ಣಿಗೆ 4-5 ದಿನಗಳು ಮೊಟ್ಟೆಗಳನ್ನು ಇಡಲು ಮತ್ತು ಕಾವುಕೊಡಲು ಖರ್ಚುಮಾಡುತ್ತವೆ, ನಂತರ ಸುಮಾರು ಎರಡು ವಾರಗಳವರೆಗೆ ಪೋಷಕರು ಗೂಡಿನಲ್ಲಿ ಮರಿಗಳಿಗೆ ಆಹಾರವನ್ನು ನೀಡುತ್ತವೆ . ಗಿಡಗಳಿಗೆ ಬರುವ ಹುಳುಗಳನ್ನು ಸಹಾ ಇವು ತಿನ್ನುತ್ತವೆ. ಸುರಕ್ಷಿತ ಭಾವನೆ ಮತ್ತು ಆಹಾರ ಲಭ್ಯತೆ ಇದ್ದರೆ ಮಾತ್ರ ಗೂಡುಗಳನ್ನು ನಿರ್ಮಿಸುತ್ತವೆ. ಗುಬ್ಬಿ ಗೂಡಿನ ಒಳಾಂಗಣ ವಿನ್ಯಾಸದಲ್ಲಿ ಹೆಣ್ಣುಗುಬ್ಬಿಯೇ ಎತ್ತಿದ ಕೈ. ಗೂಡಿನ ಸಾಮಗ್ರಿಗಳನ್ನು ಗಂಡು ಗುಬ್ಬಿ ತರುತ್ತಿದ್ದರೂ ಗೂಡಿನೊಳಗೆ ಜೋಡಿಸುವ ಕೆಲಸ ಮಾತ್ರ ಹೆಣ್ಣು ಗುಬ್ಬಿ. ಗುಟುಕು ಕೊಡುವುದರಲ್ಲಿ ಹೆಣ್ಣು ಹಕ್ಕಿ ಜಾಸ್ತಿ  ಗಂಡು ಹಕ್ಕಿಯೂ ಒಮ್ಮೊಮ್ಮೆ ಈ ಕೆಲಸವನ್ನು ನಿರ್ವಹಿಸುತ್ತದೆ.  ಈ ಹಕ್ಕಿಯ ಜಾತಿಗಳು ಮತ್ತು ಉಪಜಾತಿಗಳನ್ನು ಸ್ಪಷ್ಟವಾಗಿ ಗುರುತಿಸಿದ್ದಾರೆ. ಈ ಹಕ್ಕಿಯ ಬಹಳಷ್ಟು ಜಾತಿಗಳಿವೆ – ಸುಮಾರು 25 ಪ್ರಭೇದಗಳು ಇವೆ. ಪ್ರಮುಖವಾಗಿ ಹಿಮ ಫಿಂಚ್, ಕಪ್ಪು ಎದೆಯ, ರೆಡ್ ಹೆಡ್, ಕಲ್ಲು, ಮಂಗೋಲಿಯನ್ ,ಭೂಮಿಯ ಗುಬ್ಬಚ್ಚಿ, ಸಣ್ಣ ಕಾಲ್ಬೆರಳಗಳ ಗುಬ್ಬಿ. ಒಟ್ಟಾರೆ ಪಕ್ಷಿ ಪ್ರಪಂಚದಲ್ಲಿ ಗುಬ್ಬಚ್ಚಿಗಳ ಸಮೂಹ ಗಮನಾರ್ಹವಾಗಿದೆ. ಜಾಗತಿಕವಾಗಿ ಸುಮಾರು 1600 ದಶಲಕ್ಷ ಗುಬ್ಬಚ್ಚಿಗಳು ಇರಬಹುದೆಂದು BBC ಯು ವರದಿಯೊಂದರಲ್ಲಿ (BBC 18 May 2021) ದಾಖಲಿಸಿದೆ.        

