You are currently viewing ಕೋವಿಡ್-19 ನ ಜಾಗತಿಕ ಪಯಣ ಮತ್ತು ಅನಿಶ್ಚಿತತೆಯ ಅನಾವರಣ

ಕೋವಿಡ್-19 ನ ಜಾಗತಿಕ ಪಯಣ ಮತ್ತು ಅನಿಶ್ಚಿತತೆಯ ಅನಾವರಣ

ಕೋವಿಡ್-‌19 ಸೃಷ್ಠಿಸಿರುವ ಬಿಕ್ಕಟ್ಟು ಜಾಗತಿಕ ಸ್ವರೂಪ ಪಡೆದುಕೊಂಡು ಬಡವ-ಬಲ್ಲಿದರೆನನ್ನದೆ, ಧರ್ಮಾತೀತವಾಗಿ ಎಲ್ಲರ ಅನುಭವಕ್ಕೆ ಬಂದ ವಿಷಯವಾಗಿದೆ. ಕರೋನ ಪದವೇ ಈಗ ಎಲ್ಲಾ ಮಾಧ್ಯಮಗಳಲ್ಲಿ ವಿರಾಜಿಸುತ್ತಿದೆ. ಸುಳ್ಳು ಸುದ್ದಿಗಳು, ಅಪೂರ್ಣ ಸತ್ಯಗಳು, ಅನಿಶ್ಚಿತತೆ, ವ್ಯವಸ್ಥೆಯ ದೋಷಗಳು ಹೀಗೆ ಮುಂತಾದ ಸಂಗತಿಗಳೆಲ್ಲವೂ ನಮ್ಮ ನಿಮ್ಮೆಲ್ಲರನ್ನು ಸುತ್ತುವರಿದು ಆತಂಕವನ್ನುಂಟು ಮಾಡುತ್ತಿವೆ. ಸುಮಾರು 7 ಲಕ್ಷಕ್ಕೂ ಹೆಚ್ಚು ಮಂದಿಗೆ ತಲುಪಿರುವ ಈ ಸೋಂಕು, ಅವರಲ್ಲಿ ಪ್ರತಿಶತ 4-5 ರಷ್ಟು ಮಂದಿಯನ್ನು ಬಲಿ ಪಡೆದುಕೊಂಡಿದೆ. ಸತ್ತವರ ವಯಸ್ಸಿಗೆ ಅನುಗುಣವಾಗಿ ಅಂಕಿ-ಸಂಖ್ಯೆಗಳು ಬಿಡುಗಡೆಯಾಗುತ್ತಿವೆ. ಇತ್ತ ಇರಾನ್‌ ನಲ್ಲಿ “ಮಿಥೆನಾಲ್‌” ರಸಾಯನಿಕ ಕುಡಿದರೆ ಕರೋನ ದಿಂದಾಗುವ ಖಾಯಿಲೆ ವಾಸಿಯಾಗುತ್ತದೆ ಎಂಬ ಸುಳ್ಳು ಸುದ್ದಿಯನ್ನು ನಂಬಿ, ನೂರಾರು ಜನ ಪ್ರಾಣ ತೆತ್ತಿದ್ದಾರೆ. ಇತ್ತ ಆತಂಕದ ಕಾರಣವಾಗಿ ಕೆಲವು ಆತ್ಮಹತ್ಯೆಗಳೂ ವರದಿಯಾಗಿವೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಬೇರೆ ದಾರಿಯಿಲ್ಲದೇ ಜಗತ್ತಿನ ಚಿತ್ರಣವೇ ಬದಲಾಗಿದೆ. ವೈರಸ್ಸಿನ ಜಾಗತೀಕರಣದ ಫಲವೆಂಬಂತೆ ಇದು ಇಡೀ ಮನುಕುಲವನ್ನೇ ಆತಂಕದಿಂದ ದಿನ ದೂಡುವಂತೆ ಮಾಡಿದೆ.

ಇದೊಂದು ಹೊಸ ವೈರಸ್ಸಾದರೂ ಕೂಡ ನಿಸರ್ಗದ ಸೃಷ್ಟಿಯೇ ವಿನಾಃ ಪ್ರಯೋಗಾಲಯದ್ದಲ್ಲ. ಬಾವಲಿಯಿಂದ – ಚಿಪ್ಪು ಹಂದಿಗೆ ಮಧ್ಯಂತರವಾಗಿ ಬಂದದ್ದು. ಅಲ್ಲಿಂದ ಚೀನಾದ ವೈಲ್ಡ್ ಲೈಫ್‌ ಮಾರುಕಟ್ಟೆಯ ಕಾರಣವಾಗಿ ಮಾನವರಿಂದ ಮಾನವರಿಗೆ ಹರಡಿದೆ. ಇದನ್ನು ಇನ್ನೂ ವಿವರವಾಗಿ ಮುಂದಿನ ಲೇಖನಗಳಲ್ಲಿ ನೋಡಬಹುದಾಗಿದೆ.

ಹಾಗಾದರೆ ಮುಂದಿನ ದಾರಿಗಳು ಏನು? ಹಿಂದೆಲ್ಲಾ ಪ್ಲೇಗ್‌, ಕಾಲರಾ ಮುಂತಾದ ಕಾರಣಗಳಿಗಾಗಿ ಊರಿಗೆ ಊರೇ ಖಾಲಿಯಾದ ಮತ್ತು ಹಲವಾರು ಸಾವು-ನೋವುಗಳು ಉಂಟಾದ ಅನುಭವಗಳನ್ನು ನೀವೆಲ್ಲಾ ಅನುಭವಿಸಿರುತ್ತೀರಿ, ಅಥವಾ ಹಿರಿಯರಿಂದ ಕೇಳಿರುತ್ತೀರಿ ಅಥವಾ ಮತ್ತೆಲ್ಲೋ ಓದಿರುತ್ತೀರಿ. ಆದರೆ ಈಗಿನ ಪರಿಸ್ಥಿತಿ ಕೊಂಚ ಭಿನ್ನವಾಗಿದೆ. ಜಾಗತೀಕರಣ ಮತ್ತು ಆಧುನಿಕ ಪ್ರಪಂಚದ ನಡುವೆ ಬದುಕುತ್ತಿರುವ ನಮಗೆ ಕೋವಿಡ್-‌19 ಭೂತ-ವರ್ತಮಾನ-ಭವಿಷ್ಯವೆಲ್ಲವನ್ನೂ ಕುರಿತಂತೆ ಯೋಚಿಸಲು ದೂಡಿದೆ. ಹಾಗಾದರೆ ಕರೋನ ಪಯಣವೆಂದರೆ, ಆ ವೈರಸ್ಸಿನ ಲೋಕಸಂಚಾರ ಹಾಗೂ ಅದರ ಬಗ್ಗೆ ಸಂಶೋಧಿಸಿ, ಅದರಿಂದುಂಟಾಗಿರುವ ಬಿಕ್ಕಟ್ಟಿನಿಂದ ಪಾರಾಗಲು ದುಡಿಯುತ್ತಿರುವ ವಿಜ್ಞಾನಿ-ವೈದ್ಯ ಸಮೂಹಗಳ ಒಟ್ಟು ಪ್ರಯತ್ನಗಳೇ ಆಗಿವೆ. ಕರೋನ ವೈರಸ್‌ ಗಳು ಹಾಗೂ ಇದರ ಬಗ್ಗೆ ಮೂಲಭೂತ ಸಂಶೋಧನೆ ಕೈಗೊಂಡು ಇಂದು ಜಗತ್ತಿಗೆ ಈ ಸಂಕಷ್ಟವನ್ನು ಪರಿಹರಿಸಲು ಬೇಕಾದ ವೈಜ್ಞಾನಿಕ ತಳಹದಿಗಳನ್ನು ರೂಪಿಸುತ್ತಿವ ಎಲ್ಲಾ ಸಂಶೋಧಕರ ಪ್ರತಿನಿಧಿಯಂತಿರುವ ಚೀನಾದ ಡಾ. ಶೀ. ಜೆಂಗ್‌ಲಿ ಎಂಬ ಹೆಣ್ಣುಮಗಳ ಹುಡುಕಾಟ ಮತ್ತು ವಿಜ್ಞಾನ ಪ್ರೀತಿಯ ಮೂಲಕ ಈ ಕರೋನ ಸರಣಿಯನ್ನು ರೂಪಿಸುತ್ತಿದ್ದೇವೆ.