ಗುಬ್ಬಚ್ಚಿ ರೈತರ ಮತ್ತು ಜನಸಾಮಾನ್ಯರ ಜೀವನದ ಪ್ರಮುಖ ಭಾಗವಾಗಿತ್ತು.ಮನುಷ್ಯರಿಗೆ ತೊಂದರೆ ಕೊಡುತ್ತಿದ್ದ ಸೊಳ್ಳೆಗಳು ಮತ್ತು ಕೀಟಗಳನ್ನು ತಿನ್ನುತ್ತಿದ್ದದ್ದಲ್ಲದೇ ಮನೆಯ ಮುಂದೆ ಕುಟ್ಟಿ, ಬೀಸಿ ಚೆಲ್ಲಿರುತ್ತಿದ್ದ ಧಾನ್ಯಗಳನ್ನು ತಿಂದು ಪರಿಸರವನ್ನು ಸ್ವಚ್ಚಗೊಳಿಸುತ್ತಿದ್ದವು. ಅದೇ ರೀತಿ ಹೊಲದಲ್ಲಿ ಗಿಡಗಳಿಗೆ ಆವರಿಸಿಕೊಂಡಿರುತ್ತಿದ್ದ ಕೀಟಗಳನ್ನು ತಿನ್ನುವ ಮೂಲಕ ರೈತರ ಸ್ನೇಹಿತರಾಗಿದ್ದವು.

ಕೃಷಿಯಲ್ಲಿ ಅತಿಯಾಗಿ ಬಳಸುವ ಕೀಟನಾಶಕ ಮತ್ತು ಆವಾಸ ಸ್ಥಾನಗಳ ಕೊರತೆ ಇವುಗಳನ್ನು ಅಳಿವಿನ ಅಂಚಿಗೆ ತಂದಿಟ್ಟಿವೆ. ನಾವು ಬಳಸುವ ಇಂಧನಗಳ ರಾಸಾಯನಿಕಗಳಿಂದ ಇವುಗಳ ಎಣಿಕೆ ಕಡಿಮೆಯಾಗುತ್ತಿದೆ. ರಾಸಾಯನಿಕಗಳಿಂದ ಆಗುವ ಮಾಲಿನ್ಯ ಗುಬ್ಬಚ್ಚಿ ಮರಿಗಳಿಗೆ ಅಗತ್ಯವಾಗಿ ಬೇಕಾದ ಕೀಟಗಳನ್ನು ಕೊಲ್ಲುತ್ತದೆ ಬೆಳೆದ ಗುಬ್ಬಚ್ಚಿಗಳಿಗೆ ದವಸ ಧಾನ್ಯಗಳೇ ಸಾಕು. ಆದರೆ ಬೆಳೆಯುವ ಮರಿಗಳಿಗೆ  ಪ್ರೊಟೀನ್ ಅಂಶ ಹೊಂದಿದ  ಕೀಟಗಳೇ ಬೇಕು. ಈ ಕೀಟಗಳ ಮರಿಗಳು ಪೌಷ್ಟಿಕ ಆಹಾರವಿಲ್ಲದೆ ಸಾಯುತ್ತಿವೆ ಎಂದು ವಿಜ್ಞಾನಿಗಳು ನಂಬುತ್ತಾರೆ . ಕೃಷಿಯಲ್ಲಿ ಕೀಟ ನಾಶಕಗಳ ಬಳಕೆ ನಿಯಂತ್ರಿಸಬೇಕು. ಇತ್ತೀಚಿನ ‌ ವರದಿಯ ಪ್ರಕಾರ ಕಳೆದ 25 ವರ್ಷಗಲ್ಲಿ ಗುಬ್ಬಿಗಳ ಸಂತತಿ ಶೇ.60-70ರಷ್ಟು ಕುಸಿದಿದೆ. ನಗರೀಕರಣದಿಂದಾಗಿ  ಮೊಬೈಲ್ ಟವರ್‌ಗಳನ್ನು ಅಳವಡಿಸಿರುವ ಕಾರಣ ಅವುಗಳು ಹೊರಸೂಸುವ ಎಲೆಕ್ಟ್ರೋ ಮ್ಯಾಗ್ನೆಟಿಕ್ ವಿಕಿರಣಗಳು ಸಹ ಗುಬ್ಬಚ್ಚಿಗಳ ಸಂಖ್ಯೆ ಕಡಿಮೆಯಾಗಲು ಪ್ರಮುಖ ಕಾರಣ ಎಂದೂ ನಂಬಲಾಗಿದೆ.  