ನನ್ನ ಬಾಲ್ಯದ ದಿನಗಳಲ್ಲಿ, ನನ್ನ ತಂದೆಯ ಭುಜದ ಮತ್ತು ಮೊಣಕೈಯಿನ ನಡುವೆ ಗುಂಡು ಬಿಲ್ಲೆಯಾಕಾರದ ಹಚ್ಚೆಯನ್ನು ಮೊದಲು ಕಂಡಾಗ ಅವರಿಗೆ ಇದು ಏನಪ್ಪಾ ಅಂತ ಕೇಳಿದ್ದೆ. ಅದಕ್ಕವರು ಸಿಡುಬು(Small Pox) ರೋಗಕ್ಕೆ ಈ ರೀತಿ ಹಿಂದೆ ಹಚ್ಚೆ ಹಾಕುತ್ತಿದ್ದರು ಮರಿ ಎಂದು ಹೇಳಿದ್ದ ನೆನಪು. ಗಣೇಶನ ಹಬ್ಬದ ಸಮಯದಲ್ಲಿ ಹಾಗೂ ಆಗಾಗಿ ತುಂಟತನದ ಸಲುವಾಗಿ ಕೇಳಲು ಸಿಗುತ್ತಿದ್ದ ಕಡುಬು ಪದದ ಬದಲಾಗಿ ಇದ್ಯಾವುದೋ ಪದವಲ್ಲಾ ಎಂದು ಅಚ್ಚರಿಪಟ್ಟಿದ್ದುಂಟು. ಆದರೆ ವಿವರಗಳನ್ನು ತಿಳಿಯುವ ಕೂತೂಹಲವೇನು ಇರಲಿಲ್ಲ. ಮುಂದೆ ನನಗೆ ಹತ್ತನೇ ತರಗತಿಯಲ್ಲಿ, ಸೀತಾಳ ಸಿಡುಬು (Chicken Pox) ಆವರಿಸಿದಾಗ ಕೂಡ, ಆಸ್ಪತ್ರೆ, ಮಾರಮ್ಮ ನ ಗುಡಿ, ಮೊಸರನ್ನ ಮತ್ತು ಬೇವಿನ ಸೊಪ್ಪಿನ ಜೊತೆ ತಂದೆತಾಯಂದಿರ ಆರೈಕೆಯ ಹೊರತಾಗಿ ಬೇರೇನೂ ತಿಳಿದಿರಲಿಲ್ಲ. ಪ್ರಶ್ನಿಸುವ ಸಲುವಾಗಿ ವೈದ್ಯರನ್ನು ಕೇಳಿದ್ದಕ್ಕೆ ಇದು ವೈರಸ್ಸಿನಿಂದ ಬರುತ್ತದೆ ಎಂದಿದ್ದರು ಅಷ್ಟೇ.

ಆದರೆ ಈಗ ಕೋವಿಡ್-‌19 ಉಂಟಾಗಿರುವ ವಿಪತ್ತಿನ ಸಮಯದಲ್ಲಿ , ಈ ಬಗ್ಗೆ ತಿಳಿಯಲು ಹೊರಟಾಗ ಮೇಲಿನ ಅನುಭವಗಳೆಲ್ಲಾ ಜ್ಞಾಪಕಕ್ಕೆ ಬಂದವು. ವೈರಸ್‌ ಮತ್ತು ಬ್ಯಾಕ್ಟೀರಿಯಾ ಗಳ ಮುಖಾಂತರ ಹರಡುವ ಫ್ಲೂ, ಕಾಲರಾ, ಪೋಲಿಯೋ ಮುಂತಾದ ಸಾಂಕ್ರಾಮಿಕ ರೋಗಗಳೆಲ್ಲಾ ಮನುಕುಲವನ್ನು ಕಾಡಿಸಿದ್ದರ ಕುರುಹುಗಳು ಕಾಣತೊಡಗಿದವು. 1918-19 ರ ಸಮಯದ ಎಚ್‌1ಎನ್‌1 ಇನ್‌ಫ್ಲುಎನ್‌ಜ಼ ಜ್ವರ ವಿಶ್ವದ 50 ದಶಲಕ್ಷ ಜನರ ಪ್ರಾಣ ತೆಗೆದಿರಬಹುದೆಂದು ಅಂದಾಜಿಸಲಾಗಿದೆ.  ಬರ, ಪ್ರವಾಹ, ಪ್ರತಿಕೂಲ ವಾತಾವರಣ, ಸಾಂಕ್ರಾಮಿಕ ರೋಗಗಳು, ಸುನಾಮಿ ಮುಂತಾದ ಕಷ್ಟಕರ ಸನ್ನಿವೇಶದಲ್ಲಿ ಮನುಕುಲ ಹೇಗೆ ಹೋರಾಡಿ ಬದುಕನ್ನು ವಿಕಾಸಗೊಳಿಸಿಕೊಂಡು ಇಲ್ಲಿಯವರೆಗೂ ಸಾಗಿ ಬಂದಿರುವಾಗ,  ಈ ಕೋವಿಡ್-‌19 ವಿಪತ್ತು ಮಾನವಕುಲವನ್ನೆಲ್ಲಾ ನಿಶ್ಚಿತವಾಗಿ ಅಳಿಸಿ ಹಾಕಲು ಶಕ್ತವಿಲ್ಲದಿದ್ದರೂ, ಅದು ತಂದೊಡ್ಡುತ್ತಿರುವ ಸಂಕಟ ಹಾಗೂ ಸವಾಲುಗಳು ಮಾತ್ರ ಮಹತ್ತರವಾದದ್ದು. ಸದ್ಯದ ಪರಿಸ್ಥಿತಿಯ ನಿರ್ವಹಣೆ ಮತ್ತು ಮುಂದಿನ ಭವಿಷ್ಯ ನಿರ್ಮಾಣದಲ್ಲಿ ಹೇಗೆ ವಿಜ್ಞಾನಿಗಳು ಕಾರ್ಯೋನ್ಮುಕ್ತರಾಗಿದ್ದಾರೆ ಎಂದು ತಿಳಿದು ಹೆಮ್ಮೆಯಾಗಿದ್ದಲ್ಲದೆ, ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯ ಪಾಲುದಾರಿಕೆಯ ಪಾತ್ರ ಹೆಚ್ಚಾಗಬೇಕಿರುವುದು ಸ್ಪಷ್ಟವಾಗಬೇಕಿದೆ.

“ಶೀತ, ನೆಗಡಿ ಏನಾದ್ರೂ ಬಂದರೆ ಔಷಧ ತೆಗೆದುಕೊಂಡರೆ ಒಂದೇ ವಾರದಲ್ಲಿ ವಾಸಿಯಾಗುತ್ತೆ ಇಲ್ಲ ಅಂದರೆ ಏಳು ದಿನನಾದ್ರೂ ಬೇಕು” – ಅನ್ನುವ ಮಾತಾಗಲಿ ಅಥವಾ “ಮೂಗು ಇರೋ ವರೆಗೂ ನೆಗಡಿ ತಪ್ಪಿದ್ದಲ್ಲ” ಅನ್ನುವುದಾಗಲಿ ಇನ್ನು ಮುಂದೆ ಹೇಳೋದಕ್ಕೆ ಸ್ವಲ್ಪ ಹೆದರಬೇಕಾಗುತ್ತೆ. ಈಗಿನ ಪರಿಸ್ಥಿತಿಯಲ್ಲಿ ಶೀತ, ನೆಗಡಿಯಿಂದ ಕೆಮ್ಮು ಬಂದು ಜ್ವರಕ್ಕೆ ಬದಲಾದರಂತೂ ಹೀಗೆ ಅಂತಾ ಹೇಳೋದಕ್ಕೆ ಖಂಡಿತಾ ಯೋಚಿಸಬೇಕಾಗುತ್ತದೆ. ಇವೆಲ್ಲಾ “ವೈರಲ್ ಫೀವರ್” ಆಡುಭಾಷೆಯಲ್ಲಿ “ಉರಿ ಜ್ವರ” ಎನ್ನುವ ರೂಪಕದ ಮಾತುಗಳು ಇನ್ನು ಬದಲಾಗಬೇಕು. ಅಷ್ಟರ ಮಟ್ಟಿಗೆ ಈಗಿನ “ಕೋವಿಡ್-‌19” ವೈರಲ್ ಆಗಿದೆ. ಮನುಷ್ಯ ಮನುಷ್ಯರ ನಡುವೆಯೇ ಅಂತರವಿಡುವ ಸಾಮಾಜಿಕ ಸನ್ನಿವೇಶಕ್ಕೆ ಬಂದು ನಿಂತದ್ದನ್ನು ಒಪ್ಪಿಕೊಳ್ಳಬೇಕಾಗಿದೆ.

ಈ ವೈರಸ್ಸುಗಳ ಲೋಕವೇ ಹಾಗೆ! ಅದೂ ನಿರ್ಜೀವವಾಗಿದ್ದೂ ಸಜೀವ ಸ್ಥಿತಿಯದ್ದು. ಜೀವಿಯೊಳಗಿನ ಅದರ ಬದುಕುಮಾತ್ರ ಜೀವಿಯನ್ನೂ ಮೀರಿಸಿದ್ದು. ಇದಕ್ಕೆಲ್ಲಾ ನಮ್ಮ ಹಾಗೆ ಅದಕ್ಕೂ ಒಗ್ಗಿರುವ ನಿಸರ್ಗದ ತತ್ವಗಳೇ ಅದನ್ನೂ ವಿಕಾಸದ ಹಾದಿಯಲ್ಲಿ ಕೊಂಡೊಯ್ಯುತ್ತಿವೆ. ಆದರೆ.., ಆದರೆ… ಅವುಗಳೆಲ್ಲವೂ ಅರ್ಥವಾದುವಲ್ಲ. ಜೊತೆಗೆ ಹೊಸ ಹೊಸ ವಿಕಾಸದ ಹಾದಿಯನ್ನು ಅವುಗಳು ಹುಡುಕಿಕೊಂಡು ತಮ್ಮ ರೂಪ ಮತ್ತು ವರ್ತನೆಗಳನ್ನು ಹೊಸತನ್ನಾಗಿ ಮಾಡಿಕೊಳ್ಳಬಲ್ಲವು. ಆದ್ದರಿಂದಲೇ “ಅವುಗಳು ನಮ್ಮ ಹುಡುಕಿಕೊಳ್ಳುವ ಮೊದಲೇ ನಾವು ಅವುಗಳನ್ನು ಹುಡಕಬೇಕು” ಎನ್ನುವುದು ಖ್ಯಾತ ವೈರಸ್ಸು ತಜ್ಞೆ ಚೀನಾದ ಡಾ. ಶೀ. ಜೆಂಗ್‌ಲಿ ಅವರ ಪ್ರತಿಪಾದನೆ. ಡಾ. ಶೀ. ಜೆಂಗ್‌ಲಿ ಈ ವೈರಸ್ಸುಗಳ ಮೂಲವನ್ನು ಪತ್ತೆ ಹಚ್ಚಿದ ಮಾತ್ರವಲ್ಲ ಜೀವನವನ್ನೇ ತೇಯ್ದ, ತೇಯುತ್ತಿರುವ ಅಪರೂಪದ ಹೆಣ್ಣುಮಗಳು.