ಹಿಂದಿನ ಮನೆಗಳು ಹೆಚ್ಚಿನದಾಗಿ ಹಂಚಿನ , ಹುಲ್ಲಿನ ಮನೆಗಳು. ಇವುಗಳು ಗುಬ್ಬಚ್ಚಿಗಳಿಗೆ ಹೇಳಿ ಮಾಡಿಸಿದ ವಾಸಸ್ಥಾನವಾಗಿದ್ದವು. ಆದರೆ ಇಂದಿನ ಮನೆಗಳು ಆಧುನೀಕರಣಕ್ಕೆ ಒಳಪಟ್ಟಿರುವುದರಿಂದ ಇಂತಹ ಮನೆಗಳಲ್ಲಿ ಗುಬ್ಬಚ್ಚಿಗಳು ಗೂಡು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗೂಡಿಲ್ಲದೇ ಗುಬ್ಬಚ್ಚಿಗಳು ಬಿಸಿಲು, ಮಳೆ , ಗಾಳಿಗೆ ತತ್ತರಿಸುತ್ತಿದ್ದು ಅಳಿವಿನಂಚಿಗೆ ಸಾಗುತ್ತಿವೆ. ಗುಬ್ಬಿಗಳು ಮಾನವರ ನಿಕಟ ಸಂಬಂಧಿ. ಅವುಗಳಿಗೆ ವಾಸಿಸಲು ಅನುಕೂಲವಾಗುವಂತೆ ಮನೆಯ ಸುತ್ತಮುತ್ತ ಮರಗಳನ್ನು ಬೆಳೆಸಬೇಕು.  ತಾರಸಿಗಳ ಮೇಲೆ ಮನೆಯ ಮುಂದೆ ನೀರು ಮತ್ತು ಕಾಳು ಇಡುವ  ಮೂಲಕ ಬೇಸಿಗೆಯಲ್ಲಿ ಅವುಗಳಿಗೆ ದಣಿವಾರಿಸಿಕೊಳ್ಳಲು ಅನುಕೂಲ ಮಾಡಿ, ಮುಗ್ಧ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಮಾಡದೇ , ಇವುಗಳ  ಜೀವ ಸಂಕುಲವನ್ನು ನಮ್ಮ ಮುಂದಿನ ತಲೆಮಾರಿನ ಮಕ್ಕಳಿಗೆ ಉಳಿಸೋಣ.

ನಮಸ್ಕಾರ

(ಈ ಲೇಖನದ ತಯಾರಿಯಲ್ಲಿ ಡಾ. ಟಿ.ಎಸ್.‌ ಚನ್ನೇಶ್‌ ಅವರ ನೆರವಿಗೆ ಆಭಾರಿಯಾಗಿದ್ದೇನೆ)

ಸುಪ್ರೀತಾ ಶಾಸ್ತ್ರೀ , ವಾಷಿಂಗ್ಟನ್ .

This Post Has 3 Comments

  1. Bhuvaneswari

    Timely article … Thanks to CPUS for interesting articles creating awareness about our surrounding and environment…

  2. Poornima KN

    Tumba chennagi moodi bandide ee lekhana. Thank you very much Supreeta

  3. Poornima KN

    Gubbacchi Lekhana tumba chennagi moodi bandide. Thank you very much for very useful information Supreeta

Leave a Reply