ನಿಸರ್ಗದಲ್ಲಿ ಎಲ್ಲೋ ಒಂದು ನೆಲೆಯನ್ನು  ಕಂಡುಕೊಂಡು ಸುಸೂತ್ರವಾಗಿ ಬದುಕುತ್ತಿರುವ ಅವುಗಳು, ಮಾನವ ಕುಲವನ್ನು ಹಿಂಡಿ ಹಿಪ್ಪೆ ಮಾಡಬಲ್ಲವು ಎಂಬುದೀಗ ಜಗಜ್ಜಾಹೀರು. ತಮ್ಮದೇ ನೆಲೆಯಲ್ಲಿ ಅಂದರೆ ತಾವೀಗ ನೆಲೆಯಾಗಿರುವ “ಬಾವಲಿ”ಗಳಲ್ಲಿ ಮಾತ್ರ ಯಾವುದೇ ತೊಂದರೆಯನ್ನೇ ಕೊಡದೆ, ತಮ್ಮ ಜೀವನವನ್ನು ಮುಂದುವರೆಸಿಕೊಂಡು ಬಂದಿವೆ. ಹಾಗಾಗಿ ಅವು ನಮ್ಮನ್ನು ಹುಡುಕಿಕೊಂಡು ಇಂದಲ್ಲಾ ನಾಳೆ ಬಂದಾವು, ಆಗ ನಾವದನ್ನು ಹಿಮ್ಮೆಟ್ಟಿಸಲು ಬೇಕಾದ ಔಷಧಿಯ ತಯಾರಿಯನ್ನು ರೂಪಿಸಲು ಅಣಿಮಾಡಿಕೊಳ್ಳುವ ಅಡಿಪಾಯ ರೂಪಿಸುತ್ತಿರುವಾಗಲೇ ನಮ್ಮ ಜೀವನಕ್ಕೂ ಬಂದಿವೆ. ಹಾಗಾಗಲು ನಾವೇ ತಂದುಕೊಂಡಿರುವ ಆದ್ಯತೆಗಳು ಕಾರಣಗಳಾಗಿವೆ.

ನಮ್ಮ ಅಕಾಡೆಮಿಗಳ ಪ್ರಾಯೋಜಿತ ನಿರ್ಮಿತಿಗಳಲ್ಲಿ, ಮಾಧ್ಯಮಗಳ ಅಬ್ಬರದ ಸುದ್ದಿಗಳಲ್ಲಿ,  ಸಾಮಾಜಿಕ ಮಾಧ್ಯಮದ ಬರಹಗಳಲ್ಲಿ, ಅಷ್ಟೇಕೆ, ಕೆಲವು ವಿಜ್ಞಾನ ಸಂಸ್ಥೆಗಳಲ್ಲಿದ್ದವರ ಮಾತುಗಳಲ್ಲಿಯೂ ಸಹಾ, “ಇದೆಲ್ಲಾ ಏನೇನೋ ತಿಂದು ತೇಗಿದ್ದರ ಪರಿಣಾಮ, ಅದರ ಶಾಪದ ಫಲವಾಗಿ ಅನುಭವಿಸಬೇಕಾಗಿದೆ”  ಎಂದಾಡುವ ಮಾತುಗಳನ್ನು ಪರಾಮರ್ಶಿಸಿ ನೋಡಬೇಕಿದೆ. ಚೀನಿಯರ ಆಹಾರ ಸಂಸ್ಕೃತಿಯನ್ನು, ಅಂತಹದೊಂದು ವಿಕಾಸವಾಗಿದ್ದರ ಹಿನ್ನೆಲೆಯನ್ನು ಮುಂದೊಮ್ಮೆ ವಿವರವಾಗಿ ನೋಡೋಣವಂತೆ. ಅದರ ಜೊತೆಗೆ ಅದಕ್ಕೊಂದು ಮಾರುಕಟ್ಟೆಯು ಸೃಷ್ಟಿಯಾಗಿ, ಅದನ್ನು ರೂಪುಗೊಳಿಸಿ ನಿರ್ವಹಿಸುತ್ತಿರುವ ಜಗತ್ತನ್ನು ವಿವರಗಳಿಂದ ಮುಂದೊಮ್ಮೆ ನೋಡೋಣ. ಆದರೀಗ ಹೆಮ್ಮಾರಿಯಾಗಿ ಆಪತ್ತನ್ನು ತಂದಿರುವ ಸಂದರ್ಭವು ಮಾತ್ರ ಸ್ವಾಭಾವಿಕವಾಗಿಯೇ ಬಂದದ್ದು ಎಂದು “ವಿಶ್ವ ಆರೋಗ್ಯ ಸಂಸ್ಥೆ”ಯ ವರದಿಯೂ ಹೇಳಿದೆ.

ಇದೆಲ್ಲದರ ಪೂರ್ವಾಪರವನ್ನು ತಿಳಿದಕೊಳ್ಳುವುದೂ ಅವಶ್ಯಕ ಹಾಗೂ ಮುಂದಿನ ದಿನಗಳಲ್ಲಿ ಹಿಮ್ಮೆಟ್ಟಿಸುವ ಕಾಲದಲ್ಲಿ ಮಾಡಿಕೊಳ್ಳಬೇಕಾದ ತಯಾರಿ ಕೂಡ. ಏಕೆಂದರೆ ಈ ಹಿಂದಿನ ಸಾರ್ಸ್‌  (SARS) ವೈರಸ್ಸಿನ ಹಿನ್ನಲೆಯೂ ಸಹಾ ಇದರಂತೆಯೇ ಎಂಬುದನ್ನೂ ಸಾಬೀತು ಪಡಿಸಿದ್ದ ಹೆಗ್ಗಳಿಕೆಯೂ ಸಹಾ ಡಾ. ಶೀ. ಜೆಂಗ್‌ಲಿ ಅವರದ್ದೇ. ನಮ್ಮನ್ನೂ ಸೇರಿಕೊಂಡು ಅನೇಕ ಜೀವಿವಿಜ್ಞಾನದ ಆಸಕ್ತರಿಗೆ ಬಾವಲಿಗಳನ್ನೂ ಸೇರಿಸಿ ಮಂಗಗಳೇ ಮುಂತಾದ ಸಸ್ತನಿಗಳಲ್ಲಿ ಮಾನವ ಕುಲವನ್ನು ಕಂಗೆಡಿಸಬಲ್ಲ ಜೀವಾಣುಗಳಿರುವ ಬಗ್ಗೆ ಹಿಂದಿನಿಂದಲೂ ಅನುಮಾನಗಳನ್ನು ಓದಿ, ಕೇಳಿದ್ದು ಸಹಜವೇ ಆಗಿದೆ. ಇಂತಹ ಅನುಮಾನವನ್ನೇ ಅಮೂಲಾಗ್ರವಾಗಿ ಶೋಧಿಸ ಹೊರಟವರು ಡಾ. ಶೀ ಜೆಂಗ್‌ಲಿ. ಆಕೆಯ ಶೋಧಗಳಿಂದಾದ ಅನುಕೂಲಗಳನ್ನು ಅರ್ಥೈಸಿಕೊಂಡು, ನಿಯಂತ್ರಿಸುವ ಆಲೋಚನೆಗಳು ಮಾಡಬೇಕಾಗಿದೆ. ಕಾರಣ ಮೂಲದಲ್ಲಿ ಅಂದರೆ “ಬಾವಲಿ”ಗಳಲ್ಲಿ ಏನೂ ತೊಂದರೆ ಕೊಡದ ಈ ವೈರಸ್‌ಗಳು, ಮಾನವ ಕುಲಕ್ಕೇಕೆ ಹೀಗೆ ಎನ್ನುವ ಸಂಗತಿ ಅಥವಾ ಬಾವಲಿಗಳಲ್ಲಿನ ವಿಶೇಷ ರೋಗ ಪ್ರತಿರೋಧ ವಿಚಾರ ಇವೆಲ್ಲವೂ ಮುಂದೊಂದು ದಿನ ಸಹಜ ತಿಳಿವಳಿಕೆಯಾದಾವು. ಇದಕ್ಕೆಲ್ಲಾ ವೈರಸ್ಸುಗಳ ಜೀವಿಕತೆಯನ್ನು ಬದುಕಿನ ಪೂರ್ವಾಪರಗಳನ್ನೂ ಅರಿಯುವುದು ಮುಖ್ಯವಾಗಿದೆ.

ಹಾಗಾದರೆ ಕೊರೊನ ವೈರಸ್‌ ಗಳ ಇತಿಹಾಸವೇನು? ವಿಕಾಸವೇನು? ಅವುಗಳನ್ನು ಸಾಕಿ ಸಲಹುತ್ತಿರುವ ಜೀವಿಗಳನ್ನು ಹುಡುಕುವುದು ಎಷ್ಟು ಮುಖ್ಯ? ಅದರಿಂದ ಪಡೆಯುವ ಜೀನೋಮ್‌ ಮತ್ತು ಮಾಲೆಕ್ಯುಲಾರ್‌ ಜೀವಿವಿಜ್ಞಾನದ ವಿವರಗಳು, ಔಷಧಿ ಮತ್ತು ಲಸಿಕೆ ಅಭಿವೃದ್ಧಿ ಪಡಿಸುವುದಕ್ಕೆ ಹೇಗೆ ಅತಿ ಮುಖ್ಯ?

ಮುಂಬರುವ ದಿನಗಳನ್ನು ಆಶಾದಾಯಕವನ್ನಾಗಿಸಲು ನಾವು ಮಾಡ ಬಹುದಾದ ಪುಟ್ಟ ಪ್ರಯತ್ನ ಇದು. ಇವನ್ನೆಲ್ಲಾ ಸ್ವಲ್ಪ ಹೆಚ್ಚಿನ ವಿವರಗಳಿಂದ ವೈಜ್ಞಾನಿಕ ಒಳನೋಟಗಳ ಹಂಚುವ ಪ್ರಯತ್ನ ಇದು. ಇದು ಕರೋನ ವೈಜ್ಞಾನಿʼಕತೆʼಯ ಸರಣಿ.

– ಆಕಾಶ್‌ ಬಾಲಕೃಷ್ಣ

ನೆರವು: ಡಾ.ಟಿ.ಎಸ್.ಚನ್ನೇಶ್‌.

ಕೋವಿಡ್-‌19‌ ತಂದೊಡ್ಡಿರುವ ಈ ಸಂಕಟದ ಸಂದರ್ಭದಲ್ಲಿ, ಸರಿಯಾದ ಮಾಹಿತಿ ಮತ್ತು ವಿವರಗಳನ್ನು ಪಡೆಯುವುದು ಅತ್ಯವಶ್ಯಕ. ಹಾಗಾಗಿ ಜಗತ್ತಿನ ಶ್ರೇಷ್ಠ ವಿಜ್ಞಾನ ಪತ್ರಿಕೆಗಳಾದ “ಸೈನ್ಸ್”‌, “ನೇಚರ್”‌, “ಸೈಂಟಿಫಿಕ್‌ ಅಮೆರಿಕನ್”‌, “ಲ್ಯಾನ್ಸೆಟ್”‌, “ಸೆಲ್”‌, “ದಿ ನ್ಯೂ ಇಂಗ್ಲೆಂಡ್‌ ಜರ್ನಲ್‌ ಆಫ್‌ ಮೆಡಿಸಿನ್” ಮುಂತಾದ ಪತ್ರಿಕೆಗಳು ನಿಖರವಾದ ಮತ್ತು ವೈಜ್ಞಾನಿಕವಾದ ವಿವರಗಳನ್ನು ಪ್ರಕಟಿಸುತ್ತಿವೆ. ಮನುಕುಲದ ಒಳಿತಿಗಾಗಿ ಸಂಶೋಧನಾ ಲೇಖನಗಳನ್ನು ಮತ್ತು ವರದಿಗಳನ್ನು ಮುಕ್ತ ಆಕರವಾಗಿ ಒದಗಿಸಿಕೊಡುತ್ತಿವೆ. ಭಾರತದಲ್ಲಿ “ದಿ ಹಿಂದೂ” ಪತ್ರಿಕೆ ಕೂಡ ಮೌಲಿಕವಾದ ಬರಹಗಳನ್ನು ಪ್ರಕಟಿಸುತ್ತಿದೆ. ಹಾಗಾಗಿ ಓದುಗರು ಸುಳ್ಳು ಸುದ್ದಿಗಳು, ಅಪೂರ್ಣ ಸುದ್ದಿಗಳ ಮೊರೆ ಹೋಗದೇ ಇಂತಹ ಪತ್ರಿಕೆಗಳನ್ನು ನೋಡಬಹುದಾಗಿದೆ.

This Post Has 18 Comments

 1. Jayachandra

  This is one of the best and simple explanation. We look forward to receive further authentic information

 2. S.Narayana swamy

  Good and inspirational article.

 3. S.Prakash

  Very informative article especially considering the fact that there are many misleading messages resulting in confusion and fear among readers. Appreciate effort by Mr.Akash.

 4. Raghavendra

  Great information Akash. I really appreciate your efforts.

 5. ಹಂ.ಗು. ರಾಜೇಶ್

  ಒಳ್ಳೆಯ ಶುಭಾರಂಭ ಆಕಾಶ್. ಜನ ಸಾಮಾನ್ಯರಿಗೂ ಉಪಯುಕ್ತವಾಗವಂತಹ ಮತ್ತಷ್ಟು ಮಾಹಿತಿಪೂರ್ಣ ಬರಹಗಳು ನಿಮ್ಮಿಂದ ಬರಲೆಂದು ಆಶಿಸುತ್ತೇನೆ.

 6. Dr Vijayumar

  So informatie and one of the best article on covid 19. Thanks for the author

 7. Girish

  It sowed the seeds of curiosities..fantastic writeup..awaiting for next article..

 8. Aswathanarayana

  At a time when loading of wrong information is at the edge of getting converted into a media business model write ups like this assume great importance in creating a clear and a visible road on the factual terms. Congratulations Dr.Channesh sir.

 9. Nitin

  ಚೆನ್ನಾಗಿ ಬರ್ದಿಯಾ ಆಕಾಶ…all the best for future parts, looking forward for them😃

 10. ಪ್ರೊ. ಮಹದೇವಯ್ಯ, ಸಹವರ್ತಿ, ರೀಸರ್ಚ್ ಮತ್ತು ಇನ್ನೋವೇಶನ್ ಲ್ಯಾಬ್

  ಜ್ಞಾನ ಹಂಚಿ ಕೊಂಡಷ್ಟೂ ಹೆಚ್ಚುತ್ತದೆ… ಎನ್ನುವ ನಾಣ್ಣುಡಿಯಂತೆ, ನಿಮ್ಮ ಈ ಸಂದರ್ಭೋಚಿತ ಲೇಖನ ಮತ್ತು cfpusನ ಉತ್ತಮ ಪ್ರಯತ್ನ … ಎರಡೂ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸುವೆ.

 11. Dr. M.C. Manohara

  ಆತ್ಮೀಯ ಆಕಾಶ್,  ಲೇಖನವನ್ನ  ಚೆನ್ನಾಗಿ ಪ್ರಾರಂಭಿಸಿದ್ದೀರಿ.  ಕುತೂಹಲ, ಆಸಕ್ತಿ ಹುಟ್ಟಿಸುವಂತಿದೆ.  ಸಾದ್ಯವಾದರೆ ಒಂದೇ ಕಂತಿನಲ್ಲಿ ಬರೆಯಬಹುದಾ ನೋಡಿ.

 12. ಡಾ ರುದ್ರೇಶ್ ಅದರಂಗಿ

  ಸಾಂದರ್ಭಿಕವಾಗಿ ಇದೆ.. ಉಪಯುಕ್ತ ಮಾಹಿತಿ ಇದೆ. ಇನ್ನೂ ಹೆಚ್ಚಿನ ಅಧ್ಯಯನ ಸಂಶೋಧನೆ ನಡೆಯಲಿ ಎಂದು ಬಯಸುವೆ.

 13. T.R.Anantharamu

  ಲೇಖನ ಸಕಾಲಿಕ ಮತ್ತು ಅರ್ಥಪೂರ್ಣವಾಗಿದೆ.ವೈರಸ್ ಅಂದರೆ ಸಾಕು-ವೈರಾಣು ಬೇಡ

 14. Vijayakumar DP

  Highly informative article at the time of so much of misinformation. Pls. continue the good work. All the best.

 15. Ramesh Pai

  Is there any way to determine whether a virus is naturally evolved or “man made”?

 16. ನಾಗರಾಜ ಬಿ ಎಸ್

  ಬಹಳ ಒಳ್ಳೆಯ ವೈಜ್ಞಾನಿಕ ಅರಿವು ತರುವ ಬರಹ, ಭಾಷೆಯೂ ಚನ್ನಾಗಿದೆ.

 17. Dr. Sharan Angadi

  Very well written .My sincere compliments to Aakash and Channesh fir this excellent initiative

 18. Onkar

  Very well written Akash. Read 3 of ur articles. Pls enlighten us with rationale behind social distancing (why 1.5mts and why not 2mts..?), lockdown, regular handwash ,……

Leave a Reply